Saturday, December 25, 2010

" ವಿಚಿತ್ರ ......ಆದರೂ .......ನಿಜ ...! "

ಜೀವನದಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ಘಟಿಸಿಬಿಡುತ್ತವೆ.ಹಲವಾರು ವರ್ಷಗಳ ನಂತರ ಅವನ್ನು ನೆನೆಪಿಸಿಕೊಂಡಾಗ 'ಹೀಗೊಂದು ಘಟನೆ ನಡೆಯಿತೇ!'ಎಂದು ನಮಗೇ ಅಚ್ಚರಿಯಾಗುತ್ತದೆ.ನೆನ್ನೆ ನನ್ನ ಕಾರಿನ ಸರ್ವಿಸಿಂಗ್ ಮಾಡಿಸಲು ಗ್ಯಾರೇಜ್ ಗೆ ಹೋಗಿದ್ದಾಗ, ಅಲ್ಲಿ ಅಪಘಾತವಾಗಿ  ನುಜ್ಜು ಗುಜ್ಜಾಗಿ ನಿಂತಿದ್ದ ಹೊಸಾ ಕಾರೊಂದರ ಮಾಲಿಕರ ಹತ್ತಿರ ಮಾತನಾಡಿದಾಗ,ನನಗೆ ಸುಮಾರು ಇಪ್ಪತ್ತು ವರುಷಗಳಷ್ಟು ಹಳೆಯ ಘಟನೆಯೊಂದು ನೆನಪಿಗೆ ಬಂತು. ಅಂದ ಹಾಗೆ,ಆ ಕಾರಿನ ಮಾಲೀಕರು ಹೇಳಿದ್ದೇನು ಎಂಬುದನ್ನು ಕಡೆಯಲ್ಲಿ ಹೇಳುತ್ತೇನೆ.ಈಗಲೇ ಹೇಳಿಬಿಟ್ಟರೆ ,ನಾನು ಹೇಳುವ ಘಟನೆಯಲ್ಲಿ ಸ್ವಾರಸ್ಯ ಉಳಿಯುವುದಿಲ್ಲ.
ಮಾಸ್ತಿ ಕಟ್ಟೆ ಯಿಂದ ಬೆಂಗಳೂರಿಗೆ ಹೋಗುವ ಕೆಂಪು ಮೂತಿಯ 'ಲೀಲ್ಯಾಂಡ್ ' ಬಸ್ಸಿನಲ್ಲಿ ರಾತ್ರಿ ಪ್ರಯಾಣ ಮಾಡುತ್ತಿದ್ದೆ. ರಾತ್ರಿ ಸುಮಾರು ಎರಡು ಗಂಟೆಯ ಸಮಯ.ಬಸ್ ಅರಸೀಕೆರೆಯನ್ನು ದಾಟಿ ತಿಪಟೂರಿನ ಹತ್ತಿರವಿತ್ತು.ನನ್ನನ್ನು ಹೊರತುಪಡಿಸಿ ,ಬಸ್ಸಿನಲ್ಲಿ ಇದ್ದವರಿಗೆಲ್ಲಾ ವಿಪರೀತ ನಿದ್ದೆ.ಕೆಲವರಂತೂ ಬಸ್ಸಿನ ಶಬ್ಧಕ್ಕಿಂತಲೂ ಜೋರಾಗಿ ಗೊರಕೆ ಹೊಡೆಯುತ್ತಿದ್ದರು.ನಾನು ಕಂಡಕ್ಟರ್ ಕುಳಿತುಕೊಳ್ಳುವ ಕೊನೆಯ ಸೀಟಿನ ಮುಂದಿನ ಸೀಟಿನಲ್ಲಿ ಕುಳಿತು ,ನಿದ್ದೆ ಬರದೆ ಚಡಪಡಿಸುತ್ತಿದ್ದೆ.ಬಸ್ ಹೆದ್ದಾರಿಯಲ್ಲಿ ವೇಗವಾಗಿ ಸಾಗಿತ್ತು.ಕಿಟಕಿಯ ಹೊರಗೆ  ಬೆಳದಿಂಗಳಿನಲ್ಲಿ ಮರಗಳು ವೇಗವಾಗಿ ಹಿಂದಕ್ಕೆ ಓಡುತ್ತಿರುವುದನ್ನು ನೋಡುತ್ತಾ ಕುಳಿತಿದ್ದೆ.ಅಚಾನಕ್ಕಾಗಿ ನನ್ನ ದೃಷ್ಟಿ ಡ್ರೈವರ್ ಸೀಟಿನತ್ತ  ಹೋಯಿತು.ಒಂದು ಕ್ಷಣ ,ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ!!! ಡ್ರೈವರ್ ಸೀಟಿನಲ್ಲಿ ಡ್ರೈವರ್ ನಾಪತ್ತೆ!!! ಯಾವುದೋ ಹಾರರ್ ಸಿನೆಮಾದಲ್ಲಿ ಹೋಗುವ ಹಾಗೆ ಬಸ್ ತನ್ನಷ್ಟಕ್ಕೆ ತಾನೇ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿತ್ತು!!! ಇದೇನು ಕನಸೋ ಎಂದು ಮೈ ಚಿವುಟಿ ನೋಡಿಕೊಂಡೆ.ಇಲ್ಲಾ ,ನಾನು ಸಂಪೂರ್ಣ ಎಚ್ಚರವಾಗಿದ್ದೆ !!! ' ಅರೆ ಇದು ಹೇಗೆ ಸಾಧ್ಯ !' ಎಂದುಕೊಂಡು ನೋಡುತ್ತಿದ್ದಂತೆ ಬಸ್ ರಸ್ತೆಯ  ಪಕ್ಕದಲ್ಲಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆಯಲು ಮುನ್ನುಗ್ಗುತ್ತಿತ್ತು !!! ನಮ್ಮೆಲ್ಲರ ಕಥೆ ಮುಗಿದೇ ಹೋಯಿತು ಎಂದುಕೊಳ್ಳುತ್ತಿದ್ದಾಗ , ಪವಾಡವೆಂಬಂತೆ  ಡ್ರೈವರ್ ತನ್ನ ಸೀಟಿನಲ್ಲಿ ಮತ್ತೆ  ಕಾಣಿಸಿಕೊಂಡು ಬಸ್ಸನ್ನು ಮರದಿಂದ ಕೂದಲಿನಷ್ಟು ಅಂತರದಿಂದ ತಪ್ಪಿಸಿ , ವಾಪಸ್ ಹೆದ್ದಾರಿಗೆ ತಂದು ,ಏನೂ ಆಗಿಯೇ ಇಲ್ಲವೆಂಬಂತೆ ಮತ್ತೆ  ಓಡಿಸ ತೊಡಗಿದ !!! ನಡೆದದ್ದೇನೆಂದು ಕ್ಷಣ ಮಾತ್ರದಲ್ಲಿ ಅರ್ಥವಾಗಿತ್ತು. ಬಸ್  ಓಡಿಸುವಾಗ,ಡ್ರೈವರ್ ಗೆ ನಿದ್ದೆ ಬಂದು ,ತನ್ನ ಸೀಟು ಮತ್ತು ಸ್ಟೀಯರಿಂಗ್ ವೀಲ್ ( steering wheel) ಮಧ್ಯೆ ಇದ್ದ ಜಾಗದಲ್ಲಿ  ಜಾರಿ ಹೋಗಿದ್ದ. ಕ್ಷಣಾರ್ಧ ದಲ್ಲಿ ನಡೆದು ಹೋದ ಘಟನೆಯಿಂದ ಆ  ಡಿಸೆಂಬರಿನ ಚಳಿಯಲ್ಲೂ  ನಖ ಶಿಖಾಂತ ಬೆವತು ಹೋಗಿದ್ದೆ!!!
ಮೊದಲು ಕಂಡಕ್ಟರ್ ನನ್ನು ಎಬ್ಬಿಸಿ,ನಡೆದ ಘಟನೆಯನ್ನು ವಿವರಿಸಿದೆ.ಅದಕ್ಕವನು ,ನಿದ್ದೆ ಕಣ್ಣಿನಲ್ಲೇ 'ಅಯ್ಯೋ,ನೀವೂ ಸುಮ್ಮನೆ ಮಲಗಿಕೊಳ್ಳಿ  ಸಾರ್.......,ಹಣೇಲಿ ಸಾವು ಬರೆದಿದ್ದರೆ ಯಾರೇನು ಮಾಡೋಕಾಯ್ತದೆ...?'ಎಂದು ವೇದಾಂತದ ಮಾತಾಡಿ, ಮತ್ತೆ ನಿದ್ದೆಗೆ ಜಾರಿದ! ' ಇನ್ನು ಇವನಿಗೆ  ಹೇಳಿ ಪ್ರಯೋಜನವಿಲ್ಲ' ಎನಿಸಿ ಬಸ್ಸಿನಲ್ಲಿದ್ದವರನ್ನೆಲ್ಲಾ ಎಬ್ಬಿಸಿ ,ನಡೆದ ಘಟನೆ ಹೇಳಿದೆ.ಎಲ್ಲರೂ ಸೇರಿ ಒತ್ತಾಯ ಮಾಡಿ ಡ್ರೈವರ್ ನನ್ನು ಬಸ್ ನಿಲ್ಲಿಸುವಂತೆ ಮಾಡಿದೆವು.ತನಗೆ ನಿದ್ದೆ ಬಂದುದಾಗಿಯೂ ,ಬಸ್ಸು ಇನ್ನೇನು ಮರಕ್ಕೆ ಡಿಕ್ಕಿ ಹೊಡಿಯುತ್ತೆ ಎನ್ನುವಾಗ ಎಚ್ಚರವಾಗಿ ಅಪಘಾತವನ್ನು ತಪ್ಪಿಸಿದ್ದಾಗಿಯೂ ಡ್ರೈವರ್ ಒಪ್ಪಿಕೊಂಡ.ಬಸ್ಸನ್ನು ಸೈಡಿನಲ್ಲಿ ನಿಲ್ಲಿಸಿ ,ಒಂದು ತಾಸು ನಿದ್ದೆ ಮಾಡಿ , ತಣ್ಣೀರಿನಲ್ಲಿ ಮುಖ ತೊಳೆದು ,ಅಲ್ಲೇ ಇದ್ದ ಹೋಟೆಲಿನಲ್ಲಿ ಬಿಸಿ,ಬಿಸಿ ಟೀ ಕುಡಿದ ನಂತರ ನಮ್ಮ ಡ್ರೈವರ್  ಪೂರ್ಣ ಎಚ್ಚರದಿಂದ ಗಾಡಿ ಓಡಿಸಿ ಬೆಳಿಗ್ಗೆ ಏಳು ಗಂಟೆಯ ವೇಳೆಗೆ ಬೆಂಗಳೂರನ್ನು ತಲುಪಿದ.  
ಅಂತೂ ....,ಈ ವಿಚಿತ್ರ ಘಟನೆ ಸುಖಾಂತ್ಯ ಕಂಡಿತ್ತು.ಡ್ರೈವರ್ ...,ಒಂದೇ ಒಂದು ಕ್ಷಣ  ಎಚ್ಚರ  ತಪ್ಪಿದರೂ ಏನು ಅನಾಹುತವಾಗುತ್ತಿತ್ತೋ!  ನೆನ್ನೆ ಬೆಳಿಗ್ಗೆ ನಾನು ಗ್ಯಾರೇಜ್ ನಲ್ಲಿ ಕಂಡ ನುಜ್ಜು ಗುಜ್ಜಾದ ಹೊಸ ಕಾರಿನ ಮಾಲಿಕರೂ ಕೂಡ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕಾರನ್ನು ಓಡಿಸುವಾಗ ಒಂದೇ ಒಂದು ಕ್ಷಣ ನಿದ್ದೆಗೆ ಜಾರಿ ,ರಸ್ತೆಯ ಬಲ ಭಾಗದಲ್ಲಿದ್ದ ಹೊಂಡದಲ್ಲಿ ಬಿದ್ದಿದ್ದರು.ಪುಣ್ಯಕ್ಕೆ ಕಾರಿನಲ್ಲಿದ್ದವರಿಗೆ ಯಾವುದೇ ಬಲವಾದ ಪೆಟ್ಟಾಗಿರಲಿಲ್ಲ! ' ಏನಾಯ್ತು  ಸಾರ್........?' ಎಂದು ಕೇಳಿದ್ದಕ್ಕೆ ಅವರು ಹೇಳಿದ್ದು 'ನಿದ್ದೆ.......ಬಿದ್ದೆ .....! ಅಷ್ಟೇ !! '.

Saturday, December 11, 2010

"ಲೈಫು ಇಷ್ಟೇನೇ !" (ವೈದ್ಯನೊಬ್ಬನ ಮರೆಯದ ನೆನಪುಗಳು -ಭಾಗ ೨ )

ಸುಮಾರು ಮೂವತ್ತು ವರ್ಷಗಳಷ್ಟು ಹಳೆಯದಾದ ,ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಹೋಗಿರುವ ಸಿರುಗುಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗಿನ ಮತ್ತೊಂದು ನೆನಪನ್ನು ನಿಮ್ಮೊಡನೆ ಹಂಚಿಕೊಳ್ಳಲೇ ಬೇಕು. ಒಂದು ಸಂಜೆ ಸುಮಾರು ಆರು ಗಂಟೆಯ ಸಮಯ.ಕಾರ್ಖಾನೆಯಿಂದ ಊರ ಹೊರಗೆ ಹೋಗುವ ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದೆ.ಸ್ವಲ್ಪ ದೂರ ಹೋದ ನಂತರ ರಸ್ತೆಯ ಪಕ್ಕ, ಸಕ್ಕರೆ ಮೂಟೆ ಹೊರುವ ಹಮಾಲಿಗಳ ಗುಡಿಸಲುಗಳು ಇದ್ದವು. ಅವರೆಲ್ಲ ರಸ್ತೆಯ ಪಕ್ಕ ಕುಳಿತು ಹರಟೆ ಹೊಡೆಯುವುದು ಮಾಮೂಲಾಗಿತ್ತು.ನಾನು ನನ್ನ ಪಾಡಿಗೆ ವಾಕಿಂಗ್ ಮುಂದುವರಿಸಿದೆ.ಇನ್ನಷ್ಟು ದೂರ ಹೋದಾಗ ,ರಾಮಯ್ಯ ಭೀಮಯ್ಯ ಎಂಬ ಸುಮಾರು ಇಪ್ಪತ್ತು  ವರುಷ ವಯಸ್ಸಿನ ನನಗೆ ಪರಿಚಯದ,ಕಟ್ಟು ಮಸ್ತಾದ ಸುಂದರ  ಶರೀರವಿದ್ದ ಹಮಾಲಿಗಳಿಬ್ಬರು ರಸ್ತೆಯ ಪಕ್ಕ ಕುಳಿತಿದ್ದರು.ಇಬ್ಬರ ಮುಂದೆಯೂ ನೊರೆ ಬರುತ್ತಿದ್ದ ಸಾರಾಯಿ ಬಾಟಲಿಗಳಿದ್ದವು.ನನ್ನನ್ನು ಕಂಡ ತಕ್ಷಣ ಇಬ್ಬರೂ ಬಾಟಲಿಗಳನ್ನು ತಮ್ಮ ಹಿಂದೆ ಬಚ್ಚಿಟ್ಟುಕೊಂಡು ,ನನ್ನನ್ನು ನೋಡಿ ಹುಳ್ಳಗೆ ನಕ್ಕು, ತಪ್ಪುಮಾಡಿದವರಂತೆ ತಲೆ ಕೆರೆದುಕೊಂಡರು."ಅಲ್ಲಾ ಕಣ್ರಪ್ಪಾ ,ಹಾಳೂ ಮೂಳೂ ಕುಡಿದು ಯಾಕ್ರೋ ಆರೋಗ್ಯಹಾಳುಮಾಡಿಕೊಳ್ಳುತ್ತೀರಿ"
ಎಂದೆ."ಮುಂಜಾನೆಯಿಂದ ಸಂಜಿ ಮಟ,ಮೂಟೆ ಹೊರುತ್ತೀವಲ್ರೀ ,ಮೈ ಕೈ ಬಾಳಾ ನೋಯ್ತವ್ರೀ,ಕುಡೀದಿದ್ರೆ ನಿದ್ರಿ ಬರಂಗಿಲ್ರೀ"ಎಂದುನೆವ ಹೇಳಿದರು.ನಾನು ಮಾತು ಮುಂದುವರಿಸಿ ಪ್ರಯೋಜನವಿಲ್ಲವೆಂದು ಅರಿತು ನನ್ನ ವಾಕಿಂಗ್ ಮುಂದುವರಿಸಿದೆ.ಮೂಟೆಗಳನ್ನುಹೊತ್ತು ,ಒಳ್ಳೇ 'ಬಾಡಿ ಬಿಲ್ಡರ್ಸ್'ತರಹ ಕಟ್ಟುಮಸ್ತಾಗಿ ಹುರಿಗೊಂಡ
ಪ್ರಕೃತಿದತ್ತವಾಗಿ ಬಂದ ಇಂತಹ ಸುಂದರ ಶರೀರಗಳನ್ನು, ಕುಡಿದು ಹಾಳುಮಾಡಿಕೊಳ್ಳುತ್ತಾರಲ್ಲಾ ಎಂದು ಬೇಸರವಾಯಿತು.ಸುಮಾರು ಒಂದು ಕಿಲೋಮೀಟರಿನಷ್ಟು ವಾಕಿಂಗ್ ಮುಂದುವರಿಸಿ ಹಿಂದಿರುಗಿದಾಗ ,ರಸ್ತೆಯ ಬದಿ ಜನಜಂಗುಳಿ ಸೇರಿತ್ತು.ಕೂಗಾಟ,ಚೀರಾಟ ,ಅಳು, ಮುಗಿಲು ಮುಟ್ಟಿತ್ತು.ಸ್ವಲ್ಪ ಸಮಯದ ಹಿಂದೆ ,
ನೊರೆ ಬರುತ್ತಿದ್ದ ಸಾರಾಯಿ ಬಾಟಲಿಗಳನ್ನು ಮುಂದಿಟ್ಟು ಕೂತಿದ್ದ ,ಸುಂದರ ಕಾಯಗಳ ತರುಣರಿಬ್ಬರೂ ನೆಲಕ್ಕೆ ಮೈ ಚೆಲ್ಲಿದ್ದರು.ಇಬ್ಬರ ಬಾಯಲ್ಲೂ ನೊರೆ ಬರುತ್ತಿತ್ತು.ಅವರ ಪಕ್ಕದಲ್ಲಿ ಬಾಟಲಿಗಳು ಅನಾಥರಂತೆ ಬಿದ್ದುಕೊಂಡಿದ್ದವು. ಸೂರ್ಯ ಅಸ್ತಮಿಸಿದ್ದ .ಭಾರವಾದ ಹೃದಯ ಹೊತ್ತು , ನಾನು ಮನೆಯಕಡೆ ನಡೆದೆ.

Sunday, November 28, 2010

"ವೈದ್ಯನೊಬ್ಬನ ಮರೆಯದ ನೆನಪುಗಳು"-ಭಾಗ೧

ಇದನ್ನೆಲ್ಲಾ ಹೇಗೆ ಬರೆಯುವುದೋ ಗೊತ್ತಿಲ್ಲ .ಆದರೆ ಬರೆಯದೆ ಇರುವುದೂ ಸಾಧ್ಯವಾಗುತ್ತಿಲ್ಲ.ಇಂತಹ ಹಲವಾರು ಘಟನೆಗಳು ನೆನಪಿನ ಹಗೇವಿನಲ್ಲಿ ಆಳವಾಗಿ ಬೇರು ಬಿಟ್ಟಿವೆ.ಸುಮಾರು ಇಪ್ಪತೆಂಟು ವರ್ಷಗಳ ಹಿಂದಿನ ಘಟನೆ .ಆಗ ನಾನು ಸಿರುಗುಪ್ಪದಿಂದ ಎಂಟು ಕಿಲೋಮೀಟರ್ ದೂರದ ದೇಶನೂರು ಎಂಬ ಹಳ್ಳಿಯ ಸನಿಹವಿದ್ದ ಸಕ್ಕರೆ ಕಾರ್ಖಾನೆಯಲ್ಲಿ  ವೈದ್ಯನಾಗಿದ್ದೆ.ಆಗ ಆಸ್ಪತ್ರೆಯೆಂದರೆ ಕಾರ್ಖಾನೆಯಲ್ಲೇ ಸಣ್ಣದೊಂದು ಶೆಡ್ ಇತ್ತು.ಆಸ್ಪತ್ರೆಯ ಸಿಬ್ಬಂಧಿಗಳೆಂದರೆ ನಾನು ಮತ್ತು ಔಷಧಿ ಕೊಡುವ ಒಬ್ಬ ಕಾಂಪೌಂಡರ್ ಇಬ್ಬರೇ.ಸಣ್ಣ ,ಪುಟ್ಟ ಖಾಯಿಲೆಗಳಿಗೆ ಔಷಧಿ ಮತ್ತು ತುರ್ತು ಚಿಕಿತ್ಸೆ ಮಾತ್ರ ಅಲ್ಲಿ ಲಭ್ಯವಿತ್ತು.ಹೆಚ್ಚಿನ ಚಿಕಿತ್ಸೆಗೆ ಕಾರ್ಮಿಕರು ಅವರ ಸ್ವಂತ ಖರ್ಚಿನಲ್ಲಿ ಎಂಟು ಕಿಲೋಮೀಟರ್ ದೂರವಿದ್ದ ಸಿರುಗುಪ್ಪಕ್ಕೋ ,ಐವತ್ತು ಕಿಲೋಮೀಟರ್ ದೂರದ ಬಳ್ಳಾರಿಗೋ ಹೋಗಬೇಕಿತ್ತು.
ಅಸಾಧ್ಯ ಬಿಸಿಲಿನ ಪ್ರದೇಶ.ಶೀಟಿನ ಮನೆ.ಸಂಜೆಯ ವೇಳೆಗೆ ,ಕೆಂಡ ಕಾದಂತೆ ಕಾಯುತ್ತಿತ್ತು.ರಾತ್ರಿ ಸ್ವಲ್ಪ ತಂಪಾಗುತ್ತಿತ್ತು. ಆದರೂ ವಿಪರೀತ ಸೆಖೆಯಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ.ಚೊಚ್ಚಲ ಹೆರಿಗೆಗೆಂದು ತವರಿಗೆ ಹೋಗಿದ್ದ ಹೆಂಡತಿಯಿಂದ ಪತ್ರ ಬಂದು ವಾರವಾಗಿತ್ತು.ಆಗೆಲ್ಲಾ ,ಈಗಿನಂತೆ ಫೋನಿನ ಸೌಕರ್ಯವಿರಲಿಲ್ಲ.ಮೊದಲೇ ಸೆಖೆ.ಮೇಲೆ ಹೆಂಡತಿ ಹೇಗಿದ್ದಾಳೋ ಎನ್ನುವ ಆತಂಕ. ರಾತ್ರಿ ಎರಡಾದರೂ  ನಿದ್ರೆಯ ಸುಳಿವಿಲ್ಲ.ಆಗ ಜೋರಾಗಿ ಬಾಗಿಲು ಬಡಿಯುವ ಶಬ್ದ ,ಜೊತೆಗೇ ಯಾರೋ ಆತಂಕದ ದನಿಯಲ್ಲಿ 'ಸಾರ್,ಸಾರ್'ಎಂದು ಕೂಗುವ ಶಬ್ದ.ಹೋಗಿ ಬಾಗಿಲು ತೆರೆದೆ.ಕಾರ್ಖಾನೆಯ ರಸ್ತೆಯ ಪಕ್ಕದಲ್ಲೇ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ, ಸಕ್ಕರೆ ಮೂಟೆಗಳನ್ನು ಲಾರಿಗಳಿಗೆ ತುಂಬುವ ಹಮಾಲಿಗಳ ಸಣ್ಣ ತಂಡವೊಂದು ಲಾಟೀನುಗಳನ್ನು ಹಿಡಿದು ನಿಂತಿತ್ತು.'ಏನ್ರಪ್ಪಾ?.....ಏನಾಯಿತು...?'ಎಂದೆ. ಅವರಲ್ಲೊಬ್ಬ ಮುಖಂಡ ನಂತೆ ಇದ್ದವನು 'ಸಾರ್....,ಗಡಾನೆ ಬರ್ರಿ ಸಾರ್ ...,ಹುಲಿಗೆಪ್ಪನ ಹೆಂಡತಿಗೆ ಹೆರಿಗೆ ತ್ರಾಸಾಗಿದೆ'ಎಂದ. ಏನು ,ಎತ್ತ ಎಂದು ಅರ್ಥವಾಗದಿದ್ದರೂ 'ಸರಿ ನಡೀರಿ 'ಎಂದು ಮನೆಯ ಬಾಗಿಲಿಗೆ ಬೀಗ ಹಾಕಿ ಔಷಧಿಗಳಿದ್ದ ಸಣ್ಣ ಪೆಟ್ಟಿಗೆಯೊಂದನ್ನು ಹಿಡಿದು ಅವರ ಜೊತೆ ಸುಮಾರು ಅರ್ಧ ಕಿಲೋಮೀಟರ್ ದೂರವಿದ್ದ ಅವರ ಗುಡಿಸಿಲಿನ ಕಡೆ ನಡೆದೆ.ಸಿರಗುಪ್ಪದಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದ್ದರೂ ಹೆರಿಗೆಗೆ ಅಲ್ಲೇಕೆ ಕರೆದುಕೊಂಡು ಹೋಗಲಿಲ್ಲವೆಂದು ಕೇಳಿದೆ.'ಅಲ್ಲೂ ರೊಕ್ಕ ಇಲ್ಲದೆ ಏನೂ ಮಾಡಂಗಿಲ್ರೀ  ಸಾಹೇಬ್ರೇ.ನಾವು ಬಡವರು ರೊಕ್ಕ ಎಲ್ಲಿ ತರೋಣ್ ರೀ' ಎಂದ ಅವರಲ್ಲೊಬ್ಬ .ನಮ್ಮ ಅವ್ಯವಸ್ಥೆಯನ್ನು ಹಳಿಯುತ್ತಾ ,ಆ ನಡುರಾತ್ರಿಯ ಕತ್ತಲೆಯಲ್ಲಿ ,ಲಾಟೀನುಗಳ ಮಂದ ಬೆಳಕಿನಲ್ಲಿ ಅವರ ಗುಡಿಸಳುಗಳತ್ತ ಲಗುಬಗೆಯಿಂದ ಹೆಜ್ಜೆ ಹಾಕಿದೆ.  
ಅಲ್ಲಲ್ಲೇ ಹರಿಯುತ್ತಿದ್ದ ಕೊಚ್ಚೆಯ ನೀರನ್ನು ದಾಟಿಕೊಂಡು ,ತಮ್ಮ ಸರಹದ್ದಿಗೆ ಆಗಂತುಕನೊಬ್ಬನ ಆಗಮನ ವಾಗುತ್ತಿದ್ದಂತೆ ಜೋರಾಗಿ ಬೊಗಳುತ್ತಿದ್ದ ಹತ್ತಾರು ನಾಯಿಗಳನ್ನು ಲೆಕ್ಕಿಸದೆ ಅವರು ಕರೆದುಕೊಂಡು ಹೋದ ಗುಡಿಸಲೊಂದರೊಳಗೆ ಹೋದೆ.ಅಲ್ಲಿ ಕಂಡ ದೃಶ್ಯ   ಎಂತಹ ಗಂಡೆದೆ ಉಳ್ಳವರೂ ಹೌಹಾರುವಂತಿತ್ತು .ಸಗಣಿಯಿಂದ ಸಾರಿಸಿದ ನೆಲದ ಮೇಲೆ ಹಾಸಿದ್ದ ಕೌದಿಯೊಂದರ ಮೇಲೆ ಗರ್ಭಿಣಿ ಹೆಂಗಸೊಬ್ಬಳು 'ಯಪ್ಪಾ ,ನನ್ ಕೈಯಾಗೆ ಆಗಾಕಿಲ್ಲೋ ....ನಾನ್  ಸಾಯ್ತೀನ್ರೋ .....ಯಪ್ಪಾ'ಎಂದು ಜೋರಾಗಿ ನರಳುತ್ತಿದಳು.ಅವಳ ಪಕ್ಕದಲ್ಲಿದ್ದ ಮುದುಕಿಯೊಬ್ಬಳು 'ಎಲ್ಲಾ ಸರಿ ಹೋಕ್ಕತೆ ಸುಮ್ಕಿರು, ದಾಗ್ದಾರ್ ಸಾಬ್ ಬಂದಾನೆ 'ಎಂದು ಸಮಾಧಾನ ಮಾಡುತ್ತಿದ್ದಳು.ಅವರು ಕೊಟ್ಟ ಸೋಪು ,ಬಿಸಿನೀರಿನಿಂದ ಕೈ ತೊಳೆದೆ.ಅದೊಂದು 'breach delivery' ಆಗಿತ್ತು .ಮಾಮೂಲಾಗಿ ಮಗುವಿನ ತಲೆ ಮೊದಲು ಹೊರಗೆ ಬರುತ್ತದೆ. 'ಬ್ರೀಚ್ ' ಡೆಲಿವರಿಯಲ್ಲಿ ,ಮಗುವಿನ ಕಾಲುಗಳು ಹೊರಗೆ ಬರುತ್ತವೆ. ಈ ಹೆಂಗಸಿನಲ್ಲಿ ಮಗುವಿನ ಕಾಲುಗಳು ಹೊರಬಂದು ತಲೆಯ ಭಾಗ ಹೊರಬರದೆ ಸಿಕ್ಕಿಕೊಂಡಾಗ ಏನು ಮಾಡಲು ತೋಚದೆ, ನನ್ನನ್ನು ಕರೆಸಿದ್ದರು.ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯಗಳಿದ್ದೂ ,ಸಹಾಯಕ್ಕೆ ದಾದಿಯರಿದ್ದೂ, ನಡೆಸುವ ಹೆರಿಗೆಗಳಲ್ಲೇ ನೂರೆಂಟು ತೊಂದರೆಗಳು.ಅಂಥದ್ದರಲ್ಲಿ ಆ ಗುಡಿಸಲಿನಲ್ಲಿ ಸಗಣಿಸಾರಿಸಿದ ನೆಲದ ಮೇಲೆ ಕುಳಿತು  ,ಲಾಟೀನಿನ ಮಂದ ಬೆಳಕಿನಲ್ಲಿ,ಅದೂ 'ಬ್ರೀಚ್ ಡೆಲಿವರಿ'ಮಾಡಬೇಕಾದಾಗ , ಹೆರಿಗೆಗಳನ್ನು ಮಾಡಿ  ಅನುಭವವಿರದ ನನ್ನ ಸ್ಥಿತಿ ಹೇಗಿದ್ದಿರಬಹುದೋ ನೀವೇ ಊಹಿಸಿಕೊಳ್ಳಿ. ದೇವರ ದಯೆಯಿಂದ ಹೆರಿಗೆ ನಾನು ನೆನೆಸಿದಷ್ಟು ಕಷ್ಟವಾಗಲಿಲ್ಲ.ಹೆಣ್ಣು ಮಗುವಿನ ಜನನವಾಯಿತು.ಮಗುವಿನ ಅಳು ಕೇಳುತ್ತಿದ್ದಂತೆ ಅಲ್ಲಿದ್ದವರ ಮುಖಗಳಲ್ಲಿ ಸಂತಸದ ನಗು ಮೂಡಿತು.
ಇದಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ನಾನು ರಾಯಚೂರಿನ ಶಕ್ತಿನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ ,ಸಿರುಗುಪ್ಪದಿಂದ ನಾನು ಹೆರಿಗೆ ಮಾಡಿದ ಹೆಂಗಸು ತನ್ನ ಪತಿಮತ್ತು ಮಗಳೊಂದಿಗೆ ನನ್ನನ್ನು ಹುಡುಕಿಕೊಂಡು ಬಂದು,ನಾನೆಷ್ಟೇ ಬೇಡವೆಂದರೂ ಮಗಳಿಂದ ನನ್ನ ಕಾಲಿಗೆ ನಮಸ್ಕಾರ ಮಾಡಿಸಿ, ತನ್ನ ಮಗಳ ಲಗ್ನಪತ್ರಿಕೆ ಕೊಟ್ಟು ಹೋದಳು.ಎಷ್ಟೋ ಸಲ ಜನಗಳ ವರ್ತನೆಯಿಂದ ಬೇಸತ್ತ ಮನಸ್ಸಿಗೆ ,ಆ ಕ್ಷಣದಲ್ಲಿ ವೈದ್ಯನಾದದ್ದು  ಸಾರ್ಥಕವೆನಿಸಿತ್ತು.ಮನದಲ್ಲಿ ಒಂದು ಅಲೌಕಿಕ ಸಂತಸ ಮನೆ ಮಾಡಿತ್ತು.       

Wednesday, November 24, 2010

"ಯಾರೋ ಹೇಳಿದರು ಅಂತ ......!"(ಡಯಾಬಿಟಿಸ್ ಭಾಗ -2)

ನಾನು  ಇನ್ನೇನು ಆಸ್ಪತ್ರೆಗೆ ಹೊರಡಬೇಕು ಎನ್ನುವಾಗ,ಎದುರು ಮನೆಯ ಸಂದೀಪ ಬಂದ.'ಸರ್ ...,ಊರಿಂದ ನಮ್ಮ ಅಂಕಲ್ ಬಂದಿದ್ದಾರೆ.ಆಪರೇಶನ್ ಆಗಿದೆ......,ಡ್ರೆಸ್ಸಿಂಗ್ ಮಾಡಬೇಕು.ಆಸ್ಪತ್ರೆಗೆ ಕರೆದುಕೊಂಡು ಬರಲಾ?' ಎಂದ.ನಾನು ಹೊರಡುವ ಆತುರದಲ್ಲಿ  ಇದ್ದುದರಿಂದ ಹೆಚ್ಚು ವಿಚಾರಿಸುವ ಗೋಜಿಗೆ ಹೋಗಲಿಲ್ಲ.ಮಾಮೂಲಾಗಿ 'ಅಪೆಂಡಿಕ್ಸ್' ,ಅಥವಾ 'ಹರ್ನಿಯಾ'ಆಪರೇಶನ್ ಆದವರು ಡ್ರೆಸ್ಸಿಂಗ್ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬರುತ್ತಿದುದುಂಟು.ನಾನು ಅದೇ ರೀತಿ ಯಾರೋ ಡ್ರೆಸ್ಸಿಂಗ್ ಮಾಡಿಸಿಕೊಳ್ಳಲು ಬರುತ್ತಿರಬೇಕೆಂದುಕೊಂಡಿದ್ದೆ. ಆದರೆ ,ಸಂದೀಪನ ಜೊತೆ ಸುಮಾರು ಇಪ್ಪತೆಂಟು ವಯಸ್ಸಿನ ಯುವಕನೊಬ್ಬ ಒಂದು ಕಾಲಿಲ್ಲದೇ ,ಊರುಗೋಲಿನ ಸಹಾಯದಿಂದ ,ಕುಂಟುತ್ತಾ ಆಸ್ಪತ್ರೆಗೆ ಬಂದಿದ್ದು ನೋಡಿ ಗಾಭರಿಯಾಯಿತು.ಎಡಗಾಲಿನ ತೊಡೆಯ ಕೆಳಗಿನ ಭಾಗ ಇರಲಿಲ್ಲ.ತೊಡೆಯ ಸುತ್ತಾ  ಬ್ಯಾಂಡೇಜ್  ಇತ್ತು.ಯಾವುದಾದರೂ ಅಪಘಾತವಾಯಿತೇನೋ ಎಂದುಕೊಂಡೆ.ಡ್ರೆಸ್ಸಿಂಗ್ ಮಾಡುತ್ತಾ 'ಏನಾಯಿತು'ಎಂದು ಕೇಳಿದೆ.ಅದಕ್ಕವನು 'ಸುಮಾರು  ಐದು ವರ್ಷಗಳಿಂದ ಡಯಾಬಿಟಿಸ್ ಇತ್ತುಸರ್.ಮಾತ್ರೆ ತೆಗೆದುಕೊಳ್ಳುವಾಗ ಶುಗರ್  ಕಂಟ್ರೋಲ್ ನಲ್ಲಿತ್ತು.ಜೀವನ ಪೂರ್ತಿ ಇದೆ ರೀತಿ ಮಾತ್ರೆ ತೆಗೆದುಕೊಳ್ಳಬೇಕೆಂಬ ಬೇಸರವೂ ಇತ್ತು.ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಕಿಡ್ನಿ ತೊಂದರೆ ಬರುತ್ತೆ ಅಂತ ಯಾರೋ ಹೆದರಿಸಿದರು.  ಒಂದು ಪುಡಿ ಕೊಟ್ಟು,ದಿನಾ ಬೆಳಿಗ್ಗೆ ಪುಡಿ ತೆಗೆದುಕೊಂಡು ,ಸಾಧ್ಯವಾದಷ್ಟು ಎಳನೀರು ಕುಡಿಯಬೇಕೆಂದರು.ನಮ್ಮದೇ ತೆಂಗಿನ ತೋಟವಿದ್ದುದರಿಂದ ದಿನಕ್ಕೆ ಆರೇಳು ,ಎಳನೀರು ಕುಡಿಯುತ್ತಿದ್ದೆ.ಮಾತ್ರೆ ಸಂಪೂರ್ಣ ನಿಲ್ಲಿಸಿದೆ.ಕಾಲಿಗೆ ಒಂದು ಸಣ್ಣ ಗಾಯವಾಗಿ ಎಡಗಾಲಿನ ಮಂಡಿಯ ಕೆಳಗಿನ ಭಾಗ  ಪೂರ್ತಿ ಕಪ್ಪಾಯಿತು.ಕಾಲು 'gangrene' ಆಗಿದೆಯೆಂದು  ಮಂಡಿಯ ಮೇಲೆ ಕತ್ತರಿಸಿದರು. ನೋಡಿ ಸಾರ್............,ಯಾರೋ ಹೇಳಿದ್ದು ಮಾಡಲು ಹೋಗಿ ಒಂದು ಕಾಲನ್ನು ಕಳೆದುಕೊಂಡೆ 'ಎಂದು ನಿಟ್ಟುಸಿರು ಬಿಟ್ಟ.ಅವನನ್ನು ನೋಡಿ'ಯಾರದೋ ಮಾತು ಕೇಳಿಕೊಂಡು ಈ ಸ್ಥಿತಿ ತಂದುಕೊಂಡನಲ್ಲ ಪಾಪ' ಎನಿಸಿತು.ಅವತ್ತೆಲ್ಲ ಒಂದು ರೀತಿಯ ಬೇಸರ ಮನಸ್ಸನ್ನು ಆವರಿಸಿಕೊಂಡಿತ್ತು. ಕೆಲವರ ಜೀವನದಲ್ಲಿ ಹೀಗೆಲ್ಲಾ ಏಕಾಗುತ್ತದೆ ಎಂದು ಒಂದು ರೀತಿಯ ಜಿಜ್ಞಾಸೆ ಕಾಡಿತ್ತು.

Wednesday, November 17, 2010

"ಏನ್ಮಾಡೋದ್ರೀ ....ಸರ? ಹಂಗಾ,ಬಂದ್ಹಂಗ ..ಹೊಡಿಯೋದ್ರಪಾ!"

ನೆನ್ನೆ ನಮ್ಮ ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲೇ ಓದಿದ, ವೈದ್ಯರೊಬ್ಬರು ನಾವುಮೊದಲನೇ ವರ್ಷದ ಮೆಡಿಕಲ್ ಓದುತ್ತಿದ ಸಮಯದಲ್ಲಿ (1972) ನಡೆದ ಹಾಸ್ಯ ಘಟನೆಯೊಂದನ್ನು ನೆನಪಿಸಿದರು.ಅದನ್ನು ನಿಮ್ಮ ಜೊತೆಹಂಚಿಕೊಳ್ಳುತ್ತಿದ್ದೇನೆ.ನಮ್ಮ ಮೆಡಿಕಲ್ ಕಾಲೇಜ್ ಆಗ ಕರ್ನಾಟಕ ಯುನಿವರ್ಸಿಟಿಗೆ ಸೇರಿತ್ತು.ಈಗೆಲ್ಲಾ ಕಾನ್ವೆಂಟಿನ ನರ್ಸರಿ ಹುಡುಗರೂ ಮಾತೃ ಭಾಷೆ ಕನ್ನಡವಿದ್ದರೂ,ಕನ್ನಡ ಬರುತಿದ್ದರೂ,ಮನೆಯಲ್ಲೂ ಇಂಗ್ಲೀಶಿನಲ್ಲೇ ಮಾತಾಡುತ್ತಾರೆ.ನಮ್ಮ ಕಾಲೇಜಿನಲ್ಲಿ ಬಹಳಷ್ಟು ಜನ ಹತ್ತನೇ ತರಗತಿಯವರಗೆ ಕನ್ನಡದಲ್ಲಿ ಓದಿದವರೇ ಇದ್ದುದರಿಂದ,ಸುಮಾರು ಜನ ಕನ್ನಡದಲ್ಲೇ ಮಾತನಾಡುತ್ತಿದ್ದರು.
ಗುಲ್ಬರ್ಗದಿಂದಬಂದ,ನಮ್ಮಕ್ಲಾಸಿನ ವಿದ್ಯಾರ್ಥಿಯೊಬ್ಬ ಕಾಲೇಜಿನ ಜನರಲ್ ಸೆಕ್ರೆಟರಿ (ಜಿ.ಎಸ್.) ಆಗಿದ್ದ.ಕನ್ನಡ ಮೀಡಿಯಂನಿಂದ ಬಂದ ಅವನಿಗೆಇಂಗ್ಲೀಷಿನಲ್ಲಿ ಅಷ್ಟು ಶುದ್ಧವಾಗಿ,ವ್ಯಾಕರಣ ಬದ್ಧ ವಾಗಿ ಮಾತನಾಡಲು ಬರುತ್ತಿರಲಿಲ್ಲ.ಅದಕ್ಕೆ ಅವನೂ ತಲೆ ಕೆಡಿಸಿಕೊಂಡಿರಲಿಲ್ಲಾ.'ಅದಕ್ಕೇನು ಮಾಡೋದ್ರೀ ಸರಾsssss,ಬಂದ್ಹಂಗಾ ಹೊಡಿಯೋದ್ರಪಾssss'ಎಂದು ಜೋರಾಗಿ ನಗುತ್ತಿದ್ದ.ಆಗ ಮೊದಲನೆ ವರ್ಷದಪರೀಕ್ಷೆಯನ್ನು ಮುಂದೂಡ ಬೇಕೆಂದು ಎಲ್ಲಾ ಕಾಲೇಜುಗಳಲ್ಲಿ ಸ್ಟ್ರೈಕ್ ನಡೆದದ್ದರಿಂದ, ಕರ್ನಾಟಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ರವರು ಅವರ ಚೇಂಬರ್ ನಲ್ಲಿ,ಎಲ್ಲಾ ಕಾಲೇಜುಗಳ General  Secretary ಗಳ meeting ಕರೆದಿದ್ದರು.ಆ ಮೀಟಿಂಗಿನಲ್ಲಿ ಎಲ್ಲಾ ಕಾಲೇಜುಗಳ General secretary (G.S.)ಗಳೂ ಇದ್ದರು.ನಮ್ಮ G.S.ಕೂಡ ಇದ್ದ.ಮೀಟಿಂಗ್ ಈ ಕೆಳಕಂಡಂತೆ ನಡೆಯಿತು:-
REGISTRAR;- 'Who are the general secretaries who have come?'ಎಂದರು.
ನಮ್ಮ G.S. :- ಎದ್ದು ನಿಂತು"I are the G.S.from Bellary medical college sir ",ಎಂದ !REGISTRAR :-(ಅವನ ಬಾಯಿಂದ ಸರಿಯಾದ ಇಂಗ್ಲೀಶ್ ವಾಕ್ಯ ಬರಿಸುವ ದೃಷ್ಟಿಯಿಂದ )ಮತ್ತೆ " Who is the G.S.from Bellary Medical College?" ಎಂದರು.
ನಮ್ಮ G.S.:-ಕೂತವನು ಎದ್ದು ನಿಂತು"I is the G.S.of Bellary Medical College Sir " ಎಂದ!ರಿಜಿಸ್ಟ್ರಾರ್ ರವರು ಇವನ ಇಂಗ್ಲೀಶ್ ಕೇಳಿ ಸುಸ್ತು!ಆದರೂ ಛಲ ಬಿಡದ ತ್ರಿವಿಕ್ರಮನಂತೆ ಹೇಗಾದರೂ ಇವನ ಬಾಯಿಂದ ಸರಿಯಾದ ಇಂಗ್ಲೀಶ್ ವಾಕ್ಯವನ್ನು ಬರಿಸಲೇಬೇಕೆಂದು ಮತ್ತೆ ಅವನನ್ನೇ ಉದ್ದೇಶಿಸಿ ಕೇಳಿದ ಪ್ರಶ್ನೆ ಇದು!
REGISTRAR :-" Who am  the G.S. of Bellary Medical College?".
ನಮ್ಮG.S.:-"I am the G.S.of Bellary Medical College ",ಎಂದ!
ಕಡೆಗೂ ಬಂದ ಸರಿಯಾದ ಉತ್ತರದಿಂದ ರಿಜಿಸ್ಟ್ರಾರ್ ನಿಟ್ಟಿಸಿರು ಬಿಟ್ಟರು.ಇದನ್ನೆಲ್ಲಾ ನೋಡುತ್ತಿದ್ದ ಮಿಕ್ಕವರು ಹೊಟ್ಟೆ ತುಂಬಾ ನಕ್ಕರು.

Monday, November 15, 2010

"ಕಂಬಳಿ ಹುಳುವಿನಂತಹ...ಮನವೇ !"

ದುರ್ಗುಣಗಳ ಮೊಟ್ಟೆಯೊಡೆದು 
ಮೈಯೆಲ್ಲಾ ಮುಳ್ಳಾಗಿ 
ಎಲ್ಲರನ್ನೂ ಚುಚ್ಚುವ 
ಎಲ್ಲರಲ್ಲೂ ತಪ್ಪುಹುಡುಕುವ
ಸಿಕ್ಕಸಿಕ್ಕಲ್ಲಿ  ಮೇಯುವ ,
ಇಲ್ಲೇ ನರಳುವ ....,
ಇಲ್ಲೇ ಹೊರಳುವ ...,
ಈ ಜಗದ ಜಂಜಾಟಗಳ
ಹೊಲಸಲ್ಲೇ ತೆವಳುವ,
ಕಂಬಳಿಹುಳದಂಥ  ಮನವೇ !
ನೀ ,ಧ್ಯಾನದ,ಮೌನದ 
ಕೋಶದೊಳಹೊಕ್ಕು,
ಸುಂದರ ಪತಂಗವಾಗಿ 
ಮಾರ್ಪಟ್ಟು ............!
ಆನಂದದಿ ಹಾರಾಡು!
ಎಲ್ಲರ ಮನದ .......,
ಪ್ರೀತಿಯ ಹೂಗಳ ....,
ಮಕರಂದ ಹುಡುಕುವ
ಸುಂದರ ಚಿಟ್ಟೆಯಾಗು !
ಸಚ್ಚಿದಾನಂದರೂಪವಾಗು!
ನಿನ್ನ.. ನಿಜಸ್ವರೂಪವೇ 
..............ನೀನಾಗು!

Saturday, November 13, 2010

"ಡಯಾಬಿಟಿಸ್."..........ಭಾಗ ಒಂದು (ಮರೆಯಲಾರದ ಅನುಭವಗಳು)

ನಾಳೆ ನವೆಂಬರ್ 14 ನೇ ತಾರೀಕು ವಿಶ್ವ ಮಧುಮೇಹ ದಿನಾಚರಣೆ (World Diabetes Day ). ನಮ್ಮ ದೇಶ ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು ನಾಲಕ್ಕುಕೋಟಿ ಯಷ್ಟು ಮಧುಮೇಹಿಗಳನ್ನು ಹೊಂದಿ ಮೊದಲ ಸ್ಥಾನದಲ್ಲಿದೆ. ಇದಕ್ಕೆಲ್ಲಾ ನಮ್ಮ ಶಿಸ್ತಿಲ್ಲದ ಅನಾರೋಗ್ಯಕರ ಜೀವನ ಶೈಲಿ, ಹೊತ್ತು ಗೊತ್ತಿಲ್ಲದೇ ಬರೀ ಬಾಯಿ ಚಪಲಕ್ಕಾಗಿ ತಿನ್ನುವುದೇ; ಒಂದು ಗೀಳಾಗಿರುವುದು ,ಹೆಚ್ಚುತ್ತಿರುವ ಮಾನಸಿಕ ಒತ್ತಡದಿಂದ ನಗು,ಸುಖ ,ಶಾಂತಿ,ನೆಮ್ಮದಿ ಕಮ್ಮಿಯಾಗಿರುವುದು,ಶಾರೀರಿಕ ವ್ಯಾಯಾಮದ ಕೊರತೆ, ಇವೆಲ್ಲವೂ ಕಾರಣವಾಗಿರಬಹುದು. ಸಕ್ಕರೆ ಖಾಯಿಲೆಯ ಬಗ್ಗೆ ಅರಿವನ್ನು ಮೂಡಿಸುವುದು ,ಅದು ಬರದಂತೆ ತಡೆಯುವುದು,ಬಂದಾಗ ಅದನ್ನು ನಿಯಂತ್ರಣದಲ್ಲಿಡುವುದು ಈ ವಿಶ್ವ ಮಧುಮೇಹ ದಿನಾಚರಣೆಯ ಮುಖ್ಯ ಉದ್ದೇಶ.'ಡಯಾಬಿಟಿಸ್ ಒಂದು ರೋಗವೇ ಅಲ್ಲ ' ಅನ್ನುವಷ್ಟು ಸಾಮಾನ್ಯಾವಾಗಿದ್ದರೂ ,ಇದನ್ನು ಸರಿಯಾಗಿನಿಯಂತ್ರಣದಲ್ಲಿ ಇಡದಿದ್ದರೆ, ಕೆಲವರ್ಷಗಳನಂತರ ಇದು ನರಮಂಡಲ,ಮಿದುಳು,ಹೃದಯ,ಕಣ್ಣು ,ಮೂತ್ರ ಪಿಂಡ,ರಕ್ತನಾಳಗಳ ಮೇಲೆ ಉಂಟು ಮಾಡುವ ಅಡ್ಡ ಪರಿಣಾಮಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಒಂದೇ ಸಲಕ್ಕೆ ಸಕ್ಕರೆ ಖಾಯಿಲೆಯ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿಸುವುದು ಅಸಾಧ್ಯವಾದರೂ ನಮ್ಮ ಕೈಲಾದಷ್ಟು ರೋಗಿಗಳಿಗೆ ಅರಿವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ.ಈ ನಿಟ್ಟಿನಲ್ಲಿ ಇತ್ತೀಚಿಗೆ ಮಾಧ್ಯಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೇಖನಗಳು ಬರುತ್ತಿರುವುದು ಸ್ವಾಗತಾರ್ಹ. ನನ್ನ ಬ್ಲಾಗಿನಲ್ಲೂ ಈಗಾಗಲೇ ಸಕ್ಕರೆ ಖಾಯಿಲೆಯ ಬಗ್ಗೆ ಎರಡು ಲೇಖನಗಳನ್ನು ಪ್ರಕಟಿಸಿದ್ದೇನೆ.

ಪ್ರೇಮಾ ನಾರಾಯಣ್ ಸುಮಾರು ಐವತ್ತು ವರ್ಷ ವಯಸ್ಸಿನ ,ಎರಡೆರಡು ಸ್ನಾತಕೋತ್ತರ ಪದವಿಗಳನ್ನು ಪಡೆದ ವಿದ್ಯಾವಂತ ಮಹಿಳೆ.ನಮ್ಮ ಎಂಜಿನಿಯರ್ ಒಬ್ಬರ ಪತ್ನಿ. ಸುಮಾರು ಹತ್ತು ವರ್ಷಗಳಿಂದ ಅವರಿಗೆ ಸಕ್ಕರೆ ಖಾಯಿಲೆ ಇತ್ತು.ಮಾತ್ರೆಗಳನ್ನು ಹೆಚ್ಚಿನ ಡೋಸ್ ನಲ್ಲಿ ತೆಗೆದುಕೊಂಡರೂ ಪಥ್ಯ ಸರಿಯಾಗಿ ಮಾಡದೇ,ಒಮ್ಮೊಮ್ಮೆ ಅವರ ರಕ್ತದಲ್ಲಿನ ಸಕ್ಕರೆ ಅಂಶ ಏರುತ್ತಿತ್ತು. 'ಇಷ್ಟು ವಿದ್ಯಾವಂತೆಯಾಗಿದ್ದರೂ ,ಸಕ್ಕರೆ ಖಾಯಿಲೆಯ  ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ,ಈ ಹೆಂಗಸಿಗೆ ನಾಲಿಗೆ ಚಪಲದ ಮೇಲೆ ಸ್ವಲ್ಪವೂ ಹಿಡಿತವಿಲ್ಲವಲ್ಲಾ! ' ಎಂದು ನನಗೆ ಅವರ ಮೇಲೆ ಸಿಟ್ಟಿತ್ತು. ಆ ದಿನ ಆಸ್ಪತ್ರೆಯ ನನ್ನ ಪರೀಕ್ಷಾ ಕೋಣೆಯಲ್ಲಿ ಪ್ರೇಮಾ ನಾರಾಯಣ್ ನನ್ನ ಮುಂದೆ ಕೂತಿದ್ದರು.ಅವರ 'ಬ್ಲಡ್ ಶುಗರ್ ರಿಪೋರ್ಟ್'ನನ್ನ ಕೈಯಲ್ಲಿತ್ತು .ರಕ್ತದ ಸಕ್ಕರೆ ಅಂಶ 400 mg % ಎಂದು ತೋರಿಸುತ್ತಿತ್ತು .(normal-....140mg% ಇರಬೇಕು ). ನಾನು.....'ಯಾಕೆ ಮೇಡಂ ....? ....ಶುಗರ್ ಇಷ್ಟು ಜಾಸ್ತಿಯಾಗಿದೆ?..' ಎಂದೆ. ಅದಕ್ಕವರು 'ಅಯ್ಯೋ ...,ಏನ್ಮಾಡೋದು ಡಾಕ್ಟ್ರೆ! ಮನೆಯವರು ಡೆಲ್ಲಿಯಿಂದ 'ಆಗ್ರಾ ಕಾ  ಪೇಟಾ' (ಒಂದು ರೀತಿಯ ಸಿಹಿ ತಿಂಡಿ)ತಂದಿದ್ದರು.......,ಚೆನ್ನಾಗಿ ತಿಂದುಬಿಟ್ಟೆ ' ಎಂದರು.ನನಗೆ ತಕ್ಷಣ ಸಿಟ್ಟು ಬಂದು 'ಏನು ಮೇಡಂ ..., ನಿಮಗೆ ಇಷ್ಟೆಲ್ಲಾ ತಿಳಿವಳಿಕೆ ಇದ್ದರೂ ನೀವು ಡಯಟ್ ಮಾಡೋಲ್ವಲ್ಲಾ......! ' ಎಂದೆ.ಅದಕ್ಕವರು ಸ್ವಲ್ಪವೂ ಸಿಟ್ಟಾಗದೆ ಇಂಗ್ಲೀಷಿನಲ್ಲಿ 'Doctor.....,are you a diabetic ?' ಎಂದರು. ಒಂದು ಕ್ಷಣ ನನಗೆ ಏನು ಹೇಳಬೇಕೋ ತೋಚದೆ ,ತಕ್ಷಣಕ್ಕೆ ಮಾತು ಹೊರಡಲಿಲ್ಲ. ಈ ಮುಂಚೆ ಯಾರೂ ನನ್ನನ್ನು ಈ ರೀತಿ ಕೇಳಿರಲಿಲ್ಲ. ಸ್ವಲ್ಪ ಸಾವರಿಸಿಕೊಂಡು 'no madame ,I am...not a diabetic ' ಎಂದೆ. ಅದಕ್ಕವರು 'That is the  reason you can't understand ,what is it to be a diabetic !'( ನಿಮಗೆ ಸಕ್ಕರೆ ಖಾಯಿಲೆ ಇಲ್ಲ,ಅದಕ್ಕೇಸಕ್ಕರೆ ಖಾಯಿಲೆಯವರ ಮಾನಸಿಕ ಸ್ಥಿತಿ ನಿಮಗೆ ಅರ್ಥವಾಗುವುದಿಲ್ಲಾ )'ಎಂದರು.  ನಾನು ಅವಾಕ್ಕಾದೆ...! ಹೌದಲ್ಲವೇ!ಅವರ ಮಾತಿನಲ್ಲಿ ಸತ್ಯವಿದೆ ಅನ್ನಿಸಿತು. ದೇಹದಿಂದ ಸಕ್ಕರೆ ಅಂಶ ಉಪಯೋಗವಾಗದೆ ಮೂತ್ರದಲ್ಲಿ ಸೋರಿ ಹೋಗುತ್ತಿರುವಾಗ ,ದೇಹಕ್ಕೆ ಸಿಹಿ ತಿನ್ನಬೇಕು ಎಂದು ಬಲವಾದ ಬಯಕೆ    (craving) ಉಂಟಾಗುತ್ತದೋ ...ಏನೋ ! ಪಾಪ ಅವರ ಕಷ್ಟ ಅವರಿಗೆ ! ಕೆಲವೊಮ್ಮೆ ಅವರಿಗೆ ಸಿಹಿ ತಿನ್ನುವ craving ಎಷ್ಟು ಉಂಟಾಗುತ್ತಿತ್ತೆಂದರೆ  ರಾತ್ರಿ ಎರಡು ಗಂಟೆಗೆ ಸ್ಕೂಟರ್ ನಲ್ಲಿ ಯಜಮಾನರನ್ನು ಕಳಿಸಿ ಸ್ವೀಟ್ ,ಅಂಗಡಿಯ ಬಾಗಿಲು ತೆರೆಸಿ , ಮೈಸೂರ್ ಪಾಕ್ ತರಿಸಿ,....ತಿಂದಿದ್ದರಂತೆ...!! ಆ ದಿನದಿಂದ ,ಸಕ್ಕರೆ ರೋಗಿಗಳ ಬಗ್ಗೆ ನನ್ನ ಸಹಾನುಭೂತಿ ಹೆಚ್ಚಾಗಿದೆ.ಅವರ  ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಂಡು,ಕಷ್ಟಗಳನ್ನು ಸಮಾಧಾನದಿಂದ ಕೇಳಿ  ಸೂಕ್ತ  ಪರಿಹಾರ ನೀಡಲು ಪ್ರಯತ್ನಿಸುತ್ತಿದ್ದೇನೆ.2010 ರ ಜಾಗತಿಕ ಮಧುಮೇಹ ದಿನದ  ಧ್ಯೇಯದಂತೆ ಈ ಕ್ಷಣದಿಂದ ಮದುಮೇಹವನ್ನು ನಿಯಂತ್ರಿಸೋಣ.  ಎಲ್ಲರ ಬಾಳನ್ನೂ ಸಿಹಿಯಾಗಿಸೋಣ. ಎಲ್ಲರಿಗೂ ನನ್ನ ನಮಸ್ಕಾರ.

Thursday, November 11, 2010

"ಬಾಯಿಯಲ್ಲಿ .........ಅದೇನದು ...?"

ನಾನು ಬಳ್ಳಾರಿಯಲ್ಲಿ 1995 ರಲ್ಲಿ  E.N.T.ಮಾಡುತ್ತಿದ್ದಾಗ ,ನನ್ನ ಸಹಪಾಟಿ ಸುರೇಶನಿಗೆ ಸದಾ ಬಾಯಿಯಲ್ಲಿ ಗುಂಡು ಪಿನ್ನು ಕಚ್ಚಿಕೊಂಡಿರುವ ಅಭ್ಯಾಸವಿತ್ತು.ರಜನೀ ಕಾಂತ್ ಸಿನಿಮಾದಲ್ಲಿ ಬಾಯಲ್ಲಿ ಸಿಗರೇಟೊಂದನ್ನು ಕಚ್ಚಿಕೊಂಡು ಅತ್ತಿಂದಿತ್ತ ಹೊರಳಿಸಿ ಮಾತನಾಡುವಂತೆ ,ಬಾಯಲ್ಲಿ  ಗುಂಡು ಪಿನ್ನನ್ನು ಆಚೀಚೆ  ಹೊರಳಿಸುತ್ತಾ ವಿಚಿತ್ರ ದನಿಯಲ್ಲಿ ಮಾತಾಡುತ್ತಿದ್ದ.ನಾನು ಸಾಕಷ್ಟು ಸಲ ಎಚ್ಚರಿಸಿದರೂ ,ಪಿನ್ನು ಕಚ್ಚಿಕೊಂಡೇ' ಏನೂ ಆಗೋಲ್ಲಾ ಬಿಡಿಸಾರ್.ರೂಢಿ ಆಗಿದೆ.ನೀವು ಎಲ್ಲಾದಕ್ಕೂಸುಮ್ನೆ ಹೆದರುತ್ತೀರಾ'ಎಂದು ಹೇಳಿ ನನ್ನ ಬಾಯಿ ಮುಚ್ಚಿಸುತ್ತಿದ್ದ.ನಾನು ಹೇಳುವಷ್ಟು ಹೇಳಿ ಸುಮ್ಮನಾದೆ.

ಒಮ್ಮೆ ಹೀಗೇ ,ಬಾಯಲ್ಲಿ ಗುಂಡು ಪಿನ್ನು ಕಚ್ಚಿಕೊಂಡು ಮಾತಾಡುತ್ತಿದ್ದಾಗ ,ಪಿನ್ನು ನಾಲಿಗೆ ಮೇಲೆ ಕುಳಿತು ಉಸಿರಾಟದ ನಾಳದ ಕಡೆಗೆ ಪ್ರಯಾಣ ಬೆಳೆಸಿತು.ಯಾವುದೇ ಹೊರವಸ್ತು ಉಸಿರಾಟದ ನಾಳದೊಳಗೆ ಹೊಕ್ಕರೆ ,ಉಸಿರಾಟಕ್ಕೆ ವಿಪರೀತ ತೊಂದರೆ ಯಾಗುತ್ತದೆ.ಇದನ್ನು ವೈದ್ಯಕೀಯ ಭಾಷೆಯಲ್ಲಿ stridor ಎನ್ನುತ್ತೇವೆ.ನಮ್ಮ ಪ್ರೊಫೆಸರ್ ವಿಪರೀತ ಸಿಟ್ಟಿನ ಮನುಷ್ಯ.ವಿಷಯ ತಿಳಿದು ಸುರೇಶನಿಗೆ 'ಯಕ್ಕಾ ಮಕ್ಕಾ 'ಬೈದರು.ಮಿಕ್ಕ P.G.Students ಗೂ ಮುಖಕ್ಕೆ ಮಂಗಳಾರತಿ ಆಯಿತು.ಸುರೇಶನನ್ನು ಆಪರೇಶನ್ ಥೀಯೆಟರ್ ಗೆ ಕರೆದು ಕೊಂಡು ಹೋಗಿ ,Bronchoscopy  ಎನ್ನುವ proceedure ಮಾಡಿ ಪಿನ್ನು ತೆಗೆದಿದ್ದಾಯಿತು. ನಾವೆಲ್ಲಾ ಸುರೇಶನಿಗೆ ಆಗಾಗ 'ಪಿನ್ನು ಬೇಕಾ ಸುರೇಶಾ?,ಎಂದು  ಅವನನ್ನು  ರೇಗಿಸುವುದನ್ನು ಮಾತ್ರ ಬಿಡಲಿಲ್ಲ.

ಮತ್ತೆ ಕೆಲವರಿಗೆ ಪೆನ್ನಿನ ಕ್ಯಾಪನ್ನೋ ,ಕಡ್ಡಿಯನ್ನೋ, ಕಚ್ಚಿಕೊಂಡಿರುವ ಅಭ್ಯಾಸ ಸಾಮಾನ್ಯ.ಅನೇಕ ಸಲ ಬಸ್ಸಿನಲ್ಲಿ ಹೋಗುವಾಗ ಕಡ್ಡಿಯನ್ನು ಬಾಯಿಯಿಂದ ತೆಗೆಯಲು ಹೇಳಿ 'ನಿಮಗ್ಯಾಕ್ರೀ .......,ನಿಮ್ಮ ಕೆಲಸ ನೋಡ್ರೀ!'ಎಂದು ಬೈಸಿಕೊಂಡಿದ್ದೇನೆ.  ಹಾಳಾದ್ದು .......!  ನೋಡಿಕೊಂಡು ಸುಮ್ಮನೆ ಇರಲಾಗುವುದಿಲ್ಲವಲ್ಲಾ .......!   ನಾನು ದಾಂಡೇಲಿಯ ಬಳಿ ಅಂಬಿಕಾನಗರದಲ್ಲಿ ಕೆಲಸ ಮಾಡುತ್ತಿದ್ದಾಗ ಆರನೇ ತರಗತಿಯ ಹುಡುಗನೊಬ್ಬ ರೆನಾಲ್ಡ್ ಪೆನ್ನಿನ ಕ್ಯಾಪನ್ನು ಬಾಯಲ್ಲಿ ಇಟ್ಟು ಕೊಂಡಿದ್ದಾಗ  ಅಕಸ್ಮಾತ್ತಾಗಿ ಅದು ಒಳ ಹೋಗಿ ಉಸಿರಾಟದ ನಾಳದಲ್ಲಿ ಸಿಕ್ಕಿಕೊಂಡು ,ಆಸ್ಪತ್ರೆಗೆಸಾಗಿಸುವಷ್ಟರಲ್ಲಿಯೇ
ಸಾವನ್ನು ಅಪ್ಪಿದ ದಾರುಣ ಘಟನೆಯೊಂದು ನಡೆಯಿತು.

ಹೇಳುತ್ತಾ ಹೋದರೆ, ನೂರಾರು ಘಟನೆಗಳು ನೆನಪಿಗೆ ಬರುತ್ತವೆ.ಮತ್ತೆ ಎಂದಾದರೂ ಅವುಗಳನ್ನು ದಾಖಲಿಸುತ್ತೇನೆ. ಇವತ್ತಿಗೆ ಇಷ್ಟು ಸಾಕು.ಇಂತಹ ಅಭ್ಯಾಸವಿರುವ ಯಾರಾದರೂ ನಿಮಗೆ  ಕಂಡರೆ ಅದನ್ನು ಬಿಡುವಂತೆ ಅವರಿಗೆ  ಹೇಳುವುದನ್ನು  ಮಾತ್ರ ಮರೆಯಬೇಡಿ.ನಮಸ್ಕಾರ.

Tuesday, November 9, 2010

"ತಾಯಂದಿರೇ--ಮಕ್ಕಳ ಮೇಲೊಂದು ನಿಗಾ ಇಡಿ!"

ಬೆಳಿಗ್ಗೆ ಸುಮಾರು ಒಂಬತ್ತು ಗಂಟೆ.ಆಗ ತಾನೇ ಆಸ್ಪತ್ರೆಗೆ ಬಂದಿದ್ದೆ.ತಾಯಿಯೊಬ್ಬಳು ಗಾಭರಿಯಿಂದ ಅಳುತ್ತಾ ತನ್ನ ಒಂದುವರ್ಷದ ಮಗುವನ್ನು ಎತ್ತಿಕೊಂಡು ಓಡಿಬಂದು 'ನನ್ನ ಮಗುವನ್ನು ಉಳಿಸಿಕೊಡಿ ಡಾಕ್ಟ್ರೆ' ಎಂದು ಗೋಳಾಡಲು ಶುರುಮಾಡಿದಳು.ಮಗು ವಿಪರೀತ ವಾಂತಿ ಮಾಡುತ್ತಿತ್ತು .ವಾಂತಿ ರಕ್ತ ಮಿಶ್ರಿತ ವಾಗಿತ್ತು .ಅಳುವಿನ ಮಧ್ಯೆ ಆ ತಾಯಿ ತಾನು ಒಳಗೆ ಕೆಲಸ ಮಾಡುತ್ತಿದ್ದಳೆಂದೂ,--ಮಗು ಹೊರಗೆ ಹಾಲ್ ನಲ್ಲಿ ಆಡುತ್ತಿತ್ತೆಂದೂ --,ಇದ್ದಕ್ಕಿಂದಂತೆ ವಾಂತಿ ಮಾಡಲು ಶುರು ಮಾಡಿತೆಂದೂ ಹೇಳಿದಳು.ಮೊದಲಿಗೆ ಆರೋಗ್ಯವಾಗಿದ್ದ ಈಮಗು ಇದ್ದಕ್ಕಿದ್ದ ಹಾಗೇ,ಹೀಗೇಕೆ 
ರಕ್ತವಾಂತಿಮಾಡುತ್ತಿದೆಎಂದುನನಗೆತಕ್ಷಣಕ್ಕೆಅರ್ಥವಾಗಲಿಲ್ಲ.ಆತಾಯಿಯಗೋಳಾಟ,ಆಮಗುಕಷ್ಟಪಡುತ್ತಾ,ಕೆಮ್ಮುತ್ತಾ.
ರಕ್ತವಾಂತಿಮಾಡುತ್ತಿದ್ದದ್ದು!,ಹೇಗಾಯಿತು, ಏನಾಯಿತು!!?ಎಂದು ಕುತೂಹಲದಿಂದ ಸೇರಿದ ಜನ ಜಂಗುಳಿ ! ಇವೆಲ್ಲವೂ ಸೇರಿ ನನಗೆ ಒಂದು ಕ್ಷಣ ದಿಕ್ಕೇ ತೋಚದಂತಾಗಿ ,ಎಲ್ಲವೂ ಅಯೋಮಯ ವಾಗಿತ್ತು!

ರೋಗಿಯನ್ನು ವಾರ್ಡಿನಲ್ಲಿ ಮಲಗಿಸಿ------- ಪರೀಕ್ಷೆ ಮಾಡಿದರೆ ,ಏನಾದರೂ ತಿಳಿಯಬಹುದೇನೋ ಎಂದು ವಾರ್ಡಿಗೆ ಕರೆದುಕೊಂಡು ಹೋದೆ.ವಾರ್ಡಿನ ಬೆಡ್ಡಿನ ಮೇಲೆ ಮಲಗಿಸಿದ ಕೂಡಲೇ ಮಗು ಮತ್ತೊಮ್ಮೆ ರಕ್ತ ಮಿಶ್ರಿತ ವಾಂತಿ ಮಾಡಿತು.ಆದರೆ ಈ ಸಲ ವಾಂತಿಯ ಜೊತೆ ಚೂಪಾದ ಅಂಚು ಗಳಿದ್ದ ಮಾತ್ರೆ ಉಪಯೋಗಿಸಿ ಬಿಸಾಡಿದ್ದ ಅಲ್ಯೂಮಿನಿಯಂ ಫಾಯಿಲ್ (aluminium foil ) ಒಂದು ಹೊರ ಬಂತು-----! ಮಗುವಿನ ವಾಂತಿ ನಿಂತಿತು.ಸಮಸ್ಯೆಗೆ ತಕ್ಷಣವೇ ಪರಿಹಾರ ಒದಗಿಸಿದ  ಆ ದೇವನಿಗೆ ಮನಸ್ಸಿನಲ್ಲಿಯೇ ನೂರೆಂಟು ನಮನ ಸಲ್ಲಿಸಿದೆ.

ಒಂಬತ್ತು  ತಿಂಗಳಿಂದ, ಒಂದೂವರೆ -----ಎರಡು ವರ್ಷದ ಒಳಗಿನ ಮಕ್ಕಳಿಗೆ , ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಇರುತ್ತದೆ.ತಾಯಂದಿರು ಮೈಯೆಲ್ಲಾ ಕಣ್ಣಾಗಿ ಮಗುವನ್ನು ನೋಡಿಕೊಳ್ಳಬೇಕು.ಮಾತ್ರೆಗಳು,ಕ್ಯಾಪ್ಸೂಲ್ ಗಳನ್ನು  ಉಪಯೋಗಿಸಿದ ಮೇಲೆ ಅವುಗಳ ಮೇಲಿನ ಹೊದಿಕೆಯ ರೂಪದ ಅಲ್ಯೂಮಿನಿಯಮ್ ಫಾಯಿಲ್'ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಮೊದಲು ಬಿಡಬೇಕು. ಮಕ್ಕಳಿರುವ ಮನೆಯಲ್ಲಿ ನೀವು ಎಷ್ಟು ಎಚ್ಚರದಿಂದ್ದರೂ ಕಮ್ಮಿಯೇ------------!

Friday, October 29, 2010

"ಉರುಕುಂದಪ್ಪಾ ! ನಿನ್ನ ಮರೆಯೋದು ಹೆಂಗಪ್ಪಾ?"(ಬ್ಲಾಗಿನ ನೂರನೇ ಬರಹ )

ಒಂದು ದಿನ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆ ಸಮಯ.O.P.D.ಯಲ್ಲಿ ರೋಗಿಗಳನ್ನು ನೋಡುತ್ತಿದ್ದೆ.ನಮ್ಮ ಆಸ್ಪತ್ರೆಯ ಅಟೆಂಡರ್ ತಾಯಪ್ಪ ಒಳಬಂದು ಮಾಮೂಲಿಯಂತೆ ತಲೆ ಕೆರೆಯುತ್ತಾ ನಿಂತ.'ಏನು ತಾಯಪ್ಪಾ'ಎಂದೆ.ಅದಕ್ಕವನು 'ಊರಿಂದ ನಮ್ಮಣ್ಣ ಬಂದಾನ್ರೀ ಸರ್' ಎಂದು ಹಲ್ಲುಬಿಟ್ಟ. ಊರಿನಿಂದ ಸಂಬಂಧಿಗಳನ್ನು ಆಸ್ಪತ್ರೆಗೆಕರೆತರುವುದುಮಾಮೂಲಾಗಿತ್ತು.'ಒಳಗೆ ಕರಿ'ಎಂದೆ.
ಸುಮಾರು 65 ವರ್ಷಗಳ ಕೃಶವಾದ ಶರೀರದ ವ್ಯಕ್ತಿಯೊಬ್ಬ ಒಳಗೆ ಬಂದು ,ತಲೆಗೆ ಕಟ್ಟಿದ ರುಮಾಲನ್ನು ಬಿಚ್ಚಿ ಕಂಕುಳಿನಲ್ಲಿ ಸಿಗಿಸಿಕೊಂಡು ,ಕೈಕಟ್ಟಿ ,ನಿಂತ.'ಏನಪ್ಪಾ ನಿನ್ನ ಹೆಸರು'ಎಂದೆ. 'ನಾನ್ರೀ ಎಕಲಾಸ್ ಪುರದ ಉರುಕುಂದಪ್ಪ' ಎಂದ.ಹೆಸರು ಕೇಳಿ ನನಗೆ ಒಂದು ನಿಮಿಷ ಶಾಕ್ ಹೊಡೆದಂತಾಗಿತ್ತು!ಮಾತು ಹೊರಡದೆ ಮೌನವಾಗಿ ಕುಳಿತೆ.ಆತನೇ ಮಾತು ಮುಂದುವರೆಸಿ 'ನೀವು ಆಚಾರ್ ಸಾಹೇಬರ
ಎರಡನೇ ಮಗ, ಅಲ್ಲೇನ್ರೀ ?'ಎಂದ.ನನ್ನ ತಂದೆಯ ಹೆಸರನ್ನು ಹೇಳಿದ್ದಲ್ಲದೇ,ನನ್ನನ್ನೂ ಗುರುತು ಹಿಡಿದಿದ್ದ! ಅನುಮಾನವೇ ಇಲ್ಲ !ಅದೇ ವ್ಯಕ್ತಿ .ನನ್ನ ಎದೆ ಬಡಿತ ಜೋರಾಯಿತು! ಸುಮಾರು ಮೂವತ್ತು ವರ್ಷಗಳ ನಂತರ ಅವನನ್ನು ಭೇಟಿಯಾಗುತ್ತಿದ್ದೆ .ಆದರೂ ಖಾತ್ರಿ ಪಡಿಸಿಕೊಳ್ಳಲು 'ಈಗ ಎಲ್ಲಿ ಕೆಲಸ ಮಾಡುತ್ತಿದ್ದೀಯ ಉರುಕುಂದಪ್ಪ?'ಎಂದು ಕೇಳಿದೆ.ಅದಕ್ಕವನು' ಈಗೆಲ್ಲೂ ಕೆಲಸಕ್ಕೆ ಹೊಗೂದಿಲ್ರೀ ಸಾಹೇಬ್ರೆ.ನಿಮ್ಮ ಅಪ್ಪಾವ್ರ ಕೆಳಗೆ ಅಗಸೀಹಾಳ್ ಫಾರಂ ನಲ್ಲಿ ಕೆಲಸ ಮಾಡ್ತಾ ಇದ್ದೇರಿ .ನೀವೆಲ್ಲಾ ಸಣ್ಣಾವರಿದ್ದಾಗ ಬಾವ್ಯಾಗೆ ಈಸಾಡೋಕೆ ಬರೋವಾಗ ಅಲ್ಲೇ ತೋಟದಾಗ ಕೆಲ್ಸಾ ಮಾಡಿಕೋತ ಇರುತ್ತಿದ್ದೆನಲ್ರೀ ?ಮರ್ತೀರೇನ್ರೀ----ಸಾಹೇಬ್ರೆ?'ಎಂದ.ಅದನ್ನೆಲ್ಲಾ ಹೇಗೆ ಮರೆಯೋಕೆ ಸಾಧ್ಯ?ಅದರಲ್ಲೂ ,ಈ ವ್ಯಕ್ತಿಯನ್ನು ಜೀವಮಾನವಿಡೀ ಮರೆಯೋಕೆ ಸಾಧ್ಯವೇ !!?ನನ್ನ ಗಂಟಲು ಕಟ್ಟಿತು.ಅವನ ಕೈ ಹಿಡಿದು 'ಕೂತ್ಕೋ ಉರುಕುಂದಪ್ಪ 'ಎಂದೆ .'ಐ ------ಬ್ಯಾಡ್ರೀ ಸಾಹೇಬರೇ,ನಿಂತಕಂಡಿರ್ತೀನ್ ಬಿಡ್ರೀ----,ನಮ್ ದೊಡ್ ಸಾಹೇಬರ ಮಗ "ದಾಗ್ದಾರ್ ಸಾಬ್" ಅಗ್ಯಾನೆ ಅಂತ ತಿಳಿದು ಕುಶಿ ಆತ್ರೀ .ನೋಡಾಕ್ ಬಂದೀನ್ರೀ'ಎಂದ.ಮನಸ್ಸು ಒಂದು ಕ್ಷಣ ನನ್ನ ಬಾಲ್ಯದ ದಿನಗಳಿಗೆ ಜಾರಿತು. ನಮ್ಮ ತಂದೆ ರಾಯಚೂರಿನ ಹತ್ತಿರವಿರುವ ಅಗಸೀಹಾಳ ಎಂಬ ಹಳ್ಳಿಯ ಪಕ್ಕದಲ್ಲಿದ್ದ 'ಕೃಷಿಸಂಶೋಧನಾ ಕೇಂದ್ರ' ದಲ್ಲಿ ಕೆಲಸ ಮಾಡುತ್ತಿದ್ದರು.ಅಲ್ಲಿ ತೋಟದಲ್ಲಿ ದೊಡ್ಡದೊಂದು ಬಾವಿ ಇತ್ತು.ಅದು ಮಾಮೂಲು ಬಾವಿಗಳಂತೆ ನೀರು ಸೇದುವ ಬಾವಿಯಾಗಿರಲಿಲ್ಲ.ಮೆಟ್ಟಿಲು ಗಳಿದ್ದ ದೊಡ್ಡ ಬಾವಿ.ಸುಮಾರು ಮೂವತ್ತು ಅಡಿ ಅಗಲ ,ನಲವತ್ತು ಅಡಿ ಆಳವಿತ್ತು .ಅದಕ್ಕೆ ಏತ ಕಟ್ಟಿ ತೋಟಕ್ಕೆ ನೀರು ಬಿಡುತ್ತಿದ್ದರು.ನನ್ನ ಎಸ್.ಎಸ್.ಎಲ್.ಸಿ.ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂದಿತ್ತು.ಎಲ್ಲಾ ಹುಡುಗರ ಜೊತೆ ನಾನೂ ಬಾವಿಗೆ ಈಜು ಕಲಿಯಲು ಹೋಗುತ್ತಿದ್ದೆ.ಇನ್ನೂ ಅಷ್ಟು ಸರಿಯಾಗಿ ಈಜು ಬರುತ್ತಿರಲಿಲ್ಲ.ಒಂದು ಮಧ್ಯಾಹ್ನ ನಾನು ಬಾವಿಯಲ್ಲಿ ಈಜುತ್ತಿರಬೇಕಾದರೆ ,ಮೇಲಿನಿಂದ ಹಾರಿಬಂದ ಹುಡುಗನೊಬ್ಬ ನನ್ನ ಮೇಲೆಯೇ ಡೈವ್ ಹೊಡೆದ.ಈಜು ಬಾರದ ನಾನು,ಸೀದಾ ಬಾವಿಯ ತಳ ಸೇರಿದೆ.ನನಗೆ ಅರೆ ಬರೆ ಎಚ್ಚರ.ಯಾರೋ ನೀರಿನೊಳಗೆ ಬಂದು ನನ್ನ ಜುಟ್ಟು ಹಿಡಿದು ಮೇಲಕ್ಕೆ ಎಳೆಯುತ್ತಿದ್ದರು.ನಾನು ಕೈ ಕಾಲು ಬಡಿಯುತ್ತಾ ಅರೆ ಪ್ರಜ್ಞಾವಸ್ಥೆಯಲ್ಲಿ ಒದ್ದಾಡುತ್ತಿದ್ದೆ.ನೀರಿನ ಬುಳು ಬುಳು ಶಬ್ದ ಕೇಳಿಸುತ್ತಿತ್ತು.ಪೂರ್ಣ ಎಚ್ಚರವಾಗಿ ಕಣ್ಣು ಬಿಟ್ಟಾಗ,ಬಾವಿಯ ದಂಡೆಯ ಮೇಲೆ ಮಲಗಿದ್ದೆ.ಯಾರೋ ಎದೆ ,ಹೊಟ್ಟೆ ,ಅಮುಕಿ ನೀರು ಹೊರಗೆ ತೆಗೆಯುತ್ತಿದ್ದರು.ಮೂಗಿನಿಂದ,ಬಾಯಿಯಿಂದ ಪಿಚಕಾರಿಯಿಂದ ನೀರು ಚಿಮ್ಮುವಂತೆ ನೀರು ಚಿಮ್ಮುತ್ತಿತ್ತು.ನಾನು ಬಾವಿಯ ನೀರಿನಲ್ಲಿ ಮುಳುಗಿ ಮೇಲೆ ಬರದೇ ಇದ್ದಾಗ,ಯಾರೋಹುಡುಗರು ಅಲ್ಲೇ ತೋಟದಲ್ಲಿ ಕೆಲಸಮಾಡುತ್ತಿದ್ದ ಎಕಲಾಸ್ ಪುರದ ಉರುಕುಂದಪ್ಪನನ್ನು ಕರೆದಿದ್ದರು.ಉರುಕುಂದಪ್ಪ ತೋಟದ ಕೆಲಸ ಮಾಡಿ ,ಮಾಂಸ ಖಂಡಗಳು ಹುರಿಗೊಂಡಿದ್ದ ಬಲವಾದ ಆಳು.ತಕ್ಷಣವೇ ಬಾವಿಗೆ ಹಾರಿದ ಉರುಕುಂದಪ್ಪ,ಬಾವಿಯ ತಳದಿಂದ ನನ್ನ ಜುಟ್ಟು ಹಿಡಿದು ಮೇಲೆ ಎಳೆದು ತಂದು ನನ್ನ ಜೀವ ಉಳಿಸಿದ್ದ!ಅದೇ ಉರುಕುಂದಪ್ಪ ಈಗ ಮೂವತ್ತು ವರ್ಷಗಳ ನಂತರ ವಯಸ್ಸಿನಿಂದ,ಕುಡಿತದಿಂದ ಕೃಶ ಕಾಯನಾಗಿದ್ದ .ಬಹಳ ಬಲವಂತ ಮಾಡಿದ ಮೇಲೆ ರೋಗಿಗಳು ಕೂರುವ ಸ್ಟೂಲಿನ ಮೇಲೆ ಕುಳಿತ.'ಏನಾನ ತ್ರಾಸು ಇದೆಯಾ ಉರುಕುಂದಪ್ಪಾ?ಎಂದೆ.'ಹೌದ್ರೀ ಸಾಹೇಬ್ರೇ----,ಭಾಳಾ ನಿತ್ರಾಣ ಆಗೈತ್ರೀ.ಕೈ ಭಾಳಾ ಹರೀತೈತ್ರೀ ---'ಎಂದ.ನನ್ನ ಜೀವವನ್ನು ಉಳಿಸಿದ ಆ ಕೈಗಳನ್ನು ಮುಟ್ಟಿ ನೋಡಿದೆ. ಅವುಗಳಿಗೆ ಮನಸ್ಸಿನಲ್ಲೇ ನಮಸ್ಕರಿಸಿದೆ.'ಆ ಕೈಗಳು ಅಂದು ಸಹಾಯ ಮಾಡದಿದ್ದರೆ ನಾನೆಲ್ಲಿ ಬದುಕಿರುತ್ತಿದ್ದೆ!'ಎನಿಸಿ ಮನದಲ್ಲಿ ಧನ್ಯತಾ ಭಾವ ಮೂಡಿತ್ತು .'ಎನಿತು ಜನುಮದಲಿ, ಎನಿತು ಜೀವರಿಗೆ ,ಎನಿತು ನಾವು ಋಣಿಯೋ!ನಿಜದಿ ನೋಡಿದರೆ ,ಬಾಳು ಎಂಬುದು ,ಋಣದ ರತ್ನ ಗಣಿಯೋ!'ಎಂಬ ಕವಿಯ ವಾಣಿ ನೆನಪಾಯಿತು.ಅವನನ್ನು ಅಮೂಲಾಗ್ರವಾಗಿ ಪರೀಕ್ಷೆ ಮಾಡಿ ,ಒಂದು ತಿಂಗಳಿಗಾಗುವಷ್ಟು ಮಾತ್ರೆ ,ಟಾನಿಕ್ಕುಗಳನ್ನು ಕೊಡಿಸಿದೆ.ಮತ್ತೇನಾದರೂ ಬೇಕಾದರೆ ನನ್ನನ್ನು ಬಂದು ಕಾಣುವಂತೆ ಹೇಳಿದೆ.ಅವನ ಮುಖದಲ್ಲಿ ,ಕೃತಜ್ಞತಾ ಭಾವವಿತ್ತು.ನಾನು ಜೀವನ ಪರ್ಯಂತ ಸ್ಮರಿಸಿ,ನಮಿಸಬೇಕಾದ ನನ್ನ ಜೀವ ರಕ್ಷಕ,ನನಗೇ ಎರಡೆರಡು ಸಲ ನಮಸ್ಕಾರ ಮಾಡಿ ಹೋದ!ಮನಸ್ಸಿನಲ್ಲೇ 'ಎಕಲಾಸ್ ಪುರದ ಉರುಕುಂದಪ್ಪಾ, ನಿನ್ನನ್ನು ಮರೆಯೋದು ಹೆಂಗಪ್ಪಾ!'ಎಂದು ಕೊಂಡೆ.(ಇದು ನನ್ನ ಬ್ಲಾಗಿನ ನೂರನೇ ಬರಹ.ಓದಿ ಪ್ರೋತ್ಸಾಹಿಸಿದ ಎಲ್ಲಾ ಸಹ ಬ್ಲಾಗಿಗರಿಗೂ,ಎಲ್ಲಾ ಓದುಗರಿಗೂ ನಮನಗಳು)

Thursday, October 28, 2010

"ಮೂಗಿನಲ್ಲಿ ಕಾದಿತ್ತು ವಿಸ್ಮಯ!!!"

ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯ.ಊಟಕ್ಕೆ ಅವರೇ ಕಾಳಿನ ಸಾಂಬಾರ್ ಬೇರೆ ತಿಂದಿದ್ದರಿಂದ ಜೋರು ನಿದ್ರೆ.ಸ್ವತಹ ವೈದ್ಯರಾಗಿದ್ದ ಕನ್ನಡದ ಹಾಸ್ಯ ಸಾಹಿತಿ ರಾ.ಶಿ.(ಡಾ.ಶಿವರಾಂ ) ಹೇಳುತ್ತಿದ್ದ ಹಾಗೆ ಅದು ಡಾಕ್ಟರ್ ಗಳು ಮತ್ತು ದೆವ್ವಗಳು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವ ಸಮಯ !ಆದರೆ ಆ ಸಮಯದಲ್ಲೂ ನಮ್ಮನ್ನು ಪರೀಕ್ಷೆ ಮಾಡುವ ಸಲುವಾಗಿಯೇ,ಹಪ್ಪಳ ಮಾರುವವರು,ಉಪ್ಪಿನ ಕಾಯಿ  ಮಾರುವವರು,ಬಿ.ಬಿ.ಎಮ್.ವಿದ್ಯಾರ್ಥಿಗಳೆಂದು ಹೇಳಿಕೊಂಡು ಬಂದು, ನಮಗೆ ಬೇಡದ ವಸ್ತು ಗಳನ್ನು ಮಾರಲೇ ಬೇಕೆಂದು ಬೇತಾಳಗಳ  ಹಾಗೆ ಬೆನ್ನು ಬೀಳುವವರು ,ನಮ್ಮ ನಿದ್ರೆಯ ಶತ್ರುಗಳಂತೆ ಕಾಡುತ್ತಾರೆ!'ಕಿರ್ರೋ'ಎಂದು ಅರಚಿ ಕೊಳ್ಳುತ್ತಿದ್ದ ಡೋರ್-ಬೆಲ್ ನಿಂದ ನಿದ್ರಾ ಭಂಗ ವಾಗಿ ,ಹೋಗಿ ಬಾಗಿಲು ತೆಗೆದೆ.ಮೂಗು ಸೋರುತ್ತಿದ್ದ ನಾಲಕ್ಕು ವರುಷದ ಮಗನನ್ನು ಕರೆದು ಕೊಂಡು ಬಂದಿದ್ದ ವ್ಯಕ್ತಿಯೊಬ್ಬ "ನೀವು ಮೂಗಿನ ಡಾಕ್ಟರ್ರಾ ?"ಎಂದ.ನಿದ್ರೆ ಹಾಳಾಗಿದ್ದಕ್ಕೆ ಮೂಗಿನ ತನಕ ಬಂದ ಕೋಪವನ್ನು ತಡೆದುಕೊಂಡು ಹೌದೆಂದೆ.ಮಗನನ್ನು ಒಂದು ತಿಂಗಳಿಂದ ಮಕ್ಕಳ ಡಾಕ್ಟರ್ ಒಬ್ಬರ ಹತ್ತಿರ ತೋರಿಸುತ್ತಿರಿರುವುದಾಗಿಯೂ ,ಮೂಗಿನಿಂದ ಸಿಂಬಳ ಸೋರುವುದು ,ಕೆಟ್ಟ ವಾಸನೆ ಬರುವುದು ನಿಂತಿಲ್ಲವೆಂದೂ ,ಯಾರದೋ ಸಲಹೆಯ ಮೇರೆಗೆ ನನ್ನಲ್ಲಿಗೆ ಕರೆದು ಕೊಂಡು ಬಂದುದಾಗಿಯೂ ಹೇಳಿದ.ಸಂಜೆ ನಾಲಕ್ಕೂವರೆಗೆ ಆಸ್ಪತ್ರೆಗೆ ಬರುವಂತೆ ಹೇಳಿ ಕಳಿಸಿಕೊಟ್ಟೆ .ಸಂಜೆ ಆಸ್ಪತ್ರೆಯಲ್ಲಿ  ಆ ಹುಡುಗನ ಪರೀಕ್ಷೆ ಮಾಡಿದೆ.ಮಾರು ದೂರಕ್ಕೇ, ಮೂಗಿನಿಂದ ಗಪ್ಪೆಂದು ಸಹಿಸಲು ಅಸಾಧ್ಯವಾದ ಕೆಟ್ಟ ವಾಸನೆ ಬರುತ್ತಿತ್ತು.ಮೂಗಿನಿದ ರಕ್ತ ಮಿಶ್ರಿತ ಸಿಂಬಳ ಸೋರುತ್ತಿತ್ತು.ನೋಡಿದ ತಕ್ಷಣ ಹುಡುಗ ಮೂಗಿನಲ್ಲಿ ಏನೋ ವಸ್ತುವೊಂದನ್ನು ಹಾಕಿ ಕೊಂಡಿರುವುದು ಖಾತ್ರಿಯಾಯಿತು.ಸೂಕ್ತ ಸಲಕರಣೆ ಗಳ ಸಹಾಯದಿಂದ ಬೆಳ್ಳಗಿನ ಮೂಳೆಯಂತೆ ಕಾಣುತ್ತಿದ್ದ ವಸ್ತುವೊಂದನ್ನು ಮೂಗಿನಿಂದ ಕಷ್ಟಪಟ್ಟು ಹೊರತೆಗೆದೆ.ಮೂಗಿನಿಂದ ಸಾಕಷ್ಟು ರಕ್ತ ಸ್ರಾವವಾಗುತ್ತಿತ್ತು.'ಮೂಗಿನ ಕಾರ್ಟಿಲೇಜ್ ಏನಾದರೂ ಕಿತ್ತು ಬಂತಾ ಸಾರ್ !?' ಅಂತ ಅಲ್ಲೇ ಇದ್ದ  ಸಹ ವೈದ್ಯರೊಬ್ಬರು ಗಾಭರಿಗೊಂಡು ಉದ್ಗಾರ ತೆಗೆದರು .ಮೂಗಿನ ರಕ್ತಸ್ರಾವ ನಿಲ್ಲುವಂತೆ ಮೂಗನ್ನು ಗಾಜ್ ನಿಂದ ಪ್ಯಾಕ್ ಮಾಡಿದ ಮೇಲೆ,"ಇಲ್ಲಿ ನೋಡಿ ನೀವು ಹೇಳಿದ ಮೂಗಿನ ಕಾರ್ಟಿಲೇಜ್ "ಎಂದು ಮೂಳೆಯಂತೆ ಕಾಣುತ್ತಿದ್ದ ತುಂಡನ್ನು ಎರಡು ಹೋಳು ಮಾಡಿ ತೋರಿಸಿದೆ .ಅದು ಮೇಲಿನ ಸಿಪ್ಪೆ ಹೋದ ಹುಣಿಸೇ ಬೀಜ ವಾಗಿತ್ತು!ಅದನ್ನು ಎರಡು ಹೋಳು ಮಾಡಿದಾಗ ಸುಮಾರು ಒಂದು ಇಂಚಿನ ಮೊಳಕೆ ಒಡೆದು ಹೊರ ಬರುತ್ತಿತ್ತು.ಇನ್ನೂ ಸ್ವಲ್ಪ ದಿನ ಬಿಟ್ಟಿದ್ದರೆ ಮೂಗಿನಿಂದ ಹುಣಿಸೇ ಸಸಿ ಬೆಳೆಯುತ್ತಿತ್ತೋ ಏನೋ !!!

Saturday, October 23, 2010

"ಬದುಕಿನ ಪಯಣ"

ಸುಮಾರು  ಮೂವತ್ತು ವರ್ಷಗಳ  ಹಿಂದಿನ ಮಾತು.ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ,ಮೇ ತಿಂಗಳ ಒಂದು ದಿನ.ತಾರೀಕು ಸರಿಯಾಗಿ ನೆನಪಿಲ್ಲ.ರಾತ್ರಿ ಸುಮಾರು ಹತ್ತು ಗಂಟೆ .ವಿಪರೀತ ಸೆಕೆ.ನಿಲ್ದಾಣದಲ್ಲಿ ಜನಗಳ ಜಾತ್ರೆ.ಬೆಳಗ್ಗೆಯೆಲ್ಲಾ ದೆಹಲಿಯ ಸುಡು ಬಿಸಿಲಿಗೆ ಸುಟ್ಟು ಕರಕಲಾಗಿದ್ದೆ.ಹೋದ ಕೆಲಸ ಕೈ ಗೂಡದೆ ಮನಸ್ಸಿಗೆ ನೋವಾಗಿತ್ತು.  ಎಲ್ಲಾ ರೈಲುಗಳೂ ಭರ್ತಿಯಾಗಿದ್ದರಿಂದ,'ವಿಶೇಷ'ರೈಲೊಂದರಲ್ಲಿ ಬೆಂಗಳೂರಿಗೆ ಬರ್ತ್ ಒಂದನ್ನು ರಿಸರ್ವ್ ಮಾಡಿಸಿದ್ದೆ.ಆ 'ವಿಶೇಷ'ರೈಲು ಒಂದು ಗಂಟೆ ತಡವಾಗಿ ಬಂತು.ಟ್ರೈನು ಬಂದಾಗ ಬೋಗಿಯಲ್ಲಿ ದೀಪವಿರಲಿಲ್ಲ.ರಿಸರ್ವೇಶನ್ ಇಲ್ಲದವರೆಲ್ಲಾ ಎಲ್ಲಾ ಸೀಟುಗಳನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು.ರಿಸರ್ವೇಶನ್ ಇದ್ದವರು ತಗಾದೆ ತೆಗೆದಿದ್ದರು.ಟಿ.ಟಿ.ಯ ಪತ್ತೆಯೇ ಇರಲಿಲ್ಲ.ಹೇಳುವರು,ಕೇಳುವರು ಇಲ್ಲದೆ ಗದ್ದಲವೋ ಗದ್ದಲ.ಕೆಲವರು ಕೈ ಕೈ ಮಿಲಾಯಸಲು ಶುರು ಮಾಡಿದರು.ನಮ್ಮ ದೇಶದ ಅರಾಜಕತೆಯನ್ನು ಬಿಂಬಿಸುವ ಒಂದು ಮಿನಿ ಅಸೆಂಬ್ಲಿ ಯಂತಿತ್ತು  ಆ ಬೋಗಿ.ಅಷ್ಟರಲ್ಲಿ ದೇವ ಧೂತನಂತೆ ಮೇಲೆ ಮಲಗಿದ್ದ ಗಡ್ಡಧಾರಿ ವಿದೇಶಿ ಯುವಕನೊಬ್ಬ  ಮೆಲ್ಲಗೆ ಕೆಳಗಿಳಿದು ಬಂದ.ಎಲ್ಲರಿಗೂ ಕೈಮುಗಿದ.ತನ್ನ ಹರಕು ಮುರುಕು ಇಂಗ್ಲೀಷಿನಲ್ಲಿ ,'ದಯಮಾಡಿ ಜಗಳವಾಡಬೇಡಿ'ಎಂದು ಬೇಡಿಕೊಂಡ.ಜಗಳವಾಡುತ್ತಿದ್ದ ಪ್ರಯಾಣಿಕನೊಬ್ಬನಿಗೆ ತನ್ನ ಮೇಲಿನ ಬರ್ತ್ ಬಿಟ್ಟುಕೊಟ್ಟ.ಟ್ರೈನ್ ಹೊರಟು ಅಲ್ಲಿ ಶಾಂತಿ ನೆಲಸುವವರೆಗೂ ತನ್ನ ಬ್ಯಾಕ್ ಪ್ಯಾಕ್ ತಗುಲಿಸಿಕೊಂಡು ಅಲ್ಲೇ  ನಿಂತಿದ್ದ.ಅವನ ಮುಖದಲ್ಲಿ ಅಪೂರ್ವ ಕಾಂತಿಯಿತ್ತು.ಕಂಡೂ ಕಾಣದಂತೆ ಮುಗುಳು ನಗೆ ಇತ್ತು.ನನ್ನ ಪಕ್ಕ ಸ್ವಲ್ಪ  ಜಾಗ ಮಾಡಿ ಕೊಟ್ಟು, ಕುಳಿತುಕೊಳ್ಳುವಂತೆ ಹೇಳಿದೆ.ಬ್ಯಾಕ್ ಪ್ಯಾಕ್ ಕೆಳಗಿಟ್ಟು ನನ್ನ ಪಕ್ಕ ಕುಳಿತ.ಎಲ್ಲರಿಗೂ ಅವನ ಬಗ್ಗೆ ಕುತೂಹಲ.ನಿಧಾನವಾಗಿ ತನ್ನ ಬಗ್ಗೆ ಹೇಳ ತೊಡಗಿದ.ಅವನದು ಇರಾನ್ ನಲ್ಲಿ ಒಂದು ಸಣ್ಣ ಊರು.ಇವನ ತಂದೆ ಅಲ್ಲಿನ ಎಲೆಕ್ಟ್ರಿಸಿಟಿ ಬೋರ್ಡಿನ ನೌಕರನಾಗಿ ಆಗ ತಾನೆ ನಿವೃತ್ತಿ ಹೊಂದಿದ್ದ.ಇರಾನ್ ,ಇರಾಕ್ ನಡುವೆ ಯುದ್ದ ಶುರುವಾಗಿ ಕೆಲವು ವರ್ಷಗಳಾಗಿತ್ತು.ಇವನ ಊರಿನಿಂದ ಯುದ್ಧಕ್ಕೆ ಹೋದಇವನ  ಹಲವಾರು ಸ್ನೇಹಿತರು ಯುದ್ಧದಲ್ಲಿ ಸತ್ತಿದ್ದರು.ಇವನಿಗೂ ಯುದ್ಧಕ್ಕೆ ಸೇರುವಂತೆ ಕರೆ ಬಂದಿತ್ತು .ಇವನ ತಂದೆ ತಾಯಿಗಳಿಗೆ ತಮ್ಮ ಒಬ್ಬನೇ ಮಗನನ್ನು ಯುದ್ಧಕ್ಕೆ ಕಳಿಸಲು ಇಷ್ಟವಿರಲಿಲ್ಲ.ಅವನ ತಂದೆ  ರಿಟೈರ್ ಮೆಂಟಿನಿಂದ ಬಂದ ತನ್ನ ಎಲ್ಲಾ ಹಣವನ್ನೂ ಖರ್ಚು ಮಾಡಿ ,ಅವರಿವರನ್ನು ಹಿಡಿದು ಅವನಿಗೆ ಬೇರೆ ಯಾರದೋ ಹೆಸರಿನಲ್ಲಿ ಪಾಸ್ ಪೋರ್ಟ್ ಕೊಡಿಸಿ 'ನೀನು ಜೀವಂತವಾಗಿದ್ದರೆ ಸಾಕು ಮಗು.ಪ್ರಪಂಚ ವಿಶಾಲವಾಗಿದೆ. ಎಲ್ಲೋ ಒಂದು ಕಡೆ ನಿನಗೆ ಆಶ್ರಯ ಸಿಗುತ್ತದೆ.ಇಲ್ಲಿ ಯುದ್ಧದಲ್ಲಿ ಸಾಯಬೇಡ.ಎಲ್ಲೋ ಒಂದು ಕಡೆ  ನೀನು ಬದುಕಿದ್ದರೆನಮಗೆ ಅಷ್ಟೇ  ಸಾಕು'ಎಂದು  ಅವನನ್ನು ಅಲ್ಲಿಂದ ಸಾಗ ಹಾಕಿದ್ದ.ಅವನು ಮೊದಲು ಯಾವುದೋ ಬೇರೆ ದೇಶದಲ್ಲಿ ಸ್ವಲ್ಪ ದಿನ ಇದ್ದು, ಒಂದು ತಿಂಗಳ ಕೆಳಗೆ ದೆಹಲಿಗೆ ಬಂದಿದ್ದ.ಅಲ್ಲಿ ಫುಟ್ ಪಾತಿನಲ್ಲಿ ಮಲಗುತ್ತಾ ,ಬ್ರೆಡ್ಡು ,ಮೊಟ್ಟೆ ತಿಂದು ಹಸಿವೆ ನೀಗಿಕೊಳ್ಳುತ್ತಾ ಆಶ್ರಯಕ್ಕಾಗಿ  ಹಲವಾರು ಕನ್ಸಲೇಟ್  ಗಳಿಗೆ  ಅಲೆಯುತ್ತಾ ಒಂದು ತಿಂಗಳು ಕಳೆದಿದ್ದ.ಇನ್ನು ಕೆಲವು ದಿನಗಳಲ್ಲಿ ನಮ್ಮ ದೇಶ ಬಿಟ್ಟು ಹೋಗಬೇಕಾಗಿತ್ತು.ಇಲ್ಲಿಂದ ಶ್ರೀಲಂಕಾಗೆ ಹೋಗಿ ಅಲ್ಲಿ ಆಶ್ರಯಕ್ಕಾಗಿ ಪ್ರಯತ್ನಿಸುವುದಾಗಿ ಹೇಳಿದ.ಯುದ್ಧ ನಿಂತ ಮೇಲೆ ಮನೆಗೆ ಹಿಂದಿರುಗುವುದಾಗಿಯೂ,ಯಾವು ದಾದರೂ ಕೆಲಸಕ್ಕೆ ಸೇರುವ ಮುನ್ನ ಸ್ವಲ್ಪ ದಿನ ಮನೆಯಲ್ಲಿದ್ದು ಕವಿತೆಗಳನ್ನು  ಓದುತ್ತಾ, ವಯಸ್ಸಾದ ಅಮ್ಮನಿಗೆ ಅಡಿಗೆ ಮನೆಯಲ್ಲಿ ಪಾತ್ರೆ ತೊಳೆಯಲು ಸಹಾಯಮಾಡುವುದಾಗಿ ಹೇಳಿದ.ಜೀವಂತವಾಗಿರುವುದೇ ಒಂದು ಸಂತಸದ ವಿಷಯವಲ್ಲವೇ?ಅದನ್ನು ಹೀಗೆ  ಪರಸ್ಪರ ಕಚ್ಚಾಡಿಕೊಂಡು ಹಾಳು ಮಾಡಿಕೊಳ್ಳುವುದುಸರಿಯೇ ?ಎಂದು ಕೇಳಿದ. ಹಾಗೆ ಹೇಳುವಾಗ ಅವನ ಕಣ್ಣುಗಳಲ್ಲಿ ನೀರಿತ್ತು.ರಾತ್ರಿ ಹನ್ನೆರಡಾಗುತ್ತಿತ್ತು.ಟ್ರೈನಿನ 'ಧಡ ಬಡ'  ಸದ್ದಿನ ಜೋಗುಳಕೆ ಹಲವರು ಕುಳಿತಲ್ಲೇ ತೂಕಡಿಸುತ್ತಿದ್ದರು.ಅವನು ತನ್ನ ಬ್ಯಾಕ್ ಪ್ಯಾಕ್ ಎತ್ತಿಕೊಂಡು ಟಾಯ್ಲೆಟ್ ನ ಹತ್ತಿರದ ಪ್ಯಾಸೇಜ್ ನಲ್ಲಿ  ,ಕೆಳಗೆ ನ್ಯೂಸ್ ಪೇಪರ್ ಹಾಸಿಕೊಂಡು ಅದರ ಮೇಲೆ ಕುಳಿತು ಚೀಲದಿಂದ ಕೊಳಲೊಂದನ್ನು ಹೊರತೆಗೆದು,ಜಗದ ಚಿಂತೆಗಳಿಗೆ ಇತಿಶ್ರೀ ಹಾಡುವಂತೆ ಇಂಪಾದ ರಾಗವೊಂದನ್ನು ನುಡಿಸ ತೊಡಗಿದ.ಟ್ರೈನಿನ ಕಿಟಕಿಯ ಹೊರಗೆ ನೋಡಿದೆ.ಓಡುವ ,ಮರ,ಗಿಡ,ಹೊಲ,ಗದ್ದೆಗಳ ಮೇಲೆ ತಣ್ಣಗೆ ಬೆಳದಿಂಗಳು ಹರಡಿತ್ತು. ಟ್ರೈನಿನ ಒಳಗೆ ಇಂಪಾದ ಕೊಳಲಿನ ನಾದ.'ಬುದ್ಧ,ಬುದ್ಧ ,ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ'ಎಂಬ ಕವಿತೆಯೊಂದರ ಸಾಲುಗಳು ನೆನಪಾದವು.

Sunday, October 17, 2010

"ಅಧಿಕ ರಕ್ತದೊತ್ತಡ "

ವೈದ್ಯಲೋಕದ ವಿಚಿತ್ರಗಳು ,ಹೇಳಿದಷ್ಟೂ ಇದೆ .ಎಷ್ಟೊಂದು ರೋಗಗಳು!ಎಷ್ಟೊಂದು ವೈವಿಧ್ಯತೆ !ಒಂದೇ ರೋಗ ಒಬ್ಬೊಬ್ಬ ರೋಗಿಯಲ್ಲೂ ಒಂದೊಂದು ತರಹ !ಕೆಲವರಿಗೆ ರಕ್ತದ ಒತ್ತಡ ಸ್ವಲ್ಪ ಹೆಚ್ಚಾದರೂ, ತಲೆ ತಿರುಗುವುದು,ತಲೆ ವಿಪರೀತ ನೋಯುವುದೂ ಕಾಣಿಸಿಕೊಳ್ಳುತ್ತವೆ. ಕೆಲವರ ಬಿ.ಪಿ.ಯನ್ನು ಚೆಕ್ ಮಾಡಿ, ವೈದ್ಯರಾದ  ನಮ್ಮ ಬಿ.ಪಿ.ಹೆಚ್ಚಾದರೂ ಅವರಿಗೆ ಯಾವ ರೀತಿಯ ತೊಂದರೆಯೂ  ಇಲ್ಲದೆ,'ಅರ್ಜೆಂಟ್ ಕೆಲಸವಿದೆ ಸಾರ್ ,ಇನ್ನೊಮ್ಮೆಬಂದು ಔಷಧಿ ತೆಗೆದುಕೊಳ್ಳುತ್ತೇನೆ' ಎಂದುಹೇಳಿ ಏನೂ ಆಗದವರಂತೆ ಝಾಡಿಸಿಕೊಂಡು ಎದ್ದು ಹೊರಟುಬಿಡುತ್ತಾರೆ. ಬಿ.ಪಿ.ಹೆಚ್ಚಾಗಿರುವುದರಿಂದ ಅವನಿಗೇನಾಗುತ್ತೋ ಎಂದು ನಾವು ವೈದ್ಯರು ಗಾಭರಿಯಾಗಬೇಕಷ್ಟೇ! ಕೆಲವರು ಖಾಯಿಲೆ ಬಗ್ಗೆ ಅಷ್ಟು ಕೇರ್ ಲೆಸ್ ಆಗಿದ್ದರೆ,ಮತ್ತೆ ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಡಾಕ್ಟರ್ ಗಳನ್ನು ಬದಲಾಯಿಸುತ್ತಾ ,ಖಾಯಿಲೆಯನ್ನೇ ಒಂದು  ಹಾಬಿಯನ್ನಾಗಿ ಮಾಡಿಕೊಂಡು ತಮಗೂ,ತಮ್ಮ ಮನೆಯವರಿಗೂ ದೊಡ್ಡ ತಲೆ ನೋವಾಗುತ್ತಾರೆ!
ಆ ದಿನ ಸಂಜೆ ಸುಮಾರು ಐದು ಗಂಟೆ. ಓ.ಪಿ.ಡಿ.ಯಲ್ಲಿ ಸುಮಾರು  ರೋಗಿಗಳು ನನ್ನ ಪರೀಕ್ಷಾ ಕೊಠಡಿಯ ಹೊರಗೆ ಕಾಯುತ್ತಿದ್ದರು.ಆ ವ್ಯಕ್ತಿಗೆ ಸುಮಾರು ಮೂವತ್ತೈದು ವರ್ಷ ವಯಸ್ಸು.ಅವರು ನಮ್ಮ ರಾಯಚೂರು ಥರ್ಮಲ್ ಪವರ್ ಸ್ಟೇಶನ್ ನ ಯೂನಿಯನ್ ಒಂದರ  ಲೀಡರ್ ಆಗಿದ್ದರು. ಸುಮಾರಾಗಿ ಪರಿಚಯವಿತ್ತು. 'ಸ್ವಲ್ಪ ತಲೆ ನೋವಿದೆ  ಸಾರ್ ,ಏನಾದರು ಮಾತ್ರೆ ಕೊಡಿ 'ಎಂದರು.ನಾನು 'ಒಂದು ಸಲ ಬಿ.ಪಿ.ಚೆಕ್ ಮಾಡಿಬಿಡೋಣ'ಎಂದೆ.'ಈಗ ಅದೇನೂ ಬೇಡ ಸಾರ್.ಸ್ವಲ್ಪ ತಲೆನೋವಿದೆ,ಏನಾದರೂ ಮಾತ್ರೆ ಕೊಡಿ .ಇನ್ನೊಂದು ಸಲ ಬಂದು ಬಿ.ಪಿ.ಚೆಕ್ ಮಾಡಿಸಿ ಕೊಳ್ಳುತ್ತೇನೆ,ಅರ್ಜೆಂಟಾಗಿ ಐದೂವರೆ ಬಸ್ಸಿಗೆ ಬೆಂಗಳೂರಿಗೆ ಹೋಗಬೇಕಿದೆ 'ಎಂದರು.ಒಂದೇ ನಿಮಿಷದಲ್ಲಿ ನೋಡಿಬಿಡುತ್ತೇನೆ ಎಂದು ಬಲವಂತ ಮಾಡಿ  ಬಿ.ಪಿ.ಚೆಕ್ ಮಾಡಿದೆ.ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ.ಅಷ್ಟು ಹೆಚ್ಚಿನ ರಕ್ತದ ಒತ್ತಡವನ್ನು ಅದಕ್ಕೂ ಮುಂಚೆ ನಾನು ನೋಡಿರಲೇ ಇಲ್ಲ!ಬಿ.ಪಿ.260/140 mm hg.ಇತ್ತು !ಈ ಆಸಾಮಿ ನೋಡಿದರೆ ಸ್ವಲ್ಪ ಮಾತ್ರ  ತಲೆ ನೋವು ಎನ್ನುತ್ತಿದ್ದಾನೆ!ಅಷ್ಟು ಹೆಚ್ಚು ರಕ್ತದ ಒತ್ತಡಕ್ಕೆ,ರಕ್ತ ನಾಳಗಳು ಬರ್ಸ್ಟ್ ಆಗಿ ಎಲ್ಲಿ ಬೇಕಾದರೂ ರಕ್ತ ಸ್ರಾವವಾಗಬಹುದು!ಈ ವ್ಯಕ್ತಿ ದೇಹದೊಳಗೊಂದು time bomb ಇಟ್ಟುಕೊಂಡು ಓಡಾಡುತ್ತಿದ್ದಾನೆ ಎನಿಸಿ ಅಚ್ಚರಿಯಾಯಿತು! ರೋಗಿಗಿಂತ ಡಾಕ್ಟರ್ ಆದ ನನಗೇ ಹೆಚ್ಚು ಗಾಭರಿ  ಆಗಿತ್ತು!ಮೇಲೆ ಮಾತ್ರ ಏನೂ ಆಗದವನಂತೆ ಇರಬೇಕಾದ ಅನಿವಾರ್ಯತೆ !ಮತ್ತೆ ನಾಲಕ್ಕು ಸಲ ಬೇರೆ ,ಬೇರೆ ಬಿ.ಪಿ.ಉಪಕರಣಗಳಲ್ಲಿ ,ಬೇರೆಯವರ ಹತ್ತಿರ ಚೆಕ್ ಮಾಡಿಸಿದರೂ ಬಿ.ಪಿ.ಅಷ್ಟೇ ಇತ್ತು .ಹೆಚ್ಚಿನ ವ್ಯತ್ಯಾಸವೇನೂ ಕಂಡು ಬರಲಿಲ್ಲ.ಅವರನ್ನು ತಕ್ಷಣ ಅಡ್ಮಿಟ್ ಮಾಡಿಕೊಂಡು ಅವರ ಮನೆಯವರನ್ನು ಕರೆಸಿದೆ.ಎರಡು ದಿನ ಗಳಲ್ಲಿ ಬಿ.ಪಿ.150/90 mm hg ಗೆ ಇಳಿಯಿತು.ಕೆಲವೊಮ್ಮೆ ಕಿಡ್ನಿಯಲ್ಲಿ ಏನಾದರೂ ತೊಂದರೆ ಇದ್ದರೆ ಅಷ್ಟೊಂದು ಸಣ್ಣ ವಯಸ್ಸಿಗೆ ಅಷ್ಟು ಹೆಚ್ಚಿನ ರಕ್ತದ ಒತ್ತಡ ವಿರುತ್ತದೆ.ಅದಕ್ಕೆ 'ಸೆಕೆಂಡರಿ ಹೈಪರ್ ಟೆನ್ಶನ್',ಎನ್ನುತ್ತಾರೆ.(ಮಾಮೂಲಾಗಿ ಕಾಣಿಸಿಕೊಳ್ಳುವ ಬಿ.ಪಿ.ಗೆ ,'ಪ್ರೈಮರಿ ಹೈಪರ್ ಟೆನ್ಶನ್',ಎನ್ನುತ್ತಾರೆ.)ಅವರನ್ನು ಮತ್ತೆ ಮುಂದಿನ ತಪಾಸಣೆ ಗಳಿಗಾಗಿ ,ಬೆಂಗಳೂರಿನ ಕಿಡ್ನಿ ಫೌಂಡೇಶನ್ ಆಸ್ಪತ್ರೆಗೆ ರೆಫರ್ ಮಾಡಲಾಯಿತು. ಮತ್ತೆ ಮುಂದೇನಾಯಿತು ಎಂದು ನನಗೆತಿಳಿಯಲಿಲ್ಲ,ಏಕೆಂದರೆ ನನಗೆ ಬೇರೆ ಜಾಗಕ್ಕೆ ವರ್ಗವಾಯಿತು.ಐದು ವರ್ಷಗಳ ನಂತರ ಇದ್ದಕ್ಕಿದ್ದಂತೆ ಅಂಬಿಕಾ ನಗರದಲ್ಲಿ ಆ ವ್ಯಕ್ತಿಯ ಭೇಟಿಯಾಯಿತು.ಆ ವ್ಯಕ್ತಿ ನನ್ನನ್ನು ನೋಡಿದ ತಕ್ಷಣ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದರು.ನನ್ನಿಂದ ಏನು ಎಡವಟ್ಟು  ಆಯಿತೋ ಎಂದು ಗಾಭರಿಯಾಯಿತು.ಆಮೇಲೆ ಸಮಾಧಾನ ಮಾಡಿಕೊಂಡು ಹೇಳತೊಡಗಿದರು 'ಸಾರ್,ನೀವು ನನ್ನನ್ನು ಕಿಡ್ನಿ ಫೌಂಡೆಶನ್ ಗೆ ಕಳಿಸಿದಿರಿ.ಅಲ್ಲಿ ನನಗೆ ಕಿಡ್ನಿ ಫೈಲ್ಯೂರ್ ಆಗಿದ್ದು ಗೊತ್ತಾಯಿತು .ನನಗೆ ಕಿಡ್ನಿ ಟ್ರಾನ್ಸ್ ಪ್ಲ್ಯಾಂಟ್ ಮಾಡಿದರು.ನನ್ನ ಹೆಂಡತಿಯೇ ನನಗೆ ಕಿಡ್ನಿ ಡೊನೇಟ್ ಮಾಡಿದಳು .ಆ ದಿನ ನೀವು ಬಲವಂತದಿಂದ ನನ್ನ  ಬಿ.ಪಿ.ಚೆಕ್ ಮಾಡದಿದ್ದರೆ ನಾನು ಬದುಕುತ್ತಿರಲಿಲ್ಲಾ ಸಾರ್.ನಿಮ್ಮ ಉಪಕಾರ ಈ ಜನ್ಮದಲ್ಲಿ ತೀರಿಸೋಕೆ ಆಗೋಲ್ಲಾ' ಎಂದು ನನ್ನ ಕೈ ಹಿಡಿದು ಮತ್ತೆ ಕಣ್ಣಲ್ಲಿ ನೀರು ತುಂಬಿಕೊಂಡರು .ನಾನು ಮಾತು ಹೊರಡದೆ ಮೂಕ ವಿಸ್ಮಿತನಾಗಿದ್ದೆ.

Tuesday, October 12, 2010

"ಹಾರೈಕೆ"

ನನ್ನ ಎದೆಯಾಳದಲ್ಲಿ -----,
ಚುಚ್ಚುತ್ತಿರುವ ಮುಳ್ಳುಗಳೆಲ್ಲ
ಹೂವಾಗಿ ಅರಳಿ ---------,
ಸುಗಂಧ  ಬೀರಲಿ ಸುತ್ತ!
ಸಹ್ಯವಾಗಲಿ ಬದುಕು ,
ನನಗೂ ,ಸರ್ವರಿಗೂ .
ತಣ್ಣಗೆ ಒಳಗೇ ಕೊರೆಯುವ 
ನೋವಿನ ಮಂಜು ಕರಗಿ ,
ನೀರಾಗಿ ,ಆವಿಯಾಗಿ
ಕಾಣದಂತಾಗಸಕ್ಕೇರಿ,
ಮಳೆ ಸುರಿಯಲಿ ,
ತಂಪೆರೆಯಲಿ ----!
ಸಂಬಂಧಗಳು ಬತ್ತಿರುವ 
ಈ ಮರುಧರೆಯ ಎದೆಗಳಲಿ 
ಮತ್ತೆ ಬಾಂಧವ್ಯಗಳ 
ಹೊಸ ಚಿಗುರೊಡೆದು 
ಕಳೆ ಇರದ ಬದುಕಿನ ಹೊಲ 
ನಳ,ನಳಿಸಲಿ---------,
ಎನ್ನುವ --------ಹಾರೈಕೆ!

Wednesday, October 6, 2010

"ಹೀಗೂ ಉಂಟೆ?"

ರಾತ್ರಿ ಸುಮಾರು ಹನ್ನೊಂದು ಗಂಟೆ ಸಮಯ.ರಾಯಚೂರಿನ ರೈಲ್ವೆ ಸ್ಟೇಷನ್ನಿನಲ್ಲಿ ದಾದರ್-ಚೆನ್ನೈ ಎಕ್ಸ್ ಪ್ರೆಸ್ ಟ್ರೈನಿಗೆ ಟಿಕೆಟ್ ಕೊಳ್ಳಲು ಹನುಮಂತನ ಬಾಲದಂತಹ ಉದ್ದನೆಯ ಕ್ಯೂ ನಲ್ಲಿ ನಿಂತಿದ್ದೆ.ಟ್ರೈನ್ ಪ್ಲಾಟ್ ಫಾರಮ್ಮಿಗೆ ಬರುವ ಸೂಚನೆಯಾಗಿ ಮೂರನೇ ಗಂಟೆ ಬಾರಿಸಿದರೂ ಕ್ಯೂ ಕರಗುವ ಸೂಚನೆ ಕಾಣದೆ ಪ್ರಯಾಣಿಕರಲ್ಲಿ ಗಡಿಬಿಡಿ,ಆತಂಕ ಶುರುವಾಯಿತು.ಎಲ್ಲರಂತೆ ನಾನೂ ಬೇಗ ಟಿಕೆಟ್ ಕೊಡುವಂತೆ ದನಿ ಸೇರಿಸಿದೆ.ಟಿಕೆಟ್ ಕೌಂಟರ್ ನಲ್ಲಿದ್ದ ಒಬ್ಬ ವ್ಯಕ್ತಿ  ನನ್ನ ದನಿ ಗುರುತು ಹಿಡಿದು ಕೌಂಟರ್ ನಿಂದ ಹೊರಗೆ ಬಂದು ,ನನ್ನ ಬಳಿ ಬಂದು "ಸಾರ್ ನೀವು ಡಾ.ಕೃಷ್ಣ ಮೂರ್ತಿಯವರಲ್ಲವೇ ?ಹತ್ತು ವರ್ಷಗಳ ಹಿಂದೆ ಶಕ್ತಿನಗರದಲ್ಲಿದ್ದಿರಿ .ಹೌದಲ್ಲವೇ ?"ಎಂದ.ನಾನು "ಹೌದು ,ಆದರೆ ನೀವು ಯಾರು ? ನನಗೆ ನಿಮ್ಮ ಪರಿಚಯವಿಲ್ಲವಲ್ಲ "ಎಂದೆ.ಅಷ್ಟರಲ್ಲಿ ಟ್ರೈನು ಪ್ಲಾಟ್ ಫಾರಮ್ಮಿಗೆ ಬಂದಿತ್ತು ."ಸಾರ್ ,ಅದೆಲ್ಲಾ ಆಮೇಲೆ ಹೇಳುತ್ತೀನಿ ,ನಿಮಗೆ ಎಲ್ಲಿಗೆ ಟಿಕೆಟ್ ಬೇಕು ಹೇಳಿ?" ಎಂದ.ನಾನು ಹೋಗ ಬೇಕಾದ ಸ್ಥಳದ ಹೆಸರು ಹೇಳಿದೆ.ತಕ್ಷಣವೇ ಹಣವನ್ನೂ ತೆಗೆದು ಕೊಳ್ಳದೆ,ನಾನು ಹೋಗಬೇಕಾದ ಸ್ಥಳಕ್ಕೆ ಟಿಕೆಟ್ ತಂದು ಸ್ಲೀಪರ್ ಬೋಗಿ ಯೊಂದರ ಟಿ.ಟಿ.ಗೆ ಹೇಳಿ ಸೀಟು ಕೊಡಿಸಿದ.ಎಷ್ಟೇ ಬಲವಂತ ಮಾಡಿದರೂ ಟಿಕೆಟ್ಟಿನ ಹಣ ತೆಗೆದುಕೊಳ್ಳಲಿಲ್ಲ . ನನಗೆ 'ಇವನು ಯಾರು?ನನಗೇಕೆ ಸಹಾಯ ಮಾಡುತ್ತಿದ್ದಾನೆ?' ಎಂದು ಅರ್ಥವಾಗಲಿಲ್ಲ.I was in a totally confused state.ನಾನು ಟ್ರೈನಿನಲ್ಲಿ ಕಿಟಕಿಯ ಬಳಿ ಕುಳಿತ ಬಳಿಕ, ಕಿಟಕಿಯ ಹೊರಗೆ ನಿಂತು ಆತ ಹೇಳಿದ "ಸಾರ್ ,ಹತ್ತು ವರ್ಷಗಳ ಹಿಂದೆ ನಾನು 'ಕೃಷ್ಣ ರೈಲ್ವೆ ಸ್ಟೇಷನ್' ನಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಮಗನಿಗೆ ಬೈಕ್ accident ಆಗಿ 'ಶಕ್ತಿನಗರ'ದ ಆಸ್ಪತ್ರೆಗೆ ರಾತ್ರಿ ಸುಮಾರು ಎರಡು ಗಂಟೆಗೆ ಕರೆದುಕೊಂಡು ಬಂದಾಗ ನೀವು  ಬಹಳ ಚೆನ್ನಾಗಿ ಟ್ರೀಟ್ ಮೆಂಟ್ ಕೊಟ್ಟಿರಿ.ಗಾಯಗಳಿಗೆ ಸುಮಾರು ಹೊತ್ತು ಸೂಚರ್ ಹಾಕಿದಿರಿ. ಹಣ ಕೊಡಲು ಬಂದಾಗ ತೆಗೆದು ಕೊಳ್ಳದೆ ಹಾಗೇ  ಕಳಿಸಿದಿರಿ.ನಿಮ್ಮ ಉಪಕಾರ ನಾನು ಯಾವತ್ತೂ ಮರೆಯೋಕೆ ಆಗೋಲ್ಲಾ ಸಾರ್.ಹತ್ತು ವರ್ಷಗಳಾದರೂ ನಿಮ್ಮ ದನಿ ನನಗೆ ಇನ್ನೂ ನೆನಪಿದೆ ನೋಡಿ!ನಿಮ್ಮ ದನಿಯಿಂದಲೇ ನಿಮ್ಮ ಗುರುತು ಹಿಡಿದೆ"ಎಂದ.ನಾನು ಇದ್ದಕ್ಕಿದ್ದಂತೆ ನಡೆದ ಘಟನೆಯಿಂದ ಅವಾಕ್ಕಾಗಿದ್ದೆ.ಅವನ ಮುಖದಲ್ಲಿ ಕೃತಜ್ಞತೆ ಇತ್ತು.
ಕಣ್ಣುಗಳಲ್ಲಿ ನೀರಿನ ಪಸೆ ಇತ್ತು.ಟ್ರೈನ್ ನಿಧಾನವಾಗಿ ಮುಂದೆ ಚಲಿಸಿದಂತೆ ಬೀಳ್ಕೊಡುವಂತೆ ಕೈ ಬೀಸಿದ.ನಾನೂ 'ಹೀಗೂ ಉಂಟೆ?'ಎಂದುಕೊಳ್ಳುತ್ತಾ ,ಕೈ ಬೀಸಿ ಬೀಳ್ಕೊಟ್ಟೆ .

Saturday, October 2, 2010

"ಮತ್ತೆ ಹುಟ್ಟಿ ಬಾ ----ಬಾಪೂ"

ಬಾಪೂ----------ಇಂದು,
ನ್ಯಾಯಕ್ಕಾಗಿ,ನೀತಿಗಾಗಿ, 
ನಮ್ಮೆಲ್ಲರ ಸ್ವಾತಂತ್ರ್ಯಕ್ಕಾಗಿ ,
ಹೋರಾಡಿದ ನಿನ್ನ 
ಜನುಮ ದಿನ !
ಎಲ್ಲದಕ್ಕೂ  ನಿನ್ನ 
ಹೆಸರು ಹೇಳಿಕೊಂಡು ,
ತಕ್ಕಡಿ ಹಿಡಿದು ಕುಳಿತಿದ್ದಾರೆ 
ತಲೆಗೆ ಟೋಪಿ ಇಟ್ಟ  ಜನ!
ತಕ್ಕಡಿ ಕೆಳಗೆ ನೋಡು !
ಮೋಸ ಬಯಲಾಗುತ್ತೆ !
ನಿನ್ನ ಹೆಸರಿನ ಹಿಂದೆ ,
ಏನೆಲ್ಲಾ ದಂಧೆ
ನಡೆಯುತ್ತೆ ಅನ್ನೋದು 
ನಿನಗೇ ಗೊತ್ತಾಗುತ್ತೆ!
ನಿನ್ನ ರಾಮ ರಾಜ್ಯದ ಕನಸ 
ನನಸಾಗಿಸಲಾದರೂ-----,
ಸತ್ಯ ಅಹಿಂಸೆ ನ್ಯಾಯ ನೀತಿಗಳ 
ಅನುಷ್ಠಾನ ಗೊಳಿಸಲಾದರೂ,
ಮತ್ತೊಮ್ಮೆ ಹುಟ್ಟಿಬಾ ಬಾಪೂ!

Friday, October 1, 2010

"ಮೂಗಿನ ಬಗ್ಗೆ ಏನೂ ಕೇಳಬಾರದು!"

ನಾಲಕ್ಕು ವರ್ಷ ವಯಸ್ಸಿನ ತುಂಟ ಮಗ.ಅವನ ತರಲೆ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹೈರಾಣಾದ ತಂದೆ.ಮಾರನೇ ದಿನ ಸ್ನೇಹಿತರೊಬ್ಬರನ್ನು ಊಟಕ್ಕೆ ಕರೆದಿದ್ದರು.ಮಗ ಏನು ಎಡವಟ್ಟು ಪ್ರಶ್ನೆ ಕೇಳಿ ಅವಮಾನ ಮಾಡಿಬಿಡುತ್ತಾನೋ ಎಂದು ಅವರಿಗೆ  ಒಳಗೊಳಗೇ ಭಯ.ಮೊದಲೇ ಮಗನಿಗೆ ಎಚ್ಚರಿಕೆ ನೀಡುವುದು ಒಳ್ಳೆಯದೆಂದು ಮಗನನ್ನು ಹತ್ತಿರಕ್ಕೆ ಕರೆದರು.ಪ್ರೀತಿಯಿಂದ "ನೋಡು ಪುಟ್ಟ ,ನಾಳೆ ಊಟಕ್ಕೆ ಬರುತ್ತಾರಲ್ಲಾ ಅಂಕಲ್,ಅವರ ಮೂಗಿನ ಬಗ್ಗೆ ನೀನು  ಏನೂ ಪ್ರಶ್ನೆ ಕೇಳಬಾರದು !ನನ್ನ ಮಾತು ಕೇಳಿದರೆ ನಿನಗೆ ಕ್ಯಾಡ್ಬರೀಸ್ ಚಾಕೊಲೇಟು ತಂದು ಕೊಡುತ್ತೀನಿ' ಎಂದು ಪುಸಲಾಯಿಸಿದರು.ಕ್ಯಾಡ್ಬರೀಸ್ ಆಸೆಗೆ ಮಗ ಏನೂ ಪ್ರಶ್ನೆ ಕೆಳುವುದಿಲ್ಲವೆಂದು ತಕ್ಷಣ  ಒಪ್ಪಿಕೊಂಡ.ಮಾರನೇ ದಿನ ಬಂದ ಅತಿಥಿಗಳು ಊಟಕ್ಕೆ ಕುಳಿತರು.ಮಗ ತದೇಕ ಚಿತ್ತನಾಗಿ ಅತಿಥಿಗಳ ಮುಖವನ್ನೇ ನೋಡುತ್ತಿದ್ದ.ತಂದೆಗೆ ಒಳೊಗೊಳಗೆ ಭಯ !ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತಿತ್ತು .ಮಗ ತಂದೆಯ ಕಡೆ ನೋಡುತ್ತಾ 'ಅಪ್ಪಾ'ಎಂದ.ಅವನನ್ನು ಸುಮ್ಮನಿರುವಂತೆ ಕಣ್ಣಿನಲ್ಲಿಯೇ ಗದರಿದರು.ಏನೂ ಪ್ರಯೋಜನವಾಗಲಿಲ್ಲ.ಮಗ ಪ್ರಶ್ನೆಯ ಬಾಣವನ್ನು ಪ್ರಯೋಗಿಸಿಯೇ ಬಿಟ್ಟ .'ಅಪ್ಪಾ ,ಅಂಕಲ್ ಮೂಗಿನ ಬಗ್ಗೆ ಏನೂ ಕೇಳಬೇಡ ಎಂದೆ!ಅಂಕಲ್ ಗೆ  ಮೂಗೇ ಇಲ್ಲಾ!!!!'

Saturday, September 25, 2010

ಮೆಚ್ಚಿದ ಕವನ -"ಶೋಧನೆ"(ಡಾ.ಜಿ.ಎಸ್.ಎಸ್)

ನಾನು ಬಹುವಾಗಿ ಇಷ್ಟಪಟ್ಟ ಕವಿ ಡಾ.ಜಿ.ಎಸ್.ಶಿವರುದ್ರಪ್ಪನವರು.ಬಹಳ ದಿನಗಳ ನಂತರ ಅವರ ಸಮಗ್ರ ಕವಿತೆಗಳನ್ನುಓದಲು ಕೈಗೆತ್ತಿಕೊಂಡೆ.ಅದರಲ್ಲಿ 'ದೀಪದ ಹೆಜ್ಜೆ'ಸಂಕಲನದಲ್ಲಿರುವ "ಶೋಧನೆ"ಕವಿತೆಇಷ್ಟವಾಯಿತು.ನಿಮ್ಮೊಡನೆಹಂಚಿಕೊಂಡಿದ್ದೇನೆ;
"ಶೋಧನೆ "
ನುಗ್ಗು ಎದೆಯೊಳಸುಳಿಯ ತಳದಾಳಕೆ 
ನೋವಿನಕ್ಷಯಪಾತ್ರೆಯ ಒಡಲಾಳಕೆ
ಬಿಡು ಒಳಗೆ ಬಿಡು ಪಾತಾಳ ಗರುಡ 
ಅದೋ ನೋಡ ನೋಡ 

ಯಾರು ಯಾರೋ ಸೇರಿ ಇರಿದ ಚೂರಿಯ ತುಣುಕು 
ಅಣುಕು ಮಿಣುಕು !
ನೂರಾನೆ ಕಾಲುಗಳು ನುಗ್ಗು ನುರಿ ಮಾಡಿರುವ 
ಬಿಂದಿಗೆಯ ಸರಕು !
ಎದೆಯ ಮಿದುವಾಸಿನಲಿ ಕಾವು ಪಡೆಯುತಲಿದ್ದ
ಮೊಟ್ಟೆಗಳ ಹೋಳು !
ಮುಗಿಲೊಳಾಡಿದ ಹಲವು ಪಾರಿವಾಳಗಳ ರೆಕ್ಕೆ 
ನೂರು ಸೀಳು !

ಹಲವು ಬಾಗಿಲೊಳಲೆದು ತಿರಿದು ತುಂಬಿದ ಪಾತ್ರೆ -
ಯೊಡಕು ರಾಶಿ,
ಅಯ್ಯೋ ಪರದೇಶಿ!
ನೂರು ಚೆಲುವೆಯ ಮೊಗವ ತನ್ನ ಎದೆಯೊಳು ಹಿಡಿದ 
ಕನ್ನಡಿಯ ಚೂರು 
ಬರಿ ಕೆಸರು ಕೆಸರು!
ಎನಿತೊ ಬೆಳಕನು ಹಿಡಿದು ಕಡೆದಿಟ್ಟ ವಿಗ್ರಹದ 
ಭಗ್ನಾವಶೇಷ 
ಮತ್ತೇನ್ ವಿಶೇಷ ?------

ಇನ್ನು ಏನೇನಿಹುದೋ!ಇರಲಿ ಬಿಡು ,ತೆಗೆದೆದೆಯ 
ಕಲಕಬೇಡ,
ಹಳೆಯ ನೆನಪಿನ ಕೊಳವ ,ಕದಡಬೇಡ .  

Monday, September 20, 2010

"ಮರಳಿನ ಆಟ"

ಒಂದು ಸುಂದರ ಸಂಜೆ.ಮನೆಯ ಬಾಲ್ಕನಿಯಲ್ಲಿ ನಿಂತಿದ್ದೆ.ರಸ್ತೆಯ ಪಕ್ಕ ಹಾಕಿದ್ದ ಮರಳಿನ ರಾಶಿಯಲ್ಲಿ ಕೆಲ ಮಕ್ಕಳು ಖುಷಿಯಿಂದ ಆಟವಾಡುತ್ತಿದ್ದರು.ಕೈಯಮೇಲೆ ,ಕಾಲುಗಳ ಮೇಲೆ ಮರಳು  ಗುಪ್ಪೆಗಳನ್ನು ಕಟ್ಟಿ ,ಕೈಗಳಿಂದ ತಟ್ಟಿ ತಟ್ಟಿ ,ಮನೆ ,ಗುಡಿ ಗೋಪುರ ,ಕೋಟೆ ಕೊತ್ತಲಗಳನ್ನು ಕಟ್ಟಿದರು!ಎಲ್ಲಿಂದಲೋ ಬಣ್ಣ ಬಣ್ಣದ ಹೂವುಗಳನ್ನು ತಂದು ಅಲಂಕಾರ ಮಾಡಿದರು.ಕೈ ,ಕೈ ಹಿಡಿದು ಅವುಗಳ ಸುತ್ತ ಕುಣಿದಾಡಿದರು!ಕತ್ತಲಾಯಿತು.ಮನೆಗೆ ಮರಳುವ ಸಮಯ ಬಂತು.ಯಾವುದೇ ಅಳುಕಿಲ್ಲದೆ ,ಕಟ್ಟಿದಷ್ಟೇ ಸಂಭ್ರಮದಿಂದ ಎಲ್ಲವನ್ನೂ ಕೆಡಿಸಿ ಸಂತೋಷದಿಂದ ಮನೆಗೆ ಓಡಿದರು.ನಮ್ಮ ಬದುಕೂ ಹೀಗೇ ಅಲ್ಲವೇ?ಕರೆ ಬಂದಾಗ ,ನಾವು ಕಟ್ಟಿಕೊಂಡ ಆಸ್ತಿ ಪಾಸ್ತಿ,ಮನೆ ಮಠ,ಹಣ ವಸ್ತು ,ಒಡವೆ ,ಸಂಬಂಧಗಳು ಎಲ್ಲವನ್ನೂ ಬಿಟ್ಟು ಹೋಗಬೇಕಲ್ಲವೇ?ಮಕ್ಕಳ ಮರಳು ಆಟದಲ್ಲಿ ನಮಗೊಂದು ಪಾಠವಿದೆ ಅನಿಸುವುದಿಲ್ಲವೇ?ಅವರ ಹಾಗೇ ಬದುಕಿನ ಆಟವನ್ನು ಸಂತೋಷದಿಂದ ಆಡಿ,ಯಾವುದಕ್ಕೂ ಅಂಟಿಕೊಳ್ಳದೆ ,ನಿಶ್ಚಿಂತೆಯಿಂದ ಎಲ್ಲವನ್ನೂ ಬಿಟ್ಟು ಹೋಗಲು ಸಾಧ್ಯವಾಗುವಂತಿದ್ದರೆ ! ಬದುಕಿನ ಸಂತೋಷ, ಸಂತೋಷವಾಗಿ ಬದುಕುವುದರಲ್ಲಿಯೇ ಇದೆಯಲ್ಲವೇ!ಎನಿಸಿ ,ಒಳಗೆ ಹೋಗಿ ಮನೆಯ ದೀಪ ಬೆಳಗಿಸಿದೆ.

Thursday, September 16, 2010

"ಕಟ್ ಮಾಡು, ಇಲ್ಲಾ ಎದ್ದು ಆಚೆ ಹೋಗು"

ಆಸ್ಪತ್ರೆಯ ನನ್ನ ಪರೀಕ್ಷಾ ಕೋಣೆಯಲ್ಲಿ ಕುಳಿತಿದ್ದೆ.ಸುಮಾರು ಐದು ವರ್ಷ ವಯಸ್ಸಿನ U.K.G.ಓದುತ್ತಿದ್ದ ,ಗುಂಗುರು ಕೂದಲಿನ ,ಅಗಲ ಕಣ್ಣುಗಳ ನಗು ಮುಖದ ಮುದ್ದು ಹುಡುಗಿ ಸ್ಮಿತಾ ,'ಗುಡ್ ಮಾರ್ನಿಂಗ್ ಅಂಕಲ್'ಎಂದು ಕಾನ್ವೆಂಟ್ ಶೈಲಿಯಲ್ಲಿ ರಾಗವಾಗಿ ಹೇಳುತ್ತಾ ಒಳ ಬಂದಳು.ಜೊತೆಗೇ ಬಂದ ಅವಳ ತಂದೆ ನನ್ನ ಎದುರಿನ ಕುರ್ಚಿಯಲ್ಲಿ ಕುಳಿತರು.ಅವಳಿಗೆ ಎರಡು ದಿನದಿಂದ ಬಲಗಿವಿ ನೋಯುತ್ತಿದೆ ಎಂದೂ,ಪರೀಕ್ಷೆ ಮಾಡಿಸಲು ಕರೆದು ಕೊಂಡು ಬಂದುದಾಗಿಯೂ ಹೇಳಿದರು.ಸ್ಮಿತಾಳನ್ನು ನನ್ನ ಎಡಗಡೆ ಇದ್ದ ಪರೀಕ್ಷೆ ಮಾಡುವ ಸ್ಟೂಲಿನ ಮೇಲೆ ಬಂದು ಕುಳಿತುಕೊಳ್ಳುವಂತೆ ಹೇಳಿದೆ.ಆ ವಯಸ್ಸಿನ ಹುಡುಗರು ಅಳುವುದು,ರಚ್ಚೆ ಮಾಡುವುದು ,ಪರೀಕ್ಷೆಮಾಡಲು ಸಹಕರಿಸದೆ ಇರುವುದು ಸಾಮಾನ್ಯ.ಆದರೆ ಈ ಹುಡುಗಿ ಮಾತ್ರ ನಗು ನಗುತ್ತಲೇ ಬಂದು ಕುಳಿತಳು.ನನ್ನ ಸಲಕರಣೆಗಳನ್ನೆಲ್ಲಾ ಜೋಡಿಸಿಕೊಂಡು ಇನ್ನೇನು ಕಿವಿ ಪರೀಕ್ಷೆ ಮಾಡುವುದಕ್ಕೆ ಸರಿಯಾಗಿ ಅವಳ ತಂದೆಯ ಬಳಿ ಇದ್ದ ಮೊಬೈಲ್ ಫೋನ್ ರಿಂಗಣಿಸ ತೊಡಗಿತು.ಅದನ್ನು ಆತ ಕಿವಿಯ ಬಳಿ ಇಟ್ಟುಕೊಂಡು ಜೋರು ದನಿಯಲ್ಲಿ 'ಹಲೋ'ಎಂದ.ನನಗೆಒಳೊಗೊಳಗೇಇರಿಸುಮುರುಸು.ಸರಿ,ಆತ ತನ್ನ ಸಂಭಾಷಣೆಯನ್ನು ಮುಗಿಸಿ ಬಿಡಲಿ,  ಆಮೇಲೆಯೇ ಪರೀಕ್ಷೆ ಮಾಡೋಣ ಎಂದು ಸುಮ್ಮನೆ ಕುಳಿತೆ.ಅಷ್ಟರಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯಿತು! ಆ ಪುಟ್ಟ ಹುಡುಗಿ ಸ್ಮಿತಾ ಅವರಪ್ಪನಿಗೆ "ಅಪ್ಪಾ,ಫೋನ್ ಕಟ್ ಮಾಡು------,ಇಲ್ಲ ಆಚೆ ಎದ್ದು ಹೋಗು disturb  ಮಾಡಬೇಡ"ಎಂದಳು.ಐದು ವರ್ಷದ ಹುಡುಗಿಯಿಂದ ಇಂತಹ ಪ್ರಬುದ್ಧ ಮಾತುಗಳನ್ನು ನಿರೀಕ್ಷಿಸಿರಲಿಲ್ಲ.ನಾನು ಅವಾಕ್ಕಾದೆ!ಅವರಪ್ಪ ಪೆಚ್ಚು ನಗೆ ನಗುತ್ತಾ ಆಚೆ ಎದ್ದು ಹೋದ! ಆ ಪುಟ್ಟ ಹುಡುಗಿಯ ಜವಾಬ್ದಾರಿಯುತ  ನಡವಳಿಕೆ ನನ್ನಲ್ಲಿ ಅಚ್ಚರಿ ಮೂಡಿಸಿತು!ಇನ್ನೊಬ್ಬರಿಗೆ ತೊಂದರೆ ಕೊಡ ಬಾರದೆಂಬ ಪರಿಜ್ಞಾನ ,ಸಾಮಾಜಿಕ ಕಳ ಕಳಿ,ದೊಡ್ಡವರು ಎನಿಸಿಕೊಂಡ ನಮ್ಮಲ್ಲಿ ಎಷ್ಟು ಜನಕ್ಕಿದೆ ಎನ್ನುವ ಪ್ರಶ್ನೆ ಕಾಡ ತೊಡಗಿತು. ಆ ಪುಟ್ಟ ಹುಡುಗಿಯಿಂದ ನಾವೆಲ್ಲಾ ಸಾಕಷ್ಟು ಪಾಠ ಕಲಿಯ ಬೇಕಿದೆಯಲ್ಲವೇ ?ಏನಂತೀರಿ?

Saturday, September 4, 2010

"ಕಿವಿಯಲ್ಲಿ ಗರ್ಭಪಾತ !!!"

ಒಮ್ಮೊಮ್ಮೆ  ಸಂವಹನ ಕ್ರಿಯೆ ,ಸರಿಯಾಗಿ ನಡೆಯದೆ ಇದ್ದಾಗ ಎಂತೆಂತಹ ಎಡವಟ್ಟುಗಳಾಗುತ್ತವೆ ಎನ್ನುವುದನ್ನು ಊಹಿಸಿ ಕೊಳ್ಳುವುದೂ ಅಸಾಧ್ಯ !ಕೆಲವು ತಿಂಗಳುಗಳ ಹಿಂದೆ 'ಪ್ರಜಾವಾಣಿಯಲ್ಲಿ' ಶ್ರೀ ಗುರುರಾಜ ಕರಜಗಿಯವರು ಬರೆದ ಘಟನೆಯೊಂದನ್ನು ನಿಮ್ಮೊಡನೆ ಹಂಚಿಕೊಳ್ಳ ಬಯಸುತ್ತೇನೆ.ಪುಣೆಯಲ್ಲಿ ಗಂಡ ,ಹೆಂಡತಿ ಒಟ್ಟಾಗಿ ಒಂದು ಕ್ಲಿನಿಕ್ ನಡೆಸುತ್ತಿದ್ದರು.ಗಂಡ 'ಸ್ತ್ರೀ ರೋಗ ತಜ್ಞ' ( male gynecologist). ಹೆಂಡತಿ'ಕಿವಿ,ಗಂಟಲು,ಮೂಗು 'ತಜ್ಞೆ (E.N.T.Specialist).ಕಿವಿಯಲ್ಲಿ wax ತೆಗೆಸಿಕೊಳ್ಳಲು ಬಂದ ಮಹಿಳೆಯೊಬ್ಬಳು ,ಪ್ರಮಾದದಿಂದ ಅಲ್ಲಿದ್ದ male gynecologist ಬಳಿ ಹೋಗುತ್ತಾಳೆ.ಅದೇ ವೇಳೆಗೆ ಯಾರೋ ನಾಲಕ್ಕು ತಿಂಗಳಿಗೆ ಗರ್ಭಪಾತ ಮಾಡಿಸಿಕೊಳ್ಳಲು ಬರಬೇಕಿದ್ದ ಮಹಿಳೆಯ ನಿರೀಕ್ಷೆಯಲ್ಲಿದ್ದ ವೈದ್ಯ ಮಹಾಶಯ ಕಿವಿಯ ರೋಗಿಯನ್ನೇ, ಗರ್ಭಪಾತ ಮಾಡಿಸಲು ಬಂದವಳೆಂದು ತಪ್ಪು ತಿಳಿಯುತ್ತಾನೆ.ಅವರಿಬ್ಬರ ಸಂಭಾಷಣೆ ಈ ರೀತಿ ಸಾಗುತ್ತದೆ;
ವೈದ್ಯ ;'ಬನ್ನಿ ,ಬನ್ನಿ,ಆರಾಮಾಗಿ ಕುಳಿತುಕೊಳ್ಳಿ.Just relax.ಗಾಭರಿ ಪಡುವಂತಹುದು ಏನೂ ಇಲ್ಲ.'
ರೋಗಿ;'ಅಯ್ಯೋ!ಇದಕ್ಕೆಲ್ಲಾ ಗಾಭರಿ ಯಾಕೆ!ಮನೆಯಲ್ಲೇ ನಾನೇ ಪಿನ್ ಹಾಕಿ ತೆಗೆದು ಬಿಡ ಬೇಕೆಂದಿದ್ದೆ!'
ವೈದ್ಯ;ಗಾಭರಿಯಿಂದ 'ಛೆ !ಛೆ!ಏನಮ್ಮಾ ನೀವು!ಒಳ್ಳೇ ವಿದ್ಯಾವಂತೆ ತರ ಕಾಣ್ತೀರಾ !ಹೀಗೆಲ್ಲಾ ಮಾಡ್ತಾರಾ!?'
ರೋಗಿ;'ಪಕ್ಕದ ಮನೆ ಹೆಂಗಸು ಎಣ್ಣೆ ಕಾಯಿಸಿ ಬಿಡು.ಬಂದು ಬಿಡುತ್ತೆ ಎಂದಳು.ನನಗ್ಯಾಕೋ ಸರಿಕಾಣಲಿಲ್ಲ .'
ವೈದ್ಯ;ಹೌಹಾರಿ 'ಅಯ್ಯಯ್ಯೋ !ಅದೆಲ್ಲಾ ತಪ್ಪಲ್ವಾ?ನಿಮ್ಮ ಯಜಮಾನ್ರನ್ನೂ ಕರೆದು ಕೊಂಡು ಬರಬೇಕಿತ್ತು.ಇದಕ್ಕೆ ಅವರ ಒಪ್ಪಿಗೇನೂ ಬೇಕಿತ್ತು'ಎಂದರು.
ರೋಗಿ;ಇಷ್ಟು ಸಣ್ಣ ವಿಷಯಕ್ಕೆ ಅವರ ಒಪ್ಪಿಗೆ ಯಾಕೇ?ಅವರು ದುಬೈಗೆ ಹೋಗಿ ಒಂದು ವರ್ಷವಾಯಿತು.ನೀವು ತೆಗೀರಿ ,ಪರವಾಗಿಲ್ಲ.ನೋವಾಗುತ್ತಾ ಡಾಕ್ಟರ್?ಎಂದಳು.
ವೈದ್ಯ;'ಛೆ!ಛೆ! ಅಷ್ಟೇನೂ ನೋವಾಗೊಲ್ಲಾ.ಸ್ವಲ್ಪ ಬ್ಲೀಡಿಂಗ್ ಆಗಬಹುದು.ಸ್ವಲ್ಪ ತಲೆ ಸುತ್ತಬಹುದು.ಅಷ್ಟೇ.'
ರೋಗಿ;ಗಾಭರಿಯಾಗಿ 'ಬ್ಲೀಡಿಂಗ್ ಜಾಸ್ತಿಯಾಗುತ್ತಾ ಡಾಕ್ಟರ್?'
ವೈದ್ಯ;'ಹೆಚ್ಚೇನಿಲ್ಲ.ಮಾಮೂಲು ನಿಮ್ಮ ಪೀರಿಯಡ್ಸ್ ನಲ್ಲಿ ಆದಷ್ಟು.'  
ಕಿವಿಯಲ್ಲಿ ಪೀರಿಯಡ್ಸ್ ನಲ್ಲಿ ಆದಷ್ಟು ಬ್ಲೀಡಿಂಗ್ ಆಗುತ್ತೆ ಅಂದರೆ ಯಾರಿಗೆ ತಾನೇ ಗಾಭರಿಯಾಗೊಲ್ಲಾ?
ರೋಗಿ;'ಬರ್ತೀನಿ ಡಾಕ್ಟ್ರೆ ,ಈಗ ಸ್ವಲ್ಪ ಅರ್ಜೆಂಟ್ ಕೆಲಸ ಇದೆ.ಆಮೇಲೆ ಬಂದು ತೆಗೆಸ್ಕೊತೀನಿ' ಎಂದು ಹೇಳಿ ಓಟ ಕಿತ್ತಳು!       
ಸರಿಯಾದ ಸಂವಹನ ಕ್ರಿಯೆ ( communication skill) ಎಷ್ಟು ಮುಖ್ಯ ಅಲ್ಲವೇ ಸ್ನೇಹಿತರೇ? ಇಷ್ಟ ಆಯ್ತಾ?ನಮಸ್ಕಾರ.

Wednesday, September 1, 2010

"ಪ್ರಾರ್ಥನೆ"

ಕೃಷ್ಣಾ  ssss-----------!
ಇಗೋ ನನ್ನೆಲ್ಲಾ ಬುದ್ಧಿ ಶಕ್ತಿ ,
ಮಂತ್ರ, ತಂತ್ರ ,ಯುಕ್ತಿ !
ಎಲ್ಲಾ ನಿನಗೇ ಸಮರ್ಪಣೆ!
ನಿನ್ನಲ್ಲಿ ನನ್ನದಿಷ್ಟೇ ಪ್ರಾರ್ಥನೆ !
ಪಾರ್ಥನಿಗೆ ಸಾರಥಿಯಾದಂತೆ,
ನನ್ನ ಮನೋರಥದ ತೇಜಿಯ
ಇಗೋ ---,ನೀನೇ ಹಿಡಿ!
ಮನದ ಉದ್ಯಾನದಲಿ ಸದಾ 
ಆನಂದದ ಕೊಳಲನೂದುತಿರು!
ದುರಾಚಾರದ ,ದುರಾಲೋಚನೆಗಳ 
ಕಾಳಿಂಗ, ಹೆಡೆ ಎತ್ತಿದರೆ ,
ಮರ್ದಿಸಿ ,ನಾಟ್ಯವಾಡು!
ಕರ್ತವ್ಯ ನೆನಪಿಸುವ 
ಗೀತಾಚಾರ್ಯನಾಗು !
ಕೃಷ್ಣಾ ssss-------,ನಿನ್ನಲ್ಲಿ ,
ನನ್ನದಿಷ್ಟೇ ಪ್ರಾರ್ಥನೆ!
ಕತ್ತಲೆಯಿಂದ ಬೆಳಕಿನೆಡೆಗೆ ,
ನಡೆಸೆನ್ನನು   ದೇವನೆ!

'ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು'

ನಿಮ್ಮೆಲ್ಲರಿಗೂ 'ಕೊಳಲು' ಬ್ಲಾಗಿನಿಂದ 'ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು'.ಆ ಭಗವಂತನು ನಮ್ಮೆಲ್ಲಾ ಕಾರ್ಯಗಳಿಗೂ ಸಾರಥಿಯಾಗಿರಲೆಂದು (ಸಾಥಿ ಕೂಡ !)ಅವನಲ್ಲಿ ಪ್ರಾರ್ಥನೆ.

Monday, August 30, 2010

"ನೂರು ಗ್ರಾಂ -ಗೋಡಂಬಿ !"

ನ್ನ ಮಗರಾಯ ಆಗಿನ್ನೂ ಒಂದನೇ ತರಗತಿಯಲ್ಲಿದ್ದ.ಅವನ ಅಮ್ಮ ಅವನ ಕೈಯಲ್ಲಿ ಹತ್ತಿರದಲ್ಲಿದ್ದ ಅಂಗಡಿಯಿಂದ ಸಣ್ಣ ಪುಟ್ಟ ಸಾಮಾನುಗಳನ್ನುತರಿಸುತ್ತಿದ್ದಳು.ಚಿಲ್ಲರೆಯನ್ನೂ,ಸಾಮಾನುಗಳನ್ನೂ ಜೋಪಾನವಾಗಿ ತರುತ್ತಿದ್ದ.ಅವರಮ್ಮನಿಗೆ ಅವನ ಜಾಣತನದ ಮೇಲೆ ಸಾಕಷ್ಟು  ನಂಬಿಕೆ ಇತ್ತು.ಯಾವುದೋ ಹಬ್ಬಕ್ಕೆ ಬೇಕೆಂದು ಅವನ ಕೈಯಲ್ಲಿ ದುಡ್ಡು ಕೊಟ್ಟು ನೂರು ಗ್ರಾಂ ಗೋಡಂಬಿ ತರಲು ಅಂಗಡಿಗೆ ಕಳಿಸಿದಳು.ಮಗರಾಯ ವಾಪಸ್ ಬಂದಾಗ ಕೋನ್ ಆಕಾರದಲ್ಲಿ ದಾರದಿಂದ ಸುತ್ತಿದ್ದ ಪೇಪರ್ ಪೊಟ್ಟಣ ಹಾಗೇ ಇತ್ತು!ನನ್ನ ಹೆಂಡತಿ ಪೊಟ್ಟಣ ಬಿಚ್ಚಿ ನೋಡಿ ಗಾಭರಿಯಾದಳು.ಏಕೆಂದರೆ ,ಆ ಪೊಟ್ಟಣದಲ್ಲಿ ಇದ್ದದ್ದು ಒಂದೇ ಒಂದು ಗೋಡಂಬಿ! 'ಇದೇನೋ ದೀಪೂ!ನೂರು ಗ್ರಾಂ ತಾ ಎಂದರೆ ,ಒಂದೇ ಒಂದುಗೋಡಂಬಿ ತಂದಿದ್ದೀಯಾ!ಎಲ್ಲಾದರೂ ಬೀಳಿಸಿಕೊಂಡು ಬಂದೆಯೇನೋ ?'ಎಂದು ಕೇಳಿದಳು.ಮಗರಾಯ ಕೂಲಾಗಿ 'ಇಲ್ಲಮ್ಮಾ,ಪೊಟ್ಟಣದ ಕೆಳಗೆ ತೂತು ಮಾಡಿ ಮೊದಲು ಒಂದೇ ಒಂದು ಗೋಡಂಬಿ ತಿಂದೆ.ಆಮೇಲೆ ತಿಂತಾನೆ ಇರಬೇಕು ಅನ್ನಿಸಿತು 'ಎಂದು ಉತ್ತರ ಕೊಟ್ಟು ತುಂಟ ನಗೆನಕ್ಕ ! ಅವನಮ್ಮ ಏನು ಮಾಡಬೇಕೋ ತೋಚದೆ,ಕಣ್ಣು ಕಣ್ಣು ಬಿಟ್ಟಳು!

Saturday, August 28, 2010

'ಒಲುಮೆಯ ಹೂವೇ!ನೀ ಹೋದೆಎಲ್ಲಿಗೆ?'

ಕೆಲವು ಹಾಡುಗಳು ಹೇಗೋ ಕೆಲವೊಂದು ನೆನಪು ಗಳಿಗೆ ತಳುಕು ಹಾಕಿ ಕೊಂಡು ಬಿಟ್ಟಿರುತ್ತವೆ.ಆ ಹಾಡನ್ನು ನೆನಸಿಕೊಂಡರೆ ಒಬ್ಬ ವ್ಯಕ್ತಿಯ ನೆನಪೋ ಅಥವಾ ,ಒಂದು ಪ್ರಸಂಗದ ನೆನಪೋ ಮರುಕಳಿಸಿಬಿಡುತ್ತದೆ.ನನ್ನ ನೆನಪಿನಲ್ಲಿ ಉಳಿದು ಹೋದಂತಹ ಇಂತಹುದೇ ಒಂದು ಹಾಡು ,ಕನ್ನಡದ ಮಹಾನ್ ಗಾಯಕ ಡಾ.ಪಿ.ಬಿ.ಶ್ರೀನಿವಾಸರು ಅರವತ್ತರ ದಶಕದ ಮೊದಲ ಭಾಗದಲ್ಲಿ 'ಪುನರ್ಜನ್ಮ 'ಎನ್ನುವ ಚಿತ್ರಕ್ಕೆ ಹಾಡಿದ 'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೆ' ಎನ್ನುವ ಹಾಡು.ಮೊದಲಿನಿಂದಲೂ ಈ ಹಾಡು ನನಗೆ ಅತ್ಯಂತ ಪ್ರಿಯವಾದ ಹಾಡು.ಅದೆಷ್ಟು ಸಲ ಈ ಹಾಡನ್ನು ಹಾಡಿದ್ದೇನೋ ತಿಳಿಯದು.ಈಹಾಡುನೆನಪಾದಾಗಲೆಲ್ಲಾ ನನ್ನ ಬಹಳ ಆತ್ಮೀಯ ಸ್ನೇಹಿತರೊಬ್ಬರು ನೆನಪಾಗಿ ಬಿಡುತ್ತಾರೆ.ಅವರ ಪರಿಚಯವಾದದ್ದೂ ಒಂದು ವಿಚಿತ್ರ ಸನ್ನಿವೇಶದ ಮೂಲಕ.
ಈಗ ಸುಮಾರು ಹನ್ನೆರಡು ವರ್ಷಗಳ ಹಿಂದೆ ನಡೆದ ಘಟನೆ.ನಾನು ಇ .ಎನ್.ಟಿ.ತಜ್ಞ ವೈದ್ಯಕೀಯ ಶಿಕ್ಷಣ ಮುಗಿಸಿದ ಹೊಸತು.ನನ್ನ ಬಳಿಗೆ ಕಿವಿಯ ಸೋರಿಕೆಯಿಂದ ಎಡ ಕಿವಿ ಕೇಳದ, ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಬರುತ್ತಿದ್ದ.ಒಂದು ದಿನ ಬೆಳಿಗ್ಗೆ ಆ ಹುಡುಗ  ತನ್ನ ಬಲಗಿವಿ ವಿಪರೀತ ನೋವೆಂದೂ,ಈಗ ಅದೂ ಕೆಳುತ್ತಿಲ್ಲವೆಂದೂ ,ಕೈಯಿಂದ ಬಲಗಿವಿ ಮುಚ್ಚಿಕೊಂಡು ಅಳುತ್ತಾ ಬಂದ.ಅವನ ತಂದೆಯೂ ಅವನ ಜೊತೆಗೇ ಬಂದಿದ್ದರು.ಅವನ ಬಲಗಿವಿ ಪರೀಕ್ಷೆ ಮಾಡಿದಾಗ ಕಿವಿಯ ಪರದೆಯ ಹರಿದ ಭಾಗದಿಂದ ರಕ್ತ ಬರುತ್ತಿತ್ತು.ಕಿವಿಗೆ ಬಲವಾದ ಪೆಟ್ಟು ಬಿದ್ದದ್ದು ಖಾತ್ರಿ ಯಾಯಿತು.ಯಾರೋ ಜೋರಾಗಿ ಕಪಾಳಕ್ಕೆ ಹೊಡೆದಿದ್ದರು.ಆ ಭಾಗವೆಲ್ಲಾ ಹೊಡೆತದಿಂದ ಕೆಂಪಾಗಿತ್ತು.ನನಗೆ ಅವನ ತಂದೆಯ ಮೇಲೆಯೇ ಅನುಮಾನವಿತ್ತು.
ಬಹಳ ಬಲವಂತ ಮಾಡಿದ ಮೇಲೆ ಅವನ ತಂದೆ ಆ ಹುಡುಗನ ಮಾಸ್ತರರೊಬ್ಬರು ಕಪಾಳಕ್ಕೆ ಹೊಡೆದರೆಂದೂ,ಅದಕ್ಕೇ
ಹೀಗಾಯಿತೆಂದೂ ಹೇಳಿದ.ಮೊದಲೇ ಹುಡುಗನಿಗೆ ಒಂದು ಕಿವಿ ಕೇಳುತ್ತಿರಲಿಲ್ಲ.ಈಗ ಕಪಾಳಕ್ಕೆ ಹೊಡೆದು ಇನ್ನೊಂದು ಕಿವಿಯೂ ಕೇಳದ ಹಾಗೆ ಮಾಡಿ ಬಿಟ್ಟರಲ್ಲಾ ಎಂದು ನನಗೆ ಆ ಮಾಸ್ತರರ ಮೇಲೆ ವಿಪರೀತ ಸಿಟ್ಟು ಬಂತು.ಆ ಮಾಸ್ತರರನ್ನು ನನ್ನ ಬಳಿಗೆ ಕಳಿಸುವಂತೆ ಹೇಳಿದೆ.ಅದಕ್ಕೆ ಅವನ ತಂದೆ 'ಬಿಡಿ ಸಾರ್.ಇದನ್ನ ದೊಡ್ಡ ವಿಷಯ ಮಾಡಬೇಡಿ.ಆ ಮಾಸ್ತರರು ತುಂಬಾ ಒಳ್ಳೆಯವರು.ಇವನೇ ಏನೋ ಮಾಡಬಾರದ ತೀಟೆ ಮಾಡಿರುತ್ತಾನೆ.ಅದಕ್ಕೇ ಅವರು ಏಟು ಕೊಟ್ಟಿದ್ದಾರೆ,ನೀವೇ ಏನಾರ ಔಷಧಿ ಕೊಟ್ಟು ಸರಿ ಮಾಡಿಬಿಡಿ 'ಎಂದ.ನಾನೂ ಸುಮ್ಮನಾದೆ.
ಈ ಘಟನೆ ನಡೆದ ಎರಡು ದಿನಕ್ಕೆ ಒಬ್ಬ ವ್ಯಕ್ತಿ ನನ್ನ ರೂಮಿನ ಹೊರಗೆ ನಿಂತು 'ಒಳಗೆ ಬರಬಹುದಾ ಸರ್'ಎಂದರು . 'ಬನ್ನಿ 'ಎಂದೆ.ಒಳಗೆ ಬಂದು ಕೂತರು.ಮುಖ ಆತಂಕದಿಂದ ಬೆವರುತ್ತಿತ್ತು.ದನಿ ನಡುಗುತ್ತಿತ್ತು.ತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಂಡು 'ಬಿ.ಪಿ.ಚೆಕ್ ಮಾಡಿಸ್ಕೋ ಬೇಕಾಗಿತ್ತು ಸರ್ 'ಎಂದರು.ಬಿ.ಪಿ.ಸುಮಾರಾಗಿಯೇ ಜಾಸ್ತಿ ಇತ್ತು.'ಸಾರ್ ನಾನು ಇಲ್ಲಿ ಮಿಡ್ಲ್ ಸ್ಕೂಲ್ ಮೇಷ್ಟ್ರು.ನನ್ನಿಂದ ಬಹಳ ದೊಡ್ಡ ತಪ್ಪಾಯಿತು.ಕ್ಷಮಿಸಿ ಬಿಡಿ ಸರ್ 'ಎಂದರು.ನಾನು 'ಯಾಕ್ರೀ ಮೇಷ್ಟ್ರೇ ಏನಾಯ್ತು ?'ಎಂದೆ.'ಆ ಹುಡುಗನಿಗೆ ಕಪಾಳಕ್ಕೆ ಹೊಡೆದದ್ದು ನಾನೇ ಸರ್ 'ಎಂದರು.ನಾನು ಸ್ವಲ್ಪ ಬಿಗುವಾದೆ.'ಅಲ್ಲಾ ಮೇಷ್ಟ್ರೇ  ಹುಡುಗರು ತಪ್ಪು ಮಾಡಿದರೆ ತಿದ್ದ ಬೇಕು ಸರಿ.ಆದರೆ ಈ ರೀತಿ ಕಿವಿಯ ತಮಟೆ ಹರಿದು ಹೋಗುವ ಹಾಗೆ ಹೊಡೆಯಬೇಕೆ?ಅದು ತಪ್ಪಲ್ಲವೇ ? ಅವನ ಜೀವಕ್ಕೆ ಅಪಾಯ ವಾಗಿದ್ದರೆ ಏನು ಗತಿ?ಅವನಿಗೆ ಕೇಳುತ್ತಿದ್ದ ಒಂದೇ ಕಿವಿ ಕೂಡ ನೀವು ಹೊಡೆದ ದ್ದರಿಂದ ಹಾಳಾಯಿತಲ್ಲ!'ಎಂದೆ.'ಆ ಹುಡುಗ ಯಾವುದೋ ಹುಡುಗಿಯ ಬಗ್ಗೆ ಬಹಳ ಕೆಟ್ಟ ಪದ ಉಪಯೋಗಿಸಿದ ಸಾರ್.ಮೊದಲೇ ಬಿ.ಪಿ. ಇದೆ.ಸಿಟ್ಟು ಬಂದು ಕಪಾಳಕ್ಕೆ ಒಂದೇಟು ಬಿಟ್ಟೆ .ಈ ರೀತಿಯೆಲ್ಲಾ ಆಗುತ್ತೆ ಅಂತ ಗೊತ್ತಿರಲಿಲ್ಲ .ಇನ್ನು ಮೇಲೆ ಹುಡುಗರ ಮೇಲೆ ಕೈ ಮಾಡೋಲ್ಲ  .ಜೀವನದಲ್ಲಿ ಒಂದು ದೊಡ್ಡ ಪಾಠ ಕಲಿತೆ 'ಎಂದು ಗಧ್ಗದ ಕಂಠದಲ್ಲಿ ಹೇಳಿ ಹೊರಟು ಹೋದರು.
ಅದಾದ ನಂತರ ನಾನು  ದಿನಾ ಬೆಳಗಿನ ಜಾವ ಸ್ಕೂಲಿನ ಗ್ರೌಂಡ್ ಗೆ ವ್ಯಾಯಾಮ ಮತ್ತು ಜಾಗಿಂಗ್ ಮಾಡುವುದಕ್ಕೆ ಹೋಗುತ್ತಿದ್ದಾಗ ಅವರೂ ಸಿಗುತ್ತಿದ್ದರು.ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ.ಸ್ವಲ್ಪ ಮುಂಗೊಪವಿತ್ತು.ಯಾರಿಗಾದರೂ ಸಹಾಯಮಾಡಬೇಕಾದರೆ 'ನಾ ಮುಂದೆ' ಎನ್ನುವಂತಹವರು.ಪರಿಚಯ ಸ್ನೇಹಕ್ಕೆ ತಿರುಗಿತು.ಕೆಲವೇ ದಿನಗಳಲ್ಲಿ ಬಹಳ 
ಆತ್ಮೀಯರಾದರು.ವ್ಯಾಯಾಮವೆಲ್ಲಾ ಮುಗಿಸಿ,ಬೆವರು ಹರಿಸುತ್ತಾ ,ತಂಗಾಳಿಗೆ ಮೈ ಒಡ್ಡಿ ಕುಳಿತಾಗ ನಾನು ನನಗೆ ಪ್ರಿಯವಾದ 
'ಒಲುಮೆಯ ಹೂವೇ'ಹಾಡನ್ನು ಹೇಳುತ್ತಿದ್ದೆ.ಮೇಷ್ಟ್ರಿಗೆ ಕೂಡ ಈ ಹಾಡು ಬಹಳ ಇಷ್ಟವಾಗಿತ್ತು .ನಾನು ಹಾಡುವಾಗ ಬಹಳ ಖುಷಿ ಪಡುತ್ತಿದ್ದರು.ಹಾಡು ಕೇಳುತ್ತಾ ಎಷ್ಟೋ ಸಲ ಅವರ ಕಣ್ಣಿನಲ್ಲಿ ನೀರು ಇರುತ್ತಿತ್ತು.2000 april ನಲ್ಲಿ ಅವರಿಗೆ ಎಲೆಕ್ಷನ್ ಡ್ಯೂಟಿಹಾಕಿದ್ದರು.'ಸಾರ್ ನನಗೆ ಎಲೆಕ್ಷನ್ ಡ್ಯೂಟಿ ಗೆ ಹೋಗೋಕೆ ಆಗೋಲ್ಲಾ ,ಒಂದು ಮೆಡಿಕಲ್  ಸರ್ಟಿಫಿಕೇಟ್ ಕೊಡಿ'ಎಂದರು.'ಯಾಕೇ ಮೇಷ್ಟ್ರೇ ?ಏನು ತೊಂದರೆ?'ಎಂದೆ.ಎಲೆಕ್ಷನ್ ಡ್ಯೂಟಿ ತಪ್ಪಿಸೋಕೆ ಎಲ್ಲರೂ ಮಾಡುವ ಸಾಮಾನ್ಯ ಉಪಾಯ ಇದು.'ನಡೆಯೋವಾಗ ಯಾಕೋ ಬ್ಯಾಲೆನ್ಸ್ ತಪ್ಪುತ್ತೆ ಸರ್' ಎಂದರು.ಎಲ್ಲಾ ಪರೀಕ್ಷೆ ಮಾಡಿದಾಗ ನಿಜಕ್ಕೂ ತೊಂದರೆ ಇದೆ ಎನಿಸಿ, C.T.SCAN ಮಾಡಿಸಿಕೊಂಡು ಬರಲು ಬೆಳಗಾವಿಯ ಕೆ.ಎಲ್.ಇ .ಆಸ್ಪತ್ರೆಗೆ ಕಳಿಸಿದೆ.ಅಲ್ಲಿ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು.ಅದು ಶ್ವಾಶಕೋಶಕ್ಕೂ,ಮೆದುಳಿಗೂ ಹರಡಿತ್ತು.ಅವರಿಗೆ ಸುಮಾರು ಹದಿನೆಂಟು ವರ್ಷಗಳಿಂದ ಥೈರಾಯ್ಡ್ ಗ್ರಂಥಿ ಯಲ್ಲಿ ಒಂದು ಸಣ್ಣ ಗಡ್ದೆ ಇತ್ತಂತೆ.ನನಗೂ ಕೂಡ ಮೊದಲೇ ತಿಳಿಸಿರಲಿಲ್ಲ .
ಅವರನ್ನು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಸೇರಿಸಿದೆವು.ನನಗೆ ಅಷ್ಟರಲ್ಲಿ ರಾಯಚೂರಿನ ಶಕ್ತಿನಗರಕ್ಕೆ ವರ್ಗವಾಗಿತ್ತು.ಅವರನ್ನು ನೋಡಲು ಕಿದ್ವಾಯಿ ಆಸ್ಪತ್ರೆಗೆ ಹೋದೆ.ಸ್ಪೆಷಲ್ ವಾರ್ಡಿನ ರೂಮೊಂದರಲ್ಲಿ ಒಬ್ಬರೇ ಇದ್ದರು.Brain surgery ಮಾಡಿ ತಲೆಗೆಲ್ಲಾ ಬ್ಯಾಂಡೇಜ್ ಸುತ್ತಿದ್ದರು.ನನ್ನನ್ನು ನೋಡಿ ಮೇಷ್ಟ್ರಿಗೆ ತುಂಬಾ ಖುಷಿಯಾಯಿತು.ಆನದದಿಂದ ತಬ್ಬಿಕೊಂಡರು.'ಸರ್ ಆಪರೇಶನ್ ಆಯ್ತು .ನೀವೂ ನೋಡೋಕೆ ಬಂದ್ರಿ.ಇನ್ನು ಎಲ್ಲಾ ಸರಿ ಹೋಗುತ್ತೆ ಸರ್.ನಿಮ್ಮನ್ನು ನೋಡೋಕೆ ಮುಂದಿನ ಸಲ ಶಕ್ತಿನಗರಕ್ಕೆ ನಾನೇ ಬರುತ್ತೇನೆ'ಎಂದರು. ಆ ಆಯಾಸದಲ್ಲೂ ಸುಮಾರು ಒಂದು ಗಂಟೆ ಹರಟಿದರು.'ಹೆಚ್ಚು ಮಾತನಾಡಬೇಡಿ ಮೇಷ್ಟ್ರೇ ,ಆಯಾಸ ಆಗುತ್ತೆ 'ಎಂದರೂ ಕೇಳಲಿಲ್ಲ.ಕೊನೆಗೆ ನಾನು ಹೊರಟು ನಿಂತೆ.
'ಸಾರ್ ,ನಾನಿನ್ನು ಬದುಕುತ್ತೀನೋ ಇಲ್ಲವೋ,ನನಗೋಸ್ಕರ ಒಂದು  ಸಲ  ಆ ಹಾಡು ಹಾಡಿ ಬಿಡಿ ಸರ್ ' ಎಂದರು!
ಕ್ಯಾನ್ಸರ್ ವಾರ್ಡಿನಲ್ಲಿ ಹಾಡೇ!!?ನಾನು ನನ್ನ ಕನಸು ಮನಸಿನಲ್ಲೂ ಇಂತಹ ಸಂದರ್ಭ ಊಹಿಸಿಕೊಂಡಿರಲಿಲ್ಲ.'ಬಿಸಿ ತುಪ್ಪ ಉಗುಳುವಂತಿಲ್ಲ,ನುಂಗುವಂತಿಲ್ಲ' ಎನ್ನುವಂತಾಗಿತ್ತು ನನ್ನ ಪರಿಸ್ಥಿತಿ !ಅವರನ್ನು ಆ ಸ್ಥಿತಿ ಯಲ್ಲಿ ನೋಡಿ ಮನಸ್ಸು ಬಹಳ ನೊಂದಿತ್ತು.ಹಾಡುವ ಮೂಡ್ ಇರಲಿಲ್ಲ.ಅವರ ಮನಸ್ಸನ್ನು ನೋಯಿಸದಿರಲು  ಅನಿವಾರ್ಯವಾಗಿ ಹಾಡಲೇ ಬೇಕಾಯಿತು.
ನನ್ನೆಲ್ಲಾ ನೋವನ್ನೂ ಹೊರ ಹಾಕುವಂತೆ ,ಜೀವನದಲ್ಲಿ ಅದೇ ನನ್ನ ಕಡೆಯ ಹಾಡು ಎಂಬಂತೆ ನನ್ನನ್ನೇ ಮರೆತು ಹಾಡಿದೆ!
'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೇ!ಉಳಿಸಿ ಕಣ್ಣ ನೀರ ,ಈ ನನ್ನ ಬಾಳಿಗೇ'.ಹಾಡು ಮುಗಿಯುವ ವೇಳೆಗೆ ಇಬ್ಬರ ಕಣ್ಣಲ್ಲೂ 
ಧಾರಾಕಾರ ನೀರು!ಭಾರ ಹೃದಯದಿಂದ ಅವರನ್ನು ಬೀಳ್ಕೊಟ್ಟೆ.ಇದಾದ ಕೆಲವೇ ತಿಂಗಳಲ್ಲಿ  ಮೇಷ್ಟ್ರು ತನ್ನ ಇಹ ಲೋಕ ಯಾತ್ರೆ ಮುಗಿಸಿದ್ದರು.ಕಾಣದ ಲೋಕಕ್ಕೆ ಪಯಣ ಬೆಳೆಸಿದ ಆ ನನ್ನ ಆತ್ಮೀಯ ಸ್ನೇಹಿತನಿಗೆ ಈ ನನ್ನ ಮೆಚ್ಚಿನ ಗೀತೆಯ ಮೂಲಕ 
ನಮನಗಳನ್ನು ಸಲ್ಲಿಸುತ್ತಿದ್ದೇನೆ.'ಒಲುಮೆಯ ಹೂವೇ!ನೀ ಹೋದೆ ಎಲ್ಲಿಗೇ !ಉಳಿಸಿ ಕಣ್ಣ ನೀರ ಈ ನನ್ನ ಬಾಳಿಗೇ '.
  

Thursday, August 26, 2010

"ಇಲಿಗಳಿಗೇನು ತಿಂಡಿ ?"

1991-93 ರಲ್ಲಿ ನಾನು ಶಿವಮೊಗ್ಗ ಜಿಲ್ಲೆಯ ,ಹೊಸನಗರ ತಾಲೂಕಿನ,ಚಕ್ರಾನಗರದ ಕೆ.ಪಿ.ಸಿ.ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದೆ.ನಾವು ಇದ್ದ ಮನೆ ಶೀಟುಗಳ ಸೂರುಳ್ಳ ಮನೆಯಾಗಿತ್ತು.ವಿಪರೀತ ಇಲಿಗಳ ಕಾಟ.ಇಲಿಗಳು ಎಲ್ಲೆಂದರಲ್ಲಿ ನಿರ್ಭಯವಾಗಿ ಓಡಾಡುತ್ತಿದ್ದವು.ಇಲಿಗಳನ್ನು ಹುಡುಕಿಕೊಂಡು ಎಲ್ಲಾ ತರದ ಹಾವುಗಳೂ ಬರುತ್ತಿದ್ದವು.ಎರಡು  ಮೂರು ಸಲ ನಾಗರ ಹಾವುಗಳು ಸೂರಿನಲ್ಲಿ ಸೇರಿಕೊಂಡು ,ಶೀಟುಗಳನ್ನೇ ತೆಗೆಯಬೇಕಾಗಿ ಬಂತು.ಮಲೆನಾಡು ಅಷ್ಟಾಗಿ ಪರಿಚಯವಿರದ ನಮಗೆ ಪಜೀತಿಯೋ ಪಜೀತಿ.ಮಕ್ಕಳು ಇನ್ನೂ ಸಣ್ಣವರಿದ್ದರು.ಮಗ ಮೂರನೇ ತರಗತಿಯಲ್ಲಿದ್ದರೆ ,ಮಗಳು ಎಲ್.ಕೆ.ಜಿ.ಯಲ್ಲಿದ್ದಳು.ಹಾವಿನ ಹೆದರಿಕೆಯಿಂದ ರಾತ್ರಿಯೆಲ್ಲಾ ನಿದ್ರೆ ಬರದೆ ಸೂರು ನೋಡುತ್ತಾ ಮಲಗುವುದೇ ಆಗುತ್ತಿತ್ತು.
ಈ ಇಲಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಎರಡು ಇಲಿ ಬೋನುಗಳನ್ನು ತಂದು ,ಅದರಲ್ಲಿ ಚಪಾತಿ ತುಂಡು,ಕೊಬ್ಬರಿ ತುಂಡುಗಳನ್ನಿಟ್ಟು,ಬೋನುಗಳನ್ನು ಬೇರೆ ಬೇರೆ ಜಾಗದಲ್ಲಿಟ್ಟೆ.ಏನಿಟ್ಟರೂ ಬೋನಿಗೆ ಇಲಿಗಳಂತೂ ಬೀಳುತ್ತಿರಲಿಲ್ಲ ! ಯಾರೋ' ಇಲಿಗಳಿಗೆ ಕರಿದ ತಿಂಡಿ ಅಂದರೆ ಇಷ್ಟ!ಬಜ್ಜಿ ,ಬೋಂಡ ಮಾಡಿ ಬೋನಿನಲ್ಲಿ ಇಡಿ ಸರ್ 'ಎಂದರು. ಸರಿ ಅಂದಿನಿಂದ ದಿನಾ ಸಂಜೆ ನನ್ನ ಹೆಂಡತಿ ಇಲಿಗಳಿಗಾಗಿ ಕರಿದ ತಿಂಡಿ ಮಾಡಲು ಶುರು ಮಾಡಿದಳು!ಒಂದು ದಿನ ಮೆಣಸಿನಕಾಯಿ ಬಜ್ಜಿಯಾದರೆ,ಮತ್ತೊಂದು ದಿನ ಆಲೂ ಬೋಂಡಾ !ಮಕ್ಕಳಿರುವ ಮನೆ .ಸ್ವಲ್ಪ ಮಾಡಿದರೆ ಆಗುತ್ತೆಯೇ?ಮಕ್ಕಳಿಗೂ ಇರಲಿ ಅಂತ ಹೆಚ್ಚಾಗಿಯೇ ಮಾಡುತ್ತಿದ್ದಳು.ಇಲಿಯ ಹೆಸರಿನಲ್ಲಿ ನಮಗೆಲ್ಲಾ ದಿನವೂ ತರ ತರದ ಕರಿದ ತಿಂಡಿಗಳ ಹಬ್ಬ!
ನನ್ನ ಮಗ ಸ್ಕೂಲಿನಿಂದ ಬಂದ ತಕ್ಷಣ ,ಬ್ಯಾಗ್ ಬಿಸಾಡಿ ,'ಅಮ್ಮಾ ಇವತ್ತು ಇಲಿಗೆ ಏನು ತಿಂಡಿ?'ಎಂದು ಕೇಳಲು ಶುರು ಮಾಡಿದ!ನಾನೂ ತಮಾಷೆಗೆ ಆಗಾಗ 'ಏನೇ ಇವತ್ತು ಇಲಿಗೆ ಏನು ವಿಶೇಷ?'ಎಂದು ಕೇಳುತ್ತಿದ್ದೆ.ಒಂದೆರಡು ಸಲ ಬೋನಿಗೆ ಬಿದ್ದ ಇಲಿಗಳು ಹುಶಾರಾದವು!ಅದು ಹೇಗೋ ತಿಂಡಿ ಮಾತ್ರ ತಿಂದು ಬೋನಿಗೆ ಬೀಳದೆ ತಪ್ಪಿಸಿಕೊಳ್ಳುತ್ತಿದ್ದವು! ಕರಿದ ತಿಂಡಿ ತಿಂದೂ ತಿಂದೂ,ಇಲಿಗಳ ಜೊತೆಗೇ ನಾವೂ ಗುಂಡಗಾದೆವು!

Tuesday, August 24, 2010

"ಕೋಣನ ಕುಂಟೆಯ ಕಿಂದರ ಜೋಗಿ!!"

ಇವನ  ದಿನನಿತ್ಯದ  ಒಡನಾಟ  ,
ಇಟ್ಟಿಗೆ ಸಿಮೆಂಟಿನ ಜೊತೆಯಾದರೂ ,
ಇವನು -------ಸಾಮಾನ್ಯನಲ್ಲ!
ಇಂವ ---------------------,
ಸ್ನೇಹ ಲೋಕದ ,ಮಾಂತ್ರಿಕ!!
ಬ್ಲಾಗ್ ಲೋಕದ ಗಾರುಡಿಗ!!

ಕೋಣನ ಕುಂಟೆಯಲ್ಲೇ ಕುಳಿತು 
ಮಾಡಿದ ನೋಡಿ ,ಮೋಡಿ!!
ಯಾಂತ್ರಿಕ ಜೀವನಕ್ಕೆ ಬೇಸತ್ತು ,
ಬಳಲಿ,ಬೆಂಡಾಗಿ,ಬಸವಳಿದ ಜೀವವ,
ಕೈ ಬೀಸಿ,ಕರೆದಿತ್ತು -----------,
ಇವನೂದಿದ ಸ್ನೇಹದ -----,
ಮೋಹನ  ಮುರಳಿ !

ಕೆಲಸವನೆಲ್ಲ ಬದಿಗೊತ್ತಿ ,
ಓಡಿದೆವು ನಾವೆಲ್ಲಾ 
'ಬೃಂದಾವನ'ನಗರಕ್ಕೆ !
'ನಯನ'ಸಭಾಂಗಣಕ್ಕೆ.
ನಕ್ಕು ,ನಲಿಯುವುದಕ್ಕೆ!
ಸ್ನೇಹ  ಸುಧೆಯ ---------,
ಮೊಗೆ ಮೊಗೆದು ಕುಡಿಯುವುದಕ್ಕೆ!


ಈ ಗಾರುಡಿಗ ಸಾಮಾನ್ಯನಲ್ಲ!
ಇವನ ಸ್ನೇಹ  ಆಕಾಶ!
ನಮ್ಮ ನರ ನಾಡಿಗಳಲ್ಲೂ 
ಅದು ವಿದ್ಯುತ್ತಾಗಿ ಹರಿದು 
ನಮ್ಮ ಬದುಕೂ 'ಪ್ರಕಾಶ'!!!

Monday, August 23, 2010

' ಖುಷಿಯ -ಕ್ಷಣಗಳು !!'
ಎಲ್ಲರ ಹಲ್ಲುಗಳೂ ಹೇಗೆ ಮಿಂಚುತ್ತಿವೆ ನೋಡಿ!.........ಫಳ...ಫಳ ...ಅಂತಾ ! ಯಾವುದೋ ....ಟೂತ್ ಪೇಸ್ಟಿಗೆ advertisement ಕೊಟ್ಟ ಹಾಗೆ!!! ಎಲ್ಲರಿಗೂ ಏನೋ ಖುಷಿ !!ಏನೋ ಆನಂದ !! ಅದನ್ನು ಬಣ್ಣಿಸೋದು ಹೇಗೆ?
ಏನೂ ನಿರೀಕ್ಷಣೆ  ಇಟ್ಟುಕೊಳ್ಳದೆ,ಎಲ್ಲರ ಸಂತೋಷವನ್ನು ತಾನೂ ಅನುಭವಿಸಿದಾಗ ಸಿಗುವ ಸಂತೋಷವೇ 
ನಿಜವಾದ ಸಂತೋಷ ಅಂತ ಅನಿಸುತ್ತದೆ.ಈ ಸಂತೋಷ ನಿನ್ನೆ 'ನಯನ'ಸಭಾಂಗಣದಲ್ಲಿ  ಶಿವೂ ಮತ್ತು ಆಜಾದ್ ರವರ 
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಮ್ಮೆಲ್ಲರ ಅನುಭವ.ಈ ಕಾರ್ಯ ಕ್ರಮವನ್ನು ಸೊಗಸಾಗಿ ನಡೆಸಿಕೊಟ್ಟು ,ನಮ್ಮೆಲ್ಲರ 
ಸಂತೋಷಕ್ಕೆ ಕಾರಣರಾದ ಎಲ್ಲರಿಗೂ ನನ್ನ ಹೃತ್ಪೂರ್ವಕ ನಮನಗಳು.

Thursday, August 19, 2010

'ಬೇಸಿಗೆಯ -ತಂಗಾಳಿ'

ನಾ  ಇರ ಬಯಸುತ್ತೇನೆ ಹೀಗೇ !
ಬೇಸಿಗೆಯ ತಂಗಾಳಿಯಂತೆ!
ಅಲ್ಲಿ ಇಲ್ಲಿ ಸುತ್ತಿ ಸುಳಿದು ,
ಅಬ್ಬರಿಸದೇ ,ಬೊಬ್ಬಿರಿಯದೇ,
ಹಿತವಾಗಿ ಬೀಸಿ ----------,
ಬೆಂದ ಮನಗಳ ತಣ್ಣಗಾಗಿಸಿ ,
ನೊಂದ ಮನಗಳಿಗೆ ಮುಲಾಮಾಗಿ,
ಸ್ನೇಹಿತರಿಗೆ ಸಲಾಮಾಗಿ ,
ಮಾಗಿ,ತೂಗಿ,ಮಾತಿನಲ್ಲಿ ,
ಬಿರಿದ ಮನಸುಗಳ ಬೆಸೆಯುತ್ತಾ,
ಸ್ನೇಹಗಳ ಹೊಸೆಯುತ್ತಾ,
ಮುದದಿಂದ ಬೀಸುತ್ತಾ ,
ರೋಗಿಗಳಿಗೆ ಪ್ರಾಣವಾಯುವಾಗಿ,
ಸಕಲರಿಗೆ ಸಹಜ ಉಸಿರಾಟವಾಗಿ ,
ಅಬ್ಬರವಿರದೇ,ಆಡಂಬರವಿರದೇ,
ಹಿತವಾಗಿ,ಮಿತವಾಗಿ ಬೀಸಿ,
ಸದ್ದಿಲ್ಲದೇ ಮರೆಯಾಗ ಬಯಸುತ್ತೇನೆ ,
ಗೊತ್ತೇ -------ಆಗದಂತೆ !
ಇರಲೇ -------ಇಲ್ಲವೆಂಬಂತೆ!!
ಬೇಸಿಗೆಯ ------ತಂಗಾಳಿಯಂತೆ!!!

Tuesday, August 17, 2010

'ಸ್ನೇಹದಲ್ಲಿ ಇರೋ ಸುಖ ಗೊತ್ತೇಇರಲಿಲ್ಲ'

ಸ್ನೇಹದಲ್ಲಿ,ಅದೂ ಬ್ಲಾಗ್ ಸ್ನೇಹದಲ್ಲಿ ,ಇಂತಹ ಸುಖ,ಸಂತೋಷ,ಆನಂದ ಇದೆಯೆಂದು ,ನಿಜಕ್ಕೂ ಗೊತ್ತಿರಲಿಲ್ಲ! ಓಹ್!! ಅದು ಕನಸೇ ?ಎಂದು ಮೈ ಚಿವುಟಿ ನೋಡಿಕೊಳ್ಳು ವಂತಾಗುತ್ತದೆ !ನಿಜಕ್ಕೂ this is not an exaggeration .ಆಗಸ್ಟ್ 14  ಮತ್ತು 15 ನಿಜಕ್ಕೂ ನನ್ನ  ಜೀವನದಲ್ಲಿ ಬಹಳ ದಿನ ನೆನಪಿನಲ್ಲಿ ಉಳಿಯುವುದರಲ್ಲಿ ಸಂದೇಹವಿಲ್ಲ.ಡಿ.ವಿ.ಜಿ.ಯವರ  ಮಂಕು ತಿಮ್ಮನ ಕಗ್ಗದಲ್ಲಿ ಒಂದು ಕವನ ಹೀಗಿದೆ;

ಒಮ್ಮೆ ಹೂದೋಟದಲಿ,ಒಮ್ಮೆ ಕೆಳೆ ಕೂಟದಲಿ
ಒಮ್ಮೆ ಸಂಗೀತದಲಿ ,ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸಾರದಲಿ ,ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿ ಯಾಗೋ ಮಂಕು ತಿಮ್ಮ .

'ಕೆಳೆ ಕೂಟದಲಿ'ಎಂದರೆ ಸ್ನೇಹಿತರ ಜೊತೆಯಲ್ಲಿ ಬ್ರಹ್ಮಾನುಭವಿ ಯಾಗುವುದು ಹೇಗೆಂದು ಅರ್ಥ ವಾಗಿರಲಿಲ್ಲ.ಆದರೆ ಆ ಮಾತುಗಳು ಈ ಎರಡು ದಿನದಲ್ಲಿ ಅನುಭವಕ್ಕೆ ಬಂತು ಎಂದು ಧೈರ್ಯವಾಗಿ ಹೇಳಬಲ್ಲೆ.ಈ ಒಂದು ಆನಂದದ ಅನುಭವ ನನಗೆ ಹಿಂದೆಂದೂ ಸಿಕ್ಕಿರಲಿಲ್ಲವೆಂದು ಖಂಡಿತವಾಗಿ ಹೇಳಬಹುದು.
ಆಗಸ್ಟ್ ಹದಿನಾಲ್ಕರನಂದು ನಾನು,ನಾಭಿ ಬ್ಲಾಗಿನ ನಾರಾಯಣ್ ಭಟ್,ಇಟ್ಟಿಗೆ ಸಿಮೆಂಟು ಬ್ಲಾಗಿನ ನಮ್ಮೆಲ್ಲರ ಮೆಚ್ಚಿನ ಪ್ರಕಾಶಣ್ಣ ,ಮನದಾಳದಿಂದ ಬ್ಲಾಗಿನ ಪ್ರವೀಣ್ ಗೌಡ ,ಈ ನಾಲ್ಕು ಜನ ಸಪ್ನಾ ಬುಕ್ ಹೌಸಿನಲ್ಲಿ ಮಧ್ಯಾಹ್ನ  ಸುಮಾರು ಹನ್ನೆರಡು ಗಂಟೆಯ ವೇಳೆಗೆ ಭೇಟಿಯಾದೆವು .ಪ್ರಕಾಶಣ್ಣ ಅವರ ಸೂಜಿಗಲ್ಲಿನಂತಹ ವ್ಯಕ್ತಿತ್ವ ಯಾರನ್ನಾದರೂ ಮೋಡಿ ಮಾಡಿ ಬಿಡುತ್ತದೆ.ಅವರ ಮಾತು,ಹಾಸ್ಯ ,ಆತ್ಮೀಯತೆ ,ಸ್ನೇಹ ನಮ್ಮನ್ನೆಲ್ಲ ಮಂತ್ರ ಮುಗ್ಧರನ್ನಾಗಿ  ಮಾಡಿತ್ತು!ಸುಮಾರು ಆರು ಗಂಟೆಗಳ ಕಾಲ ,ಮಾತು ,ನಗು,ಹರಟೆ .ನಗು,ಮತ್ತಷ್ಟು -----ಇನ್ನಷ್ಟು ನಗು.ಅದು ಕೊಟ್ಟ ಆನಂದವನ್ನು ಮಾತಿನಲ್ಲಿ ಬಣ್ಣಿಸಲು ಸಾಧ್ಯವಿಲ್ಲ.ಅವರ ಮನೆಯವರು ತೋರಿದ ಆದರ ಮತ್ತು ಆಥಿತ್ಯಕ್ಕೆ ನಾನು ಚಿರ ಋಣಿ .ಮರು ದಿನ ಸಿಕ್ಕವರು ವಿ.ಆರ್.ಭಟ್,ಪರಾಂಜಪೆ,ನಾಗರಾಜ್.ಕೆ.,ಮತ್ತು ಪ್ರವೀಣ್ ಗೌಡ.ಇವರೆಲ್ಲರ ಮುಗ್ಧ,ಸ್ನಿಗ್ಧ ಸ್ನೇಹಕ್ಕೆ ಯಾವುದು ಸಾಟಿ? ಓ ದೇವರೇ ,ನಿನ್ನ ಗಣಿಯಲ್ಲಿ ಎಂತೆಂತಹ ರತ್ನಗಳು!ಎಂದು ಮನದಲ್ಲೇ ವಂದಿಸಿದೆ.  ವಿ.ಆರ್.ಭಟ್ಟರು ಜ್ಞಾನದ ಸಾಗರ!
ಮೊಗೆದಷ್ಟೂ ಇದೆ ಅವರಲ್ಲಿರುವ ಜ್ಞಾನದ ಗಂಗೆ!ಅವರ ಜ್ಞಾನ ಭಂಡಾರಕ್ಕೆ ಮೂಕ ವಿಸ್ಮಿತನಾಗಿದ್ದೆ.ಪರಾಂಜಪೆ ಅದ್ಭುತ ಸ್ನೇಹ ಜೀವಿ!ಮಿತ ಭಾಷಿ.ಹೆಚ್ಚು ಮಾತನಾಡದೆ observe ಮಾಡುತ್ತಾ sponge ನಂತೆ ಎಲ್ಲವನ್ನೂ absorb ಮಾಡುತ್ತಿದ್ದರು!ಇನ್ನು ನಾಗರಾಜ್ ಮತ್ತು ಪ್ರವೀಣ್ ನನ್ನ ಮಗನ ವಯಸ್ಸಿನ ಹುಡುಗರು.ಅವನಂತೆಯೇ ಈ ಕಣ್ಮಣಿಗಳು ನನ್ನ  ಹೃದಯಕ್ಕೆ ತುಂಬಾ ಹತ್ತಿರವಾದರು!ಅವರ ಮನಸ್ಸುಗಳು ಮುಂಜಾನೆಯ ಮಂಜಿನ ಹನಿಗಳಂತೆ ಸುಂದರ!ಅವರ್ಣನೀಯ! ಮನೆಗೆ ಬಂದಾಗ ,ಜಿ.ಎಸ್.ಶಿವ ರುದ್ರಪ್ಪ ಅವರ ಈ ಗೀತೆ ನೆನಪಾಯಿತು;

ಎಲ್ಲೋ ಹುಡುಕಿದೆ ,ಇಲ್ಲದ ದೇವರ
ಕಲ್ಲು ಮಣ್ಣು ಗಳ  ಗುಡಿಯೊಳಗೆ !
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೇ !

ಈ ರೀತಿಯ ಸ್ನೇಹವನ್ನೂ ,ಸಂತೋಷವನ್ನೂ ,ಆನಂದವನ್ನೂ ಕೊಟ್ಟು ,ಡಿ.ವಿ.ಜಿ.ಯವರು ಹೇಳಿದಂತೆ 'ಕೆಳೆ ಕೂಟದ' ಬ್ರಹ್ಮಾನು ಭವವನ್ನು
ಮಾಡಿಸಿದಂತಹ ಬ್ಲಾಗಿನ ಸ್ನೇಹಿತರಾದ  ಪ್ರಕಾಶಣ್ಣ,ವಿ.ಆರ್.ಭಟ್,ಪ್ರವೀಣ್ ,ಪರಾಂಜಪೆ,ಎನ್.ಆರ್.ಭಟ್,ಮತ್ತು ನಾಗರಾಜ್ ,ಇವರೆಲ್ಲಾ
ನೂರು ವರುಷ ಸುಖದಿಂದ,ಸಂತೋಷದಿಂದ ,ಹೀಗೇ ನಗು ನಗುತ್ತಾ ಬಾಳಲಿ ಎಂದು ಆ ದೇವನಲ್ಲಿ ನನ್ನ ಪ್ರಾರ್ಥನೆ.

Friday, August 13, 2010

'ನನಗಾಗಿಯಾದರೂ ------ನೀ ತಣ್ಣಗಿರು'

ಹಲವಾರು ಜನ ತಮ್ಮ ಜೀವನದಲ್ಲಿ ಕೆಲ ವ್ಯಕ್ತಿಗಳನ್ನು ಎಷ್ಟೊಂದು ದ್ವೇಷಿಸುತ್ತಾರೆಂದರೆ ಆ ವ್ಯಕ್ತಿಗಳನ್ನು ನೆನಸಿಕೊಂಡರೆ ಇವರ ರಕ್ತ ಕುದಿಯ ತೊಡಗುತ್ತದೆ.'Forget and forgive'ಎನ್ನುವುದು ಒಣ ವೇದಾಂತವಲ್ಲ.ಇವು ನಮ್ಮನ್ನು ನಾವು ದೈಹಿಕವಾಗಿ ,ಮಾನಸಿಕವಾಗಿ ಆರೋಗ್ಯವಾಗಿ ಇಟ್ಟುಕೊಳ್ಳುವ ಸೂತ್ರ! ದ್ವೇಷ ,ಅಸೂಯೆ ,ಇವೇ ಮುಂತಾದವು ನಮ್ಮನ್ನು ಒಳಗೊಳಗೇ ಸುಟ್ಟು ಹಾಳು ಮಾಡುತ್ತವೆ.ಇದಕ್ಕೆ ವ್ಯತಿರಿಕ್ತವಾಗಿ ಪ್ರೀತಿ,ಸ್ನೇಹ ,ವಿಶ್ವಾಸಗಳಂತಹ ಸದ್ಭಾವನೆಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತವೆ.ಹಲವಾರು ಜನ ಈ ರೀತಿ ನರಳುತ್ತಿರುವುದನ್ನು ನೋಡಿ ,ಪ್ರೇರಿತವಾದ ಕವನ ಇದು ;
'ನನಗಾಗಿಯಾದರೂ --ನೀ --ತಣ್ಣಗಿರು !' 

ನಾನು ನಿನ್ನ ಮನಸಾ ದ್ವೇಷಿಸಿ ,
ಶತಬಾರಿ-------------  ಶಪಿಸಿ, 
ಹಿಡಿ ಶಾಪ-------------- ಹಾಕಿ ,
ನಿನ್ನ------- ಮರೆಯ ಬೇಕೆಂದು
ಶತ ಪ್ರಯತ್ನ----- ಮಾಡಿದರೂ ,
ನೀನು ರಕ್ತಬೀಜಾಸುರನಂತೆ ,
ನನ್ನ ನೆನಪಲ್ಲಿ ಮತ್ತೆ ಮತ್ತೆ ಹುಟ್ಟಿ ,
ನನ್ನಲೇ ------------ಚಿಗಿತು!
ಕವಲು ಕವಲಾಗಿ ಟಿಸಿಲೊಡೆದು !
ನನ್ನ ನರ ನಾಡಿಗಳಲ್ಲಿ ಬೆಳೆದು !
ರಕ್ತ ಮಾಂಸ ಗಳಲ್ಲಿ ಬೆರೆತು !
ನನ್ನೊಳಗೇ ಹೆಮ್ಮರವಾಗಿ,
ನನ್ನಿರವನ್ನೇ----- ಆಕ್ರಮಿಸಿ ! 
ನನ್ನ ಉಪಶಾಂತಿಯನ್ನೇ ನುಂಗಿ!
ನೀನು ಖಳನಂತೆ ನಗುವ ನಗು ,
ಕೋಶ ಕೋಶದಲ್ಲಿ ಮಾರ್ದನಿಸಿ ,
ಬದುಕು ನನಗೆ-------- ನರಕ! 
ಆದ್ದರಿಂದ ,ನನಗಾಗಿಯಾದರೂ ,
ನೀನು-------- ತಣ್ಣಗಿರಲೆಂದು,
ಮನಸಾ -------ಹಾರೈಸುತ್ತೇನೆ!
ಆಗ -----------ನೀನೆಲ್ಲೋ 
ನನ್ನೊಳಗಿನ ಮೂಲೆಯೊಂದರಲ್ಲಿ ,
ಆರಿದ ಕೆಂಡವಾಗಿ ತಣ್ಣಗಿರುತ್ತಿ!
ಸುಡದೆ --------ಸುಮ್ಮನಿರುತ್ತಿ!
ಅದರಿಂದ------ನನಗೂ ,ನಿನಗೂ,
ಸರ್ವರಿಗೂ ---------ನೆಮ್ಮದಿ!

Tuesday, August 10, 2010

'ಸೂರ್ಯ -ಕಿರಣ 'ರಾತ್ರಿಯೆಲ್ಲಾ -----------,
ನಿದ್ದೆಯ ಹಾಸಿಗೆಯಲ್ಲಿ
ಕನಸಿನ ಛಾದರ
ಹೊದ್ದು ಮಲಗಿ ---,
ಬೆಳಗಾಗೆದ್ದು ------,
ಛಾದರ ಒದ್ದು ,
ಕಣ್ಣು ಬಿಟ್ಟಾಗ,
ಕಿಟಕಿಯ ಸಂದಿಯಿಂದ
ಸೂರ್ಯ -------,
ಕಣ್ಣು ಮಿಟುಕಿಸಿ ,
ರಾತ್ರಿಯೆಲ್ಲಾ ----,
ನೀನೀಕಡೆ ನಿದ್ದೆ !
ಆಕಡೆ  ನಾನಿದ್ದೆ !
ಎಂದು ನಕ್ಕು ,
ಹೊಳೆವ ಕಿರಣಗಳ ,
ಹಲ್ಲು ಬಿಟ್ಟ !

Sunday, August 8, 2010

'ಬಾಳ -ಗುಡಿ'

ಬಾಳು ಬೀಳಾಗುವುದು ಬೇಡ !
ಪಾಳು ಗುಡಿಯಾಗಿ ,
ಬಾವಲಿಗಳು ತೂರಾಡಿ ,
ಕಸ ಕಡ್ಡಿ ,ಜೊಂಡು ಬೆಳೆದು,
ತೊಂಡು ಮೇಯುವ ,
ಪುಂಡು ದನಗಳ ,
ಬೀಡಾಗುವುದೂ ಬೇಡ! 
ಜ್ಞಾನವೆಂಬ ಪೊರಕೆಯಲ್ಲಿ 
ಅಜ್ಞಾನದ ಕಸ ಗುಡಿಸಿ ,
ದ್ವೇಷ ರೋಷಗಳ ಕಳೆ ಕಿತ್ತು 
ಪ್ರೀತಿ ಜ್ಯೋತಿಯ ಬೆಳಗಿಸಿ ,
ಸ್ನೇಹವೆಂಬ ಕಂಬಗಳ ನೆಟ್ಟು ,
ಸಚ್ಚಾರಿತ್ರದ ಸುಣ್ಣ ಬಳಿದು , 
ನಲ್ ನುಡಿಗಳ ಮಂತ್ರಘೋಶ 
ಕೇಳಿ ಬರುತಿರಲಿ ಎಂದೂ !
ಕರುಣಾಮೃತದ  ತೀರ್ಥವದು 
ದೊರಕುತಿರಲಿ ಎಂದೆಂದೂ!

Friday, August 6, 2010

'ಎಲೆಲೇಲೆ -------ರಸ್ತೇ!!!'

ಎಲೆಲೇಲೆ ---------ರಸ್ತೇ !
ಏನೀ -------ಅವ್ಯವಸ್ಥೆ !!?
ಮೈಮೇಲೆಲ್ಲಾ ---ಹಳ್ಳ!
ಮಳೆ ಬಂದ್ರೆ -----ಕೊಳ್ಳ !
ದಾಟ ಬೇಕಂದ್ರೆ ನಿನ್ನ 
ಈಜ್  ಬರಬೇಕು ಮುನ್ನ!
ಅಪರೂಪಕ್ಕೆ ಮರಮ್ಮತ್ತು!
ಹಣ ನುಂಗೋ ಮಸಲತ್ತು!
ಲಾರಿ ಅನ್ನೋ ದೆವ್ವ !
ಮೈಮೇಲ್ ಬಂತಲ್ಲವ್ವಾ!
ಪಕ್ಕದಲ್ ಒಂದಷ್ಟು ಕಲ್ಲು!
ರಿಪೇರಿಯೆಲ್ಲಾ ಮಳ್ಳು!
ಟೆಲಿಫೋನ್ ನವರು ಅಗೆದು !
ಡ್ರೈನೇಜ್ ನವರು ಬಗೆದು!
ನಿನ್ನ ರೂಪ ಕೆಡಿಸಿ !
ಪ್ಯಾಚ್ ವರ್ಕ್ ಸೀರೆ ಉಡಿಸಿ!
ಹೊಡೆದರು ಕೋಟಿ,ಕೋಟಿ!
ನಿನ್ ಹೆಸರಲ್ಲಿ ಲೂಟಿ!
ಎಲೆಲೇಲೆ -------ರಸ್ತೇ!
ಏನೀ ----------ಅವ್ಯವಸ್ಥೆ !
ನಿನ್  ಹಾಗೇ ಈ  ವ್ಯವಸ್ಥೆ !
ಬರೀ ---------ಅವ್ಯವಸ್ಥೆ!


Wednesday, August 4, 2010

"ಮಕ್ಕಳು"

CHILDREN ;
Your children are not your children.
They are the sons and daughters of
Life longing for itself.
They come through you but not
from you.,And though they are with you ,
yet they belong not to you .
           KHALIL GIBRAN (1883-1931)
           (The Prophet)
     
             ' ಮಕ್ಕಳು '
ಮಕ್ಕಳು -------------------!
ಇವರು   ಜೀವ ಜಾಲದ ----- ,
ಅನಂತ ಸಾಧ್ಯತೆಗಳ ಒಕ್ಕಲು !
ನಮ್ಮ ಮೂಲಕವೇ ಹರಿದರೂ ,
ಈ ನಿರಂತರ ಜೀವ ವಾಹಿನಿ ,
ನಮ್ಮಿಂದ ಬಂದಿದ್ದಲ್ಲ---------!
ನನ್ನಜ್ಜ ,ಮುತ್ತಜ್ಜ,ಮೂಲಜ್ಜರೆಲ್ಲಾ ,
ನನ್ನ ಮಕ್ಕಳ ಮೂಲಕ ಹರಿದು ,
ನಾಳೆ ಅವರ ಮೊಮ್ಮಕ್ಕಳು,
ಮರಿ , ಮರಿಮಕ್ಕಳಲ್ಲೂ -----,
ಹರಿ ಹರಿದು ಬರುತ್ತಿರುತ್ತಾರೆ!
ಆ ಕಾಣದ ಬಿಲ್ಲು ಗಾರ,
ನಮ್ಮ ದೇಹವ ಬಿಲ್ಲಾಗಿಸಿ ---,
ಅನಂತದತ್ತ ಬಿಟ್ಟ ಬಾಣಗಳು ಅವರು!
ಅವರಿಗೆ ನಿಮ್ಮ ಪ್ರೀತಿ ಕೊಡಿ ,
ಅವರಂತೆ ಅವರು ಅರಳಲು ಬಿಡಿ!
ಸಾಧ್ಯವಾದರೆ ನಾವು ಅವರಂತೆ ,
ನಿತ್ಯ ನೂತನವಾಗೋಣ-------!
ಅವರನ್ನು ನಮ್ಮಂತೆ--------,
ಹಳತಾಗಿಸುವುದ ----ಬಿಡೋಣ !
ಜೀವ ಪ್ರವಾಹ ಹರಿಯಲಿ ಮುಂದಕ್ಕೆ !
ಕಾಲ ಚಲಿಸುವುದಿಲ್ಲ ಹಿಂದಕ್ಕೆ !

(ಇದು ನನ್ನ ಬ್ಲಾಗಿನ 75 ನೇ ಪ್ರಕಟಣೆ.ನಾನು ಬ್ಲಾಗ್ ಶುರು ಮಾಡಿದ್ದು 2010 february ಯಲ್ಲಿ.ನನಗೆ ಬ್ಲಾಗ್ ಲೋಕದ ಪರಿಚಯವೇ ಇರಲಿಲ್ಲ..ನನ್ನ ಆತ್ಮೀಯ ಸ್ನೇಹಿತ ನಾರಾಯಣ ಭಟ್ಟರ ಸ್ನೇಹ ಪೂರ್ವಕ ಒತ್ತಾಸೆ ಇಲ್ಲದಿದ್ದರೆ ನಾನು ಬ್ಲಾಗ್ ಶುರು ಮಾಡುತ್ತಿರಲಿಲ್ಲ.ಅವರಿಗೆ ನನ್ನ ಕೃತಜ್ಞತೆಗಳು.ನನ್ನ ಬ್ಲಾಗ್ ಶುರು ಮಾಡಿಕೊಟ್ಟವರು ನನ್ನ ಪತ್ನಿ ಪದ್ಮ ಮತ್ತು ಮಗಳು ಪಲ್ಲವಿ.ನನಗೆ ಮೊದ ಮೊದಲು ಟೈಪ್ ಮಾಡಲೂ ಬರುತ್ತಿರಲಿಲ್ಲ.ತನ್ನೆಲ್ಲಾ ಮನೆ ಕೆಲಸದ ನಡುವೆ ನನ್ನ ಕಿರಿಕಿರಿಯನ್ನೂ ಸಹಿಸಿಕೊಂಡು ಸುಮಾರು ಬರಹಗಳನ್ನು ಬ್ಲಾಗಿಸಿದ ನನ್ನ ಅರ್ಧಾಂಗಿಗೆ ನನ್ನ ನಮನಗಳು.ಇನ್ನು ,ಕಾಣದ ನನ್ನಲ್ಲಿ ಇಷ್ಟೊಂದು ಸ್ನೇಹ,ಪ್ರೀತಿ ಅಭಿಮಾನಗಳನ್ನು ತೋರಿಸಿ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ ಎಲ್ಲಾ ಸಹಬ್ಲಾಗಿಗರಿಗೂ ಅನಂತ ವಂದನೆಗಳು.)

Sunday, August 1, 2010

'ನಡು ವಯಸ್ಸು'

'ನಡು ವಯಸ್ಸು' ಎಂದರೆ 
ನಡು ಭಾಗ ಸೇಬಿನಂತಾಗಿ !
ತಿನ್ನದಿದ್ದರೂ ತೇಗುವಂತಾಗಿ!
ನಡೆಯುವುದೇ ಪ್ರಯಾಸವಾಗಿ !
ಕಾರಣವಿಲ್ಲದೇ ಆಯಾಸವಾಗಿ !
ಬಿ.ಪಿ,ಶುಗರ್ರು --------,
ಬೆಲೆಗಳಂತೆ ಗಗನಕ್ಕೇರಿ 
ಹಿಡಿತಕ್ಕೇ ಸಿಗದಂತಾಗಿ !
ಮಕ್ಕಳು ಮಾತು ಕೇಳದೇ
ಬರೀ ರೇಗುವಂತಾಗಿ---- ,
ಸಂಗಾತಿಗೆ ಬದುಕು ------,
ಸುಖವಿಲ್ಲದೆ ಏಗುವಂತಾಗಿ!
ಮೊದಲಿನ ಮಿಂಚಿನ ಓಟ ಹೋಗಿ 
ಬದುಕು ತೆವಳುತ್ತಾ ಸಾಗಿ !
ಅಂತಾಗಿ,ಇಂತಾಗಿ,ಎಂತೋ ಆಗಿ 
ಕೊನೆಗೆ ಮಧ್ಯ ವಯಸ್ಸು
ಮನೆ ಮಂದಿಗೆಲ್ಲಾ  ಸಾಕಾಗಿ ,
ತಲೆ ಚಿಟ್ಟು ಹಿಡಿಸುವ --------,
ಕಾ, ಕಾ ,ಎನ್ನುವ -----ಕಾಗಿ !

(ಇದು ನಡುವಯಸ್ಸಿನ ಒಂದು ವಿಡಂಬನಾತ್ಮಕ ಚಿತ್ರಣವಷ್ಟೇ.ಆದರೆ ಇದಕ್ಕೆ ಅಪವಾದ ಎಂಬಂತೆ ಅರವತ್ತರಲ್ಲೂ ಹರೆಯದವರನ್ನೂ  ನಾಚಿಸುವಂತಹ ಆರೋಗ್ಯ ಮತ್ತು ಅಂಗ ಸೌಷ್ಠವ ಇರುವವರೂ ಇದ್ದಾರೆ.ಎಲ್ಲರ ಜೊತೆ ಹೊಂದಿಕೊಂಡು ಸೊಗಸಾದ ಬಾಳ್ವೆ ನಡೆಸುತ್ತಿರುವವರೂ ಇದ್ದಾರೆ.ಎಲ್ಲರ ಬಾಳೂ ಹಸನಾಗಲಿ  ಎನ್ನುವ ಹಾರೈಕೆ ನನ್ನದು.ನಮಸ್ಕಾರ .)

Friday, July 30, 2010

'ಖಾಲಿ ಜಗಾ ಕಹಾಂ ಹೈ?'

ಒಮ್ಮೆ ನಾನು ರೈಲಿನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದೆ .ನನ್ನ ಎದುರಿನ ಸಾಲಿನಲ್ಲಿ ನಾಲಕ್ಕು ಜನ ಕೂರುವ ಜಾಗದಲ್ಲಿ ಮೂರು ಜನ ಮಾತ್ರ ಕೂತಿದ್ದರು.ಮಧ್ಯದಲ್ಲಿ ಕುಳಿತಿದ್ದ ಧಡೂತಿ ವ್ಯಕ್ತಿ ,ಬಹಳ ಹೊತ್ತಿನಿಂದ ಯಾರಿಗೂ ಜಾಗ ಕೊಡದೆ ಕಾಲುಗಳನ್ನು ಅಗಲಿಸಿಕೊಂಡುಇಬ್ಬರ ಜಾಗ ಆಕ್ರಮಿಸಿಕೊಂಡು  ಆರಾಮವಾಗಿ ಕುಳಿತಿದ್ದ.ಕೆಲವರು ಕೇಳಲು ಧೈರ್ಯ ಸಾಲದೇ ಮುಂದೆ ಹೋದರೆ ,ಕೆಲವರು ಜಾಗ ಕೇಳಿ ಆ ಧಡೂತಿ ವ್ಯಕ್ತಿಯ ಹತ್ತಿರ 'ಜಗಾ ಕಹಾಂ ಖಾಲಿ ಹೈ?ಕ್ಯಾ ಸಿರ್ ಪರ್ ಬೈಠೋಗೇ ?'ಎಂದು  ಹೇಳಿಸಿಕೊಂಡು ಮುಂದೆ ಹೋಗುತ್ತಿದ್ದರು.ಅವನ ಒರುಟು ತನದಿಂದ ಜನ ಬೇಸರ ಗೊಂಡಿದ್ದರೂ, ಅವನ ಆಕಾರ ಮತ್ತು ನಡವಳಿಕೆ ನೋಡಿ ಸುಮ್ಮನಿದ್ದರು.ಮುಂದೊಂದು ಸ್ಟೇಶನ್ ನಲ್ಲಿ ಒಬ್ಬ ಭಾರಿ ಸರ್ದಾರ್ ಜೀ ಬೋಗಿಯೊಳಗೆ ಹತ್ತಿದ.ಧಾರಾಕಾರವಾಗಿ ಸುರಿಯುತ್ತಿದ್ದ ಬೆವರು ಒರಿಸಿಕೊಳ್ಳುತ್ತಿದ್ದ ಅವನಿಗೆ ಧಡೂತಿಯವನು ಕುಳಿತಿದ್ದ ಡಬಲ್ ಸೀಟು ಕಣ್ಣಿಗೆ ಬಿತ್ತು.ಸ್ವಲ್ಪವೂ ಹಿಂಜರಿಯದೆ ಆ ಧಡೂತಿ  ಯವನಿಗೆ 'ಜರಾ ಸರಕೋ ಭೈಯ್ಯಾ 'ಎಂದಾ.ಧಡೂತಿ ವ್ಯಕ್ತಿ ತನ್ನ ಮಾಮೂಲಿ ವರಸೆಯಲ್ಲಿ 'ಜಗಾ ಕಹಾಂ ಖಾಲೀ  ಹೈ?ಕ್ಯಾ ಸಿರ್ ಪರ್ ಬೈಠೋಗೇ ?'ಎಂದು ಕೆಕ್ಕರಿಸಿ ನೋಡುತ್ತಾ  ಸಿಡುಕಿದ.ತಕ್ಷಣವೇ ಸರ್ದಾರ್ ಜೀ ತುಂಟ ನಗೆ ನಗುತ್ತಾ  'ಕ್ಯಾ ಸಿರ್ ಮೇ ಜಗಾ ಖಾಲೀ ಹೈ?' ಎಂದುವ್ಯಂಗ್ಯದ ಹರಿತ  ಬಾಣ ಒಂದನ್ನು  ಬಿಟ್ಟ.ಬಾಣ ನಾಟಿತು.ಈ ಅನಿರೀಕ್ಷಿತ ಮಾತಿನ ಧಾಳಿಯಿಂದ ಅವಾಕ್ಕಾದ ಧಡಿಯ, ಮರು ಮಾತಾಡದೆ ಸರಿದು ಜಾಗ ಬಿಟ್ಟ.ಸರ್ದಾರ್ ಜೀ ನಗುತ್ತಲೇಅವನ ಪಕ್ಕ  ಕುಳಿತುಕೊಂಡ.ಬೋಗಿಯಲ್ಲಿ ಈ ತಮಾಷೆಯನ್ನು ನೋಡುತ್ತಿದ್ದವರು ನಗು ತಡೆದು ಕೊಳ್ಳಲು ಕಷ್ಟಪಡುತ್ತಿದ್ದರು.ನಾನೂ ಮನಸ್ಸಿನಲ್ಲೇ ನಕ್ಕೆ.

Wednesday, July 28, 2010

'ನಲ್ಲಿ ಇದೆ,---- ನೀರಿಲ್ಲ!'

ಹೊಸ ಕವಿತೆಗನ್ನು ಬರೆಯಲಾಗುತ್ತಿಲ್ಲ.ಬ್ಲಾಗಿಗೆ ಏನು ಹಾಕಬೇಕು ಎಂದು ಯೋಚಿಸುತ್ತಿದ್ದಾಗ ಪುಸ್ತಕ ರಾಶಿಯಲ್ಲಿ ಇಪ್ಪತ್ತು ವರುಷಗಳ ಹಿಂದೆ ಬರೆದ ಕವಿತೆಗಳ ಡೈರಿಯೊಂದು ಸಿಕ್ಕಿತು.ಅದರಿಲ್ಲಿನ ಈ ಕವಿತೆ ಇಂದಿಗೂ ಪ್ರಸ್ತುತವೆನಿಸಿದ್ದರಿಂದ ಅದನ್ನು ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.ಈ ಕವಿತೆ ಬಳ್ಳಾರಿ ಜಿಲ್ಲಾ ಕಾವ್ಯ ಮಾಲಿಕೆ '97 ರಲ್ಲಿ ಪ್ರಕಟಗೊಂಡಿತ್ತು .
'ನಲ್ಲಿ ಇದೆ--,ನೀರಿಲ್ಲ!'
--------------------------------

ನಲ್ಲಿ ಇದೆ ನೀರಿಲ್ಲವೆಂದು 
ಗೊಣಗೋದೇಕೆ ಸ್ನೇಹಿತರೇ ?
ನಮ್ಮ ದೇಶದಲ್ಲಿ ಎಲ್ಲವೂ  ಹೀಗೇ
ಮಾರ್ಗವೇ ಇಲ್ಲಾ ಬೇರೆ!

ಕಾಲೆಜಿವೆ,ಸ್ಕೂಲುಗಳಿವೆ!
ನಿಮ್ಮ ಮಕ್ಕಳಿಗೆ ಮಾತ್ರ ಸೀಟಿಲ್ಲಾ!
ಪುಸ್ತಕಗಳು ಪ್ರಿಂಟ್ ಆಗಿದ್ರೂ 
ಮಾರ್ಕೆಟ್ಟಿಗೆ ಇನ್ನೂ ಬಂದಿಲ್ಲಾ !

ನಿಮಿಷಕ್ಕೊಂದು ಆಟೋ ಬಂದ್ರೂ
ನೀವು ಹೇಳಿದ ಕಡೆ ಬರೋಲ್ಲಾ !
ಅಕಸ್ಮಾತ್ತಾಗಿ ಬಂದ್ರೂನೂವೆ 
ಮೀಟರ್ ಸರಿಯಾಗಿರೋಲ್ಲಾ !  

ಕಛೇರಿಗಳೋ ಮಾರಿಗೊಂದು 
ಕೆಲಸ ಮಾತ್ರ ನಡೆಯೋಲ್ಲಾ 
ಅರ್ಜಿ ಮುಂದೆ ಸಾಗೋಲ್ಲಾ
ಯಾವುದೂ ಊರ್ಜಿತವಾಗೊಲ್ಲ!

ಧರ್ಮಗಳೋ ಲೆಕ್ಕ ಇಲ್ಲ 
ಅಧರ್ಮ ಅನ್ಯಾಯ ತಪ್ಪಿಲ್ಲ 
ಮನುಷ್ಯರೇನೋ ಸಾಕಷ್ಟಿದ್ದರೂ 
ಮನುಷ್ಯತ್ವವೇ ಕಾಣೋಲ್ಲಾ !

ನಲ್ಲಿ ಇದೆ ನೀರಿಲ್ಲವೆಂದು 
ಗೊಣಗೋದೇಕೆ ನೀವು ?
ಹೆಸರಿಗೆ ಮಾತ್ರಾ ಬದುಕ್ತಾ ಇಲ್ವಾ ?
ಅದರ ಹಾಗೇ ನಾವೂ !!! 

Saturday, July 24, 2010

'ಜೋಕಾಲೇಲಿ ಜೀಕು ! '

ನಾನು ಆಸ್ಪತ್ರೆಗೆ ಹೊರಡಲು ತಯಾರಾಗುತ್ತಿದ್ದೆ. ಆರನೇ ತರಗತಿ ಓದುತ್ತಿದ್ದ  ಪಕ್ಕದ ಮನೆಯ ಹುಡುಗಿ ಸ್ಮಿತಾ  ಬಂದು'ಅಂಕಲ್ ಶಾಲೆಯಲ್ಲಿ ಕಾಂಪಿಟೇಶನ್ ಇದೆ ,ನಮಗೆ ಒಂದು ಹಾಡು ಬರೆದುಕೊಂಡು ಬರಬೇಕು ಅಂತ ಹೇಳಿದ್ದಾರೆ ,ಪ್ಲೀಸ್ ಬರೆದುಕೊಡಿ ಅಂಕಲ್ 'ಎಂದು ಪೀಡಿಸತೊಡಗಿದಳು.'ಇವತ್ತು  ಲೇಟಾಯಿತಮ್ಮ ನಾಳೆ ಬರೆದುಕೊಡುತ್ತೀನಿ 'ಎಂದರೆ ಕೇಳಲಿಲ್ಲ.'ಟೀಚರ್ ಹೊಡೆಯುತ್ತಾರೆ ಅಂಕಲ್ 'ಎಂದು ಬಾಣ ಬಿಟ್ಟು, ಅಳತೊಡಗಿದಳು.ಈ ಟೀಚರ್ ಗಳು ಮಕ್ಕಳನ್ನು ಹೊಡೆದು ನಮ್ಮನ್ನೇಕೆ ಹೀಗೆ ಪೀಡಿಸುತ್ತಾರೆಂದು ನನಗೆ ಈಗಲೂ ಅರ್ಥವಾಗಿಲ್ಲ.'ಏನೋ ಒಂದು ಬರೆದುಕೊಡಿ,ಪಾಪ ಮಗು ಕೇಳುತ್ತೆ' ಎಂದು ನನ್ನವಳ ತಾಕೀತು ಬೇರೆ.ಆಗ ತಾನೇ ಕವಿತೆಗಳನ್ನು ಬರೆಯಲು ಶುರು ಮಾಡಿದ್ದೆ .ಸರಿ ,ಅವಸರದಲ್ಲೇ ಒಂದು ಹಾಡು ಬರೆದುಕೊಟ್ಟೆ.ಅದಕ್ಕೆ ಒಂದು ರಾಗವನ್ನೂ ಹಾಕಿ ಕೊಟ್ಟೆ.ಸ್ಮಿತಾ ಹಾಡು ಸಿಕ್ಕ ಸಂತೋಷದಲ್ಲಿ ಮನೆಗೆ  ಓಡಿದಳು.ಶಾಲೆಯಲ್ಲಿ ಆ ಹಾಡನ್ನು ಹಾಡಿ ಬಹುಮಾನವನ್ನೂ ಗಿಟ್ಟಿಸಿದಳು.ನಾನು ಮೊದಮೊದಲು ಬರೆದ ಗೀತೆಗಳಲ್ಲಿ ಇದೂ ಒಂದು.ನೀವೂ ನಿಮ್ಮ ಮಕ್ಕಳಿಗೆ ಈ ಹಾಡನ್ನು ಹೇಳಿಕೊಡಿ.ಹಾಡು ಇಷ್ಟವಾಯಿತೇ ತಿಳಿಸಿ.ನಮಸ್ಕಾರ.

ಜೀವನವೆಂಬ ಜೋಕಾಲೇಲಿ
ಮೇಲೇ ಕೆಳಗೆ ಜೀಕು !
ಕಷ್ಟ ಸುಖ ಎಲ್ಲಾ ಒಂದೇ 
ಅನ್ನೋ ಸಮತೆ ಬೇಕು !


ಹೂವಿನ ಜೊತೆಗೇ ಮುಳ್ಳೂಇರಲಿ 
ಗುಲಾಬಿ ಗಿಡದಲ್ಲಿ !
ಹಾಳೂ ಮೂಳೂ ಎಲ್ಲಾ ಇರಲಿ 
ಬಾಳಿನ ತೋಟದಲಿ !


ಹಸಿರಿನ ಜೊತೆಗೇ ಕೆಸರೂ ಇರಲಿ 
ತೋಟದ ಹಾದಿಯಲಿ !
ನೋವೂ ,ನಲಿವೂ ಎಲ್ಲಾ ಇರಲಿ 
ಬಾಳಿನ ರಾಗದಲಿ!

ಬೇವು ಬೆಲ್ಲ ಎಲ್ಲಾ ಇರಲು 
ಬಾಳು ಸೊಗಸಣ್ಣಾ !
ಸುಖವೊಂದನ್ನೇ ಬೇಡಲು ಬೇಡ 
ಅಯ್ಯೋ ಮಂಕಣ್ಣಾ !

 (ಚಿತ್ರ ಕೃಪೆ;ಅಂತರ್ಜಾಲ )

Wednesday, July 21, 2010

'ದಾಂಪತ್ಯ ಗೀತೆ '

ದಾಂಪತ್ಯ ಜೀವನವೆಂದರೆ ಒಲವು ನಲಿವಿನ ಜೊತೆ ಜೊತೆಗೇ ಸಿಟ್ಟು ಸೆಡವು,ಕೋಪ ತಾಪ,ಮೌನದ ಶೀತಲ ಸಮರ ,ಇವೆಲ್ಲಾ ಇದ್ದದ್ದೇ.ಮದುವೆಗೆ ಮೊದಲು ,ಸುಂದರ ಕನಸುಗಳದೇ ಸಾಮ್ರಾಜ್ಯ.ಅಲ್ಲಿ ಕಷ್ಟಗಳ ಇರುಸು ಮುರುಸು,ಮುನಿಸುಗಳ ಕಿನಿಸು ಇವುಗಳ ಸುಳಿವೂ ಇರುವುದಿಲ್ಲ.ದಾಂಪತ್ಯದ ಹಾದಿಯಲ್ಲಿ ಜೊತೆ ಜೊತೆಯಲಿ ಸಾಗಿ ,ಅಗ್ನಿಪರೀಕ್ಷೆಗಳಿಗೆ ಒಳಗಾಗಿ ಒಬ್ಬರನ್ನೊಬ್ಬರು ಅರಿತು ನಡೆದಾಗ, ಬಾಳು ಸಹನೀಯವಾಗುತ್ತದೆ.ನನ್ನ ಇಪ್ಪತ್ತೊಂಬತ್ತು ವರುಷಗಳ ದಾಂಪತ್ಯದಲ್ಲಿ ,ಶಾಂತಿ,ಸಹನೆ,ತಾಳ್ಮೆಯಿಂದ ನನ್ನ ಜೊತೆಗೂಡಿ ಬಂದ ನನ್ನ ಸಹ ಧರ್ಮಿಣಿಗೆ ಈ ದಿನ, ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಾ ಸುಮಾರು ಇಪ್ಪತ್ತು ವರುಷಗಳ ಹಿಂದೆ ಬರೆದ ಗೀತೆಯೊಂದನ್ನು ಬ್ಲಾಗಿನಲ್ಲಿ  ಹಾಕುತ್ತಿದ್ದೇನೆ.ಹೇಗಿದೆ ತಿಳಿಸಿ.ನಮಸ್ಕಾರ.

ನನ್ನ ನಿನ್ನ ನಡುವೆ 
ಯಾಕೇ ಈ ಗೋಡೆ ?
ಸಿಟ್ಟು ಅತ್ತ ಇಟ್ಟು 
ಸ್ವಲ್ಪ ಇತ್ತ ನೋಡೇ|

ನಾನು ಯಾರೋ ನೀನು ಯಾರೋ 
ಮನಸು ಮನಸು ಕೂಡಿ ,
ಒಲವು ಮೂಡಿತು ,ಮದುವೆಯಾಯಿತು 
ಒಂದೇ ಹಾಡ ಹಾಡಿ|

ಹಾಯಿ ಎರಡು ,ಹುಟ್ಟು ಎರಡು ,
ದೋಣಿ ಮಾತ್ರ ಒಂದೇ !
ಯಾತ್ರಿ ನಾವುಗಳು ಇಬ್ಬರಾದರೂ 
ಯಾನ ಮಾತ್ರ ಒಂದೇ |

ಮಾತೂ ಇರಲಿ ,ಮುನಿಸೂ ಇರಲಿ 
ಮೌನ ಮಾತ್ರ ಬೇಡ !
ನಮ್ಮಿಬ್ಬರ ನಡುವೆ ಎಂದೂ 
ಬಲೆ ನೇಯದಿರಲಿ ಜೇಡ |  

Monday, July 19, 2010

'ಶಾಪಗ್ರಸ್ತ -----ಯಕ್ಷರು !'

ಇಲ್ಲೇ ಇದ್ದಾರೆ ----!
ನಮ್ಮ ನಿಮ್ಮ ನಡುವೆ ,
ಗೊತ್ತೇ ಆಗದಂತೆ !
ಶಾಪಗ್ರಸ್ತ  ಯಕ್ಷರು!
ಈ ಅವ್ಯವಸ್ಥೆಯ ಆಗರದ 
ವ್ಯವಸ್ಥೆಯಲ್ಲಿ ಬೇಸತ್ತವರು ! 
ಕಾಡಿನ  ಕತ್ತಲಲ್ಲಿ 
ಮಿಂಚು  ಹುಳುವಾದವರು!
ತಾವೇ  ಬೆಳಕಾದವರು!
ರಾಜ  ಮಾರ್ಗದ  ಮರವಾಗಿ 
ಬೀಗ  ಬೇಕಿದ್ದವರು ,
ಗುಡ್ಡದ  ಕೆಳಗಿನ 
ಗರಿಕೆ  ಹುಲ್ಲಾಗಿ
ತಣ್ಣಗೇ  ಉಳಿದವರು!
ಇಂದ್ರಲೋಕವ  ಇಲ್ಲೂ 
ರಚಿಸ  ಬಲ್ಲಂಥವರು ,
ಅವಕಾಶವೇ  ಸಿಗದೆ
ತೆರೆಯ  ಮರೆಯಲ್ಲೇ 
ತಣ್ಣಗಾದವರು------!
ಕೂಗುವ ಕಾಗೆ ಕತ್ತೆಗಳಿಗೆ 
ರಂಗಸ್ಥಳವ ಬಿಟ್ಟುಕೊಟ್ಟು ,
ನೇಪಥ್ಯಕ್ಕೆ ಸರಿದವರು!
ಇಲ್ಲೇ ಇದ್ದಾರೆ --------!
ಗೊತ್ತೇ ಆಗದಂತೆ!  
ಪತ್ತೆಗೇ ಬಾರದಂತೆ !
ಎಲೆಯ ಹಿಂದಿರುವ 
ವನ ಸುಮದಂತೆ -----!
ಸೌರಭವ ಸೂಸುತ್ತಾ!
ನಮ್ಮೆಲ್ಲರ ನಡುವೆಯೇ 
ಶಾಪಗ್ರಸ್ತ ---ಯಕ್ಷರು !


(ಚಿತ್ರ ಕೃಪೆ;ಅಂತರ್ಜಾಲ)

Saturday, July 17, 2010

'ಪಾತರಗಿತ್ತಿ ಪಕ್ಕ'

ಆಸ್ಪತ್ರೆಯ ಡ್ರೆಸ್ಸಿಂಗ್ ರೂಮಿನಲ್ಲಿ ಪಟ್ಟಿ ಕಟ್ಟುತ್ತ ಇದ್ದ ಮಾಲಿಂಗ ನನ್ನ ರೂಮಿಗೆ ಬಂದು ಕರೆದು ಹೋದ .ಅಲ್ಲಿ ಇದ್ದ
ಸ್ಕ್ರೀನಿನ ಮೇಲೆ ರೆಕ್ಕೆಯ ಅಗಲ(wing span)ಸುಮಾರು ಏಳು ಇಂಚಿನಷ್ಟಿದ್ದ ಚಿಟ್ಟೆಯೊಂದು ಕುಳಿತಿತ್ತು.ಮೊದಲ ನೋಟಕ್ಕೆ
ಅದು ಚಿಟ್ಟೆ ಅನಿಸಿದರೂಅದೊಂದು ಪತಂಗದ(MOTHನ)ಒಂದು ಪ್ರಬೇಧವಿರಬಹುದು ಎನಿಸಿತು.ತಿಳಿದವರು ಹೆಚ್ಚಿನ ಮಾಹಿತಿ ನೀಡಲು
ಈ ಮೂಲಕ ವಿನಂತಿಸಿ ಕೊಳ್ಳುತ್ತೇನೆ .

Thursday, July 15, 2010

'ಬರಡು ಮನಕೆ ಹಸಿರು ಹೊದಿಕೆ'

ನಮ್ಮ ಮನೆಯ ಅನತಿ ದೂರದಲ್ಲೇ ಇದೆ ಈ ಪಾಳು ಬಿದ್ದ ಮನೆ.ಹೆಂಚು ಹಾರಿ ಹೋಗಿ ,ಕಿಟಕಿ ಬಾಗಿಳುಗಳಿಲ್ಲದೆ ಅನಾಥವಾಗಿ ನಿಂತಿದೆ.ಈ ಮನೆಯನ್ನು ನೋಡಿದಾಗಲೆಲ್ಲಾ ಏನೋ ಒಂದು ಅವ್ಯಕ್ತ ಭಾವನೆ . ಈ ಚಿತ್ರದ ಕುರಿತು ಕವಿತೆಯೊಂದನ್ನು ಬರೆಯಬೇಕೆಂದುಕೊಂಡಿದ್ದೇನೆ . ಇನ್ನೂ ಸಫಲತೆ ಸಿಕ್ಕಿಲ್ಲ.ನಮ್ಮ ಸುತ್ತ ಮುತ್ತ ಇರುವ ಹಲವರ ಬದುಕಿಗೂ ,ಈ ಪಾಳು ಬಿದ್ದ ಮನೆಗೂ ಸಾಕಷ್ಟು ಸಾಮ್ಯವಿದೆ ಎನಿಸುವುದಿಲ್ಲವೇ?ಇಲ್ಲೂ ಹಿಂದೊಮ್ಮೆಸಂತಸದ  ಬದುಕಿತ್ತಲ್ಲವೇ ?ಎನಿಸುತ್ತದೆ.ಚಿತ್ರಕ್ಕೆ ಶೀರ್ಷಿಕೆ ಏನು ಹಾಕಬೇಕೆಂದು ತಿಳಿಯದೇ,ಶೀರ್ಷಿಕೆಯೊಂದನ್ನು ಸೂಚಿಸುವಂತೆ ಕೋರಿದ್ದೆ.ಹಲವಾರು ಉತ್ತಮ ಶೀರ್ಷಿಕೆಗಳು ಹರಿದು ಬಂದವು.ಶೀರ್ಷಿಕೆ ಸೂಚಿಸಿದ ಎಲ್ಲರಿಗೂ ಧನ್ಯವಾದಗಳು.ಶ್ರೀಧರ್ ಅವರು ಕಳಿಸಿದ  ಶೀರ್ಷಿಕೆಯನ್ನು ಹಾಕಿದ್ದೇನೆ.ನಿಮ್ಮ ಪ್ರತಿ ಕ್ರಿಯೆಗಳಿಗೆ ಸ್ವಾಗತ.

Tuesday, July 13, 2010

'ನಾಯಿ ಪಾಡು '

ಪಾಪ ,ರಸ್ತೆಯ ಮೇಲೇ
ಮಲಗಿದೆ  ನಾಯಿ ----!
ಸುತ್ತಲಿನವರು  ತನಗೆ 
ಬೊಗಳಲು ಅವಕಾಶವನ್ನೇ 
ಕೊಡದಿರುವುದಕ್ಕಾಗಿ-----,
ತೆಪ್ಪಗಾಗಿದೆ ಅದರ ಬಾಯಿ !
ತಂಗಳು ಪೆಟ್ಟಿಗೆಯಲ್ಲಿ 
ಮೂರು ದಿನದ ತಂಗಳಿಟ್ಟು 
ತಿನ್ನುವವರು ಹೆಚ್ಚಾಗಿ ,
ತಿಪ್ಪೆ ಕೆದಕಿ ಪೆಚ್ಚಾಗಿ ,
ಹೊಟ್ಟೆಗೆ ಹಿಟ್ಟಿಲ್ಲದೇ ,
ರಸ್ತೆಯ ಮೇಲೆಯೇ ,
ಸಪ್ಪಗೆ ಮಲಗಿದೆ ನಾಯಿ !
ಇರದೆ ಬೇರೆ ದಾರಿ!
ಹರಿದು ಹೋದರೆ ಹೋಗಲಿ 
ದೊಡ್ಡದೊಂದು ಲಾರಿ 
ಎಂದು ಬೇಸರಗೊಂಡಂತೆ!
ಪ್ರಾಮಾಣಿಕತೆಯೇ ಸೊರಗಿ 
ಮೈ ಮುದುರಿಕೊಂಡಂತೆ !
ಬೆಪ್ಪಾಗಿ ಮಲಗಿದೆ ನಾಯಿ !