ಒಂದು ದಿನ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆ ಸಮಯ.O.P.D.ಯಲ್ಲಿ ರೋಗಿಗಳನ್ನು ನೋಡುತ್ತಿದ್ದೆ.ನಮ್ಮ ಆಸ್ಪತ್ರೆಯ ಅಟೆಂಡರ್ ತಾಯಪ್ಪ ಒಳಬಂದು ಮಾಮೂಲಿಯಂತೆ ತಲೆ ಕೆರೆಯುತ್ತಾ ನಿಂತ.'ಏನು ತಾಯಪ್ಪಾ'ಎಂದೆ.ಅದಕ್ಕವನು 'ಊರಿಂದ ನಮ್ಮಣ್ಣ ಬಂದಾನ್ರೀ ಸರ್' ಎಂದು ಹಲ್ಲುಬಿಟ್ಟ. ಊರಿನಿಂದ ಸಂಬಂಧಿಗಳನ್ನು ಆಸ್ಪತ್ರೆಗೆಕರೆತರುವುದುಮಾಮೂಲಾಗಿತ್ತು.'ಒಳಗೆ ಕರಿ'ಎಂದೆ.
ಸುಮಾರು 65 ವರ್ಷಗಳ ಕೃಶವಾದ ಶರೀರದ ವ್ಯಕ್ತಿಯೊಬ್ಬ ಒಳಗೆ ಬಂದು ,ತಲೆಗೆ ಕಟ್ಟಿದ ರುಮಾಲನ್ನು ಬಿಚ್ಚಿ ಕಂಕುಳಿನಲ್ಲಿ ಸಿಗಿಸಿಕೊಂಡು ,ಕೈಕಟ್ಟಿ ,ನಿಂತ.'ಏನಪ್ಪಾ ನಿನ್ನ ಹೆಸರು'ಎಂದೆ. 'ನಾನ್ರೀ ಎಕಲಾಸ್ ಪುರದ ಉರುಕುಂದಪ್ಪ' ಎಂದ.ಹೆಸರು ಕೇಳಿ ನನಗೆ ಒಂದು ನಿಮಿಷ ಶಾಕ್ ಹೊಡೆದಂತಾಗಿತ್ತು!ಮಾತು ಹೊರಡದೆ ಮೌನವಾಗಿ ಕುಳಿತೆ.ಆತನೇ ಮಾತು ಮುಂದುವರೆಸಿ 'ನೀವು ಆಚಾರ್ ಸಾಹೇಬರ
ಎರಡನೇ ಮಗ, ಅಲ್ಲೇನ್ರೀ ?'ಎಂದ.ನನ್ನ ತಂದೆಯ ಹೆಸರನ್ನು ಹೇಳಿದ್ದಲ್ಲದೇ,ನನ್ನನ್ನೂ ಗುರುತು ಹಿಡಿದಿದ್ದ! ಅನುಮಾನವೇ ಇಲ್ಲ !ಅದೇ ವ್ಯಕ್ತಿ .ನನ್ನ ಎದೆ ಬಡಿತ ಜೋರಾಯಿತು! ಸುಮಾರು ಮೂವತ್ತು ವರ್ಷಗಳ ನಂತರ ಅವನನ್ನು ಭೇಟಿಯಾಗುತ್ತಿದ್ದೆ .ಆದರೂ ಖಾತ್ರಿ ಪಡಿಸಿಕೊಳ್ಳಲು 'ಈಗ ಎಲ್ಲಿ ಕೆಲಸ ಮಾಡುತ್ತಿದ್ದೀಯ ಉರುಕುಂದಪ್ಪ?'ಎಂದು ಕೇಳಿದೆ.ಅದಕ್ಕವನು' ಈಗೆಲ್ಲೂ ಕೆಲಸಕ್ಕೆ ಹೊಗೂದಿಲ್ರೀ ಸಾಹೇಬ್ರೆ.ನಿಮ್ಮ ಅಪ್ಪಾವ್ರ ಕೆಳಗೆ ಅಗಸೀಹಾಳ್ ಫಾರಂ ನಲ್ಲಿ ಕೆಲಸ ಮಾಡ್ತಾ ಇದ್ದೇರಿ .ನೀವೆಲ್ಲಾ ಸಣ್ಣಾವರಿದ್ದಾಗ ಬಾವ್ಯಾಗೆ ಈಸಾಡೋಕೆ ಬರೋವಾಗ ಅಲ್ಲೇ ತೋಟದಾಗ ಕೆಲ್ಸಾ ಮಾಡಿಕೋತ ಇರುತ್ತಿದ್ದೆನಲ್ರೀ ?ಮರ್ತೀರೇನ್ರೀ----ಸಾಹೇಬ್ರೆ?'ಎಂದ.ಅದನ್ನೆಲ್ಲಾ ಹೇಗೆ ಮರೆಯೋಕೆ ಸಾಧ್ಯ?ಅದರಲ್ಲೂ ,ಈ ವ್ಯಕ್ತಿಯನ್ನು ಜೀವಮಾನವಿಡೀ ಮರೆಯೋಕೆ ಸಾಧ್ಯವೇ !!?ನನ್ನ ಗಂಟಲು ಕಟ್ಟಿತು.ಅವನ ಕೈ ಹಿಡಿದು 'ಕೂತ್ಕೋ ಉರುಕುಂದಪ್ಪ 'ಎಂದೆ .'ಐ ------ಬ್ಯಾಡ್ರೀ ಸಾಹೇಬರೇ,ನಿಂತಕಂಡಿರ್ತೀನ್ ಬಿಡ್ರೀ----,ನಮ್ ದೊಡ್ ಸಾಹೇಬರ ಮಗ "ದಾಗ್ದಾರ್ ಸಾಬ್" ಅಗ್ಯಾನೆ ಅಂತ ತಿಳಿದು ಕುಶಿ ಆತ್ರೀ .ನೋಡಾಕ್ ಬಂದೀನ್ರೀ'ಎಂದ.ಮನಸ್ಸು ಒಂದು ಕ್ಷಣ ನನ್ನ ಬಾಲ್ಯದ ದಿನಗಳಿಗೆ ಜಾರಿತು. ನಮ್ಮ ತಂದೆ ರಾಯಚೂರಿನ ಹತ್ತಿರವಿರುವ ಅಗಸೀಹಾಳ ಎಂಬ ಹಳ್ಳಿಯ ಪಕ್ಕದಲ್ಲಿದ್ದ 'ಕೃಷಿಸಂಶೋಧನಾ ಕೇಂದ್ರ' ದಲ್ಲಿ ಕೆಲಸ ಮಾಡುತ್ತಿದ್ದರು.ಅಲ್ಲಿ ತೋಟದಲ್ಲಿ ದೊಡ್ಡದೊಂದು ಬಾವಿ ಇತ್ತು.ಅದು ಮಾಮೂಲು ಬಾವಿಗಳಂತೆ ನೀರು ಸೇದುವ ಬಾವಿಯಾಗಿರಲಿಲ್ಲ.ಮೆಟ್ಟಿಲು ಗಳಿದ್ದ ದೊಡ್ಡ ಬಾವಿ.ಸುಮಾರು ಮೂವತ್ತು ಅಡಿ ಅಗಲ ,ನಲವತ್ತು ಅಡಿ ಆಳವಿತ್ತು .ಅದಕ್ಕೆ ಏತ ಕಟ್ಟಿ ತೋಟಕ್ಕೆ ನೀರು ಬಿಡುತ್ತಿದ್ದರು.ನನ್ನ ಎಸ್.ಎಸ್.ಎಲ್.ಸಿ.ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂದಿತ್ತು.ಎಲ್ಲಾ ಹುಡುಗರ ಜೊತೆ ನಾನೂ ಬಾವಿಗೆ ಈಜು ಕಲಿಯಲು ಹೋಗುತ್ತಿದ್ದೆ.ಇನ್ನೂ ಅಷ್ಟು ಸರಿಯಾಗಿ ಈಜು ಬರುತ್ತಿರಲಿಲ್ಲ.ಒಂದು ಮಧ್ಯಾಹ್ನ ನಾನು ಬಾವಿಯಲ್ಲಿ ಈಜುತ್ತಿರಬೇಕಾದರೆ ,ಮೇಲಿನಿಂದ ಹಾರಿಬಂದ ಹುಡುಗನೊಬ್ಬ ನನ್ನ ಮೇಲೆಯೇ ಡೈವ್ ಹೊಡೆದ.ಈಜು ಬಾರದ ನಾನು,ಸೀದಾ ಬಾವಿಯ ತಳ ಸೇರಿದೆ.ನನಗೆ ಅರೆ ಬರೆ ಎಚ್ಚರ.ಯಾರೋ ನೀರಿನೊಳಗೆ ಬಂದು ನನ್ನ ಜುಟ್ಟು ಹಿಡಿದು ಮೇಲಕ್ಕೆ ಎಳೆಯುತ್ತಿದ್ದರು.ನಾನು ಕೈ ಕಾಲು ಬಡಿಯುತ್ತಾ ಅರೆ ಪ್ರಜ್ಞಾವಸ್ಥೆಯಲ್ಲಿ ಒದ್ದಾಡುತ್ತಿದ್ದೆ.ನೀರಿನ ಬುಳು ಬುಳು ಶಬ್ದ ಕೇಳಿಸುತ್ತಿತ್ತು.ಪೂರ್ಣ ಎಚ್ಚರವಾಗಿ ಕಣ್ಣು ಬಿಟ್ಟಾಗ,ಬಾವಿಯ ದಂಡೆಯ ಮೇಲೆ ಮಲಗಿದ್ದೆ.ಯಾರೋ ಎದೆ ,ಹೊಟ್ಟೆ ,ಅಮುಕಿ ನೀರು ಹೊರಗೆ ತೆಗೆಯುತ್ತಿದ್ದರು.ಮೂಗಿನಿಂದ,ಬಾಯಿಯಿಂದ ಪಿಚಕಾರಿಯಿಂದ ನೀರು ಚಿಮ್ಮುವಂತೆ ನೀರು ಚಿಮ್ಮುತ್ತಿತ್ತು.ನಾನು ಬಾವಿಯ ನೀರಿನಲ್ಲಿ ಮುಳುಗಿ ಮೇಲೆ ಬರದೇ ಇದ್ದಾಗ,ಯಾರೋಹುಡುಗರು ಅಲ್ಲೇ ತೋಟದಲ್ಲಿ ಕೆಲಸಮಾಡುತ್ತಿದ್ದ ಎಕಲಾಸ್ ಪುರದ ಉರುಕುಂದಪ್ಪನನ್ನು ಕರೆದಿದ್ದರು.ಉರುಕುಂದಪ್ಪ ತೋಟದ ಕೆಲಸ ಮಾಡಿ ,ಮಾಂಸ ಖಂಡಗಳು ಹುರಿಗೊಂಡಿದ್ದ ಬಲವಾದ ಆಳು.ತಕ್ಷಣವೇ ಬಾವಿಗೆ ಹಾರಿದ ಉರುಕುಂದಪ್ಪ,ಬಾವಿಯ ತಳದಿಂದ ನನ್ನ ಜುಟ್ಟು ಹಿಡಿದು ಮೇಲೆ ಎಳೆದು ತಂದು ನನ್ನ ಜೀವ ಉಳಿಸಿದ್ದ!ಅದೇ ಉರುಕುಂದಪ್ಪ ಈಗ ಮೂವತ್ತು ವರ್ಷಗಳ ನಂತರ ವಯಸ್ಸಿನಿಂದ,ಕುಡಿತದಿಂದ ಕೃಶ ಕಾಯನಾಗಿದ್ದ .ಬಹಳ ಬಲವಂತ ಮಾಡಿದ ಮೇಲೆ ರೋಗಿಗಳು ಕೂರುವ ಸ್ಟೂಲಿನ ಮೇಲೆ ಕುಳಿತ.'ಏನಾನ ತ್ರಾಸು ಇದೆಯಾ ಉರುಕುಂದಪ್ಪಾ?ಎಂದೆ.'ಹೌದ್ರೀ ಸಾಹೇಬ್ರೇ----,ಭಾಳಾ ನಿತ್ರಾಣ ಆಗೈತ್ರೀ.ಕೈ ಭಾಳಾ ಹರೀತೈತ್ರೀ ---'ಎಂದ.ನನ್ನ ಜೀವವನ್ನು ಉಳಿಸಿದ ಆ ಕೈಗಳನ್ನು ಮುಟ್ಟಿ ನೋಡಿದೆ. ಅವುಗಳಿಗೆ ಮನಸ್ಸಿನಲ್ಲೇ ನಮಸ್ಕರಿಸಿದೆ.'ಆ ಕೈಗಳು ಅಂದು ಸಹಾಯ ಮಾಡದಿದ್ದರೆ ನಾನೆಲ್ಲಿ ಬದುಕಿರುತ್ತಿದ್ದೆ!'ಎನಿಸಿ ಮನದಲ್ಲಿ ಧನ್ಯತಾ ಭಾವ ಮೂಡಿತ್ತು .'ಎನಿತು ಜನುಮದಲಿ, ಎನಿತು ಜೀವರಿಗೆ ,ಎನಿತು ನಾವು ಋಣಿಯೋ!ನಿಜದಿ ನೋಡಿದರೆ ,ಬಾಳು ಎಂಬುದು ,ಋಣದ ರತ್ನ ಗಣಿಯೋ!'ಎಂಬ ಕವಿಯ ವಾಣಿ ನೆನಪಾಯಿತು.ಅವನನ್ನು ಅಮೂಲಾಗ್ರವಾಗಿ ಪರೀಕ್ಷೆ ಮಾಡಿ ,ಒಂದು ತಿಂಗಳಿಗಾಗುವಷ್ಟು ಮಾತ್ರೆ ,ಟಾನಿಕ್ಕುಗಳನ್ನು ಕೊಡಿಸಿದೆ.ಮತ್ತೇನಾದರೂ ಬೇಕಾದರೆ ನನ್ನನ್ನು ಬಂದು ಕಾಣುವಂತೆ ಹೇಳಿದೆ.ಅವನ ಮುಖದಲ್ಲಿ ,ಕೃತಜ್ಞತಾ ಭಾವವಿತ್ತು.ನಾನು ಜೀವನ ಪರ್ಯಂತ ಸ್ಮರಿಸಿ,ನಮಿಸಬೇಕಾದ ನನ್ನ ಜೀವ ರಕ್ಷಕ,ನನಗೇ ಎರಡೆರಡು ಸಲ ನಮಸ್ಕಾರ ಮಾಡಿ ಹೋದ!ಮನಸ್ಸಿನಲ್ಲೇ 'ಎಕಲಾಸ್ ಪುರದ ಉರುಕುಂದಪ್ಪಾ, ನಿನ್ನನ್ನು ಮರೆಯೋದು ಹೆಂಗಪ್ಪಾ!'ಎಂದು ಕೊಂಡೆ.
(ಇದು ನನ್ನ ಬ್ಲಾಗಿನ ನೂರನೇ ಬರಹ.ಓದಿ ಪ್ರೋತ್ಸಾಹಿಸಿದ ಎಲ್ಲಾ ಸಹ ಬ್ಲಾಗಿಗರಿಗೂ,ಎಲ್ಲಾ ಓದುಗರಿಗೂ ನಮನಗಳು)