Thursday, April 8, 2010

ಡುಂಡಿಯವರ 'ಡಿಂಡಿಮ'

ಸನ್ಮಾನ್ಯ ಡುಂಡಿರಾಜ್ಅವರ ಹನಿಗವಿತೆಗಳನ್ನು ನಾನು 
ತುಂಬಾ ಇಷ್ಟಪಡುತ್ತೇನೆ .ಡುಂಡಿಯವರ ಡಿಂಡಿಮ ಎನ್ನುವ 
ಅಂಕಣದಲ್ಲಿ ಅವರ ಹನಿಗವನಗಳ ಸವಿಯನ್ನು ನನ್ನ ಸಹ 
ಬ್ಲಾಗಿಗರೊಡನೆ ಹಂಚಿಕೊಳ್ಳುವ ಇಷ್ಟ .ಇಲ್ಲಿವೆ ನೋಡಿ 
ಅವರ ಕೆಲ ಹನಿಗಳು :
 1.} ನದಿ ದಾಟಲು ತೆಪ್ಪ ಇರಬೇಕು 
     ಸಂಸಾರ ಶರಧಿ ದಾಟಲು 
      ತೆಪ್ಪಗಿರಬೇಕು !
2.}ಕರಾವಳಿಯಲ್ಲಿ ಈ ಬಾರಿ 
ಎಂಥಾ ಸೆಕೆ ಅಂತೀರಿ 
ಸಾಲದ್ದಕ್ಕೆ ಪವರ್ ಕಟ್ಟು
ಜನರೆಲ್ಲಾ  ಬೆವರ್ ಬಿಟ್ಟು 
ನೇತ್ರಾವತಿ ,ಸ್ವರ್ಣಾ ,ಸೀತಾ 
ನೀರೆಲ್ಲ ಬೆವರು ನಾತ
ಹೊಳೆಯಾಗಿ ಹರಿದು ಬೆವರು 
ಉಪ್ಪಾಗಿದೆ ಸಮುದ್ರದ ನೀರು !
3}  ಮದುವೆ ಮಂಟಪದಲ್ಲಿ 
ಧರ್ಮೇಚ ,ಅರ್ಥೆಚ ----
ಅನ್ನುತ್ತಾ ಹೆಜ್ಜೆ ಹಾಕುವುದು 
ಸಪ್ತ ಪದಿ
ಆಮೇಲೆ  ಇನ್ನಾರದೋ ಜತೆ 
ಗುಟ್ಟಾಗಿ ತಿರುಗುವುದು 
ಸುಪ್ತಪದಿ !
4} ಒಳ್ಳೆ ಗುಣ 
ಎಲ್ಲೇ ಇದ್ದರೂ 
ಬದಲಾಗುವುದಿಲ್ಲ .
ಬೇವಿನ ಕಹಿ ಮರೆಸಿ 
ಅದಕ್ಕೂ ಸಿಹಿ ಬೆರಸಿ 
ನಗುತ್ತದೆ ಬೆಲ್ಲ !
5}ಆಚಾರಕ್ಕೂ ವಿಚಾರಕ್ಕೂ 
ಅತ್ಯಲ್ಪ ಅಂತರ 
ಆಚಾರದಲ್ಲಿ 'ಆ 'ಕಾರವಿದ್ದರೆ 
ವಿಚಾರದಲ್ಲಿ ವಿಕಾರ !
6}ಇಂಗಿ ಹೋದಳು 
ಸರಸ್ವತಿ ನದಿ 
ಮಣ್ಣಲ್ಲಿ .
ಸೇರಿಕೊಂಡಳು 
ಹೆಂಗಸರ 
ಕಣ್ಣಲ್ಲಿ !
7}ಬದುಕಿನ ಬಂಡಿಯಲ್ಲಿ 
ಗಂಡನ ಕೈಯಲ್ಲಿ 
ವೇಗ ವರ್ಧಕ 
ಇದ್ದರೆ ಸಾಕಾ?
ಹೆಂಡತಿಯೂ ಬೇಕು 
ಏಕೆಂದರೆ 
ಅವಳು ಬ್ರೇಕು !
8}ಸುತ್ತುತ್ತಾರೆ ಹುಡುಗರು 
ಸದಾ ಹುಡುಗಿಯರ ಹಿಂದೆ .
ಆದ್ದರಿಂದಲೇ 
ಫಲಿತಾಂಶದಲ್ಲಿ
ಹುಡುಗಿಯರೇ                     
ಮುಂದೆ .
9}ಗಾಂಧಿ ತತ್ವವನ್ನು 
ಮರೆತಿಲ್ಲ ನಾವು 
ಕೊಂಚ ಬದಲಾವಣೆ ಆಗಿದೆ .
ಅಹಿಂಸೆಯಿಂದ 
'ಅ 'ತೆಗೆದು 
ಸತ್ಯಕ್ಕೆ ಅಂಟಿಸಲಾಗಿದೆ !

13 comments:

 1. ಡುಂಡಿರಾಜ ಎನ್ನುವುದು ಗಣಪತಿಯ ವಿಶೇಷ ಹೆಸರು, ಅದೂ ಈ ವಿಗ್ರಹ ಕಾಶಿಯಲ್ಲಿ ಮಾತ್ರ ಇದೆ. ಬಹಳ ಜನ ಇದೇನು ಹೆಸರು ಎಂದು ಆಶ್ಚರ್ಯಪಡುತ್ತಾರೆ, ಕೆಲವರು ಹೇಳಲು ಬಾರದೆ ದುಂಡಿರಾಜ ಅನ್ನುತಾರೆ ! ಅವರ ಚುಟುಕಗಳು ಬಹಳ ತೀಕ್ಷ್ಣ ಒಗ್ಗರಣೆಯ ಥರ ಇರುತ್ತವೆ. ಉತ್ತರ ಕನ್ನಡದ ದಿನಕರ ದೇಸಾಯಿಯವರನ್ನು ಬಿಟ್ಟಮೇಲೆ ಚುಟುಕಗಳಲ್ಲಿ ಹೆಸರು ಪಡೆದವರು ಇವರೊಬ್ಬರೇ ಅಂದರೆ ತಪ್ಪಲ್ಲ, ಚೆನ್ನಾಗಿದೆ, ನಿಮಗೆ ಧನ್ಯವಾದಗಳು

  ReplyDelete
 2. ನಮಸ್ಕಾರ ಗುರು ಸರ್ .ಡುಂಡಿ ಯವರ ಹನಿಗವನಗಳ ಸೊಗಡು ಬೇರೆ .ಅವುಗಳಲ್ಲಿರುವ ಅನಿರೀಕ್ಷಿತ ಪದ ಬಳಕೆ ಮತ್ತು ಪಂಚ್ ಖುಷಿ ಕೊಡುತ್ತವೆ.

  ReplyDelete
 3. ನಮಸ್ಕಾರ ಭಟ್ ಸರ್. ತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು .ತಾವು ಹೇಳಿದ ಹಾಗೆ ನಾನೂ ಮೊದಲು ಅವರ ಹೆಸರನ್ನು ದುಂಡಿರಾಜ್ ಎಂದೇ
  ತಪ್ಪು ತಿಳಿದುಕೊಂಡಿದ್ದೆ .ನಂತರ ಅದು ಗಣೇಶನ ಇನ್ನೊಂದು ಹೆಸರು ಎಂದು ತಿಳಿಯಿತು .ಸಾಹಿತ್ಯದಲ್ಲಿ ಕವಿತೆಗಳು ,ಹನಿಗವನಗಳು ಸಾಕಷ್ಟು
  ಜನರನ್ನು ತಲುಪುತ್ತಿಲ್ಲ.ಬಹಳಷ್ಟು ನವ್ಯ ಕವಿತೆಗಳು ಸಾಹಿತ್ಯಾಸಕ್ತರಿಗೂ ಕಬ್ಬಿಣದ ಕಡಲೆಯೇ !ಆದ್ದರಿಂದ ಖ್ಯಾತ ಕವಿಗಳ ಕೆಲವು ಕವನಗಳನ್ನಾದರೂ ನಮ್ಮ ಬ್ಲಾಗಿನ ಓದುಗರಿಗೆ ಪರಿಚಯಿಸುವ ಸಣ್ಣದೊಂದು ಪ್ರಯತ್ನ ಇದು .

  ReplyDelete
 4. ನಮಸ್ಕಾರ ಡಾಕ್ಟರೇ,

  ನಿಮ್ಮ ಬ್ಲೊಗ್ ಪ್ರಪಂಚಕ್ಕೆ ಇದು ನನ್ನ ಮೊದಲ ಭೇಟಿ. ನನಗೆ ನಗೆ-ಹನಿಗಳು ಹಿಡಿಸಿದವು. ಹೀಗೆ ಆ.ರಾ.ಮಿತ್ರ ಅವರ ಚುಟುಕೊಂದು ನೆನಪಾಯ್ತು. "ಹತ್ತಿರ ಬರಬೇಡವೋ ದೂರ್ವಾಸನೆ, ನೀ ಹತ್ತಿರ ಬಂದರೆ ದುರ್ವಾಸನೆ". ಕೆಲವರಿಗೆ ಈ ರೀತಿಯ ಚುತುಕುಗಳನ್ನು ಬರೆಯುವುದು ಒಂದು ರೀತಿಯ ವರವೇ ಸರಿ. ಹೀಗೆ ಬರೆಯುತ್ತಿರಿ ಹಾಗೆ ನನ್ನ ಬ್ಲೊಗ್ ಕಡೆ ಸಮಯ ಸಿಕ್ಕಾಗ ಬರುತ್ತಿರಿ.

  ReplyDelete
 5. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅ೦ತಾರಲ್ಲಾ ಹಾಗೇ ಈ ಚುಟುಕುಗಳದು..
  ನಾಲ್ಕೇ ಪದಗಳು..ಅದರಲ್ಲೇ ಉತ್ತಮ ಅರ್ಥವನ್ನು ಕೊಡುತ್ತವೆ.
  ಉತ್ತಮ ಚುಟುಕುಗಳನ್ನು ಸ೦ಗ್ರಹಿಸಿ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

  ReplyDelete
 6. ಮಾನ್ಯ ಶ್ರೀ ರಮೆಶವರಿಗೆ ನಮಸ್ಕಾರಗಳು .ನನ್ನ ಬ್ಲಾಗ್ 'ಕೊಳಲಿಗೆ 'ನಿಮ್ಮ ದನಿಯನ್ನೂ ಸೇರಿಸಿದಕ್ಕೆ ಧನ್ಯವಾದಗಳು .ಬ್ಲಾಗಿಗೆ ಆಗಾಗ ಬಂದು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿರಿ .ಕನ್ನಡದ ಕೊರಳ ದನಿ ನಿರಂತರವಾಗಿ ಮೊಳಗಲಿ .

  ReplyDelete
 7. ಮನಮುಕ್ತ ಅವರಿಗೆ ನಮಸ್ಕಾರಗಳು .ಬ್ಲಾಗಿಗೆ ಬಂದು ಪ್ರೋತ್ಸಾಹದ ಮಾತುಗಳನ್ನಾಡಿದ್ದಕ್ಕೆ ಧನ್ಯವಾದಗಳು .ಕನ್ನಡದ ಖ್ಯಾತ ಕವಿಗಳ ಕೃತಿಗಳನ್ನು ಸಹ ಬ್ಲಾಗಿಗರೊಡನೆ ಹಂಚಿಕೊಳ್ಳುವ ಇರಾದೆ ಇದೆ .ಕನ್ನಡ ಕಾವ್ಯ ಲೋಕ ಚಿರಾಯುವಾಗಲಿ .

  ReplyDelete
 8. ದು೦ಡಿರಾಜರ ಚುಟುಕುಗಳ ಸ೦ಗ್ರಹಕ್ಕೆ ಧನ್ಯವಾದಗಳು. ಚುಟುಕು ಬರೆದ ದು೦ಡಿಯವರಿಗೆ ವ೦ದನೆಗಳು.

  ReplyDelete
 9. ನಮಸ್ಕಾರ ಸೀತಾರಾಂ ಸರ್ .ನನ್ನ ಬ್ಲಾಗಿನ ಚಾವಡಿಗೆ ಬರುತ್ತಿರಿ .ಧನ್ಯವಾದಗಳು.

  ReplyDelete
 10. ನಮಸ್ಕಾರ,
  ಬೆಳಿಗ್ಗೆ ಮನಸ್ಸು ಫ್ರೆಶ್ ಆಯಿತು.
  ಡುಂಡಿ, ಬೀಚಿ ಅಂದರೆ ನನಗೂ ಪ್ರೀತಿ...
  ಸ್ವಲ್ಪ ದಿಫೆರೆಂಟ್ ಮತ್ತೆ ಹೊಸತನ ಇರೋದ್ರಿಂದ..
  ಶಬ್ದಗಳಲ್ಲಿ ಚಮತ್ಕಾರ ತುಂಬಾ ಮಜಾ.
  ನಿಮ್ಮ ಡಾಕ್ಟರ ವೃತ್ತಿಯಲ್ಲೇನಾದರು ಹಾಸ್ಯ ಘಟನೆಗಳು ನಡೆದಿವೆಯಾ?
  ಶಿವರಾಂ

  ReplyDelete
 11. ಶಿವರಾಂ ಭಟ್ ಸರ್ ,ನಮಸ್ಕಾರಗಳು.ನಮ್ಮ ವೈದ್ಯ ವೃತ್ತಿಯಲ್ಲಿ ಹಾಸ್ಯಕ್ಕೆನೂ ಕೊರತೆಯಿಲ್ಲ.ನನ್ನ ಚಾವಡಿಗೆ ಬರುತ್ತಿರಿ .ಧನ್ಯವಾದಗಳು .

  ReplyDelete
 12. ತುಂಬಾ ಚೆನ್ನಾಗಿದೆ ಸರ್

  ReplyDelete