Saturday, December 17, 2011

"ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೇ?"

ಕೆಲವು ಹಾಡುಗಳು ಹೇಗೋ ಕೆಲವೊಂದು ನೆನಪು ಗಳಿಗೆ ತಳುಕು ಹಾಕಿ ಕೊಂಡು ಬಿಟ್ಟಿರುತ್ತವೆ.ಆ ಹಾಡನ್ನು ನೆನಸಿಕೊಂಡರೆ ಒಬ್ಬ ವ್ಯಕ್ತಿಯ ನೆನಪೋ ಅಥವಾ ,ಒಂದು ಪ್ರಸಂಗದ ನೆನಪೋ ಮರುಕಳಿಸಿಬಿಡುತ್ತದೆ.ನನ್ನ ನೆನಪಿನಲ್ಲಿ ಉಳಿದು ಹೋದಂತಹ ಇಂತಹುದೇ ಒಂದು ಹಾಡು ,ಕನ್ನಡದ ಮಹಾನ್ ಗಾಯಕ ಡಾ.ಪಿ.ಬಿ.ಶ್ರೀನಿವಾಸರು ಅರವತ್ತರ ದಶಕದ ಮೊದಲ ಭಾಗದಲ್ಲಿ 'ಪುನರ್ಜನ್ಮ 'ಎನ್ನುವ ಚಿತ್ರಕ್ಕೆ ಹಾಡಿದ 'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೆ' ಎನ್ನುವ ಹಾಡು.ಮೊದಲಿನಿಂದಲೂ ಈ ಹಾಡು ನನಗೆ ಅತ್ಯಂತ ಪ್ರಿಯವಾದ ಹಾಡು.ಅದೆಷ್ಟು ಸಲ ಈ ಹಾಡನ್ನು ಹಾಡಿದ್ದೇನೋ ತಿಳಿಯದು.ಈಹಾಡುನೆನಪಾದಾಗಲೆಲ್ಲಾ ನನ್ನ ಬಹಳ ಆತ್ಮೀಯ ಸ್ನೇಹಿತರೊಬ್ಬರು ನೆನಪಾಗಿ ಬಿಡುತ್ತಾರೆ.ಅವರ ಪರಿಚಯವಾದದ್ದೂ ಒಂದು ವಿಚಿತ್ರ ಸನ್ನಿವೇಶದ ಮೂಲಕ.
ಈಗ ಸುಮಾರು ಹನ್ನೆರಡು ವರ್ಷಗಳ ಹಿಂದೆ ನಡೆದ ಘಟನೆ.ನಾನು ಇ .ಎನ್.ಟಿ.ತಜ್ಞ ವೈದ್ಯಕೀಯ ಶಿಕ್ಷಣ ಮುಗಿಸಿದ ಹೊಸತು.ನನ್ನ ಬಳಿಗೆ ಕಿವಿಯ ಸೋರಿಕೆಯಿಂದ ಎಡ ಕಿವಿ ಕೇಳದ, ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಬರುತ್ತಿದ್ದ.ಒಂದು ದಿನ ಬೆಳಿಗ್ಗೆ ಆ ಹುಡುಗ  ತನ್ನ ಬಲಗಿವಿ ವಿಪರೀತ ನೋವೆಂದೂ,ಈಗ ಅದೂ ಕೆಳುತ್ತಿಲ್ಲವೆಂದೂ ,ಕೈಯಿಂದ ಬಲಗಿವಿ ಮುಚ್ಚಿಕೊಂಡು ಅಳುತ್ತಾ ಬಂದ.ಅವನ ತಂದೆಯೂ ಅವನ ಜೊತೆಗೇ ಬಂದಿದ್ದರು.ಅವನ ಬಲಗಿವಿ ಪರೀಕ್ಷೆ ಮಾಡಿದಾಗ ಕಿವಿಯ ಪರದೆಯ ಹರಿದ ಭಾಗದಿಂದ ರಕ್ತ ಬರುತ್ತಿತ್ತು.ಕಿವಿಗೆ ಬಲವಾದ ಪೆಟ್ಟು ಬಿದ್ದದ್ದು ಖಾತ್ರಿ ಯಾಯಿತು.ಯಾರೋ ಜೋರಾಗಿ ಕಪಾಳಕ್ಕೆ ಹೊಡೆದಿದ್ದರು.ಆ ಭಾಗವೆಲ್ಲಾ ಹೊಡೆತದಿಂದ ಕೆಂಪಾಗಿತ್ತು.ನನಗೆ ಅವನ ತಂದೆಯ ಮೇಲೆಯೇ ಅನುಮಾನವಿತ್ತು.
ಬಹಳ ಬಲವಂತ ಮಾಡಿದ ಮೇಲೆ ಅವನ ತಂದೆ ಆ ಹುಡುಗನ ಮಾಸ್ತರರೊಬ್ಬರು ಕಪಾಳಕ್ಕೆ ಹೊಡೆದರೆಂದೂ,ಅದಕ್ಕೇ
ಹೀಗಾಯಿತೆಂದೂ ಹೇಳಿದ.ಮೊದಲೇ ಹುಡುಗನಿಗೆ ಒಂದು ಕಿವಿ ಕೇಳುತ್ತಿರಲಿಲ್ಲ.ಈಗ ಕಪಾಳಕ್ಕೆ ಹೊಡೆದು ಇನ್ನೊಂದು ಕಿವಿಯೂ ಕೇಳದ ಹಾಗೆ ಮಾಡಿ ಬಿಟ್ಟರಲ್ಲಾ ಎಂದು ನನಗೆ ಆ ಮಾಸ್ತರರ ಮೇಲೆ ವಿಪರೀತ ಸಿಟ್ಟು ಬಂತು.ಆ ಮಾಸ್ತರರನ್ನು ನನ್ನ ಬಳಿಗೆ ಕಳಿಸುವಂತೆ ಹೇಳಿದೆ.ಅದಕ್ಕೆ ಅವನ ತಂದೆ 'ಬಿಡಿ ಸಾರ್.ಇದನ್ನ ದೊಡ್ಡ ವಿಷಯ ಮಾಡಬೇಡಿ.ಆ ಮಾಸ್ತರರು ತುಂಬಾ ಒಳ್ಳೆಯವರು.ಇವನೇ ಏನೋ ಮಾಡಬಾರದ ತೀಟೆ ಮಾಡಿರುತ್ತಾನೆ.ಅದಕ್ಕೇ ಅವರು ಏಟು ಕೊಟ್ಟಿದ್ದಾರೆ,ನೀವೇ ಏನಾರ ಔಷಧಿ ಕೊಟ್ಟು ಸರಿ ಮಾಡಿಬಿಡಿ 'ಎಂದ.ನಾನೂ ಸುಮ್ಮನಾದೆ.
ಈ ಘಟನೆ ನಡೆದ ಎರಡು ದಿನಕ್ಕೆ ಒಬ್ಬ ವ್ಯಕ್ತಿ ನನ್ನ ರೂಮಿನ ಹೊರಗೆ ನಿಂತು 'ಒಳಗೆ ಬರಬಹುದಾ ಸರ್'ಎಂದರು . 'ಬನ್ನಿ 'ಎಂದೆ.ಒಳಗೆ ಬಂದು ಕೂತರು.ಮುಖ ಆತಂಕದಿಂದ ಬೆವರುತ್ತಿತ್ತು.ದನಿ ನಡುಗುತ್ತಿತ್ತು.ತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಂಡು 'ಬಿ.ಪಿ.ಚೆಕ್ ಮಾಡಿಸ್ಕೋ ಬೇಕಾಗಿತ್ತು ಸರ್ 'ಎಂದರು.ಬಿ.ಪಿ.ಸುಮಾರಾಗಿಯೇ ಜಾಸ್ತಿ ಇತ್ತು.'ಸಾರ್ ನಾನು ಇಲ್ಲಿ ಮಿಡ್ಲ್ ಸ್ಕೂಲ್ ಮೇಷ್ಟ್ರು.ನನ್ನಿಂದ ಬಹಳ ದೊಡ್ಡ ತಪ್ಪಾಯಿತು.ಕ್ಷಮಿಸಿ ಬಿಡಿ ಸರ್ 'ಎಂದರು.ನಾನು 'ಯಾಕ್ರೀ ಮೇಷ್ಟ್ರೇ ಏನಾಯ್ತು ?'ಎಂದೆ.'ಆ ಹುಡುಗನಿಗೆ ಕಪಾಳಕ್ಕೆ ಹೊಡೆದದ್ದು ನಾನೇ ಸರ್ 'ಎಂದರು.ನಾನು ಸ್ವಲ್ಪ ಬಿಗುವಾದೆ.'ಅಲ್ಲಾ ಮೇಷ್ಟ್ರೇ  ಹುಡುಗರು ತಪ್ಪು ಮಾಡಿದರೆ ತಿದ್ದ ಬೇಕು ಸರಿ.ಆದರೆ ಈ ರೀತಿ ಕಿವಿಯ ತಮಟೆ ಹರಿದು ಹೋಗುವ ಹಾಗೆ ಹೊಡೆಯಬೇಕೆ?ಅದು ತಪ್ಪಲ್ಲವೇ ? ಅವನ ಜೀವಕ್ಕೆ ಅಪಾಯ ವಾಗಿದ್ದರೆ ಏನು ಗತಿ?ಅವನಿಗೆ ಕೇಳುತ್ತಿದ್ದ ಒಂದೇ ಕಿವಿ ಕೂಡ ನೀವು ಹೊಡೆದ ದ್ದರಿಂದ ಹಾಳಾಯಿತಲ್ಲ!'ಎಂದೆ.'ಆ ಹುಡುಗ ಯಾವುದೋ ಹುಡುಗಿಯ ಬಗ್ಗೆ ಬಹಳ ಕೆಟ್ಟ ಪದ ಉಪಯೋಗಿಸಿದ ಸಾರ್.ಮೊದಲೇ ಬಿ.ಪಿ. ಇದೆ.ಸಿಟ್ಟು ಬಂದು ಕಪಾಳಕ್ಕೆ ಒಂದೇಟು ಬಿಟ್ಟೆ .ಈ ರೀತಿಯೆಲ್ಲಾ ಆಗುತ್ತೆ ಅಂತ ಗೊತ್ತಿರಲಿಲ್ಲ .ಇನ್ನು ಮೇಲೆ ಹುಡುಗರ ಮೇಲೆ ಕೈ ಮಾಡೋಲ್ಲ  .ಜೀವನದಲ್ಲಿ ಒಂದು ದೊಡ್ಡ ಪಾಠ ಕಲಿತೆ 'ಎಂದು ಗಧ್ಗದ ಕಂಠದಲ್ಲಿ ಹೇಳಿ ಹೊರಟು ಹೋದರು.
ಅದಾದ ನಂತರ ನಾನು  ದಿನಾ ಬೆಳಗಿನ ಜಾವ ಸ್ಕೂಲಿನ ಗ್ರೌಂಡ್ ಗೆ ವ್ಯಾಯಾಮ ಮತ್ತು ಜಾಗಿಂಗ್ ಮಾಡುವುದಕ್ಕೆ ಹೋಗುತ್ತಿದ್ದಾಗ ಅವರೂ ಸಿಗುತ್ತಿದ್ದರು.ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ.ಸ್ವಲ್ಪ ಮುಂಗೊಪವಿತ್ತು.ಯಾರಿಗಾದರೂ ಸಹಾಯಮಾಡಬೇಕಾದರೆ 'ನಾ ಮುಂದೆ' ಎನ್ನುವಂತಹವರು.ಪರಿಚಯ ಸ್ನೇಹಕ್ಕೆ ತಿರುಗಿತು.ಕೆಲವೇ ದಿನಗಳಲ್ಲಿ 
ಬಹಳ ಆತ್ಮೀಯರಾದರು.ವ್ಯಾಯಾಮವೆಲ್ಲಾ ಮುಗಿಸಿ,ಬೆವರು ಹರಿಸುತ್ತಾ ,ತಂಗಾಳಿಗೆ ಮೈ ಒಡ್ಡಿ ಕುಳಿತಾಗ 
ನಾನು ನನಗೆ ಪ್ರಿಯವಾದ 'ಒಲುಮೆಯ ಹೂವೇ'ಹಾಡನ್ನು ಹೇಳುತ್ತಿದ್ದೆ.ಮೇಷ್ಟ್ರಿಗೆ ಕೂಡ ಈ ಹಾಡು
ಬಹಳ ಇಷ್ಟವಾಗಿತ್ತು .ನಾನು ಹಾಡುವಾಗ ಬಹಳ ಖುಷಿ ಪಡುತ್ತಿದ್ದರು.ಹಾಡು ಕೇಳುತ್ತಾ ಎಷ್ಟೋ ಸಲ ಅವರ ಕಣ್ಣಿನಲ್ಲಿ ನೀರು ಇರುತ್ತಿತ್ತು.2000 april ನಲ್ಲಿ ಅವರಿಗೆ ಎಲೆಕ್ಷನ್ ಡ್ಯೂಟಿಹಾಕಿದ್ದರು.'ಸಾರ್ ನನಗೆ ಎಲೆಕ್ಷನ್ ಡ್ಯೂಟಿ ಗೆ ಹೋಗೋಕೆ ಆಗೋಲ್ಲಾ ,ಒಂದು ಮೆಡಿಕಲ್  ಸರ್ಟಿಫಿಕೇಟ್ ಕೊಡಿ'ಎಂದರು.'ಯಾಕೇ ಮೇಷ್ಟ್ರೇ ?ಏನು ತೊಂದರೆ?'ಎಂದೆ.ಎಲೆಕ್ಷನ್ ಡ್ಯೂಟಿ ತಪ್ಪಿಸೋಕೆ ಎಲ್ಲರೂ ಮಾಡುವ ಸಾಮಾನ್ಯ ಉಪಾಯ ಇದು.'ನಡೆಯೋವಾಗ ಯಾಕೋ ಬ್ಯಾಲೆನ್ಸ್ ತಪ್ಪುತ್ತೆ ಸರ್' ಎಂದರು.ಎಲ್ಲಾ ಪರೀಕ್ಷೆ ಮಾಡಿದಾಗ ನಿಜಕ್ಕೂ ತೊಂದರೆ ಇದೆ ಎನಿಸಿ, C.T.SCAN ಮಾಡಿಸಿಕೊಂಡು ಬರಲು ಬೆಳಗಾವಿಯ ಕೆ.ಎಲ್.ಇ .ಆಸ್ಪತ್ರೆಗೆ ಕಳಿಸಿದೆ.ಅಲ್ಲಿ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು.ಅದು ಶ್ವಾಶಕೋಶಕ್ಕೂ,ಮೆದುಳಿಗೂ ಹರಡಿತ್ತು.ಅವರಿಗೆ ಸುಮಾರು ಹದಿನೆಂಟು ವರ್ಷಗಳಿಂದ ಥೈರಾಯ್ಡ್ ಗ್ರಂಥಿ ಯಲ್ಲಿ ಒಂದು ಸಣ್ಣ ಗಡ್ದೆ ಇತ್ತಂತೆ.ನನಗೂ ಕೂಡ ಮೊದಲೇ ತಿಳಿಸಿರಲಿಲ್ಲ .ಅವರನ್ನು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಸೇರಿಸಿದೆವು. ಸ್ನೇಹಿತರೆಲ್ಲಾ ಸೇರಿ ಅವರ ಚಿಕಿತ್ಸೆಯ ಖರ್ಚಿಗೆಂದು ಸುಮಾರು  ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಸ್ವಇಚ್ಛೆಯಿಂದ ಸೇರಿಸಿ ಕೊಟ್ಟೆವು.
ನನಗೆ ಅಷ್ಟರಲ್ಲಿ ರಾಯಚೂರಿನ ಶಕ್ತಿನಗರಕ್ಕೆ ವರ್ಗವಾಗಿತ್ತು.ಒಂದೆರಡು ತಿಂಗಳ ನಂತರ ಅವರನ್ನು ನೋಡಲು ರಾಯಚೂರಿನಿಂದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋದೆ.ಸ್ಪೆಷಲ್ ವಾರ್ಡಿನ ರೂಮೊಂದರಲ್ಲಿ ಒಬ್ಬರೇ ಇದ್ದರು.Brain surgery ಮಾಡಿ ತಲೆಗೆಲ್ಲಾ ಬ್ಯಾಂಡೇಜ್ ಸುತ್ತಿದ್ದರು.ನನ್ನನ್ನು ನೋಡಿ ಮೇಷ್ಟ್ರಿಗೆ ತುಂಬಾ ಖುಷಿಯಾಯಿತು.ಆನದದಿಂದ ತಬ್ಬಿಕೊಂಡರು.

 'ಸರ್ ಆಪರೇಶನ್ ಆಯ್ತು .ನೀವೂ ನೋಡೋಕೆ ಬಂದ್ರಿ.ಇನ್ನು ಎಲ್ಲಾ ಸರಿ ಹೋಗುತ್ತೆ ಸರ್.ನಿಮ್ಮನ್ನು ನೋಡೋಕೆ ಮುಂದಿನ ಸಲ ಶಕ್ತಿನಗರಕ್ಕೆ ನಾನೇ ಬರುತ್ತೇನೆ'ಎಂದರು. ಆ ಆಯಾಸದಲ್ಲೂ ಸುಮಾರು ಒಂದು ಗಂಟೆ ಹರಟಿದರು.'ಹೆಚ್ಚು ಮಾತನಾಡಬೇಡಿ ಮೇಷ್ಟ್ರೇ ,ಆಯಾಸ ಆಗುತ್ತೆ 'ಎಂದರೂ ಕೇಳಲಿಲ್ಲ.ಕೊನೆಗೆ ನಾನು ಹೊರಟು ನಿಂತೆ.'ಸಾರ್ ,ನಾನಿನ್ನು ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ ,ನನಗೋಸ್ಕರ ಒಂದುಸಲ ಆ ಹಾಡು ಹಾಡಿ ಬಿಡಿ ಸರ್' ಎಂದರು!ಕ್ಯಾನ್ಸರ್ ವಾರ್ಡಿನಲ್ಲಿ ಹಾಡೇ!!?ನಾನು ನನ್ನ ಕನಸು ಮನಸಿನಲ್ಲೂ ಇಂತಹ ಸಂದರ್ಭ
ಊಹಿಸಿಕೊಂಡಿರಲಿಲ್ಲ.'ಬಿಸಿ ತುಪ್ಪ ಉಗುಳುವಂತಿಲ್ಲ,ನುಂಗುವಂತಿಲ್ಲ' ಎನ್ನುವಂತಾಗಿತ್ತು ನನ್ನ ಪರಿಸ್ಥಿತಿ !ಅವರನ್ನು ಆ ಸ್ಥಿತಿ ಯಲ್ಲಿ ನೋಡಿ ಮನಸ್ಸು ಬಹಳ ನೊಂದಿತ್ತು.ಹಾಡುವ ಮೂಡ್ ಇರಲಿಲ್ಲ.ಅವರ ಮನಸ್ಸನ್ನು ನೋಯಿಸದಿರಲು ಅನಿವಾರ್ಯವಾಗಿ ಹಾಡಲೇ ಬೇಕಾಯಿತು.ನನ್ನೆಲ್ಲಾ ನೋವನ್ನೂ ಹೊರ ಹಾಕುವಂತೆ,ಜೀವನದಲ್ಲಿ ಅದೇ ನನ್ನ ಕಡೆಯ ಹಾಡು ಎಂಬಂತೆ ನನ್ನನ್ನೇ ಮರೆತು ಹಾಡಿದೆ!'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೇ!ಉಳಿಸಿ ಕಣ್ಣ ನೀರ,ಈ ನನ್ನ ಬಾಳಿಗೇ'.ಹಾಡು ಮುಗಿಯುವ ವೇಳೆಗೆ ಇಬ್ಬರ ಕಣ್ಣಲ್ಲೂ ಧಾರಾಕಾರ ನೀರು!ಭಾರ ಹೃದಯದಿಂದ ಅವರನ್ನು ಬೀಳ್ಕೊಟ್ಟೆ.ಇದಾದ ಕೆಲವೇ ತಿಂಗಳಲ್ಲಿ ಮೇಷ್ಟ್ರು ತನ್ನ ಇಹ ಲೋಕ ಯಾತ್ರೆ ಮುಗಿಸಿದ್ದರು.ಕಾಣದ ಲೋಕಕ್ಕೆ ಪಯಣ ಬೆಳೆಸಿದ ಆ ನನ್ನ ಆತ್ಮೀಯ ಸ್ನೇಹಿತನಿಗೆ ಈ ನನ್ನ ಮೆಚ್ಚಿನ ಗೀತೆಯ ಮೂಲಕನಮನಗಳನ್ನು ಸಲ್ಲಿಸುತ್ತಿದ್ದೇನೆ.'ಒಲುಮೆಯ ಹೂವೇ!ನೀ ಹೋದೆ ಎಲ್ಲಿಗೇ !ಉಳಿಸಿ ಕಣ್ಣ ನೀರ ಈ ನನ್ನ ಬಾಳಿಗೇ '.

(ಇದು ಹೋದ ವರ್ಷ ಆಗಸ್ಟ್ ನಲ್ಲಿ ಹಾಕಿದ್ದ ಲೇಖನ.ಹೊಸದೇನನ್ನೂ ಬರೆದಿಲ್ಲವಾದ್ದರಿಂದ ನನಗೆ ಇಷ್ಟವಾಗಿದ್ದ ಈ ಹಳೆಯ ಲೇಖನವನ್ನೇ ಹಾಕುತ್ತಿದ್ದೇನೆ.)

Sunday, December 11, 2011

"ಜಗವೆಲ್ಲ ಮಲಗಿರಲು....!!! "

ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು.ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ,ಮೇ ತಿಂಗಳ ಒಂದು ದಿನ.ತಾರೀಕು ಸರಿಯಾಗಿ ನೆನಪಿಲ್ಲ.ರಾತ್ರಿ ಸುಮಾರು ಹತ್ತು ಗಂಟೆ .ವಿಪರೀತ ಸೆಕೆ.ನಿಲ್ದಾಣದಲ್ಲಿ ಜನಗಳ ಜಾತ್ರೆ.ಬೆಳಗ್ಗೆಯೆಲ್ಲಾ ದೆಹಲಿಯ ಸುಡು ಬಿಸಿಲಿಗೆ ಸುಟ್ಟು ಕರಕಲಾಗಿದ್ದೆ.ಹೋದ ಕೆಲಸ ಕೈ ಗೂಡದೆ ಮನಸ್ಸಿಗೆ ನೋವಾಗಿತ್ತು. ಎಲ್ಲಾ ರೈಲುಗಳೂ ಭರ್ತಿಯಾಗಿದ್ದರಿಂದ,'ವಿಶೇಷ'ರೈಲೊಂದರಲ್ಲಿ ಬೆಂಗಳೂರಿಗೆ ಬರ್ತ್ ಒಂದನ್ನು ರಿಸರ್ವ್ ಮಾಡಿಸಿದ್ದೆ.ಆ 'ವಿಶೇಷ'ರೈಲು ಒಂದು ಗಂಟೆ ತಡವಾಗಿ ಬಂತು.ಟ್ರೈನು ಬಂದಾಗ ಬೋಗಿಯಲ್ಲಿ ದೀಪವಿರಲಿಲ್ಲ.ರಿಸರ್ವೇಶನ್ ಇಲ್ಲದವರೆಲ್ಲಾ ಎಲ್ಲಾ ಸೀಟುಗಳನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು.ರಿಸರ್ವೇಶನ್ ಇದ್ದವರು ತಗಾದೆ ತೆಗೆದಿದ್ದರು.ಟಿ.ಟಿ.ಯ ಪತ್ತೆಯೇ ಇರಲಿಲ್ಲ.ಹೇಳುವರು,ಕೇಳುವರು ಇಲ್ಲದೆ ಗದ್ದಲವೋ ಗದ್ದಲ.ಕೆಲವರು ಕೈ ಕೈ ಮಿಲಾಯಸಲು ಶುರು ಮಾಡಿದರು.ನಮ್ಮ ದೇಶದ ಅರಾಜಕತೆಯನ್ನು ಬಿಂಬಿಸುವ ಒಂದು ಮಿನಿ ಅಸೆಂಬ್ಲಿ ಯಂತಿತ್ತು ಆ ಬೋಗಿ.ಅಷ್ಟರಲ್ಲಿ ದೇವ ಧೂತನಂತೆ ಮೇಲೆ ಮಲಗಿದ್ದ ಗಡ್ಡಧಾರಿ ವಿದೇಶಿ ಯುವಕನೊಬ್ಬ ಮೆಲ್ಲಗೆ ಕೆಳಗಿಳಿದು ಬಂದ.ಎಲ್ಲರಿಗೂ ಕೈಮುಗಿದ.ತನ್ನ ಹರಕು ಮುರುಕು ಇಂಗ್ಲೀಷಿನಲ್ಲಿ ,'ದಯಮಾಡಿ ಜಗಳವಾಡಬೇಡಿ'ಎಂದು ಬೇಡಿಕೊಂಡ.ಜಗಳವಾಡುತ್ತಿದ್ದ ಪ್ರಯಾಣಿಕನೊಬ್ಬನಿಗೆ ತನ್ನ ಮೇಲಿನ ಬರ್ತ್ ಬಿಟ್ಟುಕೊಟ್ಟ.ಟ್ರೈನ್ ಹೊರಟು ಅಲ್ಲಿ ಶಾಂತಿ ನೆಲಸುವವರೆಗೂ ತನ್ನ ಬ್ಯಾಕ್ ಪ್ಯಾಕ್ ತಗುಲಿಸಿಕೊಂಡು ಅಲ್ಲೇ ನಿಂತಿದ್ದ.ಅವನ ಮುಖದಲ್ಲಿ ಅಪೂರ್ವ ಕಾಂತಿಯಿತ್ತು.ಕಂಡೂ ಕಾಣದಂತೆ ಮುಗುಳು ನಗೆ ಇತ್ತು.ನನ್ನ ಪಕ್ಕ ಸ್ವಲ್ಪ ಜಾಗ ಮಾಡಿ ಕೊಟ್ಟು, ಕುಳಿತುಕೊಳ್ಳುವಂತೆ ಹೇಳಿದೆ.ಬ್ಯಾಕ್ ಪ್ಯಾಕ್ ಕೆಳಗಿಟ್ಟು ನನ್ನ ಪಕ್ಕ ಕುಳಿತ.ಎಲ್ಲರಿಗೂ ಅವನ ಬಗ್ಗೆ ಕುತೂಹಲ.ನಿಧಾನವಾಗಿ ತನ್ನ ಬಗ್ಗೆ ಹೇಳ ತೊಡಗಿದ.ಅವನದು ಇರಾನ್ ನಲ್ಲಿ ಒಂದು ಸಣ್ಣ ಊರು.ಇವನ ತಂದೆ ಅಲ್ಲಿನ ಎಲೆಕ್ಟ್ರಿಸಿಟಿ ಬೋರ್ಡಿನ ನೌಕರನಾಗಿ ಆಗ ತಾನೆ ನಿವೃತ್ತಿ ಹೊಂದಿದ್ದ.ಇರಾನ್ ,ಇರಾಕ್ ನಡುವೆ ಯುದ್ದ ಶುರುವಾಗಿ ಕೆಲವು ವರ್ಷಗಳಾಗಿತ್ತು.ಇವನ ಊರಿನಿಂದ ಯುದ್ಧಕ್ಕೆ ಹೋದಇವನ ಹಲವಾರು ಸ್ನೇಹಿತರು ಯುದ್ಧದಲ್ಲಿ ಸತ್ತಿದ್ದರು.ಇವನಿಗೂ ಯುದ್ಧಕ್ಕೆ ಸೇರುವಂತೆ ಕರೆ ಬಂದಿತ್ತು .ಇವನ ತಂದೆ ತಾಯಿಗಳಿಗೆ ತಮ್ಮ ಒಬ್ಬನೇ ಮಗನನ್ನು ಯುದ್ಧಕ್ಕೆ ಕಳಿಸಲು ಇಷ್ಟವಿರಲಿಲ್ಲ.ಅವನ ತಂದೆ ರಿಟೈರ್ ಮೆಂಟಿನಿಂದ ಬಂದ ತನ್ನ ಎಲ್ಲಾ ಹಣವನ್ನೂ ಖರ್ಚು ಮಾಡಿ ,ಅವರಿವರನ್ನು ಹಿಡಿದು ಅವನಿಗೆ ಬೇರೆ ಯಾರದೋ ಹೆಸರಿನಲ್ಲಿ ಪಾಸ್ ಪೋರ್ಟ್ ಕೊಡಿಸಿ 'ನೀನು ಜೀವಂತವಾಗಿದ್ದರೆ ಸಾಕು ಮಗು.ಪ್ರಪಂಚ ವಿಶಾಲವಾಗಿದೆ. ಎಲ್ಲೋ ಒಂದು ಕಡೆ ನಿನಗೆ ಆಶ್ರಯ ಸಿಗುತ್ತದೆ.ಇಲ್ಲಿ ಯುದ್ಧದಲ್ಲಿ ಸಾಯಬೇಡ.ಎಲ್ಲೋ ಒಂದು ಕಡೆ ನೀನು ಬದುಕಿದ್ದರೆನಮಗೆ ಅಷ್ಟೇ ಸಾಕು'ಎಂದು ಅವನನ್ನು ಅಲ್ಲಿಂದ ಸಾಗ ಹಾಕಿದ್ದ.ಅವನು ಮೊದಲು ಯಾವುದೋ ಬೇರೆ ದೇಶದಲ್ಲಿ ಸ್ವಲ್ಪ ದಿನ ಇದ್ದು, ಒಂದು ತಿಂಗಳ ಕೆಳಗೆ ದೆಹಲಿಗೆ ಬಂದಿದ್ದ.ಅಲ್ಲಿ ಫುಟ್ ಪಾತಿನಲ್ಲಿ ಮಲಗುತ್ತಾ ,ಬ್ರೆಡ್ಡು ,ಮೊಟ್ಟೆ ತಿಂದು ಹಸಿವೆ ನೀಗಿಕೊಳ್ಳುತ್ತಾ ಆಶ್ರಯಕ್ಕಾಗಿ ಹಲವಾರು ಕನ್ಸಲೇಟ್ ಗಳಿಗೆ ಅಲೆಯುತ್ತಾ ಒಂದು ತಿಂಗಳು ಕಳೆದಿದ್ದ.ಇನ್ನು ಕೆಲವು ದಿನಗಳಲ್ಲಿ ನಮ್ಮ ದೇಶ ಬಿಟ್ಟು ಹೋಗಬೇಕಾಗಿತ್ತು.ಇಲ್ಲಿಂದ ಶ್ರೀಲಂಕಾಗೆ ಹೋಗಿ ಅಲ್ಲಿ ಆಶ್ರಯಕ್ಕಾಗಿ ಪ್ರಯತ್ನಿಸುವುದಾಗಿ ಹೇಳಿದ.ಯುದ್ಧ ನಿಂತ ಮೇಲೆ ಮನೆಗೆ ಹಿಂದಿರುಗುವುದಾಗಿಯೂ,ಯಾವು ದಾದರೂ ಕೆಲಸಕ್ಕೆ ಸೇರುವ ಮುನ್ನ ಸ್ವಲ್ಪ ದಿನ ಮನೆಯಲ್ಲಿದ್ದು ಕವಿತೆಗಳನ್ನು ಓದುತ್ತಾ, ವಯಸ್ಸಾದ ಅಮ್ಮನಿಗೆ ಅಡಿಗೆ ಮನೆಯಲ್ಲಿ ಪಾತ್ರೆ ತೊಳೆಯಲು ಸಹಾಯಮಾಡುವುದಾಗಿ ಹೇಳಿದ.ಜೀವಂತವಾಗಿರುವುದೇ ಒಂದು ಸಂತಸದ ವಿಷಯವಲ್ಲವೇ?ಅದನ್ನು ಹೀಗೆ ಪರಸ್ಪರ ಕಚ್ಚಾಡಿಕೊಂಡು ಹಾಳು ಮಾಡಿಕೊಳ್ಳುವುದುಸರಿಯೇ ?ಎಂದು ಕೇಳಿದ. ಹಾಗೆ ಹೇಳುವಾಗ ಅವನ ಕಣ್ಣುಗಳಲ್ಲಿ ನೀರಿತ್ತು.ರಾತ್ರಿ ಹನ್ನೆರಡಾಗುತ್ತಿತ್ತು.ಟ್ರೈನಿನ 'ಧಡ ಬಡ' ಸದ್ದಿನ ಜೋಗುಳಕೆ ಹಲವರು ಕುಳಿತಲ್ಲೇ ತೂಕಡಿಸುತ್ತಿದ್ದರು.ಅವನು ತನ್ನ ಬ್ಯಾಕ್ ಪ್ಯಾಕ್ ಎತ್ತಿಕೊಂಡು ಟಾಯ್ಲೆಟ್ ನ ಹತ್ತಿರದ ಪ್ಯಾಸೇಜ್ ನಲ್ಲಿ ,ಕೆಳಗೆ ನ್ಯೂಸ್ ಪೇಪರ್ ಹಾಸಿಕೊಂಡು ಅದರ ಮೇಲೆ ಕುಳಿತು ಚೀಲದಿಂದ ಕೊಳಲೊಂದನ್ನು ಹೊರತೆಗೆದು,ಜಗದ ಚಿಂತೆಗಳಿಗೆ ಇತಿಶ್ರೀ ಹಾಡುವಂತೆ ಇಂಪಾದ ರಾಗವೊಂದನ್ನು ನುಡಿಸ ತೊಡಗಿದ.ಟ್ರೈನಿನ ಕಿಟಕಿಯ ಹೊರಗೆ ನೋಡಿದೆ.ಓಡುವ ,ಮರ,ಗಿಡ,ಹೊಲ,ಗದ್ದೆಗಳ ಮೇಲೆ ತಣ್ಣಗೆ ಬೆಳದಿಂಗಳು ಹರಡಿತ್ತು. ಟ್ರೈನಿನ ಒಳಗೆ ಇಂಪಾದ ಕೊಳಲಿನ ನಾದ.'ಬುದ್ಧ,ಬುದ್ಧ ,ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ'ಎಂಬ ಕವಿತೆಯೊಂದರ ಸಾಲುಗಳು ನೆನಪಾದವು.

Wednesday, December 7, 2011

"ತಣ್ಣಗಿರಿಸಾತ್ಮವನು...."

ಕಡ್ಡಿಯನ್ನು ಗುಡ್ಡ ಮಾಡಿ
ಗುಡ್ಡವನ್ನು ವೃಥಾ
ಅಗೆದದ್ದೇ,ಅಗೆದದ್ದು!
ನೆಮ್ಮದಿಯ  ಸಿಹಿನೀರಾಗಲೀ 
ಅರಿವಿನ ಊಟೆಯಾಗಲೀ
ದಕ್ಕಿತೇ ದಣಿವು ನೀಗಲು?
ಬದಲಿಗೆ ಸಂಚಯ 
ರಾಶಿ ರಾಶಿ,ಗುಡ್ಡೆ ಗುಡ್ಡೆ 
ವ್ಯರ್ಥ ಚಿಂತೆಯ ಮಣ್ಣು!
ನಿದ್ದೆ ಬಾರದೆ ಅಳುವ 
ತೊಟ್ಟಿಲಿನ ಕೂಸನ್ನು 
ಗಂಟೆಗಟ್ಟಲೆ
ತೂಗಿದ್ದೇ ,ತೂಗಿದ್ದು !
ತೊಡೆಗೆ ಬಂದೊಡನೇ
ಮಗುವಿಗೆ ಸವಿ ನಿದ್ದೆ!
ಸಾಗರದಲೆಗಳಂತೆ ಭೋರ್ಗರೆದ
ತಿಂಗಳುಗಟ್ಟಲೆಯ  
ಚಿಂತೆಯ ಮೊರೆತ
ನೀರಿನ ಆವಿಯಂತೆ 
ಕ್ಷಣ ಒಂದರಲೇ ಮಾಯ!
ಕಾಯಬೇಕು ಆ ಸಮಯಕ್ಕೆ!
ಒಂಬತ್ತು  ತಿಂಗಳ ನರಳಿಕೆಯ 
ಸುಖಪ್ರಸವದ ಸುಮುಹೂರ್ತಕ್ಕೆ!
ಸಮಯ ಬಂದಾಗ..........,
ಎಲ್ಲವೂ ಸುಸೂತ್ರ!!

Sunday, December 4, 2011

"ಧ್ಯಾನದಲ್ಲಿ ಫ್ಲಶ್ ಮಾಡಿ!" ( Flush Meditatively ! )

ಎರಡು ವರ್ಷಗಳ ಹಿಂದೆ ಬೆಂಗಳೂರಿನ ಚಿತ್ರ ಕಲಾ ಪರಿಷತ್ ಗೆ ಹೋಗಿದ್ದೆ.ಅಲ್ಲೊಂದು ಚಿತ್ರಕಲಾ ಪ್ರದರ್ಶನ ನೋಡಿಕೊಂಡು ವಾಪಸ್ ಬರುತ್ತಿದ್ದಾಗ ಅಲ್ಲೇ 'ಓಶೋ ಮೆಡಿಟೇಶನ್ ಸೆಂಟರ್'ಎನ್ನುವ ಬೋರ್ಡ್ ಕಾಣಿಸಿತು.ಸರಿ,ಒಮ್ಮೆ ನೋಡಿಕೊಂಡು ಬರೋಣ ಎಂದು ಒಳ ಹೊಕ್ಕೆ.ಅದನ್ನು ನೋಡಿಕೊಳ್ಳುತ್ತಿದ್ದ ಸುಮಾರು ಎಂಬತ್ತು ವರ್ಷಗಳ ವಯೋ ವೃದ್ಧರ ಮುಖದಲ್ಲಿ ಅಪೂರ್ವ ಕಾಂತಿ ಇತ್ತು.ಅವರು ಆಚಾರ್ಯ ರಜನೀಶರಿಗೆ ಬಹಳ ಆಪ್ತರಾಗಿದ್ದವರು.ಹತ್ತಿರದಿಂದ ಬಲ್ಲವರು.ಬೆಂಗಳೂರಿನ ಸೆಂಟರ್ ಅನ್ನು ಸುಮಾರು ಮೂವತ್ತು ವರ್ಷಗಳಿಂದ ಅವರೇ ನೋಡಿಕೊಳ್ಳುತ್ತಿದ್ದಾರೆ .ಅವರ ನಡವಳಿಕೆಯಲ್ಲಿ ಒಂದು ವಿಶಿಷ್ಟ ರೀತಿಯ ಸೌಮ್ಯತೆ ಇತ್ತು .ಅಲ್ಲಿದ್ದ ಲೈಬ್ರರಿಯಲ್ಲಿ ಕೆಲ ಪುಸ್ತಕಗಳನ್ನು ಖರೀದಿಸಿದೆ.ಅಲ್ಲೇ ಇದ್ದ ಧ್ಯಾನ ಮಂದಿರದಲ್ಲಿ ಕುಳಿತು ಧ್ಯಾನ ಮಾಡಿದಾಗ ಮನಸ್ಸಿಗೆ  ಯಾವುದೋ ಅಲೌಕಿಕ ಆನಂದದ ಅನುಭೂತಿಯಾಯಿತು.ಅಲ್ಲಿದ್ದ ಪ್ರಶಾಂತ ವಾತಾವರಣ ವಿಶಿಷ್ಟವೆನಿಸಿತ್ತು.ಅಲ್ಲೇ ಹಿಂದೆ ಇದ್ದ ಟಾಯ್ಲೆಟ್ಟಿಗೆ ಹೋದೆ.ಅಲ್ಲಿ ಫ್ಲಷ್ ಮಾಡುವ ಜಾಗದಲ್ಲಿ 'FLUSH  MEDITATIVELY ' ಎನ್ನುವ ಬೋರ್ಡ್ ಇತ್ತು! 
ಕುತೂಹಲದಿಂದ ಅಲ್ಲಿಯ ಮೇಲ್ವಿಚಾರಕರಲ್ಲಿ  ಅದರ ಪ್ರಸ್ತಾಪ ಮಾಡಿದೆ.ಅದಕ್ಕೆ ಅವರು ನಗುತ್ತ ಕೊಟ್ಟ ಉತ್ತರ ಬಹಳ ಅರ್ಥ ಪೂರ್ಣವಾಗಿತ್ತು.'ನೀವು ಏನೋ ಯೋಚನೆ ಮಾಡುತ್ತಾ ಜೋರಾಗಿ flush ಮಾಡಿದರೆ ಅದರ ಹಿಡಿಯೇ ಕಿತ್ತು ಹೋಗಬಹುದು.ಧ್ಯಾನದಲ್ಲಿ ಇರುವುದು ಎಂದರೆ ಸಂಪೂರ್ಣ ಎಚ್ಚರದಲ್ಲಿ ಇರುವುದು ಎಂದರ್ಥ.ನೀವು ಯಾವುದೇ ಕೆಲಸ ಮಾಡುವಾಗ ಸಂಪೂರ್ಣ ಎಚ್ಚರದ ಸ್ಥಿತಿಯಲ್ಲಿ ಇರಿ ಎನ್ನುವುದನ್ನು ನೆನಪಿಸುವುದಕ್ಕೆ ಆ ರೀತಿ ಬೋರ್ಡ್ ಹಾಕಿದ್ದೇವೆ. ಧ್ಯಾನದ ಸ್ಥಿತಿಯಲ್ಲಿ ನಿಮ್ಮ ಮನಸ್ಸಿನಲ್ಲಿರುವ ಚಿಂತೆ ಮತ್ತು ಕೆಟ್ಟ ಆಲೋಚನೆಗಳನ್ನೂ flush ಮಾಡಿ 'ಎಂದು ಮಾರ್ಮಿಕವಾಗಿ ನಕ್ಕರು ! ಅವರ ಅರ್ಥ ಪೂರ್ಣ ಮಾತುಗಳ ಬಗ್ಗೆ ಯೋಚಿಸುತ್ತಾ ಮನೆಯ ದಾರಿ ಹಿಡಿದೆ.

Saturday, November 19, 2011

"ಅಂತಃ -ಕುರುಕ್ಷೇತ್ರ"

ನಾನೂ ನೀಲಕಂಠನಾಗಬೇಕಿದೆ!
ನನ್ನ  ಸುತ್ತ ಮುತ್ತಲಿರುವ 
ನೋವಿನ  ಗರಳ ಕುಡಿದೂ 
ನಗು ನಗುತ್ತಾ ಬದುಕುತ್ತಿರುವ 
ಹಲ  ಕೆಲವು  
ನಂಜುಂಡ  ನಂಜುಂಡಿಯರಂತೆ!
ಅವರವರಿಗಿದೆ  ಅವರವರದೇ 
ಒಡಲಾಳದ  ಜ್ವಾಲೆ!
ಸಹನೆ ಗುಪ್ತ ಗಾಮಿನಿ ! 
ಖಿನ್ನತೆಯ  ಕಾಳಿಂಗನ ಮೆಟ್ಟಿ 
ಎದೆಯಾಳದಿ  ಹೆಪ್ಪುಗಟ್ಟಿದ 
ಹಿಮದ  ಹೆಬ್ಬಂಡೆಗಳು ಕರಗಿ 
ಮನದೊಳಗೇ ಕೊರೆಯುವ 
ಚಿಂತೆಯ  ಕಂಬಳೀ  ಹುಳ 
ಪತಂಗವಾಗಿ  ಮಾರ್ಪಟ್ಟು 
ಬಣ್ಣದ  ಪಕ್ಕಗಳ ತೊಟ್ಟು 
ಆನಂದದ  ಲೋಕದಲ್ಲಿ 
ಹಾರಾಡಬೇಕಿದೆ. 
ನಾವೇ ಸೃಷ್ಟಿಸಿಕೊಂಡ
ಮನದ ಕೊಳಗೇರಿಯಲ್ಲೊಂದು 
ನಂದನವನ  
ತಲೆ ಎತ್ತಬೇಕಿದೆ!
 

Saturday, November 5, 2011

"ಸ್ಕ್ಯಾನಿಂಗ್ ರಿಪೋರ್ಟ್!!!"

ಅವನು ಸುಮಾರು ಇಪ್ಪತ್ತೆರಡರ ಯುವಕ.ಹಲವು ದಿನಗಳಿಂದ ಇದ್ದಕ್ಕಿದ್ದಂತೆ ಎಡಗಡೆ ಪಕ್ಕೆಯ ಭಾಗದಲ್ಲಿ ವಿಪರೀತ ನೋವು ಬರುತ್ತಿದೆ ಎಂದು ಹೇಳಿಕೊಂಡು ನಮ್ಮ ಆಸ್ಪತ್ರೆಗೆ ಬಂದ.ಮೂತ್ರ ಪರೀಕ್ಷೆಯಲ್ಲಿ ಕೆಲವು ಬದಲಾವಣೆಗಳು ಕಂಡು ಬಂದಿದ್ದರಿಂದ ಅವನ ಕಿಡ್ನಿ ಯಲ್ಲಿ ಏನಾದರೂ ಕಲ್ಲುಗಳಿವೆಯೇ(Renal calculi) ಎಂದು ನೋಡಲು ಅವನನ್ನು ಶಿವಮೊಗ್ಗೆಯ ಸ್ಕ್ಯಾನಿಂಗ್ ಸೆಂಟರ್ ಒಂದಕ್ಕೆ 'ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್' ಗಾಗಿ ಕಳಿಸಿದೆವು.ಯುವಕ ಮಾರನೇ ದಿನ ಸ್ಕ್ಯಾನಿಂಗ್ ರಿಪೋರ್ಟ್ ತೆಗೆದುಕೊಂಡು ಬಂದ.ನಾವು ಅಂದುಕೊಂಡಿದ್ದಂತೆ ಅವನ ಎಡಗಡೆಯ ಕಿಡ್ನಿಯಲ್ಲಿ ಸಣ್ಣ ಸಣ್ಣ ಹರಳುಗಳಿದ್ದವು. ಆ ರಿಪೋರ್ಟ್ ಪ್ರಿಂಟ್ ಆಗಿದ್ದ format ನಲ್ಲಿತ್ತು.ಅದರಲ್ಲಿ ಎಲ್ಲಿ ತೊಂದರೆ ಇದೆಯೋ ಅದರ ಬಗ್ಗೆ ಬರೆದು ಮಿಕ್ಕ ಕಾಲಂ ಗಳಲ್ಲಿ normal ಎಂದು ಬರೆದು ಕಳಿಸುವುದು ಅವರ  ರೂಢಿ.ಆದರೆ ಈ ರೀತಿ routine ಆಗಿ ಕಾಲಂ ಗಳನ್ನು ತುಂಬಿ ಕಳಿಸಿದರೆ ಆಗುವ ಆಭಾಸವನ್ನು ನೀವೇ ನೋಡಿ. ಅದರಲ್ಲಿದ್ದ ಮಿಕ್ಕ ಕಾಲಂ ಗಳ ರಿಪೋರ್ಟ್ ಈ ರೀತಿ ಇತ್ತು:
Rt.Kidney;normal
Liver;normal,
Gall bladder:normal
UTERUS(ಗರ್ಭಕೋಶ): NORMAL
OVARIES(ಅಂಡಾಶಯಗಳು): NORMAL
ಗಂಡಸೊಬ್ಬನ ಸ್ಕ್ಯಾನಿಂಗ್ ರಿಪೋರ್ಟಿನಲ್ಲಿ ಗರ್ಭ ಕೋಶ ಮತ್ತು ಅಂಡಾಶಯಗಳು NORMAL ಎಂದು ರಿಪೋರ್ಟ್!!ಅವನ ಈ ರಿಪೋರ್ಟ್ ನೋಡಿ ನಮ್ಮ ಮಹಿಳಾ ವೈಧ್ಯಾಧಿಕಾರಿಗಳು ಬಿದ್ದು,ಬಿದ್ದು ನಗುತ್ತಿದ್ದರು.ನಾನೂ ನಗುತ್ತಲೇ ನನ್ನ ಚೇಂಬರ್ ಗೆ ಹೋದೆ.
 

Thursday, November 3, 2011

"ಎಲೇಲೆ ರಸ್ತೇ!ಏನೀ ಅವ್ಯವಸ್ಥೆ?!"

ಪಾಪಿ ಚಿರಾಯು !
ಈ ಕೆಟ್ಟ ರಸ್ತೆಯ ಹಾಗೆ !
ಒಂದು ಕಡೆಯಿಂದ 
ಮರಮ್ಮತ್ತು ನಡೆಯುತ್ತಿದ್ದಂತೆ 
ಮತ್ತೊಂದು ಕಡೆಯಿಂದ 
ಕಿತ್ತು ಹಳ್ಳ ಹಿಡಿಯುತ್ತಿದೆ!
ಹೇಗೆ ಮಲಗಿದೆ ನೋಡಿ
ಮೈಲಿಗಳ ಉದ್ದಕ್ಕೂ 
ಹಳ್ಳ ಕೊಳ್ಳಗಳ ಹೊದ್ದು
ಮಳ್ಳಿಯ ಹಾಗೆ !
ಒಂದೊಂದು ಕಿತ್ತ 
ಜಲ್ಲಿ ಕಲ್ಲಿನ ಹಿಂದೆ 
ಕೋಟಿಗಟ್ಟಲೆ ಹಣದ 
ಲೂಟಿಯ ಕಥೆ!
ಟಾರಿನಂತೆಯೇ 
ಕೊತ ಕೊತನೆ ಕುದಿವವರ  
ಬಿಸಿ ಬಿಸಿ ನಿಟ್ಟುಸಿರಿನ,
ಬೆವರಿನ ವ್ಯಥೆ !
ಇದ್ದ  ಬದ್ದ 
ಇಂಚಿಂಚು ಜಾಗವನ್ನೂ 
ಸೈಟಿಸಿ ,ಅಪಾರ್ಟ್ ಮೆಂಟಿಸಿ,
ತಮ್ಮನ್ನು ಒಕ್ಕಲೆಬ್ಬಿಸಿದ್ದಕ್ಕೆ 
ಹಳ್ಳ ಕೊಳ್ಳಗಳೆಲ್ಲಾ
ರಸ್ತೆಗೇ ಇಳಿದು 
ಧರಣಿ ಕೂತಿವೆಯೇ ಹೇಗೆ !?
ಎಷ್ಟು ಹೇಳಿದರೂ ಅಷ್ಟೇ!
ಎಷ್ಟು ಹಳಿದರೂ ಅಷ್ಟೇ !
ಇದು ತೀರದ, ಮುಗಿಯದ 
ಕರ್ಮ ಕಾಂಡ !
ನಮ್ಮೆಲ್ಲರ ಬದುಕಿನ 
ಬವಣೆಗಳ ಹಾಗೆ !!!

Tuesday, November 1, 2011

"ಕನ್ನಡಮ್ಮನ ಅಳಲು"

ಇಂದು ಕನ್ನಡ ರಾಜ್ಯೋತ್ಸವ.ಎಲ್ಲೆಲ್ಲೂ ಕನ್ನಡದ ಕಲರವ!ಮನಸ್ಸುಖುಷಿಯಿಂದ  ಗರಿಗೆದರಿ ಹಾರಾಡುತ್ತದೆ.ಈ ನೆಲ ,ಈ ಜಲ,ಈ ಭಾಷೆಯ ವೈವಿಧ್ಯಮಯ ಸೊಗಡು, ನೆನಸಿಕೊಂಡರೆ ಮೈ ನವಿರೇಳುತ್ತದೆ!ಕನ್ನಡ ಸಾಹಿತ್ಯವಂತೂ ನನಗೆ ಅಚ್ಚುಮೆಚ್ಚು! ಆದರೂ ಕೆಲವೊಮ್ಮೆ ಅವಿದ್ಯಾವಂತ ಕನ್ನಡಿಗರ ಸ್ಥಿತಿ ನೋಡಿ ಮನ ಕಲಕುತ್ತದೆ.ಸುಮಾರು ಆರು ವರ್ಷಗಳ  ಹಿಂದೆ ನಡೆದ ಮನ ಮಿಡಿಯುವ ಘಟನೆಯೊಂದು ನೆನಪಿನ ಮೂಲೆಯೊಂದರಲ್ಲಿ ಉಳಿದುಬಿಟ್ಟಿದೆ.ಈ ದಿನ ಆ ಘಟನೆ ಮತ್ತೆ ,ಮತ್ತೆ ನೆನಪಾಗುತ್ತಿದೆ.ನನ್ನ ಬ್ಲಾಗಿನಲ್ಲಿ ಇದರ ಬಗ್ಗೆ ಸುಮಾರು ಒಂದೂವರೆ ವರ್ಷಗಳ ಹಿಂದೆ ಬರೆದಿದ್ದೆ.ಈ ದಿನ ಮತ್ತೆ ಬರೆಯಬೇಕಿನಿಸಿದೆ.ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ನನ್ನ ಟ್ರೈನಿಗಾಗಿ ಕಾಯುತ್ತಿದ್ದೆ.ಹಳ್ಳಿ ಹೆಂಗಸೊಬ್ಬಳು ತನ್ನ ಎರಡು ಮಕ್ಕಳನ್ನು ಕಟ್ಟಿಕೊಂಡು, ಕಂಡ ಕಂಡವರನ್ನು ,'ಯಪ್ಪಾ ನಿಮಗೆ ಕನ್ನಡ ತಿಳೀತೈತೇನ್ರಿ?'ಎಂದು ದೈನ್ಯದಿಂದ ಕೇಳುತ್ತಿದ್ದಳು.ನಾನು ಅವಳನ್ನು ಕನ್ನಡದಲ್ಲಿ ಮಾತಾಡಿಸಿದಾಗ ಅವಳ ಮುಖ ನಿಧಿ ಸಿಕ್ಕಂತೆ ಅರಳಿತು.'ಏನ್ಮಾಡೋದ್ರೀ ಯಪ್ಪಾ ,ಇಲ್ಲಿ ಯಾರಿಗೂ ಕನ್ನಡ ತಿಳೀವಲ್ತು!ಹೊಸಪೇಟಿ ಬಂಡಿ ಎಲ್ಲಿ ಬರತೈತ್ರೀ ?'ಎಂದಳು.ನಾನು ಅವಳಿಗೆ ಅವಳು ಹೋಗಬೇಕಾದ ಪ್ಲಾಟ್ ಫಾರಂ  ತೋರಿಸಿ ಬಂದೆ. 'ನಿನ್ನ  ಮಕ್ಳಿಗೆ ಪುಣ್ಯ ಬರಲಿರೀ ಯಪ್ಪಾ!'ಎಂದು ಬೀಳ್ಕೊಟ್ಟಳು.ಈ ಘಟನೆ ನಡೆದದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ!
ಇದನ್ನು' ಕನ್ನಡಮ್ಮನ ಅಳಲು'ಎನ್ನೋಣವೇ?ಈಗ ಸ್ಥಿತಿ ಸ್ವಲ್ಪ ಸುಧಾರಿಸಿರಬಹುದು.ಆದರೂ ,ಕನ್ನಡ ನಾಡು ,ನುಡಿ ಮತ್ತು ಕನ್ನಡ ಜನರಿಗಾಗಿ ನಾವೇನು ಮಾಡಬಹುದು ಎಂದು ಪ್ರತಿಯೊಬ್ಬರೂ ಯೋಚಿಸಬೇಕಾದ ಸಮಯ ಇದಲ್ಲವೇ?ಎಲ್ಲ ಕನ್ನಡಿಗರಿಗೂ ಶುಭವಾಗಲಿ ಎಂದು ಹಾರೈಸೋಣ.

Sunday, October 30, 2011

"ನನ್ನ ರೊಕ್ಕಾ ನನಗ್ ಕೊಡ್ರೀ !!! "

ನನ್ನ ಸ್ನೇಹಿತ ಹೇಮಚಂದ್ರ ರಾಷ್ಟ್ರೀಕೃತ ಬ್ಯಾಂಕ್ ಒಂದರ ಅಧಿಕಾರಿ.ಕೆಲ ವರ್ಷಗಳ ಹಿಂದೆ ರಾಯಚೂರಿನ ಬಹಳ ಹಿಂದುಳಿದ ತಾಲ್ಲೂಕೊಂದರ ಹಳ್ಳಿಯಲ್ಲಿದ್ದ ಬ್ಯಾಂಕಿನ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ.ಒಂದು ದಿನ ಬ್ಯಾಂಕಿಗೆ ಅಜ್ಜನೊಬ್ಬ ಹಳೆಯ ರುಮಾಲೊಂದರಲ್ಲಿ ತಾನು ಕೂಡಿಟ್ಟಿದ್ದ ಹಣವನ್ನೆಲ್ಲಾ ಕಟ್ಟಿಕೊಂಡು ಬಂದು ,'ಯಪ್ಪಾ......, ನಾ ಸೇರಿಸಿಟ್ಟ ರೊಕ್ಕಾಇದರಾಗ  ಐತಿ.ಇದನ ನೀವು ಜ್ವಾಪಾನ ಮಾಡ್ತೀರೇನ್ ಯಪ್ಪಾ?' ಎಂದು ಕೇಳಿದ.ತಮ್ಮ ಬ್ಯಾಂಕ್ ಇರುವುದೇ ಅದಕ್ಕೆಂದೂ,ಅವನ ಹಣವನ್ನು ಜೋಪಾನವಾಗಿ ಇಡುವುದಲ್ಲದೇ ಅದಕ್ಕೆ ವರುಷಕ್ಕೆಇಷ್ಟು ಅಂತ ಬಡ್ಡಿಯನ್ನೂ ಸೇರಿಸಿಕೊಡುವುದಾಗಿ ಬ್ಯಾಂಕಿನವರು ಹೇಳಿದರು.'ಯಪ್ಪಾ ನನಗ ಬೇಕಂದಾಗ ನನ ರೊಕ್ಕಾ ನನಗ ಕೊಡ್ತೀರೆನ್ರೀ?'ಎಂದು ಎರೆಡೆರಡು ಬಾರಿ ಕೇಳಿಕೊಂಡ ಮೇಲೆ ತನ್ನ ಗಂಟನ್ನು ಬಿಚ್ಚಿ ಟೇಬಲ್ ಮೇಲಿಟ್ಟ.ಅದರಲ್ಲಿ ಐದು,ಹತ್ತು,ಇಪ್ಪತ್ತರ ಹಲವು ನೋಟುಗಳೂ,ಐವತ್ತು ನೂರರ ಕೆಲವು ನೋಟುಗಳೂ, ಒಂದು ರಾಶಿ ಚಿಲ್ಲರೆ ಹಣವೂ ಸೇರಿ ಎಲ್ಲಾ ಒಟ್ಟು ಐದು ಸಾವಿರದಷ್ಟು ಹಣ ಇತ್ತು.ಅದು ಅವನು ಬಹಳ ವರ್ಷಗಳಿಂದ ಕೂಡಿಟ್ಟ ಹಣವಾಗಿತ್ತು.ಅದನ್ನು ಅವನ ಮುಂದೆಯೇ ಎಣಿಸಿ,ಅರ್ಜಿಯಲ್ಲಿ  ಅವನ ಹೆಬ್ಬೆಟ್ಟು ಒತ್ತಿಸಿ ,ಐದು ಸಾವಿರಕ್ಕೆ ಒಂದು ವರ್ಷದ ಒಂದು  fixed deposit ಮಾಡಿ, ಅವನ ಕೈಯಲ್ಲಿ ಅದರ ದಾಖಲೆ  ಪತ್ರವನ್ನು ಕೊಟ್ಟು ಕಳಿಸಿದರು.ಆರು ತಿಂಗಳ ನಂತರ ಅಜ್ಜ ತನ್ನ ಮಗಳ ಮದುವೆ   ಇರುವುದರಿಂದ ತನಗೆ ಹಣದ ಅವಶ್ಯಕತೆ ಇರುವುದೆಂದೂ,ತನ್ನ ಹಣವನ್ನು ವಾಪಸ್  ತನಗೆ ಕೊಡಬೇಕೆಂದೂ ಕೇಳಿಕೊಂಡ.ಒಂದು ವರ್ಷಕ್ಕೆ ಎಫ್.ಡಿ.ಇಟ್ಟಿರುವುದರಿಂದ ಬಡ್ಡಿ ಹಣ ಪೂರ್ತಿ ಬರುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಅಜ್ಜ "ನನ್ ರೊಕ್ಕಾ ನನಗ ಪೂರಾ ಕೊಡಂಗಿಲ್ಲಾ  ಅಂದ್ರ ಏನ್ರೀ........? ಶಾಲೀ ಕಲ್ತಿಲ್ಲಾ ಅಂತಾ ಮೋಸಾ ಮಾಡ್ತೀರೇನು ?"ಎಂದು ಕೂಗಾಡಲು ಶುರು ಹಚ್ಚಿಕೊಂಡ.ಅವನನ್ನು ಒಳಗೆ ಕರೆದು ಮ್ಯಾನೇಜರ್ ಅವರ ಚೇಂಬರ್ ನಲ್ಲಿ ಕೂರಿಸಿ , ಅವನ ಅಸಲು ಹಣ ಐದು ಸಾವಿರವನ್ನು ಪೂರ್ತಿ ಕೊಡುವುದಾಗಿಯೂ ,ಬಡ್ಡಿಯ ಹಣ ಸ್ವಲ್ಪ ಕಡಿಮೆ ಬರುವುದೆಂದೂ ಅವನಿಗೆ ತಿಳಿಸಿ ಹೇಳಬೇಕಾದರೆ ಅಧಿಕಾರಿಗಳಿಗೆ ಸಾಕು ಸಾಕಾಯಿತು. ಅವನು ಒಪ್ಪಿದ ಮೇಲೇ ರಸೀದಿಗಳಿಗೆ ಅವನ ಹೆಬ್ಬೆಟ್ಟು ಒತ್ತಿಸಿಕೊಂಡುಅಸಲು ಐದು ಸಾವಿರ ( ಐದುನೂರರ ಹತ್ತು ನೋಟುಗಳು) ಮತ್ತು ಬಡ್ಡಿ ಹಣ  ನಾನ್ನೂರು ಚಿಲ್ಲರೆ  ಅವನ ಮುಂದಿಟ್ಟು ತೆಗೆದು ಕೊಂಡು ಹೋಗುವಂತೆ ತಿಳಿಸಿದರು.ಅಜ್ಜ ಆ ಹಣ ಮುಟ್ಟಲು ಸುತರಾಂ ಒಪ್ಪಲಿಲ್ಲ."ಇದು ನಾ ಕೊಟ್ಟ ರೊಕ್ಕ ಅಲ್ರೀ! ಈ ರೊಕ್ಕ ಬ್ಯಾಡ್ರೀ.......,ನಾ ಕೊಟ್ಟ  ರೊಕ್ಕನ  ನನಗ ವಾಪಸ್  ಕೊಡ್ರೀ ಸಾಹೇಬ್ರಾ  !"ಎಂದು ಗಂಟು ಬಿದ್ದ.ಇದು ಅವನು ಕೊಟ್ಟ ಹಣದಷ್ಟೇ ಮೊತ್ತದ ಹಣವೆಂದೂ,ಎಲ್ಲಾ ಒಂದೇ ಎಂದೂ ಎಷ್ಟು ತಿಳಿಸಿ ಹೇಳಿದರೂ ಅಜ್ಜ "ನಾ ಕೊಟ್ಟ ರೊಕ್ಕ ಎಲ್ಲಿ ಹೋತು?ಜ್ವಾಪಾನ ಮಾಡತೀವಿ ಅಂತ ತಗಂಡರಲ್ರೀ ! ನಮ್ಮ ರೊಕ್ಕ ನಮಗಾ ಕೊಡಂಗಿಲ್ಲಾ  ಅಂದ್ರ ಹ್ಯಾಂಗ್ರೀ ?"ಎಂದು ಕೂಗಾಡುತ್ತಾ ಹೋಗಿ ಊರ ಗೌಡನನ್ನು ಕರೆದುಕೊಂಡು ಬಂದ.ಊರ ಗೌಡ ವ್ಯವಹಾರಸ್ಥ.ಬ್ಯಾಂಕ್ ಅಧಿಕಾರಿಗಳು ನಡೆದದ್ದನ್ನು ತಿಳಿಸಿದ ಮೇಲೆ ಅವನಿಗೆ ಎಲ್ಲಾ ಅರ್ಥವಾಯಿತು. ಅವನು ಅಧಿಕಾರಿಗಳಿಗೆ ಕಣ್ಣು ಸನ್ನೆ ಮಾಡಿ "ಇದು ಬ್ಯಾಡ್ರೀ ಸರ್ ,ಹತ್ತು ರೂಪಾಯಿಯ ಹೊಸಾ ನೋಟು ಬಂದವಲ್ಲಾ,ಅವನ್ನು ತರ್ರೀ "ಎಂದ.ಅಷ್ಟೂ ಹಣಕ್ಕೂ ಹತ್ತು ರೂಪಾಯಿಗಳ ಹೊಸ ನೋಟು ಕೊಟ್ಟರು.ಗೌಡ ಅಜ್ಜನ ಕಡೆ ತಿರುಗಿ "ಅಜ್ಜಾ ....,ನೀ ಕೊಟ್ಟ ಹಣ ಎಲ್ಲ ಹಳೇದಾಗಿದ್ವು .ಸ್ವಚ್ಛ ಆಗಿ ಬರಲಿಕ್ಕೆ ದಿಲ್ಲಿಗೆ ಹೊಗ್ಯಾವೆ.ಅವು ಬರಲಿಕ್ಕೆ ಇನ್ನೂ  ಒಂದು ವರ್ಷ ಹಿಡೀತೈತಿ.ಅಷ್ಟರ ಮಟ ನೀ ತಡೀತೀಯೇನು?ಆಗಂಗಿಲ್ಲಾ !ಹೌದಲ್ಲೋ?  ಇವು  ಸ್ವಚ್ಛ ಆಗಿ ಈಗಷ್ಟೇ ಬಂದ ಹೊಸ ರೊಕ್ಕ.ನಿನಗಂತಾ  ಕೊಡಿಸೀನಿ. ಬಾಯಿ ಮುಚ್ಕಂಡು ತಕ್ಕಂಡು ಹೋಗು"ಎಂದ.ಗೌಡ ಹೇಳಿದ ಮಾತು ಅಜ್ಜನಿಗೆ ಒಪ್ಪಿಗೆ ಆಯಿತು.ಹತ್ತರ ಹೊಸ ನೋಟುಗಳನ್ನು ಅಜ್ಜ ತನ್ನ ರುಮಾಲಿನಲ್ಲಿ ಕಟ್ಟಿಕೊಂಡು ಸಂತಸದಿಂದ "ನೀ ಇದ್ದೀ ಅಂತ ಎಲ್ಲಾ ಸುಸೂತ್ರ ಆತು ನೋಡು ಗೌಡ"ಎಂದು ಗೌಡನ ಉಪಕಾರವನ್ನು ಕೊಂಡಾಡುತ್ತಾ  ಹೋದನಂತೆ. ಇಷ್ಟು ಹೇಳಿ ಹೇಮಚಂದ್ರ "ಹೇಗಿದೆ ನಮ್ಮ ಹಳ್ಳಿ ಅನುಭವ?"ಎಂದ.ನಾನು ಮಾತು ಹೊರಡದೆ ದಂಗಾಗಿದ್ದೆ!ಆಗ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ...."ಹೀಗೂ ...ಉಂಟೆ !"

Friday, October 28, 2011

"ಜಟಕಾದಲ್ಲಿ ಹೀಗೊಂದು ರೋಮ್ಯಾನ್ಸ್"

ಸುಮಾರು ಅರವತ್ತು ವರ್ಷಗಳ ಹಿಂದಿನ ಮಾತು .ಆಗೆಲ್ಲಾ ಆಟೋಗಳ ಆಟಾಟೋಪ ಇರಲಿಲ್ಲ.ಅದು ಜಟಕಾಗಳ ಜಮಾನ. ನನ್ನ ಪರಿಚಿತ ವಯೋವೃದ್ಧರೊಬ್ಬರು ಮದುವೆಯಾದ ಹೊಸದರಲ್ಲಿ ಜಟಕಾ ಬಂಡಿಯೊಂದರಲ್ಲಿ ತಮ್ಮ ನವ ವಧುವಿನೊಡನೆ ಹೊರಗೆ ಹೊರಟಿದ್ದರು.ಹೆಂಡತಿಗೆ ಆಗಿನ್ನೂ ಹದಿನೇಳುವರ್ಷ.ಇವರಿಗೆ ಇಪ್ಪತ್ತೆರಡು . ಮೊದಲೇ ನಾಚಿಕೆ ಸ್ವಭಾವದ ಹೆಣ್ಣು.ಗಂಡನ ಪಕ್ಕಸಂಕೋಚದಿಂದ ಮುದುರಿಕೊಂಡು ಕುಳಿತಿದ್ದರು.ಗಂಡನಿಗೆ ಸಹಜವಾಗಿ ಅವರ ಪಕ್ಕ ಸರಿದು ಕುಳಿತು ಕೊಳ್ಳಬೇಕೆಂಬ ಬಯಕೆ.ಇವರು ಅವರ ಪಕ್ಕಕ್ಕೆ ಸರಿದಂತೆಲ್ಲಾ ಅವರು ನಾಚಿಕೆಯಿಂದ  ಹಿಂದಕ್ಕೆ ಸರಿಯುತ್ತಿದ್ದರು.ಹೀಗೆ ಹಿಂದಕ್ಕೆ ಸರಿದೂ,ಸರಿದೂ ಅವರಿಗೆ ಗೊತ್ತಿಲ್ಲದ ಹಾಗೆ  ಜಟಕಾದ ಮುಂಭಾಗದಲ್ಲಿ ಕುಳಿತಿದ್ದ ಜಟಕಾ ಸಾಬಿಯ ಪಕ್ಕಕ್ಕೆ ಬಂದು ಬಿಟ್ಟಿದ್ದರು!ಗಂಡ ಸಿಟ್ಟಿನಿಂದ 'ನನಗಿಂತಾ ನಿನಗೆ ಆ ಜಟಕಾ ಸಾಬೀನೆ ಹೆಚ್ಚಾ?'ಎಂದು ರೇಗಿದರು .ಜಟಕಾ ಸಾಬಿ ತನ್ನ ಉರ್ದು ಮಿಶ್ರಿತ ಕನ್ನಡ ದಲ್ಲಿ "ಏನಮ್ಮಾ....! ನೀವು ನಮ್ದೂಕೆ ಪಕ್ಕ ಯಾಕೆ  ಬಂದ್ರಿ ? ಸಾಹೇಬರ  ಪಕ್ಕ ಜಾಕೇ ಬೈಟೋ ! 'ಎಂದು ಬೇರೆ ಹೇಳಿಬಿಟ್ಟನಂತೆ. ಪಾಪ ಅವರು  ಅಲ್ಲಿಂದ ಸರಿದು ಜಟಕಾದ ಮಧ್ಯ ಭಾಗದಲ್ಲಿ ನಾಚಿಕೆ ಮತ್ತು  ಅವಮಾನಗಳಿಂದ ಮೈ ಹಿಡಿಮಾಡಿಕೊಂಡು ಕುಳಿತರು ! ಈಗಲೂ ಅವರು ಆ ಘಟನೆಯನ್ನು ನೆನೆಸಿಕೊಂಡು 'ನನಗಿಂತ ಆ ಜಟಕಾ ಸಾಬಿಯೇ ಇವಳಿಗೆ ಹೆಚ್ಚು ಇಷ್ಟ ಆಗಿದ್ದಾ"ಎಂದು ಹೆಂಡತಿಯನ್ನು ರೇಗಿಸುತ್ತಾರೆ.ಇವರೂ ಸುಮ್ಮನಿರದೆ "ಹೌದು, ನಿಮಗಿಂತಾ ಅವನೇ ಎಷ್ಟೋ  ಚೆನ್ನಾಗಿದ್ದಾ !"ಎಂದು,ಸೇಡು ತೀರಿಸಿಕೊಳ್ಳುತ್ತಾರೆ! ಅವರ ಸರಸ,ಇವರ ಹುಸಿ ಮುನಿಸು,ಮಾಗಿದ ಅವರಿಬ್ಬರ ದಾಂಪತ್ಯಕ್ಕೆ ಇನ್ನಷ್ಟು  ಮೆರಗನ್ನು ಕೊಡುತ್ತದೆ !!

Tuesday, October 25, 2011

"ಹಬ್ಬದೂಟ .....ಘಮ್ಮಗೆ !! ನೆನೆಸಿಕೊಂಡ್ರೆ ಸುಮ್ಮಗೆ !! "


"ಎಲ್ಲರಿಗೂ ............ದೀಪಾವಳಿ ಹಬ್ಬದ ............ಶುಭಾಶಯಗಳು .......



ಮನೆಯಲಿ.......ಹಬ್ಬ !!
ಅಬ್ಬಬ್ಬಾ.................!!
ಏನು ತಿಂಡಿ!ಏನೆಲ್ಲಾ ಊಟ!!
ಬೆಳಿಗ್ಗೆಗೆ ತಿಂಡಿಯ ತಳಪಾಯ!
ಎರಡು ಇಡ್ಲಿ ಮತ್ತು
ಎರಡೇ ಎರಡು  ವಡೆ !
ಮಧ್ಯಾಹ್ನದ ಊಟಕ್ಕೆ ,
ಮೆಲ್ಲಗೆ ಏಳುತ್ತಿತ್ತು
ಏಳಂತಸ್ತಿನ..........
ಮಹಡಿಯ ಗೋಡೆ.......!
ಅನ್ನ ,ತೊವ್ವೆ ತುಪ್ಪ!
ಜೊತೆಗೆ ಒಂದೇ ಒಂದು 
ಎರಿಯಪ್ಪ..........!
ಕೋಸಂಬರಿ ಮತ್ತು ಪಲ್ಯ!
ಬೆವರು ಒರಿಸಿಕೊಳ್ಳೋಕೆ,
ಇಗೋ ತಗೋಳಿ ಈ ಶಲ್ಯ!
ಹಪ್ಪಳ ಮತ್ತು ಸಂಡಿಗೆ !
ಒಂದೇ ಒಂದು ಮಂಡಿಗೆ!
ಬಿಸಿ ಬಿಸಿ ...............,
ಬಿಸಿಬೇಳೆ ಬಾತ್ !
ಅದಕ್ಕೆ ಆಲೂ ಬೋಂಡಾ 
ಸಾಥ್ ................! 
ಸ್ವಲ್ಪ ತಿನ್ನಿ ಮೊಸರನ್ನ
ಊಟ ಮುಗಿಸೋ ಮುನ್ನ.
ಆಗುತ್ತಿದೆಯೇ ಆಯಾಸ?
ಸ್ವಲ್ಪವೇ ಕುಡಿದು ಬಿಡಿ 
ಗಸ ಗಸೆ
ಪಾ 
ಯ 
ಸ 
Z Z Z Z Z Z Z Z.NIDDE.....!!!


Sunday, October 23, 2011

"ಅಪ್ಪಾ ....ಹಂಗಂದ್ರೆ ಏನಪ್ಪಾ ? "

ಮಕ್ಕಳು ಮುಗ್ಧರು.ಸ್ವಾಭಾವಿಕವಾಗಿ ಅವರಿಗೆ ಕುತೂಹಲ ಹೆಚ್ಚು.ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ತಮ್ಮ ತಂದೆ ತಾಯಂದಿರನ್ನು ಏನು ?ಎತ್ತ?ಯಾಕೆ ?ಎಲ್ಲಿ ?ಎನ್ನುವ ಪ್ರಶ್ನೆಗಳನ್ನು ಕೇಳಿ ತಲೆ ತಿನ್ನುತ್ತಿರುತ್ತಾರೆ.ಕೆಲವೊಮ್ಮೆ ಅವರ ಅಭಾಸವಾಗುಂತಹ ಪ್ರಶ್ನೆಗಳಿಗೆ ಏನು ಉತ್ತರ ಕೊಡುವುದು ಎಂದು ತಿಳಿಯದೆ ಪೋಷಕರು ಕಣ್ಣು ಕಣ್ಣು ಬಿಡುತ್ತಿರುತ್ತಾರೆ.ನನ್ನ ಮಗನೂ ಸಣ್ಣ ವಯಸ್ಸಿನಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಪ್ರಶ್ನೆ ಕೇಳುತ್ತಿದ್ದ.ಯಾವುದೋ ಕನ್ನಡ ಸಿನಿಮಾ ಒಂದಕ್ಕೆ ಹೋಗಿದ್ದೆವು.ಹೀರೋ ಮತ್ತು ಹೀರೋಯಿನ್ 'ಮದುವೆಯ ನಂತರ ಹನಿ ಮೂನಿಗೆ ಎಲ್ಲಿಗೆ ಹೋಗುವುದು' ಎನ್ನುವ ಅತೀ ಗಹನವಾದ ವಿಷಯದ ಬಗ್ಗೆ ಚರ್ಚೆನಡೆಸುತ್ತಿದ್ದರು.ಸುತ್ತಮುತ್ತ ಇದ್ದ ನಿಶ್ಯಬ್ಧದ ನಡುವೆ "ಅಪ್ಪಾ ಹನಿ ಮೂನೆಂದರೆ ಏನಪ್ಪಾ?"ಎನ್ನುವ ನನ್ನ ಮಗನ ಜೋರು ಗಂಟಲಿನ ಪ್ರಶ್ನೆ ತೂರಿಬಂತು!ಸುತ್ತಮುತ್ತಲಿದ್ದವರೆಲ್ಲಾ ಸಿನಿಮಾ ನೋಡುವುದು ಬಿಟ್ಟು ನಮ್ಮತ್ತ ನೋಡಿ ಜೋರಾಗಿ ನಗಲು ಶುರುಮಾಡಿದರು.ಮಗ ಅಷ್ಟಕ್ಕೇ ಬಿಡದೆ"ಅಪ್ಪಾ ಹೇಳಪ್ಪಾ, ಅಪ್ಪಾ ಹೇಳಪ್ಪಾ"ಎಂದು ಪೀಡಿಸತೊಡಗಿದ.ಮುಂದೆ ಇನ್ನೂ ಹೆಚ್ಚಿನ ಆಭಾಸದ ಪ್ರಶ್ನೆಗಳನ್ನು ಕೇಳಬಹುದೆಂದು ಹೆದರಿ, 'ಹೇಳುತ್ತೇನೆ ಬಾ' ಎಂದು ಹೊರಗೆ ಕರೆದುಕೊಂಡು ಹೋದೆ.ನಂತರ ಅವನಿಗೆ ಏನು ಸಮಜಾಯಿಷಿ ನೀಡಿದೆನೋ ನೆನಪಿಲ್ಲ.ಈಗಿನ ತಂದೆ ತಾಯಂದಿರು ಮಕ್ಕಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋದಾಗ ಏನೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾಗಬಹುದೋಎನ್ನುವುದನ್ನು  ನೆನೆಸಿಕೊಂಡರೇ ಭಯವಾಗುತ್ತದೆ. ನಿಮಗೂ ಇಂತಹ ಅನುಭವಗಳಾಗಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.ನಮಸ್ಕಾರ.

Friday, October 21, 2011

"ಬುದ್ಧಿವಂತಿಕೆ "

ನಮ್ಮ ಆಸ್ಪತ್ರೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿರುವ  ಮಾಲಿಂಗ  ಓದಿರುವುದು ಬರೀ ಏಳನೇ ತರಗತಿಅಷ್ಟೇ!.ಆದರೆ ಅವನ ಬುದ್ಧಿಯ ಹರಿತ, ನೋಡಿದರಷ್ಟೇ ನಂಬಿಕೆ ಬರುವುದು.ಓದಿಗೂ ಬುದ್ಧಿಗೂ ಯಾವುದೇ ಸಂಬಂಧ ಇಲ್ಲ ಎನ್ನುವ ನನ್ನ ಅನಿಸಿಕೆಗೆ ನಮ್ಮ ಮಾಲಿಂಗ ಒಳ್ಳೇ ಉದಾಹರಣೆ.ಏನನ್ನಾದರೂ ಒಮ್ಮೆ ನೋಡಿದರೆ ಅದನ್ನು ತಕ್ಷಣ ಕಲಿತಿರುತ್ತಾನೆ.
Tailoring,carpentry,electrical repair,ಸೀರೆಗೆ ಫಾಲ್ಸ್ ಹಾಕುವುದು,ಗಿಣಿ ಪಾರಿವಾಳಗಳನ್ನು ಸಾಕುವುದು,ಅವನ ಹವ್ಯಾಸಗಳು  ಒಂದೇ ಎರಡೇ!ಒಂದೇ ಒಂದು ನಿಮಿಷವೂ ಸುಮ್ಮನಿರುವ ಪಾರ್ಟಿಯಲ್ಲ!ಅವನ ಸಮಯ ಪ್ರಜ್ಞೆ ಅದ್ಭುತ!ಎಲ್ಲಾ ದಿನ ನಿತ್ಯದ ಸಮಸ್ಯೆಗೂ ಅವನಲ್ಲಿ ಉತ್ತರವಿರುತ್ತದೆ.ಮೊನ್ನೆ ನನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಬ್ಯಾಗಿನ ಜಿಪ್ ನ ಹಿಡಿ ಕಿತ್ತುಹೋಯಿತು.ಕಿತ್ತು ಹೋದ ಜಿಪ್ಪಿನ ಜೊತೆಯೇ ಎರಡು ದಿನ ಗುದ್ದಾಡಿ ನನ್ನ ಉಗುರು ಕಿತ್ತು ಹೋಗಿತ್ತು.ನಾನು ಒದ್ದಾಡುತ್ತಿರುವುದು ಮಾಲಿಂಗನ ಗಮನಕ್ಕೆ ಬಂತು.ತಕ್ಷಣ ನನ್ನ ಕೀ ಬಂಚಿನಲ್ಲಿದ್ದ ಸ್ಟೀಲ್ ರಿಂಗ್ ಒಂದನ್ನು ತೆಗೆದು ಬ್ಯಾಗಿನ  ಜಿಪ್ಪಿಗೆ ಸಿಗಿಸಿ ಒಂದು ಸೊಗಸಾದ ಜಿಪ್ಪಿನ ಹಿಡಿ ತಯಾರು ಮಾಡಿಕೊಟ್ಟಿದ್ದ!ಈಗ  ಬ್ಯಾಗಿನ  ಜಿಪ್ಪು ತೆಗೆಯುವಾಗ ಮತ್ತು ಹಾಕುವಾಗಲೆಲ್ಲಾ ಮನಸ್ಸು ಕೃತಜ್ಞತೆಯಿಂದ ಮಾಲಿಂಗನನ್ನು ನೆನೆಯುತ್ತದೆ!ಈಗ ನೀವೇ ಹೇಳಿ.Rank ಬಂದವರು ಮಾತ್ರ ಬುದ್ಧಿವಂತರೇ?

Monday, October 17, 2011

"ಗಡಿಯಾರ!! "

ನಮ್ಮ ಸಂಸಾರ ..........,
ಎದುರಿನ ಗೋಡೆಯ ಮೇಲಿನ 
ಗಡಿಯಾರ.............,
ಎರಡಕ್ಕೂ ಎಷ್ಟೊಂದು ಸಾಮ್ಯ!
ನನ್ನ ಹೆಂಡತಿ.............,
ಶಿಸ್ತಿನ ಸಿಪಾಯಿ  !
ಸೆಕೆಂಡಿನ ಮುಳ್ಳಿನ ಹಾಗೆ 
ಸಪೂರ.........!
ಮೂಗಿಗೆ ಕವಡೆ ಕಟ್ಟಿಕೊಂಡ 
ಗಾಣದೆತ್ತಿನ ದುಡಿತ !
ಅವಳ ನಿರಂತರ 
ಪ್ರೀತಿಯ ತುಡಿತವೇ 
ನಮ್ಮ ಸಂಸಾರದ 
ನಾಡಿಯ ಮಿಡಿತ !
ಮಕ್ಕಳೋ ..........,
ನಿಮಿಷದ ಮುಳ್ಳುಗಳಂತೆ !
ನಿಮಿಷಕ್ಕೊಂದು ರೀತಿ !
ಗಂಟೆಗೆ ಅರವತ್ತರ 
ಅವಸರದ ಓಟ !
ಇನ್ನು,ಅರವತ್ತರದ ಸನಿಹದ 
ನಾನೋ.................!
ಗಂಟೆಯ ಮುಳ್ಳು !
ಧಡಿಯ !ನಿಧಾನಿ!
ಮನೆಯ ಪ್ರಧಾನಿ (?) !
ಗಂಟೆಗೊಮ್ಮೆ ಕದಲಿಕೆ!
ಮನೆಯೊಡತಿಯಿಂದ 
'ಎಷ್ಟು ಸ್ಲೋ', ಎಂಬ 
ಸಣ್ಣದೊಂದು ಮೂದಲಿಕೆ! 
ಪ್ರೀತಿಯ ಬ್ಯಾಟರಿ ಮುಗಿದಾಗ 
ಮನೆಯಲ್ಲಿ ಹಠಾತ್ ಮುಷ್ಕರ!
ಸ್ವಲ್ಪ ಕಾಲ ...........,
ಎಲ್ಲವೂ ,ಎಲ್ಲರೂ ಸ್ತಬ್ಧ! 
ಮತ್ತೆ ಪ್ರೀತಿಯ ಹೊಸ ಚೈತನ್ಯ 
ಮರು ಚಾಲನೆ  ನೀಡುವ ತನಕ!!
ಮತ್ತದೇ ಓಟದ ಮಾಟ !!!

Sunday, October 16, 2011

"ಕವಿತೇ....ನೀನೆಲ್ಲಿ ಅವಿತೇ?!!!"

ಕವಿತೆಯೆಂದರೆ 
ಹೀಗೇ ಎಂದು 
ಹೇಳುವುದು ಹ್ಯಾಗೇ ?
ಕವಿತೆ ಎಂದರೆ ......
ಸಂಜೆಗೆಂಪು ಬಾನಲ್ಲಿ 
ಭಗವಂತನ ಕಾಣದ
ಕೈಯ ಸಹಿಯಂತಿರುವ
ಬೆಳ್ಳಕ್ಕಿ ಸಾಲು !
ಸವಿಯಾದೊಂದು ನಿದ್ದೆ ಮಾಡಿ 
ಎದ್ದ ಆಹ್ಲಾದ!
ಕವಿತೆಯೆಂದರೆ......
ಚಿಂತಾಮಣಿಯಲ್ಲಿ 
ಕಂಡ ಆ ಮುಖ!
'ಫಳ್'ಎಂದು ಕ್ಯಾಮೆರಾದ 
ಫ್ಲಾಶ್ ನಂತೆ ಬೆಳಗಿದ 
ಆ ಕಿರು ನಗು!
ಎಲ್ಲೋ ಹಚ್ಚಿದ ಅಗರು 
ಗಾಳಿಯಲ್ಲಿ ಅಲೆ ಅಲೆಯಾಗಿ
ತೇಲಿ ಬಂದು...............,
ನಮ್ಮನ್ನೂ ಅದರೊಡನೆ 
ತೇಲಿಸಿದ ಹಾಗೆ!
ಕವಿತೆಯೆಂದರೆ......
ನಲ್ಲೆಯ ಆಲಿಂಗನ!
ಮೈಸೂರು ಮಲ್ಲಿಗೆಯ ಕಂಪು!
ಕದ್ದು ಸಿಕ್ಕ ಮುದ್ದು!
ಜೋಗದ ಸಿರಿ ಬೆಳಕು!
ಕವಿತೆಯೆಂದರೆ ಹೀಗೇ
ಎಂದು ಹೇಳಲಾಗದು !
ಅದಕ್ಕೇ .................
ಕವಿತೇ..................!!
ನೀನೆಲ್ಲಿ ಅವಿತೇ ?!!
...........ಎನ್ನುವುದು!!!


Saturday, October 15, 2011

"ನೀ ದೊಡ್ಡ ಶಾಣ್ಯಾ ಇದ್ದೀ...!!!"

ಅಪ್ಪಾ ತಂದೀ.............!
ಕಾಣದ ಹಾಂಗ ಕುಂತ ನೀ,
ದೊಡ್  ಶಾಣ್ಯಾ ಇದ್ದೀ !
ಹುಡುಗಿದ್ದಾಗ............,
ಆಟಕ್ ಹಚ್ಚಿದಿ.............!
ಹರೇ ಬಂದಾಗ, ಕಣ್ಣಾಗೆಲ್ಲಾ
ಬರೇ ಹುಡಿಗ್ಯಾರ್ನಿಟ್ಟಿ  !
ವಯಸ್ಸಿನಾಗ ಹೆಗಲ ಮ್ಯಾಲ
ಸಂಸಾರದ ನೊಗ ಕಟ್ಟಿ 
ಕಷ್ಟಗಳ ಚಾಟೀ ಬೀಸಿ 
ಹೈರಾಣ್ ಮಾಡಿಟ್ಟಿ!
ಸಂಸಾರ ಅಂಬೋದು 
ನಿಸ್ಸಾರ ಆದಾಗ ,
'ಸಾಕೋ ರಂಗಾ'
ಅನ್ನೋ ಹಾಂಗ,
ಬ್ಯಾನೀ...... ಕೊಟ್ಟಿ!
ಮುದಿಯಾದಾಗ ......,
ಕಂತೀ,ಕಂತೀ .......
ಚಿಂತೀ ಇಟ್ಟಿ !
ಒಟ್ಟಾಗ..................,
ನಿನ್ನ ತಂಟೀಕ್ ಬರದ ಹಾಂಗ 
ಮಾಡಿಟ್ಟಿ..................!
ಒಟ್ಟಾಗ......ಇಟ್ಟಿ  !
ಬರೀ ಇಷ್ಟರಾಗಾ .........
ಮುಗೀತಲ್ಲೋ ತಂದೀ!
ನಿನ್ನ ಚಿಂತೀ ಮಾಡೂದು 
ಯಾವ ಕಾಲಕ್ಕಂದೀ.....?!!!

Friday, October 14, 2011

"ಎದೆಗೂ,ಎದೆಗೂ ನಡುವೆ ಕಡಲು !!"

ಗಂಟಲೊಳಗಿನ ಬಿಸಿ ತುಪ್ಪ 
ಉಗುಳಲಾಗದು, ನುಂಗಲಾಗದು!
ಹೆಸರಿಗೆ ಹತ್ತಿರದ ಬಂಧುಗಳು!
ಎದೆಗೂ,ಎದೆಗೂ ನಡುವೆ ಕಡಲು!
ಕಡಲೊಳಗೆ ಸಾವಿರ ಸಾವಿರ 
ಮುಸುಕಿನ ಗುದ್ದಾಟದ 
ಶಾರ್ಕ್,ತಿಮಿಂಗಿಲಗಳು!
ನಮ್ಮ ನಮ್ಮ ಅಹಂಕಾರಗಳ 
ಆಕ್ಟೋಪಸ್ ಹಿಡಿತಗಳು!
ಇಷ್ಟು ಸಾಲದೇ ಸಂಬಂಧ ಕೆಡಲು!
ಮೇಲೆ ಮಾತಿನ ಮರ್ಮಾಘಾತದ 
ಅಲೆಗಳ ಹೊಡೆತಕ್ಕೆ 
ಆತ್ಮೀಯತೆಯ ಸೇತುವಿನ 
ಬೆಸೆಯಲಾಗದ ಬಿರುಕು!
ಯಾವುದೋ ಮದುವೆಯಲ್ಲೋ 
ಮುಂಜಿಯಲ್ಲೋ,
ವೈಕುಂಠ ಸಮಾರಾಧನೆಯಲ್ಲೋ 
ಎದುರೆದುರು ಸಿಕ್ಕಾಗ 
ಹುಳ್ಳಗೆ ನಕ್ಕು 'ಹಾಯ್'ಎಂದು 
ಗಾಯಕ್ಕೆ ಮುಲಾಮು ಸವರೋಣ!!
ಮುಂದಿನ ಭೆಟ್ಟಿಯ ತನಕ 
ನಿರಾಳವಾಗಿ 'ಬೈ'ಎಂದು  ಬಿಡೋಣ!!


Wednesday, October 12, 2011

"ಕಹಿ ನೆನಪುಗಳಿಗೆ ಸಾವಿಲ್ಲ"

ಕನಸಿನಲ್ಲೂ ಬೆಚ್ಚಿ 
ಅಳುವಂತೆ ಮಾಡುವ 
ನಿಮ್ಮ ನೆನಪು ......,
ಆಳದಲ್ಲೆಲ್ಲೋ ಮುರಿದು 
ಮುಲುಗುಡಿಸುವ ಮುಳ್ಳು!
ವರುಷಗಳು ಉರುಳಿದಂತೆ 
ನೆನಪುಗಳು ಮಾಸುತ್ತವೆಂಬುದೆಲ್ಲಾ
ಬರೀ........... ಸುಳ್ಳು!
ಕೀವಾಗಲೊಲ್ಲದು 
ಹೊರಬರಲೊಲ್ಲದು!
ಹಸಿಯಾಗಿ, ಬಿಸಿಯಾಗಿ 
ಕಾಯಾಗಿ,ಕಲ್ಲಾಗಿ 
ಕಾಡಿಸುತ್ತದೆ ಸದಾ 
ನಿಮ್ಮ ಮಾತಿನ ಬತ್ತಳಿಕೆಯಿಂದ 
ಬಿಟ್ಟ ಬಾಣಗಳ
ಗಾಯದ ನೆನಪು!
ಅಂತ್ಯ ಹಾಡಲೇ ಬೇಕಿದೆ ನಾನು,
ಇದು ಕೊಡುವ ನೋವಿಗೆ 
ಅಂತರಂಗದ ಕಾವಿಗೆ 
ದಿನ ನಿತ್ಯದ ಸಾವಿಗೆ 
ಈ ಗೋಳಿನ ಹಾಡಿಗೆ .
ಅಯ್ಯೋ ....ನೆನಪುಗಳೇ 
ಬಿಡಿಯಪ್ಪ....ನನ್ನನ್ನು!
ಬಿಡಿ........ನನ್ನ ಪಾಡಿಗೆ!!

Tuesday, October 11, 2011

"ಸಂಪೂರ್ಣ ಶರಣಾಗತಿ"-ಒಂದು ವಿಶಿಷ್ಟ ಅನುಭವ!!

1994 ರಲ್ಲಿ ದಾಂಡೇಲಿಯ ಸಮೀಪದ ಅಂಬಿಕಾ ನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ "ಸಿದ್ಧ ಸಮಾಧಿ ಯೋಗದ"
ಹತ್ತು ದಿನಗಳ ತರಬೇತಿ ಪಡೆದು, ಬೆಳಗಾವಿ ಬಳಿಯ 'ಸೊಗಲ ಶ್ರೀ ಕ್ಷೇತ್ರ'ದಲ್ಲಿ ಮೂರು ದಿನಗಳ  A.M.C.ಯಲ್ಲಿ (Advanced meditation course) ಭಾಗ ವಹಿಸಿದ್ದೆ.ಎರಡನೇ ದಿನ ಗುರುಗಳು ಅಲ್ಲೇ ಹತ್ತಿರವಿದ್ದ ಬೆಟ್ಟವೊಂದಕ್ಕೆ ಕರೆದೊಯ್ದರು.ಬೆಟ್ಟ ಹತ್ತುವ ಮೊದಲು ಕಣ್ಣಿಗೆ ಬಟ್ಟೆ ಕಟ್ಟಲಾಯಿತು .ಮನಸ್ಸಿನಲ್ಲಿ"ಓಂ ನಮೋ ಭಗವತೇ ವಾಸುದೇವಾಯ" ಎಂದು ಜಪ ಮಾಡುತ್ತಾ ಬೆಟ್ಟ ಹತ್ತುವಂತೆ ಹೇಳಿದರು.ಕಲ್ಲು ಮುಳ್ಳು ಗಳಿಂದ ಆವೃತವಾದ ಬೆಟ್ಟವನ್ನು ಹತ್ತಿಸುವ ಸಂಪೂರ್ಣ ಜವಾಬ್ದಾರಿಯನ್ನು ಜೊತೆಯಲ್ಲಿದ್ದ ಇಬ್ಬರಿಗೆ ವಹಿಸಿ,ಭಗವನ್ನಾಮ ಸ್ಮರಣೆ ಮಾಡುತ್ತಾ,ನಿಶ್ಚಿಂತೆಯಿಂದ ಸುಮಾರು ದೊಡ್ಡದಾಗಿದ್ದ ಬೆಟ್ಟವನ್ನು ಒಂದು ಗಂಟೆಯ ಅವಧಿಯಲ್ಲಿ ಅನಾಯಾಸವಾಗಿ ಹತ್ತಿದ್ದೆವು.ನಮ್ಮ ಜೊತೆಯಲ್ಲಿ ಮಂಡಿ ನೋವಿನಿದ ನರಳುತ್ತಿದ್ದ ಒಂದಿಬ್ಬರು ವಯೋ ವೃದ್ಧರೂ ಇದ್ದರು.ಅವರೂ ಯಾವ ತೊಂದರೆ ಇಲ್ಲದೆ ಬೆಟ್ಟವನ್ನು ಹತ್ತಿದ್ದು ನಮಗೆಲ್ಲಾ ಅಚ್ಚರಿ ತಂದಿತ್ತು!ಹತ್ತುವ ಮೊದಲು ಇಷ್ಟು ದೊಡ್ಡ ಬೆಟ್ಟವನ್ನು ಕಲ್ಲು ಮುಳ್ಳುಗಳ ಹಾದಿಯಲ್ಲಿ ಹತ್ತಲು ಸಾಧ್ಯವೇ ಎಂದು ಅನುಮಾನ ಪಟ್ಟಿದ್ದ ನಮಗೆ, ಬೆಟ್ಟದ ತುದಿ ತಲುಪಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆಗೆದು ಕೆಳಗೆ ನೋಡಿದಾಗ ನಾವು ನಿಜಕ್ಕೂ ಇಷ್ಟು ದೊಡ್ಡ ಬೆಟ್ಟವನ್ನು ,ಸ್ವಲ್ಪವೂ ಕಷ್ಟವಿಲ್ಲದೆ ಹತ್ತಿದ್ದು ಅದ್ಭುತವೆನಿಸಿತ್ತು.ಅದಕ್ಕೆ ಗುರುಗಳು 'ಭಗವನ್ನಾಮ ಸ್ಮರಣೆ ಮತ್ತು ಸಂಪೂರ್ಣ ಶರಣಾಗತಿಯಿಂದ ಜೀವನದಲ್ಲಿ ಎಂತಹ ಕಠಿಣ ಹಾದಿಯನ್ನಾದರೂ ಕ್ರಮಿಸಬಹುದು ಎನ್ನುವುದಕ್ಕೆ ಇಂದಿನ ನಿಮ್ಮ ಈ ಅನುಭವವೇ ಉದಾಹರಣೆ'ಎಂದರು.ಬೆಟ್ಟದ ತುದಿಯಲ್ಲಿ ಅಸ್ತಮಿಸುತ್ತಿದ್ದ ಕೆಂಪಾದ ಸೂರ್ಯನನ್ನು ನೋಡುತ್ತಾ ನಿಂತಿದ್ದೆವು.ಬೆಟ್ಟದ ಮೇಲಿನ ತಣ್ಣನೆ ಗಾಳಿ ಹಿತವಾಗಿ ಬೀಸಿ ಆ ವಿಶಿಷ್ಟ ಸಂಜೆ ಮತ್ತಷ್ಟು ವಿಶೇಷ ವೆನಿಸುವಂತೆ ಮಾಡಿತ್ತು

Saturday, October 8, 2011

"ದಾರಿ ......ಯಾವುದಯ್ಯಾ!!!?"

ದಾರಿಗಳಲ್ಲಿ ಹಲವು ದಾರಿ !
ಹೆದ್ದಾರಿ,ಕಾಲುದಾರಿ ,
ಅಡ್ಡ ದಾರಿ,ಕವಲು ದಾರಿ ,
ಆ ದಾರಿ,ಈ ದಾರಿ,
ಹಲ ಕೆಲವು ದಾರಿ!
ದಾರಿಗಳಲ್ಲಿ ಹಲವು ಪರಿ!
ಕೆಲವರದ್ದು ಬರೀ ಪಿರಿ ಪಿರಿ!
ಬದುಕುವುದಕ್ಕೆ........
ಒಬ್ಬೊಬ್ಬರಿಗೊಂದೊಂದು ದಾರಿ!
ಕೆಲವರಿಗೆ.............,
ತಾವು ಹಿಡಿದಿದ್ದೇ  ದಾರಿ!
ಬಡವನಿಗೆ  ಪಾಪ 
ಎಲ್ಲವೂ ದುಬಾರಿ !
ಹಣವಿದ್ದವರಿಗೋ ......,
ಎಲ್ಲದಕ್ಕೂ ರಹ ದಾರಿ!
ಕೆಲವೊಮ್ಮೆ ದಾರಿ ಕಾಣದೇ
ರಾಘವೇಂದ್ರನಿಗೆ............,
ಮೊರೆಯಿಡುವುದೊಂದೇ ದಾರಿ!
ನನಗೆ ನನ್ನ ದಾರಿ!
ನಿಮಗೆ ನಿಮ್ಮ ದಾರಿ!
ಅವರವರ ದಾರಿಯಲ್ಲಿ 
ಅವರವರು ನಡೆದೂ ನಡೆದೂ 
ಕೊನೆಗೆ................,
ಅವರೂ.......... ಇಲ್ಲ!
ದಾರಿಯೂ...... ಇಲ್ಲ !
ಎಲ್ಲವೂ ...............,
ಬಯಲು.... ದಾರಿ!!!
ಅದಕ್ಕೇ  ಅಲ್ಲವೇ 
ದಾಸರು ದಾರಿ ಕಾಣದೇ
ಕೊನೆಗೆ ................,
ದಾರಿ ಯಾವುದಯ್ಯಾ....?
ಎಂದು ಹಾಡಿದ್ದು ........!!!

Wednesday, October 5, 2011

"ನಕ್ಕು ಬಿಡಿ"

ಈ ಸಲದ 'ಸುಧಾ'ದಲ್ಲಿ ಬಂದ ಕೆಲ ನಗೆ ಹನಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ನನ್ನೊಂದಿಗೆ ನೀವೂ ನಕ್ಕು ಬಿಡಿ.ನಿಮಗೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.
1) ಪುಟ್ಟನ ಪ್ರಶ್ನೆ;ಅಪ್ಪ,ಮೂರ್ಖ ಎಂದರೆ ಯಾರು?
ಅಪ್ಪ:ಯಾರು ಸರಳವಾಗಿ ಹೇಳೋದನ್ನು ತುಂಬಾ ಕ್ಲಿಷ್ಟವಾದ ಪದಗಳಿಂದ,ಉದ್ದುದ್ದ ವಾಕ್ಯ ಗಳಿಂದ ಒಂದಕ್ಕೊಂದು ಸಂಬಂಧವೇ ಇಲ್ಲದ ಪದಗಳಿಂದ ಹೇಳಿ ,ಕೇಳೋರನ್ನ ಗೊಂದಲಕ್ಕೀಡುಮಾಡಿ ,ಇವನನ್ನು ಯಾಕಪ್ಪಾ ಕೇಳಿದೆ ಅನಿಸುವಂತೆ ಮಾಡಿಬಿಡುತ್ತಾನೋ ಅವನನ್ನು ಮೂರ್ಖನೆಂದು ಕರೆಯಬಹುದು.ಅರ್ಥವಾಯಿತಾ?
ಪುಟ್ಟ:ಇಲ್ಲ!
2) ಟೀಚರ್ ಕ್ಲಾಸಿಗೆ ಬಂದಾಗ ಇಬ್ಬರು ಹುಡುಗರು ಜಗಳವಾಡುತ್ತಿದ್ದರು.
ಟೀಚರ್: ಯಾಕ್ರೋ ಜಗಳ?
ಒಬ್ಬ ಹುಡುಗ: ದಾರಿಯಲ್ಲಿ ಹೋಗುವಾಗ ಹತ್ತು ರೂಪಾಯಿ ಸಿಕ್ಕಿತು.ಯಾರು ಚೆನ್ನಾಗಿ  ಸುಳ್ಳು ಹೇಳುತ್ತಾರೋ ಅವರಿಗೇ ಹತ್ತು ರೂಪಾಯಿ ಅಂತ ಇಬ್ಬರೂ ಒಂದೊಂದು ಸುಳ್ಳು ಹೇಳಿದ್ವಿ.ಯಾರ ಸುಳ್ಳು ಚೆನ್ನಾಗಿತ್ತು ಅಂತ ಇನ್ನೂ ತೀರ್ಮಾನ ಆಗಿಲ್ಲಾ.ಅದಕ್ಕೇ ಜಗಳಾ.
ಟೀಚರ್:ಇಂತಹ ಪಂದ್ಯ ಕಟ್ಟೋಕೆ ನಿಮಗೆ ನಾಚಿಕೆ ಆಗಬೇಕು!ನಿಮ್ಮ ವಯಸ್ಸಿನಲ್ಲಿ ನನಗೆ ಸುಳ್ಳು ಅಂದರೇನು ಅಂತಲೇ ಗೊತ್ತಿರಲಿಲ್ಲ!
ಇನ್ನೊಬ್ಬ ಹುಡುಗ:ಟೀಚರ್ ಈ ಹತ್ತು ರೂಪಾಯಿ ನೀವೇ ಇಟ್ಕೊಳ್ಳಿ !ಇದು ನಿಮಗೇ  ಸೇರಬೇಕು!
3) ಮುಲ್ಲಾ ನಾಸಿರುದ್ದೀನ್  ರಸ್ತೆಯಲ್ಲಿ ಸತ್ತು ಹೋದ ತನ್ನ ಆನೆಯ ಪಕ್ಕ ಕುಳಿತು ಅಳುತ್ತಿದ್ದ.
ದಾರಿಹೋಕ:ಯಾಕಯ್ಯಾ ಅಳುತ್ತಿದ್ದೀ?
ಮುಲ್ಲಾ:ನನ್ನ ಅನೆ ಸತ್ತು ಹೋಗಿದೆ.
ದಾರಿಹೋಕ:ಅತ್ತರೆ ಸತ್ತ ಆನೆ ಬರುತ್ತದೆಯೇ?
ಮುಲ್ಲಾ:ಅನೆ ಬರುವುದಿಲ್ಲ.ಆದರೆ ಸತ್ತ ಆನೆಯನ್ನು ಹೂಳಲು ಗುಂಡಿ ತೋಡಲು ಯಾರಾದರೂ ನಿನ್ನಂತಹವರು ಸಹಾಯಕ್ಕೆ ಬರಬಹುದೆಂದು ಅಳುತ್ತಿದ್ದೇನೆ.

Sunday, October 2, 2011

" ಯಾರೇ ಕೂಗಾಡಲೀ,ಊರೇ ಹೋರಾಡಲೀ !!!"

ಬಹಳ ಹಿಂದೆ ಟಿಬೆಟ್ಟಿನ ಬೌದ್ಧ ಆಶ್ರಮ ಒಂದರಲ್ಲಿ ಬಹಳಷ್ಟು ಬೌದ್ಧ ಬಿಕ್ಷುಗಳು ಮೌನವಾಗಿ ಧ್ಯಾನ ಮಾಡುತ್ತಾ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದ್ದರಂತೆ.ಆಗಾಗ ಅಲ್ಲಿಗೆ ಎಲ್ಲೂ ವಾಸಿಯಾಗದಂತಹ ಮಾನಸಿಕ ಅಸ್ವಸ್ಥರನ್ನು ತಂದು ಬಿಡುತ್ತಿದ್ದರಂತೆ.ಅಲ್ಲಿದ್ದ ಸನ್ಯಾಸಿಗಳು ತಮ್ಮ ಪಾಡಿಗೆ ತಾವು ತಮ್ಮ ಕೆಲಸಮಾಡುತ್ತಾ,ಧ್ಯಾನ ಮಾಡುತ್ತಾ ,ಮೌನದಿಂದ ಇರುತ್ತಿದ್ದರಂತೆ.ಮಾನಸಿಕ ಅಸ್ವಸ್ಥರನ್ನು ,ತಮ್ಮ ಸಾಧನೆಯನ್ನೂ,ಮನೋನಿಗ್ರಹವನ್ನೂ, ಪರೀಕ್ಷೆ ಮಾಡಲು ಬಂದಿರುವ ಗುರುಗಳು ಎಂದು ಭಾವಿಸುತ್ತಿದ್ದರಂತೆ.ಅವರು ಎಷ್ಟೇ ಕೂಗಾಡಿದರೂ,ಗಲಾಟೆ ಮಾಡಿದರೂ,ಯಾರೂ ಅವರ ಕಡೆ ಗಮನವನ್ನೇ ಕೊಡದೆ,ಮೌನವಾಗಿ ಧ್ಯಾನ ಮಾಡುತ್ತಾ ಇದ್ದು ಬಿಡುತ್ತಿದ್ದರಂತೆ!ಅವರನ್ನು ಯಾರೂ ವಿಚಾರಿಸಲೂ ಹೋಗುತ್ತಿರಲಿಲ್ಲವಂತೆ.ಯಾವುದೇ ಕಾರಣಕ್ಕೂ ಅವರನ್ನು ಅಲ್ಲಿಂದ ತಪ್ಪಿಸಿಕೊಳ್ಳಲು ಬಿಡುತ್ತಿರಲಿಲ್ಲವಂತೆ.ಮಾನಸಿಕ ಅಸ್ವಸ್ಥರು ಕೂಗಿ ,ಗಲಾಟೆ ಮಾಡಿ,ಸುಸ್ತಾಗಿ ಕೆಲವೇ ದಿನಗಳಲ್ಲಿ ತಣ್ಣಗಾಗಿ,ಅಲ್ಲಿರುವ 'ಬುದ್ಧಿಸ್ಟ್ ಮಾಂಕ್' ಗಳಂತೆ ತಾವೂ ತಮ್ಮ ಪಾಡಿಗೆ ಮೌನವಾಗಿ ಧ್ಯಾನ ಮಾಡುತ್ತಾ ಕುಳಿತು ಬಿಡುತ್ತಿದ್ದರಂತೆ!ಅಲ್ಲಿದ್ದ ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಗುಣಮುಖರಾಗಿ ಹೊರಬರುತ್ತಿದ್ದರಂತೆ.ಮನಸ್ಸು ತಣ್ಣಗಾದಾಗ ಮನಸ್ಸಿನ ಹೊಯ್ದಾಟ,ತಳಮಳ,ಮಾನಸಿಕ ಸಮಸ್ಯೆಗಳು ಇಲ್ಲವಾಗುತ್ತವೆ!
ಈ ಬರಹದಲ್ಲಿ ನಮಗೆಲ್ಲಾ ಒಂದು ಪಾಠವಿದೆ ಅನಿಸುತ್ತದೆ.ನಮ್ಮ ದಿನ ನಿತ್ಯದ ಜೀವನದಲ್ಲಿ ಎಷ್ಟೋ ಜನ ಕೂಗಾಡಿ, ಗಲಾಟೆ ಮಾಡಿ,ನಮ್ಮ ನೆಮ್ಮದಿ ಕೆಡಿಸುವವರು ಸಿಗಬಹುದು.ಅವರನ್ನು ನಾವು ನಮಗೆ ತಾಳ್ಮೆಯನ್ನು ಕಲಿಸಲು ಬಂದಿರುವ ಗುರುಗಳು ಎಂದೇಕೆ ತಿಳಿಯಬಾರದು? ನಮ್ಮೆಲ್ಲರ ಬದುಕಿನಲ್ಲಿ ಇನ್ನೂ ಹೆಚ್ಚಿನ ಶಾಂತಿ,ನೆಮ್ಮದಿ ಸಿಗುವಲ್ಲಿ ಈ ಲೇಖನ ಪ್ರಯೋಜನಕಾರಿಯಾಲಿ ಎಂದು ಹಾರೈಸುತ್ತೇನೆ. ನಮಸ್ಕಾರ.
(ಸಾಧಾರಿತ)

Saturday, October 1, 2011

"ಮರೆವಿನಲ್ಲೂ ...ಸುಖವಿದೆ !!"

ವೃದ್ಧ ದಂಪತಿಗಳಿಬ್ಬರೇ ಫ್ಲಾಟ್ ಒಂದರಲ್ಲಿ ವಾಸವಾಗಿದ್ದಾರೆ.ಮಕ್ಕಳಿಬ್ಬರೂ ಅಮೇರಿಕಾ ಸೇರಿದ್ದಾರೆ. ಗಂಡ ಹೆಂಡತಿ ಇಬ್ಬರಿಗೂ ಸುಮಾರು ಎಂಬತ್ತರ ವಯಸ್ಸು.ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ  ಮರೆವು .ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ  ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ  ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ  ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು. 'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ  ಜಂಬ ಕೊಚ್ಚಿಕೊಂಡ !!! 
ಅಜ್ಜ ಹೋಗಿದ್ದು ನೀರು ಕುಡಿಯೋಕೆ!ಕುಡಿದು ಬಂದಿದ್ದು ಕಾಫಿ!!ಅಜ್ಜಿ ತರಲು ಹೇಳಿದ್ದು ಫ್ರಿಡ್ಜ್ ನಲ್ಲಿದ್ದ ಕೇಕನ್ನು.ಅಜ್ಜ ತಂದಿದ್ದು ಬಿಸಿ ಬಿಸಿ ಬ್ರೆಡ್ ಟೋಸ್ಟ್.ಅಜ್ಜಿ ಕೂಡ ತಾನು ಹೇಳಿದ ಕೇಕನ್ನು ಮರೆತು ,ತಾನು ಹೇಳಿದ್ದು ಬ್ರೆಡ್ ಟೋಸ್ಟೇ  ಎಂದುಕೊಂಡಿದ್ದಾಳೆ!
ಒಟ್ಟಿನಲ್ಲಿ ಜಗಳವಿಲ್ಲ!ಒಬ್ಬರ ತಪ್ಪನ್ನು ಇನ್ನೊಬ್ಬರು ಮರೆತು 'ಮರೆವೆ .....ಜೀವನ ..ಸಾಕ್ಷಾತ್ಕಾರ 'ಎನ್ನುತ್ತಾ ಸುಖವಾಗಿ ಬಾಳುತ್ತಿದ್ದಾರೆ!

Wednesday, September 28, 2011

ವೈದ್ಯಕೀಯದಲ್ಲಿ ಹಾಸ್ಯ-"ಮಜ್ಜಿಗೆ ಎನೀಮಾ"

ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು.ಆಗ ನಾನು ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಹೌಸ್ ಸರ್ಜೆನ್ಸಿ ಮಾಡುತ್ತಿದ್ದೆ.ಮೆಡಿಸಿನ್ ಪೋಸ್ಟಿಂಗ್ ಇತ್ತು.ಒಂದು ದಿನ ಬೆಳಿಗ್ಗೆವಾರ್ಡಿನ ರೌಂಡ್ಸ್ ನಲ್ಲಿ  ನಮ್ಮ ಮೆಡಿಸಿನ್ ಪ್ರೊಫೆಸರ್ ಅವರು ಕಂಪ್ಲಿ ಯಿಂದ ಬಂದ ಸುಮಾರು ಎಪ್ಪತ್ತು ವರ್ಷ ವಯಸ್ಸಿನ ರೈತ,ಗೌಡಜ್ಜನಿಗೆ ಟ್ರೀಟ್ಮೆಂಟ್ ಹೇಳಿದರು.ಗೌಡಜ್ಜನಿಗೆ ಸುಮಾರು ದಿನಗಳಿಂದ ರಕ್ತ ಬೇಧಿಯಾಗುತ್ತಿತ್ತು.ಸುಮಾರು ಕಡೆ ತೋರಿಸಿಕೊಂಡು ಕಡೆಗೆ ಇಲ್ಲಿಗೆ ಬಂದಿದ್ದ.ನಮ್ಮ ಪ್ರೊಫೆಸರ್ ಅವನಿಗೆ 'ಅಲ್ಸರೇಟಿವ್ ಕೊಲೈಟಿಸ್' ಎನ್ನುವ ದೊಡ್ಡ ಕರುಳಿನ ಖಾಯಿಲೆಯಿದೆ ಎಂದು ರೋಗ ನಿರ್ಧಾರ(DIAGNOSIS) ಮಾಡಿ 'ಮಜ್ಜಿಗೆ ಎನೀಮ 'ಟ್ರೀಟ್ಮೆಂಟ್ ಕೊಡುವುದಕ್ಕೆ ಹೇಳಿದ್ದರು .ಆಗಿನ ಕಾಲದಲ್ಲಿ 'ಅಲ್ಸರೆಟಿವ್ ಕೊಲೈಟಿಸ್'ಖಾಯಿಲೆಗೆ ನಮ್ಮ ಮೆಡಿಸಿನ್ ಪ್ರೊಫೆಸರ್ ಅವರು ಕೆಲವು ಮಾತ್ರೆಗಳನ್ನು ಪುಡಿ ಮಾಡಿ ರೋಗಿಯ ಕಡೆಯವರಿಂದ ಮಜ್ಜಿಗೆ ತರಿಸಿ,ಅದರಲ್ಲಿ ಮಾತ್ರೆಯ ಪುಡಿಯನ್ನು ಸೇರಿಸಿ ಗುದ ದ್ವಾರದ ಮೂಲಕ  Retention Enema ಕೊಡುತ್ತಿದ್ದರು. ಈ ಟ್ರೀಟ್ ಮೆಂಟಿಗೆ  ನಾವೆಲ್ಲಾ 'ಮಜ್ಜಿಗೆ ಎನೀಮ'ಟ್ರೀಟ್ಮೆಂಟ್  ಎನ್ನುತ್ತಿದ್ದೆವು.ಇದು ನಮ್ಮ ಯುನಿಟ್ಟಿನಲ್ಲಿ ಮಾತ್ರ ಚಾಲ್ತಿಯಲ್ಲಿ ಇದ್ದದ್ದರಿಂದ ಬೇರೆ ಯುನಿಟ್ಟಿನವರಿಗೆ ಹಾಸ್ಯದ ವಿಷಯವಾಗಿತ್ತು. ನಾನು ಕೇಸ್ ಶೀಟಿನಲ್ಲಿ ಟ್ರೀಟ್ಮೆಂಟ್ ಬರೆದು ಅಲ್ಲಿದ್ದ ನರ್ಸ್ ಗೆ ಟ್ರೀಟ್ಮೆಂಟ್ ಶುರು ಮಾಡುವಂತೆ ಹೇಳಿ ಬೇರೆಯ ವಾರ್ಡಿಗೆ ಹೋದೆ.ಅರ್ಧ ಗಂಟೆಯಲ್ಲೇ ಗೌಡಜ್ಜನ ವಾರ್ಡಿನಿಂದ ನನಗೆ ಕರೆ ಬಂತು.ಗೌಡಜ್ಜ ನೋವಿನಿಂದ ಬೊಬ್ಬಿಡುತ್ತಿದ್ದ.ಅವನ ಬಾಯಿಂದ  ಹಳ್ಳಿ ಭಾಷೆಯ ಬೈಗಳು ಪುಂಖಾನು ಪುಂಖವಾಗಿ ಹೊರ ಬರುತ್ತಿದ್ದವು. "ಸಾಯ್....ಕೊಲ್ತಾರಲೇ ಸೂಳೀ ಮಕ್ಳು!! ಇದ್ಯಾವ ಸೀಮೆ ಔಷದೀಲೇ.....ಯಪ್ಪಾ ....ಸಾಯ್ತೀನೋ , ಮುಕುಳ್ಯಾಗ ಉರಿಯಕ್ ಹತ್ತೈತಲೇ !!!"ಎಂದು ಕೂಗುತ್ತಿದ್ದ .ತನ್ನ ಮಗನನ್ನು "ನೀನ್ಯಾವ ಹುಚ್ಚು ಸೂಳೀ ಮಗನಲೇ ...........ಇಲ್ಲೀಗೆ ನನ್ ...ಎದಕ್ ಕರ್ಕಂಡ್  ಬಂದೀಯಲೇ .......ದಡ್..ಸೂಳೀ ಮಗನೆ!!!'ಎಂದು ಬಾಯಿಗೆ ಬಂದ ಹಾಗೆ ಬೈದು ಸಿಟ್ಟು ತೀರಿಸಿಕೊಳ್ಳುತ್ತಿದ್ದ. ವಾರ್ಡಿನ ಇತರೆ ರೋಗಿಗಳು ಎದ್ದು ಕೂತು ತಮಾಷೆ ನೋಡುತ್ತಿದ್ದರು. ನರ್ಸ್ ಗಳು  ಏನು ಮಾಡಲೂ ತೋಚದೆ, ಮಲಯಾಳಿ ರೀತಿಯ ಕನ್ನಡದಲ್ಲಿ 'ಎಂತ ಆಯ್ತೆ ಮಾರಾಯ್ತಿ!?'ಎಂದು ಮಾತನಾಡುತ್ತ ,ಅತ್ತಿಂದಿತ್ತ ಸರ ಬರನೆ ಏನೂ ಮಾಡದೆ ಗಡಿಬಿಡಿಯಿಂದ ಓಡಾಡುತ್ತಿದ್ದರು. ಗೌಡಜ್ಜನ ಪರದಾಟ ನೋಡಿ ನನಗೆ ಎಲ್ಲೋ ಏನೋ ಎಡವಟ್ಟಾಗಿದೆ ಎನ್ನಿಸಿತು.ನರ್ಸ್ "ನಾನು ಎಂತದ್ದೂ ಮಾಡಿಲ್ಲಾ ಡಾಕ್ಟ್ರೆ.......ಪೇಶಂಟ್ ನ  ಮಗ ...ಮಜ್ಜಿಗೆ ತಂದದ್ದು...ನಾನು ಅದರಲ್ಲಿ ಮಾತ್ರೆಯ ಪುಡಿಯನ್ನು ಮಿಕ್ಸ್ ಮಾಡಿ ಎನೀಮಾ ಕೊಟ್ಟದ್ದು !!......ಅಷ್ಟೇ!! "ಎಂದು ಮೊದಲೇ ಅಗಲವಾಗಿದ್ದ ಕಣ್ಣುಗಳನ್ನು ಇನ್ನಷ್ಟು ಅಗಲ ಮಾಡಿ ಭಯ ಭೀತಳಾಗಿ ನಿಂತಳು.ಗೌಡಜ್ಜನ ಮಗ "ಸಿಸ್ಟರ್ ಮಜ್ಜಿಗೀ ತಾ ಅಂದರ್ರೀ ........ನಾನು ಈ  ತಂಬಗೀ ತುಂಬಾ ಆಸ್ಪತ್ರೀ ಎದುರಿನ ಹೋಟೆಲ್ಲಿನಾಗೆ,ಹತ್ತು ರೂಪಾಯಿ ಮಜ್ಜಿಗಿ ತಂದು ಕೊಟ್ಟೀನ್ರೀ !!!"ಎಂದ.'ಹೋಟೆಲಿನ ಮಜ್ಜಿಗಿ!!!........' ನನಗೆ ಜ್ಞಾನೋದಯವಾಯಿತು!! ಗೌಡಜ್ಜನ ಮಗ "ಇನ್ನೂ ಮಜ್ಜಿಗೀ ಉಳಿದೈತೆ ನೋಡ್ರೀ"ಎಂದು  ತಂಬಿಗೆಯಲ್ಲಿ ಇನ್ನೂ ಸ್ವಲ್ಪ ಉಳಿದಿದ್ದ ಮಜ್ಜಿಗೆ ತೋರಿಸಿದ.ಅದು ಹೋಟೆಲ್ಲಿನಲ್ಲಿ ಸಿಗುವ 'ಕುಡಿಯುವ ಮಸಾಲಾ ಮಜ್ಜಿಗೆ!'ಅದರಲ್ಲಿ  ಚೆನ್ನಾಗಿ ಅರೆದು ಹಾಕಿದ  ಹಸೀ ಮೆಣಸಿನ ಕಾಯಿ,ಕೊತ್ತಂಬರಿ,ಕರಿಬೇವು ತೇಲುತ್ತಿತ್ತು!!! ಸಿಸ್ಟರ್, ಕುಡಿಯುವ ಮಜ್ಜಿಗೆಯನ್ನೇ ಸರಿಯಾಗಿ ನೋಡದೆ ಎನೀಮಾಗೆ ಉಪಯೋಗಿಸಿ ಬಿಟ್ಟಿದ್ದರು!! ಗೌಡಜ್ಜನ ಬೊಬ್ಬೆಗೆ ಖಾರದ ಮಜ್ಜಿಗೆಯೇ ಕಾರಣವೆಂದು ಗೊತ್ತಾಗಿತ್ತು.ಆದರೆ ಕಾಲ ಮಿಂಚಿತ್ತು!!ಖಾರದ ಮಜ್ಜಿಗೆ ಗೌಡಜ್ಜನ  ಗುದ ದ್ವಾರದಲ್ಲಿ ತನ್ನ ಕೆಲಸ ಶುರು ಮಾಡಿತ್ತು!! ನಿಜಕ್ಕೂ   ನನಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ!!!!! ಪ್ರೊಫೆಸರ್ ಅವರನ್ನೇ ಕೇಳೋಣವೆಂದು ಕೊಂಡು ಓ.ಪಿ.ಡಿ ಕಡೆ ಓಡಿದೆ.

Thursday, September 22, 2011

"ಹೀಗೊಂದು ಅವಿಸ್ಮರಣೀಯ ಅನುಭವ!"

ಇಂದು ಮುಂಜಾನೆ ಸುಮಾರು ಹನ್ನೊಂದು ಗಂಟೆಗೆ ಆಸ್ಪತ್ರೆಯ O.P.D. ಯಲ್ಲಿ ರೋಗಿಗಳನ್ನು ಪರೀಕ್ಷೆ ಮಾಡುತ್ತಿದ್ದೆ.ಸುಮಾರು ಹದಿನೆಂಟು ವರ್ಷ ವಯಸ್ಸಿನ ಹುಡುಗನನ್ನು ಜ್ವರ ಮತ್ತು ಕೆಮ್ಮಿಗೆ ಚಿಕಿತ್ಸೆ ಕೊಡಿಸಲು ಅವನ ತಾಯಿ ಕರೆದುಕೊಂಡು ಬಂದಿದ್ದರು.ಆ ಹುಡುಗನ್ನು ನಮ್ಮ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ನೋಡಿದ್ದರಿಂದ ಅವನ ಓದಿನ ಬಗ್ಗೆ ವಿಚಾರಿಸಿದೆ.ಹುಡುಗ ಸಾಗರದಲ್ಲಿ ಕಾಲೇಜೊಂದರಲ್ಲಿ ಎರಡನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಓದುತ್ತಿದ್ದ .ಅವನನ್ನು  ಪರೀಕ್ಷೆ ಮಾಡಿ ಔಷದಿ ಬರೆದು ಕೊಟ್ಟೆ.ಹೋಗುವಾಗ ಅವನ ತಾಯಿ "ಸರ್.....,ಹದಿನೆಂಟು ವರ್ಷದ ಹಿಂದೆ ಚಕ್ರಾನಗರದಲ್ಲಿದ್ದಾಗ
ಈ ಹುಡುಗನ ಡೆಲಿವರಿ  ಮಾಡಿದ್ದು ನೀವೇ ಸರ್.ನಿಮಗೆ ನೆನಪಿಲ್ಲಾ ಅಂತ ಕಾಣುತ್ತೆ.ಮಗು ಹುಟ್ಟಿದ ತಕ್ಷಣ ಉಸಿರಾಟವಿಲ್ಲದೆ ಮೈ ಎಲ್ಲಾ ನೀಲಿ ಬಣ್ಣಕ್ಕೆ ತಿರುಗಿತ್ತು.ನೀವು ತಕ್ಷಣ ಬಾಯಿಯಿಂದ ಮಗುವಿನ ಬಾಯಿಗೆ ಉಸಿರು ಕೊಟ್ಟು ಮಗುವನ್ನು ಉಳಿಸಿ ಕೊಟ್ಟಿರಿ.ನಿಮ್ಮ ಉಪಕಾರವನ್ನು ನಾವು ಯಾವತ್ತೂ ಮರೆಯೋದಿಲ್ಲಾ ಸರ್"ಎಂದು ಕಣ್ಣಿನಲ್ಲಿ ನೀರು ತಂದು ಕೊಂಡರು.ಹುಡುಗ ಬಗ್ಗಿ ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಿದ.ಇದ್ದಕ್ಕಿದ್ದಂತೆ ಅವನು ನನ್ನ ಕಾಲು ಮುಟ್ಟಿದ್ದರಿಂದ ನಾನು  ಕೊಂಚ ಗಲಿಬಿಲಿ ಗೊಂಡೆ.ನನಗೆ ಏನು ಹೇಳಬೇಕೋ ತೋಚದೆ ಮಾತು ಹೊರಡಲಿಲ್ಲ.ಮನಸ್ಸಿನಲ್ಲಿ ಒಂದು ರೀತಿಯ ಧನ್ಯತಾ ಭಾವವಿತ್ತು.ಅವ್ಯಕ್ತ ಆನಂದದ ಒಂದು ವಿಶಿಷ್ಟ  ಅವಿಸ್ಮರಣೀಯ  ಅನುಭೂತಿ ಉಂಟಾಗಿತ್ತು!!

Wednesday, September 21, 2011

"ಜೀ ಹುಜೂರ್.....ಮೈ ಹಾಜಿರ್ ಹ್ಞೂ !!! "

ಬಡ ರೈತನೊಬ್ಬ ತನ್ನ ಹೊಲವನ್ನು ಉಳುತ್ತಿರುವಾಗ ಒಂದು ಮಾಯಾ ದೀಪ ಸಿಕ್ಕಿತು.ಅದನ್ನು ಮುಟ್ಟಿದ ತಕ್ಷಣವೇ ದೈತ್ಯಾಕಾರದ ಭೂತವೊಂದು ಎದುರಿಗೆ ಕೈ ಕಟ್ಟಿ ನಿಂತಿತು.ರೈತ ಹೆದರಿ ಕಂಗಾಲಾದ.ಭೂತ ಮಾತನಾಡ ತೊಡಗಿತು "ಹೆದರ ಬೇಡ,ಇನ್ನು ಮೇಲೆ ನೀನೇ ನನಗೆ ಯಜಮಾನ.ನೀನು ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ.ಆದರೆ ನೀನು ನನಗೆ ಸದಾ ಕೆಲಸ ಕೊಡುತ್ತಿರಬೇಕು.ನನಗೆ ಕೆಲಸ ಇಲ್ಲದಿದ್ದರೆ ನಿನ್ನನ್ನು ತಿಂದು ಮುಗಿಸುತ್ತೇನೆ.ಹೇಳು ಏನು ಮಾಡಲಿ?"ಎಂದಿತು.ರೈತ ಬೇಡಿದ್ದನ್ನೆಲ್ಲ ಭೂತ ಕ್ಷಣಾರ್ಧದಲ್ಲಿ ನೆರವೆರಿಸುತ್ತಿತ್ತು.ಆಹಾರ ,ಅರಮನೆಯಂತಹ ಮನೆ,ಐಶ್ವರ್ಯ,ಆಳು ಕಾಳು ಎಲ್ಲವೂ ಸಿಕ್ಕಿದ ಮೇಲೆ ರೈತನಿಗೆ ಭೂತಕ್ಕೆ ಕೆಲಸ ಒದಗಿಸುವುದೇ ದೊಡ್ಡ ಕೆಲಸವಾಯಿತು!ಎಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿ "ಕೆಲಸ ಕೊಡು ,ಇಲ್ಲದಿದ್ದರೆ ನಿನ್ನನ್ನು ಮುಗಿಸುತ್ತೇನೆ"ಎಂದು ದುಂಬಾಲು ಬೀಳುತ್ತಿತ್ತು.ರೈತನಿಗೆ ಜೀವ ಭಯ ಕಾಡತೊಡಗಿತು.The servant had become a master!ಈ ಭೂತದ ಕಾಟದಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದುಕೊಂಡು ಊರಿನ ಬುದ್ಧಿವಂತನೊಬ್ಬನ ಸಲಹೆ ಕೇಳಿದ.ಸೂಕ್ತ ಸಲಹೆ ಸಿಕ್ಕಿತು.ಭೂತ ಅವನನ್ನು ಅಟ್ಟಿಸಿಕೊಂಡು ಬಂದು"ಕೆಲಸ ಕೊಡು"ಎಂದಿತು.ಅದಕ್ಕೆ ತನ್ನ ಮನೆಯ ಮುಂದೆ ಉದ್ದನೆಯ ಕೋಲೊಂದನ್ನು ನೆಡುವಂತೆ ಹೇಳಿದ.ಭೂತ ಕ್ಷಣಾರ್ಧದಲ್ಲಿ ಕೋಲು ನೆಟ್ಟಿತು."ಕೋಲು ನೆಟ್ಟು ಆಯಿತು.ಮುಂದೆ?"ಎಂದಿತು ಭೂತ."ನಾನು ಮುಂದಿನ ಕೆಲಸ ಹೇಳುವ ತನಕ ಈ ಕೋಲನ್ನು ಹತ್ತಿ ಇಳಿಯುತ್ತಿರು"ಎಂದ ರೈತ.ಭೂತ ತನ್ನ ಕೆಲಸ ಶುರುವಿಟ್ಟು ಕೊಂಡಿತು.ರೈತ ಭೂತದ ಕಾಟ ತಪ್ಪಿದ್ದಕ್ಕೆ ನೆಮ್ಮದಿಯ ಉಸಿರು ಬಿಟ್ಟ.


ಸ್ನೇಹಿತರೇ,ಈ ಕಥೆಯಲ್ಲಿ ನಮಗೊಂದು ಅದ್ಭುತ ಪಾಠವಿದೆ.ನಮ್ಮೆಲ್ಲರ ಮನಸ್ಸೂ ಈ ಭೂತದಂತೆ.ಸದಾ ಕಾಲ ಏನನ್ನಾದರೂ ಯೋಚಿಸುತ್ತಲೇ ಇರುತ್ತದೆ.ಕೆಲವೊಮ್ಮೆ ಆಲೋಚನೆಗಳಿಂದ ತಲೆ ಚಿಟ್ಟು ಹಿಡಿದರೂ,ಅವುಗಳಿಂದ ತಪ್ಪಿಸಿಕೊಳ್ಳಲಾಗದೇ ಚಡಪಡಿಸುತ್ತೇವೆ!Again here the servant becomes a master! a bad master!! ಈ ಮನಸ್ಸೆಂಬ ಭೂತಕ್ಕೆ ಭಗವನ್ನಾಮ ಸ್ಮರಣೆ ಎನ್ನುವ 'ಕೋಲನ್ನು ಹತ್ತುವ' ಕೆಲಸ ಕೊಟ್ಟರೇ ನಮಗೆ ಅದರಿಂದ ಮುಕ್ತಿ!! ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

Saturday, September 17, 2011

"ಆತ್ಮನಿಗೆಆತ್ಮನೇಮಿತ್ರ ಆತ್ಮನೇ ಶತ್ರು"

"ಆತ್ಮನಿಗೆ ಆತ್ಮನೇ ಮಿತ್ರ,ಆತ್ಮನಿಗೆ ಆತ್ಮನೇಶತ್ರು!ಆತ್ಮನಿಂದಲೇ ಆತ್ಮನ ಉದ್ಧಾರ!ಆತ್ಮನಿಂದಲೇ ಆತ್ಮನ ಅವಸಾನ!"ಹೀಗೆನ್ನುತ್ತದೆ ಭಗವದ್ಗೀತೆ(೬ ನೇ ಅಧ್ಯಾಯ ೫ ನೇ ಶ್ಲೋಕ).
ಇದೇ ಭಾವ ಕೆ.ಸಿ.ಶಿವಪ್ಪ ನವರ 'ಮುದ್ದುರಾಮನ ಮನಸು'ಪುಸ್ತಕದ ಈ ಕೆಳಗಿನ ಚೌಪದಿಯಲ್ಲಿದೆ:

ಯಾರು ಮುನಿದರೆ ಏನು?ಯಾರು ಒಲಿದರೆ ಏನು?
ನಿನ್ನರಿವು ನಿನಗೆ ಮುದ ತರದಿರುವ ತನಕ ?
ಸಂಗ ಸುಖ ಶಾಶ್ವತವೆ?ಕಡಲ ಸೇರದೆ ಹೊನಲು?
ನೀ ಅತ್ಮಸಖನಾಗು-ಮುದ್ದು ರಾಮ.                        (333)

ನಾವು ಎಲ್ಲಿಯವರೆಗೆ ನಮ್ಮ ಸಂತೋಷಕ್ಕಾಗಿ ಹೊರಗಿನ ಪ್ರಪಂಚದ ಆಗು ಹೋಗು ಗಳ ಮೇಲೆ,ಇತರ ವ್ಯಕ್ತಿಗಳ ಮೇಲೆ ಅವಲಂಬಿತರಾಗಿರುತ್ತೆವೋ ಅಲ್ಲಿಯವರೆಗೆ ನಮಗೆ ದುಃಖ ತಪ್ಪಿದ್ದಲ್ಲ ಎನ್ನುತ್ತದೆ ಗೀತೆ.ಆತ್ಮದ ಅರಿವನ್ನು ಧ್ಯಾನದಿಂದ ಪಡೆದು 'ಆತ್ಮ ಸಖ'ನಾದರೆ ನಮಗೂ ಆನಂದ ,ನಮ್ಮ ಸುತ್ತಲಿನವರಿಗೂ ಆನಂದ!ಏನಂತೀರಿ?ನಿಮ್ಮ ಅನಿಸಿಕೆ ತಿಳಿಸಿ. 

Thursday, September 15, 2011

"ಟ್ರೀಟ್ ಮೆಂಟ್ ಚೆನ್ನಾಗಿದೆ "

೧)ಮುಲ್ಲಾ ನಸೀರುದ್ದೀನನಿಗೆ ಎಲ್ಲಾ ವಿಷಯಕ್ಕೂ ವಿಪರೀತ ಭಯವಾಗುತ್ತಿತ್ತು .ಅವನ ಸ್ನೇಹಿತ ಅವನನ್ನು ಮನೋವೈದ್ಯರೊಬ್ಬರ ಬಳಿಗೆ ಕಳಿಸಿದ.ಕೆಲ ತಿಂಗಳುಗಳ ಬಳಿಕ ಸ್ನೇಹಿತ ಮುಲ್ಲಾನನ್ನು ಭೇಟಿಯಾದಾಗ ಕೇಳಿದ "ಈಗ ಹೇಗಿದ್ದೀಯ ಮುಲ್ಲಾ?".ಅದಕ್ಕೆ ಮುಲ್ಲಾ ಹೇಳಿದ  "ಮೊದಲೆಲ್ಲಾ  ಟೆಲಿಫೋನ್ ರಿಂಗ್ ಆದರೆ ಟೆಲಿಫೋನ್ ಎತ್ತಲು ಹೆದರುತ್ತಿದ್ದೆ "ಎಂದ.ಸ್ನೇಹಿತ ಕೇಳಿದ"ಈಗ?".ಅದಕ್ಕೆಮುಲ್ಲಾ ಉತ್ತರಿಸಿದ "ಈಗ ತುಂಬಾ improve ಆಗಿದ್ದೀನಿ.ಟೆಲಿ ಫೋನ್ ರಿಂಗ್ ಆಗದಿದ್ದರೂ ಅದರಲ್ಲಿ ಮಾತನಾಡುತ್ತೇನೆ ! ". .........ಚಿಕಿತ್ಸೆಯ ಫಲ !

೨)ನಮ್ಮ ದಿನ ನಿತ್ಯದ ವ್ಯವಹಾರಗಳು ಹೇಗಿರುತ್ತವೆ ನೋಡಿ;

ಕಮಲಮ್ಮ(ಸಿಟ್ಟಿನಿಂದ );"ಏನ್ರೀ ರಾಧಮ್ಮ .......!ನನಗೆ ಶಾಂತಮ್ಮ ಹೇಳಿದರು.....,ನಾನು ಅವರಿಗೆ ಹೇಳಬೇಡಿ ಎಂದು ನಿಮಗೆ ಹೇಳಿದ ವಿಷಯವನ್ನು ನೀವು ಅವರಿಗೆ ಹೇಳಿ ಬಿಟ್ಟಿರಂತೆ!ಹೌದೇ!!"
ರಾಧಮ್ಮ ;"ಛೆ !ಛೆ!ಎಂತಹ ಕೆಟ್ಟ ಹೆಂಗಸೂ ರೀ ಆ ಶಾಂತಮ್ಮ!ನಾನು ನೀವು ಹೇಳಿದಿರಿ ಅಂತ ಅವಳಿಗೆ  ಹೇಳಿದ ವಿಷಯವನ್ನುನಿಮಗೆ ಹೇಳಬೇಡಿ ಎಂದು ಹೇಳಿದ್ದೆ!"
ಕಮಲಮ್ಮ;"ಆಯಿತು ಬಿಡಿ....,ಅವಳು ಈ ವಿಷಯ ನನಗೆ ಹೇಳಿದಳು ಅಂತನಾನು ನಿಮಗೆ ಹೇಳಿದೆ ಅಂತ ಅವಳಿಗೆ ಹೇಳಬೇಡಿ....ಆಯ್ತಾ!!"............(.ದೇವರೇ ಗತಿ!!!)
(ಇದು ಓಶೋ ರವರ yoga-the science of living ಪುಸ್ತಕದಿಂದ ಆಯ್ದುಕೊಂಡಿದ್ದು .ಅಭಿಪ್ರಾಯ ತಿಳಿಸಿ.)

Wednesday, September 14, 2011

"ನಿಜವಾದ ಪ್ರೀತಿ ಬಂಧಿಸುವುದಿಲ್ಲ !!"

ನೆನ್ನೆಯ ಪ್ರಜಾವಾಣಿಯಲ್ಲಿ ಗುರುರಾಜ್ ಕರ್ಜಗಿಯವರ 'ಕರುಣಾಳು ಬಾ ಬೆಳಕೆ'ಓದಿದೆ .ಅದರಲ್ಲಿದ್ದ ವಿಚಾರಗಳು ನಮ್ಮೆಲ್ಲರ ಕಣ್ಣು ತೆರೆಸುವಂತಹದ್ದು.ನಮ್ಮ ಅತಿಯಾದ ಪ್ರೀತಿ ನಮ್ಮ ಪ್ರೀತಿ ಪಾತ್ರರನ್ನು ಕಟ್ಟಿ ಹಾಕುತ್ತಿದೆಯೇ?ನಾವೆಲ್ಲಾ ಯೋಚಿಸ ಬೇಕಾದಂತಹ ವಿಷಯ.ಲೇಖಕರು ಸಣ್ಣವರಿದ್ದಾಗ ಅವರ  ಮನೆಯಲ್ಲಿ ಸಾಕಿದ ನಾಯಿ, ಬೆಳ್ಳಗಿರುವ ಬೆಣ್ಣೆಯ ಮುದ್ದೆಯಂತಿದ್ದ ಮರಿಯೊಂದನ್ನು ಹಾಕಿತ್ತು.ಇವರಿಗೆ ಅದನ್ನು ಕಂಡರೆ ಎಲ್ಲಿಲ್ಲದ ಪ್ರೀತಿ.ಸದಾಕಾಲ ಅದನ್ನು ಎದೆಗೆ ಅವುಚಿಕೊಂಡೇ ಓಡಾಡುತ್ತಿದ್ದರು .ಆ ನಾಯಿಮರಿಗೋ ಹಿಂಸೆಯಾಗಿ ಕುಂಯ್ ಗುಡುತ್ತಿತ್ತಂತೆ.ಅವರಜ್ಜ ಅವರಿಗೆ'ನೀನು ನಿಜವಾಗಿ ನಾಯಿ ಮರಿಯನ್ನು ಪ್ರೀತಿಸುತ್ತಿದ್ದರೆ,ಅದನ್ನು ಕೆಳಗೆ ಬಿಡು.ಅದು ಸುಖವಾಗಿ ಆಟವಾಡಿಕೊಂಡು ಇರುವುದನ್ನು ನೋಡಿ ಸಂತಸಪಡು' ಎಂದರು.ಅಜ್ಜನ ಮಾತು ಕೇಳಿ,ಅದನ್ನು ಕೆಳಗೆ ಬಿಟ್ಟು ಅದು ಅಲ್ಲಿ ಇಲ್ಲಿ ಬಾಲ ಅಲ್ಲಾಡಿಸಿಕೊಂಡು ಓಡಾಡುವುದನ್ನು ನೋಡಿ ಖುಷಿ ಪಟ್ಟರಂತೆ.ಈ ಘಟನೆ ಯಿಂದ ನಾನು ದೊಡ್ಡದೊಂದು ಪಾಠ ಕಲಿತೆ ಎನ್ನುತ್ತಾರೆ ಲೇಖಕರು.ನೀವು ನಿಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೀರಾ? ಹಾಗಾದರೆ ಆಕೆ ನಿಮ್ಮ ಆಜ್ಞೆಯಂತೆಯೇ ನಡೆಯ ಬೇಕೆಂಬ ಹಠ ಬಿಡಿ.ಆಕೆಯ ಮೇಲೆ ನಿಮ್ಮ ಅಧಿಕಾರ ಚಲಾಯಿಸಬೇಡಿ.ನಿಮ್ಮ ಗಂಡನ ಬಗ್ಗೆ ನಿಮಗೆ ಪ್ರೀತಿಯೇ?ಹಾಗಾದರೆ ಅವರ ಬಗ್ಗೆ ಸಂಪೂರ್ಣ ನಂಬಿಕೆಯಿರಲಿ.ಅವರ ಎಲ್ಲಾ ಸಮಯವನ್ನೂ ನನಗೆ ಮೀಸಲಿಡಬೇಕೆಂಬ ಹಠ ಬೇಡ.
ಕೆಲವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಏನಾದೀತೋ ಎಂಬ ಭಯದಿಂದ ಅವರಿಗೆ ಏನನ್ನೂ ಸ್ವತಂತ್ರವಾಗಿ ಮಾಡಲು ಬಿಡುವುದಿಲ್ಲ.ಅವರ ಮೇಲಿನ ನಮ್ಮ ಅತಿಯಾದ ವ್ಯಾಮೋಹ ಅವರನ್ನು ಅತಂತ್ರ ರಾಗಿಸುತ್ತದೆ.ಮಕ್ಕಳ ರೆಕ್ಕೆ ಬಲಿಸುವುದು ಏಕೆ?ಅವರು ಹಾರಲಿ ಎಂದು ತಾನೇ?ರೆಕ್ಕೆ ಬಲಿಸಿ ಅವರನ್ನು ಹಾರಲು ಬಿಡದಿದ್ದರೆ ಹೇಗೆ? ನಿಜವಾದ ಪ್ರೀತಿ ಬಂಧಿಸುವುದಿಲ್ಲ.ಮುಕ್ತಗೊಳಿಸುತ್ತದೆ.ಭಗವಂತ ನಮ್ಮನ್ನು ಅತಿಯಾಗಿ ಪ್ರೀತಿಸುವುದರಿಂದಲೇ ನಮ್ಮನ್ನು ಸ್ವತಂತ್ರವಾಗಿ ಬಿಟ್ಟಿದ್ದಾನೆ!ಅಲ್ಲವೇ?
(ಇದು ಲೇಖಕರ ಅಭಿಪ್ರಾಯ.ನಿಮ್ಮ ಅಭಿಮತ ತಿಳಿದುಕೊಳ್ಳುವ ಕುತೂಹಲ ನನಗೆ.ನಿಮ್ಮ ಪ್ರತಿಕ್ರಿಯೆ ತಿಳಿಸಿ.)

Sunday, September 11, 2011

"ಮನುಷ್ಯರ .......ಮಾತು"

ಮಾತಿನ ಬಗ್ಗೆ ಎರಡು ಮಾತು.ಮಾತು ಮನುಷ್ಯನಿಗೆ ವರವೂ ಹೌದು,ಶಾಪವೂ ಹೌದು. ಹೇಳುವಂತಹ ಮಾತುಗಳನ್ನು ಹೇಳಬಹುದಾದಲ್ಲಿ ಹೇಳಿದರೆ ಅರ್ಥ.ಹೇಳಬಾರದಲ್ಲಿ ಹೇಳಿದರೆ ಅನರ್ಥ! ಹೇಳಬಾರದನ್ನು ಹೇಳಿ,ಎಡವಟ್ಟು ಮಾಡಿಕೊಂಡು 'ಅಯ್ಯೋ ನಾನು ಹೀಗೆ ಹೇಳಬಾರದಿತ್ತು ,ಹಾಗೆ ಹೇಳಬೇಕಾಗಿತ್ತು' ಎಂದು ಪರದಾಡುವರೇ ಹೆಚ್ಚು.ಕೆಲವರ ಮಾತು ಕೇಳುತ್ತಲೇ ಇರಬೇಕುಎನಿಸುತ್ತದೆ.ಕೆಲವರು ಮಾತು ಶುರು ಮಾಡಿದರೆ ಎದ್ದು ಓಡಿ ಹೊಗಬೇಕಿನಿಸುತ್ತದೆ.ಮಾತನಾಡುವುದೂ ಒಂದು ಕಲೆ.ಈ ಕಲೆಯನ್ನು ಸಿದ್ಧಿಸಿ ಕೊಂಡವರಲ್ಲಿ ನಮ್ಮ ಹಿರಿಯ ಕವಿ ಜಿ.ಪಿ.ರಾಜ ರತ್ನಂಕೂಡಒಬ್ಬರು. ಅವರ'ರತ್ನನಪದಗಳು'
ಪುಸ್ತಕದಲ್ಲಿ ಮಾತಿನ ಬಗ್ಗೆಯೇ ಒಂದುಕವನವಿದೆ.ಕವನದ ಹೆಸರು'ಮನ್ಸರ್ ಮಾತು'.ಕವನ ಓದಿ ನಿಮ್ಮ ಅಭಿಪ್ರಾಯ ತಿಳಿಸಿ;


'ಮನ್ಸರ್ ಮಾತು '

ಹೇಳಾದ್ ಏನ್ರ,ಹೇಳಾದ್  ಇದ್ರೆ
ಜಟ್ ಪಟ್ನ ಹೇಳಿ ಮುಗೀಸು .
ಯಾವ್ದಕ್ ಇಕ್ಬೇಕ್ ಗೊತ್ತ್ ಮಾಡ್ಕೊಂಡಿ
ಆಮೇಕ್ ದೊಣ್ಣೆ ಬೀಸು.

ಸುತ್ಕೊಂಡ್ ಸುತ್ಕೊಂಡ್ ಮಾತಾಡ್ತಿದ್ರೆ
ಕೇಳಾಕ್  ಬಲ್ ಪಜೀತಿ .
ಬೈರ್ಗೆ ಕೊರದಂಗ್ ಕೊರಿತಾನಿದ್ರೆ
ಯಾವ್ ದೇವರ್ಗೆ ಪ್ರೀತಿ ?

ಕುಂಬಾರ್ ಗೌಡನ್ ಚಕ್ರಕ್ಕೂನೆ
ಗಾಳ ನೋಡಿದ್ ಮೀನ್ಗೂ
ಸುತ್ಕೊಂಡ್ ಸುತ್ಕೊಂಡ್ ಹೋಗೋದ್ ಸಹಜ
ಅದ್ಯಾಕ್ ನನಗೂ  ನಿನಗೂ ?

ಕೇಳೋರ್  ಇನ್ನಾ  ಕೇಳಬೇಕಂತಾ
ಕುಂತ್ಕಂಡ್ ಇದ್ದಂಗೇನೇ
ಹೇಳೋದ್ನ ಎಷ್ಟೋ ಅಷ್ಟರಲ್ ಹೇಳಿ
ಮನೇಗೆ ಹೋಗೋನ್ಗೆ ಮೇನೆ!

ಮಾತ್ ಇರಬೇಕು ಮಿಂಚ್ ಹೊಳದಂಗೆ !
ಕೇಳ್ದೋರ್ 'ಹಾಂ 'ಅನಬೇಕು !
ಸೋನೆ ಹಿಡದ್ರೆ ಉಗದ್ ಅಂದಾರು
'ಮುಚ್ಕೊಂಡ್ ಹೋಗೋ ಸಾಕು'!

ಮನ್ಸನ್ ಮಾತು ಎಂಗಿರಬೇಕು ?
ಕವಣೆ ಗುರಿ ಇದ್ದಂಗೆ !
ಕೇಳ್ದೋರ್ ಮನ್ಸಿಗೆ ಲಗತ್ ಆಗ್ಬೇಕು
ಮಕ್ಕಳ ಮುತ್ತಿದ್ದಂಗೆ !

Saturday, September 10, 2011

"ಕವಿತೆಯ ಕಷ್ಟ"

ಕವಿ ಜಿ.ಎಸ್.ಶಿವರುದ್ರಪ್ಪನವರ 'ಅಗ್ನಿ ಪರ್ವ'ಕವನ ಸಂಕಲನದಲ್ಲಿ 'ಕವಿತೆಯ ಕಷ್ಟ' ಎನ್ನುವ ಕವಿತೆ ಇಷ್ಟವಾಯಿತು.ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.ಓದಿ ನಿಮ್ಮ ಅನಿಸಿಕೆ ತಿಳಿಸಿ;

ಕೆಲವು ಕವಿತೆಗಳು
ಕರೆದ  ಕೂಡಲೇ ಬಂದು ಬಿಡುತ್ತವೆ 
ಚಿಕ್ಕ  ಮಕ್ಕಳ ಹಾಗೆ !
ಇನ್ನು  ಕೆಲವಂತೂ ಹೊಸಿಲು ದಾಟಿ ಹೊರಕ್ಕೆ 
ಬರುವುದೇ  ಇಲ್ಲ -ಹೊಸ ಮದುವೆ ಹೆಣ್ಣಿನ ಹಾಗೆ,
ಅವಕ್ಕೆ  ಮೈ ತುಂಬ ನಾಚಿಕೆ.

ಕೆಲವು  ಕವಿತೆಗಳು ಮುಂಜಾನೆ ಗಿಡದ ಮೈತುಂಬ
ಸಮೃದ್ಧವಾಗಿ ಅರಳುವ ಹೂವು.
ಇನ್ನು ಕೆಲವು ಎಷ್ಟು ಪುಂಗಿಯೂದಿದರೂ
ಹುತ್ತ  ಬಿಟ್ಟು ಹೊರಕ್ಕೆ ಬಾರದ ಹಾವು.
ಮತ್ತೆ  ಕೆಲವು ಮಬ್ಬು ಕತ್ತಲಲ್ಲಿ ಮಲಗಿರುವ 
ಆಕಾರವಿರದ ನೋವು.

ಕೆಲವು ಕವಿತೆಗಳು ಕಾರ್ತೀಕದಲ್ಲಿ ಮನೆ ತುಂಬ
ಕಿಲ  ಕಿಲ ನಗುವ ಹಣತೆಗಳು.
ಕೆಲವಂತೂ  ಯಾವ ದುರ್ಬೀನಿಗೂ 
ಕಾಣದಂತೆ  ಅಡಗಿರುವ ಅಪರೂಪದ ನಕ್ಷತ್ರಗಳು.

ಕವಿತೆಯ  ಕಷ್ಟ -ಸುಲಭದ ಮಾತಲ್ಲ 
ಹೀಗೇ ಎಂದು ಹೇಳಲಾಗುವುದಿಲ್ಲ 
ಒಂದೊಂದು ಸಲ ಸಲೀಸಾಗಿ ನೆಲ ಬಿಟ್ಟು 
ಏರಿದ  ವಿಮಾನ 
ಅಷ್ಟೇ  ಸುಗಮವಾಗಿ ನಿಲ್ದಾಣಕ್ಕೆ ಇಳಿಯುವುದು 
ತೀರಾ  ಅನುಮಾನ!

Friday, September 9, 2011

"ಜಗದ ಜಂಗೀ ಕುಸ್ತಿ..........!! "

ಯಾವ ಕರ್ಮದ ಫಲ 
ನೂಕಿದ್ದಕ್ಕೋ  !
ಯಾವ  ಅನುಬಂಧದ  ಬಲ 
ಸೆಳೆದದ್ದಕ್ಕೋ!
ಜಗವೆಂಬ ಅಖಾಡಕ್ಕೆ 
ಬಂದು  ಬಿದ್ದ 
ಜಟ್ಟಿ  ನಾನು !
ನನ್ನಾಣೆ  ನಾನೇ 
ಬಯಸಿ  ಬರಲಿಲ್ಲ!
ಕಣ್ಣು  ತೆರೆಯುವ ಮೊದಲೇ 
ಕಣದಲಿದ್ದೆ !
ಉಸಿರು ಬಿಡುವ ಮೊದಲೇ 
ಸೆಣಸುತಲಿದ್ದೆ!
ಯಾರು ಯಾರೋ  ಹಾಕಿದ 
ಪಟ್ಟು ಗಳನ್ನೂ ....,
ವಿಧಿ ಹಾಕಿದ
'ಪಾತಾಳ ಗರಡಿಯನ್ನೂ'
ಬಿಡಿಸಿಕೊಳ್ಳಲು ಹೆಣಗಿ 
ಅಖಾಡದ ಮಣ್ಣು ಮುಕ್ಕಿದ್ದೇನೆ!
ಸೋಲೋ.....ಗೆಲುವೋ......,
ಜಗದ ಈ ಜಂಗೀ ಕುಸ್ತಿ 
ಮುಗಿಯುವುದನ್ನೇ ಕಾಯುತ್ತಾ 
ಸೆಣಸುವುದೊಂದೇ ಮಂತ್ರವಾಗಿ !
ಸೆಣಸುತ್ತಲೇ .......ಇದ್ದೇನೆ !
ಇನ್ನೂ............!!

Tuesday, September 6, 2011

"ನಿನ್ನ ಅದಮ್ಯ ಚೈತನ್ಯಕ್ಕೆ ನನ್ನದೊಂದು ಸಲಾಂ "

ಗೋಡೆಯ ಬಿರುಕಿನಲ್ಲಿ 
ಅಲ್ಲೇ ಇರುಕಿನಲ್ಲಿ 
ಗರಿಗೆದರಿ ಚಿಗುರೊಡೆದು 
ನಳ ನಳಿಸಿ...........,
ನಗುವ,ನಲಿವ,
ಚಿ..ಗು..ರು..........!
ನನಗೆ ನೀನೇ ಗುರು......!
ಚಿಗುರೊಡೆವ ನಿನ್ನ ಛಲಕ್ಕೆ 
ನಮೋನ್ನಮಃ.....!
ಮಣ್ಣಿನ ಹದಬೇಕೆಂದು
ಗೊಣಗಲಿಲ್ಲ!
ಪಾತಿ ಮಾಡಿ,ಬದು ತೋಡಿ
ನೀರುಣಿಸಿ 
ಆರೈಕೆ ಮಾಡೆಂದು
ಗೋಗರೆಯಲಿಲ್ಲ!
ನಿನ್ನನ್ಯಾರೂ .......
ಬಿತ್ತಲಿಲ್ಲ,ಬೆಳೆಯಲಿಲ್ಲ!
ಸುಖಾ ಸುಮ್ಮನೆ 
ಯಾವುದೋ ಗಾಳಿಯಲಿ
ಬೀಜವಾಗಿ ತೂರಿಬಂದು 
ಗೋಡೆಯಲಿ ಸಿಲುಕಿ 
ಮಿಡುಕದೆ 
ಸಿಡುಕದೆ 
ನಕ್ಕು ಹೊರ ಬಂದೆ 
ಮೈ ಕೊಡವಿ!
ನಿನ್ನ ಅದಮ್ಯ ಚೈತನ್ಯಕ್ಕೆ
ಜೀವನೋತ್ಸಾಹಕ್ಕೆ 
ಇದೋ ..............,
ನನ್ನದೊಂದು ಸಲಾಂ! 

Sunday, September 4, 2011

"ಇಲ್ಲೊಂದು ಅದ್ಭುತ ಪದ್ಯ!!......ಮಿಸ್ಸಾಗ್ಲಿಲ್ಲ ಸಧ್ಯ!!"

ನವೋದಯ ಕನ್ನಡ ಸಾಹಿತ್ಯದ ಸೊಬಗನ್ನು ಹೆಚ್ಚಿಸಿದ ಕನ್ನಡ ಲೇಖಕರಲ್ಲಿ  ,ರಾಘವ ಎನ್ನುವ ಕಾವ್ಯ ನಾಮದಿಂದ ಬರೆಯುತ್ತಿದ್ದ ಪ್ರೊ.ಎಂ.ವಿ.ಸೀತಾ ರಾಮಯ್ಯ ನವರೂ ಒಬ್ಬರು.ಅವರ ನೂರ ಒಂದನೇ ಜನ್ಮದಿನದ ಅಂಗವಾಗಿ
ಇಂದಿನ 'ಕನ್ನಡ ಪ್ರಭ'ದ ಸಾಪ್ತಾಹಿಕ ಪುರವಣಿಯಲ್ಲಿ 'ನೀವು ಕಂಡರಿಯದ ಎಂ.ವಿ.ಸೀ.'ಎನ್ನುವ ಲೇಖನದಲ್ಲಿ ಕೊಟ್ಟಿರುವ ಅವರ ಕವನ ಒಂದನ್ನು ನೋಡಿ ದಂಗಾಗಿ ಹೋದೆ!ಅದರ ಸೊಗಡನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.ಕವನದ ಹೆಸರು 'ಕಲ್ಲಡಿಯ ಹುಲ್ಲು ಗರಿಕೆ'.ಓದಿ ತಿಳಿಸಿ ನಿಮ್ಮ ಅನಿಸಿಕೆ :




"ಕಲ್ಲಡಿಯ....ಹುಲ್ಲುಗರಿಕೆ"


ಕಲ್ಲಡಿಯ ಹುಲ್ಲು ಗರಿಕೆ 
ಅದಕಿಲ್ಲ ಹೆದರಿಕೆ 
ಮೇಲೆ ಕುಳಿತ ಚಪ್ಪಡಿಯ 
ಭಾರವಪ್ಪಳಿಸುತಿದೆಯೆಂದು.
ಕತ್ತಲೆಯ ಗೋರಿ ಗವಿ ಸಂದುಬಾಯಿಂದ 
ಹೊರ ಹಾಕಿಹುದು ತಲೆಯ -ತನ್ನ ಹೊಸಬೆಳೆಯ.
ಎಳೆಯ ಎಲೆಯ ತಲೆಯ. 
ಏನದರ ಧೈರ್ಯ ಶೌರ್ಯ!
ಅದ ಮೆಚ್ಚಿ 
ಬದುಕೆಂದು ಹರಸಿದನು ಸೂರ್ಯ. 
ತುಂಬಿದನು ಆಯುಷ್ಯ 
ಅಪ್ಪುಗೆಯ ಬಿಸುಪಿತ್ತು.
ಗಾಳಿ,ಬಾಳಿನ ಗೆಳೆಯ 
ಬಂದು ತಡವಿದನು ಮೈಯ 
ಹೊಸ ಉಸಿರನಿತ್ತು.
ಮೈಯೊಲೆದು ತಲೆ ಕೊಡಹಿ 
ನಿರ್ಭಯತೆಯಲಿ ನಲಿಯುತಿದೆ 
ಹುಲ್ಲು ಗರಿಕೆ.
ಅದಕಿಲ್ಲ ಹೆದರಿಕೆ.
ಅಹುದು ,
ತೇನವಿನಾ ತೃಣಮಪಿ ನ ಚಲತಿ.
ಆದರೆ .............,
ಬಿದ್ದಾಗಲೆದ್ದು ನಿಲ್ಲುವ ಯತ್ನವಿಲ್ಲದಿರಲು 
ಅವನೂ ಹಿಡಿಯ ಮೇಲೆತ್ತಿ.




(ಕವಿತೆಯ ಕೆಳಗೆ  ಕವಿ ಪು.ತಿ.ನ. ಬರೆದ ಅಡಿ ಟಿಪ್ಪಣಿ ಹೀಗಿದೆ;'ಕಲ್ಲಡಿಯ ಗರಿಕೆ'ಯನ್ನು ಈಗತಾನೇ ಓದಿ ಸಂತಸಗೊಂಡೆ.ಒಳ್ಳೇ ಚೆಂದದ ಅನ್ಯೋಕ್ತಿ ಇದು.what a fine poem!congratulations! )

Tuesday, August 30, 2011

"ಚೆಲುವೆಗೊಂದು ....ಕಿವಿಮಾತು "

ನನ್ನ ನೆಚ್ಚಿನ ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರ ಸಮಗ್ರ ಕವನ ಸಂಕಲನ "ಕ್ಯಾಮರಾ ಕಣ್ಣು"ಓದುತ್ತಿದೇನೆ.
ಒಂದೊಂದು ಕವನವೂ ಅದ್ಭುತ.ಅವರ ಕೆಲವು ಕವನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬೇಕೆನಿಸುತ್ತಿದೆ.
ಇಲ್ಲಿದೆ  ಅವರ ಒಂದು ಕವನ "ಕಿವಿ ಮಾತು":


ಮೊದಲೇ  ಚೆಲುವೆ,ಜೊತೆಗೆ ಯೌವನ ,
ನೆಲ  ಕಾಣುವುದಿಲ್ಲ,ನಿಜ.
ಈ  ಒನಪು ವೈಯಾರ ,ಬಿಂಕ ಬಿಗುಮಾನ ,
ಇವೂ  ನಿನಗೆ ಸಹಜ.

ನಿನ್ನ  ಹೆತ್ತವರ ನೋಡಿ ಉತ್ತರಿಸು :
ನಿನ್ನ  ಚೆಲುವು ಸ್ವಂತವೇ?
ಇನ್ನು  ನಿನ್ನ ಈ ಏರು ಯೌವನ ,
ಇದಾದರೂ  ಅನಂತವೇ?

ಬೇರಿನಿಂದ  ಪ್ರತಿ ರೆಂಬೆಯ ತುದಿಗೂ 
ಕಾಣದ  ಅಂತಃ ಸೂತ್ರ;
ಹೊರಗೆ  ಮೆರೆಯುವುದು ಗಮ್ಮನೆ ಅರಳಿದ 
ಬಣ್ಣದ  ಹೂಗಳು ಮಾತ್ರ .

ಸಂಜೆಗೆ  ಮರದಡಿ ಉದುರಿ ಬಿದ್ದಿವೆ 
ರಾಶಿ  ರಾಶಿ ಹೂ ಹೆಣ ;
ದುಂಬಿ  ಚಿಟ್ಟೆಗಳ ಪಾಳಿ ಮುಗಿದಿದೆ ,
ಇನ್ನು ಕೇವಲ  ಇರುವೆ ,ನೊಣ.

ನಿನ್ನ  ಸ್ವಯಾರ್ಜಿತ ವೆಂದರೆ ಇಷ್ಟೇ:
ಹಾರ್ದಿಕ  ಪ್ರೀತಿ,ವಿನಯ.
ಚೆಲುವೆ ,ಒಮ್ಮೆ ನಿನ್ನೊಳಗೆ ನೋಡಿಕೋ ,
ಅವು ನಿನ್ನಲಿ ಇವೆಯ?

Saturday, August 27, 2011

"ನಾನು ಬಾಯಿ ಬಿಡಲೇ ಇಲ್ಲವಲ್ಲಾ ಸ್ವಾಮಿ!!"

1)ಮೆಳ್ಳಗಣ್ಣು ಇರುವ ಪೋಲಿಸಿನವನೊಬ್ಬ ಕುಡಿದು ತೂರಾಡುತ್ತಿದ್ದ ಮೂರು ಮಂದಿಯನ್ನು ಅರೆಸ್ಟ್ ಮಾಡಿದ.
ಪೋಲಿಸಿನವನು, ಮೊದಲನೆಯವನನ್ನು ನೋಡುತ್ತಾ  'ಏನೋ ನಿನ್ನ ಹೆಸರು ?'ಎಂದ. 'ಗುಂಡ ಸ್ವಾಮಿ'ಎಂದು ಎರಡನೆಯವನಿಂದ  ಉತ್ತರ ಬಂತು!ಪೊಲೀಸಪ್ಪನಿಗೆ ಸಿಟ್ಟು ಬಂತು. ಎರಡನೆ ಯವನನ್ನು ದುರುಗುಟ್ಟಿ ನೋಡುತ್ತಾ 
 'ಏಯ್ .....,ನಿನ್ನನ್ನು ಯಾವೋನೋ ಕೇಳಿದವನು?'ಎಂದು  ಗದರಿದ. 'ಅಯ್ಯೋ!  .......ನನ್ನನ್ನು ಯಾಕೆ ಸ್ವಾಮಿ ಗದರುತ್ತೀರಿ!........ನಾನು ಬಾಯಿ ತೆಗೆಯಲೇ ಇಲ್ಲವಲ್ಲಾ 'ಎಂದ ಮೂರನೆಯವನು.

2)ಮುಲ್ಲಾನ ಸ್ನೇಹಿತ ಹೇಳುತ್ತಿದ್ದ "ನನ್ನ ಹೆಂಡತಿ ಮೊದಲು ಪಿಯಾನೋ ನುಡಿಸುತ್ತಿದ್ದಳು.ಆದರೆ ಮಕ್ಕಳಾದ ಮೇಲೆ ಅವಳಿಗೆ ನುಡಿಸಲು ಪುರುಸೋತ್ತಾಗಲಿಲ್ಲ ". ಅದಕ್ಕೆ ಮುಲ್ಲಾ "ಕೆಲವೊಮ್ಮೆ ಮಕ್ಕಳು ಎಂತಹ ನೆಮ್ಮದಿಯನ್ನು ಕೊಡುತ್ತವೆ ಅಲ್ಲವೇ!!"ಎಂದು ಉದ್ಗಾರ ತೆಗೆದ.

3)ಮುಲ್ಲಾನ ಮಿತ್ರ ಹೇಳಿದ "ನನ್ನ ಹೆಂಡತಿ ಮೂರು ತಿಂಗಳಿಂದ ನನ್ನಹತ್ತಿರ ಮಾತನಾಡಿಲ್ಲ.ಆದ್ದರಿಂದ ನಾನು 
  ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದೇನೆ."ಅದಕ್ಕೆಮುಲ್ಲಾನ ಉತ್ತರ ಹೀಗಿತ್ತು; "ನೀನು ಮತ್ತೊಮ್ಮೆ ಆಲೋಚಿಸುವುದು ಒಳ್ಳೆಯದು.ಅಂತಹ ಒಳ್ಳೆಯ ಹೆಂಡತಿ ಎಲ್ಲರಿಗೂ ಸಿಗುವುದಿಲ್ಲ".

Monday, August 22, 2011

"ಮತ್ತದೇ ನಾನು .......,ಮತ್ತದೇ ಜನ !!"

ಧ್ಯಾನದ ಕೋಶದೊಳಹೊಕ್ಕು
ಹೊರಬಂದಾಗ  ...............,
ನಾನೊಂದು  ಬಣ್ಣ ಬಣ್ಣದ
ಚಿಟ್ಟೆಯಾಗಿ.....................,
ನನ್ನ ಸುತ್ತಲ ಜನ
ರಂಗು ರಂಗಿನ ಹೂವುಗಳಾಗಿ ,
ಪ್ರೀತಿ ಸ್ನೇಹಗಳ ಕೊಡಲು
ಕೈ ಬೀಸಿ ಕರೆಯುತ್ತಿದ್ದ ಹಾಗೆ
ಕನಸು....................!
ಕನಸು ಹರಿದಾಗ
ಮತ್ತದೇ ................ನಾನು!!
ಮತ್ತದೇ .................ಜನ!!

Sunday, August 21, 2011

"ಕಾರಿಗೆ ....ವೆನಿಲ್ಲಾ ಐಸ್ ಕ್ರೀಂ .....ಅಲರ್ಜಿಯೇ?"

ಕೆಲವರ ಸಮಸ್ಯೆಗಳು ನಮಗೆ 'ಸಿಲ್ಲಿ'ಎನಿಸಬಹುದು.ಉದಾಹರಣೆಗೆ ರೋಗಿಯೊಬ್ಬ ತನ್ನ ಪಕ್ಕೆ ಹಿಡಿದುಕೊಂಡಿದ್ದನ್ನು  ಆಯುರ್ವೇದದ 'ವಾತ'ಪದವನ್ನು ಇಂಗ್ಲೀಷಿಗೆ ಭಾಷಾಂತರಿಸಿ ನನಗೆ 'ಗ್ಯಾಸ್ಟ್ರಿಕ್ ಟ್ರಬಲ್ ' ಇದೆ ಸರ್ ಎಂದಾಗ ನನಗೆ ಅದು 'ಸಿಲ್ಲಿ' ಎನಿಸಬಹುದು.ಆದರೆ ಪಾಪ ಸಮಸ್ಯೆ ಇರುವವನಿಗೆ ಹೇಗೆ ಹೇಳಿದರೂ ಅದೂ ಒಂದು ಸಮಸ್ಯೆಯೇ ಅಲ್ಲವೇ? ಹಾಗಾಗಿ  ಅವನ ತಪ್ಪನ್ನು ತೋರಿಸಿ ಅವನಿಗೆ ನೋವು ಮಾಡುವ ಗೋಜಿಗೆ ಹೋಗದೆ ಅವನ ಸಮಸ್ಯೆಗೆ ಪರಿಹಾರ ಒದಗಿಸುವತ್ತ ಮಾತ್ರ ಗಮನ ಕೊಡುತ್ತೇನೆ.ಇಂದಿನ 'ಕನ್ನಡ ಪ್ರಭ'ದಲ್ಲಿ ವಿಶ್ವೇಶ್ವರ ಭಟ್ಟರು ಲೇಖನ ಒಂದೊರಲ್ಲಿ ಸ್ವಾಮಿ ಸುಖಭೋದಾನಂದರ ಪುಸ್ತಕದಲ್ಲಿರುವ ಘಟನೆಯೊಂದರ ಬಗ್ಗೆ ಬರೆದಿದ್ದಾರೆ.ಘಟನೆ ಸ್ವಾರಸ್ಯಕರ ಎನಿಸಿದ್ದರಿಂದ ನಿಮ್ಮೊಂದಿಗೆ ಹಂಚಿ ಕೊಳ್ಳುತ್ತಿದ್ದೇನೆ.ಘಟನೆ ಹೀಗಿದೆ:
ಜನರಲ್ ಮೋಟಾರ್ಸ್ ನ ಕಸ್ಟಮರ್ ಕೇರ್ ವಿಭಾಗಕ್ಕೆ ಹೀಗೊಂದು ಪತ್ರ ಬಂತು; 'ಸ್ವಾಮಿ.....,ಕೆಲ ತಿಂಗಳ ಹಿಂದೆ ನಿಮ್ಮ ಕಂಪನಿಯ ಮೋಟಾರ್ ಕಾರ್ ಖರೀದಿಸಿದ್ದೇನೆ.ನನಗೆ ನಿಮ್ಮ  ಕಾರಿನಿಂದ  ವಿಚಿತ್ರವಾದ ಸಮಸ್ಯೆಯೊಂದು ಎದುರಾಗಿದೆ.ಅದೇನೆಂದರೆ ......,ನಿಮ್ಮಕಾರಿನಲ್ಲಿ ನಾನು ಪ್ರತಿದಿನ  ರಾತ್ರಿ ಊಟವಾದ ನಂತರ ಐಸ್ ಕ್ರೀಂ ತರಲು ಹತ್ತಿರದ ಶಾಪಿಂಗ್ ಮಾಲಿಗೆ ಹೋಗುತ್ತೇನೆ.ವೆನಿಲ್ಲಾ ಐಸ್ಕ್ರೀಂ ಕೊಂಡಾಗ ಮಾತ್ರ ನಿಮ್ಮಕಾರ್ ಮತ್ತೆ ಸ್ಟಾರ್ಟ್ಆಗುವುದಿಲ್ಲ!ಬೇರೆ ಯಾವುದೇ ಐಸ್ಕ್ರೀಂ ತಂದರೂ ತಕ್ಷಣ ಸ್ಟಾರ್ಟ್ಆಗುತ್ತೆ.ನಿಮ್ಮಕಾರಿಗೆ ವೆನಿಲ್ಲಾ ಫ್ಲೇವರ್ ಕಂಡರೆ ಅಲರ್ಜಿ ಏಕೆಂದು ಅರ್ಥವಾಗುತ್ತಿಲ್ಲ!ಉದಾಸೀನ ಮಾಡದೆ ತಕ್ಷಣ ನನ್ನಸಮಸ್ಯೆಗೆಪರಿಹಾರಒದಗಿಸಿಕೊಡಿ'.  ಕಸ್ಟಮರ್ ಕೇರ್ ಮ್ಯಾನೇಜರ್ ಗೆ ಸಮಸ್ಯೆಯ ತಲೆ ಬುಡ ಅರ್ಥವಾಗಲಿಲ್ಲ.ಇದು ತೀರ 'ಸಿಲ್ಲಿ'ಸಮಸ್ಯೆಎನಿಸಿದರೂ ಆ ಗ್ರಾಹಕನ ಮನೆಗೆ ಕಂಪನಿಯ ಎಂಜಿನಿಯರ್ ಒಬ್ಬರನ್ನು ಕಳಿಸಿದ.ಗ್ರಾಹಕನ ದೂರು ನೂರಕ್ಕೆ ನೂರರಷ್ಟು ಸತ್ಯವಾಗಿತ್ತು.ವೆನಿಲ್ಲಾ ಐಸ್ಕ್ರೀಂ ಕೊಂಡಾಗ ಮಾತ್ರ ಗಾಡಿ ಸ್ಟಾರ್ಟ್ಆಗಲು ತೊಂದರೆ ಕೊಡುತ್ತಿತ್ತು .ಬಹಳಷ್ಟು ಕೂಡಿ,ಕಳೆದು ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಂಡಮೇಲೆ ಇಂಜಿನಿಯರ್ ಗೆ ಸಮಸ್ಯೆ ಏನೆಂದು ಅರ್ಥವಾಯಿತು. ವೆನಿಲ್ಲಾ ಐಸ್ ಕ್ರೀಂಗೆ ಬಹಳ ಬೇಡಿಕೆ ಇದ್ದುದರಿಂದ ಮಾಲ್ ನ ಕೌಂಟರ್ ಬಳಿಯೇ ಅದನ್ನಿಟ್ಟಿದ್ದರು.ಅದರ ಖರೀದಿ ಬೇಗ ಮುಗಿದು  ಹಿಂದಿರುಗಿದಾಗ ಕಾರಿನ ಬಿಸಿ ತಣಿಯದೇ 'ವೇಪರ್ ಲಾಕ್'ಆಗುತ್ತಿತ್ತು.ಕಾರ್ ಬೇಗನೆ ಸ್ಟಾರ್ಟ್ ಆಗುತ್ತಿರಲಿಲ್ಲ.ಬೇರೆ ice cream ತೆಗೆದುಕೊಳ್ಳಲು ಸಾಕಷ್ಟು ಸಮಯ ಆಗುತ್ತಿದ್ದುದರಿಂದ ಕಾರ್ ತಣ್ಣಗಾಗಿ ಸ್ಟಾರ್ಟಿಂಗ್ ಸಮಸ್ಯೆ ಎದುರಾಗುತ್ತಿರಲಿಲ್ಲ!ಸಮಸ್ಯೆಅರ್ಥವಾದ ಮೇಲೆ ಪರಿಹಾರ ಪರಿಹಾರ ಸುಲಭವಾಯಿತು.
  ಅಂದ ಹಾಗೆ ಇನ್ನು ಮುಂದೆ ಯಾರಾದರೂ 'ಸಿಲ್ಲಿ'ಸಮಸ್ಯೆಗಳನ್ನು ಹೇಳಿದಾಗ ,ಉದಾಸೀನ ಮಾಡದೇ ಗಂಭೀರವಾಗಿಯೇ ಪರಿಗಣಿಸೋಣವೇ......?

Saturday, August 13, 2011

"Bliss is a Virtue and Misery is a Sin"

A blissful person is incapable of doing wrong to anybody - to himself or to others. He simply becomes incapable of doing wrong. But the miserable person is bound to do wrong. He may think that he is trying to do something good, but he can't do good. Even though he has the intention of doing good, the outcome is not going to be good. He may think that he loves people, but he will simply dominate in the name of love. He may think that he is a great servant of the people, but he will simply be a politician;through service he will try to dominate.The miserable person is basically incapable of doing good.Hence to me ,virtue can be reduced to one thing,that is blissfulness.And sin can be reduced to one thing,that is misery. MISERY IS SIN AND BLISS IS VIRTUE. My only message is :be cheerful, be blissful,be dancing,be singing and then whatsoever you do is going to be right.
                                                                                                                                 -OSHO

Tuesday, August 9, 2011

"ಹಾಗೇ ಸುಮ್ಮನೇ .......,ಸುಮ್ಮನಿರಬಾರದೇ ?"

ಸಿದ್ಧ ಸಮಾಧಿ ಯೋಗದ ಬಗ್ಗೆ 'ಸುಮ್ಮನಿದ್ದರೆ ಛಳಿಯೂ ನಡುಗುವುದು' ಎನ್ನುವಪುಸ್ತಕ ಬರೆದ ನೆಲ್ಲೀಕೆರೆ ವಿಜಯ್ ಕುಮಾರ್ ಅವರ'ಸುಮ್ಮನಿರಬಾರದೇ'ಎನ್ನುವ ಮತ್ತೊಂದು ಪುಸ್ತಕ ಓದುತ್ತಿದ್ದೆ.ಒಂದು ಹಂತದಲ್ಲಿ 'ನಮ್ಮಲ್ಲಿ ಮುಕ್ಕಾಲುವಾಸಿ ಜನಕ್ಕೆ ,ಸುಮ್ಮನಿರುವುದೂ ಎಷ್ಟೊಂದು ಪ್ರಯಾಸಕರವಲ್ಲವೇ!!?'ಎನಿಸಿತು.'We are not human beings,We are human doings"ಎನ್ನುವ ಎಲ್ಲೋ ಓದಿದ ವಾಕ್ಯ ನೆನಪಾಯಿತು.ತಲೆಯಲ್ಲಿ ಸದಾ ಕಾಲ ಕೋರ್ಟಿನ ವಿಚಾರಣೆ ನಡೆಯುತ್ತಿರುತ್ತದೆ !!ಎಷ್ಟೊಂದು ತರ್ಕ!ಎಷ್ಟೊಂದು ವಿತರ್ಕ!!'ಅವನು ಮಾಡಿದ್ದು ಸರಿ,ಇವಳು ಮಾಡಿದ್ದು ತಪ್ಪು.ಅವನು ಹಾಗೆಹೇಳಬಾರದಿತ್ತು.ಅವಳು ಹಾಗೆಮಾಡಬಾರದಿತ್ತು'.ಮನಸ್ಸು ಸದಾಕಾಲ ಹೀಗೇಕೆ ಕೊತ ಕೊತನೆ ಕುದಿಯುತ್ತಿರುತ್ತದೆ!!?Why should we get so upset about things beyond our control?ನಾವೇನು ಜಗತ್ತಿಗೆ ನ್ಯಾಯಾಧೀಶರೇ!?ಎಲ್ಲಾ ಕೆಲಸ ಬಿಟ್ಟು ,ತೀರ್ಪು ನೀಡುವ ಕೆಲಸಕ್ಕೇಕೆ ಕೈ ಹಾಕಬೇಕು!?ತೀರ್ಪನ್ನು ನೀಡುವ,ಅದನ್ನು ಅನುಷ್ಠಾನಕ್ಕೆ ತರುವ 'ಕಾಣದ ಕೈಯೊಂದು'ಕೆಲಸ ಮಾಡುತ್ತಿದೆ ಎನ್ನುವ ನಂಬಿಕೆಯಷ್ಟೇ ನಮಗೆ ಸಾಲದೇ? ಆಗಿದ್ದನ್ನು ಶಾಂತ ಮನಸ್ಸಿನಿಂದ 'ಅದು ಹೀಗಾಗಿ ಬಿಟ್ಟಿದೆ 'ಎಂದು ಒಪ್ಪಿಕೊಂಡು ,ಆಗಿ ಹೋಗಿದ್ದಕ್ಕೆ ಪರಿಹಾರ ಕೈಗೊಳ್ಳಲು ಕಾರ್ಯ ನಿರತರಾಗುವುದೊಂದೇ ನಾವು ಮಾಡ ಬೇಕಾದ ಕೆಲಸವಲ್ಲವೇ?ಮನಸ್ಸನ್ನು ಶಾಂತ ಸ್ಥಿತಿಯಲ್ಲಿ ಇಡುವುದೇ ನಮ್ಮ ಪ್ರಮುಖ ಕೈಂಕರ್ಯ ವಾಗಬೇಕಲ್ಲವೇ?
ಟೀ ಕುಡಿಯುವಾಗ ಕೈ ಜಾರಿ ಟೀ ಕಪ್ಪು ಸಾಸರಿನ ಸಮೇತ ಕೆಳಗೆ ಬಿದ್ದಿದೆ.ನೆಲದ ಮೇಲೆ ಚೆಲ್ಲಿದ ಟೀ ಜೊತೆಗೆ ಪಿಂಗಾಣಿಯ ಚೂರುಗಳು.ಬಿಸಿ ಬಿಸಿ ಟೀ ಚೆಲ್ಲಿದ್ದಕ್ಕೆ ತಲೆ ಬಿಸಿ ಮಾಡಿಕೊಳ್ಳದೆ ,ಆ ಒಡೆದ ಚೂರುಗಳನ್ನು ತೆಗೆದು ಹಾಕಿ,ಚೆಲ್ಲಿದ ಟೀ ಯನ್ನು ಬಟ್ಟೆಯಿಂದ ಒರೆಸಿ,ಏನೂ ಆಗದ ಹಾಗೆ ಇನ್ನೊಮ್ಮೆ ಟೀ ಮಾಡಿ ಕುಡಿದು ಬಿಡಿ ಅಷ್ಟೇ!!
ಇನ್ನೊಮ್ಮೆ ಟೀ ಮಾಡಲು ಮನೆಯಲ್ಲಿ ಹಾಲಿಲ್ಲವೇ?ಆರಾಮಾಗಿ ಸುಮ್ಮನಿದ್ದುಬಿಡಿ.ಈ ಮನಸ್ಥಿತಿ ಯನ್ನು ಎಲ್ಲಾ ಸಂದರ್ಭಗಳಲ್ಲೂ ಅಳವಡಿಸಿಕೊಳ್ಳಲು  ಸಾಧ್ಯವಿಲ್ಲವೇ?ಸಾಧಿಸುವ ಪ್ರಯತ್ನ ಮಾಡಬಹುದಲ್ಲವೇ?ಇಗೋ ಹೊರಟೆ.ನಾನೂ ನನ್ನ ಸಾಧನೆಯ ಹಾದಿಯಲ್ಲಿ ಪ್ರಯಾಣ ಶುರುಮಾಡುತ್ತೇನೆ.................ನಮಸ್ಕಾರ.

Saturday, July 30, 2011

"ನಿಮ್ಮೊಳಗೊಬ್ಬ ...ಬುದ್ಧ!!"

ಇಂದಿನ 'ಪ್ರಜಾವಾಣಿ'ಯಲ್ಲಿ ಭರತ್ ಮತ್ತು ಶಾಲನ್ ಸವೂರ್ ಅವರ "ಬುದ್ಧನಂತಾಗಿ"ಎನ್ನುವ ಬರಹ ತುಂಬಾ ಇಷ್ಟವಾಯ್ತು.ನಿಮ್ಮೊಂದಿಗೆ ಹಂಚಿಕೊಳ್ಳಬೇಕಿನಿಸುತ್ತಿದೆ.ನಿಮಗೂ ಇಷ್ಟವಾಗಬಹುದು.ಅದರ ಸಾರಾಂಶ ಹೀಗಿದೆ:

ಬೌದ್ಧ ಮಠವೊಂದರ ಹಿರಿಯ  ಸನ್ಯಾಸಿಯೊಬ್ಬ ಚಿಂತೆಗೀಡಾದ.ಅವನಿಗೆ ಪದೇಪದೇ ಹೊಟ್ಟೆ ನೋವು ಕಾಡತೊಡಗಿತು.ಮಠದ ಧಾರ್ಮಿಕ ಚಟುವಟಿಕೆಗಳು ಕಮ್ಮಿಯಾದವು.ಮಠದಲ್ಲಿ ಸಣ್ಣಗೆ ರಾಜಕೀಯ ಶುರುವಾಗಿತ್ತು.ಹಲವಾರು ಗುಂಪುಗಳಾದವು.ಒಬ್ಬರನ್ನೊಬ್ಬರು ದೂರುವುದೂ ,ಸಣ್ಣ ಪುಟ್ಟ ಘರ್ಷಣೆ ಗಳೂ,ಶುರುವಾದವು.ಮಠದ ಯುವ ಸನ್ಯಾಸಿಗಳು ಆಲಸಿಗಳಾದರು.ಮಠದ ಕೀರ್ತಿ ಕ್ರಮೇಣ ಇಳಿಮುಖವಾಗುತ್ತಾ ಬಂದು,ಅನುಯಾಯಿಗಳು ಮಠಕ್ಕೆ ಬರುವುದನ್ನೇ ನಿಲ್ಲಿಸಿದರು. ಸನ್ಯಾಸಿ ಇದಕ್ಕೆ ಪರಿಹಾರ ತಿಳಿಯಲು  ಬೆಟ್ಟದಲ್ಲಿ ಗುಹೆಯೊಂದರಲ್ಲಿ ತಪೋ ನಿರತನಾಗಿದ್ದ ತನ್ನ ಗುರುವನ್ನು ಹುಡುಕಿ ಹೊರಟ.ಧ್ಯಾನದಲ್ಲಿ ಮುಳುಗಿದ್ದ ಗುರು ನಿಧಾನವಾಗಿ ಕಣ್ಣು ತೆರೆದು ಶಿಷ್ಯನಿಗೆ ಹೇಳಿದ"ನೀನು ಬಂದ ಕಾರಣ ನನಗೆ ಗೊತ್ತು.ನಿನ್ನ ಮಠ ಏಕೆ ಮಂಕಾಗಿದೆ ಎಂದರೆ ,ನೀವು ಯಾರೂ ಮಠದಲ್ಲಿ ಇರುವ ಜೀವಂತ ಬುದ್ಧ ನನ್ನು ಗುರುತಿಸಲೇ ಇಲ್ಲವಲ್ಲಾ!"ಎಂದು ಹೇಳಿ ಮತ್ತೆ ಧ್ಯಾನಸ್ಥ ನಾದ.

ಹಿರಿಯ ಸನ್ಯಾಸಿ ಮಠಕ್ಕೆ ಮರಳಿ ತನ್ನ ಗುರು ಹೇಳಿದ ವಿಷಯವನ್ನು ಎಲ್ಲರಿಗೂ ತಿಳಿಸಿದ. ಎಲ್ಲರಲ್ಲೂ "ತಮ್ಮಲ್ಲಿ ಇರುವ ಬುದ್ಧ ಯಾರು ?"ಎನ್ನುವ ವಿಷಯದ ಬಗ್ಗೆ ಜಿಜ್ಞಾಸೆ ಶುರುವಾಯಿತು.ಮಠದ ಪ್ರತಿಯೊಬ್ಬರೂ ಮತ್ತೊಬ್ಬರನ್ನು ಬುದ್ಧನಿರಬಹುದೆಂದುಕೊಂಡು ಗೌರವದಿಂದ ,ಭಕ್ತಿಯಿಂದ ಕಾಣ ತೊಡಗಿದರು.ಪರಸ್ಪರ ಗೌರವ ಆದರಗಳು ಹೆಚ್ಚಾದವು. ಮಠದಲ್ಲಿ ಸ್ನೇಹ ,ಶಾಂತಿ,ಸೌಹಾರ್ದದ ಗಾಳಿ ಬೀಸ ತೊಡಗಿತು.ಹಿರಿಯ ಸನ್ಯಾಸಿಯ ಹೊಟ್ಟೆ ನೋವು ಪವಾಡದಂತೆ ಮಾಯವಾಯಿತು.ಮಠ ಮತ್ತೆ ಮಾನ್ಯತೆ ಪಡೆದು ಮೊದಲಿನ ಪ್ರಸಿದ್ಧಿ ಪಡೆಯಿತು.

ಪ್ರತಿಯೊಬ್ಬರ ಅಪರಿಪೂರ್ಣ ವ್ಯಕ್ತಿತ್ವದ ಹಿಂದೆಯೂ ಒಬ್ಬ ಬುದ್ಧ ಅಡಗಿದ್ದಾನೆ.ನಮ್ಮೊಳಗಿನ ಬುದ್ಧ್ಹನನ್ನು ನಾವು ಗುರುತಿಸಿ ಕೊಂಡಾಗ ,ಆರೋಗ್ಯ ,ಸಂತಸ ಮತ್ತು ಸೌಹಾರ್ದಯುತ ಬದುಕು ನಮ್ಮದಾಗುತ್ತದೆ.
ನಿಮಗೆ ಎದುರಾಗುವ ಸನ್ನಿವೇಶ ಅಥವಾ ನೀವು ವ್ಯವಹರಿಸುವ ಜನರಲ್ಲಿ ಸತತವಾಗಿ ನೀವು ತಪ್ಪುಕಂಡು ಹಿಡಿಯುತ್ತಿದ್ದಲ್ಲಿ ,ನಿಮ್ಮ ಮನಸ್ಸು ಕ್ರಮೇಣ ಬಳಲುತ್ತದೆ.ಜಡವಾಗುತ್ತದೆ.ದುಃಖಿತವಾಗುತ್ತದೆ.ತಪ್ಪು ಕಂಡು ಹಿಡಿಯುವ ನಿಮ್ಮ  ಸ್ವಭಾವ ನಿಮ್ಮ ದೇಹದ ಪಿತ್ತ ಕೋಶ ,ಮೂತ್ರ ಪಿಂಡ ,ಕಣ್ಣು, ಮತ್ತು ಎಲ್ಲಾ ಪ್ರಮುಖ ಅಂಗಗಳ  ಮೇಲೂ ಋಣಾತ್ಮಕ ಪರಿಣಾಮ ಬೀರುತ್ತದೆ.
ಎಚ್ಚೆತ್ತು ಕೊಳ್ಳಿ.....!! ಬೇರೆಯವರ ತಪ್ಪುಗಳ ಬಗ್ಗೆ ಮಾತನಾಡುವ  ಮೊದಲು ಬಾಯಿ ಮುಚ್ಚಿಕೊಳ್ಳಿ.ಸಣ್ಣ ದೊಂದು ಕಿರಿ ಕಿರಿ ನಿಮ್ಮಲ್ಲಿ ಹುಟ್ಟಿದರೂ,ಅದರ ಕಾರಣ ಹುಡುಕಿ.ಅದನ್ನು ತಕ್ಷಣವೇ ಹೊರ ಹಾಕಿ.ನನ್ನೊಳಗಿರುವ ಶಾಂತಿಯ ಸ್ವರೂಪನಾದ 'ಬುದ್ಧ',ಈ ಕ್ಷುಲ್ಲಕ ವಿಷಯಗಳಿಗಿಂತ ದೊಡ್ಡದು ಎಂದು ಕೊಳ್ಳಿ.

ಬುದ್ಧನಂತೆ ಪ್ರೀತಿಯಿಂದ ಆಲೋಚಿಸಿ.ಬುದ್ಧನಂತೆ ಮೃದುವಾಗಿ ಮಾತನಾಡಿ.ನಿಮ್ಮೊಳಗೆ ಪ್ರೀತಿಯನ್ನು ತುಂಬಿಕೊಳ್ಳಿ.ನಿಮ್ಮ ಕುಟುಂಬದ ಸದಸ್ಯರನ್ನು,ಸ್ನೇಹಿತರನ್ನು,ನೆರೆಯವರನ್ನು,ಸಹೋದ್ಯೋಗಿಗಳನ್ನು ಮತ್ತೊಬ್ಬ ಬುದ್ಧನಂತೆ ಕಾಣಲು ಶುರುಮಾಡಿ.ಅವರೆಲ್ಲರ ಕುರಿತು ಒಳ್ಳೆಯ ಮಾತುಗಳನ್ನಾಡಿ.

ನಿಮ್ಮ ಮನೋಭಾವ ,ಆಲೋಚನೆಗಳನ್ನು ಹಂತ ,ಹಂತವಾಗಿ ಪ್ರತಿನಿತ್ಯ ಬದಲಿಸಿಕೊಳ್ಳಿ.ಪರಿಷ್ಕರಿಸಿಕೊಳ್ಳಿ.ಯಾರ ಕುರಿತೂ ಬಾಯಿಗೆ ಬಂದಂತೆ ಮಾತನಾಡ ಬೇಡಿ.ನಿಮ್ಮ ಮಾತಿಗೆ ಒಂದು ಮೌಲ್ಯವಿರಲಿ.ನಿಮ್ಮ ದೃಷ್ಟಿಕೋನವನ್ನು ವಿರೋಧಿಸುವವರ ಬಳಿ ವಾದ ಬೇಡ.ಪೂರ್ವ ಗ್ರಹ ಪೀಡಿತರಾಗದೆ  ಮುಕ್ತ ಮನಸ್ಸಿನಿಂದ ಎಲ್ಲವನ್ನು ಕೇಳಿಸಿಕೊಳ್ಳಿ.
ಬೇರೆಯವರ ಬಗ್ಗೆ ವಿಶ್ವಾಸ ವಿರಲಿ.ಅದೇ ವಿಶ್ವಾಸ ನಿಮಗೆ ಮರಳಿ ಬರುತ್ತದೆ ಎನ್ನುವ ನಂಬಿಕೆ ಇರಲಿ.ಯಾರನ್ನೂ ಅವಹೇಳನ ಮಾಡ ಬೇಡಿ .ಅವಮಾನಿಸಬೇಡಿ.ಹಾಗೆ ಮಾಡಲು ನೀವೂ ಸಹ ಕೆಳ ಮಟ್ಟಕ್ಕೆ ಇಳಿಯಬೇಕಾಗುತ್ತದೆ.

'ಒಬ್ಬರ ಜೊತೆ ಇನ್ನೊಬ್ಬರು ಸಂತಸದಿಂದ ಇರೋಣ .ಈ ಸಾಂಗತ್ಯ ಇಬ್ಬರನ್ನೂ ಆತ್ಮದ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ'ಎನ್ನುವ ಮನೋಭಾವವನ್ನು ಸದಾ ಕಾಪಾಡಿ ಕೊಳ್ಳಿ.ನಿಮ್ಮೊಳಗಿನ ಬುದ್ಧನ ಹಾರೈಕೆ ನಿಮ್ಮ ಪ್ರತಿ ಆಲೋಚನೆ,ನೀವು ಮಾಡುವ ಪ್ರತಿಯೊಂದು ಕೆಲಸ,ಪ್ರತಿ ಸಂಬಂಧವನ್ನೂ ಬೆಳಗುತ್ತದೆ.
(ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ  ತಿಳಿಸಿ.ನಮಸ್ಕಾರ)

Tuesday, July 5, 2011

"ಬಾಲ್ಕನಿಯಲ್ಲಿ ಎಡಗಡೆಯಿಂದ ಮೂರನೆಯದು"

1) ಸಿನಿಮಾ ಹಾಲಿನಲ್ಲಿ ಕತ್ತಲಲ್ಲಿ ಟಾರ್ಚ್ ಬೆಳಕಿನಲ್ಲಿ ಟಿಕೆಟ್ ನೋಡಿ ಸೀಟು ತೋರಿಸುವ  ಕೆಲಸ ಮಾಡುವನೊಬ್ಬನಿಗೆ ವಿಪರೀತ ಹಲ್ಲು ನೋವು ಬಂತು.ಹಲ್ಲಿನ ಡಾಕ್ಟರ್ ಬಳಿ ಹೋಗಿ 'ಡೆಂಟಿಸ್ಟ್ ಚೇರಿನಲ್ಲಿ' ಕುಳಿತ.ಡಾಕ್ಟರ್ "ಯಾವ ಹಲ್ಲು ನೋಯುತ್ತೆ?" ಎಂದು ಕೇಳಿದರು.ಅದಕ್ಕವನು "ಬಾಲ್ಕನಿಯಲ್ಲಿ ಎಡಗಡೆ ಯಿಂದ ಮೂರನೆಯದು" ಎಂದು ಉತ್ತರ ಕೊಟ್ಟ! 

2) ಭಿಕ್ಷುಕನೊಬ್ಬ ದೇವಸ್ಥಾನದ ಮುಂದೆ ಕುಳಿತು "ದೇವರ ಹೆಸರಿನಲ್ಲಿ ಏನಾದರೂ ಕೊಡಿ.ದೇವರು ನಿಮ್ಮನ್ನು ಹರಸುತ್ತಾನೆ"ಎಂದು ಬೇಡತೊಡಗಿದ.ಕೆಲವು ಚಿಲ್ಲರೆ ಕಾಸು ಬಿದ್ದವು.ಸಂಜೆ ಬಾರ್ ಒಂದರ ಮುಂದೆ ಕುಳಿತು ಬಾರಿನಿಂದ ಹೊರಗೆ ಬರುವವರ ಹತ್ತಿರ ಅದೇ ರೀತಿ ಬೇಡತೊಡಗಿದ.ಐದರ,ಹತ್ತರ ಸಾಕಷ್ಟು ನೋಟುಗಳು ಅವನ ಡಬ್ಬಿಯಲ್ಲಿ ಬಿದ್ದವು!ಆಗ ಭಿಕ್ಷುಕ ಹೇಳಿಕೊಂಡ"ದೇವರೇ ನೀನು ನಿಜಕ್ಕೂ ಕರುಣಾಮಯಿ !!ನಿನ್ನ ಹೆಸರಿಗೆ ಎಂತಹ ಶಕ್ತಿಯಿದೆ!!ಆದರೆ ನೀನು ಅಷ್ಟೇ ಕಿಲಾಡಿ!! ಅಡ್ರೆಸ್ ಒಂದೆಡೆ ಕೊಟ್ಟು,ಇನ್ನೆಲ್ಲೋ ಕುಳಿತಿದ್ದೀಯ!!!"

Sunday, July 3, 2011

"ನಿನಗೇನು ಗೊತ್ತು?ನೀನೇನು ಡಾಕ್ಟರ?"

೧)ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ವಾರ್ಡ್ ಒಂದರಲ್ಲಿ ಮರಿ ಡಾಕ್ಟರ್ ಗಳು ಬಹಳ ದಿನಗಳಿಂದ ಅಸ್ವಸ್ಥ ನಾಗಿದ್ದ,ಚಲನೆ ಇಲ್ಲದೆ ಬಿದ್ದಿದ್ದ ರೋಗಿಯೊಬ್ಬನನ್ನು ಬಹಳ ಹೊತ್ತು ಪರೀಕ್ಷೆ ಮಾಡಿ,ಅವನು ಸತ್ತಿದ್ದಾನೆಂದು ತೀರ್ಮಾನಕ್ಕೆ ಬಂದರು.ಅವನು ಸತ್ತ ಕಾರಣ ಏನಿರಬಹುದೆಂದು ಚರ್ಚೆ ಶುರುವಾಯಿತು.ಚರ್ಚೆಯ ಮಧ್ಯೆ ರೋಗಿ ಎದ್ದು ಕುಳಿತು ಕ್ಷೀಣ ದನಿಯಲ್ಲಿ "ನಾನಿನ್ನೂ ಬದುಕಿದ್ದೇನೆ" ಎಂದ.ತಕ್ಷಣವೇ ಅಲ್ಲೇ ಇದ್ದ ನರ್ಸ್ ಅಭ್ಯಾಸ ಬಲದಿಂದ  "ನೀ ಸುಮ್ನೆ ಬಾಯಿ ಮುಚ್ಚಿಕೊಂಡು ಮಲಗು.ನಿನಗೇನು ಗೊತ್ತಾಗುತ್ತೆ,ನೀನೇನು ದೊಡ್ಡ ಡಾಕ್ಟರ?"ಎನ್ನಬೇಕೆ !!!

೨).ಕ್ರಿಮಿಕೀಟಗಳು  ಮತ್ತು ಇಲಿಗಳ ಮಧ್ಯೆ ಫುಟ್ ಬಾಲ್ ಪಂದ್ಯ ಏರ್ಪಾಡಾಗಿತ್ತು.ಕೀಟಗಳ ಕಡೆ 'ಸ್ಟಾರ್ ಆಟಗಾರ'ನೂರು ಕಾಲುಗಳುಳ್ಳ ಸೆಂಟಿಪೀಡ್(ಶತ ಪದಿ)ಇದ್ದಿದ್ದುರಿಂದ ಅವುಗಳೇ ಪಂದ್ಯವನ್ನು ಗೆಲ್ಲುವ ಫೇವರೈಟ್ ಟೀಮ್ ಆಗಿದ್ದವು.ಆದರೆ ಎಷ್ಟು ಹೊತ್ತಾದರೂ ಆ ದಿನ ಸೆಂಟಿ ಪೀಡ್ ಪಂದ್ಯವನ್ನಾಡಲು ಬರಲೇ ಇಲ್ಲ!ತಮ್ಮ ಸ್ಟಾರ್ ಆಟಗಾರನಿಲ್ಲದೆ  ಕೀಟಗಳು ಪಂದ್ಯವನ್ನು ಒಂದು ಗೋಲಿನಿಂದ ಸೋತಿದ್ದವು! ಕೀಟಗಳೆಲ್ಲವೂ ಸೇರಿ ಸೆಂಟಿ ಪೀಡಿನ ಗುಹೆಯ ಬಳಿ ಹೋದವು."ನೀನಿಲ್ಲದೆ ಈ ದಿನ ಪಂದ್ಯ ಸೋತೆವು.ನೀನ್ಯಾಕೆ ಪಂದ್ಯಕ್ಕೆ ಬರಲಿಲ್ಲ?"ಎಂದವು.
"ಏನು!! ಪಂದ್ಯ ಮುಗಿದೇ  ಹೋಯಿತೇ!!?ನನ್ನ ಸಮಸ್ಯೆ ನಿಮಗೆ ಹೇಗೆ ಅರ್ಥ ವಾಗುತ್ತೆ?ನಾನಿನ್ನೂ ಷೂ ಗಳನ್ನು ಹಾಕಿಕೊಳ್ಳುವುದೇ ಮುಗಿದಿಲ್ಲಾ!!!"ಎನ್ನುತ್ತಾ ತನ್ನ ನೂರನೇ ಕಾಲಿನ ಷೂ ಲೇಸ್ ಬಿಗಿಯ ತೊಡಗಿತು!!!





Friday, June 17, 2011

"ಹಾಸ್ಯ .....ಲಾಸ್ಯ"

೧)ಕಾಡಿನಲ್ಲಿ ಹುಲಿಯೊಂದರ ಮದುವೆ ನಡೆಯುತ್ತಿತ್ತು.ಮದುವೆಗೆ ಹುಲಿಗಳ ಬಾರಾತ್ ಹೋಗುತ್ತಿತ್ತು.ಬ್ಯಾಂಡ್ ನ ತಾಳಕ್ಕೆ ತಕ್ಕಂತೆ ಹುಲಿಗಳೆಲ್ಲಾ ಕುಣಿಯುತ್ತಿದ್ದವು.ಅವುಗಳ ಮಧ್ಯೆ ಆ ಎಲ್ಲಾ ಹುಲಿಗಳಿಗಿಂತ ಜೋರಾಗಿ ,ಹೆಚ್ಚು ಜೋಶ್ ನಿಂದ ಇಲಿಯೊಂದು ಡ್ಯಾನ್ಸ್ ಮಾಡುತ್ತಿತ್ತು.ಯಾರೋ ಒಬ್ಬರು ಇಲಿಯನ್ನು ಕೇಳಿದರು "ಹುಲಿಗಳ ಬಾರಾತ್ ನಲ್ಲಿ ನಿನ್ನಂತಹ ಇಲಿಗೇನು ಕೆಲಸ?ಹುಲಿಗೂ ,ಇಲಿಗೂ ಎಲ್ಲಿಯ ಸಂಬಂಧ?". ಅದಕ್ಕೆ ಇಲಿ  "ಇದು ಸೂಕ್ಷ್ಮ ವಿಷಯ.ನಿಮಗೆಲ್ಲಾ ಅರ್ಥವಾಗೊಲ್ಲಾ ಬಿಡಿ"ಎಂದು ಹಾರಿಕೆಯ ಉತ್ತರ ನೀಡಿತು. ಪ್ರಶ್ನೆ ಕೇಳಿದವರು 'ಪರವಾಗಿಲ್ಲಾ ಹೇಳು,ಅರ್ಥ ಮಾಡಿಕೊತೀವಿ"ಎಂದು ಬಲವಂತ ಮಾಡಿದರು.ಅದಕ್ಕೆ ಇಲಿ  "ನಾನೂ ಮದುವೆ ಮಾಡಿಕೊಳ್ಳುವ  ಮುಂಚೆ ಹುಲಿಯಾಗೇ ಇದ್ದೆ ,ನಂತರವಷ್ಟೇ ಇಲಿಯಾದೆ "ಎಂದು ತನ್ನ  ನೃತ್ಯ ಮುಂದುವರಿಸಿತು!


೨)ಬಾರ್ ಒಂದೊರಲ್ಲಿ ಕುಡುಕನೊಬ್ಬ ತನ್ನ ಮಿತ್ರನಿಗೆ ಹೇಳುತ್ತಿದ್ದ "ನಿನ್ನೆ ರಾತ್ರಿ ಹನ್ನೆರಡು ಗಂಟೆಗೆ ಮನೆ ಹತ್ತಿರ ಹೋದಾಗ ಅದೇ ಸಮಯಕ್ಕೆ ಕಳ್ಳನೊಬ್ಬ ನನ್ನ ಮನೆಗೆ ನುಗ್ಗಿದ"."ಕಳ್ಳನಿಗೆ ಏನಾದರೂ ಸಿಕ್ಕಿತೆ ?"ಮಿತ್ರನ ಪ್ರಶ್ನೆ. ಅದಕ್ಕಿವನ ಉತ್ತರ "ಓಹೋ ಸಿಗದೇ ಏನು! ಚೆನ್ನಾಗಿಯೇ ಸಿಕ್ಕಿದೆ .ಒದೆ ತಿಂದು ಆಸ್ಪತ್ರೆ ಸೇರಿದ್ದಾನೆ.ನನ್ನ ಹೆಂಡತಿ ಅವನನ್ನು ನಾನು ಎಂದು ತಪ್ಪು ತಿಳಿದು ಸಿಟ್ಟು ತೀರಿಸಿಕೊಂಡಳು !!.......ಪಾಪ ...ನನ್ನ ಬದಲು ಅವನು ಸಿಕ್ಕಿ ಹಾಕಿಕೊಂಡ.ಸಧ್ಯ ನಾನು ಬಚಾವಾದೆ "ಎಂದು ನಿಟ್ಟುಸಿರು ಬಿಟ್ಟು ಮತ್ತೊಂದು ಪೆಗ್ ಏರಿಸಿದ.

Wednesday, June 15, 2011

ಹಾಸ್ಯಮೇವ ಜಯತೆ- -"ಸಂಶಯವೇ ಬೇಡ!!"

ಒಬ್ಬಾತ ಒಂದು ಗಿಳಿಯನ್ನು ಕೊಂಡು ಕೊಳ್ಳಲು ಪಕ್ಷಿಗಳನ್ನು ಮಾರುತ್ತಿದ್ದವನ ಬಳಿ ಹೋದ.ಸುಂದರವಾಗಿದ್ದ ಗಿಳಿಯೊಂದನ್ನು ಇಷ್ಟಪಟ್ಟ.ಆದರೆ ಅದರ ಬೆಲೆ ಒಂದು ಸಾವಿರ ರೂಪಾಯಿ ,ಸ್ವಲ್ಪ ಹೆಚ್ಚಿನಿಸಿತು.ಆತ,ಅಂಗಡಿಯಾತನನ್ನು 'ಈ ಗಿಳಿ ಇಷ್ಟೊಂದು ಬೆಲೆ ಬಾಳುವಂತದ್ದೇ?ಎಂದು ಕೇಳಿದ.ಆ ಅಂಗಡಿಯವನು 'ಆ ಗಿಳಿಯನ್ನೇ ಕೇಳಿ ಬಿಡಿ'ಎಂದ.ಗಿರಾಕಿ ಗಿಳಿಗೆ ಅದೇ ಪ್ರಶ್ನೆ ಹಾಕಿದ.ಅದಕ್ಕೆ ಆ ಗಿಳಿ "ಸಂಶಯವೇ ಬೇಡ"ಎಂದಿತು.ಗಿಳಿ ನೀಡಿದ ಜಾಣ ಉತ್ತರದಿಂದ ಗಿರಾಕಿ ಬಹಳ ಪ್ರಭಾವಿತನಾದ.ಹಿಂದೆ ಮುಂದೆ ನೋಡದೆ ಸಾವಿರ ರೂಪಾಯಿ ಕೊಟ್ಟು ಗಿಳಿಯನ್ನು ಖರೀದಿಸಿದ.ಅಂತಹ ಜಾಣ ಮಾತನಾಡುವ ಗಿಳಿಯನ್ನು ಖರೀದಿಸಿದ ತನ್ನ ಜಾಣ್ಮೆಯ ಬಗ್ಗೆ ಹೆಮ್ಮೆ ಪಟ್ಟುಕೊಂಡ.ಅದನ್ನು ತನ್ನ ಹೆಂಡತಿ ಮಕ್ಕಳಿಗೆ ತೋರಿಸುವ ಆತುರದಿಂದ ಮನೆಗೆ ಬಂದ.ಎಲ್ಲರ ಮುಂದೆ ಗಿಳಿಯನ್ನು ಮಾತನಾಡಿಸಲು ಶುರುಮಾಡಿದ.ಗಿಳಿಯನ್ನು"ನಿನ್ನ ಹೆಸರೇನು ಜಾಣಮರಿ ?"ಎಂದ.ಅದಕ್ಕೆ ಗಿಳಿ "ಸಂಶಯವೇ ಬೇಡ"ಎಂದು ಉತ್ತರಿಸಿತು.ಗಿರಾಕಿ ನಿರಾಸೆಯಿಂದ "ನಿನಗೆ ಬೇರೇನೂ ಮಾತಾಡಲು ಬರುವುದಿಲ್ಲವೇ?"ಎಂದ.
ಅದಕ್ಕೆ ಗಿಳಿ "ಸಂಶಯವೇ ಬೇಡ "ಎಂದು ಉತ್ತರಿಸಿತು.ಗಿರಾಕಿಗೆ ತಾನು ಮೋಸ ಹೋದದ್ದು ತಿಳಿಯಿತು.ತಲೆಯ ಮೇಲೆ ಕೈ ಹೊತ್ತು ಕುಳಿತ.ಸಿಟ್ಟಿನಿಂದ ಗಿಳಿಗೆ"ನಿನ್ನಂತಹ ಸಾಮಾನ್ಯ ಗಿಳಿಯೊಂದಕ್ಕೆ ಸಾವಿರ ರೂಪಾಯಿ ತೆತ್ತ ನಾನು ನಿಜಕ್ಕೂ ಮೂರ್ಖನೆ ಸರಿ!"ಎಂದ.ತಟ್ಟನೆ ಗಿಳಿಯಿಂದ ಉತ್ತರ ಬಂತು,"ಸಂಶಯವೇ ಬೇಡ!!!"

(ಸಾಧಾರಿತ) 

Sunday, June 12, 2011

"ಪುದೀನಾ....ಪುದೀನಾ....!!"

ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ಮಾತು.ರಾಯಚೂರಿನ ಶಾಖೋತ್ಪನ್ನ ಕೇಂದ್ರದ ಶಕ್ತಿನಗರದ ಕಾಲೋನಿಯಲ್ಲಿ ನಮ್ಮ ವಾಸ.ಮಕ್ಕಳಿನ್ನೂ ಸಣ್ಣವರು.ರಜಾ ದಿನಗಳನ್ನು ಬಿಟ್ಟು ಮಾಮೂಲು ದಿನಗಳಲ್ಲಿ ಬೆಳಗಿನ ಎಂಟು ಗಂಟೆ ಎಂದರೆ ಮನೆಯಲ್ಲಿ ಹೆಂಗಸರಿಗೆ  ನಿಜಕ್ಕೂ ತಲೆ ಬಿಸಿಯಾಗುವ ಸಮಯ.ಮಕ್ಕಳನ್ನು ಶಾಲೆಗೆ ರೆಡಿ ಮಾಡಬೇಕು,ಬೆಳಗಿನ ನಾಸ್ತಾ ತಯಾರು ಮಾಡಬೇಕು.ನಂತರವೇ ಸ್ವಲ್ಪ ನಿರಾಳವಾಗಿ ಉಸಿರಾಡಬಹುದು!ನನ್ನ ಹೆಂಡತಿ ದೋಸೆಗೆ ಯಾವ ಚಟ್ನಿ ಹೊಂಚುವುದು ಎಂದು ಯೋಚಿಸುತ್ತಿದ್ದಾಗ ಅವಳಿಗೆ ಹೊರಗೆ 'ಪುದೀನಾ,ಪುದೀನಾ' ಎಂದು ಕೂಗುವ ಸದ್ದು ಕೇಳಿತು.ಆ ಸಮಯದಲ್ಲಿ ಸೊಪ್ಪು ,ತರಕಾರಿ ಮಾರುವವರು ಬರುತ್ತಿದುದು ಸಾಮಾನ್ಯವಾಗಿತ್ತು.ನನ್ನ ಹೆಂಡತಿ ಹೊರಗೆ ಹೋಗಿ ಸೈಕಲ್ ಹಿಂದೆ ಬುಟ್ಟಿಯೊಂದನ್ನು ಕಟ್ಟಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು 'ಇಲ್ಲಿ ಬಾರಪ್ಪಾ' ಎಂದು ಕರೆದು ಪುದೀನಾ ಕೊಳ್ಳಲು ಒಳಗೆ ಹೋಗಿ ಹಣ ತಂದು ನೋಡುತ್ತಾಳೆ.......ಅವನು ಕೈಯಲ್ಲಿ ದೊಡ್ಡದೊಂದು ಮೀನು ಹಿಡಿದುಕೊಂಡು .....'ಮೀನಾ .....ಮೀನಾ' ...ಎಂದು ಕೂಗಿದ.ಶುದ್ಧ ಶಾಖಾಹಾರಿಯಾದ ನನ್ನವಳು ನಿಜಕ್ಕೂ ಹೌಹಾರಿ ,ಏನು ಹೇಳುವುದೋ ತಿಳಿಯದೆ ಕಣ್ಣು ಕಣ್ಣು ಬಿಡುತ್ತಾ ನಿಂತಳು.ಮಕ್ಕಳನ್ನು ಶಾಲೆಗೆ  ಕಳಿಸುವ  ಗಡಿಬಿಡಿಯಲ್ಲಿದ್ದ  ನನ್ನವಳಿಗೆ,ಮೀನು ಮಾರುವವನು  'ಮೀನಾ ,ಮೀನಾ,'ಎಂದು ಕೂಗಿದ್ದು 'ಪುದೀನಾ ,ಪುದೀನಾ,' ಎಂದು ಕೇಳಿಸಿತ್ತು!!!