Monday, April 4, 2011

"ನಕ್ಕು .....ಹಗುರಾಗೋಣ "

ಸಮಸ್ತ ಬ್ಲಾಗ್ ಬಾಂಧವರಿಗೂ ,ಎಲ್ಲಾ ಓದುಗರಿಗೂ ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.'ಖರ' ನಾಮ ಸಂವತ್ಸರ ಸಕಲ ಜನ ಸ್ತೋಮಕ್ಕೆ ಮಂಗಳವನ್ನುಂಟುಮಾಡಲಿ. ನೆನ್ನೆ 'ಕನ್ನಡ ಪ್ರಭದಲ್ಲಿ'ಬಂದ ವಿಶ್ವೇಶ್ವರ ಭಟ್ಟರ ,ಕೆಲ ಜೋಕುಗಳು ಇಲ್ಲಿವೆ. ಈ ಯುಗಾದಿ ಹಬ್ಬದಂದು ನೋವನ್ನೆಲ್ಲಾ ಮರೆತು ,ನಕ್ಕು ಹಗುರಾಗೋಣ ಬನ್ನಿ.
೧)ಹೇರ್ ಕಟಿಂಗ್ ಸಲೂನ್ ಮುಂದೆ ಕಾಣಿಸಿದ ಬೋರ್ಡ್;
ನಮ್ಮ ಬಿಸಿನೆಸ್ ಚೆನ್ನಾಗಿ ನಡೆಯಲು ನಿಮ್ಮ ತಲೆ ಬೇಕು.
೨)ಹೋಟೆಲಿನಲ್ಲಿ  ಕಾಣಿಸಿದ್ದು;
All drinking water in this hotel has been personally passed by the manager.
೩) ಆಸ್ಪತ್ರೆಯ ಪ್ರಸೂತಿ ಗೃಹದಲ್ಲಿ ಕಂಡ ಬೋರ್ಡ್;
No children allowed here.
೪)ಕಿರಾಣಿ ಅಂಗಡಿಯೊಂದರ ಮುಂದೆ ಇದ್ದ ಬೋರ್ಡ್;
ಬೇರೆ ಅಂಗಡಿಗಳಿಗೆ ಹೋಗಿ ಯಾಕೆ ಮೋಸ ಹೋಗುತ್ತೀರಾ? ನಮ್ಮ ಅಂಗಡಿಗೆ ಬನ್ನಿ.
೫)ಸಮಾಧಿಯ ಪ್ರವೇಶ ದ್ವಾರದಲ್ಲಿ ಕಂಡ ಬೋರ್ಡ್;
Persons are prohibited from picking flowers from any other grave other than their own grave!
೬)ಎಂಟು ವರುಷದ ಮಗನಿಗೆ ಉಗುರು ಕಡಿಯುವ ಚಟ. ನೆಂಟರೊಬ್ಬರ ಸಲಹೆಯಂತೆ ಹರಿದ್ವಾರದ ಯೋಗಾಶ್ರಮ ಒಂದರಲ್ಲಿ ಬಿಟ್ಟರು.ಒಂದು ತಿಂಗಳ ನಂತರ ನೆಂಟರು ಹುಡುಗನ ಬಗ್ಗೆ ವಿಚಾರಿಸಿದರು.'ಯೋಗಾಸನ ಕಲಿತ ಮೇಲೆ ಕೈಯ ಉಗುರು ಕಡಿಯುವುದನ್ನು ಬಿಟ್ಟಿದ್ದಾನೆ.ಯೋಗಾಸನ ಮಾಡುತ್ತಾ ಈಗ ಕಾಲಿನ ಉಗುರು ಕಡಿಯುತ್ತಾನೆ!'ಎಂದರು ಹುಡುಗನ ತಂದೆ!
೭)ರೋಗಿ; ಡಾಕ್ಟ್ರೆ ,ಯಾಕೆ ಎಲ್ಲರೂ ನನ್ನನ್ನು ತಿರಸ್ಕಾರದಿಂದ ನೋಡುತ್ತಾರೆ ?
ಮನೋ ವೈದ್ಯ;NEXT,,,,,!

"ಲಕ್ಕಿ ರಂಗಣ್ಣ"


ನಾನು ಹಿಂದಿನ ಬ್ಲಾಗಿನಲ್ಲಿ ಬರೆದ ಲೇಖನದ ಹೀರೋ 'ಲಕ್ಕಿ ರಂಗಣ್ಣನವರು' ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೈ ಆದ ಮ್ಯಾಚಿನಲ್ಲಿ ಟೀಂ ಇಂಡಿಯಾವನ್ನು ಹುರಿದುಂಬಿಸುತ್ತಿರುವ ಚಿತ್ರಗಳು. ಕ್ರಿಕೆಟ್ ಬಗ್ಗೆ ಇಂತಹ ಕೋಟ್ಯಾಂತರ ಅಭಿಮಾನಿಗಳ ಉತ್ಕಟ ಪ್ರೀತಿ,ನಾವು ವಿಶ್ವ ಕಪ್ ಗೆಲ್ಲಲಿ ಎಂಬ ಹಾರೈಕೆ,ಅದಕ್ಕೊಸ್ಕರ ತಾವು ಎಂತಹ ಕಷ್ಟ ಪಡಲು ಸಿದ್ಧರಾಗಿದ್ದುದು ,ಗೆದ್ದೇ ಗೆಲ್ಲುತ್ತಾರೆ ಎಂಬ ಅಚಲವಾದ ನಂಬಿಕೆ,ಎಲ್ಲವೂ ಸೇರಿ ಒಂದು ಬೃಹತ್ ಶಕ್ತಿಯಾಗಿ ನಮ್ಮ ಟೀಮಿಗೆ ಬೆನ್ನೆಲುಬಾಗಿ ನಿಂತು ನಮ್ಮ ಟೀಂ ವಿಶ್ವ ಕಪ್ ಗೆದ್ದಿದೆ ಎಂಬುದು ನನ್ನ ಅನಿಸಿಕೆ.ರಂಗಣ್ಣ ನಂತಹ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೂ,ವಿಶ್ವ ಕಪ್ ಕಿರೀಟ ವನ್ನು ತಮ್ಮ ಮುಡಿಗೇರಿಸಿಕೊಂಡ ನಮ್ಮ ಟೀಂ ಇಂಡಿಯಾಗೂ ಜೈ ಹೋ!!

Saturday, April 2, 2011

" ನೀ ಮಲಗಿದ್ದರೆ ......ಮ್ಯಾಚ್ ಗೆಲ್ತೀವಿ !!!

ಇವತ್ತು ವಿಶ್ವ ಕಪ್ ಕ್ರಿಕೆಟ್ಟಿನ ಫೈನಲ್ ಪಂದ್ಯ.ಇಡೀ ದೇಶಕ್ಕೇ ಕ್ರಿಕೆಟ್ಟಿನ ಸಮೂಹ ಸನ್ನಿ ಹಿಡಿದಿದೆ.ಪ್ರತಿಯೊಬ್ಬರಿಗೂ ತಾವೇ ಪಂದ್ಯ ಆಡುತ್ತಿರುವಷ್ಟು ಸಂಭ್ರಮ!ಎಲ್ಲರಿಗೂ ಈಗ ಕ್ರಿಕೆಟ್ ಹುಚ್ಚು!ಆದರೆ ಕೆಲವರಿಗೆ ಕ್ರಿಕೆಟ್ ಎಂದರೆ ಅತಿರೇಕದ ಪ್ರೀತಿ!!ಅಂಥವರಲ್ಲಿ ನಮ್ಮ ರಂಗಣ್ಣನೂ ಒಬ್ಬರು .ಕ್ರಿಕೆಟ್ಟೆಂದರೆ ಅವರಿಗೆ ಉಸಿರಿದ್ದ ಹಾಗೆ.ಆ ಒಂದು ಉತ್ಕಟ ಕ್ರಿಕೆಟ್ ಪ್ರೀತಿಯ ಜೊತೆ ಜೊತೆಗೇ ಅವರದೇ ಆದ ನಂಬಿಕೆಗಳೂ ಅಂಟಿಕೊಂಡಿವೆ.ಮೊನ್ನೆ ಪಾಕಿಸ್ತಾನ್ ವಿರುದ್ಧದ ಸೆಮಿ ಫೈನಲ್ ಪಂದ್ಯದ ದಿನ ಅವರ  ಮನೆಯಲ್ಲಿ ಆರಾಮವಾಗಿ ತಲೆಯ ಅಡಿ ಒಂದು ದಿಂಬು ಇಟ್ಟುಕೊಂಡು , ನೆಲದ ಮೇಲೆ ಮಲಗಿ ಟಿ.ವಿ.ಯಲ್ಲಿ ಮ್ಯಾಚ್ ವೀಕ್ಷಣೆ ಮಾಡುತ್ತಿದ್ದೆ.ರಂಗಣ್ಣ ತಮ್ಮ  ಲಕ್ಕಿ ಡ್ರೆಸ್ ಧರಿಸಿಕೊಂಡು ಸೋಫಾ ಖಾಲಿ ಇದ್ದರೂ ,ಸೋಫಾದ ಹಿಂದೆ ಒಂದು ಪ್ಲ್ಯಾಸ್ಟಿಕ್ ಸ್ಟೂಲ್ ಹಾಕಿಕೊಂಡು (ಅದು ಅವರ ಲಕ್ಕಿ ಸೀಟಂತೆ !)ಕುಳಿತು ಮ್ಯಾಚ್ ನೋಡುತ್ತಿದ್ದರು .ನಾನು ಮಲಗಿಕೊಂಡುಮ್ಯಾಚ್ ನೋಡುತ್ತಿದ್ದಾಗ ಸೆಹ್ವಾಗ್ ಬೌಂಡರಿ ಮೇಲೆ ಬೌಂಡರಿ ಬಾರಿಸ ತೊಡಗಿದ.ನೀರು ಕುಡಿಯೋಣವೆಂದು ನಾನು ಎದ್ದು ಕುಳಿತೆ.ನನ್ನ ದುರಾದೃಷ್ಟಕ್ಕೆ ಸೆಹ್ವಾಗ್ ಔಟಾಗಿ ಬಿಡಬೇಕೇ!!ನನ್ನ ಗ್ರಹಚಾರ ನೆಟ್ಟಗಿರಲಿಲ್ಲ !!"ನೀನು ಎದ್ದದ್ದಕ್ಕೇ ಸೆಹ್ವಾಗ್ ಔಟಾಗಿದ್ದು,ಮಲಗು, ಮಲಗು "ಎಂದರು  ರಂಗಣ್ಣ!! ಮ್ಯಾಚ್ ಇಡೀ ನಾನು ಅದೇ ರೀತಿ 'ಶ್ರೀ ರಂಗ ಪಟ್ಟಣದ ರಂಗನಾಥನ' ಪೋಸ್ ನಲ್ಲಿ ಮಲಗಿಯೇ ಇರಬೇಕಾಯಿತು!!ಮಧ್ಯದಲ್ಲಿ ಲ್ಯಾಂಡ್ ಲೈನಿಗೆ ಫೋನ್ ಬಂತು ಎಂದು ರಂಗಣ್ಣ ತಮ್ಮ ಲಕ್ಕಿ ಸೀಟು ಬಿಟ್ಟು ಎದ್ದು ಹೋಗಬೇಕಾಯಿತು.ಎದ್ದು ಹೋದ ತಕ್ಷಣ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಮೇಲೆ ಮೇಲೆ ಔಟಾದರು."ಥೂ !!!ನಾನು ಈ ಸೀಟು ಬಿಟ್ಟಿದ್ದಕ್ಕೇ ಮಾರಾಯ ವಿಕೆಟುಗಳು ಹೀಗೆ ಬಿದ್ದಿದ್ದು'ಎಂದು ಫೋನ್ ಮಾಡಿದವರಿಗೆ ಹಿಡಿ ಶಾಪ ಹಾಕಿ,ತಮ್ಮ ಲಕ್ಕಿ ಸೀಟಿನ ಮೇಲೆ ಕುಳಿತರು.ಮ್ಯಾಚ್ ಮುಗಿಯುವವರೆಗೂ ತಮ್ಮ  ಲಕ್ಕಿ ಸೀಟ್ ಬಿಟ್ಟಿದ್ದರೆ ಕೇಳಿ!ಕೊನೆಗೂ ಟೀಮ್ ಇಂಡಿಯಾಗೆ ಜಯ ಸಿಕ್ಕಿದಾಗಲೇ ರಂಗಣ್ಣ ನೆಮ್ಮದಿಯ ನಿಟ್ಟುಸಿರು ಹಾಗೂ ತಮ್ಮ ಲಕ್ಕಿ ಸೀಟ್ ಬಿಟ್ಟಿದ್ದು!!! ನಿಮಗೂ ಈ ರೀತಿಯ ಅನುಭವಗಳಾಗಿವೆಯೇ?ನಮ್ಮೆಲ್ಲರೊಡನೆ ನೀವೂ ಹಂಚಿಕೊಳ್ಳಿ.ನಮಸ್ಕಾರ.

Saturday, March 26, 2011

"ದೇಹದ ಕರ್ಮ ಯೋಗಿಗಳು!"

ನಮ್ಮ ದೇಹದ ಹಲವಾರು ಅಂಗಗಳು ಯಾವುದೇ ಸದ್ದು ಗದ್ದಲವಿಲ್ಲದೇ,ನಮ್ಮ ಅರಿವಿಗೂ ಬರದಂತೆ ,ನಮಗೆ ಜೀವಮಾನವಿಡೀ ಸಹಾಯ ಮಾಡುತ್ತಾ ,ತಮ್ಮ ಪಾಡಿಗೆ ತಾವು ಕರ್ಮಯೋಗಿಗಳಂತೆ ಕೆಲಸ ಮಾಡುವುದನ್ನು ಕಂಡರೆ ಈ ಸೃಷ್ಟಿಯ ಅದ್ಭುತದ ಬಗ್ಗೆ ಅಚ್ಚರಿಯಾಗುತ್ತದೆ !ಇಂದಿನ ಪ್ರಜಾವಾಣಿಯಲ್ಲಿ ಬಂದ 'ನಿಮ್ಮ ಕಿಡ್ನಿಗಳನ್ನು ಕಾಪಾಡಿಕೊಳ್ಳಿ'ಎನ್ನುವ ಲೇಖನದಲ್ಲಿ ಬಂದ ಅಂಕಿ ಅಂಶಗಳು ಸ್ವಲ್ಪ ಆತಂಕ ಮೂಡಿಸಿತು.ಡಯಾಬಿಟಿಸ್ ಮತ್ತು ಅಧಿಕ ರಕ್ತದ ಒತ್ತಡವಿರುವ ರೋಗಿಗಳಲ್ಲಿ ಶೇ.25-40 ರಷ್ಟು ರೋಗಿಗಳು ತೀವ್ರ ಮೂತ್ರ ಪಿಂಡದ ಖಾಯಿಲೆಯಿಂದ(critical kidney disease) ನರಳುತ್ತಾರೆ ಎನ್ನಲಾಗಿದೆ.ಇವರಲ್ಲಿ ಹೆಚ್ಚಿನವರಿಗೆ ಡಯಾಲಿಸಿಸ್ ಅಥವಾ ಕಿಡ್ನಿ transplant ಬೇಕಾಗುತ್ತದೆ ಎನ್ನಲಾಗಿದೆ. ಈಗೀಗ ಬಿ.ಪಿ. ಮತ್ತು ಶುಗರ್ ಗಳು ಖಾಯಿಲೆಗಳೇ ಅಲ್ಲ ಎನ್ನುವಷ್ಟು ಸಾಮಾನ್ಯವಾಗಿದೆ.ಹೆಚ್ಚಿನ ಜನ ಹಿಂದೆ ವೈದ್ಯರು ಬರೆದು ಕೊಟ್ಟ ಮಾತ್ರೆಗಳನ್ನೇ ,ಮತ್ತೆ ಚೆಕ್ ಮಾಡಿಸಿಕೊಳ್ಳದೆ ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿರುತ್ತಾರೆ. ಹೆಚ್ಚಿನ ಶುಗರ್ ರೋಗಿಗಳಿಗೆ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವುದಕ್ಕೆ ಹಿಂಜರಿತ.ಮಾತ್ರೆಗಳು ಕೆಲಸ ಮಾಡದಿದ್ದರೂ (primary and secondary failure),insulin dependent ಆಗಿದ್ದರೂ,ಅದೇ   ಮಾತ್ರೆಗಳನ್ನು  ಹೆಚ್ಚಿನ ಪ್ರಮಾಣ ದಲ್ಲೋ ಅಥವಾ ಬೇರೆಯವರಿಗೆ ಬರೆದು ಕೊಟ್ಟ ಮಾತ್ರೆಗಳನ್ನೋ ತೆಗೆದುಕೊಳ್ಳುತ್ತಾರೆ.ವರ್ಷಾನುಗಟ್ಟಲೆ  ಮಾತ್ರೆಗಳನ್ನು ತೆಗೆದುಕೊಂಡರೂ ರಕ್ತದ ಶುಗರ್(P.P.B.S.) ಕಡಿಮೆ ಆಗದ ಪಕ್ಷದಲ್ಲಿ  ವೈದ್ಯರ ಸಲಹೆ ಪಡೆದು ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಇಂಜೆಕ್ಷನ್ ತೆಗೆದು ಕೊಂಡರೆ ಕಿಡ್ನಿ ಗೆ ಆಗುವ ಹಾನಿಯನ್ನು ತಡೆಯಬಹುದು. ಪ್ರತಿ ಸಲ ಮೂತ್ರದಲ್ಲಿ ಸಕ್ಕರೆಯನ್ನು ಪರೀಕ್ಷೆ ಮಾಡಿಸುವಾಗ ,ಮೂತ್ರದಲ್ಲಿ ಆಲ್ಬುಮಿನ್ (ಪ್ರೋಟೀನ್ )ಇದೆಯೇ ಎಂದು ಪರೀಕ್ಷೆ ಮಾಡಿಸಬೇಕು.ಮೂತ್ರದಲ್ಲಿ ಆಲ್ಬುಮಿನ್ ಕಂಡು ಬಂದರೆ ರಕ್ತದಲ್ಲಿ creatinin ಮತ್ತು urea ಹೆಚ್ಚಾಗಿದೆಯೇ ಎಂದು ನೋಡಬೇಕು.ಹೆಚ್ಚಿದ್ದ ಪಕ್ಷದಲ್ಲಿ ತಕ್ಷಣವೇ ಮೂತ್ರ ಪಿಂಡದ ತಜ್ಞರನ್ನು(NEPHROLOGIST) ಕಾಣ ಬೇಕು. ಅಧಿಕ ರಕ್ತದ ಒತ್ತಡವಿರುವವರು ರಕ್ತದ ಒತ್ತಡ ಕಡಿಮೆ ಆಗದಿದ್ದರೆ ತಾವು ತೆಗೆದುಕೊಳ್ಳುತ್ತಿರುವ ಮಾತ್ರೆಯ ಜೊತೆಗೆ ಬೇರೆ ಮಾತ್ರೆಗಳನ್ನೂ ತೆಗೆದು ಕೊಳ್ಳ ಬೇಕಾಗ ಬಹುದು. ಹೆಚ್ಚು ರಕ್ದ ಒತ್ತಡವಿದ್ದರೂ(ಉದಾ ;180\ 100 mm.hg) ತಮಗೇನೂ ತೊಂದರೆ ಇಲ್ಲವೆಂದು ಸುಮ್ಮನಿದ್ದರೆ ಮೂತ್ರ ಪಿಂಡದ ರಕ್ತ ನಾಳಗಳ ಒಳ ಪದರ( intimal layer) ಹಾಳಾಗುತ್ತದೆ. ತಕ್ಷಣವೇ ತಜ್ಞರನ್ನು ಕಾಣುವುದು ಒಳ್ಳೆಯದು.ಉಪ್ಪು ,ಉಪ್ಪಿನ ಕಾಯಿ ಮತ್ತು sodium ಅಂಶವಿರುವ ಆಹಾರಗಳನ್ನು ಕಡಿಮೆ ಮಾಡುವುದು ಒಳಿತು.ನೀರೇ ಕುಡಿಯದ ಕೆಲವರನ್ನು ನೋಡಿದ್ದೇನೆ.ಕಿಡ್ನಿ ಸರಿಯಾಗಿ ಕೆಲಸ ಮಾಡಲು ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕು.ಆದ್ದರಿಂದ ಕಿಡ್ನಿಯ ಆರೋಗ್ಯದ ದೃಷ್ಟಿ ಯಿಂದ  ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಒಳಿತು.
 ಶುಗರ್ ಮತ್ತು ಬಿ.ಪಿ.ಇರುವವರು  ನೋವಿನ ಮಾತ್ರೆಗಳನ್ನು( analgesics) ಆದಷ್ಟು  ತೆಗೆದು ಕೊಳ್ಳದಿರುವುದು ಒಳ್ಳೆಯದು. ಏನೂ ಆಗುವುದಿಲ್ಲ ಎಂಬ ಭಂಡ ಧೈರ್ಯ ದಿಂದ ಔಷಧಿ ಅಂಗಡಿಯಿಂದ ನೋವಿನ ಮಾತ್ರೆಗಳನ್ನು ತಂದು ನುಂಗುವುದು ಕಿಡ್ನಿಗೆ ತೊಂದರೆ ಉಂಟು ಮಾಡಬಹುದು(nimusulide ಮತ್ತು diclofenac sodiam ನಂತಹ ಮಾತ್ರೆಗಳು)ಒಟ್ಟಿನಲ್ಲಿ ಶುಗರ್ ಮತ್ತು ಬಿ.ಪಿ.ಇರುವವರು ಕಿಡ್ನಿ ತೊಂದರೆ ಬರದಂತೆ ಎಚ್ಚರ ವಹಿಸುವುದು ಒಳ್ಳೆಯದು.ತೊಂದರೆ ಬಂದ ನಂತರ ಬರುವ ಕಷ್ಟ ನಷ್ಟಗಳನ್ನು ಮೊದಲೇ ತೆಗೆದುಕೊಳ್ಳುವ ಎಚ್ಚರಿಕೆ ಯಿಂದ ತಡೆಯ ಬಹುದಲ್ಲವೇ?

Wednesday, March 23, 2011

"ತಿರುಪತಿಯ .....ತಂದೆಯೇ!!"

ನನ್ನ ಸ್ನೇಹಿತರೊಬ್ಬರ ಮಗ ಮತ್ತು ನನ್ನ ಮಗ ಇಬ್ಬರೂ ಇಂಗ್ಲೀಶ್ ಮಾಧ್ಯಮದಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದರು.ಒಂದನೇ ತರಗತಿಯವರಗೆ ಅಲ್ಪ ಸ್ವಲ್ಪ ಕನ್ನಡ ಕಲಿತಿದ್ದ ಅವರಿಗೆ, ಎರಡನೇ ತರಗತಿಯಿಂದ ಕನ್ನಡ ಕಲಿಸುವುದನ್ನು ನಿಲ್ಲಿಸಲಾಯಿತು.ಐದನೇ ತರಗತಿಗೆ ಬಂದಾಗ ಕನ್ನಡದ ಒಂದನೇ ತರಗತಿಯ ಪುಸ್ತಕವನ್ನೇ ಮತ್ತೆ ಶುರು ಮಾಡುವುದಾಗಿ ಹೇಳಲಾಗಿತ್ತು.ಆದರೆ ಆ ವರ್ಷ ಬಂದ ಹೊಸ ಶಿಕ್ಷಣಾಧಿಕಾರಿಯ ಆದೇಶದ ಪ್ರಕಾರ  ಕನ್ನಡ ಮಾಧ್ಯಮದ ಐದನೇ ತರಗತಿಯ ಪುಸ್ತಕವನ್ನೇ ಇಂಗ್ಲೀಶ್ ಮಾಧ್ಯಮದವರಿಗೂ ಇಡಲಾಯಿತು.ಎರಡನೇ ತರಗತಿಯಿಂದ ಕನ್ನಡ ಕಲಿಯುವುದನ್ನೇ ಬಿಟ್ಟಿದ್ದ ಹುಡುಗರಿಗೆ ಐದನೇ ತರಗತಿಯ ಕನ್ನಡ ಕಬ್ಬಿಣದ ಕಡಲೆಯಾಯಿತು.ಸರಿ ಮನೆಯಲ್ಲಿ ಕನ್ನಡ ಕಲಿಸುವ ಹೊಸ ಜವಾಬ್ದಾರಿಯನ್ನು ನಾವು ಹೊರಬೇಕಾಯಿತು.
ನನ್ನ ಸ್ನೇಹಿತರ ಮಗನಿಗೆ ತಂದೆಗೆ ಪತ್ರ ಒಂದನ್ನು ಬರೆದುಕೊಂಡು ಬರಲು ಹೇಳಲಾಗಿತ್ತು.ಪತ್ರವನ್ನು "ತೀರ್ಥ ರೂಪು ತಂದೆಯವರಿಗೆ" ಎಂದು ಶುರು ಮಾಡುವ ಬದಲು, "ತಿರುಪತಿ ತಂದೆಯವರಿಗೆ "ಎಂದು ಶುರು ಮಾಡಿದ್ದ!ನನ್ನ ಸ್ನೇಹಿತರು ನಕ್ಕು ನಕ್ಕು ಸುಸ್ತಾಗಿ,ತಮಗೆ ಅರಿವಿಲ್ಲದೆ ತಮ್ಮ ತಲೆಯನ್ನೊಮ್ಮೆ ಸವರಿಕೊಂಡರು!ಅವನ ಕನ್ನಡವನ್ನು ನೋಡಿ ಮನಸ್ಸಿನಲ್ಲೇ 'ಗೋವಿಂದಾ ....ಗೋವಿಂದ !'ಎಂದು ಕೊಂಡರು.
ನನ್ನ ಮಗನಿಗೊಮ್ಮೆ ಕನ್ನಡ ಪದಗಳನ್ನು ಕೊಟ್ಟು ,ಸ್ವಂತ ವಾಕ್ಯಗಳನ್ನು ರಚಿಸುವುದನ್ನು ಹೇಳಿ ಕೊಡುತ್ತಿದ್ದೆ..ಅವನಿಗೆ ಒತ್ತಕ್ಷರಗಳನ್ನು ಬರೆಯುವುದು ಸ್ವಲ್ಪ ಕಷ್ಟವಾಗುತ್ತಿತ್ತು.'ಗಾಭರಿ'ಎನ್ನುವ ಪದವನ್ನು ಎರಡೆರಡು ಸಲ ಹೇಳಿದೆ.
'ಗಾಭರಿ'ಎನ್ನುವ ಪದವನ್ನು 'ಗಾ','ಬರೀ'ಎಂದು ಪದ ವಿಭಾಗ ಮಾಡಿಕೊಂಡು, "ಗಂಗಾಗೆ....ಗಾ.... ಬರೀಬೇಕು" ಎಂದು ವಾಕ್ಯ ರಚನೆ ಮಾಡಿಕೊಂಡು ಬಂದ!'ಏನೋ ಇದು ?' ಎಂದರೆ, 'ನೀನೆ ಗಾ ..ಬರೀ ,ಗಾ ....ಬರೀ ..ಅಂತ ಎರಡು ಸಲ ಹೇಳಿದೆಯಲ್ಲಪ್ಪಾ', ಎಂದು ರಾಗ ತೆಗೆದು ನನ್ನ ಮುಖವನ್ನೇ ನೋಡತೊಡಗಿದ!ನಾನು ಈ ಹೊಸ ರೀತಿಯ ವಾಕ್ಯ ರಚನೆ ನೋಡಿ ಅವಾಕ್ಕಾದೆ.

Sunday, March 20, 2011

"ಅಪ್ಪಾ ......ನಾನೇ .....ದೀಪು !"

ಹೋಳಿ ಹಬ್ಬ ಬಂತೆಂದರೆ ಅಮೆರಿಕಾದಲ್ಲಿ ಎಂ.ಎಸ್.ಮಾಡುತ್ತಿರುವ ಮಗ ನೆನಪಾಗುತ್ತಾನೆ.
ಸುಮಾರು ಇಪ್ಪತ್ತೆರಡು ವರ್ಷಗಳ  ಹಿಂದಿನ ಮಾತು.ಆಗಿನ್ನೂ ಮಗ ಒಂದನೇ ತರಗತಿಯಲ್ಲಿದ್ದ.ಹೋಳಿ ಹಬ್ಬಕ್ಕೆಂದು ಬಣ್ಣಗಳನ್ನು ಅಂಗಡಿಯಿಂದ ತಂದು ಅವುಗಳನ್ನು ಬಕೆಟ್ಟಿನಲ್ಲಿ ನೀರುಹಾಕಿ  ಕರಗಿಸಿ,ಬೇರೆ ಬೇರೆ ಬಣ್ಣಗಳನ್ನು ಬಾಟಲಿಗಳಲ್ಲಿ ತುಂಬಿಸಿಕೊಂಡು ಹುಡುಗರ ಜೊತೆ ಬೆಳಿಗ್ಗೆ ಒಂಬತ್ತು ಗಂಟೆಗೆ ಹೋದವನು ಮಧ್ಯಾಹ್ನ  ಒಂದು ಗಂಟೆಯಾದರೂ ಮನೆಗೆ ಬರದಿದ್ದಾಗ ಅವನಮ್ಮ  ಸಹಜವಾಗಿ ಆತಂಕ ಗೊಂಡಿದ್ದಳು. ಆಸ್ಪತ್ರೆಯಿಂದ ಡ್ಯೂಟಿ ಮುಗಿಸಿ ಮನೆಗೆ ಬಂದ ನನ್ನನ್ನು 'ಬೆಳಿಗ್ಗೆ ಹೋದ ದೀಪು ಇನ್ನೂ ಬಂದಿಲ್ಲ.ಎಲ್ಲಿದ್ದಾನೋ ನೋಡಿ ಕರೆದುಕೊಂಡು ಬನ್ನಿ 'ಎಂದು ಕಳಿಸಿದಳು.ನಮ್ಮ ಶಕ್ತಿನಗರದ ಕಾಲೋನಿ ತುಂಬಾ ದೊಡ್ಡದು.ಸ್ಕೂಟರಿನಲ್ಲಿ ಮಗನನ್ನು ಹುಡುಕಿಕೊಂಡು ಹೊರಟೆ.ಒಂದು ಕಡೆ ಹುಡುಗರ ಗುಂಪೊಂದು
ಬಣ್ಣ ವಾಡುತ್ತಿತ್ತು.ಅವರ ಬಳಿ ಹೋಗಿ ಮುಖಕ್ಕೆಲ್ಲಾ ಕಪ್ಪು ಬಣ್ಣ ಬಳಿದುಕೊಂಡಿದ್ದ ಹುಡುಗನೊಬ್ಬನನ್ನು  ಉದ್ದೇಶಿಸಿ 'ನನ್ನ ಮಗ ದೀಪಕ್ ನನ್ನು ಎಲ್ಲಾದರೂ ನೋಡಿದೆಯೇನಪ್ಪಾ'ಎಂದೆ.ಆ ಹುಡುಗ ಕಪ್ಪು ಮುಖದಲ್ಲಿ ಬಿಳಿ ಹಲ್ಲುಗಳನ್ನು ತೋರಿಸಿ'ಅಪ್ಪಾ ನಾನೇ ದೀಪು'ಎಂದು ಮನೆಯ ಕಡೆ ಓಡಿದ.ಹಸಿರು,ಕೆಂಪು,ನೀಲಿ ಎಲ್ಲಾ ಬಣ್ಣಗಳೂ ಸೇರಿ ಮುಖ ಕಪ್ಪು ಬಣ್ಣಕ್ಕೆ ತಿರುಗಿತ್ತು .ಆ ವಿಚಿತ್ರ ವೇಷದಲ್ಲಿ ನನ್ನ ಮಗನೇ ನನಗೆ ಗುರುತು ಸಿಕ್ಕಿರಲಿಲ್ಲ!ಅವನ ಆಗಿನ ಮುಖ ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ.

Friday, March 18, 2011

ಶೀಟಿ ಹಾಕುವ 'ಪೋಲಿ ಹಕ್ಕಿ'

ಬಾಲ್ಕನಿಯಲ್ಲಿ ಕುಳಿತು ಏನೋ ಓದುತ್ತಿದ್ದೆ.ಯಾರೋ ಪೋಲಿ ಹುಡುಗರು ಶೀಟಿ ಹೊಡೆದಂತೆ ಶೀಟಿಯ ಶಬ್ದ ಬಂತು.ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಹೆಂಡತಿ "ಛೀ ......ಏನ್ರೀ  ಇದು.ಈ ವಯಸ್ಸಿನಲ್ಲಿ ಈ ರೀತಿ ಶೀಟಿ ಹಾಕ್ತೀರಾ"ಎಂದಳು."ಬಾ ಇಲ್ಲಿ "ಎಂದು ಮರದ ಮೇಲೆ ಕುಳಿತು ಶೀಟಿ ಹೊಡೆಯುತ್ತಿದ್ದ ಕಪ್ಪು ಬಣ್ಣದ,ನೀಲಿ ಕಣ್ಣಿನ  'ಪೋಲಿ' ಹಕ್ಕಿಯನ್ನು ತೋರಿಸಿದೆ.ಮತ್ತೊಮ್ಮೆ ಅದೇ ರಾಗದಲ್ಲಿ ಶೀಟಿ ಹೊಡೆದು ಬಾಲ ಅಲ್ಲಾಡಿಸಿ 'ಪುರ್ರ್'ಎಂದು ಹಾರಿ ಹೋಯಿತು.
ನಮ್ಮ ಸ್ನೇಹಿತರೊಬ್ಬರ ಮನೆಯ ಮಹಡಿಯ ಮೇಲಿನ ಮನೆಯಲ್ಲಿ ಕಾಲೇಜು ಕನ್ಯೆ ಯೊಬ್ಬಳಿದ್ದಳು.ಆ ಹುಡುಗಿ ದಿನಾ ಸಂಜೆ ಕಾಲೇಜಿನಿಂದ ಮನೆಗೆ ಬಂದ ನಂತರ, ಮೇಲಿನಿಂದ ಸೀಟಿಯ ಶಬ್ದ ಕೇಳುತ್ತಿತ್ತು.ನಮ್ಮ ಸ್ನೇಹಿತರ ಹೆಂಡತಿ 'ಛೆ .....ಇದೇನು ಮರ್ಯಾದಸ್ಥರ ಮನೆಯ ಈ  ಹುಡುಗಿ ಹೀಗೇಕೆ  ಶೀಟಿ ಹೊಡೆಯುತ್ತಾಳೆ !'ಎಂದುಕೊಂಡರು.ತಡೆಯಲಾರದೆ ಒಂದು ಸಲ'ದಿನಾ ಸಂಜೆ ಮೇಲಿನಿಂದ ಶೀಟಿಯಶಬ್ದ ಬರುತ್ತದಲ್ಲ!'ಎಂದು  ಅವರಮ್ಮನನ್ನೇ ಕೇಳಿದರು.ಅವರಮ್ಮ ನಕ್ಕು ಅವರ ಮನೆಯ ಬಾಲ್ಕನಿಗೆ ಅಂಟಿಕೊಂಡಿದ್ದ ಮರದ ರೆಂಬೆಯತ್ತ ತೋರಿಸಿದರು.ಅದೇ ಜಾತಿಯ ನೀಲಿ ಕಣ್ಣಿನ ಕಪ್ಪು ಹಕ್ಕಿ ತನ್ನ ಪಾಡಿಗೆ  ತಾನು  ಶೀಟಿಹೊಡೆಯುವುದನ್ನುಮುಂದುವರಿಸಿತು. 
ನನ್ನ ಸಹೋದ್ಯೋಗಿಯೊಬ್ಬರ  ಮನೆಯಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದ ಹುಡುಗಿ ಇದ್ದಳು.ದಿನಾ ಮುಂಜಾನೆ 'ಪೋಲಿ ಹುಡುಗನೊಬ್ಬನ'ಶೀಟಿ ಕೇಳಿಸುತ್ತಿತ್ತು.ಒಂದು ದಿನ ಸಿಟ್ಟು ಬಂದು 'ಯಾವೋನೋ ಅವನು' ಎಂದು ಸಿಟ್ಟಿನಿಂದ ಬೈಯುತ್ತಾ ಹೊರ ಬಂದು ನೋಡಿದರೆ ಅದೇ 'ಪೋಲಿ'ಹಕ್ಕಿ ಮರದ ಮೇಲೆ ಕುಳಿತು ನಿರಾತಂಕವಾಗಿ ಸೀಟಿ ಹೊಡೆಯುತ್ತಿತ್ತು. ಓದುಗರಲ್ಲಿ ಯಾರಾದರೂ ಇದು ಯಾವ ಜಾತಿಯ ಹಕ್ಕಿ ಎಂದು ಹೇಳುತ್ತೀರಾ? ಸಧ್ಯಕ್ಕಂತೂ ನಾವಿದನ್ನು ಪೋಲಿ ಹಕ್ಕಿ ಎಂದೇ ಕರೆಯುತ್ತಿದ್ದೇವೆ.

Wednesday, March 16, 2011

ಬಿ.ಆರ್.ಲಕ್ಷ್ಮಣ ರಾವ್ ಅವರ "ಹನಿಗವಿತೆಗಳು"

ಇನ್ನೂ ಇದೀಗ ಮಾರ್ಚ್ ತಿಂಗಳು.ಬೇಸಿಗೆಯ ಬಿಸಿಗೆ ಬೇಸರ ಬಂದು ಪುಸ್ತಕದ ಗೂಡಿನಲ್ಲಿ ತಡಕಾಡಿದಾಗ ಸಿಕ್ಕಿದ್ದು ,ನನ್ನ ನೆಚ್ಚಿನ ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರ 'ಹನಿಗವಿತೆಗಳು'ಪುಸ್ತಕ.ಇಲ್ಲಿದೆ ನೋಡಿ ತಂಪನೀಯುವ ಅವರ ಕೆಲ 'ಹನಿಗವಿತೆಗಳು';
೧) ಕಂಪನಿ

ಕೈಮರಕ್ಕೆ ಬೇಸರ 
ನೀಗಲೆಂದು 
ಹೆಗಲ ಮೇಲೆ 
ಕೂತು 
ಒಂದು ಗಿಣಿ 
ನೀಡಿದೆ ಕಂಪನಿ

೨) ಮಾಮೂಲು

ಚಂದ್ರ ಕಲಾ ಮತ್ತು ಸೂರ್ಯ ಪ್ರಕಾಶ 
ಅಮರ ಪ್ರೇಮಿಗಳು ,
ಇವರಿಬ್ಬರ ನಡುವೆ ಯಥಾ ಪ್ರಕಾರ 
ಭೂಮಿ ಅಡ್ಡ ಬಂತು ,
ಜಾಣ ಸೂರ್ಯ ತಲೆ ಮರೆಸಿಕೊಂಡ .
ಚಂದ್ರ ಗ್ರಹಣವಾಯ್ತು.

೩) ದುರಂತ 

ಹೆಣ್ಣು ತೊಟ್ಟು ಮೆರೆಯುವಳೇ
ಸಲ್ವಾರ್ ಕಮೀಜು ?
ಕನ್ನಡಿ ನೋಡಿ ಹಿಗ್ಗುವಳೇ 
ತನ್ನದೇ ಇಮೇಜು?
ಕನ್ಯತ್ವದ ಹಂತ.
ಸದಾ ಸೀರೆಯೇ? ಹ್ಯಾಪು ಮೋರೆಯೇ?
ದಾಂಪತ್ಯ ದುರಂತ.

೪)ಪಾಠ

ಹುಡುಗಿ ,ಯಾಕಮ್ಮಾ ಈ ಮೊಸಳೆ ಕಣ್ಣೀರು ?
ಕೈ ಕೊಟ್ಟ ನಿನ್ನ ರೋಮಿಯೋ ಬಗ್ಗೆ 
ವೃಥಾ ಕ್ರೋಧದ ಜ್ವಾಲೆ?
ನಿನಗೆ ಮೊದಲೇ ಗೊತ್ತಿರಬೇಕಿತ್ತು 
ಕೋತಿಯ ಹೃದಯ 
ಕೊಂಬೆಯ ಮೇಲೆ.
೫)ಸಮಾನತೆ 

ಬಡವರ ಮಕ್ಕಳು
ಮೂಟೆ ಹೊರುತ್ತಾರೆ
ಕೂಲಿಗೆ.
ಶ್ರೀಮಂತರ ಮಕ್ಕಳೂ 
ಮೂಟೆ ಹೊರುತ್ತಾರೆ 
ಸ್ಕೂಲಿಗೆ.
೬)ವಸ್ತು 

ಹಾಡೇ ಹಾಡೇ ,ಇಂದಿನ ಪಾಡೇ 
ಏನು ನಿನ್ನ ವಸ್ತು?
ಓಲೆ,ಓಲೆ ,ಸೆಕ್ಸಿ,ಸೆಕ್ಸಿ,
ಹಮ್ಮ,ಮಸ್ತು ,ಮಸ್ತು.

೭)ಪಾಕಂಪೊಪ್ಪು

ತುಳುಕುವ ಬಳುಕುವ ತಾರಾ 
ಹುಡುಗರು ರೆಗಿಸ್ತಾರಾ ?
ಅದರಲ್ಲೇನಿದೆ ತಪ್ಪು ?
ನೀನೋ  ಪಾಕೊಂಪೊಪ್ಪು.
ಪಾಕೊಂಪೊಪ್ಪಿಗೆ ಇರುವೆ 
ಮುತ್ತಿಗೆ ಹಾಕೋ ಥರವೇ 
ನಿನ್ನ ಸುತ್ತಾ ಬಾಯ್ಸು.
ದಂ ಇದ್ರೆ ದಬಾಯ್ಸು.

೮)ಕೊಡಲಿ 

ಸ್ವಾರ್ಥಿ ,ಕಟುಕ 
ಈ ಮನುಜನಿಗೆ 
ದೇವರು ಬುದ್ಧಿಯ ಕೊಡಲಿ 
ಎಂದು 
ಹಸಿರು ಕೈಗಳೆತ್ತಿ
ಪ್ರಾರ್ಥಿಸುತ್ತಿರುವ 
ಮರದ 
ಬುಡಕ್ಕೆ 
ಕೊಡಲಿ.
 

Thursday, March 10, 2011

"ಭಾಷಾ ಗೊಂದಲ".....ಒಂದು ಮೋಜಿನ ಪ್ರಸಂಗ.

ನಾವು ಸಣ್ಣವರಿದ್ದಾಗ ಸಿಂಧನೂರಿನ ಹತ್ತಿರವಿರುವ ಧಡೇಸುಗೂರ್ ಎಂಬಲ್ಲಿರುವ ಅಗ್ರಿಕಲ್ಚರ್ ಫಾರಮ್ಮಿನಲ್ಲಿ ನಮ್ಮ ತಂದೆ ಕೆಲಸ ಮಾಡುತ್ತಿದ್ದರು.ಅಕ್ಕ ಪಕ್ಕದ ಮನೆಗಳಲ್ಲಿ ಹೈದರಾಬಾದಿನಿಂದ ಬಂದಿದ್ದ ರೆಡ್ಡಿಯವರೂ,ಧಾರವಾಡದಿಂದ ಬಂದಿದ್ದ  ದೆಸಾಯಿಯವರೂ ಇದ್ದರು.ದೇಸಾಯಿಯವರ ಹೆಂಡತಿ ಅಪ್ಪಟ ಕನ್ನಡತಿ.ಅವರಿಗೆ ತೆಲುಗು ಭಾಷೆ ಬರುತ್ತಿರಲಿಲ್ಲ.ರೆಡ್ಡಿಯವರ ಹೆಂಡತಿಗೆ ತೆಲುಗು ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ.
ಒಮ್ಮೆ ದೇಸಾಯಿ ಯವರ ಹೆಂಡತಿ ರೆಡ್ಡಿಯವರ ಮನೆಗೆ ಹೋದರು.ರೆಡ್ಡಿಯವರ ಹೆಂಡತಿ ತೆಲುಗಿನಲ್ಲಿ 'ರಂಡಿ,ರಂಡಿ'ಎಂದರು.
ತೆಲುಗಿನಲ್ಲಿ 'ರಂಡಿ'ಎಂದರೆ ಬನ್ನಿ ಎಂದರ್ಥ.ಅದನ್ನು ದೇಸಾಯಿಯವರ ಹೆಂಡತಿ 'ಬೈಗಳು' ಎಂದು  ಅಪಾರ್ಥ ಮಾಡಿಕೊಂಡು ಅಲ್ಲಿಂದ ಧಡಕ್ಕನೆ ಎದ್ದು, ದುರ್ದಾನ ತೆಗೆದುಕೊಂಡವರಂತೆ ಹೊರಟು ಹೋದರು.ರೆಡ್ಡಿಯವರ ಹೆಂಡತಿಗೆ ಅವರು ಹಾಗೇಕೆ ಹೊರಟು ಹೋದರು ಎಂದು ಅರ್ಥವಾಗಲಿಲ್ಲ.ಮತ್ತೊಮ್ಮೆ ರೆಡ್ಡಿಯವರ ಹೆಂಡತಿ ದೇಸಾಯಿಯವರಮನೆಗೆ ಹೋದರು.
ದೇಸಾಯಿಯವರ ಹೆಂಡತಿ ತಮ್ಮ ಸಂಪ್ರದಾಯದಂತೆ 'ಬರ್ರಿ,ಬರ್ರಿ' ಎಂದರು.ತೆಲುಗಿನಲ್ಲಿ 'ಬರ್ರ 'ಎಂದರೆ ಎಮ್ಮೆ ಎಂದರ್ಥ.
ತಮ್ಮ ಭಾರಿ ಗಾತ್ರದ ದೇಹವನ್ನು ಕಂಡು ಎಮ್ಮೆ ಎಂದು ಅಪಹಾಸ್ಯ ಮಾಡುತ್ತಿದ್ದಾರೆ ಎಂದುಕೊಂಡು ರೆಡ್ಡಿಯವರ ಹೆಂಡತಿ  ಅಲ್ಲಿಂದ ಭರ,ಭರನೇ ಹೊರಟು ಹೋದರು. ದೇಸಾಯಿಯವರ ಹೆಂಡತಿಗೆ ಏನೊಂದೂ ತಿಳಿಯಲಿಲ್ಲ .ನಮ್ಮ ತಾಯಿಗೆ ತೆಲುಗು ಮತ್ತು ಧಾರವಾಡದ ಕನ್ನಡ ಎರಡೂ ಭಾಷೆ ಬರುತ್ತಿತ್ತು.ಇಬ್ಬರ ಅಹವಾಲುಗಳನ್ನೂ ಆಲಿಸಿ,ಇಬ್ಬರ ಅನುಮಾನಗಳನ್ನೂ   ಪರಿಹರಿಸಿ ವಾತಾವರಣ ತಿಳಿಗೊಳಿಸಿದರು .ಭಾಷೆಯ ಗೊಂದಲದಿಂದ ಉಂಟಾದ ಆಭಾಸದ ಬಗ್ಗೆ ಎಲ್ಲರೂ ಮತ್ತೆ ಮತ್ತೆ ನೆನಪಿಸಿಕೊಂಡು ಮನಸಾರೆ ನಕ್ಕರು.ನೆರೆ ಹೊರೆಯಲ್ಲಿ ಸ್ನೇಹ ಭಾವ ಮೂಡಿತು.
ತಿಳಿಯದ ಭಾಷೆ ಎಷ್ಟೊಂದು ಗೊಂದಲವನ್ನು ಉಂಟು ಮಾಡ ಬಹುದಲ್ಲವೇ!!!!

Tuesday, March 8, 2011

"ಮಹಿಳೆಯೇ ನಿನಗೆ...ಕೋಟಿ ನಮನ!"

(ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ದಿನದಂದು ಜಗತ್ತಿನ ಎಲ್ಲಾ ಮಹಿಳೆಯರಿಗೆ ಶುಭ ಕೋರುತ್ತ )
'ಹೆಣ್ಣು ಸಂಸಾರದ ಕಣ್ಣು '!
ಮಾತೆಯಾಗಿ,ಮಡದಿಯಾಗಿ ,ಮಗಳಾಗಿ ,
ಅಕ್ಕ ತಂಗಿಯರಾಗಿ ,
ಮಮತೆಯ ಸಾಕಾರ ರೂಪವಾಗಿ ,
ಅಕ್ಕರೆ ಆಸ್ಥೆಗಳ ಊಡಿಸಿ,
ಸದಾ ಪೊರೆಯುವ ,ಜೀವದಾಯಿ ಗಂಗೆ !
ಇರಬಹುದು ಅಲ್ಲೊಂದು ಇಲ್ಲೊಂದು ,
ಸದಾ ಕಿರಿಕಿರಿ ಕೊಡುವ,
ಕಿಸಿರು ಕಣ್ಣು,--------ಅಪರೂಪಕ್ಕೆ!
ಹಾಗೆಂದು --------------,
ಬೆಳಕು ತೋರುವ ಕಣ್ಣನ್ನೇ ಹಳಿಯಬಹುದೇ?
ಕಣ್ಣು ಇಲ್ಲದಿದ್ದರೆ ನೋಟವೆಲ್ಲಿ ?
ಹೆಣ್ಣು ಇಲ್ಲದಿದ್ದರೆ ಪ್ರೀತಿಯೆಲ್ಲಿ?
ಪ್ರೀತಿ ಇಲ್ಲದಿದ್ದರೆ ಈ ಜಗವೆಲ್ಲಿ?
ಜಗಕೆ ಕಾರಣಳಾದ ಹೆಣ್ಣಿಗೆ,
ಈ ಜಗದ ----------ಕಣ್ಣಿಗೆ, 
ಕೋಟಿ, ಕೋಟಿ --------------,
------------ನಮನಗಳು!

Friday, March 4, 2011

"ಟಿಕ್,ಟಿಕ್........! ಧ್ಯಾನದ ಟೆಕ್ನಿಕ್!"

'ಮನಸ್ಸುಮರ್ಕಟ'.ಒಂದು ಕಡೆ ನಿಲ್ಲದು.'ಮನಸ್ಸು ಗೀಜಗನ ಗೂಡು'.ಅಲ್ಲಿ ಸದಾ ಆಲೋಚನೆಗಳ,ಯೋಜನೆಗಳ,
ಚಿಂತೆಯ ಚಿಲಿಪಿಲಿ!ಡಿ.ವಿ.ಜಿ.ಯವರು ತಮ್ಮ ಮಂಕು ತಿಮ್ಮನ ಕಗ್ಗದಲ್ಲಿ ಹೀಗೆ ಹೇಳುತ್ತಾರೆ;
'ತಲೆಯೊಳಗೆ ನೆರದಿಹವು ನೂರಾರು ಹಕ್ಕಿಗಳು ,
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು!
ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹವು,
ನೆಲೆಯೆಲ್ಲಿ ನಿದ್ದೆಗೆಲೋ ?-ಮಂಕು ತಿಮ್ಮ!'
 ಮನಸ್ಸು ಗೊಂದಲದ ಗೂಡಾದರೆ ನೆಮ್ಮದಿ ಎಲ್ಲಿ ?ಮನಸ್ಸು ನೆಮ್ಮದಿಯಾಗಿ ,ಶಾಂತವಾಗಿ,ಸ್ವಸ್ಥವಾಗಿ ಇರದಿದ್ದರೆ ದೇಹವೂ ಹಲವಾರು ರೋಗಗಳಿಗೆ ಮನೆಯಾಗುತ್ತದೆ.ಇವತ್ತು ಎಲ್ಲೆಲ್ಲೂ ಕಾಣುವ ಬಿ.ಪಿ, ಶುಗರ್,ಆರ್ಥ್ರೈಟಿಸ್ ಗಳೆಲ್ಲ ಹಾಗೆ ಬಂದ ಬೇಡದ ಅತಿಥಿಗಳೇ!ಇದಕ್ಕೆ ಪರಿಹಾರವೇನು?
ಎಲ್ಲರೂ 'ಧ್ಯಾನ ಮಾಡಿ,ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ' ಎಂದು ಸಲಹೆ ನೀಡುವವರೆ!ಆದರೆ ಧ್ಯಾನ ಹೇಗೆ ಮಾಡುವುದು ಎನ್ನುವುದರ ಬಗ್ಗೆಯೇ ಸಾಕಷ್ಟು ಗೊಂದಲಗಳಿವೆ!ಕೆಲವರು 'ನೀವು ಸುಮ್ಮನೆ ಕುಳಿತು, ಆಲೋಚನೆಗಳನ್ನು ತಡೆಯದೆ, ಅವನ್ನು ಸಾಕ್ಷೀ ಭಾವದಿಂದ ನೋಡಿ' ಎಂದು ಸಲಹೆ ಕೊಡುತ್ತಾರೆ. ಆಲೋಚನೆಗಳನ್ನು 'ಸಾಕ್ಷೀ  ಭಾವದಿಂದ'ನೋಡುತ್ತಾ ,ನೋಡುತ್ತಾ ನಮಗೇ ಅರಿವಿಲ್ಲದಂತೆ ಅದರ ಸುಳಿಗೆ ಸಿಲುಕಿ
ಆಲೋಚನೆಗಳ ಮಹಾಪೂರದಲ್ಲಿ ಕೊಚ್ಚಿಹೊಗುವುದೇ ಹೆಚ್ಚು!
ನಿನ್ನೆ EckhadtTolle ಯವರ stillness speaks ಎನ್ನುವ ಪುಸ್ತಕದಲ್ಲಿ 'Listening totally can in itself be a complete meditation' ಎನ್ನುವ ವಾಕ್ಯವನೋದಿದ್ದೆ .
ಈ ದಿನ ಬೆಳಿಗ್ಗೆ ಏಳುವಾಗಲೇ ಏಕೋ ವಿಪರೀತ ಮೈಗ್ರೈನ್ ತಲೆನೋವಿತ್ತು.ಖಾಲಿ ಹೊಟ್ಟೆಗೆ ಮಾತ್ರೆ ತೆಗೆದುಕೊಳ್ಳುವುದು ಬೇಡವೆನಿಸಿ ,ಮಾತ್ರೆ ತೆಗೆದುಕೊಳ್ಳುವುದನ್ನು ಮುಂದೂಡಿ,ವ್ಯಾಯಾಮ,ಪ್ರಾಣಾಯಾಮ ಮಾಡಿ,'ಶವಾಸನದಲ್ಲಿ'ಮಲಗಿದ್ದೆ.ಗಡಿಯಾರದ ಟಿಕ್,ಟಿಕ್,ಶಬ್ದ ಕೇಳುತ್ತಿತ್ತು.EckhardtTolle ಯವರ ವಾಕ್ಯ
ನೆನಪಾಯಿತು.ಹಾಗೇ ಆ ಗಡಿಯಾರದ ಶಬ್ಧವನ್ನೇ ಸಂಪೂರ್ಣತೆಯಿಂದ ಆಲಿಸುತ್ತಾ ,ಎಣಿಸುತ್ತಾ ಹೋದೆ.ಸುಮಾರು ಹದಿನೈದು ನಿಮಿಷದ ವರೆಗೆ ಅಂದರೆ ಒಂಬೈನೂರರವರೆಗೆ ಎಣಿಸಿದೆ.ಮನಸ್ಸು ಆ ಹದಿನೈದು ನಿಮಿಷ ಗಡಿಯಾರದ ಶಬ್ಧದ ಧ್ಯಾನದಲ್ಲಿತ್ತು!  ಮನಸ್ಸು ಸಾಕಷ್ಟು ಹಗುರಾಗಿತ್ತು.ಮೈಗ್ರೈನ್ ತಲೆ ನೋವು ಆಶ್ಚೆರ್ಯಕರ ರೀತಿಯಲ್ಲಿ ಮಾಯವಾಗಿತ್ತು! ಯಾವುದೋ ಒಂದು ವಿಷಯದ ಕಡೆಗೋ,ಶಬ್ದದ ಕಡೆಗೋ ಗಮನ ಹರಿಸುವುದೇ ಧ್ಯಾನವಲ್ಲವೇ?
ಈಗ ನಿಮ್ಮದೇ ಧ್ಯಾನದ ಹೊಸ ವಿಧಾನಗಳನ್ನು ಕಂಡು ಕೊಳ್ಳ ಬಹುದು.ಹೌದಲ್ಲವೇ?ಬರೆದು ತಿಳಿಸಿ.ನಮಸ್ಕಾರ.

Wednesday, March 2, 2011

"ಸುರಕ್ಷತೆಯೇ ಬಾಳಿನ ಶ್ರೀರಕ್ಷೆ"

ಮಾರ್ಚ್ ಮೊದಲ ವಾರ ಸುರಕ್ಷತಾ ಸಪ್ತಾಹ.ಎಲ್ಲಾ ಕಡೆ ಸುರಕ್ಷತೆಯ ಬಗ್ಗೆ ಚರ್ಚೆಗಳು,ಸುರಕ್ಷತಾ ಸಲಕರಣೆಗಳ ಮಹತ್ವ ,ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮಗಳಾಗುತ್ತವೆ.ಮಾರ್ಚ್ ಮುಗಿಯುತ್ತಿದ್ದಂತೆ ಎಲ್ಲೆಡೆ ಹಾಳು ಮರೆವು ಆಕ್ರಮಿಸಿ,ಸುರಕ್ಷತೆಯ ವಿಷಯ ಮೂಲೆ ಗುಂಪಾಗುತ್ತದೆ.ಮತ್ತೆ ಅದೇ ಹಳೆ ಅಭ್ಯಾಸಗಳು ಮುಂದುವರಿಯುತ್ತವೆ.ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವುದು,ಕುಡಿದು ಗಾಡಿ ಓಡಿಸುವುದು ,ಬಾಯಲ್ಲಿ ಗುಂಡು ಪಿನ್ ಕಚ್ಚಿಕೊಳ್ಳುವುದು ,ಕಿವಿಯಲ್ಲಿ ಹೇರ್ ಪಿನ್ ಹಾಕಿಕೊಳ್ಳುವುದು  ಇತ್ಯಾದಿ ,ಇತ್ಯಾದಿ ಎಡವಟ್ಟುಗಳನ್ನು  ಮಾಡುತ್ತಲೇ ಇರುತ್ತೇವೆ ! ಸುಮಾರು ಅಪಘಾತಗಳಲ್ಲಿ ಪ್ರತಿ ಶತ ಎಂಬತ್ತು ಅಪಘಾತಗಳು ಮನುಷ್ಯನ ತಪ್ಪಿನಿಂದ(Human Error) ಆದಂಥವು. ನಾವು ಮಾಡುವ ಕೆಲಸದಲ್ಲಿ ಎಚ್ಚರಿಕೆ ಇಲ್ಲದಿರುವುದೇ ಪ್ರಮುಖ ಕಾರಣ ಎಂದುಹೇಳಲಾಗುತ್ತದೆ. ಎಚ್ಚರಿಕೆ ಇಲ್ಲದಿರುವುದಕ್ಕೆ  ಈ ಕ್ಷಣದಲ್ಲಿ ನಾವು ಎಚ್ಚರದಿಂದ ಇಲ್ಲದಿರುವುದೇ ಕಾರಣ.WE  ARE NOT IN THE PRESENT.ನಿನ್ನೆ ನಡೆದ್ದನ್ನೋ,ಮೊನ್ನೆ ಯಾರೋ ಜಗಳವಾಡಿದ್ದೋ,ನಾಳೆ ಕಟ್ಟಬೇಕಾದ ಬ್ಯಾಂಕಿನ ಸಾಲವೋ ,ಮಗನ ಕಾಲೇಜಿನ ಫೀಸೋ ,ಒಟ್ಟಿನಲ್ಲಿ ಯಾವುದೋ ಒಂದು ವಿಷಯ ನಮ್ಮ ತಲೆ ತಿನ್ನುತ್ತಿರುತ್ತದೆ.ಮಾಡುತ್ತಿರುವ ಕೆಲಸವನ್ನು  ಯಾಂತ್ರಿಕವಾಗಿ ,ಅದರ ಕಡೆ ಲಕ್ಷ್ಯವಿಲ್ಲದೇ ಮಾಡುತ್ತಿರುತ್ತೇವೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ ಎನ್ನುವ ಮಾತನ್ನು ಎಲ್ಲೆಲ್ಲೂ  ಕೇಳುತ್ತೇವೆ.ಹಾಗಂದರೇನು?ಮಾಡುವ ಕೆಲಸದ ಬಗ್ಗೆ ಸಂಪೂರ್ಣ ಗಮನವಿರಲಿ,ಅರಿವಿರಲಿ ಎಂದಲ್ಲವೇ?ಈ ಕ್ಷಣದಲ್ಲಿ ನಾವು ಯಾವುದೋ ಆಲೋಚನೆಯಲ್ಲಿ ಮುಳುಗದೆ,ಪೂರ್ಣ ಎಚ್ಚರದಲ್ಲಿದ್ದರೆ ಸಾಕಷ್ಟು ಅಪಘಾತಗಳನ್ನು ತಪ್ಪಿಸಬಹುದಲ್ಲವೇ? ತಪ್ಪದೆ ನಿಮ್ಮ ಅನಿಸಿಕೆ ತಿಳಿಸಿ.ನಮಸ್ಕಾರ.

Tuesday, February 22, 2011

"ತಪ್ಪು ರೈಲಿನಲ್ಲಿ"

ನಲವತ್ತು ವರ್ಷಗಳ ಹಿಂದಿನ ಮಾತು.ರಾತ್ರಿ  ಸುಮಾರು ಹತ್ತು ಗಂಟೆ ಸಮಯ. ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಅಕ್ಕಪಕ್ಕದಲ್ಲೇ ಇದ್ದ ಆರನೇ ಮತ್ತು ಏಳನೆ ಪ್ಲಾಟ್ ಫಾರಮ್ಮುಗಳಲ್ಲಿ  ವಿಪರೀತ ಜನ ಸಂದಣಿ. ಆರನೇ ಪ್ಲಾಟ್ ಫಾರಮ್ಮಿನ ಗಾಡಿ ಮೈಸೂರಿನ ಕಡೆ ಹೊರಟಿತ್ತು .ಏಳನೇ ಪ್ಲಾಟ್ ಫಾರಮ್ಮಿನ ಗಾಡಿ ಅರಸೀಕೆರೆ ಕಡೆ ಕಡೆ ಹೊರಟಿತ್ತು.ಆ ಗಡಿಬಿಡಿಯಲ್ಲಿ ಹಾಸಿಗೆ ,ಟ್ರಂಕು ,ಕೈಚೀಲ ಹಿಡಿದಿದ್ದ ಮಧ್ಯ ವಯಸ್ಕನೊಬ್ಬ ಆತುರಾತುರವಾಗಿ ಮೈಸೂರಿನ ಕಡೆ ಹೊರಟಿದ್ದ ಗಾಡಿ ಹತ್ತಿ ಧಾರಾಕಾರವಾಗಿ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಂಡು, ಜನಗಳ ಮಧ್ಯೆ ಜಾಗ ಮಾಡಿಕೊಂಡು ಕುಳಿತ.ಅವನ ತಲೆಯಲ್ಲಿ ಚಿಂತೆಗಳ ಸಂತೆ ನೆರದಿತ್ತು.ಮಗಳ ಮದುವೆ ತಪ್ಪಿಹೊಗುವುದರಲ್ಲಿತ್ತು.ತೀವ್ರವಾದ ಆತಂಕದಿಂದ ತಲೆಗೆ ಮಂಕು ಬಡಿದಂತಾಗಿತ್ತು.ರೈಲು ಹೊರಟಿತು .ಪ್ಲಾಟ್ ಫಾರಂ ಬಿಟ್ಟು ಊರಾಚೆ ಓಡುತ್ತಿತ್ತು.ಅವನ ಎದುರಿಗೆ ಹೊಸದಾಗಿ ಮದುವೆಯಾದ ಜೋಡಿಯೊಂದು ಕುಳಿತಿತ್ತು.ಗಂಡು ತುಂಬಾ ಸಂತೋಷದಲ್ಲಿದ್ದ.ಸ್ನೇಹಿತರೊಡನೆ ಮಾತನಾಡುತ್ತಾ ಜೋರಾಗಿ ನಗುತ್ತಿದ್ದ..ಆದರೆ ಹೆಣ್ಣಿನ ಮುಖದಲ್ಲಿ ಸಂತೋಷವಿರಲಿಲ್ಲ.ಮ್ಲಾನ ವದನಳಾಗಿ ಮುಖ ತಗ್ಗಿಸಿ ಕುಳಿ ತಿದ್ದಳು .ಮಧ್ಯವಸ್ಕನ ಪಕ್ಕದಲ್ಲಿ ಆ ಮದುವೆ ಗಂಡಿನ ತಂದೆ ,ತಾಯಿಗಳೂ ,ಕೆಲ ಬಂಧುಗಳೂ ಕುಳಿತಿದ್ದರು.ಒಂದು ಮೂಲೆಯಲ್ಲಿ ಸುಂದರ ಯುವಕನೊಬ್ಬ ಟ್ರೈನಿನಿಂದ ಮುಖ ಹೊರಹಾಕಿ ಆ ಕತ್ತಲಿನ ಶೂನ್ಯದಲ್ಲಿ ದೃಷ್ಟಿ ನೆಟ್ಟಿದ್ದ.'ಈ ಟ್ರೈನು ಅರಸೀಕರೆಗೆ ಎಷ್ಟು ಹೊತ್ತಿಗೆ  ತಲುಪುತ್ತೆ ಸ್ವಾಮಿ ? 'ಎಂದು ಮಧ್ಯ ವಯಸ್ಕ ಎದುರಿಗೆ ಕುಳಿತಿದ್ದ ಮದುವೆ ಗಂಡನ್ನು ಕೇಳಿದ.ಆ ಮಾತಿಗೆ ಅಲ್ಲಿದ್ದವರೆಲ್ಲಾ ಜೋರಾಗಿ ನಗತೊಡಗಿದರು.'ರೀ ಸ್ವಾಮಿ, ಇದು  ಮೈಸೂರಿಗೆ ಹೋಗುವ ಟ್ರೈನು.ಅರಸೀಕೆರೆಗೆ ಹೋಗುವ ರೈಲು ಪಕ್ಕದ ಪ್ಲಾಟ್ ಫಾರಮ್ಮಿನಲ್ಲಿ ನಿಂತಿತ್ತು.ಸರಿಯಾಗಿ ಕೇಳಿ ಕೊಂಡು ಹತ್ತೋದು ಬ್ಯಾಡ್ವಾ?'ಎಂದ ಮದುವೆ ಗಂಡು .ಇಷ್ಟು ಹೊತ್ತು ಮೂಲೆಯಲ್ಲಿ ಮೌನವಾಗಿ ಕುಳಿತು ಕಿಟಕಿಯಾಚೆ ನೋಡುತ್ತಿದ್ದ ಸುಂದರ ಯುವಕನ ಮುಖದಲ್ಲಿ ಮಿಂಚು ಹೊಳೆದಂತಾಯಿತು.
ಅವನು ಮದುವೆ ಗಂಡನ್ನು ಉದ್ದೇಶಿಸಿ 'ಯಾರ್ರೀ ಹೇಳಿದ್ದು ಇದು ಮೈಸೂರಿಗೆ ಹೋಗುತ್ತೆ ಅಂತ ?ಇದು ಅರಸೀಕೆರೆಗೇ ಹೋಗೋದು.ನಾನೂ ಅಲ್ಲಿಗೇ ಹೋಗ ಬೇಕು'ಎಂದ.ಇಬ್ಬರಲ್ಲೂ ಮಾತಿಗೆ ಮಾತು ಬೆಳೆಯಿತು.ಮದುವೆ ಗಂಡಿಗೆ ಸಿಟ್ಟು ಜಾಸ್ತಿ.ಹೊಸ ಹೆಂಡತಿಯ ಮುಂದೆ ತನ್ನ ಪ್ರತಾಪ ತೋರಿಸ ಬೇಕಿತ್ತು.'ರೀ ಸ್ವಾಮಿ .....ಮುಂದೆ ಬರುವ ಸ್ಟೇಶನ್ ಯಶವಂತ ಪುರವಾಗಿದ್ದರೆ,ಇದು ಅರಸೀಕೆರೆ ರೈಲು ಅಂತ.ಹಾಗೇನಾದರೂ ಆದರೆ ನನ್ನ ಕತ್ತಿನಲ್ಲಿರುವ ಮೂರು ತೊಲ ಬಂಗಾರದ ಚೈನು ನಿಮಗೆ ಕೊಡುತ್ತೇನೆ ,ಆದರೆ ಮುಂದಿನ ಸ್ಟೇಶನ್ ಕೆಂಗೇರಿ ಬಂದರೆ ನೀವೇನು ಕೊಡುತ್ತೀರಿ ?'ಎಂದು ಸವಾಲು ಹಾಕಿದ.ಆ ಸುಂದರ ಯುವಕ ತನ್ನ ಜೇಬಿನಲ್ಲಿದ್ದ ಮೂರು ತೊಲ ಹೊಸ ಬಂಗಾರದ ಸರವನ್ನು ಕೊಡುವುದಾಗಿ ಒಪ್ಪಿಕೊಂಡ .ಅಲ್ಲಿದ್ದವರೆಲ್ಲಾ ಮಾತು ಹೊರಡದೆ ಅವಾಕ್ಕಾಗಿ ,ಈ ಹೊಸ ನಾಟಕದ ಬೆಳವಣಿಗೆ ಏನಾಗುತ್ತೋ ಎಂದು ಕುತೂಹಲದಿಂದ ನೋಡುತ್ತಾ ಕುಳಿತಿದ್ದರು. ಮುಂದೆ ,ಕೆಂಗೇರಿ ಸ್ಟೇಶನ್ ಬಂತು .ಆ ಸುಂದರ ಯುವಕ ಮರು ಮಾತನಾಡದೆ ತನ್ನಲ್ಲಿದ್ದ ಮೂರು ತೊಲ ಹೊಸದಾಗಿ ಮಾಡಿಸಿದ್ದ ಬಂಗಾರದ ಚೈನನ್ನು ಆ ಮದುವೆ ಗಂಡಿಗೆ ಕೊಟ್ಟು , ರೈಲಿನಿಂದ ಇಳಿದ.ಇಳಿಯುವಾಗ ಒಮ್ಮೆ ಮದುವೆ ಗಂಡಿನ ಕಡೆ ತಿರುಗಿ ನೋಡಿದ.ಮದುವೆ ಗಂಡು ಆ ಚಿನ್ನದ ಸರವನ್ನು ತನ್ನ ಹೊಸ ಹೆಂಡತಿಗೆ ಉಡುಗೊರೆಯಾಗಿ ಕೊಟ್ಟ.ಅದನ್ನವಳು ನಡುಗುವ ಕೈಗಳಿಂದ ತೆಗೆದುಕೊಂಡಳು.ಯುವಕನ ಮುಖದಲ್ಲಿ ಕಂಡೂ ಕಾಣದಂತೆ ವಿಷಾದದ ನಗೆಯೊಂದು ಮಿಂಚಿ ಮಾಯವಾಯಿತು!ಅರಸೀಕೆರೆಗೆ ಹೋಗಬೇಕಾಗಿದ್ದ ಮಧ್ಯವಯಸ್ಕನೂ ವಿಧಿ ಇಲ್ಲದೆ ತನ್ನ ಲಗೇಜಿನೊಂದಿಗೆ ಯುವಕನ ಜೊತೆ ಕೆಂಗೇರಿಯಲ್ಲಿ ಇಳಿದ.ಟ್ರೈನು ಮುಂದೆ ಹೋಯಿತು.ಟ್ರೈನಿನ ಕಿಟಕಿಯಲ್ಲಿ ಮುಖವಿಟ್ಟು,ಕತ್ತಲಲ್ಲಿ ಏನನ್ನೋ ಹುಡುಕುತ್ತಾ  ಮದುವೆ ಹೆಣ್ಣು ಕಿಟಕಿಯಿಂದ ಕೈ ಬೀಸಿದಳು.ಕೆಂಗೇರಿಯಲ್ಲಿ ಇಳಿದ ಯುವಕ  ಬಿಕ್ಕಿ,ಬಿಕ್ಕಿ, ಅಳುತ್ತಿದ್ದ. ಮಧ್ಯವಸ್ಕನಿಗೆ ಏನೋ ಅನುಮಾನ ಬಂತು.'ಇದು ಮೈಸೂರಿಗೆ ಹೋಗುವ ಗಾಡಿ ಎಂದು ನಿನಗೆ ಮೊದಲೇ ಗೊತ್ತಿತ್ತಾ?'ಎಂದ.ಯುವಕ ಅಳುತ್ತಲೇ ಹೌದೆಂದು ಒಪ್ಪಿಕೊಂಡ.'.ಮತ್ತೆ ಯಾಕೆ ಬೆಟ್ ಕಟ್ಟಿ ಬಂಗಾರದ ಚೈನು ಕಳೆದುಕೊಂಡಿರಿ?' ಎಂದ.'ಸರ್ ಅದೊಂದು ದೊಡ್ಡ ಕಥೆ.ಆ ಹುಡುಗಿಯನ್ನು ನಾನು ತುಂಬಾ ಪ್ರೀತಿಸಿದ್ದೆ .ಅವಳೂ ನನ್ನನ್ನು ಅಷ್ಟೇ ಪ್ರೀತಿಸುತ್ತಿದ್ದಳು.ನಮ್ಮ ಮದುವೆಗೆ ಜಾತಿ ಅಡ್ಡಿ ಬಂತು.ನಾನು  ಕೊಟ್ಟ ಚಿನ್ನದ ಸರ ಅವಳಿಗಾಗಿ ಮಾಡಿಸಿದ್ದು .ಅದನ್ನು ಅವಳಿಗೆ ಹೇಗೆ ತಲುಪಿಸಬೇಕೋ ತಿಳಿದಿರಲಿಲ್ಲ.ಏನಾದರೂ ಉಪಾಯ ಹೊಳೆಯಬಹುದೆಂದು ಅವಳ ಬೋಗಿಯಲ್ಲಿ ಬಂದು ಕುಳಿತೆ.ನಿಮ್ಮಿಂದ ಅದು ಸಾಧ್ಯವಾಯಿತು.ತುಂಬಾ ಧನ್ಯವಾದಗಳು ಸರ್.ನಿಮಗೆ ದಾರಿ ತಪ್ಪಿಸಿದ್ದಕ್ಕೆ ಕ್ಷಮೆ ಇರಲಿ'ಎಂದು ಕಣ್ಣೀರು ಒರೆಸಿ ಕೊಳ್ಳುತ್ತಾ, ಕತ್ತಲಲ್ಲಿ ಮರೆಯಾದ.ಮಧವಯಸ್ಕ 'ತಾನು ಎಂತಹ ನಾಟಕ ಒಂದಕ್ಕೆ ಸೂತ್ರಧಾರಿ ಯಾದೆನಲ್ಲಾ !'ಎಂದುಕೊಳ್ಳುತ್ತಾ, ಬೆಂಗಳೂರಿನ ಕಡೆ ಹೋಗುವ ಮುಂದಿನ ರೈಲಿಗಾಗಿ ಕಾಯ ತೊಡಗಿದ.
(ಇದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ 'ತಪ್ಪು ರೈಲಿನಲ್ಲಿ' ಕಥೆ.1970 ರಲ್ಲಿ ಪಿ.ಯು.ಸಿ.ಯಲ್ಲಿ ನಾನ್ ಡೀಟೈಲ್ ಪುಸ್ತಕದಲ್ಲಿ ಇದ್ದ ಕಥೆ.ಇನ್ನೂ  ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.ನಿಮಗೆಲ್ಲಾ ಈ ಕಥೆ ಇಷ್ಟವಾಯಿತೆ.ತಿಳಿಸಿ.ನಮಸ್ಕಾರ.)

Saturday, February 5, 2011

"ನಾವೂ......ಸಂತೆಯ ಚಿತ್ರಗಳೇ ! "













ನಾವು ಪ್ರತಿಯೊಬ್ಬರೂ 
ಈ ಜಗವೆಂಬ ಸಂತೆಯಲ್ಲಿ
ಮಾರಾಟಕ್ಕೆ ಇರುವ,
ಕ್ಷಣ ಕ್ಷಣಕ್ಕೂ,
ಬಣ್ಣ ಭಾವ ಬದಲಿಸುವ,
ಚಲಿಸುವ,
ಚಿತ್ರವಿಚಿತ್ರ ಚಿತ್ರಗಳು!
ರಚಿಸಿದವನೆಲ್ಲೋ ನಾಪತ್ತೆ!
ಕಾಣೆಯಾಗಿದ್ದಾನೆ ನಿಗೂಢವಾಗಿ!
(ಚಿತ್ರದೊಳಗೆ ಚಿತ್ರಕಾರನಿದ್ದಾನೆಯೇ? ಗೊತ್ತಿಲ್ಲ)
ನಮ್ಮ ಬೆಲೆಯನ್ನು ನಾವೇ ,
ಕಟ್ಟಿಕೊಳ್ಳಬೇಕು!
ನಮ್ಮ ಮಾರ್ಕೆಟಿಂಗ್
ನಾವೇ ಮಾಡಿಕೊಳ್ಳಬೇಕು!
ಬೆಲೆ ಸಿಕ್ಕದಿದ್ದಲ್ಲಿ,
ಮಾರಾಟ ವಾಗದಿದ್ದಲ್ಲಿ,
ನಮ್ಮ ನಡವಳಿಕೆಯ ಕುಂಚದಲ್ಲಿ,
ನಮ್ಮನ್ನು ನಾವೇ ತಿದ್ದಿಕೊಳ್ಳಬೇಕು!
ಬದಲಾವಣೆ ಮಾಡಿಕೊಳ್ಳಬೇಕು!
ಅಂತೂ, ಇಂತೂ,
ಬದುಕೆಂಬ ಸಂತೆಯಲ್ಲಿ
ನಾವೂ, ಮಾರಾಟ ವಾಗಬೇಕಾದ
ಚಲಿಸುವ ಚಿತ್ರಗಳು!

Tuesday, February 1, 2011

"ಚಿತ್ರ ಸಂತೆಯ ........ಚಿತ್ರಗಳು"

ಮಧ್ಯಾಹ್ನದ ಉರಿಬಿಸಿಲಿಗೆ ಮೈಒಡ್ಡಿಕೊಂಡು, ಫುಟ್ ಪಾತಿನ ಪಕ್ಕದ ಬೇಲಿಯ ಸರಳುಗಳಿಗೆ ಸಾಲಾಗಿ ಒರಗಿ ಕುಳಿತ ಪೈಂಟಿಂಗ್ ಗಳು ಇನ್ನೂ ತಾವು ಮಾರಾಟ ವಾಗದೆ ಉಳಿದಿರುವುದಕ್ಕೆ ,ಯಾರಿಗೂ ಕೇಳದಂತೆ ಮೆಲ್ಲನೆ ಬಿಕ್ಕಳಿಸುತ್ತವೆ.ಪಕ್ಕದಲ್ಲೇನಿಂತ ಅವುಗಳ ಜನಕ ಗಿರಾಕಿಗಳಿಗಾಗಿ ಕಾದು ಬೇಸತ್ತು,ಹಚ್ಚಿದ ಸಿಗರೇಟು ಒಂದರಿಂದ ಸುದೀರ್ಘವಾಗಿ ದಂಎಳೆದು ಬೇಸರದ ಹೊಗೆಕಾರುತ್ತಾನೆ. ಒಂದೊಂದು ಚಿತ್ರವೂ ಕೈಬೀಸಿ ಕರೆದು, ದಯಮಾಡಿ ನನ್ನ ಸೆರೆಬಿಡಿಸಿ,ನಿಮ್ಮ ಬೆಡ್ ರೂಮಿನಲ್ಲೋ,ಹಾಲಿನಲ್ಲೋ, ಕಡೆಗೆ ಬಾತ್ ರೂಮಿನಲ್ಲೋ ಹ್ಯಾಂಗ್ ಮಾಡಿ ಎಂದು ಆರ್ತರಾಗಿ ಬೇಡಿಕೊಳ್ಳುತ್ತವೆ.ತಮ್ಮ ಡ್ರೆಸ್ ಗಳ ಹಿಡಿತಕ್ಕೆ ಮೀರಿ,ಎಲ್ಲಾ ಕಡೆಯಿಂದಲೂ ಚಿಮ್ಮುತ್ತಿರುವ ಹುಡುಗಿಯರು ,ತಮ್ಮ ತಂಪು ಕನ್ನಡಕದ ಹಿಂದಿನಿಂದಲೇ ನಾಲ್ಕು ಪೈಂಟಿಂಗ್ ಗಳನ್ನು ಅವಲೋಕಿಸಿ ಸುಸ್ತಾಗಿ,ಎರಡೆರಡು ಕೋನ್ ಐಸ್ಕ್ರೀಂ ತಿಂದು ತಮ್ಮ ಧಡೂತಿ ದೇಹಗಳನ್ನು ಮತ್ತಷ್ಟು ಸೊಂಪಾಗಿಸಿಕೊಳ್ಳುತ್ತಾರೆ.ಐಸ್ಕ್ರೀಂ ಮಾರಾಟಗಾರರಿಗೋ ಸುಗ್ಗಿಯೋಸುಗ್ಗಿ .ಚಿತ್ರಗಳಿಗಿಂತ ಅವೇ ಹೆಚ್ಚು ಮಾರಾಟವಾಗುತ್ತಿವೆ .ಮೊಮ್ಮಗಳಪೈಂಟಿಂಗ್ ಅನ್ನು ಕಾಯುತ್ತ ಕುಳಿತ ರಸಗುಲ್ಲಾ ತಿಂದು ಕೆಂಪಾದ ಕಲ್ಕತ್ತಾದ ಅಜ್ಜಿ ಯೊಬ್ಬಳು ಉರಿಬಿಸಿಲಿನ ತಾಪಕ್ಕೆ ಮತ್ತಷ್ಟು ಕೆಂಪಾಗಿ ತಾನೇ ಒಂದು ಪೈಂಟಿಂಗ್ ನಂತೆ ಕಾಣುತ್ತಾಳೆ.ಕಲಾವಿದರ ಗುಂಪೊಂದು ಗಿರಾಕಿಗಳ ಚೌಕಾಸಿಯ ಬಗ್ಗೆ ಬೇಸರದಿಂದ ಮಾತಾಡಿಕೊಂಡು, ಚಿತ್ರಸಂತೆಯವರು ಕೊಟ್ಟ ರೈಸ್ ಬಾತ್ ತಿನ್ನುತ್ತಿದ್ದಾರೆ.ಕೆಲವರು ದೊಡ್ಡ ದೊಡ್ಡ ಕ್ಯಾಮೆರಾ ಗಳಲ್ಲೋ ಮೊಬೈಲ್ ಗಳಲ್ಲೋ ಚಿತ್ರಗಳ ಫೋಟೋ ಕ್ಲಿಕ್ಕಿಸುವುದನ್ನೇ ಒಂದುದೊಡ್ಡ ಕಾಯಕ ಮಾಡಿಕೊಂಡಿದ್ದಾರೆ. ಹುಲ್ಲುಗಾವಲಿನಲ್ಲಿ ಮೇಯಲು ಬಿಟ್ಟ ಕರುವೊಂದು ಏನನ್ನೂ ಮೇಯದೆ ಅತ್ತಿಂದಿತ್ತ ಓಡಾಡುವಂತೆ,ಕೆಲವರು ಯಾವ ಚಿತ್ರವನ್ನೂ ಖರೀದಿಸದೇ, ಬರಿದೇ ಅತ್ತಿಂದಿತ್ತ ತಿರುಗಾಡಿ ಕಾಲು ನೋಯಿಸಿ ಕೊಂಡಿದ್ದಾರೆ.ನೂರಾರು ಹೆಣ್ಣುಗಳನ್ನು ನೋಡಿ ಕಡೆಗೆ ಯಾವುದೋ ಒಂದನ್ನು ಗಂಟು ಹಾಕಿಕೊಳ್ಳುವ ಗಂಡಿನಂತೆ ಕೆಲವರು ಎಷ್ಟೋ ಚಿತ್ರಗಳನ್ನು ನೋಡಿ ಖರೀದಿಸದೇ ಬಿಟ್ಟು ಕಡೆಗೆ ಕಳಪೆಚಿತ್ರ ಒಂದನ್ನು ಖರೀದಿಸಿ, ಕೊಟ್ಟ ಬೆಲೆ ಜಾಸ್ತಿಯಾಯ್ತೇನೋ ಎಂದು ಒದ್ದಾಡುತ್ತಾರೆ.ಕತ್ತಲಾಗುತ್ತಿದ್ದಂತೆ ಮಾರಾಟವಾಗದ ಚಿತ್ರಗಳ ಮೌನ ರೋದನ ಮುಗಿಲು ಮುಟ್ಟುತ್ತದೆ.ಅವುಗಳಿಗೆ ಸಾಂತ್ವನ ಹೇಳುವಂತೆ ಎಲ್ಲಿಂದಲೋ ತಂಗಾಳಿ ಬೀಸಿ ,ಆಶಾಕಿರಣದ ಸಂಕೇತವಾಗಿ ಬೀದಿ ದೀಪಗಳು ಜಗ್ಗನೆ ಹತ್ತಿಕೊಳ್ಳುತ್ತವೆ .ನಾಳೆ ಮತ್ತೆ ಬೆಳಗಾಗುತ್ತದೆ ಎನ್ನುವ ಭರವಸೆಯಲ್ಲಿ ಚಿತ್ರಗಳು ಒಂದೊಂದಾಗಿ ಪೆಟ್ಟಿಗೆ ಸೇರುತ್ತವೆ ----- ಮತ್ತೆ ಯಾವುದೋ ಸಂತೆಗೆ ಪಯಣ ಬೆಳಸಲು.ಜೀವನವೆಂದರೆ ಅದೇ ಅಲ್ಲವೇ?..............ನಿಲ್ಲದ ಪಯಣ!!

Thursday, January 27, 2011

"ಆಲೋಚನೆಗಳ ಸಂಕೋಲೆಗಳಿಂದ ಬಿಡುಗಡೆ!"

ನಾನು ಮಾತನಾಡುತ್ತಲಿದ್ದೆ.ಎದುರಿಗಿದ್ದ ವ್ಯಕ್ತಿ  ಕೇಳಿಸಿ ಕೊಳ್ಳುವಂತೆ ಆಗೊಮ್ಮೆ ಈಗೊಮ್ಮೆ ಹಾಂ,ಹೂಂ .......,ಎನ್ನುತ್ತಿದ್ದ.ಯಾವುದೋ ಆಲೋಚನೆಯಲ್ಲಿ ಮುಳುಗಿ ಹೋಗಿದ್ದ.ನಾನು ಹೇಳಿದ್ದು ಒಂದೂ ಅರ್ಥವಾಗಿರಲಿಲ್ಲ!ನಮ್ಮಲ್ಲಿ ಬಹಳಷ್ಟು ಜನ ಹೀಗೆಯೇ ಅಲ್ಲವೇ?ಹಿಂದೆಂದೋ ನಡೆದ ಘಟನೆಯೋ,ಯಾರೋ ನಮ್ಮನ್ನು ಇಪ್ಪತ್ತು ವರುಷಗಳ ಕೆಳಗೆ ಕುಟಕಿ ಆಡಿದ ಮಾತೋ,ಹೀಯಾಳಿಸಿ ಅವಮಾನ ಮಾಡಿದ್ದೋ,ಬೇಡವೆಂದರೂ ಮತ್ತೆ ,ಮತ್ತೆ ಮರುಕಳಿಸಿ ನಮಗೇ ಗೊತ್ತಿಲ್ಲದಂತೆ ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತಿರುತ್ತದೆ.ಅಥವಾ ಭವಿಷ್ಯದಲ್ಲಿ ನನಗೆ ಕ್ಯಾನ್ಸರ್ ಬಂದರೆ ಏನು ಮಾಡುವುದು !?ಹಾರ್ಟ್ ಅಟ್ಯಾಕ್ ಆದರೆ ಏನು ಗತಿ ಎನ್ನುವ ಚಿಂತೆಗಳು ಕಾಡುತ್ತವೆ.ಭೂತಕಾಲದ ಭೂತವೋ,ಭವಿಷ್ಯದ ಭಯವೋ ,ಯಾವುದೋ ಒಂದು ,ಒಟ್ಟಿನಲ್ಲಿ ಮನುಷ್ಯನನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ.ಈ ಘಳಿಗೆಯಲ್ಲಿ ಅರ್ಥ ಪೂರ್ಣವಾಗಿ ಬದುಕುವುದನ್ನು ನಾವಿನ್ನೂ ಕಲಿತೇ ಇಲ್ಲ !ನಾವು ಬದುಕಿರುವುದೇ ಈ ಘಳಿಗೆಯಲ್ಲಿ ಅಲ್ಲವೇ?ಅದರಲ್ಲೇ ಸಂಪೂರ್ಣವಾಗಿ ,ನಿರಾಳವಾಗಿ ಬದುಕಲು ಸಾಧ್ಯವಿಲ್ಲವೇ?
ECKHART TOLLE ಯವರ ' THE POWER OF NOW ' ಮತ್ತು 'STILLNESS SPEAKS' ಎನ್ನುವ ಎರಡು ಅದ್ಭುತ ಪುಸ್ತಕಗಳು ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತವೆ.STILLNESS SPEAKS ನಿಂದ ಕೆಲವು ಆಯ್ದ ಸಾಲುಗಳು ನಿಮಗಾಗಿ;
1)The human condition: lost in thought .

2)Most people spend their entire life imprisoned with in the confines of their own thoughts. They never go beyond a narrow,mind-made,personalized sense that is conditioned by the past.
In you,as in each human being,there is a dimension of consciousness,far  deeper than thought.It is the very essence of who you are.We may call it presence or awareness.

3)Love,joy,creative ideas,and lasting inner peace cannot come in to your life except through that awareness or that unconditioned dimension of conciousness.

4)Recognize your thoughts as only thoughts.Be just a witness without any judgment or reaction.

5)Here is a new spiritual practice for you:don't take your thoughts too seriously.Just be watchful.

6)Thinking was given to us as an instrument to be used.But the instrument is using most of us!

7)Whenever you are immersed in compulsive thinking,you are avoiding the present.you don't want to be  where you are .Here ,now. 

 8)Our basic delusion is our identification with the thought.

9)Spiritual awakening is awakening from the dream of thought.

10)The realm of conciousness is much vaster than thought can grasp.when you no longer believe everything you think ,you step out of thought and see clearely that the thinker is not who you are.

ಆಲೋಚನೆಗಳ ಸಂಕೋಲೆಯಿಂದ ಬಿಡುಗಡೆ ಹೊಂದಿ ,ನಾವೆಲ್ಲಾ ನೆಮ್ಮದಿಯಿಂದ ,ನಿರಾಳವಾಗಿ ಇರುವಂತಿದ್ದರೆ ಬದುಕು ಎಷ್ಟು ಸುಂದರ !.........ಅಲ್ಲವೇ? ಇನ್ನಷ್ಟು ಆಧ್ಯಾತ್ಮಿಕ ಲೇಖನಗಳನ್ನೂ,ಮನಸ್ಸಿನ ಅದ್ಭುತ ಜಗತ್ತಿನ ಬಗ್ಗೆಯೂ ಬರೆಯಬೇಕೆಂದು ಕೊಡಿದ್ದೇನೆ.ಇಂಗ್ಲೀಷಿನಲ್ಲಿ ಇದೇ ಬ್ಲಾಗಿನಲ್ಲಿ ಬರೆದರೆ ಪರವಾಗಿಲ್ಲವೇ?ಇನ್ನೊಂದು ಬೇರೆ ಬ್ಲಾಗ್ ತೆರೆಯ ಬೇಕೇ? ಲೇಖನ ಇಷ್ಟವಾಯಿತೇ?ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.
 

Sunday, January 9, 2011

"ಹೀಗೊಂದು ಮರೆಯದ ರಾತ್ರಿ !"

1972 ರಲ್ಲಿ ಬಳ್ಳಾರಿಯಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ನಡೆದ ಘಟನೆ.ಬಳ್ಳಾರಿಯ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ನಮ್ಮ ಹಾಸ್ಟೆಲ್ ಪಕ್ಕವೇ ಇದ್ದುದರಿಂದ,ಅಪ್ಪ ಅಮ್ಮನನ್ನು ನೋಡಬೇಕು ಎನಿಸಿದಾಗ ಇದ್ದಕ್ಕಿದ್ದಂತೆ ಡಿಸೈಡ್ ಮಾಡಿ ಟ್ರೈನ್ ಹತ್ತಿ ರಾಯಚೂರಿಗೆ ಹೊರಟುಬಿಡುತ್ತಿದ್ದೆ.ಆಗೆಲ್ಲಾ ಫೋನುಗಳ ಸಂಪರ್ಕ ಕೂಡ ಇರಲಿಲ್ಲ.ಈಗ ಮೊಬೈಲ್ ಇಲ್ಲದೆ ಒಂದು ನಿಮಿಷವೂ ಇರಲಾಗುವುದಿಲ್ಲ!ವಾಪಸ್ ಬರುವಾಗ ರಾತ್ರಿ  ಹನ್ನೊಂದು ಗಂಟೆ ಸುಮಾರಿಗೆ ರಾಯಚೂರಿನಲ್ಲಿ  ದಾದರ್ -ಮದ್ರಾಸ್ ಎಕ್ಸ್ಪ್ರೆಸ್ ಟ್ರೈನ್ ಹತ್ತಿ, ಗುಂತಕಲ್ ಸ್ಟೇಷನ್ ನಲ್ಲಿ ಇಳಿದು ಬೇರೆ platform ನಲ್ಲಿ ನಿಂತಿರುತ್ತಿದ್ದ ಗುಂಟೂರ್ -ಹುಬ್ಬಳ್ಳಿ ಪ್ಯಾಸೆಂಜರ್ ಟ್ರೈನಿನಲ್ಲಿ ಯಾವುದಾದರೂ ಖಾಲಿ ಇದ್ದ ಬೋಗಿಯಲ್ಲಿ ಮೇಲಿನ ಲಗೇಜ್ ಇಡುವ ಜಾಗ ಹಿಡಿದು ಮಲಗಿಬಿಟ್ಟರೆ,ಬೆಳಗಿನ ಆರೂವರೆ ಸುಮಾರಿಗೆ ಬಳ್ಳಾರಿ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ನಲ್ಲಿ ಇಳಿದು ಐದು ನಿಮಿಷದಲ್ಲಿ ಕಾಲೇಜ್ ಹಾಸ್ಟೆಲ್ ನಲ್ಲಿ ಇರುತ್ತಿದ್ದೆ.
ಒಮ್ಮೆ ಹೀಗೇ ಡಿಸೆಂಬರಿನಲ್ಲಿ ರಾಯಚೂರಿಗೆ ಹೋಗಿ,ಟ್ರೈನಿನಲ್ಲಿ ವಾಪಸ್ ಬರುತ್ತಿದ್ದೆ.ಮಾಮೂಲಿನಂತೆ ಗುಂತಕಲ್ಲಿನಲ್ಲಿ ದಾದರ್ ಟ್ರೈನ್ ಇಳಿದು platform ಬದಲಿಸಿ ಆಗಲೇ ಬಂದು ನಿಂತಿದ್ದ ಗುಂಟೂರ್ -ಹುಬ್ಬಳ್ಳಿ ಟ್ರೈನಿನಲ್ಲಿ ಖಾಲಿ ಇದ್ದ ಬೋಗಿಯೊಂದರ ಮೇಲಿನ ಜಾಗ ಹಿಡಿದು ತಲೆಗೆ ಮಫ್ಲರ್ ಸುತ್ತಿಕೊಂಡು ಶಾಲು ಹೊದ್ದು, ಬೆಚ್ಚಗೆ ಮಲಗಿದಾಗ ರಾತ್ರಿ ಸುಮಾರು ಒಂದೂವರೆಯಾಗಿತ್ತು.
ಇದ್ದಕ್ಕಿದ್ದಂತೆ ಎಚ್ಚರವಾದಾಗ ,ಟೈಮ್ ನೋಡಿಕೊಂಡೆ.ಬೆಳಗಿನ ಜಾವ ಸುಮಾರು ಮೂರೂವರೆ ಗಂಟೆಯಾಗಿತ್ತು.ಟ್ರೈನಿನ ಗಡ,ಗಡಾ ಶಬ್ದ ಲಯ ಬದ್ಧವಾಗಿ ಕೇಳುತ್ತಿತ್ತು.ಟ್ರೈನಿನ ಮಂದ ಬೆಳಕಿನಲ್ಲಿ ನಿದ್ದೆ ಕಣ್ಣಿನಲ್ಲೇ ಪಕ್ಕಕ್ಕೆ ತಿರುಗಿ ನೋಡಿದೆ.ಹೆದರಿಕೆಯಿಂದಒಂದು ಕ್ಷಣ ಹೃದಯ ಬಾಯಿಗೆ ಬಂದಂತಾಯಿತು.ನಿದ್ದೆ ಹಾರಿ ಹೋಯಿತು.ನನ್ನ ಪಕ್ಕದಲ್ಲೇ ಕೆಳಗೆ 'ಹೀ'ಎಂದು ಹಲ್ಲು ಕಿರಿಯುತ್ತಾ ,ಬುದ್ಧಿ ವೈಕಲ್ಯಗೊಂಡಿದ್ದ  ಹೆಂಗಸೊಬ್ಬಳು  ನಿಂತಿದ್ದಳು!ಕೂದಲು ಕೆದರಿಕೊಂಡು,ಮಾಸಿ ,ಹರಿದ ಹಸಿರುಸೀರೆಯೊಂದನ್ನು ಉಟ್ಟು ,ಮೇಲೆ ಯಾರೋ ಟಿ.ಟಿ.ಉಪಯೋಗಿಸಿ ಎಸೆದ ಹಳೆಯ ಕರಿಯ ಕೋಟು ತೊಟ್ಟು,ತಲೆಗೆಲ್ಲಾ ಯಾವುದೋ ಹೂವುಗಳನ್ನು ಸಿಗಿಸಿಕೊಂಡು,ಮುಖಕ್ಕೆಲ್ಲಾ ಹರಿಶಿನ ಕುಂಕುಮ ಮೆತ್ತಿಕೊಂಡು,ವಿಚಿತ್ರವಾಗಿ ಕಾಣುತ್ತಿದ್ದ  ಬುದ್ಧಿ ವೈಕಲ್ಯಗೊಂಡ ಆ ಹುಚ್ಚು ಹೆಂಗಸು  ಮತ್ತು ನನ್ನನ್ನು ಬಿಟ್ಟು ಆ ಇಡೀ ಬೋಗಿಯಲ್ಲಿ ಮತ್ತೊಂದು ನರಪಿಳ್ಳೆ ಇರಲಿಲ್ಲ.ನಾನು ನನ್ನ ಬ್ಯಾಗ್ ಹಿಡಿದು ಮೆಲ್ಲಗೆ ಕೆಳಗಿಳಿಯಲು ತೊಡಗಿದ್ದು ನೋಡಿ ಆಕೆ ಜೋರಾಗಿ ಗಹ ಗಹಿಸಿ ನಕ್ಕಳು. ಅಪರಾತ್ರಿಯಲ್ಲಿ ಕೇಳಿದ ಆ ವಿಲಕ್ಷಣ ನಗುವಿನ ಶಬ್ಧದ ಅಲೆಗಳಿಗೆ ನನ್ನ ಮೈಯೆಲ್ಲಾ ಬೆವತು ,ಕೈ ಕಾಲು  ನಡುಗುತ್ತಿತ್ತು.ಕೆಳಗಿಳಿದು ಕೈಯಲ್ಲಿ ಬ್ಯಾಗ್ ಹಿಡಿದು ಟಾಯ್ಲೆಟ್ ಕಡೆ ಹೊರಟೆ.ಅವಳೂ  ಗಹಗಹಿಸಿ ನಗುತ್ತಾ ನನ್ನ ಹಿಂದೆಯೇ ಬಂದಳು.ಏನು ಮಾಡಲೂ ತೋಚದೆ ,ಟಾಯ್ಲೆಟ್ ಹೊಕ್ಕು ಬಾಗಿಲು ಹಾಕಿಕೊಂಡೆ.ಸುಮಾರು ಹೊತ್ತು ಜೋರಾಗಿ ಕೂಗುತ್ತಾ,ಏನೇನೋ ಮಾತುಗಳಾಡುತ್ತಾ,ಆಗಾಗ ವಿಲಕ್ಷಣವಾಗಿ ಗಹಗಹಿಸಿ ನಗುತ್ತಾ ,ಬಾಗಿಲು ಬಡಿಯುತ್ತಿದ್ದಳು.ನಿಜವಾದ ಹೆದರಿಕೆಯೆಂದರೆ ಏನೆಂದು ಆ ದಿನ ಅನುಭವವಾಗಿತ್ತು. ಬೆಳಗಿನ ಜಾವ ಐದೂವರೆ ವರೆಗೆ ಹೊರ ಬರಲು ಧೈರ್ಯ ಸಾಲದೇ ಟಾಯ್ಲೆಟ್ ನಲ್ಲೇ  ಇದ್ದು ,ಬಳ್ಳಾರಿ ರೈಲ್ವೇ ಸ್ಟೇಶನ್ ನಲ್ಲಿ ಟ್ರೈನ್ ನಿಂತಾಗ ಹೆದರುತ್ತಲೇ ಟಾಯ್ಲೆಟ್ ಬಾಗಿಲು ತೆರೆದು ಹೊರ ಬಂದೆ.ಪುಣ್ಯಕ್ಕೆ ಅವಳು ಮತ್ತೆ ಕಾಣಲಿಲ್ಲ.ರಾತ್ರಿಯ ಆ ನೀರವತೆಯಲ್ಲಿ ,ಯಾರೂ ಇಲ್ಲದ ಚಲಿಸುವ ರೈಲಿನಲ್ಲಿ ನಿದ್ದೆಯಿಂದ ಎಚ್ಚರವಾದಾಗ ಪಕ್ಕದಲ್ಲೇ ಕಂಡ ,'ಹೀ'ಎಂದು ಹಲ್ಲು ಕಿಸಿದ  ಆ ವಿಚಿತ್ರ ಮುಖವನ್ನು ನೆನಸಿಕೊಂಡರೆ  ಈಗಲೂ ನಡುಕ ಹುಟ್ಟುತ್ತದೆ. 

Saturday, December 25, 2010

" ವಿಚಿತ್ರ ......ಆದರೂ .......ನಿಜ ...! "

ಜೀವನದಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ಘಟಿಸಿಬಿಡುತ್ತವೆ.ಹಲವಾರು ವರ್ಷಗಳ ನಂತರ ಅವನ್ನು ನೆನೆಪಿಸಿಕೊಂಡಾಗ 'ಹೀಗೊಂದು ಘಟನೆ ನಡೆಯಿತೇ!'ಎಂದು ನಮಗೇ ಅಚ್ಚರಿಯಾಗುತ್ತದೆ.ನೆನ್ನೆ ನನ್ನ ಕಾರಿನ ಸರ್ವಿಸಿಂಗ್ ಮಾಡಿಸಲು ಗ್ಯಾರೇಜ್ ಗೆ ಹೋಗಿದ್ದಾಗ, ಅಲ್ಲಿ ಅಪಘಾತವಾಗಿ  ನುಜ್ಜು ಗುಜ್ಜಾಗಿ ನಿಂತಿದ್ದ ಹೊಸಾ ಕಾರೊಂದರ ಮಾಲಿಕರ ಹತ್ತಿರ ಮಾತನಾಡಿದಾಗ,ನನಗೆ ಸುಮಾರು ಇಪ್ಪತ್ತು ವರುಷಗಳಷ್ಟು ಹಳೆಯ ಘಟನೆಯೊಂದು ನೆನಪಿಗೆ ಬಂತು. ಅಂದ ಹಾಗೆ,ಆ ಕಾರಿನ ಮಾಲೀಕರು ಹೇಳಿದ್ದೇನು ಎಂಬುದನ್ನು ಕಡೆಯಲ್ಲಿ ಹೇಳುತ್ತೇನೆ.ಈಗಲೇ ಹೇಳಿಬಿಟ್ಟರೆ ,ನಾನು ಹೇಳುವ ಘಟನೆಯಲ್ಲಿ ಸ್ವಾರಸ್ಯ ಉಳಿಯುವುದಿಲ್ಲ.
ಮಾಸ್ತಿ ಕಟ್ಟೆ ಯಿಂದ ಬೆಂಗಳೂರಿಗೆ ಹೋಗುವ ಕೆಂಪು ಮೂತಿಯ 'ಲೀಲ್ಯಾಂಡ್ ' ಬಸ್ಸಿನಲ್ಲಿ ರಾತ್ರಿ ಪ್ರಯಾಣ ಮಾಡುತ್ತಿದ್ದೆ. ರಾತ್ರಿ ಸುಮಾರು ಎರಡು ಗಂಟೆಯ ಸಮಯ.ಬಸ್ ಅರಸೀಕೆರೆಯನ್ನು ದಾಟಿ ತಿಪಟೂರಿನ ಹತ್ತಿರವಿತ್ತು.ನನ್ನನ್ನು ಹೊರತುಪಡಿಸಿ ,ಬಸ್ಸಿನಲ್ಲಿ ಇದ್ದವರಿಗೆಲ್ಲಾ ವಿಪರೀತ ನಿದ್ದೆ.ಕೆಲವರಂತೂ ಬಸ್ಸಿನ ಶಬ್ಧಕ್ಕಿಂತಲೂ ಜೋರಾಗಿ ಗೊರಕೆ ಹೊಡೆಯುತ್ತಿದ್ದರು.ನಾನು ಕಂಡಕ್ಟರ್ ಕುಳಿತುಕೊಳ್ಳುವ ಕೊನೆಯ ಸೀಟಿನ ಮುಂದಿನ ಸೀಟಿನಲ್ಲಿ ಕುಳಿತು ,ನಿದ್ದೆ ಬರದೆ ಚಡಪಡಿಸುತ್ತಿದ್ದೆ.ಬಸ್ ಹೆದ್ದಾರಿಯಲ್ಲಿ ವೇಗವಾಗಿ ಸಾಗಿತ್ತು.ಕಿಟಕಿಯ ಹೊರಗೆ  ಬೆಳದಿಂಗಳಿನಲ್ಲಿ ಮರಗಳು ವೇಗವಾಗಿ ಹಿಂದಕ್ಕೆ ಓಡುತ್ತಿರುವುದನ್ನು ನೋಡುತ್ತಾ ಕುಳಿತಿದ್ದೆ.ಅಚಾನಕ್ಕಾಗಿ ನನ್ನ ದೃಷ್ಟಿ ಡ್ರೈವರ್ ಸೀಟಿನತ್ತ  ಹೋಯಿತು.ಒಂದು ಕ್ಷಣ ,ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ!!! ಡ್ರೈವರ್ ಸೀಟಿನಲ್ಲಿ ಡ್ರೈವರ್ ನಾಪತ್ತೆ!!! ಯಾವುದೋ ಹಾರರ್ ಸಿನೆಮಾದಲ್ಲಿ ಹೋಗುವ ಹಾಗೆ ಬಸ್ ತನ್ನಷ್ಟಕ್ಕೆ ತಾನೇ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿತ್ತು!!! ಇದೇನು ಕನಸೋ ಎಂದು ಮೈ ಚಿವುಟಿ ನೋಡಿಕೊಂಡೆ.ಇಲ್ಲಾ ,ನಾನು ಸಂಪೂರ್ಣ ಎಚ್ಚರವಾಗಿದ್ದೆ !!! ' ಅರೆ ಇದು ಹೇಗೆ ಸಾಧ್ಯ !' ಎಂದುಕೊಂಡು ನೋಡುತ್ತಿದ್ದಂತೆ ಬಸ್ ರಸ್ತೆಯ  ಪಕ್ಕದಲ್ಲಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆಯಲು ಮುನ್ನುಗ್ಗುತ್ತಿತ್ತು !!! ನಮ್ಮೆಲ್ಲರ ಕಥೆ ಮುಗಿದೇ ಹೋಯಿತು ಎಂದುಕೊಳ್ಳುತ್ತಿದ್ದಾಗ , ಪವಾಡವೆಂಬಂತೆ  ಡ್ರೈವರ್ ತನ್ನ ಸೀಟಿನಲ್ಲಿ ಮತ್ತೆ  ಕಾಣಿಸಿಕೊಂಡು ಬಸ್ಸನ್ನು ಮರದಿಂದ ಕೂದಲಿನಷ್ಟು ಅಂತರದಿಂದ ತಪ್ಪಿಸಿ , ವಾಪಸ್ ಹೆದ್ದಾರಿಗೆ ತಂದು ,ಏನೂ ಆಗಿಯೇ ಇಲ್ಲವೆಂಬಂತೆ ಮತ್ತೆ  ಓಡಿಸ ತೊಡಗಿದ !!! ನಡೆದದ್ದೇನೆಂದು ಕ್ಷಣ ಮಾತ್ರದಲ್ಲಿ ಅರ್ಥವಾಗಿತ್ತು. ಬಸ್  ಓಡಿಸುವಾಗ,ಡ್ರೈವರ್ ಗೆ ನಿದ್ದೆ ಬಂದು ,ತನ್ನ ಸೀಟು ಮತ್ತು ಸ್ಟೀಯರಿಂಗ್ ವೀಲ್ ( steering wheel) ಮಧ್ಯೆ ಇದ್ದ ಜಾಗದಲ್ಲಿ  ಜಾರಿ ಹೋಗಿದ್ದ. ಕ್ಷಣಾರ್ಧ ದಲ್ಲಿ ನಡೆದು ಹೋದ ಘಟನೆಯಿಂದ ಆ  ಡಿಸೆಂಬರಿನ ಚಳಿಯಲ್ಲೂ  ನಖ ಶಿಖಾಂತ ಬೆವತು ಹೋಗಿದ್ದೆ!!!
ಮೊದಲು ಕಂಡಕ್ಟರ್ ನನ್ನು ಎಬ್ಬಿಸಿ,ನಡೆದ ಘಟನೆಯನ್ನು ವಿವರಿಸಿದೆ.ಅದಕ್ಕವನು ,ನಿದ್ದೆ ಕಣ್ಣಿನಲ್ಲೇ 'ಅಯ್ಯೋ,ನೀವೂ ಸುಮ್ಮನೆ ಮಲಗಿಕೊಳ್ಳಿ  ಸಾರ್.......,ಹಣೇಲಿ ಸಾವು ಬರೆದಿದ್ದರೆ ಯಾರೇನು ಮಾಡೋಕಾಯ್ತದೆ...?'ಎಂದು ವೇದಾಂತದ ಮಾತಾಡಿ, ಮತ್ತೆ ನಿದ್ದೆಗೆ ಜಾರಿದ! ' ಇನ್ನು ಇವನಿಗೆ  ಹೇಳಿ ಪ್ರಯೋಜನವಿಲ್ಲ' ಎನಿಸಿ ಬಸ್ಸಿನಲ್ಲಿದ್ದವರನ್ನೆಲ್ಲಾ ಎಬ್ಬಿಸಿ ,ನಡೆದ ಘಟನೆ ಹೇಳಿದೆ.ಎಲ್ಲರೂ ಸೇರಿ ಒತ್ತಾಯ ಮಾಡಿ ಡ್ರೈವರ್ ನನ್ನು ಬಸ್ ನಿಲ್ಲಿಸುವಂತೆ ಮಾಡಿದೆವು.ತನಗೆ ನಿದ್ದೆ ಬಂದುದಾಗಿಯೂ ,ಬಸ್ಸು ಇನ್ನೇನು ಮರಕ್ಕೆ ಡಿಕ್ಕಿ ಹೊಡಿಯುತ್ತೆ ಎನ್ನುವಾಗ ಎಚ್ಚರವಾಗಿ ಅಪಘಾತವನ್ನು ತಪ್ಪಿಸಿದ್ದಾಗಿಯೂ ಡ್ರೈವರ್ ಒಪ್ಪಿಕೊಂಡ.ಬಸ್ಸನ್ನು ಸೈಡಿನಲ್ಲಿ ನಿಲ್ಲಿಸಿ ,ಒಂದು ತಾಸು ನಿದ್ದೆ ಮಾಡಿ , ತಣ್ಣೀರಿನಲ್ಲಿ ಮುಖ ತೊಳೆದು ,ಅಲ್ಲೇ ಇದ್ದ ಹೋಟೆಲಿನಲ್ಲಿ ಬಿಸಿ,ಬಿಸಿ ಟೀ ಕುಡಿದ ನಂತರ ನಮ್ಮ ಡ್ರೈವರ್  ಪೂರ್ಣ ಎಚ್ಚರದಿಂದ ಗಾಡಿ ಓಡಿಸಿ ಬೆಳಿಗ್ಗೆ ಏಳು ಗಂಟೆಯ ವೇಳೆಗೆ ಬೆಂಗಳೂರನ್ನು ತಲುಪಿದ.  
ಅಂತೂ ....,ಈ ವಿಚಿತ್ರ ಘಟನೆ ಸುಖಾಂತ್ಯ ಕಂಡಿತ್ತು.ಡ್ರೈವರ್ ...,ಒಂದೇ ಒಂದು ಕ್ಷಣ  ಎಚ್ಚರ  ತಪ್ಪಿದರೂ ಏನು ಅನಾಹುತವಾಗುತ್ತಿತ್ತೋ!  ನೆನ್ನೆ ಬೆಳಿಗ್ಗೆ ನಾನು ಗ್ಯಾರೇಜ್ ನಲ್ಲಿ ಕಂಡ ನುಜ್ಜು ಗುಜ್ಜಾದ ಹೊಸ ಕಾರಿನ ಮಾಲಿಕರೂ ಕೂಡ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕಾರನ್ನು ಓಡಿಸುವಾಗ ಒಂದೇ ಒಂದು ಕ್ಷಣ ನಿದ್ದೆಗೆ ಜಾರಿ ,ರಸ್ತೆಯ ಬಲ ಭಾಗದಲ್ಲಿದ್ದ ಹೊಂಡದಲ್ಲಿ ಬಿದ್ದಿದ್ದರು.ಪುಣ್ಯಕ್ಕೆ ಕಾರಿನಲ್ಲಿದ್ದವರಿಗೆ ಯಾವುದೇ ಬಲವಾದ ಪೆಟ್ಟಾಗಿರಲಿಲ್ಲ! ' ಏನಾಯ್ತು  ಸಾರ್........?' ಎಂದು ಕೇಳಿದ್ದಕ್ಕೆ ಅವರು ಹೇಳಿದ್ದು 'ನಿದ್ದೆ.......ಬಿದ್ದೆ .....! ಅಷ್ಟೇ !! '.

Saturday, December 11, 2010

"ಲೈಫು ಇಷ್ಟೇನೇ !" (ವೈದ್ಯನೊಬ್ಬನ ಮರೆಯದ ನೆನಪುಗಳು -ಭಾಗ ೨ )

ಸುಮಾರು ಮೂವತ್ತು ವರ್ಷಗಳಷ್ಟು ಹಳೆಯದಾದ ,ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಹೋಗಿರುವ ಸಿರುಗುಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗಿನ ಮತ್ತೊಂದು ನೆನಪನ್ನು ನಿಮ್ಮೊಡನೆ ಹಂಚಿಕೊಳ್ಳಲೇ ಬೇಕು. ಒಂದು ಸಂಜೆ ಸುಮಾರು ಆರು ಗಂಟೆಯ ಸಮಯ.ಕಾರ್ಖಾನೆಯಿಂದ ಊರ ಹೊರಗೆ ಹೋಗುವ ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದೆ.ಸ್ವಲ್ಪ ದೂರ ಹೋದ ನಂತರ ರಸ್ತೆಯ ಪಕ್ಕ, ಸಕ್ಕರೆ ಮೂಟೆ ಹೊರುವ ಹಮಾಲಿಗಳ ಗುಡಿಸಲುಗಳು ಇದ್ದವು. ಅವರೆಲ್ಲ ರಸ್ತೆಯ ಪಕ್ಕ ಕುಳಿತು ಹರಟೆ ಹೊಡೆಯುವುದು ಮಾಮೂಲಾಗಿತ್ತು.ನಾನು ನನ್ನ ಪಾಡಿಗೆ ವಾಕಿಂಗ್ ಮುಂದುವರಿಸಿದೆ.ಇನ್ನಷ್ಟು ದೂರ ಹೋದಾಗ ,ರಾಮಯ್ಯ ಭೀಮಯ್ಯ ಎಂಬ ಸುಮಾರು ಇಪ್ಪತ್ತು  ವರುಷ ವಯಸ್ಸಿನ ನನಗೆ ಪರಿಚಯದ,ಕಟ್ಟು ಮಸ್ತಾದ ಸುಂದರ  ಶರೀರವಿದ್ದ ಹಮಾಲಿಗಳಿಬ್ಬರು ರಸ್ತೆಯ ಪಕ್ಕ ಕುಳಿತಿದ್ದರು.ಇಬ್ಬರ ಮುಂದೆಯೂ ನೊರೆ ಬರುತ್ತಿದ್ದ ಸಾರಾಯಿ ಬಾಟಲಿಗಳಿದ್ದವು.ನನ್ನನ್ನು ಕಂಡ ತಕ್ಷಣ ಇಬ್ಬರೂ ಬಾಟಲಿಗಳನ್ನು ತಮ್ಮ ಹಿಂದೆ ಬಚ್ಚಿಟ್ಟುಕೊಂಡು ,ನನ್ನನ್ನು ನೋಡಿ ಹುಳ್ಳಗೆ ನಕ್ಕು, ತಪ್ಪುಮಾಡಿದವರಂತೆ ತಲೆ ಕೆರೆದುಕೊಂಡರು."ಅಲ್ಲಾ ಕಣ್ರಪ್ಪಾ ,ಹಾಳೂ ಮೂಳೂ ಕುಡಿದು ಯಾಕ್ರೋ ಆರೋಗ್ಯಹಾಳುಮಾಡಿಕೊಳ್ಳುತ್ತೀರಿ"
ಎಂದೆ."ಮುಂಜಾನೆಯಿಂದ ಸಂಜಿ ಮಟ,ಮೂಟೆ ಹೊರುತ್ತೀವಲ್ರೀ ,ಮೈ ಕೈ ಬಾಳಾ ನೋಯ್ತವ್ರೀ,ಕುಡೀದಿದ್ರೆ ನಿದ್ರಿ ಬರಂಗಿಲ್ರೀ"ಎಂದುನೆವ ಹೇಳಿದರು.ನಾನು ಮಾತು ಮುಂದುವರಿಸಿ ಪ್ರಯೋಜನವಿಲ್ಲವೆಂದು ಅರಿತು ನನ್ನ ವಾಕಿಂಗ್ ಮುಂದುವರಿಸಿದೆ.ಮೂಟೆಗಳನ್ನುಹೊತ್ತು ,ಒಳ್ಳೇ 'ಬಾಡಿ ಬಿಲ್ಡರ್ಸ್'ತರಹ ಕಟ್ಟುಮಸ್ತಾಗಿ ಹುರಿಗೊಂಡ
ಪ್ರಕೃತಿದತ್ತವಾಗಿ ಬಂದ ಇಂತಹ ಸುಂದರ ಶರೀರಗಳನ್ನು, ಕುಡಿದು ಹಾಳುಮಾಡಿಕೊಳ್ಳುತ್ತಾರಲ್ಲಾ ಎಂದು ಬೇಸರವಾಯಿತು.ಸುಮಾರು ಒಂದು ಕಿಲೋಮೀಟರಿನಷ್ಟು ವಾಕಿಂಗ್ ಮುಂದುವರಿಸಿ ಹಿಂದಿರುಗಿದಾಗ ,ರಸ್ತೆಯ ಬದಿ ಜನಜಂಗುಳಿ ಸೇರಿತ್ತು.ಕೂಗಾಟ,ಚೀರಾಟ ,ಅಳು, ಮುಗಿಲು ಮುಟ್ಟಿತ್ತು.ಸ್ವಲ್ಪ ಸಮಯದ ಹಿಂದೆ ,
ನೊರೆ ಬರುತ್ತಿದ್ದ ಸಾರಾಯಿ ಬಾಟಲಿಗಳನ್ನು ಮುಂದಿಟ್ಟು ಕೂತಿದ್ದ ,ಸುಂದರ ಕಾಯಗಳ ತರುಣರಿಬ್ಬರೂ ನೆಲಕ್ಕೆ ಮೈ ಚೆಲ್ಲಿದ್ದರು.ಇಬ್ಬರ ಬಾಯಲ್ಲೂ ನೊರೆ ಬರುತ್ತಿತ್ತು.ಅವರ ಪಕ್ಕದಲ್ಲಿ ಬಾಟಲಿಗಳು ಅನಾಥರಂತೆ ಬಿದ್ದುಕೊಂಡಿದ್ದವು. ಸೂರ್ಯ ಅಸ್ತಮಿಸಿದ್ದ .ಭಾರವಾದ ಹೃದಯ ಹೊತ್ತು , ನಾನು ಮನೆಯಕಡೆ ನಡೆದೆ.

Sunday, November 28, 2010

"ವೈದ್ಯನೊಬ್ಬನ ಮರೆಯದ ನೆನಪುಗಳು"-ಭಾಗ೧

ಇದನ್ನೆಲ್ಲಾ ಹೇಗೆ ಬರೆಯುವುದೋ ಗೊತ್ತಿಲ್ಲ .ಆದರೆ ಬರೆಯದೆ ಇರುವುದೂ ಸಾಧ್ಯವಾಗುತ್ತಿಲ್ಲ.ಇಂತಹ ಹಲವಾರು ಘಟನೆಗಳು ನೆನಪಿನ ಹಗೇವಿನಲ್ಲಿ ಆಳವಾಗಿ ಬೇರು ಬಿಟ್ಟಿವೆ.ಸುಮಾರು ಇಪ್ಪತೆಂಟು ವರ್ಷಗಳ ಹಿಂದಿನ ಘಟನೆ .ಆಗ ನಾನು ಸಿರುಗುಪ್ಪದಿಂದ ಎಂಟು ಕಿಲೋಮೀಟರ್ ದೂರದ ದೇಶನೂರು ಎಂಬ ಹಳ್ಳಿಯ ಸನಿಹವಿದ್ದ ಸಕ್ಕರೆ ಕಾರ್ಖಾನೆಯಲ್ಲಿ  ವೈದ್ಯನಾಗಿದ್ದೆ.ಆಗ ಆಸ್ಪತ್ರೆಯೆಂದರೆ ಕಾರ್ಖಾನೆಯಲ್ಲೇ ಸಣ್ಣದೊಂದು ಶೆಡ್ ಇತ್ತು.ಆಸ್ಪತ್ರೆಯ ಸಿಬ್ಬಂಧಿಗಳೆಂದರೆ ನಾನು ಮತ್ತು ಔಷಧಿ ಕೊಡುವ ಒಬ್ಬ ಕಾಂಪೌಂಡರ್ ಇಬ್ಬರೇ.ಸಣ್ಣ ,ಪುಟ್ಟ ಖಾಯಿಲೆಗಳಿಗೆ ಔಷಧಿ ಮತ್ತು ತುರ್ತು ಚಿಕಿತ್ಸೆ ಮಾತ್ರ ಅಲ್ಲಿ ಲಭ್ಯವಿತ್ತು.ಹೆಚ್ಚಿನ ಚಿಕಿತ್ಸೆಗೆ ಕಾರ್ಮಿಕರು ಅವರ ಸ್ವಂತ ಖರ್ಚಿನಲ್ಲಿ ಎಂಟು ಕಿಲೋಮೀಟರ್ ದೂರವಿದ್ದ ಸಿರುಗುಪ್ಪಕ್ಕೋ ,ಐವತ್ತು ಕಿಲೋಮೀಟರ್ ದೂರದ ಬಳ್ಳಾರಿಗೋ ಹೋಗಬೇಕಿತ್ತು.
ಅಸಾಧ್ಯ ಬಿಸಿಲಿನ ಪ್ರದೇಶ.ಶೀಟಿನ ಮನೆ.ಸಂಜೆಯ ವೇಳೆಗೆ ,ಕೆಂಡ ಕಾದಂತೆ ಕಾಯುತ್ತಿತ್ತು.ರಾತ್ರಿ ಸ್ವಲ್ಪ ತಂಪಾಗುತ್ತಿತ್ತು. ಆದರೂ ವಿಪರೀತ ಸೆಖೆಯಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ.ಚೊಚ್ಚಲ ಹೆರಿಗೆಗೆಂದು ತವರಿಗೆ ಹೋಗಿದ್ದ ಹೆಂಡತಿಯಿಂದ ಪತ್ರ ಬಂದು ವಾರವಾಗಿತ್ತು.ಆಗೆಲ್ಲಾ ,ಈಗಿನಂತೆ ಫೋನಿನ ಸೌಕರ್ಯವಿರಲಿಲ್ಲ.ಮೊದಲೇ ಸೆಖೆ.ಮೇಲೆ ಹೆಂಡತಿ ಹೇಗಿದ್ದಾಳೋ ಎನ್ನುವ ಆತಂಕ. ರಾತ್ರಿ ಎರಡಾದರೂ  ನಿದ್ರೆಯ ಸುಳಿವಿಲ್ಲ.ಆಗ ಜೋರಾಗಿ ಬಾಗಿಲು ಬಡಿಯುವ ಶಬ್ದ ,ಜೊತೆಗೇ ಯಾರೋ ಆತಂಕದ ದನಿಯಲ್ಲಿ 'ಸಾರ್,ಸಾರ್'ಎಂದು ಕೂಗುವ ಶಬ್ದ.ಹೋಗಿ ಬಾಗಿಲು ತೆರೆದೆ.ಕಾರ್ಖಾನೆಯ ರಸ್ತೆಯ ಪಕ್ಕದಲ್ಲೇ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ, ಸಕ್ಕರೆ ಮೂಟೆಗಳನ್ನು ಲಾರಿಗಳಿಗೆ ತುಂಬುವ ಹಮಾಲಿಗಳ ಸಣ್ಣ ತಂಡವೊಂದು ಲಾಟೀನುಗಳನ್ನು ಹಿಡಿದು ನಿಂತಿತ್ತು.'ಏನ್ರಪ್ಪಾ?.....ಏನಾಯಿತು...?'ಎಂದೆ. ಅವರಲ್ಲೊಬ್ಬ ಮುಖಂಡ ನಂತೆ ಇದ್ದವನು 'ಸಾರ್....,ಗಡಾನೆ ಬರ್ರಿ ಸಾರ್ ...,ಹುಲಿಗೆಪ್ಪನ ಹೆಂಡತಿಗೆ ಹೆರಿಗೆ ತ್ರಾಸಾಗಿದೆ'ಎಂದ. ಏನು ,ಎತ್ತ ಎಂದು ಅರ್ಥವಾಗದಿದ್ದರೂ 'ಸರಿ ನಡೀರಿ 'ಎಂದು ಮನೆಯ ಬಾಗಿಲಿಗೆ ಬೀಗ ಹಾಕಿ ಔಷಧಿಗಳಿದ್ದ ಸಣ್ಣ ಪೆಟ್ಟಿಗೆಯೊಂದನ್ನು ಹಿಡಿದು ಅವರ ಜೊತೆ ಸುಮಾರು ಅರ್ಧ ಕಿಲೋಮೀಟರ್ ದೂರವಿದ್ದ ಅವರ ಗುಡಿಸಿಲಿನ ಕಡೆ ನಡೆದೆ.ಸಿರಗುಪ್ಪದಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದ್ದರೂ ಹೆರಿಗೆಗೆ ಅಲ್ಲೇಕೆ ಕರೆದುಕೊಂಡು ಹೋಗಲಿಲ್ಲವೆಂದು ಕೇಳಿದೆ.'ಅಲ್ಲೂ ರೊಕ್ಕ ಇಲ್ಲದೆ ಏನೂ ಮಾಡಂಗಿಲ್ರೀ  ಸಾಹೇಬ್ರೇ.ನಾವು ಬಡವರು ರೊಕ್ಕ ಎಲ್ಲಿ ತರೋಣ್ ರೀ' ಎಂದ ಅವರಲ್ಲೊಬ್ಬ .ನಮ್ಮ ಅವ್ಯವಸ್ಥೆಯನ್ನು ಹಳಿಯುತ್ತಾ ,ಆ ನಡುರಾತ್ರಿಯ ಕತ್ತಲೆಯಲ್ಲಿ ,ಲಾಟೀನುಗಳ ಮಂದ ಬೆಳಕಿನಲ್ಲಿ ಅವರ ಗುಡಿಸಳುಗಳತ್ತ ಲಗುಬಗೆಯಿಂದ ಹೆಜ್ಜೆ ಹಾಕಿದೆ.  
ಅಲ್ಲಲ್ಲೇ ಹರಿಯುತ್ತಿದ್ದ ಕೊಚ್ಚೆಯ ನೀರನ್ನು ದಾಟಿಕೊಂಡು ,ತಮ್ಮ ಸರಹದ್ದಿಗೆ ಆಗಂತುಕನೊಬ್ಬನ ಆಗಮನ ವಾಗುತ್ತಿದ್ದಂತೆ ಜೋರಾಗಿ ಬೊಗಳುತ್ತಿದ್ದ ಹತ್ತಾರು ನಾಯಿಗಳನ್ನು ಲೆಕ್ಕಿಸದೆ ಅವರು ಕರೆದುಕೊಂಡು ಹೋದ ಗುಡಿಸಲೊಂದರೊಳಗೆ ಹೋದೆ.ಅಲ್ಲಿ ಕಂಡ ದೃಶ್ಯ   ಎಂತಹ ಗಂಡೆದೆ ಉಳ್ಳವರೂ ಹೌಹಾರುವಂತಿತ್ತು .ಸಗಣಿಯಿಂದ ಸಾರಿಸಿದ ನೆಲದ ಮೇಲೆ ಹಾಸಿದ್ದ ಕೌದಿಯೊಂದರ ಮೇಲೆ ಗರ್ಭಿಣಿ ಹೆಂಗಸೊಬ್ಬಳು 'ಯಪ್ಪಾ ,ನನ್ ಕೈಯಾಗೆ ಆಗಾಕಿಲ್ಲೋ ....ನಾನ್  ಸಾಯ್ತೀನ್ರೋ .....ಯಪ್ಪಾ'ಎಂದು ಜೋರಾಗಿ ನರಳುತ್ತಿದಳು.ಅವಳ ಪಕ್ಕದಲ್ಲಿದ್ದ ಮುದುಕಿಯೊಬ್ಬಳು 'ಎಲ್ಲಾ ಸರಿ ಹೋಕ್ಕತೆ ಸುಮ್ಕಿರು, ದಾಗ್ದಾರ್ ಸಾಬ್ ಬಂದಾನೆ 'ಎಂದು ಸಮಾಧಾನ ಮಾಡುತ್ತಿದ್ದಳು.ಅವರು ಕೊಟ್ಟ ಸೋಪು ,ಬಿಸಿನೀರಿನಿಂದ ಕೈ ತೊಳೆದೆ.ಅದೊಂದು 'breach delivery' ಆಗಿತ್ತು .ಮಾಮೂಲಾಗಿ ಮಗುವಿನ ತಲೆ ಮೊದಲು ಹೊರಗೆ ಬರುತ್ತದೆ. 'ಬ್ರೀಚ್ ' ಡೆಲಿವರಿಯಲ್ಲಿ ,ಮಗುವಿನ ಕಾಲುಗಳು ಹೊರಗೆ ಬರುತ್ತವೆ. ಈ ಹೆಂಗಸಿನಲ್ಲಿ ಮಗುವಿನ ಕಾಲುಗಳು ಹೊರಬಂದು ತಲೆಯ ಭಾಗ ಹೊರಬರದೆ ಸಿಕ್ಕಿಕೊಂಡಾಗ ಏನು ಮಾಡಲು ತೋಚದೆ, ನನ್ನನ್ನು ಕರೆಸಿದ್ದರು.ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯಗಳಿದ್ದೂ ,ಸಹಾಯಕ್ಕೆ ದಾದಿಯರಿದ್ದೂ, ನಡೆಸುವ ಹೆರಿಗೆಗಳಲ್ಲೇ ನೂರೆಂಟು ತೊಂದರೆಗಳು.ಅಂಥದ್ದರಲ್ಲಿ ಆ ಗುಡಿಸಲಿನಲ್ಲಿ ಸಗಣಿಸಾರಿಸಿದ ನೆಲದ ಮೇಲೆ ಕುಳಿತು  ,ಲಾಟೀನಿನ ಮಂದ ಬೆಳಕಿನಲ್ಲಿ,ಅದೂ 'ಬ್ರೀಚ್ ಡೆಲಿವರಿ'ಮಾಡಬೇಕಾದಾಗ , ಹೆರಿಗೆಗಳನ್ನು ಮಾಡಿ  ಅನುಭವವಿರದ ನನ್ನ ಸ್ಥಿತಿ ಹೇಗಿದ್ದಿರಬಹುದೋ ನೀವೇ ಊಹಿಸಿಕೊಳ್ಳಿ. ದೇವರ ದಯೆಯಿಂದ ಹೆರಿಗೆ ನಾನು ನೆನೆಸಿದಷ್ಟು ಕಷ್ಟವಾಗಲಿಲ್ಲ.ಹೆಣ್ಣು ಮಗುವಿನ ಜನನವಾಯಿತು.ಮಗುವಿನ ಅಳು ಕೇಳುತ್ತಿದ್ದಂತೆ ಅಲ್ಲಿದ್ದವರ ಮುಖಗಳಲ್ಲಿ ಸಂತಸದ ನಗು ಮೂಡಿತು.
ಇದಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ನಾನು ರಾಯಚೂರಿನ ಶಕ್ತಿನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ ,ಸಿರುಗುಪ್ಪದಿಂದ ನಾನು ಹೆರಿಗೆ ಮಾಡಿದ ಹೆಂಗಸು ತನ್ನ ಪತಿಮತ್ತು ಮಗಳೊಂದಿಗೆ ನನ್ನನ್ನು ಹುಡುಕಿಕೊಂಡು ಬಂದು,ನಾನೆಷ್ಟೇ ಬೇಡವೆಂದರೂ ಮಗಳಿಂದ ನನ್ನ ಕಾಲಿಗೆ ನಮಸ್ಕಾರ ಮಾಡಿಸಿ, ತನ್ನ ಮಗಳ ಲಗ್ನಪತ್ರಿಕೆ ಕೊಟ್ಟು ಹೋದಳು.ಎಷ್ಟೋ ಸಲ ಜನಗಳ ವರ್ತನೆಯಿಂದ ಬೇಸತ್ತ ಮನಸ್ಸಿಗೆ ,ಆ ಕ್ಷಣದಲ್ಲಿ ವೈದ್ಯನಾದದ್ದು  ಸಾರ್ಥಕವೆನಿಸಿತ್ತು.ಮನದಲ್ಲಿ ಒಂದು ಅಲೌಕಿಕ ಸಂತಸ ಮನೆ ಮಾಡಿತ್ತು.       

Wednesday, November 24, 2010

"ಯಾರೋ ಹೇಳಿದರು ಅಂತ ......!"(ಡಯಾಬಿಟಿಸ್ ಭಾಗ -2)

ನಾನು  ಇನ್ನೇನು ಆಸ್ಪತ್ರೆಗೆ ಹೊರಡಬೇಕು ಎನ್ನುವಾಗ,ಎದುರು ಮನೆಯ ಸಂದೀಪ ಬಂದ.'ಸರ್ ...,ಊರಿಂದ ನಮ್ಮ ಅಂಕಲ್ ಬಂದಿದ್ದಾರೆ.ಆಪರೇಶನ್ ಆಗಿದೆ......,ಡ್ರೆಸ್ಸಿಂಗ್ ಮಾಡಬೇಕು.ಆಸ್ಪತ್ರೆಗೆ ಕರೆದುಕೊಂಡು ಬರಲಾ?' ಎಂದ.ನಾನು ಹೊರಡುವ ಆತುರದಲ್ಲಿ  ಇದ್ದುದರಿಂದ ಹೆಚ್ಚು ವಿಚಾರಿಸುವ ಗೋಜಿಗೆ ಹೋಗಲಿಲ್ಲ.ಮಾಮೂಲಾಗಿ 'ಅಪೆಂಡಿಕ್ಸ್' ,ಅಥವಾ 'ಹರ್ನಿಯಾ'ಆಪರೇಶನ್ ಆದವರು ಡ್ರೆಸ್ಸಿಂಗ್ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬರುತ್ತಿದುದುಂಟು.ನಾನು ಅದೇ ರೀತಿ ಯಾರೋ ಡ್ರೆಸ್ಸಿಂಗ್ ಮಾಡಿಸಿಕೊಳ್ಳಲು ಬರುತ್ತಿರಬೇಕೆಂದುಕೊಂಡಿದ್ದೆ. ಆದರೆ ,ಸಂದೀಪನ ಜೊತೆ ಸುಮಾರು ಇಪ್ಪತೆಂಟು ವಯಸ್ಸಿನ ಯುವಕನೊಬ್ಬ ಒಂದು ಕಾಲಿಲ್ಲದೇ ,ಊರುಗೋಲಿನ ಸಹಾಯದಿಂದ ,ಕುಂಟುತ್ತಾ ಆಸ್ಪತ್ರೆಗೆ ಬಂದಿದ್ದು ನೋಡಿ ಗಾಭರಿಯಾಯಿತು.ಎಡಗಾಲಿನ ತೊಡೆಯ ಕೆಳಗಿನ ಭಾಗ ಇರಲಿಲ್ಲ.ತೊಡೆಯ ಸುತ್ತಾ  ಬ್ಯಾಂಡೇಜ್  ಇತ್ತು.ಯಾವುದಾದರೂ ಅಪಘಾತವಾಯಿತೇನೋ ಎಂದುಕೊಂಡೆ.ಡ್ರೆಸ್ಸಿಂಗ್ ಮಾಡುತ್ತಾ 'ಏನಾಯಿತು'ಎಂದು ಕೇಳಿದೆ.ಅದಕ್ಕವನು 'ಸುಮಾರು  ಐದು ವರ್ಷಗಳಿಂದ ಡಯಾಬಿಟಿಸ್ ಇತ್ತುಸರ್.ಮಾತ್ರೆ ತೆಗೆದುಕೊಳ್ಳುವಾಗ ಶುಗರ್  ಕಂಟ್ರೋಲ್ ನಲ್ಲಿತ್ತು.ಜೀವನ ಪೂರ್ತಿ ಇದೆ ರೀತಿ ಮಾತ್ರೆ ತೆಗೆದುಕೊಳ್ಳಬೇಕೆಂಬ ಬೇಸರವೂ ಇತ್ತು.ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಕಿಡ್ನಿ ತೊಂದರೆ ಬರುತ್ತೆ ಅಂತ ಯಾರೋ ಹೆದರಿಸಿದರು.  ಒಂದು ಪುಡಿ ಕೊಟ್ಟು,ದಿನಾ ಬೆಳಿಗ್ಗೆ ಪುಡಿ ತೆಗೆದುಕೊಂಡು ,ಸಾಧ್ಯವಾದಷ್ಟು ಎಳನೀರು ಕುಡಿಯಬೇಕೆಂದರು.ನಮ್ಮದೇ ತೆಂಗಿನ ತೋಟವಿದ್ದುದರಿಂದ ದಿನಕ್ಕೆ ಆರೇಳು ,ಎಳನೀರು ಕುಡಿಯುತ್ತಿದ್ದೆ.ಮಾತ್ರೆ ಸಂಪೂರ್ಣ ನಿಲ್ಲಿಸಿದೆ.ಕಾಲಿಗೆ ಒಂದು ಸಣ್ಣ ಗಾಯವಾಗಿ ಎಡಗಾಲಿನ ಮಂಡಿಯ ಕೆಳಗಿನ ಭಾಗ  ಪೂರ್ತಿ ಕಪ್ಪಾಯಿತು.ಕಾಲು 'gangrene' ಆಗಿದೆಯೆಂದು  ಮಂಡಿಯ ಮೇಲೆ ಕತ್ತರಿಸಿದರು. ನೋಡಿ ಸಾರ್............,ಯಾರೋ ಹೇಳಿದ್ದು ಮಾಡಲು ಹೋಗಿ ಒಂದು ಕಾಲನ್ನು ಕಳೆದುಕೊಂಡೆ 'ಎಂದು ನಿಟ್ಟುಸಿರು ಬಿಟ್ಟ.ಅವನನ್ನು ನೋಡಿ'ಯಾರದೋ ಮಾತು ಕೇಳಿಕೊಂಡು ಈ ಸ್ಥಿತಿ ತಂದುಕೊಂಡನಲ್ಲ ಪಾಪ' ಎನಿಸಿತು.ಅವತ್ತೆಲ್ಲ ಒಂದು ರೀತಿಯ ಬೇಸರ ಮನಸ್ಸನ್ನು ಆವರಿಸಿಕೊಂಡಿತ್ತು. ಕೆಲವರ ಜೀವನದಲ್ಲಿ ಹೀಗೆಲ್ಲಾ ಏಕಾಗುತ್ತದೆ ಎಂದು ಒಂದು ರೀತಿಯ ಜಿಜ್ಞಾಸೆ ಕಾಡಿತ್ತು.

Monday, November 15, 2010

"ಕಂಬಳಿ ಹುಳುವಿನಂತಹ...ಮನವೇ !"

ದುರ್ಗುಣಗಳ ಮೊಟ್ಟೆಯೊಡೆದು 
ಮೈಯೆಲ್ಲಾ ಮುಳ್ಳಾಗಿ 
ಎಲ್ಲರನ್ನೂ ಚುಚ್ಚುವ 
ಎಲ್ಲರಲ್ಲೂ ತಪ್ಪುಹುಡುಕುವ
ಸಿಕ್ಕಸಿಕ್ಕಲ್ಲಿ  ಮೇಯುವ ,
ಇಲ್ಲೇ ನರಳುವ ....,
ಇಲ್ಲೇ ಹೊರಳುವ ...,
ಈ ಜಗದ ಜಂಜಾಟಗಳ
ಹೊಲಸಲ್ಲೇ ತೆವಳುವ,
ಕಂಬಳಿಹುಳದಂಥ  ಮನವೇ !
ನೀ ,ಧ್ಯಾನದ,ಮೌನದ 
ಕೋಶದೊಳಹೊಕ್ಕು,
ಸುಂದರ ಪತಂಗವಾಗಿ 
ಮಾರ್ಪಟ್ಟು ............!
ಆನಂದದಿ ಹಾರಾಡು!
ಎಲ್ಲರ ಮನದ .......,
ಪ್ರೀತಿಯ ಹೂಗಳ ....,
ಮಕರಂದ ಹುಡುಕುವ
ಸುಂದರ ಚಿಟ್ಟೆಯಾಗು !
ಸಚ್ಚಿದಾನಂದರೂಪವಾಗು!
ನಿನ್ನ.. ನಿಜಸ್ವರೂಪವೇ 
..............ನೀನಾಗು!

Saturday, November 13, 2010

"ಡಯಾಬಿಟಿಸ್."..........ಭಾಗ ಒಂದು (ಮರೆಯಲಾರದ ಅನುಭವಗಳು)

ನಾಳೆ ನವೆಂಬರ್ 14 ನೇ ತಾರೀಕು ವಿಶ್ವ ಮಧುಮೇಹ ದಿನಾಚರಣೆ (World Diabetes Day ). ನಮ್ಮ ದೇಶ ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು ನಾಲಕ್ಕುಕೋಟಿ ಯಷ್ಟು ಮಧುಮೇಹಿಗಳನ್ನು ಹೊಂದಿ ಮೊದಲ ಸ್ಥಾನದಲ್ಲಿದೆ. ಇದಕ್ಕೆಲ್ಲಾ ನಮ್ಮ ಶಿಸ್ತಿಲ್ಲದ ಅನಾರೋಗ್ಯಕರ ಜೀವನ ಶೈಲಿ, ಹೊತ್ತು ಗೊತ್ತಿಲ್ಲದೇ ಬರೀ ಬಾಯಿ ಚಪಲಕ್ಕಾಗಿ ತಿನ್ನುವುದೇ; ಒಂದು ಗೀಳಾಗಿರುವುದು ,ಹೆಚ್ಚುತ್ತಿರುವ ಮಾನಸಿಕ ಒತ್ತಡದಿಂದ ನಗು,ಸುಖ ,ಶಾಂತಿ,ನೆಮ್ಮದಿ ಕಮ್ಮಿಯಾಗಿರುವುದು,ಶಾರೀರಿಕ ವ್ಯಾಯಾಮದ ಕೊರತೆ, ಇವೆಲ್ಲವೂ ಕಾರಣವಾಗಿರಬಹುದು. ಸಕ್ಕರೆ ಖಾಯಿಲೆಯ ಬಗ್ಗೆ ಅರಿವನ್ನು ಮೂಡಿಸುವುದು ,ಅದು ಬರದಂತೆ ತಡೆಯುವುದು,ಬಂದಾಗ ಅದನ್ನು ನಿಯಂತ್ರಣದಲ್ಲಿಡುವುದು ಈ ವಿಶ್ವ ಮಧುಮೇಹ ದಿನಾಚರಣೆಯ ಮುಖ್ಯ ಉದ್ದೇಶ.'ಡಯಾಬಿಟಿಸ್ ಒಂದು ರೋಗವೇ ಅಲ್ಲ ' ಅನ್ನುವಷ್ಟು ಸಾಮಾನ್ಯಾವಾಗಿದ್ದರೂ ,ಇದನ್ನು ಸರಿಯಾಗಿನಿಯಂತ್ರಣದಲ್ಲಿ ಇಡದಿದ್ದರೆ, ಕೆಲವರ್ಷಗಳನಂತರ ಇದು ನರಮಂಡಲ,ಮಿದುಳು,ಹೃದಯ,ಕಣ್ಣು ,ಮೂತ್ರ ಪಿಂಡ,ರಕ್ತನಾಳಗಳ ಮೇಲೆ ಉಂಟು ಮಾಡುವ ಅಡ್ಡ ಪರಿಣಾಮಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಒಂದೇ ಸಲಕ್ಕೆ ಸಕ್ಕರೆ ಖಾಯಿಲೆಯ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿಸುವುದು ಅಸಾಧ್ಯವಾದರೂ ನಮ್ಮ ಕೈಲಾದಷ್ಟು ರೋಗಿಗಳಿಗೆ ಅರಿವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ.ಈ ನಿಟ್ಟಿನಲ್ಲಿ ಇತ್ತೀಚಿಗೆ ಮಾಧ್ಯಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೇಖನಗಳು ಬರುತ್ತಿರುವುದು ಸ್ವಾಗತಾರ್ಹ. ನನ್ನ ಬ್ಲಾಗಿನಲ್ಲೂ ಈಗಾಗಲೇ ಸಕ್ಕರೆ ಖಾಯಿಲೆಯ ಬಗ್ಗೆ ಎರಡು ಲೇಖನಗಳನ್ನು ಪ್ರಕಟಿಸಿದ್ದೇನೆ.

ಪ್ರೇಮಾ ನಾರಾಯಣ್ ಸುಮಾರು ಐವತ್ತು ವರ್ಷ ವಯಸ್ಸಿನ ,ಎರಡೆರಡು ಸ್ನಾತಕೋತ್ತರ ಪದವಿಗಳನ್ನು ಪಡೆದ ವಿದ್ಯಾವಂತ ಮಹಿಳೆ.ನಮ್ಮ ಎಂಜಿನಿಯರ್ ಒಬ್ಬರ ಪತ್ನಿ. ಸುಮಾರು ಹತ್ತು ವರ್ಷಗಳಿಂದ ಅವರಿಗೆ ಸಕ್ಕರೆ ಖಾಯಿಲೆ ಇತ್ತು.ಮಾತ್ರೆಗಳನ್ನು ಹೆಚ್ಚಿನ ಡೋಸ್ ನಲ್ಲಿ ತೆಗೆದುಕೊಂಡರೂ ಪಥ್ಯ ಸರಿಯಾಗಿ ಮಾಡದೇ,ಒಮ್ಮೊಮ್ಮೆ ಅವರ ರಕ್ತದಲ್ಲಿನ ಸಕ್ಕರೆ ಅಂಶ ಏರುತ್ತಿತ್ತು. 'ಇಷ್ಟು ವಿದ್ಯಾವಂತೆಯಾಗಿದ್ದರೂ ,ಸಕ್ಕರೆ ಖಾಯಿಲೆಯ  ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ,ಈ ಹೆಂಗಸಿಗೆ ನಾಲಿಗೆ ಚಪಲದ ಮೇಲೆ ಸ್ವಲ್ಪವೂ ಹಿಡಿತವಿಲ್ಲವಲ್ಲಾ! ' ಎಂದು ನನಗೆ ಅವರ ಮೇಲೆ ಸಿಟ್ಟಿತ್ತು. ಆ ದಿನ ಆಸ್ಪತ್ರೆಯ ನನ್ನ ಪರೀಕ್ಷಾ ಕೋಣೆಯಲ್ಲಿ ಪ್ರೇಮಾ ನಾರಾಯಣ್ ನನ್ನ ಮುಂದೆ ಕೂತಿದ್ದರು.ಅವರ 'ಬ್ಲಡ್ ಶುಗರ್ ರಿಪೋರ್ಟ್'ನನ್ನ ಕೈಯಲ್ಲಿತ್ತು .ರಕ್ತದ ಸಕ್ಕರೆ ಅಂಶ 400 mg % ಎಂದು ತೋರಿಸುತ್ತಿತ್ತು .(normal-....140mg% ಇರಬೇಕು ). ನಾನು.....'ಯಾಕೆ ಮೇಡಂ ....? ....ಶುಗರ್ ಇಷ್ಟು ಜಾಸ್ತಿಯಾಗಿದೆ?..' ಎಂದೆ. ಅದಕ್ಕವರು 'ಅಯ್ಯೋ ...,ಏನ್ಮಾಡೋದು ಡಾಕ್ಟ್ರೆ! ಮನೆಯವರು ಡೆಲ್ಲಿಯಿಂದ 'ಆಗ್ರಾ ಕಾ  ಪೇಟಾ' (ಒಂದು ರೀತಿಯ ಸಿಹಿ ತಿಂಡಿ)ತಂದಿದ್ದರು.......,ಚೆನ್ನಾಗಿ ತಿಂದುಬಿಟ್ಟೆ ' ಎಂದರು.ನನಗೆ ತಕ್ಷಣ ಸಿಟ್ಟು ಬಂದು 'ಏನು ಮೇಡಂ ..., ನಿಮಗೆ ಇಷ್ಟೆಲ್ಲಾ ತಿಳಿವಳಿಕೆ ಇದ್ದರೂ ನೀವು ಡಯಟ್ ಮಾಡೋಲ್ವಲ್ಲಾ......! ' ಎಂದೆ.ಅದಕ್ಕವರು ಸ್ವಲ್ಪವೂ ಸಿಟ್ಟಾಗದೆ ಇಂಗ್ಲೀಷಿನಲ್ಲಿ 'Doctor.....,are you a diabetic ?' ಎಂದರು. ಒಂದು ಕ್ಷಣ ನನಗೆ ಏನು ಹೇಳಬೇಕೋ ತೋಚದೆ ,ತಕ್ಷಣಕ್ಕೆ ಮಾತು ಹೊರಡಲಿಲ್ಲ. ಈ ಮುಂಚೆ ಯಾರೂ ನನ್ನನ್ನು ಈ ರೀತಿ ಕೇಳಿರಲಿಲ್ಲ. ಸ್ವಲ್ಪ ಸಾವರಿಸಿಕೊಂಡು 'no madame ,I am...not a diabetic ' ಎಂದೆ. ಅದಕ್ಕವರು 'That is the  reason you can't understand ,what is it to be a diabetic !'( ನಿಮಗೆ ಸಕ್ಕರೆ ಖಾಯಿಲೆ ಇಲ್ಲ,ಅದಕ್ಕೇಸಕ್ಕರೆ ಖಾಯಿಲೆಯವರ ಮಾನಸಿಕ ಸ್ಥಿತಿ ನಿಮಗೆ ಅರ್ಥವಾಗುವುದಿಲ್ಲಾ )'ಎಂದರು.  ನಾನು ಅವಾಕ್ಕಾದೆ...! ಹೌದಲ್ಲವೇ!ಅವರ ಮಾತಿನಲ್ಲಿ ಸತ್ಯವಿದೆ ಅನ್ನಿಸಿತು. ದೇಹದಿಂದ ಸಕ್ಕರೆ ಅಂಶ ಉಪಯೋಗವಾಗದೆ ಮೂತ್ರದಲ್ಲಿ ಸೋರಿ ಹೋಗುತ್ತಿರುವಾಗ ,ದೇಹಕ್ಕೆ ಸಿಹಿ ತಿನ್ನಬೇಕು ಎಂದು ಬಲವಾದ ಬಯಕೆ    (craving) ಉಂಟಾಗುತ್ತದೋ ...ಏನೋ ! ಪಾಪ ಅವರ ಕಷ್ಟ ಅವರಿಗೆ ! ಕೆಲವೊಮ್ಮೆ ಅವರಿಗೆ ಸಿಹಿ ತಿನ್ನುವ craving ಎಷ್ಟು ಉಂಟಾಗುತ್ತಿತ್ತೆಂದರೆ  ರಾತ್ರಿ ಎರಡು ಗಂಟೆಗೆ ಸ್ಕೂಟರ್ ನಲ್ಲಿ ಯಜಮಾನರನ್ನು ಕಳಿಸಿ ಸ್ವೀಟ್ ,ಅಂಗಡಿಯ ಬಾಗಿಲು ತೆರೆಸಿ , ಮೈಸೂರ್ ಪಾಕ್ ತರಿಸಿ,....ತಿಂದಿದ್ದರಂತೆ...!! ಆ ದಿನದಿಂದ ,ಸಕ್ಕರೆ ರೋಗಿಗಳ ಬಗ್ಗೆ ನನ್ನ ಸಹಾನುಭೂತಿ ಹೆಚ್ಚಾಗಿದೆ.ಅವರ  ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಂಡು,ಕಷ್ಟಗಳನ್ನು ಸಮಾಧಾನದಿಂದ ಕೇಳಿ  ಸೂಕ್ತ  ಪರಿಹಾರ ನೀಡಲು ಪ್ರಯತ್ನಿಸುತ್ತಿದ್ದೇನೆ.2010 ರ ಜಾಗತಿಕ ಮಧುಮೇಹ ದಿನದ  ಧ್ಯೇಯದಂತೆ ಈ ಕ್ಷಣದಿಂದ ಮದುಮೇಹವನ್ನು ನಿಯಂತ್ರಿಸೋಣ.  ಎಲ್ಲರ ಬಾಳನ್ನೂ ಸಿಹಿಯಾಗಿಸೋಣ. ಎಲ್ಲರಿಗೂ ನನ್ನ ನಮಸ್ಕಾರ.

Thursday, November 11, 2010

"ಬಾಯಿಯಲ್ಲಿ .........ಅದೇನದು ...?"

ನಾನು ಬಳ್ಳಾರಿಯಲ್ಲಿ 1995 ರಲ್ಲಿ  E.N.T.ಮಾಡುತ್ತಿದ್ದಾಗ ,ನನ್ನ ಸಹಪಾಟಿ ಸುರೇಶನಿಗೆ ಸದಾ ಬಾಯಿಯಲ್ಲಿ ಗುಂಡು ಪಿನ್ನು ಕಚ್ಚಿಕೊಂಡಿರುವ ಅಭ್ಯಾಸವಿತ್ತು.ರಜನೀ ಕಾಂತ್ ಸಿನಿಮಾದಲ್ಲಿ ಬಾಯಲ್ಲಿ ಸಿಗರೇಟೊಂದನ್ನು ಕಚ್ಚಿಕೊಂಡು ಅತ್ತಿಂದಿತ್ತ ಹೊರಳಿಸಿ ಮಾತನಾಡುವಂತೆ ,ಬಾಯಲ್ಲಿ  ಗುಂಡು ಪಿನ್ನನ್ನು ಆಚೀಚೆ  ಹೊರಳಿಸುತ್ತಾ ವಿಚಿತ್ರ ದನಿಯಲ್ಲಿ ಮಾತಾಡುತ್ತಿದ್ದ.ನಾನು ಸಾಕಷ್ಟು ಸಲ ಎಚ್ಚರಿಸಿದರೂ ,ಪಿನ್ನು ಕಚ್ಚಿಕೊಂಡೇ' ಏನೂ ಆಗೋಲ್ಲಾ ಬಿಡಿಸಾರ್.ರೂಢಿ ಆಗಿದೆ.ನೀವು ಎಲ್ಲಾದಕ್ಕೂಸುಮ್ನೆ ಹೆದರುತ್ತೀರಾ'ಎಂದು ಹೇಳಿ ನನ್ನ ಬಾಯಿ ಮುಚ್ಚಿಸುತ್ತಿದ್ದ.ನಾನು ಹೇಳುವಷ್ಟು ಹೇಳಿ ಸುಮ್ಮನಾದೆ.

ಒಮ್ಮೆ ಹೀಗೇ ,ಬಾಯಲ್ಲಿ ಗುಂಡು ಪಿನ್ನು ಕಚ್ಚಿಕೊಂಡು ಮಾತಾಡುತ್ತಿದ್ದಾಗ ,ಪಿನ್ನು ನಾಲಿಗೆ ಮೇಲೆ ಕುಳಿತು ಉಸಿರಾಟದ ನಾಳದ ಕಡೆಗೆ ಪ್ರಯಾಣ ಬೆಳೆಸಿತು.ಯಾವುದೇ ಹೊರವಸ್ತು ಉಸಿರಾಟದ ನಾಳದೊಳಗೆ ಹೊಕ್ಕರೆ ,ಉಸಿರಾಟಕ್ಕೆ ವಿಪರೀತ ತೊಂದರೆ ಯಾಗುತ್ತದೆ.ಇದನ್ನು ವೈದ್ಯಕೀಯ ಭಾಷೆಯಲ್ಲಿ stridor ಎನ್ನುತ್ತೇವೆ.ನಮ್ಮ ಪ್ರೊಫೆಸರ್ ವಿಪರೀತ ಸಿಟ್ಟಿನ ಮನುಷ್ಯ.ವಿಷಯ ತಿಳಿದು ಸುರೇಶನಿಗೆ 'ಯಕ್ಕಾ ಮಕ್ಕಾ 'ಬೈದರು.ಮಿಕ್ಕ P.G.Students ಗೂ ಮುಖಕ್ಕೆ ಮಂಗಳಾರತಿ ಆಯಿತು.ಸುರೇಶನನ್ನು ಆಪರೇಶನ್ ಥೀಯೆಟರ್ ಗೆ ಕರೆದು ಕೊಂಡು ಹೋಗಿ ,Bronchoscopy  ಎನ್ನುವ proceedure ಮಾಡಿ ಪಿನ್ನು ತೆಗೆದಿದ್ದಾಯಿತು. ನಾವೆಲ್ಲಾ ಸುರೇಶನಿಗೆ ಆಗಾಗ 'ಪಿನ್ನು ಬೇಕಾ ಸುರೇಶಾ?,ಎಂದು  ಅವನನ್ನು  ರೇಗಿಸುವುದನ್ನು ಮಾತ್ರ ಬಿಡಲಿಲ್ಲ.

ಮತ್ತೆ ಕೆಲವರಿಗೆ ಪೆನ್ನಿನ ಕ್ಯಾಪನ್ನೋ ,ಕಡ್ಡಿಯನ್ನೋ, ಕಚ್ಚಿಕೊಂಡಿರುವ ಅಭ್ಯಾಸ ಸಾಮಾನ್ಯ.ಅನೇಕ ಸಲ ಬಸ್ಸಿನಲ್ಲಿ ಹೋಗುವಾಗ ಕಡ್ಡಿಯನ್ನು ಬಾಯಿಯಿಂದ ತೆಗೆಯಲು ಹೇಳಿ 'ನಿಮಗ್ಯಾಕ್ರೀ .......,ನಿಮ್ಮ ಕೆಲಸ ನೋಡ್ರೀ!'ಎಂದು ಬೈಸಿಕೊಂಡಿದ್ದೇನೆ.  ಹಾಳಾದ್ದು .......!  ನೋಡಿಕೊಂಡು ಸುಮ್ಮನೆ ಇರಲಾಗುವುದಿಲ್ಲವಲ್ಲಾ .......!   ನಾನು ದಾಂಡೇಲಿಯ ಬಳಿ ಅಂಬಿಕಾನಗರದಲ್ಲಿ ಕೆಲಸ ಮಾಡುತ್ತಿದ್ದಾಗ ಆರನೇ ತರಗತಿಯ ಹುಡುಗನೊಬ್ಬ ರೆನಾಲ್ಡ್ ಪೆನ್ನಿನ ಕ್ಯಾಪನ್ನು ಬಾಯಲ್ಲಿ ಇಟ್ಟು ಕೊಂಡಿದ್ದಾಗ  ಅಕಸ್ಮಾತ್ತಾಗಿ ಅದು ಒಳ ಹೋಗಿ ಉಸಿರಾಟದ ನಾಳದಲ್ಲಿ ಸಿಕ್ಕಿಕೊಂಡು ,ಆಸ್ಪತ್ರೆಗೆಸಾಗಿಸುವಷ್ಟರಲ್ಲಿಯೇ
ಸಾವನ್ನು ಅಪ್ಪಿದ ದಾರುಣ ಘಟನೆಯೊಂದು ನಡೆಯಿತು.

ಹೇಳುತ್ತಾ ಹೋದರೆ, ನೂರಾರು ಘಟನೆಗಳು ನೆನಪಿಗೆ ಬರುತ್ತವೆ.ಮತ್ತೆ ಎಂದಾದರೂ ಅವುಗಳನ್ನು ದಾಖಲಿಸುತ್ತೇನೆ. ಇವತ್ತಿಗೆ ಇಷ್ಟು ಸಾಕು.ಇಂತಹ ಅಭ್ಯಾಸವಿರುವ ಯಾರಾದರೂ ನಿಮಗೆ  ಕಂಡರೆ ಅದನ್ನು ಬಿಡುವಂತೆ ಅವರಿಗೆ  ಹೇಳುವುದನ್ನು  ಮಾತ್ರ ಮರೆಯಬೇಡಿ.ನಮಸ್ಕಾರ.

Tuesday, November 9, 2010

"ತಾಯಂದಿರೇ--ಮಕ್ಕಳ ಮೇಲೊಂದು ನಿಗಾ ಇಡಿ!"

ಬೆಳಿಗ್ಗೆ ಸುಮಾರು ಒಂಬತ್ತು ಗಂಟೆ.ಆಗ ತಾನೇ ಆಸ್ಪತ್ರೆಗೆ ಬಂದಿದ್ದೆ.ತಾಯಿಯೊಬ್ಬಳು ಗಾಭರಿಯಿಂದ ಅಳುತ್ತಾ ತನ್ನ ಒಂದುವರ್ಷದ ಮಗುವನ್ನು ಎತ್ತಿಕೊಂಡು ಓಡಿಬಂದು 'ನನ್ನ ಮಗುವನ್ನು ಉಳಿಸಿಕೊಡಿ ಡಾಕ್ಟ್ರೆ' ಎಂದು ಗೋಳಾಡಲು ಶುರುಮಾಡಿದಳು.ಮಗು ವಿಪರೀತ ವಾಂತಿ ಮಾಡುತ್ತಿತ್ತು .ವಾಂತಿ ರಕ್ತ ಮಿಶ್ರಿತ ವಾಗಿತ್ತು .ಅಳುವಿನ ಮಧ್ಯೆ ಆ ತಾಯಿ ತಾನು ಒಳಗೆ ಕೆಲಸ ಮಾಡುತ್ತಿದ್ದಳೆಂದೂ,--ಮಗು ಹೊರಗೆ ಹಾಲ್ ನಲ್ಲಿ ಆಡುತ್ತಿತ್ತೆಂದೂ --,ಇದ್ದಕ್ಕಿಂದಂತೆ ವಾಂತಿ ಮಾಡಲು ಶುರು ಮಾಡಿತೆಂದೂ ಹೇಳಿದಳು.ಮೊದಲಿಗೆ ಆರೋಗ್ಯವಾಗಿದ್ದ ಈಮಗು ಇದ್ದಕ್ಕಿದ್ದ ಹಾಗೇ,ಹೀಗೇಕೆ 
ರಕ್ತವಾಂತಿಮಾಡುತ್ತಿದೆಎಂದುನನಗೆತಕ್ಷಣಕ್ಕೆಅರ್ಥವಾಗಲಿಲ್ಲ.ಆತಾಯಿಯಗೋಳಾಟ,ಆಮಗುಕಷ್ಟಪಡುತ್ತಾ,ಕೆಮ್ಮುತ್ತಾ.
ರಕ್ತವಾಂತಿಮಾಡುತ್ತಿದ್ದದ್ದು!,ಹೇಗಾಯಿತು, ಏನಾಯಿತು!!?ಎಂದು ಕುತೂಹಲದಿಂದ ಸೇರಿದ ಜನ ಜಂಗುಳಿ ! ಇವೆಲ್ಲವೂ ಸೇರಿ ನನಗೆ ಒಂದು ಕ್ಷಣ ದಿಕ್ಕೇ ತೋಚದಂತಾಗಿ ,ಎಲ್ಲವೂ ಅಯೋಮಯ ವಾಗಿತ್ತು!

ರೋಗಿಯನ್ನು ವಾರ್ಡಿನಲ್ಲಿ ಮಲಗಿಸಿ------- ಪರೀಕ್ಷೆ ಮಾಡಿದರೆ ,ಏನಾದರೂ ತಿಳಿಯಬಹುದೇನೋ ಎಂದು ವಾರ್ಡಿಗೆ ಕರೆದುಕೊಂಡು ಹೋದೆ.ವಾರ್ಡಿನ ಬೆಡ್ಡಿನ ಮೇಲೆ ಮಲಗಿಸಿದ ಕೂಡಲೇ ಮಗು ಮತ್ತೊಮ್ಮೆ ರಕ್ತ ಮಿಶ್ರಿತ ವಾಂತಿ ಮಾಡಿತು.ಆದರೆ ಈ ಸಲ ವಾಂತಿಯ ಜೊತೆ ಚೂಪಾದ ಅಂಚು ಗಳಿದ್ದ ಮಾತ್ರೆ ಉಪಯೋಗಿಸಿ ಬಿಸಾಡಿದ್ದ ಅಲ್ಯೂಮಿನಿಯಂ ಫಾಯಿಲ್ (aluminium foil ) ಒಂದು ಹೊರ ಬಂತು-----! ಮಗುವಿನ ವಾಂತಿ ನಿಂತಿತು.ಸಮಸ್ಯೆಗೆ ತಕ್ಷಣವೇ ಪರಿಹಾರ ಒದಗಿಸಿದ  ಆ ದೇವನಿಗೆ ಮನಸ್ಸಿನಲ್ಲಿಯೇ ನೂರೆಂಟು ನಮನ ಸಲ್ಲಿಸಿದೆ.

ಒಂಬತ್ತು  ತಿಂಗಳಿಂದ, ಒಂದೂವರೆ -----ಎರಡು ವರ್ಷದ ಒಳಗಿನ ಮಕ್ಕಳಿಗೆ , ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಇರುತ್ತದೆ.ತಾಯಂದಿರು ಮೈಯೆಲ್ಲಾ ಕಣ್ಣಾಗಿ ಮಗುವನ್ನು ನೋಡಿಕೊಳ್ಳಬೇಕು.ಮಾತ್ರೆಗಳು,ಕ್ಯಾಪ್ಸೂಲ್ ಗಳನ್ನು  ಉಪಯೋಗಿಸಿದ ಮೇಲೆ ಅವುಗಳ ಮೇಲಿನ ಹೊದಿಕೆಯ ರೂಪದ ಅಲ್ಯೂಮಿನಿಯಮ್ ಫಾಯಿಲ್'ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಮೊದಲು ಬಿಡಬೇಕು. ಮಕ್ಕಳಿರುವ ಮನೆಯಲ್ಲಿ ನೀವು ಎಷ್ಟು ಎಚ್ಚರದಿಂದ್ದರೂ ಕಮ್ಮಿಯೇ------------!