Tuesday, March 30, 2010

ಪ್ರೇಯಸಿಗಾಗಿ-------!

ಬೆರಳಷ್ಟೇ ಗಾತ್ರದ ,
ಹಸಿರು ಪುಟ್ಟ ಹಕ್ಕಿ,
ನುಗ್ಗೆ ಮರದ ಹೂವಿಗೆ 
ಲಗ್ಗೆ ------ಹಾಕಿದೆ!
ನುಗ್ಗೆ ಮರಕ್ಕೋ ರೋಮಾಂಚನ!            
ರೆಂಬೆ ರೆಂಬೆಗೂ ಹಸಿರು ಹುಚ್ಚು!
ಪಕ್ಕದ ಗುಲ್ಮೊಹರಿಗೆ ,
ಮೈ ತುಂಬಾ ಕೆಂಪು  ಕಿಚ್ಚು!
ಗಾಳಿಯಲ್ಲೆ ರೆಕ್ಕೆ ಬಡಿದು ,
ಮಧುವ ಹೀರಿದ ಮತ್ತಿನಲ್ಲಿ ,
ಅಲ್ಲೇ ಒಂದರೆ ಕ್ಷಣ ,
ತೇಲಾಡುವ ತ್ರಿಶಂಕು!!
ಮತ್ತೆ ಮರದ ಮೇಲೆ ಕುಳಿತು ,
ಸ್ವಲ್ಪ -----ವಿಶ್ರಮಿಸಿ ,
ಗತ್ತಿನಿಂದ ಕತ್ತು ಕೊಂಕಿಸಿ ,
ಪುಚ್ಚಗಳ ತಿದ್ದಿ ತೀಡಿ ,
ಅತ್ತಿತ್ತ -----ತಿರುಗಿ ,
ಚುಂಚದಲ್ಲೊಂದು ಹೂವ ಹಿಡಿದು ,
ಪುರ್ರನೆ ------ಹಾರಿತ್ತು ,
ಪ್ರೇಯಸಿಯ  ಹುಡುಕುತ್ತಾ !!

Thursday, March 25, 2010

ಬಯಲು

ಒಮ್ಮೆಯಾದರೂ ----------,
ಅಹಂಕಾರದ ಆಭರಣಗಳ 
ಕಿತ್ತೆಸೆದು ------------,
ಡಂಭಗಳ------- ಬದಿಗಿಟ್ಟು ,
ಕಿಚ್ಚುಗಳ ------ತಣಿಸಿ ,
ರೋಷಗಳ ------ಮಣಿಸಿ ,                       
ಕೀರ್ತಿ ಕಿರೀಟವ----ಕೆಳಗಿಳಿಸಿ ,
ಭೇದ ಭಾವಗಳ ---ಗೋಡೆಗಳ ಉರುಳಿಸಿ ,
ಮನವ---------ಬಯಲಾಗಿಸಬೇಕು!
ತನುವು ----ಕಳೆದು,
ಮನವು ----ಕಳೆದು,
ಎಲ್ಲಾ ----ಮುಗಿದು,
ಬಯಲೇ----- ಆಗುವ ಮುನ್ನ!

Tuesday, March 23, 2010

ನಿರಂತರ ----ಹುಡುಕಾಟ

ಹೇಗೆ ಬೆಳೆಯಿತೋ ಕಾಣೆ !
ಗೊತ್ತೇ ಆಗದ ಹಾಗೆ,
ಕೆಲ ಸಂಬಂಧಗಳ ಸುತ್ತ ,
ಕಣ್ಣಿಗೆ ಕಾಣದ ----------,
ಶೀತಲ ಸಮರಗಳ ಹುತ್ತ !            
ಅದರೊಳಗೆ ಹೇಗೆ ಸೇರಿಕೊಂಡವೋ
ಹಾಲಾಹಲ ತುಂಬಿದ ಹಾವುಗಳು!                            
ಆ ಹಾವುಗಳ ಹೊರಬರಿಸಿ ,
ಪ್ರೀತಿ ಪುಂಗಿಯ ನಾದಕ್ಕೆ 
ಮೈ ಮರೆಸಿ -----,
ಸ್ನೇಹದ  ಬುಟ್ಟಿಯಲಿ,
ಹಾಕಿಕೊಂಡು  ಹೋಗುವ ,
ಗಾರುಡಿಗನಿಗಾಗಿ-------,
ನನ್ನ -----ನಿರಂತರ ,
ಹುಡುಕಾಟ.!

Sunday, March 21, 2010

VIRAL----------INFECTION

ನಾಲ್ಕು ದಿನಗಳಿಂದ  viral infection! ಹುಷಾರಿರಲಿಲ್ಲ.ನನಗಲ್ಲ,ನಮ್ಮ computer ಗೆ.ಯಾವುದೋ ಮಾಯದಲ್ಲಿ ವೈರಸ್ ಒಂದು ಒಳ ಸೇರಿದೆ .ಸ್ಕ್ಯಾನ್ ಮಾಡಿದರಿಲ್ಲ,ಅಪ್ ಡೇಟ್ ಮಾಡಿದರಿಲ್ಲ!ಏನು ಮಾಡಿದರೂ ವೈರಸ್ ಕಾಟ ತಪ್ಪಲಿಲ್ಲ.ನಾನು doctor ಆಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.ಅದಕ್ಕೆ ಅದರ doctor ಬಂದು injection ಕೊಡಬೇಕಾಯಿತು.ಈಗ ನೋಡಿ!ಹೇಗೆ ಚಿಗಿತು ಕೊಂಡಿದೆ.!ಆನ್ ಮಾಡಿದರೆ ನನ್ನ ಬೆಲೆ ಈಗ ಗೊತ್ತಾಯಿತೆ,ಎಂದು ಕಿಸಕ್ಕನೆ ನಕ್ಕ ಹಾಗಾಗುತ್ತದೆ.'ಆದದ್ದೆಲ್ಲಾ ಒಳಿತೇ ಆಯಿತು',ಎನ್ನುವ ದಾಸರ ಪದ ಜ್ಞಾಪಕಕ್ಕೆ ಬಂತು .ಈ computer ನ ಹಾವಳಿ ಯಿಂದ ಓದುವ ಹವ್ಯಾಸ ಕಮ್ಮಿಯಾಗಿತ್ತು.ನಾಲಕ್ಕು ದಿನ ಜೋಗಿಯವರ ಅದ್ಭುತ ಬರವಣಿಗೆಗಳ ಬೆನ್ನೇರಿ ಸಾಹಿತ್ಯ ಲೋಕದ ಒಂದು ಸುತ್ತು ಹಾಕಿ ಬಂದಿದ್ದಾಯಿತು.!ಜೊತೆಗೆ ವೈದೇಹಿ ಯವರ ಕ್ರೌಂಚ ಪಕ್ಷಿಗಳು ಕಥಾ ಸಂಕಲನವನ್ನೂ ಓದಿದ್ದಾಯಿತು.ನಿಜಕ್ಕೂ ಆದದ್ದೆಲ್ಲಾ ಒಳಿತೇ ಆಯಿತು.ಬ್ಲಾಗ್ ಶುರು ಮಾಡಿದಾಗಿಂದ ಅದೂ ಒಂದು ರೀತಿಯ addiction ಆಗಿಬಿಟ್ಟಿದೆಯೇನೋ ಎಂದು ಅನುಮಾನ ಬರುತ್ತಿದೆ.ದಿನಕ್ಕೆ ನಾಲಕ್ಕು ಸಲ ಬ್ಲಾಗ್ ಓಪನ್ ಮಾಡುವುದು.ಕಾಮೆಂಟ್ಸ್ ಏನಾದರೂ ಬಂದಿದೆಯಾ ಎಂದು ನೋಡಿ ಅದಕ್ಕೆ ಉತ್ತರ ಕೊಡುವುದು .ಬೇರೆ ಬ್ಲಾಗಿಗೆ ಹೋಗುವುದು.ಯಾವಾಗ ನೋಡಿದರೂ ಬ್ಲಾಗಿನಲ್ಲೇ ಇರುತ್ತೀರ,ನಿಮ್ಮದ್ಯಾಕೋ ಅತಿ ಆಯ್ತು ಎಂದು ಹೆಂಡತಿ ಹತ್ತಿರ ಅನ್ನಿಸಿಕೊಂಡಿದ್ದೂ ಆಯಿತು .ಹೀಗೇ ನಡೆದಿತ್ತು ಬ್ಲಾಗಾಯಣ.ಆದರೆ ನಾಲಕ್ಕು ದಿನ computer ಸಂಪು ಹೂಡಿ ಮನಸ್ಸೆಲ್ಲಾ ಭಣ ಭಣ ಅನಿಸಿದ್ದಂತೂ ನಿಜ!ಬ್ಲಾಗ್ ನ ಮುಖಾಂತರ ನಿಮ್ಮೆಲ್ಲರ ಹತ್ತಿರ ನನ್ನ ಅನಿಸಿಕೆಗಳನ್ನು ಹಂಚಿಕೊಂಡಾಗ ಮನಸ್ಸು ಎಷ್ಟೋ ಹಗುರಾಗುತ್ತದೆ!ಕಾಣದ ನಾನೂ ನೀವೂ ಬ್ಲಾಗಿನ ಬೆಳಕಿನಲ್ಲಿ ಮುಖಾ ಮುಖಿ ಯಾಗುವುದು ಎಷ್ಟು ಛಂದ!-------ಅಲ್ಲವೇ?

Monday, March 15, 2010

'ವಿಕೃತಿ'ಗೂ------ ಸ್ವಾಗತ

ಬೆಲೆ ಏರಿಕೆಯ ಬಿಸಿಗಾಳಿ,
ಈ ಬೇಸಿಗೆಯ ಜೊತೆ, ಜೊತೆಯಲಿ,
ಬಂದು -------, ಒಳಸೇರಿ,
ನಮ್ಮೆದೆಯ -------ಬೇಗೆಗೆ,
ತಿದಿಯನೊತ್ತುತಿದೆ ----------!
ಇರುವ ಎಲ್ಲಾ ತಗಾದಿಯ ನಡುವೆ,
ಮತ್ತೆ ಬಂದಿದೆ ಯುಗಾದಿ!
ವಿರೋಧಿಯ ನಂತರದ ವಿಕೃತ!
ಯಾರನ್ನೂ ದೂರುವಂತಿಲ್ಲ,
ಇದು ------------ಸ್ವಯಂಕೃತ!
ಪ್ರಕೃತಿಯ ವಿಕೃತಗೊಳಿಸಿದ ಫಲಶ್ರುತಿ,
ಬರಗಾಲದ ಬೆನ್ನೇರಿ ಬಂದ ವಿಕೃತಿ.
ಸಧ್ಯದ ಪರಿಸ್ಥಿಯ  ಕನ್ನಡಿಯಂತೆ,
ಎಲ್ಲೆಡೆಯ ಗೊಂದಲಗಳ ಪ್ರತೀಕದಂತೆ!
ಮರಳಿ ಬಂದಿದೆ ಯುಗಾದಿ,
ಎಲ್ಲಾ ವೈರುಧ್ಯದ ನಡುವೆ,
ಪ್ರತಿ ವರುಷದಂತೆ ----------------,
ಸಮೃದ್ಧಿಯ  -------ಕನಸುಗಳ ಹೊತ್ತು !

Saturday, March 13, 2010

ಹಗ್ಗ ---------ಜಗ್ಗಾಟ

ಇಲ್ಲಿ ಕೆಳಗೆ ,ಆಸ್ಪತ್ರೆಯ 
ಬೆಡ್ದೊಂದರ ಮೇಲೆ ಮಲಗಿದ್ದಾನೆ,
ಜೀವ ಜಲ ಬತ್ತಿದ ರೋಗಿ.
ನರಳುತ್ತಾ ,ಆಚೀಚೆ ಹೊರಳುತ್ತಾ.
ಒಮ್ಮೆ ಸಾವಿನತ್ತ ,ಒಮ್ಮೆ ಬದುಕಿನತ್ತ,
ಮಗ್ಗುಲು ------------ಬದಲಿಸುತ್ತಾ !
ಅಲ್ಲಿ ಮೇಲೆ ಶಿರಸ್ಸಾಸನ ಹಾಕಿ,
ತಲೆ ಕೆಳಗಾಗಿ ನೇತಾಡಿ ,
ಶತಾಯು ಗತಾಯು ಇವನ ಬದುಕಿಸುವ 
ಪಣತೊಟ್ಟ  ಸಲೈನ್ ಬಾಟಲ್ !
ಮಧ್ಯೆ ಜೀವ ಸೆಲೆಯ ಕೊಂಡಿಯಂತೆ ,
ಡ್ರಿಪ್ ಸೆಟ್ಟಿನ ಪ್ಲಾಸ್ಟಿಕ್ ನಳಿಕೆ !
ಮೂಗಿಗೆ ಹಾಕಿದ ಟ್ಯೂಬಿನಿಂದ
ಪ್ರಾಣ ವಾಯು ----------ಸಾಲ.!
ಅದನ್ನೂ ಕದಿಯಲು ಸಂಚು ಹೂಡಿದೆ ,
ಕಾಣದ ನಿಗೂಢ ಜಾಲ !
ವ್ಯಕ್ತ --------------,ಅವ್ಯಕ್ತಗಳ ನಡುವೆ 
ನಡೆದಂತಿದೆ ------------ನಿರಂತರ ,
ಹಗ್ಗ ------------------ಜಗ್ಗಾಟ !

Wednesday, March 10, 2010

ಕವಿತೆ -------ಲಾಭ,ನಷ್ಟ----ಒಂದು ಲಹರಿ

ಭಾವನೆಗಳಿಗೆ ಮಾತಿನ ಕುಂಚದಲ್ಲಿ ಬಣ್ಣ ಬಳಿದು ,ಕಾಗದದ ಮೇಲೆ ಅಕ್ಷರಗಳಲ್ಲಿ ಮೂಡಿಸುವುದಿದೆಯಲ್ಲ ,ಅದೊಂದು ಅದ್ಭುತ ಅನುಭಾವವೀಯುವ ಶಬ್ದ ಚಿತ್ರ!   ಕವಿತೆಗಳಲ್ಲಿ ಅವಿತಿರುವ ಶಬ್ಧಗಳನ್ನು ಹೊರ ತೆಗೆದು ,ಒರೆಗೆ ಹಚ್ಚಿ ನೋಡಿದಾಗ ಹೊಸ ಅರ್ಥವೊಂದು ಹೊಳೆದು ಖುಷಿ ಕೊಡುತ್ತದೆ .ಬರೆದವರಿಗೋ ಬರೆದ ಸಂತೋಷ !ಓದುವ ನೂರಾರು ಮಂದಿಗೆ ಅವರವರ ಭಾವಕ್ಕೆ ತಕ್ಕಂತೆ ನೂರಾರು ಅರ್ಥಗಳ ಹೊಳಹು !ಒಟ್ಟಿನಲ್ಲಿ ಇದೂ ಒಂದು ಸೌಂದರ್ಯೋಪಾಸನೆ. ಪ್ರತಿಯೊಂದರಲ್ಲಿಯೂ  ಬೆಡಗು ಕಾಣುವ ಮಗುವಿನ ಬೆರಗುಗಣ್ಣು  ಇಲ್ಲದಿದ್ದರೆ ಬದುಕು ಸಪ್ಪೆ ಎನಿಸುತ್ತದೆ. ಯಾಂತ್ರಿಕತೆ ಕಾಡುತ್ತದೆ.ಯಾವುದರಲ್ಲಿಯೂ ಆಸಕ್ತಿ ಇಲ್ಲದೆ ಬದುಕು ಬೋರ್ ಎನಿಸುತ್ತದೆ .ಎಲ್ಲರೂ ಒಂದಲ್ಲ ಒಂದು ಸಲ ಇದನ್ನು ಅನುಭವಿಸಿದವರೇ .ಕವಿತೆ ಬರೆಯುವುದರಿಂದ ಅಥವಾ ಓದುವುದರಿಂದ ಏನು ಲಾಭ ?ಅದರಿಂದೇನು ಹೊಟ್ಟೆ ತುಂಬುತ್ತದೆಯೇ ?ಎಂದು ಕೇಳುವವರಿದ್ದಾರೆ .ಅವರಿಗೆ ಹೊಟ್ಟೆಯೊಂದರ ಚಿಂತೆ ಬಿಟ್ಟು ಬೇರಾವಚಿಂತೆಯಿಲ್ಲ.
ಆದರೆ ನನ್ನಂತಹ ನೂರಾರು ಮಂದಿಯ ಸ್ಥಿತಿ ಹಾಗಿಲ್ಲವಲ್ಲ !ಹೊಟ್ಟೆ ತುಂಬಿಸಿ ಕೊಂಡರೆ ಆಯಿತೆ ?ಮನಸ್ಸಿಗೆ ಆಹಾರ ಬೇಡವೇ?ಸಂಗೀತ ,ಸಾಹಿತ್ಯ ,ಚಿತ್ರಕಲೆ ಇವೆಲ್ಲಾ ಮನಸ್ಸಿಗೆ ಮುದ ನೀಡುವಂತವು .ಮಾನಸಿಕ ಸ್ವಾಸ್ತ್ಯ ಕಾಪಾಡು ವಂತವು.ನಮ್ಮ ಇಂದಿನ ಒತ್ತಡ ತುಂಬಿದ ಜೀವನಕ್ಕೆ ಇವೆ ಮದ್ದು .ಬದುಕಿನ ಏರಿಳಿತಗಳ ,ಹೊಂಡಗಳು ತುಂಬಿದ ಹಾದಿಯಲ್ಲಿ ,ಜೀವನದ ಪಯಣವನ್ನು ಸುಗಮವಾಗಿಸುವ shock absorbers ಇದ್ದ ಹಾಗೆ.ಇದರಲ್ಲಿ ವ್ಯಾವಹಾರಿಕ ಲಾಭ ಅಥವಾ ನಷ್ಟದ ಪ್ರಶ್ನೆಯೇ ಬರುವುದಿಲ್ಲ .ಸದಾ ಸ್ಪಂದಿಸುತ್ತಿರುವ ಮುದಗೊಂಡ ಚೈತನ್ಯ ತುಂಬಿದ ಮನಸ್ಸೇ ಇದರ ಲಾಭ.! 

Tuesday, March 2, 2010

ಈ ಕಹಿ ನೆನಪುಗಳೇ------ಹಾಗೆ

ಈ ಕಹಿ ನೆನಪುಗಳೇ------ಹಾಗೆ!
ಕಿವಿಯ ಬಳಿ ಗುಂಯ್  ಗುಡುವ ,
ಸೊಳ್ಳೆಗಳಂತೆ---------! 
ಯಾವ ಮಾಯದಲ್ಲೋ ----,
ಒಮ್ಮೆ ಕಚ್ಹಿ------------,
ರಪ್ಪೆಂದು ಅಪ್ಪಳಿಸಿದ ಕೈಗೆ ಸಿಗದೇ ,
ಎಲ್ಲೋ --------------ಪರಾರಿ!
ಕಚ್ಚಿಸಿಕೊಂಡ ಉರಿಯ ಜೊತೆ,
ನಮಗೆ ನಾವೇ ಹೊಡೆದುಕೊಂಡ ಯಾತನೆ!
ಸಾದ್ಯವಾದರೆ ---------------,
ಕೊಲ್ಲು  ಹುಡಕಿ  ನನ್ನ  ನೀನು,
ಹಾಗೇ-------------ಸುಮ್ಮನೆ,
ಎಂದು---------- ಛೇಡಿಸುತ್ತವೆ !
ಮತ್ತೆ ,ಮತ್ತೆ, ಬಂದು----------------ಕಾಡಿ! 
     

Monday, March 1, 2010

ಎನ್ನ --------ಕಿವುಡನ ಮಾಡಯ್ಯ

ರಾತ್ರಿಯ ಸ್ಲೀಪರ್ ಕೋಚ್ ಬಸ್ಸು
ಹೊರಟು ಗಂಟೆ ಒಂದಾಗಿದೆ-----------,  
ನಿಶೆಯ ಮಡಿಲಲ್ಲಿ ರಸ್ತೆ ತಣ್ಣಗೆ ಮಲಗಿದೆ!
ಬಸ್ಸಿನದೋ ಜೋರು ಗೊರಕೆ --------!
ನನ್ನ ಬಳಿ ನಿದ್ದೆಯ ಸುಳಿವಿಲ್ಲ -------!
ಪಕ್ಕದ ಬರ್ತಿನ ಭೂಪ -------,
ನಡುರಾತ್ರಿ ಹನ್ನೆರಡಕ್ಕೆ ಎದ್ದು ,
ತನ್ನ ಮೊಬೈಲಿನಲ್ಲಿ ಯಾರ ಜೊತೆಯೋ,
ಎಡೆ ಬಿಡದೆ ಜೋರು ದನಿಯಲ್ಲಿ,
ಸಂ ---------ವಾದ ,ನಡೆಸಿದ್ದಾನೆ .
ತಾನೂ ನಿದ್ರಿಸಲೊಲ್ಲ ನಮ್ಮನ್ನೂ ಬಿಡಲೊಲ್ಲ.
ನಿಲ್ಲಿಸಲೊಲ್ಲ-------ತನ್ನ ಸೊಲ್ಲ !
       ಆಕ್ಸ್ಹೇಪಿಸಲು-------------,
ಬರ್ತ್ ನನ್ನದು ,ಮೊಬೈಲ್  ನನ್ನದು ,
ಮಾತು ನನ್ನ ಬರ್ತ್ ರೈಟು ಎಂದ!
ಎಲ್ಲವೂ ನಿನ್ನದೇ ಹೌದು ತಂದೆ ,
ಆದರೆ ಕಿವಿ ನನ್ನದಲ್ಲವೇ ಎಂದೆ.
ಸಧ್ಯ ---------ಸುಮ್ಮನಾದ !
ಮಾತನಾಡಲಿಲ್ಲ -----ಮುಂದೆ !