ಮನಸ್ಸಿಗೆ ಬೇಸರವಾದಾಗ,ಎಡಬಿಡದ ಚಿಂತೆಗಳು ಕಾಡಿದಾಗ,ಮುಂದೇನೆಂದು ದಾರಿ ಕಾಣದಾದಾಗ ಯಾರಾದರು ಹಿರಿಯರು ಧೈರ್ಯ ತುಂಬಿ,ಮಾರ್ಗದರ್ಶನ ನೀಡಿದರೆ,ಬದುಕಿನ ದಾರಿ ಸುಗಮವೆನಿಸುತ್ತದೆ.ಹೊಸ ಉತ್ಸಾಹದೊಂದಿಗೆ ಮುನ್ನಡೆಸುತ್ತದೆ ಅವರ ಮಾರ್ಗದರ್ಶನ.ಅಂತಹ ಮಾರ್ಗದರ್ಶನವನ್ನು ದಿವಂಗತ ಡಿ.ವಿ.ಜಿ.ಯವರು ತಮ್ಮ 'ಮಂಕು ತಿಮ್ಮನ ಕಗ್ಗ'ದ ಮೂಲಕ ನನ್ನಂತಹ ಕೋಟಿ, ಕೋಟಿ, ಜನರಿಗೆ ಹಲವಾರು ದಶಕಗಳಿಂದ ನೀಡುತ್ತಾ ಬಂದಿದ್ದಾರೆ.ಅವರ ಕೆಲ ಪದ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬೇಕಿನಿಸಿದೆ.ಇಗೋ ಅವರ ಕೆಲ ಸುಂದರ ಕಗ್ಗದ ಪದ್ಯಗಳು;
೧) ಬಾಳ್ಕೆಯಲಿ ನೂರೆಂಟು ತೊಡಕು ತಿಣುಕು ಗಳುಂಟು
ಕೇಳ್ಕೆ ಮಾಣ್ಕೆ ಗಳಿಗವು ಜಗ್ಗವೊಂದಿನಿತುಂ
ಗೋಳ್ಕರದರೇನು ಫಲ ?ಗುದ್ದಾಡಲೇನು ಫಲ?
ಪಲ್ಕಿರಿದು ತಾಳಿಕೊಳೋ ಮಂಕು ತಿಮ್ಮ.
೨)ಸ್ಥೂಲ ಸೂಕ್ಷ್ಮ ವಿವೇಕ ರಹಿತೇಷ್ಟ ಬಂಧು ಜನ
ಕಾಲ ದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು.
ಸಾಲವನು ನಿನ್ನಿಂದ ಸಲಿಸಿಕೊಳ ಬಂದವರು
ತಾಳಿಮೆಯಿನವರೊಳಿರು- ಮಂಕು ತಿಮ್ಮ.
(ಕಾಲದಂಷ್ಟ್ರ-ಯಮ )
೩) ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ
ಕೊರತೆಯೊಂದನು ನೀನು ನೆನೆ ನೆನೆದು ಕೊರಗಿ
ಧರೆಯೆಲ್ಲವನು ಶಪಿಸಿ ,ಮನದಿ ನರಕವ ನಿಲಿಸಿ
ನರಳುವುದು ಬದುಕೇನೋ -ಮಂಕು ತಿಮ್ಮ.
೪) ಚಿಂತೆ ಸಂತಾಪಗಳು ಮನಸಿಗೆ ವಿರೇಚಕವೋ
ಸಂತಸೋತ್ಸಾಹಗಳೇ ಪಥ್ಯದುಪಚಾರ .
ಇಂತುಮಂತುಂ ನಡೆಯುತಿರುವುದಾತ್ಮ ಚಿಕಿತ್ಸೆ
ಎಂತಾದೊಡಂತೆ ಸರಿ ಮಂಕು ತಿಮ್ಮ.
೫) ತರಿದು ಬಿಡು ,ತೊರೆದು ಬಿಡು ,ತೊಡೆದು ಬಿಡು ನೆನಹಿಂದ
ಕರೆ ಕರೆಯ ಬೇರುಗಳ ,ಮನದ ಗಂಟುಗಳ
ಉರಕೆ ಸೊಗಸೆನಿಸಿದಾ ಪ್ರೀತಿ ಹಾರಮುಂ ಒರ್ಮೆ
ಉರುಳಪ್ಪುದಾತ್ಮಕ್ಕೆ -ಮಂಕು ತಿಮ್ಮ.
೬)ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು
ಮಗುವು ನೀಂ ಪೆತ್ತರ್ಗೆ ,ಲೋಕಕೆ ಸ್ಪರ್ಧಿ
ಹೆಗಲ ಹೊರೆ ಹುಟ್ತಿದೆಲ್ಲರಿಗುಂ ಇರುತಿರೆ ನಿನ್ನ
ರಗಳೆಗಾರಿಗೆ ಬಿಡುವೋ-ಮಂಕು ತಿಮ್ಮ.
೭) ಇಳೆಯಿಂದ ಮೊಳಕೆಯೊಗೆವಂದು ತಮಟೆ ಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯ ಚಂದ್ರರೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು-ಮಂಕು ತಿಮ್ಮ.
೮)ಮುಂದೇನೋ, ಮತ್ತೇನೋ ,ಇಂದಿಗಾ ಮಾತೇಕೆ?
ಸಂದರ್ಭ ಬರಲಿ ,ಬಂದಾಗಲಾ ಚಿಂತೆ
ಹೊಂದಿಸುವನಾರೋ ನಿನ್ನಾಳಲ್ಲ ಬೇರಿಹನು
ಇಂದಿಗಿಂದಿನ ಬದುಕು -ಮಂಕು ತಿಮ್ಮ.
೯) ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರ ಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೇ ಮೌನದೊಳಮನೆಯ ಶಾಂತಿಯಲಿ
ವರ ಯೋಗ ಸೂತ್ರವಿದು -ಮಂಕು ತಿಮ್ಮ.
೧೦) ಎಡರು ತೊಡರೆನಲೇಕೆ ? ಬಿಡಿಸು ಮತಿಗಾದನಿತ
ದುಡಿ ಕೈಯಿನಾದನಿತು ,ಪಡು ಬಂದ ಪಾಡು.
ಬಿಡು ಮಿಕ್ಕುದನು ವಿಧಿಗೆ ;ಬಿಡದಿರುಪಶಾಂತಿಯನು
ಬಿಡುಗಡೆಗೆ ದಾರಿಯಿದು- ಮಂಕು ತಿಮ್ಮ .
೧೧)ಸ್ಮಿತವಿರಲಿ ವದನದಲಿ ,ಕಿವಿಗೆ ಕೇಳಿಸದಿರಲಿ
ಹಿತವಿರಲಿ ವಚನದಲಿ ,ಋತವ ಬಿಡದಿರಲಿ .
ಮಿತವಿರಲಿ ಮನಸ್ಸಿನುದ್ವೇಗದಲಿ ಭೋಗದಲಿ
ಅತಿ ಬೇಡವೆಲ್ಲಿಯುಂ- ಮಂಕು ತಿಮ್ಮ.
೧೨) ತಿರುಗಿಸಲಿ ವಿಧಿರಾಯನಿಚ್ಚೆಯಿಂ ಯಂತ್ರವನು
ಚರಿಕೆ ತಾರಾಗ್ರಹಗಳಿಷ್ಟವೋದಂತೆ
ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ
ಸ್ಥಿರ ಚಿತ್ತ ನಿನಗಿರಲಿ -ಮಂಕು ತಿಮ್ಮ.