Sunday, September 4, 2011

"ಇಲ್ಲೊಂದು ಅದ್ಭುತ ಪದ್ಯ!!......ಮಿಸ್ಸಾಗ್ಲಿಲ್ಲ ಸಧ್ಯ!!"

ನವೋದಯ ಕನ್ನಡ ಸಾಹಿತ್ಯದ ಸೊಬಗನ್ನು ಹೆಚ್ಚಿಸಿದ ಕನ್ನಡ ಲೇಖಕರಲ್ಲಿ  ,ರಾಘವ ಎನ್ನುವ ಕಾವ್ಯ ನಾಮದಿಂದ ಬರೆಯುತ್ತಿದ್ದ ಪ್ರೊ.ಎಂ.ವಿ.ಸೀತಾ ರಾಮಯ್ಯ ನವರೂ ಒಬ್ಬರು.ಅವರ ನೂರ ಒಂದನೇ ಜನ್ಮದಿನದ ಅಂಗವಾಗಿ
ಇಂದಿನ 'ಕನ್ನಡ ಪ್ರಭ'ದ ಸಾಪ್ತಾಹಿಕ ಪುರವಣಿಯಲ್ಲಿ 'ನೀವು ಕಂಡರಿಯದ ಎಂ.ವಿ.ಸೀ.'ಎನ್ನುವ ಲೇಖನದಲ್ಲಿ ಕೊಟ್ಟಿರುವ ಅವರ ಕವನ ಒಂದನ್ನು ನೋಡಿ ದಂಗಾಗಿ ಹೋದೆ!ಅದರ ಸೊಗಡನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.ಕವನದ ಹೆಸರು 'ಕಲ್ಲಡಿಯ ಹುಲ್ಲು ಗರಿಕೆ'.ಓದಿ ತಿಳಿಸಿ ನಿಮ್ಮ ಅನಿಸಿಕೆ :




"ಕಲ್ಲಡಿಯ....ಹುಲ್ಲುಗರಿಕೆ"


ಕಲ್ಲಡಿಯ ಹುಲ್ಲು ಗರಿಕೆ 
ಅದಕಿಲ್ಲ ಹೆದರಿಕೆ 
ಮೇಲೆ ಕುಳಿತ ಚಪ್ಪಡಿಯ 
ಭಾರವಪ್ಪಳಿಸುತಿದೆಯೆಂದು.
ಕತ್ತಲೆಯ ಗೋರಿ ಗವಿ ಸಂದುಬಾಯಿಂದ 
ಹೊರ ಹಾಕಿಹುದು ತಲೆಯ -ತನ್ನ ಹೊಸಬೆಳೆಯ.
ಎಳೆಯ ಎಲೆಯ ತಲೆಯ. 
ಏನದರ ಧೈರ್ಯ ಶೌರ್ಯ!
ಅದ ಮೆಚ್ಚಿ 
ಬದುಕೆಂದು ಹರಸಿದನು ಸೂರ್ಯ. 
ತುಂಬಿದನು ಆಯುಷ್ಯ 
ಅಪ್ಪುಗೆಯ ಬಿಸುಪಿತ್ತು.
ಗಾಳಿ,ಬಾಳಿನ ಗೆಳೆಯ 
ಬಂದು ತಡವಿದನು ಮೈಯ 
ಹೊಸ ಉಸಿರನಿತ್ತು.
ಮೈಯೊಲೆದು ತಲೆ ಕೊಡಹಿ 
ನಿರ್ಭಯತೆಯಲಿ ನಲಿಯುತಿದೆ 
ಹುಲ್ಲು ಗರಿಕೆ.
ಅದಕಿಲ್ಲ ಹೆದರಿಕೆ.
ಅಹುದು ,
ತೇನವಿನಾ ತೃಣಮಪಿ ನ ಚಲತಿ.
ಆದರೆ .............,
ಬಿದ್ದಾಗಲೆದ್ದು ನಿಲ್ಲುವ ಯತ್ನವಿಲ್ಲದಿರಲು 
ಅವನೂ ಹಿಡಿಯ ಮೇಲೆತ್ತಿ.




(ಕವಿತೆಯ ಕೆಳಗೆ  ಕವಿ ಪು.ತಿ.ನ. ಬರೆದ ಅಡಿ ಟಿಪ್ಪಣಿ ಹೀಗಿದೆ;'ಕಲ್ಲಡಿಯ ಗರಿಕೆ'ಯನ್ನು ಈಗತಾನೇ ಓದಿ ಸಂತಸಗೊಂಡೆ.ಒಳ್ಳೇ ಚೆಂದದ ಅನ್ಯೋಕ್ತಿ ಇದು.what a fine poem!congratulations! )

23 comments:

  1. ಕೃಷ್ಣಮೂರ್ತಿ ಸರ್,
    ಇಂಥ ಅದ್ಭುತ ಕವನ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು !
    ವಾಹ್..ವಿ.ಸಿ ಅವರ ಕಾವ್ಯಶಕ್ತಿಗೆ ನಮನಗಳು

    ReplyDelete
  2. ಈ ಸುಂದರ ಕವನವನ್ನು ನಮ್ಮೊಡನೆ ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು.

    ReplyDelete
  3. ಅಪ್ಪ ಅಮ್ಮ;ವಿ.ಸೀ.ಯವರ ಕವನಗಳನ್ನು ಇಲ್ಲಿಯವರಗೆ ಓದಿರಲಿಲ್ಲ.ಈ ಕವಿತೆಯನ್ನು ಓದಿದ ಮೇಲೆ ಅವರ ಸಮಗ್ರ ಕೃತಿಗಳನ್ನೂ ಓದಬೇಕೆನಿಸಿದೆ.

    ReplyDelete
  4. ಸುನಾತ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  5. 'ಬಿದ್ದಾಗಲೆದ್ದು ನಿಲ್ಲುವ ಯತ್ನವಿಲ್ಲದಿರಲು' ಸ್ವಪ್ರಯತ್ನದ ಪ್ರಾಮುಖ್ಯತೆಯನ್ನು ಎಷ್ಟು ಚೆನ್ನಾಗಿ ತಿಳಿಸಿದ್ದಾರೆ! ವಿ.ಸೀ. ಅವರ ಈ ಸು೦ದರ, ಅರ್ಥಗರ್ಭಿತ ಕವನವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  6. ಪ್ರಭಾಮಣಿ ಮೇಡಂ;ಎಂತಹ ಅದ್ಭುತ ಕವಿಗಳು!ಎಂತಹ ವಿದ್ವತ್ತು!!ನಿಜಕ್ಕೂ ಕನ್ನಡ ಓದಲು ಬರುವ,ನಮ್ಮಂತಹ ಸಾಹಿತ್ಯಾಸಕ್ತರು ಅದೃಷ್ಟವಂತರು ಎನಿಸುತ್ತದೆ.ಓದಲು ಎಷ್ಟೆಲ್ಲಾ ಇದೆ!ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ತೆ.

    ReplyDelete
  7. ವಾರೆವ್ಹಾ ಒಳ್ಳೆ ಸಂಜೀವಿನಿ ಮೂಲಿಕೆಯನ್ನೇ ಅರೆದುಕೊಟ್ಟಿದ್ದೀರಿ.

    ಕವಿಯ ಅಂದಿನ ಸ್ಥಿತಿಯನ್ನೂ ಹೇಳಬಲ್ಲ ಕವನ. ಹುಲ್ಲೂ ತನಗೆ ಹೊರೆಸಿದ ಯಮಭಾರದ ನಡುವೆಯೂ ಜೀವಿಸಬಲ್ಲದು ಎನ್ನುವ ಛಲ, ನನ್ನಂತಹ ಪುಟ್ಟದಕ್ಕೂ ಸೋಲುವ ಪ್ರಭೃತಿಗಳಿಗೆ ಒಳ್ಳೆಯ ನೀತಿ ಪಾಠ!

    ವೀಸಿ ಮತ್ತು ಪುತಿನಾ ಪದೇ ಪದೇ ಓದಿಕೊಳ್ಳಲೇ ಬೇಕಾದ ಕವಿಗಳು. ಕವಿತೆಯಲ್ಲಿ ತಾಕತ್ತಿದ್ದರೆ ಅದು ನೂರ್ಕಾಲ ನಿಂತೇ ತೀರುತ್ತದೆ.

    ReplyDelete
  8. ನಲ್ಮೆಯ ಮಿತ್ರ ಬದರಿ;ನೀವು ಹೇಳುವ ಮಾತು ನೂರಕ್ಕೆ ನೂರು ಸತ್ಯ.ಕವಿತೆಯಲ್ಲಿ ತಾಕತ್ತಿದ್ದರೆ ಅದು ನೂರ್ಕಾಲ ನಿಂತೇ ನಿಲ್ಲುತ್ತದೆ.ನಿಮ್ಮ ಕವಿತೆಯಲ್ಲೂ ತಾಕತ್ತಿದೆ!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  9. ವಿ.ಸೀ ಯವರೂ ಎಂ ವಿ ಸೀ ಯವರೂ ಬೇರೆ ಬೇರೆಯವರೆಂದು ನನ್ನ ಅನಿಸಿಕೆ.
    ತಪ್ಪಿದ್ದರೆ ಕ್ಷಮೆಯಿರಲಿ.

    ReplyDelete
  10. ಉಷಾ ಅವರೆ;ನಿನ್ನೆಯ ಲೇಖನದಲ್ಲಿ ಪ್ರೊಫ್.ಎಂ.ವಿ.ಸಿ.ಯವರನ್ನೇ ವಿ.ಸಿ.ಎನ್ನುತ್ತಾರೆಂದು ಹೇಳಿದ್ದರು.ನನಗೂ ತಿಳಿಯದು.ತಿಳಿದವರನ್ನು ಕೇಳೋಣ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ತೆ.

    ReplyDelete
  11. ಡಾಕ್ಟ್ರೆ..

    ಒಂದು ಸುಂದರ ಕವಿತೆಯನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು..

    ReplyDelete
  12. sir,nijavaagiyu adbhutavaada kavana
    "aagadendu kulitavage, devaruu
    karunisalaara"garikeya aatmashaktiyannu
    eshtu saralavaagi sere hidididdaare.
    intaha kavigalannu padeda naave bhaagyavantaru.idannu namaguu
    talupisiddakkaagi nimage dhanyavaadagalu.

    ReplyDelete
  13. ವಿ.ಸಿ. ಮತ್ತು ಎಂ.ವಿ.ಸಿ. ಇಬ್ಬರೂ ಬೇರೆ ಬೇರೆ. ರಾಘವ ನಾಮಾ೦ಕಿತರಾದ ಎ೦.ವಿ.ಸೀ. ಯವರ ಬಗ್ಗೆ ನಿನ್ನೆ ಕ.ಪ್ರ.ದಲ್ಲಿ ಬ೦ದಿದ್ದ ಲೇಖನ-ಕವನ ನಾನೂ ಓದಿದ್ದೆ. ತು೦ಬ ಚೆನ್ನಾಗಿದೆ. ಹ೦ಚಿಕೊ೦ಡಿದ್ದಕ್ಕೆ ಧನ್ಯವಾದ. ಎ೦.ವಿ.ಸೀ.ಯವರು ಕನ್ನಡ ಪ್ರಾಧ್ಯಾಪಕರಾಗಿದ್ದವರು. ಅವರು ಮೂಲತಹ ಮೈಸೂರಿನವರು. ಇದೀಗ ಎ೦.ವಿ.ಸಿ. ಜನ್ಮ ಶತಮಾನೋತ್ಸವ ವರ್ಷ ಕಳೆದಿದೆ. ವಿ.ಸೀ ನಾಮಾ೦ಕಿತ ವಿ.ಸೀತಾರಾಮಯ್ಯನವರು ಇನ್ನೂ ಹಳಬರು. ಅವರು 1899 ರಲ್ಲಿ ಬೆ೦ಗಳೂರು ಜಿಲ್ಲೆಯ ಬೂದಿಗೆರೆಯಲ್ಲಿ ಜನಿಸಿದವರು. ಅವರು ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದವರು, ಕನ್ನಡ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟವರಲ್ಲಿ ಒಬ್ಬರು.

    ReplyDelete
  14. ಚಂದದ ಕವನ, ನಾವೂ ನೋಡಿದ್ದೇವೆ ಇಂತಹ ಗರಿಕೆಯನ್ನು. ವೀಸೀಯವರಿಗೆ ಪ್ರತೀಕವಾಗಿ ಕಂಡಿತು. ತುಂಬಾ ಧನ್ಯವಾದಗಳು.

    ReplyDelete
  15. ಪ್ರಕಾಶಣ್ಣ;ಕನ್ನಡ ಸಾಹಿತ್ಯದ ಸಮೃದ್ಧಿ ನಿಜಕ್ಕೂ ಖುಷಿ ಕೊಡುತ್ತದೆ.ಧನ್ಯವಾದಗಳು.

    ReplyDelete
  16. ಕಲರವ ಮೇಡಂ;ನೀವು ಹೇಳುವುದು ಸರಿ.ಆಗದೆಂದು ಕೈ ಕಟ್ಟಿ ಕುಳಿತವನಿಗೆ ದೇವರೂ ಸಹಾಯ ಮಾಡಲಾರ ಎಂಬುದನ್ನು ಕವಿ ತುಂಬಾ ಸೊಗಸಾಗಿ ಹೇಳಿದ್ದಾರೆ.ಧನ್ಯವಾದಗಳು.

    ReplyDelete
  17. ಚುಕ್ಕಿ ಚಿತ್ತಾರ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  18. ಪರಾಂಜಪೆ ಸರ್;ಮಾಹಿತಿಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  19. ಈಶ್ವರ್ ಭಟ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  20. ಮಿಸ್ಸಾಗಲಿಲ್ಲ ಸಧ್ಯ..ನಿಮ್ಮ ಕೃಪೆಯಿಂದ!

    ReplyDelete
  21. ಭಟ್ ಸರ್;ನೀವು ಓದುವುದು ಮಿಸ್ಸಾಗಲಿಲ್ಲ!ಸಧ್ಯ!

    ReplyDelete
  22. ಮ್ಲ್ಸ್ಸಾಗಲಿಲ್ಲ ಸಧ್ಯ ನಿಮ್ಮಿಂದ -ಎಂವಿಸಿ ಮತ್ತು ವಿಸೀ ಬಗ್ಗೆ ಯು ಮಾಹಿತಿ ದೊರೆಯಿತು ಕವನ ಸತ್ವಭಾರಿತವಾಗಿದೆ, ಕೊನೆಯ ಸಾಲು ಮಾರ್ಮಿಕವಾಗಿದೆ.

    ReplyDelete

Note: Only a member of this blog may post a comment.