Sunday, April 25, 2010

ಮಾಸಿದ ಕೋಟು -ಭಾಗ 2 (ಮುಂದುವರೆದ ಭಾಗ)

ಈಗ "ಮಾಸಿದ ಕೋಟಿನ"ಕಥೆಯ ಮುಂದಿನ ಭಾಗವನ್ನು ಓದಿ ,ನಂತರ ನಿಮ್ಮ ಅಭಿಪ್ರಾಯ ತಿಳಿಸಿ:ವೈದ್ಯರು,ನಡೆದ ಆಕಸ್ಮಿಕ ಘಟನೆ ಯಿಂದ ಅವಾಕ್ಕಾದರು!ಮಾತೇ ಹೊರಡಲಿಲ್ಲ!ಆದರೂ ತಕ್ಷಣ ಸಾವರಿಸಿಕೊಂಡು,ಆ ಮಾಸಿದ ಕೋಟಿನ ವ್ಯಕ್ತಿಯನ್ನು ವಾಪಸ್ಸು ಕರೆದು ಕೂರಿಸಿದರು.ವ್ಯಕ್ತಿ ಬಿಕ್ಕಿ,ಬಿಕ್ಕಿ ಅಳುತ್ತಿದ್ದ!ಅವನನ್ನು ಸಮಾಧಾನ ಪಡಿಸಿದ ನಂತರ ವೈದ್ಯರು'ನೋಡಪ್ಪಾ,ನೀನು ಫೀಸು ಕೊಡಲಿಲ್ಲಅಂತ ತಕ್ಷಣ ಸಿಟ್ಟು ಬಂತು.ಕೋಪದಲ್ಲಿ ಏನೋ ಹೇಳಿಬಿಟ್ಟೆ ಅಂತ ಬೇಜಾರು ಮಾಡಿಕೋ ಬೇಡ,ನಿನ್ನ ಕತೆ ಏನು?'ಎಂದರು.ಅದಕ್ಕೆ ಆತ 'ಆರು ತಿಂಗಳ ಕೆಳಗೆ ನನ್ನ ಹೆಂಡತಿ ತೀರಿಕೊಂಡಳು ಸಾರ್ ,ನನಗೆ ಜೀವನಾನೆ ಬೇಡ ಅನ್ನಿಸಿತ್ತು.ಆತ್ಮಹತ್ಯೆ ಮಾಡಿ ಕೊಳ್ಳೋಣ ಅಂತಿದ್ದೆ.ನೀವು ಫೀಸು ಕೊಡದೆ ಇದ್ದರೂ, ಚಿಕೆತ್ಸೆ ಮಾಡಿದಿರಿ!ಈಗ ಅವಳ ಒಡವೆ ಗಿರವಿ ಇಟ್ಟು ಹತ್ತು ಸಾವಿರ ತಂದಿದ್ದೀನಿ.ನಿಮ್ಮ ಋಣ ಈ ಜನ್ಮದಲ್ಲಿ ತೀರಿಸೋಕೆ ಆಗೋಲ್ಲ.ಹಾಗೇ ಹತ್ತು ಸಾವಿರಕೊಟ್ಟರೆ,ನೀವುತೊಗೊಳಲ್ಲಾ.ಅದಕ್ಕೇನನಗೆ ಬಹಳ ಇಷ್ಟವಾದ ಈ ಕೋಟಿನಲ್ಲಿ ಇಟ್ಟು ಕೊಟ್ಟೆ .ಈ ಕೋಟೂ ಅವಳೇ ಯಾವುದೋ ಹಬ್ಬಕ್ಕೆ ಅಂತ ನನಗೆ ತಂದು ಕೊಟ್ಟಿದ್ದು ಸಾರ್'ಎಂದ.ಈಗ ವೈದ್ಯರ ಕಣ್ಣಲ್ಲಿ ನೀರಿತ್ತು!ವೈದ್ಯರು ನಿಧಾನವಾಗಿ ಹೇಳಿದರು'ನೋಡಪ್ಪಾ ನನಗೆ ನಿನ್ನ ಈ ಹಣದ ಅವಶ್ಯಕತೆಇಲ್ಲ.ದೇವರು ಸಾಕಷ್ಟು ಹಣ ಕೊಟ್ಟಿದ್ದಾನೆ.ಎಷ್ಟೋ ಜನ ಚಿಕಿತ್ಸೆ ಪಡೆದವರು ತಿರುಗಿಯೂ ನೋಡುವುದಿಲ್ಲ .ಈ ಹಣದಿಂದ ಯಾರಾದರೂ ಕಷ್ಟದಲ್ಲಿ ಇದ್ದವರಿಗೆ ನೀನೂ ಸಹಾಯ ಮಾಡು ಎಂದು ,ಆ ಹಣವನ್ನು ಅವನಿಗೇ ಹಿಂದಿರುಗಿಸಿ,ಅವನನ್ನು ಬಾಗಿಲಿನ ತನಕ ಬಂದು ಬೀಳ್ಕೊಟ್ಟರು.ಆಗ ರಾತ್ರಿ ಒಂಬತ್ತರ ಸಮಯ.ಕ್ಲಿನಿಕ್ಕಿನ ಬಾಗಿಲು ಮುಚ್ಚುವ ವೇಳೆಯಾಗಿತ್ತು.ಟೇಬಲ್ ಮೇಲೆ ಇದ್ದ ಬುದ್ದನ ಪ್ರತಿಮೆಯ ನಗು ಹೊರಗೆಲ್ಲಾ ತಣ್ಣನೆ ಬೆಳದಿಂಗಳಾಗಿ ಹರಡಿತ್ತು.

Wednesday, April 21, 2010

' ಮಾಸಿದ ಕೋಟು '{ ಭಾಗ -1}

ಹೀಗೊಂದು ಪುಟ್ಟ ಕಥೆ .ಎಂದೋ ಓದಿದ್ದು.ನಿಮಗೆಲ್ಲಾ ಹೇಳಬೇಕು ಅಂತ ಅನ್ನಿಸಿತು .ಹೇಳಿಬಿಡುತ್ತೇನೆ .ಹೀಗೆಲ್ಲಾ ನಡಿದಿರಲಿಕ್ಕೂ ಸಾಧ್ಯ ಅನ್ನಿಸುತ್ತದೆ.ಒಮ್ಮೊಮ್ಮೆ ಇದು ಬರೀ ಒಂದು ಕಾಲ್ಪನಿಕ ಘಟನೆ ಇರಬಹುದು ಅಂತಲೂಅನ್ನಿಸುತ್ತದೆ .ನೀವೇ ಓದಿ ನೋಡಿ.ಆತ ಸದಾ ಆ ಮಾಸಿದ ಕೋಟನ್ನು ಧರಿಸುತ್ತಿದ್ದ.ಅದರ ಜೊತೆ ಏನೇನು ನೆನಪುಗಳು ಅಂಟಿಕೊಂಡಿದ್ದವೋ ಅವನಿಗೇ ಗೊತ್ತು.ಸುಮಾರು ಮೂರು ತಿಂಗಳಿಂದ ಅವನು ಆ ವೈದ್ಯರ ಬಳಿಗೆ ಚಿಕಿತ್ಸೆಗೆ ಬರುತ್ತಿದ್ದ.ಅವರುಫೀಸುಕೇಳಿದಾಗಲೆಲ್ಲಾ 'ಮುಂದಿನ ಸಾರಿ ಖಂಡಿತ ಕೊಡುತ್ತೀನಿ ಸಾರ್'ಎಂಬ ಉತ್ತರ ಅವನ ಬಳಿ ಸಿದ್ದವಾಗಿರುತ್ತಿತ್ತು.ಆದಿನ ಅವನು'ನನಗೆ ಪೂರ್ತಿ ಗುಣವಾಗಿದೆ ಸರ್ 'ಎಂದ.ವೈದ್ಯರು 'ನನ್ನ ಫೀಸು ನಾಲಕ್ಕು ಸಾವಿರ ವಾಗಿದೆ ,ಈಗಲಾದರೂ ಕೊಡುತ್ತೀಯೇನಪ್ಪಾ 'ಎಂದರು.ಆತನ ಮುಖದಲ್ಲಿ ದೈನ್ಯ ಭಾವ ಇತ್ತು.ತನ್ನ ಖಾಯಿಲೆಗುಣ ಮಾಡಿದ್ದಕ್ಕೆವೈದ್ಯರ ಬಗ್ಗೆ  ಕೃತಜ್ಞತೆಇತ್ತು.ತಾನು ಬಹಳವಾಗಿ ಇಷ್ಟಪಡುತ್ತಿದ್ದ ಕೋಟನ್ನು ಬಿಚ್ಚಿ, ಟೇಬಲ್ ಮೇಲೆ ಇಟ್ಟು'ನೀವು ದೇವರು ಇದ್ದ ಹಾಗೆ ಸರ್'ಎಂದ.ವೈದ್ಯರಿಗೆ ಅಸಾಧ್ಯ ಕೋಪ ಬಂತು.ಇನ್ನೂ ಏನೋ ಹೇಳಬೇಕೆಂದಿದ್ದ ಅವನನ್ನು ಅರ್ಧಕ್ಕೇ ತಡೆದು ಸಿಟ್ಟಿನಿಂದ 'ಎತ್ಕೊಂಡು ಹೋಗಯ್ಯ ನಿನ್ ಹಾಳು  ಕೋಟು ಯಾವೋನಿಗೆ ಬೇಕು,ನನ್ನ ನಾಲ್ಕು ಸಾವಿರ ರೂಪಾಯಿ ತಂದುಕೊಡು'ಎಂದು ,ಆ ಮಾಸಿದ ಕೋಟನ್ನು ಕೆಳಗೆ ಬಿಸಾಕಿದರು .ಆತನಿಗೆ ತುಂಬಾ ನೋವಾಗಿತ್ತು.ಕಣ್ಣಿನಲ್ಲಿ ನೀರಿತ್ತು.ಏನೂ ಮಾತಾಡದೆ ನಿಧಾನವಾಗಿ ಕೋಟನ್ನುನೆಲದಿಂದ ಎತ್ತಿಕೊಂಡು ಧರಿಸಿ,ಅದರ ಒಳ ಜೇಬಿನಲ್ಲಿದ್ದ ಹತ್ತು ಸಾವಿರ ರೂಪಾಯಿಯ ಹೊಸ ನೋಟುಗಳ ಕಟ್ಟನ್ನು ಬಿಡಿಸಿ,ನಾಲಕ್ಕು ಸಾವಿರ ಎಣಿಸಿ,ಟೇಬಲ್ ಮೇಲೆ ಇಟ್ಟು ಇನ್ನುಳಿದ ಆರು ಸಾವಿರವನ್ನು ಕೋಟಿನ ಜೇಬಿನಲಿಟ್ಟು ಮೌನವಾಗಿ ಹೊರನಡೆದ.ಟೇಬಲ್ ಮೇಲಿದ್ದ ನಾಲಕ್ಕು ಸಾವಿರ ನೋಟುಗಳು ಇಷ್ಟು ಹೊತ್ತೂ ಜೊತೆಗಿದ್ದ ಮಾಸಿದ ಕೋಟಿನೊಳಗಿನ ಆರು ಸಾವಿರ ನೋಟುಗಳಿಗೆ 'ಟಾ--ಟಾ' ಮಾಡುತ್ತಿದ್ದವು!ಟೇಬಲ್ ಮೇಲೆ ಇದ್ದ 'ಲಾಫಿಂಗ್ ಬುದ್ಧನ' ಮೂರ್ತಿ ವೈದ್ಯರನ್ನು ನೋಡಿ ನಗುತ್ತಲೇ ಇತ್ತು!                 

Tuesday, April 20, 2010

' ನವ್ಯ --------ಕಲೆ '

ನಾನು ಬಹಳ ವರ್ಷಗಳ ಹಿಂದೆ ಒಂದು ಚಿತ್ರಕಲಾ
ಪ್ರದರ್ಶನಕ್ಕೆಹೋಗಿದ್ದೆ.ಅಲ್ಲಿದ್ದ ನವ್ಯ ಚಿತ್ರವೊಂದು
ವಿಚಿತ್ರವಾಗಿತ್ತು.ಅದರತಲೆಬುಡಅರ್ಥವಾಗಲಿಲ್ಲ.
'ಇದನ್ನು ಕಲೆ ಅಂತ ಏಕೆ ಕರೆಯುತ್ತಾರೆ',ಎಂದು
ತಲೆ ಕೆರೆದುಕೊಂಡೆ! ಯಾರೋ ಸಣ್ಣ ಮಕ್ಕಳು
ಸಿಕ್ಕಿದ್ದನ್ನು ಗೀಚಿಅದಕ್ಕೆಸಿಕ್ಕಾಪಟ್ಟೆ ಬಣ್ಣ ಬಳಿದ ಹಾಗಿತ್ತು!
ಹಾಗೆಂದು ನವ್ಯ ಕಲೆಯನ್ನುನಾನುತಿರಸ್ಕಾರದಿಂದ
ಕಾಣುತ್ತೇನೆಂದು ತಪ್ಪು ತಿಳಿಯಬೇಡಿ. ಕೆಲವು
ನವ್ಯಚಿತ್ರಗಳನ್ನು ತುಂಬಾ ಇಷ್ಟಪಟ್ಟಿದ್ದುಂಟು.
ಆಗ ಅನಿಸಿದ್ದನ್ನುಕವಿತೆಯಲ್ಲಿಹಿಡಿದಿಟ್ಟಿದ್ದೆ.ನಿಮ್ಮಲ್ಲೂ
ಕೆಲವರಿಗೆ ನವ್ಯ ಚಿತ್ರಗಳನ್ನು ನೋಡಿಹಾಗೆಯೇಅನಿಸಿರಬಹುದು
.ನವ್ಯ ಚಿತ್ರಕಾರರು ದಯವಿಟ್ಟು ಸಿಟ್ಟಾಗಬೇಡಿ.
ಇದುಶ್ರೀಸಾಮಾನ್ಯನೊಬ್ಬನ ಅನಿಸಿಕೆ ಎಂದು ನಕ್ಕುಬಿಡಿ;
-------------------------
'ನವ್ಯ ಕಲೆ '
-------------------------
ಡಾಳಾದ  ಎರಡು  ಗೆರೆ !
ಮಧ್ಯೆ  ಕೆಂಪು  ಬರೆ !
ಎತ್ತಲೋ  ನೋಡುವ  ಕಣ್ಣು!
ಅರ್ಥವೇ   ಆಗುತ್ತಿಲ್ಲ ಮಣ್ಣು!
ಪಕ್ಕದಲ್ಲೇ  ಒಂದಷ್ಟು  ಮಸಿ !
ಅದಕ್ಕೇನೋ ಮಾಡಿದ್ದಾನೆ  ಕಸಿ !
ಓ -----ಅಲ್ಲೆಲ್ಲೋ  ಇದ್ದಾನೆ ಚಂದ್ರ !
ಇದನ್ನು ನೋಡೋಕೆ ನೀವೂ ಬಂದ್ರ !
ಆಕಾಶದಲ್ಲಿ ಯಾಕಿವೆ ಮೀನುಗಳು?
ಕೆಳಗೆ ಹರಿದಾಡುವ ಹಕ್ಕಿಗಳು !
ಕ್ಯಾನ್ವಾಸ್ ತುಂಬೆಲ್ಲಾ ಪುಕ್ಕಗಳು ;
ತಲೆ ಕೆಟ್ಟು ಕುಣಿಯುವ ಬಣ್ಣಗಳು !
ಇದೇನಾ ---------ನವ್ಯ ಕಲೆ !
ಇದು -----------ಕಲೆಯಲ್ಲ ,
ಹುಚ್ಚು ಹಿಡಿದ ತಲೆ !

Sunday, April 18, 2010

'ಮರೆವು'

ಗಂಡ ಹೆಂಡತಿ ಇಬ್ಬರಿಗೂ ಸುಮಾರು ಎಂಬತ್ತೈದರ ವಯಸ್ಸು.
ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ ಮರೆವು .
ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .
ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .
ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .
ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .
'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.
ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .
ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .
ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು.
'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ ಜಂಬ ಕೊಚ್ಚಿಕೊಂಡ !!!

Thursday, April 15, 2010

'ಬಾಲ್ಯ'

ಬಾಲ್ಯದ --------ಕನಸುಗಳು ,
ಈ ನಡು ವಯಸ್ಸಿನ ಮಧ್ಯಾಹ್ನದ
ಕನವರಿಕೆಗಳು -----------!
ಚಿಂತೆ ಸಂತಾಪಗಳ ಉರಿಬಿಸಿಲಿಗೆ ,
ಐಸ್ ಕ್ಯಾಂಡಿ ಮಾರುವ ಗಾಡಿಯೊಳಗಿನ,
ಬಣ್ಣ ,ಬಣ್ಣದ ,ತಣ್ಣಗಿನ -----ಐಸು!
ಹುಡುಗಿಯರ  ಜಾಮಿಟ್ರಿ ಬಾಕ್ಸಿನ ,
ಹುಣಿಸೇ ಕಾಯಿ ,ಹುಣಿಸೇ ಚಿಗುರುಗಳ ,
ಹುಳಿ,ಹುಳೀ ------------ಒಗರು !
ನೆನಸಿ ಕೊಂಡರೇ------ಮೈ ನವಿರು !
ಬಣ್ಣ ,ಬಣ್ಣದ ಗೋಲಿಗಳ ಕದಪಿನ ,
ನುಣುಪಿನ ,ಮಿರಿ ,ಮಿರಿ ,ಮಿಂಚು !
ನಾ ಓಡಿಸುತ್ತಿದ್ದ ಸವೆದ ,
ಸೈಕಲ್ ಟೈರಿನ ಅಂಚು !
ಓಡುತ್ತಲೇ ಇರುತ್ತದೆ ,
ಬದುಕಿನಾಚೆಗೂ --------!
ಹಾರುತ್ತವೆ ------ದಿಗಂತದಾಚೆಗೂ !
ನಾ ಬಿಟ್ಟ ಗಾಳಿ ಪಟಗಳಂತೆ !
ಚಿನ್ನಿ ದಾಂಡು ,ಲಗೋರಿ ,ಕಬಡ್ಡಿ !
ಒಂದೇ ,ಎರಡೇ ?ಕನವರಿಸಲೇನಡ್ಡಿ?
ಹೇ ------------ಬದುಕೇ ,
ನೀ ಮತ್ತೆ ನೀಡಬಲ್ಲೆಯಾ ?
ಕಳೆದು -----------ಹೋದ ,                            
ಆ -------ನನ್ನ  ಬಾಲ್ಯ !               

Monday, April 12, 2010

ಸೈಕಲ್ ಹಿಂದಿನ ಚಕ್ರ ---ತಿರುಗುತ್ತಲೇ ಇತ್ತು !

{ಚೆನ್ನೈನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಸ್ನೇಹಿತನೊಬ್ಬನ ಕ್ಲಿನಿಕ್ ನಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದ ನೈಜ ಘಟನೆಯನ್ನು ಆಧರಿಸಿದ್ದು }

ಆ ದಿನ  ಸಂಜೆ ಸುಮಾರು ಐದೂವರೆ ಆಗಿತ್ತು .ಕ್ಲಿನಿಕ್ಕಿನಲ್ಲಿ ಹೆಚ್ಚು ರೋಗಿಗಳಿರಲಿಲ್ಲ .ಒಳಗಿನ ಪರೀಕ್ಷಾ ಕೋಣೆಯಲ್ಲಿ ರೋಗಿಯೊಬ್ಬನನ್ನು ಪರೀಕ್ಷೆ ಮಾಡಿ ಹೊರಗೆ ಬಂದೆ .ಆಗ ತಾನೇ ಬಂದಿದ್ದಆರಡಿಯ,ಧಡೂತಿದೇಹದ,ಮೈಯೆಲ್ಲಾ ಬೆವರಿನಿಂದ ತೋಯ್ದು ತೊಪ್ಪೆಯಾಗಿದ್ದ ವ್ಯಕ್ತಿಯೊಬ್ಬ 'ತುಂಬಾ  ಎದೆ ನೋವು ಡಾಕ್ಟರ್ ',ಎನ್ನುತ್ತಾ ,ಎದೆಯನ್ನು ಕೈಯಲ್ಲಿ ಹಿಡಿದು ಕೊಂಡೇ,ಕಡಿದು ಬಿದ್ದ ದೊಡ್ಡದೊಂದು ಮರದಂತೆ ,ಧೊಪ್ಪೆಂದು ಬಿದ್ದ.ಹೃದಯದ ಬಡಿತ ಮತ್ತು ಉಸಿರಾಟ ಸಂಪೂರ್ಣವಾಗಿ ನಿಂತಿತ್ತು .ಅವನ ಜೊತೆ ಯಾರಾದರೂ ಬಂದಿದ್ದಾರೆಯೇ ಎಂದು ನೋಡಲು ಕ್ಲಿನಿಕ್ಕಿನ ಹೊರಗೆ ಬಂದೆ .ಆ ವ್ಯಕ್ತಿ  ಸ್ಟ್ಯಾಂಡ್ ಹಾಕಿ ನಿಲ್ಲಿಸಿದ್ದ  ಸೈಕಲ್ ಅಲ್ಲಿತ್ತು.ಸೈಕಲ್ಲಿನ  ಹಿಂದಿನ ಚಕ್ರ ಇನ್ನೂ ತಿರುಗುತ್ತಲೇ ಇತ್ತು ! ಕ್ಯಾರಿಯರ್ರಿನಲ್ಲಿದ್ದ  ಕೈ ಚೀಲ ಕೆಳಗೆಬಿದ್ದು ,ಅದರಲ್ಲಿದ್ದ ತರಕಾರಿ ,ಹೂವು ,ಹಣ್ಣು ಮತ್ತು ಎರಡು ಪ್ಲಾಸ್ಟಿಕ್ ಗೊಂಬೆಗಳು, ಫುಟ್ ಪಾತ್ ನಲ್ಲಿ  ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು !    

Sunday, April 11, 2010

ಪತ್ತೆಯಾದರೆ ,ತಿಳಿಸಿ ----ಪ್ಲೀಸ್ !

ನಮ್ಮ ಮನದ ಅಹಂಕಾರದ 
ಗಂಟುಗಳ------  ಬಿಡಿಸಿ ,
ದಶಕಗಳ ಕೊಳೆಯ
ತಿಕ್ಕಿ-------- ತೊಳೆದು 
ಶುದ್ಧ ಗೊಳಿಸಿ -----,
ಮಡಿಕೆ ಮಡಿಕೆಗಳ ತೆಗೆದು ,
ಸುಕ್ಕುಗಳ ತಿದ್ದಿ  ತೀಡಿ ,
 ನೀಟಾಗಿ ,ಗರಿ ಗರಿಯಾಗಿ 
ಇಸ್ತ್ರಿ ಮಾಡಿ ----------,
ಮುಗ್ಧತೆಯ ಶುಭ್ರತೆಯ ಸೂಸುವ ,
ಮಗುವಿನ ಮನವಾಗಿ ಮಾರ್ಪಡಿಸುವ ,
ದೋಬಿಯ ----ವಿಳಾಸ ,                                  
ಎಲ್ಲೆಂದು -----ಹುಡುಕುತ್ತಿದ್ದೇನೆ !
ಪತ್ತೆಯಾದರೆ ---------,
ತಿಳಿಸಿ --------ಪ್ಲೀಸ್ !

Friday, April 9, 2010

'ಬ್ಲಾಗಿನ ಚಾವಡಿಗೆ--------- ಸ್ವಾಗತ'

ಬ್ಲಾಗಿನ ------ಚಾರಣಿಗರೇ!
ಹೀಗೇ ಬನ್ನಿ --------ಇಲ್ಲೇ ,
ಸ್ವಲ್ಪ ವಿರಮಿಸಿಕೊಳ್ಳಿ
ಈ ನನ್ನ --------ಚಾವಡಿಯಲ್ಲಿ !
ಕಷ್ಟಗಳ ಬೆಟ್ಟವೇರಿ ಸುಸ್ತೆ ?
ಚಿಂತೆಯ 'ಬ್ಯಾಕ್ ಪ್ಯಾಕ್' '
ಕೆಳಗಿಳಿಸಿ ----ಹಾಂ --ಹಾಗೆ.
ಕುಳಿತುಕೊಳ್ಳಿ ---ಇಲ್ಲೇ !
'ಕೊಳಲ'ನೂದಲೇ? ,ಗಾಳಿ ಬೀಸಲೇ ?
ಬೇಸರವ ಬದಿಗಿರಿಸಿ ,ನಕ್ಕುಬಿಡಿ ಒಮ್ಮೆ !
ಹಾಗೇ ಇರಿ ಒಂದು ಚಣ !
ಈ ಕ್ಷಣದ ಕ್ಯಾಮರಾದಲ್ಲಿ ಕ್ಲಿಕ್ಕಿಸಿ ,
ನೆನಪಿನ ಫೋಟೋಗಳನ್ನು 
ಕೊಟ್ಟುಬಿಡುತ್ತೇನೆ ನಿಮಗೇ!
ಏನು ಕುಡಿಯುತ್ತೀರಿ  ಆಸರೆಗೆ ?
ಹನಿಗವನಗಳ ಪಾನಕವೇ ?
ಕವಿತೆಗಳ ಎಳನೀರೆ?
ಅನಿಸಿಕೆಗಳ ಮಜ್ಜಿಗೆಯೇ ?
ಎಲ್ಲವೂ ಇದೆ ಇಲ್ಲಿ !
ಧನ್ಯವಾದಗಳು ಬಂದಿದ್ದಕ್ಕೆ !
ಮತ್ತೆ ಬನ್ನಿ ಮರೆಯದೇ,
ಈ ನನ್ನ ಬ್ಲಾಗಿನ ----ಚಾವಡಿಗೆ !

Thursday, April 8, 2010

ಡುಂಡಿಯವರ 'ಡಿಂಡಿಮ'

ಸನ್ಮಾನ್ಯ ಡುಂಡಿರಾಜ್ಅವರ ಹನಿಗವಿತೆಗಳನ್ನು ನಾನು 
ತುಂಬಾ ಇಷ್ಟಪಡುತ್ತೇನೆ .ಡುಂಡಿಯವರ ಡಿಂಡಿಮ ಎನ್ನುವ 
ಅಂಕಣದಲ್ಲಿ ಅವರ ಹನಿಗವನಗಳ ಸವಿಯನ್ನು ನನ್ನ ಸಹ 
ಬ್ಲಾಗಿಗರೊಡನೆ ಹಂಚಿಕೊಳ್ಳುವ ಇಷ್ಟ .ಇಲ್ಲಿವೆ ನೋಡಿ 
ಅವರ ಕೆಲ ಹನಿಗಳು :
 1.} ನದಿ ದಾಟಲು ತೆಪ್ಪ ಇರಬೇಕು 
     ಸಂಸಾರ ಶರಧಿ ದಾಟಲು 
      ತೆಪ್ಪಗಿರಬೇಕು !
2.}ಕರಾವಳಿಯಲ್ಲಿ ಈ ಬಾರಿ 
ಎಂಥಾ ಸೆಕೆ ಅಂತೀರಿ 
ಸಾಲದ್ದಕ್ಕೆ ಪವರ್ ಕಟ್ಟು
ಜನರೆಲ್ಲಾ  ಬೆವರ್ ಬಿಟ್ಟು 
ನೇತ್ರಾವತಿ ,ಸ್ವರ್ಣಾ ,ಸೀತಾ 
ನೀರೆಲ್ಲ ಬೆವರು ನಾತ
ಹೊಳೆಯಾಗಿ ಹರಿದು ಬೆವರು 
ಉಪ್ಪಾಗಿದೆ ಸಮುದ್ರದ ನೀರು !
3}  ಮದುವೆ ಮಂಟಪದಲ್ಲಿ 
ಧರ್ಮೇಚ ,ಅರ್ಥೆಚ ----
ಅನ್ನುತ್ತಾ ಹೆಜ್ಜೆ ಹಾಕುವುದು 
ಸಪ್ತ ಪದಿ
ಆಮೇಲೆ  ಇನ್ನಾರದೋ ಜತೆ 
ಗುಟ್ಟಾಗಿ ತಿರುಗುವುದು 
ಸುಪ್ತಪದಿ !
4} ಒಳ್ಳೆ ಗುಣ 
ಎಲ್ಲೇ ಇದ್ದರೂ 
ಬದಲಾಗುವುದಿಲ್ಲ .
ಬೇವಿನ ಕಹಿ ಮರೆಸಿ 
ಅದಕ್ಕೂ ಸಿಹಿ ಬೆರಸಿ 
ನಗುತ್ತದೆ ಬೆಲ್ಲ !
5}ಆಚಾರಕ್ಕೂ ವಿಚಾರಕ್ಕೂ 
ಅತ್ಯಲ್ಪ ಅಂತರ 
ಆಚಾರದಲ್ಲಿ 'ಆ 'ಕಾರವಿದ್ದರೆ 
ವಿಚಾರದಲ್ಲಿ ವಿಕಾರ !
6}ಇಂಗಿ ಹೋದಳು 
ಸರಸ್ವತಿ ನದಿ 
ಮಣ್ಣಲ್ಲಿ .
ಸೇರಿಕೊಂಡಳು 
ಹೆಂಗಸರ 
ಕಣ್ಣಲ್ಲಿ !
7}ಬದುಕಿನ ಬಂಡಿಯಲ್ಲಿ 
ಗಂಡನ ಕೈಯಲ್ಲಿ 
ವೇಗ ವರ್ಧಕ 
ಇದ್ದರೆ ಸಾಕಾ?
ಹೆಂಡತಿಯೂ ಬೇಕು 
ಏಕೆಂದರೆ 
ಅವಳು ಬ್ರೇಕು !
8}ಸುತ್ತುತ್ತಾರೆ ಹುಡುಗರು 
ಸದಾ ಹುಡುಗಿಯರ ಹಿಂದೆ .
ಆದ್ದರಿಂದಲೇ 
ಫಲಿತಾಂಶದಲ್ಲಿ
ಹುಡುಗಿಯರೇ                     
ಮುಂದೆ .
9}ಗಾಂಧಿ ತತ್ವವನ್ನು 
ಮರೆತಿಲ್ಲ ನಾವು 
ಕೊಂಚ ಬದಲಾವಣೆ ಆಗಿದೆ .
ಅಹಿಂಸೆಯಿಂದ 
'ಅ 'ತೆಗೆದು 
ಸತ್ಯಕ್ಕೆ ಅಂಟಿಸಲಾಗಿದೆ !

Wednesday, April 7, 2010

ನಾವು -------ಮಧ್ಯಮ ವರ್ಗ!

ನಾವು ಮಧ್ಯಮ ವರ್ಗ !
ಆರಕ್ಕೇರದೆ ,ಮೂರಕ್ಕಿಳಿಯದೆ 
ನಾಲಕ್ಕರಲ್ಲೇ ನಮ್ಮ ಸರ್ಕಸ್ !
ಯಾರೋ ಕೊಂಡ ------,
ನಲವತ್ತು ಲಕ್ಷದ ಫ್ಲಾಟ್ 
ನಮಗೆ ------- ದುಬಾರಿ !
ಆದರೇನು ಮಾಡೋಣ ?                         
ಅದೇ ನೆನಪಿಗೆ ಬರುತ್ತಲ್ಲ ಹಾಳು,
ಮತ್ತೆ ಮತ್ತೆ ,ಬಾರಿ ಬಾರಿ !
ಮತ್ತೆ ಮತ್ತೆ ರಿಪೀಟ್ ಆಯಿತೇ?
ಕ್ಷಮಿಸಿ ,ನಮ್ಮ ತೊಂದರೆಗಳೂ ಹಾಗೇ!
ಮತ್ತೆ ,ಮತ್ತೆ ಮರುಕಳಿಸುತ್ತವೆ !
ಕಷ್ಟಗಳು ನಮ್ಮನ್ನು ಮುಕ್ಕಳಿಸುತ್ತವೆ!
ನಾವು ಮಧ್ಯಮ ವರ್ಗ !
ನಮ್ಮ ಬಾಳೋ --------,
ತ್ರಿಶಂಕು -------ಸ್ವರ್ಗ !          

Tuesday, April 6, 2010

ಕನ್ನಡಮ್ಮನ -------ಅಳಲು!

ಮೊನ್ನೆ ವಿ .ಆರ್.ಭಟ್ ಅವರ ಬ್ಲಾಗಿನಲ್ಲಿ 'ಕನ್ನಡಮ್ಮನ ಕೈ ತುತ್ತು' ಎನ್ನುವ ಕವಿತೆ ಓದಿ ,ಕೆಲ ವರ್ಷಗಳ ಹಿಂದೆ ನಡೆದ ಮನ ಮಿಡಿಯುವ ಘಟನೆ ನೆನಪಿಗೆ ಬಂತು.ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ನನ್ನ ಟ್ರೈನಿಗಾಗಿ ಕಾಯುತ್ತಿದ್ದೆ.ಹಳ್ಳಿಹೆಂಗಸೊಬ್ಬಳುತನ್ನಎರಡುಮಕ್ಕಳನ್ನುಕಟ್ಟಿಕೊಂಡು, ಕಂಡ ಕಂಡವರನ್ನು ,'ಯಪ್ಪಾ ನಿಮಗೆ ಕನ್ನಡ ತಿಳೀತೈತೆನ್ರಿ'ಎಂದು ದೈನ್ಯದಿಂದ ಕೇಳುತ್ತಿದ್ದಳು.ನಾನು ಅವಳನ್ನು ಕನ್ನಡದಲ್ಲಿ ಮಾತಾಡಿಸಿದಾಗ ಅವಳ ಮುಖ ನಿಧಿ ಸಿಕ್ಕಂತೆ ಅರಳಿತು.'ಏನ್ಮಾಡೋದ್ರೀ ಯಪ್ಪಾ ,ಇಲ್ಲಿ ಯಾರಿಗೂ ಕನ್ನಡ ತಿಳೀವಲ್ತು!ಹೊಸಪೇಟಿ ಬಂಡಿ ಎಲ್ಲಿ ಬರತೈತ್ರೀ ?'ಎಂದಳು.ಅವಳಿಗೆ ಅವಳು ಹೋಗಬೇಕಾದ ಪ್ಲಾಟ್ ಫಾರಂ  ತೋರಿಸಿ ಬಂದೆ. 'ನಿನ್ನ  ಮಕ್ಳಿಗೆ ಪುಣ್ಯ ಬರಲಿರೀ ಯಪ್ಪಾ 'ಎಂದು ಬೀಳ್ಕೊಟ್ಟಳು.ಈ ಘಟನೆ ನಡೆದದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ!ಇದನ್ನು' ಕನ್ನಡಮ್ಮನ ಅಳಲು ಎನ್ನೋಣವೇ?

Monday, April 5, 2010

ಮಾತಿನ ಕಲ್ಲು --------ಬೀರುವ ಮುನ್ನ!

ಒಡೆದ ಮನಸ್ಸಿನ ,
ಕನ್ನಡಿಯೊಳಗಿರುವ ,
ಬಿರುಕುಗಳ  ಗಡಿಯಾಚೆ 
ಕಂಡ ಸಂಬಧಗಳು 
ಛಿನ್ನಾ------- ಛಿದ್ರ!
ಕನ್ನಡಿ ಒಡೆದರೆ 
ಬಿಂಬಗಳೂ ಚೂರು ಚೂರು !
ಒಡೆದು ವಿಕೃತ ಗೊಂಡ 
ಮನಕ್ಕೆ -------------,                  
ಕಂಡಿದ್ದೆಲ್ಲಾ ------ವಿಕೃತ !
ಆದ್ದರಿಂದ------------,
ಮಾತಿನ ಕಲ್ಲು ಬೀರುವ ಮುನ್ನ ,
ಮನಸ್ಸು ಕನ್ನಡಿಯಂತೆ 
ಎಂಬ ------------,
ಎಚ್ಚರವಿರಲಿ ----------!

Saturday, April 3, 2010

ಎದ್ದು ಹೋದಿರಿ -------ಎಲ್ಲಿಗೆ ?

ಅಸಂಬದ್ಧ  ಮಾತುಗಳ 
ಬಡಬಡಿಸುತ್ತಲೇ ಇತ್ತು ಬಾಯಿ !
ನೋಟ ನೆಟ್ಟಿತ್ತು ಮೇಲಕ್ಕೆ ,
ದಾರಿ ಯಾವುದಯ್ಯಾ ವೈಕುಂಠಕ್ಕೆ ? 
ಯುದ್ಧದಲ್ಲಿ ಸೋತು ಶರಣಾಗಿ ,
ಬಿಳಿಯ ಬಾವುಟ ಹಾರಿಸಿದಂತೆ,
ಕಣ್ಣುಗಳ ಬಿಳಿಯ ಬಣ್ಣ 
ಮಾತ್ರ ---------ಕಾಣುತಿತ್ತು !
ಜೋಕಾಲೆಯಾಡಿತ್ತು ಜೀವ,
ಒಳಕ್ಕೂ ----,ಹೊರಕ್ಕೂ.
'ಕಣ್ಣಾ ಮುಚ್ಚೆ 'ಆಟ ಮುಗಿದಿತ್ತು !
ಒಳಗಿಂದಲೇ ಬಾಯಿಯ ಬಾಗಿಲು , 
ಕಣ್ಣುಗಳ ಕಿಟಕಿಗಳ ಮುಚ್ಚಿ ,
ಸಂತೆ ಮುಗಿಸಿ ,ಕಂತೆ ಒಗೆದು ,
ನಡೆದೇ ಬಿಟ್ಟಿರಿ ನಮ್ಮೆದುರೇ ,
ಉಸಿರ ಹಾದಿ ಹಿಡಿದು ,
ನಮಗೆ -------ಕಾಣದಂತೆ ,               
ಮರಳಿ ---------ಬಾರದಂತೆ .

Friday, April 2, 2010

ನೀನು----- ದೂರ್ವಾಸನೇ ಹೌದು!

ಸಾಕಪ್ಪಾ ನಿನ್ನ ಸಹವಾಸ ! 
ಸಿಟ್ಟಿನಲ್ಲಿ ನೀ ಥೇಟ್ ದೂರ್ವಾಸನೇ!
ರಾತ್ರಿ-----------,                                    
ಬಾಯಲ್ಲಿ ---ಮಿಂಟು ,
ಮೈಗೆಲ್ಲಾ ---ಸೆಂಟು ,
ಏನು ಹಾಕಿದರೂ ನೂರೆಂಟು ,
ತೂರಿ ಬರುವ ಹಾಳು ಘಾಟು !
ತೂರಾಡುತ್ತಾ ನೀ ಬರುವ ಮುನ್ನವೇ ,
ತಲಪುವ  ಆ ನಿನ್ನ ---,
ಉಸಿರಿನ -----ದುರ್ವಾಸನೆ,
ಸಹಿಸಲು ಅಸಾಧ್ಯ ------!
ನೀ --------------ನಿಜಕ್ಕೂ ,
ದೂರ್----------ವಾಸನೆ !
ದೂರದಿಂದಲೇ ----------ವಾಸನೆ!