Monday, May 31, 2010

'ಅಜ್ಜನ ನೋವು ! '

ಮೊನ್ನೆ ನಮ್ಮ ಆಸ್ಪತ್ರೆಯ ಹೊರ ರೋಗಿಗಳ ವಿಭಾಗಕ್ಕೆ ಹಳ್ಳಿಯವನಂತೆಕಾಣುತ್ತಿದ್ದ ಅಜ್ಜನೊಬ್ಬ ತನ್ನ ಹೆಂಡತಿಯೊಡನೆ
ಬಂದ.ತನ್ನ ಸರದಿ ಬಂದಾಗ ನನ್ನ ಪರೀಕ್ಷಾ ಕೋಣೆಯೊಳಗೆ ಬಂದು ರೋಗಿಗಳಿಗಾಗಿ ಇದ್ದ ಸ್ಟೂಲಿನ ಮೇಲೆ ಕುಳಿತ.
ಪಕ್ಕದಲ್ಲಿ ಅಜ್ಜಿ ನಿಂತಿದ್ದಳು.ನಾನು ಎಲ್ಲರನ್ನೂ ಕೇಳುವಂತೆ'ಎನಜ್ಜಾ ಏನು ತೊಂದರೆ 'ಎಂದು ಕೇಳಿದೆ.ಅಜ್ಜ
ಮಾತಾಡದೆ ಸುಮ್ಮನೆ ಕೂತಿದ್ದ.ಅಜ್ಜಿ ರಾಗವಾಗಿ 'ಬಹಳ ಕಡಿ ತೋರಸೀವ್ರೀ,ಗುಣಾನೇ ಆಗಿಲ್ಲಾ 'ಎಂದು  ಉತ್ತರ ಕೊಟ್ಟಳು.
ಏನು ತೊಂದರೆ ಎಂದು ಹೇಳದೆ ಸತಾಯಿಸುತಿದ್ದಾರಲ್ಲಾ ಎಂದು ಸ್ವಲ್ಪ ತಲೆ ಬಿಸಿಯಾಯಿತು.ಬಹುಷಃ ಕಿವಿ ಸರಿಯಾಗಿ
ಕೇಳಿಸುತ್ತಿರಲಿಕ್ಕಿಲ್ಲ ಎಂದುಕೊಂಡು ದನಿ ಎತ್ತರಿಸಿ 'ಅಜ್ಜಾ ಏನು ತೊಂದರೆ?ತೊಂದ್ರೇ ಏನು ?'ಎಂದು ಎರಡೆರಡು ಸಲ
ಕೇಳಿದೆ.ಅಜ್ಜ 'ಬೇಜಾರು ಮಾಡಿಕೊಳ್ಳಬೇಡಿ ಸರ್ 'ಎಂದು ಹೇಳಿನನ್ನ ಮುಂಗೈಯನ್ನು ಜೋರಾಗಿ ಚಿವುಟಿ 'ಇಲ್ಲಿ,ಹೀಗೆ,
ನೋವಾಗುತ್ತೆ ನೋಡ್ರೀಸರ್ 'ಎಂದು ನನ್ನ ಮುಖ ನೋಡುತ್ತಾ ಕುಳಿತ.ಇದ್ದಕ್ಕಿದ್ದಂತೆ ನಡೆದ ಈ ಆಘಾತದಿಂದ ಚೇತರಿಸಿ
ಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಯಿತು.ಅಜ್ಜನದು  ಬೇಸಾಯ ಮಾಡಿದ ಬಿರುಸು ಕೈ.ಚಿವುಟಿದ ಕಡೆ ಚುರು ಚುರು ಎನ್ನುತ್ತಿತ್ತು.ವೈದ್ಯನಾಗಿ ಮೂವತ್ತ ನಾಲಕ್ಕು ವರ್ಷಗಳಲ್ಲಿ ಯಾವ ರೋಗಿಯೂ ಈ ರೀತಿ  ತನ್ನ ನೋವನ್ನು ನನ್ನ ಅನುಭವಕ್ಕೆತಂದಿರಲಿಲ್ಲ!ಅಜ್ಜಿಯ ಕಡೆ ತಿರುಗಿ 'ಏನಜ್ಜೀ ನಿನ್ನ ಗಂಡ ಹೀಗೆ?'ಎಂದೆ.'ಏನ್ ಮಾಡಬೇಕ್ರೀ ಯಪ್ಪಾ!ಯಾವ ಡಾಕ್ಟರಿಗೂ ಇವನ ನೋವು ಏನು ಅಂತ ತಿಳೀವಲ್ತು!ಅದ್ಕಾ ಹೀಂಗ ಮಾಡ್ಯಾನ ನೋಡ್ರೀ 'ಎಂದಳು ಹುಳ್ಳಗೆ ನಗುತ್ತಾ.ಅವನಿಗೆ ಮುಂಗೈಯಲ್ಲಿ ನೋವಿದ್ದುದು ನನ್ನ ಪುಣ್ಯ ಎಂದು ಸಮಾಧಾನ ಪಟ್ಟುಕೊಂಡೆ.'ಬೇರೆಲ್ಲಾದರೂ ನೋವಿದ್ದಿದ್ದರೆ'!ಎಂದು ನೆನಸಿಕೊಂಡು ಒಂದು ಕ್ಷಣ ಗಾಭರಿಯಾಯಿತು.

Saturday, May 29, 2010

'ಮನ್ಸರ್ ಮಾತು '

ಮಾತಿನ ಬಗ್ಗೆ ಎರಡು ಮಾತು.ಮಾತು ಮನುಷ್ಯನಿಗೆ ವರವೂ ಹೌದು,ಶಾಪವೂ ಹೌದು. ಹೇಳುವಂತಹ ಮಾತುಗಳನ್ನು ಹೇಳಬಹುದಾದಲ್ಲಿ ಹೇಳಿದರೆ ಅರ್ಥ.ಹೇಳಬಾರದಲ್ಲಿ ಹೇಳಿದರೆ ವ್ಯರ್ಥ.ಇನ್ನು ಕೆಲವೆಡೆ ಅನರ್ಥ! ಹೇಳಬಾರದನ್ನು ಹೇಳಿ,ಎಡವಟ್ಟು ಮಾಡಿಕೊಂಡು 'ಅಯ್ಯೋ ನಾನು ಹೀಗೆ ಹೇಳಬಾರದಿತ್ತು ,ಹಾಗೆ ಹೇಳಬೇಕಾಗಿತ್ತು' ಎಂದು ಪರದಾಡುವರೇ ಹೆಚ್ಚು.ಕೆಲವರ ಮಾತು ಕೇಳುತ್ತಲೇ ಇರಬೇಕುಎನಿಸುತ್ತದೆ.ಕೆಲವರು ಮಾತು ಶುರು ಮಾಡಿದರೆ ಎದ್ದು ಓಡಿ ಹೊಗಬೇಕಿನಿಸುತ್ತದೆ.ಮಾತನಾಡುವುದೂ ಒಂದು ಕಲೆ.ಈ ಕಲೆಯನ್ನು ಸಿದ್ಧಿಸಿ ಕೊಂಡವರಲ್ಲಿ ನಮ್ಮ ಹಿರಿಯ ಕವಿ ಜಿ.ಪಿ.ರಾಜ ರತ್ನಂಕೂಡಒಬ್ಬರು.ಅವರ'ರತ್ನನಪದಗಳು'
ಪುಸ್ತಕದಲ್ಲಿ ಮಾತಿನ ಬಗ್ಗೆಯೇ ಒಂದುಕವನವಿದೆ.ಕವನದ ಹೆಸರು'ಮನ್ಸರ್ ಮಾತು'.ಈ ಕವನವನ್ನು ಮಾತಿನ ಬಗ್ಗೆ
ಉಪನ್ಯಾಸ ಕೊಡುವಾಗಲೆಲ್ಲಾ quote ಮಾಡಬಹುದು.
ಮಾತು ಪರಿಣಾಮ ಕಾರಿಯಾಗಿರುತ್ತೆ.ನಾನು ಹಲವಾರು
ವೇದಿಕೆಗಳಲ್ಲಿಈ ಪದ್ಯವನ್ನು ಕೋಟ್ ಮಾಡಿದ್ದೇನೆ.
ಬನ್ನಿ ಓದೋಣ,'ಮನ್ಸರ್ ಮಾತು';-
'ಮನ್ಸರ್ ಮಾತು '

ಹೇಳಾದ್ ಏನ್ರ,ಹೇಳಾದ್  ಇದ್ರೆ
ಜಟ್ ಪಟ್ನ ಹೇಳಿ ಮುಗೀಸು .
ಯಾವ್ದಕ್ ಇಕ್ಬೇಕ್ ಗೊತ್ತ್ ಮಾಡ್ಕೊಂಡಿ
ಆಮೇಕ್ ದೊಣ್ಣೆ ಬೀಸು.

ಸುತ್ಕೊಂಡ್ ಸುತ್ಕೊಂಡ್ ಮಾತಾಡ್ತಿದ್ರೆ
ಕೇಳಾಕ್  ಬಲ್ ಪಜೀತಿ .
ಬೈರ್ಗೆ ಕೊರದಂಗ್ ಕೊರಿತಾನಿದ್ರೆ
ಯಾವ್ ದೇವರ್ಗೆ ಪ್ರೀತಿ ?

ಕುಂಬಾರ್ ಗೌಡನ್ ಚಕ್ರಕ್ಕೂನೆ
ಗಾಳ ನೋಡಿದ್ ಮೀನ್ಗೂ
ಸುತ್ಕೊಂಡ್ ಸುತ್ಕೊಂಡ್ ಹೋಗೋದ್ ಸಹಜ
ಅದ್ಯಾಕ್ ನನಗೂ  ನಿನಗೂ ?

ಕೇಳೋರ್  ಇನ್ನಾ  ಕೇಳಬೇಕಂತಾ
ಕುಂತ್ಕಂಡ್ ಇದ್ದಂಗೇನೇ
ಹೇಳೋದ್ನ ಎಷ್ಟೋ ಅಷ್ಟರಲ್ ಹೇಳಿ
ಮನೇಗೆ ಹೋಗೋನ್ಗೆ ಮೇನೆ!

ಮಾತ್ ಇರಬೇಕು ಮಿಂಚ್ ಹೊಳದಂಗೆ !
ಕೇಳ್ದೋರ್ 'ಹಾಂ 'ಅನಬೇಕು !
ಸೋನೆ ಹಿಡದ್ರೆ ಉಗದ್ ಅಂದಾರು
'ಮುಚ್ಕೊಂಡ್ ಹೋಗೋ ಸಾಕು'!

ಮನ್ಸನ್ ಮಾತು ಎಂಗಿರಬೇಕು ?
ಕವಣೆ ಗುರಿ ಇದ್ದಂಗೆ !
ಕೇಳ್ದೋರ್ ಮನ್ಸಿಗೆ ಲಗತ್ ಆಗ್ಬೇಕು
ಮಕ್ಕಳ ಮುತ್ತಿದ್ದಂಗೆ !

Tuesday, May 25, 2010

'ಮದ್ಯ ಸಾರ '----ಅಪಾರ .

ಜಿ.ಪಿ.ರಾಜರತ್ನಂ  ಅವರ 'ರತ್ನನ ಪದಗಳು' ಮೊದಲು ಪ್ರಕಟವಾದದ್ದು 1932 ರಲ್ಲಿ.ಆದರೆ ರತ್ನನ ಪದಗಳು
ಇಂದಿಗೂ ಕಾವ್ಯಾಸಕ್ತರಿಗೆ ಇನ್ನೂ ಆಕರ್ಷಕ.ನನಗೆ ಕನ್ನಡ ಕಾವ್ಯದ ಹುಚ್ಚು ಹಿಡಿಸಿದ್ದೇ 'ರತ್ನನ ಪದಗಳು'!
ಇತ್ತೀಚಿಗೆ ಪ್ರಕಟವಾದ ಇನ್ನೊಂದು ಅದೇ ರೀತಿಯ ಪುಸ್ತಕವೆಂದರೆ ಛಂದ ಪ್ರಕಾಶನದ 'ಅಪಾರ'
 ಅವರ 'ಮದ್ಯ ಸಾರ'.ಪುಟ್ಟ ಪುಸ್ತಕ.ಬಾಟಲಿಯಂತೆಯೇ ಪುಸ್ತಕವನ್ನೂ ಜೋಬಿಗಿಳಿಸಬಹುದು!ಅದನ್ನು
'ನೈಂಟಿ'ಹನಿಗಳು ಎಂದಿದ್ದಾರೆ.ಬೆಲೆಕೂಡ ಒಂದು ವಿಶಿಷ್ಟ.ಬರೀ ಮೂವತ್ತು ರೂಪಾಯಿ!ಮೂರ್ತಿ ಚಿಕ್ಕದಾದರೂ
 ಕೀರ್ತಿ ದೊಡ್ಡದು! 'ಯಾರು ಕೇಳುವರು ನಿಮ್ಮ ಕೊಂಕು,ಸಿಕ್ಕಿರುವಾಗ ಸ್ವರ್ಗದ ಲಿಂಕು !'ಎನ್ನುತ್ತಾರೆ.
ಬೆನ್ನುಡಿಯಲ್ಲಿ 'ಗೀತ ಸಾರ  ವೇದ ಸಾರ,ಗಾದೆ ಸಾರ ಬದುಕಲು,ಮದ್ಯಸಾರ ವೇನು ಕಡಿಮೆ ,
ಗಮನ ಕೊಡಿ ಅತ್ತಲೂ '.ಎನ್ನುತ್ತಾರೆ! ಕುಮಾರ್ ಅವರ ಚಿತ್ರಗಳೂ ಚೆನ್ನಾಗಿವೆ. ಈ ಹನಿಗಳು ಏನಾದರೂ ಕಿಕ್ ಕೊಟ್ಟರೆ ನಾನು ಜವಾಬ್ದಾರನಲ್ಲ! ಇನ್ನು ಮಡಿವಂತರು ಕ್ಷಮಿಸಬೇಕು.ಕೆಂಗಣ್ಣು ಬಿಡಬೇಡಿ !ಕರಗಿ ಬೀರಾಗಿ ಹೋದೇನು!

೧) ಬೀರು ವಿಸ್ಕಿ ಜಿನ್ನು ವೈನು 
ಪರಮಾತ್ಮ  ಒಬ್ನೆ ಹೆಸರು ಬೇರೆ 
ಹೆಂಡ ಅಂದ್ರೆ ಇನ್ನೂ ವೈನು 
ಕನ್ನಡ ಪದಗಳ ಅಮಲೇ ಬೇರೆ 


೨)ಖಾಲಿಯಾಗಿದೆ  ಬದುಕು 
ಖಾಲಿಯಾಗಿದೆ ಬಾಟಲಿ 
ಉನ್ಮತ್ತ ಹೃದಯವನು ಹೊತ್ತು 
ರಸ್ತೆ ಹೇಗೆ ದಾಟಲಿ?


೩ )ನಡು ನೀರಲ್ಲಿ ಕೈ ಬಿಟ್ಟವಳೆ
ನಡು ರಾತ್ರಿ ನೆನಪಾಗದಿರು 
ಬದುಕಲು ಬಿಡು ಒಂಚೂರು 
ಹನ್ನೊಂದಕ್ಕೇ ಮುಚ್ಚುತ್ತೆ ಬಾರು 


೪) ಬೇಕಾ ಬಿಟ್ಟಿ ಕುಡೀತಾ ಹೋದ್ರೆ 
ಬದುಕೇ ಸರ್ವ ನಾಶ 
ಮನಸ್ಸು ಕೊಟ್ಟು ಕುಡಿದು ನೋಡಿ 
ಶೀಷ ದಲ್ಲೂ  ಈಶ 


೫) ರೊಕ್ಕ ಇದ್ದರಷ್ಟೇ ಸಾಲದು 
ದುಃಖ ಇರಬೇಕು ಕುಡಿಯುವನಿಗೆ 
ನಕ್ಕರೇನು ಚೆಂದ ಕುಡುಕ 
ಬಿಕ್ಕಬೇಕು ಎರಡು ಗುಟುಕು ನಡುವೆ 


೬)ಕುಡುಕನ ಮಾತಿದು ಏನು ಕೇಳುವಿರಿ 
ವಚನದ ಸಾಲಲ್ಲ ,ವಾಚನವೂ ಸರಿಯಿಲ್ಲ 
ದಾಸರ ಪದವಲ್ಲ ,ಉದಾಸರ ಪದವೇ ಎಲ್ಲ
ಭಜನೆ ತರವಲ್ಲ ,ವಿಭಜನೆ ವಿರಹದವು.


೭) ಬೇಡ್ಕೊತೀನಿ ಬಾರಂಗಳದಲಿ 
ನೆರದಿರೋ ಸಮಸ್ತ ಜನಕೆ 
ಕುಡಿದು ಮಾಡದಿರಿ ಉಪದ್ರವ  
ಕಳೀಬೇಡಿ ದ್ರವದ ಘನತೆ.


೮) ಎಷ್ಟನೇ ರೌಂಡೋ  ಯಾರಿಗೆ ಗೊತ್ತು 
ಎಲ್ಲ ಮರೆಯಲು ಬಾರಿಗೆ ಬಂದವನು 
ಖಾಲಿ ಮಾಡಿದ ಬಾಟಲುಗಳ 
ಲೆಕ್ಕ ಮಾತ್ರ ಹೇಗೆ ನೆನಪಿಡಲಿ? 

೯) ಶೇಂಗಾ,ಪಾಪಡ್,ಚಿಪ್ಸ್,ಪಕೋಡ
ಯಾವುದು ಗುಂಡಿಗೆ ಸರಿಯಾದ ಜೋಡಿ ?
ತಿಳಿಯದು ಏನೋ ಎಂತೋ,ನಿಮ್ಮ ರೀತಿ
ನನ್ನ ಆಯ್ಕೆ ಇದು :ಮುಗಿದು ಹೋದ ಪ್ರೀತಿ  

೧೦) ನೊಂದವನ ತಾಪ ,ಸೋತವನ ಶಾಪ
ಮರೆತವಳ ರೂಪ ,ಇಡೀ ಹಗಲ ಪಾಪ
ಸಂಜೆಯಾದೊಡನೆ ತಣ್ಣಗೆ ಕರಗುವುದು
ಬಿಯರು ಎಂಬ ಸಾರ್ವರ್ತಿಕ ದ್ರಾವಣದಲ್ಲಿ

೧೧) ಕರಗುತಿವೆ ಕೊರಗು ಬಾಟಲಿಯಲ್ಲಿ 
ಕಡೆಗೊಂದೇ ಉಳಿದಿದೆ ಚಿಂತೆ 
ಕುಡಿಯಲಾರದ ಅವಳು ಈ ಕ್ಷಣವ  
ಹೇಗೆ ನಿಭಾಯಿಸುವಳಂತೆ ?


೧೨)ಕುಡುಕರು ಅನ್ನಿ ಪರವಾಗಿಲ್ಲ 
ಕೆಡುಕರು ಅನ್ನಿ ಪರವಾಗಿಲ್ಲ 
ಯಾರು ಕೇಳುವರು ನಿಮ್ಮ ಕೊಂಕು 
ಸಿಕ್ಕಿರುವಾಗ ಸ್ವರ್ಗದ ಲಿಂಕು !
(WARNING; Drinking may be injurious to health 
in some.so don't drink .Reading kannada poetry
is healthy.so read as much as you can!)

Friday, May 21, 2010

'ನಗೆ -----ಗುಳಿಗೆಗಳು '

ವೈದ್ಯಕೀಯ  ರಂಗದಲ್ಲಿ  ಹಾಸ್ಯ  ಹಾಸುಹೊಕ್ಕಾಗಿದೆ .ಹೆಚ್ಚಾಗಿ ನೋವು ಖಾಯಿಲೆ ,ನರಳುವಿಕೆಗಳೇ ಇರುವ ಈ ಕ್ಷೇತ್ರ ದಲ್ಲಿ ಕೆಲವು ಹಾಸ್ಯ ಪ್ರಂಗಗಳು ನಡೆದು ಬದುಕನ್ನು ಹಸನುಗೊಳಿಸುತ್ತವೆ.ವೈದ್ಯಕೀಯ  ಕ್ಷೇತ್ರದಲ್ಲಿಯ  ಹಾಸ್ಯ ಕುರಿತೇ ಅನೇಕ ಪುಸ್ತಕಗಳು ಬಂದಿವೆ.ಹಲವಾರು ಖ್ಯಾತ ವೈದ್ಯರೂ ಇಂತಹ ಪುಸ್ತಕಗಳನ್ನು ಬರೆದಿದ್ದಾರೆ .ದಿನ ನಿತ್ಯದ ಜಂಜಡಗಳ ,ಒತ್ತಡದ ಬದುಕಿನಲ್ಲಿ ನಕ್ಕು ಹಗುರಾಗೋಣ ಬನ್ನಿ.ನಗೆ ಗುಳಿಗೆಗಳನ್ನು ದಿನಕ್ಕೆ ಕನಿಷ್ಠ ಮೂರು ಸಲವಾದರೂ ಸೇವಿಸಬೇಕು .
ಆಪರೇಶನ್  ಥೀಯೇಟರಿನೊಳಗೆ ಟ್ರಾಲಿಯ ಮೇಲೆ ಡ್ರಿಪ್ ಸಮೇತ ಮಲಗಿದ್ದ ರೋಗಿಯನ್ನು ಇಬ್ಬರು ವಾರ್ಡ್ ಬಾಯ್ ಗಳು ಕರೆದು ಕೊಂಡು ಹೋದರು .ಒಳಗೆ ಹೋಗುವಾಗಲೇ ರೋಗಿ ವಿಪರೀತ ಗಾಭರಿಯಾಗಿದ್ದ .ಅವನ ಸಂಬಂಧಿಗಳುಅವನಿಗೆ ಧೈರ್ಯ ಹೇಳಿ ಒಳಗೆ ಕಳಿಸಿದರು.ಒಳಗೆ ಏನು ನಡೆಯಿತೋ ಏನೋ ರೋಗಿ ಅವನಿಗೆ ಹಾಕಿದ್ದ ಪೈಪು ಗಳನ್ನೆಲ್ಲಾ ಕಿತ್ತು ಆಪರೇಶನ್ ಥೀಯೆಟರ್ ನಿಂದ ಹೊರಗೋಡಿ ಬಂದ .ಅಲ್ಲಿದ್ದ ಕೆಲವರು ಅವನನ್ನು ತಡೆದು  ನಿಲ್ಲಿಸಿ 'ಯಾಕಪ್ಪಾ ಹೀಗೆ ಓಡ್ತಾ ಇದ್ದೀಯ ? ಏನು ಕಥೆ 'ಎಂದು ಕೇಳಿದರು.ಅದಕ್ಕೆ  ರೋಗಿ ಉಬ್ಬಸ ಪಡುತ್ತಲೇ ಉತ್ತರ  ಕೊಟ್ಟ 'ಮತ್ತೆ ,ಮತ್ತೆ ----ಅಲ್ಲಿದ್ದ ಸಿಸ್ಟರ್ ಒಬ್ಬರು ,ನೀವೇನೂ ಹೆದರಬೇಡಿ ,ಮೊದಲ ಸಲ ಆಪರೇಶನ್ ಅಂದ್ರೆಹೀಗೆಲ್ಲಾ ಕೈ ನಡಗೋದು ,ಮೈ ವಿಪರೀತ ಬೆವರೋದು,ಎಲ್ಲಾ ಆಗುತ್ತೆ .ನಾನಿದ್ದೇನೆ ಧೈರ್ಯವಾಗಿರಿ ಅಂತೆಲ್ಲಾ ಧೈರ್ಯ ಕೊಡುತ್ತಿದ್ದರು 'ಎಂದ. ಅದಕ್ಕೆ ಅಲ್ಲಿದ್ದವರು 'ಅಲ್ಲಪ್ಪಾ ಸಿಸ್ಟರ್ ಧೈರ್ಯ ಹೇಳಿದ್ದರಲ್ಲಿ ತಪ್ಪೇನಿದೆ?ಅವರು ಎಲ್ಲಾ ರೋಗಿಗಳಿಗೂ ಹಾಗೇ ಧೈರ್ಯ ಹೇಳುತ್ತಾರೆ'ಎಂದರು.ಅದಕ್ಕೆ ರೋಗಿ 'ಅಯ್ಯೋ ,ಸಿಸ್ಟರ್ ಧೈರ್ಯ ಹೇಳಿದ್ದು ನನಗಲ್ಲ!ಆಪರೇಶನ್ ಮಾಡಬೇಕಿದ್ದ ಡಾಕ್ಟರಿಗೆ!'ಎಂದು ಹೇಳಿ ಅಲ್ಲಿಂದ ಓಟ ಕಿತ್ತ .ಅಂತಹ ಸಂದರ್ಭ ಬಂದರೆ ನಾನೂ ಅದನ್ನೇ ಮಾಡುತ್ತಿದ್ದೆ.ನೀವು? 

Wednesday, May 19, 2010

'ಗೆಲ್ಲುವ ಕುದುರೆಯಾಗಲಿಲ್ಲ!'

ಮೇ ತಿಂಗಳು ಪರೀಕ್ಷೆಗಳ ಫಲಿತಾಂಶಗಳು ಹೊರಬೀಳುವಾಗ ಪತ್ರಿಕೆಗಳನ್ನು ನೋಡಲು ಭಯವಾಗುತ್ತದೆ .ಫಲಿತಾಂಶ ಬಂದನಂತರ ಆತ್ಮಹತ್ಯೆ ಮಾಡಿಕೊಂಡವರ   ಸುದ್ಧಿ ಪತ್ರಿಕೆಗಳಲ್ಲಿ ಬರುವುದು ಮಾಮೂಲಾಗಿಬಿಟ್ಟಿದೆ.ಎಳೆಯ ಜೀವಗಳುಮೊಳಕೆಯಲ್ಲೇ ಬಿದ್ದು ಹೋಗುತ್ತವಲ್ಲಾ ಎಂದು ಹೃದಯ ಮರುಗುತ್ತದೆ.ಪರೀಕ್ಷೆಪಾಸಾಗುವುದೇ ಜೀವನದ ಮುಖ್ಯ ಗುರಿಯೇ ಎಂಬ ಪ್ರಶ್ನೆ ಏಳುತ್ತದೆ.ಅಂಕಕ್ಕಾಗಿಯೇ ಶಂಖ ಹೊಡೆಯುವ ಶಿಕ್ಷಣ ಶಿಕ್ಷಣವೇ ಎಂಬ ಶಂಕೆ ಮೂಡುತ್ತದೆ.

                ' ಗೆಲ್ಲುವ ಕುದುರೆಯಾಗಲಿಲ್ಲ'
              ----------------------------   
ನಾನೂ ----ಓದಿದ್ದೆ!
ಎಲ್ಲರಂತೆ  ಓಡಿದ್ದೆ ,
ಈ ಹುಚ್ಚು ರೇಸಿನಲ್ಲಿ!
ಜೀವವನ್ನೇ ತೇದು ,
ಎಣ್ಣೆ  ಮಾಡಿ ,
ಕಣ್ಣಿಗೆ ಆ ಎಣ್ಣೆ ಬಿಟ್ಟು 
ಹಗಲೂ ರಾತ್ರಿ 
ಪುಸ್ತಕದಲ್ಲಿನ ಅಕ್ಷರವಾಗಿ 
ನಿದ್ದೆಗೆ  ಒದ್ದು 
ಒಳಗೇ ಕುದ್ದು 
ಎಲ್ಲಾ ಸಂತೋಷಕ್ಕೆ 
ಬೀಗ ಜಡಿದು 
ವರ್ಷವೆಲ್ಲಾ ಓದಿದ್ದನ್ನು 
ಮೂರು ತಾಸಿನಲ್ಲಿ 
ಹೊರ ತಂದು,
 ಕಷ್ಟ  ಪಟ್ಟರೂ ,
ನಿರೀಕ್ಷಿಸಿದ ಫಲಿತಾಂಶ 
ಬಿಸಿಲುಗುದುರೆ !
'ನಾ ಗೆಲ್ಲುವ 
ಕುದುರೆಯಾಗಲಿಲ್ಲವೆಂದು '
ನೆನೆ ನೆನೆದು ಕೊರಗಿ ,
ನಂದಿ ಹೋಯಿತು 
ಒಂದು 
ದೀ 
ಪ 
!



Sunday, May 16, 2010

'ಸೊಪ್ಪಿನ ಹಾಡು'

ನಮ್ಮ ಜನಕ್ಕೆ ಇನ್ನೂ 'ಬಾಟಲಿ ಹುಚ್ಚು'ಹೋಗಿಲ್ಲ .ನಮ್ ಹುಡುಗ ತುಂಬಾ 'ಈಕು',ಒಂದು ಒಳ್ಳೇ ಟಾನಿಕ್ ಬರೆದು ಕೊಡಿ ಅಂತಲೋ,
ಒಂದು'ಗುಲ್ಕೊಸ್'ಬಾಟಲಿ ಏರಿಸಿಬಿಡಿ ಅಂತಲೋ ಬರುವವರ ಸಂಖ್ಯೆ ಸಾಕಷ್ಟಿದೆ.1991-93 ರಲ್ಲಿ ನಾನು ಶಿವಮೊಗ್ಗ ಜಿಲ್ಲೆಯ ಚಕ್ರಾನಗರದಲ್ಲಿವೈದ್ಯಾಧಿಕಾರಿಯಾಗಿದ್ದಾಗ ಸುತ್ತಮುತ್ತಲಿನ ಹಳ್ಳಿಯವರು ಹಿತ್ತಲಿನಲ್ಲಿ ಸೊಂಪಾಗಿ ಸೊಪ್ಪು ಬೆಳೆದು ,ಅದನ್ನು ಹುಡುಗರ ಕೈಯಲ್ಲಿ ಮಾರಿಸಿಅದರಿಂದ ಬಂದ ಹತ್ತೋ ಇಪ್ಪತ್ತೋ ರೂಪಾಯಿಗಳನ್ನು ಹಿಡಿದು ತಂದು 'ಒಂದು ಒಳ್ಳೇ ಟಾನಿಕ್ ಬರೆದು ಕೊಡಿ ಸಾರ್'ಅನ್ನೋರು .ಅವರಿಗೆ ಟಾನಿಕ್ ಗಿಂತ ಸೋಪ್ಪಿನಲ್ಲೇ ಹೆಚ್ಚು ಪೌಷ್ಟಿಕಾಂಶ ಇದೆ ಎಂದು ಎಷ್ಟು ಹೇಳಿದರೂ ಅರ್ಥವೇ ಆಗುತ್ತಿರಲಿಲ್ಲ .'ಹಿತ್ತಲ ಗಿಡ ಮದ್ದಲ್ಲ 'ಎನ್ನುವ ಗಾದೆ ನಿಜ ಅನ್ನಿಸಿತ್ತು .ಇಂಥವರಿಗಾಗಿ ಸೊಪ್ಪಿನ ಬಗ್ಗೆ ಒಂದು ಹಾಡು ಬರೆದು ಅದಕ್ಕೆ'ಪ್ಯಾಸಾ'ಚಿತ್ರದ 'ಸರ್ ಜೋ ತೆರಾ ಚಕ್ ರಾಯೇ 'ಎನ್ನುವ ಹಾಡಿನ ರಾಗ ಹಾಕಿ ಅಲ್ಲಿನ ಹೈಸ್ಕೂಲಿನಲ್ಲಿ ಮತ್ತು ಹಲವಾರು ವೇದಿಕೆಗಳಲ್ಲಿ ಹಾಡಿದ್ದೆ.'ನಿಮ್ಮ ಸೊಪ್ಪಿನ ಹಾಡು ಕೇಳಿ ನಮ್ಮ ಹುಡುಗರು ಈಗ ಸೊಪ್ಪು, ತರಕಾರಿ ಚೆನ್ನಾಗಿ ತಿನ್ನುತ್ತಾರೆ ಸಾರ್ ' ಎಂದು ತಂದೆ ತಾಯಂದಿರು ಬಂದು ಹೇಳಿದಾಗ ನಿಜಕ್ಕೂ ತುಂಬಾ ಸಂತೋಷವಾಗುತ್ತಿತ್ತು .ನಿಮ್ಮ ಹುಡುಗರೂ ಸೊಪ್ಪು ,ತರಕಾರಿ ತಿನ್ನದಿದ್ದರೆ ಅವರಿಗಾಗಿ ಈ ಹಾಡು;

ಹಿತ್ಲಲ್ ಎಷ್ಟೊಂದ್ ಸೊಪ್ಪು!
ನೋಡೋಕೆಷ್ಟೊಂದ್ ಸೊಂಪು!
ತಾನೂ ತಿನ್ನದೇ, ಮಕ್ಳಿಗೂ ತಿನ್ಸದೇ 
ಕಾಸಿಗ್ ಮಾರ್ತಾನ್ ಬೆಪ್ಪು! 
ಹಿತ್ಲಲ್ಎಷ್ಟೊಂದ್ಸೊಪ್ಪು -------! 


ಅದೋ ನೋಡು ದಂಟು !
ಗೊತ್ತಿಲ್ಲೇನೋ ಬಂಟು!
ಇದರಲ್ಲಿದೆ ಏ ಬಿ ಸಿ ಡಿ 
ಎಲ್ಲಾ ವಿಟಮಿನ್ ಗಂಟು!
ಹಿತ್ಲಲ್ಎಷ್ಟೊಂದ್ಸೊಪ್ಪು -------! 


ಇತ್ಲಾಗ್ ನೋಡು ಮೆಂತ್ಯ !
ತಿಂದರೆ ಖಾಯಿಲೆ ಅಂತ್ಯ !
ಇದನ್ನು ಬಿಟ್ಟು ದಿನ ಬೆಳಗಾದ್ರೆ 
ಟಾನಿಕ್ ಕುಡೀತ ಕುಂತ್ಯ!
ಹಿತ್ಲಲ್ಎಷ್ಟೊಂದ್ಸೊಪ್ಪು -------! 


ಅತ್ಲಾಗ್ ನೋಡು ಬಸಳೇ!
ತಿಂದರೆ ಗರ್ಭಿಣಿ ಮಹಿಳೆ 
ಹೊಟ್ಟೇಲಿರೋ ಹಸುಳೆ 
ಗಟ್ಟಿಯಾಗುತ್ತೆ ನಾಳೆ!
ಹಿತ್ಲಲ್ ಎಷ್ಟೊಂದ್ ಸೊಪ್ಪು -----!

Saturday, May 15, 2010

ನೀಲುವಿಗೊಂದು-ಶಾಲು '

ಲಂಕೇಶರ 'ನೀಲು ಕಾವ್ಯ'ಯಾರಿಗೆ ತಾನೇ ಗೊತ್ತಿಲ್ಲ?'ನೀಲು'ವಿನ fan club ಗಳೂ ಇವೆ ಎಂದು ಸ್ನೇಹಿತರೊಬ್ಬರು ಹೇಳುತ್ತಿದ್ದರು.
ಆದರೆ ಚೆನ್ನವೀರ ಕಣವಿ ಯವರಂತಹ ನಾಡಿನ ಹಿರಿಯ ಕವಿಯೊಬ್ಬರು 'ನೀಲು'ವಿನ ಬಗ್ಗೆ ಕವಿತೆಯೊಂದನ್ನು ಬರೆದಿದ್ದಾರೆಂದು 
ನನಗೆ ಗೊತ್ತಿರಲಿಲ್ಲ.1986 ರಲ್ಲಿ ಪ್ರಕಟಗೊಂಡ ಚೆನ್ನವೀರ ಕಣವಿಯವರ 'ಕಾರ್ತಿಕದ ಮೋಡ 'ಎಂಬ ಕವನ ಸಂಕಲದಲ್ಲಿ 
ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ 'ನೀಲು' ಕಾವ್ಯದ ಬಗ್ಗೆ'ನೀಲುವಿಗೊಂದು ಶಾಲು'ಎಂದು ಕವನ ಬರೆದು ಲಂಕೇಶರ 
ಕಾವ್ಯಕ್ಕೇಒಂದು ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ.'ನೀಲುವಿಗೊಂದು ಶಾಲು ',ನಿಮಗೂ ಇಷ್ಟ ಆಗಬಹುದು.ಓದಿ;


ಏನಮ್ಮ  ನೀಲು -
ನೀ ಮೂಲ್ಯಾಗಿಟ್ಟ ಬಣ್ಣದ ಕೋಲು;
ತಿವಿದರ ಮುಟ್ಟಿಕೋ ಬೇಕು 
ಸೊಂಟ ,ಕೈ ,ಕಾಲು.
ತುಂಟಾಟಕ್ಕ ನೀನs ಒಂದು ಸವಾಲು.


ಪ್ರೀತಿ:ನಿನ್ನ ರೀತಿ;ಆದರೂ 
ಕೋತಿ ಆಡಿಸಿ ಮಜಾ ನೋಡಬೇಕಂತಿ.
ಏನs ಬಿಡು ,ಚ್ಯಾಷ್ಟಿ ಮಾಡ್ತಾಳ ಅಂದರ 
ಕಣ್ಣಾಗ ನೀರು ಬರು ಹಾಂಗ ಖರೇನs ಹೇಳಿಬಿಡತಿ.

ಹಕ್ಕಿ ಹಾಂಗ ಎಲ್ಲಾ ಕಡೆ ಹಾರಾಡ್ತಿ 
ಸೊಕ್ಕು ಬಂದವರ ತಲಿ ಕುಕ್ಕತಿ 
ಕೋಳಿ ಹಾಂಗ ನಸೀಕ್ಲೆ ಎಬ್ಬಸ್ತಿ 
ಬಾಗಿಲದಾಗಿನ ಬಳ್ಳಿ ಹಾಂಗ ಮೈ ತುಂಬ ಹೂ ಬಿಡತಿ .

ನಿನ್ನ ಗುಟ್ಟು ಯಾರಿಗೂ ಬಿಟ್ಟುಕೊಟ್ಟಿಲ್ಲ ,
ಆದರೆ ವಾರಕ್ಕೊಮ್ಮೆ ಬರೂದು ಬಿಟ್ಟಿಲ್ಲ;
ಹಾಂಗ ನೋಡಿದರ ನೀಲು --ನೀ ಬಟಾಬಯಲು 
ಆದರೂ ಚಳಿಗಾಲದಾಗ ಇರಲಿ ತಗೋ 
ಹೊತಗೋ  ಈ  ಶಾಲು.

Thursday, May 13, 2010

'ಹನಿಗವನಗಳು'

1)ರವಿ-ಕವಿ
ಮೂಡಣದಲ್ಲಿ 
ಮೂಡಿದ ರವಿಗೆ 
'ಮೂಡ್ 'ಬಂದು 
ಬಾನಂಚಿನಲ್ಲಿ ಬರೆದ ,
ಹಕ್ಕಿಗಳ 
ಸಾಲು ಸಾಲು 
ಕವಿತೆ!
2)'ನಿಗೂಢ'
ಸೂರ್ಯ -------!
ನೀ ನನಗೆ ನಿಗೂಢ!
ಸಂಜೆ ಸೇರಿದರೆ 
ನೀ -------ಗೂಡ ,
ಮತ್ತೆ  ಕಾಣುವುದು 
ಮರುದಿನ ಮುಂಜಾನೆಯೇ !
3)ಸೂರ್ಯ -ಟೈಟು 
ಸೂರ್ಯ -----------,
ಸಂಜೆ ಪಡಖಾನೆಗೆ 
ಬರುವಾಗಲೇ ಟೈಟು!
ಮತ್ತೊಂದು 'ಸಿಕ್ಸ್ಟಿ'ಏರಿಸಿದ !
'ಬ್ಲ್ಯಾಕ್-ಔಟ್ 'ಆಗಿ ,
ಎಚ್ಚರ ಆದದ್ದು 
ಮಾರನೇ ದಿನ 
ಬೆಳಿಗ್ಗೆನೇ---!!
4)'ಬೋರು '  
ಯಾಕೋ
ಬೋರು !
ಮನದ 
ಬೋರಿನಲ್ಲಿ 
ಕವಿತೆಯ 
ನೀರು 
ಖಾಲಿ! 

Wednesday, May 12, 2010

ಚುಟುಕುಗಳು

೧).'ಕೊಬ್ಬು ಒಳ್ಳೆಯದಲ್ಲ'
ಕೊಬ್ಬುತ್ತಿದೆ ಕುರಿ !
ಮನದಲ್ಲೇ ನಗುತ್ತಾನೆ 
ಕಟುಕ ------!
ಕೊಬ್ಬುತ್ತಿದ್ದಾನೆ ಮನುಷ್ಯ !
ಮರೆಯಲ್ಲೇ ನಗುತ್ತಾನೆ 
ವಿಧಿ --------!
ಆದ್ದರಿಂದ ------,
ಕೊಬ್ಬು ಒಳ್ಳೆಯದಲ್ಲ !
ನಮಗೂ -----!
ಕುರಿಗೂ -------!
೨)'ಮಾತು--ಮೌನ'
ನೀವು ಮಾತನಾಡುತ್ತೀರಿ
ಸುಮ್ಮನಿರದಕ್ಕಾಗಿ !
ನಾನು ಸುಮ್ಮನಿರುತ್ತೇನೆ 
ಮಾತನಾಡದಿರುವುದಕ್ಕಾಗಿ !

Monday, May 10, 2010

'ಕಾಗೆ'

ಮಧ್ಯಾಹ್ನದ ಉರಿ ಬಿಸಿಲು
ಹಿತ್ತಿಲ ಬೇಲಿಯ ಮೇಲೆ ಕುಳಿತು
ಕೂಗುತ್ತಿರುವ 'ಕಾ '----'ಕಾ'
ಎಂಬ ಕರ್ಕಶ ಕೂಗಿಗೆ ,
ರಾತ್ರಿ ಎತ್ತಲೋ ಹಾರಿಹೋಗಿ
ಹಗಲಲ್ಲಿ ಒತ್ತರಿಸಿಕೊಂಡು ಬಂದ
ನಿದ್ದೆಯ ಹೊದ್ದಿಕೆ ಸರಿಸಿ ಎದ್ದು,
ಕಿಟಕಿಯಲ್ಲಿ ನೋಡಿದರೆ ,
ಸತ್ತ ಇರುಳಂತಿರುವ
ಇಲಿಯ ಕಾಲಲಿ ಮೆಟ್ಟಿ ,
ಹಗಲಿನ ಹಾ ಹಾ ಕಾರದಂತೆ
ತನ್ನ ಕೂಟವ ಕರೆಯುತ್ತಿದೆ
ಊಟಕ್ಕಾಗಿ ------ಕಾಗಿ!
ಭೋಜನ -----ಕೂಟಕ್ಕಾಗಿ!
 ಬೆಂದ  ಇಳೆ ಮೌನದಲ್ಲೇ
ಬೊಬ್ಬಿಡುವಂತೆ--------!
ಕಾ ಕಾ --ಎಂಬ ಕೂಗು ,
ಮಳೆಯ ----ಬರುವಿಗಾಗಿ !              

Saturday, May 8, 2010

ಮೆಚ್ಚಿದ ಕವನ ;'ಸರಳ ಮಾತು'-ಚಂದ್ರ ಶೇಖರ ಕಂಬಾರ (ಬೆಳ್ಳಿ ಮೀನು ಸಂಕಲನದಿಂದ)

ಹೆರಿಗೆ ವಾರ್ಡಿನ ಆ ಕೊನೆ ಹಾಸಿಗೆಯಲ್ಲಿ 
ಚೊಚ್ಚಲು ಬಾಣಂತಿ ,ಇನ್ನೂ ಬಾಲೆ 
ಅಲ್ಲಿ ಗೋಡೆಯ ಮೇಲೆ ಹೂ ಬಿಟ್ಟಿದೆ ಬಳ್ಳಿ ,
ಗೊತ್ತೇ ಆಗೋದಿಲ್ಲ ,ಅದು ಅರಳಿದ್ದು ಕ್ಯಾಲೆಂಡರಿನಲ್ಲಿ !

ಉಳಿದ ಬಾಣಂತಿಯರಿಗೆಷ್ಟೊಂದು ಕರುಳಿನ ಬಳ್ಳಿ!
ಕುಲು ಕುಲು ನಗುವ ,ಕೈ ತುಂಬಾ ಕಾಣಿಕೆ ತರುವ 
ಬಂಧು ಬಾಂಧವ ಮಂದಿ ,ಬಾಯ್ತುಂಬ ಬೂಂದಿ .

ಈಕೆಯ ಬಳಿಗ್ಯಾರೂ ಬರೋದಿಲ್ಲ,ನಗೋದಿಲ್ಲ ,ಕ್ಷೇಮ ಕೇಳೋದಿಲ್ಲ.
ಗಂಡನೋ ಮಿಂಡನೋ ಈ ಪಿಂಡದ ಕಾರಣಿಕನ
ಸುಳಿವಿಲ್ಲ ,ದಾಖಲೆಯಲ್ಲಿ ಅವನ ಹೆಸರೂ ಇಲ್ಲ.

ಇವಳ ಬಳಿ ಸುಳಿವವಳು ನರ್ಸೊಬ್ಬಳೇ,
ಅವಳ ತುಟಿಯಂಚಿಗೂ ಬಿಳಿಯ ನಗೆಯೇ .


ಬರುತ್ತಾರಲ್ಲ ,ಬಂಧು ಬಾಂಧವ ಮಂದಿ ,ಬಂದವರು 
ಬಂದು ,ಕೊಡುವಷ್ಟು ಕೊಟ್ಟು ನೋಡುವಷ್ಟು ನೋಡಿ 
ನೋಡಿದ ಮೇಲೆ ,ಎಲ್ಲರ ವಂಕಿ ದೃಷ್ಟಿ ಇವಳ ಕಡೆಗೇ,
ಅವರೆಲ್ಲ ಹಿಂಡು ಕಣ್ಣೊಳಗೆ ಪುಂಡು ಪೋಕರಿ ಕಥೆಯ 
ಹೆಣೆಯುವವರೇ;
ಇವಳ ತೋಳಿಗೆರಡು ಕಥೆ ,ಮುಖಕ್ಕೆ ಮೂರು ಕಥೆ 
ಕಣ್ಣಿನೊಳಗೆ ಇನ್ನೇನು ಕಥೆಗಳಿವೆಯೋ;


ಇದ್ಯಾವುದರ ಎಗ್ಗಿಲ್ಲದ ತಾಯಿ 
ಮೈ ಮರೆತ ಮಾಯಿ 
ಹಿಗ್ಗಿ ಹಸಿರಾಗಿ ,ಉಬ್ಬಿ ಮೊಗ್ಗಾಗಿ ,ಬಿರಿದು ಹೂವಾಗಿ 
ಬಗೆ ಬಗೆಯ ಧಗೆಯಿಂದ ಮಗುವನ್ನು ಕುಲುಕಿ 
ಪಲುಕುತ್ತ ಲಕಳಕಿಸುತ್ತಾಳೆ ಮಳೆಯೊಳಗಿನ ಮಲೆನಾಡಿನಂತೆ !

ಅಥವಾ ,
ನಾವು ಎಷ್ಟೆಂದರೂ ಕ್ಯಾಲೆಂಡರಿನಲ್ಲಿ ನಿಸರ್ಗವನ್ನಿಟ್ಟು 
ಮೊಳೆ ಹೊಡೆದು ಗೋಡೆಗೆ ನೇತು ಹಾಕುವ ಮಂದಿ ,
ಈ ಸರಳ ಮಾತು ನಮಗೆ ತಿಳಿದೀತು ಹೇಗೆ ?


(ನಾಳೆ 'ಅಮ್ಮಂದಿರ'ದಿನಾಚರಣೆ.ಜಗತ್ತಿನ ಎಲ್ಲಾ ತಾಯಂದಿರಿಗೂ ನನ್ನ,ಕೋಟಿ ಕೋಟಿ ನಮನಗಳು )

Thursday, May 6, 2010

'ಇಲ್ಲಿ ಮಾತಿಲ್ಲ ------ಬರೀ ಕೃತಿಯಿದೆ!'

'ಒಗ್ಗಟ್ಟಿನಲ್ಲಿ  ಬಲವಿದೆ'!
ಹೀಗೊಂದು  ಗಾದೆ !
ಇದ್ದರೆ ಇರಲಿ ಗಾದೆ ,
ನನ್ನದಿಷ್ಟೇ  ತಗಾದೆ !
ಆಡು ಮಾತಿನಲ್ಲಿ ಇದೆ ,
ಕೃತಿಯಲ್ಲಿ ಇಲ್ಲ ಒಗ್ಗಟ್ಟು !
ಹುಡುಕುತ್ತಲೇ ಇದ್ದೆ!
ತಿನ್ನುವಾಗ ಕೆಳಗೆ ಬಿತ್ತು
ಒಂದು ಚೂರು ಒಬ್ಬಟ್ಟು!
ಅರೆ!ಕೆಲವೇ ಕೆಲ ಸೆಕೆಂಡು!
ಎಲ್ಲಿತ್ತೋ ಈ ಹಿಂಡು!
ಇರುವಲ್ಲಿ ಇರದಾ ,
ಇರುವೆಗಳ  ದಂಡು!
ಚಲಿಸುತ್ತಿದೆ ಒಬ್ಬಟ್ಟು!
ಇಲ್ಲಿದೆ ನೋಡಿ ಒಗ್ಗಟ್ಟು!
ಒಂದಕ್ಕೊಂದು ಬೆನ್ನು ಕೊಟ್ಟು ,
ಕೈ ಕಾಲುಗಳ ಮೀಟಿ ಹೇಗೆ !
ಅನಾಮತ್ತಾಗಿ ಸಾಗಿಸಿವೆ,
ಒಬ್ಬಟ್ಟನ್ನು ಗೂಡಿಗೆ !
ಹಬ್ಬ ಮಾಡಲು,
ತಮ್ಮ ಪಾಡಿಗೆ !
ಘೋಷಣೆಯಿಲ್ಲ, ಗಾದೆಯಿಲ್ಲ !
ಮಾತಿಲ್ಲ ,ಕತೆಯಿಲ್ಲ !
ಇಲ್ಲಿ ಬರೀ ಕೃತಿಯಿದೆ!
ಒಗ್ಗಟ್ಟಿನಲ್ಲಿ ಬಲವಿದೆ!                  

Wednesday, May 5, 2010

'ಬ್ಲಾಗಿಗೆ ಮತ್ತೆ ಸ್ವಾಗತ'

ಗುಡುಗು ,ಮಿಂಚು ಸಿಡಿಲು ,ಮಳೆ,ಎಲ್ಲವೂ ಸ್ತಬ್ಧ !ಕಂಪ್ಯೂಟರ್ ನ c.p.u.ನಲ್ಲಿ ಮೇಲಿನ ಡಬ್ಬ ಒಂದು ಬಿಟ್ಟು ಎಲ್ಲವೂ ಧೂಳೀಪಟ!ಹದಿನೇಳು ಸಾವಿರ ಖರ್ಚು!ಕಂಪ್ಯೂಟರ್ ಬ್ಲಾಗಿನ ನಂಟು ಬಿಡುವಂತಿಲ್ಲ!ಹತ್ತು ದಿನ ನಾನು ನೀರಿನಿಂದ ತೆಗೆದ ಮೀನು!ಬ್ಲಾಗಿನ ಗೀಳು ಅಂಟುವ ಮೊದಲೇ ಹೀಗಾಗಿದ್ದಿದ್ದರೆ 'ಗೋಲೀ ಮಾರೋ 'ಎಂದುಬಿಡುತ್ತಿದ್ದೆನೇನೋ!ಕಾಣದ ಇಷ್ಟೊಂದು ಜನರಲ್ಲಿ ಬ್ಲಾಗ್ ಬೆಳೆಸಿರುವ ಬಾಂಧವ್ಯ ನಿಜಕ್ಕೂ ಆಶ್ಚರ್ಯ ಉಂಟುಮಾಡುತ್ತದೆ.ಇದು ಇನ್ನಷ್ಟು ಬೆಳೆಯಲಿ ಎನ್ನುವುದೇ ನನ್ನ ಆಶಯ!ಎಲ್ಲರಿಗೂ ಮತ್ತೆ ನನ್ನ ಬ್ಲಾಗಿಗೆ ಸ್ವಾಗತ
.