Saturday, May 28, 2011

"ಮುದ್ದು ರಾಮನ ಮನಸು"

ಡಿ.ವಿ.ಜಿ.ಯವರ 'ಮಂಕು ತಿಮ್ಮನ ಕಗ್ಗ 'ಕನ್ನಡ ಸಾಹಿತ್ಯಾಸಕ್ತರಿಗೆ ಚಿರ ಪರಿಚಿತ.ದಶಕಗಳಿಂದ ಹಲವಾರು ಜನರಿಗೆ ದಾರಿ ದೀಪವಾಗಿದೆ.ಇದರಲ್ಲಿ ಎರಡು ಮಾತಿಲ್ಲ.ಆದರೆ ಅಷ್ಟೇನೂ ಪರಿಚಿತವಲ್ಲದ ,1101 ಚೌಪದಿಗಳ ಸುಂದರ ಪುಸ್ತಕ ,ಕೆ.ಸಿ.ಶಿವಪ್ಪನವರು ಬರೆದ,'ಮುದ್ದು ರಾಮನ ಮನಸು'.ಇದನ್ನು 2003 ರಲ್ಲಿ ಭಾರತೀಯ ವಿದ್ಯಾ ಭವನ ,ಬೆಂಗಳೂರು ಹೊರತಂದಿದೆ.ಮತ್ತೂರು ಕೃಷ್ಣಮೂರ್ತಿ ಯವರ ಸುಂದರ ಮುನ್ನುಡಿ ಇದೆ.ಬಾಳಿಗೆ ಬೆಳಕನೀಯುವ ಸಾಲು ಸಾಲು ಸುಂದರ ಚೌಪದಿಗಳಿವೆ.ಇಗೋ ಕೆಲ ಚೌಪದಿಗಳನ್ನು ನಿಮ್ಮೊಡನೆ ಹಂಚಿ ಕೊಳ್ಳುತ್ತಿದ್ದೇನೆ.ನಿಮ್ಮ ಅನಿಸಿಕೆ ತಿಳಿಸಿ.ನಮಸ್ಕಾರ.

೧)ಅಂಬರದ ಎಲರಲ್ಲಿ ಪೋಷಣೆಯ ಗಂಧವಿದೆ;
ಹಾರುವುದು ಗಾಳಿಪಟ ತಂತು ಬಲದಿಂದ.
ಪಟ ಹಿಡಿದ ಕರದಲ್ಲಿ  ಯಾವುದೋ ಯುಕ್ತಿಯಿದೆ;
ಸೂತ್ರದಲಿ ಶಕ್ತಿಯಿದೆ -ಮುದ್ದು ರಾಮ.

೨)ಕಲಿಸೆನಗೆ ಓ ಗುರುವೇ ಮರುಗುವುದ ಮಣಿಯುವುದ 
ಪರ ಸುಖಗೆ ಹಿಗ್ಗುವುದ ,ನೋವನಳಿಸುವುದ.
ಬೀಗದಿಹ ಮನವೊಂದ ,ಸರಳತೆಯ ನೀಡೆನಗೆ ;
ಮನ್ನಿಸೈ ತಪ್ಪುಗಳ-ಮುದ್ದುರಾಮ. 

೩) ದಾರಿ ತೋರಿತು ನನಗೆ ಮಂಕುತಿಮ್ಮನ ನೆನಪು 
ಈ ಮನಸು ಮುಗ್ಗರಿಸಿ ಒಂಟಿ ನಿಂತಾಗ .
'ಮೌನದೊಳಮನೆ ಶಾಂತಿ'ಬೆಳಕ ತಂದಿತು ಆಗ 
ತಿಮ್ಮ ಜೀವನ ಮಿತ್ರ -ಮುದ್ದು ರಾಮ.

೪)ನನ್ನದಿದು ನಾ ಬರೆದೆ ಎನುವ ಅಮಲೇರಿದರೆ
ಪಾತಾಳದೊಳಬಿದ್ದೆ ನೀ ಮೇರುವಿನಿಂದ
ನಿನದಲ್ಲ ಪದಪುಂಜ ಯಾರದೋ ಕರುಣೆ ಅದು
ಬರಿ ನಿಮಿತ್ತವೋ ನೀನು -ಮುದ್ದು ರಾಮ.

೫)ಜನಪದಗಳು ಉರುಳಿದವು ,ಮಹಲು ಬಾವಲಿ ಬೀಡು 
ತೇಲಿ ಹೋದವು ಮುಕುಟ ಇನಿತು ಗುರುತಿರದೆ.
ಯಾವುದುಳಿದಿದೆ ಇಲ್ಲಿ ಕಾಲ ನದಿಯ ಓಟದಲಿ ?
ಸ್ಥಿರವಾವುದಿದೆ ಇಲ್ಲಿ?-ಮುದ್ದು ರಾಮ.
೬)ಲೋಕದಲಿ ನೀನೇನು ಮೊದಲಿಗನೆ,ಕೊನೆಯವನೆ?
ಎದ್ದೆದ್ದು ಒದ್ದಾಡಿ ಏಕೆ ತೊಳಲಾಟ?
ಇದೆ ವಿಶ್ವ ಮೊದಲಿಂದ ,ನೀ ಅಳಿದರೂ  ಇಹುದು 
ನೀ ಕ್ಷಣಿಕ ,ಜಗವಲ್ಲ-ಮುದ್ದು ರಾಮ
.
೭)ಚಿಂತಿಸದೆ ಇರದುದಕೆ,ನಲಿ ನೀನು ಇರುವುದಕೆ ;
ಸಂತಸದ ಈ ದಾರಿ ಬಲು ಸುಲಭ ,ಸರಳ.
ಗಗನ ಬೀಳುವುದೆಂದು ಏಕೆ ಸಲ್ಲದ ಚಿಂತೆ?
ಇರು ಇಂದು ನಲವಿಂದ -ಮುದ್ದು ರಾಮ.
೮) ಕಾಲ ಕಂಬದ ಮೇಲೆ ಬಾಳ ತಂತಿಯ ಕಟ್ಟಿ 
ಭರವಸೆಯ ಕೋಲ್ ಪಿಡಿದು ಸಾಗುತಿದೆ ಆಟ.
ಮುಗ್ಗರಿಸೆ ಅದು ಸೋಲು,ನಡೆಯುತಿರೆ ಅದು ಗೆಲುವು 
ಬದುಕು ದೊಂಬರ ಆಟ-ಮುದ್ದು ರಾಮ. 

೯)ಕಿರಿದು ಹಿರಿದೆನ ಬೇಡ ಕೆಲಸ ಯಾವುದೆ ಇರಲಿ
ಸೇತುವೆಗೆ ತಳಹದಿಯೋ ಒಂದೊಂದು ಕಲ್ಲು .
ಸೇವೆಯಲಿ ಶಾಂತಿ ಇದೆ ,ಮಮಕಾರ ನಾಶವಿದೆ 
ಅಳಿಲಾಗು ರಾಮನಿಗೆ -ಮುದ್ದು ರಾಮ.

೧೦)ಸುಳಿದಿಂದು ಕಾತರತೆ  ಮರಳಿ ಮರೆಯಾಗುವುದು;
ನಿಲ್ಲುವುದೇ ಕಾರ್ಮೋಡ ರವಿ ಕಿರಣದೆದುರು ?
ಅಲೆ ಬಂದರೇನಂತೆ? ಬಂಡೆ ತಾನಲಗುವುದೇ?
ಅಣಿಯಾಗು ಜಿತ ಮನಕೆ- ಮುದ್ದುರಾಮ.

 ೧೧)ತೆರೆದೆದೆಯ ಬಾನಂತೆ ನಿಲ್ಲು ಎತ್ತರದಲ್ಲಿ ; 
ಬಯಲಿನಲಿ  ಬಯಲಾಗು ಕೊನೆಗಳಿಗೆಯಲ್ಲಿ .
ಸುಖ  ಭಾವ ಹೊದ್ದವಗೆ ಚಳಿಯೇನು?ಬಿಸಿಲೇನು?
ಆಗು  ಕಾಲಾತೀತ!-ಮುದ್ದುರಾಮ.

೧೨)ನೀ  ದಣಿದು ನಿಂತಾಗ ಯಾರೋ ಕೊಡ ನೀಡುವರು 
ಮೆದು  ಮಾತನಾಡುವರು ಆಸರೆಯ ನೀಡಿ.
ಚೈತನ್ಯ ತುಂಬುವರು  ಸೋತ ಮನಮಂದಿರಕೆ
ಬಿಡು  ಚಿಂತೆ ಕಾತರವ-ಮುದ್ದು ರಾಮ.

20 comments:

  1. ಕೃಷ್ಣಮೂರ್ತಿಯವರೆ...
    ನೀತಿಬೋಧಕ ಸಾಲುಗಳು ದಾರಿ ದೀಪದಂತೆ..

    ಚಂದದ ತತ್ವಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು...

    ReplyDelete
  2. ಮುದ್ದು ರಾಮನ ನೀತಿ ವಾಕ್ಯಗಳನ್ನು ಹಿರೆಮಗಳೂರು ಕಣ್ಣನ್ ಅವರ ಮಾತುಗಳಲ್ಲಿ ಕೇಳಿದ್ದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟ ತಮಗೆ ಧನ್ಯವಾದಗಳು.

    ReplyDelete
  3. thank you sir... naanu intaha saalugaLanna odiralilla.

    ReplyDelete
  4. ಅತ್ಯುತ್ತಮವಾದ ನೀತಿ ಬೋಧಕ ಸಾಲುಗಳಿವೆ ಈ ಮುದ್ದು ರಾಮನ ಚೌಪದಿಯಲ್ಲಿ.. ಮಂಕುತಿಮ್ಮನ ಕಗ್ಗದ "ಮೌನದೊಳಮನೆಯ ಶಾಂತಿ" ಎಂಬ ಪದಗಳು ಬಹಳ ಹಿಡಿಸಿತು.. ತುಂಬಾ ಒಳ್ಳೆ ಕಾವ್ಯದ ಪರಿಚಯ ಮಾಡಿಸಿದ್ದೀರಿ, ನಿಮಗೆ ಅನಂತ ಧನ್ಯವಾದಗಳು!

    ReplyDelete
  5. ನೀತಿಬೋಧಕ ಸಾಲುಗಳು. ಧನ್ಯವಾದಗಳು!

    ReplyDelete
  6. ಡಾಕ್ಟ್ರೇ,
    ಅಪರಿಚಿತ ಕಾವ್ಯವನ್ನು ಸುಂದರವಾಗಿ ಷೋಕೇಸ್ ಮಾಡಿದ್ದೀರಿ. ಶಿವಪ್ಪನವರ ಮುದ್ದುರಾಮ ಸರಳವಾಗಿ ಬುದ್ಧಿಮಾತು ಹೇಳುತ್ತಾನೆ.

    ಮೊದಲೆಲ್ಲ ಗ್ರಂಥಾಲಯಗಳು ಇಂತಹ ಹಲವಾರು ಪುಸ್ತಕಗಳನ್ನು ಹೊಂದಿ, ನಿಜವಾದ ಙ್ಞಾನಭಂಡಾರವೇ ಆಗಿಯಯುತ್ತಿದ್ದವು. ಈಗೆಲ್ಲ ಅವು ಲಂಚ ಕೂಪಗಳಾಗುತ್ತಿವೆ! ಬರೀ ಜೊಳ್ಳು ಪುಸ್ತಗಳೇ ತುಂಬುವ ಹಳೇ ಪೇಪರ್ ಅಂಗಡಿಗಳಾಗುತ್ತಿವೆ.

    ಸಾರ್ ಫೇಸ್ ಬುಕ್ಕಿಗೆ ಬನ್ನಿ ಸಾರ್, ನನ್ನ facebook profile:
    Badarinath Palavalli

    ReplyDelete
  7. ಡಾಕ್ಟ್ರೇ,
    ಅಪರಿಚಿತ ಕಾವ್ಯವನ್ನು ಸುಂದರವಾಗಿ ಷೋಕೇಸ್ ಮಾಡಿದ್ದೀರಿ. ಶಿವಪ್ಪನವರ ಮುದ್ದುರಾಮ ಸರಳವಾಗಿ ಬುದ್ಧಿಮಾತು ಹೇಳುತ್ತಾನೆ.

    ಮೊದಲೆಲ್ಲ ಗ್ರಂಥಾಲಯಗಳು ಇಂತಹ ಹಲವಾರು ಪುಸ್ತಕಗಳನ್ನು ಹೊಂದಿ, ನಿಜವಾದ ಙ್ಞಾನಭಂಡಾರವೇ ಆಗಿಯಯುತ್ತಿದ್ದವು. ಈಗೆಲ್ಲ ಅವು ಲಂಚ ಕೂಪಗಳಾಗುತ್ತಿವೆ! ಬರೀ ಜೊಳ್ಳು ಪುಸ್ತಗಳೇ ತುಂಬುವ ಹಳೇ ಪೇಪರ್ ಅಂಗಡಿಗಳಾಗುತ್ತಿವೆ.

    ಸಾರ್ ಫೇಸ್ ಬುಕ್ಕಿಗೆ ಬನ್ನಿ ಸಾರ್, ನನ್ನ facebook profile:
    Badarinath Palavalli

    ReplyDelete
  8. good ones,sir. sir, whether k c shivappa is the same one who wrote a beautiful poem sing by SPB
    the song is like this " neela kesha tola mele tububinalli neeli hoovu..."

    ReplyDelete
  9. ಕೆ ಸಿ ಶಿವಪ್ಪ ನವರ ಬಗ್ಗೆ ಪರಿಚಯ ಮತ್ತು ಮುದ್ದುರಾಮನ ಮೂಲಕ ಹೇಳುವ ನೀತಿಬೋಧೆಗಳು ತು೦ಬಾ ಸರಳವಾಗಿ ಅರ್ಥೈಸಿಕೊಳ್ಳುವ ಹಾಗಿದೆ. ಅಭಿನ೦ದನೆಗಳು.ಡಾ. ಸರ್.

    ಅನ೦ತ್

    ReplyDelete
  10. ಬಾಳಿಗೆ ದಾರಿದೀಪವಾಗುವ ಇಂಥ ಚೌಪದಿಗಳನ್ನು ಹೆಕ್ಕಿ ತಂದು ನೀಡಿದ ನಿಮಗೆ ಕೃತಜ್ಞತೆಗಳು.

    ReplyDelete
  11. ಡಾಕ್ಟ್ರೇ,

    ಶಿವಪ್ಪನವರ ಪರಿಚಯ ಮುದ್ದುರಾಮನ ನೀತಿ ಭೋದನೆಗಳು ಚೆನ್ನಾಗಿ ಕೊಟ್ಟಿದ್ದೀರಿ..ಇಂಥ ವಿಚಾರಗಳು ನಮಗೆ ಆಗಾಗ ಬೇಕು ಎನ್ನಿಸುತ್ತದೆ.

    ReplyDelete
  12. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  13. ಸನ್ಮಿತ್ರರೇ, ಕೆ.ಶಿ.ಶಿವಪ್ಪನವರ ಗೇಯ ಗೀತೆಗಳೂ ಚೆನ್ನಗಿವೆ. ಕೃಷ್ಣನಮೇಲಿನ ಅವರ ರಚನೆಗಳು ಬಹಳ ಮುದನೀಡುತ್ತವೆ. ಮರೆಯಲ್ಲೇ ಇದ್ದರೂ ಸದಾ ತಾಜಾತನವನ್ನು ಉಣಬಡಿಸುವ ಕವಿ ಅವರಾಗಿದ್ದರು. " ಅಲ್ಲಿ ಮಾಮರದಲ್ಲಿ ರೆಂಬೆ ಕೊಂಬೆಗಳಲ್ಲಿ ....." ಎನ್ನುವ ಗೀತೆಯಂತೂ ಯಾವುದೋ ಲೋಕಕ್ಕೆ ಎಳೆದೊಯ್ಯುತ್ತದೆ. ಮುದ್ದುರಾಮನ ಮೂಲಕ ಕಗ್ಗದ ರೀತಿಯಲ್ಲಿ ಬರೆದ ಅವರ ಸಾಲುಗಳಿಗೆ ಜಾಗನೀಡಿ ಅನೇಕ ಪ್ರತಿಕ್ರಿಯೆಗಳಿಗೆ ಭಾಜನರಾಗಿದ್ದೀರಿ, ಅಭಿನಂದನೆಗಳು, ತಮ್ಮ ಈ ಯಾತ್ರೆ ಹೀಗೇ ಮುಂದುವರಿಯಲಿ ಎಂದು ಹೀಗೊಮ್ಮೆ ಹಾರೈಸುತ್ತೇನೆ.

    ReplyDelete
  14. 'ಮುದ್ದುರಾಮ' ಅ೦ಕಿತದ ಚೌಪದಿಗಳ ಬಗ್ಗೆ ಕೇಳಿದ್ದೆ. ಅದರ ಸು೦ದರ ಪರಿಚಯಕ್ಕಾಗಿ ಧನ್ಯವಾದಗಳು ಸರ್. ಉತ್ತಮ ನೀತಿ ಸಾರದಿ೦ದ ಮನಸ್ಸನ್ನು ಮುದಗೊಳಿಸುವ ಕೃತಿ ಇದು.

    ReplyDelete
  15. Sir,Thanks for the information on 'Mudduramana Manasu'...
    Visit my blog once..

    ReplyDelete
  16. chendada neetisaarada choupadigalu..parichyisiddakke dhaynyavadagalu

    ReplyDelete
  17. ಸರ್ ಈ ಗ್ರಂಥ ಕೊಂಡು ಓದಲು ಲಭ್ಯವಿದೆಯೇ

    ReplyDelete
  18. ನಮ್ಮ ಜೀವನದ ಪ್ರತಿ ಹಂತದಲ್ಲೂ ನಮಗೆ ತುಂಬಾ ಹತ್ತಿರವಾಗಿದ್ದಾನೆ ಮುದ್ದುರಾಮ. ತುಂಬಾ ಸರಳವಾಗಿ ನಮಗೆ
    ನಿಜ ಜೀವನದ ಅರ್ಥ ಹೇಳಿಕೊಡುತ್ತಾನೆ, ಧನ್ಯವಾದಗಳು.

    ReplyDelete

Note: Only a member of this blog may post a comment.