Thursday, July 18, 2013

" ಹೀಗೊಂದು ಕಸದ ತೊಟ್ಟಿಯ ಕಥೆ !!!"

ಅವನು ಆ ಊರಿಗೇ ಒಬ್ಬ ದೊಡ್ಡ ಶ್ರೀಮಂತ.ಅವನ ಬಳಿ ಬಂಗಲೆ,ಗಾಡಿ,ಆಳು ಕಾಳು,ಸಾಕಷ್ಟು ಹಣ ಎಲ್ಲವೂ ಇವೆ.ಆದರೂ ಅವನನ್ನು ಏನೋ ಒಂದು ಕೊರತೆ ಸದಾ ಕಾಡುತ್ತದೆ.ಇದ್ದಕ್ಕಿದ್ದಂತೆ ಭಾವುಕನಾಗುತ್ತಾನೆ.

 ಊರಿನ ಆ ಒಂದು ರಸ್ತೆ  ಬದಿಯ ಗಬ್ಬು ನಾರುವ ಕಸದ ತೊಟ್ಟಿ ಯೊಂದರ  ಬಳಿ ಆಗಾಗ ಹೊಗುತ್ತಾನೆ.ಅವನ ಕಣ್ಣುಗಳು ಅವನು ಅಲ್ಲಿ ಏನೋ ಕಳೆದು ಕೊಂಡವನಂತೆ ಹುಡುಕುತ್ತವೆ. ಮತ್ತೆ ಸ್ವಲ್ಪ ಸಮಯದ ನಂತರ ಸುಸ್ತಾದವನಂತೆ ಕಾರಿನಲ್ಲಿ ಕುಳಿತು ಮನೆಗೆ ಮರಳುತ್ತಾನೆ.

ಊರಿನವರೆಲ್ಲಾ ಅವನನ್ನು ನೋಡಿ ಅವನಿಗೆಲ್ಲೋ ಸ್ವಲ್ಪ ತಲೆ ಕೆಟ್ಟಿದೆ ಎಂದು ಆಡಿಕೊಳ್ಳುತ್ತಾರೆ. ಅವನು ನನಗೂ ಅಲ್ಪ ಸ್ವಲ್ಪ ಪರಿಚಯ. ಆಗಾಗ ಸಣ್ಣ ಪುಟ್ಟ ಚಿಕಿತ್ಸೆಗೆ ನನ್ನ ಆಸ್ಪತ್ರೆಗೆ ಬರುತ್ತಾನೆ.

ನಾನು ರೋಗಿಗಳ ವೈಯಕ್ತಿಕ ವಿಷಯಗಳಲ್ಲಿ ಹೆಚ್ಚು ತಲೆ ಹಾಕುವುದಿಲ್ಲ. ಆದರೆ ಒಮ್ಮೆ ಅವನೊಬ್ಬನೇ ಇದ್ದಾಗ ಕುತೂಹಲ ಹತ್ತಿಕ್ಕಲಾರದೇ ಅವನನ್ನು "ಆ ಕಸದ ತೊಟ್ಟಿಯಲ್ಲಿ ಏನು ಹುಡುಕುತ್ತೀರಿ? ಏನನ್ನಾದರೂ ಕಳೆದು ಕೊಂಡಿದ್ದೀರಾ ಹೇಗೆ ?"ಎಂದು ಕೇಳಿಯೇ ಬಿಟ್ಟೆ.

ಅವನು ನನ್ನಿಂದ ಈ ಪ್ರಶ್ನೆ ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತೆ.ಸ್ವಲ್ಪ ಹೊತ್ತು ಮೌನದಲ್ಲಿ ಕಳೆದು ಹೋದ. ಸರಿಯಾದ ಪದಗಳಿಗಾಗಿ ತಡಕಾಡುವಂತಿತ್ತು ಅವನ ಚಹರೆ. ನಾನು ಅವನನ್ನು  ಯಾಕಾದರೂ ಈ ಪ್ರಶ್ನೆ ಕೇಳಿದೆನೋ ಎಂದು ಕಸಿವಿಸಿಗೊಂಡೆ.

ನಂತರ ಅವನು ನಿಧಾನವಾಗಿ ತನ್ನ ಕಥೆ ಹೇಳತೊಡಗಿದ. "ಸಾರ್ ಊರಿನ ಜನ ನನ್ನ ಬಗ್ಗೆ ಏನೆಲ್ಲಾ ಆಡಿ ಕೊಳ್ಳುತ್ತಾರೆ ಎನ್ನುವುದು ನನಗೆ ಗೊತ್ತಿದೆ. ನಾನು ಸಣ್ಣವನಾಗಿದ್ದಾಗಲಿಂದಲೂ ನನ್ನನ್ನು ಬೆಳೆಸಿದ್ದು ಗೋವಿಂದಜ್ಜನೇ. ನಾನು ಅಪ್ಪ ಅಮ್ಮನ ಬಗ್ಗೆ ಕೇಳಿದಾಗಲೆಲ್ಲಾ ,ನೀನು ಸಣ್ಣವನಿದ್ದಾಗಲೇ ನಿನ್ನ ಅಪ್ಪ ಅಮ್ಮ ತೀರಿಕೊಂಡರು ಎನ್ನುತ್ತಿದ್ದ. ಅಜ್ಜ ಸಾಯುವುದಕ್ಕೆ ಸ್ವಲ್ಪ ದಿನ ಮುಂಚೆ ,ನನ್ನ ಅಪ್ಪ ಅಮ್ಮ ಯಾರೆಂದು ತನಗೆ ಗೊತ್ತಿಲ್ಲವೆಂದೂ,ನಾನು ತೊಟ್ಟಿಯಲ್ಲಿ ಸಿಕ್ಕ ಹಸುಗೂಸೆಂದೂ,ಅಳುವಿನ ಶಬ್ದ ಕೇಳಿ ತಾನು ಎತ್ತಿಕೊಂಡು ಬಂದು ಸಾಕಿದುದಾಗಿಯೂ ನಿಜ ಹೇಳಿದ.

ನನಗೆ ಆಗಾಗ ನನ್ನ ಅಮ್ಮನ ನೆನಪಾಗುತ್ತದೆ ಸರ್.ಪಾಪ ಏನು ಕಷ್ಟದಲ್ಲಿ ಇದ್ದಳೋ,ನನ್ನನ್ನು ತೊಟ್ಟಿಯಲ್ಲಿ ಬಿಟ್ಟು ಹೋಗುವಾಗ ಎಂತಹ ಸಂಕಟ ಅನುಭವಿಸಿದಳೋ.ನೆನೆಸಿಕೊಂಡರೆ  ಬಹಳ ನೋವಾಗುತ್ತೆ ಸರ್.ಅಮ್ಮನ  ನೆನಪಾದಗಲೆಲ್ಲಾ ಆ ತೊಟ್ಟಿಯ ಬಳಿ ಹೋಗುತ್ತೀನಿ ಸರ್"ಎಂದು ಮಾತು ಮುಗಿಸಿದ.ಅವನು ಅತ್ತು ಎದೆ ಹಗುರ ಮಾಡಿ ಕೊಂಡ.ನನ್ನ ಎದೆ  ಭಾರವಾಗಿತ್ತು !!!

ಆಧಾರ:"ಕಥೆಗಳಲ್ಲದ ಕಥೆಗಳು"ಪುಸ್ತಕದ ಒಂದು ಕಥೆ.

Sunday, July 7, 2013

"ಅಂತರಂಗದಲ್ಲೊಂದು.... ಕುರುಕ್ಷೇತ್ರ !!!!"

ನೆನ್ನೆ ಶನಿವಾರ ದಿನಾಂಕ ೬.೭.೨೦೧೩ ರರ "ಪ್ರಜಾವಾಣಿ"ದಿನಪತ್ರಿಕೆಯ "ಭೂಮಿಕಾ" ಪುರವಣಿಯಲ್ಲಿ ,ಎರಡು ಒಳ್ಳೆಯ ಲೇಖನಗಳಿವೆ.ಮೊದಲನೆಯದು ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ವಿ.ಬಾಲಕೃಷ್ಣನ್ ರವರ "ಆಧುನಿಕ ಕುರುಕ್ಷೇತ್ರ".
ಈ ಲೇಖನದಲ್ಲಿ ಲೇಖಕರು ವ್ಯಕ್ತಿಯ ಮನಸ್ಸಿನಲ್ಲಿ ಪ್ರತಿಕ್ಷಣವೂ ನಡೆಯುವ ಮಾನಸಿಕ ತುಮುಲಗಳ ಬಗ್ಗೆ ಬಹಳ ಸರಳವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಎರಡನೇ ಲೇಖನ ಭರತ್ ಮತ್ತು ಶಾಲನ್ ಸವೂರ್ ರವರ "ಸಂಘರ್ಷ ನಿವಾರಿಸಿ"ಎನ್ನುವ ಲೇಖನ.ಅಚ್ಚರಿ ಎಂದರೆ ಇದೂ ಕೂಡ ಮನಸ್ಸಿನಲ್ಲಿ ನಡೆಯುವ ಆಂತರಿಕ ಸಂಘರ್ಷದ ಬಗ್ಗೆಯೇ !! ಡಬಲ್ ಧಮಾಕ .....!!! ಒಂದೇ ಸಲಕ್ಕೆ ಎರಡು ಸುಂದರ ವ್ಯಕ್ತಿತ್ವ ವಿಕಸನ ಲೇಖನಗಳು!!!! ಎರಡನೇ ಲೇಖನದ ಆಯ್ದ ಕೆಲ ಭಾಗಗಳು ಇಂತಿವೆ.ಪೂರ್ಣ ಮೂಲ ಲೇಖನ ಓದುವುದು ಹೆಚ್ಚು ಲಾಭಕರ ಎಂದು ನನ್ನ ಅನಿಸಿಕೆ.

ಸಾಮಾನ್ಯವಾಗಿ ಯಾವುದೇ ಸಂಘರ್ಷವನ್ನು ನಾವು ಬಾಹ್ಯದಲ್ಲಿ ಪರಿಹರಿಸಿಕೊಳ್ಳಲು ಯತ್ನಿಸುತ್ತೇವೆ.ನಮಗೂ ಮತ್ತೊಬ್ಬರಿಗೂ ಸಂಘರ್ಷವಾದಾಗ ಎಲ್ಲವನ್ನೂ  ನಮ್ಮ ಅಹಂಕಾರದ ಕನ್ನಡಕದ ಮೂಲಕವೇ ನೋಡುತ್ತೇವೆ .ನಾನೇ ಸರಿ ಎಂದು ವಾದಿಸುತ್ತೇವೆ.ನಮ್ಮದೇ ತಪ್ಪಿದ್ದರೂ ಒಪ್ಪಿ ಕೊಳ್ಳಲು ನಾವು ಸಿದ್ಧರಿರುವುದಿಲ್ಲ.ಅಕಸ್ಮಾತ್ತಾಗಿ ಕ್ಷಮೆ ಕೇಳುವ ಸಂದರ್ಭ ಬಂದರೂ ಕಾಟಾಚಾರಕ್ಕೆ ಒಲ್ಲದ ಮನಸ್ಸಿನಿನಿಂದ ಚುಟುಕಾಗಿ ಕ್ಷಮೆ ಕೇಳುತ್ತೇವೆ! ಮುಖದ ಮೇಲೆ ಒಂದು ಔಪಚಾರಿಕ ನಗು ತಂದು ಕೊಳ್ಳು ತ್ತೇವೆ !!!ಅಂತಿಮವಾಗಿ ಯಾರೂ ಸಂತಸದಿಂದ ಇರುವುದಿಲ್ಲ !!!ಮನಸ್ಸಿನಲ್ಲಿ ಅತೃಪ್ತಿ ಕುದಿಯುತ್ತಿರುತ್ತದೆ.
ಹೃದಯದಲ್ಲಿ ಕಹಿ ಉಳಿದುಬಿಡುತ್ತದೆ.

ನಿಜವಾದ ಸಂಘರ್ಷ ಪ್ರತಿ ವ್ಯಕ್ತಿಯ ಅಂತರಂಗದಲ್ಲಿಯೇ ನಡೆಯುತ್ತಿರುತ್ತದೆ.ಆಗಿದ್ದನ್ನು ಒಪ್ಪಿಕೊಳ್ಳಲು ಮನಸ್ಸು ತಯಾರಿರುವುದಿಲ್ಲ!ನಮ್ಮ ಅಹಂಕಾರ ,ತಾನು ಎಣಿಸಿದಂತೆಯೇ ಎಲ್ಲವೂ ನಡೆಯಬೇಕು ಎನ್ನುವ  ಅತೃಪ್ತಿಯನ್ನು ಹುಟ್ಟು ಹಾಕುತ್ತದೆ.ಅಂತರಂಗದ ಅಸಮಾಧಾನ,ಸಿಡುಕು,ನಾನಾ ರೋಗಗಳಿಗೆ ಮೂಲ ಕಾರಣ.ಪ್ರತಿ ವ್ಯಕ್ತಿಯೂ ತನ್ನ ಮನಸ್ಸಿನಿಂದ ಮತ್ತು ಹೃದಯದಿಂದ ಸಿಡುಕನ್ನು ತೆಗೆದು ಹಾಕಿ ಆ ಜಾಗದಲ್ಲಿ ಸದಾ ಶಾಂತಿ ,ಸಮಾಧಾನ,ತಾಳ್ಮೆ ,ನೆಮ್ಮದಿ ನೆಲಸುವಂತೆ ಮಾಡಬೇಕು.ದಿನ ನಿತ್ಯದ ಧ್ಯಾನ ,ಪ್ರಾಣಾಯಾಮ,ಇದಕ್ಕೆ ಸೂಕ್ತ ಮದ್ದು.ಮನಸ್ಸ್ಸಿನ ಆರೋಗ್ಯ ದೇಹದ ಆರೋಗ್ಯಕ್ಕೆ ಮೂಲ ಕಾರಣ.ಹಾಗಾಗಿ ನಿಮ್ಮ ಆಂತರಿಕ ಸಂಘರ್ಶಗಳನ್ನು ಮೊದಲು ನಿವಾರಿಸಿಕೊಂಡು ,ನಿಮ್ಮ ಮನಸ್ಸನ್ನು ಚೆನ್ನಾಗಿ ನೋಡಿಕೊಳ್ಳಿ.ನಮಸ್ಕಾರ.

Tuesday, July 2, 2013

"ಸಂಸಾರ !!!! ಗಡಿಯಾರ !!!!"


ನಮ್ಮ ಸಂಸಾರ ..........,
ಎದುರಿನ ಗೋಡೆಯ ಮೇಲಿನ
ಗಡಿಯಾರ.............,
ಎರಡಕ್ಕೂ ಎಷ್ಟೊಂದು ಸಾಮ್ಯ!
ನನ್ನ ಹೆಂಡತಿ.............,
ಶಿಸ್ತಿನ ಸಿಪಾಯಿ !
ಸೆಕೆಂಡಿನ ಮುಳ್ಳಿನ ಹಾಗೆ
ಸಪೂರ.........!
ಮೂಗಿಗೆ ಕವಡೆ ಕಟ್ಟಿಕೊಂಡ
ಗಾಣದೆತ್ತಿನ ದುಡಿತ !
ಅವಳ ನಿರಂತರ
ಪ್ರೀತಿಯ ತುಡಿತವೇ
ನಮ್ಮ ಸಂಸಾರದ
ನಾಡಿಯ ಮಿಡಿತ !
ಮಕ್ಕಳೋ ..........,
ನಿಮಿಷದ ಮುಳ್ಳುಗಳಂತೆ !
ನಿಮಿಷಕ್ಕೊಂದು ರೀತಿ !
ಗಂಟೆಗೆ ಅರವತ್ತರ
ಅವಸರದ ಓಟ !
ಇನ್ನು,ಅರವತ್ತರದ ಸನಿಹದ
ನಾನೋ.................!
ಗಂಟೆಯ ಮುಳ್ಳು !
ಧಡಿಯ !ನಿಧಾನಿ!
ಮನೆಯ ಪ್ರಧಾನಿ (?) !
ಗಂಟೆಗೊಮ್ಮೆ ಕದಲಿಕೆ!
ಮನೆಯೊಡತಿಯಿಂದ
'ಎಷ್ಟು ಸ್ಲೋ', ಎಂಬ ಸಣ್ಣದೊಂದು ಮೂದಲಿಕೆ!
ಪ್ರೀತಿಯ ಬ್ಯಾಟರಿ ಮುಗಿದಾಗ
ಮನೆಯಲ್ಲಿ ಹಠಾತ್ ಮುಷ್ಕರ!
ಸ್ವಲ್ಪ ಕಾಲ ...........,
ಎಲ್ಲವೂ ,ಎಲ್ಲರೂ ಸ್ತಬ್ಧ!
ಮತ್ತೆ ಪ್ರೀತಿಯ ಹೊಸ ಚೈತನ್ಯ
ಮರು ಚಾಲನೆ ನೀಡುವ ತನಕ!!
ಮತ್ತದೇ ಓಟದ ಮಾಟ !!!