ಜೀವನದಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ಘಟಿಸಿಬಿಡುತ್ತವೆ.ಹಲವಾರು ವರ್ಷಗಳ ನಂತರ ಅವನ್ನು ನೆನೆಪಿಸಿಕೊಂಡಾಗ 'ಹೀಗೊಂದು ಘಟನೆ ನಡೆಯಿತೇ!'ಎಂದು ನಮಗೇ ಅಚ್ಚರಿಯಾಗುತ್ತದೆ.ನೆನ್ನೆ ನನ್ನ ಕಾರಿನ ಸರ್ವಿಸಿಂಗ್ ಮಾಡಿಸಲು ಗ್ಯಾರೇಜ್ ಗೆ ಹೋಗಿದ್ದಾಗ, ಅಲ್ಲಿ ಅಪಘಾತವಾಗಿ ನುಜ್ಜು ಗುಜ್ಜಾಗಿ ನಿಂತಿದ್ದ ಹೊಸಾ ಕಾರೊಂದರ ಮಾಲಿಕರ ಹತ್ತಿರ ಮಾತನಾಡಿದಾಗ,ನನಗೆ ಸುಮಾರು ಇಪ್ಪತ್ತು ವರುಷಗಳಷ್ಟು ಹಳೆಯ ಘಟನೆಯೊಂದು ನೆನಪಿಗೆ ಬಂತು. ಅಂದ ಹಾಗೆ,ಆ ಕಾರಿನ ಮಾಲೀಕರು ಹೇಳಿದ್ದೇನು ಎಂಬುದನ್ನು ಕಡೆಯಲ್ಲಿ ಹೇಳುತ್ತೇನೆ.ಈಗಲೇ ಹೇಳಿಬಿಟ್ಟರೆ ,ನಾನು ಹೇಳುವ ಘಟನೆಯಲ್ಲಿ ಸ್ವಾರಸ್ಯ ಉಳಿಯುವುದಿಲ್ಲ.
ಮಾಸ್ತಿ ಕಟ್ಟೆ ಯಿಂದ ಬೆಂಗಳೂರಿಗೆ ಹೋಗುವ ಕೆಂಪು ಮೂತಿಯ 'ಲೀಲ್ಯಾಂಡ್ ' ಬಸ್ಸಿನಲ್ಲಿ ರಾತ್ರಿ ಪ್ರಯಾಣ ಮಾಡುತ್ತಿದ್ದೆ. ರಾತ್ರಿ ಸುಮಾರು ಎರಡು ಗಂಟೆಯ ಸಮಯ.ಬಸ್ ಅರಸೀಕೆರೆಯನ್ನು ದಾಟಿ ತಿಪಟೂರಿನ ಹತ್ತಿರವಿತ್ತು.ನನ್ನನ್ನು ಹೊರತುಪಡಿಸಿ ,ಬಸ್ಸಿನಲ್ಲಿ ಇದ್ದವರಿಗೆಲ್ಲಾ ವಿಪರೀತ ನಿದ್ದೆ.ಕೆಲವರಂತೂ ಬಸ್ಸಿನ ಶಬ್ಧಕ್ಕಿಂತಲೂ ಜೋರಾಗಿ ಗೊರಕೆ ಹೊಡೆಯುತ್ತಿದ್ದರು.ನಾನು ಕಂಡಕ್ಟರ್ ಕುಳಿತುಕೊಳ್ಳುವ ಕೊನೆಯ ಸೀಟಿನ ಮುಂದಿನ ಸೀಟಿನಲ್ಲಿ ಕುಳಿತು ,ನಿದ್ದೆ ಬರದೆ ಚಡಪಡಿಸುತ್ತಿದ್ದೆ.ಬಸ್ ಹೆದ್ದಾರಿಯಲ್ಲಿ ವೇಗವಾಗಿ ಸಾಗಿತ್ತು.ಕಿಟಕಿಯ ಹೊರಗೆ ಬೆಳದಿಂಗಳಿನಲ್ಲಿ ಮರಗಳು ವೇಗವಾಗಿ ಹಿಂದಕ್ಕೆ ಓಡುತ್ತಿರುವುದನ್ನು ನೋಡುತ್ತಾ ಕುಳಿತಿದ್ದೆ.ಅಚಾನಕ್ಕಾಗಿ ನನ್ನ ದೃಷ್ಟಿ ಡ್ರೈವರ್ ಸೀಟಿನತ್ತ ಹೋಯಿತು.ಒಂದು ಕ್ಷಣ ,ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ!!! ಡ್ರೈವರ್ ಸೀಟಿನಲ್ಲಿ ಡ್ರೈವರ್ ನಾಪತ್ತೆ!!! ಯಾವುದೋ ಹಾರರ್ ಸಿನೆಮಾದಲ್ಲಿ ಹೋಗುವ ಹಾಗೆ ಬಸ್ ತನ್ನಷ್ಟಕ್ಕೆ ತಾನೇ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿತ್ತು!!! ಇದೇನು ಕನಸೋ ಎಂದು ಮೈ ಚಿವುಟಿ ನೋಡಿಕೊಂಡೆ.ಇಲ್ಲಾ ,ನಾನು ಸಂಪೂರ್ಣ ಎಚ್ಚರವಾಗಿದ್ದೆ !!! ' ಅರೆ ಇದು ಹೇಗೆ ಸಾಧ್ಯ !' ಎಂದುಕೊಂಡು ನೋಡುತ್ತಿದ್ದಂತೆ ಬಸ್ ರಸ್ತೆಯ ಪಕ್ಕದಲ್ಲಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆಯಲು ಮುನ್ನುಗ್ಗುತ್ತಿತ್ತು !!! ನಮ್ಮೆಲ್ಲರ ಕಥೆ ಮುಗಿದೇ ಹೋಯಿತು ಎಂದುಕೊಳ್ಳುತ್ತಿದ್ದಾಗ , ಪವಾಡವೆಂಬಂತೆ ಡ್ರೈವರ್ ತನ್ನ ಸೀಟಿನಲ್ಲಿ ಮತ್ತೆ ಕಾಣಿಸಿಕೊಂಡು ಬಸ್ಸನ್ನು ಮರದಿಂದ ಕೂದಲಿನಷ್ಟು ಅಂತರದಿಂದ ತಪ್ಪಿಸಿ , ವಾಪಸ್ ಹೆದ್ದಾರಿಗೆ ತಂದು ,ಏನೂ ಆಗಿಯೇ ಇಲ್ಲವೆಂಬಂತೆ ಮತ್ತೆ ಓಡಿಸ ತೊಡಗಿದ !!! ನಡೆದದ್ದೇನೆಂದು ಕ್ಷಣ ಮಾತ್ರದಲ್ಲಿ ಅರ್ಥವಾಗಿತ್ತು. ಬಸ್ ಓಡಿಸುವಾಗ,ಡ್ರೈವರ್ ಗೆ ನಿದ್ದೆ ಬಂದು ,ತನ್ನ ಸೀಟು ಮತ್ತು ಸ್ಟೀಯರಿಂಗ್ ವೀಲ್ ( steering wheel) ಮಧ್ಯೆ ಇದ್ದ ಜಾಗದಲ್ಲಿ ಜಾರಿ ಹೋಗಿದ್ದ. ಕ್ಷಣಾರ್ಧ ದಲ್ಲಿ ನಡೆದು ಹೋದ ಘಟನೆಯಿಂದ ಆ ಡಿಸೆಂಬರಿನ ಚಳಿಯಲ್ಲೂ ನಖ ಶಿಖಾಂತ ಬೆವತು ಹೋಗಿದ್ದೆ!!!
ಮೊದಲು ಕಂಡಕ್ಟರ್ ನನ್ನು ಎಬ್ಬಿಸಿ,ನಡೆದ ಘಟನೆಯನ್ನು ವಿವರಿಸಿದೆ.ಅದಕ್ಕವನು ,ನಿದ್ದೆ ಕಣ್ಣಿನಲ್ಲೇ 'ಅಯ್ಯೋ,ನೀವೂ ಸುಮ್ಮನೆ ಮಲಗಿಕೊಳ್ಳಿ ಸಾರ್.......,ಹಣೇಲಿ ಸಾವು ಬರೆದಿದ್ದರೆ ಯಾರೇನು ಮಾಡೋಕಾಯ್ತದೆ...?'ಎಂದು ವೇದಾಂತದ ಮಾತಾಡಿ, ಮತ್ತೆ ನಿದ್ದೆಗೆ ಜಾರಿದ! ' ಇನ್ನು ಇವನಿಗೆ ಹೇಳಿ ಪ್ರಯೋಜನವಿಲ್ಲ' ಎನಿಸಿ ಬಸ್ಸಿನಲ್ಲಿದ್ದವರನ್ನೆಲ್ಲಾ ಎಬ್ಬಿಸಿ ,ನಡೆದ ಘಟನೆ ಹೇಳಿದೆ.ಎಲ್ಲರೂ ಸೇರಿ ಒತ್ತಾಯ ಮಾಡಿ ಡ್ರೈವರ್ ನನ್ನು ಬಸ್ ನಿಲ್ಲಿಸುವಂತೆ ಮಾಡಿದೆವು.ತನಗೆ ನಿದ್ದೆ ಬಂದುದಾಗಿಯೂ ,ಬಸ್ಸು ಇನ್ನೇನು ಮರಕ್ಕೆ ಡಿಕ್ಕಿ ಹೊಡಿಯುತ್ತೆ ಎನ್ನುವಾಗ ಎಚ್ಚರವಾಗಿ ಅಪಘಾತವನ್ನು ತಪ್ಪಿಸಿದ್ದಾಗಿಯೂ ಡ್ರೈವರ್ ಒಪ್ಪಿಕೊಂಡ.ಬಸ್ಸನ್ನು ಸೈಡಿನಲ್ಲಿ ನಿಲ್ಲಿಸಿ ,ಒಂದು ತಾಸು ನಿದ್ದೆ ಮಾಡಿ , ತಣ್ಣೀರಿನಲ್ಲಿ ಮುಖ ತೊಳೆದು ,ಅಲ್ಲೇ ಇದ್ದ ಹೋಟೆಲಿನಲ್ಲಿ ಬಿಸಿ,ಬಿಸಿ ಟೀ ಕುಡಿದ ನಂತರ ನಮ್ಮ ಡ್ರೈವರ್ ಪೂರ್ಣ ಎಚ್ಚರದಿಂದ ಗಾಡಿ ಓಡಿಸಿ ಬೆಳಿಗ್ಗೆ ಏಳು ಗಂಟೆಯ ವೇಳೆಗೆ ಬೆಂಗಳೂರನ್ನು ತಲುಪಿದ.
ಅಂತೂ ....,ಈ ವಿಚಿತ್ರ ಘಟನೆ ಸುಖಾಂತ್ಯ ಕಂಡಿತ್ತು.ಡ್ರೈವರ್ ...,ಒಂದೇ ಒಂದು ಕ್ಷಣ ಎಚ್ಚರ ತಪ್ಪಿದರೂ ಏನು ಅನಾಹುತವಾಗುತ್ತಿತ್ತೋ! ನೆನ್ನೆ ಬೆಳಿಗ್ಗೆ ನಾನು ಗ್ಯಾರೇಜ್ ನಲ್ಲಿ ಕಂಡ ನುಜ್ಜು ಗುಜ್ಜಾದ ಹೊಸ ಕಾರಿನ ಮಾಲಿಕರೂ ಕೂಡ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕಾರನ್ನು ಓಡಿಸುವಾಗ ಒಂದೇ ಒಂದು ಕ್ಷಣ ನಿದ್ದೆಗೆ ಜಾರಿ ,ರಸ್ತೆಯ ಬಲ ಭಾಗದಲ್ಲಿದ್ದ ಹೊಂಡದಲ್ಲಿ ಬಿದ್ದಿದ್ದರು.ಪುಣ್ಯಕ್ಕೆ ಕಾರಿನಲ್ಲಿದ್ದವರಿಗೆ ಯಾವುದೇ ಬಲವಾದ ಪೆಟ್ಟಾಗಿರಲಿಲ್ಲ! ' ಏನಾಯ್ತು ಸಾರ್........?' ಎಂದು ಕೇಳಿದ್ದಕ್ಕೆ ಅವರು ಹೇಳಿದ್ದು 'ನಿದ್ದೆ.......ಬಿದ್ದೆ .....! ಅಷ್ಟೇ !! '.
Saturday, December 25, 2010
Saturday, December 11, 2010
"ಲೈಫು ಇಷ್ಟೇನೇ !" (ವೈದ್ಯನೊಬ್ಬನ ಮರೆಯದ ನೆನಪುಗಳು -ಭಾಗ ೨ )
ಸುಮಾರು ಮೂವತ್ತು ವರ್ಷಗಳಷ್ಟು ಹಳೆಯದಾದ ,ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಹೋಗಿರುವ ಸಿರುಗುಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗಿನ ಮತ್ತೊಂದು ನೆನಪನ್ನು ನಿಮ್ಮೊಡನೆ ಹಂಚಿಕೊಳ್ಳಲೇ ಬೇಕು. ಒಂದು ಸಂಜೆ ಸುಮಾರು ಆರು ಗಂಟೆಯ ಸಮಯ.ಕಾರ್ಖಾನೆಯಿಂದ ಊರ ಹೊರಗೆ ಹೋಗುವ ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದೆ.ಸ್ವಲ್ಪ ದೂರ ಹೋದ ನಂತರ ರಸ್ತೆಯ ಪಕ್ಕ, ಸಕ್ಕರೆ ಮೂಟೆ ಹೊರುವ ಹಮಾಲಿಗಳ ಗುಡಿಸಲುಗಳು ಇದ್ದವು. ಅವರೆಲ್ಲ ರಸ್ತೆಯ ಪಕ್ಕ ಕುಳಿತು ಹರಟೆ ಹೊಡೆಯುವುದು ಮಾಮೂಲಾಗಿತ್ತು.ನಾನು ನನ್ನ ಪಾಡಿಗೆ ವಾಕಿಂಗ್ ಮುಂದುವರಿಸಿದೆ.ಇನ್ನಷ್ಟು ದೂರ ಹೋದಾಗ ,ರಾಮಯ್ಯ ಭೀಮಯ್ಯ ಎಂಬ ಸುಮಾರು ಇಪ್ಪತ್ತು ವರುಷ ವಯಸ್ಸಿನ ನನಗೆ ಪರಿಚಯದ,ಕಟ್ಟು ಮಸ್ತಾದ ಸುಂದರ ಶರೀರವಿದ್ದ ಹಮಾಲಿಗಳಿಬ್ಬರು ರಸ್ತೆಯ ಪಕ್ಕ ಕುಳಿತಿದ್ದರು.ಇಬ್ಬರ ಮುಂದೆಯೂ ನೊರೆ ಬರುತ್ತಿದ್ದ ಸಾರಾಯಿ ಬಾಟಲಿಗಳಿದ್ದವು.ನನ್ನನ್ನು ಕಂಡ ತಕ್ಷಣ ಇಬ್ಬರೂ ಬಾಟಲಿಗಳನ್ನು ತಮ್ಮ ಹಿಂದೆ ಬಚ್ಚಿಟ್ಟುಕೊಂಡು ,ನನ್ನನ್ನು ನೋಡಿ ಹುಳ್ಳಗೆ ನಕ್ಕು, ತಪ್ಪುಮಾಡಿದವರಂತೆ ತಲೆ ಕೆರೆದುಕೊಂಡರು."ಅಲ್ಲಾ ಕಣ್ರಪ್ಪಾ ,ಹಾಳೂ ಮೂಳೂ ಕುಡಿದು ಯಾಕ್ರೋ ಆರೋಗ್ಯಹಾಳುಮಾಡಿಕೊಳ್ಳುತ್ತೀರಿ"
ಎಂದೆ."ಮುಂಜಾನೆಯಿಂದ ಸಂಜಿ ಮಟ,ಮೂಟೆ ಹೊರುತ್ತೀವಲ್ರೀ ,ಮೈ ಕೈ ಬಾಳಾ ನೋಯ್ತವ್ರೀ,ಕುಡೀದಿದ್ರೆ ನಿದ್ರಿ ಬರಂಗಿಲ್ರೀ"ಎಂದುನೆವ ಹೇಳಿದರು.ನಾನು ಮಾತು ಮುಂದುವರಿಸಿ ಪ್ರಯೋಜನವಿಲ್ಲವೆಂದು ಅರಿತು ನನ್ನ ವಾಕಿಂಗ್ ಮುಂದುವರಿಸಿದೆ.ಮೂಟೆಗಳನ್ನುಹೊತ್ತು ,ಒಳ್ಳೇ 'ಬಾಡಿ ಬಿಲ್ಡರ್ಸ್'ತರಹ ಕಟ್ಟುಮಸ್ತಾಗಿ ಹುರಿಗೊಂಡ
ಪ್ರಕೃತಿದತ್ತವಾಗಿ ಬಂದ ಇಂತಹ ಸುಂದರ ಶರೀರಗಳನ್ನು, ಕುಡಿದು ಹಾಳುಮಾಡಿಕೊಳ್ಳುತ್ತಾರಲ್ಲಾ ಎಂದು ಬೇಸರವಾಯಿತು.ಸುಮಾರು ಒಂದು ಕಿಲೋಮೀಟರಿನಷ್ಟು ವಾಕಿಂಗ್ ಮುಂದುವರಿಸಿ ಹಿಂದಿರುಗಿದಾಗ ,ರಸ್ತೆಯ ಬದಿ ಜನಜಂಗುಳಿ ಸೇರಿತ್ತು.ಕೂಗಾಟ,ಚೀರಾಟ ,ಅಳು, ಮುಗಿಲು ಮುಟ್ಟಿತ್ತು.ಸ್ವಲ್ಪ ಸಮಯದ ಹಿಂದೆ ,
ನೊರೆ ಬರುತ್ತಿದ್ದ ಸಾರಾಯಿ ಬಾಟಲಿಗಳನ್ನು ಮುಂದಿಟ್ಟು ಕೂತಿದ್ದ ,ಸುಂದರ ಕಾಯಗಳ ತರುಣರಿಬ್ಬರೂ ನೆಲಕ್ಕೆ ಮೈ ಚೆಲ್ಲಿದ್ದರು.ಇಬ್ಬರ ಬಾಯಲ್ಲೂ ನೊರೆ ಬರುತ್ತಿತ್ತು.ಅವರ ಪಕ್ಕದಲ್ಲಿ ಬಾಟಲಿಗಳು ಅನಾಥರಂತೆ ಬಿದ್ದುಕೊಂಡಿದ್ದವು. ಸೂರ್ಯ ಅಸ್ತಮಿಸಿದ್ದ .ಭಾರವಾದ ಹೃದಯ ಹೊತ್ತು , ನಾನು ಮನೆಯಕಡೆ ನಡೆದೆ.
ಎಂದೆ."ಮುಂಜಾನೆಯಿಂದ ಸಂಜಿ ಮಟ,ಮೂಟೆ ಹೊರುತ್ತೀವಲ್ರೀ ,ಮೈ ಕೈ ಬಾಳಾ ನೋಯ್ತವ್ರೀ,ಕುಡೀದಿದ್ರೆ ನಿದ್ರಿ ಬರಂಗಿಲ್ರೀ"ಎಂದುನೆವ ಹೇಳಿದರು.ನಾನು ಮಾತು ಮುಂದುವರಿಸಿ ಪ್ರಯೋಜನವಿಲ್ಲವೆಂದು ಅರಿತು ನನ್ನ ವಾಕಿಂಗ್ ಮುಂದುವರಿಸಿದೆ.ಮೂಟೆಗಳನ್ನುಹೊತ್ತು ,ಒಳ್ಳೇ 'ಬಾಡಿ ಬಿಲ್ಡರ್ಸ್'ತರಹ ಕಟ್ಟುಮಸ್ತಾಗಿ ಹುರಿಗೊಂಡ
ಪ್ರಕೃತಿದತ್ತವಾಗಿ ಬಂದ ಇಂತಹ ಸುಂದರ ಶರೀರಗಳನ್ನು, ಕುಡಿದು ಹಾಳುಮಾಡಿಕೊಳ್ಳುತ್ತಾರಲ್ಲಾ ಎಂದು ಬೇಸರವಾಯಿತು.ಸುಮಾರು ಒಂದು ಕಿಲೋಮೀಟರಿನಷ್ಟು ವಾಕಿಂಗ್ ಮುಂದುವರಿಸಿ ಹಿಂದಿರುಗಿದಾಗ ,ರಸ್ತೆಯ ಬದಿ ಜನಜಂಗುಳಿ ಸೇರಿತ್ತು.ಕೂಗಾಟ,ಚೀರಾಟ ,ಅಳು, ಮುಗಿಲು ಮುಟ್ಟಿತ್ತು.ಸ್ವಲ್ಪ ಸಮಯದ ಹಿಂದೆ ,
ನೊರೆ ಬರುತ್ತಿದ್ದ ಸಾರಾಯಿ ಬಾಟಲಿಗಳನ್ನು ಮುಂದಿಟ್ಟು ಕೂತಿದ್ದ ,ಸುಂದರ ಕಾಯಗಳ ತರುಣರಿಬ್ಬರೂ ನೆಲಕ್ಕೆ ಮೈ ಚೆಲ್ಲಿದ್ದರು.ಇಬ್ಬರ ಬಾಯಲ್ಲೂ ನೊರೆ ಬರುತ್ತಿತ್ತು.ಅವರ ಪಕ್ಕದಲ್ಲಿ ಬಾಟಲಿಗಳು ಅನಾಥರಂತೆ ಬಿದ್ದುಕೊಂಡಿದ್ದವು. ಸೂರ್ಯ ಅಸ್ತಮಿಸಿದ್ದ .ಭಾರವಾದ ಹೃದಯ ಹೊತ್ತು , ನಾನು ಮನೆಯಕಡೆ ನಡೆದೆ.
Subscribe to:
Posts (Atom)