Sunday, October 30, 2011

"ನನ್ನ ರೊಕ್ಕಾ ನನಗ್ ಕೊಡ್ರೀ !!! "

ನನ್ನ ಸ್ನೇಹಿತ ಹೇಮಚಂದ್ರ ರಾಷ್ಟ್ರೀಕೃತ ಬ್ಯಾಂಕ್ ಒಂದರ ಅಧಿಕಾರಿ.ಕೆಲ ವರ್ಷಗಳ ಹಿಂದೆ ರಾಯಚೂರಿನ ಬಹಳ ಹಿಂದುಳಿದ ತಾಲ್ಲೂಕೊಂದರ ಹಳ್ಳಿಯಲ್ಲಿದ್ದ ಬ್ಯಾಂಕಿನ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ.ಒಂದು ದಿನ ಬ್ಯಾಂಕಿಗೆ ಅಜ್ಜನೊಬ್ಬ ಹಳೆಯ ರುಮಾಲೊಂದರಲ್ಲಿ ತಾನು ಕೂಡಿಟ್ಟಿದ್ದ ಹಣವನ್ನೆಲ್ಲಾ ಕಟ್ಟಿಕೊಂಡು ಬಂದು ,'ಯಪ್ಪಾ......, ನಾ ಸೇರಿಸಿಟ್ಟ ರೊಕ್ಕಾಇದರಾಗ  ಐತಿ.ಇದನ ನೀವು ಜ್ವಾಪಾನ ಮಾಡ್ತೀರೇನ್ ಯಪ್ಪಾ?' ಎಂದು ಕೇಳಿದ.ತಮ್ಮ ಬ್ಯಾಂಕ್ ಇರುವುದೇ ಅದಕ್ಕೆಂದೂ,ಅವನ ಹಣವನ್ನು ಜೋಪಾನವಾಗಿ ಇಡುವುದಲ್ಲದೇ ಅದಕ್ಕೆ ವರುಷಕ್ಕೆಇಷ್ಟು ಅಂತ ಬಡ್ಡಿಯನ್ನೂ ಸೇರಿಸಿಕೊಡುವುದಾಗಿ ಬ್ಯಾಂಕಿನವರು ಹೇಳಿದರು.'ಯಪ್ಪಾ ನನಗ ಬೇಕಂದಾಗ ನನ ರೊಕ್ಕಾ ನನಗ ಕೊಡ್ತೀರೆನ್ರೀ?'ಎಂದು ಎರೆಡೆರಡು ಬಾರಿ ಕೇಳಿಕೊಂಡ ಮೇಲೆ ತನ್ನ ಗಂಟನ್ನು ಬಿಚ್ಚಿ ಟೇಬಲ್ ಮೇಲಿಟ್ಟ.ಅದರಲ್ಲಿ ಐದು,ಹತ್ತು,ಇಪ್ಪತ್ತರ ಹಲವು ನೋಟುಗಳೂ,ಐವತ್ತು ನೂರರ ಕೆಲವು ನೋಟುಗಳೂ, ಒಂದು ರಾಶಿ ಚಿಲ್ಲರೆ ಹಣವೂ ಸೇರಿ ಎಲ್ಲಾ ಒಟ್ಟು ಐದು ಸಾವಿರದಷ್ಟು ಹಣ ಇತ್ತು.ಅದು ಅವನು ಬಹಳ ವರ್ಷಗಳಿಂದ ಕೂಡಿಟ್ಟ ಹಣವಾಗಿತ್ತು.ಅದನ್ನು ಅವನ ಮುಂದೆಯೇ ಎಣಿಸಿ,ಅರ್ಜಿಯಲ್ಲಿ  ಅವನ ಹೆಬ್ಬೆಟ್ಟು ಒತ್ತಿಸಿ ,ಐದು ಸಾವಿರಕ್ಕೆ ಒಂದು ವರ್ಷದ ಒಂದು  fixed deposit ಮಾಡಿ, ಅವನ ಕೈಯಲ್ಲಿ ಅದರ ದಾಖಲೆ  ಪತ್ರವನ್ನು ಕೊಟ್ಟು ಕಳಿಸಿದರು.ಆರು ತಿಂಗಳ ನಂತರ ಅಜ್ಜ ತನ್ನ ಮಗಳ ಮದುವೆ   ಇರುವುದರಿಂದ ತನಗೆ ಹಣದ ಅವಶ್ಯಕತೆ ಇರುವುದೆಂದೂ,ತನ್ನ ಹಣವನ್ನು ವಾಪಸ್  ತನಗೆ ಕೊಡಬೇಕೆಂದೂ ಕೇಳಿಕೊಂಡ.ಒಂದು ವರ್ಷಕ್ಕೆ ಎಫ್.ಡಿ.ಇಟ್ಟಿರುವುದರಿಂದ ಬಡ್ಡಿ ಹಣ ಪೂರ್ತಿ ಬರುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಅಜ್ಜ "ನನ್ ರೊಕ್ಕಾ ನನಗ ಪೂರಾ ಕೊಡಂಗಿಲ್ಲಾ  ಅಂದ್ರ ಏನ್ರೀ........? ಶಾಲೀ ಕಲ್ತಿಲ್ಲಾ ಅಂತಾ ಮೋಸಾ ಮಾಡ್ತೀರೇನು ?"ಎಂದು ಕೂಗಾಡಲು ಶುರು ಹಚ್ಚಿಕೊಂಡ.ಅವನನ್ನು ಒಳಗೆ ಕರೆದು ಮ್ಯಾನೇಜರ್ ಅವರ ಚೇಂಬರ್ ನಲ್ಲಿ ಕೂರಿಸಿ , ಅವನ ಅಸಲು ಹಣ ಐದು ಸಾವಿರವನ್ನು ಪೂರ್ತಿ ಕೊಡುವುದಾಗಿಯೂ ,ಬಡ್ಡಿಯ ಹಣ ಸ್ವಲ್ಪ ಕಡಿಮೆ ಬರುವುದೆಂದೂ ಅವನಿಗೆ ತಿಳಿಸಿ ಹೇಳಬೇಕಾದರೆ ಅಧಿಕಾರಿಗಳಿಗೆ ಸಾಕು ಸಾಕಾಯಿತು. ಅವನು ಒಪ್ಪಿದ ಮೇಲೇ ರಸೀದಿಗಳಿಗೆ ಅವನ ಹೆಬ್ಬೆಟ್ಟು ಒತ್ತಿಸಿಕೊಂಡುಅಸಲು ಐದು ಸಾವಿರ ( ಐದುನೂರರ ಹತ್ತು ನೋಟುಗಳು) ಮತ್ತು ಬಡ್ಡಿ ಹಣ  ನಾನ್ನೂರು ಚಿಲ್ಲರೆ  ಅವನ ಮುಂದಿಟ್ಟು ತೆಗೆದು ಕೊಂಡು ಹೋಗುವಂತೆ ತಿಳಿಸಿದರು.ಅಜ್ಜ ಆ ಹಣ ಮುಟ್ಟಲು ಸುತರಾಂ ಒಪ್ಪಲಿಲ್ಲ."ಇದು ನಾ ಕೊಟ್ಟ ರೊಕ್ಕ ಅಲ್ರೀ! ಈ ರೊಕ್ಕ ಬ್ಯಾಡ್ರೀ.......,ನಾ ಕೊಟ್ಟ  ರೊಕ್ಕನ  ನನಗ ವಾಪಸ್  ಕೊಡ್ರೀ ಸಾಹೇಬ್ರಾ  !"ಎಂದು ಗಂಟು ಬಿದ್ದ.ಇದು ಅವನು ಕೊಟ್ಟ ಹಣದಷ್ಟೇ ಮೊತ್ತದ ಹಣವೆಂದೂ,ಎಲ್ಲಾ ಒಂದೇ ಎಂದೂ ಎಷ್ಟು ತಿಳಿಸಿ ಹೇಳಿದರೂ ಅಜ್ಜ "ನಾ ಕೊಟ್ಟ ರೊಕ್ಕ ಎಲ್ಲಿ ಹೋತು?ಜ್ವಾಪಾನ ಮಾಡತೀವಿ ಅಂತ ತಗಂಡರಲ್ರೀ ! ನಮ್ಮ ರೊಕ್ಕ ನಮಗಾ ಕೊಡಂಗಿಲ್ಲಾ  ಅಂದ್ರ ಹ್ಯಾಂಗ್ರೀ ?"ಎಂದು ಕೂಗಾಡುತ್ತಾ ಹೋಗಿ ಊರ ಗೌಡನನ್ನು ಕರೆದುಕೊಂಡು ಬಂದ.ಊರ ಗೌಡ ವ್ಯವಹಾರಸ್ಥ.ಬ್ಯಾಂಕ್ ಅಧಿಕಾರಿಗಳು ನಡೆದದ್ದನ್ನು ತಿಳಿಸಿದ ಮೇಲೆ ಅವನಿಗೆ ಎಲ್ಲಾ ಅರ್ಥವಾಯಿತು. ಅವನು ಅಧಿಕಾರಿಗಳಿಗೆ ಕಣ್ಣು ಸನ್ನೆ ಮಾಡಿ "ಇದು ಬ್ಯಾಡ್ರೀ ಸರ್ ,ಹತ್ತು ರೂಪಾಯಿಯ ಹೊಸಾ ನೋಟು ಬಂದವಲ್ಲಾ,ಅವನ್ನು ತರ್ರೀ "ಎಂದ.ಅಷ್ಟೂ ಹಣಕ್ಕೂ ಹತ್ತು ರೂಪಾಯಿಗಳ ಹೊಸ ನೋಟು ಕೊಟ್ಟರು.ಗೌಡ ಅಜ್ಜನ ಕಡೆ ತಿರುಗಿ "ಅಜ್ಜಾ ....,ನೀ ಕೊಟ್ಟ ಹಣ ಎಲ್ಲ ಹಳೇದಾಗಿದ್ವು .ಸ್ವಚ್ಛ ಆಗಿ ಬರಲಿಕ್ಕೆ ದಿಲ್ಲಿಗೆ ಹೊಗ್ಯಾವೆ.ಅವು ಬರಲಿಕ್ಕೆ ಇನ್ನೂ  ಒಂದು ವರ್ಷ ಹಿಡೀತೈತಿ.ಅಷ್ಟರ ಮಟ ನೀ ತಡೀತೀಯೇನು?ಆಗಂಗಿಲ್ಲಾ !ಹೌದಲ್ಲೋ?  ಇವು  ಸ್ವಚ್ಛ ಆಗಿ ಈಗಷ್ಟೇ ಬಂದ ಹೊಸ ರೊಕ್ಕ.ನಿನಗಂತಾ  ಕೊಡಿಸೀನಿ. ಬಾಯಿ ಮುಚ್ಕಂಡು ತಕ್ಕಂಡು ಹೋಗು"ಎಂದ.ಗೌಡ ಹೇಳಿದ ಮಾತು ಅಜ್ಜನಿಗೆ ಒಪ್ಪಿಗೆ ಆಯಿತು.ಹತ್ತರ ಹೊಸ ನೋಟುಗಳನ್ನು ಅಜ್ಜ ತನ್ನ ರುಮಾಲಿನಲ್ಲಿ ಕಟ್ಟಿಕೊಂಡು ಸಂತಸದಿಂದ "ನೀ ಇದ್ದೀ ಅಂತ ಎಲ್ಲಾ ಸುಸೂತ್ರ ಆತು ನೋಡು ಗೌಡ"ಎಂದು ಗೌಡನ ಉಪಕಾರವನ್ನು ಕೊಂಡಾಡುತ್ತಾ  ಹೋದನಂತೆ. ಇಷ್ಟು ಹೇಳಿ ಹೇಮಚಂದ್ರ "ಹೇಗಿದೆ ನಮ್ಮ ಹಳ್ಳಿ ಅನುಭವ?"ಎಂದ.ನಾನು ಮಾತು ಹೊರಡದೆ ದಂಗಾಗಿದ್ದೆ!ಆಗ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ...."ಹೀಗೂ ...ಉಂಟೆ !"

Friday, October 28, 2011

"ಜಟಕಾದಲ್ಲಿ ಹೀಗೊಂದು ರೋಮ್ಯಾನ್ಸ್"

ಸುಮಾರು ಅರವತ್ತು ವರ್ಷಗಳ ಹಿಂದಿನ ಮಾತು .ಆಗೆಲ್ಲಾ ಆಟೋಗಳ ಆಟಾಟೋಪ ಇರಲಿಲ್ಲ.ಅದು ಜಟಕಾಗಳ ಜಮಾನ. ನನ್ನ ಪರಿಚಿತ ವಯೋವೃದ್ಧರೊಬ್ಬರು ಮದುವೆಯಾದ ಹೊಸದರಲ್ಲಿ ಜಟಕಾ ಬಂಡಿಯೊಂದರಲ್ಲಿ ತಮ್ಮ ನವ ವಧುವಿನೊಡನೆ ಹೊರಗೆ ಹೊರಟಿದ್ದರು.ಹೆಂಡತಿಗೆ ಆಗಿನ್ನೂ ಹದಿನೇಳುವರ್ಷ.ಇವರಿಗೆ ಇಪ್ಪತ್ತೆರಡು . ಮೊದಲೇ ನಾಚಿಕೆ ಸ್ವಭಾವದ ಹೆಣ್ಣು.ಗಂಡನ ಪಕ್ಕಸಂಕೋಚದಿಂದ ಮುದುರಿಕೊಂಡು ಕುಳಿತಿದ್ದರು.ಗಂಡನಿಗೆ ಸಹಜವಾಗಿ ಅವರ ಪಕ್ಕ ಸರಿದು ಕುಳಿತು ಕೊಳ್ಳಬೇಕೆಂಬ ಬಯಕೆ.ಇವರು ಅವರ ಪಕ್ಕಕ್ಕೆ ಸರಿದಂತೆಲ್ಲಾ ಅವರು ನಾಚಿಕೆಯಿಂದ  ಹಿಂದಕ್ಕೆ ಸರಿಯುತ್ತಿದ್ದರು.ಹೀಗೆ ಹಿಂದಕ್ಕೆ ಸರಿದೂ,ಸರಿದೂ ಅವರಿಗೆ ಗೊತ್ತಿಲ್ಲದ ಹಾಗೆ  ಜಟಕಾದ ಮುಂಭಾಗದಲ್ಲಿ ಕುಳಿತಿದ್ದ ಜಟಕಾ ಸಾಬಿಯ ಪಕ್ಕಕ್ಕೆ ಬಂದು ಬಿಟ್ಟಿದ್ದರು!ಗಂಡ ಸಿಟ್ಟಿನಿಂದ 'ನನಗಿಂತಾ ನಿನಗೆ ಆ ಜಟಕಾ ಸಾಬೀನೆ ಹೆಚ್ಚಾ?'ಎಂದು ರೇಗಿದರು .ಜಟಕಾ ಸಾಬಿ ತನ್ನ ಉರ್ದು ಮಿಶ್ರಿತ ಕನ್ನಡ ದಲ್ಲಿ "ಏನಮ್ಮಾ....! ನೀವು ನಮ್ದೂಕೆ ಪಕ್ಕ ಯಾಕೆ  ಬಂದ್ರಿ ? ಸಾಹೇಬರ  ಪಕ್ಕ ಜಾಕೇ ಬೈಟೋ ! 'ಎಂದು ಬೇರೆ ಹೇಳಿಬಿಟ್ಟನಂತೆ. ಪಾಪ ಅವರು  ಅಲ್ಲಿಂದ ಸರಿದು ಜಟಕಾದ ಮಧ್ಯ ಭಾಗದಲ್ಲಿ ನಾಚಿಕೆ ಮತ್ತು  ಅವಮಾನಗಳಿಂದ ಮೈ ಹಿಡಿಮಾಡಿಕೊಂಡು ಕುಳಿತರು ! ಈಗಲೂ ಅವರು ಆ ಘಟನೆಯನ್ನು ನೆನೆಸಿಕೊಂಡು 'ನನಗಿಂತ ಆ ಜಟಕಾ ಸಾಬಿಯೇ ಇವಳಿಗೆ ಹೆಚ್ಚು ಇಷ್ಟ ಆಗಿದ್ದಾ"ಎಂದು ಹೆಂಡತಿಯನ್ನು ರೇಗಿಸುತ್ತಾರೆ.ಇವರೂ ಸುಮ್ಮನಿರದೆ "ಹೌದು, ನಿಮಗಿಂತಾ ಅವನೇ ಎಷ್ಟೋ  ಚೆನ್ನಾಗಿದ್ದಾ !"ಎಂದು,ಸೇಡು ತೀರಿಸಿಕೊಳ್ಳುತ್ತಾರೆ! ಅವರ ಸರಸ,ಇವರ ಹುಸಿ ಮುನಿಸು,ಮಾಗಿದ ಅವರಿಬ್ಬರ ದಾಂಪತ್ಯಕ್ಕೆ ಇನ್ನಷ್ಟು  ಮೆರಗನ್ನು ಕೊಡುತ್ತದೆ !!

Tuesday, October 25, 2011

"ಹಬ್ಬದೂಟ .....ಘಮ್ಮಗೆ !! ನೆನೆಸಿಕೊಂಡ್ರೆ ಸುಮ್ಮಗೆ !! "


"ಎಲ್ಲರಿಗೂ ............ದೀಪಾವಳಿ ಹಬ್ಬದ ............ಶುಭಾಶಯಗಳು .......ಮನೆಯಲಿ.......ಹಬ್ಬ !!
ಅಬ್ಬಬ್ಬಾ.................!!
ಏನು ತಿಂಡಿ!ಏನೆಲ್ಲಾ ಊಟ!!
ಬೆಳಿಗ್ಗೆಗೆ ತಿಂಡಿಯ ತಳಪಾಯ!
ಎರಡು ಇಡ್ಲಿ ಮತ್ತು
ಎರಡೇ ಎರಡು  ವಡೆ !
ಮಧ್ಯಾಹ್ನದ ಊಟಕ್ಕೆ ,
ಮೆಲ್ಲಗೆ ಏಳುತ್ತಿತ್ತು
ಏಳಂತಸ್ತಿನ..........
ಮಹಡಿಯ ಗೋಡೆ.......!
ಅನ್ನ ,ತೊವ್ವೆ ತುಪ್ಪ!
ಜೊತೆಗೆ ಒಂದೇ ಒಂದು 
ಎರಿಯಪ್ಪ..........!
ಕೋಸಂಬರಿ ಮತ್ತು ಪಲ್ಯ!
ಬೆವರು ಒರಿಸಿಕೊಳ್ಳೋಕೆ,
ಇಗೋ ತಗೋಳಿ ಈ ಶಲ್ಯ!
ಹಪ್ಪಳ ಮತ್ತು ಸಂಡಿಗೆ !
ಒಂದೇ ಒಂದು ಮಂಡಿಗೆ!
ಬಿಸಿ ಬಿಸಿ ...............,
ಬಿಸಿಬೇಳೆ ಬಾತ್ !
ಅದಕ್ಕೆ ಆಲೂ ಬೋಂಡಾ 
ಸಾಥ್ ................! 
ಸ್ವಲ್ಪ ತಿನ್ನಿ ಮೊಸರನ್ನ
ಊಟ ಮುಗಿಸೋ ಮುನ್ನ.
ಆಗುತ್ತಿದೆಯೇ ಆಯಾಸ?
ಸ್ವಲ್ಪವೇ ಕುಡಿದು ಬಿಡಿ 
ಗಸ ಗಸೆ
ಪಾ 
ಯ 
ಸ 
Z Z Z Z Z Z Z Z.NIDDE.....!!!


Sunday, October 23, 2011

"ಅಪ್ಪಾ ....ಹಂಗಂದ್ರೆ ಏನಪ್ಪಾ ? "

ಮಕ್ಕಳು ಮುಗ್ಧರು.ಸ್ವಾಭಾವಿಕವಾಗಿ ಅವರಿಗೆ ಕುತೂಹಲ ಹೆಚ್ಚು.ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ತಮ್ಮ ತಂದೆ ತಾಯಂದಿರನ್ನು ಏನು ?ಎತ್ತ?ಯಾಕೆ ?ಎಲ್ಲಿ ?ಎನ್ನುವ ಪ್ರಶ್ನೆಗಳನ್ನು ಕೇಳಿ ತಲೆ ತಿನ್ನುತ್ತಿರುತ್ತಾರೆ.ಕೆಲವೊಮ್ಮೆ ಅವರ ಅಭಾಸವಾಗುಂತಹ ಪ್ರಶ್ನೆಗಳಿಗೆ ಏನು ಉತ್ತರ ಕೊಡುವುದು ಎಂದು ತಿಳಿಯದೆ ಪೋಷಕರು ಕಣ್ಣು ಕಣ್ಣು ಬಿಡುತ್ತಿರುತ್ತಾರೆ.ನನ್ನ ಮಗನೂ ಸಣ್ಣ ವಯಸ್ಸಿನಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಪ್ರಶ್ನೆ ಕೇಳುತ್ತಿದ್ದ.ಯಾವುದೋ ಕನ್ನಡ ಸಿನಿಮಾ ಒಂದಕ್ಕೆ ಹೋಗಿದ್ದೆವು.ಹೀರೋ ಮತ್ತು ಹೀರೋಯಿನ್ 'ಮದುವೆಯ ನಂತರ ಹನಿ ಮೂನಿಗೆ ಎಲ್ಲಿಗೆ ಹೋಗುವುದು' ಎನ್ನುವ ಅತೀ ಗಹನವಾದ ವಿಷಯದ ಬಗ್ಗೆ ಚರ್ಚೆನಡೆಸುತ್ತಿದ್ದರು.ಸುತ್ತಮುತ್ತ ಇದ್ದ ನಿಶ್ಯಬ್ಧದ ನಡುವೆ "ಅಪ್ಪಾ ಹನಿ ಮೂನೆಂದರೆ ಏನಪ್ಪಾ?"ಎನ್ನುವ ನನ್ನ ಮಗನ ಜೋರು ಗಂಟಲಿನ ಪ್ರಶ್ನೆ ತೂರಿಬಂತು!ಸುತ್ತಮುತ್ತಲಿದ್ದವರೆಲ್ಲಾ ಸಿನಿಮಾ ನೋಡುವುದು ಬಿಟ್ಟು ನಮ್ಮತ್ತ ನೋಡಿ ಜೋರಾಗಿ ನಗಲು ಶುರುಮಾಡಿದರು.ಮಗ ಅಷ್ಟಕ್ಕೇ ಬಿಡದೆ"ಅಪ್ಪಾ ಹೇಳಪ್ಪಾ, ಅಪ್ಪಾ ಹೇಳಪ್ಪಾ"ಎಂದು ಪೀಡಿಸತೊಡಗಿದ.ಮುಂದೆ ಇನ್ನೂ ಹೆಚ್ಚಿನ ಆಭಾಸದ ಪ್ರಶ್ನೆಗಳನ್ನು ಕೇಳಬಹುದೆಂದು ಹೆದರಿ, 'ಹೇಳುತ್ತೇನೆ ಬಾ' ಎಂದು ಹೊರಗೆ ಕರೆದುಕೊಂಡು ಹೋದೆ.ನಂತರ ಅವನಿಗೆ ಏನು ಸಮಜಾಯಿಷಿ ನೀಡಿದೆನೋ ನೆನಪಿಲ್ಲ.ಈಗಿನ ತಂದೆ ತಾಯಂದಿರು ಮಕ್ಕಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋದಾಗ ಏನೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾಗಬಹುದೋಎನ್ನುವುದನ್ನು  ನೆನೆಸಿಕೊಂಡರೇ ಭಯವಾಗುತ್ತದೆ. ನಿಮಗೂ ಇಂತಹ ಅನುಭವಗಳಾಗಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.ನಮಸ್ಕಾರ.

Friday, October 21, 2011

"ಬುದ್ಧಿವಂತಿಕೆ "

ನಮ್ಮ ಆಸ್ಪತ್ರೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿರುವ  ಮಾಲಿಂಗ  ಓದಿರುವುದು ಬರೀ ಏಳನೇ ತರಗತಿಅಷ್ಟೇ!.ಆದರೆ ಅವನ ಬುದ್ಧಿಯ ಹರಿತ, ನೋಡಿದರಷ್ಟೇ ನಂಬಿಕೆ ಬರುವುದು.ಓದಿಗೂ ಬುದ್ಧಿಗೂ ಯಾವುದೇ ಸಂಬಂಧ ಇಲ್ಲ ಎನ್ನುವ ನನ್ನ ಅನಿಸಿಕೆಗೆ ನಮ್ಮ ಮಾಲಿಂಗ ಒಳ್ಳೇ ಉದಾಹರಣೆ.ಏನನ್ನಾದರೂ ಒಮ್ಮೆ ನೋಡಿದರೆ ಅದನ್ನು ತಕ್ಷಣ ಕಲಿತಿರುತ್ತಾನೆ.
Tailoring,carpentry,electrical repair,ಸೀರೆಗೆ ಫಾಲ್ಸ್ ಹಾಕುವುದು,ಗಿಣಿ ಪಾರಿವಾಳಗಳನ್ನು ಸಾಕುವುದು,ಅವನ ಹವ್ಯಾಸಗಳು  ಒಂದೇ ಎರಡೇ!ಒಂದೇ ಒಂದು ನಿಮಿಷವೂ ಸುಮ್ಮನಿರುವ ಪಾರ್ಟಿಯಲ್ಲ!ಅವನ ಸಮಯ ಪ್ರಜ್ಞೆ ಅದ್ಭುತ!ಎಲ್ಲಾ ದಿನ ನಿತ್ಯದ ಸಮಸ್ಯೆಗೂ ಅವನಲ್ಲಿ ಉತ್ತರವಿರುತ್ತದೆ.ಮೊನ್ನೆ ನನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಬ್ಯಾಗಿನ ಜಿಪ್ ನ ಹಿಡಿ ಕಿತ್ತುಹೋಯಿತು.ಕಿತ್ತು ಹೋದ ಜಿಪ್ಪಿನ ಜೊತೆಯೇ ಎರಡು ದಿನ ಗುದ್ದಾಡಿ ನನ್ನ ಉಗುರು ಕಿತ್ತು ಹೋಗಿತ್ತು.ನಾನು ಒದ್ದಾಡುತ್ತಿರುವುದು ಮಾಲಿಂಗನ ಗಮನಕ್ಕೆ ಬಂತು.ತಕ್ಷಣ ನನ್ನ ಕೀ ಬಂಚಿನಲ್ಲಿದ್ದ ಸ್ಟೀಲ್ ರಿಂಗ್ ಒಂದನ್ನು ತೆಗೆದು ಬ್ಯಾಗಿನ  ಜಿಪ್ಪಿಗೆ ಸಿಗಿಸಿ ಒಂದು ಸೊಗಸಾದ ಜಿಪ್ಪಿನ ಹಿಡಿ ತಯಾರು ಮಾಡಿಕೊಟ್ಟಿದ್ದ!ಈಗ  ಬ್ಯಾಗಿನ  ಜಿಪ್ಪು ತೆಗೆಯುವಾಗ ಮತ್ತು ಹಾಕುವಾಗಲೆಲ್ಲಾ ಮನಸ್ಸು ಕೃತಜ್ಞತೆಯಿಂದ ಮಾಲಿಂಗನನ್ನು ನೆನೆಯುತ್ತದೆ!ಈಗ ನೀವೇ ಹೇಳಿ.Rank ಬಂದವರು ಮಾತ್ರ ಬುದ್ಧಿವಂತರೇ?

Monday, October 17, 2011

"ಗಡಿಯಾರ!! "

ನಮ್ಮ ಸಂಸಾರ ..........,
ಎದುರಿನ ಗೋಡೆಯ ಮೇಲಿನ 
ಗಡಿಯಾರ.............,
ಎರಡಕ್ಕೂ ಎಷ್ಟೊಂದು ಸಾಮ್ಯ!
ನನ್ನ ಹೆಂಡತಿ.............,
ಶಿಸ್ತಿನ ಸಿಪಾಯಿ  !
ಸೆಕೆಂಡಿನ ಮುಳ್ಳಿನ ಹಾಗೆ 
ಸಪೂರ.........!
ಮೂಗಿಗೆ ಕವಡೆ ಕಟ್ಟಿಕೊಂಡ 
ಗಾಣದೆತ್ತಿನ ದುಡಿತ !
ಅವಳ ನಿರಂತರ 
ಪ್ರೀತಿಯ ತುಡಿತವೇ 
ನಮ್ಮ ಸಂಸಾರದ 
ನಾಡಿಯ ಮಿಡಿತ !
ಮಕ್ಕಳೋ ..........,
ನಿಮಿಷದ ಮುಳ್ಳುಗಳಂತೆ !
ನಿಮಿಷಕ್ಕೊಂದು ರೀತಿ !
ಗಂಟೆಗೆ ಅರವತ್ತರ 
ಅವಸರದ ಓಟ !
ಇನ್ನು,ಅರವತ್ತರದ ಸನಿಹದ 
ನಾನೋ.................!
ಗಂಟೆಯ ಮುಳ್ಳು !
ಧಡಿಯ !ನಿಧಾನಿ!
ಮನೆಯ ಪ್ರಧಾನಿ (?) !
ಗಂಟೆಗೊಮ್ಮೆ ಕದಲಿಕೆ!
ಮನೆಯೊಡತಿಯಿಂದ 
'ಎಷ್ಟು ಸ್ಲೋ', ಎಂಬ 
ಸಣ್ಣದೊಂದು ಮೂದಲಿಕೆ! 
ಪ್ರೀತಿಯ ಬ್ಯಾಟರಿ ಮುಗಿದಾಗ 
ಮನೆಯಲ್ಲಿ ಹಠಾತ್ ಮುಷ್ಕರ!
ಸ್ವಲ್ಪ ಕಾಲ ...........,
ಎಲ್ಲವೂ ,ಎಲ್ಲರೂ ಸ್ತಬ್ಧ! 
ಮತ್ತೆ ಪ್ರೀತಿಯ ಹೊಸ ಚೈತನ್ಯ 
ಮರು ಚಾಲನೆ  ನೀಡುವ ತನಕ!!
ಮತ್ತದೇ ಓಟದ ಮಾಟ !!!

Sunday, October 16, 2011

"ಕವಿತೇ....ನೀನೆಲ್ಲಿ ಅವಿತೇ?!!!"

ಕವಿತೆಯೆಂದರೆ 
ಹೀಗೇ ಎಂದು 
ಹೇಳುವುದು ಹ್ಯಾಗೇ ?
ಕವಿತೆ ಎಂದರೆ ......
ಸಂಜೆಗೆಂಪು ಬಾನಲ್ಲಿ 
ಭಗವಂತನ ಕಾಣದ
ಕೈಯ ಸಹಿಯಂತಿರುವ
ಬೆಳ್ಳಕ್ಕಿ ಸಾಲು !
ಸವಿಯಾದೊಂದು ನಿದ್ದೆ ಮಾಡಿ 
ಎದ್ದ ಆಹ್ಲಾದ!
ಕವಿತೆಯೆಂದರೆ......
ಚಿಂತಾಮಣಿಯಲ್ಲಿ 
ಕಂಡ ಆ ಮುಖ!
'ಫಳ್'ಎಂದು ಕ್ಯಾಮೆರಾದ 
ಫ್ಲಾಶ್ ನಂತೆ ಬೆಳಗಿದ 
ಆ ಕಿರು ನಗು!
ಎಲ್ಲೋ ಹಚ್ಚಿದ ಅಗರು 
ಗಾಳಿಯಲ್ಲಿ ಅಲೆ ಅಲೆಯಾಗಿ
ತೇಲಿ ಬಂದು...............,
ನಮ್ಮನ್ನೂ ಅದರೊಡನೆ 
ತೇಲಿಸಿದ ಹಾಗೆ!
ಕವಿತೆಯೆಂದರೆ......
ನಲ್ಲೆಯ ಆಲಿಂಗನ!
ಮೈಸೂರು ಮಲ್ಲಿಗೆಯ ಕಂಪು!
ಕದ್ದು ಸಿಕ್ಕ ಮುದ್ದು!
ಜೋಗದ ಸಿರಿ ಬೆಳಕು!
ಕವಿತೆಯೆಂದರೆ ಹೀಗೇ
ಎಂದು ಹೇಳಲಾಗದು !
ಅದಕ್ಕೇ .................
ಕವಿತೇ..................!!
ನೀನೆಲ್ಲಿ ಅವಿತೇ ?!!
...........ಎನ್ನುವುದು!!!


Saturday, October 15, 2011

"ನೀ ದೊಡ್ಡ ಶಾಣ್ಯಾ ಇದ್ದೀ...!!!"

ಅಪ್ಪಾ ತಂದೀ.............!
ಕಾಣದ ಹಾಂಗ ಕುಂತ ನೀ,
ದೊಡ್  ಶಾಣ್ಯಾ ಇದ್ದೀ !
ಹುಡುಗಿದ್ದಾಗ............,
ಆಟಕ್ ಹಚ್ಚಿದಿ.............!
ಹರೇ ಬಂದಾಗ, ಕಣ್ಣಾಗೆಲ್ಲಾ
ಬರೇ ಹುಡಿಗ್ಯಾರ್ನಿಟ್ಟಿ  !
ವಯಸ್ಸಿನಾಗ ಹೆಗಲ ಮ್ಯಾಲ
ಸಂಸಾರದ ನೊಗ ಕಟ್ಟಿ 
ಕಷ್ಟಗಳ ಚಾಟೀ ಬೀಸಿ 
ಹೈರಾಣ್ ಮಾಡಿಟ್ಟಿ!
ಸಂಸಾರ ಅಂಬೋದು 
ನಿಸ್ಸಾರ ಆದಾಗ ,
'ಸಾಕೋ ರಂಗಾ'
ಅನ್ನೋ ಹಾಂಗ,
ಬ್ಯಾನೀ...... ಕೊಟ್ಟಿ!
ಮುದಿಯಾದಾಗ ......,
ಕಂತೀ,ಕಂತೀ .......
ಚಿಂತೀ ಇಟ್ಟಿ !
ಒಟ್ಟಾಗ..................,
ನಿನ್ನ ತಂಟೀಕ್ ಬರದ ಹಾಂಗ 
ಮಾಡಿಟ್ಟಿ..................!
ಒಟ್ಟಾಗ......ಇಟ್ಟಿ  !
ಬರೀ ಇಷ್ಟರಾಗಾ .........
ಮುಗೀತಲ್ಲೋ ತಂದೀ!
ನಿನ್ನ ಚಿಂತೀ ಮಾಡೂದು 
ಯಾವ ಕಾಲಕ್ಕಂದೀ.....?!!!

Friday, October 14, 2011

"ಎದೆಗೂ,ಎದೆಗೂ ನಡುವೆ ಕಡಲು !!"

ಗಂಟಲೊಳಗಿನ ಬಿಸಿ ತುಪ್ಪ 
ಉಗುಳಲಾಗದು, ನುಂಗಲಾಗದು!
ಹೆಸರಿಗೆ ಹತ್ತಿರದ ಬಂಧುಗಳು!
ಎದೆಗೂ,ಎದೆಗೂ ನಡುವೆ ಕಡಲು!
ಕಡಲೊಳಗೆ ಸಾವಿರ ಸಾವಿರ 
ಮುಸುಕಿನ ಗುದ್ದಾಟದ 
ಶಾರ್ಕ್,ತಿಮಿಂಗಿಲಗಳು!
ನಮ್ಮ ನಮ್ಮ ಅಹಂಕಾರಗಳ 
ಆಕ್ಟೋಪಸ್ ಹಿಡಿತಗಳು!
ಇಷ್ಟು ಸಾಲದೇ ಸಂಬಂಧ ಕೆಡಲು!
ಮೇಲೆ ಮಾತಿನ ಮರ್ಮಾಘಾತದ 
ಅಲೆಗಳ ಹೊಡೆತಕ್ಕೆ 
ಆತ್ಮೀಯತೆಯ ಸೇತುವಿನ 
ಬೆಸೆಯಲಾಗದ ಬಿರುಕು!
ಯಾವುದೋ ಮದುವೆಯಲ್ಲೋ 
ಮುಂಜಿಯಲ್ಲೋ,
ವೈಕುಂಠ ಸಮಾರಾಧನೆಯಲ್ಲೋ 
ಎದುರೆದುರು ಸಿಕ್ಕಾಗ 
ಹುಳ್ಳಗೆ ನಕ್ಕು 'ಹಾಯ್'ಎಂದು 
ಗಾಯಕ್ಕೆ ಮುಲಾಮು ಸವರೋಣ!!
ಮುಂದಿನ ಭೆಟ್ಟಿಯ ತನಕ 
ನಿರಾಳವಾಗಿ 'ಬೈ'ಎಂದು  ಬಿಡೋಣ!!


Wednesday, October 12, 2011

"ಕಹಿ ನೆನಪುಗಳಿಗೆ ಸಾವಿಲ್ಲ"

ಕನಸಿನಲ್ಲೂ ಬೆಚ್ಚಿ 
ಅಳುವಂತೆ ಮಾಡುವ 
ನಿಮ್ಮ ನೆನಪು ......,
ಆಳದಲ್ಲೆಲ್ಲೋ ಮುರಿದು 
ಮುಲುಗುಡಿಸುವ ಮುಳ್ಳು!
ವರುಷಗಳು ಉರುಳಿದಂತೆ 
ನೆನಪುಗಳು ಮಾಸುತ್ತವೆಂಬುದೆಲ್ಲಾ
ಬರೀ........... ಸುಳ್ಳು!
ಕೀವಾಗಲೊಲ್ಲದು 
ಹೊರಬರಲೊಲ್ಲದು!
ಹಸಿಯಾಗಿ, ಬಿಸಿಯಾಗಿ 
ಕಾಯಾಗಿ,ಕಲ್ಲಾಗಿ 
ಕಾಡಿಸುತ್ತದೆ ಸದಾ 
ನಿಮ್ಮ ಮಾತಿನ ಬತ್ತಳಿಕೆಯಿಂದ 
ಬಿಟ್ಟ ಬಾಣಗಳ
ಗಾಯದ ನೆನಪು!
ಅಂತ್ಯ ಹಾಡಲೇ ಬೇಕಿದೆ ನಾನು,
ಇದು ಕೊಡುವ ನೋವಿಗೆ 
ಅಂತರಂಗದ ಕಾವಿಗೆ 
ದಿನ ನಿತ್ಯದ ಸಾವಿಗೆ 
ಈ ಗೋಳಿನ ಹಾಡಿಗೆ .
ಅಯ್ಯೋ ....ನೆನಪುಗಳೇ 
ಬಿಡಿಯಪ್ಪ....ನನ್ನನ್ನು!
ಬಿಡಿ........ನನ್ನ ಪಾಡಿಗೆ!!

Tuesday, October 11, 2011

"ಸಂಪೂರ್ಣ ಶರಣಾಗತಿ"-ಒಂದು ವಿಶಿಷ್ಟ ಅನುಭವ!!

1994 ರಲ್ಲಿ ದಾಂಡೇಲಿಯ ಸಮೀಪದ ಅಂಬಿಕಾ ನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ "ಸಿದ್ಧ ಸಮಾಧಿ ಯೋಗದ"
ಹತ್ತು ದಿನಗಳ ತರಬೇತಿ ಪಡೆದು, ಬೆಳಗಾವಿ ಬಳಿಯ 'ಸೊಗಲ ಶ್ರೀ ಕ್ಷೇತ್ರ'ದಲ್ಲಿ ಮೂರು ದಿನಗಳ  A.M.C.ಯಲ್ಲಿ (Advanced meditation course) ಭಾಗ ವಹಿಸಿದ್ದೆ.ಎರಡನೇ ದಿನ ಗುರುಗಳು ಅಲ್ಲೇ ಹತ್ತಿರವಿದ್ದ ಬೆಟ್ಟವೊಂದಕ್ಕೆ ಕರೆದೊಯ್ದರು.ಬೆಟ್ಟ ಹತ್ತುವ ಮೊದಲು ಕಣ್ಣಿಗೆ ಬಟ್ಟೆ ಕಟ್ಟಲಾಯಿತು .ಮನಸ್ಸಿನಲ್ಲಿ"ಓಂ ನಮೋ ಭಗವತೇ ವಾಸುದೇವಾಯ" ಎಂದು ಜಪ ಮಾಡುತ್ತಾ ಬೆಟ್ಟ ಹತ್ತುವಂತೆ ಹೇಳಿದರು.ಕಲ್ಲು ಮುಳ್ಳು ಗಳಿಂದ ಆವೃತವಾದ ಬೆಟ್ಟವನ್ನು ಹತ್ತಿಸುವ ಸಂಪೂರ್ಣ ಜವಾಬ್ದಾರಿಯನ್ನು ಜೊತೆಯಲ್ಲಿದ್ದ ಇಬ್ಬರಿಗೆ ವಹಿಸಿ,ಭಗವನ್ನಾಮ ಸ್ಮರಣೆ ಮಾಡುತ್ತಾ,ನಿಶ್ಚಿಂತೆಯಿಂದ ಸುಮಾರು ದೊಡ್ಡದಾಗಿದ್ದ ಬೆಟ್ಟವನ್ನು ಒಂದು ಗಂಟೆಯ ಅವಧಿಯಲ್ಲಿ ಅನಾಯಾಸವಾಗಿ ಹತ್ತಿದ್ದೆವು.ನಮ್ಮ ಜೊತೆಯಲ್ಲಿ ಮಂಡಿ ನೋವಿನಿದ ನರಳುತ್ತಿದ್ದ ಒಂದಿಬ್ಬರು ವಯೋ ವೃದ್ಧರೂ ಇದ್ದರು.ಅವರೂ ಯಾವ ತೊಂದರೆ ಇಲ್ಲದೆ ಬೆಟ್ಟವನ್ನು ಹತ್ತಿದ್ದು ನಮಗೆಲ್ಲಾ ಅಚ್ಚರಿ ತಂದಿತ್ತು!ಹತ್ತುವ ಮೊದಲು ಇಷ್ಟು ದೊಡ್ಡ ಬೆಟ್ಟವನ್ನು ಕಲ್ಲು ಮುಳ್ಳುಗಳ ಹಾದಿಯಲ್ಲಿ ಹತ್ತಲು ಸಾಧ್ಯವೇ ಎಂದು ಅನುಮಾನ ಪಟ್ಟಿದ್ದ ನಮಗೆ, ಬೆಟ್ಟದ ತುದಿ ತಲುಪಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆಗೆದು ಕೆಳಗೆ ನೋಡಿದಾಗ ನಾವು ನಿಜಕ್ಕೂ ಇಷ್ಟು ದೊಡ್ಡ ಬೆಟ್ಟವನ್ನು ,ಸ್ವಲ್ಪವೂ ಕಷ್ಟವಿಲ್ಲದೆ ಹತ್ತಿದ್ದು ಅದ್ಭುತವೆನಿಸಿತ್ತು.ಅದಕ್ಕೆ ಗುರುಗಳು 'ಭಗವನ್ನಾಮ ಸ್ಮರಣೆ ಮತ್ತು ಸಂಪೂರ್ಣ ಶರಣಾಗತಿಯಿಂದ ಜೀವನದಲ್ಲಿ ಎಂತಹ ಕಠಿಣ ಹಾದಿಯನ್ನಾದರೂ ಕ್ರಮಿಸಬಹುದು ಎನ್ನುವುದಕ್ಕೆ ಇಂದಿನ ನಿಮ್ಮ ಈ ಅನುಭವವೇ ಉದಾಹರಣೆ'ಎಂದರು.ಬೆಟ್ಟದ ತುದಿಯಲ್ಲಿ ಅಸ್ತಮಿಸುತ್ತಿದ್ದ ಕೆಂಪಾದ ಸೂರ್ಯನನ್ನು ನೋಡುತ್ತಾ ನಿಂತಿದ್ದೆವು.ಬೆಟ್ಟದ ಮೇಲಿನ ತಣ್ಣನೆ ಗಾಳಿ ಹಿತವಾಗಿ ಬೀಸಿ ಆ ವಿಶಿಷ್ಟ ಸಂಜೆ ಮತ್ತಷ್ಟು ವಿಶೇಷ ವೆನಿಸುವಂತೆ ಮಾಡಿತ್ತು

Saturday, October 8, 2011

"ದಾರಿ ......ಯಾವುದಯ್ಯಾ!!!?"

ದಾರಿಗಳಲ್ಲಿ ಹಲವು ದಾರಿ !
ಹೆದ್ದಾರಿ,ಕಾಲುದಾರಿ ,
ಅಡ್ಡ ದಾರಿ,ಕವಲು ದಾರಿ ,
ಆ ದಾರಿ,ಈ ದಾರಿ,
ಹಲ ಕೆಲವು ದಾರಿ!
ದಾರಿಗಳಲ್ಲಿ ಹಲವು ಪರಿ!
ಕೆಲವರದ್ದು ಬರೀ ಪಿರಿ ಪಿರಿ!
ಬದುಕುವುದಕ್ಕೆ........
ಒಬ್ಬೊಬ್ಬರಿಗೊಂದೊಂದು ದಾರಿ!
ಕೆಲವರಿಗೆ.............,
ತಾವು ಹಿಡಿದಿದ್ದೇ  ದಾರಿ!
ಬಡವನಿಗೆ  ಪಾಪ 
ಎಲ್ಲವೂ ದುಬಾರಿ !
ಹಣವಿದ್ದವರಿಗೋ ......,
ಎಲ್ಲದಕ್ಕೂ ರಹ ದಾರಿ!
ಕೆಲವೊಮ್ಮೆ ದಾರಿ ಕಾಣದೇ
ರಾಘವೇಂದ್ರನಿಗೆ............,
ಮೊರೆಯಿಡುವುದೊಂದೇ ದಾರಿ!
ನನಗೆ ನನ್ನ ದಾರಿ!
ನಿಮಗೆ ನಿಮ್ಮ ದಾರಿ!
ಅವರವರ ದಾರಿಯಲ್ಲಿ 
ಅವರವರು ನಡೆದೂ ನಡೆದೂ 
ಕೊನೆಗೆ................,
ಅವರೂ.......... ಇಲ್ಲ!
ದಾರಿಯೂ...... ಇಲ್ಲ !
ಎಲ್ಲವೂ ...............,
ಬಯಲು.... ದಾರಿ!!!
ಅದಕ್ಕೇ  ಅಲ್ಲವೇ 
ದಾಸರು ದಾರಿ ಕಾಣದೇ
ಕೊನೆಗೆ ................,
ದಾರಿ ಯಾವುದಯ್ಯಾ....?
ಎಂದು ಹಾಡಿದ್ದು ........!!!

Wednesday, October 5, 2011

"ನಕ್ಕು ಬಿಡಿ"

ಈ ಸಲದ 'ಸುಧಾ'ದಲ್ಲಿ ಬಂದ ಕೆಲ ನಗೆ ಹನಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ನನ್ನೊಂದಿಗೆ ನೀವೂ ನಕ್ಕು ಬಿಡಿ.ನಿಮಗೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.
1) ಪುಟ್ಟನ ಪ್ರಶ್ನೆ;ಅಪ್ಪ,ಮೂರ್ಖ ಎಂದರೆ ಯಾರು?
ಅಪ್ಪ:ಯಾರು ಸರಳವಾಗಿ ಹೇಳೋದನ್ನು ತುಂಬಾ ಕ್ಲಿಷ್ಟವಾದ ಪದಗಳಿಂದ,ಉದ್ದುದ್ದ ವಾಕ್ಯ ಗಳಿಂದ ಒಂದಕ್ಕೊಂದು ಸಂಬಂಧವೇ ಇಲ್ಲದ ಪದಗಳಿಂದ ಹೇಳಿ ,ಕೇಳೋರನ್ನ ಗೊಂದಲಕ್ಕೀಡುಮಾಡಿ ,ಇವನನ್ನು ಯಾಕಪ್ಪಾ ಕೇಳಿದೆ ಅನಿಸುವಂತೆ ಮಾಡಿಬಿಡುತ್ತಾನೋ ಅವನನ್ನು ಮೂರ್ಖನೆಂದು ಕರೆಯಬಹುದು.ಅರ್ಥವಾಯಿತಾ?
ಪುಟ್ಟ:ಇಲ್ಲ!
2) ಟೀಚರ್ ಕ್ಲಾಸಿಗೆ ಬಂದಾಗ ಇಬ್ಬರು ಹುಡುಗರು ಜಗಳವಾಡುತ್ತಿದ್ದರು.
ಟೀಚರ್: ಯಾಕ್ರೋ ಜಗಳ?
ಒಬ್ಬ ಹುಡುಗ: ದಾರಿಯಲ್ಲಿ ಹೋಗುವಾಗ ಹತ್ತು ರೂಪಾಯಿ ಸಿಕ್ಕಿತು.ಯಾರು ಚೆನ್ನಾಗಿ  ಸುಳ್ಳು ಹೇಳುತ್ತಾರೋ ಅವರಿಗೇ ಹತ್ತು ರೂಪಾಯಿ ಅಂತ ಇಬ್ಬರೂ ಒಂದೊಂದು ಸುಳ್ಳು ಹೇಳಿದ್ವಿ.ಯಾರ ಸುಳ್ಳು ಚೆನ್ನಾಗಿತ್ತು ಅಂತ ಇನ್ನೂ ತೀರ್ಮಾನ ಆಗಿಲ್ಲಾ.ಅದಕ್ಕೇ ಜಗಳಾ.
ಟೀಚರ್:ಇಂತಹ ಪಂದ್ಯ ಕಟ್ಟೋಕೆ ನಿಮಗೆ ನಾಚಿಕೆ ಆಗಬೇಕು!ನಿಮ್ಮ ವಯಸ್ಸಿನಲ್ಲಿ ನನಗೆ ಸುಳ್ಳು ಅಂದರೇನು ಅಂತಲೇ ಗೊತ್ತಿರಲಿಲ್ಲ!
ಇನ್ನೊಬ್ಬ ಹುಡುಗ:ಟೀಚರ್ ಈ ಹತ್ತು ರೂಪಾಯಿ ನೀವೇ ಇಟ್ಕೊಳ್ಳಿ !ಇದು ನಿಮಗೇ  ಸೇರಬೇಕು!
3) ಮುಲ್ಲಾ ನಾಸಿರುದ್ದೀನ್  ರಸ್ತೆಯಲ್ಲಿ ಸತ್ತು ಹೋದ ತನ್ನ ಆನೆಯ ಪಕ್ಕ ಕುಳಿತು ಅಳುತ್ತಿದ್ದ.
ದಾರಿಹೋಕ:ಯಾಕಯ್ಯಾ ಅಳುತ್ತಿದ್ದೀ?
ಮುಲ್ಲಾ:ನನ್ನ ಅನೆ ಸತ್ತು ಹೋಗಿದೆ.
ದಾರಿಹೋಕ:ಅತ್ತರೆ ಸತ್ತ ಆನೆ ಬರುತ್ತದೆಯೇ?
ಮುಲ್ಲಾ:ಅನೆ ಬರುವುದಿಲ್ಲ.ಆದರೆ ಸತ್ತ ಆನೆಯನ್ನು ಹೂಳಲು ಗುಂಡಿ ತೋಡಲು ಯಾರಾದರೂ ನಿನ್ನಂತಹವರು ಸಹಾಯಕ್ಕೆ ಬರಬಹುದೆಂದು ಅಳುತ್ತಿದ್ದೇನೆ.

Sunday, October 2, 2011

" ಯಾರೇ ಕೂಗಾಡಲೀ,ಊರೇ ಹೋರಾಡಲೀ !!!"

ಬಹಳ ಹಿಂದೆ ಟಿಬೆಟ್ಟಿನ ಬೌದ್ಧ ಆಶ್ರಮ ಒಂದರಲ್ಲಿ ಬಹಳಷ್ಟು ಬೌದ್ಧ ಬಿಕ್ಷುಗಳು ಮೌನವಾಗಿ ಧ್ಯಾನ ಮಾಡುತ್ತಾ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದ್ದರಂತೆ.ಆಗಾಗ ಅಲ್ಲಿಗೆ ಎಲ್ಲೂ ವಾಸಿಯಾಗದಂತಹ ಮಾನಸಿಕ ಅಸ್ವಸ್ಥರನ್ನು ತಂದು ಬಿಡುತ್ತಿದ್ದರಂತೆ.ಅಲ್ಲಿದ್ದ ಸನ್ಯಾಸಿಗಳು ತಮ್ಮ ಪಾಡಿಗೆ ತಾವು ತಮ್ಮ ಕೆಲಸಮಾಡುತ್ತಾ,ಧ್ಯಾನ ಮಾಡುತ್ತಾ ,ಮೌನದಿಂದ ಇರುತ್ತಿದ್ದರಂತೆ.ಮಾನಸಿಕ ಅಸ್ವಸ್ಥರನ್ನು ,ತಮ್ಮ ಸಾಧನೆಯನ್ನೂ,ಮನೋನಿಗ್ರಹವನ್ನೂ, ಪರೀಕ್ಷೆ ಮಾಡಲು ಬಂದಿರುವ ಗುರುಗಳು ಎಂದು ಭಾವಿಸುತ್ತಿದ್ದರಂತೆ.ಅವರು ಎಷ್ಟೇ ಕೂಗಾಡಿದರೂ,ಗಲಾಟೆ ಮಾಡಿದರೂ,ಯಾರೂ ಅವರ ಕಡೆ ಗಮನವನ್ನೇ ಕೊಡದೆ,ಮೌನವಾಗಿ ಧ್ಯಾನ ಮಾಡುತ್ತಾ ಇದ್ದು ಬಿಡುತ್ತಿದ್ದರಂತೆ!ಅವರನ್ನು ಯಾರೂ ವಿಚಾರಿಸಲೂ ಹೋಗುತ್ತಿರಲಿಲ್ಲವಂತೆ.ಯಾವುದೇ ಕಾರಣಕ್ಕೂ ಅವರನ್ನು ಅಲ್ಲಿಂದ ತಪ್ಪಿಸಿಕೊಳ್ಳಲು ಬಿಡುತ್ತಿರಲಿಲ್ಲವಂತೆ.ಮಾನಸಿಕ ಅಸ್ವಸ್ಥರು ಕೂಗಿ ,ಗಲಾಟೆ ಮಾಡಿ,ಸುಸ್ತಾಗಿ ಕೆಲವೇ ದಿನಗಳಲ್ಲಿ ತಣ್ಣಗಾಗಿ,ಅಲ್ಲಿರುವ 'ಬುದ್ಧಿಸ್ಟ್ ಮಾಂಕ್' ಗಳಂತೆ ತಾವೂ ತಮ್ಮ ಪಾಡಿಗೆ ಮೌನವಾಗಿ ಧ್ಯಾನ ಮಾಡುತ್ತಾ ಕುಳಿತು ಬಿಡುತ್ತಿದ್ದರಂತೆ!ಅಲ್ಲಿದ್ದ ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಗುಣಮುಖರಾಗಿ ಹೊರಬರುತ್ತಿದ್ದರಂತೆ.ಮನಸ್ಸು ತಣ್ಣಗಾದಾಗ ಮನಸ್ಸಿನ ಹೊಯ್ದಾಟ,ತಳಮಳ,ಮಾನಸಿಕ ಸಮಸ್ಯೆಗಳು ಇಲ್ಲವಾಗುತ್ತವೆ!
ಈ ಬರಹದಲ್ಲಿ ನಮಗೆಲ್ಲಾ ಒಂದು ಪಾಠವಿದೆ ಅನಿಸುತ್ತದೆ.ನಮ್ಮ ದಿನ ನಿತ್ಯದ ಜೀವನದಲ್ಲಿ ಎಷ್ಟೋ ಜನ ಕೂಗಾಡಿ, ಗಲಾಟೆ ಮಾಡಿ,ನಮ್ಮ ನೆಮ್ಮದಿ ಕೆಡಿಸುವವರು ಸಿಗಬಹುದು.ಅವರನ್ನು ನಾವು ನಮಗೆ ತಾಳ್ಮೆಯನ್ನು ಕಲಿಸಲು ಬಂದಿರುವ ಗುರುಗಳು ಎಂದೇಕೆ ತಿಳಿಯಬಾರದು? ನಮ್ಮೆಲ್ಲರ ಬದುಕಿನಲ್ಲಿ ಇನ್ನೂ ಹೆಚ್ಚಿನ ಶಾಂತಿ,ನೆಮ್ಮದಿ ಸಿಗುವಲ್ಲಿ ಈ ಲೇಖನ ಪ್ರಯೋಜನಕಾರಿಯಾಲಿ ಎಂದು ಹಾರೈಸುತ್ತೇನೆ. ನಮಸ್ಕಾರ.
(ಸಾಧಾರಿತ)

Saturday, October 1, 2011

"ಮರೆವಿನಲ್ಲೂ ...ಸುಖವಿದೆ !!"

ವೃದ್ಧ ದಂಪತಿಗಳಿಬ್ಬರೇ ಫ್ಲಾಟ್ ಒಂದರಲ್ಲಿ ವಾಸವಾಗಿದ್ದಾರೆ.ಮಕ್ಕಳಿಬ್ಬರೂ ಅಮೇರಿಕಾ ಸೇರಿದ್ದಾರೆ. ಗಂಡ ಹೆಂಡತಿ ಇಬ್ಬರಿಗೂ ಸುಮಾರು ಎಂಬತ್ತರ ವಯಸ್ಸು.ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ  ಮರೆವು .ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ  ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ  ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ  ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು. 'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ  ಜಂಬ ಕೊಚ್ಚಿಕೊಂಡ !!! 
ಅಜ್ಜ ಹೋಗಿದ್ದು ನೀರು ಕುಡಿಯೋಕೆ!ಕುಡಿದು ಬಂದಿದ್ದು ಕಾಫಿ!!ಅಜ್ಜಿ ತರಲು ಹೇಳಿದ್ದು ಫ್ರಿಡ್ಜ್ ನಲ್ಲಿದ್ದ ಕೇಕನ್ನು.ಅಜ್ಜ ತಂದಿದ್ದು ಬಿಸಿ ಬಿಸಿ ಬ್ರೆಡ್ ಟೋಸ್ಟ್.ಅಜ್ಜಿ ಕೂಡ ತಾನು ಹೇಳಿದ ಕೇಕನ್ನು ಮರೆತು ,ತಾನು ಹೇಳಿದ್ದು ಬ್ರೆಡ್ ಟೋಸ್ಟೇ  ಎಂದುಕೊಂಡಿದ್ದಾಳೆ!
ಒಟ್ಟಿನಲ್ಲಿ ಜಗಳವಿಲ್ಲ!ಒಬ್ಬರ ತಪ್ಪನ್ನು ಇನ್ನೊಬ್ಬರು ಮರೆತು 'ಮರೆವೆ .....ಜೀವನ ..ಸಾಕ್ಷಾತ್ಕಾರ 'ಎನ್ನುತ್ತಾ ಸುಖವಾಗಿ ಬಾಳುತ್ತಿದ್ದಾರೆ!