Saturday, July 26, 2014

"ಡೊಂಕು ಬಾಲದ ಮನವೇ ..!!!!! "

ಅಲ್ಲಿ ಸುತ್ತಿ ,ಇಲ್ಲಿ ಸುಳಿದು,
ಮತ್ತೇ ಮರಳಿ ಅಲ್ಲಿಗೇ ...!!
ಬಂದೆಯಲ್ಲ ಮನವೇ ನೀನು
ನೋವ ನೆನಪಿನಲ್ಲಿಗೇ ..... !!!!

ನೋಯ್ವ ಹಲ್ಲಿನಲ್ಲಿಗೇ ..... ,
ಮತ್ತೇ ,ಮತ್ತೇ ,ಮೆಲ್ಲಗೇ ...!!
ಸುಳಿಯುವಂತೆ ನಾಲಿಗೇ ..,
ಮರಳಿ ಬಂದೆ ಅಲ್ಲಿಗೇ !!!!
ನೋವ ನೆನಪಿನಲ್ಲಿಗೇ !!!!

ಸುಳಿಯುವಂತೆ ದೀಪದ ಹುಳು
ಸುಡುವ ಸೊಡರ ಸುತ್ತಲೂ !!
ಗಿರಕಿ ಹೊಡೆದೇ ಮನವೇ ನೀನು
ನೋವ ಸುತ್ತ ಮುತ್ತಲು !!!!

ಬಿಡು ಜೀವವೇ ,ಬಿಡು ಅಲ್ಲೇ
ಸುಡುವ ಹಾಳು ನೆನಪನು !!
ಮನದ ಮರದಿ ಚೈತ್ರ ತರಲಿ
ತಪು ತಂಪು ತಳಿರನು!!!!
ಸುಖದ  ತಂಪು ನೆನಪನು !!!!

Friday, July 18, 2014

" ಅಪ್ಪಾ ನಾನು ಹದಿನೇಳನೇ RANKಉ !!!! "

ಈಗೀಗ ತಂದೆ  ತಾಯಂದಿರು L.K.G.ಯಿಂದಲೇ ತಮ್ಮ ಮಕ್ಕಳ RANK ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ !!!!! ಎಲ್ಲಾ ಮಕ್ಕಳೂ ಫಸ್ಟ್ RANKಏ  ಬರಬೇಕೆಂದರೆ ಹೇಗೆ ಸಾಧ್ಯ!!!!?

ಇದು ಸುಮಾರು ಇಪ್ಪತ್ತು ವರುಷಗಳ ಕೆಳಗೆ ನಡೆದ ಘಟನೆ. ನಾನು ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ. ಅವರ ಮಗ ಆರನೇ ತರಗತಿಯಲ್ಲಿ  ಓದುತ್ತಿದ್ದ . ಸಂಜೆ ಶಾಲೆಯಿಂದ ಕುಣಿಯುತ್ತಾ ಬಂದ .ಅವನ  ತಂದೆ ಅವನನ್ನು "ಏನೋ ,ಇಷ್ಟೊಂದು ಖುಷಿಯಾಗಿದ್ದೀಯಾ ? " ಎಂದು ವಿಚಾರಿದರು. ಅದಕ್ಕವನು ಖುಷಿಯಿಂದ " ಅಪ್ಪಾ ...... ನಾನು ಹದಿನೇಳನೇ  RANKಉ !!!!" ಎಂದ . ಅದಕ್ಕೆ ಅವರಪ್ಪ " ಅಲ್ಲಪ್ಪಾ ಮಗನೇ ......... ಹದಿನೇಳನೇ  RANK ಬಂದರೆ ಯಾರಾದರೂ ಇಷ್ಟೊಂದು ಖುಷಿ ಪಡುತ್ತಾರೆಯೇ !!!!?"ಎಂದು ಆಶ್ಚರ್ಯದಿಂದ ಕೇಳಿದರು. "ನನ್ನ ಬೆಸ್ಟ್ ಫ್ರೆಂಡ್ ಗಿಂತ ಮುಂದೆ ಇದ್ದೀನಿ. ಅವನು ಹದಿನೆಂಟನೇ RANKಉ " ಎಂದ !!!! ಸಾಹೇಬರ ಭಾರೀ ಖುಷಿಗೆ ಕಾರಣ ತಿಳಿಯಿತು!!!! ಅದಕ್ಕೆ  ಅವರ ತಂದೆ "ನಿಮ್ಮ ಕ್ಲಾಸಲ್ಲಿ ಎಷ್ಟು ಜನ ಹುಡುಗರಿದ್ದಾರೆ ?"ಎಂದು ಕೇಳಿದರು. "ಹದಿನೆಂಟು"ಎಂದು ಉತ್ತರ ಬಂತು. ಉತ್ತರ ಕೇಳಿ ನಾನು ದಂಗಾದೆ !!!! ಇರುವ ಹದಿನೆಂಟು ಜನರಲ್ಲಿ ಹದಿನೇಳನೇ RANK ಬಂದು,ಮೊದಲು ಬಂದವನ ಹಾಗೆ ಕುಣಿದು ಕುಪ್ಪಳಿಸುತ್ತಿದ್ದಾನೆ  !!!! ಅವನ ತಂದೆಯೂ  ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದೇ  ಸದಾ ಖುಷಿಯಿಂದ ರುತ್ತಿದ್ದ ದಿಲ್ದಾರ್ ಮನುಷ್ಯ . "ಆಯ್ತು ಹೋಗು ,ಮುಂದಿನ ಸಲ ಹದಿನಾರನೇ RANK ಬರೋಕೆ ಟ್ರೈ ಮಾಡು"ಎಂದ. "ಆಯ್ತಪ್ಪಾ " ಎನ್ನುತ್ತಾ ,ಮಗರಾಯ ಕುಣಿಯುತ್ತಾ ಆಟಕ್ಕೆ ಓಡಿದ !!!! ಇಂದು ಅವನು ಅಮೆರಿಕಾದಲ್ಲಿ ದೊಡ್ಡದೊಂದು  ಹುದ್ದೆಯಲ್ಲಿದ್ದಾನೆ. ಕೈ ತುಂಬಾ ಸಂಬಳ ತೆಗೆದು ಕೊಂಡು ಸುಖವಾಗಿದ್ದಾನೆ. ಮಕ್ಕಳ RANK ಬಗ್ಗೆ ಬಹಳ ತಲೆ ಕಡಿಸಿ ಕೊಳ್ಳುವವರು ಸ್ವಲ್ಪ ಯೋಚಿಸಬೇಕಾದ ವಿಷಯವಿದು. 

Saturday, April 19, 2014

"ಅಬ್ಬಾ.....!!!!......ಆ ...ಕ್ಷಣಗಳು !!!! "

ಜೀವನದಲ್ಲಿ ಅಂತಹ ಕ್ಷಣಗಳು ನಮ್ಮ ಶತ್ರುವಿಗೂ ಬರಬಾರದು !!!ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನೆಸಿಕೊಂಡರೆ,ಈಗಲೂ ನನ್ನ ಕೈಕಾಲುಗಳು ತಣ್ಣಗಾಗುತ್ತವೆ!!!ಬೆಂಗಳೂರಿನಿಂದ ರಾಯಚೂರಿಗೆ ಸಂಸಾರ ಸಮೇತನಾಗಿ ಟ್ರೈನಿನಲ್ಲಿ ಹೊರಟಿದ್ದೆ.ಸಂಜೆ ಸುಮಾರು ಐದು ಗಂಟೆಯ ಸಮಯ.ನನ್ನ ಹೆಂಡತಿಯ ಕಂಕುಳಲ್ಲಿ ಒಂದು ವರ್ಷದ ಮಗಳು,ನನ್ನ ಕೈ ಹಿಡಿದ ಐದು ವರ್ಷದ ಮಗ,ಒಂದು ರಾಶಿ ಮನೆ ಸಾಮಾನು.ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್ನಿನ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಇಳಿದ ತಕ್ಷಣ ,ಸಕ್ಕರೆ ಪಾಕಕ್ಕೆ ನೊಣ ಮುತ್ತುವಂತೆ ಕೂಲಿಗಳ ಒಂದು ದೊಡ್ಡ ಹಿಂಡೇ ನಮ್ಮನ್ನು ಮುತ್ತಿಕೊಂಡರು.ಕೂಲಿ ಮಾತಾಡುವ ಮೊದಲೇ,ಮೂರು ನಾಲಕ್ಕು ಜನ ಸಾಮಾನುಗಳನ್ನು ಹೊತ್ತುಕೊಂಡು 'ಯಾವ ಬೋಗಿ ಸರ್'ಎನ್ನುತ್ತಾ ಹೊರಟೀ ಬಿಟ್ಟರು!!ನಂತರ ಅವರು ಮಾಡುವ ರಗಳೆಗೆ ಹೆದರಿ,ಹರ ಸಾಹಸ ಮಾಡಿ ಅವರಿಂದ ಬಿಡಿಸಿಕೊಂಡು ಒಬ್ಬ ಕೂಲಿಯನ್ನು ಗೊತ್ತು
ಮಾಡಿದೆ.ಹೆಂಡತಿಯನ್ನು ಮಗಳೊಂದಿಗೆ ಅರ್ಧ ಸಾಮಾನುಗಳ ಬಳಿ ಅಲ್ಲೇ ಬಿಟ್ಟು ,ಇನ್ನರ್ಧ ಸಾಮಾನುಗಳನ್ನು ತಲೆಯ ಮೇಲೆ ಹೊತ್ತ ಕೂಲಿಯವನ ಹಿಂದೆ,ಮಗನ ಕೈ ಹಿಡಿದು ಹೊರಟೆ.ಟ್ರೈನ್ ಆಗಲೇ ಪ್ಲ್ಯಾಟ್ ಫಾರಂನಲ್ಲಿ ಬಂದು ನಿಂತಿತ್ತು .ನಮಗೆ ರಿಸರ್ವ್ ಆಗಿದ್ದ ಬೋಗಿಯನ್ನು ಹುಡುಕಿ ,ಚಾರ್ಟ್ ನಲ್ಲಿ ನಮ್ಮಬರ್ತ್ ನಂಬರ್ ನೋಡಿ ,ಅಲ್ಲಿ ನಮ್ಮ ಸಾಮಾನುಗಳನ್ನು ಇಟ್ಟು,ಮಗನನ್ನು ಅಲ್ಲೇ ಕೂರಿಸಿ "ಅಮ್ಮನನ್ನೂ ,ಪಾಪುವನ್ನೂ ಕರೆದುಕೊಂಡು ಮಿಕ್ಕ ಸಾಮನುಗಳನ್ನು ತರುತ್ತೇನೆ ,ಇಲ್ಲೇ ಕೂತಿರು ಪುಟ್ಟಾ"ಎಂದೆ."ಹೂಂ"ಎಂದು ತಲೆಯಾಡಿಸಿದ ಮಗರಾಯ.ಪಕ್ಕದಲ್ಲಿದ್ದ ಪ್ರಯಾಣಿಕರಿಗೆ ಸ್ವಲ್ಪ ನೋಡಿಕೊಂಡಿರುವಂತೆ ಹೇಳಿ,ಮತ್ತೆ ಕೂಲಿಯವನೊಂದಿಗೆ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಹೋದೆ.ನನ್ನ ಹೆಂಡತಿ"ಮಗ ಎಲ್ಲಿ"ಎಂದಳು."ಟ್ರೈನಿನಲ್ಲಿ ಸಾಮಾನುಗಳ ಜೊತೆ ಕೂರಿಸಿ ಬಂದಿದ್ದೇನೆ,ಪಕ್ಕದವರಿಗೆ ಹೇಳಿದ್ದೇನೆ,ಕೂತಿರುತ್ತಾನೆ ಬಾ "ಎಂದೆ."ರೀ!ನಿಮಗೆ ಅಷ್ಟೂ ಗೊತ್ತಾಗೊದಿಲ್ಲವಾ !?ಅವನೋಬ್ಬನನ್ನೇ ಯಾಕೆ ಕೂರಿಸಿ ಬಂದಿರಿ?"ಎಂದು ತರಾಟೆಗೆ ತೆಗೆದುಕೊಂಡಳು.ನನಗೆ ಒಂದು ಕ್ಷಣ ಎದೆಯಲ್ಲಿ ಅವಲಕ್ಕಿ ಕುಟ್ಟಿ ದಂತಾಯಿತು.ಆದರೂ ಅದನ್ನು ತೋರಿಸಿಕೊಳ್ಳದೇ,ಧೈರ್ಯ ತಂದುಕೊಂಡು "ಏನೂ ಆಗೋಲ್ಲಾ.....,ನೀನು ಸುಮ್ನೆ ಇಲ್ಲದಿರೋದೆಲ್ಲಾ ಯೋಚನೆ ಮಾಡಬೇಡ"ಎಂದು ದಬಾಯಿಸಿ,ಇನ್ನುಳಿದ ಸಾಮಾನುಗಳೊಂದಿಗೆ ನನ್ನ ಬೋಗಿಗೆ ಬಂದೆ.ಸಾಮಾನುಗಳಿವೆ....,ಮಗ ಇಲ್ಲ!!!!ಪಕ್ಕದವರನ್ನು ಕೇಳಿದರೆ "ಇಲ್ಲೇ ಇದ್ದನಲ್ಲಾ!!,ಅರೇ ....!!"ಎಂದು ಆಚೀಚೆ ನೋಡ ತೊಡಗಿದರು!!ನನ್ನ ಎದೆ ಧಸಕ್ ಎಂದಿತು.ಮೈ ಬೆವರೊಡೆಯಿತು.ಕೈ ,ಕಾಲು ತಣ್ಣಗಾಗಿ,ಹೊಟ್ಟೆಯಲ್ಲಿ ವಿಚಿತ್ರ ತಳಮಳ!! ಹೆಂಡತಿ ದೊಡ್ಡ ದನಿಯಲ್ಲಿ ಗೊಳೋ ಎಂದು ಅಳತೊಡಗಿದಳು.ಕಂಕುಳಲ್ಲಿದ್ದ ಒಂದು ವರ್ಷದ ಮಗಳು ಏನೋ ಗಡಿಬಿಯಾಗಿದೆ ಎಂದು ತಿಳಿದು,ಗಾಭರಿಯಿಂದ ತಾನೂ ಜೋರಾಗಿ ಅಳಲು ಶುರು ಮಾಡಿದಳು.ಆಗ ಸಮಯ 5.30.ಇನ್ನು ಹದಿನೈದು ನಿಮಿಷದಲ್ಲಿ ಟ್ರೈನ್ ಹೊರಡುತ್ತೆ!!ನನ್ನ ಬಳಿ ಇರುವುದು ಹದಿನೈದೇ ನಿಮಿಷ!!ಅಷ್ಟರಲ್ಲಿ ,ಆ ದೊಂಬಿಯಲ್ಲಿ ,ಕಳೆದು ಹೋದ ಮಗನನ್ನು ಎಲ್ಲಿ ಹುಡುಕುವುದು!!?ಹೇಗೆ ಹುಡುಕುವುದು?ಮೊದಲು ಟ್ರೈನಿನ ಮುಂಭಾಗಕ್ಕೆ ಓಡಿ,ಎಂಜಿನ್ ಡ್ರೈವರ್ ಗೆ ನಡೆದ ವಿಷಯ ಹೇಳಿದೆ.ಅವನು "ಗಾರ್ಡ್ ಗೆ ವಿಷಯ ತಿಳಿಸಿ"ಎಂದ.ಮತ್ತೆ ಹುಚ್ಚನಂತೆ ಟ್ರೈನ್ ನ ಹಿಂಭಾಗಕ್ಕೆ ಓಡಿ,ಗಾರ್ಡ್ ಗೆ ವರದಿ ಒಪ್ಪಿಸಿದೆ.ನಾವು ಇದ್ದದ್ದು ಒಂಬತ್ತನೇ ಪ್ಲ್ಯಾಟ್ ಫಾರಂ.ಗಾರ್ಡ್ ಮೊದಲನೇ ಪ್ಲ್ಯಾಟ್ ಫಾರಮ್ಮಿಗೆ ಹೋಗಿ ಅನೌನ್ಸರ್ ಗೆ ಹೇಳುವಂತೆ ಹೇಳಿದ.ನನಗೆ ದಿಕ್ಕೇ ತೋಚಲಿಲ್ಲ!!ಏನಾದರೂ ಮಗ ಬಂದಿರ ಬಹುದೇ ಎಂದು ಆಸೆಯಿಂದ ಬೋಗಿಯ ಬಳಿ ಬಂದು ,ಕಿಟಕಿಯಿಂದ ಒಳಗೆ ಇಣುಕಿದೆ."ಇನ್ನೂ ಸಿಗಲಿಲ್ಲವೆನ್ರೀ !!!"ಎಂದು ಕೂಗಿದ ಹೆಂಡತಿಯ ಅಳು ತಾರಕಕ್ಕೇರಿತು !!ಸ್ಪರ್ಧೆಗಿಳಿದಂತೆ ಮಗು ಇನ್ನೂ ಜೋರಾಗಿ ಅಳ ತೊಡಗಿತು!! ಅಕ್ಕ ಪಕ್ಕದವರು ತಲೆಗೊಂದರಂತೆ ಸಲಹೆ ಕೊಡ ತೊಡಗಿದರು.ಕೆಲವರು "ಸಾಮಾನುಗಳನ್ನು ಇಳಿಸಿಕೊಂಡು ಇಳಿದು ಬಿಡಿ "ಎಂದರೆ ಮತ್ತೆ ಕೆಲವರು "ಬೇಡ,ಬೇಡ,ನಿಮ್ಮ ಮಗ ಮತ್ಯಾವುದಾದರೂ ಬೋಗಿಗೆ ಹತ್ತಿರಬಹುದು"ಎಂದರು.ಇನ್ನು ಕೆಲವರು"ಪಕ್ಕದ ಪ್ಲ್ಯಾಟ್ ಫಾರಮ್ಮಿ ನಲ್ಲಿ ನಿಂತಿರುವ ಟ್ರೈನ್ ನಲ್ಲೂ ಒಮ್ಮೆ ನೋಡಿ" ಎಂದರು.ಟ್ರೈನ್ ಹೊರಡಲು ಕೆಲವೇ ನಿಮಿಷಗಳು ಬಾಕಿ ಇವೆ!!!ನನಗೋ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗಿತ್ತು!!ಜೀವನದಲ್ಲಿ ಮೊದಲ ಬಾರಿಗೆ ಅಸಹಾಯಕನಾಗಿ,ಹೃತ್ಪೂರ್ವಕವಾಗಿ "ಅಪ್ಪಾ ಈಗ ನೀನೇ ಗತಿ"ಎಂದು ದೇವರನ್ನು ಪ್ರಾರ್ಥಿಸಿದೆ.ನನ್ನ ಪ್ರಾರ್ಥನೆ ಆ ದೇವನಿಗೆ ತಲುಪಿತು.ವಯಸ್ಸಾದ ,ಗಡ್ಡ ಧಾರಿ ಕೂಲಿಯೊಬ್ಬನ ರೂಪದಲ್ಲಿ ದೇವರು, ಅಳುತ್ತಿದ್ದ ನನ್ನ ಮಗನ ಕೈ ಹಿಡಿದು ಬರುತ್ತಿದ್ದ.ಹೃದಯ ಬಾಯಿಗೆ ಬಂದಂತಾಯಿತು.'ಗಳ ಗಳನೆ' ಮಗುವಿನಂತೆ ಅತ್ತು ಬಿಟ್ಟೆ .ನನ್ನ ಮಗ ನನಗೆ ಸಿಕ್ಕಿದ್ದ!!! ಯಾವ ನಿಧಿ ಸಿಕ್ಕಿದರೂ ನನಗೆ ಅಷ್ಟು ಸಂತೋಷವಾಗುತ್ತಿರಲಿಲ್ಲ!!!ಆ ಕೂಲಿಯವನ ಎರಡೂ ಕೈಗಳನ್ನೂ ಹಿಡಿದು ಕಣ್ಣಿಗೆ ಒತ್ತಿಕೊಂಡೆ.ಅವನಿಗೆ ಕೈ ಮುಗಿದು ,ಜೇಬಿನಲ್ಲಿದ್ದ ನೂರರ ಎರಡು ನೋಟುಗಳನ್ನು ಹೊರತೆಗೆದೆ.ಆ ಪುಣ್ಯಾತ್ಮ ಕೂಲಿಯವನು "ನಕ್ಕೋ ಸಾಬ್,ನಕ್ಕೋ ಸಾಬ್"ಎನ್ನುತ್ತಿದ್ದರೂ ಕೇಳದೇ,ಆ ನೋಟುಗಳನ್ನು ಅವನ ಜೇಬಿಗೆ ತುರುಕಿ,ಮಗನ ಕೈ ಹಿಡಿದು ಓಡುತ್ತಾ ಬೋಗಿಗೆ ಬಂದು ಕಿಟಿಕಿಯ ಪಕ್ಕದ ನನ್ನ ಸೀಟಿನಲ್ಲಿ ಕುಳಿತೆ.ಮಗ ಅಳುತ್ತಾ ಅಮ್ಮನ ಮಡಿಲು ಸೇರಿದ.ಅಮ್ಮ ,ಮಗಳು ಅಳು ನಿಲ್ಲಿಸಿದರು.ನನ್ನ ಹೆಂಡತಿ ಅಕ್ಕ ಪಕ್ಕದವರಿಗೆ ನನ್ನ ಬೇಜವಾಬ್ದಾರಿಯ ಬಗ್ಗೆ ಅರಿವು ಮಾಡಿಕೊಡುತ್ತಿದ್ದಳು.ನಾನು ಏನನ್ನೂ ಕೇಳುವ ಸ್ಥಿತಿ ಯಲ್ಲಿ ಇರಲಿಲ್ಲ.ದಿಗ್ಮೂಢನಾಗಿದ್ದೆ !! ಕಿಟಕಿಯಾಚೆ ಶೂನ್ಯ ದೃಷ್ಟಿ ನೆಟ್ಟಿದ್ದೆ.ಕಣ್ಣುಗಳಲ್ಲಿ ಧಾರಾಕಾರ ನೀರು!! I was very badly shaken for the first time in my life!!I was literally trembling!!ಇದ್ಯಾವುದರ ಪರಿವೆಯೇ ಇಲ್ಲದೆ ಟ್ರೈನು ಪ್ಲ್ಯಾಟ್ ಫಾರಂ ಬಿಟ್ಟು ಮೆಲ್ಲನೆ ಮುಂದೆ ಸರಿಯ ತೊಡಗಿತು.ಹೊರಗೆ ನಿಧಾನವಾಗಿ ಕತ್ತಲಾವರಿಸುತ್ತಿದ್ದರೆ,ವಿಚಿತ್ರವೆಂಬಂತೆ ನನ್ನ ಬಾಳಿನಲ್ಲಿ ಆವರಿಸಿದ್ದ ಕತ್ತಲು ದೂರವಾಗಿತ್ತು !!!

Monday, February 24, 2014

"ನಲ್ಲಿ ಇದೆ ನೀರಿಲ್ಲ !!!! "

ಹೊಸ ಕವಿತೆಗನ್ನು ಬರೆಯಲಾಗುತ್ತಿಲ್ಲ.ಬ್ಲಾಗಿಗೆ ಏನು ಹಾಕಬೇಕು ಎಂದು ಯೋಚಿಸುತ್ತಿದ್ದಾಗ ಪುಸ್ತಕ ರಾಶಿಯಲ್ಲಿ ಇಪ್ಪತ್ತು ವರುಷಗಳ ಹಿಂದೆ ಬರೆದ ಕವಿತೆಗಳ ಡೈರಿಯೊಂದು ಸಿಕ್ಕಿತು.ಅದರಿಲ್ಲಿನ ಈ ಕವಿತೆ ಇಂದಿಗೂ ಪ್ರಸ್ತುತವೆನಿಸಿದ್ದರಿಂದ ಅದನ್ನು ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.ಈ ಕವಿತೆ ಬಳ್ಳಾರಿ ಜಿಲ್ಲಾ ಕಾವ್ಯ ಮಾಲಿಕೆ '97 ರಲ್ಲಿ ಪ್ರಕಟಗೊಂಡಿತ್ತು .
'ನಲ್ಲಿ ಇದೆ--,ನೀರಿಲ್ಲ!'
--------------------------------

ನಲ್ಲಿ ಇದೆ ನೀರಿಲ್ಲವೆಂದು 
ಗೊಣಗೋದೇಕೆ ಸ್ನೇಹಿತರೇ ?
ನಮ್ಮ ದೇಶದಲ್ಲಿ ಎಲ್ಲವೂ  ಹೀಗೇ
ಮಾರ್ಗವೇ ಇಲ್ಲಾ ಬೇರೆ!

ಕಾಲೆಜಿವೆ,ಸ್ಕೂಲುಗಳಿವೆ!
ನಿಮ್ಮ ಮಕ್ಕಳಿಗೆ ಮಾತ್ರ ಸೀಟಿಲ್ಲಾ!
ಪುಸ್ತಕಗಳು ಪ್ರಿಂಟ್ ಆಗಿದ್ರೂ 
ಮಾರ್ಕೆಟ್ಟಿಗೆ ಇನ್ನೂ ಬಂದಿಲ್ಲಾ !

ನಿಮಿಷಕ್ಕೊಂದು ಆಟೋ ಬಂದ್ರೂ
ನೀವು ಹೇಳಿದ ಕಡೆ ಬರೋಲ್ಲಾ !
ಅಕಸ್ಮಾತ್ತಾಗಿ ಬಂದ್ರೂನೂವೆ 
ಮೀಟರ್ ಸರಿಯಾಗಿರೋಲ್ಲಾ !  

ಕಛೇರಿಗಳೋ ಮಾರಿಗೊಂದು 
ಕೆಲಸ ಮಾತ್ರ ನಡೆಯೋಲ್ಲಾ 
ಅರ್ಜಿ ಮುಂದೆ ಸಾಗೋಲ್ಲಾ
ಯಾವುದೂ ಊರ್ಜಿತವಾಗೊಲ್ಲ!

ಧರ್ಮಗಳೋ ಲೆಕ್ಕ ಇಲ್ಲ 
ಅಧರ್ಮ ಅನ್ಯಾಯ ತಪ್ಪಿಲ್ಲ 
ಮನುಷ್ಯರೇನೋ ಸಾಕಷ್ಟಿದ್ದರೂ 
ಮನುಷ್ಯತ್ವವೇ ಕಾಣೋಲ್ಲಾ !

ನಲ್ಲಿ ಇದೆ ನೀರಿಲ್ಲವೆಂದು 
ಗೊಣಗೋದೇಕೆ ನೀವು ?
ಹೆಸರಿಗೆ ಮಾತ್ರಾ ಬದುಕ್ತಾ ಇಲ್ವಾ ?
ಅದರ ಹಾಗೇ ನಾವೂ !!! 

Wednesday, January 8, 2014

"ಚಿತ್ರ ಸಂತೆಯ ...ಚಿತ್ರಗಳು !!!!!"

ಮಧ್ಯಾಹ್ನದ ಉರಿಬಿಸಿಲಿಗೆ ಮೈಒಡ್ಡಿಕೊಂಡು, ಫುಟ್ ಪಾತಿನ ಪಕ್ಕದ ಬೇಲಿಯ ಸರಳುಗಳಿಗೆ ಸಾಲಾಗಿ ಒರಗಿ ಕುಳಿತ ಪೈಂಟಿಂಗ್ ಗಳು ಇನ್ನೂ ತಾವು ಮಾರಾಟ ವಾಗದೆ ಉಳಿದಿರುವುದಕ್ಕೆ ,ಯಾರಿಗೂ ಕೇಳದಂತೆ ಮೆಲ್ಲನೆ ಬಿಕ್ಕಳಿಸುತ್ತವೆ.ಪಕ್ಕದಲ್ಲೇನಿಂತ ಅವುಗಳ ಜನಕ ಗಿರಾಕಿಗಳಿಗಾಗಿ ಕಾದು ಬೇಸತ್ತು,ಹಚ್ಚಿದ ಸಿಗರೇಟು ಒಂದರಿಂದ ಸುದೀರ್ಘವಾಗಿ ದಂಎಳೆದು ಬೇಸರದ ಹೊಗೆಕಾರುತ್ತಾನೆ. ಒಂದೊಂದು ಚಿತ್ರವೂ ಕೈಬೀಸಿ ಕರೆದು, ದಯಮಾಡಿ ನನ್ನ ಸೆರೆಬಿಡಿಸಿ,ನಿಮ್ಮ ಬೆಡ್ ರೂಮಿನಲ್ಲೋ,ಹಾಲಿನಲ್ಲೋ, ಕಡೆಗೆ ಬಾತ್ ರೂಮಿನಲ್ಲೋ ಹ್ಯಾಂಗ್ ಮಾಡಿ ಎಂದು ಆರ್ತರಾಗಿ ಬೇಡಿಕೊಳ್ಳುತ್ತವೆ.ತಮ್ಮ ಡ್ರೆಸ್ ಗಳ ಹಿಡಿತಕ್ಕೆ ಮೀರಿ,ಎಲ್ಲಾ ಕಡೆಯಿಂದಲೂ ಚಿಮ್ಮುತ್ತಿರುವ ಹುಡುಗಿಯರು ,ತಮ್ಮ ತಂಪು ಕನ್ನಡಕದ ಹಿಂದಿನಿಂದಲೇ ನಾಲ್ಕು ಪೈಂಟಿಂಗ್ ಗಳನ್ನು ಅವಲೋಕಿಸಿ ಸುಸ್ತಾಗಿ,ಎರಡೆರಡು ಕೋನ್ ಐಸ್ಕ್ರೀಂ ತಿಂದು ತಮ್ಮ ಧಡೂತಿ ದೇಹಗಳನ್ನು ಮತ್ತಷ್ಟು ಸೊಂಪಾಗಿಸಿಕೊಳ್ಳುತ್ತಾರೆ.ಐಸ್ಕ್ರೀಂ ಮಾರಾಟಗಾರರಿಗೋ ಸುಗ್ಗಿಯೋಸುಗ್ಗಿ .ಚಿತ್ರಗಳಿಗಿಂತ ಅವೇ ಹೆಚ್ಚು ಮಾರಾಟವಾಗುತ್ತಿವೆ .ಮೊಮ್ಮಗಳಪೈಂಟಿಂಗ್ ಅನ್ನು ಕಾಯುತ್ತ ಕುಳಿತ ರಸಗುಲ್ಲಾ ತಿಂದು ಕೆಂಪಾದ ಕಲ್ಕತ್ತಾದ ಅಜ್ಜಿ ಯೊಬ್ಬಳು ಉರಿಬಿಸಿಲಿನ ತಾಪಕ್ಕೆ ಮತ್ತಷ್ಟು ಕೆಂಪಾಗಿ ತಾನೇ ಒಂದು ಪೈಂಟಿಂಗ್ ನಂತೆ ಕಾಣುತ್ತಾಳೆ.ಕಲಾವಿದರ ಗುಂಪೊಂದು ಗಿರಾಕಿಗಳ ಚೌಕಾಸಿಯ ಬಗ್ಗೆ ಬೇಸರದಿಂದ ಮಾತಾಡಿಕೊಂಡು, ಚಿತ್ರಸಂತೆಯವರು ಕೊಟ್ಟ ರೈಸ್ ಬಾತ್ ತಿನ್ನುತ್ತಿದ್ದಾರೆ.ಕೆಲವರು ದೊಡ್ಡ ದೊಡ್ಡ ಕ್ಯಾಮೆರಾ ಗಳಲ್ಲೋ ಮೊಬೈಲ್ ಗಳಲ್ಲೋ ಚಿತ್ರಗಳ ಫೋಟೋ ಕ್ಲಿಕ್ಕಿಸುವುದನ್ನೇ ಒಂದುದೊಡ್ಡ ಕಾಯಕ ಮಾಡಿಕೊಂಡಿದ್ದಾರೆ. ಹುಲ್ಲುಗಾವಲಿನಲ್ಲಿ ಮೇಯಲು ಬಿಟ್ಟ ಕರುವೊಂದು ಏನನ್ನೂ ಮೇಯದೆ ಅತ್ತಿಂದಿತ್ತ ಓಡಾಡುವಂತೆ,ಕೆಲವರು ಯಾವ ಚಿತ್ರವನ್ನೂ ಖರೀದಿಸದೇ, ಬರಿದೇ ಅತ್ತಿಂದಿತ್ತ ತಿರುಗಾಡಿ ಕಾಲು ನೋಯಿಸಿ ಕೊಂಡಿದ್ದಾರೆ.ನೂರಾರು ಹೆಣ್ಣುಗಳನ್ನು ನೋಡಿ ಕಡೆಗೆ ಯಾವುದೋ ಒಂದನ್ನು ಗಂಟು ಹಾಕಿಕೊಳ್ಳುವ ಗಂಡಿನಂತೆ ಕೆಲವರು ಎಷ್ಟೋ ಚಿತ್ರಗಳನ್ನು ನೋಡಿ ಖರೀದಿಸದೇ ಬಿಟ್ಟು ಕಡೆಗೆ ಕಳಪೆಚಿತ್ರ ಒಂದನ್ನು ಖರೀದಿಸಿ, ಕೊಟ್ಟ ಬೆಲೆ ಜಾಸ್ತಿಯಾಯ್ತೇನೋ ಎಂದು ಒದ್ದಾಡುತ್ತಾರೆ.ಕತ್ತಲಾಗುತ್ತಿದ್ದಂತೆ ಮಾರಾಟವಾಗದ ಚಿತ್ರಗಳ ಮೌನ ರೋದನ ಮುಗಿಲು ಮುಟ್ಟುತ್ತದೆ.ಅವುಗಳಿಗೆ ಸಾಂತ್ವನ ಹೇಳುವಂತೆ ಎಲ್ಲಿಂದಲೋ ತಂಗಾಳಿ ಬೀಸಿ ,ಆಶಾಕಿರಣದ ಸಂಕೇತವಾಗಿ ಬೀದಿ ದೀಪಗಳು ಜಗ್ಗನೆ ಹತ್ತಿಕೊಳ್ಳುತ್ತವೆ .ನಾಳೆ ಮತ್ತೆ ಬೆಳಗಾಗುತ್ತದೆ ಎನ್ನುವ ಭರವಸೆಯಲ್ಲಿ ಚಿತ್ರಗಳು ಒಂದೊಂದಾಗಿ ಪೆಟ್ಟಿಗೆ ಸೇರುತ್ತವೆ ----- ಮತ್ತೆ ಯಾವುದೋ ಸಂತೆಗೆ ಪಯಣ ಬೆಳಸಲು.ಜೀವನವೆಂದರೆ ಅದೇ ಅಲ್ಲವೇ?..............ನಿಲ್ಲದ ಪಯಣ!!
(ಇದು ಸುಮಾರು ಮೂರು ವರುಷಗಳ ಹಿಂದೆ ನನ್ನ ಬ್ಲಾಗ್ ಶುರುಮಾಡಿದಾಗ ಬರೆದ ಲೇಖನ.ಮತ್ತೊಂದು ಚಿತ್ರಸಂತೆ ಬಂದು ಹೋಗಿದೆ.ಇಂದಿಗೂ ಇದು ಪ್ರಸ್ತುತ ಎನಿಸಿರುವುದರಿಂದ ಅದನ್ನು ಮತ್ತೊಮ್ಮೆ ಪ್ರಕಟಿಸುತ್ತಿದ್ದೇನೆ)