Saturday, December 11, 2010

"ಲೈಫು ಇಷ್ಟೇನೇ !" (ವೈದ್ಯನೊಬ್ಬನ ಮರೆಯದ ನೆನಪುಗಳು -ಭಾಗ ೨ )

ಸುಮಾರು ಮೂವತ್ತು ವರ್ಷಗಳಷ್ಟು ಹಳೆಯದಾದ ,ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಹೋಗಿರುವ ಸಿರುಗುಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗಿನ ಮತ್ತೊಂದು ನೆನಪನ್ನು ನಿಮ್ಮೊಡನೆ ಹಂಚಿಕೊಳ್ಳಲೇ ಬೇಕು. ಒಂದು ಸಂಜೆ ಸುಮಾರು ಆರು ಗಂಟೆಯ ಸಮಯ.ಕಾರ್ಖಾನೆಯಿಂದ ಊರ ಹೊರಗೆ ಹೋಗುವ ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದೆ.ಸ್ವಲ್ಪ ದೂರ ಹೋದ ನಂತರ ರಸ್ತೆಯ ಪಕ್ಕ, ಸಕ್ಕರೆ ಮೂಟೆ ಹೊರುವ ಹಮಾಲಿಗಳ ಗುಡಿಸಲುಗಳು ಇದ್ದವು. ಅವರೆಲ್ಲ ರಸ್ತೆಯ ಪಕ್ಕ ಕುಳಿತು ಹರಟೆ ಹೊಡೆಯುವುದು ಮಾಮೂಲಾಗಿತ್ತು.ನಾನು ನನ್ನ ಪಾಡಿಗೆ ವಾಕಿಂಗ್ ಮುಂದುವರಿಸಿದೆ.ಇನ್ನಷ್ಟು ದೂರ ಹೋದಾಗ ,ರಾಮಯ್ಯ ಭೀಮಯ್ಯ ಎಂಬ ಸುಮಾರು ಇಪ್ಪತ್ತು  ವರುಷ ವಯಸ್ಸಿನ ನನಗೆ ಪರಿಚಯದ,ಕಟ್ಟು ಮಸ್ತಾದ ಸುಂದರ  ಶರೀರವಿದ್ದ ಹಮಾಲಿಗಳಿಬ್ಬರು ರಸ್ತೆಯ ಪಕ್ಕ ಕುಳಿತಿದ್ದರು.ಇಬ್ಬರ ಮುಂದೆಯೂ ನೊರೆ ಬರುತ್ತಿದ್ದ ಸಾರಾಯಿ ಬಾಟಲಿಗಳಿದ್ದವು.ನನ್ನನ್ನು ಕಂಡ ತಕ್ಷಣ ಇಬ್ಬರೂ ಬಾಟಲಿಗಳನ್ನು ತಮ್ಮ ಹಿಂದೆ ಬಚ್ಚಿಟ್ಟುಕೊಂಡು ,ನನ್ನನ್ನು ನೋಡಿ ಹುಳ್ಳಗೆ ನಕ್ಕು, ತಪ್ಪುಮಾಡಿದವರಂತೆ ತಲೆ ಕೆರೆದುಕೊಂಡರು."ಅಲ್ಲಾ ಕಣ್ರಪ್ಪಾ ,ಹಾಳೂ ಮೂಳೂ ಕುಡಿದು ಯಾಕ್ರೋ ಆರೋಗ್ಯಹಾಳುಮಾಡಿಕೊಳ್ಳುತ್ತೀರಿ"
ಎಂದೆ."ಮುಂಜಾನೆಯಿಂದ ಸಂಜಿ ಮಟ,ಮೂಟೆ ಹೊರುತ್ತೀವಲ್ರೀ ,ಮೈ ಕೈ ಬಾಳಾ ನೋಯ್ತವ್ರೀ,ಕುಡೀದಿದ್ರೆ ನಿದ್ರಿ ಬರಂಗಿಲ್ರೀ"ಎಂದುನೆವ ಹೇಳಿದರು.ನಾನು ಮಾತು ಮುಂದುವರಿಸಿ ಪ್ರಯೋಜನವಿಲ್ಲವೆಂದು ಅರಿತು ನನ್ನ ವಾಕಿಂಗ್ ಮುಂದುವರಿಸಿದೆ.ಮೂಟೆಗಳನ್ನುಹೊತ್ತು ,ಒಳ್ಳೇ 'ಬಾಡಿ ಬಿಲ್ಡರ್ಸ್'ತರಹ ಕಟ್ಟುಮಸ್ತಾಗಿ ಹುರಿಗೊಂಡ
ಪ್ರಕೃತಿದತ್ತವಾಗಿ ಬಂದ ಇಂತಹ ಸುಂದರ ಶರೀರಗಳನ್ನು, ಕುಡಿದು ಹಾಳುಮಾಡಿಕೊಳ್ಳುತ್ತಾರಲ್ಲಾ ಎಂದು ಬೇಸರವಾಯಿತು.ಸುಮಾರು ಒಂದು ಕಿಲೋಮೀಟರಿನಷ್ಟು ವಾಕಿಂಗ್ ಮುಂದುವರಿಸಿ ಹಿಂದಿರುಗಿದಾಗ ,ರಸ್ತೆಯ ಬದಿ ಜನಜಂಗುಳಿ ಸೇರಿತ್ತು.ಕೂಗಾಟ,ಚೀರಾಟ ,ಅಳು, ಮುಗಿಲು ಮುಟ್ಟಿತ್ತು.ಸ್ವಲ್ಪ ಸಮಯದ ಹಿಂದೆ ,
ನೊರೆ ಬರುತ್ತಿದ್ದ ಸಾರಾಯಿ ಬಾಟಲಿಗಳನ್ನು ಮುಂದಿಟ್ಟು ಕೂತಿದ್ದ ,ಸುಂದರ ಕಾಯಗಳ ತರುಣರಿಬ್ಬರೂ ನೆಲಕ್ಕೆ ಮೈ ಚೆಲ್ಲಿದ್ದರು.ಇಬ್ಬರ ಬಾಯಲ್ಲೂ ನೊರೆ ಬರುತ್ತಿತ್ತು.ಅವರ ಪಕ್ಕದಲ್ಲಿ ಬಾಟಲಿಗಳು ಅನಾಥರಂತೆ ಬಿದ್ದುಕೊಂಡಿದ್ದವು. ಸೂರ್ಯ ಅಸ್ತಮಿಸಿದ್ದ .ಭಾರವಾದ ಹೃದಯ ಹೊತ್ತು , ನಾನು ಮನೆಯಕಡೆ ನಡೆದೆ.

13 comments:

 1. This comment has been removed by the author.

  ReplyDelete
 2. ಎ೦ಥಾ ದುರ೦ತ, ಬಹಳ ಬೇಸರವೆನಿಸಿತು. ಇದಕ್ಕೆ ಪರಿಹಾರವಿಲ್ಲವೇ? ನಿಮ್ಮ ನೆನಪಿನ ಬುತ್ತಿಯಲ್ಲಿ ಇನ್ನೂ ಇ೦ಥಾ ಎಷ್ಟೋ ಘಟನೆಗಳಿರಬಹುದು. ನಮ್ಮೊಡನೆ ಹ೦ಚಿ ಕೊಳ್ಳುತ್ತಿರುವುದಕ್ಕಾಗಿ ಧನ್ಯವಾದಗಳು.

  ReplyDelete
 3. ಡಾ, ಓದಿ ವ್ಯಥೆಯಾಯಿತು....

  ReplyDelete
 4. ಕೃಷ್ಣಮೂರ್ತಿಯವರೆ...

  ಸರಾಯಿ ಕುಡಿತ ದೇಶಕ್ಕೆ ಒಳ್ಳೆಯದಲ್ಲ ಅಂತ ಗೊತ್ತಿದ್ದೂ...
  ಅದನ್ನು ನಿಷೇಧಿಸದೆ,,...
  ಅದರಲ್ಲೇ ಹಣ ಮಾಡುವ ಸರ್ಕಾರಗಳ ಧೋರಣೆಗೆ ಏನನ್ನ ಬೇಕು?

  ಮನಮಿಡಿಯುವ ಲೇಖನ...

  ReplyDelete
 5. ಈ ಸಂಗತಿ ಬಡವರ ಬಾಳಿನ ದುರಂತಕ್ಕೆ ಹಿಡಿದ ಕನ್ನಡಿಯಾಗಿದೆ.

  ReplyDelete
 6. ನಿಮ್ಮ ಲೇಖನ ಶ್ರಮಜೀವಿಗಳ ಬಾಳಿನ ಒಂದು ಹರಿದ ಪುಟದ ಒಂದು ಅನಾವರಣ. ಮನಕರಗಿತು.

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 7. ಆಸ್ಥೆಯಿಂದ ಓದಿ,ನಲ್ಮೆಯಿಂದ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.ಮಾರ್ಗ ಯಾವುದಾದರೂ ಸರಿ,ಹಣ ಮಾಡುವುದೊಂದೇ ಗುರಿಯಿರುವ ಜನ ಇರುವ ತನಕ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.

  ReplyDelete
 8. ತಮ್ಮ ಸಲಹೆ ಪಾಲಿಸಿದ್ದಾರೆ ಅವರಿಬ್ಬರೂ ಬದುಕಿರುತ್ತಿದ್ದರೆನೋ...
  ತಮ್ಮ ಅನುಭವಗಳ ಹೂರಣ ನಿಜಕ್ಕೂ ಮನ ಮಿದ್ಸುತ್ತವೆ.

  ReplyDelete