Saturday, May 28, 2011

"ಮುದ್ದು ರಾಮನ ಮನಸು"

ಡಿ.ವಿ.ಜಿ.ಯವರ 'ಮಂಕು ತಿಮ್ಮನ ಕಗ್ಗ 'ಕನ್ನಡ ಸಾಹಿತ್ಯಾಸಕ್ತರಿಗೆ ಚಿರ ಪರಿಚಿತ.ದಶಕಗಳಿಂದ ಹಲವಾರು ಜನರಿಗೆ ದಾರಿ ದೀಪವಾಗಿದೆ.ಇದರಲ್ಲಿ ಎರಡು ಮಾತಿಲ್ಲ.ಆದರೆ ಅಷ್ಟೇನೂ ಪರಿಚಿತವಲ್ಲದ ,1101 ಚೌಪದಿಗಳ ಸುಂದರ ಪುಸ್ತಕ ,ಕೆ.ಸಿ.ಶಿವಪ್ಪನವರು ಬರೆದ,'ಮುದ್ದು ರಾಮನ ಮನಸು'.ಇದನ್ನು 2003 ರಲ್ಲಿ ಭಾರತೀಯ ವಿದ್ಯಾ ಭವನ ,ಬೆಂಗಳೂರು ಹೊರತಂದಿದೆ.ಮತ್ತೂರು ಕೃಷ್ಣಮೂರ್ತಿ ಯವರ ಸುಂದರ ಮುನ್ನುಡಿ ಇದೆ.ಬಾಳಿಗೆ ಬೆಳಕನೀಯುವ ಸಾಲು ಸಾಲು ಸುಂದರ ಚೌಪದಿಗಳಿವೆ.ಇಗೋ ಕೆಲ ಚೌಪದಿಗಳನ್ನು ನಿಮ್ಮೊಡನೆ ಹಂಚಿ ಕೊಳ್ಳುತ್ತಿದ್ದೇನೆ.ನಿಮ್ಮ ಅನಿಸಿಕೆ ತಿಳಿಸಿ.ನಮಸ್ಕಾರ.

೧)ಅಂಬರದ ಎಲರಲ್ಲಿ ಪೋಷಣೆಯ ಗಂಧವಿದೆ;
ಹಾರುವುದು ಗಾಳಿಪಟ ತಂತು ಬಲದಿಂದ.
ಪಟ ಹಿಡಿದ ಕರದಲ್ಲಿ  ಯಾವುದೋ ಯುಕ್ತಿಯಿದೆ;
ಸೂತ್ರದಲಿ ಶಕ್ತಿಯಿದೆ -ಮುದ್ದು ರಾಮ.

೨)ಕಲಿಸೆನಗೆ ಓ ಗುರುವೇ ಮರುಗುವುದ ಮಣಿಯುವುದ 
ಪರ ಸುಖಗೆ ಹಿಗ್ಗುವುದ ,ನೋವನಳಿಸುವುದ.
ಬೀಗದಿಹ ಮನವೊಂದ ,ಸರಳತೆಯ ನೀಡೆನಗೆ ;
ಮನ್ನಿಸೈ ತಪ್ಪುಗಳ-ಮುದ್ದುರಾಮ. 

೩) ದಾರಿ ತೋರಿತು ನನಗೆ ಮಂಕುತಿಮ್ಮನ ನೆನಪು 
ಈ ಮನಸು ಮುಗ್ಗರಿಸಿ ಒಂಟಿ ನಿಂತಾಗ .
'ಮೌನದೊಳಮನೆ ಶಾಂತಿ'ಬೆಳಕ ತಂದಿತು ಆಗ 
ತಿಮ್ಮ ಜೀವನ ಮಿತ್ರ -ಮುದ್ದು ರಾಮ.

೪)ನನ್ನದಿದು ನಾ ಬರೆದೆ ಎನುವ ಅಮಲೇರಿದರೆ
ಪಾತಾಳದೊಳಬಿದ್ದೆ ನೀ ಮೇರುವಿನಿಂದ
ನಿನದಲ್ಲ ಪದಪುಂಜ ಯಾರದೋ ಕರುಣೆ ಅದು
ಬರಿ ನಿಮಿತ್ತವೋ ನೀನು -ಮುದ್ದು ರಾಮ.

೫)ಜನಪದಗಳು ಉರುಳಿದವು ,ಮಹಲು ಬಾವಲಿ ಬೀಡು 
ತೇಲಿ ಹೋದವು ಮುಕುಟ ಇನಿತು ಗುರುತಿರದೆ.
ಯಾವುದುಳಿದಿದೆ ಇಲ್ಲಿ ಕಾಲ ನದಿಯ ಓಟದಲಿ ?
ಸ್ಥಿರವಾವುದಿದೆ ಇಲ್ಲಿ?-ಮುದ್ದು ರಾಮ.
೬)ಲೋಕದಲಿ ನೀನೇನು ಮೊದಲಿಗನೆ,ಕೊನೆಯವನೆ?
ಎದ್ದೆದ್ದು ಒದ್ದಾಡಿ ಏಕೆ ತೊಳಲಾಟ?
ಇದೆ ವಿಶ್ವ ಮೊದಲಿಂದ ,ನೀ ಅಳಿದರೂ  ಇಹುದು 
ನೀ ಕ್ಷಣಿಕ ,ಜಗವಲ್ಲ-ಮುದ್ದು ರಾಮ
.
೭)ಚಿಂತಿಸದೆ ಇರದುದಕೆ,ನಲಿ ನೀನು ಇರುವುದಕೆ ;
ಸಂತಸದ ಈ ದಾರಿ ಬಲು ಸುಲಭ ,ಸರಳ.
ಗಗನ ಬೀಳುವುದೆಂದು ಏಕೆ ಸಲ್ಲದ ಚಿಂತೆ?
ಇರು ಇಂದು ನಲವಿಂದ -ಮುದ್ದು ರಾಮ.
೮) ಕಾಲ ಕಂಬದ ಮೇಲೆ ಬಾಳ ತಂತಿಯ ಕಟ್ಟಿ 
ಭರವಸೆಯ ಕೋಲ್ ಪಿಡಿದು ಸಾಗುತಿದೆ ಆಟ.
ಮುಗ್ಗರಿಸೆ ಅದು ಸೋಲು,ನಡೆಯುತಿರೆ ಅದು ಗೆಲುವು 
ಬದುಕು ದೊಂಬರ ಆಟ-ಮುದ್ದು ರಾಮ. 

೯)ಕಿರಿದು ಹಿರಿದೆನ ಬೇಡ ಕೆಲಸ ಯಾವುದೆ ಇರಲಿ
ಸೇತುವೆಗೆ ತಳಹದಿಯೋ ಒಂದೊಂದು ಕಲ್ಲು .
ಸೇವೆಯಲಿ ಶಾಂತಿ ಇದೆ ,ಮಮಕಾರ ನಾಶವಿದೆ 
ಅಳಿಲಾಗು ರಾಮನಿಗೆ -ಮುದ್ದು ರಾಮ.

೧೦)ಸುಳಿದಿಂದು ಕಾತರತೆ  ಮರಳಿ ಮರೆಯಾಗುವುದು;
ನಿಲ್ಲುವುದೇ ಕಾರ್ಮೋಡ ರವಿ ಕಿರಣದೆದುರು ?
ಅಲೆ ಬಂದರೇನಂತೆ? ಬಂಡೆ ತಾನಲಗುವುದೇ?
ಅಣಿಯಾಗು ಜಿತ ಮನಕೆ- ಮುದ್ದುರಾಮ.

 ೧೧)ತೆರೆದೆದೆಯ ಬಾನಂತೆ ನಿಲ್ಲು ಎತ್ತರದಲ್ಲಿ ; 
ಬಯಲಿನಲಿ  ಬಯಲಾಗು ಕೊನೆಗಳಿಗೆಯಲ್ಲಿ .
ಸುಖ  ಭಾವ ಹೊದ್ದವಗೆ ಚಳಿಯೇನು?ಬಿಸಿಲೇನು?
ಆಗು  ಕಾಲಾತೀತ!-ಮುದ್ದುರಾಮ.

೧೨)ನೀ  ದಣಿದು ನಿಂತಾಗ ಯಾರೋ ಕೊಡ ನೀಡುವರು 
ಮೆದು  ಮಾತನಾಡುವರು ಆಸರೆಯ ನೀಡಿ.
ಚೈತನ್ಯ ತುಂಬುವರು  ಸೋತ ಮನಮಂದಿರಕೆ
ಬಿಡು  ಚಿಂತೆ ಕಾತರವ-ಮುದ್ದು ರಾಮ.

Monday, May 23, 2011

" old wine in a new bottle!"

I intend to make my blog a bilingual blog .I was pleasantly  surprised to find a follower who probably doesn't even know which language I am writing in! For the benefit of such wonderful followers who can't make much of what I am writing about,I wish writing  both in kannada which is my mother tongue and in English which is understood by a larger section of people.I hope you would extend your valuable support as usual.After all........IT ..IS ...OLD  WINE  IN A NEW........BOTTLE!!! Hope ...you will love it!!
 
ಇಂಗ್ಲೀಷಿನಲ್ಲೂ  ಬರಹಗಳನ್ನು ಬ್ಲಾಗಿಸಬೇಕೆನಿಸಿ ,ನನ್ನ ಬ್ಲಾಗನ್ನು ದ್ವಿಭಾಷಾ ಬ್ಲಾಗನ್ನಾಗಿ ಪರಿವರ್ತಿಸಿದ್ದೇನೆ.ಎಂದಿನಂತೆ ನಿಮ್ಮೆಲ್ಲರ ಪ್ರೋತ್ಸಾಹ ಮುಂದುವರೆಯಲಿ.ಅದೇ ಹಳೇ ಕೊಳಲಿನಲ್ಲೊಂದು.......... ಹೊಸ ದನಿ!

Sunday, May 15, 2011

" ಕಗ್ಗದ ಸಾಂತ್ವನ ನುಡಿಗಳು"

ಮನಸ್ಸಿಗೆ ಬೇಸರವಾದಾಗ,ಎಡಬಿಡದ ಚಿಂತೆಗಳು ಕಾಡಿದಾಗ,ಮುಂದೇನೆಂದು ದಾರಿ ಕಾಣದಾದಾಗ ಯಾರಾದರು ಹಿರಿಯರು ಧೈರ್ಯ ತುಂಬಿ,ಮಾರ್ಗದರ್ಶನ ನೀಡಿದರೆ,ಬದುಕಿನ ದಾರಿ ಸುಗಮವೆನಿಸುತ್ತದೆ.ಹೊಸ ಉತ್ಸಾಹದೊಂದಿಗೆ ಮುನ್ನಡೆಸುತ್ತದೆ ಅವರ ಮಾರ್ಗದರ್ಶನ.ಅಂತಹ ಮಾರ್ಗದರ್ಶನವನ್ನು ದಿವಂಗತ ಡಿ.ವಿ.ಜಿ.ಯವರು ತಮ್ಮ 'ಮಂಕು ತಿಮ್ಮನ ಕಗ್ಗ'ದ ಮೂಲಕ ನನ್ನಂತಹ ಕೋಟಿ, ಕೋಟಿ, ಜನರಿಗೆ ಹಲವಾರು ದಶಕಗಳಿಂದ ನೀಡುತ್ತಾ ಬಂದಿದ್ದಾರೆ.ಅವರ ಕೆಲ ಪದ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬೇಕಿನಿಸಿದೆ.ಇಗೋ ಅವರ ಕೆಲ  ಸುಂದರ ಕಗ್ಗದ ಪದ್ಯಗಳು;

೧) ಬಾಳ್ಕೆಯಲಿ ನೂರೆಂಟು ತೊಡಕು ತಿಣುಕು ಗಳುಂಟು 
ಕೇಳ್ಕೆ ಮಾಣ್ಕೆ ಗಳಿಗವು ಜಗ್ಗವೊಂದಿನಿತುಂ   
ಗೋಳ್ಕರದರೇನು ಫಲ ?ಗುದ್ದಾಡಲೇನು ಫಲ?
ಪಲ್ಕಿರಿದು ತಾಳಿಕೊಳೋ ಮಂಕು ತಿಮ್ಮ.

೨)ಸ್ಥೂಲ ಸೂಕ್ಷ್ಮ ವಿವೇಕ ರಹಿತೇಷ್ಟ ಬಂಧು ಜನ 
ಕಾಲ ದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು.
ಸಾಲವನು ನಿನ್ನಿಂದ ಸಲಿಸಿಕೊಳ ಬಂದವರು 
ತಾಳಿಮೆಯಿನವರೊಳಿರು- ಮಂಕು ತಿಮ್ಮ.
    (ಕಾಲದಂಷ್ಟ್ರ-ಯಮ ) 
೩) ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ 
ಕೊರತೆಯೊಂದನು ನೀನು ನೆನೆ ನೆನೆದು ಕೊರಗಿ 
ಧರೆಯೆಲ್ಲವನು ಶಪಿಸಿ ,ಮನದಿ ನರಕವ ನಿಲಿಸಿ 
ನರಳುವುದು ಬದುಕೇನೋ -ಮಂಕು ತಿಮ್ಮ.

೪) ಚಿಂತೆ ಸಂತಾಪಗಳು ಮನಸಿಗೆ ವಿರೇಚಕವೋ
ಸಂತಸೋತ್ಸಾಹಗಳೇ ಪಥ್ಯದುಪಚಾರ .
ಇಂತುಮಂತುಂ  ನಡೆಯುತಿರುವುದಾತ್ಮ ಚಿಕಿತ್ಸೆ 
ಎಂತಾದೊಡಂತೆ ಸರಿ ಮಂಕು ತಿಮ್ಮ.

೫) ತರಿದು ಬಿಡು ,ತೊರೆದು ಬಿಡು ,ತೊಡೆದು ಬಿಡು  ನೆನಹಿಂದ
ಕರೆ ಕರೆಯ ಬೇರುಗಳ ,ಮನದ ಗಂಟುಗಳ
ಉರಕೆ ಸೊಗಸೆನಿಸಿದಾ ಪ್ರೀತಿ ಹಾರಮುಂ ಒರ್ಮೆ 
ಉರುಳಪ್ಪುದಾತ್ಮಕ್ಕೆ -ಮಂಕು ತಿಮ್ಮ.

೬)ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು 
ಮಗುವು ನೀಂ ಪೆತ್ತರ್ಗೆ ,ಲೋಕಕೆ ಸ್ಪರ್ಧಿ 
ಹೆಗಲ ಹೊರೆ ಹುಟ್ತಿದೆಲ್ಲರಿಗುಂ ಇರುತಿರೆ ನಿನ್ನ
ರಗಳೆಗಾರಿಗೆ  ಬಿಡುವೋ-ಮಂಕು ತಿಮ್ಮ.

೭) ಇಳೆಯಿಂದ ಮೊಳಕೆಯೊಗೆವಂದು ತಮಟೆ ಗಳಿಲ್ಲ 
ಫಲ ಮಾಗುವಂದು ತುತ್ತೂರಿ  ದನಿಯಿಲ್ಲ 
ಬೆಳಕೀವ ಸೂರ್ಯ ಚಂದ್ರರೊಂದು ಸದ್ದಿಲ್ಲ 
ಹೊಲಿ ನಿನ್ನ ತುಟಿಗಳನು-ಮಂಕು ತಿಮ್ಮ.

೮)ಮುಂದೇನೋ, ಮತ್ತೇನೋ ,ಇಂದಿಗಾ ಮಾತೇಕೆ?
ಸಂದರ್ಭ ಬರಲಿ ,ಬಂದಾಗಲಾ ಚಿಂತೆ 
ಹೊಂದಿಸುವನಾರೋ ನಿನ್ನಾಳಲ್ಲ ಬೇರಿಹನು
ಇಂದಿಗಿಂದಿನ ಬದುಕು -ಮಂಕು ತಿಮ್ಮ.

೯) ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರ ಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೇ ಮೌನದೊಳಮನೆಯ ಶಾಂತಿಯಲಿ 
ವರ ಯೋಗ ಸೂತ್ರವಿದು -ಮಂಕು ತಿಮ್ಮ.

೧೦) ಎಡರು ತೊಡರೆನಲೇಕೆ ? ಬಿಡಿಸು ಮತಿಗಾದನಿತ 
ದುಡಿ ಕೈಯಿನಾದನಿತು ,ಪಡು ಬಂದ ಪಾಡು.
ಬಿಡು ಮಿಕ್ಕುದನು ವಿಧಿಗೆ ;ಬಿಡದಿರುಪಶಾಂತಿಯನು
ಬಿಡುಗಡೆಗೆ ದಾರಿಯಿದು- ಮಂಕು ತಿಮ್ಮ .

೧೧)ಸ್ಮಿತವಿರಲಿ  ವದನದಲಿ ,ಕಿವಿಗೆ ಕೇಳಿಸದಿರಲಿ 
ಹಿತವಿರಲಿ ವಚನದಲಿ ,ಋತವ ಬಿಡದಿರಲಿ .
ಮಿತವಿರಲಿ ಮನಸ್ಸಿನುದ್ವೇಗದಲಿ ಭೋಗದಲಿ 
ಅತಿ ಬೇಡವೆಲ್ಲಿಯುಂ- ಮಂಕು ತಿಮ್ಮ.

೧೨) ತಿರುಗಿಸಲಿ ವಿಧಿರಾಯನಿಚ್ಚೆಯಿಂ ಯಂತ್ರವನು
ಚರಿಕೆ ತಾರಾಗ್ರಹಗಳಿಷ್ಟವೋದಂತೆ 
ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ
ಸ್ಥಿರ ಚಿತ್ತ ನಿನಗಿರಲಿ -ಮಂಕು ತಿಮ್ಮ.

Wednesday, May 11, 2011

"ಇರುಳಲ್ಲಿ ಕಂಡ ಬಾವಿಗೆ ಹಗಲಲ್ಲಿ ಬೀಳದಿರಿ!!"

ಅದೊಂದು ಜ್ಞಾನದ,ಸಾಹಿತ್ಯದ 
ತಿಳಿನೀರು ಇದೆಯೆಂದು 
ಭ್ರಮೆ ಹುಟ್ಟಿಸುವ ಬಾವಿ!
ತಳವೇ ಕಾಣದ ಬಾವಿ!
ಆಳದಲ್ಲಿರುವ ಸುಳಿಗಳ 
ಸುಳಿವೇ  ಇಲ್ಲ!!!
ಅದಕೋ ರಕ್ಕಸ ದಾಹ!
ಜ್ಞಾನದ ನೀರಿಗಾಗಿ ಬಂದ 
ಹಾದಿ  ಹೋಕರನ್ನೇ
ದ್ರವ್ಯದ ನೀರಿಗಾಗಿ ಬೇಡುತ್ತಿತ್ತು!
ನನ್ನ ನೀರು ಇಂಗಿದೆ!
ನಿಮ್ಮಲ್ಲಿರುವ ನೀರು ನನ್ನಲ್ಲಿ ಹಾಕಿ!
ನನ್ನಲ್ಲೂ ನೀರು ಉಕ್ಕಿ ,
ನಾನೂ ತುಂಬಿದಾಗ 
ನಿಮ್ಮ ನೀರು ನಿಮಗೇ 
ಕೊಟ್ಟುಬಿಡುತ್ತೇನೆ!
ಮತ್ತೆ ,ಮತ್ತೆ ನೀರಿಗಾಗಿ ಬೇಡುವುದನ್ನು 
ಬಿಟ್ಟು ಬಿಡುತ್ತೇನೆ!
ಎನ್ನುತ್ತಾ ಗಾಳ ಹಾಕುತ್ತದೆ!
ನೀರು ಹಾಕಿ ಮೋಸ ಹೋದವರು 
ನೀರಿಗಾಗಿ ಕಾಯುತ್ತಲೇ ಇದ್ದಾರೆ!
ಆದರೆ ,ಈ ತಳವೇ ಇರದ 
ದುರಾಸೆಯ ಬಾವಿ 
ತುಂಬುವುದು ಎಂದು?
ನೀರರಸಿ  ಬಂದವರಿಂದಲೇ ಇದು
ನೀರು ಕೇಳುತ್ತಲಿದೆ!
ಅಮಾಯಕರು  ಪಾಪ ,
ಇದರ  ತುಂಬದ ಹೊಟ್ಟೆಗೆ
ನೀರು  ಸುರಿಯುತ್ತಲೇ ಇದ್ದಾರೆ!
ಇರುಳು ಕಂಡ ಬಾವಿಗೆ ,
ಹಗಲೇ ಬೀಳುತ್ತಿದ್ದಾರೆ!