Tuesday, April 23, 2013

"ಸೊಗಸುಗಾರ ಪುಟ್ಟಣ್ಣ !!!!"

ಬೆರಳಷ್ಟೇ ಗಾತ್ರದ ,
ಹಸಿರು ಪುಟ್ಟ ಹಕ್ಕಿ,
ನುಗ್ಗೆ ಮರದ ಹೂವಿಗೆ 
ಲಗ್ಗೆ ------ಹಾಕಿದೆ!
ನುಗ್ಗೆ ಮರಕ್ಕೋ ರೋಮಾಂಚನ!            
ರೆಂಬೆ ರೆಂಬೆಗೂ ಹಸಿರು ಹುಚ್ಚು!
ಪಕ್ಕದ ಗುಲ್ಮೊಹರಿಗೆ ,
ಮೈ ತುಂಬಾ ಕೆಂಪು  ಕಿಚ್ಚು!
ಗಾಳಿಯಲ್ಲೆ ರೆಕ್ಕೆ ಬಡಿದು ,
ಮಧುವ ಹೀರಿದ ಮತ್ತಿನಲ್ಲಿ ,
ಅಲ್ಲೇ ಒಂದರೆ ಕ್ಷಣ ,
ತೇಲಾಡುವ ತ್ರಿಶಂಕು!!
ಮತ್ತೆ ಮರದ ಮೇಲೆ ಕುಳಿತು ,
ಸ್ವಲ್ಪ -----ವಿಶ್ರಮಿಸಿ ,
ಗತ್ತಿನಿಂದ ಕತ್ತು ಕೊಂಕಿಸಿ ,
ಪುಚ್ಚಗಳ ತಿದ್ದಿ ತೀಡಿ ,
ಅತ್ತಿತ್ತ -----ತಿರುಗಿ ,
ಚುಂಚದಲ್ಲೊಂದು ಹೂವ ಹಿಡಿದು ,
ಪುರ್ರನೆ ------ಹಾರಿತ್ತು ,
ಪ್ರೇಯಸಿಯ  ಹುಡುಕುತ್ತಾ !!

Thursday, April 11, 2013

"ವಿಜಯನಾಮ ಸಂವತ್ಸರ ,ಅನ್ವರ್ಥ ನಾಮ ಸಂವತ್ಸರವಾಗಲಿ!!!"

ಬಾ ಬಾರೋ ವಿಜಯ ನಾಮ
ಸಂವತ್ಸರವೇ ,ಸ್ವಾಗತ ನಿನಗೆ!!!
ಇರು ...ಇರು..... ,
'ಬರ'ಬೇಡ ,ತಡಿ!!!

ನೀನು ಬಾ ಮಹರಾಯ .....!!!
ಆದರೆ 'ಬರ'ವನ್ನು ತಡಿ!!!
ನೀನೇ ನೋಡು ಎಲ್ಲಕ್ಕೂ ಬರ!!

ಎಣ್ಣೆ ಸ್ನಾನ ಮಾಡೋಣವೆಂದರೆ
ನೀರಿಗೆ ಬರ.....!

ಹೋಳಿಗೆ ತಿನ್ನಬೇಕೆಂದರೆ .....
ಬೇಳೆಯ ಮತ್ತು ಬೆಲ್ಲದ ಬೆಲೆ
ಬೇವಿನ ಕಹಿಯಂತಿವೆ  !!!

ಇನ್ನೆಲ್ಲಿಯ ಯುಗಾದಿ!!?
ಈ ಬಿಸಿಲಿನ ಝಾಳಕ್ಕೆ
ತಂಗಾಳಿಗೂ ತಗಾದಿ !!!

ಕೈಕೊಟ್ಟಿದೆ ಕರೆಂಟು
ಫ್ಯಾನಿನ ಗಾಳಿಯೂ ಇಲ್ಲದೇ
ಬೆವರಿನಿಂದ ಮೈಯೆಲ್ಲಾ ಅಂಟು !!!

ಇರಲಿ ಬಿಡು ಮಹರಾಯ !
ಇವೆಲ್ಲಾ ನಮಗೆ ಮಾಮೂಲು!!
ನೀನು ಬಲಗಾಲಿಟ್ಟು ಒಳಗೆ  ಬಾ !!

ಎಲ್ಲರ ಬಾಳಲ್ಲೂ ......... ,
ಸುಖ ಸಂತಸ ,ಸಂವ್ರುದ್ಧಿಗಳನ್ನು
ತಪ್ಪದೆ ಹೊತ್ತು ತಾ...!!!

ಎಲ್ಲರಿಗೂ ವಿಜಯನಾಮ ಸಂವತ್ಸರ
ಅನ್ವರ್ಥ ನಾಮ ಸಂವತ್ಸರವಾಗಲಿ
ಎಂಬ ಆಶಾವಾದದ ಎಳೆ ಹಿಡಿದು ಬಾ!!!

ಬಾ ಬಾರೋ ,ನವ ವಸಂತವೇ........!!!
ನಿನಗೆ ..................,
ಕೊಳಲಿನ ನಾದದ ಸ್ವಾಗತ!!!!

Sunday, April 7, 2013

"ವಿಶ್ವ ಆರೋಗ್ಯ ದಿನದ ಹಾರೈಕೆ"

 ಇಂದು ವಿಶ್ವ ಆರೋಗ್ಯ ದಿನ.ಆರೋಗ್ಯವೆನ್ನುವುದು ಸಹಜವಾಗಿ ಇರತಕ್ಕಂತದ್ದು ಎನ್ನುವುದನ್ನು ನಾವೆಲ್ಲಾ ಮೊದಲು ಅರ್ಥ ಮಾಡಿಕೊಳ್ಳಬೇಕು.ಅನಾರೋಗ್ಯ ನಮ್ಮ ತಪ್ಪು ಜೀವನ ಶೈಲಿಯಿಂದ,ಸರಿ ಇಲ್ಲದ ಆಹಾರ ಪದ್ಧತಿಯಿಂದ ಹಾಗೂ ಸಾಕಷ್ಟು ದೈಹಿಕ ವ್ಯಾಯಾಮ ಇಲ್ಲದಿರುವುದರಿಂದ ಬರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬಳಸಬೇಕು.ಎಷ್ಟೇ ಕಷ್ಟವಾದರೂ ಕನಿಷ್ಠ ಅರ್ಧ ಗಂಟೆ ನಡೆಯುವುದೋ ಅಥವಾ ಇನ್ನಿತರ ದೈಹಿಕ ವ್ಯಾಯಾಮದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು.

ಹೋದ ವರ್ಷ ಜೂನ್ ತಿಂಗಳಲ್ಲಿ ,ಹೊಸದಾಗಿ ಡಯಾಬಿಟಿಸ್ ಬಂದವರೊಬ್ಬರಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವಂತೆ ಹೇಳಿದೆ.'ಅಯ್ಯೋ ಈ ಮಳೆಯಲ್ಲಿ ಎಲ್ಲಿ ವಾಕಿಂಗ್ ಹೋಗೋದು ಸರ್?'ಎಂದರು.'ಅದಕ್ಕೆಲ್ಲಾ ಟೈಮ್ ಇಲ್ಲಾ ಸರ್' ಎಂದೂ ಸೇರಿಸಿದರು!ಅವರ ಗುಡಾಣ ಹೊಟ್ಟೆಯನ್ನೇ ನೋಡುತ್ತಾ 'ತಿನ್ನುವುದನ್ನು ಕಮ್ಮಿ ಮಾಡಿ' ಎಂದೆ.'ಅಯ್ಯೋ ನಾನು ಏನೂ ತಿನ್ನೋದೇ ಇಲ್ಲಾ ಸರ್,ಟೆನ್ಶನ್ ಇಂದ ಏನೂ ಸೇರೋದೇ ಇಲ್ಲಾ 'ಎಂದರು.'ಹೋಗಲಿ ಟೆನ್ಶನ್ ಅನ್ನಾದರೂ ಕಮ್ಮಿ ಮಾಡಿಕೊಳ್ಳಿ'ಎಂದೆ.'ಟೆನ್ಶನ್ ಎಲ್ಲಾರಿಗೂ ಇರೋದೇ ಬಿಡಿ ಸರ್'ಎಂದರು.
ನಾನು ಹೇಳಿದ ಸಲಹೆಗಳನ್ನೆಲ್ಲಾ ಸಾರಾ ಸಗಟಾಗಿ ತಿರಸ್ಕರಿಸಿ 'ಅವೆಲ್ಲಾ ನನ್ನ ಕೈಲಿ ಆಗೋಲ್ಲಾ ಸರ್,ಚೆನ್ನಾಗಿ ಕಂಟ್ರೋಲ್ ಆಗೋ ಹಾಗೆ ಯಾವುದಾದರೂ ಒಳ್ಳೆ ಮಾತ್ರೆ ಬರೆದು ಕೊಡಿ'ಎಂದರು.
ಅವರ ಈ ಮಾತುಗಳು ನನ್ನನ್ನು ಯೋಚಿಸುವಂತೆ ಮಾಡಿತು.'ನಾವು ಯಾವ ಸ್ಥಿತಿಗೆ ಬಂದು ನಿಂತಿದ್ದೇವೆ!'ಎನಿಸಿತು.ಔಷದ ವಿಲ್ಲದೆ ಆರೋಗ್ಯವಾಗಿ ಬದುಕೊದಿಕ್ಕೆ ಸಾಧ್ಯವಿಲ್ಲವೇ?'ಎನಿಸಿತು.ಕೈ ಕಾಲುಗಳಿಗೆ ಅವುಗಳ ಕೆಲಸ ಕೊಡದಿದ್ದರೆ ಸಮಗ್ರ ಆರೋಗ್ಯ ಹೇಗೆ ಸಾಧ್ಯ?
'what is used less and less ultimately becomes useless' ಅನ್ನುವ ಮಾತೊಂದಿದೆ.ಮೊದಲಿಂದಲೂ ಕನಿಷ್ಟ ಅರ್ಧದಿಂದ ಒಂದು ಗಂಟೆ ನಡೆದರೆ ಈಗ ದಿನನಿತ್ಯ ಕಾಣುತ್ತಿರುವ ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳನ್ನು ದೂರವಿಡಬಹುದೆನಿಸುತ್ತದೆ.ಯಾವುದೇ ಕಾರಣಕ್ಕಾದರೂ ಮನೆಯಿಂದ ಹೊರಗೆ ಹೋಗಲು ಆಗದೆ ಇದ್ದ ಪಕ್ಷದಲ್ಲಿ,ಮನೆಯಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆ ನಡೆಯಬಹುದು.ಬೋನಿನಲ್ಲಿ ಇರುವ ಹುಲಿ,ಚಿರತೆಯಂತಹ ಪ್ರಾಣಿಗಳೇ ಆ ಸ್ವಲ್ಪ ಜಾಗದಲ್ಲೇ ಒಂದುಕಡೆಯಿಂದ ಇನ್ನೊದು ಕಡೆ ಓಡಾಡುವುದನ್ನು ನೋಡಿದ್ದೇವೆ. Exercising is a necessity ಎನ್ನುವುದನ್ನು ನಾವು ಇದರಿಂದಲಾದರೂ ಕಲಿಯಬಹುದಲ್ಲವೇ?ಅನುಕೂಲವಿದ್ದವರು ಮನೆಯಲ್ಲೇ ಒಂದು ಟ್ರೆಡ್ ಮಿಲ್ ಇಟ್ಟುಕೊಳ್ಳಬಹುದು.
ಬಿ.ಪಿ,ಶುಗರ್,ಮತ್ತು ಹಾರ್ಟ್ ಪ್ರಾಬ್ಲಂ ಇಲ್ಲದವರು ಮೆಟ್ಟಿಲು ಹತ್ತಿ ಇಳಿಯುವುದನ್ನೇ ಒಂದು ವ್ಯಾಯಾಮ ವಾಗಿ ಅಳವಡಿಸಿಕೊಳ್ಳ ಬಹುದು.ಹತ್ತು ನಿಮಿಷದಿಂದ ಶುರು ಮಾಡಿ, ಬರ ಬರುತ್ತಾ ಮೂವತ್ತು ನಿಮಿಷದವರೆಗೆ ಮೆಟ್ಟಿಲು ಹತ್ತಿ ಇಳಿದರೆ ಅದ್ಭುತ ವ್ಯಾಯಾಮವಾಗುತ್ತದೆ.ಇದರ ಜೊತೆ ಸ್ವಲ್ಪ ಯೋಗ ಮತ್ತು ಪ್ರಾಣಾಯಾಮವನ್ನು ಕಲಿತರೆ ಆರೋಗ್ಯಕ್ಕೆ ಇನ್ನೂ ಒಳಿತು.ಸರಿಯಾದ ಆಹಾರ,ಆರೋಗ್ಯಕರ ವಿಚಾರಗಳು  ಮತ್ತು ಸರಿಯಾದ ವ್ಯಾಯಾಮದದಿಂದ ಔಷಧವಿಲ್ಲದೆಯೂ ಆರೋಗ್ಯವಾಗಿರಬಹುದಲ್ಲವೇ ?

ಆರೋಗ್ಯವೆನ್ನುವುದು  ನಮ್ಮೆಲ್ಲರ ಸಹಜ ಸ್ಥಿತಿ.ಅದು ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಈ ವಿಶ್ವ ಆರೋಗ್ಯ ದಿನದಂದು ಎಲ್ಲರಿಗೂ ಸಮೃದ್ಧಿಯಾಗಿ ಆರೋಗ್ಯ ಭಾಗ್ಯ ಲಭ್ಯವಾಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ನಮಸ್ಕಾರ.

Tuesday, April 2, 2013

"ವೈದ್ಯನೊಬ್ಬನ ಮರೆಯಲಾಗದ ವಿಶಿಷ್ಟ ಅನುಭವ!!!! "

ಇದನ್ನೆಲ್ಲಾ ಹೇಗೆ ಬರೆಯುವುದೋ ಗೊತ್ತಿಲ್ಲ .ಆದರೆ ಬರೆಯದೆ ಇರುವುದೂ ಸಾಧ್ಯವಾಗುತ್ತಿಲ್ಲ.ಇಂತಹ ಹಲವಾರು ಘಟನೆಗಳು ನೆನಪಿನ ಹಗೇವಿನಲ್ಲಿ ಆಳವಾಗಿ ಬೇರು ಬಿಟ್ಟಿವೆ.ಸುಮಾರು ಇಪ್ಪತೆಂಟು ವರ್ಷಗಳ ಹಿಂದಿನ ಘಟನೆ .ಆಗ ನಾನು ಸಿರುಗುಪ್ಪದಿಂದ ಎಂಟು ಕಿಲೋಮೀಟರ್ ದೂರದ ದೇಶನೂರು ಎಂಬ ಹಳ್ಳಿಯ ಸನಿಹವಿದ್ದ ಸಕ್ಕರೆ ಕಾರ್ಖಾನೆಯಲ್ಲಿ  ವೈದ್ಯನಾಗಿದ್ದೆ.ಆಗ ಆಸ್ಪತ್ರೆಯೆಂದರೆ ಕಾರ್ಖಾನೆಯಲ್ಲೇ ಸಣ್ಣದೊಂದು ಶೆಡ್ ಇತ್ತು.ಆಸ್ಪತ್ರೆಯ ಸಿಬ್ಬಂಧಿಗಳೆಂದರೆ ನಾನು ಮತ್ತು ಔಷಧಿ ಕೊಡುವ ಒಬ್ಬ ಕಾಂಪೌಂಡರ್ ಇಬ್ಬರೇ.ಸಣ್ಣ ,ಪುಟ್ಟ ಖಾಯಿಲೆಗಳಿಗೆ ಔಷಧಿ ಮತ್ತು ತುರ್ತು ಚಿಕಿತ್ಸೆ ಮಾತ್ರ ಅಲ್ಲಿ ಲಭ್ಯವಿತ್ತು.ಹೆಚ್ಚಿನ ಚಿಕಿತ್ಸೆಗೆ ಕಾರ್ಮಿಕರು ಅವರ ಸ್ವಂತ ಖರ್ಚಿನಲ್ಲಿ ಎಂಟು ಕಿಲೋಮೀಟರ್ ದೂರವಿದ್ದ ಸಿರುಗುಪ್ಪಕ್ಕೋ ,ಐವತ್ತು ಕಿಲೋಮೀಟರ್ ದೂರದ ಬಳ್ಳಾರಿಗೋ ಹೋಗಬೇಕಿತ್ತು.
ಅಸಾಧ್ಯ ಬಿಸಿಲಿನ ಪ್ರದೇಶ.ಶೀಟಿನ ಮನೆ.ಸಂಜೆಯ ವೇಳೆಗೆ ,ಕೆಂಡ ಕಾದಂತೆ ಕಾಯುತ್ತಿತ್ತು.ರಾತ್ರಿ ಸ್ವಲ್ಪ ತಂಪಾಗುತ್ತಿತ್ತು. ಆದರೂ ವಿಪರೀತ ಸೆಖೆಯಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ.ಚೊಚ್ಚಲ ಹೆರಿಗೆಗೆಂದು ತವರಿಗೆ ಹೋಗಿದ್ದ ಹೆಂಡತಿಯಿಂದ ಪತ್ರ ಬಂದು ವಾರವಾಗಿತ್ತು.ಆಗೆಲ್ಲಾ ,ಈಗಿನಂತೆ ಫೋನಿನ ಸೌಕರ್ಯವಿರಲಿಲ್ಲ.ಮೊದಲೇ ಸೆಖೆ.ಮೇಲೆ ಹೆಂಡತಿ ಹೇಗಿದ್ದಾಳೋ ಎನ್ನುವ ಆತಂಕ. ರಾತ್ರಿ ಎರಡಾದರೂ  ನಿದ್ರೆಯ ಸುಳಿವಿಲ್ಲ.ಆಗ ಜೋರಾಗಿ ಬಾಗಿಲು ಬಡಿಯುವ ಶಬ್ದ ,ಜೊತೆಗೇ ಯಾರೋ ಆತಂಕದ ದನಿಯಲ್ಲಿ 'ಸಾರ್,ಸಾರ್'ಎಂದು ಕೂಗುವ ಶಬ್ದ.ಹೋಗಿ ಬಾಗಿಲು ತೆರೆದೆ.ಕಾರ್ಖಾನೆಯ ರಸ್ತೆಯ ಪಕ್ಕದಲ್ಲೇ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ, ಸಕ್ಕರೆ ಮೂಟೆಗಳನ್ನು ಲಾರಿಗಳಿಗೆ ತುಂಬುವ ಹಮಾಲಿಗಳ ಸಣ್ಣ ತಂಡವೊಂದು ಲಾಟೀನುಗಳನ್ನು ಹಿಡಿದು ನಿಂತಿತ್ತು.'ಏನ್ರಪ್ಪಾ?.....ಏನಾಯಿತು...?'ಎಂದೆ. ಅವರಲ್ಲೊಬ್ಬ ಮುಖಂಡ ನಂತೆ ಇದ್ದವನು 'ಸಾರ್....,ಗಡಾನೆ ಬರ್ರಿ ಸಾರ್ ...,ಹುಲಿಗೆಪ್ಪನ ಹೆಂಡತಿಗೆ ಹೆರಿಗೆ ತ್ರಾಸಾಗಿದೆ'ಎಂದ. ಏನು ,ಎತ್ತ ಎಂದು ಅರ್ಥವಾಗದಿದ್ದರೂ 'ಸರಿ ನಡೀರಿ 'ಎಂದು ಮನೆಯ ಬಾಗಿಲಿಗೆ ಬೀಗ ಹಾಕಿ ಔಷಧಿಗಳಿದ್ದ ಸಣ್ಣ ಪೆಟ್ಟಿಗೆಯೊಂದನ್ನು ಹಿಡಿದು ಅವರ ಜೊತೆ ಸುಮಾರು ಅರ್ಧ ಕಿಲೋಮೀಟರ್ ದೂರವಿದ್ದ ಅವರ ಗುಡಿಸಿಲಿನ ಕಡೆ ನಡೆದೆ.ಸಿರಗುಪ್ಪದಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದ್ದರೂ ಹೆರಿಗೆಗೆ ಅಲ್ಲೇಕೆ ಕರೆದುಕೊಂಡು ಹೋಗಲಿಲ್ಲವೆಂದು ಕೇಳಿದೆ.'ಅಲ್ಲೂ ರೊಕ್ಕ ಇಲ್ಲದೆ ಏನೂ ಮಾಡಂಗಿಲ್ರೀ  ಸಾಹೇಬ್ರೇ.ನಾವು ಬಡವರು ರೊಕ್ಕ ಎಲ್ಲಿ ತರೋಣ್ ರೀ' ಎಂದ ಅವರಲ್ಲೊಬ್ಬ .ನಮ್ಮ ಅವ್ಯವಸ್ಥೆಯನ್ನು ಹಳಿಯುತ್ತಾ ,ಆ ನಡುರಾತ್ರಿಯ ಕತ್ತಲೆಯಲ್ಲಿ ,ಲಾಟೀನುಗಳ ಮಂದ ಬೆಳಕಿನಲ್ಲಿ ಅವರ ಗುಡಿಸಳುಗಳತ್ತ ಲಗುಬಗೆಯಿಂದ ಹೆಜ್ಜೆ ಹಾಕಿದೆ.  
ಅಲ್ಲಲ್ಲೇ ಹರಿಯುತ್ತಿದ್ದ ಕೊಚ್ಚೆಯ ನೀರನ್ನು ದಾಟಿಕೊಂಡು ,ತಮ್ಮ ಸರಹದ್ದಿಗೆ ಆಗಂತುಕನೊಬ್ಬನ ಆಗಮನ ವಾಗುತ್ತಿದ್ದಂತೆ ಜೋರಾಗಿ ಬೊಗಳುತ್ತಿದ್ದ ಹತ್ತಾರು ನಾಯಿಗಳನ್ನು ಲೆಕ್ಕಿಸದೆ ಅವರು ಕರೆದುಕೊಂಡು ಹೋದ ಗುಡಿಸಲೊಂದರೊಳಗೆ ಹೋದೆ.ಅಲ್ಲಿ ಕಂಡ ದೃಶ್ಯ   ಎಂತಹ ಗಂಡೆದೆ ಉಳ್ಳವರೂ ಹೌಹಾರುವಂತಿತ್ತು .ಸಗಣಿಯಿಂದ ಸಾರಿಸಿದ ನೆಲದ ಮೇಲೆ ಹಾಸಿದ್ದ ಕೌದಿಯೊಂದರ ಮೇಲೆ ಗರ್ಭಿಣಿ ಹೆಂಗಸೊಬ್ಬಳು 'ಯಪ್ಪಾ ,ನನ್ ಕೈಯಾಗೆ ಆಗಾಕಿಲ್ಲೋ ....ನಾನ್  ಸಾಯ್ತೀನ್ರೋ .....ಯಪ್ಪಾ'ಎಂದು ಜೋರಾಗಿ ನರಳುತ್ತಿದಳು.ಅವಳ ಪಕ್ಕದಲ್ಲಿದ್ದ ಮುದುಕಿಯೊಬ್ಬಳು 'ಎಲ್ಲಾ ಸರಿ ಹೋಕ್ಕತೆ ಸುಮ್ಕಿರು, ದಾಗ್ದಾರ್ ಸಾಬ್ ಬಂದಾನೆ 'ಎಂದು ಸಮಾಧಾನ ಮಾಡುತ್ತಿದ್ದಳು.ಅವರು ಕೊಟ್ಟ ಸೋಪು ,ಬಿಸಿನೀರಿನಿಂದ ಕೈ ತೊಳೆದೆ.ಅದೊಂದು 'breach delivery' ಆಗಿತ್ತು .ಮಾಮೂಲಾಗಿ ಮಗುವಿನ ತಲೆ ಮೊದಲು ಹೊರಗೆ ಬರುತ್ತದೆ. 'ಬ್ರೀಚ್ ' ಡೆಲಿವರಿಯಲ್ಲಿ ,ಮಗುವಿನ ಕಾಲುಗಳು ಹೊರಗೆ ಬರುತ್ತವೆ. ಈ ಹೆಂಗಸಿನಲ್ಲಿ ಮಗುವಿನ ಕಾಲುಗಳು ಹೊರಬಂದು ತಲೆಯ ಭಾಗ ಹೊರಬರದೆ ಸಿಕ್ಕಿಕೊಂಡಾಗ ಏನು ಮಾಡಲು ತೋಚದೆ, ನನ್ನನ್ನು ಕರೆಸಿದ್ದರು.ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯಗಳಿದ್ದೂ ,ಸಹಾಯಕ್ಕೆ ದಾದಿಯರಿದ್ದೂ, ನಡೆಸುವ ಹೆರಿಗೆಗಳಲ್ಲೇ ನೂರೆಂಟು ತೊಂದರೆಗಳು.ಅಂಥದ್ದರಲ್ಲಿ ಆ ಗುಡಿಸಲಿನಲ್ಲಿ ಸಗಣಿಸಾರಿಸಿದ ನೆಲದ ಮೇಲೆ ಕುಳಿತು  ,ಲಾಟೀನಿನ ಮಂದ ಬೆಳಕಿನಲ್ಲಿ,ಅದೂ 'ಬ್ರೀಚ್ ಡೆಲಿವರಿ'ಮಾಡಬೇಕಾದಾಗ , ಹೆರಿಗೆಗಳನ್ನು ಮಾಡಿ  ಅನುಭವವಿರದ ನನ್ನ ಸ್ಥಿತಿ ಹೇಗಿದ್ದಿರಬಹುದೋ ನೀವೇ ಊಹಿಸಿಕೊಳ್ಳಿ. ದೇವರ ದಯೆಯಿಂದ ಹೆರಿಗೆ ನಾನು ನೆನೆಸಿದಷ್ಟು ಕಷ್ಟವಾಗಲಿಲ್ಲ.ಹೆಣ್ಣು ಮಗುವಿನ ಜನನವಾಯಿತು.ಮಗುವಿನ ಅಳು ಕೇಳುತ್ತಿದ್ದಂತೆ ಅಲ್ಲಿದ್ದವರ ಮುಖಗಳಲ್ಲಿ ಸಂತಸದ ನಗು ಮೂಡಿತು.
ಇದಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ನಾನು ರಾಯಚೂರಿನ ಶಕ್ತಿನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ ,ಸಿರುಗುಪ್ಪದಿಂದ ನಾನು ಹೆರಿಗೆ ಮಾಡಿದ ಹೆಂಗಸು ತನ್ನ ಪತಿಮತ್ತು ಮಗಳೊಂದಿಗೆ ನನ್ನನ್ನು ಹುಡುಕಿಕೊಂಡು ಬಂದು,ನಾನೆಷ್ಟೇ ಬೇಡವೆಂದರೂ ಮಗಳಿಂದ ನನ್ನ ಕಾಲಿಗೆ ನಮಸ್ಕಾರ ಮಾಡಿಸಿ, ತನ್ನ ಮಗಳ ಲಗ್ನಪತ್ರಿಕೆ ಕೊಟ್ಟು ಹೋದಳು.ಎಷ್ಟೋ ಸಲ ಜನಗಳ ವರ್ತನೆಯಿಂದ ಬೇಸತ್ತ ಮನಸ್ಸಿಗೆ ,ಆ ಕ್ಷಣದಲ್ಲಿ ವೈದ್ಯನಾದದ್ದು  ಸಾರ್ಥಕವೆನಿಸಿತ್ತು.ಮನದಲ್ಲಿ ಒಂದು ಅಲೌಕಿಕ ಸಂತಸ ಮನೆ ಮಾಡಿತ್ತು.       

Monday, March 25, 2013

"ಹೀಗೊಂದು ದೆವ್ವದ ಕಥೆ!"

 ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು.ನನಗೆ ಪರಿಚಯವಿದ್ದ ಮಹಿಳಾ ವೈದ್ಯೆಯೊಬ್ಬರು ಹಳ್ಳಿಯೊಂದರ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ  ಕೆಲಸಕ್ಕೆ ಸೇರಿದ ಹೊಸತು.ಅವರಿದ್ದ ಕ್ವಾರ್ಟರ್ ನ ಸುತ್ತ ಮುತ್ತ  ರಾತ್ರಿ ದೆವ್ವಗಳು ಓಡಾಡುತ್ತವೆ ಎಂದು ಪುಕಾರಿತ್ತು.ಒಬ್ಬರ ಬಾಯಿಂದ ಮತ್ತೊಬ್ಬರಿಗೆ ರೆಕ್ಕೆ ಪುಕ್ಕ ಸೇರಿ ದೆವ್ವದ ಕಥೆ 'ಭೂತಾಕಾರವಾಗಿ' ಬೆಳೆದಿತ್ತು.ಸುಮಾರು ಜನ ದೆವ್ವವನ್ನು ತಾವು ಖುದ್ದು ನೋಡಿದುದಾಗಿ ಪ್ರಮಾಣ ಮಾಡಿ ಅದು ಹೇಗಿತ್ತು ಎಂಬುದನ್ನು ರಂಗು ರಂಗಾಗಿ ವರ್ಣಿಸಿದರು.ಒಂದು ರಾತ್ರಿ ಸುಮಾರು ಒಂದು ಗಂಟೆಯ ಹೊತ್ತಿಗೆ ಮಹಿಳಾ ವೈದ್ಯಾಧಿಕಾರಿಗಳ ಮನೆ ಬಾಗಿಲು ಜೋರಾಗಿ ಬಡಿಯತೊಡಗಿತು.ವೈದ್ಯೆ ನಿದ್ದೆಯಿಂದ ಎದ್ದು "ಯಾರು?"ಎಂದು ಕೇಳಿದರು."ನಾನು ಭೂತಯ್ಯ!"ಎಂದು ಗೊಗ್ಗರು ದನಿಯಲ್ಲಿ ಉತ್ತರ ಬಂತು.ಮೊದಲೇ ಭೂತದ ಕಥೆಗಳಿಂದ ಹೆದರಿದ್ದ ವೈದ್ಯೆ"ಭೂತಯ್ಯ"ಎನ್ನುವ ಹೆಸರು ಕೇಳಿ ಕಂಗಾಲಾಗಿ ಬಾಗಿಲು ತೆರೆಯುವ ಧೈರ್ಯ ಮಾಡಲಿಲ್ಲ.ರಾತ್ರಿಯೆಲ್ಲಾ ಹೆದರಿಕೆಯಿಂದ ಗಡ ಗಡ ನಡುಗುತ್ತಾ ,ನಿದ್ದೆ ಇಲ್ಲದೆಯೇ ಕಳೆದರು.ಮಾರನೇ ದಿನ ಭೂತಯ್ಯ ಎನ್ನುವ ವ್ಯಕ್ತಿ ಆಸ್ಪತ್ರೆಗೆ ಬಂದು ತಾನು ರಾತ್ರಿ ಜ್ವರವಿದ್ದ ಕಾರಣ ವೈದ್ಯೆಯ ಮನೆಗೆ ಬಂದಿದ್ದುದಾಗಿಯೂ,ವೈದ್ಯೆ ಬಾಗಿಲು ತೆಗೆಯದೆ ಇದ್ದುದರಿಂದ ತನಗಾದ ತೊಂದರೆಗೆ ಮೇಲಧಿಕಾರಿಗಳಿಗೆ ದೂರನ್ನು ನೀಡುವುದಾಗಿಯೂ, ಕೂಗಾಡಿದ್ದನಂತೆ.ಭೂತದ ಕಥೆ ಹರಡಿದ್ದಕ್ಕೆ ಸರಿಯಾಗಿ ಕಾಕತಾಳೀಯ ವೆಂಬಂತೆ ಆ ವ್ಯಕ್ತಿಯ ಹೆಸರೂ ಭೂತಯ್ಯನೇ   ಆಗಿರಬೇಕೆ!!!!

Wednesday, March 6, 2013

"ಮಹಿಳೆ"

ಮಹಿಳೆ..........!!!
ಅವಳಲ್ಲೇ ಇದೆ 'ಇಳೆ'!!!
ಇಳೆಯ ತಾಳ್ಮೆ,ಸಹನೆ
ಧೈರ್ಯ ಸ್ಥೈರ್ಯ
ಪ್ರೀತಿ,ವಾತ್ಸಲ್ಯ 
ಕ್ಷಮೆ ,ದಮೆ !!!
ಕರುಣಾಮಯಿ  ಭೂರಮೆ!!!
ಇಳೆಯನ್ನೂ,
ಮಹಿಳೆಯನ್ನೂ,
ಗೌರವಿಸದ
ಬಾಳೂ
ಒಂದು ಬಾಳೆ?!!!
ದೌರ್ಜನ್ಯಗಳ  ಮೆಟ್ಟಿ ನಿಂತು
ದನಿ ಎತ್ತರಿಸಿ
ಕೇಳುವ ಸಮಯವಿದೀಗ ತಾಯಿ
ನೀನೇ .........,
ಈ ಪ್ರಶ್ನೆ ಕೇಳೆ.

(ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಜಗತ್ತಿನ ಎಲ್ಲಾ ಮಹಿಳೆಯರಿಗೂ ನನ್ನ ವಂದನೆಗಳು.ನಮ್ಮ ಮಕ್ಕಳಿಗೆ ಮಹಿಳೆಯರನ್ನು ಗೌರವಿಸುವುದನ್ನು ಚಿಕ್ಕಂದಿನಿದಲೇ ಕಲಿಸೋಣ."ಎಲ್ಲಿ ಹೆಣ್ಣನ್ನು ಪೂಜನೀಯ ಭಾವನೆಯಿಂದ ಕಾಣುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ "ಎನ್ನುವುದನ್ನು ಹೇಳಿ ಕೊಡೋಣ .ನಮಸ್ಕಾರ.)

Friday, February 15, 2013

"ಬದರಿಯ ಕವನ!!!"

ಬದರಿಯ ಕವನ ಹೀಗೇ
ಎಂದು ಹೇಳುವುದು ಹ್ಯಾಗೆ!!?
ಕತ್ತಲಲ್ಲೊಂದು ಮತಾಪು
ಝಾಗ್ಗನೆ ಬೆಳಗಿದ
ಮಗುವಿನ  ಕೆಂಪಗಿನ ನಗು !!!
ಮನಸ್ಸು ?ಅದೂ ಹಾಗೇ !!!
ನಡೆ  ನುಡಿ,ನೇರ!!!
ಅದರದೇ ಒಂದು ಮುಗ್ಧ ಛಾಪು !!
ಕಾರ್ಗತ್ತಲ ರಾಶಿಯಲ್ಲಿ
ಮಿಂಚು ಹುಳುಗಳ ಜಾತ್ರೆ!!!
ಬದರಿಯ ಕವನಗಳ ಯಾತ್ರೆ
ಎಂದೂ ಬರಿದಾಗದ
ಇಂದ್ರಜಾಲ ಪಾತ್ರೆ!!!
ಬದರಿಯ  ಕವನ
ಗಮ ಗಮಿಸುವ ದವನ!!!
ಹೀಗೇ ಎಂದು ...............,
ವ್ಯಾಖ್ಯಾನಿಸುವುದು ಹೇಗೆ ಅದನ್ನ ?
ಬಣ್ಣಿಸ ಬಹುದೇ
ಕವನದ ಆತ್ಮವನ್ನ!!!?
ಬದರಿಯ ಕವನ ಇರುವುದೇ ಹಾಗೆ!!!
ಹೀಗೇ ಎಂದು ಹೇಳದ ಹಾಗೆ!!!

(ಸ್ನೇಹಿತ ಬದರಿನಾಥ್ ಪಲವಳ್ಳಿಯವರ ಕವನಗಳ ಬಗ್ಗೆ ಒಂದು ಕವನ)

Wednesday, January 16, 2013

"ಮೋಹನ್ ಲಾಡು ಮತ್ತು ಮಂಗಗಳು!!!"

ಹೋದ ತಿಂಗಳು ನಡೆದ ನನ್ನ ನಾದಿನಿಯ ಮಗಳ ಮದುವೆಗೆ ,ಬಂಧುಗಳಿಗೆ ಕೊಡಲು ಅಡಿಗೆಯವರಿಗೆ ಹೇಳಿ ಹಲವಾರು ತಿಂಡಿಗಳನ್ನು ಮಾಡಿಸಿದ್ದರು.ಅದರಲ್ಲಿ 'ಮೋಹನ್ ಲಾಡು'ವಿಶೇಷವಾಗಿತ್ತು !ಮಾಮೂಲಿಗಿಂತ ಸ್ವಲ್ಪ ಜಾಸ್ತಿಯೇ ಗಡುಸಾಗಿದ್ದ ಅದನ್ನು ಸಲೀಸಾಗಿ ಮುರಿಯಲು ಆಗುತ್ತಿರಲಿಲ್ಲ.
ನನ್ನ ಕಿರಿಯ ನಾದಿನಿಯ ಗಂಡ ಸ್ವಲ್ಪ ಹಾಸ್ಯ ಸ್ವಭಾವದವರು."ಇದರ ಜೊತೆಗೆ ಸುತ್ತಿಗೆಯೊಂದನ್ನು ಫ್ರೀಯಾಗಿ ಕೊಟ್ಟರೆ ಮಾತ್ರ ಇದನ್ನು ತೆಗೆದುಕೊಂಡು ಹೋಗುತ್ತೇನೆ"ಎಂದು ತಮಾಷೆ ಮಾಡಿದರು.ನನ್ನ ಹೆಂಡತಿ "ಇದನ್ನು ತಿಂದರೆ ,ನನ್ನ ಹಲ್ಲಿನ ಕ್ಯಾಪ್ ಗಳೆಲ್ಲಾ ಉದುರಿ ಬೀಳುತ್ತವೆ!ನನಗೆ ಮಾತ್ರ ಇದು ಬೇಡ"ಎಂದಳು.

ನನ್ನ ಹಿರಿಯ ನಾದಿನಿಯ ಮಗಳು "ಏನೂ ಆಗೋಲ್ಲಾ,ಸ್ವಲ್ಪ ಗಟ್ಟಿಯಾಗಿದೆ.ಆದರೆ ರುಚಿ ಚೆನ್ನಾಗಿದೆ"ಎಂದು ಬೇರೆ ತಿಂಡಿಗಳ ಜೊತೆಗೆ ಮೋಹನ್ ಲಾಡುವನ್ನೂ ತೆಗೆದುಕೊಂಡು ಹೋಗಿ ತಮ್ಮ ಮನೆಯ ಡೈನಿಂಗ್ ಟೇಬಲ್ ಮೇಲೆ ಇಟ್ಟಿದ್ದಳು.ಅಷ್ಟರಲ್ಲಿ ಮಂಗಗಳ ಗುಂಪೊಂದು ಮನೆಯೊಳಗೆ ದಾಳಿ ಇಟ್ಟು,ಅಲ್ಲಿದ್ದ ಎಲ್ಲಾ ತಿಂಡಿಗಳನ್ನೂ ಎತ್ತಿಕೊಂಡು ಹೋದವು.ಅಲ್ಲೇ ಮನೆಯ ಹೊರಗಿನ ಕಾಂಪೌಂಡ್ ಮೇಲೇ ಕುಳಿತು, ಎಲ್ಲಾ ತಿಂಡಿಗಳನ್ನೂ ಹಂಚಿ ಕೊಂಡು ತಿಂದು ಮುಗಿಸಿದವು.ಆದರೆ ಅವು ಎಷ್ಟು ಪ್ರಯತ್ನಿಸಿದರೂ ಮೋಹನ್ ಲಾಡುವನ್ನು ಮಾತ್ರ  ಕಡಿದು ತಿನ್ನಲಾಗಲಿಲ್ಲ!ಕಡಿದೂ ಕಡಿದು ದವಡೆ ನೋವು ಬಂದಿರಬೇಕು, ಪಾಪ! ಕಡೆಗೆ ಮಂಗಗಳು ಬೇಸತ್ತು , "ನಿಮ್ಮ ಲಾಡುಗಳು ನಿಮಗೇ ಇರಲಿ"ಎನ್ನುವಂತೆ ಮೋಹನ್ ಲಾಡು ಗಳನ್ನು,ಮನೆಯೊಳಗೇ ಬಿಸುಟು,ಸಿಟ್ಟಿನಿಂದ 'ಗುರ್ರೆನ್ನುತ್ತಾ' ಅಲ್ಲಿಂದ ಕಾಲ್ಕಿತ್ತವಂತೆ!!!

Tuesday, December 18, 2012

"ಹೆಸರಿನಲ್ಲಿ ಹಾಸ್ಯ!!!"

ದಿನನಿತ್ಯದ,ಏಕತಾನತೆಯ,ಜಂಜಾಟದ ಬದುಕಿನಲ್ಲೂ ಕೆಲವೊಮ್ಮೆ ನಡೆಯುವ ಹಾಸ್ಯ ಪ್ರಸಂಗಗಳು ಬದುಕನ್ನು ಹಸನಾಗಿಸುತ್ತವೆ.

ಮೊನ್ನೆ ನಮ್ಮ ಆಸ್ಪತ್ರೆಯ ಹೊರ ರೋಗ ವಿಭಾಗಕ್ಕೆ ನಲವತ್ತೇಳು ವರ್ಷ ವಯಸ್ಸಿನ ಮಹಿಳಾ ರೋಗಿಯೊಬ್ಬರು ಚೀಟಿ ಬರೆಸಿಕೊಂಡು ಬಂದರು.ಚೀಟಿಯಲ್ಲಿ,ಅವರ ಹೆಸರನ್ನು 'ಹೇಮಂತ',ಎಂದು ಬರೆಯಲಾಗಿತ್ತು.'ಅರೇ....! ಇದು ಸಾಮಾನ್ಯವಾಗಿ ಗಂಡಸರು ಇಟ್ಟುಕೊಳ್ಳುವ ಹೆಸರಲ್ಲವೆ....?!' ಅನಿಸಿತು. ಆ ಹೆಂಗಸನ್ನು ಹೆಸರೇನೆಂದು ಕೇಳಿದೆ.ಅದಕ್ಕವರು "ಹೇಮ" ಅಂದರು!ಚೀಟಿ ಬರೆದು ಕೊಟ್ಟ ನನ್ನ ಶಿಷ್ಯನನ್ನು ಕರೆದು, 'ಏನಪ್ಪಾ ಇದು ಇವರ ಹೆಸರನ್ನು"ಹೇಮಂತ"ಅಂತ ಬರೆದಿದ್ದೀಯಲ್ಲಾ ?'ಎಂದೆ.ಅದಕ್ಕವನು'ಸರ್ ....ಎರಡೆರಡು ಸಲ ಕೇಳಿದೆ .ಅವರು "ಹೇಮಂತ"ಎಂದೇ  ಹೇಳಿದರು ' ಎಂದ ಭೂಪ!!

ಆ ಹೆಂಗಸಿಗೆ ನಡೆದ ಪರಪಾಟು ಅರ್ಥವಾಗಿ ನಗತೊಡಗಿದರು.ಚೀಟಿ ಬರೆಯುವವನು ಹೆಸರೇನು ಎಂದು ಎರಡೆರಡು ಸಲ ಕೇಳಿದಾಗ, ಇವರು ಎರಡು ಸಲವೂ,"ಹೇಮ ಅಂತ "ಎಂದು ಉತ್ತರಿಸಿದ್ದರು."ಹೇಮ ಅಂತ "ಅನ್ನುವುದನ್ನು,ನನ್ನ  ಶಿಷ್ಯ "ಹೇಮಂತ"ಎಂದು ಅರ್ಥ ಮಾಡಿ ಕೊಂಡಿದ್ದ!!! ಆದ ಎಡವಟ್ಟು ಅರ್ಥವಾಗಿ ಅವನೂ ,ನಗುತ್ತಾ ಚೀಟಿ ಬರೆಯಲು ಹೋದ.ಆಸ್ಪತ್ರೆಯ ಎಲ್ಲರಿಗೂ ಗೊತ್ತಾಗಿ,ಎಲ್ಲರೂ ನಕ್ಕಿದ್ದೇ, ನಕ್ಕಿದ್ದು !!!

Thursday, December 13, 2012

"ಎಂತಹ ಅದ್ಭತ ಪ್ರೀತಿ ಅದು ....!!!"

ಅದೊಂದು ಸಾಧಾರಣ ಬೀದಿ ನಾಯಿ.ಆದರೆ ಅದರಲ್ಲಿ ಎಂತಹ ಅಸಾಧಾರಣ ಪ್ರೀತಿ ಇದೆ ಮತ್ತು ಆ ಪ್ರೀತಿಯಲ್ಲಿ ಎಂತಹ ಮಾಂತ್ರಿಕತೆ ಇದೆ ಎನ್ನುವುದು ಅದನ್ನು ಅನುಭವಿಸಿದವರಿಗೇ  ಗೊತ್ತು!ಸುಮಾರು ಹತ್ತು ವರ್ಷಗಳಿಂದ ಅದನ್ನು ನೋಡುತ್ತಿದ್ದೇವೆ.ತಿಂಗಳಿಗೋ,ಎರಡು ತಿಂಗಳಿಗೋ ಒಮ್ಮೆ ಬೆಂಗಳೂರಿಗೆ ಹೋದಾಗ ಸಾಮಾನ್ಯವಾಗಿ  ನಾವು 'ಕಾವಲ್  ಬೈರ್ ಸಂದ್ರ' ದಲ್ಲಿರುವ   ನೆಂಟರೊಬ್ಬರ ಮನೆಯಲ್ಲೇ ಉಳಿದುಕೊಳ್ಳುವುದು.ಆ ನಾಯಿ ಒಮ್ಮೊಮ್ಮೆ  ಗೇಟಿನ ಒಳಗೆ ಬಂದು ಹಾಯಾಗಿ ಚಪ್ಪಲಿಗಳಿರುವ ಮೂಲೆಯೊಂದರಲ್ಲಿ ಹಾಗೆಯೇ ಮುದುರಿಕೊಂಡು ಮಲಗುತ್ತದೆ.ಮನೆಯೊಡತಿಯ  ದನಿ ಕೇಳಿದರೆ ಸಾಕು, ಹೊರಕ್ಕೆ ಓಟ!ಆದರೆ ನಾವೆಲ್ಲಾ ಬಂದಾಗ ಅದಕ್ಕೇನೋ ಖುಷಿ.ಅದು ಹೇಗೋ ನಾವು ಬಂದಿದ್ದು ಪತ್ತೆ ಹಚ್ಚಿ ,ಬಾಲ ಅಲ್ಲಾಡಿಸುತ್ತಾ ಒಳಗೆ ಬಂದು ನಮ್ಮ ಮೇಲೆ ಎಗರುತ್ತದೆ.ಪ್ರೀತಿಯಿಂದ ತಲೆ ಸವರಿಸಿಕೊಳ್ಳುತ್ತದೆ!ನಿಲ್ಲಿಸಿದರೆ ,ಬಲಗಾಲನ್ನು ಮೇಲೆತ್ತಿ ,ಮತ್ತೆ ತಲೆ ಸವರುವಂತೆ ಸನ್ನೆ ಮಾಡುತ್ತದೆ!ಮನೆಯೊಡತಿ ಬಂದು ಎಷ್ಟು ಗದರಿದರೂ ಆಚೆ ಹೋಗುವುದಿಲ್ಲ!ನಾವೆಲ್ಲಾ ಇದ್ದೇವೆ  ಅನ್ನೋ ಭಂಡ ಧೈರ್ಯವೋ ಏನೋ!ಮನೆಗೆ ಬಂದವರು ಅಂಗಡಿಗೆ ಹೋಗಿ ಅದಕ್ಕೆ  ಒಂದು ಚೂರು ಬನ್ನನ್ನೋ ,ಬ್ರೆಡ್ಡನ್ನೋ ಹಾಕಿದರೆ ಸ್ವರ್ಗ ಸಿಕ್ಕವರಂತೆ ಆಡುತ್ತದೆ!ನಾನು ಹೋದಾಗ ಅದರ ಬಳಿ ಸ್ವಲ್ಪ ಹೊತ್ತು ಕುಳಿತು ಅದರ ಪ್ರೀತಿಯ ವಲಯದ ತರಂಗಗಳನ್ನು ಅನುಭವಕ್ಕೆ ತಂದು ಕೊಳ್ಳುತ್ತೇನೆ.ಅದೆಂಥದೋ ಅನಿರ್ವಚನೀಯ ಆನಂದ ಸಿಗುತ್ತದೆ.ಈ ಸಲ ಹೋದ ವಾರ ಹೋದಾಗ ಒಂದು ಅಪೂರ್ವ ಘಟನೆ ನಡೆಯಿತು.ಅದಕ್ಕೆ  ಬಹಳ ಪ್ರೀತಿ ಪಾತ್ರರೊಬ್ಬರು ಬೆಳೆಗ್ಗೆ ಒಂಬತ್ತು ಗಂಟೆಗೆ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು..ಅದೆಲ್ಲಿತ್ತೋ ಮಹರಾಯ,ಸರಿಯಾದ ಸಮಯಕ್ಕೆ ಬಾಲ  ಅಲ್ಲಾಡಿಸಿಕೊಂಡು ಬೀಳ್ಕೊಡಲು ಹಾಜರಾಯಿತು!ಅವರು ಕಾರನ್ನು ಹತ್ತಿದ ಮೇಲೆ,ಅದಕ್ಕೆ  ಅವರ ಮುಖ ಸರಿಯಾಗಿ ಕಾಣಿಸುತ್ತಿರಲಿಲ್ಲ.ತಕ್ಷಣ ಎದುರು ಮನೆಯ ಕಾಂಪೌಂಡ್ ಹತ್ತಿ ಅವರು ಹೋಗುವುದನ್ನೇ ನೋಡುತ್ತಾ ಕುಳಿತಿತ್ತು!ಕಾರು ಮುಂದೆ ಹೋದ ಮೇಲೆ ,ಕೆಳಗಿಳಿದು ಗೇಟಿನ ಬಳಿ ನಿಂತಿದ್ದ ನಮ್ಮ ಬಳಿ ಬಾಲ  ಅಲ್ಲಾಡಿಸುತ್ತಾ ಬಂತು.ಆ ಮೂಕ ಪ್ರಾಣಿಯ ಪ್ರೀತಿ ಕಂಡು ಮೂಕ ವಿಸ್ಮಿತ ನಾಗಿದ್ದೆ!! ಅಬ್ಬಾ!!.......ಎಂತಹಾ ಅದ್ಭುತ ಪ್ರೀತಿ ಅದು!!!

Thursday, December 6, 2012

"ಸರ್.......ಸೆಂಟ್ ಬರುತ್ತೆ!!! "

ನನ್ನ ವೈದ್ಯಕೀಯ ವೃತ್ತಿ ಜೀವನದ ಸುಮಾರು ಮೂವತ್ತಾರು ವರ್ಷಗಳಲ್ಲಿ ಇದೇ  ಮೊದಲ ಬಾರಿಗೆ ಇಂತಹ ತೊಂದರೆಯೊಂದನ್ನು ನಾನು ಕೇಳಿದ್ದು !!! ಮೊನ್ನೆ ಆಸ್ಪತ್ರೆಯ ಪರೀಕ್ಷಾ ಕೊಠಡಿಯಲ್ಲಿ ರೋಗಿಯೊಬ್ಬ ಬಂದು ಕುಳಿತ."ಏನಪ್ಪಾ....,ಏನು ತೊಂದರೆ?" ಎಂದೆ ."ಸಾರ್ ...,ಮೂತ್ರದಲ್ಲಿ ಸೆಂಟ್ ಬರುತ್ತೆ "ಎಂದ.ಈ ಹೊಸ ತರಹದ ಕಂಪ್ಲೈಂಟ್  ಕೇಳಿ ಒಂದು ಕ್ಷಣ ಅವಾಕ್ಕಾದೆ!!!ಅವನ ತೊಂದರೆ ಅರ್ಥವಾದರೂ,ಸ್ವಲ್ಪ ತಮಾಷೆ ಮಾಡೋಣ ಎನಿಸಿ,ನಗುತ್ತಾ "ಅಲ್ಲಪ್ಪಾ.......,ಎಲ್ಲರೂ ಸೆಂಟ್ ಹೊಡ್ಕೋತಾರೆ.ನಿನಗೆ ಮೂತ್ರದಲ್ಲೇ ಸೆಂಟ್ ಬರೋದಾದ್ರೆ ಒಳ್ಳೇದೇ ಆಯ್ತಲ್ಲಾ!!!"ಎಂದೆ .ರೋಗಿಗೆ ತನ್ನ ತಪ್ಪು ಅರಿವಾಗಿ,ಅವನೂ ನಗುತ್ತಾ "ಅಯ್ಯೋ ......ಆ ಸೆಂಟ್ ಅಲ್ಲಾ ಸಾರ್,ಒಂದು ರೀತಿ ಕೆಟ್ಟ ವಾಸನೆ ಬರುತ್ತೆ"ಎಂದ.ಪಾಪ 'ಸ್ಮೆಲ್ 'ಅನ್ನುವುದಕ್ಕೆ ಬದಲಾಗಿ ಸೆಂಟ್ ಅಂದಿದ್ದ. ಕನ್ನಡದಲ್ಲಿ 'ವಾಸನೆ ಬರುತ್ತೆ 'ಅಂದಿದ್ದರೆ ಆಗುತ್ತಿತ್ತಲ್ಲಪ್ಪಾ ...,ಇಷ್ಟೆಲ್ಲಾ ಕಸರತ್ತು ಯಾಕೆ ಎಂದು ಹೇಳಿ ಔಷಧಿ ಕೊಟ್ಟು ಕಳಿಸಿದೆ.ವೈದ್ಯ ಮಿತ್ರರೊಬ್ಬರಿಗೆ ಈ ಘಟನೆಯ ಬಗ್ಗೆ ಹೇಳಿದಾಗ,'ದಿನ ನಿತ್ಯ ಇಂತಹ ಅನುಭವಗಳು ಆಗುತ್ತಲೇ ಇರುತ್ತವೆ ಸಾರ್!! "ಮೋಶನ್ ಟೆಸ್ಟ್ "   ಮಾಡಿ ಅನ್ನೋಕೆ "ಮೋಹನ್ ಟೆಸ್ಟ್" ಮಾಡಿ ಅಂತಾರೆ!"ಸ್ಟೂಲ್ ಟೆಸ್ಟ್ ಮಾಡಿ" ಅನ್ನೋಕೆ "ಟೂಲ್ ಟೆಸ್ಟ್ ಮಾಡಿ "ಅಂತಾರೆ!!!' ಎಂದರು ನಗುತ್ತಾ.

Tuesday, November 13, 2012

"ಡೌವ್ ಸೋಪ್ ಹಾಕಿ!!!"

ಈಗ ಸುಮಾರು ಹನ್ನೆರಡು ವರುಷಗಳ ಹಿಂದೆ ನಮ್ಮ ಆಸ್ಪತ್ರೆಗೆ ಇನ್ನೂ ಮದುವೆಯಾಗದ ತರುಣ ವೈದ್ಯರೊಬ್ಬರು ಸೇರಿದರು.ಸದಾ ನಗುಮುಖ.ಮೇಲೆ ಸ್ಪುರದ್ರೂಪಿ.ಸ್ವಾಭಾವಿಕವಾಗಿ ಅವರ ಬಳಿ  ತರುಣಿಯರೇ ಹೆಚ್ಚು ಬರುತ್ತಿದ್ದರು.ಒಮ್ಮೆ ಹುಡುಗಿಯರಿಬ್ಬರು ಅವರನ್ನು ನೋಡುವ ಸಲುವಾಗಿ ಆಸ್ಪತ್ರೆಗೆ ಬಂದರು."ಏನಮ್ಮಾ ಏನು ತೊಂದರೆ ?'ಎಂದರು ಡಾಕ್ಟರು.ಹುಡುಗಿಯರು,ಏನೋ ಒಂದು ಕೇಳೋಣವೆಂದುಕೊಂಡು  "ಮೊಡವೆಗೆ ಯಾವ ಸೋಪು ಹಾಕಬೇಕು ಹಾಕಬೇಕು ಸಾರ್?"ಎಂದು ನುಲಿಯುತ್ತಾ ಕೇಳಿದರು.ನಮ್ಮ ಚೆಂದದ ಡಾಕ್ಟರು ಸ್ವಾಭಾವಿಕವಾಗಿ"ಡೌವ್ ಹಾಕಿ"ಎಂದರು.ಹುಡುಗಿಯರು ಕಿಸಿ,ಕಿಸಿ ನಗುತ್ತಾ ಅಲ್ಲಿಂದ ಕಾಲ್ಕಿತ್ತರು.ಇವರಿಗೆ ಡೌವ್ ಸೋಪನ್ನು ಹಾಕಿ ಎಂದು ಹೇಳಿದ್ದಕ್ಕೆ ಹಾಗೇಕೆ ನಗುತ್ತಾ ಓಡಿಹೋದರೆಂಬುದು ಅರ್ಥವಾಗದೇ ನನ್ನ ಛೇಂಬರಿಗೆ ಬಂದು,ನಡೆದದ್ದೆನ್ನೆಲ್ಲಾ ತಿಳಿಸಿ "ಹುಡುಗಿಯರು ಹಾಗೇಕೆ ನಗುತ್ತಾ ಓಡಿ  ಹೋದರು ಸಾರ್"ಎಂದರು.ನಾನು 'ಡೌವ್ ಹಾಕುವುದು'ಎನ್ನುವುದರ ಅರ್ಥವನ್ನು ಹೇಳಿದ ಮೇಲೆ"ಅಯ್ಯೋ ರಾಮ"ಎನ್ನುತ್ತಾ,ಆದ ಎಡವಟ್ಟಿಗೆ  ಡಾಕ್ಟ್ರು ನಾಚಿಕೆಯಿಂದ ಇನ್ನಷ್ಟು ಕೆಂಪಾದರು.ಈಗ ಅವರಿಗೆ ಮದುವೆಯಾಗಿ ಏಳು ವರ್ಷದ ಮಗನಿದ್ದಾನೆ.ಹೆಂಡತಿಯೂ ವೈದ್ಯೆ.ಹೋದವಾರ ಬೆಂಗಳೂರಿನಲ್ಲಿ ಮನೆಯವರೆಲ್ಲಾ ಸೇರಿದಾಗ ಈ ಘಟನೆಯನ್ನು ನೆನಪಿಸಿಕೊಂಡು,ಅವರನ್ನು ಛೇಡಿಸುತ್ತಾ , ಎಲ್ಲರೂ ನಕ್ಕಿದ್ದೇ ನಕ್ಕಿದ್ದು.

Wednesday, November 7, 2012

"ಆನಂದ ನಿಮ್ಮೊಳಗೇ ಇದೆ !!!!"

"ನಾನು ಆನಂದದಿಂದ ಇರಬೇಕು ಎಂಬ ನಿಮ್ಮ ಅಂತರ್ಯದ ಭಾವನೆಯು ಯಾವುದೇ ಬೋಧನೆ,ತತ್ವ ಶಾಸ್ತ್ರದ ಗ್ರಂಥಗಳು ಅಥವಾ ಧರ್ಮದಿಂದ ಆದದ್ದಲ್ಲ.ನಾನು ಆನಂದದಿಂದ ಇರಬೇಕು ಎಂಬುದೇ ಜೀವನದ ಮೂಲಭೂತ ಅಪೇಕ್ಷೆಯಾಗಿದೆ"



ಬ್ರಹ್ಮಾನಂದ ವೆಂದರೆ ಸೃಷ್ಟಿಯೇ ಆನಂದ .ಆಳವಾದ ಆಂತರ್ಯದ ಅಂಶವು ಸೃಷ್ಟಿಯ  ಮೂಲವಾದ ಆನಂದವೇ ಆಗಿದೆ.ನಾವು ಬ್ರಹ್ಮಾನಂದವೆಂದು ಹೇಳುವಾಗ ಸ್ವಯಂ  ಸೃಷ್ಟಿ ಕರ್ತನನ್ನೇ  ಕುರಿತು ಹೇಳುತ್ತಿರುತ್ತೇವೆ.ಅವನೇ ಆನಂದ ಪೂರ್ಣ ಅಥವಾ ಆನಂದ ಭರಿತ.
ಸೃಷ್ಟಿಯ ಮೂಲ ಬೇರೆಲ್ಲೋ ಕುಳಿತಿಲ್ಲ!ನಿಮ್ಮ ಶರೀರವನ್ನೇ ಅವಲೋಕಿಸಿದಾಗ ,ನೀವು ಜನಿಸಿದ ಕ್ಷಣದಿಂದ ಇಲ್ಲಿಯವರೆಗೂ ಅದೆಷ್ಟು ವೃದ್ಧಿಯಾಗಿದೆ!! ಈ ಬೆಳವಣಿಗೆಯು ಬಾಹ್ಯದ ಹಿಗ್ಗಿಸುವಿಕೆಯಿಂದ ಉಂಟಾದುದಲ್ಲ.ಸೃಷ್ಟಿಕರ್ತನು ನಮ್ಮ ಅಂತರ್ಯದಲ್ಲಿ ನಿರಂತರವಾಗಿ ಕ್ರಿಯಾ ಶೀಲನಾಗಿರುವುದರಿಂದ ಇವೆಲ್ಲವೂ ಸಂಭವಿಸುತ್ತಿದೆ.

ಪ್ರಸ್ತುತದಲ್ಲಿ ಸೃಷ್ಟಿಯ ಮೂಲವು ನಿಮ್ಮ ಆಂತರ್ಯದಲ್ಲೇ ಇದೆ.ಅದೇ ಆನಂದ ಮಯ.ನಿಮ್ಮ ಜೀವನದಲ್ಲಿ ಸೃಷ್ಟಿಯ ಈ ಮೂಲಭೂತ ಶಕ್ತಿಯು ಪ್ರಕಾಶಗೊಂಡರೆ,ಅದು ಹೊರ ಹೊಮ್ಮಲು ನೀವು ಅನುವು ಮಾಡಿ ಕೊಟ್ಟರೆ ಆನಂದವಾಗಿರುವುದೊಂದೇ ನಿಮಗಿರುವ ಮಾರ್ಗ.ನಿಮ್ಮ ಆಂತರ್ಯದ ಸಾರದೊಂದಿಗೆ ನೀವು ಏಕತಾನ ಹೊಂದದೆ ಇರುವುದರಿಂದ ಬೇರೆ ಸ್ಥಿತಿಗಳು ನಿಮ್ಮ ಭಾಗವಾಗಿವೆ.ನೀವು ಅನುಭವಿಸುವ ಇನ್ನೆಲ್ಲಾ ರೀತಿಯ ಸ್ಥಿತಿ ಗಳು ನಿಮ್ಮ ಮನಸ್ಸ್ಸು ನಿಮ್ಮ ನಿಯಂತ್ರಣ ಮೀರಿದುದರಿಂದ ಉಂಟಾದವುಗಳಾಗಿವೆ.

ಜೀವನದಲ್ಲಿ ಕ್ಲೇಶಗಳು ಉಂಟಾಗುವುದು ಯಾವುದೇ ಬಾಹ್ಯ ಸನ್ನಿವೇಶ ಗಳಿಂದಾಗಲೀ ,ಯಾವುದೇ ವ್ಯಕ್ತಿಗಳಿಂದಾಗಲೀ ಅಲ್ಲವೆಂಬುದನ್ನು ನಾವು ಅರಿತಿಲ್ಲ.ಬಾಹ್ಯ ಸನ್ನಿವೇಶಗಳು ಶಾರೀರಿಕ ನೋವನ್ನು ಉಂಟು ಮಾಡಬಹುದು.ಆದರೆ ಮಾನಸಿಕ ನರಳಾಟ ಹಾಗೂ ದುಃಖಗಳು ನಿಮ್ಮ ಅಂಕೆ ಮೀರಿದ ಮನಸ್ಸಿನಿಂದಾದದ್ದು.

"ನಾನು ಆನಂದ ದಿಂದ ಇರಬೇಕು" ಎಂಬ ನಿಮ್ಮ ಆಂತರ್ಯದ ಭಾವನೆಯು ಯಾವುದೇ ಬೋಧನೆ,ತತ್ವ ಶಾಸ್ತ್ರ,ಗ್ರಂಥಗಳು,ಅಥವಾ ಧರ್ಮದಿಂದ ಆದದ್ದಲ್ಲ."ನಾನು ಆನಂದದಿಂದ ಇರಬೇಕು "ಎನ್ನುವುದೇ ಜೀವನದ ಅಪೇಕ್ಷೆಯಾಗಿದೆ.ನಿಮ್ಮೊಳಗಿರುವ ಚೈತನ್ಯವು ಆನಂದವನ್ನು ಆಶಿಸುತ್ತದೆ.ಏಕೆಂದರೆ ನಿಮ್ಮೊಳಗಿರುವ ಸೃಷ್ಟಿಯ ಮೂಲ ಭೂತ ಉಗಮದ ಪ್ರಕೃತಿ ಸ್ವಭಾವವೇ ಆನಂದವಾಗಿದೆ.


(ಸದ್ಗುರು ಜಗ್ಗಿ ವಾಸುದೇವ್ ಅವರ "ಅನುದಿನದ ಆನಂದ "ಎಂಬ ಪುಸ್ತಕದಿಂದ ಆಯ್ದ ಭಾಗ)




Tuesday, November 6, 2012

"ಆತ್ಮ ಪ್ರಶಂಶೆ ಒಳ್ಳೆಯದಲ್ಲ"

ನಮ್ಮಲ್ಲಿ ಹಲವಾರು ಮಂದಿಗೆ ತಮ್ಮ ಬಗ್ಗೆ ಅತಿಯಾಗಿ ಹೇಳಿಕೊಳ್ಳುವುದು ಒಂದು ಚಟವಾಗಿದೆ.ಇಂತಹ ಚಟವೊಂದು ತಮಗಿದೆ,ಅದರಿಂದ ಬೇರೆಯವರಿಗೆ ಕಿರಿ ಕಿರಿಯಾಗುತ್ತಿದೆ ಎನ್ನುವ ಅರಿವೂ ಅವರಿಗಿರುವುದಿಲ್ಲ.ಆತ್ಮ ಪ್ರಶಂಶೆ,ಆತ್ಮ ಹತ್ಯೆಗೆ ಸಮ ಎನ್ನುತ್ತದೆ ಮಹಾಭಾರತದ ಈ ಕಥೆ.ಕುರುಕ್ಷೇತ್ರದ ಪ್ರಮುಖ ಘಟ್ಟದಲ್ಲಿ ಅರ್ಜುನನಿಲ್ಲದೆ, ಅಭಿಮನ್ಯುವನ್ನು ಕಳೆದುಕೊಳ್ಳಬೇಕಾಯಿತು.ನೊಂದ ಯುಧಿಷ್ಟಿರ,ಅರ್ಜುನನಿಗೆ 'ಮಗನನ್ನು ರಕ್ಷಿಸದ ನಿನ್ನ ಗಾಂಡೀವಕ್ಕೆ ಧಿಕ್ಕಾರ'ಎಂದು ಬಿಟ್ಟ.ಅರ್ಜುನನಾದರೋ ತನ್ನ ಪರಮ ಪ್ರೀತಿಯ ಗಾಂಡೀವವನ್ನು ಹೀಯಾಳಿಸಿದವರನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಎಂದೋ ಪ್ರತಿಜ್ಞೆ ಮಾಡಿದ್ದ .ಇದಕ್ಕೆ ಕೃಷ್ಣ ಅರ್ಜುನನಿಗೆ ಒಂದು ಉಪಾಯ ಸೂಚಿಸಿದ.ಧರ್ಮಜನ ನಿಂದನೆ ಮಾಡು ,ಇದರಿಂದ ಅವನನ್ನು ಕೊಂದಂತೆ ಆಗುತ್ತದೆ ಎಂದ.ಜೀವ ತೆಗೆಯುವುದಕ್ಕಿಂತ ಇದು ಉತ್ತಮವೆಂದು ಅರ್ಜುನ ಒಲ್ಲದ ಮನಸ್ಸಿನಿಂದ ಅಣ್ಣನ ನಿಂದನೆ ಮಾಡಿದ.ಧರ್ಮರಾಯನಂತಹ ಅಣ್ಣನನ್ನು ನಿಂದನೆ ಮಾಡಬೇಕಾಯಿತಲ್ಲ ಎಂದು ಅರ್ಜುನ ನೊಂದು,ಆತ್ಮ ಹತ್ಯೆಗೆ ಸಿದ್ಧನಾದ.ಈ ಬಿಕ್ಕಟ್ಟನ್ನು ಪರಿಹರಿಸಲು ಮತ್ತೆ  ಕೃಷ್ಣ ಬರ ಬೇಕಾಯಿತು.ಅರ್ಜುನನಿಗೆ 'ನಿನ್ನನ್ನು ನೀನೇ ಹೊಗಳಿಕೋ.ಇದು ಅತ್ಮಹತ್ಯೆಗಿಂತ ಕಟುವಾದ ಶಿಕ್ಷೆ 'ಎಂದು ಸೂಚಿಸಿದ.ಅದರಂತೆ ಅರ್ಜುನ ತನ್ನನ್ನು ತಾನೇ ಹೊಗಳಿಕೊಂಡು ಸಧ್ಯದ ಸಂಕಷ್ಟದಿಂದ ಪಾರಾದ.ಪರನಿಂದೆ ಕೊಲೆಗೂ,ಆತ್ಮ ಪ್ರಶಂಶೆ ಆತ್ಮ ಹತ್ಯೆಗೂ ಸಮವೆಂಬುದು ಇದರ ಸಾರಾಂಶ.ಇನ್ನಾದರೂ ನಾವು ಪರ ನಿಂದನೆ ಮತ್ತು ಆತ್ಮ ಪ್ರಶಂಶೆಗಳಿಂದ ದೂರವಿರೋಣವೆ?ನಮಸ್ಕಾರ.
(ನವೆಂಬರ್ ೩,ಶನಿವಾರ ವಿಜಯಕರ್ನಾಟಕ ,ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.ಲೇಖಕರು;ಸ್ವಾಮಿ ಆನಂದ ಪೂರ್ಣ.)

Saturday, September 8, 2012

"ಎಲ್ಲಾ....ಪ್ರೇಯಸಿಗಾಗಿ---!!! "

ಬೆರಳಷ್ಟೇ ಗಾತ್ರದ
ಹಸಿರು ಪುಟ್ಟ ಹಕ್ಕಿ!!
ನುಗ್ಗೆ ಮರದ ಹೂವಿಗೆ
ಲಗ್ಗೆ......... ಹಾಕಿದೆ!!
ನುಗ್ಗೆ ಮರಕ್ಕೋ ರೋಮಾಂಚನ!!
ರೆಂಬೆ ರೆಂಬೆಗೂ ಹಸಿರು ಹುಚ್ಚು!!
ಪಕ್ಕದ ಗುಲ್ಮೊಹರಿಗೆ,
ಮೈ ತುಂಬಾ ಕೆಂಪು ಕಿಚ್ಚು !!
ಗಾಳಿಯಲ್ಲೇ ರೆಕ್ಕೆ ಬಡಿದು,
ಮಧುವ ಹೀರಿದ ಮತ್ತಿನಲ್ಲಿ
ಅಲ್ಲೇ ಒಂದರೆ ಕ್ಷಣ ,
ತೇಲಾಡುವ ತ್ರಿಶಂಕು!!!
ಮತ್ತೆ ಮರದ ಮೇಲೆಕೂತು,
ಗತ್ತಿನಿಂದ ಕತ್ತು ಕೊಂಕಿಸಿ,
ಪುಚ್ಚಗಳ ತಿದ್ದಿ ತೀಡಿ,
ಅತ್ತಿತ್ತ ತಿರುಗಿ ....,
ಚುಂಚದಲ್ಲೊಂದು ಹೂವ ಹಿಡಿದು,
ಪುರ್ರನೆ ಹಾರಿತ್ತು !!!
ಪ್ರೇಯಸಿಯ ಹುಡುಕುತ್ತಾ !!!

Wednesday, August 15, 2012

"ನಂಗಿನ್ನೊಂದು ಕನ್ಯಾ ನೋಡ್ರಪ್ಪಾ !!!!"

ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ ಅದ್ಭುತವಾಗಿತ್ತು!!!ಇದು ನಾನು ಹೇಳಿದ್ದಲ್ಲ.ಬೀಚಿ ಯವರು ತಮ್ಮ ಆತ್ಮ ಕಥನ "ಭಯಾಗ್ರಫಿ"ಯಲ್ಲಿ ಅದರ ಬಗ್ಗೆಯೇ ಒಂದು ಅಧ್ಯಾಯ ವನ್ನು ಬರೆದಿದ್ದಾರೆ.ಹರಪನಹಳ್ಳಿಯಲ್ಲಿದ್ದ ಶೇಷ ಮುತ್ಯ ಮತ್ತು ಕಮಲ ಕಕ್ಕಿ ತೊಂಬತ್ತರ ಸನಿಹದ ವೃದ್ಧ ದಂಪತಿಗಳು.ಆ ವಯಸ್ಸಿನಲ್ಲೂ ಅವರದು ಬತ್ತದ ಉತ್ಸಾಹ ಮತ್ತು ಅದ್ಭುತ ಹಾಸ್ಯ ಪ್ರಜ್ಞೆ!!!ಒಂದು ರಾತ್ರಿ ಶೇಷ ಮುತ್ಯ ಮನೆಯಿಂದ ಹೊರಬಿದ್ದರು.ಒಂದು ಕೈಯಲ್ಲಿ ಬಡಿಗೆ ,ಇನ್ನೊಂದು ಕೈಯಲ್ಲಿ ಕಮಲ ಕಕ್ಕಿಯ ಕೈ.ಕಮಲ ಕಕ್ಕಿಯ ಇನ್ನೊಂದು ಕೈಯಲ್ಲಿ ಕೈ ದೀಪ.ಕಮಲ ಕಕ್ಕಿ ಗಟ್ಟಿ ದನಿಯಲ್ಲಿ ಪೇಚಾಡಿಕೊಂಡರು."ಕಣ್ಣಿಲ್ಲ,ಕಾಲಿಲ್ಲ.ಕುಂತಲ್ಲಿ ಕೂಡೋಲ್ಲಾ ,ನಿಂತಲ್ಲಿ ನಿಲ್ಲೋಲ್ಲಾ!ಮುದಕರಾದ ಮ್ಯಾಲೆ ಮನೆಯಾಗೆ ಸುಮ್ಮನೆ ಕೂಡ ಬಾರದೇನು?"ಇದಕ್ಕೆ ಶೇಷ ಮುತ್ಯನ ಉತ್ತರ "ಏ....,ಏನೇ !! ನೀನೇ ನನ್ನ ಮುದುಕ ಅಂದು ಬಿಟ್ಟರೆ ಮಂದಿ ಅನ್ನದೆ ಬಿಟ್ಟಾರೇ...?"ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು.ಕಮಲ ಕಕ್ಕಿಯೂ "ಮಾತಿಗೇನೂ ಕಮ್ಮಿ ಇಲ್ಲ "ಎಂದು ನಕ್ಕು ಸುಮ್ಮನಾದರು.ಶೇಷ ಮುತ್ಯ ಮತ್ತು ಕಮಲ ಕಕ್ಕಿ ಇಬ್ಬರೂ ಒಂದೇ ಬಾರಿಗೆ ಹಾಸಿಗೆ ಹಿಡಿದರು.ಸಾವು ಸಮೀಪಿಸಿದೆ ಅನ್ನಿಸಿತು ಮಕ್ಕಳಿಗೆ.ಎಲ್ಲಾ ಬಂಧುಗಳನ್ನೂ ಕರೆಸಿದರು.ಕಮಲ ಕಕ್ಕಿ ಮೊದಲು ಸತ್ತರು.ಶೇಷ ಮುತ್ಯ ಅರೆ ಬರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರಿಗೆ ಕಮಲ ಕಕ್ಕಿಯ ಸಾವಿನ ಸುದ್ಧಿ ಹೇಳಿದರೆ ಹೃದಯಾ ಘಾತ ವಾಗಬಹುದು ಎಂದು ಹೆದರುತ್ತಲೇ ಅವರ ಬಳಿ ಸಮೀಪಿಸಿ"ಶೇಷ ಮುತ್ಯಾ,ಶೇಷ ಮುತ್ಯಾ ...."ಎಂದು ಕೂಗಿದರು.ಸಾವಿನತ್ತ ಸಾಗುತ್ತಿದ್ದ ಶೇಷ ಮುತ್ಯಾ ಕಣ್ಣು ತೆರೆದರು.ಏನು ಎಂಬಂತೆ ನೋಡಿದರು."ಕಮಲ ಕಕ್ಕಿ ಹೋದಳು"ಎಂದರು."ಹೋದಳೇ......?".....ಮೌನ.ಸಣ್ಣದೊಂದು ಕಿರು ನಗೆಯೊಂದಿಗೆ ಕ್ಷೀಣ ದನಿಯಲ್ಲಿ "ನಂಗಿನ್ನೊಂದು ಕನ್ಯಾ ನೋಡ್ರಪಾ"ಎಂದರು.ಸಾಯುವ ಸಮಯದಲ್ಲೂ ಹಾಸ್ಯವೇ?!!! ಎಂತಹ ಅದ್ಭುತ,ಅಪರೂಪದ ಚೇತನ ಇವರದು!!ಸಾವಿನ ಮನೆಯಲ್ಲಿ ನಗೆಯೇ ನಗೆ.ಕೆಲ ಗಂಟೆಗಳ ನಂತರ ಶೇಷ ಮುತ್ಯ ಕೂಡ ದೇಹವನ್ನು ತ್ಯಜಿಸಿದರು.ನಗು ನಗುತ್ತಲೇ ಇಹಲೋಕ ಯಾತ್ರೆ ಮುಗಿಸಿ ಎಲ್ಲರ ಮನಸ್ಸಿನಲ್ಲೂ ತಂಬೆಳಕಿನಂತೆ ಉಳಿದು ಹೋದರು!!!

Saturday, August 11, 2012

"ಜೋಕು........ಜೋಕಾಲಿ!!!"

೧)ಹೆಂಗಸೊಬ್ಬಳು ಕಣ್ಣಾಸ್ಪತ್ರೆಯ ಡಾಕ್ಟರರ ಮೇಲೆ "ನೀವು ನನ್ನ ಗಂಡನ ಕಣ್ಣಿನ ಆಪರೇಶನ್ ಸರಿಯಾಗಿ ಮಾಡಿಲ್ಲ.ಕಣ್ಣಿನ ಆಪರೇಶನ್ ಮಾಡಿದ ಮೇಲೆ ನನ್ನ ಗಂಡ ನನ್ನನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ!!"ಎಂದು ಕೋರ್ಟಿನಲ್ಲಿ ದಾವೆ ಹಾಕಿದಳು.ಕೋರ್ಟಿನಲ್ಲಿ ಕಣ್ಣಾಸ್ಪತ್ರೆಯ ಡಾಕ್ಟರ್ರು"ನಾವು ನಿಮ್ಮ ಗಂಡನ ದೃಷ್ಟಿಯನ್ನು ಸರಿಮಾಡಿದ್ದೇವೆ.ಅದರಿಂದಾದ ಅನಾಹುತಕ್ಕೆನಾವು ಜವಾಬ್ದಾರರಲ್ಲ"ಎಂದರು.
೨)ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು"ನೀವು ಬೀಚಿನಲ್ಲಿ ಹೋಗುತ್ತಿದ್ದೀರ.ಸುಂದರ ಯುವತಿಯೊಬ್ಬಳು ಸ್ಮೃತಿ ತಪ್ಪಿ ಬಿದ್ದಿದ್ದಾಳೆ.ಅವಳು ಉಸಿರಾಡುತ್ತಿಲ್ಲ.ತಕ್ಷಣವೇ ನೀವು ಅವಳ ತುಟಿಗಳನ್ನು ಬೆರಳುಗಳಿಂದ ಅಗಲಿಸಿ,ಬಾಯಿಂದ ಬಾಯಿಗೆ ಉಸಿರು ತುಂಬ ಬೇಕು.ಜೊತೆ ಜೊತೆಗೆ ನಿಮ್ಮ ಎರಡೂ ಕೈಗಳನ್ನೂ ಅವಳ ಎದೆಯ ಮೇಲಿರಿಸಿ ನಿಮಿಷಕ್ಕೆ ಅರವತ್ತು ಸಲ ಒತ್ತಬೇಕು.ಏನಾದರೂ ಪ್ರಶ್ನೆಗಳಿವೆಯೆ?(any questions?)"ಎಂದರು.ಹಿಂದಿನ ಬೆಂಚಿನಲ್ಲಿದ್ದ ಬಂಟಾ ಸಿಂಗ್ ಪ್ರಶ್ನಿಸಿದ "ಅವಳನ್ನು ಸ್ಮೃತಿ ತಪ್ಪಿಸುವುದು ಹೇಗೆ?".
೩)ಎಂಬತ್ತೆರಡು ವರ್ಷದ ಮಾರಿಸ್ ವೈದ್ಯಕೀಯ ಪರೀಕ್ಷೆಗೆಂದು ವೈದ್ಯರ ಬಳಿ ಹೋದ.ವೈದ್ಯರು ಕೆಲ ಔಷಧಿಗಳನ್ನು ಬರೆದು ಕೊಟ್ಟರು.ಜೊತೆಗೆ" you have got a heart murmer,be careful" ಎಂದು ಹೇಳಿದ್ದರು.ಎರಡು ದಿನಗಳ ಬಳಿಕ ಪಬ್ ಒಂದರಲ್ಲಿ ಮಾರಿಸ್ ಚೆಂದದ ಯುವತಿಯೊಂದಿಗೆ ಕುಳಿತದ್ದು ಕಂಡ ಡಾಕ್ಟರ್ "Ah !Morris !! you are doing great!! aren't you?" ಎಂದರು.ಅದಕ್ಕೆ ಮಾರಿಸ್" I sincerely followed your advise doctor. you had said -get a hot mamma and be cheerful".ತಾನು ಹೇಳಿದ್ದೇನು !!ಇವನು ಮಾಡುತ್ತಿರುವುದೇನು!!ಎಂದು ಡಾಕ್ಟರ್ರು ಅವಾಕ್ಕಾದರು.
(ಆಧಾರ:ಇಂದಿನ DECCAN HERALD ನ KHUSHWANT SINGH ಅವರ ಕಾಲಂ)

Saturday, August 4, 2012

"ಎಲೇಲೆ ರಸ್ತೇ!!! ಏನೀ ಅವ್ಯವಸ್ತೆ!!!"

ನೀವು ನಂಬಲೇ ಬೇಕು!!
ಇದು ಹೆದ್ದಾರಿಯ ಒಂದು ರಸ್ತೆ !!
ಲಾರಿಯೊಂದು ಹಳ್ಳದಲ್ಲಿಯೇ
ಸಿಲುಕಿ ಹೊರಬರಲಾಗದೇ
ಅಲ್ಲೇ ಪಕ್ಕಕ್ಕೆಒರಗಿದೆ ಸುಸ್ತಾಗಿ!!
ದ್ವಿಚಕ್ರಿಗಳಿಗೆ ಈ ಹಳ್ಳಗಳ
ದಾಟುವುದು ಹೇಗೆಂಬ ಚಿಂತೆ!!
ಈ ಕೆಟ್ಟ ರಸ್ತೆಯೂ ಚಿರಾಯು !
ಪಾಪಿಯೊಬ್ಬನ ಹಾಗೆ !
ಒಂದು ಕಡೆಯಿಂದ
ಮರಮ್ಮತ್ತು ನಡೆಯುತ್ತಿದ್ದಂತೆ
ಮತ್ತೊಂದು ಕಡೆಯಿಂದ
ಕಿತ್ತು ಹಳ್ಳ ಹಿಡಿಯುತ್ತಿದೆ!
ಹೇಗೆ ಮಲಗಿದೆ ನೋಡಿ
ಮೈಲಿಗಳ ಉದ್ದಕ್ಕೂ
ಹಳ್ಳ ಕೊಳ್ಳಗಳ ಹೊದ್ದು
ಮಳ್ಳಿಯ ಹಾಗೆ !
ಒಂದೊಂದು ಕಿತ್ತ
ಜಲ್ಲಿ ಕಲ್ಲಿನ ಹಿಂದೆ
ಕೋಟಿಗಟ್ಟಲೆ ಹಣದ
ಲೂಟಿಯ ಕಥೆ! ಟಾರಿನಂತೆಯೇ
ಕೊತ ಕೊತನೆ ಕುದಿವವರ
ಬಿಸಿ ಬಿಸಿ ನಿಟ್ಟುಸಿರಿನ,
ಬೆವರಿನ ವ್ಯಥೆ ! ಇದ್ದ ಬದ್ದ
ಇಂಚಿಂಚು ಜಾಗವನ್ನೂ
ಸೈಟಿಸಿ ,ಅಪಾರ್ಟ್ ಮೆಂಟಿಸಿ,
ತಮ್ಮನ್ನು ಒಕ್ಕಲೆಬ್ಬಿಸಿದ್ದಕ್ಕೆ
ಕೆರೆ,ಕೊಳ್ಳಗಳೆಲ್ಲಾ
ರಸ್ತೆಗೇ ಇಳಿದು
ಧರಣಿ ಕೂತಿವೆಯೇ ಹೇಗೆ !?
ಇದು ತೀರದ, ಮುಗಿಯದ
ಕರ್ಮ ಕಾಂಡ !
ನಮ್ಮೆಲ್ಲರ ಬದುಕಿನ
ಬವಣೆಗಳ ಹಾಗೆ !!!
ಈ ರಸ್ತೆಗಳು ನಮ್ಮ ದೇಶದ
ಹಣೆ ಬರಹವೇ ಹೇಗೆ?!!!
(ಚಿತ್ರ ಕೃಪೆ;UMESH VASHISHT .ಬಜ್ಜಿಗರು.)

"ಭಲ್ಲೇ!!!......ಭಲ್ಲೇ!!!.....ಭಲ್ಲೇ!!!

ಬಯಸಿಯೂ ಬಾರದ ಮುಂಗಾರು!
ಬಯಸದೇ ಬಂದ ರೋಗ !
ಇದೇ ಏನೋ ? ಯೋಗಾ ಯೋಗ !
ಮರತೇ ಬಿಟ್ಟ ಸಂಸ್ಥೆ !!
ತಿರುಗಿಯೂ ನೋಡದ
ಕೈಕೊಟ್ಟ.......... ನಲ್ಲೆ!!
ಒಲ್ಲೆ....,ಒಲ್ಲೆ.....,ಒಲ್ಲೆ !!!
ಮರೆತೇನೆಂದರೂ ಮರೆಯಲೊಲ್ಲೇ !!
ಬಿಟ್ಟೇನೆಂದರೂ ಬಿಡಲೊಲ್ಲೆ!!
ನಾನೂ ಬಾಳ ಬೇಕಲ್ಲೇ!!?
ಅದಕ್ಕೊಂದೇ ದಾರಿ !!
ಎಲ್ಲ ಮರೆತು, ನಾನೂ ಸರದಾರನಾಗಿ
ಕುಣಿಯಬೇಕು ಈಗಲೇ ,ಇಲ್ಲೇ!!!
ಭಲ್ಲೇ !!!.....ಭಲ್ಲೇ !!!...ಭಲ್ಲೇ !!!
(ಆತ್ಮೀಯ ಮಿತ್ರ ಶ್ರೀಮಾನ್ ಬದರಿಯವರು ಫೇಸ್ ಬುಕ್ ನಲ್ಲಿ ಬರೆದ ನಾಲ್ಕು ಸಾಲುಗಳಿಂದ ಪ್ರೇರಿತ)

Thursday, August 2, 2012

"ಸಂಸಾರ!!!.......ಗಡಿಯಾರ!!!

ನಮ್ಮ ಸಂಸಾರ ..........,
ಎದುರಿನ ಗೋಡೆಯ ಮೇಲಿನ
ಗಡಿಯಾರ.............,
ಎರಡಕ್ಕೂ ಎಷ್ಟೊಂದು ಸಾಮ್ಯ!
ನನ್ನ ಹೆಂಡತಿ.............,
ಶಿಸ್ತಿನ ಸಿಪಾಯಿ !
ಸೆಕೆಂಡಿನ ಮುಳ್ಳಿನ ಹಾಗೆ
ಸಪೂರ.........!
ಮೂಗಿಗೆ ಕವಡೆ ಕಟ್ಟಿಕೊಂಡ
ಗಾಣದೆತ್ತಿನ ದುಡಿತ !
ಅವಳ ನಿರಂತರ
ಪ್ರೀತಿಯ ತುಡಿತವೇ
ನಮ್ಮ ಸಂಸಾರದ
ನಾಡಿಯ ಮಿಡಿತ !
ಮಕ್ಕಳೋ ..........,
ನಿಮಿಷದ ಮುಳ್ಳುಗಳಂತೆ !
ನಿಮಿಷಕ್ಕೊಂದು ರೀತಿ !
ಗಂಟೆಗೆ ಅರವತ್ತರ
ಅವಸರದ ಓಟ !
ಇನ್ನು,ಅರವತ್ತರದ ಸನಿಹದ
ನಾನೋ.................!
ಗಂಟೆಯ ಮುಳ್ಳು !
ಧಡಿಯ !ನಿಧಾನಿ!
ಮನೆಯ ಪ್ರಧಾನಿ (?) !
ಗಂಟೆಗೊಮ್ಮೆ ಕದಲಿಕೆ!
ಮನೆಯೊಡತಿಯಿಂದ
'ಎಷ್ಟು ಸ್ಲೋ', ಎಂಬ ಸಣ್ಣದೊಂದು ಮೂದಲಿಕೆ!
ಪ್ರೀತಿಯ ಬ್ಯಾಟರಿ ಮುಗಿದಾಗ
ಮನೆಯಲ್ಲಿ ಹಠಾತ್ ಮುಷ್ಕರ!
ಸ್ವಲ್ಪ ಕಾಲ ...........,
ಎಲ್ಲವೂ ,ಎಲ್ಲರೂ ಸ್ತಬ್ಧ!
ಮತ್ತೆ ಪ್ರೀತಿಯ ಹೊಸ ಚೈತನ್ಯ
ಮರು ಚಾಲನೆ ನೀಡುವ ತನಕ!!
ಮತ್ತದೇ ಓಟದ ಮಾಟ !!!

Sunday, July 29, 2012

"ಡಯಾಬಿಟಿಸ್ ಇದೆಯೇ? ಕೊಬ್ಬು ಕಮ್ಮಿ ಮಾಡಿ !!!"

ಮೊನ್ನೆ ಮದುವೆಯೊಂದಕ್ಕೆ ಹೋಗಿದ್ದೆ.ಧಾರೆ ಮಹೂರ್ತ ಹತ್ತಕ್ಕೆ ಮುಗಿದು,ಊಟದ ತನಕ ಸಾಕಷ್ಟು ಸಮಯವಿದ್ದುದರಿಂದ ಪರಿಚಯಸ್ಥರ ಜೊತೆ ಹರಟೆ ಕಾರ್ಯಕ್ರಮ ಶುರುವಾಯಿತು.ಎಲ್ಲರೂ ಮಧ್ಯವಯಸ್ಕರೇ ಆದ್ದರಿಂದ ಸಹಜವಾಗಿ ಎಲ್ಲರ ಹರಟೆಯ ವಿಷಯವೂ ಬೀಪಿ,ಡಯಾಬಿಟಿಸ್ಸೇ !!!ಈಗೀಗ ಬೀಪಿ,ಶುಗರ್ರು ಇಲ್ಲದವರೇ ಅಪರೂಪವೇನೋ ಎನ್ನುವಂತಾಗಿ ಬಿಟ್ಟಿದೆ !ಇಲ್ಲೊಂದು ಮುಖ್ಯ ವಿಷಯವನ್ನು ನಿಮಗೆ ಹೇಳಲೇ ಬೇಕೆಂಬ ಉದ್ದೇಶದಿಂದ ಈ ಲೇಖನ ಬರೆಯುತ್ತಿದ್ದೇನೆ.ವಯಸ್ಕರಲ್ಲಿ ಬರುವ ಸಕ್ಕರೆ ಖಾಯಿಲೆ ಅಥವಾ ಟೈಪ್ 2 ಡಯಾಬಿಟಿಸ್ ನಲ್ಲಿ ಇನ್ಸುಲಿನ್ ಕೊರತೆಗಿಂತ ಹೆಚ್ಚಾಗಿ ,ಇರುವ ಇನ್ಸುಲಿನ್ ಸಮರ್ಪಕವಾಗಿ ಕೆಲಸ ಮಾಡುತ್ತಿರುವುದಿಲ್ಲ.ಇದಕ್ಕೆ INSULIN RESISTANCE ಎನ್ನುತ್ತಾರೆ.ಇದು ಸಾಮಾನ್ಯವಾಗಿ ಮಧ್ಯವಯಸ್ಕ,ಸ್ಥೂಲ ಕಾಯ ಡಯಾಬಿಟಿಸ್ ರೋಗಿಗಳಲ್ಲಿ ಹೆಚ್ಚು.ಮದುವೆ ಮನೆಯಲ್ಲಿ ಇವರನ್ನುಗಮನಿಸಿದರೆ ,ನನಗೆ 'ಶುಗರ್ ಲೆಸ್'ಕಾಫಿ ಎನ್ನುವ ಇವರು , ಊಟದಲ್ಲಿ ಎರಡೆರಡು ಒಬ್ಬಟ್ಟಿಗೆ ತುಪ್ಪ ಹಾಕಿಸಿಕೊಂಡು ಹೊಡೆಯುತ್ತಾರೆ!ಚಿರೋಟಿಗೆ ಬೂರಿಸಕ್ಕರೆ,ಮೇಲೆ ಬಾದಾಮಿ ಹಾಲು!ಹೆಚ್ಚೇನಿಲ್ಲಾ.........ಎರಡೇ ಎರಡು ಅಲೂ ಬೋಂಡಾ! ಇಷ್ಟೆಲ್ಲಾ ತಿಂದು ಮೇಲೆ ಎರಡೆರಡು ಕಪ್ ಪಾಯಸ !ಅಪರೂಪಕ್ಕೆ ತಿಂದರೆ ಹೋಗಲಿ ಎನ್ನ ಬಹುದು.ಬೆಂಗಳೂರಿನಂತಹ ನಗರಗಳಲ್ಲಿ ವಾರಕ್ಕೊಂದು ಮದುವೆ ಮುಂಜಿ ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ.ಇಂತಹವರು 'ಏನು ಮಾಡೋದು ಸರ್ ಏನು ಮಾತ್ರೆ ತೆಗೆದು ಕೊಂಡರೂ ,ಎಷ್ಟು ಡಯಟ್ ಕಂಟ್ರೋಲ್ ಮಾಡಿದರೂ ಶುಗರ್ರು ಇನ್ನೂರ ಐವತ್ತಕಿಂತ ಕಮ್ಮೀನೇ ಆಗೋಲ್ಲಾ ಅಂತಾರೆ!' ಇಂತಹವರು ತಮ್ಮ ಆಹಾರದಲ್ಲಿ ಕೊಬ್ಬಿನ ಅಂಶವನ್ನು ಆದಷ್ಟೂ ಕಮ್ಮಿ ಮಾಡಲೇ ಬೇಕು.ಒಂದು ಗ್ರ್ಯಾಂ ಪಿಷ್ಟದಿಂದ (carbohydrate) 4 ಕ್ಯಾಲೋರಿ ಎನರ್ಜಿ ಉತ್ಪತ್ತಿಯಾದರೆ,ಒಂದು ಗ್ರ್ಯಾಂ ಕೊಬ್ಬು (fat) 9 ಕ್ಯಾಲೋರಿ ಎನರ್ಜಿ ಕೊಡುತ್ತದೆ.ವ್ಯಯವಾಗದ ಎನರ್ಜಿ ದೇಹದ ಎಲ್ಲಾ ಕಡೆ (ಮುಖ್ಯವಾಗಿ ಮಾಂಸ ಖಂಡ ಗಳಲ್ಲಿ) ಸೇರಿ insulin resistance ಗೆ ಕಾರಣವಾಗುತ್ತದೆ.ಆದ್ದರಿಂದ ತೂಕ ಹೆಚ್ಚಿರುವ ಡಯಾಬಿಟಿಸ್ ರೋಗಿಗಳು ಮುಖ್ಯವಾಗಿ ತಮ್ಮ ಆಹಾರದಲ್ಲಿನ ಕೊಬ್ಬಿನ ಅಂಶವನ್ನು ಕಮ್ಮಿ ಮಾಡಲೇ ಬೇಕು .ದೇಹದ ಮಾಂಸ ಖಂಡಗಳು ಕೆಲಸ ಮಾಡಿದರೆ ಅವುಗಳಲ್ಲಿ ಕೊಬ್ಬಿನ ಅಂಶ ಹೆಚ್ಚು ಸೇರುವುದಿಲ್ಲ.ಆದ್ದರಿಂದ ದಿನಕ್ಕೆ ಅರ್ಧ ತಾಸಿನಿಂದ ಒಂದು ತಾಸಿನ ನಡಿಗೆ ಬೇಕೇ ಬೇಕು.ನಡಿಗೆಯನ್ನು ನಿಲ್ಲಿಸಲೇ ಬಾರದು.ಇವರು ಔಷಧಿಗಳನ್ನು ಸರಿಯಾಗಿ ತೆಗೆದುಕೊಂಡು ,ಕೊಬ್ಬಿನ ಅಂಶ ಕಮ್ಮಿ ಮಾಡಿ ,ನಡೆ ಮುಂದೆ ,ನಡೆ ಮುಂದೆ ಎಂದು ನಡಿಗೆಯನ್ನು ತಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿ ಕೊಂಡರೆ ,ಯಾವುದೇ ತೊಂದರೆ ಇಲ್ಲದೆ ಎಲ್ಲರಂತೆ ಸುಖವಾಗಿ ಬಾಳಬಹುದು. ಶುಭಮಸ್ತು.ಸರ್ವೇ ಜನಾಹ ಸುಖಿನೋ ಭವಂತು!ನಮಸ್ಕಾರ.

Friday, July 20, 2012

"ಅಬ್ಬಾ.......!!! ಆ ಕ್ಷಣಗಳು.......!!! "

ಜೀವನದಲ್ಲಿ ಅಂತಹ ಕ್ಷಣಗಳು ನಮ್ಮ ಶತ್ರುವಿಗೂ ಬರಬಾರದು !!!ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನೆಸಿಕೊಂಡರೆ,ಈಗಲೂ ನನ್ನ ಕೈಕಾಲುಗಳು ತಣ್ಣಗಾಗುತ್ತವೆ!!!ಬೆಂಗಳೂರಿನಿಂದ ರಾಯಚೂರಿಗೆ ಸಂಸಾರ ಸಮೇತನಾಗಿ ಟ್ರೈನಿನಲ್ಲಿ ಹೊರಟಿದ್ದೆ.ಸಂಜೆ ಸುಮಾರು ಐದು ಗಂಟೆಯ ಸಮಯ.ನನ್ನ ಹೆಂಡತಿಯ ಕಂಕುಳಲ್ಲಿ ಒಂದು ವರ್ಷದ ಮಗಳು,ನನ್ನ ಕೈ ಹಿಡಿದ ಐದು ವರ್ಷದ ಮಗ,ಒಂದು ರಾಶಿ ಮನೆ ಸಾಮಾನು.ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್ನಿನ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಇಳಿದ ತಕ್ಷಣ ,ಸಕ್ಕರೆ ಪಾಕಕ್ಕೆ ನೊಣ ಮುತ್ತುವಂತೆ ಕೂಲಿಗಳ ಒಂದು ದೊಡ್ಡ ಹಿಂಡೇ ನಮ್ಮನ್ನು ಮುತ್ತಿಕೊಂಡರು.ಕೂಲಿ ಮಾತಾಡುವ ಮೊದಲೇ,ಮೂರು ನಾಲಕ್ಕು ಜನ ಸಾಮಾನುಗಳನ್ನು ಹೊತ್ತುಕೊಂಡು 'ಯಾವ ಬೋಗಿ ಸರ್'ಎನ್ನುತ್ತಾ ಹೊರಟೀ ಬಿಟ್ಟರು!!ನಂತರ ಅವರು ಮಾಡುವ ರಗಳೆಗೆ ಹೆದರಿ,ಹರ ಸಾಹಸ ಮಾಡಿ ಅವರಿಂದ ಬಿಡಿಸಿಕೊಂಡು ಒಬ್ಬ ಕೂಲಿಯನ್ನು ಗೊತ್ತು
ಮಾಡಿದೆ.ಹೆಂಡತಿಯನ್ನು ಮಗಳೊಂದಿಗೆ ಅರ್ಧ ಸಾಮಾನುಗಳ ಬಳಿ ಅಲ್ಲೇ ಬಿಟ್ಟು ,ಇನ್ನರ್ಧ ಸಾಮಾನುಗಳನ್ನು ತಲೆಯ ಮೇಲೆ ಹೊತ್ತ ಕೂಲಿಯವನ ಹಿಂದೆ,ಮಗನ ಕೈ ಹಿಡಿದು ಹೊರಟೆ.ಟ್ರೈನ್ ಆಗಲೇ ಪ್ಲ್ಯಾಟ್ ಫಾರಂನಲ್ಲಿ ಬಂದು ನಿಂತಿತ್ತು .ನಮಗೆ ರಿಸರ್ವ್ ಆಗಿದ್ದ ಬೋಗಿಯನ್ನು ಹುಡುಕಿ ,ಚಾರ್ಟ್ ನಲ್ಲಿ ನಮ್ಮಬರ್ತ್ ನಂಬರ್ ನೋಡಿ ,ಅಲ್ಲಿ ನಮ್ಮ ಸಾಮಾನುಗಳನ್ನು ಇಟ್ಟು,ಮಗನನ್ನು ಅಲ್ಲೇ ಕೂರಿಸಿ "ಅಮ್ಮನನ್ನೂ ,ಪಾಪುವನ್ನೂ ಕರೆದುಕೊಂಡು ಮಿಕ್ಕ ಸಾಮನುಗಳನ್ನು ತರುತ್ತೇನೆ ,ಇಲ್ಲೇ ಕೂತಿರು ಪುಟ್ಟಾ"ಎಂದೆ."ಹೂಂ"ಎಂದು ತಲೆಯಾಡಿಸಿದ ಮಗರಾಯ.ಪಕ್ಕದಲ್ಲಿದ್ದ ಪ್ರಯಾಣಿಕರಿಗೆ ಸ್ವಲ್ಪ ನೋಡಿಕೊಂಡಿರುವಂತೆ ಹೇಳಿ,ಮತ್ತೆ ಕೂಲಿಯವನೊಂದಿಗೆ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಹೋದೆ.ನನ್ನ ಹೆಂಡತಿ"ಮಗ ಎಲ್ಲಿ"ಎಂದಳು."ಟ್ರೈನಿನಲ್ಲಿ ಸಾಮಾನುಗಳ ಜೊತೆ ಕೂರಿಸಿ ಬಂದಿದ್ದೇನೆ,ಪಕ್ಕದವರಿಗೆ ಹೇಳಿದ್ದೇನೆ,ಕೂತಿರುತ್ತಾನೆ ಬಾ "ಎಂದೆ."ರೀ!ನಿಮಗೆ ಅಷ್ಟೂ ಗೊತ್ತಾಗೊದಿಲ್ಲವಾ !?ಅವನೋಬ್ಬನನ್ನೇ ಯಾಕೆ ಕೂರಿಸಿ ಬಂದಿರಿ?"ಎಂದು ತರಾಟೆಗೆ ತೆಗೆದುಕೊಂಡಳು.ನನಗೆ ಒಂದು ಕ್ಷಣ ಎದೆಯಲ್ಲಿ ಅವಲಕ್ಕಿ ಕುಟ್ಟಿ ದಂತಾಯಿತು.ಆದರೂ ಅದನ್ನು ತೋರಿಸಿಕೊಳ್ಳದೇ,ಧೈರ್ಯ ತಂದುಕೊಂಡು "ಏನೂ ಆಗೋಲ್ಲಾ.....,ನೀನು ಸುಮ್ನೆ ಇಲ್ಲದಿರೋದೆಲ್ಲಾ ಯೋಚನೆ ಮಾಡಬೇಡ"ಎಂದು ದಬಾಯಿಸಿ,ಇನ್ನುಳಿದ ಸಾಮಾನುಗಳೊಂದಿಗೆ ನನ್ನ ಬೋಗಿಗೆ ಬಂದೆ.ಸಾಮಾನುಗಳಿವೆ....,ಮಗ ಇಲ್ಲ!!!!ಪಕ್ಕದವರನ್ನು ಕೇಳಿದರೆ "ಇಲ್ಲೇ ಇದ್ದನಲ್ಲಾ!!,ಅರೇ ....!!"ಎಂದು ಆಚೀಚೆ ನೋಡ ತೊಡಗಿದರು!!ನನ್ನ ಎದೆ ಧಸಕ್ ಎಂದಿತು.ಮೈ ಬೆವರೊಡೆಯಿತು.ಕೈ ,ಕಾಲು ತಣ್ಣಗಾಗಿ,ಹೊಟ್ಟೆಯಲ್ಲಿ ವಿಚಿತ್ರ ತಳಮಳ!! ಹೆಂಡತಿ ದೊಡ್ಡ ದನಿಯಲ್ಲಿ ಗೊಳೋ ಎಂದು ಅಳತೊಡಗಿದಳು.ಕಂಕುಳಲ್ಲಿದ್ದ ಒಂದು ವರ್ಷದ ಮಗಳು ಏನೋ ಗಡಿಬಿಯಾಗಿದೆ ಎಂದು ತಿಳಿದು,ಗಾಭರಿಯಿಂದ ತಾನೂ ಜೋರಾಗಿ ಅಳಲು ಶುರು ಮಾಡಿದಳು.ಆಗ ಸಮಯ 5.30.ಇನ್ನು ಹದಿನೈದು ನಿಮಿಷದಲ್ಲಿ ಟ್ರೈನ್ ಹೊರಡುತ್ತೆ!!ನನ್ನ ಬಳಿ ಇರುವುದು ಹದಿನೈದೇ ನಿಮಿಷ!!ಅಷ್ಟರಲ್ಲಿ ,ಆ ದೊಂಬಿಯಲ್ಲಿ ,ಕಳೆದು ಹೋದ ಮಗನನ್ನು ಎಲ್ಲಿ ಹುಡುಕುವುದು!!?ಹೇಗೆ ಹುಡುಕುವುದು?ಮೊದಲು ಟ್ರೈನಿನ ಮುಂಭಾಗಕ್ಕೆ ಓಡಿ,ಎಂಜಿನ್ ಡ್ರೈವರ್ ಗೆ ನಡೆದ ವಿಷಯ ಹೇಳಿದೆ.ಅವನು "ಗಾರ್ಡ್ ಗೆ ವಿಷಯ ತಿಳಿಸಿ"ಎಂದ.ಮತ್ತೆ ಹುಚ್ಚನಂತೆ ಟ್ರೈನ್ ನ ಹಿಂಭಾಗಕ್ಕೆ ಓಡಿ,ಗಾರ್ಡ್ ಗೆ ವರದಿ ಒಪ್ಪಿಸಿದೆ.ನಾವು ಇದ್ದದ್ದು ಒಂಬತ್ತನೇ ಪ್ಲ್ಯಾಟ್ ಫಾರಂ.ಗಾರ್ಡ್ ಮೊದಲನೇ ಪ್ಲ್ಯಾಟ್ ಫಾರಮ್ಮಿಗೆ ಹೋಗಿ ಅನೌನ್ಸರ್ ಗೆ ಹೇಳುವಂತೆ ಹೇಳಿದ.ನನಗೆ ದಿಕ್ಕೇ ತೋಚಲಿಲ್ಲ!!ಏನಾದರೂ ಮಗ ಬಂದಿರ ಬಹುದೇ ಎಂದು ಆಸೆಯಿಂದ ಬೋಗಿಯ ಬಳಿ ಬಂದು ,ಕಿಟಕಿಯಿಂದ ಒಳಗೆ ಇಣುಕಿದೆ."ಇನ್ನೂ ಸಿಗಲಿಲ್ಲವೆನ್ರೀ !!!"ಎಂದು ಕೂಗಿದ ಹೆಂಡತಿಯ ಅಳು ತಾರಕಕ್ಕೇರಿತು !!ಸ್ಪರ್ಧೆಗಿಳಿದಂತೆ ಮಗು ಇನ್ನೂ ಜೋರಾಗಿ ಅಳ ತೊಡಗಿತು!! ಅಕ್ಕ ಪಕ್ಕದವರು ತಲೆಗೊಂದರಂತೆ ಸಲಹೆ ಕೊಡ ತೊಡಗಿದರು.ಕೆಲವರು "ಸಾಮಾನುಗಳನ್ನು ಇಳಿಸಿಕೊಂಡು ಇಳಿದು ಬಿಡಿ "ಎಂದರೆ ಮತ್ತೆ ಕೆಲವರು "ಬೇಡ,ಬೇಡ,ನಿಮ್ಮ ಮಗ ಮತ್ಯಾವುದಾದರೂ ಬೋಗಿಗೆ ಹತ್ತಿರಬಹುದು"ಎಂದರು.ಇನ್ನು ಕೆಲವರು"ಪಕ್ಕದ ಪ್ಲ್ಯಾಟ್ ಫಾರಮ್ಮಿ ನಲ್ಲಿ ನಿಂತಿರುವ ಟ್ರೈನ್ ನಲ್ಲೂ ಒಮ್ಮೆ ನೋಡಿ" ಎಂದರು.ಟ್ರೈನ್ ಹೊರಡಲು ಕೆಲವೇ ನಿಮಿಷಗಳು ಬಾಕಿ ಇವೆ!!!ನನಗೋ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗಿತ್ತು!!ಜೀವನದಲ್ಲಿ ಮೊದಲ ಬಾರಿಗೆ ಅಸಹಾಯಕನಾಗಿ,ಹೃತ್ಪೂರ್ವಕವಾಗಿ "ಅಪ್ಪಾ ಈಗ ನೀನೇ ಗತಿ"ಎಂದು ದೇವರನ್ನು ಪ್ರಾರ್ಥಿಸಿದೆ.ನನ್ನ ಪ್ರಾರ್ಥನೆ ಆ ದೇವನಿಗೆ ತಲುಪಿತು.ವಯಸ್ಸಾದ ,ಗಡ್ಡ ಧಾರಿ ಕೂಲಿಯೊಬ್ಬನ ರೂಪದಲ್ಲಿ ದೇವರು, ಅಳುತ್ತಿದ್ದ ನನ್ನ ಮಗನ ಕೈ ಹಿಡಿದು ಬರುತ್ತಿದ್ದ.ಹೃದಯ ಬಾಯಿಗೆ ಬಂದಂತಾಯಿತು.'ಗಳ ಗಳನೆ' ಮಗುವಿನಂತೆ ಅತ್ತು ಬಿಟ್ಟೆ .ನನ್ನ ಮಗ ನನಗೆ ಸಿಕ್ಕಿದ್ದ!!! ಯಾವ ನಿಧಿ ಸಿಕ್ಕಿದರೂ ನನಗೆ ಅಷ್ಟು ಸಂತೋಷವಾಗುತ್ತಿರಲಿಲ್ಲ!!!ಆ ಕೂಲಿಯವನ ಎರಡೂ ಕೈಗಳನ್ನೂ ಹಿಡಿದು ಕಣ್ಣಿಗೆ ಒತ್ತಿಕೊಂಡೆ.ಅವನಿಗೆ ಕೈ ಮುಗಿದು ,ಜೇಬಿನಲ್ಲಿದ್ದ ನೂರರ ಎರಡು ನೋಟುಗಳನ್ನು ಹೊರತೆಗೆದೆ.ಆ ಪುಣ್ಯಾತ್ಮ ಕೂಲಿಯವನು "ನಕ್ಕೋ ಸಾಬ್,ನಕ್ಕೋ ಸಾಬ್"ಎನ್ನುತ್ತಿದ್ದರೂ ಕೇಳದೇ,ಆ ನೋಟುಗಳನ್ನು ಅವನ ಜೇಬಿಗೆ ತುರುಕಿ,ಮಗನ ಕೈ ಹಿಡಿದು ಓಡುತ್ತಾ ಬೋಗಿಗೆ ಬಂದು ಕಿಟಿಕಿಯ ಪಕ್ಕದ ನನ್ನ ಸೀಟಿನಲ್ಲಿ ಕುಳಿತೆ.ಮಗ ಅಳುತ್ತಾ ಅಮ್ಮನ ಮಡಿಲು ಸೇರಿದ.ಅಮ್ಮ ,ಮಗಳು ಅಳು ನಿಲ್ಲಿಸಿದರು.ನನ್ನ ಹೆಂಡತಿ ಅಕ್ಕ ಪಕ್ಕದವರಿಗೆ ನನ್ನ ಬೇಜವಾಬ್ದಾರಿಯ ಬಗ್ಗೆ ಅರಿವು ಮಾಡಿಕೊಡುತ್ತಿದ್ದಳು.ನಾನು ಏನನ್ನೂ ಕೇಳುವ ಸ್ಥಿತಿ ಯಲ್ಲಿ ಇರಲಿಲ್ಲ.ದಿಗ್ಮೂಢನಾಗಿದ್ದೆ !! ಕಿಟಕಿಯಾಚೆ ಶೂನ್ಯ ದೃಷ್ಟಿ ನೆಟ್ಟಿದ್ದೆ.ಕಣ್ಣುಗಳಲ್ಲಿ ಧಾರಾಕಾರ ನೀರು!! I was very badly shaken for the first time in my life!!I was literally trembling!!ಇದ್ಯಾವುದರ ಪರಿವೆಯೇ ಇಲ್ಲದೆ ಟ್ರೈನು ಪ್ಲ್ಯಾಟ್ ಫಾರಂ ಬಿಟ್ಟು ಮೆಲ್ಲನೆ ಮುಂದೆ ಸರಿಯ ತೊಡಗಿತು.ಹೊರಗೆ ನಿಧಾನವಾಗಿ ಕತ್ತಲಾವರಿಸುತ್ತಿದ್ದರೆ,ವಿಚಿತ್ರವೆಂಬಂತೆ ನನ್ನ ಬಾಳಿನಲ್ಲಿ ಆವರಿಸಿದ್ದ ಕತ್ತಲು ದೂರವಾಗಿತ್ತು !!!

Tuesday, July 17, 2012

"ನಿನ್ನ ಅದಮ್ಯ ಚೈತನ್ಯಕ್ಕೆ ನನ್ನದೊಂದು ಸಲಾಂ!!!"

ಗೋಡೆಯ ಬಿರುಕಿನಲ್ಲಿ
ಅಲ್ಲೇ ಇರುಕಿನಲ್ಲಿ
ಗರಿಗೆದರಿ ಚಿಗುರೊಡೆದು
ನಳ ನಳಿಸಿ...........,
ನಗುವ,ನಲಿವ,
ಚಿ..ಗು..ರು..........!
ನನಗೆ ನೀನೇ ಗುರು......!
ಚಿಗುರೊಡೆವ ನಿನ್ನ ಛಲಕ್ಕೆ
ನಮೋನ್ನಮಃ.....!
ಮಣ್ಣಿನ ಹದಬೇಕೆಂದು
ಗೊಣಗಲಿಲ್ಲ!
ಪಾತಿ ಮಾಡಿ,ಬದು ತೋಡಿ
ನೀರುಣಿಸಿ
ಆರೈಕೆ ಮಾಡೆಂದು
ಗೋಗರೆಯಲಿಲ್ಲ! ನಿನ್ನನ್ಯಾರೂ ....... ಬಿತ್ತಲಿಲ್ಲ,ಬೆಳೆಯಲಿಲ್ಲ!
ಸುಖಾ ಸುಮ್ಮನೆ
ಯಾವುದೋ ಗಾಳಿಯಲಿ ಬೀಜವಾಗಿ ತೂರಿಬಂದು
ಗೋಡೆಯಲಿ ಸಿಲುಕಿ
ಮಿಡುಕದೆ
ಸಿಡುಕದೆ
ನಕ್ಕು ಹೊರ ಬಂದೆ
ಮೈ ಕೊಡವಿ!
ನಿನ್ನ ಅದಮ್ಯ ಚೈತನ್ಯಕ್ಕೆ ಜೀವನೋತ್ಸಾಹಕ್ಕೆ
ಇದೋ ..............,
ನನ್ನದೊಂದು ಸಲಾಂ!

Sunday, July 15, 2012

"ಎದೆಗು ,ಎದೆಗು ನಡುವೆ ಕಡಲು!!! "

ಗಂಟಲೊಳಗಿನ ಬಿಸಿ ತುಪ್ಪ
ಉಗುಳಲಾಗದು, ನುಂಗಲಾಗದು!
ಹೆಸರಿಗೆ ಮಾತ್ರದ ಸಂಬಂಧಗಳು !
ಎದೆಗೂ,ಎದೆಗೂ ನಡುವೆ ಕಡಲು!
ಕಡಲೊಳಗೆ ಸಾವಿರ ಸಾವಿರ
ಮುಸುಕಿನ ಗುದ್ದಾಟದ
ಶಾರ್ಕ್,ತಿಮಿಂಗಿಲಗಳು!
ನಮ್ಮ ನಮ್ಮ ಅಹಂಕಾರಗಳ
ಆಕ್ಟೋಪಸ್ ಹಿಡಿತಗಳು!
ಇಷ್ಟು ಸಾಲದೇ ಸಂಬಂಧ ಕೆಡಲು!
ಮೇಲೆ ಮಾತಿನ ಮರ್ಮಾಘಾತದ
ಅಲೆಗಳ ಹೊಡೆತಕ್ಕೆ
ಆತ್ಮೀಯತೆಯ ಸೇತುವಿನ
ಬೆಸೆಯಲಾಗದ ಬಿರುಕು!
ಯಾವುದೋ ಮದುವೆಯಲ್ಲೋ
ಮುಂಜಿಯಲ್ಲೋ,
ಎದುರೆದುರು ಸಿಕ್ಕಾಗ
ಹುಳ್ಳಗೆ ನಕ್ಕು 'ಹಾಯ್'ಎಂದು
ಗಾಯಕ್ಕೆ ಮುಲಾಮು ಸವರೋಣ!!
ಮುಂದಿನ ಭೆಟ್ಟಿಯ ತನಕ
ನಿರಾಳವಾಗಿ 'ಬೈ'ಎಂದು ಬಿಡೋಣ!!

Thursday, July 12, 2012

"ನನಗಲ್ಲ....,ನಿನಗೇ....ಮರೆವು!!!"

ಗಂಡ ಹೆಂಡತಿ ಇಬ್ಬರಿಗೂ ಸುಮಾರು ಎಂಬತ್ತೈದರ ವಯಸ್ಸು.ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ ಮರೆವು .ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .
ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು.'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ ಜಂಬ ಕೊಚ್ಚಿಕೊಂಡ !!!