Saturday, October 23, 2010

"ಬದುಕಿನ ಪಯಣ"

ಸುಮಾರು  ಮೂವತ್ತು ವರ್ಷಗಳ  ಹಿಂದಿನ ಮಾತು.ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ,ಮೇ ತಿಂಗಳ ಒಂದು ದಿನ.ತಾರೀಕು ಸರಿಯಾಗಿ ನೆನಪಿಲ್ಲ.ರಾತ್ರಿ ಸುಮಾರು ಹತ್ತು ಗಂಟೆ .ವಿಪರೀತ ಸೆಕೆ.ನಿಲ್ದಾಣದಲ್ಲಿ ಜನಗಳ ಜಾತ್ರೆ.ಬೆಳಗ್ಗೆಯೆಲ್ಲಾ ದೆಹಲಿಯ ಸುಡು ಬಿಸಿಲಿಗೆ ಸುಟ್ಟು ಕರಕಲಾಗಿದ್ದೆ.ಹೋದ ಕೆಲಸ ಕೈ ಗೂಡದೆ ಮನಸ್ಸಿಗೆ ನೋವಾಗಿತ್ತು.  ಎಲ್ಲಾ ರೈಲುಗಳೂ ಭರ್ತಿಯಾಗಿದ್ದರಿಂದ,'ವಿಶೇಷ'ರೈಲೊಂದರಲ್ಲಿ ಬೆಂಗಳೂರಿಗೆ ಬರ್ತ್ ಒಂದನ್ನು ರಿಸರ್ವ್ ಮಾಡಿಸಿದ್ದೆ.ಆ 'ವಿಶೇಷ'ರೈಲು ಒಂದು ಗಂಟೆ ತಡವಾಗಿ ಬಂತು.ಟ್ರೈನು ಬಂದಾಗ ಬೋಗಿಯಲ್ಲಿ ದೀಪವಿರಲಿಲ್ಲ.ರಿಸರ್ವೇಶನ್ ಇಲ್ಲದವರೆಲ್ಲಾ ಎಲ್ಲಾ ಸೀಟುಗಳನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು.ರಿಸರ್ವೇಶನ್ ಇದ್ದವರು ತಗಾದೆ ತೆಗೆದಿದ್ದರು.ಟಿ.ಟಿ.ಯ ಪತ್ತೆಯೇ ಇರಲಿಲ್ಲ.ಹೇಳುವರು,ಕೇಳುವರು ಇಲ್ಲದೆ ಗದ್ದಲವೋ ಗದ್ದಲ.ಕೆಲವರು ಕೈ ಕೈ ಮಿಲಾಯಸಲು ಶುರು ಮಾಡಿದರು.ನಮ್ಮ ದೇಶದ ಅರಾಜಕತೆಯನ್ನು ಬಿಂಬಿಸುವ ಒಂದು ಮಿನಿ ಅಸೆಂಬ್ಲಿ ಯಂತಿತ್ತು  ಆ ಬೋಗಿ.ಅಷ್ಟರಲ್ಲಿ ದೇವ ಧೂತನಂತೆ ಮೇಲೆ ಮಲಗಿದ್ದ ಗಡ್ಡಧಾರಿ ವಿದೇಶಿ ಯುವಕನೊಬ್ಬ  ಮೆಲ್ಲಗೆ ಕೆಳಗಿಳಿದು ಬಂದ.ಎಲ್ಲರಿಗೂ ಕೈಮುಗಿದ.ತನ್ನ ಹರಕು ಮುರುಕು ಇಂಗ್ಲೀಷಿನಲ್ಲಿ ,'ದಯಮಾಡಿ ಜಗಳವಾಡಬೇಡಿ'ಎಂದು ಬೇಡಿಕೊಂಡ.ಜಗಳವಾಡುತ್ತಿದ್ದ ಪ್ರಯಾಣಿಕನೊಬ್ಬನಿಗೆ ತನ್ನ ಮೇಲಿನ ಬರ್ತ್ ಬಿಟ್ಟುಕೊಟ್ಟ.ಟ್ರೈನ್ ಹೊರಟು ಅಲ್ಲಿ ಶಾಂತಿ ನೆಲಸುವವರೆಗೂ ತನ್ನ ಬ್ಯಾಕ್ ಪ್ಯಾಕ್ ತಗುಲಿಸಿಕೊಂಡು ಅಲ್ಲೇ  ನಿಂತಿದ್ದ.ಅವನ ಮುಖದಲ್ಲಿ ಅಪೂರ್ವ ಕಾಂತಿಯಿತ್ತು.ಕಂಡೂ ಕಾಣದಂತೆ ಮುಗುಳು ನಗೆ ಇತ್ತು.ನನ್ನ ಪಕ್ಕ ಸ್ವಲ್ಪ  ಜಾಗ ಮಾಡಿ ಕೊಟ್ಟು, ಕುಳಿತುಕೊಳ್ಳುವಂತೆ ಹೇಳಿದೆ.ಬ್ಯಾಕ್ ಪ್ಯಾಕ್ ಕೆಳಗಿಟ್ಟು ನನ್ನ ಪಕ್ಕ ಕುಳಿತ.ಎಲ್ಲರಿಗೂ ಅವನ ಬಗ್ಗೆ ಕುತೂಹಲ.ನಿಧಾನವಾಗಿ ತನ್ನ ಬಗ್ಗೆ ಹೇಳ ತೊಡಗಿದ.ಅವನದು ಇರಾನ್ ನಲ್ಲಿ ಒಂದು ಸಣ್ಣ ಊರು.ಇವನ ತಂದೆ ಅಲ್ಲಿನ ಎಲೆಕ್ಟ್ರಿಸಿಟಿ ಬೋರ್ಡಿನ ನೌಕರನಾಗಿ ಆಗ ತಾನೆ ನಿವೃತ್ತಿ ಹೊಂದಿದ್ದ.ಇರಾನ್ ,ಇರಾಕ್ ನಡುವೆ ಯುದ್ದ ಶುರುವಾಗಿ ಕೆಲವು ವರ್ಷಗಳಾಗಿತ್ತು.ಇವನ ಊರಿನಿಂದ ಯುದ್ಧಕ್ಕೆ ಹೋದಇವನ  ಹಲವಾರು ಸ್ನೇಹಿತರು ಯುದ್ಧದಲ್ಲಿ ಸತ್ತಿದ್ದರು.ಇವನಿಗೂ ಯುದ್ಧಕ್ಕೆ ಸೇರುವಂತೆ ಕರೆ ಬಂದಿತ್ತು .ಇವನ ತಂದೆ ತಾಯಿಗಳಿಗೆ ತಮ್ಮ ಒಬ್ಬನೇ ಮಗನನ್ನು ಯುದ್ಧಕ್ಕೆ ಕಳಿಸಲು ಇಷ್ಟವಿರಲಿಲ್ಲ.ಅವನ ತಂದೆ  ರಿಟೈರ್ ಮೆಂಟಿನಿಂದ ಬಂದ ತನ್ನ ಎಲ್ಲಾ ಹಣವನ್ನೂ ಖರ್ಚು ಮಾಡಿ ,ಅವರಿವರನ್ನು ಹಿಡಿದು ಅವನಿಗೆ ಬೇರೆ ಯಾರದೋ ಹೆಸರಿನಲ್ಲಿ ಪಾಸ್ ಪೋರ್ಟ್ ಕೊಡಿಸಿ 'ನೀನು ಜೀವಂತವಾಗಿದ್ದರೆ ಸಾಕು ಮಗು.ಪ್ರಪಂಚ ವಿಶಾಲವಾಗಿದೆ. ಎಲ್ಲೋ ಒಂದು ಕಡೆ ನಿನಗೆ ಆಶ್ರಯ ಸಿಗುತ್ತದೆ.ಇಲ್ಲಿ ಯುದ್ಧದಲ್ಲಿ ಸಾಯಬೇಡ.ಎಲ್ಲೋ ಒಂದು ಕಡೆ  ನೀನು ಬದುಕಿದ್ದರೆನಮಗೆ ಅಷ್ಟೇ  ಸಾಕು'ಎಂದು  ಅವನನ್ನು ಅಲ್ಲಿಂದ ಸಾಗ ಹಾಕಿದ್ದ.ಅವನು ಮೊದಲು ಯಾವುದೋ ಬೇರೆ ದೇಶದಲ್ಲಿ ಸ್ವಲ್ಪ ದಿನ ಇದ್ದು, ಒಂದು ತಿಂಗಳ ಕೆಳಗೆ ದೆಹಲಿಗೆ ಬಂದಿದ್ದ.ಅಲ್ಲಿ ಫುಟ್ ಪಾತಿನಲ್ಲಿ ಮಲಗುತ್ತಾ ,ಬ್ರೆಡ್ಡು ,ಮೊಟ್ಟೆ ತಿಂದು ಹಸಿವೆ ನೀಗಿಕೊಳ್ಳುತ್ತಾ ಆಶ್ರಯಕ್ಕಾಗಿ  ಹಲವಾರು ಕನ್ಸಲೇಟ್  ಗಳಿಗೆ  ಅಲೆಯುತ್ತಾ ಒಂದು ತಿಂಗಳು ಕಳೆದಿದ್ದ.ಇನ್ನು ಕೆಲವು ದಿನಗಳಲ್ಲಿ ನಮ್ಮ ದೇಶ ಬಿಟ್ಟು ಹೋಗಬೇಕಾಗಿತ್ತು.ಇಲ್ಲಿಂದ ಶ್ರೀಲಂಕಾಗೆ ಹೋಗಿ ಅಲ್ಲಿ ಆಶ್ರಯಕ್ಕಾಗಿ ಪ್ರಯತ್ನಿಸುವುದಾಗಿ ಹೇಳಿದ.ಯುದ್ಧ ನಿಂತ ಮೇಲೆ ಮನೆಗೆ ಹಿಂದಿರುಗುವುದಾಗಿಯೂ,ಯಾವು ದಾದರೂ ಕೆಲಸಕ್ಕೆ ಸೇರುವ ಮುನ್ನ ಸ್ವಲ್ಪ ದಿನ ಮನೆಯಲ್ಲಿದ್ದು ಕವಿತೆಗಳನ್ನು  ಓದುತ್ತಾ, ವಯಸ್ಸಾದ ಅಮ್ಮನಿಗೆ ಅಡಿಗೆ ಮನೆಯಲ್ಲಿ ಪಾತ್ರೆ ತೊಳೆಯಲು ಸಹಾಯಮಾಡುವುದಾಗಿ ಹೇಳಿದ.ಜೀವಂತವಾಗಿರುವುದೇ ಒಂದು ಸಂತಸದ ವಿಷಯವಲ್ಲವೇ?ಅದನ್ನು ಹೀಗೆ  ಪರಸ್ಪರ ಕಚ್ಚಾಡಿಕೊಂಡು ಹಾಳು ಮಾಡಿಕೊಳ್ಳುವುದುಸರಿಯೇ ?ಎಂದು ಕೇಳಿದ. ಹಾಗೆ ಹೇಳುವಾಗ ಅವನ ಕಣ್ಣುಗಳಲ್ಲಿ ನೀರಿತ್ತು.ರಾತ್ರಿ ಹನ್ನೆರಡಾಗುತ್ತಿತ್ತು.ಟ್ರೈನಿನ 'ಧಡ ಬಡ'  ಸದ್ದಿನ ಜೋಗುಳಕೆ ಹಲವರು ಕುಳಿತಲ್ಲೇ ತೂಕಡಿಸುತ್ತಿದ್ದರು.ಅವನು ತನ್ನ ಬ್ಯಾಕ್ ಪ್ಯಾಕ್ ಎತ್ತಿಕೊಂಡು ಟಾಯ್ಲೆಟ್ ನ ಹತ್ತಿರದ ಪ್ಯಾಸೇಜ್ ನಲ್ಲಿ  ,ಕೆಳಗೆ ನ್ಯೂಸ್ ಪೇಪರ್ ಹಾಸಿಕೊಂಡು ಅದರ ಮೇಲೆ ಕುಳಿತು ಚೀಲದಿಂದ ಕೊಳಲೊಂದನ್ನು ಹೊರತೆಗೆದು,ಜಗದ ಚಿಂತೆಗಳಿಗೆ ಇತಿಶ್ರೀ ಹಾಡುವಂತೆ ಇಂಪಾದ ರಾಗವೊಂದನ್ನು ನುಡಿಸ ತೊಡಗಿದ.ಟ್ರೈನಿನ ಕಿಟಕಿಯ ಹೊರಗೆ ನೋಡಿದೆ.ಓಡುವ ,ಮರ,ಗಿಡ,ಹೊಲ,ಗದ್ದೆಗಳ ಮೇಲೆ ತಣ್ಣಗೆ ಬೆಳದಿಂಗಳು ಹರಡಿತ್ತು. ಟ್ರೈನಿನ ಒಳಗೆ ಇಂಪಾದ ಕೊಳಲಿನ ನಾದ.'ಬುದ್ಧ,ಬುದ್ಧ ,ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ'ಎಂಬ ಕವಿತೆಯೊಂದರ ಸಾಲುಗಳು ನೆನಪಾದವು.

30 comments:

 1. ಡಾಕ್ಟ್ರೇ,

  ನಾವು ಎಲ್ಲಾ ಚೆನ್ನಾಗಿದ್ದು ಹೀಗೆ ಕಿತ್ತಾಡುತ್ತೇವೆ. ಅವನ ಪರಿಸ್ಥಿತಿಯನ್ನು ನೋಡಿದಾಗಲಾದರೂ ತಿದ್ದಿಕೊಳ್ಳಬೇಕು. ನಮಗಿಂತ ಪ್ರಪಂಚ ತುಂಬಾ ಹಾಳಾಗಿದೆ. ನಾವೇ ಸದ್ಯ ಸ್ವರ್ಗದಲ್ಲಿದ್ದೇವೆ ಎಂದುಕೊಂಡು ಹೊಂದಿಕೊಳ್ಳುವುದನ್ನು ಕಲಿಯಬೇಕು..ಅರ್ಥಪೂರ್ಣವಾದ ಅನುಭವ ಲೇಖನವನ್ನು ಕೊಟ್ಟಿದ್ದಕ್ಕೆ ಥ್ಯಾಂಕ್ಸ್.

  ReplyDelete
 2. ಡಾಕ್ಟ್ರೆ,

  ಲೇಖನ ಚೆನ್ನಾಗಿತ್ತು ಇರಾನಿನವನ ಮಾತು ಇಷ್ಟ ಆಯ್ತು..ನಿಜ ಅಲ್ವ ಅವನು ಹೇಳಿದ ಮಾತು ಇರುವ ನಾಲ್ಕು ದಿನಕ್ಕೆ ಯಾಕೆ ಜಗಳ ,ಕದನ ಎಲ್ಲಾ ಆಲ್ವಾ??

  ReplyDelete
 3. ತುಂಬ ವಿಸ್ಮಯಕಾರಿ ವ್ಯಕ್ತಿ. ಅಷ್ಟೇ ವಿಸ್ಮಯಕಾರಿ ಘಟನೆ. ಜೀವನದಲ್ಲಿ ಇಂತಹವರು ಯಾವಾಗಲಾದರೊಮ್ಮೆ ಸಿಕ್ಕಾಗ ಖುಶಿಯಾಗದೇ ಇರದು.

  ReplyDelete
 4. ಇ೦ತಹ ಅಪೂರ್ವ ಘಟನೆಗಳು ಜೀವನದಲ್ಲಿ ನಡೆಯುತ್ತಿದ್ದರೆ, ಜೀವನದ ಮೌಲ್ಯಗಳು ಇನ್ನೂ ಜೀವ೦ತವಾಗಿವೆ ಎ೦ಬ ನ೦ಬಿಕೆ ಹುಟ್ಟುತ್ತದೆ. ಹೃದಯಸ್ಪರ್ಶಿಯಾಗಿತ್ತು ಡಾ. ಸರ್. ಧನ್ಯವಾದಗಳು.

  ಅನ೦ತ್

  ReplyDelete
 5. ಡಾಕ್ಟರ್ ಆ ಅಪರಿಚಿತ ಅಲ್ಲಿದ್ದವರಿಗಷ್ಟೆ ಅಲ್ಲ ನಮಗೂ ಜೀವನ ಪಾಠಹೇಳಿದ್ದಾನೆ. ನಿಮ್ಮ ಅನುಭವದ ಮೂಸೆಯಲ್ಲಿ
  ಇನ್ನೂ ಎಷ್ಟು ಜನರ ಸಹವಾಸ ಅವರಿಂದ ದೊರೆಯುವ ಜೀವನಪಾಠಗಳಿವೆಯೋ...

  ReplyDelete
 6. ಒಳ್ಳೆ ಅನುಭವ.. ಒಳ್ಳೆಯ ಪಾಠ..

  ReplyDelete
 7. ಮಾನವೀಯತೆ ಮೆರೆದ ಇರಾನಿ ಪ್ರಜೆಯ ಬಗ್ಗೆ ಹೆಮ್ಮೆ ಆಯಿತು.ಸ್ವಾತಂತ್ರ್ಯದ ಬೆಲೆ ತಿಳಿ ಹೇಳಿದ ಅವನ ಮುಂದೆ ನಮ್ಮ ಸ್ವೇಚ್ಚೆಯ ಸ್ವಾತಂತ್ರ್ಯ ಹಾಳುಮಾದುತಿರುವ ಬಗ್ಗೆ ವಿಷಾದವಾಯಿತು.ಉತ್ತಮ ಲೇಖನ ನಿಮಗೆ ಧನ್ಯವಾದಗಳು.

  ReplyDelete
 8. ತುಂಬಾ ಸುಂದರವಾಗಿ ಬರೆದಿದ್ದೀರ. ಬರವಣಿಗೆ ಇಷ್ಟವಾಯಿತು. ವಿದೇಶಿಗನಿಗೆ hats off.. :) ಲೇಖನ ಬರೆದ ನಿಮಗೂ ..:)

  ReplyDelete
 9. ಇರುವಷ್ಟು ದಿನ ನ್ಯಾಯಕ್ಕಾದರೂ ಹೋರಾಡಬೇಕು. ಆದರೆ ಎಲ್ಲರಿಗೂ ಇದು ಆಗುವುದಿಲ್ಲ. ಕೊನೆಯ ಪಕ್ಷ ಇರುವಷ್ಟು ದಿನ ನ್ಯಾಯದ ಪರವಾಗಿಯಾದರೂ ಮಾತನಾಡಬೇಕು.

  ReplyDelete
 10. ಸರ್,
  ನನಗೆ ಹೇಳಿದ ಹಾಗೇ ಬರೆದಿದ್ದೀರಾ...... ಸ್ವಲ್ಪ ಗಡಿಬಿಡಿಯಾಯಿತು ಎನಿಸಿತು ಅಷ್ಟೆ...... ತುಂಬಾ ಚೆನ್ನಾಗಿ ಬರೆದಿದ್ದೀರಿ ನಿಮ್ಮ ಅಮೋಘ ಅನುಭವವ...... ಆತನ ಜೀವನ ಉತ್ಶಾಹಕ್ಕೆ hats off... ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದ ಸರ್........

  ReplyDelete
 11. ಇರಾನಿ ಪ್ರಜೆಯ ಮಾನವೀಯತೆ ಮೆಚ್ಚುವಂತದ್ದು...
  ನಮಗೂ ಒಳ್ಳೆ ಜೀವನಪಾಠ ಕಲಿಸಿದ್ದೀರ.....ಧನ್ಯವಾದಗಳು...

  ReplyDelete
 12. ಮನ ತಟ್ಟುವಂಥಹ ಅನುಭವ... ಆತನ ಅಪ್ಪನು ಹೇಳಿದ ಒಂದು ಮಾತು ನನ್ನ ಮನಸ್ಸಿಗೆ ಬಹಳ ತಟ್ಟಿತು “ನೀನು ಜೀವಂತವಾಗಿದ್ದರೆ ಸಾಕು ಮಗು.ಪ್ರಪಂಚ ವಿಶಾಲವಾಗಿದೆ. ಎಲ್ಲೋ ಒಂದು ಕಡೆ ನಿನಗೆ ಆಶ್ರಯ ಸಿಗುತ್ತದೆ.ಇಲ್ಲಿ ಯುದ್ಧದಲ್ಲಿ ಸಾಯಬೇಡ.ಎಲ್ಲೋ ಒಂದು ಕಡೆ ನೀನು ಬದುಕಿದ್ದರೆನಮಗೆ ಅಷ್ಟೇ ಸಾಕು”. ಈ ಮಾತನ್ನು ಹೇಳುವಾಗ ಆತನ ಹೃದಯದಲ್ಲಿ ಎಷ್ಟು ನೋವು ಇದ್ದೀತೊ ಏನೊ..
  ಈ ಮನ ತಟ್ಟುವಂಥಹ ವಿಷಯಗಳು ನಮಗೆ ಇಂಥಹ ಅನುಭವಗಳಿಂದಾನೇ ಅರಿವಾಗುವುದು..
  ಧನ್ಯವಾದಗಳು ಕೃಷ್ನಮೂರ್ಥಿಯವರೆ..

  ReplyDelete
 13. ಲೇಖನ ತುಂಬಾ ಚೆನ್ನಾಗಿ ಉತ್ತಮವಾದ ಅನುಭೂತಿಯನ್ನು ಹೊಂದಿದೆ ಧನ್ಯವಾದಗಳು ಸರ್.

  ReplyDelete
 14. ಬುದ್ದ ಹೇಳಿದ ಮಾತುಗಳು " ಮಾತು ಬರದವನು ಜಗಳ ಮಾಡ್ತಾನೆ, ಜಗಳ ಆಡಲು ಬರದವನು ಕೊಲೆ ಮಾಡ್ತಾನೆ"
  ಮಾತಿನಲ್ಲಿ ಬಗೆಹರಿಸಿಕೊಳ್ಳದ ಸಮಸ್ಯೆಯೇ ಇಲ್ಲ . . . .ಯಾಕ್ ಕಿತ್ತಾಡ್ತಾರೋ ಸುಮ್ನೆ :-(

  ReplyDelete
 15. @shivu,@shashi jois,@sunaath,@Ananthraj,@umesh desai,@chukkichittaara,@nimmalagobba baaloo,@soumya,@subramanya maachikoppa,@Dinakar mogera,@saviganasu,@Bhaavanarao,@vasanth,@NRK;ಆಸ್ಥೆಯಿಂದ ಓದಿ ,ನಲ್ಮೆಯಿಂದ ಪ್ರತಿಕ್ರಿಯಿಸಿದ್ದಕ್ಕೆ ಎಲ್ಲರಿಗೂ ಅನಂತ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ಎಲ್ಲರಿಗೂ ನಮಸ್ಕಾರ.

  ReplyDelete
 16. chenagide sir... ondu sundar hitavachana dinda kudida lekan.. ella manusyaru arta maadi kondu bedukuvude uttama..

  ReplyDelete
 17. ಬದುಕಿಗಾಗಿ ಅಲ್ಲದೇ ನೆಲ-ಜಲಕ್ಕಾಗಿ, ಹೆಣ್ಣು-ಹೊನ್ನಿಗಾಗಿ ಬಹಳ ಬಡಿದಾಡುವ ಜನರನ್ನು ಜಗತ್ತಿನಾದ್ಯಂತ ಕಾಣುತ್ತೇವೆ, ವ್ಯಕ್ತಿಗೆ ಇನ್ನೇನು ಗಲ್ಲು ಶಿಕ್ಷೆ ಎಂದಾಗ ಆತನಿಗೆ ಬದುಕಿನಲ್ಲಿ ತನ್ನ ತೀರದ ದಾಹ ನೆನಪಾಗುವುದಂತೆ, ಇಲ್ಲಿ ಇರಾನ್ ನಲ್ಲಿ ಯುದ್ಧದಲ್ಲಿ ಬದುಕುವರೋ ಸಾಯುವರೋ ಎಂಬಂತಿರುವ ಪಾಲಕರನ್ನು ತೊರೆದು ಆ ಚಿಂತೆಯನ್ನು ಮನದಲ್ಲಿ ಹೊತ್ತು, ಪ್ರೀತಿಯಿಂದ ಸಲಹಿದ ಪಾಲಕರನ್ನು ಅಲ್ಲೇ ಬಿಟ್ಟು ಬಂದ ಮನಸ್ಸಿಗೆ ಶಾಂತಿ ಬೇಕಾಗಿದೆ-ಹಾಗಾಗಿ ಕೊಳಲು! ತಾವು ಏನೇ ಆದರೂ ಮಗ ಚೆನ್ನಾಗಿರಲಿ ಎಂಬುದು ಎಷ್ಟು ಸಹಜ ಬಯಕೆ ಅಲ್ಲವೇ ? ಮಗನ ಉಳಿವಿಗಾಗಿ ಹಣಹೊಂದಿಸಿ ಆತನನ್ನು ಅಗಲುವಂತೆ ಹೇಳಿದ ಆ ಘಟನೆ ಮಹಾಭಾರತದಲ್ಲಿ ಅನೇಕ ರಾಜಕುವರರನ್ನು ಯುದ್ಧಕ್ಕೆ ಕಳಿಸುವಾಗ ಅವ್ರ ಪಾಲಕರು " ಮಗನೇ ದುರವೀಳ್ಯವನ್ನು ಕೊಡುತ್ತಿದ್ದೇನೆ, ಬದುಕಿದ್ದರೆ ಮತ್ತೆ ಸಿಗೋಣ " ಎಂಬ ದೃಶ್ಯಗಳು ಮನದತುಂಬಾ ಹರಿದಾಡಿದವು. ಇದು ಬದುಕಿನ ಪಯಣವಲ್ಲ, ಬದಲಾಗಿ ಇದಕ್ಕೆ ' ಕೊಳಲಿನೊಳಗೊಂದು ಕೊಳಲು' ಎಂದಿದ್ದರೆ ತಲೆಬರಹ ಅನ್ವರ್ಥವಾಗುತ್ತದೇನೋ ಎನಿಸಿತು. ಅಂತೂ ಜೀವನ ಬಂಡಿಯಲ್ಲಿ ನೀವೂ ಉಂಡು ನಮಗೂ ಉಣಬಡಿಸುವ ನಿಮ್ಮ ಕೆಲಸ ಸ್ಮರಣೀಯ, ಬರೆಯುತ್ತಲೇ ಇರಿ, ಕುವೆಂಪು ಹೇಳಿದ ಹಾಗೇ "ಎಲ್ಲಿಯೂ ನಿಲ್ಲದಿರು " ಎಂಬ ತತ್ವವನ್ನು ಹೇಳುತ್ತಿದ್ದೇನೆ, ಬಹಳ ಆಪ್ತತೆ ತುಂಬಿದ ಬರಹ, ಕಣ್ಣುಗಳು ಆರ್ದ್ರತೆಯಿಂದ ಕೂಡಿವೆ, ಮೊದಲು ಮಾನವನಾಗು ಎಂಬ ಹಾಡು ನೆನಪಿಗೆ ಬಂತು.....ಹೀಗೇ ಇನ್ನೇನೇನೋ ಭಾವಗಳ ಸಮ್ಮಿಳಿತ ನನ್ನಲ್ಲಿ, ಧನ್ಯ ತಾಯಿ ಭಾರತಿ, ಬರೆದ ನಿಮಗೆ ನೂರೆಂಟು ನಮಸ್ಕಾರಗಳು.

  ReplyDelete
 18. ನಿಮ್ಮದು ಅಪೂರ್ವ ಅನುಭವ, ಆತನೊಬ್ಬ ವಿಶಿಷ್ಟ ವ್ಯಕ್ತಿ, ಅದನ್ನು ನೀವು ಬರೆದು ಬ್ಲಾಗ್ ಮೂಲಕ ಹ೦ಚಿಕೊ೦ಡ ರೀತಿಯೂ ಅನನ್ಯ.

  ReplyDelete
 19. ALLI BADUKUVADE GUARANTEE ELLA, NAMMALLI DUDDU KOTTAROO SAULABHYAGALU DORAKUVA KHATARIELLA.NIMMA ANUBHAVA NAMMADAYITU.DHANYAVADAGALU.

  ReplyDelete
 20. ತುಂಬಾ ಸಂದೇಶಗಳನ್ನೋಳಗೊಂಡ ವಿಸ್ಮಯಕಾರಕ ಘಟನೆ ಹೇಳಿದ್ದಿರಾ...
  ಧನ್ಯವಾದಗಳು.

  ReplyDelete
 21. @ವಿ.ಆರ್.ಭಟ್ ಸರ್,@ಹಳ್ಳಿ ಹುಡುಗ ತರುಣ್@ಪರಾಂಜಪೆ ಸರ್,@ಶ್ರೀಕಾಂತ್,@ಹೇಮಚಂದ್ರ @ಸೀತಾರಾಂ ಸರ್;ಓದಿ ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲಾ ಮಹನೀಯರಿಗೂ ಅನಂತ ಧನ್ಯವಾದಗಳು.ನಮಸ್ಕಾರ.

  ReplyDelete
 22. ನಿಜಕ್ಕೂ ಈ ಘಟನೆ ಎಷ್ಟೆಲ್ಲಾ ಗಂಭೀರ ವಿಚಾರಗಳನ್ನು ಹೇಳುತ್ತಿದೆ.

  ReplyDelete
 23. ನಿಮ್ಮ ಜೀವನದ ನೆನಪುಗಳು,ಅನುಭವಗಳು ಅನೇಕ ಒಳ್ಳೆಯ ವಿಷಯಗಳನ್ನು ತಿಳಿಸುತ್ತಿವೆ.ಧನ್ಯವಾದಗಳು.

  ReplyDelete
 24. @ವಿ.ರಾ.ಹೆ.@ಮನಮುಕ್ತಾ;ಕೆಲವೊಂದು ವಿಶಿಷ್ಟ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡಾಗ ನಿಜಕ್ಕೂ ತುಂಬಾ ಸಂತೋಷವಾಗುತ್ತದೆ.ಬ್ಲಾಗಿನ ಮೂಲಕ ನಮಗೆ ಅಂತಹದೊಂದು ಅವಕಾಶ ಸಿಕ್ಕಿದೆ.ಆಸ್ಥೆಯಿಂದ ಓದಿ ಪ್ರತಿಕ್ರಿಯಿಸಿದ್ದಕ್ಕೆ ಅನಂತ ಧನ್ಯವಾದಗಳು.ನಮಸ್ಕಾರ.

  ReplyDelete
 25. ಗ್ರೇಟ್! ಥ್ಯಾಂಕ್ಸ್ ಫಾರ್ ದಿಸ್ ಪೋಸ್ಟ್ ಡಾಕ್ಟರ್..

  ReplyDelete
 26. ಹೃದಯಸ್ಪರ್ಶಿ ಲೇಖನ. ಇದನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  ReplyDelete
 27. ಸುಶ್ರುತ ದೊಡ್ಡೇರಿ ಮತ್ತು ಹರೀಶ್ ;ಇಬ್ಬರಿಗೂ ನನ್ನ ಬ್ಲಾಗಿಗೆ ಸ್ವಾಗತ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರೆಯಲಿ.ನಮಸ್ಕಾರ.

  ReplyDelete
 28. ಪ್ರಯಾಣದ ಪ್ರಯಾಸವೂ
  ಇರಾಕ್ ನ ಸಮರ ಗಾಥೆಯೂ
  ಸುಂದರ ಅನುಭವ....

  ReplyDelete
 29. ವಿಚಿತ್ರ ಹಾಗು ಅಪೂರ್ವ ಅನುಭವ. ಕೆಲವೊಮ್ಮೆ ನಮ್ಮ ಆಸೆಗಳಲ್ಲಿ ಕಣ್ಣ ಮುಂದೇ ಇರುವ ಸಂತೋಷಗಳನ್ನು ಮರೆತುಬಿಡುತ್ತೇವೆ. ಒಳ್ಳೆಯ ಪಾಠ. ನಿಮ್ಮ ಬರವಣಿಗೆ ಇಷ್ಟವಾಯಿತು :)

  ReplyDelete