Wednesday, May 19, 2010

'ಗೆಲ್ಲುವ ಕುದುರೆಯಾಗಲಿಲ್ಲ!'

ಮೇ ತಿಂಗಳು ಪರೀಕ್ಷೆಗಳ ಫಲಿತಾಂಶಗಳು ಹೊರಬೀಳುವಾಗ ಪತ್ರಿಕೆಗಳನ್ನು ನೋಡಲು ಭಯವಾಗುತ್ತದೆ .ಫಲಿತಾಂಶ ಬಂದನಂತರ ಆತ್ಮಹತ್ಯೆ ಮಾಡಿಕೊಂಡವರ   ಸುದ್ಧಿ ಪತ್ರಿಕೆಗಳಲ್ಲಿ ಬರುವುದು ಮಾಮೂಲಾಗಿಬಿಟ್ಟಿದೆ.ಎಳೆಯ ಜೀವಗಳುಮೊಳಕೆಯಲ್ಲೇ ಬಿದ್ದು ಹೋಗುತ್ತವಲ್ಲಾ ಎಂದು ಹೃದಯ ಮರುಗುತ್ತದೆ.ಪರೀಕ್ಷೆಪಾಸಾಗುವುದೇ ಜೀವನದ ಮುಖ್ಯ ಗುರಿಯೇ ಎಂಬ ಪ್ರಶ್ನೆ ಏಳುತ್ತದೆ.ಅಂಕಕ್ಕಾಗಿಯೇ ಶಂಖ ಹೊಡೆಯುವ ಶಿಕ್ಷಣ ಶಿಕ್ಷಣವೇ ಎಂಬ ಶಂಕೆ ಮೂಡುತ್ತದೆ.

                ' ಗೆಲ್ಲುವ ಕುದುರೆಯಾಗಲಿಲ್ಲ'
              ----------------------------   
ನಾನೂ ----ಓದಿದ್ದೆ!
ಎಲ್ಲರಂತೆ  ಓಡಿದ್ದೆ ,
ಈ ಹುಚ್ಚು ರೇಸಿನಲ್ಲಿ!
ಜೀವವನ್ನೇ ತೇದು ,
ಎಣ್ಣೆ  ಮಾಡಿ ,
ಕಣ್ಣಿಗೆ ಆ ಎಣ್ಣೆ ಬಿಟ್ಟು 
ಹಗಲೂ ರಾತ್ರಿ 
ಪುಸ್ತಕದಲ್ಲಿನ ಅಕ್ಷರವಾಗಿ 
ನಿದ್ದೆಗೆ  ಒದ್ದು 
ಒಳಗೇ ಕುದ್ದು 
ಎಲ್ಲಾ ಸಂತೋಷಕ್ಕೆ 
ಬೀಗ ಜಡಿದು 
ವರ್ಷವೆಲ್ಲಾ ಓದಿದ್ದನ್ನು 
ಮೂರು ತಾಸಿನಲ್ಲಿ 
ಹೊರ ತಂದು,
 ಕಷ್ಟ  ಪಟ್ಟರೂ ,
ನಿರೀಕ್ಷಿಸಿದ ಫಲಿತಾಂಶ 
ಬಿಸಿಲುಗುದುರೆ !
'ನಾ ಗೆಲ್ಲುವ 
ಕುದುರೆಯಾಗಲಿಲ್ಲವೆಂದು '
ನೆನೆ ನೆನೆದು ಕೊರಗಿ ,
ನಂದಿ ಹೋಯಿತು 
ಒಂದು 
ದೀ 
ಪ 
!



10 comments:

  1. ಕೃಷ್ಣಮೂರ್ತಿ ಸರ್,
    ಇಂದಿನ ಶಿಕ್ಷಣದ ಗುಣಮಟ್ಟದಂತೆ ಪೋಷಕರ ಆಶಯವೂ ಹೆಚ್ಚಾಗಿ ವಿಧ್ಯಾರ್ಥಿ ತನ್ನ ಇಚ್ಛೆಗೆ ವಿರುದ್ಧವಾಗಿ ಕಲಿಯಬೇಕಾಗುತ್ತದೆ. ಎಳೆಯ ಮನಸ್ಸಿನ ಮೇಲೆ ಹೊರೆ ಬಿದ್ದಾಗ ಸಹಜವಾಗಿ ಮಗು ಹಿಂಜರಿಯುತ್ತದೆ. ಇದೆ ಕಾರಣ ಇಂದಿನ ದುರಂತಗಳಿಗೆ ಕಾರಣ ಅಂತ ನನ್ನ ಅಭಿಪ್ರಾಯ!
    ಕವನ ಮನಸ್ಸು ಮುಟ್ಟುವಂತಿದೆ.

    ReplyDelete
  2. ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರವೀಣ್.ಇಂದಿನ ಶಿಕ್ಷಣ ಹಿಡಿಯುತ್ತಿರುವ ದಾರಿ ಅದರಿಂದ ಮಕ್ಕಳ ಎಳೆಯ ಮನಗಳ ಮೇಲೆ ಆಗುತ್ತಿರುವ ಪರಿಣಾಮ ಆತಂಕಕಾರಿ.

    ReplyDelete
  3. ಶಿಕ್ಷಣ ಶಿಕ್ಶೆಯಾಗಬಾರದು.ಅದು ಆನ೦ದದ ಅನುಭವವಾಗಬೇಕು.ಇದನ್ನು ಎಲ್ಲಾ ಪೋಷಕರು,ಪಾಲಕರು,ಅದ್ಯಾಪಕರೂ ಅರಿತಾಗ ನಿಜವಾದ ಕಲಿಕೆ ಮತ್ತು ಕಲಿಸುವಿಕೆ ಪ್ರಾರ೦ಭವಾದೀತು.ಸಕಾಲಿಕ ಕವನಕ್ಕೆ ಅಭಿನ೦ದನೆ ಮೂರ್ತಿಯವರಿಗೆ.

    ReplyDelete
  4. ಕೂಸು ಮುಲಿಯಳ ಅವರಿಗೆ;ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.ನೀವು ಹೇಳಿದ ಹಾಗೆ ಇಂದಿನ ಶಿಕ್ಷಣ ಪದ್ಧತಿ ನಿಜಕ್ಕೂ ಒಂದು ಶಿಕ್ಷೆಯೇ ಸರಿ.ಬರುತ್ತೀರಿ.ನಮಸ್ಕಾರ.

    ReplyDelete
  5. ಪೋಷಕರ ತೀವ್ರ ಒತ್ತಡ, ಪದೇ ಪದೇ ಬದಲಾಗುವ ಪರೀಕ್ಷಾಕ್ರಮ, ಪಠ್ಯ ವೈಖರಿ, ಕಲಿಕಾವಿಧಾನ, ಪೈಪೋಟಿ ಇತ್ಯಾದಿಗಳೆಲ್ಲವೂ ಮಕ್ಕಳ ಮನದಲ್ಲಿ ನೀರಿಕ್ಷಿತ ಫಲಿತಾ೦ಶ ಬರದಾಗ ಅತ್ಮಹತ್ಯೆಗೆ ಪ್ರಚೋದಿಸುವಲ್ಲಿ ಪುರಕವಾಗುತ್ತಿದೆ ಎನಿಸಿತು. ಮೊನ್ನೆ ಒ೦ದು ಮಗು ಹತ್ತನೆಯ ತರಗತಿಯಲ್ಲಿ ೯೪% ಅ೦ಕ ಪಡೆದು ಮುಖದಲ್ಲಿ ಗೆಲುವಿರಲಿಲ್ಲ ಕೇಳಿದರೆ ತನ್ನ ಪ್ರತಿಸ್ಫರ್ಧಿ ಗೆಳತಿಗಿ೦ತಾ ೧ ಅ೦ಕ ಕಡಿಮೆ ಬ೦ದಿತ್ತ೦ತೆ. ಇನ್ನೊ೦ದು ಮಗು ಫ಼ೇಲಾದರು ಗೆಲುವಿತ್ತು ಕೇಳಿದರ ಅದರ ಪ್ರತಿಸ್ಫರ್ಧಿ ಗೆಳೆಯನದು ಎರಡು ವಿಶಯ ಹೋಗಿದ್ದರೆ ಅದರದು ಒ೦ದೇ ಅ೦ತೇ! ಇ೦ಥ ಹತ್ತು ಹಲವು ಅಸ್ವಾಸ್ಥ್ಯಮನೋಭಾವ ಮಕ್ಕಳಲ್ಲಿ ಬೆಳೆಯುತ್ತಿರುವದು ಅಘಾತಕಾರಿ.

    ReplyDelete
  6. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸೀತಾರಾಮ್.ಅಂಕಗಳಿಗೇ ಒತ್ತು ಕೊಟ್ಟು ಮಕ್ಕಳಿಗೆ ಮತ್ತು ಪೋಷಕರಿಗೆ ಒಂದು ರೀತಿಯ ಸಮೂಹ ಸನ್ನಿ ಹಿಡಿಸಿರುವ
    ಈ ಶಿಕ್ಷಣ ವ್ಯವಸ್ಥೆ (ಅವ್ಯವಸ್ಥೆ ?)ಬದಲಾಗುವ ತನಕ ಇಂತಹ ಅವಗಢ ಗಳು
    ತಪ್ಪುವುದಿಲ್ಲವೆನಿಸುತ್ತದೆ.ನಮಸ್ಕಾರ.

    ReplyDelete
  7. ಮಾನವನೆದೆಯಲಿ ಆರದೇ ಉಳಿಯಲಿ ದೇವರು ಹಚ್ಚಿದ ದೀಪ,
    ಯಾರದೋ ತಾಪಕೆ ಒತ್ತಡಕೆ ಮಣಿದು ಮಗುವನು ಬಲಿಕೊದದಿರಲಿ ಭೂಪ !

    ಕವನ ಚೆನ್ನಾಗಿದೆ, ಧನ್ಯವಾದಗಳು

    ReplyDelete
  8. ವಿ.ಅರ.ಭಟ್ ಅವರಿಗೆ ನಮನಗಳು.ಬಾಳುವ ಹೂವುಗಳು ಮೊಗ್ಗಿನಲ್ಲಿಯೇ ಬಾಡದಿರಲಿ .ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  9. ಧನ್ಯವಾದ ಅಶೋಕ್.ಹೀಗೇ ಬಂದು ಪ್ರೋತ್ಸಾಹ ಪೂರಕ ಪ್ರತಿಕ್ರಿಯೆ ನೀಡುತ್ತಿರಿ.ನಮಸ್ಕಾರ.

    ReplyDelete

Note: Only a member of this blog may post a comment.