Tuesday, April 23, 2013

"ಸೊಗಸುಗಾರ ಪುಟ್ಟಣ್ಣ !!!!"

ಬೆರಳಷ್ಟೇ ಗಾತ್ರದ ,
ಹಸಿರು ಪುಟ್ಟ ಹಕ್ಕಿ,
ನುಗ್ಗೆ ಮರದ ಹೂವಿಗೆ 
ಲಗ್ಗೆ ------ಹಾಕಿದೆ!
ನುಗ್ಗೆ ಮರಕ್ಕೋ ರೋಮಾಂಚನ!            
ರೆಂಬೆ ರೆಂಬೆಗೂ ಹಸಿರು ಹುಚ್ಚು!
ಪಕ್ಕದ ಗುಲ್ಮೊಹರಿಗೆ ,
ಮೈ ತುಂಬಾ ಕೆಂಪು  ಕಿಚ್ಚು!
ಗಾಳಿಯಲ್ಲೆ ರೆಕ್ಕೆ ಬಡಿದು ,
ಮಧುವ ಹೀರಿದ ಮತ್ತಿನಲ್ಲಿ ,
ಅಲ್ಲೇ ಒಂದರೆ ಕ್ಷಣ ,
ತೇಲಾಡುವ ತ್ರಿಶಂಕು!!
ಮತ್ತೆ ಮರದ ಮೇಲೆ ಕುಳಿತು ,
ಸ್ವಲ್ಪ -----ವಿಶ್ರಮಿಸಿ ,
ಗತ್ತಿನಿಂದ ಕತ್ತು ಕೊಂಕಿಸಿ ,
ಪುಚ್ಚಗಳ ತಿದ್ದಿ ತೀಡಿ ,
ಅತ್ತಿತ್ತ -----ತಿರುಗಿ ,
ಚುಂಚದಲ್ಲೊಂದು ಹೂವ ಹಿಡಿದು ,
ಪುರ್ರನೆ ------ಹಾರಿತ್ತು ,
ಪ್ರೇಯಸಿಯ  ಹುಡುಕುತ್ತಾ !!

Thursday, April 11, 2013

"ವಿಜಯನಾಮ ಸಂವತ್ಸರ ,ಅನ್ವರ್ಥ ನಾಮ ಸಂವತ್ಸರವಾಗಲಿ!!!"

ಬಾ ಬಾರೋ ವಿಜಯ ನಾಮ
ಸಂವತ್ಸರವೇ ,ಸ್ವಾಗತ ನಿನಗೆ!!!
ಇರು ...ಇರು..... ,
'ಬರ'ಬೇಡ ,ತಡಿ!!!

ನೀನು ಬಾ ಮಹರಾಯ .....!!!
ಆದರೆ 'ಬರ'ವನ್ನು ತಡಿ!!!
ನೀನೇ ನೋಡು ಎಲ್ಲಕ್ಕೂ ಬರ!!

ಎಣ್ಣೆ ಸ್ನಾನ ಮಾಡೋಣವೆಂದರೆ
ನೀರಿಗೆ ಬರ.....!

ಹೋಳಿಗೆ ತಿನ್ನಬೇಕೆಂದರೆ .....
ಬೇಳೆಯ ಮತ್ತು ಬೆಲ್ಲದ ಬೆಲೆ
ಬೇವಿನ ಕಹಿಯಂತಿವೆ  !!!

ಇನ್ನೆಲ್ಲಿಯ ಯುಗಾದಿ!!?
ಈ ಬಿಸಿಲಿನ ಝಾಳಕ್ಕೆ
ತಂಗಾಳಿಗೂ ತಗಾದಿ !!!

ಕೈಕೊಟ್ಟಿದೆ ಕರೆಂಟು
ಫ್ಯಾನಿನ ಗಾಳಿಯೂ ಇಲ್ಲದೇ
ಬೆವರಿನಿಂದ ಮೈಯೆಲ್ಲಾ ಅಂಟು !!!

ಇರಲಿ ಬಿಡು ಮಹರಾಯ !
ಇವೆಲ್ಲಾ ನಮಗೆ ಮಾಮೂಲು!!
ನೀನು ಬಲಗಾಲಿಟ್ಟು ಒಳಗೆ  ಬಾ !!

ಎಲ್ಲರ ಬಾಳಲ್ಲೂ ......... ,
ಸುಖ ಸಂತಸ ,ಸಂವ್ರುದ್ಧಿಗಳನ್ನು
ತಪ್ಪದೆ ಹೊತ್ತು ತಾ...!!!

ಎಲ್ಲರಿಗೂ ವಿಜಯನಾಮ ಸಂವತ್ಸರ
ಅನ್ವರ್ಥ ನಾಮ ಸಂವತ್ಸರವಾಗಲಿ
ಎಂಬ ಆಶಾವಾದದ ಎಳೆ ಹಿಡಿದು ಬಾ!!!

ಬಾ ಬಾರೋ ,ನವ ವಸಂತವೇ........!!!
ನಿನಗೆ ..................,
ಕೊಳಲಿನ ನಾದದ ಸ್ವಾಗತ!!!!

Sunday, April 7, 2013

"ವಿಶ್ವ ಆರೋಗ್ಯ ದಿನದ ಹಾರೈಕೆ"

 ಇಂದು ವಿಶ್ವ ಆರೋಗ್ಯ ದಿನ.ಆರೋಗ್ಯವೆನ್ನುವುದು ಸಹಜವಾಗಿ ಇರತಕ್ಕಂತದ್ದು ಎನ್ನುವುದನ್ನು ನಾವೆಲ್ಲಾ ಮೊದಲು ಅರ್ಥ ಮಾಡಿಕೊಳ್ಳಬೇಕು.ಅನಾರೋಗ್ಯ ನಮ್ಮ ತಪ್ಪು ಜೀವನ ಶೈಲಿಯಿಂದ,ಸರಿ ಇಲ್ಲದ ಆಹಾರ ಪದ್ಧತಿಯಿಂದ ಹಾಗೂ ಸಾಕಷ್ಟು ದೈಹಿಕ ವ್ಯಾಯಾಮ ಇಲ್ಲದಿರುವುದರಿಂದ ಬರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬಳಸಬೇಕು.ಎಷ್ಟೇ ಕಷ್ಟವಾದರೂ ಕನಿಷ್ಠ ಅರ್ಧ ಗಂಟೆ ನಡೆಯುವುದೋ ಅಥವಾ ಇನ್ನಿತರ ದೈಹಿಕ ವ್ಯಾಯಾಮದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು.

ಹೋದ ವರ್ಷ ಜೂನ್ ತಿಂಗಳಲ್ಲಿ ,ಹೊಸದಾಗಿ ಡಯಾಬಿಟಿಸ್ ಬಂದವರೊಬ್ಬರಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವಂತೆ ಹೇಳಿದೆ.'ಅಯ್ಯೋ ಈ ಮಳೆಯಲ್ಲಿ ಎಲ್ಲಿ ವಾಕಿಂಗ್ ಹೋಗೋದು ಸರ್?'ಎಂದರು.'ಅದಕ್ಕೆಲ್ಲಾ ಟೈಮ್ ಇಲ್ಲಾ ಸರ್' ಎಂದೂ ಸೇರಿಸಿದರು!ಅವರ ಗುಡಾಣ ಹೊಟ್ಟೆಯನ್ನೇ ನೋಡುತ್ತಾ 'ತಿನ್ನುವುದನ್ನು ಕಮ್ಮಿ ಮಾಡಿ' ಎಂದೆ.'ಅಯ್ಯೋ ನಾನು ಏನೂ ತಿನ್ನೋದೇ ಇಲ್ಲಾ ಸರ್,ಟೆನ್ಶನ್ ಇಂದ ಏನೂ ಸೇರೋದೇ ಇಲ್ಲಾ 'ಎಂದರು.'ಹೋಗಲಿ ಟೆನ್ಶನ್ ಅನ್ನಾದರೂ ಕಮ್ಮಿ ಮಾಡಿಕೊಳ್ಳಿ'ಎಂದೆ.'ಟೆನ್ಶನ್ ಎಲ್ಲಾರಿಗೂ ಇರೋದೇ ಬಿಡಿ ಸರ್'ಎಂದರು.
ನಾನು ಹೇಳಿದ ಸಲಹೆಗಳನ್ನೆಲ್ಲಾ ಸಾರಾ ಸಗಟಾಗಿ ತಿರಸ್ಕರಿಸಿ 'ಅವೆಲ್ಲಾ ನನ್ನ ಕೈಲಿ ಆಗೋಲ್ಲಾ ಸರ್,ಚೆನ್ನಾಗಿ ಕಂಟ್ರೋಲ್ ಆಗೋ ಹಾಗೆ ಯಾವುದಾದರೂ ಒಳ್ಳೆ ಮಾತ್ರೆ ಬರೆದು ಕೊಡಿ'ಎಂದರು.
ಅವರ ಈ ಮಾತುಗಳು ನನ್ನನ್ನು ಯೋಚಿಸುವಂತೆ ಮಾಡಿತು.'ನಾವು ಯಾವ ಸ್ಥಿತಿಗೆ ಬಂದು ನಿಂತಿದ್ದೇವೆ!'ಎನಿಸಿತು.ಔಷದ ವಿಲ್ಲದೆ ಆರೋಗ್ಯವಾಗಿ ಬದುಕೊದಿಕ್ಕೆ ಸಾಧ್ಯವಿಲ್ಲವೇ?'ಎನಿಸಿತು.ಕೈ ಕಾಲುಗಳಿಗೆ ಅವುಗಳ ಕೆಲಸ ಕೊಡದಿದ್ದರೆ ಸಮಗ್ರ ಆರೋಗ್ಯ ಹೇಗೆ ಸಾಧ್ಯ?
'what is used less and less ultimately becomes useless' ಅನ್ನುವ ಮಾತೊಂದಿದೆ.ಮೊದಲಿಂದಲೂ ಕನಿಷ್ಟ ಅರ್ಧದಿಂದ ಒಂದು ಗಂಟೆ ನಡೆದರೆ ಈಗ ದಿನನಿತ್ಯ ಕಾಣುತ್ತಿರುವ ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳನ್ನು ದೂರವಿಡಬಹುದೆನಿಸುತ್ತದೆ.ಯಾವುದೇ ಕಾರಣಕ್ಕಾದರೂ ಮನೆಯಿಂದ ಹೊರಗೆ ಹೋಗಲು ಆಗದೆ ಇದ್ದ ಪಕ್ಷದಲ್ಲಿ,ಮನೆಯಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆ ನಡೆಯಬಹುದು.ಬೋನಿನಲ್ಲಿ ಇರುವ ಹುಲಿ,ಚಿರತೆಯಂತಹ ಪ್ರಾಣಿಗಳೇ ಆ ಸ್ವಲ್ಪ ಜಾಗದಲ್ಲೇ ಒಂದುಕಡೆಯಿಂದ ಇನ್ನೊದು ಕಡೆ ಓಡಾಡುವುದನ್ನು ನೋಡಿದ್ದೇವೆ. Exercising is a necessity ಎನ್ನುವುದನ್ನು ನಾವು ಇದರಿಂದಲಾದರೂ ಕಲಿಯಬಹುದಲ್ಲವೇ?ಅನುಕೂಲವಿದ್ದವರು ಮನೆಯಲ್ಲೇ ಒಂದು ಟ್ರೆಡ್ ಮಿಲ್ ಇಟ್ಟುಕೊಳ್ಳಬಹುದು.
ಬಿ.ಪಿ,ಶುಗರ್,ಮತ್ತು ಹಾರ್ಟ್ ಪ್ರಾಬ್ಲಂ ಇಲ್ಲದವರು ಮೆಟ್ಟಿಲು ಹತ್ತಿ ಇಳಿಯುವುದನ್ನೇ ಒಂದು ವ್ಯಾಯಾಮ ವಾಗಿ ಅಳವಡಿಸಿಕೊಳ್ಳ ಬಹುದು.ಹತ್ತು ನಿಮಿಷದಿಂದ ಶುರು ಮಾಡಿ, ಬರ ಬರುತ್ತಾ ಮೂವತ್ತು ನಿಮಿಷದವರೆಗೆ ಮೆಟ್ಟಿಲು ಹತ್ತಿ ಇಳಿದರೆ ಅದ್ಭುತ ವ್ಯಾಯಾಮವಾಗುತ್ತದೆ.ಇದರ ಜೊತೆ ಸ್ವಲ್ಪ ಯೋಗ ಮತ್ತು ಪ್ರಾಣಾಯಾಮವನ್ನು ಕಲಿತರೆ ಆರೋಗ್ಯಕ್ಕೆ ಇನ್ನೂ ಒಳಿತು.ಸರಿಯಾದ ಆಹಾರ,ಆರೋಗ್ಯಕರ ವಿಚಾರಗಳು  ಮತ್ತು ಸರಿಯಾದ ವ್ಯಾಯಾಮದದಿಂದ ಔಷಧವಿಲ್ಲದೆಯೂ ಆರೋಗ್ಯವಾಗಿರಬಹುದಲ್ಲವೇ ?

ಆರೋಗ್ಯವೆನ್ನುವುದು  ನಮ್ಮೆಲ್ಲರ ಸಹಜ ಸ್ಥಿತಿ.ಅದು ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಈ ವಿಶ್ವ ಆರೋಗ್ಯ ದಿನದಂದು ಎಲ್ಲರಿಗೂ ಸಮೃದ್ಧಿಯಾಗಿ ಆರೋಗ್ಯ ಭಾಗ್ಯ ಲಭ್ಯವಾಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ನಮಸ್ಕಾರ.

Tuesday, April 2, 2013

"ವೈದ್ಯನೊಬ್ಬನ ಮರೆಯಲಾಗದ ವಿಶಿಷ್ಟ ಅನುಭವ!!!! "

ಇದನ್ನೆಲ್ಲಾ ಹೇಗೆ ಬರೆಯುವುದೋ ಗೊತ್ತಿಲ್ಲ .ಆದರೆ ಬರೆಯದೆ ಇರುವುದೂ ಸಾಧ್ಯವಾಗುತ್ತಿಲ್ಲ.ಇಂತಹ ಹಲವಾರು ಘಟನೆಗಳು ನೆನಪಿನ ಹಗೇವಿನಲ್ಲಿ ಆಳವಾಗಿ ಬೇರು ಬಿಟ್ಟಿವೆ.ಸುಮಾರು ಇಪ್ಪತೆಂಟು ವರ್ಷಗಳ ಹಿಂದಿನ ಘಟನೆ .ಆಗ ನಾನು ಸಿರುಗುಪ್ಪದಿಂದ ಎಂಟು ಕಿಲೋಮೀಟರ್ ದೂರದ ದೇಶನೂರು ಎಂಬ ಹಳ್ಳಿಯ ಸನಿಹವಿದ್ದ ಸಕ್ಕರೆ ಕಾರ್ಖಾನೆಯಲ್ಲಿ  ವೈದ್ಯನಾಗಿದ್ದೆ.ಆಗ ಆಸ್ಪತ್ರೆಯೆಂದರೆ ಕಾರ್ಖಾನೆಯಲ್ಲೇ ಸಣ್ಣದೊಂದು ಶೆಡ್ ಇತ್ತು.ಆಸ್ಪತ್ರೆಯ ಸಿಬ್ಬಂಧಿಗಳೆಂದರೆ ನಾನು ಮತ್ತು ಔಷಧಿ ಕೊಡುವ ಒಬ್ಬ ಕಾಂಪೌಂಡರ್ ಇಬ್ಬರೇ.ಸಣ್ಣ ,ಪುಟ್ಟ ಖಾಯಿಲೆಗಳಿಗೆ ಔಷಧಿ ಮತ್ತು ತುರ್ತು ಚಿಕಿತ್ಸೆ ಮಾತ್ರ ಅಲ್ಲಿ ಲಭ್ಯವಿತ್ತು.ಹೆಚ್ಚಿನ ಚಿಕಿತ್ಸೆಗೆ ಕಾರ್ಮಿಕರು ಅವರ ಸ್ವಂತ ಖರ್ಚಿನಲ್ಲಿ ಎಂಟು ಕಿಲೋಮೀಟರ್ ದೂರವಿದ್ದ ಸಿರುಗುಪ್ಪಕ್ಕೋ ,ಐವತ್ತು ಕಿಲೋಮೀಟರ್ ದೂರದ ಬಳ್ಳಾರಿಗೋ ಹೋಗಬೇಕಿತ್ತು.
ಅಸಾಧ್ಯ ಬಿಸಿಲಿನ ಪ್ರದೇಶ.ಶೀಟಿನ ಮನೆ.ಸಂಜೆಯ ವೇಳೆಗೆ ,ಕೆಂಡ ಕಾದಂತೆ ಕಾಯುತ್ತಿತ್ತು.ರಾತ್ರಿ ಸ್ವಲ್ಪ ತಂಪಾಗುತ್ತಿತ್ತು. ಆದರೂ ವಿಪರೀತ ಸೆಖೆಯಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ.ಚೊಚ್ಚಲ ಹೆರಿಗೆಗೆಂದು ತವರಿಗೆ ಹೋಗಿದ್ದ ಹೆಂಡತಿಯಿಂದ ಪತ್ರ ಬಂದು ವಾರವಾಗಿತ್ತು.ಆಗೆಲ್ಲಾ ,ಈಗಿನಂತೆ ಫೋನಿನ ಸೌಕರ್ಯವಿರಲಿಲ್ಲ.ಮೊದಲೇ ಸೆಖೆ.ಮೇಲೆ ಹೆಂಡತಿ ಹೇಗಿದ್ದಾಳೋ ಎನ್ನುವ ಆತಂಕ. ರಾತ್ರಿ ಎರಡಾದರೂ  ನಿದ್ರೆಯ ಸುಳಿವಿಲ್ಲ.ಆಗ ಜೋರಾಗಿ ಬಾಗಿಲು ಬಡಿಯುವ ಶಬ್ದ ,ಜೊತೆಗೇ ಯಾರೋ ಆತಂಕದ ದನಿಯಲ್ಲಿ 'ಸಾರ್,ಸಾರ್'ಎಂದು ಕೂಗುವ ಶಬ್ದ.ಹೋಗಿ ಬಾಗಿಲು ತೆರೆದೆ.ಕಾರ್ಖಾನೆಯ ರಸ್ತೆಯ ಪಕ್ಕದಲ್ಲೇ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ, ಸಕ್ಕರೆ ಮೂಟೆಗಳನ್ನು ಲಾರಿಗಳಿಗೆ ತುಂಬುವ ಹಮಾಲಿಗಳ ಸಣ್ಣ ತಂಡವೊಂದು ಲಾಟೀನುಗಳನ್ನು ಹಿಡಿದು ನಿಂತಿತ್ತು.'ಏನ್ರಪ್ಪಾ?.....ಏನಾಯಿತು...?'ಎಂದೆ. ಅವರಲ್ಲೊಬ್ಬ ಮುಖಂಡ ನಂತೆ ಇದ್ದವನು 'ಸಾರ್....,ಗಡಾನೆ ಬರ್ರಿ ಸಾರ್ ...,ಹುಲಿಗೆಪ್ಪನ ಹೆಂಡತಿಗೆ ಹೆರಿಗೆ ತ್ರಾಸಾಗಿದೆ'ಎಂದ. ಏನು ,ಎತ್ತ ಎಂದು ಅರ್ಥವಾಗದಿದ್ದರೂ 'ಸರಿ ನಡೀರಿ 'ಎಂದು ಮನೆಯ ಬಾಗಿಲಿಗೆ ಬೀಗ ಹಾಕಿ ಔಷಧಿಗಳಿದ್ದ ಸಣ್ಣ ಪೆಟ್ಟಿಗೆಯೊಂದನ್ನು ಹಿಡಿದು ಅವರ ಜೊತೆ ಸುಮಾರು ಅರ್ಧ ಕಿಲೋಮೀಟರ್ ದೂರವಿದ್ದ ಅವರ ಗುಡಿಸಿಲಿನ ಕಡೆ ನಡೆದೆ.ಸಿರಗುಪ್ಪದಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದ್ದರೂ ಹೆರಿಗೆಗೆ ಅಲ್ಲೇಕೆ ಕರೆದುಕೊಂಡು ಹೋಗಲಿಲ್ಲವೆಂದು ಕೇಳಿದೆ.'ಅಲ್ಲೂ ರೊಕ್ಕ ಇಲ್ಲದೆ ಏನೂ ಮಾಡಂಗಿಲ್ರೀ  ಸಾಹೇಬ್ರೇ.ನಾವು ಬಡವರು ರೊಕ್ಕ ಎಲ್ಲಿ ತರೋಣ್ ರೀ' ಎಂದ ಅವರಲ್ಲೊಬ್ಬ .ನಮ್ಮ ಅವ್ಯವಸ್ಥೆಯನ್ನು ಹಳಿಯುತ್ತಾ ,ಆ ನಡುರಾತ್ರಿಯ ಕತ್ತಲೆಯಲ್ಲಿ ,ಲಾಟೀನುಗಳ ಮಂದ ಬೆಳಕಿನಲ್ಲಿ ಅವರ ಗುಡಿಸಳುಗಳತ್ತ ಲಗುಬಗೆಯಿಂದ ಹೆಜ್ಜೆ ಹಾಕಿದೆ.  
ಅಲ್ಲಲ್ಲೇ ಹರಿಯುತ್ತಿದ್ದ ಕೊಚ್ಚೆಯ ನೀರನ್ನು ದಾಟಿಕೊಂಡು ,ತಮ್ಮ ಸರಹದ್ದಿಗೆ ಆಗಂತುಕನೊಬ್ಬನ ಆಗಮನ ವಾಗುತ್ತಿದ್ದಂತೆ ಜೋರಾಗಿ ಬೊಗಳುತ್ತಿದ್ದ ಹತ್ತಾರು ನಾಯಿಗಳನ್ನು ಲೆಕ್ಕಿಸದೆ ಅವರು ಕರೆದುಕೊಂಡು ಹೋದ ಗುಡಿಸಲೊಂದರೊಳಗೆ ಹೋದೆ.ಅಲ್ಲಿ ಕಂಡ ದೃಶ್ಯ   ಎಂತಹ ಗಂಡೆದೆ ಉಳ್ಳವರೂ ಹೌಹಾರುವಂತಿತ್ತು .ಸಗಣಿಯಿಂದ ಸಾರಿಸಿದ ನೆಲದ ಮೇಲೆ ಹಾಸಿದ್ದ ಕೌದಿಯೊಂದರ ಮೇಲೆ ಗರ್ಭಿಣಿ ಹೆಂಗಸೊಬ್ಬಳು 'ಯಪ್ಪಾ ,ನನ್ ಕೈಯಾಗೆ ಆಗಾಕಿಲ್ಲೋ ....ನಾನ್  ಸಾಯ್ತೀನ್ರೋ .....ಯಪ್ಪಾ'ಎಂದು ಜೋರಾಗಿ ನರಳುತ್ತಿದಳು.ಅವಳ ಪಕ್ಕದಲ್ಲಿದ್ದ ಮುದುಕಿಯೊಬ್ಬಳು 'ಎಲ್ಲಾ ಸರಿ ಹೋಕ್ಕತೆ ಸುಮ್ಕಿರು, ದಾಗ್ದಾರ್ ಸಾಬ್ ಬಂದಾನೆ 'ಎಂದು ಸಮಾಧಾನ ಮಾಡುತ್ತಿದ್ದಳು.ಅವರು ಕೊಟ್ಟ ಸೋಪು ,ಬಿಸಿನೀರಿನಿಂದ ಕೈ ತೊಳೆದೆ.ಅದೊಂದು 'breach delivery' ಆಗಿತ್ತು .ಮಾಮೂಲಾಗಿ ಮಗುವಿನ ತಲೆ ಮೊದಲು ಹೊರಗೆ ಬರುತ್ತದೆ. 'ಬ್ರೀಚ್ ' ಡೆಲಿವರಿಯಲ್ಲಿ ,ಮಗುವಿನ ಕಾಲುಗಳು ಹೊರಗೆ ಬರುತ್ತವೆ. ಈ ಹೆಂಗಸಿನಲ್ಲಿ ಮಗುವಿನ ಕಾಲುಗಳು ಹೊರಬಂದು ತಲೆಯ ಭಾಗ ಹೊರಬರದೆ ಸಿಕ್ಕಿಕೊಂಡಾಗ ಏನು ಮಾಡಲು ತೋಚದೆ, ನನ್ನನ್ನು ಕರೆಸಿದ್ದರು.ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯಗಳಿದ್ದೂ ,ಸಹಾಯಕ್ಕೆ ದಾದಿಯರಿದ್ದೂ, ನಡೆಸುವ ಹೆರಿಗೆಗಳಲ್ಲೇ ನೂರೆಂಟು ತೊಂದರೆಗಳು.ಅಂಥದ್ದರಲ್ಲಿ ಆ ಗುಡಿಸಲಿನಲ್ಲಿ ಸಗಣಿಸಾರಿಸಿದ ನೆಲದ ಮೇಲೆ ಕುಳಿತು  ,ಲಾಟೀನಿನ ಮಂದ ಬೆಳಕಿನಲ್ಲಿ,ಅದೂ 'ಬ್ರೀಚ್ ಡೆಲಿವರಿ'ಮಾಡಬೇಕಾದಾಗ , ಹೆರಿಗೆಗಳನ್ನು ಮಾಡಿ  ಅನುಭವವಿರದ ನನ್ನ ಸ್ಥಿತಿ ಹೇಗಿದ್ದಿರಬಹುದೋ ನೀವೇ ಊಹಿಸಿಕೊಳ್ಳಿ. ದೇವರ ದಯೆಯಿಂದ ಹೆರಿಗೆ ನಾನು ನೆನೆಸಿದಷ್ಟು ಕಷ್ಟವಾಗಲಿಲ್ಲ.ಹೆಣ್ಣು ಮಗುವಿನ ಜನನವಾಯಿತು.ಮಗುವಿನ ಅಳು ಕೇಳುತ್ತಿದ್ದಂತೆ ಅಲ್ಲಿದ್ದವರ ಮುಖಗಳಲ್ಲಿ ಸಂತಸದ ನಗು ಮೂಡಿತು.
ಇದಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ನಾನು ರಾಯಚೂರಿನ ಶಕ್ತಿನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ ,ಸಿರುಗುಪ್ಪದಿಂದ ನಾನು ಹೆರಿಗೆ ಮಾಡಿದ ಹೆಂಗಸು ತನ್ನ ಪತಿಮತ್ತು ಮಗಳೊಂದಿಗೆ ನನ್ನನ್ನು ಹುಡುಕಿಕೊಂಡು ಬಂದು,ನಾನೆಷ್ಟೇ ಬೇಡವೆಂದರೂ ಮಗಳಿಂದ ನನ್ನ ಕಾಲಿಗೆ ನಮಸ್ಕಾರ ಮಾಡಿಸಿ, ತನ್ನ ಮಗಳ ಲಗ್ನಪತ್ರಿಕೆ ಕೊಟ್ಟು ಹೋದಳು.ಎಷ್ಟೋ ಸಲ ಜನಗಳ ವರ್ತನೆಯಿಂದ ಬೇಸತ್ತ ಮನಸ್ಸಿಗೆ ,ಆ ಕ್ಷಣದಲ್ಲಿ ವೈದ್ಯನಾದದ್ದು  ಸಾರ್ಥಕವೆನಿಸಿತ್ತು.ಮನದಲ್ಲಿ ಒಂದು ಅಲೌಕಿಕ ಸಂತಸ ಮನೆ ಮಾಡಿತ್ತು.