Saturday, May 8, 2010

ಮೆಚ್ಚಿದ ಕವನ ;'ಸರಳ ಮಾತು'-ಚಂದ್ರ ಶೇಖರ ಕಂಬಾರ (ಬೆಳ್ಳಿ ಮೀನು ಸಂಕಲನದಿಂದ)

ಹೆರಿಗೆ ವಾರ್ಡಿನ ಆ ಕೊನೆ ಹಾಸಿಗೆಯಲ್ಲಿ 
ಚೊಚ್ಚಲು ಬಾಣಂತಿ ,ಇನ್ನೂ ಬಾಲೆ 
ಅಲ್ಲಿ ಗೋಡೆಯ ಮೇಲೆ ಹೂ ಬಿಟ್ಟಿದೆ ಬಳ್ಳಿ ,
ಗೊತ್ತೇ ಆಗೋದಿಲ್ಲ ,ಅದು ಅರಳಿದ್ದು ಕ್ಯಾಲೆಂಡರಿನಲ್ಲಿ !

ಉಳಿದ ಬಾಣಂತಿಯರಿಗೆಷ್ಟೊಂದು ಕರುಳಿನ ಬಳ್ಳಿ!
ಕುಲು ಕುಲು ನಗುವ ,ಕೈ ತುಂಬಾ ಕಾಣಿಕೆ ತರುವ 
ಬಂಧು ಬಾಂಧವ ಮಂದಿ ,ಬಾಯ್ತುಂಬ ಬೂಂದಿ .

ಈಕೆಯ ಬಳಿಗ್ಯಾರೂ ಬರೋದಿಲ್ಲ,ನಗೋದಿಲ್ಲ ,ಕ್ಷೇಮ ಕೇಳೋದಿಲ್ಲ.
ಗಂಡನೋ ಮಿಂಡನೋ ಈ ಪಿಂಡದ ಕಾರಣಿಕನ
ಸುಳಿವಿಲ್ಲ ,ದಾಖಲೆಯಲ್ಲಿ ಅವನ ಹೆಸರೂ ಇಲ್ಲ.

ಇವಳ ಬಳಿ ಸುಳಿವವಳು ನರ್ಸೊಬ್ಬಳೇ,
ಅವಳ ತುಟಿಯಂಚಿಗೂ ಬಿಳಿಯ ನಗೆಯೇ .


ಬರುತ್ತಾರಲ್ಲ ,ಬಂಧು ಬಾಂಧವ ಮಂದಿ ,ಬಂದವರು 
ಬಂದು ,ಕೊಡುವಷ್ಟು ಕೊಟ್ಟು ನೋಡುವಷ್ಟು ನೋಡಿ 
ನೋಡಿದ ಮೇಲೆ ,ಎಲ್ಲರ ವಂಕಿ ದೃಷ್ಟಿ ಇವಳ ಕಡೆಗೇ,
ಅವರೆಲ್ಲ ಹಿಂಡು ಕಣ್ಣೊಳಗೆ ಪುಂಡು ಪೋಕರಿ ಕಥೆಯ 
ಹೆಣೆಯುವವರೇ;
ಇವಳ ತೋಳಿಗೆರಡು ಕಥೆ ,ಮುಖಕ್ಕೆ ಮೂರು ಕಥೆ 
ಕಣ್ಣಿನೊಳಗೆ ಇನ್ನೇನು ಕಥೆಗಳಿವೆಯೋ;


ಇದ್ಯಾವುದರ ಎಗ್ಗಿಲ್ಲದ ತಾಯಿ 
ಮೈ ಮರೆತ ಮಾಯಿ 
ಹಿಗ್ಗಿ ಹಸಿರಾಗಿ ,ಉಬ್ಬಿ ಮೊಗ್ಗಾಗಿ ,ಬಿರಿದು ಹೂವಾಗಿ 
ಬಗೆ ಬಗೆಯ ಧಗೆಯಿಂದ ಮಗುವನ್ನು ಕುಲುಕಿ 
ಪಲುಕುತ್ತ ಲಕಳಕಿಸುತ್ತಾಳೆ ಮಳೆಯೊಳಗಿನ ಮಲೆನಾಡಿನಂತೆ !

ಅಥವಾ ,
ನಾವು ಎಷ್ಟೆಂದರೂ ಕ್ಯಾಲೆಂಡರಿನಲ್ಲಿ ನಿಸರ್ಗವನ್ನಿಟ್ಟು 
ಮೊಳೆ ಹೊಡೆದು ಗೋಡೆಗೆ ನೇತು ಹಾಕುವ ಮಂದಿ ,
ಈ ಸರಳ ಮಾತು ನಮಗೆ ತಿಳಿದೀತು ಹೇಗೆ ?


(ನಾಳೆ 'ಅಮ್ಮಂದಿರ'ದಿನಾಚರಣೆ.ಜಗತ್ತಿನ ಎಲ್ಲಾ ತಾಯಂದಿರಿಗೂ ನನ್ನ,ಕೋಟಿ ಕೋಟಿ ನಮನಗಳು )

15 comments:

 1. ಚಂದ್ರಶೇಖರ ಕಂಬಾರರ ಲೇಖನಿ ಕತ್ತಿಯ ಅಲುಗಿನಷ್ಟೇ ಹರಿತ!
  "ನಾವು ಎಷ್ಟೆಂದರೂ ಕ್ಯಾಲೆಂಡರಿನಲ್ಲಿ ನಿಸರ್ಗವನ್ನಿಟ್ಟು
  ಮೊಳೆ ಹೊಡೆದು ಗೋಡೆಗೆ ನೇತು ಹಾಕುವ ಮಂದಿ ,
  ಈ ಸರಳ ಮಾತು ನಮಗೆ ತಿಳಿದೀತು ಹೇಗೆ"
  ಇಂತಹ ಅರ್ಥಗರ್ಭಿತ ಸಾಲುಗಳು ಕೇವಲ ಅವರಿಂದ ಮಾತ್ರ ಸಾಧ್ಯ! ಆ ರುಚಿಯನ್ನು ನಮಗೆ ಉಣ್ಣಿಸಿದ್ದಕ್ಕೆ ಧನ್ಯವಾದಗಳು.
  ನಾಳೆಯ ಮಾತೃದಿನಾಚರಣೆಗೆ ಶುಭಾಷಯಗಳು
  ಎಲ್ಲಾ ಅಮ್ಮಂದಿರ ಆಶಿರ್ವಾದ ನಮಗಿರಲಿ........

  ReplyDelete
 2. ಧನ್ಯವಾದಗಳು ಪ್ರವೀಣ್. ಕಂಬಾರ ರಂತಹ ಕವಿಗಳ ಕವಿತೆಗಳನ್ನು ಓದುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯವೇ ಸರಿ.

  ReplyDelete
 3. ಕೃಷ್ಣಮೂರ್ತಿಯವರೆ....

  ಬಹಳ ಸುಂದರ ಕವನ ಪರಿಚಯಿಸಿದ್ದೀರಿ..
  ನಿಮ್ಮ ಸಾಹಿತ್ಯದ ಅಭಿರುಚಿ ತುಂಬಾ ಚೆನ್ನಾಗಿದೆ..

  ಕಂಬಾರ್ ಅವರ ಬಗೆಗೆ ಏನೂ ಹೇಳಬೇಕಿಲ್ಲ..
  ಅವರ ಕೃತಿಗಳು.. ಹೇಳುತ್ತವೆ.. ಅಲ್ಲವಾ ?

  ಅಮ್ಮನ ದಿನದ ಬಗೆಗೆ ಸೂಕ್ತವಾದ ಕವನ.. !

  ಧನ್ಯವಾದಗಳು...

  ReplyDelete
 4. ಧನ್ಯವಾದಗಳು ಪ್ರಕಾಶ್;ನನ್ನ ಬ್ಲಾಗನ್ನು ಒಂದು ಸಾಹಿತ್ಯ ವೇದಿಕೆಯನ್ನಾಗಿ ಮಾಡಿ , ನಾನು ಓದಿ ಖುಷಿಪಟ್ಟ ನಮ್ಮ ಕನ್ನಡ ಕವಿಗಳ ಕವಿತೆಗಳನ್ನು
  ಬ್ಲಾಗಿನ ಓದುಗರೊಂದಿಗೆ ಹಂಚಿಕೊಳ್ಳ ಬೇಕೆಂಬುದು ನನ್ನ ಆಸೆ .ಬ್ಲಾಗಿಗೆ ಬರುತ್ತಿರಿ .ನಮಸ್ಕಾರ.

  ReplyDelete
 5. ಮಾನ್ಯರೇ, ಅಮ್ಮನ ಬಗ್ಗೆ ಬರೆಯದ ಕವಿಗಳೇ ಇಲ್ಲ. ಕವಿ ಶ್ರೀ ಬಿ.ಆರ್.ಲಕ್ಷ್ಮಣರಾಯರು ಬರೆದರು ' ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ....', ಬೇಂದ್ರೆಯವರು ಹೆಸರಲ್ಲೇ ಅಮ್ಮನನ್ನು ಅನ್ತಿಸಿಕೊಂಡರು! ಅಮ್ಮ ಎಲ್ಲರಿಗೂ ಮುಖ್ಯತಾನೇ ? ಲೋಕದಲ್ಲಿ ಆ ಪಾತ್ರ ಎಷ್ಟೇ ವರ್ಣಿಸಿದರೂ ಮುಗಿಯದ್ದು! ಕಂಬಾರರ ಕವನ ಚೆನ್ನಾಗಿಯೇ ಇರುತ್ತದೆ,ಅದನ್ನು ನೆನೆಸಿಕೊಂಡು ಎಲ್ಲಾ ಮಾತೆಯರಿಗೆ ನಮಿಸಿದಿರಲ್ಲ ನಿಮ್ಮ ನಮನ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸಹಭಾಗಿಗಳು,ಧನ್ಯವಾದಗಳು

  ReplyDelete
 6. ನಮಸ್ಕಾರ ಭಟ್ಟರೇ ;ನನ್ನ ಬ್ಲಾಗಿನಲ್ಲಿ ಬಹಳ ದಿನಗಳ ಮೇಲೆ ನಿಮ್ಮನ್ನು ನೋಡಿ ಸಂತೋಷವಾಯಿತು.ಧನ್ಯವಾದಗಳು ,ಬರುತ್ತಿರಿ.

  ReplyDelete
 7. ಸರ್,

  ನೀವೇ ಹೇಳಿದಂತೆ "ಅಮ್ಮ" ಎಂಬಾ ಶಬ್ದವೇ ಎಲ್ಲವನ್ನು ವಿವರಿಸುತ್ತದೆ...ಕಂಬಾರರ ಈ ಕವಿತೆ ಸಮಯೋಚಿತ...ನಿಮ್ಮ ಬ್ಲಾಗ್ ನೋಡಿ ಸಂತೋಷವಾಯಿತು....ಹೀಗೆ ಕನ್ನಡ ಸಾಹಿತ್ಯ ಲೋಕದ ಬೇರೆ ಬೇರೆ ಕವಿತೆಗಳನ್ನು ಪರಿಚಯಿಸುತ್ತಾ ಇರಿ...ಹಾರ್ದಿಕ ಧನ್ಯವಾದಗಳು.....

  ReplyDelete
 8. ಅಶೋಕ್ ಅವರಿಗೆ ನಮಸ್ಕಾರಗಳು ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ಬ್ಲಾಗಿಗೆ ಬರುತ್ತಿರಿ .ಧನ್ಯವಾದಗಳು.

  ReplyDelete
 9. Sir,

  Thanks for visiting my blog.

  As my mobile doesn't support Kannada fonts, I can't read your content. Within 2 days I will log into your blog again.

  - Badarinath Palavalli
  www.badari-poems.blogspot.com

  ReplyDelete
 10. ತಂದೆ ನ೦ಬಿಕೆಯಾದರೆ
  ತಾಯಿ ಸತ್ಯ ಎಂಬ ನುಡಿಯಂತೆ
  ಇದೆ ಕಂಬಾರರ ಕವನ
  ಸಮಾಜದ ಒರೆ ಕೊರೆಗಳನ್ನ
  ಚೆನ್ನಾಗಿ ತಿವಿದಿದ್ದಾರೆ ಕಂಬಾರರು

  ReplyDelete
 11. ಕಂಬಾರರ ಮಾತು ನಾಟಕಗಳಲ್ಲಿ ಸ್ವತಃ ಅಭಿವ್ಯಕ್ತ ಮಾಡುವ ಸೌಭಾಗ್ಯ ನನ್ನ ಕಾಲೇಜ್ ದಿನಗಳಲ್ಲಿ ಸಿಕ್ಕಿತ್ತು...ಇದು ಅವರ ಅಮ್ಮನ ಮೇಲಿನ ಮಮತೆಯ ಸಾರವನ್ನು ಹಿಂಡಿತೆಗೆದ ಸಾಲುಗಳಂತಿವೆ...ಧನ್ಯವಾದ ಕಂಬಾರರ ಈ ಮುಖದ ಪರಿಚಯ ಮಾದಿಸಿದ್ದಕ್ಕೆ ..

  ReplyDelete
 12. 'ತಂದೆ ನಂಬಿಕೆಯಾದರೆ! ತಾಯಿ ಸತ್ಯ!'ಸತ್ಯವಾದ ಮಾತು.ತಮ್ಮ ಅಭಿಪ್ರಾಯಗಳಿಗೆ ಧನ್ಯ ವಾದಗಳು ಅಶೋಕ್ .

  ReplyDelete
 13. ಅಜಾದ್ ಅವರಿಗೆ ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ಹೆರಿಗೆ ವಾರ್ಡುಗಳಲ್ಲಿ ಇಂತಹ ಮದುವೆಯಾಗದ ,ಯಾರೂ ಬಂಧುಗಳಿರದ ತಾಯಂದಿರ ದಾರುಣ ಅವಸ್ಥೆಯನ್ನು ನಾನು ಕಣ್ಣಾರೆ ಕಂಡಿರುವುದರಿಂದ ಕಂಬಾರರ ಅಭಿವ್ಯಕ್ತಿಯ ರೀತಿ ಇಷ್ಟವಾಯ್ತು. ಬರುತ್ತಿರಿ.ಧನ್ಯವಾದಗಳು.

  ReplyDelete
 14. ಕ೦ಬಾರರ ಸು೦ದರ ಕವನವೊ೦ದರ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ಅಮ್ಮನ ದಿನಾಚರಣೆಗೆ ತು೦ಬು ಪ್ರಸ್ತುತದ ರಚನೆ.

  ReplyDelete