Tuesday, February 22, 2011

"ತಪ್ಪು ರೈಲಿನಲ್ಲಿ"

ನಲವತ್ತು ವರ್ಷಗಳ ಹಿಂದಿನ ಮಾತು.ರಾತ್ರಿ  ಸುಮಾರು ಹತ್ತು ಗಂಟೆ ಸಮಯ. ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಅಕ್ಕಪಕ್ಕದಲ್ಲೇ ಇದ್ದ ಆರನೇ ಮತ್ತು ಏಳನೆ ಪ್ಲಾಟ್ ಫಾರಮ್ಮುಗಳಲ್ಲಿ  ವಿಪರೀತ ಜನ ಸಂದಣಿ. ಆರನೇ ಪ್ಲಾಟ್ ಫಾರಮ್ಮಿನ ಗಾಡಿ ಮೈಸೂರಿನ ಕಡೆ ಹೊರಟಿತ್ತು .ಏಳನೇ ಪ್ಲಾಟ್ ಫಾರಮ್ಮಿನ ಗಾಡಿ ಅರಸೀಕೆರೆ ಕಡೆ ಕಡೆ ಹೊರಟಿತ್ತು.ಆ ಗಡಿಬಿಡಿಯಲ್ಲಿ ಹಾಸಿಗೆ ,ಟ್ರಂಕು ,ಕೈಚೀಲ ಹಿಡಿದಿದ್ದ ಮಧ್ಯ ವಯಸ್ಕನೊಬ್ಬ ಆತುರಾತುರವಾಗಿ ಮೈಸೂರಿನ ಕಡೆ ಹೊರಟಿದ್ದ ಗಾಡಿ ಹತ್ತಿ ಧಾರಾಕಾರವಾಗಿ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಂಡು, ಜನಗಳ ಮಧ್ಯೆ ಜಾಗ ಮಾಡಿಕೊಂಡು ಕುಳಿತ.ಅವನ ತಲೆಯಲ್ಲಿ ಚಿಂತೆಗಳ ಸಂತೆ ನೆರದಿತ್ತು.ಮಗಳ ಮದುವೆ ತಪ್ಪಿಹೊಗುವುದರಲ್ಲಿತ್ತು.ತೀವ್ರವಾದ ಆತಂಕದಿಂದ ತಲೆಗೆ ಮಂಕು ಬಡಿದಂತಾಗಿತ್ತು.ರೈಲು ಹೊರಟಿತು .ಪ್ಲಾಟ್ ಫಾರಂ ಬಿಟ್ಟು ಊರಾಚೆ ಓಡುತ್ತಿತ್ತು.ಅವನ ಎದುರಿಗೆ ಹೊಸದಾಗಿ ಮದುವೆಯಾದ ಜೋಡಿಯೊಂದು ಕುಳಿತಿತ್ತು.ಗಂಡು ತುಂಬಾ ಸಂತೋಷದಲ್ಲಿದ್ದ.ಸ್ನೇಹಿತರೊಡನೆ ಮಾತನಾಡುತ್ತಾ ಜೋರಾಗಿ ನಗುತ್ತಿದ್ದ..ಆದರೆ ಹೆಣ್ಣಿನ ಮುಖದಲ್ಲಿ ಸಂತೋಷವಿರಲಿಲ್ಲ.ಮ್ಲಾನ ವದನಳಾಗಿ ಮುಖ ತಗ್ಗಿಸಿ ಕುಳಿ ತಿದ್ದಳು .ಮಧ್ಯವಸ್ಕನ ಪಕ್ಕದಲ್ಲಿ ಆ ಮದುವೆ ಗಂಡಿನ ತಂದೆ ,ತಾಯಿಗಳೂ ,ಕೆಲ ಬಂಧುಗಳೂ ಕುಳಿತಿದ್ದರು.ಒಂದು ಮೂಲೆಯಲ್ಲಿ ಸುಂದರ ಯುವಕನೊಬ್ಬ ಟ್ರೈನಿನಿಂದ ಮುಖ ಹೊರಹಾಕಿ ಆ ಕತ್ತಲಿನ ಶೂನ್ಯದಲ್ಲಿ ದೃಷ್ಟಿ ನೆಟ್ಟಿದ್ದ.'ಈ ಟ್ರೈನು ಅರಸೀಕರೆಗೆ ಎಷ್ಟು ಹೊತ್ತಿಗೆ  ತಲುಪುತ್ತೆ ಸ್ವಾಮಿ ? 'ಎಂದು ಮಧ್ಯ ವಯಸ್ಕ ಎದುರಿಗೆ ಕುಳಿತಿದ್ದ ಮದುವೆ ಗಂಡನ್ನು ಕೇಳಿದ.ಆ ಮಾತಿಗೆ ಅಲ್ಲಿದ್ದವರೆಲ್ಲಾ ಜೋರಾಗಿ ನಗತೊಡಗಿದರು.'ರೀ ಸ್ವಾಮಿ, ಇದು  ಮೈಸೂರಿಗೆ ಹೋಗುವ ಟ್ರೈನು.ಅರಸೀಕೆರೆಗೆ ಹೋಗುವ ರೈಲು ಪಕ್ಕದ ಪ್ಲಾಟ್ ಫಾರಮ್ಮಿನಲ್ಲಿ ನಿಂತಿತ್ತು.ಸರಿಯಾಗಿ ಕೇಳಿ ಕೊಂಡು ಹತ್ತೋದು ಬ್ಯಾಡ್ವಾ?'ಎಂದ ಮದುವೆ ಗಂಡು .ಇಷ್ಟು ಹೊತ್ತು ಮೂಲೆಯಲ್ಲಿ ಮೌನವಾಗಿ ಕುಳಿತು ಕಿಟಕಿಯಾಚೆ ನೋಡುತ್ತಿದ್ದ ಸುಂದರ ಯುವಕನ ಮುಖದಲ್ಲಿ ಮಿಂಚು ಹೊಳೆದಂತಾಯಿತು.
ಅವನು ಮದುವೆ ಗಂಡನ್ನು ಉದ್ದೇಶಿಸಿ 'ಯಾರ್ರೀ ಹೇಳಿದ್ದು ಇದು ಮೈಸೂರಿಗೆ ಹೋಗುತ್ತೆ ಅಂತ ?ಇದು ಅರಸೀಕೆರೆಗೇ ಹೋಗೋದು.ನಾನೂ ಅಲ್ಲಿಗೇ ಹೋಗ ಬೇಕು'ಎಂದ.ಇಬ್ಬರಲ್ಲೂ ಮಾತಿಗೆ ಮಾತು ಬೆಳೆಯಿತು.ಮದುವೆ ಗಂಡಿಗೆ ಸಿಟ್ಟು ಜಾಸ್ತಿ.ಹೊಸ ಹೆಂಡತಿಯ ಮುಂದೆ ತನ್ನ ಪ್ರತಾಪ ತೋರಿಸ ಬೇಕಿತ್ತು.'ರೀ ಸ್ವಾಮಿ .....ಮುಂದೆ ಬರುವ ಸ್ಟೇಶನ್ ಯಶವಂತ ಪುರವಾಗಿದ್ದರೆ,ಇದು ಅರಸೀಕೆರೆ ರೈಲು ಅಂತ.ಹಾಗೇನಾದರೂ ಆದರೆ ನನ್ನ ಕತ್ತಿನಲ್ಲಿರುವ ಮೂರು ತೊಲ ಬಂಗಾರದ ಚೈನು ನಿಮಗೆ ಕೊಡುತ್ತೇನೆ ,ಆದರೆ ಮುಂದಿನ ಸ್ಟೇಶನ್ ಕೆಂಗೇರಿ ಬಂದರೆ ನೀವೇನು ಕೊಡುತ್ತೀರಿ ?'ಎಂದು ಸವಾಲು ಹಾಕಿದ.ಆ ಸುಂದರ ಯುವಕ ತನ್ನ ಜೇಬಿನಲ್ಲಿದ್ದ ಮೂರು ತೊಲ ಹೊಸ ಬಂಗಾರದ ಸರವನ್ನು ಕೊಡುವುದಾಗಿ ಒಪ್ಪಿಕೊಂಡ .ಅಲ್ಲಿದ್ದವರೆಲ್ಲಾ ಮಾತು ಹೊರಡದೆ ಅವಾಕ್ಕಾಗಿ ,ಈ ಹೊಸ ನಾಟಕದ ಬೆಳವಣಿಗೆ ಏನಾಗುತ್ತೋ ಎಂದು ಕುತೂಹಲದಿಂದ ನೋಡುತ್ತಾ ಕುಳಿತಿದ್ದರು. ಮುಂದೆ ,ಕೆಂಗೇರಿ ಸ್ಟೇಶನ್ ಬಂತು .ಆ ಸುಂದರ ಯುವಕ ಮರು ಮಾತನಾಡದೆ ತನ್ನಲ್ಲಿದ್ದ ಮೂರು ತೊಲ ಹೊಸದಾಗಿ ಮಾಡಿಸಿದ್ದ ಬಂಗಾರದ ಚೈನನ್ನು ಆ ಮದುವೆ ಗಂಡಿಗೆ ಕೊಟ್ಟು , ರೈಲಿನಿಂದ ಇಳಿದ.ಇಳಿಯುವಾಗ ಒಮ್ಮೆ ಮದುವೆ ಗಂಡಿನ ಕಡೆ ತಿರುಗಿ ನೋಡಿದ.ಮದುವೆ ಗಂಡು ಆ ಚಿನ್ನದ ಸರವನ್ನು ತನ್ನ ಹೊಸ ಹೆಂಡತಿಗೆ ಉಡುಗೊರೆಯಾಗಿ ಕೊಟ್ಟ.ಅದನ್ನವಳು ನಡುಗುವ ಕೈಗಳಿಂದ ತೆಗೆದುಕೊಂಡಳು.ಯುವಕನ ಮುಖದಲ್ಲಿ ಕಂಡೂ ಕಾಣದಂತೆ ವಿಷಾದದ ನಗೆಯೊಂದು ಮಿಂಚಿ ಮಾಯವಾಯಿತು!ಅರಸೀಕೆರೆಗೆ ಹೋಗಬೇಕಾಗಿದ್ದ ಮಧ್ಯವಯಸ್ಕನೂ ವಿಧಿ ಇಲ್ಲದೆ ತನ್ನ ಲಗೇಜಿನೊಂದಿಗೆ ಯುವಕನ ಜೊತೆ ಕೆಂಗೇರಿಯಲ್ಲಿ ಇಳಿದ.ಟ್ರೈನು ಮುಂದೆ ಹೋಯಿತು.ಟ್ರೈನಿನ ಕಿಟಕಿಯಲ್ಲಿ ಮುಖವಿಟ್ಟು,ಕತ್ತಲಲ್ಲಿ ಏನನ್ನೋ ಹುಡುಕುತ್ತಾ  ಮದುವೆ ಹೆಣ್ಣು ಕಿಟಕಿಯಿಂದ ಕೈ ಬೀಸಿದಳು.ಕೆಂಗೇರಿಯಲ್ಲಿ ಇಳಿದ ಯುವಕ  ಬಿಕ್ಕಿ,ಬಿಕ್ಕಿ, ಅಳುತ್ತಿದ್ದ. ಮಧ್ಯವಸ್ಕನಿಗೆ ಏನೋ ಅನುಮಾನ ಬಂತು.'ಇದು ಮೈಸೂರಿಗೆ ಹೋಗುವ ಗಾಡಿ ಎಂದು ನಿನಗೆ ಮೊದಲೇ ಗೊತ್ತಿತ್ತಾ?'ಎಂದ.ಯುವಕ ಅಳುತ್ತಲೇ ಹೌದೆಂದು ಒಪ್ಪಿಕೊಂಡ.'.ಮತ್ತೆ ಯಾಕೆ ಬೆಟ್ ಕಟ್ಟಿ ಬಂಗಾರದ ಚೈನು ಕಳೆದುಕೊಂಡಿರಿ?' ಎಂದ.'ಸರ್ ಅದೊಂದು ದೊಡ್ಡ ಕಥೆ.ಆ ಹುಡುಗಿಯನ್ನು ನಾನು ತುಂಬಾ ಪ್ರೀತಿಸಿದ್ದೆ .ಅವಳೂ ನನ್ನನ್ನು ಅಷ್ಟೇ ಪ್ರೀತಿಸುತ್ತಿದ್ದಳು.ನಮ್ಮ ಮದುವೆಗೆ ಜಾತಿ ಅಡ್ಡಿ ಬಂತು.ನಾನು  ಕೊಟ್ಟ ಚಿನ್ನದ ಸರ ಅವಳಿಗಾಗಿ ಮಾಡಿಸಿದ್ದು .ಅದನ್ನು ಅವಳಿಗೆ ಹೇಗೆ ತಲುಪಿಸಬೇಕೋ ತಿಳಿದಿರಲಿಲ್ಲ.ಏನಾದರೂ ಉಪಾಯ ಹೊಳೆಯಬಹುದೆಂದು ಅವಳ ಬೋಗಿಯಲ್ಲಿ ಬಂದು ಕುಳಿತೆ.ನಿಮ್ಮಿಂದ ಅದು ಸಾಧ್ಯವಾಯಿತು.ತುಂಬಾ ಧನ್ಯವಾದಗಳು ಸರ್.ನಿಮಗೆ ದಾರಿ ತಪ್ಪಿಸಿದ್ದಕ್ಕೆ ಕ್ಷಮೆ ಇರಲಿ'ಎಂದು ಕಣ್ಣೀರು ಒರೆಸಿ ಕೊಳ್ಳುತ್ತಾ, ಕತ್ತಲಲ್ಲಿ ಮರೆಯಾದ.ಮಧವಯಸ್ಕ 'ತಾನು ಎಂತಹ ನಾಟಕ ಒಂದಕ್ಕೆ ಸೂತ್ರಧಾರಿ ಯಾದೆನಲ್ಲಾ !'ಎಂದುಕೊಳ್ಳುತ್ತಾ, ಬೆಂಗಳೂರಿನ ಕಡೆ ಹೋಗುವ ಮುಂದಿನ ರೈಲಿಗಾಗಿ ಕಾಯ ತೊಡಗಿದ.
(ಇದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ 'ತಪ್ಪು ರೈಲಿನಲ್ಲಿ' ಕಥೆ.1970 ರಲ್ಲಿ ಪಿ.ಯು.ಸಿ.ಯಲ್ಲಿ ನಾನ್ ಡೀಟೈಲ್ ಪುಸ್ತಕದಲ್ಲಿ ಇದ್ದ ಕಥೆ.ಇನ್ನೂ  ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.ನಿಮಗೆಲ್ಲಾ ಈ ಕಥೆ ಇಷ್ಟವಾಯಿತೆ.ತಿಳಿಸಿ.ನಮಸ್ಕಾರ.)

Saturday, February 5, 2011

"ನಾವೂ......ಸಂತೆಯ ಚಿತ್ರಗಳೇ ! "

ನಾವು ಪ್ರತಿಯೊಬ್ಬರೂ 
ಈ ಜಗವೆಂಬ ಸಂತೆಯಲ್ಲಿ
ಮಾರಾಟಕ್ಕೆ ಇರುವ,
ಕ್ಷಣ ಕ್ಷಣಕ್ಕೂ,
ಬಣ್ಣ ಭಾವ ಬದಲಿಸುವ,
ಚಲಿಸುವ,
ಚಿತ್ರವಿಚಿತ್ರ ಚಿತ್ರಗಳು!
ರಚಿಸಿದವನೆಲ್ಲೋ ನಾಪತ್ತೆ!
ಕಾಣೆಯಾಗಿದ್ದಾನೆ ನಿಗೂಢವಾಗಿ!
(ಚಿತ್ರದೊಳಗೆ ಚಿತ್ರಕಾರನಿದ್ದಾನೆಯೇ? ಗೊತ್ತಿಲ್ಲ)
ನಮ್ಮ ಬೆಲೆಯನ್ನು ನಾವೇ ,
ಕಟ್ಟಿಕೊಳ್ಳಬೇಕು!
ನಮ್ಮ ಮಾರ್ಕೆಟಿಂಗ್
ನಾವೇ ಮಾಡಿಕೊಳ್ಳಬೇಕು!
ಬೆಲೆ ಸಿಕ್ಕದಿದ್ದಲ್ಲಿ,
ಮಾರಾಟ ವಾಗದಿದ್ದಲ್ಲಿ,
ನಮ್ಮ ನಡವಳಿಕೆಯ ಕುಂಚದಲ್ಲಿ,
ನಮ್ಮನ್ನು ನಾವೇ ತಿದ್ದಿಕೊಳ್ಳಬೇಕು!
ಬದಲಾವಣೆ ಮಾಡಿಕೊಳ್ಳಬೇಕು!
ಅಂತೂ, ಇಂತೂ,
ಬದುಕೆಂಬ ಸಂತೆಯಲ್ಲಿ
ನಾವೂ, ಮಾರಾಟ ವಾಗಬೇಕಾದ
ಚಲಿಸುವ ಚಿತ್ರಗಳು!

Tuesday, February 1, 2011

"ಚಿತ್ರ ಸಂತೆಯ ........ಚಿತ್ರಗಳು"

ಮಧ್ಯಾಹ್ನದ ಉರಿಬಿಸಿಲಿಗೆ ಮೈಒಡ್ಡಿಕೊಂಡು, ಫುಟ್ ಪಾತಿನ ಪಕ್ಕದ ಬೇಲಿಯ ಸರಳುಗಳಿಗೆ ಸಾಲಾಗಿ ಒರಗಿ ಕುಳಿತ ಪೈಂಟಿಂಗ್ ಗಳು ಇನ್ನೂ ತಾವು ಮಾರಾಟ ವಾಗದೆ ಉಳಿದಿರುವುದಕ್ಕೆ ,ಯಾರಿಗೂ ಕೇಳದಂತೆ ಮೆಲ್ಲನೆ ಬಿಕ್ಕಳಿಸುತ್ತವೆ.ಪಕ್ಕದಲ್ಲೇನಿಂತ ಅವುಗಳ ಜನಕ ಗಿರಾಕಿಗಳಿಗಾಗಿ ಕಾದು ಬೇಸತ್ತು,ಹಚ್ಚಿದ ಸಿಗರೇಟು ಒಂದರಿಂದ ಸುದೀರ್ಘವಾಗಿ ದಂಎಳೆದು ಬೇಸರದ ಹೊಗೆಕಾರುತ್ತಾನೆ. ಒಂದೊಂದು ಚಿತ್ರವೂ ಕೈಬೀಸಿ ಕರೆದು, ದಯಮಾಡಿ ನನ್ನ ಸೆರೆಬಿಡಿಸಿ,ನಿಮ್ಮ ಬೆಡ್ ರೂಮಿನಲ್ಲೋ,ಹಾಲಿನಲ್ಲೋ, ಕಡೆಗೆ ಬಾತ್ ರೂಮಿನಲ್ಲೋ ಹ್ಯಾಂಗ್ ಮಾಡಿ ಎಂದು ಆರ್ತರಾಗಿ ಬೇಡಿಕೊಳ್ಳುತ್ತವೆ.ತಮ್ಮ ಡ್ರೆಸ್ ಗಳ ಹಿಡಿತಕ್ಕೆ ಮೀರಿ,ಎಲ್ಲಾ ಕಡೆಯಿಂದಲೂ ಚಿಮ್ಮುತ್ತಿರುವ ಹುಡುಗಿಯರು ,ತಮ್ಮ ತಂಪು ಕನ್ನಡಕದ ಹಿಂದಿನಿಂದಲೇ ನಾಲ್ಕು ಪೈಂಟಿಂಗ್ ಗಳನ್ನು ಅವಲೋಕಿಸಿ ಸುಸ್ತಾಗಿ,ಎರಡೆರಡು ಕೋನ್ ಐಸ್ಕ್ರೀಂ ತಿಂದು ತಮ್ಮ ಧಡೂತಿ ದೇಹಗಳನ್ನು ಮತ್ತಷ್ಟು ಸೊಂಪಾಗಿಸಿಕೊಳ್ಳುತ್ತಾರೆ.ಐಸ್ಕ್ರೀಂ ಮಾರಾಟಗಾರರಿಗೋ ಸುಗ್ಗಿಯೋಸುಗ್ಗಿ .ಚಿತ್ರಗಳಿಗಿಂತ ಅವೇ ಹೆಚ್ಚು ಮಾರಾಟವಾಗುತ್ತಿವೆ .ಮೊಮ್ಮಗಳಪೈಂಟಿಂಗ್ ಅನ್ನು ಕಾಯುತ್ತ ಕುಳಿತ ರಸಗುಲ್ಲಾ ತಿಂದು ಕೆಂಪಾದ ಕಲ್ಕತ್ತಾದ ಅಜ್ಜಿ ಯೊಬ್ಬಳು ಉರಿಬಿಸಿಲಿನ ತಾಪಕ್ಕೆ ಮತ್ತಷ್ಟು ಕೆಂಪಾಗಿ ತಾನೇ ಒಂದು ಪೈಂಟಿಂಗ್ ನಂತೆ ಕಾಣುತ್ತಾಳೆ.ಕಲಾವಿದರ ಗುಂಪೊಂದು ಗಿರಾಕಿಗಳ ಚೌಕಾಸಿಯ ಬಗ್ಗೆ ಬೇಸರದಿಂದ ಮಾತಾಡಿಕೊಂಡು, ಚಿತ್ರಸಂತೆಯವರು ಕೊಟ್ಟ ರೈಸ್ ಬಾತ್ ತಿನ್ನುತ್ತಿದ್ದಾರೆ.ಕೆಲವರು ದೊಡ್ಡ ದೊಡ್ಡ ಕ್ಯಾಮೆರಾ ಗಳಲ್ಲೋ ಮೊಬೈಲ್ ಗಳಲ್ಲೋ ಚಿತ್ರಗಳ ಫೋಟೋ ಕ್ಲಿಕ್ಕಿಸುವುದನ್ನೇ ಒಂದುದೊಡ್ಡ ಕಾಯಕ ಮಾಡಿಕೊಂಡಿದ್ದಾರೆ. ಹುಲ್ಲುಗಾವಲಿನಲ್ಲಿ ಮೇಯಲು ಬಿಟ್ಟ ಕರುವೊಂದು ಏನನ್ನೂ ಮೇಯದೆ ಅತ್ತಿಂದಿತ್ತ ಓಡಾಡುವಂತೆ,ಕೆಲವರು ಯಾವ ಚಿತ್ರವನ್ನೂ ಖರೀದಿಸದೇ, ಬರಿದೇ ಅತ್ತಿಂದಿತ್ತ ತಿರುಗಾಡಿ ಕಾಲು ನೋಯಿಸಿ ಕೊಂಡಿದ್ದಾರೆ.ನೂರಾರು ಹೆಣ್ಣುಗಳನ್ನು ನೋಡಿ ಕಡೆಗೆ ಯಾವುದೋ ಒಂದನ್ನು ಗಂಟು ಹಾಕಿಕೊಳ್ಳುವ ಗಂಡಿನಂತೆ ಕೆಲವರು ಎಷ್ಟೋ ಚಿತ್ರಗಳನ್ನು ನೋಡಿ ಖರೀದಿಸದೇ ಬಿಟ್ಟು ಕಡೆಗೆ ಕಳಪೆಚಿತ್ರ ಒಂದನ್ನು ಖರೀದಿಸಿ, ಕೊಟ್ಟ ಬೆಲೆ ಜಾಸ್ತಿಯಾಯ್ತೇನೋ ಎಂದು ಒದ್ದಾಡುತ್ತಾರೆ.ಕತ್ತಲಾಗುತ್ತಿದ್ದಂತೆ ಮಾರಾಟವಾಗದ ಚಿತ್ರಗಳ ಮೌನ ರೋದನ ಮುಗಿಲು ಮುಟ್ಟುತ್ತದೆ.ಅವುಗಳಿಗೆ ಸಾಂತ್ವನ ಹೇಳುವಂತೆ ಎಲ್ಲಿಂದಲೋ ತಂಗಾಳಿ ಬೀಸಿ ,ಆಶಾಕಿರಣದ ಸಂಕೇತವಾಗಿ ಬೀದಿ ದೀಪಗಳು ಜಗ್ಗನೆ ಹತ್ತಿಕೊಳ್ಳುತ್ತವೆ .ನಾಳೆ ಮತ್ತೆ ಬೆಳಗಾಗುತ್ತದೆ ಎನ್ನುವ ಭರವಸೆಯಲ್ಲಿ ಚಿತ್ರಗಳು ಒಂದೊಂದಾಗಿ ಪೆಟ್ಟಿಗೆ ಸೇರುತ್ತವೆ ----- ಮತ್ತೆ ಯಾವುದೋ ಸಂತೆಗೆ ಪಯಣ ಬೆಳಸಲು.ಜೀವನವೆಂದರೆ ಅದೇ ಅಲ್ಲವೇ?..............ನಿಲ್ಲದ ಪಯಣ!!