Wednesday, October 30, 2013

ಅಕ್ಟೋಬರ್ ಎರಡು ಮತ್ತು ಮಧ್ಯಾಹ್ನದ ಊಟ !!!

ಸೆಪ್ಟೆಂಬರ್ ಮೂವತ್ತಕ್ಕೆ ನಿವೃತ್ತಿ ಹೊಂದಿದೆ.ಅಕ್ಟೋಬರ್ ಆರನೇ ತಾರೀಕು ಮನೆ ಖಾಲಿ ಮಾಡುವುದೆಂದು ನಿರ್ಧಾರವಾಗಿತ್ತು.ಅಕ್ಟೋಬರ್ ಒಂದರಿಂದಲೇ ಪ್ಯಾಕಿಂಗ್ ಶುರುವಾಗಿತ್ತು.ಸುಮಾರು ಹತ್ತು ದಿನಗಳ  ಹಿಂದೆಯೇ ಪರಿಚಯಸ್ಥರು,ಸ್ನೇಹಿತರು ಒಂದೊಂದು ದಿನ ,ಒಂದೊಂದು ಹೊತ್ತು ಊಟಕ್ಕೆ ಕರೆದಿದ್ದರು.ಮನೆ ಶಿಫ್ಟ್ ಮಾಡುವ ಗಡಿಬಿಡಿಯಲ್ಲಿ ಯಾರು,ಯಾರು,ಯಾವ ದಿನ ಊಟಕ್ಕೆ ಕರೆದಿದ್ದಾರೆ ಎಂದು ಗುರುತು ಮಾಡಿಕೊಳ್ಳದೇ,ನನ್ನ ನೆನಪಿನ ಶಕ್ತಿಯ ಮೇಲೇ ಭರವಸೆ ಇಟ್ಟಿದ್ದೆ.ಇಲ್ಲಿ ಸ್ವಲ್ಪ ನಮ್ಮ ಕಾರ್ಗಲ್ ಕಾಲೋನಿಯ ಬಗ್ಗೆ ಹೇಳಬೇಕು.ಕಾರ್ಗಲ್,ವಿಶ್ವ ವಿಖ್ಯಾತ  ಜೋಗ್ ಜಲಪಾತದ ಬಳಿ ಇರುವ ಸಣ್ಣ ಊರು.ಜೋಗ್ ಮತ್ತು ಕಾರ್ಗಲ್ ನಲ್ಲಿ ಸುಮಾರು ಮನೆಗಳು ಬೆಟ್ಟ ಗುಡ್ಡಗಳ ಮೇಲೆ ಇವೆ.ನಾವಿದ್ದ ಮನೆ ಒಂದು ಬೆಟ್ಟದ ತುತ್ತ ತುದಿಯಲ್ಲಿತ್ತು.ನಮ್ಮ ಮನೆಗೆ ಬರಬೇಕಾದರೆ ಸುಮಾರು ಏರು ಹತ್ತಿ ಬರಬೇಕಿತ್ತು.ಹಲವಾರು ವರ್ಷಗಳ ಹಿಂದೆ ಪಾರ್ಶ್ವ ವಾಯು ಪೀಡಿತರಾಗಿದ್ದ ಶಂಕರಮೂರ್ತಿ ಎಂಬ ವಯೋ ವೃದ್ಧರೊಬ್ಬರು ಆಗಾಗ ಆಸ್ಪತ್ರೆಗೆ ನನ್ನ ಬಳಿ ಚಿಕಿತ್ಸೆಗೆಂದು ಬರುತ್ತಿದರು.ಹತ್ತು ದಿನ ಮೊದಲೇ, ಸುಮಾರು ಎರಡು ಕಿಲೋಮೀಟರ್  ದೂರ ಕಷ್ಟ ಪಟ್ಟು ನಡೆದು ಕೊಂಡು,ಮೊದಲನೇ  ಮಹಡಿಯಲ್ಲಿದ್ದ ನಮ್ಮ ಮನೆಗೆ ಬಂದು,ಅಕ್ಟೋಬರ್ ಎರಡನೇ ತಾರೀಕು ಮಧ್ಯಾಹ್ನ ಊಟಕ್ಕೆ ಬರಬೇಕೆಂದು ಹೇಳಿ ಹೋದರು.ಅವರು ನನ್ನ ಮೇಲಿಟ್ಟಿದ್ದ ಪ್ರೀತಿ,ವಿಶ್ವಾಸಕ್ಕೆ ಮೂಕವಿಸ್ಮಿತನಾಗಿದ್ದೆ.ಅಕ್ಟೋಬರ್ ಎರಡನೇ ತಾರೀಕು ಬೆಳಿಗ್ಗೆ ನನ್ನ ಹೆಂಡತಿ "ಇವತ್ತು ಮಧ್ಯಾಹ್ನ ಯಾರ ಮನೇಲಿ ಊಟಕ್ಕೆ ಕರೆದಿದ್ದಾರೆ?ಅಥವಾ ನಾನು ಅಡಿಗೆ ಮಾಡಬೇಕಾ?"ಎಂದಳು. ನನಗೋ ಪೂರ್ತಿ ಕನ್ಫ್ಯೂಷನ್ನು.ತಕ್ಷಣಕ್ಕೆ ನೆನಪಿಗೆ ಬರದಿದ್ದರೂ ನಿಧಾನವಾಗಿ ಟ್ಯೂಬ್ ಲೈಟ್ ಹತ್ತಿಕೊಂಡಿತು.'ಓಹೋ.......ಇವತ್ತು ಶಂಕರ ಮೂರ್ತಿಯವರು ಮಧ್ಯಾಹ್ನ ಊಟಕ್ಕೆ ಕರೆದಿದ್ದಾರಲ್ಲವೇ!' ಎಂದುಕೊಂಡೆ. ಅರವತ್ತರ ನನ್ನ ಕಥೆಯೇ ಹೀಗಿರಬೇಕಾದರೆ,ನನಗಿಂತ ಹಿರಿಯರಾದ ಶಂಕರ ಮೂರ್ತಿಯವರಿಗೆ ನಮ್ಮನ್ನು ಊಟಕ್ಕೆ ಕರೆದಿದ್ದು ನೆನಪಿರುತ್ತೋ ಇಲ್ಲವೋ ಎನ್ನುವ ಅನುಮಾನ ಶುರುವಾಯಿತು.ಸರಿ ಅವರಿಗೆ ಫೋನ್ ಮಾಡಿ ಕನ್ಫರ್ಮ್ ಮಾಡಿಕೊಂಡು ಬಿಡೋಣ ಎಂದು ಕೊಂಡು  ಮೊಬೈಲ್ ನಲ್ಲಿ ಅವರಿಗೆ ಫೋನಾಯಿಸಿದೆ.
"ಹಲೋ......",ಎಂದದಕ್ಕೆ ಅತ್ತ ಕಡೆಯಿಂದ "ಯಾರು ?"ಎಂದು ಹೆಂಗಸೊಬ್ಬರ ದನಿ ಕೇಳಿತು. "ಹಲ್ಲೋ .....ನಮಸ್ಕಾರಾಮ್ಮ.ನಾನು ಡಾಕ್ಟರ್ ಕೃಷ್ಣ ಮೂರ್ತಿ ಅಂತ"ಎಂದೆ. ಅತ್ತ ಕಡೆಯಿಂದ "ಯಾರೋ ಡಾಕ್ಟರ್ ಕೃಷ್ಣ ಮೂರ್ತಿಯಂತೆ ನೋಡಿ "ಎನ್ನುವ ದನಿ ಕೇಳಿತು.ಆ ಕಡೆಯಿಂದ ಈಗ ಗಂಡಸು ದನಿ "ಹಲೋ"ಎಂದಿತು."ಹಲೋ ಶಂಕರ ಮೂರ್ತಿಯವರಾ?"ಎಂದೆ.ಆ ಕಡೆಯಿಂದ"ಹೌದು"ಎನ್ನುವ ದನಿ ಕೇಳಿ ಬಂತು."ಸರ್ ಇವತ್ತು ಅಕ್ಟೋಬರ್ ಎರಡು ,ಜ್ಞಾಪಕ ಇದೆಯಾ ಸಾರ್?"ಎಂದೆ. ಆ ಕಡೆಯಿಂದ "ಹೌದು ಸರ್,ಇವತ್ತು ಗಾಂಧೀ ಜಯಂತಿ"ಎನ್ನುವ ಉತ್ತರ ಕೇಳಿ ನನ್ನ ಎದೆ ಧಸಕ್ ಅಂತು."ಅರೇ...!! ಇವರಿಗೆ ನಮ್ಮನ್ನು ಊಟಕ್ಕೆ ಕರೆದಿರುವ ನೆನಪೇ ಇಲ್ಲವಲ್ಲ!!! ",ಹೇಗಪ್ಪಾ ನೆನಪು ಮಾಡೋದು ಎಂದು ಕಸಿವಿಸಿಯಾಯಿತು.ಧೈರ್ಯ ಮಾಡಿ "ಇವತ್ತು ಮಧ್ಯಾಹ್ನ ನಿಮ್ಮ ಮನೆಯಲ್ಲಿ  ಊಟ ಅಲ್ವಾ?"ಎಂದೆ.ಅತ್ತ ಕಡೆಯವರಿಗೆ ಡಾಕ್ಟರ್ರಿಗೆ ಎಲ್ಲೋ ತಲೆ ಕೆಟ್ಟಿದೆ ಅನಿಸಿರಬೇಕು. "ಸಾರ್,ನಾನು ಬೆಂಗಳೂರಿನ  head office ನ ಶಂಕರ ಮೂರ್ತಿ "ಎಂದರು.ನಾನು ಪರಿಸ್ಥಿತಿ ವಿವರಿಸಿದ ಮೇಲೆ ನನ್ನ ಫಜೀತಿ ನೋಡಿ ಮನಸಾ ನಕ್ಕರು.ಇದಾದ ಸ್ವಲ್ಪ  ಹೊತ್ತಿಗೇ ನಮ್ಮ ಕಾರ್ಗಲ್ಲಿನ ಶಂಕರ ಮೂರ್ತಿಯವರಿಂದ ನನ್ನ ಮೊಬೈಲಿಗೆ ಕರೆ ಬಂತು. ಶಂಕರ ಮೂರ್ತಿಯವರು "ಸಾರ್ ,ಇವತ್ತು ಅಕ್ಟೋಬರ್ ಎರಡು ,ಮಧ್ಯಾಹ್ನ ನಮ್ಮ ಮನೇಲಿ ಊಟಕ್ಕೆ ಕರೆದಿದ್ದೆ .ನೆನಪಿದೆಯಾ "ಎಂದರು. ನಾನು ಸುಸ್ತು!!! ಬೆಂಗಳೂರಿಗೆ ಬಂದ ಮೇಲೆ ಶಂಕರ ಮೂರ್ತಿಯವರನ್ನು  ಆಫೀಸಿನಲ್ಲಿ ಭೇಟಿ ಆದಾಗ,ಈ ಘಟನೆ ನೆನೆಸಿಕೊಂಡು ಇಬ್ಬರೂ ನಕ್ಕೂ,ನಕ್ಕೂ ...ಸಾಕಾಯಿತು. ಅವರೇ "ಇದನ್ನು ನಿಮ್ಮ ಬಾಗಿನಲ್ಲಿ ಹಾಕಿ ಸರ್ .ಚೆನ್ನಾಗಿದೆ"ಎಂದರು.ನನ್ನ ಅನುಭವ ಹೇಗಿದೆ ಎನ್ನುವುದನ್ನು ಇನ್ನು  ನೀವು ಹೇಳ ಬೇಕು. ನಮಸ್ಕಾರ.

9 comments:

  1. ಸರಿ ಹೋಯ್ತು.. ಯಾರೋ ಕರೆದರೆ ಇನ್ನಾರಿಗೋ ಕರೆ ಹಹಹಹ

    ReplyDelete
  2. ಎಂಥಾ ಪೇಚಿನ ಪ್ರಸಂಗವನ್ನೂ ನೀವು ನಗಿಸುವಂತೆ ಬರೆಯುತ್ತೀರಿ!

    ReplyDelete
  3. ಹ್ಹಹ್ಹಹ್ಹ ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ನಮ್ಮ ಫೋನು ಬುಕ್ಕಿನಲ್ಲಿ ಇದ್ದಾಗ ಇಂತಹ ಅಚಾತುರ್ಯ ಅನಿವಾರ್ಯ.
    ಮುಂದಿನ ಬರಹಗಳಲ್ಲಿ ಕಾರ್ಗಲ್ ಪರಿಸರ, ಅಲ್ಲಿನ ತಮ್ಮ ಅನುಭವಗಳನ್ನು ಮತ್ತು ವೈದ್ಯಕೀಯದಲ್ಲಿ ತಮಾಷೆಯ ಪ್ರಸಂಗಗಳನ್ನು ನಮಗಾಗಿ ಕಟ್ಟಿಕೊಡಿ.

    ReplyDelete
  4. "ಇವತ್ತು ಮಧ್ಯಾಹ್ನ ನಿಮ್ಮ ಮನೆಯಲ್ಲಿ ಊಟ ಅಲ್ವಾ?" ಅಂದಿದ್ದು ತುಂಬಾ ತಮಾಶೆ ಅನಿಸ್ತು..
    ಆದರೆ ಹಳೆ ತಲೆಯವರಿಗೆ ನೆನಪು ಈಗಿನವರಿಗಿಂತ ಜಾಸ್ತಿ.
    ಚನ್ನಾಗಿದೆ ನಿಮ್ ಕಥೆ....

    ReplyDelete
  5. ಸರ್, ನಿಮ್ಮ ಲೇಖನ ಓದಿದಾಗ ನಾನು ಯುನಿವರ್ಸಿಟಿ ಹಾಸ್ಟೆಲ್ ಗೆ ಕರೆ ಮಾಡಿ ನಿಜವಾಗಿ ಮಾತಾಡ ಬೇಕಾದ ರಾಘವೇಂದ್ರನನ್ನು ಬಿಟ್ಟು ಇನ್ನಾರೋ ಮಾತಾಡಿ, ನಂತರದ ದಿನಗಳಲ್ಲಿ ನನ್ನ ಪರಿಚಯದ ರಾಘವೇಂದ್ರ ಸಿಕ್ಕಿದಾಗಲೇ ನನಗೆ ವಿಷಯ ಗೊತ್ತಾಗಿ ನಕ್ಕದ್ದು ನೆನಪಿಗೆ ಬಂತು. ಹಾಸ್ಯ ಮಿಶ್ರಿತ ನಿಮ್ಮ ಬರಹ ನನಗೆ ಇಷ್ಟವಾಯಿತು.
    ಹಾಗೆಯೇ ನನ್ನ ಬ್ಲಾಗಿನಲ್ಲಿನ ದೀಪಾವಳಿಯ ಶುಭಾಶಯನ್ನೂ ಓದಿ.

    ReplyDelete
  6. ಸೂಪರ್.. ಈ ತಾಂತ್ರಿಕ ಯುಗದಲ್ಲಿ ಮೊಬೈಲ್ ನಲ್ಲಿ ಒಂದೇ ಹೆಸರಿನ ಮಂದಿ ಅನೇಕರು ಸಿಗುತ್ತಾರೆ. ತರಾ ತುರಿಯಲ್ಲಿ ಎಲ್ಲವನ್ನು ಒಂದೇ ತರಹ ಮೊಬೈಲ್ ನಲ್ಲಿ ಇಟ್ಟುಕೊಂಡರೆ ದೇವರಿಗೆ ಪ್ರೀತಿ.. ಒಂದು ವೇಳೆ ಆಹ್ವಾನವಿತ್ತವರು ಸಸ್ಯಾಹಾರಿ ಆಗಿದ್ದು.. ಗೊಂದಲ ಮಾಡಿಕೊಂಡು ಮಾಂಸಹಾರಿ ಯವರ ಮನೆಗೆ ಹೋಗಿದ್ದಾರೆ.. ಹು ಹಾ ಹು ಹಾ.. ಸೂಪರ್ ಡಾಕ್ಟರ್.. ನಿಮ್ಮ ಸದಾ ನಗು ಮೊಗದ ರಹಸ್ಯ ಈಗ ತಿಳಿಯಿತು..

    ReplyDelete
  7. ಒಳ್ಳೆ ಕನ್ಫ್ಯೂಷನ್! ತಮಾಶೆಯಾಗಿ ಬರೆದಿದ್ದೀರಿ ಸರ್! ಅಭಿನ೦ದನೆಗಳು.ನನ್ನ ಬ್ಲಾಗ್ ಗೂ ಭೇಟಿಕೊಡಿ.

    ReplyDelete

Note: Only a member of this blog may post a comment.