Saturday, September 10, 2011

"ಕವಿತೆಯ ಕಷ್ಟ"

ಕವಿ ಜಿ.ಎಸ್.ಶಿವರುದ್ರಪ್ಪನವರ 'ಅಗ್ನಿ ಪರ್ವ'ಕವನ ಸಂಕಲನದಲ್ಲಿ 'ಕವಿತೆಯ ಕಷ್ಟ' ಎನ್ನುವ ಕವಿತೆ ಇಷ್ಟವಾಯಿತು.ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.ಓದಿ ನಿಮ್ಮ ಅನಿಸಿಕೆ ತಿಳಿಸಿ;

ಕೆಲವು ಕವಿತೆಗಳು
ಕರೆದ  ಕೂಡಲೇ ಬಂದು ಬಿಡುತ್ತವೆ 
ಚಿಕ್ಕ  ಮಕ್ಕಳ ಹಾಗೆ !
ಇನ್ನು  ಕೆಲವಂತೂ ಹೊಸಿಲು ದಾಟಿ ಹೊರಕ್ಕೆ 
ಬರುವುದೇ  ಇಲ್ಲ -ಹೊಸ ಮದುವೆ ಹೆಣ್ಣಿನ ಹಾಗೆ,
ಅವಕ್ಕೆ  ಮೈ ತುಂಬ ನಾಚಿಕೆ.

ಕೆಲವು  ಕವಿತೆಗಳು ಮುಂಜಾನೆ ಗಿಡದ ಮೈತುಂಬ
ಸಮೃದ್ಧವಾಗಿ ಅರಳುವ ಹೂವು.
ಇನ್ನು ಕೆಲವು ಎಷ್ಟು ಪುಂಗಿಯೂದಿದರೂ
ಹುತ್ತ  ಬಿಟ್ಟು ಹೊರಕ್ಕೆ ಬಾರದ ಹಾವು.
ಮತ್ತೆ  ಕೆಲವು ಮಬ್ಬು ಕತ್ತಲಲ್ಲಿ ಮಲಗಿರುವ 
ಆಕಾರವಿರದ ನೋವು.

ಕೆಲವು ಕವಿತೆಗಳು ಕಾರ್ತೀಕದಲ್ಲಿ ಮನೆ ತುಂಬ
ಕಿಲ  ಕಿಲ ನಗುವ ಹಣತೆಗಳು.
ಕೆಲವಂತೂ  ಯಾವ ದುರ್ಬೀನಿಗೂ 
ಕಾಣದಂತೆ  ಅಡಗಿರುವ ಅಪರೂಪದ ನಕ್ಷತ್ರಗಳು.

ಕವಿತೆಯ  ಕಷ್ಟ -ಸುಲಭದ ಮಾತಲ್ಲ 
ಹೀಗೇ ಎಂದು ಹೇಳಲಾಗುವುದಿಲ್ಲ 
ಒಂದೊಂದು ಸಲ ಸಲೀಸಾಗಿ ನೆಲ ಬಿಟ್ಟು 
ಏರಿದ  ವಿಮಾನ 
ಅಷ್ಟೇ  ಸುಗಮವಾಗಿ ನಿಲ್ದಾಣಕ್ಕೆ ಇಳಿಯುವುದು 
ತೀರಾ  ಅನುಮಾನ!

14 comments:

 1. "ಕವಿತೆ ಬರೆಯುವದು ಕಷ್ಟವೆ, ಸ್ವಾಮಿ?
  ಬರೆಯದಿರುವದೆ ಕಷ್ಟ!"
  -ಏ.ಕೆ.ರಾಮಾನುಜನ್

  ReplyDelete
 2. ಸುನಾತ್ ಸರ್;'ಕವಿತೆ ಬರೆಯದಿರುವುದೇ ಕಷ್ಟ'ಅಂತ ರಾಮಾನುಜನ್ ಬರೆದಿರುವ ಕವಿತೆಯನ್ನು ಓದಿದ್ದೇನೆ.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 3. ರಾಷ್ಟ್ರ ಕವಿ ಜಿ.ಎಸ್.ಎಸ್ ಅವರ ಈ ಕವನ ನಿಮ್ಮಂತ ಪಟುಗಳ ಮತ್ತು ನಮ್ಮಂತಹ ವಟುಗಳ ದೈನಂದಿನ ಪ್ರಸವ ವೇದನೆಯ ಸ್ಪಷ್ಟ ಚಿತ್ರಣ. ಇದು ಸರ್ವಕಾಲೀನ ವಿರಹ ವೇದನೆ.

  ನೀವು ಆಯ್ದು ಕೊಡುತ್ತಿರುವ ಕವನಗಳು, ಕನ್ನಡಮ್ಮನ ಹೂತೋಟದಲ್ಲಿ ನೀವು ಹೆಕ್ಕಿ ಕೊಡುತ್ತಿರುವ ವಿವಿಧ ಪುಷ್ಪಗಳು. ನಿಮ್ಮ ಅಭಿರುಚಿ ಮತ್ತು ಆಯ್ಕೆಯಲ್ಲಿನ ವಿಭಿನ್ನತೆ ಪ್ರಶಂಸನೀಯ.

  ReplyDelete
 4. ಸುನಾತ್ ಸಾರ್ ಅವರು ಏ.ಕೆ. ರಾಮಾನುಜನ್ ಅವರ ಒಳ್ಳೆ ಕವನದ ಸಾಲುಗಳು ಹಾಕಿದ್ದಾರಲ್ವಾ ಸಾರ್. ಇವೆಲ್ಲ ನೋಡಿದ ಮೇಲೆ ನಾನು ಓದಬೇಕಾದ್ದು ಬೆಟ್ಟದಷ್ಟಿದೆ ಎನ್ನುವ ಅರಿವಾಯ್ತು. ನಾನು ಓದಲೇ ಬೇಕೆಂಬ ತೀರ್ಮಾನಕ್ಕೆ ಬಂದಿದ್ದೇನೆ.

  ಕವಿತೆಯ ಜಿ.ಎಸ್.ಎಸ್ ಮತ್ತು ಏ.ಕೆ. ರಾಮಾನುಜನ್ ಅವರ ಕವನಗಳ ಓದಿದೆ ಮೇಲೆ ನಾನೂ ಸುಮ್ಮನೆ ಇರುತ್ತೇನೆಯೇ? ಹೂವಿನ ಜತೆ ನಾರೂ ಸ್ವರ್ಗ ಕಾಣಲಿ ಇಗೊಳ್ಳಿ ನಂದೊಂದು ಇದೇ ಸಾಲಿನ ಕವನ : "ಕವಿತೆ ಎಂದರೆ ಗೆಳೆಯ!"

  http://badari-poems.blogspot.com/2010/08/blog-post_19.html

  ReplyDelete
 5. ಪದಗಳ ಸೃಷ್ಟಿಗೇ ಇಷ್ಟು ಕಷ್ಟ..ಬದರಿಯವರ ಮಾತಿನ೦ತೆ...(ಪ್ರಸವ ವೇದನೆ):) ಇನ್ನು ಜಗತ್ತಿನ ಸೃಷ್ಟಿಕರ್ತನಿಗೆ ಈ ವೈವಿಧ್ಯತೆಯನ್ನು ಸೃಷ್ಟಿಸುವಲ್ಲಿ ಎಷ್ಟು ಕಷ್ಟವಾಗುವುದೋ...!...

  ಅನ೦ತ್

  ReplyDelete
 6. ಬದರಿ;ಕವಿತೆಯ ಬಗ್ಗೆ ನೀವು ಬರೆದ ಕವಿತೆಯನ್ನೂ ಓದಿದೆ.ಅದ್ಭುತವಾಗಿದೆ.ಅದನ್ನು ಮುಂದೊಂದು ದಿನ ಹಾಕುತ್ತೇನೆ.ನಿಮ್ಮ ಪ್ರೀತಿ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 7. ಅನಂತ್ ಸರ್;ಸ್ವಾಭಾವಿಕವಾಗಿ ಆಗುವ ಕ್ರಿಯೆ ಕಷ್ಟವಾಗುವುದಿಲ್ಲ.ಕವಿತೆ ಕೆಲವೊಮ್ಮೆ ಸ್ವಾಭಾವಿಕವಾಗಿ ಬಂದಾಗ ಸಹಜ'ಪ್ರಸವ'.ಇಲ್ಲದಿದ್ದರೆ ಸಿಸೇರಿಯನ್ ಮಾಡಬೇಕಾಗುತ್ತದೆ.ಇನ್ನು ಶೃಷ್ಟಿಕರ್ತನ ಕೆಲಸ ಹೂವು ಅರಳುವಷ್ಟೇ ಸ್ವಾಭಾವಿಕವಾಗಿ ಆಗುವಂತಹುದು.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 8. ಕವಿತೆ ಚೆನ್ನಾಗಿದೆ, ಏ ಕೆ ರಾಮಾನುಜನ್ ಅವರ ಕವಿತೆಗಳನ್ನೂ ಅರ್ಥ ಮಾಡಿಕೊಳ್ಳುವುದೇ ಕಷ್ಟ..

  ನಮ್ಮ ರಾಷ್ಟ್ರಕವಿಯವರು ಕವನ, ಕವಿತೆಗಳನ್ನು ನೋಡುವ ರೀತಿಯೇ ಬೇರೆ... ಯಾವ ಪ್ರಕಾರ ಅಂತಲೂ ಗೊತ್ತಿಲ್ಲ. ನಿಮಗೆ ಧನ್ಯವಾದ.

  ReplyDelete
 9. ಈಶ್ವರ್ ಹೆಗ್ಡೆ;ನೀವು ಹೇಳುವುದು ಸರಿ.ನಮ್ಮಂತಹ ಸಾಮಾನ್ಯರಿಗೆ ಏ.ಕೆ.ರಾಮಾನುಜನ್ ಕೃತಿಗಳು ಒಂದೇ ಓದಿಗೆ ಅರ್ಥವಾಗೋಲ್ಲಾ.ಆದರೂ ಪ್ರಯತ್ನ ಪಟ್ಟರೆ ನವ್ಯದ ಬೇರೆಯದೇ ಸೊಗಸು ಅರಿವಾಗುತ್ತದೆ.ಜಿ.ಎಸ್.ಎಸ್. ಮತ್ತು ನಿಸಾರ ರಂತಹ ನವೋದಯದ ಕಾವ್ಯದ ಸೊಗಡೆ ಬೇರೆ. ಅವು ಇಂದಿಗೂ,ಎಂದಿಗೂ ಖುಷಿ ಕೊಡುವಂತಹ ಕಾವ್ಯಗಳು.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 10. ಡಾಕ್ಟ್ರೆ..

  ಒಂದು ಸುಂದರ ಕವಿತೆಯನ್ನು ಪರಿಚಯಿಸಿದ್ದೀರಿ..

  ತುಂಬಾ ಸತ್ಯವಾದ ಸಾಲುಗಳು...

  ನನ್ನ ಮೆಚ್ಚಿನ ಕವಿ ಜಿಎಸೆಸ್ ಅವರಿಗೂ ನಮನಗಳು..

  ReplyDelete
 11. ಗುರುಗಳೇ
  ಕವನಗಳ ಹುಟ್ಟು ಅಂದರೆ ಪ್ರಸವದಂತೆ ಎಂಬ ರಾಷ್ಟ್ರಕವಿಯ ಅನಿಸಿಕೆ ಸತ್ಯ.
  ಒಂದು ಒಳ್ಳೆಯ ಕವಿತೆಯನ್ನು ಪರಿಚಯಿಸಿದಕ್ಕೆ ಧನ್ಯವಾದಗಳು.

  ReplyDelete
 12. "ಆಕಾರವಿರದ ನೋವು" ಎಂಬೋ ಪದವೇ ಕವಿತೆಯ, ಕಾವ್ಯ ಮೀಮಾಂಸೆಯ ಜೀವಾಳ. ಕವಿತೆ ಎಂದರೆ ಏನು ಅಂತ ಯಾರಾದರೂ ಕೇಳಿದರೆ ಅದಕ್ಕೆ ಉತ್ತರ ಇದೇ ಆದೀತು. ಆದರೆ ಕವಿಯಾದವ ಆ "ಆಕಾರವಿರದ ನೋವನ್ನ" ಅನುಭವಿಸಿದಾಗ ನಿರಾಕಾರವೊಂದು ಹೊಳೆಯುತ್ತೆ ಅದುವೇ ಕವಿತೆಯಾಗುತ್ತೆ.
  ಆದರೆ ಆ "ಆಕಾರವಿರದ ನೋವು" ಕವಿಗೆ ಸಂತೋಷ ಕೊಡುವುದಿಲ್ಲ. ಆ ನೋವಿನಿಂದಲೇ ಕವಿ ಕಂಡುಕೊಳ್ಳುತ್ತಾನೆ. ಆದರೂ ಆ ನೋವು ಭಯಾನಕವಾದದ್ದು.....ನಿಜವಾದ ಕವಿ ಮಾತ್ರ ಅನುಭವಿಸಬಲ್ಲದ್ದು....

  ReplyDelete
 13. I am also writting poems in blog.Can you tell me sir which catagatory my poem belong to ?
  suragange.blogspot.com

  ReplyDelete