Friday, December 13, 2013

"ಬದುಕೇ.......ಮನ್ನಿಸಿಬಿಡು ನನ್ನ !!!!"

ಬದುಕೇ .....,ಮನ್ನಿಸಿ ಬಿಡು ನನ್ನ !!!
ನರ ನರಳಿ ಬದುಕಿದ್ದು......,
ಬದುಕಿಯೂ .......ಸತ್ತದ್ದು !!!
ನಿದ್ರೆ ಇಲ್ಲದೇ ವ್ಯರ್ಥ ಚಿಂತೆಯಲಿ 
ರಾತ್ರಿ ಎಲ್ಲಾ ಹೊರಳಿದ್ದು !!!
ಕ್ಷಮಿಸಿ ಬಿಡು ದಯೆ ತೋರಿ !!!
ಬದುಕಿ ಬಿಡುತ್ತೇನೆ ಮತ್ತೊಮ್ಮೆ !!!
ಹೀಗೊಮ್ಮೆ ,ಇನ್ನೊಮ್ಮೆ !!!
ಕ್ಷಣ ಕ್ಷಣವೂ ಬದುಕುತ್ತಾ 
ಬದುಕ ಸವಿಯ ...........,
ಗುಟುಕು,ಗುಟುಕಾಗಿ ಸವಿಯುತ್ತಾ ,
ಅನು ಕ್ಷಣವೂ, ಬದುಕಿದ್ದಕ್ಕಾಗಿಯೇ 
ನಲಿ,ನಲಿಯುತ್ತಾ...........!!!!
ಬದುಕಿ ಬಿಡುತ್ತೇನೆ ,ಸಾಯುವ ಮುನ್ನ !!!

Wednesday, October 30, 2013

ಅಕ್ಟೋಬರ್ ಎರಡು ಮತ್ತು ಮಧ್ಯಾಹ್ನದ ಊಟ !!!

ಸೆಪ್ಟೆಂಬರ್ ಮೂವತ್ತಕ್ಕೆ ನಿವೃತ್ತಿ ಹೊಂದಿದೆ.ಅಕ್ಟೋಬರ್ ಆರನೇ ತಾರೀಕು ಮನೆ ಖಾಲಿ ಮಾಡುವುದೆಂದು ನಿರ್ಧಾರವಾಗಿತ್ತು.ಅಕ್ಟೋಬರ್ ಒಂದರಿಂದಲೇ ಪ್ಯಾಕಿಂಗ್ ಶುರುವಾಗಿತ್ತು.ಸುಮಾರು ಹತ್ತು ದಿನಗಳ  ಹಿಂದೆಯೇ ಪರಿಚಯಸ್ಥರು,ಸ್ನೇಹಿತರು ಒಂದೊಂದು ದಿನ ,ಒಂದೊಂದು ಹೊತ್ತು ಊಟಕ್ಕೆ ಕರೆದಿದ್ದರು.ಮನೆ ಶಿಫ್ಟ್ ಮಾಡುವ ಗಡಿಬಿಡಿಯಲ್ಲಿ ಯಾರು,ಯಾರು,ಯಾವ ದಿನ ಊಟಕ್ಕೆ ಕರೆದಿದ್ದಾರೆ ಎಂದು ಗುರುತು ಮಾಡಿಕೊಳ್ಳದೇ,ನನ್ನ ನೆನಪಿನ ಶಕ್ತಿಯ ಮೇಲೇ ಭರವಸೆ ಇಟ್ಟಿದ್ದೆ.ಇಲ್ಲಿ ಸ್ವಲ್ಪ ನಮ್ಮ ಕಾರ್ಗಲ್ ಕಾಲೋನಿಯ ಬಗ್ಗೆ ಹೇಳಬೇಕು.ಕಾರ್ಗಲ್,ವಿಶ್ವ ವಿಖ್ಯಾತ  ಜೋಗ್ ಜಲಪಾತದ ಬಳಿ ಇರುವ ಸಣ್ಣ ಊರು.ಜೋಗ್ ಮತ್ತು ಕಾರ್ಗಲ್ ನಲ್ಲಿ ಸುಮಾರು ಮನೆಗಳು ಬೆಟ್ಟ ಗುಡ್ಡಗಳ ಮೇಲೆ ಇವೆ.ನಾವಿದ್ದ ಮನೆ ಒಂದು ಬೆಟ್ಟದ ತುತ್ತ ತುದಿಯಲ್ಲಿತ್ತು.ನಮ್ಮ ಮನೆಗೆ ಬರಬೇಕಾದರೆ ಸುಮಾರು ಏರು ಹತ್ತಿ ಬರಬೇಕಿತ್ತು.ಹಲವಾರು ವರ್ಷಗಳ ಹಿಂದೆ ಪಾರ್ಶ್ವ ವಾಯು ಪೀಡಿತರಾಗಿದ್ದ ಶಂಕರಮೂರ್ತಿ ಎಂಬ ವಯೋ ವೃದ್ಧರೊಬ್ಬರು ಆಗಾಗ ಆಸ್ಪತ್ರೆಗೆ ನನ್ನ ಬಳಿ ಚಿಕಿತ್ಸೆಗೆಂದು ಬರುತ್ತಿದರು.ಹತ್ತು ದಿನ ಮೊದಲೇ, ಸುಮಾರು ಎರಡು ಕಿಲೋಮೀಟರ್  ದೂರ ಕಷ್ಟ ಪಟ್ಟು ನಡೆದು ಕೊಂಡು,ಮೊದಲನೇ  ಮಹಡಿಯಲ್ಲಿದ್ದ ನಮ್ಮ ಮನೆಗೆ ಬಂದು,ಅಕ್ಟೋಬರ್ ಎರಡನೇ ತಾರೀಕು ಮಧ್ಯಾಹ್ನ ಊಟಕ್ಕೆ ಬರಬೇಕೆಂದು ಹೇಳಿ ಹೋದರು.ಅವರು ನನ್ನ ಮೇಲಿಟ್ಟಿದ್ದ ಪ್ರೀತಿ,ವಿಶ್ವಾಸಕ್ಕೆ ಮೂಕವಿಸ್ಮಿತನಾಗಿದ್ದೆ.ಅಕ್ಟೋಬರ್ ಎರಡನೇ ತಾರೀಕು ಬೆಳಿಗ್ಗೆ ನನ್ನ ಹೆಂಡತಿ "ಇವತ್ತು ಮಧ್ಯಾಹ್ನ ಯಾರ ಮನೇಲಿ ಊಟಕ್ಕೆ ಕರೆದಿದ್ದಾರೆ?ಅಥವಾ ನಾನು ಅಡಿಗೆ ಮಾಡಬೇಕಾ?"ಎಂದಳು. ನನಗೋ ಪೂರ್ತಿ ಕನ್ಫ್ಯೂಷನ್ನು.ತಕ್ಷಣಕ್ಕೆ ನೆನಪಿಗೆ ಬರದಿದ್ದರೂ ನಿಧಾನವಾಗಿ ಟ್ಯೂಬ್ ಲೈಟ್ ಹತ್ತಿಕೊಂಡಿತು.'ಓಹೋ.......ಇವತ್ತು ಶಂಕರ ಮೂರ್ತಿಯವರು ಮಧ್ಯಾಹ್ನ ಊಟಕ್ಕೆ ಕರೆದಿದ್ದಾರಲ್ಲವೇ!' ಎಂದುಕೊಂಡೆ. ಅರವತ್ತರ ನನ್ನ ಕಥೆಯೇ ಹೀಗಿರಬೇಕಾದರೆ,ನನಗಿಂತ ಹಿರಿಯರಾದ ಶಂಕರ ಮೂರ್ತಿಯವರಿಗೆ ನಮ್ಮನ್ನು ಊಟಕ್ಕೆ ಕರೆದಿದ್ದು ನೆನಪಿರುತ್ತೋ ಇಲ್ಲವೋ ಎನ್ನುವ ಅನುಮಾನ ಶುರುವಾಯಿತು.ಸರಿ ಅವರಿಗೆ ಫೋನ್ ಮಾಡಿ ಕನ್ಫರ್ಮ್ ಮಾಡಿಕೊಂಡು ಬಿಡೋಣ ಎಂದು ಕೊಂಡು  ಮೊಬೈಲ್ ನಲ್ಲಿ ಅವರಿಗೆ ಫೋನಾಯಿಸಿದೆ.
"ಹಲೋ......",ಎಂದದಕ್ಕೆ ಅತ್ತ ಕಡೆಯಿಂದ "ಯಾರು ?"ಎಂದು ಹೆಂಗಸೊಬ್ಬರ ದನಿ ಕೇಳಿತು. "ಹಲ್ಲೋ .....ನಮಸ್ಕಾರಾಮ್ಮ.ನಾನು ಡಾಕ್ಟರ್ ಕೃಷ್ಣ ಮೂರ್ತಿ ಅಂತ"ಎಂದೆ. ಅತ್ತ ಕಡೆಯಿಂದ "ಯಾರೋ ಡಾಕ್ಟರ್ ಕೃಷ್ಣ ಮೂರ್ತಿಯಂತೆ ನೋಡಿ "ಎನ್ನುವ ದನಿ ಕೇಳಿತು.ಆ ಕಡೆಯಿಂದ ಈಗ ಗಂಡಸು ದನಿ "ಹಲೋ"ಎಂದಿತು."ಹಲೋ ಶಂಕರ ಮೂರ್ತಿಯವರಾ?"ಎಂದೆ.ಆ ಕಡೆಯಿಂದ"ಹೌದು"ಎನ್ನುವ ದನಿ ಕೇಳಿ ಬಂತು."ಸರ್ ಇವತ್ತು ಅಕ್ಟೋಬರ್ ಎರಡು ,ಜ್ಞಾಪಕ ಇದೆಯಾ ಸಾರ್?"ಎಂದೆ. ಆ ಕಡೆಯಿಂದ "ಹೌದು ಸರ್,ಇವತ್ತು ಗಾಂಧೀ ಜಯಂತಿ"ಎನ್ನುವ ಉತ್ತರ ಕೇಳಿ ನನ್ನ ಎದೆ ಧಸಕ್ ಅಂತು."ಅರೇ...!! ಇವರಿಗೆ ನಮ್ಮನ್ನು ಊಟಕ್ಕೆ ಕರೆದಿರುವ ನೆನಪೇ ಇಲ್ಲವಲ್ಲ!!! ",ಹೇಗಪ್ಪಾ ನೆನಪು ಮಾಡೋದು ಎಂದು ಕಸಿವಿಸಿಯಾಯಿತು.ಧೈರ್ಯ ಮಾಡಿ "ಇವತ್ತು ಮಧ್ಯಾಹ್ನ ನಿಮ್ಮ ಮನೆಯಲ್ಲಿ  ಊಟ ಅಲ್ವಾ?"ಎಂದೆ.ಅತ್ತ ಕಡೆಯವರಿಗೆ ಡಾಕ್ಟರ್ರಿಗೆ ಎಲ್ಲೋ ತಲೆ ಕೆಟ್ಟಿದೆ ಅನಿಸಿರಬೇಕು. "ಸಾರ್,ನಾನು ಬೆಂಗಳೂರಿನ  head office ನ ಶಂಕರ ಮೂರ್ತಿ "ಎಂದರು.ನಾನು ಪರಿಸ್ಥಿತಿ ವಿವರಿಸಿದ ಮೇಲೆ ನನ್ನ ಫಜೀತಿ ನೋಡಿ ಮನಸಾ ನಕ್ಕರು.ಇದಾದ ಸ್ವಲ್ಪ  ಹೊತ್ತಿಗೇ ನಮ್ಮ ಕಾರ್ಗಲ್ಲಿನ ಶಂಕರ ಮೂರ್ತಿಯವರಿಂದ ನನ್ನ ಮೊಬೈಲಿಗೆ ಕರೆ ಬಂತು. ಶಂಕರ ಮೂರ್ತಿಯವರು "ಸಾರ್ ,ಇವತ್ತು ಅಕ್ಟೋಬರ್ ಎರಡು ,ಮಧ್ಯಾಹ್ನ ನಮ್ಮ ಮನೇಲಿ ಊಟಕ್ಕೆ ಕರೆದಿದ್ದೆ .ನೆನಪಿದೆಯಾ "ಎಂದರು. ನಾನು ಸುಸ್ತು!!! ಬೆಂಗಳೂರಿಗೆ ಬಂದ ಮೇಲೆ ಶಂಕರ ಮೂರ್ತಿಯವರನ್ನು  ಆಫೀಸಿನಲ್ಲಿ ಭೇಟಿ ಆದಾಗ,ಈ ಘಟನೆ ನೆನೆಸಿಕೊಂಡು ಇಬ್ಬರೂ ನಕ್ಕೂ,ನಕ್ಕೂ ...ಸಾಕಾಯಿತು. ಅವರೇ "ಇದನ್ನು ನಿಮ್ಮ ಬಾಗಿನಲ್ಲಿ ಹಾಕಿ ಸರ್ .ಚೆನ್ನಾಗಿದೆ"ಎಂದರು.ನನ್ನ ಅನುಭವ ಹೇಗಿದೆ ಎನ್ನುವುದನ್ನು ಇನ್ನು  ನೀವು ಹೇಳ ಬೇಕು. ನಮಸ್ಕಾರ.

Saturday, September 28, 2013

"ಏನು ಮಾಡೋದ್ರೀ ಸರ್? ಬಂದ ಹಂಗಾ....ಹೊಡಿಯೋದ್ರಪಾ!!!! "

ನೆನ್ನೆ ನಮ್ಮ ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲೇ ಓದಿದ, ವೈದ್ಯರೊಬ್ಬರು ನಾವುಮೊದಲನೇ ವರ್ಷದ ಮೆಡಿಕಲ್ ಓದುತ್ತಿದ ಸಮಯದಲ್ಲಿ (1972) ನಡೆದ ಹಾಸ್ಯ ಘಟನೆಯೊಂದನ್ನು ನೆನಪಿಸಿದರು.ಅದನ್ನು ನಿಮ್ಮ ಜೊತೆಹಂಚಿಕೊಳ್ಳುತ್ತಿದ್ದೇನೆ.ನಮ್ಮ ಮೆಡಿಕಲ್ ಕಾಲೇಜ್ ಆಗ ಕರ್ನಾಟಕ ಯುನಿವರ್ಸಿಟಿಗೆ ಸೇರಿತ್ತು.ಈಗೆಲ್ಲಾ ಕಾನ್ವೆಂಟಿನ ನರ್ಸರಿ ಹುಡುಗರೂ ಮಾತೃ ಭಾಷೆ ಕನ್ನಡವಿದ್ದರೂ,ಕನ್ನಡ ಬರುತಿದ್ದರೂ,ಮನೆಯಲ್ಲೂ ಇಂಗ್ಲೀಶಿನಲ್ಲೇ ಮಾತಾಡುತ್ತಾರೆ.ನಮ್ಮ ಕಾಲೇಜಿನಲ್ಲಿ ಬಹಳಷ್ಟು ಜನ ಹತ್ತನೇ ತರಗತಿಯವರಗೆ ಕನ್ನಡದಲ್ಲಿ ಓದಿದವರೇ ಇದ್ದುದರಿಂದ,ಸುಮಾರು ಜನ ಕನ್ನಡದಲ್ಲೇ ಮಾತನಾಡುತ್ತಿದ್ದರು.
ಗುಲ್ಬರ್ಗದಿಂದಬಂದ,ನಮ್ಮಕ್ಲಾಸಿನ ವಿದ್ಯಾರ್ಥಿಯೊಬ್ಬ ಕಾಲೇಜಿನ ಜನರಲ್ ಸೆಕ್ರೆಟರಿ (ಜಿ.ಎಸ್.) ಆಗಿದ್ದ.ಕನ್ನಡ ಮೀಡಿಯಂನಿಂದ ಬಂದ ಅವನಿಗೆಇಂಗ್ಲೀಷಿನಲ್ಲಿ ಅಷ್ಟು ಶುದ್ಧವಾಗಿ,ವ್ಯಾಕರಣ ಬದ್ಧ ವಾಗಿ ಮಾತನಾಡಲು ಬರುತ್ತಿರಲಿಲ್ಲ.ಅದಕ್ಕೆ ಅವನೂ ತಲೆ ಕೆಡಿಸಿಕೊಂಡಿರಲಿಲ್ಲಾ.'ಅದಕ್ಕೇನು ಮಾಡೋದ್ರೀ ಸರಾsssss,ಬಂದ್ಹಂಗಾ ಹೊಡಿಯೋದ್ರಪಾssss'ಎಂದು ಜೋರಾಗಿ ನಗುತ್ತಿದ್ದ.ಆಗ ಮೊದಲನೆ ವರ್ಷದಪರೀಕ್ಷೆಯನ್ನು ಮುಂದೂಡ ಬೇಕೆಂದು ಎಲ್ಲಾ ಕಾಲೇಜುಗಳಲ್ಲಿ ಸ್ಟ್ರೈಕ್ ನಡೆದದ್ದರಿಂದ, ಕರ್ನಾಟಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ರವರು ಅವರ ಚೇಂಬರ್ ನಲ್ಲಿ,ಎಲ್ಲಾ ಕಾಲೇಜುಗಳ General  Secretary ಗಳ meeting ಕರೆದಿದ್ದರು.ಆ ಮೀಟಿಂಗಿನಲ್ಲಿ ಎಲ್ಲಾ ಕಾಲೇಜುಗಳ General secretary (G.S.)ಗಳೂ ಇದ್ದರು.ನಮ್ಮ G.S.ಕೂಡ ಇದ್ದ.ಮೀಟಿಂಗ್ ಈ ಕೆಳಕಂಡಂತೆ ನಡೆಯಿತು:-
REGISTRAR;- 'Who are the general secretaries who have come?'ಎಂದರು.
ನಮ್ಮ G.S. :- ಎದ್ದು ನಿಂತು"I are the G.S.from Bellary medical college sir ",ಎಂದ !REGISTRAR :-(ಅವನ ಬಾಯಿಂದ ಸರಿಯಾದ ಇಂಗ್ಲೀಶ್ ವಾಕ್ಯ ಬರಿಸುವ ದೃಷ್ಟಿಯಿಂದ )ಮತ್ತೆ " Who is the G.S.from Bellary Medical College?" ಎಂದರು.
ನಮ್ಮ G.S.:-ಕೂತವನು ಎದ್ದು ನಿಂತು"I is the G.S.of Bellary Medical College Sir " ಎಂದ!ರಿಜಿಸ್ಟ್ರಾರ್ ರವರು ಇವನ ಇಂಗ್ಲೀಶ್ ಕೇಳಿ ಸುಸ್ತು!ಆದರೂ ಛಲ ಬಿಡದ ತ್ರಿವಿಕ್ರಮನಂತೆ ಹೇಗಾದರೂ ಇವನ ಬಾಯಿಂದ ಸರಿಯಾದ ಇಂಗ್ಲೀಶ್ ವಾಕ್ಯವನ್ನು ಬರಿಸಲೇಬೇಕೆಂದು ಮತ್ತೆ ಅವನನ್ನೇ ಉದ್ದೇಶಿಸಿ ಕೇಳಿದ ಪ್ರಶ್ನೆ ಇದು!
REGISTRAR :-" Who am  the G.S. of Bellary Medical College?".
ನಮ್ಮG.S.:-"I am the G.S.of Bellary Medical College ",ಎಂದ!
ಕಡೆಗೂ ಬಂದ ಸರಿಯಾದ ಉತ್ತರದಿಂದ ರಿಜಿಸ್ಟ್ರಾರ್ ನಿಟ್ಟಿಸಿರು ಬಿಟ್ಟರು.ಇದನ್ನೆಲ್ಲಾ ನೋಡುತ್ತಿದ್ದ ಮಿಕ್ಕವರು ಹೊಟ್ಟೆ ತುಂಬಾ ನಕ್ಕರು.

Sunday, September 22, 2013

"ನನ್ನ ಮತ್ತು ನೋವಿನ ನಂಟು !!!! "

ನಾನು ಅಂದ್ರೆ ನೋವಿಗೆ 
ಅದೇನೋ ನಲಿವು !!!!

ನನ್ನನ್ ಕಂಡ್ರೆ ಅದಕೆ 
ಏನೋ ವಿಶೇಷ ಒಅವು !!!

ರಾತ್ರಿಯಲ್ಲಿ ಮಂಡಿಯಲ್ಲಿ 
ಬಂದು ಮಲಗುತ್ತೇ !!!


ಬೆಳಗಾಗುತ್ಲೇ  ಬೆನ್ನಲಿ ಎದ್ದು 
ಹಲೋ ಎನ್ನುತ್ತೆ !!!

ಹಗಲಲ್ಲೆಲ್ಲಾ ಸಂದೀ ಸುತ್ತಿ 
ಸಂಜೆ ಕತ್ತಲ್ಲಿ ಕೂರುತ್ತೆ !!!


ಕತ್ನಲ್ ಕೂತು ,ಸಲಿಗೆ ಕೊಟ್ರೆ 
ತಲೇಗು ಏರುತ್ತೇ !!!

ಕಷ್ಟ ಅಂತ ಜೀವದ್ ಗೆಳೆಯನ್
ದೂರೋಕಾಗುತ್ತಾ ?

ನೀವೇ ಹೇಳಿ ನೋವಿನ ಮನಸನ್ 
ನೋಯ್ಸೋಕಾಗುತ್ತಾ?

ಬಾರೋ ನೋವೇ, ಮುಳ್ಳಿನ ಹೂವೇ!!!
ಕೂಡಿ ಬಾಳೋಣ .

ಕೈ ಕೈ ಹಿಡಿದು,ಕುಣಿಯುತ ನಲಿದು 
ಎಲ್ಲರ ನಗಿಸೋಣ !!!

ನಗಿಸುತ ,ನಮ್ಮನೇಮರೆಯೋಣ !!!! 

(2000 ನೇ ಇಸವಿಯ ಹಳೆಯ ಡೈರಿ ಒಂದರಲ್ಲಿ ಗೀಚಿದ ಸಾಲುಗಳಿವು.ಆಗ ತಾನೇ ಹೈದರಾಬಾದಿನಲ್ಲಿ ಡಿಸ್ಕ್ ಪ್ರೋಲ್ಯಾಪ್ಸ್ ಆಗಿ ಬೆನ್ನಿನ ಆಪರೇಶನ್ ಮಾಡಿಸಿಕೊಂಡಿದ್ದೆ.ಬೆನ್ನಿನ ನೋವಿನ ಜೊತೆಗೆ ಆಗಾಗ ಕುತ್ತಿಗೆ ನೋವು,ಮಂಡಿ ನೋವು  ಮತ್ತು ಮೈಗ್ರೈನ್ ತಲೆ ನೋವೂ ಕಾಡುತ್ತಿತ್ತು. ರೋಗಿಗಳ ನೋವನ್ನು ನಿವಾರಿಸುವ ಹೊಡೆದಾಟ ದೊಂದಿಗೆ ನನ್ನ ನೋವುಗಳ ಜೊತೆಯೂ ಹೋರಾಡ ಬೇಕಿತ್ತು!!! ಆಗ ನೋವಿನೊಂದಿಗೆ ಯುದ್ಧ ವಿರಾಮ ಘೋಷಿಸಿ ,ರಾಜೀ ಸೂತ್ರ ಮಾಡಿಕೊಂಡೆ.ಆಗ ಬರೆದ ಪದ್ಯವಿದು .)

Monday, September 9, 2013

"ಸಾರ್ ಒಂದು ಡ್ರಿಪ್ ಹಾಕಿ !!!"

ಈ ತಿಂಗಳ ಕೊನೆಯಲ್ಲಿ ಮೂವತ್ತಾರು ವರ್ಷಗಳ ವೈದ್ಯಕೀಯ ವೃತ್ತಿಯಿಂದ ನಿವೃತ್ತಿ.ವೈದ್ಯರಿಗೆ ನಿವೃತ್ತಿ ಎಂಬುದಿಲ್ಲ 
ಎನ್ನುವ ಮಾತಿದೆ.ಆದರೂ ಸಧ್ಯದ ಸೇವೆಯಿಂದ ತಾತ್ಕಾಲಿಕ ವಿರಾಮ.ನನ್ನ ಸುಧೀರ್ಘ ವೈದ್ಯಕೀಯ ವೃತ್ತಿಯ 
ಅವಧಿಯಲ್ಲಿ ಸುಮಾರು ಔಷಧಿಗಳ ಅಡ್ಡ ಪರಿಣಾಮಗಳನ್ನು ನೋಡಿದ್ದೇನೆ.ಆದ್ದರಿಂದ ಔಷಧಿಗಳನ್ನು
 ಕೊಡುವಾಗ ಅಳೆದು,ತೂಗಿ,ಆದಷ್ಟೂ ಕಡಿಮೆ ಔಷಧಿಗಳನ್ನು ಕೊಡುವ ಪರಿಪಾಠ ನನ್ನದು.ಈಗೀಗ 
ಕೆಲವರು ಔಷಧವನ್ನೇ ಆಹಾರದಂತೆ ತಿನ್ನುವುದನ್ನು ನೋಡಿ ಗಾಭರಿಯಾಗುತ್ತದೆ.ಅವಶ್ಯಕತೆ ಇಲ್ಲದ 
ಔಷಧಿಗಳನ್ನು ತಾವೇ ಖರೀದಿಸಿ ತಿನ್ನುವ ಕೆಲವರನ್ನು ಕಂಡಿದ್ದೇನೆ. ಮಾತೆತ್ತಿದರೆ ಚುಚ್ಚುಮದ್ದಿಗಾಗಿಯೋ,
ಡ್ರಿಪ್ಸ್ ಗಾಗಿಯೋ ವೈದ್ಯರ ಮೇಲೇ ಒತ್ತಡ ಹೇರುವ ಜನರೂ ಉಂಟು.ಇದರ ಮೇಲೆ,ಇಂಟರ್ನೆಟ್
 ನೋಡಿ ಅರ್ಧಂಭರ್ಧ ಜ್ಞಾನ ಪಡೆದು ಎಲ್ಲವೂ ತಿಳಿದಿರುವಂತೆ ಸ್ವಯಂ ವೈದ್ಯಕೀಯ 
ಮಾಡಿಕೊಳ್ಳುವವರೂ ಕಮ್ಮಿ ಇಲ್ಲ.ಇದನ್ನೆಲ್ಲಾ ನೋಡಿದರೆ ನಮ್ಮ ವೈದ್ಯಕೀಯ ಕ್ಷೇತ್ರ ಎತ್ತ 
ಸಾಗುತ್ತಿದೆ ಎಂದು ನೆನೆದು ಆತಂಕವಾಗುತ್ತದೆ . ಮೊನ್ನೆ ಒಬ್ಬ ರೋಗಿ ದೊಡ್ಡದೊಂದು ಕೈಚೀಲ ಹಿಡಿದು 
ಬಂದರು.ಬಂದವರೇ "ಸಾರ್ ಬಿ.ಪಿ.ದು ಅರವತ್ತು ಮಾತ್ರೆ ,ಶುಗರ್ ದು ಅರವತ್ತು ಮಾತ್ರೆ,ಹಾಗೇ
 ಬಿ.ಕಾಂಪ್ಲೆಕ್ಸ್ ಮೂವತ್ತು ಮಾತ್ರೆ ಬರೆದು ಕೊಡಿ"ಎಂದರು."ಸರಿ"ಎಂದು ಅವರ ಕಾರ್ಡಿನಲ್ಲಿ ಅವರು 
ಕೇಳಿದ ಮಾತ್ರೆಗಳನ್ನು ಬರೆದು ಕೊಟ್ಟೆ."ಸಾರ್ ಗ್ಯಾಸಿಂದು ಮೂವತ್ತು ಮಾತ್ರೆ ಮತ್ತು ಗ್ಯಾಸಿನ ಒಂದು
 ಬಾಟಲಿ ಬರೆದು ಕೊಡಿ "ಎಂದರು.ಸರಿ ಅವರು ಕೇಳಿದ್ದನ್ನು ಬರೆದು ಕೊಟ್ಟು ಮತ್ತೇನು 
ಎನ್ನುವಂತೆ ಅವರ ಮುಖ ನೋಡಿದೆ."ಸಾರ್ ನೋವಿನ ಮಾತ್ರೆ ಮೂವತ್ತು,ನೋವಿನ ಟ್ಯೂಬ್ ಎರಡು"
ಎಂದರು.ಹಿಂದೊಮ್ಮೆ "ಇಷ್ಟೆಲ್ಲಾ ಔಷಧಿ ಒಳ್ಳೆಯದಲ್ಲಮ್ಮಾ" ಎಂದದ್ದಕ್ಕೆ ನನಗೆ ಕೇಳುವಂತೆಯೇ
"ಇವರೇನು ತಮ್ಮ ಮನೆಯಿಂದ ಕೊಡ್ತಾರಾ?"ಎಂದು ಸಿಟ್ಟಿನಿಂದ ಗೊಣಗುತ್ತಾ ಹೋಗಿದ್ದರು.
ಆ ಮಾತುಗಳು ನೆನಪಾಗಿ,ಮರು ಮಾತಿಲ್ಲದೇ ಅವರು ಹೇಳಿದ ಔಷಧಿಗಳನ್ನು ಬರೆಯುತ್ತಾ ಹೋದೆ.
ಇಷ್ಟೇನಾ,ಇನ್ನೇನಾದರೂ ಬಾಕಿ ಇದೆಯಾ ಎನ್ನುವಂತೆ ಅವರ ಮುಖ ನೋಡಿದೆ. 
 ಉಹ್ಞೂ ......ಅವರ ಲಿಸ್ಟ್ ಇನ್ನೂ ಮುಗಿದಿರಲಿಲ್ಲ."ಒಂದು ಪ್ರೋಟೀನ್ ಪುಡಿ ಡಬ್ಬ,ಮತ್ತು 
ಮೂವತ್ತು ಕ್ಯಾಲ್ಶಿಯಂ ಮಾತ್ರೆ ಬರೆದು ಕೊಡಿ "ಎಂದರು.ಸರಿ ಅವರು ಇಷ್ಟು ದೊಡ್ಡ ಕೈ ಚೀಲ
 ಏಕೆ ತಂದಿದ್ದಾರೆ ಎನ್ನುವುದು ಅರ್ಥವಾಯಿತು.ಸರಿ ಇನ್ನೇನು ಅವರ ಲಿಸ್ಟ್ ಮುಗಿಯಿತು 
ಎಂದು ಕೊಂಡು ಅವರ ಮೆಡಿಕಲ್ ಕಾರ್ಡ್ ಅನ್ನು ಅವರ ಕೈಗೆ ಕೊಟ್ಟೆ. ಅವರಿಗೆ ಇನ್ನೂ
 ತೃಪ್ತಿ ಯಾದಂತೆ ಕಾಣಲಿಲ್ಲ."ಸಾರ್ ನೆನ್ನೆಯಿಂದಾ ತುಂಬಾ ಸುಸ್ತು.ಒಂದು ಡ್ರಿಪ್ ಹಾಕ್ತೀರಾ?"
ಎಂದರು. ನನಗೇ ತಲೆ ತಿರುಗಿದಂತಾಗಿ ನಾನೇ ಡ್ರಿಪ್ ಹಾಕಿಸಿಕೊಳ್ಳುವ ಪರಿಸ್ಥಿತಿ
 ಬಂದಿದೆಯೇನೋ ಎನ್ನುವ ಅನುಮಾನ ಬಂತು !!!! ನಮ್ಮಂತಹ ಅಸಹಾಯಕ ವೈದ್ಯರನ್ನು 
ಆ ದೇವರೇ ಕಾಪಾಡಬೇಕು !!!! ಯಾರಿಗೆ ಹೇಳೋಣ ನಮ್ಮ..........ಪ್ರಾಬ್ಲಮ್ಮು !!!!

Thursday, July 18, 2013

" ಹೀಗೊಂದು ಕಸದ ತೊಟ್ಟಿಯ ಕಥೆ !!!"

ಅವನು ಆ ಊರಿಗೇ ಒಬ್ಬ ದೊಡ್ಡ ಶ್ರೀಮಂತ.ಅವನ ಬಳಿ ಬಂಗಲೆ,ಗಾಡಿ,ಆಳು ಕಾಳು,ಸಾಕಷ್ಟು ಹಣ ಎಲ್ಲವೂ ಇವೆ.ಆದರೂ ಅವನನ್ನು ಏನೋ ಒಂದು ಕೊರತೆ ಸದಾ ಕಾಡುತ್ತದೆ.ಇದ್ದಕ್ಕಿದ್ದಂತೆ ಭಾವುಕನಾಗುತ್ತಾನೆ.

 ಊರಿನ ಆ ಒಂದು ರಸ್ತೆ  ಬದಿಯ ಗಬ್ಬು ನಾರುವ ಕಸದ ತೊಟ್ಟಿ ಯೊಂದರ  ಬಳಿ ಆಗಾಗ ಹೊಗುತ್ತಾನೆ.ಅವನ ಕಣ್ಣುಗಳು ಅವನು ಅಲ್ಲಿ ಏನೋ ಕಳೆದು ಕೊಂಡವನಂತೆ ಹುಡುಕುತ್ತವೆ. ಮತ್ತೆ ಸ್ವಲ್ಪ ಸಮಯದ ನಂತರ ಸುಸ್ತಾದವನಂತೆ ಕಾರಿನಲ್ಲಿ ಕುಳಿತು ಮನೆಗೆ ಮರಳುತ್ತಾನೆ.

ಊರಿನವರೆಲ್ಲಾ ಅವನನ್ನು ನೋಡಿ ಅವನಿಗೆಲ್ಲೋ ಸ್ವಲ್ಪ ತಲೆ ಕೆಟ್ಟಿದೆ ಎಂದು ಆಡಿಕೊಳ್ಳುತ್ತಾರೆ. ಅವನು ನನಗೂ ಅಲ್ಪ ಸ್ವಲ್ಪ ಪರಿಚಯ. ಆಗಾಗ ಸಣ್ಣ ಪುಟ್ಟ ಚಿಕಿತ್ಸೆಗೆ ನನ್ನ ಆಸ್ಪತ್ರೆಗೆ ಬರುತ್ತಾನೆ.

ನಾನು ರೋಗಿಗಳ ವೈಯಕ್ತಿಕ ವಿಷಯಗಳಲ್ಲಿ ಹೆಚ್ಚು ತಲೆ ಹಾಕುವುದಿಲ್ಲ. ಆದರೆ ಒಮ್ಮೆ ಅವನೊಬ್ಬನೇ ಇದ್ದಾಗ ಕುತೂಹಲ ಹತ್ತಿಕ್ಕಲಾರದೇ ಅವನನ್ನು "ಆ ಕಸದ ತೊಟ್ಟಿಯಲ್ಲಿ ಏನು ಹುಡುಕುತ್ತೀರಿ? ಏನನ್ನಾದರೂ ಕಳೆದು ಕೊಂಡಿದ್ದೀರಾ ಹೇಗೆ ?"ಎಂದು ಕೇಳಿಯೇ ಬಿಟ್ಟೆ.

ಅವನು ನನ್ನಿಂದ ಈ ಪ್ರಶ್ನೆ ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತೆ.ಸ್ವಲ್ಪ ಹೊತ್ತು ಮೌನದಲ್ಲಿ ಕಳೆದು ಹೋದ. ಸರಿಯಾದ ಪದಗಳಿಗಾಗಿ ತಡಕಾಡುವಂತಿತ್ತು ಅವನ ಚಹರೆ. ನಾನು ಅವನನ್ನು  ಯಾಕಾದರೂ ಈ ಪ್ರಶ್ನೆ ಕೇಳಿದೆನೋ ಎಂದು ಕಸಿವಿಸಿಗೊಂಡೆ.

ನಂತರ ಅವನು ನಿಧಾನವಾಗಿ ತನ್ನ ಕಥೆ ಹೇಳತೊಡಗಿದ. "ಸಾರ್ ಊರಿನ ಜನ ನನ್ನ ಬಗ್ಗೆ ಏನೆಲ್ಲಾ ಆಡಿ ಕೊಳ್ಳುತ್ತಾರೆ ಎನ್ನುವುದು ನನಗೆ ಗೊತ್ತಿದೆ. ನಾನು ಸಣ್ಣವನಾಗಿದ್ದಾಗಲಿಂದಲೂ ನನ್ನನ್ನು ಬೆಳೆಸಿದ್ದು ಗೋವಿಂದಜ್ಜನೇ. ನಾನು ಅಪ್ಪ ಅಮ್ಮನ ಬಗ್ಗೆ ಕೇಳಿದಾಗಲೆಲ್ಲಾ ,ನೀನು ಸಣ್ಣವನಿದ್ದಾಗಲೇ ನಿನ್ನ ಅಪ್ಪ ಅಮ್ಮ ತೀರಿಕೊಂಡರು ಎನ್ನುತ್ತಿದ್ದ. ಅಜ್ಜ ಸಾಯುವುದಕ್ಕೆ ಸ್ವಲ್ಪ ದಿನ ಮುಂಚೆ ,ನನ್ನ ಅಪ್ಪ ಅಮ್ಮ ಯಾರೆಂದು ತನಗೆ ಗೊತ್ತಿಲ್ಲವೆಂದೂ,ನಾನು ತೊಟ್ಟಿಯಲ್ಲಿ ಸಿಕ್ಕ ಹಸುಗೂಸೆಂದೂ,ಅಳುವಿನ ಶಬ್ದ ಕೇಳಿ ತಾನು ಎತ್ತಿಕೊಂಡು ಬಂದು ಸಾಕಿದುದಾಗಿಯೂ ನಿಜ ಹೇಳಿದ.

ನನಗೆ ಆಗಾಗ ನನ್ನ ಅಮ್ಮನ ನೆನಪಾಗುತ್ತದೆ ಸರ್.ಪಾಪ ಏನು ಕಷ್ಟದಲ್ಲಿ ಇದ್ದಳೋ,ನನ್ನನ್ನು ತೊಟ್ಟಿಯಲ್ಲಿ ಬಿಟ್ಟು ಹೋಗುವಾಗ ಎಂತಹ ಸಂಕಟ ಅನುಭವಿಸಿದಳೋ.ನೆನೆಸಿಕೊಂಡರೆ  ಬಹಳ ನೋವಾಗುತ್ತೆ ಸರ್.ಅಮ್ಮನ  ನೆನಪಾದಗಲೆಲ್ಲಾ ಆ ತೊಟ್ಟಿಯ ಬಳಿ ಹೋಗುತ್ತೀನಿ ಸರ್"ಎಂದು ಮಾತು ಮುಗಿಸಿದ.ಅವನು ಅತ್ತು ಎದೆ ಹಗುರ ಮಾಡಿ ಕೊಂಡ.ನನ್ನ ಎದೆ  ಭಾರವಾಗಿತ್ತು !!!

ಆಧಾರ:"ಕಥೆಗಳಲ್ಲದ ಕಥೆಗಳು"ಪುಸ್ತಕದ ಒಂದು ಕಥೆ.

Sunday, July 7, 2013

"ಅಂತರಂಗದಲ್ಲೊಂದು.... ಕುರುಕ್ಷೇತ್ರ !!!!"

ನೆನ್ನೆ ಶನಿವಾರ ದಿನಾಂಕ ೬.೭.೨೦೧೩ ರರ "ಪ್ರಜಾವಾಣಿ"ದಿನಪತ್ರಿಕೆಯ "ಭೂಮಿಕಾ" ಪುರವಣಿಯಲ್ಲಿ ,ಎರಡು ಒಳ್ಳೆಯ ಲೇಖನಗಳಿವೆ.ಮೊದಲನೆಯದು ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ವಿ.ಬಾಲಕೃಷ್ಣನ್ ರವರ "ಆಧುನಿಕ ಕುರುಕ್ಷೇತ್ರ".
ಈ ಲೇಖನದಲ್ಲಿ ಲೇಖಕರು ವ್ಯಕ್ತಿಯ ಮನಸ್ಸಿನಲ್ಲಿ ಪ್ರತಿಕ್ಷಣವೂ ನಡೆಯುವ ಮಾನಸಿಕ ತುಮುಲಗಳ ಬಗ್ಗೆ ಬಹಳ ಸರಳವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಎರಡನೇ ಲೇಖನ ಭರತ್ ಮತ್ತು ಶಾಲನ್ ಸವೂರ್ ರವರ "ಸಂಘರ್ಷ ನಿವಾರಿಸಿ"ಎನ್ನುವ ಲೇಖನ.ಅಚ್ಚರಿ ಎಂದರೆ ಇದೂ ಕೂಡ ಮನಸ್ಸಿನಲ್ಲಿ ನಡೆಯುವ ಆಂತರಿಕ ಸಂಘರ್ಷದ ಬಗ್ಗೆಯೇ !! ಡಬಲ್ ಧಮಾಕ .....!!! ಒಂದೇ ಸಲಕ್ಕೆ ಎರಡು ಸುಂದರ ವ್ಯಕ್ತಿತ್ವ ವಿಕಸನ ಲೇಖನಗಳು!!!! ಎರಡನೇ ಲೇಖನದ ಆಯ್ದ ಕೆಲ ಭಾಗಗಳು ಇಂತಿವೆ.ಪೂರ್ಣ ಮೂಲ ಲೇಖನ ಓದುವುದು ಹೆಚ್ಚು ಲಾಭಕರ ಎಂದು ನನ್ನ ಅನಿಸಿಕೆ.

ಸಾಮಾನ್ಯವಾಗಿ ಯಾವುದೇ ಸಂಘರ್ಷವನ್ನು ನಾವು ಬಾಹ್ಯದಲ್ಲಿ ಪರಿಹರಿಸಿಕೊಳ್ಳಲು ಯತ್ನಿಸುತ್ತೇವೆ.ನಮಗೂ ಮತ್ತೊಬ್ಬರಿಗೂ ಸಂಘರ್ಷವಾದಾಗ ಎಲ್ಲವನ್ನೂ  ನಮ್ಮ ಅಹಂಕಾರದ ಕನ್ನಡಕದ ಮೂಲಕವೇ ನೋಡುತ್ತೇವೆ .ನಾನೇ ಸರಿ ಎಂದು ವಾದಿಸುತ್ತೇವೆ.ನಮ್ಮದೇ ತಪ್ಪಿದ್ದರೂ ಒಪ್ಪಿ ಕೊಳ್ಳಲು ನಾವು ಸಿದ್ಧರಿರುವುದಿಲ್ಲ.ಅಕಸ್ಮಾತ್ತಾಗಿ ಕ್ಷಮೆ ಕೇಳುವ ಸಂದರ್ಭ ಬಂದರೂ ಕಾಟಾಚಾರಕ್ಕೆ ಒಲ್ಲದ ಮನಸ್ಸಿನಿನಿಂದ ಚುಟುಕಾಗಿ ಕ್ಷಮೆ ಕೇಳುತ್ತೇವೆ! ಮುಖದ ಮೇಲೆ ಒಂದು ಔಪಚಾರಿಕ ನಗು ತಂದು ಕೊಳ್ಳು ತ್ತೇವೆ !!!ಅಂತಿಮವಾಗಿ ಯಾರೂ ಸಂತಸದಿಂದ ಇರುವುದಿಲ್ಲ !!!ಮನಸ್ಸಿನಲ್ಲಿ ಅತೃಪ್ತಿ ಕುದಿಯುತ್ತಿರುತ್ತದೆ.
ಹೃದಯದಲ್ಲಿ ಕಹಿ ಉಳಿದುಬಿಡುತ್ತದೆ.

ನಿಜವಾದ ಸಂಘರ್ಷ ಪ್ರತಿ ವ್ಯಕ್ತಿಯ ಅಂತರಂಗದಲ್ಲಿಯೇ ನಡೆಯುತ್ತಿರುತ್ತದೆ.ಆಗಿದ್ದನ್ನು ಒಪ್ಪಿಕೊಳ್ಳಲು ಮನಸ್ಸು ತಯಾರಿರುವುದಿಲ್ಲ!ನಮ್ಮ ಅಹಂಕಾರ ,ತಾನು ಎಣಿಸಿದಂತೆಯೇ ಎಲ್ಲವೂ ನಡೆಯಬೇಕು ಎನ್ನುವ  ಅತೃಪ್ತಿಯನ್ನು ಹುಟ್ಟು ಹಾಕುತ್ತದೆ.ಅಂತರಂಗದ ಅಸಮಾಧಾನ,ಸಿಡುಕು,ನಾನಾ ರೋಗಗಳಿಗೆ ಮೂಲ ಕಾರಣ.ಪ್ರತಿ ವ್ಯಕ್ತಿಯೂ ತನ್ನ ಮನಸ್ಸಿನಿಂದ ಮತ್ತು ಹೃದಯದಿಂದ ಸಿಡುಕನ್ನು ತೆಗೆದು ಹಾಕಿ ಆ ಜಾಗದಲ್ಲಿ ಸದಾ ಶಾಂತಿ ,ಸಮಾಧಾನ,ತಾಳ್ಮೆ ,ನೆಮ್ಮದಿ ನೆಲಸುವಂತೆ ಮಾಡಬೇಕು.ದಿನ ನಿತ್ಯದ ಧ್ಯಾನ ,ಪ್ರಾಣಾಯಾಮ,ಇದಕ್ಕೆ ಸೂಕ್ತ ಮದ್ದು.ಮನಸ್ಸ್ಸಿನ ಆರೋಗ್ಯ ದೇಹದ ಆರೋಗ್ಯಕ್ಕೆ ಮೂಲ ಕಾರಣ.ಹಾಗಾಗಿ ನಿಮ್ಮ ಆಂತರಿಕ ಸಂಘರ್ಶಗಳನ್ನು ಮೊದಲು ನಿವಾರಿಸಿಕೊಂಡು ,ನಿಮ್ಮ ಮನಸ್ಸನ್ನು ಚೆನ್ನಾಗಿ ನೋಡಿಕೊಳ್ಳಿ.ನಮಸ್ಕಾರ.

Tuesday, July 2, 2013

"ಸಂಸಾರ !!!! ಗಡಿಯಾರ !!!!"


ನಮ್ಮ ಸಂಸಾರ ..........,
ಎದುರಿನ ಗೋಡೆಯ ಮೇಲಿನ
ಗಡಿಯಾರ.............,
ಎರಡಕ್ಕೂ ಎಷ್ಟೊಂದು ಸಾಮ್ಯ!
ನನ್ನ ಹೆಂಡತಿ.............,
ಶಿಸ್ತಿನ ಸಿಪಾಯಿ !
ಸೆಕೆಂಡಿನ ಮುಳ್ಳಿನ ಹಾಗೆ
ಸಪೂರ.........!
ಮೂಗಿಗೆ ಕವಡೆ ಕಟ್ಟಿಕೊಂಡ
ಗಾಣದೆತ್ತಿನ ದುಡಿತ !
ಅವಳ ನಿರಂತರ
ಪ್ರೀತಿಯ ತುಡಿತವೇ
ನಮ್ಮ ಸಂಸಾರದ
ನಾಡಿಯ ಮಿಡಿತ !
ಮಕ್ಕಳೋ ..........,
ನಿಮಿಷದ ಮುಳ್ಳುಗಳಂತೆ !
ನಿಮಿಷಕ್ಕೊಂದು ರೀತಿ !
ಗಂಟೆಗೆ ಅರವತ್ತರ
ಅವಸರದ ಓಟ !
ಇನ್ನು,ಅರವತ್ತರದ ಸನಿಹದ
ನಾನೋ.................!
ಗಂಟೆಯ ಮುಳ್ಳು !
ಧಡಿಯ !ನಿಧಾನಿ!
ಮನೆಯ ಪ್ರಧಾನಿ (?) !
ಗಂಟೆಗೊಮ್ಮೆ ಕದಲಿಕೆ!
ಮನೆಯೊಡತಿಯಿಂದ
'ಎಷ್ಟು ಸ್ಲೋ', ಎಂಬ ಸಣ್ಣದೊಂದು ಮೂದಲಿಕೆ!
ಪ್ರೀತಿಯ ಬ್ಯಾಟರಿ ಮುಗಿದಾಗ
ಮನೆಯಲ್ಲಿ ಹಠಾತ್ ಮುಷ್ಕರ!
ಸ್ವಲ್ಪ ಕಾಲ ...........,
ಎಲ್ಲವೂ ,ಎಲ್ಲರೂ ಸ್ತಬ್ಧ!
ಮತ್ತೆ ಪ್ರೀತಿಯ ಹೊಸ ಚೈತನ್ಯ
ಮರು ಚಾಲನೆ ನೀಡುವ ತನಕ!!
ಮತ್ತದೇ ಓಟದ ಮಾಟ !!!

Saturday, June 29, 2013

"ಸಾಮಾನ್ಯನೊಬ್ಬನ ಅಸಾಮಾನ್ಯ ಸಾಹಸ ಗಾಥೆ !!!! "

ಅವನ ಹೆಸರು ದಶರಥ್ ಮಾಂಜಿ.ಅವನೊಬ್ಬ ಸಾಧಾರಣ ಅನಕ್ಷರಸ್ಥ ,ಹಿಂದುಳಿದ ವರ್ಗದ ಕೂಲಿ ಕಾರ್ಮಿಕ.ಆದರೆ ಅವನು ಸಾಧಿಸಿದ ಕೆಲಸ ಅದ್ಭತ ಮತ್ತು ಅಸಾಧಾರಣ!!!! ನಮ್ಮ ದೇಶದಲ್ಲೇ ಏಕೆ ,ಪ್ರಪಂಚದಲ್ಲೇ ಅಂತಹ ದಾಖಲೆಯನ್ನು ಯಾರೂ ಸಾಧಿಸಿಲ್ಲ.ಅವನ ಸಾಧನೆಯನ್ನು ಶಹಜಾನ್  ತಾಜ್ ಮಹಲ್ ಕಟ್ಟಿದ ಸಾಧನೆಗಿಂತ ಹಿರಿದಾದ ಸಾಧನೆ ಎನ್ನುವವರಿದ್ದಾರೆ.

ದಶರಥ್ ಮಾಂಜಿಯ ಊರು ಬಿಹಾರದ ಗಯಾ ಜಿಲ್ಲೆಯ ಅತೀ ಹಿಂದುಳಿದ ಹಳ್ಳಿ ಘೆಲೋರ್ .ಹಳ್ಳಿಯಲ್ಲಿ ವೈದ್ಯಕೀಯ ಸೌಲಭ್ಯವಾಗಲೀ ಅಥವಾ ಇನ್ನಿತರ ಯಾವುದೇ ಸೌಲಭ್ಯವಾಗಲೀ ಇರಲಿಲ್ಲ.ಹಳ್ಳಿಯ ಮುಂದೆ ದೊಡ್ಡ ಕಲ್ಲಿನ ಬೆಟ್ಟವೊಂದು ಇವರ ಎಲ್ಲಾ ಸೌಕರ್ಯಗಳಿಗೂ ಅಡ್ಡಿಯಾಗಿತ್ತು.ಹತ್ತಿರದ ಊರು ವಜೀರ್ ಗಂಜ್ ಗೆ ಹೋಗಲು ಬೆಟ್ಟವನ್ನು ಬಳಸಿಕೊಂಡು ಎಪ್ಪತ್ತು ಕಿಲೋಮೀಟರ್ ದಾರಿ ಕ್ರಮಿಸ ಬೇಕಾಗಿತ್ತು.

ಒಂದು ಬಾರಿ ದಶರಥ್ ಮಾಂಜಿಯ ಹೆಂಡತಿಗೆ ತೀವ್ರ ಅನಾರೋಗ್ಯವಾಗಿ ,ಸಮಯಕ್ಕೆ ಸರಿಯಾಗಿ ಅವಳಿಗೆ ವೈದ್ಯಕೀಯ ಸೌಲಭ್ಯ ಕೊಡಿಸಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸಬೇಕಾಯಿತು.ಹೆಂಡತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ದಶರಥ್ ಮಾಂಜಿಯ ಮೇಲೆ ಈ ಘಟನೆ ಬಹಳ ಆಘಾತಕಾರಿ ಪರಿಣಾಮ ಬೀರಿತು.ಆ ರಾತ್ರಿಯೇ ದಶರಥ್ ಮಾಂಜಿ ಒಂದು ನಿರ್ಧಾರಕ್ಕೆ ಬಂದ.ತನ್ನ ಬಳಿ ಇದ್ದ ಆಡುಗಳನ್ನು ಮಾರಿ ,ಬೆಟ್ಟ ಕಡಿಯುವ ಸಲಕರಣೆಗಳಾದ ,ಸುತ್ತಿಗೆ,ಉಳಿ,ಪಿಕಾಸಿ,
ಹಾರೆ,ಸಲಿಕೆ ಮುಂತಾದುವುಗಳನ್ನು ಖರೀದಿ ಮಾಡಿದ.

ಮಾರನೇ ದಿನದಿಂದಲೇ ಬೆಟ್ಟ ಕಡಿದು ದಾರಿ ಮಾಡುವ ಕೆಲಸವನ್ನು ಒಬ್ಬನೇ ಶುರು ಮಾಡಿದ.ಇದು ಸುಮಾರು 1960 ರ  ಶುರು.ಇವನ ಕೆಲಸವನ್ನೂ,ಇವನ ಮಾತನ್ನೂ ಕೇಳಿ ಊರಿನ ಜನ ಇವನನ್ನು ಹುಚ್ಚನೆಂದರು."ಒಬ್ಬನೇ ಬೆಟ್ಟ ಕಡಿಯಲು ಸಾಧ್ಯವೇ?"ಎಂದು ನಕ್ಕರು,ಅಪಹಾಸ್ಯ ಮಾಡಿದರು.ಆದರೆ ಇದು ಯಾವುದರಿಂದಲೂ ದಶರಥ್ ವಿಚಲಿತ ನಾಗಲಿಲ್ಲ.ಅವನ ನಿರ್ಧಾರ ಅಚಲವಾಗಿತ್ತು. ಹಗಲು ರಾತ್ರಿ ಎನ್ನದೇ ಕಲ್ಲಿನ ಬೆಟ್ಟ ಕಡಿದು ರಸ್ತೆ ಮಾಡುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ.ಊರು ಬಿಟ್ಟು ಬೆಟ್ಟದ ಬಳಿಯೇ ಒಂದು ಗುಡಿಸಿಲು ಕಟ್ಟಿಕೊಂಡ.ಬರ ಬರುತ್ತಾ ಜನಕ್ಕೆ ಅವನ ಮಹಾನ್ ಕಾರ್ಯದ ಅರಿವಾಗಿ ಅವನಿಗೆ ನೀರು,ಆಹಾರ ತಂದು ಕೊಡುವ ಸಣ್ಣ ಪುಟ್ಟ ಸಹಾಯ ಮಾಡ ತೊಡಗಿದರು. ಸತತ ಇಪ್ಪತ್ತೆರಡು ವರ್ಷ ಏಕಾಂಗಿಯಾಗಿ ಕೆಲಸಮಾಡಿದ ದಶರಥ್ ಮಾಂಜಿ ,1982 ರಲ್ಲಿ ತನ್ನ ಮಹಾನ್ ಕಾರ್ಯದಲ್ಲಿ ಸಫಲನಾಗಿದ್ದ.ಆ ಕಲ್ಲಿನ ಬೆಟ್ಟದಲ್ಲಿ ಒಂದು ಕಿಲೋಮೀಟರ್ ಉದ್ದದ ,ಮೂವತ್ತು ಅಡಿ ಅಗಲದ ,ಇಪ್ಪತ್ತೈದು ಅಡಿ ಎತ್ತರದ ರಸ್ತೆ ನಿರ್ಮಾಣವಾಗಿತ್ತು.ಹತ್ತಿರದ ಊರು ವಜೀರ್ ಗಂಜಿನ ಎಪ್ಪತ್ತು ಕಿಲೋಮೀಟರ್ ದಾರಿ ಬರೀ ಏಳು ಕಿಲೋ ಮೀಟರ್ ಗೆ ಇಳಿದಿತ್ತು.ಆದರೆ ಅವನ ಈ ಮಹಾನ್ ಸಾಧನೆಯನ್ನು ಕಾಣಲು ಅವನ ಹೆಂಡತಿ ಫಾಗುಣೆ ದೇವಿ ಬದುಕಿರಲಿಲ್ಲ.

ನಂತರ ಬಿಹಾರ್ ಸರ್ಕಾರ ಅವನನ್ನು ಸನ್ಮಾನಿಸಿತು.ಇಂತಹ ,ಯಾರೂ  ಕಂಡು ,ಕೇಳಿರದ,ಸಾಹಸವನ್ನು ಏಕಾಂಗಿಯಾಗಿ ಮಾಡಿದ ದಶರಥ್ ಮಾಂಜಿ ಆಗಸ್ಟ್ 17,2007 ರಲ್ಲಿ ತೀರಿಕೊಂಡ.ಹೆಂಡತಿಯ ಮೇಲಿನ ಅಪ್ರತಿಮ ಪ್ರೀತಿ ಕಲ್ಲಿನ ಬೆಟ್ಟದಲ್ಲಿಯೇ ಒಂದು ದಾರಿ ನಿರ್ಮಿಸಿ ,ಜಗತ್ತೇ ವಿಸ್ಮಯ ಪಡುವಂತೆ ಮಾಡಿದೆ.ದಶರಥ್ ಮಾಂಜಿಯ ಕಥೆಯನ್ನು  ಹಲವಾರು ನಿರ್ಮಾಪಕರು ಸಿನಿಮಾ ತಯಾರಿಸಿದ್ದಾರೆ.ಅವನ ಹೆಸರಿನಲ್ಲಿ ಅವನ ಹಳ್ಳಿಯಲ್ಲೊಂದು ಆಸ್ಪತ್ರೆಯಾಗಿದೆ.ಈಗ ಆ ರಸ್ತೆಯಲ್ಲಿ ಹಲವಾರು ವಾಹನ ಗಳು ಓಡಾಡುತ್ತವೆ.ಈಗ ಆ ಹಳ್ಳಿಯ ಜನ 'ಬಾಬ'ದಶರಥ್ ಮಾಂಜಿಯನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಾರೆ. ನಿಜಕ್ಕೂ ದಶರಥ್ ಮಾಂಜಿಯದು ಒಂದು ಸಾರ್ಥಕ ಜೀವನವಲ್ಲವೇ!!!? ಸಣ್ಣ ಪುಟ್ಟ ಸವಾಲಿಗೂ ಎದೆ ಗುಂದುವ ನಮ್ಮಂತಹ ಸಾಮಾನ್ಯರಿಗೆ ದಶರಥ್ ಮಾಂಜಿ ಆದರ್ಶ ಪ್ರಾಯನಾಗಿದ್ದಾನೆ!!! ನಮಸ್ಕಾರ.

Thursday, June 27, 2013

"ಚಾಕೊಲೇಟ್ ಕೋನ್ ಐಸ್ ಕ್ರೀಂ ಕಥೆ !!!!"

ಅವನೊಬ್ಬ ಸುಮಾರು ಹದಿನಾಲಕ್ಕು ವರ್ಷದ ಕೂಲಿ ಹುಡುಗ. ಅವನಿಗೆ ಬಹಳ ದಿನಗಳಿಂದ 'ಚಾಕೊಲೇಟ್ ಕೋನ್ ಐಸ್ ಕ್ರೀಂ' ತಿನ್ನ ಬೇಕೆಂಬ ಆಸೆ ಇತ್ತು. ಒಂದುದಿನ ತನ್ನ ಬಳಿ  ಕೂಡಿಟ್ಟಿದ್ದ ಚಿಲ್ಲರೆ ಹಣವನ್ನೆಲ್ಲಾ ಸೇರಿಸಿ, ತಾನು ದಿನವೂ ಹಾದು  ಹೋಗುತ್ತಿದ್ದ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ಹೋಗಿ ಕುಳಿತ. ಅವನು  ಅಂತಹ ಹೋಟೆಲ್ ಗೆ ಹೋಗಿದ್ದು ಅದೇ ಮೊದಲನೇ ಸಲವಾದ್ದರಿಂದ ಸ್ವಲ್ಪ ಗಾಭರಿ ಗೊಂಡಿದ್ದ. ಹಣೆಯಲ್ಲಿ ಬೆವರಿತ್ತು.ಅವನು ಹಾಕಿಕೊಂಡಿದ್ದ  ಕೊಳಕು ಬಟ್ಟೆಅಲ್ಲಲ್ಲಿ ಹರಿದಿತ್ತು.


ಸಮವಸ್ತ್ರ ಧರಿಸಿದ್ದ ವೇಯ್ಟರ್  ಬಂದು ಟೇಬಲ್ ಮೇಲೆ ಒಂದು ನೀರಿನ ಲೋಟ ಕುಕ್ಕಿ ,ಆ ಕೂಲಿ ಹುಡುಗನನ್ನು ಇವನು ಇಲ್ಲಿ ಯಾಕೆ ಬಂದ ಎನ್ನುವಂತೆ ಕೆಕ್ಕರಿಸಿ ನೋಡಿ,"ಏನೋ.... ,ಏನು ಬೇಕು ?"ಎಂದು ಒರಟು ದನಿಯಲ್ಲಿ ಕೇಳಿದ. ಅದಕ್ಕೆ ಆ ಹುಡುಗ "ಅಂಕಲ್ ನನಗೆ ಚಾಕೊಲೇಟ್ ಕೋನ್ ಐಸ್ ಕ್ರೀಂ  ತಿನ್ನ ಬೇಕು ಅಂತ ಆಸೆ. ಅದನ್ನು ಕೊಡಿ ಅಂಕಲ್"ಎಂದ. ವೇಯ್ಟರ್ "ಅದಕ್ಕೆ ಇಪ್ಪತ್ತೈದು ರೂಪಾಯಿ. ಅಷ್ಟು ಹಣ ನಿನ್ನ ಹತ್ತಿರ ಇದೆಯಾ?"ಎಂದ. ಹುಡುಗ ತಾನು ತಂದಿದ್ದ ಚಿಲ್ಲರೆ ಹಣವನ್ನು ಟೇಬಲ್ ಟೇಬಲ್ ಮೇಲೆ ಹಾಕಿ ಎಣಿಸ ತೊಡಗಿದ. "ವೇಯ್ಟರ್ ಸಿಟ್ಟಿನಿಂದ "ಹಣ ಇಲ್ಲದಿದ್ದರೆ ಇಲಿಗ್ಯಾಕೆ ಬರಬೇಕು"ಎಂದು ಗೊಣಗುತ್ತಾ ಇನ್ನೊಂದು ಟೇಬಲ್ ಗೆ ಹೊದ. ಸ್ವಲ್ಪ ಹೊತ್ತಿನ ನಂತರ ಹುಡುಗನ ಬಳಿ  ಬಂದು ಏನು ಎನ್ನುವಂತೆ ನೋಡಿದ. ಹುಡುಗ ವೇಯ್ಟರ್ ನನ್ನು ನೋಡುತ್ತಾ "ಅಂಕಲ್,ನನ್ನ ಹತ್ತಿರ ಇಪ್ಪತ್ತೈದು ರೂಪಾಯಿ ಇಲ್ಲ. ಇಪ್ಪತ್ತು ರೂಪಾಯಿಗೆ ಯಾವುದಾದರೂ ಐಸ್  ಕ್ರೀಂ ತಂದು ಕೊಡಿ" ಎಂದ. ವೇಯ್ಟರ್ ಮತ್ತೆ ಸಿಟ್ಟಿನಿಂದ ಏನೋ ಗೊಣಗಿಕೊಂಡು ಹೋಗಿ ಕಪ್ ಐಸ್ ಕ್ರೀಂ ಒಂದನ್ನು ತಂದಿಟ್ಟು ಹೊದ.

ಹುಡುಗ ಐಸ್ ಕ್ರೀಂ  ತಿಂದು ವೇಯ್ಟರ್  ತಂದಿಟ್ಟ ಬಿಲ್ಲಿನ ಜೊತೆ ಹಣ ಇಟ್ಟು  ಹೊರಗೆ  ಹೋದ . ವೇಯ್ಟರ್ ಬಿಲ್ಲಿನ ಹಣ ತೆಗೆದು ಕೊಳ್ಳಲು ಬಂದವನು ಅವಾಕ್ಕಾಗಿ ನಿಂತ. ಅಲ್ಲಿ ಬಿಲ್ಲಿನ ಹಣ ಇಪ್ಪತ್ತು ರೂಪಾಯಿಯ ಜೊತೆಗೆ,ವೇಯ್ಟರ್ ಗೆಂದು ಐದು ರೂಪಾಯಿ ಟಿಪ್ಸ್ ಅನ್ನೂ ಸೇರಿಸಿ ಇಪ್ಪತ್ತೈದು ರೂಪಾಯಿ ಇಟ್ಟಿದ್ದ ಹುಡುಗ !!! ವೇಯ್ಟರ್ ಗೆ ತಾನು  ಹುಡುಗ ನೊಡನೆ ಒರಟಾಗಿ  ನಡೆದು ಕೊಂಡ ರೀತಿಯ   ಬಗ್ಗೆ ತುಂಬಾ ಪಶ್ಚಾತ್ತಾಪ ವಾಗಿತ್ತು. ತನಗೆ ಅರಿವಿಲ್ಲದಂತೆ ಅವನ ಕಣ್ಣುಗಳಲ್ಲಿ ನೀರಿತ್ತು!!!!

ಇದರಲ್ಲಿ ನಮ್ಮೆಲ್ಲರಿಗೂ ಒಂದು ಪಾಠವಿದೆ ಅಲ್ಲವೇ? ನಾವು ಬಾಹ್ಯ ರೂಪಕ್ಕೆ ಬೆಲೆ ಕೊಡದೆ ಆಂತರಿಕ ಸೌಂದರ್ಯಕ್ಕೆ ಬೆಲೆ ಕೊಡ ಬೇಕಲ್ಲವೇ ? ಎಲ್ಲರಿಗೂ ನಮಸ್ಕಾರ.

Wednesday, June 26, 2013

" ಹೀಗೊಂದು ಅದ್ಭುತ ಝೆನ್ ಕಥೆ !!!!"

ಹೀಗೊಂದು ಝೆನ್ ಕಥೆ.ಗುರು ಮತ್ತು ಶಿಷ್ಯರಿಬ್ಬರೂ ಒಂದು ಮುಂಜಾನೆ,ತುಂಬಿ ಹರಿಯುತ್ತಿದ್ದ ಹೊಳೆಯೊಂದನ್ನು ದಾಟಲು ಶುರು ಮಾಡಿದರು. ಸುಂದರ ಯುವತಿಯೊಬ್ಬಳು ಶಿಷ್ಯನನ್ನು,ಹೊಳೆಯನ್ನು ದಾಟಲು ತನಗೆ ಸಹಾಯ ಮಾಡುವಂತೆ ಕೋರಿದಳು. ಶಿಷ್ಯ  ತಾವು ಸನ್ಯಾಸಿಗಳು ಹೆಂಗಸರನ್ನು ಮುಟ್ಟುವಂತಿಲ್ಲವೆಂದೂ,ಸಹಾಯ ಮಾಡಲು ಸಾಧ್ಯವಿಲ್ಲವೆಂದು ಹೇಳಿ ಮುಂದೆ ನಡೆದ. ನಂತರ ಯುವತಿ ಗುರುವಿನ ಸಹಾಯವನ್ನು ಯಾಚಿಸಿದಳು.

 ಗುರು ಒಂದು  ಮಾತನ್ನೂ ಆಡದೆ ಆ ಯುವತಿಯನ್ನು ಎತ್ತಿಕೊಂಡು ಹೊಳೆಯನ್ನು ದಾಟಿಸಿ ಆಚೆ ದಡದಲ್ಲಿ ಬಿಟ್ಟು ,ತನ್ನ  ಶಿಷ್ಯ ನೊಡನೆ ಪ್ರಯಾಣ ವನ್ನು  ಮುಂದುವರಿಸಿದ. ಸಂಜೆ ಗುರು ಶಿಷ್ಯರಿಬ್ಬರೂ ಆಶ್ರಮ ಒಂದರಲ್ಲಿ ತಂಗಿದರು. ಶಿಷ್ಯ ಸಿಟ್ಟಿನಿಂದ ಗುರುವನ್ನು "ನೀವು ಮಾಡಿದ್ದು ತಪ್ಪಲ್ಲವೇ?" ಎಂದು ಪ್ರಶ್ನಿಸಿದ. ಗುರುವಿಗೆ ಶಿಷ್ಯನ ಸಿಟ್ಟಿನ ಕಾರಣ ಅರ್ಥವಾಗದೇ ,ಮುಗ್ಧತೆಯಿಂದ"ನಾನೇನು ತಪ್ಪು ಮಾಡಿದೆ?"ಎಂದು ಕೇಳಿದ.

ಅದಕ್ಕೆ ಶಿಷ್ಯ "ನೀವು ಬೆಳಿಗ್ಗೆ ಆ ಹೆಂಗಸನ್ನು ಮುಟ್ಟಿದ್ದು ತಪ್ಪಲ್ಲವೆ?ನಾವು ಸನ್ಯಾಸಿಗಳು ಹೆಂಗಸರನ್ನು ಮುಟ್ಟಬಹುದೇ?" ಎಂದು ಸಿಟ್ಟಿನಿಂದ ಕೇಳಿದ. ಅದನ್ನು ಕೇಳಿ ಗುರು ಗಹ ಗಹಿಸಿ ನಕ್ಕು, ಶಿಷ್ಯನನ್ನು ಉದ್ದೇಶಿಸಿ, "ಅಲ್ಲಪ್ಪಾ ಶಿಷ್ಯ ..... ,ನಾನು ಆ ಹೆಂಗಸನ್ನು ಬೆಳಿಗ್ಗೆಯೇ ಆಚೆ ದಡ ದಲ್ಲಿ ಇಳಿಸಿ ಮರೆತು ಬಿಟ್ಟೆ. ಆದರೆ ನೀನು ಅವಳನ್ನು ನಿನ್ನ ಮನಸ್ಸಿನಲ್ಲಿ ಇನ್ನೂ ಹೊತ್ತು ತಿರುಗುತ್ತಿದ್ದೀ ಯಲ್ಲಾ  !!!!"ಎಂದು ಮತ್ತೆ ನಗತೊಡಗಿದ.

ನಾವೆಲ್ಲರೂ ಆ ಶಿಷ್ಯನಂತೆಯೇ ಅಲ್ಲವೇ ?ಎಂದೋ ನಡೆದ ವಿಷಯಗಳ ಭಾರವನ್ನು ಮನಸ್ಸಿನಲ್ಲಿ  ಅನಾವಶ್ಯವಾಗಿ ಹೊತ್ತು ತಿರುಗುತ್ತಿಲ್ಲವೇ? ಈ ಕಥೆಯಲ್ಲಿ ನಮಗೆಲ್ಲಾ ಒಂದು ಅದ್ಭುತ ಪಾಠವಿದೆ ಎಂದು ಅನಿಸಿದ್ದಿರಿಂದ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.ನಮಸ್ಕಾರ.

Sunday, June 23, 2013

"ಮಾನಸಿಕ ನೆಮ್ಮದಿಗೆ 'ಕ್ಷಾಂತಿ' ಎನ್ನುವ ಮದ್ದು !!!! "

ನೆಮ್ಮದಿಯಾಗಿ ಬದುಕಲಿಕ್ಕೆ ಏನು ಬೇಕು?ನಮ್ಮಲ್ಲಿ ಬಹಳಷ್ಟು ಜನ ಯಾಕೆ ಅಶಾಂತಿಯಿಂದ ,ಅದರಿಂದ ಉಂಟಾಗುವ ದೈಹಿಕ ತೊಂದರೆಗಳಿಂದ ಜೀವನವಿಡೀ ಕಳೆಯುತ್ತೇವೆ?ನೆಮ್ಮದಿ ಅನ್ನುವುದು ಮನಸ್ಸಿಗೆ ಸಂಭಂದಿಸಿದ ಸಂಗತಿ ಎನ್ನುವುದು ಸರಳ ತಿಳಿವಳಿಕೆ. ಹಾಗಿದ್ದೂ ನಮ್ಮ ಆದ್ಯತೆ ದೈಹಿಕ ಅಗತ್ಯಗಳ ಪೂರೈಕೆಯತ್ತಲೇ ಇರುತ್ತದೆ. ಹಾಗಾಗಿ ನೆಮ್ಮದಿ ಎನ್ನುವುದು ನಮಗೆಲ್ಲಾ ಮರೀಚಿಕೆಯಾಗಿದೆ.

ಈ ವಿಷಯದ ಬಗ್ಗೆ ಬೆಳಕು ಚೆಲ್ಲುವ, ಚೇತನಾ ತೀರ್ಥಹಳ್ಳಿಯವರು ಬರೆದ "ಆತ್ಮ ಕಾಂತಿಗೆ ಕ್ಷಾಂತಿ"ಎನ್ನುವ ಸುಂದರ ಲೇಖನ ನೆನ್ನೆಯ ವಿಜಯ ಕರ್ನಾಟಕದ 'ಬೋಧಿ ವೃಕ್ಷ'ದಲ್ಲಿ ಪ್ರಕಟವಾಗಿದೆ. ಸಾಧ್ಯವಾದರೆ ಪೂರ್ತಿ ಲೇಖನ ಓದಿ. ಆ ಲೇಖನದಲ್ಲಿ ಬರುವ "ಕ್ಷಾಂತಿ"ಎನ್ನುವ ಪದದ ಬಗ್ಗೆ ನನಗೆ ಗೊತ್ತಿರಲಿಲ್ಲ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಪರಿಪೂರ್ಣತೆಯ ಪಥಿಕರ ಲಕ್ಷಣ ಗಳಲ್ಲಿ "ಕ್ಷಾಂತಿ"ಯೂ ಒಂದು . ಇದು ಅಪರೂಪದ ,ಆದರೆ ಮುಖ್ಯವಾದ ಗುಣ . ಬೌದ್ಧ ಧರ್ಮದಲ್ಲಿ ಇದಕ್ಕೆ ಹೆಚ್ಚಿನ ಒತ್ತು  ಕೊಡಲಾಗಿದೆ. ಕ್ಷಾಂತಿ ಎಂದರೆ ಕ್ಷಮಿಸುವ ಧೈರ್ಯ. ಇದು ಕೇವಲ ಕ್ಷಮಿಸುವ ಗುಣವಲ್ಲ.
ಆ ಗುಣದ ಮೂಲ ಬೀಜ . ಕ್ಷಾಂತಿ ಎಂದರೆ ಯಾವುದರಿಂದಲೂ  ಬಾಧೆಗೆ ಒಳಗಾಗದಿರುವ ಮನಸ್ಥಿತಿ !!! ಯಾವುದರಿಂದಲೂ ಹಿಮ್ಮೆಟ್ಟದೇ ದೃಢವಾಗಿ ನಿಲ್ಲುವ ಗುಣ . ಇದು ಸಹನೆ,ತಾಳ್ಮೆ ,ಧೈರ್ಯ,ದೃಢತೆ ಹಾಗೂ ಕ್ಷಮಾ ಗುಣ ಗಳ ಪ್ಯಾಕೇಜ್ ಇದ್ದಂತೆ !!! ಮೋಕ್ಷದ ಹಾದಿಯಲ್ಲಿ ಮಾತ್ರವಲ್ಲ ,ಅನು ದಿನದ ಬದುಕಿನಲ್ಲೂ "ಕ್ಷಾಂತಿ"ಯು ದಿವ್ಯ ಮಂತ್ರ ವಾಗ ಬಲ್ಲದು . ಇಂತಹ ಮನಃಸ್ಥಿತಿ ಅದ್ಭುತ ಅಲ್ಲವೇ!!!ಇದು ಸಾಧ್ಯವಾಗುವಂತಿದ್ದರೆ ಎಂತಹ ನೆಮ್ಮದಿ ಸಿಗಬಹುದು!!!! YOU JUST DON'T GET UPSET!!! YOU ARE  STRESS HARDY!!! JUST IMAGINE !!!

ಬದುಕಿನ ಓಟದಲ್ಲಿ ಎದುರಾಗುವ ದ್ವೇಷ ,ಅಸೂಯೆ ,ಕೋಪ,ಸಂಕುಚಿತ ಬುದ್ಧಿ ,ಈ ಎಲ್ಲದಕ್ಕೂ "ಕ್ಷಾಂತಿ"ಯು ಮದ್ದಾಗ ಬಲ್ಲದು. ನಮ್ಮೆಲ್ಲಾ ಸಮಸ್ಯೆಗಳ ಮೂಲ ಕಾರಣಕ್ಕೆ ಪರಿಹಾರ ಆಗ ಬಲ್ಲದು. ಪೂರ್ಣ ಲೇಖನವನ್ನು ತಪ್ಪದೇ ಓದಿ. ಕ್ಷಾಂತಿ ಎಂಬ ದಿವ್ಯ ಗುಣ ನಮ್ಮೆಲ್ಲರ ಆತ್ಮಕ್ಕೆ ಹೆಚ್ಚಿನ ಕಾಂತಿಯನ್ನು ನೀಡಲಿ.ಎಲ್ಲರಿಗೂ ನಮಸ್ಕಾರ.

Saturday, June 8, 2013

"ಒಂದಿಂಚು ಉದ್ದದ ಬೋಲ್ಟು ....!!!!"

ಒಂದಿಂಚು ಉದ್ದದ ಬೋಲ್ಟನ್ನು ನೋಡಿದರೆ ನಿಮಗೇನಾದರೂ ಗಾಭರಿ ಆಗುತ್ತದೆಯೇ ?

ಇದೆಂತಹ ಪ್ರಶ್ನೆ ಎಂದು ನಗಬೇಡಿ.

ನಾನಂತೂ ಹೌಹಾರಿದ್ದೆ !!!!

 ಆದದ್ದು ಇಷ್ಟು .ಒಂದು ವರ್ಷದ ಮಗುವೊಂದು  ಒಂದಿಂಚು ಉದ್ದದ ಬೋಲ್ಟ್ ಒಂದನ್ನು ನುಂಗಿದೆ

ಎಂದು ಅದರ ತಂದೆ ತಾಯಿ ಹೇಳಿದಾಗ ,ಮೊದಲು ನಾನು ನಂಬಿರಲಿಲ್ಲ. ನಂತರ ಮಗುವಿನ ಹೊಟ್ಟೆಯ ಎಕ್ಸ್ ರೇ

ತೆಗಿಸಿ ನೋಡಿದಾಗ ಒಂದಿಂಚಿನ ಬೋಲ್ಟು  ಮಗುವಿನ ಹೊಟ್ಟೆಯೊಳಗೆ ಅಡ್ಡಡ್ಡ ಮಲಗಿತ್ತು !!!

ಮಗು ಏನೂ ಅರಿಯದೆ ಕಿಲ ಕಿಲ ನಗುತ್ತಿತ್ತು !!!!!

ಮಗುವಿನ ತಂದೆ ತಾಯಿಯ ಮುಖದಲ್ಲಿ ಮುಂದೇನೋ ?!!ಎನ್ನುವ ಚಿಂತೆಯ ಕಾರ್ಮೋಡ.

ಆಗಲೇ ನಾನು ಹೌಹಾರಿದ್ದು. ಏನು ಮಾಡೋದು ......,ನನಗಾದ ಗಾಭರಿ ಅವರಿಗೆ ತೋರುವಂತಿಲ್ಲ !!!

"ಸಾರ್ ಬೋಲ್ಟ್ ಎಲ್ಲಾದರೂ ಸಿಕ್ಕಿ ಹಾಕಿ ಕೊಳ್ಳ ಬಹುದಾ? ಕರುಳನ್ನು ಕೊರೆದು ತೂತು ಮಾಡುವ ಚಾನ್ಸ್ ಇದೆಯಾ?"

ಸಹಜವಾಗಿ,ಅವರ ಗಾಭರಿ ಅವರಿಗೆ.

ಅವರೆಲ್ಲಾ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸುವ ಅನಿವಾರ್ಯ ನನ್ನದು !!!

"ಏನೂ ಗಾಭರಿಯಾಗಬೇಡಿ. ಏನೂ ಆಗುವುದಿಲ್ಲಾ.ನಾಳೆಯೋ,ನಾಡಿದ್ದೋ ಮಲದಲ್ಲಿ ಖಂಡಿತಾ ಹೊರಬರುತ್ತೆ.

ಆದರೂ ಕಾಡಿನ ಮಧ್ಯದ ಈ ಊರಿನಲ್ಲಿ ರಾತ್ರಿಯೇನಾದರೂ ತೊಂದರೆಯಾದರೆ ,ಆಗ ಮಗುವನ್ನು  ದೊಡ್ಡ ಆಸ್ಪತ್ರೆಗೆ

ಚಿಕೆತ್ಸೆಗೆ ಕರೆದೊಯ್ಯುವುದು ಕಷ್ಟ. ಹೇಗಿದ್ದರೂ ಈಗ ಮಗು ಆರಾಮವಾಗಿದೆ.ಮಗುವನ್ನು ತಕ್ಷಣ ತುರ್ತು ಚಿಕಿತ್ಸೆ

ಲಭ್ಯ ವಿರುವ ಆಸ್ಪತ್ರೆಯಲ್ಲೇ ಅಡ್ಮಿಟ್ ಮಾಡಿ ,ಎರಡು ದಿನ ನಿಗಾ ವಹಿಸುವು ಒಳಿತು " ಎಂದೆ. ಅವರಿಗೂ ಅದು ಸರಿ

ಎನಿಸಿತು. ಶಿವಮೊಗ್ಗದ  ಹೆಸರಾಂತ ಅಸ್ಪತ್ರೆಯೊಂದಕ್ಕೆ,ಮಗುವನ್ನು ಕಳಿಸಿ ಕೊಟ್ಟೆ .

ಎರಡು ದಿನದ ನಂತರ ಮಗುವಿನ ತಂದೆಯಿಂದ ಫೋನ್  ಬಂತು.

"ಸಾರ್ ಬೋಲ್ಟ್ ಹೊರ ಬಂತು!!!" ಅವನ ದನಿಯಲ್ಲಿ ಎಂತಹ ನಿರಾಳ!!!!

ನಾನೂ ನಿರಾಳವಾಗಿ ಉಸಿರಾಡಿದೆ !!!

Tuesday, April 23, 2013

"ಸೊಗಸುಗಾರ ಪುಟ್ಟಣ್ಣ !!!!"

ಬೆರಳಷ್ಟೇ ಗಾತ್ರದ ,
ಹಸಿರು ಪುಟ್ಟ ಹಕ್ಕಿ,
ನುಗ್ಗೆ ಮರದ ಹೂವಿಗೆ 
ಲಗ್ಗೆ ------ಹಾಕಿದೆ!
ನುಗ್ಗೆ ಮರಕ್ಕೋ ರೋಮಾಂಚನ!            
ರೆಂಬೆ ರೆಂಬೆಗೂ ಹಸಿರು ಹುಚ್ಚು!
ಪಕ್ಕದ ಗುಲ್ಮೊಹರಿಗೆ ,
ಮೈ ತುಂಬಾ ಕೆಂಪು  ಕಿಚ್ಚು!
ಗಾಳಿಯಲ್ಲೆ ರೆಕ್ಕೆ ಬಡಿದು ,
ಮಧುವ ಹೀರಿದ ಮತ್ತಿನಲ್ಲಿ ,
ಅಲ್ಲೇ ಒಂದರೆ ಕ್ಷಣ ,
ತೇಲಾಡುವ ತ್ರಿಶಂಕು!!
ಮತ್ತೆ ಮರದ ಮೇಲೆ ಕುಳಿತು ,
ಸ್ವಲ್ಪ -----ವಿಶ್ರಮಿಸಿ ,
ಗತ್ತಿನಿಂದ ಕತ್ತು ಕೊಂಕಿಸಿ ,
ಪುಚ್ಚಗಳ ತಿದ್ದಿ ತೀಡಿ ,
ಅತ್ತಿತ್ತ -----ತಿರುಗಿ ,
ಚುಂಚದಲ್ಲೊಂದು ಹೂವ ಹಿಡಿದು ,
ಪುರ್ರನೆ ------ಹಾರಿತ್ತು ,
ಪ್ರೇಯಸಿಯ  ಹುಡುಕುತ್ತಾ !!

Thursday, April 11, 2013

"ವಿಜಯನಾಮ ಸಂವತ್ಸರ ,ಅನ್ವರ್ಥ ನಾಮ ಸಂವತ್ಸರವಾಗಲಿ!!!"

ಬಾ ಬಾರೋ ವಿಜಯ ನಾಮ
ಸಂವತ್ಸರವೇ ,ಸ್ವಾಗತ ನಿನಗೆ!!!
ಇರು ...ಇರು..... ,
'ಬರ'ಬೇಡ ,ತಡಿ!!!

ನೀನು ಬಾ ಮಹರಾಯ .....!!!
ಆದರೆ 'ಬರ'ವನ್ನು ತಡಿ!!!
ನೀನೇ ನೋಡು ಎಲ್ಲಕ್ಕೂ ಬರ!!

ಎಣ್ಣೆ ಸ್ನಾನ ಮಾಡೋಣವೆಂದರೆ
ನೀರಿಗೆ ಬರ.....!

ಹೋಳಿಗೆ ತಿನ್ನಬೇಕೆಂದರೆ .....
ಬೇಳೆಯ ಮತ್ತು ಬೆಲ್ಲದ ಬೆಲೆ
ಬೇವಿನ ಕಹಿಯಂತಿವೆ  !!!

ಇನ್ನೆಲ್ಲಿಯ ಯುಗಾದಿ!!?
ಈ ಬಿಸಿಲಿನ ಝಾಳಕ್ಕೆ
ತಂಗಾಳಿಗೂ ತಗಾದಿ !!!

ಕೈಕೊಟ್ಟಿದೆ ಕರೆಂಟು
ಫ್ಯಾನಿನ ಗಾಳಿಯೂ ಇಲ್ಲದೇ
ಬೆವರಿನಿಂದ ಮೈಯೆಲ್ಲಾ ಅಂಟು !!!

ಇರಲಿ ಬಿಡು ಮಹರಾಯ !
ಇವೆಲ್ಲಾ ನಮಗೆ ಮಾಮೂಲು!!
ನೀನು ಬಲಗಾಲಿಟ್ಟು ಒಳಗೆ  ಬಾ !!

ಎಲ್ಲರ ಬಾಳಲ್ಲೂ ......... ,
ಸುಖ ಸಂತಸ ,ಸಂವ್ರುದ್ಧಿಗಳನ್ನು
ತಪ್ಪದೆ ಹೊತ್ತು ತಾ...!!!

ಎಲ್ಲರಿಗೂ ವಿಜಯನಾಮ ಸಂವತ್ಸರ
ಅನ್ವರ್ಥ ನಾಮ ಸಂವತ್ಸರವಾಗಲಿ
ಎಂಬ ಆಶಾವಾದದ ಎಳೆ ಹಿಡಿದು ಬಾ!!!

ಬಾ ಬಾರೋ ,ನವ ವಸಂತವೇ........!!!
ನಿನಗೆ ..................,
ಕೊಳಲಿನ ನಾದದ ಸ್ವಾಗತ!!!!

Sunday, April 7, 2013

"ವಿಶ್ವ ಆರೋಗ್ಯ ದಿನದ ಹಾರೈಕೆ"

 ಇಂದು ವಿಶ್ವ ಆರೋಗ್ಯ ದಿನ.ಆರೋಗ್ಯವೆನ್ನುವುದು ಸಹಜವಾಗಿ ಇರತಕ್ಕಂತದ್ದು ಎನ್ನುವುದನ್ನು ನಾವೆಲ್ಲಾ ಮೊದಲು ಅರ್ಥ ಮಾಡಿಕೊಳ್ಳಬೇಕು.ಅನಾರೋಗ್ಯ ನಮ್ಮ ತಪ್ಪು ಜೀವನ ಶೈಲಿಯಿಂದ,ಸರಿ ಇಲ್ಲದ ಆಹಾರ ಪದ್ಧತಿಯಿಂದ ಹಾಗೂ ಸಾಕಷ್ಟು ದೈಹಿಕ ವ್ಯಾಯಾಮ ಇಲ್ಲದಿರುವುದರಿಂದ ಬರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬಳಸಬೇಕು.ಎಷ್ಟೇ ಕಷ್ಟವಾದರೂ ಕನಿಷ್ಠ ಅರ್ಧ ಗಂಟೆ ನಡೆಯುವುದೋ ಅಥವಾ ಇನ್ನಿತರ ದೈಹಿಕ ವ್ಯಾಯಾಮದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು.

ಹೋದ ವರ್ಷ ಜೂನ್ ತಿಂಗಳಲ್ಲಿ ,ಹೊಸದಾಗಿ ಡಯಾಬಿಟಿಸ್ ಬಂದವರೊಬ್ಬರಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವಂತೆ ಹೇಳಿದೆ.'ಅಯ್ಯೋ ಈ ಮಳೆಯಲ್ಲಿ ಎಲ್ಲಿ ವಾಕಿಂಗ್ ಹೋಗೋದು ಸರ್?'ಎಂದರು.'ಅದಕ್ಕೆಲ್ಲಾ ಟೈಮ್ ಇಲ್ಲಾ ಸರ್' ಎಂದೂ ಸೇರಿಸಿದರು!ಅವರ ಗುಡಾಣ ಹೊಟ್ಟೆಯನ್ನೇ ನೋಡುತ್ತಾ 'ತಿನ್ನುವುದನ್ನು ಕಮ್ಮಿ ಮಾಡಿ' ಎಂದೆ.'ಅಯ್ಯೋ ನಾನು ಏನೂ ತಿನ್ನೋದೇ ಇಲ್ಲಾ ಸರ್,ಟೆನ್ಶನ್ ಇಂದ ಏನೂ ಸೇರೋದೇ ಇಲ್ಲಾ 'ಎಂದರು.'ಹೋಗಲಿ ಟೆನ್ಶನ್ ಅನ್ನಾದರೂ ಕಮ್ಮಿ ಮಾಡಿಕೊಳ್ಳಿ'ಎಂದೆ.'ಟೆನ್ಶನ್ ಎಲ್ಲಾರಿಗೂ ಇರೋದೇ ಬಿಡಿ ಸರ್'ಎಂದರು.
ನಾನು ಹೇಳಿದ ಸಲಹೆಗಳನ್ನೆಲ್ಲಾ ಸಾರಾ ಸಗಟಾಗಿ ತಿರಸ್ಕರಿಸಿ 'ಅವೆಲ್ಲಾ ನನ್ನ ಕೈಲಿ ಆಗೋಲ್ಲಾ ಸರ್,ಚೆನ್ನಾಗಿ ಕಂಟ್ರೋಲ್ ಆಗೋ ಹಾಗೆ ಯಾವುದಾದರೂ ಒಳ್ಳೆ ಮಾತ್ರೆ ಬರೆದು ಕೊಡಿ'ಎಂದರು.
ಅವರ ಈ ಮಾತುಗಳು ನನ್ನನ್ನು ಯೋಚಿಸುವಂತೆ ಮಾಡಿತು.'ನಾವು ಯಾವ ಸ್ಥಿತಿಗೆ ಬಂದು ನಿಂತಿದ್ದೇವೆ!'ಎನಿಸಿತು.ಔಷದ ವಿಲ್ಲದೆ ಆರೋಗ್ಯವಾಗಿ ಬದುಕೊದಿಕ್ಕೆ ಸಾಧ್ಯವಿಲ್ಲವೇ?'ಎನಿಸಿತು.ಕೈ ಕಾಲುಗಳಿಗೆ ಅವುಗಳ ಕೆಲಸ ಕೊಡದಿದ್ದರೆ ಸಮಗ್ರ ಆರೋಗ್ಯ ಹೇಗೆ ಸಾಧ್ಯ?
'what is used less and less ultimately becomes useless' ಅನ್ನುವ ಮಾತೊಂದಿದೆ.ಮೊದಲಿಂದಲೂ ಕನಿಷ್ಟ ಅರ್ಧದಿಂದ ಒಂದು ಗಂಟೆ ನಡೆದರೆ ಈಗ ದಿನನಿತ್ಯ ಕಾಣುತ್ತಿರುವ ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳನ್ನು ದೂರವಿಡಬಹುದೆನಿಸುತ್ತದೆ.ಯಾವುದೇ ಕಾರಣಕ್ಕಾದರೂ ಮನೆಯಿಂದ ಹೊರಗೆ ಹೋಗಲು ಆಗದೆ ಇದ್ದ ಪಕ್ಷದಲ್ಲಿ,ಮನೆಯಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆ ನಡೆಯಬಹುದು.ಬೋನಿನಲ್ಲಿ ಇರುವ ಹುಲಿ,ಚಿರತೆಯಂತಹ ಪ್ರಾಣಿಗಳೇ ಆ ಸ್ವಲ್ಪ ಜಾಗದಲ್ಲೇ ಒಂದುಕಡೆಯಿಂದ ಇನ್ನೊದು ಕಡೆ ಓಡಾಡುವುದನ್ನು ನೋಡಿದ್ದೇವೆ. Exercising is a necessity ಎನ್ನುವುದನ್ನು ನಾವು ಇದರಿಂದಲಾದರೂ ಕಲಿಯಬಹುದಲ್ಲವೇ?ಅನುಕೂಲವಿದ್ದವರು ಮನೆಯಲ್ಲೇ ಒಂದು ಟ್ರೆಡ್ ಮಿಲ್ ಇಟ್ಟುಕೊಳ್ಳಬಹುದು.
ಬಿ.ಪಿ,ಶುಗರ್,ಮತ್ತು ಹಾರ್ಟ್ ಪ್ರಾಬ್ಲಂ ಇಲ್ಲದವರು ಮೆಟ್ಟಿಲು ಹತ್ತಿ ಇಳಿಯುವುದನ್ನೇ ಒಂದು ವ್ಯಾಯಾಮ ವಾಗಿ ಅಳವಡಿಸಿಕೊಳ್ಳ ಬಹುದು.ಹತ್ತು ನಿಮಿಷದಿಂದ ಶುರು ಮಾಡಿ, ಬರ ಬರುತ್ತಾ ಮೂವತ್ತು ನಿಮಿಷದವರೆಗೆ ಮೆಟ್ಟಿಲು ಹತ್ತಿ ಇಳಿದರೆ ಅದ್ಭುತ ವ್ಯಾಯಾಮವಾಗುತ್ತದೆ.ಇದರ ಜೊತೆ ಸ್ವಲ್ಪ ಯೋಗ ಮತ್ತು ಪ್ರಾಣಾಯಾಮವನ್ನು ಕಲಿತರೆ ಆರೋಗ್ಯಕ್ಕೆ ಇನ್ನೂ ಒಳಿತು.ಸರಿಯಾದ ಆಹಾರ,ಆರೋಗ್ಯಕರ ವಿಚಾರಗಳು  ಮತ್ತು ಸರಿಯಾದ ವ್ಯಾಯಾಮದದಿಂದ ಔಷಧವಿಲ್ಲದೆಯೂ ಆರೋಗ್ಯವಾಗಿರಬಹುದಲ್ಲವೇ ?

ಆರೋಗ್ಯವೆನ್ನುವುದು  ನಮ್ಮೆಲ್ಲರ ಸಹಜ ಸ್ಥಿತಿ.ಅದು ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಈ ವಿಶ್ವ ಆರೋಗ್ಯ ದಿನದಂದು ಎಲ್ಲರಿಗೂ ಸಮೃದ್ಧಿಯಾಗಿ ಆರೋಗ್ಯ ಭಾಗ್ಯ ಲಭ್ಯವಾಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ನಮಸ್ಕಾರ.

Tuesday, April 2, 2013

"ವೈದ್ಯನೊಬ್ಬನ ಮರೆಯಲಾಗದ ವಿಶಿಷ್ಟ ಅನುಭವ!!!! "

ಇದನ್ನೆಲ್ಲಾ ಹೇಗೆ ಬರೆಯುವುದೋ ಗೊತ್ತಿಲ್ಲ .ಆದರೆ ಬರೆಯದೆ ಇರುವುದೂ ಸಾಧ್ಯವಾಗುತ್ತಿಲ್ಲ.ಇಂತಹ ಹಲವಾರು ಘಟನೆಗಳು ನೆನಪಿನ ಹಗೇವಿನಲ್ಲಿ ಆಳವಾಗಿ ಬೇರು ಬಿಟ್ಟಿವೆ.ಸುಮಾರು ಇಪ್ಪತೆಂಟು ವರ್ಷಗಳ ಹಿಂದಿನ ಘಟನೆ .ಆಗ ನಾನು ಸಿರುಗುಪ್ಪದಿಂದ ಎಂಟು ಕಿಲೋಮೀಟರ್ ದೂರದ ದೇಶನೂರು ಎಂಬ ಹಳ್ಳಿಯ ಸನಿಹವಿದ್ದ ಸಕ್ಕರೆ ಕಾರ್ಖಾನೆಯಲ್ಲಿ  ವೈದ್ಯನಾಗಿದ್ದೆ.ಆಗ ಆಸ್ಪತ್ರೆಯೆಂದರೆ ಕಾರ್ಖಾನೆಯಲ್ಲೇ ಸಣ್ಣದೊಂದು ಶೆಡ್ ಇತ್ತು.ಆಸ್ಪತ್ರೆಯ ಸಿಬ್ಬಂಧಿಗಳೆಂದರೆ ನಾನು ಮತ್ತು ಔಷಧಿ ಕೊಡುವ ಒಬ್ಬ ಕಾಂಪೌಂಡರ್ ಇಬ್ಬರೇ.ಸಣ್ಣ ,ಪುಟ್ಟ ಖಾಯಿಲೆಗಳಿಗೆ ಔಷಧಿ ಮತ್ತು ತುರ್ತು ಚಿಕಿತ್ಸೆ ಮಾತ್ರ ಅಲ್ಲಿ ಲಭ್ಯವಿತ್ತು.ಹೆಚ್ಚಿನ ಚಿಕಿತ್ಸೆಗೆ ಕಾರ್ಮಿಕರು ಅವರ ಸ್ವಂತ ಖರ್ಚಿನಲ್ಲಿ ಎಂಟು ಕಿಲೋಮೀಟರ್ ದೂರವಿದ್ದ ಸಿರುಗುಪ್ಪಕ್ಕೋ ,ಐವತ್ತು ಕಿಲೋಮೀಟರ್ ದೂರದ ಬಳ್ಳಾರಿಗೋ ಹೋಗಬೇಕಿತ್ತು.
ಅಸಾಧ್ಯ ಬಿಸಿಲಿನ ಪ್ರದೇಶ.ಶೀಟಿನ ಮನೆ.ಸಂಜೆಯ ವೇಳೆಗೆ ,ಕೆಂಡ ಕಾದಂತೆ ಕಾಯುತ್ತಿತ್ತು.ರಾತ್ರಿ ಸ್ವಲ್ಪ ತಂಪಾಗುತ್ತಿತ್ತು. ಆದರೂ ವಿಪರೀತ ಸೆಖೆಯಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ.ಚೊಚ್ಚಲ ಹೆರಿಗೆಗೆಂದು ತವರಿಗೆ ಹೋಗಿದ್ದ ಹೆಂಡತಿಯಿಂದ ಪತ್ರ ಬಂದು ವಾರವಾಗಿತ್ತು.ಆಗೆಲ್ಲಾ ,ಈಗಿನಂತೆ ಫೋನಿನ ಸೌಕರ್ಯವಿರಲಿಲ್ಲ.ಮೊದಲೇ ಸೆಖೆ.ಮೇಲೆ ಹೆಂಡತಿ ಹೇಗಿದ್ದಾಳೋ ಎನ್ನುವ ಆತಂಕ. ರಾತ್ರಿ ಎರಡಾದರೂ  ನಿದ್ರೆಯ ಸುಳಿವಿಲ್ಲ.ಆಗ ಜೋರಾಗಿ ಬಾಗಿಲು ಬಡಿಯುವ ಶಬ್ದ ,ಜೊತೆಗೇ ಯಾರೋ ಆತಂಕದ ದನಿಯಲ್ಲಿ 'ಸಾರ್,ಸಾರ್'ಎಂದು ಕೂಗುವ ಶಬ್ದ.ಹೋಗಿ ಬಾಗಿಲು ತೆರೆದೆ.ಕಾರ್ಖಾನೆಯ ರಸ್ತೆಯ ಪಕ್ಕದಲ್ಲೇ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ, ಸಕ್ಕರೆ ಮೂಟೆಗಳನ್ನು ಲಾರಿಗಳಿಗೆ ತುಂಬುವ ಹಮಾಲಿಗಳ ಸಣ್ಣ ತಂಡವೊಂದು ಲಾಟೀನುಗಳನ್ನು ಹಿಡಿದು ನಿಂತಿತ್ತು.'ಏನ್ರಪ್ಪಾ?.....ಏನಾಯಿತು...?'ಎಂದೆ. ಅವರಲ್ಲೊಬ್ಬ ಮುಖಂಡ ನಂತೆ ಇದ್ದವನು 'ಸಾರ್....,ಗಡಾನೆ ಬರ್ರಿ ಸಾರ್ ...,ಹುಲಿಗೆಪ್ಪನ ಹೆಂಡತಿಗೆ ಹೆರಿಗೆ ತ್ರಾಸಾಗಿದೆ'ಎಂದ. ಏನು ,ಎತ್ತ ಎಂದು ಅರ್ಥವಾಗದಿದ್ದರೂ 'ಸರಿ ನಡೀರಿ 'ಎಂದು ಮನೆಯ ಬಾಗಿಲಿಗೆ ಬೀಗ ಹಾಕಿ ಔಷಧಿಗಳಿದ್ದ ಸಣ್ಣ ಪೆಟ್ಟಿಗೆಯೊಂದನ್ನು ಹಿಡಿದು ಅವರ ಜೊತೆ ಸುಮಾರು ಅರ್ಧ ಕಿಲೋಮೀಟರ್ ದೂರವಿದ್ದ ಅವರ ಗುಡಿಸಿಲಿನ ಕಡೆ ನಡೆದೆ.ಸಿರಗುಪ್ಪದಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದ್ದರೂ ಹೆರಿಗೆಗೆ ಅಲ್ಲೇಕೆ ಕರೆದುಕೊಂಡು ಹೋಗಲಿಲ್ಲವೆಂದು ಕೇಳಿದೆ.'ಅಲ್ಲೂ ರೊಕ್ಕ ಇಲ್ಲದೆ ಏನೂ ಮಾಡಂಗಿಲ್ರೀ  ಸಾಹೇಬ್ರೇ.ನಾವು ಬಡವರು ರೊಕ್ಕ ಎಲ್ಲಿ ತರೋಣ್ ರೀ' ಎಂದ ಅವರಲ್ಲೊಬ್ಬ .ನಮ್ಮ ಅವ್ಯವಸ್ಥೆಯನ್ನು ಹಳಿಯುತ್ತಾ ,ಆ ನಡುರಾತ್ರಿಯ ಕತ್ತಲೆಯಲ್ಲಿ ,ಲಾಟೀನುಗಳ ಮಂದ ಬೆಳಕಿನಲ್ಲಿ ಅವರ ಗುಡಿಸಳುಗಳತ್ತ ಲಗುಬಗೆಯಿಂದ ಹೆಜ್ಜೆ ಹಾಕಿದೆ.  
ಅಲ್ಲಲ್ಲೇ ಹರಿಯುತ್ತಿದ್ದ ಕೊಚ್ಚೆಯ ನೀರನ್ನು ದಾಟಿಕೊಂಡು ,ತಮ್ಮ ಸರಹದ್ದಿಗೆ ಆಗಂತುಕನೊಬ್ಬನ ಆಗಮನ ವಾಗುತ್ತಿದ್ದಂತೆ ಜೋರಾಗಿ ಬೊಗಳುತ್ತಿದ್ದ ಹತ್ತಾರು ನಾಯಿಗಳನ್ನು ಲೆಕ್ಕಿಸದೆ ಅವರು ಕರೆದುಕೊಂಡು ಹೋದ ಗುಡಿಸಲೊಂದರೊಳಗೆ ಹೋದೆ.ಅಲ್ಲಿ ಕಂಡ ದೃಶ್ಯ   ಎಂತಹ ಗಂಡೆದೆ ಉಳ್ಳವರೂ ಹೌಹಾರುವಂತಿತ್ತು .ಸಗಣಿಯಿಂದ ಸಾರಿಸಿದ ನೆಲದ ಮೇಲೆ ಹಾಸಿದ್ದ ಕೌದಿಯೊಂದರ ಮೇಲೆ ಗರ್ಭಿಣಿ ಹೆಂಗಸೊಬ್ಬಳು 'ಯಪ್ಪಾ ,ನನ್ ಕೈಯಾಗೆ ಆಗಾಕಿಲ್ಲೋ ....ನಾನ್  ಸಾಯ್ತೀನ್ರೋ .....ಯಪ್ಪಾ'ಎಂದು ಜೋರಾಗಿ ನರಳುತ್ತಿದಳು.ಅವಳ ಪಕ್ಕದಲ್ಲಿದ್ದ ಮುದುಕಿಯೊಬ್ಬಳು 'ಎಲ್ಲಾ ಸರಿ ಹೋಕ್ಕತೆ ಸುಮ್ಕಿರು, ದಾಗ್ದಾರ್ ಸಾಬ್ ಬಂದಾನೆ 'ಎಂದು ಸಮಾಧಾನ ಮಾಡುತ್ತಿದ್ದಳು.ಅವರು ಕೊಟ್ಟ ಸೋಪು ,ಬಿಸಿನೀರಿನಿಂದ ಕೈ ತೊಳೆದೆ.ಅದೊಂದು 'breach delivery' ಆಗಿತ್ತು .ಮಾಮೂಲಾಗಿ ಮಗುವಿನ ತಲೆ ಮೊದಲು ಹೊರಗೆ ಬರುತ್ತದೆ. 'ಬ್ರೀಚ್ ' ಡೆಲಿವರಿಯಲ್ಲಿ ,ಮಗುವಿನ ಕಾಲುಗಳು ಹೊರಗೆ ಬರುತ್ತವೆ. ಈ ಹೆಂಗಸಿನಲ್ಲಿ ಮಗುವಿನ ಕಾಲುಗಳು ಹೊರಬಂದು ತಲೆಯ ಭಾಗ ಹೊರಬರದೆ ಸಿಕ್ಕಿಕೊಂಡಾಗ ಏನು ಮಾಡಲು ತೋಚದೆ, ನನ್ನನ್ನು ಕರೆಸಿದ್ದರು.ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯಗಳಿದ್ದೂ ,ಸಹಾಯಕ್ಕೆ ದಾದಿಯರಿದ್ದೂ, ನಡೆಸುವ ಹೆರಿಗೆಗಳಲ್ಲೇ ನೂರೆಂಟು ತೊಂದರೆಗಳು.ಅಂಥದ್ದರಲ್ಲಿ ಆ ಗುಡಿಸಲಿನಲ್ಲಿ ಸಗಣಿಸಾರಿಸಿದ ನೆಲದ ಮೇಲೆ ಕುಳಿತು  ,ಲಾಟೀನಿನ ಮಂದ ಬೆಳಕಿನಲ್ಲಿ,ಅದೂ 'ಬ್ರೀಚ್ ಡೆಲಿವರಿ'ಮಾಡಬೇಕಾದಾಗ , ಹೆರಿಗೆಗಳನ್ನು ಮಾಡಿ  ಅನುಭವವಿರದ ನನ್ನ ಸ್ಥಿತಿ ಹೇಗಿದ್ದಿರಬಹುದೋ ನೀವೇ ಊಹಿಸಿಕೊಳ್ಳಿ. ದೇವರ ದಯೆಯಿಂದ ಹೆರಿಗೆ ನಾನು ನೆನೆಸಿದಷ್ಟು ಕಷ್ಟವಾಗಲಿಲ್ಲ.ಹೆಣ್ಣು ಮಗುವಿನ ಜನನವಾಯಿತು.ಮಗುವಿನ ಅಳು ಕೇಳುತ್ತಿದ್ದಂತೆ ಅಲ್ಲಿದ್ದವರ ಮುಖಗಳಲ್ಲಿ ಸಂತಸದ ನಗು ಮೂಡಿತು.
ಇದಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ನಾನು ರಾಯಚೂರಿನ ಶಕ್ತಿನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ ,ಸಿರುಗುಪ್ಪದಿಂದ ನಾನು ಹೆರಿಗೆ ಮಾಡಿದ ಹೆಂಗಸು ತನ್ನ ಪತಿಮತ್ತು ಮಗಳೊಂದಿಗೆ ನನ್ನನ್ನು ಹುಡುಕಿಕೊಂಡು ಬಂದು,ನಾನೆಷ್ಟೇ ಬೇಡವೆಂದರೂ ಮಗಳಿಂದ ನನ್ನ ಕಾಲಿಗೆ ನಮಸ್ಕಾರ ಮಾಡಿಸಿ, ತನ್ನ ಮಗಳ ಲಗ್ನಪತ್ರಿಕೆ ಕೊಟ್ಟು ಹೋದಳು.ಎಷ್ಟೋ ಸಲ ಜನಗಳ ವರ್ತನೆಯಿಂದ ಬೇಸತ್ತ ಮನಸ್ಸಿಗೆ ,ಆ ಕ್ಷಣದಲ್ಲಿ ವೈದ್ಯನಾದದ್ದು  ಸಾರ್ಥಕವೆನಿಸಿತ್ತು.ಮನದಲ್ಲಿ ಒಂದು ಅಲೌಕಿಕ ಸಂತಸ ಮನೆ ಮಾಡಿತ್ತು.       

Monday, March 25, 2013

"ಹೀಗೊಂದು ದೆವ್ವದ ಕಥೆ!"

 ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು.ನನಗೆ ಪರಿಚಯವಿದ್ದ ಮಹಿಳಾ ವೈದ್ಯೆಯೊಬ್ಬರು ಹಳ್ಳಿಯೊಂದರ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ  ಕೆಲಸಕ್ಕೆ ಸೇರಿದ ಹೊಸತು.ಅವರಿದ್ದ ಕ್ವಾರ್ಟರ್ ನ ಸುತ್ತ ಮುತ್ತ  ರಾತ್ರಿ ದೆವ್ವಗಳು ಓಡಾಡುತ್ತವೆ ಎಂದು ಪುಕಾರಿತ್ತು.ಒಬ್ಬರ ಬಾಯಿಂದ ಮತ್ತೊಬ್ಬರಿಗೆ ರೆಕ್ಕೆ ಪುಕ್ಕ ಸೇರಿ ದೆವ್ವದ ಕಥೆ 'ಭೂತಾಕಾರವಾಗಿ' ಬೆಳೆದಿತ್ತು.ಸುಮಾರು ಜನ ದೆವ್ವವನ್ನು ತಾವು ಖುದ್ದು ನೋಡಿದುದಾಗಿ ಪ್ರಮಾಣ ಮಾಡಿ ಅದು ಹೇಗಿತ್ತು ಎಂಬುದನ್ನು ರಂಗು ರಂಗಾಗಿ ವರ್ಣಿಸಿದರು.ಒಂದು ರಾತ್ರಿ ಸುಮಾರು ಒಂದು ಗಂಟೆಯ ಹೊತ್ತಿಗೆ ಮಹಿಳಾ ವೈದ್ಯಾಧಿಕಾರಿಗಳ ಮನೆ ಬಾಗಿಲು ಜೋರಾಗಿ ಬಡಿಯತೊಡಗಿತು.ವೈದ್ಯೆ ನಿದ್ದೆಯಿಂದ ಎದ್ದು "ಯಾರು?"ಎಂದು ಕೇಳಿದರು."ನಾನು ಭೂತಯ್ಯ!"ಎಂದು ಗೊಗ್ಗರು ದನಿಯಲ್ಲಿ ಉತ್ತರ ಬಂತು.ಮೊದಲೇ ಭೂತದ ಕಥೆಗಳಿಂದ ಹೆದರಿದ್ದ ವೈದ್ಯೆ"ಭೂತಯ್ಯ"ಎನ್ನುವ ಹೆಸರು ಕೇಳಿ ಕಂಗಾಲಾಗಿ ಬಾಗಿಲು ತೆರೆಯುವ ಧೈರ್ಯ ಮಾಡಲಿಲ್ಲ.ರಾತ್ರಿಯೆಲ್ಲಾ ಹೆದರಿಕೆಯಿಂದ ಗಡ ಗಡ ನಡುಗುತ್ತಾ ,ನಿದ್ದೆ ಇಲ್ಲದೆಯೇ ಕಳೆದರು.ಮಾರನೇ ದಿನ ಭೂತಯ್ಯ ಎನ್ನುವ ವ್ಯಕ್ತಿ ಆಸ್ಪತ್ರೆಗೆ ಬಂದು ತಾನು ರಾತ್ರಿ ಜ್ವರವಿದ್ದ ಕಾರಣ ವೈದ್ಯೆಯ ಮನೆಗೆ ಬಂದಿದ್ದುದಾಗಿಯೂ,ವೈದ್ಯೆ ಬಾಗಿಲು ತೆಗೆಯದೆ ಇದ್ದುದರಿಂದ ತನಗಾದ ತೊಂದರೆಗೆ ಮೇಲಧಿಕಾರಿಗಳಿಗೆ ದೂರನ್ನು ನೀಡುವುದಾಗಿಯೂ, ಕೂಗಾಡಿದ್ದನಂತೆ.ಭೂತದ ಕಥೆ ಹರಡಿದ್ದಕ್ಕೆ ಸರಿಯಾಗಿ ಕಾಕತಾಳೀಯ ವೆಂಬಂತೆ ಆ ವ್ಯಕ್ತಿಯ ಹೆಸರೂ ಭೂತಯ್ಯನೇ   ಆಗಿರಬೇಕೆ!!!!

Wednesday, March 6, 2013

"ಮಹಿಳೆ"

ಮಹಿಳೆ..........!!!
ಅವಳಲ್ಲೇ ಇದೆ 'ಇಳೆ'!!!
ಇಳೆಯ ತಾಳ್ಮೆ,ಸಹನೆ
ಧೈರ್ಯ ಸ್ಥೈರ್ಯ
ಪ್ರೀತಿ,ವಾತ್ಸಲ್ಯ 
ಕ್ಷಮೆ ,ದಮೆ !!!
ಕರುಣಾಮಯಿ  ಭೂರಮೆ!!!
ಇಳೆಯನ್ನೂ,
ಮಹಿಳೆಯನ್ನೂ,
ಗೌರವಿಸದ
ಬಾಳೂ
ಒಂದು ಬಾಳೆ?!!!
ದೌರ್ಜನ್ಯಗಳ  ಮೆಟ್ಟಿ ನಿಂತು
ದನಿ ಎತ್ತರಿಸಿ
ಕೇಳುವ ಸಮಯವಿದೀಗ ತಾಯಿ
ನೀನೇ .........,
ಈ ಪ್ರಶ್ನೆ ಕೇಳೆ.

(ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಜಗತ್ತಿನ ಎಲ್ಲಾ ಮಹಿಳೆಯರಿಗೂ ನನ್ನ ವಂದನೆಗಳು.ನಮ್ಮ ಮಕ್ಕಳಿಗೆ ಮಹಿಳೆಯರನ್ನು ಗೌರವಿಸುವುದನ್ನು ಚಿಕ್ಕಂದಿನಿದಲೇ ಕಲಿಸೋಣ."ಎಲ್ಲಿ ಹೆಣ್ಣನ್ನು ಪೂಜನೀಯ ಭಾವನೆಯಿಂದ ಕಾಣುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ "ಎನ್ನುವುದನ್ನು ಹೇಳಿ ಕೊಡೋಣ .ನಮಸ್ಕಾರ.)

Friday, February 15, 2013

"ಬದರಿಯ ಕವನ!!!"

ಬದರಿಯ ಕವನ ಹೀಗೇ
ಎಂದು ಹೇಳುವುದು ಹ್ಯಾಗೆ!!?
ಕತ್ತಲಲ್ಲೊಂದು ಮತಾಪು
ಝಾಗ್ಗನೆ ಬೆಳಗಿದ
ಮಗುವಿನ  ಕೆಂಪಗಿನ ನಗು !!!
ಮನಸ್ಸು ?ಅದೂ ಹಾಗೇ !!!
ನಡೆ  ನುಡಿ,ನೇರ!!!
ಅದರದೇ ಒಂದು ಮುಗ್ಧ ಛಾಪು !!
ಕಾರ್ಗತ್ತಲ ರಾಶಿಯಲ್ಲಿ
ಮಿಂಚು ಹುಳುಗಳ ಜಾತ್ರೆ!!!
ಬದರಿಯ ಕವನಗಳ ಯಾತ್ರೆ
ಎಂದೂ ಬರಿದಾಗದ
ಇಂದ್ರಜಾಲ ಪಾತ್ರೆ!!!
ಬದರಿಯ  ಕವನ
ಗಮ ಗಮಿಸುವ ದವನ!!!
ಹೀಗೇ ಎಂದು ...............,
ವ್ಯಾಖ್ಯಾನಿಸುವುದು ಹೇಗೆ ಅದನ್ನ ?
ಬಣ್ಣಿಸ ಬಹುದೇ
ಕವನದ ಆತ್ಮವನ್ನ!!!?
ಬದರಿಯ ಕವನ ಇರುವುದೇ ಹಾಗೆ!!!
ಹೀಗೇ ಎಂದು ಹೇಳದ ಹಾಗೆ!!!

(ಸ್ನೇಹಿತ ಬದರಿನಾಥ್ ಪಲವಳ್ಳಿಯವರ ಕವನಗಳ ಬಗ್ಗೆ ಒಂದು ಕವನ)

Wednesday, January 16, 2013

"ಮೋಹನ್ ಲಾಡು ಮತ್ತು ಮಂಗಗಳು!!!"

ಹೋದ ತಿಂಗಳು ನಡೆದ ನನ್ನ ನಾದಿನಿಯ ಮಗಳ ಮದುವೆಗೆ ,ಬಂಧುಗಳಿಗೆ ಕೊಡಲು ಅಡಿಗೆಯವರಿಗೆ ಹೇಳಿ ಹಲವಾರು ತಿಂಡಿಗಳನ್ನು ಮಾಡಿಸಿದ್ದರು.ಅದರಲ್ಲಿ 'ಮೋಹನ್ ಲಾಡು'ವಿಶೇಷವಾಗಿತ್ತು !ಮಾಮೂಲಿಗಿಂತ ಸ್ವಲ್ಪ ಜಾಸ್ತಿಯೇ ಗಡುಸಾಗಿದ್ದ ಅದನ್ನು ಸಲೀಸಾಗಿ ಮುರಿಯಲು ಆಗುತ್ತಿರಲಿಲ್ಲ.
ನನ್ನ ಕಿರಿಯ ನಾದಿನಿಯ ಗಂಡ ಸ್ವಲ್ಪ ಹಾಸ್ಯ ಸ್ವಭಾವದವರು."ಇದರ ಜೊತೆಗೆ ಸುತ್ತಿಗೆಯೊಂದನ್ನು ಫ್ರೀಯಾಗಿ ಕೊಟ್ಟರೆ ಮಾತ್ರ ಇದನ್ನು ತೆಗೆದುಕೊಂಡು ಹೋಗುತ್ತೇನೆ"ಎಂದು ತಮಾಷೆ ಮಾಡಿದರು.ನನ್ನ ಹೆಂಡತಿ "ಇದನ್ನು ತಿಂದರೆ ,ನನ್ನ ಹಲ್ಲಿನ ಕ್ಯಾಪ್ ಗಳೆಲ್ಲಾ ಉದುರಿ ಬೀಳುತ್ತವೆ!ನನಗೆ ಮಾತ್ರ ಇದು ಬೇಡ"ಎಂದಳು.

ನನ್ನ ಹಿರಿಯ ನಾದಿನಿಯ ಮಗಳು "ಏನೂ ಆಗೋಲ್ಲಾ,ಸ್ವಲ್ಪ ಗಟ್ಟಿಯಾಗಿದೆ.ಆದರೆ ರುಚಿ ಚೆನ್ನಾಗಿದೆ"ಎಂದು ಬೇರೆ ತಿಂಡಿಗಳ ಜೊತೆಗೆ ಮೋಹನ್ ಲಾಡುವನ್ನೂ ತೆಗೆದುಕೊಂಡು ಹೋಗಿ ತಮ್ಮ ಮನೆಯ ಡೈನಿಂಗ್ ಟೇಬಲ್ ಮೇಲೆ ಇಟ್ಟಿದ್ದಳು.ಅಷ್ಟರಲ್ಲಿ ಮಂಗಗಳ ಗುಂಪೊಂದು ಮನೆಯೊಳಗೆ ದಾಳಿ ಇಟ್ಟು,ಅಲ್ಲಿದ್ದ ಎಲ್ಲಾ ತಿಂಡಿಗಳನ್ನೂ ಎತ್ತಿಕೊಂಡು ಹೋದವು.ಅಲ್ಲೇ ಮನೆಯ ಹೊರಗಿನ ಕಾಂಪೌಂಡ್ ಮೇಲೇ ಕುಳಿತು, ಎಲ್ಲಾ ತಿಂಡಿಗಳನ್ನೂ ಹಂಚಿ ಕೊಂಡು ತಿಂದು ಮುಗಿಸಿದವು.ಆದರೆ ಅವು ಎಷ್ಟು ಪ್ರಯತ್ನಿಸಿದರೂ ಮೋಹನ್ ಲಾಡುವನ್ನು ಮಾತ್ರ  ಕಡಿದು ತಿನ್ನಲಾಗಲಿಲ್ಲ!ಕಡಿದೂ ಕಡಿದು ದವಡೆ ನೋವು ಬಂದಿರಬೇಕು, ಪಾಪ! ಕಡೆಗೆ ಮಂಗಗಳು ಬೇಸತ್ತು , "ನಿಮ್ಮ ಲಾಡುಗಳು ನಿಮಗೇ ಇರಲಿ"ಎನ್ನುವಂತೆ ಮೋಹನ್ ಲಾಡು ಗಳನ್ನು,ಮನೆಯೊಳಗೇ ಬಿಸುಟು,ಸಿಟ್ಟಿನಿಂದ 'ಗುರ್ರೆನ್ನುತ್ತಾ' ಅಲ್ಲಿಂದ ಕಾಲ್ಕಿತ್ತವಂತೆ!!!