Sunday, February 1, 2015

"ಒಲುಮೆಯ ಹೂವೇ........"

ಕೆಲವು ಹಾಡುಗಳು ಹೇಗೋ ಕೆಲವೊಂದು ನೆನಪು ಗಳಿಗೆ ತಳುಕು ಹಾಕಿ ಕೊಂಡು ಬಿಟ್ಟಿರುತ್ತವೆ.ಆ ಹಾಡನ್ನು ನೆನಸಿಕೊಂಡರೆ ಒಬ್ಬ ವ್ಯಕ್ತಿಯ ನೆನಪೋ ಅಥವಾ ,ಒಂದು ಪ್ರಸಂಗದ ನೆನಪೋ ಮರುಕಳಿಸಿಬಿಡುತ್ತದೆ.ನನ್ನ ನೆನಪಿನಲ್ಲಿ ಉಳಿದು ಹೋದಂತಹ ಇಂತಹುದೇ ಒಂದು ಹಾಡು ,ಕನ್ನಡದ ಮಹಾನ್ ಗಾಯಕ ಡಾ.ಪಿ.ಬಿ.ಶ್ರೀನಿವಾಸರು ಅರವತ್ತರ ದಶಕದ ಮೊದಲ ಭಾಗದಲ್ಲಿ 'ಪುನರ್ಜನ್ಮ 'ಎನ್ನುವ ಚಿತ್ರಕ್ಕೆ ಹಾಡಿದ 'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೆ' ಎನ್ನುವ ಹಾಡು.ಮೊದಲಿನಿಂದಲೂ ಈ ಹಾಡು ನನಗೆ ಅತ್ಯಂತ ಪ್ರಿಯವಾದ ಹಾಡು.ಅದೆಷ್ಟು ಸಲ ಈ ಹಾಡನ್ನು ಹಾಡಿದ್ದೇನೋ ತಿಳಿಯದು.ಈಹಾಡುನೆನಪಾದಾಗಲೆಲ್ಲಾ ನನ್ನ ಬಹಳ ಆತ್ಮೀಯ ಸ್ನೇಹಿತರೊಬ್ಬರು ನೆನಪಾಗಿ ಬಿಡುತ್ತಾರೆ.ಅವರ ಪರಿಚಯವಾದದ್ದೂ ಒಂದು ವಿಚಿತ್ರ ಸನ್ನಿವೇಶದ ಮೂಲಕ.
ಈಗ ಸುಮಾರು ಹನ್ನೆರಡು ವರ್ಷಗಳ ಹಿಂದೆ ನಡೆದ ಘಟನೆ.ನಾನು ಇ .ಎನ್.ಟಿ.ತಜ್ಞ ವೈದ್ಯಕೀಯ ಶಿಕ್ಷಣ ಮುಗಿಸಿದ ಹೊಸತು.ನನ್ನ ಬಳಿಗೆ ಕಿವಿಯ ಸೋರಿಕೆಯಿಂದ ಎಡ ಕಿವಿ ಕೇಳದ, ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಬರುತ್ತಿದ್ದ.ಒಂದು ದಿನ ಬೆಳಿಗ್ಗೆ ಆ ಹುಡುಗ  ತನ್ನ ಬಲಗಿವಿ ವಿಪರೀತ ನೋವೆಂದೂ,ಈಗ ಅದೂ ಕೆಳುತ್ತಿಲ್ಲವೆಂದೂ ,ಕೈಯಿಂದ ಬಲಗಿವಿ ಮುಚ್ಚಿಕೊಂಡು ಅಳುತ್ತಾ ಬಂದ.ಅವನ ತಂದೆಯೂ ಅವನ ಜೊತೆಗೇ ಬಂದಿದ್ದರು.ಅವನ ಬಲಗಿವಿ ಪರೀಕ್ಷೆ ಮಾಡಿದಾಗ ಕಿವಿಯ ಪರದೆಯ ಹರಿದ ಭಾಗದಿಂದ ರಕ್ತ ಬರುತ್ತಿತ್ತು.ಕಿವಿಗೆ ಬಲವಾದ ಪೆಟ್ಟು ಬಿದ್ದದ್ದು ಖಾತ್ರಿ ಯಾಯಿತು.ಯಾರೋ ಜೋರಾಗಿ ಕಪಾಳಕ್ಕೆ ಹೊಡೆದಿದ್ದರು.ಆ ಭಾಗವೆಲ್ಲಾ ಹೊಡೆತದಿಂದ ಕೆಂಪಾಗಿತ್ತು.ನನಗೆ ಅವನ ತಂದೆಯ ಮೇಲೆಯೇ ಅನುಮಾನವಿತ್ತು.
ಬಹಳ ಬಲವಂತ ಮಾಡಿದ ಮೇಲೆ ಅವನ ತಂದೆ ಆ ಹುಡುಗನ ಮಾಸ್ತರರೊಬ್ಬರು ಕಪಾಳಕ್ಕೆ ಹೊಡೆದರೆಂದೂ,ಅದಕ್ಕೇ
ಹೀಗಾಯಿತೆಂದೂ ಹೇಳಿದ.ಮೊದಲೇ ಹುಡುಗನಿಗೆ ಒಂದು ಕಿವಿ ಕೇಳುತ್ತಿರಲಿಲ್ಲ.ಈಗ ಕಪಾಳಕ್ಕೆ ಹೊಡೆದು ಇನ್ನೊಂದು ಕಿವಿಯೂ ಕೇಳದ ಹಾಗೆ ಮಾಡಿ ಬಿಟ್ಟರಲ್ಲಾ ಎಂದು ನನಗೆ ಆ ಮಾಸ್ತರರ ಮೇಲೆ ವಿಪರೀತ ಸಿಟ್ಟು ಬಂತು.ಆ ಮಾಸ್ತರರನ್ನು ನನ್ನ ಬಳಿಗೆ ಕಳಿಸುವಂತೆ ಹೇಳಿದೆ.ಅದಕ್ಕೆ ಅವನ ತಂದೆ 'ಬಿಡಿ ಸಾರ್.ಇದನ್ನ ದೊಡ್ಡ ವಿಷಯ ಮಾಡಬೇಡಿ.ಆ ಮಾಸ್ತರರು ತುಂಬಾ ಒಳ್ಳೆಯವರು.ಇವನೇ ಏನೋ ಮಾಡಬಾರದ ತೀಟೆ ಮಾಡಿರುತ್ತಾನೆ.ಅದಕ್ಕೇ ಅವರು ಏಟು ಕೊಟ್ಟಿದ್ದಾರೆ,ನೀವೇ ಏನಾರ ಔಷಧಿ ಕೊಟ್ಟು ಸರಿ ಮಾಡಿಬಿಡಿ 'ಎಂದ.ನಾನೂ ಸುಮ್ಮನಾದೆ.
ಈ ಘಟನೆ ನಡೆದ ಎರಡು ದಿನಕ್ಕೆ ಒಬ್ಬ ವ್ಯಕ್ತಿ ನನ್ನ ರೂಮಿನ ಹೊರಗೆ ನಿಂತು 'ಒಳಗೆ ಬರಬಹುದಾ ಸರ್'ಎಂದರು . 'ಬನ್ನಿ 'ಎಂದೆ.ಒಳಗೆ ಬಂದು ಕೂತರು.ಮುಖ ಆತಂಕದಿಂದ ಬೆವರುತ್ತಿತ್ತು.ದನಿ ನಡುಗುತ್ತಿತ್ತು.ತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಂಡು 'ಬಿ.ಪಿ.ಚೆಕ್ ಮಾಡಿಸ್ಕೋ ಬೇಕಾಗಿತ್ತು ಸರ್ 'ಎಂದರು.ಬಿ.ಪಿ.ಸುಮಾರಾಗಿಯೇ ಜಾಸ್ತಿ ಇತ್ತು.'ಸಾರ್ ನಾನು ಇಲ್ಲಿ ಮಿಡ್ಲ್ ಸ್ಕೂಲ್ ಮೇಷ್ಟ್ರು.ನನ್ನಿಂದ ಬಹಳ ದೊಡ್ಡ ತಪ್ಪಾಯಿತು.ಕ್ಷಮಿಸಿ ಬಿಡಿ ಸರ್ 'ಎಂದರು.ನಾನು 'ಯಾಕ್ರೀ ಮೇಷ್ಟ್ರೇ ಏನಾಯ್ತು ?'ಎಂದೆ.'ಆ ಹುಡುಗನಿಗೆ ಕಪಾಳಕ್ಕೆ ಹೊಡೆದದ್ದು ನಾನೇ ಸರ್ 'ಎಂದರು.ನಾನು ಸ್ವಲ್ಪ ಬಿಗುವಾದೆ.'ಅಲ್ಲಾ ಮೇಷ್ಟ್ರೇ  ಹುಡುಗರು ತಪ್ಪು ಮಾಡಿದರೆ ತಿದ್ದ ಬೇಕು ಸರಿ.ಆದರೆ ಈ ರೀತಿ ಕಿವಿಯ ತಮಟೆ ಹರಿದು ಹೋಗುವ ಹಾಗೆ ಹೊಡೆಯಬೇಕೆ?ಅದು ತಪ್ಪಲ್ಲವೇ ? ಅವನ ಜೀವಕ್ಕೆ ಅಪಾಯ ವಾಗಿದ್ದರೆ ಏನು ಗತಿ?ಅವನಿಗೆ ಕೇಳುತ್ತಿದ್ದ ಒಂದೇ ಕಿವಿ ಕೂಡ ನೀವು ಹೊಡೆದ ದ್ದರಿಂದ ಹಾಳಾಯಿತಲ್ಲ!'ಎಂದೆ.'ಆ ಹುಡುಗ ಯಾವುದೋ ಹುಡುಗಿಯ ಬಗ್ಗೆ ಬಹಳ ಕೆಟ್ಟ ಪದ ಉಪಯೋಗಿಸಿದ ಸಾರ್.ಮೊದಲೇ ಬಿ.ಪಿ. ಇದೆ.ಸಿಟ್ಟು ಬಂದು ಕಪಾಳಕ್ಕೆ ಒಂದೇಟು ಬಿಟ್ಟೆ .ಈ ರೀತಿಯೆಲ್ಲಾ ಆಗುತ್ತೆ ಅಂತ ಗೊತ್ತಿರಲಿಲ್ಲ .ಇನ್ನು ಮೇಲೆ ಹುಡುಗರ ಮೇಲೆ ಕೈ ಮಾಡೋಲ್ಲ  .ಜೀವನದಲ್ಲಿ ಒಂದು ದೊಡ್ಡ ಪಾಠ ಕಲಿತೆ 'ಎಂದು ಗಧ್ಗದ ಕಂಠದಲ್ಲಿ ಹೇಳಿ ಹೊರಟು ಹೋದರು.
ಅದಾದ ನಂತರ ನಾನು  ದಿನಾ ಬೆಳಗಿನ ಜಾವ ಸ್ಕೂಲಿನ ಗ್ರೌಂಡ್ ಗೆ ವ್ಯಾಯಾಮ ಮತ್ತು ಜಾಗಿಂಗ್ ಮಾಡುವುದಕ್ಕೆ ಹೋಗುತ್ತಿದ್ದಾಗ ಅವರೂ ಸಿಗುತ್ತಿದ್ದರು.ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ.ಸ್ವಲ್ಪ ಮುಂಗೊಪವಿತ್ತು.ಯಾರಿಗಾದರೂ ಸಹಾಯಮಾಡಬೇಕಾದರೆ 'ನಾ ಮುಂದೆ' ಎನ್ನುವಂತಹವರು.ಪರಿಚಯ ಸ್ನೇಹಕ್ಕೆ ತಿರುಗಿತು.ಕೆಲವೇ ದಿನಗಳಲ್ಲಿ 
ಬಹಳ ಆತ್ಮೀಯರಾದರು.ವ್ಯಾಯಾಮವೆಲ್ಲಾ ಮುಗಿಸಿ,ಬೆವರು ಹರಿಸುತ್ತಾ ,ತಂಗಾಳಿಗೆ ಮೈ ಒಡ್ಡಿ ಕುಳಿತಾಗ 
ನಾನು ನನಗೆ ಪ್ರಿಯವಾದ 'ಒಲುಮೆಯ ಹೂವೇ'ಹಾಡನ್ನು ಹೇಳುತ್ತಿದ್ದೆ.ಮೇಷ್ಟ್ರಿಗೆ ಕೂಡ ಈ ಹಾಡು
ಬಹಳ ಇಷ್ಟವಾಗಿತ್ತು .ನಾನು ಹಾಡುವಾಗ ಬಹಳ ಖುಷಿ ಪಡುತ್ತಿದ್ದರು.ಹಾಡು ಕೇಳುತ್ತಾ ಎಷ್ಟೋ ಸಲ ಅವರ ಕಣ್ಣಿನಲ್ಲಿ ನೀರು ಇರುತ್ತಿತ್ತು.2000 april ನಲ್ಲಿ ಅವರಿಗೆ ಎಲೆಕ್ಷನ್ ಡ್ಯೂಟಿಹಾಕಿದ್ದರು.'ಸಾರ್ ನನಗೆ ಎಲೆಕ್ಷನ್ ಡ್ಯೂಟಿ ಗೆ ಹೋಗೋಕೆ ಆಗೋಲ್ಲಾ ,ಒಂದು ಮೆಡಿಕಲ್  ಸರ್ಟಿಫಿಕೇಟ್ ಕೊಡಿ'ಎಂದರು.'ಯಾಕೇ ಮೇಷ್ಟ್ರೇ ?ಏನು ತೊಂದರೆ?'ಎಂದೆ.ಎಲೆಕ್ಷನ್ ಡ್ಯೂಟಿ ತಪ್ಪಿಸೋಕೆ ಎಲ್ಲರೂ ಮಾಡುವ ಸಾಮಾನ್ಯ ಉಪಾಯ ಇದು.'ನಡೆಯೋವಾಗ ಯಾಕೋ ಬ್ಯಾಲೆನ್ಸ್ ತಪ್ಪುತ್ತೆ ಸರ್' ಎಂದರು.ಎಲ್ಲಾ ಪರೀಕ್ಷೆ ಮಾಡಿದಾಗ ನಿಜಕ್ಕೂ ತೊಂದರೆ ಇದೆ ಎನಿಸಿ, C.T.SCAN ಮಾಡಿಸಿಕೊಂಡು ಬರಲು ಬೆಳಗಾವಿಯ ಕೆ.ಎಲ್.ಇ .ಆಸ್ಪತ್ರೆಗೆ ಕಳಿಸಿದೆ.ಅಲ್ಲಿ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು.ಅದು ಶ್ವಾಶಕೋಶಕ್ಕೂ,ಮೆದುಳಿಗೂ ಹರಡಿತ್ತು.ಅವರಿಗೆ ಸುಮಾರು ಹದಿನೆಂಟು ವರ್ಷಗಳಿಂದ ಥೈರಾಯ್ಡ್ ಗ್ರಂಥಿ ಯಲ್ಲಿ ಒಂದು ಸಣ್ಣ ಗಡ್ದೆ ಇತ್ತಂತೆ.ನನಗೂ ಕೂಡ ಮೊದಲೇ ತಿಳಿಸಿರಲಿಲ್ಲ .ಅವರನ್ನು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಸೇರಿಸಿದೆವು. ಸ್ನೇಹಿತರೆಲ್ಲಾ ಸೇರಿ ಅವರ ಚಿಕಿತ್ಸೆಯ ಖರ್ಚಿಗೆಂದು ಸುಮಾರು  ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಸ್ವಇಚ್ಛೆಯಿಂದ ಸೇರಿಸಿ ಕೊಟ್ಟೆವು.
ನನಗೆ ಅಷ್ಟರಲ್ಲಿ ರಾಯಚೂರಿನ ಶಕ್ತಿನಗರಕ್ಕೆ ವರ್ಗವಾಗಿತ್ತು.ಒಂದೆರಡು ತಿಂಗಳ ನಂತರ ಅವರನ್ನು ನೋಡಲು ರಾಯಚೂರಿನಿಂದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋದೆ.ಸ್ಪೆಷಲ್ ವಾರ್ಡಿನ ರೂಮೊಂದರಲ್ಲಿ ಒಬ್ಬರೇ ಇದ್ದರು.Brain surgery ಮಾಡಿ ತಲೆಗೆಲ್ಲಾ ಬ್ಯಾಂಡೇಜ್ ಸುತ್ತಿದ್ದರು.ನನ್ನನ್ನು ನೋಡಿ ಮೇಷ್ಟ್ರಿಗೆ ತುಂಬಾ ಖುಷಿಯಾಯಿತು.ಆನದದಿಂದ ತಬ್ಬಿಕೊಂಡರು.

 'ಸರ್ ಆಪರೇಶನ್ ಆಯ್ತು .ನೀವೂ ನೋಡೋಕೆ ಬಂದ್ರಿ.ಇನ್ನು ಎಲ್ಲಾ ಸರಿ ಹೋಗುತ್ತೆ ಸರ್.ನಿಮ್ಮನ್ನು ನೋಡೋಕೆ ಮುಂದಿನ ಸಲ ಶಕ್ತಿನಗರಕ್ಕೆ ನಾನೇ ಬರುತ್ತೇನೆ'ಎಂದರು. ಆ ಆಯಾಸದಲ್ಲೂ ಸುಮಾರು ಒಂದು ಗಂಟೆ ಹರಟಿದರು.'ಹೆಚ್ಚು ಮಾತನಾಡಬೇಡಿ ಮೇಷ್ಟ್ರೇ ,ಆಯಾಸ ಆಗುತ್ತೆ 'ಎಂದರೂ ಕೇಳಲಿಲ್ಲ.ಕೊನೆಗೆ ನಾನು ಹೊರಟು ನಿಂತೆ.'ಸಾರ್ ,ನಾನಿನ್ನು ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ ,ನನಗೋಸ್ಕರ ಒಂದುಸಲ ಆ ಹಾಡು ಹಾಡಿ ಬಿಡಿ ಸರ್' ಎಂದರು!ಕ್ಯಾನ್ಸರ್ ವಾರ್ಡಿನಲ್ಲಿ ಹಾಡೇ!!?ನಾನು ನನ್ನ ಕನಸು ಮನಸಿನಲ್ಲೂ ಇಂತಹ ಸಂದರ್ಭ
ಊಹಿಸಿಕೊಂಡಿರಲಿಲ್ಲ.'ಬಿಸಿ ತುಪ್ಪ ಉಗುಳುವಂತಿಲ್ಲ,ನುಂಗುವಂತಿಲ್ಲ' ಎನ್ನುವಂತಾಗಿತ್ತು ನನ್ನ ಪರಿಸ್ಥಿತಿ !ಅವರನ್ನು ಆ ಸ್ಥಿತಿ ಯಲ್ಲಿ ನೋಡಿ ಮನಸ್ಸು ಬಹಳ ನೊಂದಿತ್ತು.ಹಾಡುವ ಮೂಡ್ ಇರಲಿಲ್ಲ.ಅವರ ಮನಸ್ಸನ್ನು ನೋಯಿಸದಿರಲು ಅನಿವಾರ್ಯವಾಗಿ ಹಾಡಲೇ ಬೇಕಾಯಿತು.ನನ್ನೆಲ್ಲಾ ನೋವನ್ನೂ ಹೊರ ಹಾಕುವಂತೆ,ಜೀವನದಲ್ಲಿ ಅದೇ ನನ್ನ ಕಡೆಯ ಹಾಡು ಎಂಬಂತೆ ನನ್ನನ್ನೇ ಮರೆತು ಹಾಡಿದೆ!'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೇ!ಉಳಿಸಿ ಕಣ್ಣ ನೀರ,ಈ ನನ್ನ ಬಾಳಿಗೇ'.ಹಾಡು ಮುಗಿಯುವ ವೇಳೆಗೆ ಇಬ್ಬರ ಕಣ್ಣಲ್ಲೂ ಧಾರಾಕಾರ ನೀರು!ಭಾರ ಹೃದಯದಿಂದ ಅವರನ್ನು ಬೀಳ್ಕೊಟ್ಟೆ.ಇದಾದ ಕೆಲವೇ ತಿಂಗಳಲ್ಲಿ ಮೇಷ್ಟ್ರು ತನ್ನ ಇಹ ಲೋಕ ಯಾತ್ರೆ ಮುಗಿಸಿದ್ದರು.ಕಾಣದ ಲೋಕಕ್ಕೆ ಪಯಣ ಬೆಳೆಸಿದ ಆ ನನ್ನ ಆತ್ಮೀಯ ಸ್ನೇಹಿತನಿಗೆ ಈ ನನ್ನ ಮೆಚ್ಚಿನ ಗೀತೆಯ ಮೂಲಕನಮನಗಳನ್ನು ಸಲ್ಲಿಸುತ್ತಿದ್ದೇನೆ.'ಒಲುಮೆಯ ಹೂವೇ!ನೀ ಹೋದೆ ಎಲ್ಲಿಗೇ !ಉಳಿಸಿ ಕಣ್ಣ ನೀರ ಈ ನನ್ನ ಬಾಳಿಗೇ '.

(ಇದು ಹೋದ ವರ್ಷ ಆಗಸ್ಟ್ ನಲ್ಲಿ ಹಾಕಿದ್ದ ಲೇಖನ.ಹೊಸದೇನನ್ನೂ ಬರೆದಿಲ್ಲವಾದ್ದರಿಂದ ನನಗೆ ಇಷ್ಟವಾಗಿದ್ದ ಈ ಹಳೆಯ ಲೇಖನವನ್ನೇ ಹಾಕುತ್ತಿದ್ದೇನೆ.)

7 comments:

  1. ಮನ ಕಲಕುವ ಈ ಲೇಖನವನ್ನು ಮೊದಲೂ ಓದಿ, ಕಣ್ನೀರು ಹಾಕಿದ್ದೆ. ಈ ಹಾಡು ನನ್ನ ಮೆಚ್ಚಿನ ಹಾಡೂ ಹೌದು. ನನ್ನ ಕ್ಲಾಸ್‍ಮೇಟ್ ಒಬ್ಬಾತ , ಯಾರನ್ನೋ ಉಳಿಸಲು ಹೋಗಿ, ಸುಟ್ಟ ಗಾಯಗಳಿಂದ ಮರಣ ಹೊಂದಿದ. ಈ ಹಾಡಿನ ಜೊತೆಗೇ, ನನಗೆ ಅವನ ನೆನಪೇ ಆಗುವುದು.

    ReplyDelete
  2. ತಾವು ಇತ್ತೀಚೆಗೆ ಬ್ಲಾಗಿನಲ್ಲಿಲ್ಲ ಎಂಬುದೇ ನಮಗೆ ದೊಡ್ಡ ಕೊರತೆ. ಹೊಸ ಜೀವನ ಕ್ರಮವು ನಿಮ್ಮನ್ನು ಇನ್ನೂ ಸ್ವಲ್ಪ ಕಾಲದ ನಂತರವಾದರೂ ತಮ್ಮ ಎಂದಿನ ಸಾಹಿತ್ಯಕ್ಕೆ ಹಿಂದಿರುಗಿಸುವುದೆಂದು ಆಶಿಸುತ್ತೇವೆ.
    'ಒಲುಮೆಯ ಹೂವೇ!ನೀ ಹೋದೆ ಎಲ್ಲಿಗೇ !ಉಳಿಸಿ ಕಣ್ಣ ನೀರ ಈ ನನ್ನ ಬಾಳಿಗೇ ' ಗೀತೆಯು ಅತ್ಯಂತ ಮಾರ್ಮಿಕವಾದ ಮತ್ತು ಮನಸ್ಸನ್ನು ಹಿಂಡಿಬಿಡುವ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ. ಸಾವಿರದೊಳು ಒಂದು ಮಾಣಿಕ್ಯದಂತ ಆಣಿಮುತ್ಯ.
    ಮೇಸ್ಟ್ರ ಖಾಯಿಲೆ ಮತ್ತು ಅವರ ಕಡೆಗಾಲದಲ್ಲಿ ಅವರ ಕೋರಿಕೆಯ ಮೇರೆಗೆ ತಾವು ಹಾಡಿದ ರೀತಿಯೂ ಮನ ಕಲುಕಿತು.
    ತುಂಬ ದಿನಗಳವರೆಗೂ ಕಾಡಬಲ್ಲ ಬರಹವಿದು!

    ReplyDelete
  3. ಓದ್ತಾ ಓದ್ತಾ ಕಣ್ತುಂಬಿ ಬಂತು ಡಾಕ್ಟ್ರೆ :-( :-( ಹಿಂದಿನ ಸಲ ಹಾಕಿದಾಗ ಓದಲಾಗದೇ ಮಿಸ್ಸಾಗಿತ್ತು ಆ ಪೋಸ್ಟು. ಆದ್ರೆ ಈ ಸಲ ಅಳಿಸಿಬಿಟ್ರಿ :-(..

    ReplyDelete
  4. ಕೃಷ್ಣಮೂರ್ತಿ ಸರ್,

    ಕಳೆದ ಸಲ ಇದನ್ನು ಓದಿದ ಮೇಲೆ ಬಹಳ ಹೊತ್ತು ಮಾತು ಹೊರಡಲಿಲ್ಲ.
    ಮತ್ತೆ ಬೇಡವೆಂದರೂ ಓದಿಸಿಕೊಂಡು ಹೋಯ್ತು ನಿಮ್ಮ ಲೇಖನ

    ನೀವು ದಯವಿಟ್ಟು ಮತ್ತೆ ಬರೆಯಬೇಕು

    ಪ್ರೀತಿಯಿಂದ

    ReplyDelete
  5. Nice one...!!!

    could you please once visit ammanahaadugalu.blogspot.com
    and share your suggestions as I am new to kannada blog

    ReplyDelete
  6. ಸ್ನೇಹ ಪ್ರೀತಿ ನನ್ನುಸಿರು ಎನ್ನುವಂಥ ವ್ಯಕ್ತಿತ್ವ ನಿಮ್ಮದು ಡಾಕ್ಟ್ರೆ
    ಅಗಲಿದ ಆ ಮಹಾನ್ ಚೇತನಕ್ಕೆ ನಮನ ಸಲ್ಲಿಸುತ್ತಾ ನಿಮ್ಮ ಗಾಯನ ಪ್ರತಿಭೆಗೆ ಸಲಾಂ ಹೇಳಬೇಕು
    ನಿಮ್ಮ ಜೀವನದಲ್ಲಿ ನಡೆದ ಪ್ರತಿಘಟನೆಗಳು ಒಂದೊಂದು ಪಾಠ ನನಗೆ

    ReplyDelete
  7. As stated by Stanford Medical, It's indeed the ONLY reason this country's women live 10 years more and weigh 42 pounds lighter than us.

    (And by the way, it has absolutely NOTHING to do with genetics or some hard exercise and EVERYTHING around "HOW" they eat.)

    BTW, I said "HOW", not "what"...

    Tap this link to reveal if this little test can help you decipher your real weight loss potential

    ReplyDelete

Note: Only a member of this blog may post a comment.