Tuesday, May 12, 2015

"ಯಾಕೋ ......,ಸುಸ್ತು !!! "

ಕೆಲವರಿಗೆ ಯಾಕೋ ಸದಾ ಸುಸ್ತು !!!!! ದೈಹಿಕವಾಗಿ ಅಂತಹ ಶ್ರಮ ಇರುವುದಿಲ್ಲ!!!!! ಕೆಲವರ ಕುಡಿದ ನೀರೂ ಅಲ್ಲಾಡಿರುವುದಿಲ್ಲ !!!! ಕೈಗೊಬ್ಬ ಕಾಲಿಗೊಬ್ಬ ಆಳು !!!! ಆದರೂ ಸದಾ ಸುಸ್ತು !!!! ಕಂಡ ಕಂಡ ಡಾಕ್ಟರು ಗಳಿಗೆ ತೋರಿಸಿರುತ್ತಾರೆ !!!! ದುಬಾರಿ ಬೆಲೆಯ ಸಾಕಷ್ಟು ವಿಟಮಿನ್ ಮಾತ್ರೆ ಗಳನ್ನೂ ನುಂಗಿರುತ್ತಾರೆ !!! ಪದೇ ,ಪದೇ ಎಲ್ಲಾ ಟೆಸ್ಟ್ ಮಾಡಿಸಿರುತ್ತಾರೆ !!!ಎಲ್ಲಾ ಟೆಸ್ಟು ನಾರ್ಮಲ್ !!!! ಹೇಳಿಕೊಳ್ಳು ವಂಥ ಯಾವುದೇ ದೈಹಿಕ ಖಾಯಿಲೆಗಳಿರುವುದಿಲ್ಲ!!!ಆದರೆ ಮನಸ್ಸಿನಲ್ಲಿ ಸದಾ ಕಿರಿಕಿರಿ !!! ಮನಸ್ಸಿಗೆ ಸದಾ ,ಯಾವುದೋ ಒಂದು ಅಥವಾ ಯಾರೋ ಒಬ್ಬರು ಸರಿ ಇಲ್ಲ ಅಂತ ಅನಿಸುತ್ತಿರುತ್ತದೆ!!!! 'ಎಲ್ಲವೂ ತಮ್ಮ ಮೂಗಿನ ನೇರಕ್ಕೇ ನಡೆಯುವುದಿಲ್ಲ,ಜಗತ್ತು ಇರುವುದೇ ಹೀಗೆ ' ಎಂದು ಮನಸ್ಸು ಒಪ್ಪಿಕೊಳ್ಳಲು ತಯಾರಿರುವುದಿಲ್ಲ!!!! ಇಂಥವರು ಮನಸ್ಸಿನಿಂದ ಇಲ್ಲ ಸಲ್ಲದ ನೆಗೆಟಿವ್ ಆಲೋಚನೆಗಳನ್ನು Delete ಮಾಡಿ, ಧ್ಯಾನ,ಪ್ರಾಣಾಯಾಮಗಳಿಂದ ಮನಸ್ಸನ್ನು ಶಾಂತವಾಗಿ, ಸಮಾಧಾನದಿಂದ ಇಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಂಡರೆ ಸುಸ್ತು ಕಮ್ಮಿ ಆಗಬಹುದು ಅನಿಸುತ್ತದೆ. ಇಲ್ಲದಿದ್ದರೆ ಹುಚ್ಚು ಕುದುರೆಯ ನಾಗಾಲೋಟದ ವೇಗದ ಮನಸ್ಸು ಯಾವುದಾದರೂ ದೊಡ್ಡ ದೈಹಿಕ ಖಾಯಿಲೆಗೆ ಕಾರಣವಾಗಬಹುದು !!!!
MOVE THE BODY AND REST THE MIND !!!!!! ಸರ್ವೇ ಜನಾಹ ಸುಖಿನೋ ಭವಂತು .ನಮಸ್ಕಾರ _/\_


Tuesday, April 7, 2015

"ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ !!!! "

 ಇಂದು ವಿಶ್ವ ಆರೋಗ್ಯ ದಿನ.ಆರೋಗ್ಯವೆನ್ನುವುದು ನಮ್ಮ ಸಹಜ ಸ್ಥಿತಿ.ಅನಾರೋಗ್ಯ ನಮ್ಮ ತಪ್ಪು ಜೀವನ ಶೈಲಿಯಿಂದ,ಸರಿ ಇಲ್ಲದ ಆಹಾರ ಪದ್ಧತಿಯಿಂದ ಹಾಗೂ ಸಾಕಷ್ಟು ದೈಹಿಕ ವ್ಯಾಯಾಮ ಇಲ್ಲದಿರುವುದರಿಂದ ಬರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬಳಸಬೇಕು.ಎಷ್ಟೇ ಕಷ್ಟವಾದರೂ ಕನಿಷ್ಠ ಅರ್ಧ ಗಂಟೆ ನಡೆಯುವುದೋ ಅಥವಾ ಇನ್ನಿತರ ದೈಹಿಕ ವ್ಯಾಯಾಮದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು.


ಹೋದ ವರ್ಷ ಜೂನ್ ತಿಂಗಳಲ್ಲಿ ,ಹೊಸದಾಗಿ ಡಯಾಬಿಟಿಸ್ ಬಂದವರೊಬ್ಬರಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವಂತೆ ಹೇಳಿದೆ.'ಅಯ್ಯೋ ಈ ಮಳೆಯಲ್ಲಿ ಎಲ್ಲಿ ವಾಕಿಂಗ್ ಹೋಗೋದು ಸರ್?'ಎಂದರು.'ಅದಕ್ಕೆಲ್ಲಾ ಟೈಮ್ ಇಲ್ಲಾ ಸರ್' ಎಂದೂ ಸೇರಿಸಿದರು!ಅವರ ಗುಡಾಣ ಹೊಟ್ಟೆಯನ್ನೇ ನೋಡುತ್ತಾ 'ತಿನ್ನುವುದನ್ನು ಕಮ್ಮಿ ಮಾಡಿ' ಎಂದೆ.'ಅಯ್ಯೋ ನಾನು ಏನೂ ತಿನ್ನೋದೇ ಇಲ್ಲಾ ಸರ್,ಟೆನ್ಶನ್ ಇಂದ ಏನೂ ಸೇರೋದೇ ಇಲ್ಲಾ 'ಎಂದರು.'ಹೋಗಲಿ ಟೆನ್ಶನ್ ಅನ್ನಾದರೂ ಕಮ್ಮಿ ಮಾಡಿಕೊಳ್ಳಿ'ಎಂದೆ.'ಟೆನ್ಶನ್ ಎಲ್ಲಾರಿಗೂ ಇರೋದೇ ಬಿಡಿ ಸರ್'ಎಂದರು.
ನಾನು ಹೇಳಿದ ಸಲಹೆಗಳನ್ನೆಲ್ಲಾ ಸಾರಾ ಸಗಟಾಗಿ ತಿರಸ್ಕರಿಸಿ 'ಅವೆಲ್ಲಾ ನನ್ನ ಕೈಲಿ ಆಗೋಲ್ಲಾ ಸರ್,ಚೆನ್ನಾಗಿ ಕಂಟ್ರೋಲ್ ಆಗೋ ಹಾಗೆ ಯಾವುದಾದರೂ ಒಳ್ಳೆ ಮಾತ್ರೆ ಬರೆದು ಕೊಡಿ'ಎಂದರು.
ಅವರ ಈ ಮಾತುಗಳು ನನ್ನನ್ನು ಯೋಚಿಸುವಂತೆ ಮಾಡಿತು.'ನಾವು ಯಾವ ಸ್ಥಿತಿಗೆ ಬಂದು ನಿಂತಿದ್ದೇವೆ!'ಎನಿಸಿತು.ಔಷದ ವಿಲ್ಲದೆ ಆರೋಗ್ಯವಾಗಿ ಬದುಕೊದಿಕ್ಕೆ ಸಾಧ್ಯವಿಲ್ಲವೇ?'ಎನಿಸಿತು.ಕೈ ಕಾಲುಗಳಿಗೆ ಅವುಗಳ ಕೆಲಸ ಕೊಡದಿದ್ದರೆ ಸಮಗ್ರ ಆರೋಗ್ಯ ಹೇಗೆ ಸಾಧ್ಯ?
'what is used less and less ultimately becomes useless' ಅನ್ನುವ ಮಾತೊಂದಿದೆ.ಮೊದಲಿಂದಲೂ ಕನಿಷ್ಟ ಅರ್ಧದಿಂದ ಒಂದು ಗಂಟೆ ನಡೆದರೆ ಈಗ ದಿನನಿತ್ಯ ಕಾಣುತ್ತಿರುವ ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳನ್ನು ದೂರವಿಡಬಹುದೆನಿಸುತ್ತದೆ.ಯಾವುದೇ ಕಾರಣಕ್ಕಾದರೂ ಮನೆಯಿಂದ ಹೊರಗೆ ಹೋಗಲು ಆಗದೆ ಇದ್ದ ಪಕ್ಷದಲ್ಲಿ,ಮನೆಯಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆ ನಡೆಯಬಹುದು.ಬೋನಿನಲ್ಲಿ ಇರುವ ಹುಲಿ,ಚಿರತೆಯಂತಹ ಪ್ರಾಣಿಗಳೇ ಆ ಸ್ವಲ್ಪ ಜಾಗದಲ್ಲೇ ಒಂದುಕಡೆಯಿಂದ ಇನ್ನೊದು ಕಡೆ ಓಡಾಡುವುದನ್ನು ನೋಡಿದ್ದೇವೆ. Exercising is a necessity ಎನ್ನುವುದನ್ನು ನಾವು ಇದರಿಂದಲಾದರೂ ಕಲಿಯಬಹುದಲ್ಲವೇ?ಅನುಕೂಲವಿದ್ದವರು ಮನೆಯಲ್ಲೇ ಒಂದು ಟ್ರೆಡ್ ಮಿಲ್ ಇಟ್ಟುಕೊಳ್ಳಬಹುದು.
ಬಿ.ಪಿ,ಶುಗರ್,ಮತ್ತು ಹಾರ್ಟ್ ಪ್ರಾಬ್ಲಂ ಇಲ್ಲದವರು ಮೆಟ್ಟಿಲು ಹತ್ತಿ ಇಳಿಯುವುದನ್ನೇ ಒಂದು ವ್ಯಾಯಾಮ ವಾಗಿ ಅಳವಡಿಸಿಕೊಳ್ಳ ಬಹುದು.ಹತ್ತು ನಿಮಿಷದಿಂದ ಶುರು ಮಾಡಿ, ಬರ ಬರುತ್ತಾ ಮೂವತ್ತು ನಿಮಿಷದವರೆಗೆ ಮೆಟ್ಟಿಲು ಹತ್ತಿ ಇಳಿದರೆ ಅದ್ಭುತ ವ್ಯಾಯಾಮವಾಗುತ್ತದೆ.ಇದರ ಜೊತೆ ಸ್ವಲ್ಪ ಯೋಗ ಮತ್ತು ಪ್ರಾಣಾಯಾಮವನ್ನು ಕಲಿತರೆ ಆರೋಗ್ಯಕ್ಕೆ ಇನ್ನೂ ಒಳಿತು.ಸರಿಯಾದ ಆಹಾರ,ಆರೋಗ್ಯಕರ ವಿಚಾರಗಳು  ಮತ್ತು ಸರಿಯಾದ ವ್ಯಾಯಾಮದದಿಂದ ಔಷಧವಿಲ್ಲದೆಯೂ ಆರೋಗ್ಯವಾಗಿರಬಹುದಲ್ಲವೇ ?

ಆರೋಗ್ಯವೆನ್ನುವುದು  ನಮ್ಮೆಲ್ಲರ ಸಹಜ ಸ್ಥಿತಿ.ಅದು ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಈ ವಿಶ್ವ ಆರೋಗ್ಯ ದಿನದಂದು ಎಲ್ಲರಿಗೂ ಸಮೃದ್ಧಿಯಾಗಿ ಆರೋಗ್ಯ ಭಾಗ್ಯ ಲಭ್ಯವಾಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ನಮಸ್ಕಾರ.

Monday, March 30, 2015

"ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ"

ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ ಅದ್ಭುತವಾಗಿತ್ತು!!!ಇದು ನಾನು ಹೇಳಿದ್ದಲ್ಲ.ಬೀಚಿ ಯವರು ತಮ್ಮ ಆತ್ಮ ಕಥನ "ಭಯಾಗ್ರಫಿ"ಯಲ್ಲಿ ಅದರ ಬಗ್ಗೆಯೇ ಒಂದು ಅಧ್ಯಾಯ ವನ್ನು ಬರೆದಿದ್ದಾರೆ.ಹರಪನಹಳ್ಳಿಯಲ್ಲಿದ್ದ ಶೇಷ ಮುತ್ಯ ಮತ್ತು ಕಮಲ ಕಕ್ಕಿ ತೊಂಬತ್ತರ ಸನಿಹದ ವೃದ್ಧ ದಂಪತಿಗಳು.ಆ ವಯಸ್ಸಿನಲ್ಲೂ ಅವರದು ಬತ್ತದ ಉತ್ಸಾಹ ಮತ್ತು ಅದ್ಭುತ ಹಾಸ್ಯ ಪ್ರಜ್ಞೆ!!!ಒಂದು ರಾತ್ರಿ ಶೇಷ ಮುತ್ಯ ಮನೆಯಿಂದ ಹೊರಬಿದ್ದರು.ಒಂದು ಕೈಯಲ್ಲಿ ಬಡಿಗೆ ,ಇನ್ನೊಂದು ಕೈಯಲ್ಲಿ ಕಮಲ ಕಕ್ಕಿಯ ಕೈ.ಕಮಲ ಕಕ್ಕಿಯ ಇನ್ನೊಂದು ಕೈಯಲ್ಲಿ ಕೈ ದೀಪ.ಕಮಲ ಕಕ್ಕಿ ಗಟ್ಟಿ ದನಿಯಲ್ಲಿ ಪೇಚಾಡಿಕೊಂಡರು."ಕಣ್ಣಿಲ್ಲ,ಕಾಲಿಲ್ಲ.ಕುಂತಲ್ಲಿ ಕೂಡೋಲ್ಲಾ ,ನಿಂತಲ್ಲಿ ನಿಲ್ಲೋಲ್ಲಾ!ಮುದಕರಾದ ಮ್ಯಾಲೆ ಮನೆಯಾಗೆ ಸುಮ್ಮನೆ ಕೂಡ ಬಾರದೇನು?"ಇದಕ್ಕೆ ಶೇಷ ಮುತ್ಯನ ಉತ್ತರ "ಏ....,ಏನೇ !! ನೀನೇ ನನ್ನ ಮುದುಕ ಅಂದು ಬಿಟ್ಟರೆ ಮಂದಿ ಅನ್ನದೆ ಬಿಟ್ಟಾರೇ...?"ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು.ಕಮಲ ಕಕ್ಕಿಯೂ "ಮಾತಿಗೇನೂ ಕಮ್ಮಿ ಇಲ್ಲ "ಎಂದು ನಕ್ಕು ಸುಮ್ಮನಾದರು.ಶೇಷ ಮುತ್ಯ ಮತ್ತು ಕಮಲ ಕಕ್ಕಿ ಇಬ್ಬರೂ ಒಂದೇ ಬಾರಿಗೆ ಹಾಸಿಗೆ ಹಿಡಿದರು.ಸಾವು ಸಮೀಪಿಸಿದೆ ಅನ್ನಿಸಿತು ಮಕ್ಕಳಿಗೆ.ಎಲ್ಲಾ ಬಂಧುಗಳನ್ನೂ ಕರೆಸಿದರು.ಕಮಲ ಕಕ್ಕಿ ಮೊದಲು ಸತ್ತರು.ಶೇಷ ಮುತ್ಯ ಅರೆ ಬರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರಿಗೆ ಕಮಲ ಕಕ್ಕಿಯ ಸಾವಿನ ಸುದ್ಧಿ ಹೇಳಿದರೆ ಹೃದಯಾ ಘಾತ ವಾಗಬಹುದು ಎಂದು ಹೆದರುತ್ತಲೇ ಅವರ ಬಳಿ ಸಮೀಪಿಸಿ"ಶೇಷ ಮುತ್ಯಾ,ಶೇಷ ಮುತ್ಯಾ ...."ಎಂದು ಕೂಗಿದರು.ಸಾವಿನತ್ತ ಸಾಗುತ್ತಿದ್ದ ಶೇಷ ಮುತ್ಯಾ ಕಣ್ಣು ತೆರೆದರು.ಏನು ಎಂಬಂತೆ ನೋಡಿದರು."ಕಮಲ ಕಕ್ಕಿ ಹೋದಳು"ಎಂದರು."ಹೋದಳೇ......?".....ಮೌನ.ಸಣ್ಣದೊಂದು ಕಿರು ನಗೆಯೊಂದಿಗೆ ಕ್ಷೀಣ ದನಿಯಲ್ಲಿ "ನಂಗಿನ್ನೊಂದು ಕನ್ಯಾ ನೋಡ್ರಪಾ"ಎಂದರು.ಸಾಯುವ ಸಮಯದಲ್ಲೂ ಹಾಸ್ಯವೇ?!!! ಎಂತಹ ಅದ್ಭುತ,ಅಪರೂಪದ ಚೇತನ ಇವರದು!!ಸಾವಿನ ಮನೆಯಲ್ಲಿ ನಗೆಯೇ ನಗೆ.ಕೆಲ ಗಂಟೆಗಳ ನಂತರ ಶೇಷ ಮುತ್ಯ ಕೂಡ ದೇಹವನ್ನು ತ್ಯಜಿಸಿದರು.ನಗು ನಗುತ್ತಲೇ ಇಹಲೋಕ ಯಾತ್ರೆ ಮುಗಿಸಿ ಎಲ್ಲರ ಮನಸ್ಸಿನಲ್ಲೂ ತಂಬೆಳಕಿನಂತೆ ಉಳಿದು ಹೋದರು!!!

Friday, March 20, 2015

"ಯಾರೋ ಹೇಳಿದ್ರು ಅಂತ...."

ಯಾರೋ ಏನೋ ಹೇಳಿದರು ಅಂತ ಎಡವಟ್ಟು ಮಾಡಿಕೊಳ್ಳುವವರು ನಮ್ಮಂತಹ ವೈದ್ಯರಿಗೆ ಆಗಾಗ ಸಿಗುತ್ತಿರುತ್ತಾರೆ.ನನ್ನ ಒಬ್ಬ ಡಯಾಬಿಟಿಸ್ ರೋಗಿಗೆ ಅವನು ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ ರಕ್ತದಲ್ಲಿಯ ಸಕ್ಕರೆ ಅಂಶ ನಾರ್ಮಲ್ ಆಗಿತ್ತು.ಚೆನ್ನಾಗಿಯೇ ಇದ್ದ.ಬಹಳ ದಿನ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಕಿಡ್ನಿ ತೊಂದರೆ ಬರುತ್ತದೆ ಎಂದು ಅವನ ತಲೆಯಲ್ಲಿ ಯಾರೋ ಹುಳ ಬಿಟ್ಟರು.ಮಾತ್ರೆ ಬಿಟ್ಟ.ನನ್ನ ಹತ್ತಿರ ಬರುವುದನ್ನೂ ಬಿಟ್ಟ.ಯಾರೋ ಹೇಳಿದರು ಅಂತ ಯಾವುದೋ ಪುಡಿ ನುಂಗಿದ.ಇನ್ಯಾರೂ ಡಾಕ್ಟರ್ ಹತ್ತಿರ ಹೋಗಿ ಶುಗರ್ ಚೆಕ್ ಕೂಡ ಮಾಡಿಸಿಕೊಳ್ಳಲಿಲ್ಲ.ಆರು ತಿಂಗಳಿಗೆ ಶುಗರ್ ವಿಪರೀತ ಹೆಚ್ಚಾಗಿ ,ಜೊತೆಗೇ ಹೃದಯಾಘಾತವಾಯಿತು. ನಾರಾಯಣ ಹೃದಯಾಲಯಕ್ಕೆ ಹೋಗಿ 'ಬೈ ಪಾಸ್ ಸರ್ಜರಿ' ಮಾಡಿಸಿ ಕೊಂಡು ಬಂದ.ಕೆಟ್ಟ ಮೇಲೆ ಬುದ್ಧಿ ಬಂತು ಅನ್ನುವ ಹಾಗೆ ಈಗ ಶುಗರ್ ಗೆ ಮಾತ್ರೆ ತಪ್ಪದೆ ತೆಗೆದು ಕೊಳ್ಳುತ್ತಾನೆ.'ಅಲ್ಲಯ್ಯ ಮೊದಲೇಕೆ ಮಾತ್ರೆ ಬಿಟ್ಟೆ ಎಂದರೆ ,'ಅಯ್ಯೋ ....ಬಿಡಿ ಸರ್ ನನ್ನ ಬುದ್ಧಿ ದನ ಮೇಯಿಸಲು ಹೋಗಿತ್ತು'ಎಂದು ಮಾತು ಹಾರಿಸುತ್ತಾನೆ.ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಮತ್ತೆರಡು ಘಟನೆಗಳು ನೆನಪಿನಲ್ಲಿ ಉಳಿದುಬಿಟ್ಟಿವೆ.ಒಂದು ದಿನ ಅಜ್ಜಿಯೊಬ್ಬಳು ತನ್ನ ಐದು ವರ್ಷದ ಮೊಮ್ಮಗನೊಂದಿಗೆ ಆಸ್ಪತ್ರೆಗೆ ಬಂದಳು.ಹುಡುಗನಿಗೆ ಎರಡೂ ಕಣ್ಣು ಕಾಣುತ್ತಿರಲಿಲ್ಲ. ಎರಡೂ ಕಣ್ಣು ಗುಡ್ಡೆಗಳು ಸುಟ್ಟ ಹಾಗಿತ್ತು. ಹುಟ್ಟಿನಿಂದಲೂ ಹೀಗಿದೆಯೇ ಎಂದು ಅಜ್ಜಿಯನ್ನು ಕೇಳಿದೆ.ಅವಳ ಉತ್ತರ ಕೇಳಿ ಅವಾಕ್ಕಾದೆ.'ಅಯ್ಯೋ ಮಗ ಚನ್ನಾಗೇ ಇತ್ತು ಸರ್.ಎರಡು ವರ್ಷದವನಿದ್ದಾಗ ಕಣ್ಣು ಕೆಂಪಾಗಿತ್ತು. ಇದಕ್ಕೆಲ್ಲಾ ಆಸ್ಪತ್ರೆ ಯಾಕೇ ?ಮೈಲ್ ತುತ್ತ (copper sulphate) ಹಾಕಿದರೆ ಸರಿಹೋಗುತ್ತೆ ಅಂತ ಯಾರೋ ಹೇಳಿದರು.ಬುದ್ಧಿ ಯಿಲ್ಲದೆ ಅವರು ಹೇಳಿದ ಹಾಗೆ ಮಾಡಿ ಮಗುವಿನ ಕಣ್ಣು ಹಾಳು ಮಾಡಿದೆವು'ಎಂದು ಕಣ್ಣೀರು ಹಾಕಿದಳು. ಬಹಳ ಓದಿ ಕೊಂಡ ದೊಡ್ಡ ಆಫೀಸರ್ ಒಬ್ಬರಿಗೆ ಮರ್ಮಾಂಗದ ಸುತ್ತ ಆಗುವ 'ಹುಳುಕಡ್ಡಿ'(ಫಂಗಲ್ ಇನ್ಫೆಕ್ಷನ್ ) ಆಗಿತ್ತು.ಡಾಕ್ಟರ್ ಗಳಿಗೆ ತೋರಿಸುವುದಕ್ಕೆ ನಾಚಿಕೊಂಡ ಅವರು ಯಾರೋ ಹೇಳಿದರು ಅಂತ ಯಾವುದೋ acid ಹಾಕಿಕೊಂಡು, ಅಲ್ಲೆಲ್ಲಾ ಸುಟ್ಟ ಗಾಯಗಳಾಗಿ,ಮೂರು ತಿಂಗಳು ಪ್ಯಾಂಟ್ ಹಾಕಿಕೊಳ್ಳಲೂ ಆಗದೆ,ಆಫೀಸಿಗೆ ಹೋಗಲೂ ಆಗದೆ,ಬರೀ ಆಸ್ಪತ್ರೆಗೆ ಅಲೆಯುವುದೇ ಆಯಿತು. ಗೊತ್ತಿರಲಿ,ಗೊತ್ತಿಲ್ಲದಿರಲಿ ,ಪುಕ್ಕಟ್ಟೆ ಸಲಹೆ ಕೊಡುವವರು ಎಲ್ಲಾ ಕಡೆ ಸಿಗುತ್ತಾರೆ.ಯಾರದೋ ಸಲಹೆ ಕೇಳುವ ಮುಂಚೆ ಸಂಬಂಧ ಪಟ್ಟವರ ಸಲಹೆ ಕೇಳುವುದು ಉತ್ತಮವಲ್ಲವೇ?ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

Sunday, February 1, 2015

"ಒಲುಮೆಯ ಹೂವೇ........"

ಕೆಲವು ಹಾಡುಗಳು ಹೇಗೋ ಕೆಲವೊಂದು ನೆನಪು ಗಳಿಗೆ ತಳುಕು ಹಾಕಿ ಕೊಂಡು ಬಿಟ್ಟಿರುತ್ತವೆ.ಆ ಹಾಡನ್ನು ನೆನಸಿಕೊಂಡರೆ ಒಬ್ಬ ವ್ಯಕ್ತಿಯ ನೆನಪೋ ಅಥವಾ ,ಒಂದು ಪ್ರಸಂಗದ ನೆನಪೋ ಮರುಕಳಿಸಿಬಿಡುತ್ತದೆ.ನನ್ನ ನೆನಪಿನಲ್ಲಿ ಉಳಿದು ಹೋದಂತಹ ಇಂತಹುದೇ ಒಂದು ಹಾಡು ,ಕನ್ನಡದ ಮಹಾನ್ ಗಾಯಕ ಡಾ.ಪಿ.ಬಿ.ಶ್ರೀನಿವಾಸರು ಅರವತ್ತರ ದಶಕದ ಮೊದಲ ಭಾಗದಲ್ಲಿ 'ಪುನರ್ಜನ್ಮ 'ಎನ್ನುವ ಚಿತ್ರಕ್ಕೆ ಹಾಡಿದ 'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೆ' ಎನ್ನುವ ಹಾಡು.ಮೊದಲಿನಿಂದಲೂ ಈ ಹಾಡು ನನಗೆ ಅತ್ಯಂತ ಪ್ರಿಯವಾದ ಹಾಡು.ಅದೆಷ್ಟು ಸಲ ಈ ಹಾಡನ್ನು ಹಾಡಿದ್ದೇನೋ ತಿಳಿಯದು.ಈಹಾಡುನೆನಪಾದಾಗಲೆಲ್ಲಾ ನನ್ನ ಬಹಳ ಆತ್ಮೀಯ ಸ್ನೇಹಿತರೊಬ್ಬರು ನೆನಪಾಗಿ ಬಿಡುತ್ತಾರೆ.ಅವರ ಪರಿಚಯವಾದದ್ದೂ ಒಂದು ವಿಚಿತ್ರ ಸನ್ನಿವೇಶದ ಮೂಲಕ.
ಈಗ ಸುಮಾರು ಹನ್ನೆರಡು ವರ್ಷಗಳ ಹಿಂದೆ ನಡೆದ ಘಟನೆ.ನಾನು ಇ .ಎನ್.ಟಿ.ತಜ್ಞ ವೈದ್ಯಕೀಯ ಶಿಕ್ಷಣ ಮುಗಿಸಿದ ಹೊಸತು.ನನ್ನ ಬಳಿಗೆ ಕಿವಿಯ ಸೋರಿಕೆಯಿಂದ ಎಡ ಕಿವಿ ಕೇಳದ, ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಬರುತ್ತಿದ್ದ.ಒಂದು ದಿನ ಬೆಳಿಗ್ಗೆ ಆ ಹುಡುಗ  ತನ್ನ ಬಲಗಿವಿ ವಿಪರೀತ ನೋವೆಂದೂ,ಈಗ ಅದೂ ಕೆಳುತ್ತಿಲ್ಲವೆಂದೂ ,ಕೈಯಿಂದ ಬಲಗಿವಿ ಮುಚ್ಚಿಕೊಂಡು ಅಳುತ್ತಾ ಬಂದ.ಅವನ ತಂದೆಯೂ ಅವನ ಜೊತೆಗೇ ಬಂದಿದ್ದರು.ಅವನ ಬಲಗಿವಿ ಪರೀಕ್ಷೆ ಮಾಡಿದಾಗ ಕಿವಿಯ ಪರದೆಯ ಹರಿದ ಭಾಗದಿಂದ ರಕ್ತ ಬರುತ್ತಿತ್ತು.ಕಿವಿಗೆ ಬಲವಾದ ಪೆಟ್ಟು ಬಿದ್ದದ್ದು ಖಾತ್ರಿ ಯಾಯಿತು.ಯಾರೋ ಜೋರಾಗಿ ಕಪಾಳಕ್ಕೆ ಹೊಡೆದಿದ್ದರು.ಆ ಭಾಗವೆಲ್ಲಾ ಹೊಡೆತದಿಂದ ಕೆಂಪಾಗಿತ್ತು.ನನಗೆ ಅವನ ತಂದೆಯ ಮೇಲೆಯೇ ಅನುಮಾನವಿತ್ತು.
ಬಹಳ ಬಲವಂತ ಮಾಡಿದ ಮೇಲೆ ಅವನ ತಂದೆ ಆ ಹುಡುಗನ ಮಾಸ್ತರರೊಬ್ಬರು ಕಪಾಳಕ್ಕೆ ಹೊಡೆದರೆಂದೂ,ಅದಕ್ಕೇ
ಹೀಗಾಯಿತೆಂದೂ ಹೇಳಿದ.ಮೊದಲೇ ಹುಡುಗನಿಗೆ ಒಂದು ಕಿವಿ ಕೇಳುತ್ತಿರಲಿಲ್ಲ.ಈಗ ಕಪಾಳಕ್ಕೆ ಹೊಡೆದು ಇನ್ನೊಂದು ಕಿವಿಯೂ ಕೇಳದ ಹಾಗೆ ಮಾಡಿ ಬಿಟ್ಟರಲ್ಲಾ ಎಂದು ನನಗೆ ಆ ಮಾಸ್ತರರ ಮೇಲೆ ವಿಪರೀತ ಸಿಟ್ಟು ಬಂತು.ಆ ಮಾಸ್ತರರನ್ನು ನನ್ನ ಬಳಿಗೆ ಕಳಿಸುವಂತೆ ಹೇಳಿದೆ.ಅದಕ್ಕೆ ಅವನ ತಂದೆ 'ಬಿಡಿ ಸಾರ್.ಇದನ್ನ ದೊಡ್ಡ ವಿಷಯ ಮಾಡಬೇಡಿ.ಆ ಮಾಸ್ತರರು ತುಂಬಾ ಒಳ್ಳೆಯವರು.ಇವನೇ ಏನೋ ಮಾಡಬಾರದ ತೀಟೆ ಮಾಡಿರುತ್ತಾನೆ.ಅದಕ್ಕೇ ಅವರು ಏಟು ಕೊಟ್ಟಿದ್ದಾರೆ,ನೀವೇ ಏನಾರ ಔಷಧಿ ಕೊಟ್ಟು ಸರಿ ಮಾಡಿಬಿಡಿ 'ಎಂದ.ನಾನೂ ಸುಮ್ಮನಾದೆ.
ಈ ಘಟನೆ ನಡೆದ ಎರಡು ದಿನಕ್ಕೆ ಒಬ್ಬ ವ್ಯಕ್ತಿ ನನ್ನ ರೂಮಿನ ಹೊರಗೆ ನಿಂತು 'ಒಳಗೆ ಬರಬಹುದಾ ಸರ್'ಎಂದರು . 'ಬನ್ನಿ 'ಎಂದೆ.ಒಳಗೆ ಬಂದು ಕೂತರು.ಮುಖ ಆತಂಕದಿಂದ ಬೆವರುತ್ತಿತ್ತು.ದನಿ ನಡುಗುತ್ತಿತ್ತು.ತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಂಡು 'ಬಿ.ಪಿ.ಚೆಕ್ ಮಾಡಿಸ್ಕೋ ಬೇಕಾಗಿತ್ತು ಸರ್ 'ಎಂದರು.ಬಿ.ಪಿ.ಸುಮಾರಾಗಿಯೇ ಜಾಸ್ತಿ ಇತ್ತು.'ಸಾರ್ ನಾನು ಇಲ್ಲಿ ಮಿಡ್ಲ್ ಸ್ಕೂಲ್ ಮೇಷ್ಟ್ರು.ನನ್ನಿಂದ ಬಹಳ ದೊಡ್ಡ ತಪ್ಪಾಯಿತು.ಕ್ಷಮಿಸಿ ಬಿಡಿ ಸರ್ 'ಎಂದರು.ನಾನು 'ಯಾಕ್ರೀ ಮೇಷ್ಟ್ರೇ ಏನಾಯ್ತು ?'ಎಂದೆ.'ಆ ಹುಡುಗನಿಗೆ ಕಪಾಳಕ್ಕೆ ಹೊಡೆದದ್ದು ನಾನೇ ಸರ್ 'ಎಂದರು.ನಾನು ಸ್ವಲ್ಪ ಬಿಗುವಾದೆ.'ಅಲ್ಲಾ ಮೇಷ್ಟ್ರೇ  ಹುಡುಗರು ತಪ್ಪು ಮಾಡಿದರೆ ತಿದ್ದ ಬೇಕು ಸರಿ.ಆದರೆ ಈ ರೀತಿ ಕಿವಿಯ ತಮಟೆ ಹರಿದು ಹೋಗುವ ಹಾಗೆ ಹೊಡೆಯಬೇಕೆ?ಅದು ತಪ್ಪಲ್ಲವೇ ? ಅವನ ಜೀವಕ್ಕೆ ಅಪಾಯ ವಾಗಿದ್ದರೆ ಏನು ಗತಿ?ಅವನಿಗೆ ಕೇಳುತ್ತಿದ್ದ ಒಂದೇ ಕಿವಿ ಕೂಡ ನೀವು ಹೊಡೆದ ದ್ದರಿಂದ ಹಾಳಾಯಿತಲ್ಲ!'ಎಂದೆ.'ಆ ಹುಡುಗ ಯಾವುದೋ ಹುಡುಗಿಯ ಬಗ್ಗೆ ಬಹಳ ಕೆಟ್ಟ ಪದ ಉಪಯೋಗಿಸಿದ ಸಾರ್.ಮೊದಲೇ ಬಿ.ಪಿ. ಇದೆ.ಸಿಟ್ಟು ಬಂದು ಕಪಾಳಕ್ಕೆ ಒಂದೇಟು ಬಿಟ್ಟೆ .ಈ ರೀತಿಯೆಲ್ಲಾ ಆಗುತ್ತೆ ಅಂತ ಗೊತ್ತಿರಲಿಲ್ಲ .ಇನ್ನು ಮೇಲೆ ಹುಡುಗರ ಮೇಲೆ ಕೈ ಮಾಡೋಲ್ಲ  .ಜೀವನದಲ್ಲಿ ಒಂದು ದೊಡ್ಡ ಪಾಠ ಕಲಿತೆ 'ಎಂದು ಗಧ್ಗದ ಕಂಠದಲ್ಲಿ ಹೇಳಿ ಹೊರಟು ಹೋದರು.
ಅದಾದ ನಂತರ ನಾನು  ದಿನಾ ಬೆಳಗಿನ ಜಾವ ಸ್ಕೂಲಿನ ಗ್ರೌಂಡ್ ಗೆ ವ್ಯಾಯಾಮ ಮತ್ತು ಜಾಗಿಂಗ್ ಮಾಡುವುದಕ್ಕೆ ಹೋಗುತ್ತಿದ್ದಾಗ ಅವರೂ ಸಿಗುತ್ತಿದ್ದರು.ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ.ಸ್ವಲ್ಪ ಮುಂಗೊಪವಿತ್ತು.ಯಾರಿಗಾದರೂ ಸಹಾಯಮಾಡಬೇಕಾದರೆ 'ನಾ ಮುಂದೆ' ಎನ್ನುವಂತಹವರು.ಪರಿಚಯ ಸ್ನೇಹಕ್ಕೆ ತಿರುಗಿತು.ಕೆಲವೇ ದಿನಗಳಲ್ಲಿ 
ಬಹಳ ಆತ್ಮೀಯರಾದರು.ವ್ಯಾಯಾಮವೆಲ್ಲಾ ಮುಗಿಸಿ,ಬೆವರು ಹರಿಸುತ್ತಾ ,ತಂಗಾಳಿಗೆ ಮೈ ಒಡ್ಡಿ ಕುಳಿತಾಗ 
ನಾನು ನನಗೆ ಪ್ರಿಯವಾದ 'ಒಲುಮೆಯ ಹೂವೇ'ಹಾಡನ್ನು ಹೇಳುತ್ತಿದ್ದೆ.ಮೇಷ್ಟ್ರಿಗೆ ಕೂಡ ಈ ಹಾಡು
ಬಹಳ ಇಷ್ಟವಾಗಿತ್ತು .ನಾನು ಹಾಡುವಾಗ ಬಹಳ ಖುಷಿ ಪಡುತ್ತಿದ್ದರು.ಹಾಡು ಕೇಳುತ್ತಾ ಎಷ್ಟೋ ಸಲ ಅವರ ಕಣ್ಣಿನಲ್ಲಿ ನೀರು ಇರುತ್ತಿತ್ತು.2000 april ನಲ್ಲಿ ಅವರಿಗೆ ಎಲೆಕ್ಷನ್ ಡ್ಯೂಟಿಹಾಕಿದ್ದರು.'ಸಾರ್ ನನಗೆ ಎಲೆಕ್ಷನ್ ಡ್ಯೂಟಿ ಗೆ ಹೋಗೋಕೆ ಆಗೋಲ್ಲಾ ,ಒಂದು ಮೆಡಿಕಲ್  ಸರ್ಟಿಫಿಕೇಟ್ ಕೊಡಿ'ಎಂದರು.'ಯಾಕೇ ಮೇಷ್ಟ್ರೇ ?ಏನು ತೊಂದರೆ?'ಎಂದೆ.ಎಲೆಕ್ಷನ್ ಡ್ಯೂಟಿ ತಪ್ಪಿಸೋಕೆ ಎಲ್ಲರೂ ಮಾಡುವ ಸಾಮಾನ್ಯ ಉಪಾಯ ಇದು.'ನಡೆಯೋವಾಗ ಯಾಕೋ ಬ್ಯಾಲೆನ್ಸ್ ತಪ್ಪುತ್ತೆ ಸರ್' ಎಂದರು.ಎಲ್ಲಾ ಪರೀಕ್ಷೆ ಮಾಡಿದಾಗ ನಿಜಕ್ಕೂ ತೊಂದರೆ ಇದೆ ಎನಿಸಿ, C.T.SCAN ಮಾಡಿಸಿಕೊಂಡು ಬರಲು ಬೆಳಗಾವಿಯ ಕೆ.ಎಲ್.ಇ .ಆಸ್ಪತ್ರೆಗೆ ಕಳಿಸಿದೆ.ಅಲ್ಲಿ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು.ಅದು ಶ್ವಾಶಕೋಶಕ್ಕೂ,ಮೆದುಳಿಗೂ ಹರಡಿತ್ತು.ಅವರಿಗೆ ಸುಮಾರು ಹದಿನೆಂಟು ವರ್ಷಗಳಿಂದ ಥೈರಾಯ್ಡ್ ಗ್ರಂಥಿ ಯಲ್ಲಿ ಒಂದು ಸಣ್ಣ ಗಡ್ದೆ ಇತ್ತಂತೆ.ನನಗೂ ಕೂಡ ಮೊದಲೇ ತಿಳಿಸಿರಲಿಲ್ಲ .ಅವರನ್ನು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಸೇರಿಸಿದೆವು. ಸ್ನೇಹಿತರೆಲ್ಲಾ ಸೇರಿ ಅವರ ಚಿಕಿತ್ಸೆಯ ಖರ್ಚಿಗೆಂದು ಸುಮಾರು  ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಸ್ವಇಚ್ಛೆಯಿಂದ ಸೇರಿಸಿ ಕೊಟ್ಟೆವು.
ನನಗೆ ಅಷ್ಟರಲ್ಲಿ ರಾಯಚೂರಿನ ಶಕ್ತಿನಗರಕ್ಕೆ ವರ್ಗವಾಗಿತ್ತು.ಒಂದೆರಡು ತಿಂಗಳ ನಂತರ ಅವರನ್ನು ನೋಡಲು ರಾಯಚೂರಿನಿಂದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋದೆ.ಸ್ಪೆಷಲ್ ವಾರ್ಡಿನ ರೂಮೊಂದರಲ್ಲಿ ಒಬ್ಬರೇ ಇದ್ದರು.Brain surgery ಮಾಡಿ ತಲೆಗೆಲ್ಲಾ ಬ್ಯಾಂಡೇಜ್ ಸುತ್ತಿದ್ದರು.ನನ್ನನ್ನು ನೋಡಿ ಮೇಷ್ಟ್ರಿಗೆ ತುಂಬಾ ಖುಷಿಯಾಯಿತು.ಆನದದಿಂದ ತಬ್ಬಿಕೊಂಡರು.

 'ಸರ್ ಆಪರೇಶನ್ ಆಯ್ತು .ನೀವೂ ನೋಡೋಕೆ ಬಂದ್ರಿ.ಇನ್ನು ಎಲ್ಲಾ ಸರಿ ಹೋಗುತ್ತೆ ಸರ್.ನಿಮ್ಮನ್ನು ನೋಡೋಕೆ ಮುಂದಿನ ಸಲ ಶಕ್ತಿನಗರಕ್ಕೆ ನಾನೇ ಬರುತ್ತೇನೆ'ಎಂದರು. ಆ ಆಯಾಸದಲ್ಲೂ ಸುಮಾರು ಒಂದು ಗಂಟೆ ಹರಟಿದರು.'ಹೆಚ್ಚು ಮಾತನಾಡಬೇಡಿ ಮೇಷ್ಟ್ರೇ ,ಆಯಾಸ ಆಗುತ್ತೆ 'ಎಂದರೂ ಕೇಳಲಿಲ್ಲ.ಕೊನೆಗೆ ನಾನು ಹೊರಟು ನಿಂತೆ.'ಸಾರ್ ,ನಾನಿನ್ನು ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ ,ನನಗೋಸ್ಕರ ಒಂದುಸಲ ಆ ಹಾಡು ಹಾಡಿ ಬಿಡಿ ಸರ್' ಎಂದರು!ಕ್ಯಾನ್ಸರ್ ವಾರ್ಡಿನಲ್ಲಿ ಹಾಡೇ!!?ನಾನು ನನ್ನ ಕನಸು ಮನಸಿನಲ್ಲೂ ಇಂತಹ ಸಂದರ್ಭ
ಊಹಿಸಿಕೊಂಡಿರಲಿಲ್ಲ.'ಬಿಸಿ ತುಪ್ಪ ಉಗುಳುವಂತಿಲ್ಲ,ನುಂಗುವಂತಿಲ್ಲ' ಎನ್ನುವಂತಾಗಿತ್ತು ನನ್ನ ಪರಿಸ್ಥಿತಿ !ಅವರನ್ನು ಆ ಸ್ಥಿತಿ ಯಲ್ಲಿ ನೋಡಿ ಮನಸ್ಸು ಬಹಳ ನೊಂದಿತ್ತು.ಹಾಡುವ ಮೂಡ್ ಇರಲಿಲ್ಲ.ಅವರ ಮನಸ್ಸನ್ನು ನೋಯಿಸದಿರಲು ಅನಿವಾರ್ಯವಾಗಿ ಹಾಡಲೇ ಬೇಕಾಯಿತು.ನನ್ನೆಲ್ಲಾ ನೋವನ್ನೂ ಹೊರ ಹಾಕುವಂತೆ,ಜೀವನದಲ್ಲಿ ಅದೇ ನನ್ನ ಕಡೆಯ ಹಾಡು ಎಂಬಂತೆ ನನ್ನನ್ನೇ ಮರೆತು ಹಾಡಿದೆ!'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೇ!ಉಳಿಸಿ ಕಣ್ಣ ನೀರ,ಈ ನನ್ನ ಬಾಳಿಗೇ'.ಹಾಡು ಮುಗಿಯುವ ವೇಳೆಗೆ ಇಬ್ಬರ ಕಣ್ಣಲ್ಲೂ ಧಾರಾಕಾರ ನೀರು!ಭಾರ ಹೃದಯದಿಂದ ಅವರನ್ನು ಬೀಳ್ಕೊಟ್ಟೆ.ಇದಾದ ಕೆಲವೇ ತಿಂಗಳಲ್ಲಿ ಮೇಷ್ಟ್ರು ತನ್ನ ಇಹ ಲೋಕ ಯಾತ್ರೆ ಮುಗಿಸಿದ್ದರು.ಕಾಣದ ಲೋಕಕ್ಕೆ ಪಯಣ ಬೆಳೆಸಿದ ಆ ನನ್ನ ಆತ್ಮೀಯ ಸ್ನೇಹಿತನಿಗೆ ಈ ನನ್ನ ಮೆಚ್ಚಿನ ಗೀತೆಯ ಮೂಲಕನಮನಗಳನ್ನು ಸಲ್ಲಿಸುತ್ತಿದ್ದೇನೆ.'ಒಲುಮೆಯ ಹೂವೇ!ನೀ ಹೋದೆ ಎಲ್ಲಿಗೇ !ಉಳಿಸಿ ಕಣ್ಣ ನೀರ ಈ ನನ್ನ ಬಾಳಿಗೇ '.

(ಇದು ಹೋದ ವರ್ಷ ಆಗಸ್ಟ್ ನಲ್ಲಿ ಹಾಕಿದ್ದ ಲೇಖನ.ಹೊಸದೇನನ್ನೂ ಬರೆದಿಲ್ಲವಾದ್ದರಿಂದ ನನಗೆ ಇಷ್ಟವಾಗಿದ್ದ ಈ ಹಳೆಯ ಲೇಖನವನ್ನೇ ಹಾಕುತ್ತಿದ್ದೇನೆ.)