Saturday, November 19, 2011

"ಅಂತಃ -ಕುರುಕ್ಷೇತ್ರ"

ನಾನೂ ನೀಲಕಂಠನಾಗಬೇಕಿದೆ!
ನನ್ನ  ಸುತ್ತ ಮುತ್ತಲಿರುವ 
ನೋವಿನ  ಗರಳ ಕುಡಿದೂ 
ನಗು ನಗುತ್ತಾ ಬದುಕುತ್ತಿರುವ 
ಹಲ  ಕೆಲವು  
ನಂಜುಂಡ  ನಂಜುಂಡಿಯರಂತೆ!
ಅವರವರಿಗಿದೆ  ಅವರವರದೇ 
ಒಡಲಾಳದ  ಜ್ವಾಲೆ!
ಸಹನೆ ಗುಪ್ತ ಗಾಮಿನಿ ! 
ಖಿನ್ನತೆಯ  ಕಾಳಿಂಗನ ಮೆಟ್ಟಿ 
ಎದೆಯಾಳದಿ  ಹೆಪ್ಪುಗಟ್ಟಿದ 
ಹಿಮದ  ಹೆಬ್ಬಂಡೆಗಳು ಕರಗಿ 
ಮನದೊಳಗೇ ಕೊರೆಯುವ 
ಚಿಂತೆಯ  ಕಂಬಳೀ  ಹುಳ 
ಪತಂಗವಾಗಿ  ಮಾರ್ಪಟ್ಟು 
ಬಣ್ಣದ  ಪಕ್ಕಗಳ ತೊಟ್ಟು 
ಆನಂದದ  ಲೋಕದಲ್ಲಿ 
ಹಾರಾಡಬೇಕಿದೆ. 
ನಾವೇ ಸೃಷ್ಟಿಸಿಕೊಂಡ
ಮನದ ಕೊಳಗೇರಿಯಲ್ಲೊಂದು 
ನಂದನವನ  
ತಲೆ ಎತ್ತಬೇಕಿದೆ!
 

Saturday, November 5, 2011

"ಸ್ಕ್ಯಾನಿಂಗ್ ರಿಪೋರ್ಟ್!!!"

ಅವನು ಸುಮಾರು ಇಪ್ಪತ್ತೆರಡರ ಯುವಕ.ಹಲವು ದಿನಗಳಿಂದ ಇದ್ದಕ್ಕಿದ್ದಂತೆ ಎಡಗಡೆ ಪಕ್ಕೆಯ ಭಾಗದಲ್ಲಿ ವಿಪರೀತ ನೋವು ಬರುತ್ತಿದೆ ಎಂದು ಹೇಳಿಕೊಂಡು ನಮ್ಮ ಆಸ್ಪತ್ರೆಗೆ ಬಂದ.ಮೂತ್ರ ಪರೀಕ್ಷೆಯಲ್ಲಿ ಕೆಲವು ಬದಲಾವಣೆಗಳು ಕಂಡು ಬಂದಿದ್ದರಿಂದ ಅವನ ಕಿಡ್ನಿ ಯಲ್ಲಿ ಏನಾದರೂ ಕಲ್ಲುಗಳಿವೆಯೇ(Renal calculi) ಎಂದು ನೋಡಲು ಅವನನ್ನು ಶಿವಮೊಗ್ಗೆಯ ಸ್ಕ್ಯಾನಿಂಗ್ ಸೆಂಟರ್ ಒಂದಕ್ಕೆ 'ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್' ಗಾಗಿ ಕಳಿಸಿದೆವು.ಯುವಕ ಮಾರನೇ ದಿನ ಸ್ಕ್ಯಾನಿಂಗ್ ರಿಪೋರ್ಟ್ ತೆಗೆದುಕೊಂಡು ಬಂದ.ನಾವು ಅಂದುಕೊಂಡಿದ್ದಂತೆ ಅವನ ಎಡಗಡೆಯ ಕಿಡ್ನಿಯಲ್ಲಿ ಸಣ್ಣ ಸಣ್ಣ ಹರಳುಗಳಿದ್ದವು. ಆ ರಿಪೋರ್ಟ್ ಪ್ರಿಂಟ್ ಆಗಿದ್ದ format ನಲ್ಲಿತ್ತು.ಅದರಲ್ಲಿ ಎಲ್ಲಿ ತೊಂದರೆ ಇದೆಯೋ ಅದರ ಬಗ್ಗೆ ಬರೆದು ಮಿಕ್ಕ ಕಾಲಂ ಗಳಲ್ಲಿ normal ಎಂದು ಬರೆದು ಕಳಿಸುವುದು ಅವರ  ರೂಢಿ.ಆದರೆ ಈ ರೀತಿ routine ಆಗಿ ಕಾಲಂ ಗಳನ್ನು ತುಂಬಿ ಕಳಿಸಿದರೆ ಆಗುವ ಆಭಾಸವನ್ನು ನೀವೇ ನೋಡಿ. ಅದರಲ್ಲಿದ್ದ ಮಿಕ್ಕ ಕಾಲಂ ಗಳ ರಿಪೋರ್ಟ್ ಈ ರೀತಿ ಇತ್ತು:
Rt.Kidney;normal
Liver;normal,
Gall bladder:normal
UTERUS(ಗರ್ಭಕೋಶ): NORMAL
OVARIES(ಅಂಡಾಶಯಗಳು): NORMAL
ಗಂಡಸೊಬ್ಬನ ಸ್ಕ್ಯಾನಿಂಗ್ ರಿಪೋರ್ಟಿನಲ್ಲಿ ಗರ್ಭ ಕೋಶ ಮತ್ತು ಅಂಡಾಶಯಗಳು NORMAL ಎಂದು ರಿಪೋರ್ಟ್!!ಅವನ ಈ ರಿಪೋರ್ಟ್ ನೋಡಿ ನಮ್ಮ ಮಹಿಳಾ ವೈಧ್ಯಾಧಿಕಾರಿಗಳು ಬಿದ್ದು,ಬಿದ್ದು ನಗುತ್ತಿದ್ದರು.ನಾನೂ ನಗುತ್ತಲೇ ನನ್ನ ಚೇಂಬರ್ ಗೆ ಹೋದೆ.
 

Thursday, November 3, 2011

"ಎಲೇಲೆ ರಸ್ತೇ!ಏನೀ ಅವ್ಯವಸ್ಥೆ?!"

ಪಾಪಿ ಚಿರಾಯು !
ಈ ಕೆಟ್ಟ ರಸ್ತೆಯ ಹಾಗೆ !
ಒಂದು ಕಡೆಯಿಂದ 
ಮರಮ್ಮತ್ತು ನಡೆಯುತ್ತಿದ್ದಂತೆ 
ಮತ್ತೊಂದು ಕಡೆಯಿಂದ 
ಕಿತ್ತು ಹಳ್ಳ ಹಿಡಿಯುತ್ತಿದೆ!
ಹೇಗೆ ಮಲಗಿದೆ ನೋಡಿ
ಮೈಲಿಗಳ ಉದ್ದಕ್ಕೂ 
ಹಳ್ಳ ಕೊಳ್ಳಗಳ ಹೊದ್ದು
ಮಳ್ಳಿಯ ಹಾಗೆ !
ಒಂದೊಂದು ಕಿತ್ತ 
ಜಲ್ಲಿ ಕಲ್ಲಿನ ಹಿಂದೆ 
ಕೋಟಿಗಟ್ಟಲೆ ಹಣದ 
ಲೂಟಿಯ ಕಥೆ!
ಟಾರಿನಂತೆಯೇ 
ಕೊತ ಕೊತನೆ ಕುದಿವವರ  
ಬಿಸಿ ಬಿಸಿ ನಿಟ್ಟುಸಿರಿನ,
ಬೆವರಿನ ವ್ಯಥೆ !
ಇದ್ದ  ಬದ್ದ 
ಇಂಚಿಂಚು ಜಾಗವನ್ನೂ 
ಸೈಟಿಸಿ ,ಅಪಾರ್ಟ್ ಮೆಂಟಿಸಿ,
ತಮ್ಮನ್ನು ಒಕ್ಕಲೆಬ್ಬಿಸಿದ್ದಕ್ಕೆ 
ಹಳ್ಳ ಕೊಳ್ಳಗಳೆಲ್ಲಾ
ರಸ್ತೆಗೇ ಇಳಿದು 
ಧರಣಿ ಕೂತಿವೆಯೇ ಹೇಗೆ !?
ಎಷ್ಟು ಹೇಳಿದರೂ ಅಷ್ಟೇ!
ಎಷ್ಟು ಹಳಿದರೂ ಅಷ್ಟೇ !
ಇದು ತೀರದ, ಮುಗಿಯದ 
ಕರ್ಮ ಕಾಂಡ !
ನಮ್ಮೆಲ್ಲರ ಬದುಕಿನ 
ಬವಣೆಗಳ ಹಾಗೆ !!!

Tuesday, November 1, 2011

"ಕನ್ನಡಮ್ಮನ ಅಳಲು"

ಇಂದು ಕನ್ನಡ ರಾಜ್ಯೋತ್ಸವ.ಎಲ್ಲೆಲ್ಲೂ ಕನ್ನಡದ ಕಲರವ!ಮನಸ್ಸುಖುಷಿಯಿಂದ  ಗರಿಗೆದರಿ ಹಾರಾಡುತ್ತದೆ.ಈ ನೆಲ ,ಈ ಜಲ,ಈ ಭಾಷೆಯ ವೈವಿಧ್ಯಮಯ ಸೊಗಡು, ನೆನಸಿಕೊಂಡರೆ ಮೈ ನವಿರೇಳುತ್ತದೆ!ಕನ್ನಡ ಸಾಹಿತ್ಯವಂತೂ ನನಗೆ ಅಚ್ಚುಮೆಚ್ಚು! ಆದರೂ ಕೆಲವೊಮ್ಮೆ ಅವಿದ್ಯಾವಂತ ಕನ್ನಡಿಗರ ಸ್ಥಿತಿ ನೋಡಿ ಮನ ಕಲಕುತ್ತದೆ.ಸುಮಾರು ಆರು ವರ್ಷಗಳ  ಹಿಂದೆ ನಡೆದ ಮನ ಮಿಡಿಯುವ ಘಟನೆಯೊಂದು ನೆನಪಿನ ಮೂಲೆಯೊಂದರಲ್ಲಿ ಉಳಿದುಬಿಟ್ಟಿದೆ.ಈ ದಿನ ಆ ಘಟನೆ ಮತ್ತೆ ,ಮತ್ತೆ ನೆನಪಾಗುತ್ತಿದೆ.ನನ್ನ ಬ್ಲಾಗಿನಲ್ಲಿ ಇದರ ಬಗ್ಗೆ ಸುಮಾರು ಒಂದೂವರೆ ವರ್ಷಗಳ ಹಿಂದೆ ಬರೆದಿದ್ದೆ.ಈ ದಿನ ಮತ್ತೆ ಬರೆಯಬೇಕಿನಿಸಿದೆ.ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ನನ್ನ ಟ್ರೈನಿಗಾಗಿ ಕಾಯುತ್ತಿದ್ದೆ.ಹಳ್ಳಿ ಹೆಂಗಸೊಬ್ಬಳು ತನ್ನ ಎರಡು ಮಕ್ಕಳನ್ನು ಕಟ್ಟಿಕೊಂಡು, ಕಂಡ ಕಂಡವರನ್ನು ,'ಯಪ್ಪಾ ನಿಮಗೆ ಕನ್ನಡ ತಿಳೀತೈತೇನ್ರಿ?'ಎಂದು ದೈನ್ಯದಿಂದ ಕೇಳುತ್ತಿದ್ದಳು.ನಾನು ಅವಳನ್ನು ಕನ್ನಡದಲ್ಲಿ ಮಾತಾಡಿಸಿದಾಗ ಅವಳ ಮುಖ ನಿಧಿ ಸಿಕ್ಕಂತೆ ಅರಳಿತು.'ಏನ್ಮಾಡೋದ್ರೀ ಯಪ್ಪಾ ,ಇಲ್ಲಿ ಯಾರಿಗೂ ಕನ್ನಡ ತಿಳೀವಲ್ತು!ಹೊಸಪೇಟಿ ಬಂಡಿ ಎಲ್ಲಿ ಬರತೈತ್ರೀ ?'ಎಂದಳು.ನಾನು ಅವಳಿಗೆ ಅವಳು ಹೋಗಬೇಕಾದ ಪ್ಲಾಟ್ ಫಾರಂ  ತೋರಿಸಿ ಬಂದೆ. 'ನಿನ್ನ  ಮಕ್ಳಿಗೆ ಪುಣ್ಯ ಬರಲಿರೀ ಯಪ್ಪಾ!'ಎಂದು ಬೀಳ್ಕೊಟ್ಟಳು.ಈ ಘಟನೆ ನಡೆದದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ!
ಇದನ್ನು' ಕನ್ನಡಮ್ಮನ ಅಳಲು'ಎನ್ನೋಣವೇ?ಈಗ ಸ್ಥಿತಿ ಸ್ವಲ್ಪ ಸುಧಾರಿಸಿರಬಹುದು.ಆದರೂ ,ಕನ್ನಡ ನಾಡು ,ನುಡಿ ಮತ್ತು ಕನ್ನಡ ಜನರಿಗಾಗಿ ನಾವೇನು ಮಾಡಬಹುದು ಎಂದು ಪ್ರತಿಯೊಬ್ಬರೂ ಯೋಚಿಸಬೇಕಾದ ಸಮಯ ಇದಲ್ಲವೇ?ಎಲ್ಲ ಕನ್ನಡಿಗರಿಗೂ ಶುಭವಾಗಲಿ ಎಂದು ಹಾರೈಸೋಣ.