Saturday, August 28, 2010

'ಒಲುಮೆಯ ಹೂವೇ!ನೀ ಹೋದೆಎಲ್ಲಿಗೆ?'

ಕೆಲವು ಹಾಡುಗಳು ಹೇಗೋ ಕೆಲವೊಂದು ನೆನಪು ಗಳಿಗೆ ತಳುಕು ಹಾಕಿ ಕೊಂಡು ಬಿಟ್ಟಿರುತ್ತವೆ.ಆ ಹಾಡನ್ನು ನೆನಸಿಕೊಂಡರೆ ಒಬ್ಬ ವ್ಯಕ್ತಿಯ ನೆನಪೋ ಅಥವಾ ,ಒಂದು ಪ್ರಸಂಗದ ನೆನಪೋ ಮರುಕಳಿಸಿಬಿಡುತ್ತದೆ.ನನ್ನ ನೆನಪಿನಲ್ಲಿ ಉಳಿದು ಹೋದಂತಹ ಇಂತಹುದೇ ಒಂದು ಹಾಡು ,ಕನ್ನಡದ ಮಹಾನ್ ಗಾಯಕ ಡಾ.ಪಿ.ಬಿ.ಶ್ರೀನಿವಾಸರು ಅರವತ್ತರ ದಶಕದ ಮೊದಲ ಭಾಗದಲ್ಲಿ 'ಪುನರ್ಜನ್ಮ 'ಎನ್ನುವ ಚಿತ್ರಕ್ಕೆ ಹಾಡಿದ 'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೆ' ಎನ್ನುವ ಹಾಡು.ಮೊದಲಿನಿಂದಲೂ ಈ ಹಾಡು ನನಗೆ ಅತ್ಯಂತ ಪ್ರಿಯವಾದ ಹಾಡು.ಅದೆಷ್ಟು ಸಲ ಈ ಹಾಡನ್ನು ಹಾಡಿದ್ದೇನೋ ತಿಳಿಯದು.ಈಹಾಡುನೆನಪಾದಾಗಲೆಲ್ಲಾ ನನ್ನ ಬಹಳ ಆತ್ಮೀಯ ಸ್ನೇಹಿತರೊಬ್ಬರು ನೆನಪಾಗಿ ಬಿಡುತ್ತಾರೆ.ಅವರ ಪರಿಚಯವಾದದ್ದೂ ಒಂದು ವಿಚಿತ್ರ ಸನ್ನಿವೇಶದ ಮೂಲಕ.
ಈಗ ಸುಮಾರು ಹನ್ನೆರಡು ವರ್ಷಗಳ ಹಿಂದೆ ನಡೆದ ಘಟನೆ.ನಾನು ಇ .ಎನ್.ಟಿ.ತಜ್ಞ ವೈದ್ಯಕೀಯ ಶಿಕ್ಷಣ ಮುಗಿಸಿದ ಹೊಸತು.ನನ್ನ ಬಳಿಗೆ ಕಿವಿಯ ಸೋರಿಕೆಯಿಂದ ಎಡ ಕಿವಿ ಕೇಳದ, ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಬರುತ್ತಿದ್ದ.ಒಂದು ದಿನ ಬೆಳಿಗ್ಗೆ ಆ ಹುಡುಗ  ತನ್ನ ಬಲಗಿವಿ ವಿಪರೀತ ನೋವೆಂದೂ,ಈಗ ಅದೂ ಕೆಳುತ್ತಿಲ್ಲವೆಂದೂ ,ಕೈಯಿಂದ ಬಲಗಿವಿ ಮುಚ್ಚಿಕೊಂಡು ಅಳುತ್ತಾ ಬಂದ.ಅವನ ತಂದೆಯೂ ಅವನ ಜೊತೆಗೇ ಬಂದಿದ್ದರು.ಅವನ ಬಲಗಿವಿ ಪರೀಕ್ಷೆ ಮಾಡಿದಾಗ ಕಿವಿಯ ಪರದೆಯ ಹರಿದ ಭಾಗದಿಂದ ರಕ್ತ ಬರುತ್ತಿತ್ತು.ಕಿವಿಗೆ ಬಲವಾದ ಪೆಟ್ಟು ಬಿದ್ದದ್ದು ಖಾತ್ರಿ ಯಾಯಿತು.ಯಾರೋ ಜೋರಾಗಿ ಕಪಾಳಕ್ಕೆ ಹೊಡೆದಿದ್ದರು.ಆ ಭಾಗವೆಲ್ಲಾ ಹೊಡೆತದಿಂದ ಕೆಂಪಾಗಿತ್ತು.ನನಗೆ ಅವನ ತಂದೆಯ ಮೇಲೆಯೇ ಅನುಮಾನವಿತ್ತು.
ಬಹಳ ಬಲವಂತ ಮಾಡಿದ ಮೇಲೆ ಅವನ ತಂದೆ ಆ ಹುಡುಗನ ಮಾಸ್ತರರೊಬ್ಬರು ಕಪಾಳಕ್ಕೆ ಹೊಡೆದರೆಂದೂ,ಅದಕ್ಕೇ
ಹೀಗಾಯಿತೆಂದೂ ಹೇಳಿದ.ಮೊದಲೇ ಹುಡುಗನಿಗೆ ಒಂದು ಕಿವಿ ಕೇಳುತ್ತಿರಲಿಲ್ಲ.ಈಗ ಕಪಾಳಕ್ಕೆ ಹೊಡೆದು ಇನ್ನೊಂದು ಕಿವಿಯೂ ಕೇಳದ ಹಾಗೆ ಮಾಡಿ ಬಿಟ್ಟರಲ್ಲಾ ಎಂದು ನನಗೆ ಆ ಮಾಸ್ತರರ ಮೇಲೆ ವಿಪರೀತ ಸಿಟ್ಟು ಬಂತು.ಆ ಮಾಸ್ತರರನ್ನು ನನ್ನ ಬಳಿಗೆ ಕಳಿಸುವಂತೆ ಹೇಳಿದೆ.ಅದಕ್ಕೆ ಅವನ ತಂದೆ 'ಬಿಡಿ ಸಾರ್.ಇದನ್ನ ದೊಡ್ಡ ವಿಷಯ ಮಾಡಬೇಡಿ.ಆ ಮಾಸ್ತರರು ತುಂಬಾ ಒಳ್ಳೆಯವರು.ಇವನೇ ಏನೋ ಮಾಡಬಾರದ ತೀಟೆ ಮಾಡಿರುತ್ತಾನೆ.ಅದಕ್ಕೇ ಅವರು ಏಟು ಕೊಟ್ಟಿದ್ದಾರೆ,ನೀವೇ ಏನಾರ ಔಷಧಿ ಕೊಟ್ಟು ಸರಿ ಮಾಡಿಬಿಡಿ 'ಎಂದ.ನಾನೂ ಸುಮ್ಮನಾದೆ.
ಈ ಘಟನೆ ನಡೆದ ಎರಡು ದಿನಕ್ಕೆ ಒಬ್ಬ ವ್ಯಕ್ತಿ ನನ್ನ ರೂಮಿನ ಹೊರಗೆ ನಿಂತು 'ಒಳಗೆ ಬರಬಹುದಾ ಸರ್'ಎಂದರು . 'ಬನ್ನಿ 'ಎಂದೆ.ಒಳಗೆ ಬಂದು ಕೂತರು.ಮುಖ ಆತಂಕದಿಂದ ಬೆವರುತ್ತಿತ್ತು.ದನಿ ನಡುಗುತ್ತಿತ್ತು.ತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಂಡು 'ಬಿ.ಪಿ.ಚೆಕ್ ಮಾಡಿಸ್ಕೋ ಬೇಕಾಗಿತ್ತು ಸರ್ 'ಎಂದರು.ಬಿ.ಪಿ.ಸುಮಾರಾಗಿಯೇ ಜಾಸ್ತಿ ಇತ್ತು.'ಸಾರ್ ನಾನು ಇಲ್ಲಿ ಮಿಡ್ಲ್ ಸ್ಕೂಲ್ ಮೇಷ್ಟ್ರು.ನನ್ನಿಂದ ಬಹಳ ದೊಡ್ಡ ತಪ್ಪಾಯಿತು.ಕ್ಷಮಿಸಿ ಬಿಡಿ ಸರ್ 'ಎಂದರು.ನಾನು 'ಯಾಕ್ರೀ ಮೇಷ್ಟ್ರೇ ಏನಾಯ್ತು ?'ಎಂದೆ.'ಆ ಹುಡುಗನಿಗೆ ಕಪಾಳಕ್ಕೆ ಹೊಡೆದದ್ದು ನಾನೇ ಸರ್ 'ಎಂದರು.ನಾನು ಸ್ವಲ್ಪ ಬಿಗುವಾದೆ.'ಅಲ್ಲಾ ಮೇಷ್ಟ್ರೇ  ಹುಡುಗರು ತಪ್ಪು ಮಾಡಿದರೆ ತಿದ್ದ ಬೇಕು ಸರಿ.ಆದರೆ ಈ ರೀತಿ ಕಿವಿಯ ತಮಟೆ ಹರಿದು ಹೋಗುವ ಹಾಗೆ ಹೊಡೆಯಬೇಕೆ?ಅದು ತಪ್ಪಲ್ಲವೇ ? ಅವನ ಜೀವಕ್ಕೆ ಅಪಾಯ ವಾಗಿದ್ದರೆ ಏನು ಗತಿ?ಅವನಿಗೆ ಕೇಳುತ್ತಿದ್ದ ಒಂದೇ ಕಿವಿ ಕೂಡ ನೀವು ಹೊಡೆದ ದ್ದರಿಂದ ಹಾಳಾಯಿತಲ್ಲ!'ಎಂದೆ.'ಆ ಹುಡುಗ ಯಾವುದೋ ಹುಡುಗಿಯ ಬಗ್ಗೆ ಬಹಳ ಕೆಟ್ಟ ಪದ ಉಪಯೋಗಿಸಿದ ಸಾರ್.ಮೊದಲೇ ಬಿ.ಪಿ. ಇದೆ.ಸಿಟ್ಟು ಬಂದು ಕಪಾಳಕ್ಕೆ ಒಂದೇಟು ಬಿಟ್ಟೆ .ಈ ರೀತಿಯೆಲ್ಲಾ ಆಗುತ್ತೆ ಅಂತ ಗೊತ್ತಿರಲಿಲ್ಲ .ಇನ್ನು ಮೇಲೆ ಹುಡುಗರ ಮೇಲೆ ಕೈ ಮಾಡೋಲ್ಲ  .ಜೀವನದಲ್ಲಿ ಒಂದು ದೊಡ್ಡ ಪಾಠ ಕಲಿತೆ 'ಎಂದು ಗಧ್ಗದ ಕಂಠದಲ್ಲಿ ಹೇಳಿ ಹೊರಟು ಹೋದರು.
ಅದಾದ ನಂತರ ನಾನು  ದಿನಾ ಬೆಳಗಿನ ಜಾವ ಸ್ಕೂಲಿನ ಗ್ರೌಂಡ್ ಗೆ ವ್ಯಾಯಾಮ ಮತ್ತು ಜಾಗಿಂಗ್ ಮಾಡುವುದಕ್ಕೆ ಹೋಗುತ್ತಿದ್ದಾಗ ಅವರೂ ಸಿಗುತ್ತಿದ್ದರು.ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ.ಸ್ವಲ್ಪ ಮುಂಗೊಪವಿತ್ತು.ಯಾರಿಗಾದರೂ ಸಹಾಯಮಾಡಬೇಕಾದರೆ 'ನಾ ಮುಂದೆ' ಎನ್ನುವಂತಹವರು.ಪರಿಚಯ ಸ್ನೇಹಕ್ಕೆ ತಿರುಗಿತು.ಕೆಲವೇ ದಿನಗಳಲ್ಲಿ ಬಹಳ 
ಆತ್ಮೀಯರಾದರು.ವ್ಯಾಯಾಮವೆಲ್ಲಾ ಮುಗಿಸಿ,ಬೆವರು ಹರಿಸುತ್ತಾ ,ತಂಗಾಳಿಗೆ ಮೈ ಒಡ್ಡಿ ಕುಳಿತಾಗ ನಾನು ನನಗೆ ಪ್ರಿಯವಾದ 
'ಒಲುಮೆಯ ಹೂವೇ'ಹಾಡನ್ನು ಹೇಳುತ್ತಿದ್ದೆ.ಮೇಷ್ಟ್ರಿಗೆ ಕೂಡ ಈ ಹಾಡು ಬಹಳ ಇಷ್ಟವಾಗಿತ್ತು .ನಾನು ಹಾಡುವಾಗ ಬಹಳ ಖುಷಿ ಪಡುತ್ತಿದ್ದರು.ಹಾಡು ಕೇಳುತ್ತಾ ಎಷ್ಟೋ ಸಲ ಅವರ ಕಣ್ಣಿನಲ್ಲಿ ನೀರು ಇರುತ್ತಿತ್ತು.2000 april ನಲ್ಲಿ ಅವರಿಗೆ ಎಲೆಕ್ಷನ್ ಡ್ಯೂಟಿಹಾಕಿದ್ದರು.'ಸಾರ್ ನನಗೆ ಎಲೆಕ್ಷನ್ ಡ್ಯೂಟಿ ಗೆ ಹೋಗೋಕೆ ಆಗೋಲ್ಲಾ ,ಒಂದು ಮೆಡಿಕಲ್  ಸರ್ಟಿಫಿಕೇಟ್ ಕೊಡಿ'ಎಂದರು.'ಯಾಕೇ ಮೇಷ್ಟ್ರೇ ?ಏನು ತೊಂದರೆ?'ಎಂದೆ.ಎಲೆಕ್ಷನ್ ಡ್ಯೂಟಿ ತಪ್ಪಿಸೋಕೆ ಎಲ್ಲರೂ ಮಾಡುವ ಸಾಮಾನ್ಯ ಉಪಾಯ ಇದು.'ನಡೆಯೋವಾಗ ಯಾಕೋ ಬ್ಯಾಲೆನ್ಸ್ ತಪ್ಪುತ್ತೆ ಸರ್' ಎಂದರು.ಎಲ್ಲಾ ಪರೀಕ್ಷೆ ಮಾಡಿದಾಗ ನಿಜಕ್ಕೂ ತೊಂದರೆ ಇದೆ ಎನಿಸಿ, C.T.SCAN ಮಾಡಿಸಿಕೊಂಡು ಬರಲು ಬೆಳಗಾವಿಯ ಕೆ.ಎಲ್.ಇ .ಆಸ್ಪತ್ರೆಗೆ ಕಳಿಸಿದೆ.ಅಲ್ಲಿ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು.ಅದು ಶ್ವಾಶಕೋಶಕ್ಕೂ,ಮೆದುಳಿಗೂ ಹರಡಿತ್ತು.ಅವರಿಗೆ ಸುಮಾರು ಹದಿನೆಂಟು ವರ್ಷಗಳಿಂದ ಥೈರಾಯ್ಡ್ ಗ್ರಂಥಿ ಯಲ್ಲಿ ಒಂದು ಸಣ್ಣ ಗಡ್ದೆ ಇತ್ತಂತೆ.ನನಗೂ ಕೂಡ ಮೊದಲೇ ತಿಳಿಸಿರಲಿಲ್ಲ .
ಅವರನ್ನು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಸೇರಿಸಿದೆವು.ನನಗೆ ಅಷ್ಟರಲ್ಲಿ ರಾಯಚೂರಿನ ಶಕ್ತಿನಗರಕ್ಕೆ ವರ್ಗವಾಗಿತ್ತು.ಅವರನ್ನು ನೋಡಲು ಕಿದ್ವಾಯಿ ಆಸ್ಪತ್ರೆಗೆ ಹೋದೆ.ಸ್ಪೆಷಲ್ ವಾರ್ಡಿನ ರೂಮೊಂದರಲ್ಲಿ ಒಬ್ಬರೇ ಇದ್ದರು.Brain surgery ಮಾಡಿ ತಲೆಗೆಲ್ಲಾ ಬ್ಯಾಂಡೇಜ್ ಸುತ್ತಿದ್ದರು.ನನ್ನನ್ನು ನೋಡಿ ಮೇಷ್ಟ್ರಿಗೆ ತುಂಬಾ ಖುಷಿಯಾಯಿತು.ಆನದದಿಂದ ತಬ್ಬಿಕೊಂಡರು.'ಸರ್ ಆಪರೇಶನ್ ಆಯ್ತು .ನೀವೂ ನೋಡೋಕೆ ಬಂದ್ರಿ.ಇನ್ನು ಎಲ್ಲಾ ಸರಿ ಹೋಗುತ್ತೆ ಸರ್.ನಿಮ್ಮನ್ನು ನೋಡೋಕೆ ಮುಂದಿನ ಸಲ ಶಕ್ತಿನಗರಕ್ಕೆ ನಾನೇ ಬರುತ್ತೇನೆ'ಎಂದರು. ಆ ಆಯಾಸದಲ್ಲೂ ಸುಮಾರು ಒಂದು ಗಂಟೆ ಹರಟಿದರು.'ಹೆಚ್ಚು ಮಾತನಾಡಬೇಡಿ ಮೇಷ್ಟ್ರೇ ,ಆಯಾಸ ಆಗುತ್ತೆ 'ಎಂದರೂ ಕೇಳಲಿಲ್ಲ.ಕೊನೆಗೆ ನಾನು ಹೊರಟು ನಿಂತೆ.
'ಸಾರ್ ,ನಾನಿನ್ನು ಬದುಕುತ್ತೀನೋ ಇಲ್ಲವೋ,ನನಗೋಸ್ಕರ ಒಂದು  ಸಲ  ಆ ಹಾಡು ಹಾಡಿ ಬಿಡಿ ಸರ್ ' ಎಂದರು!
ಕ್ಯಾನ್ಸರ್ ವಾರ್ಡಿನಲ್ಲಿ ಹಾಡೇ!!?ನಾನು ನನ್ನ ಕನಸು ಮನಸಿನಲ್ಲೂ ಇಂತಹ ಸಂದರ್ಭ ಊಹಿಸಿಕೊಂಡಿರಲಿಲ್ಲ.'ಬಿಸಿ ತುಪ್ಪ ಉಗುಳುವಂತಿಲ್ಲ,ನುಂಗುವಂತಿಲ್ಲ' ಎನ್ನುವಂತಾಗಿತ್ತು ನನ್ನ ಪರಿಸ್ಥಿತಿ !ಅವರನ್ನು ಆ ಸ್ಥಿತಿ ಯಲ್ಲಿ ನೋಡಿ ಮನಸ್ಸು ಬಹಳ ನೊಂದಿತ್ತು.ಹಾಡುವ ಮೂಡ್ ಇರಲಿಲ್ಲ.ಅವರ ಮನಸ್ಸನ್ನು ನೋಯಿಸದಿರಲು  ಅನಿವಾರ್ಯವಾಗಿ ಹಾಡಲೇ ಬೇಕಾಯಿತು.
ನನ್ನೆಲ್ಲಾ ನೋವನ್ನೂ ಹೊರ ಹಾಕುವಂತೆ ,ಜೀವನದಲ್ಲಿ ಅದೇ ನನ್ನ ಕಡೆಯ ಹಾಡು ಎಂಬಂತೆ ನನ್ನನ್ನೇ ಮರೆತು ಹಾಡಿದೆ!
'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೇ!ಉಳಿಸಿ ಕಣ್ಣ ನೀರ ,ಈ ನನ್ನ ಬಾಳಿಗೇ'.ಹಾಡು ಮುಗಿಯುವ ವೇಳೆಗೆ ಇಬ್ಬರ ಕಣ್ಣಲ್ಲೂ 
ಧಾರಾಕಾರ ನೀರು!ಭಾರ ಹೃದಯದಿಂದ ಅವರನ್ನು ಬೀಳ್ಕೊಟ್ಟೆ.ಇದಾದ ಕೆಲವೇ ತಿಂಗಳಲ್ಲಿ  ಮೇಷ್ಟ್ರು ತನ್ನ ಇಹ ಲೋಕ ಯಾತ್ರೆ ಮುಗಿಸಿದ್ದರು.ಕಾಣದ ಲೋಕಕ್ಕೆ ಪಯಣ ಬೆಳೆಸಿದ ಆ ನನ್ನ ಆತ್ಮೀಯ ಸ್ನೇಹಿತನಿಗೆ ಈ ನನ್ನ ಮೆಚ್ಚಿನ ಗೀತೆಯ ಮೂಲಕ 
ನಮನಗಳನ್ನು ಸಲ್ಲಿಸುತ್ತಿದ್ದೇನೆ.'ಒಲುಮೆಯ ಹೂವೇ!ನೀ ಹೋದೆ ಎಲ್ಲಿಗೇ !ಉಳಿಸಿ ಕಣ್ಣ ನೀರ ಈ ನನ್ನ ಬಾಳಿಗೇ '.
  

30 comments:

 1. ಮೂರ್ತಿ ಸರ್,
  ಎನು ಬರೆಯೋಕೂ ತಿಳಿಯುತ್ತಿಲ್ಲ...ಮನಸ್ಸು ಭಾರವಾಯ್ತು ಸರ್ ಓದಿ.. ಎಷ್ಟು ಚೆನ್ನಾಗಿ ಬರೆದಿದ್ದೀರಿ ಸರ್...... ನಿಮ್ಮ ಇಂಥಹ ಎಷ್ಟೊ ಘಟನೆಗಳು ನಿಮ್ಮ ಕೆಲಸದ ಸಮಯದಲ್ಲಿ ನಡೆದಿರತ್ತೆ............ ಇದನ್ನು ಕಣ್ಣುಕಟ್ಟುವ ಹಾಗೆ ಬರೆದಿದ್ದೀರಿ ಸರ್...... ನಿಮ್ಮ ಗೆಳೆಯನ ಆತ್ಮಕ್ಕೆ ಶಾಂತಿ ಸಿಗಲಿ ಎಂದಷ್ಟೆ ಹಾರೈಸಬಲ್ಲೆ........ ಮತ್ತೆನು ಬರೆಯಬೇಕೊ ತಿಳಿಯುತ್ತಿಲ್ಲ ಸರ್.....

  ReplyDelete
 2. ಸ್ವಾಮೀ, ನಿಜಕ್ಕೂ ಮನಸ್ಸು ಭಾರವಾಗಿ ವಿಷಾದದ ಛಾಯೆ ಆವರಿಸಿತು.ಹೆಚ್ಚಿಗೆ ಬರೆಯಲಾರೆ.

  ReplyDelete
 3. ಮೇಷ್ಟ್ರನ್ನು ನಿಮ್ಮಷ್ಟು ಹತ್ತಿರದಿಂದ ಬಲ್ಲವ ನಾನಲ್ಲ..ಮೇಲಿನ ಸಂದರ್ಭವನ್ನು ನಿಮ್ಮಿಂದ ಕೇಳಿ ಬಲ್ಲೆ..ಮೇಷ್ಟ್ರ ನೆನಪು ಮರುಕಳಿಸಿ ಮನ ಭಾರವಾಯ್ತು.

  ReplyDelete
 4. olumeya hoove haadi neevu dhanyaraadiri.
  eegina cinemaada haadinalli hinneleya abbaradalli
  haaduva dhwani haagu sahitya masukagide.edu nanna abhipraya. hrudayangamavada baravanige.dhanyavadagalu.

  ReplyDelete
 5. ಸರ್ ತಮ್ಮ ಈ ಲೇಖನ ಮನಮಿಡಿಯಿತು, ಒಂದು ಕಡೆ ಆ ಕಿವುಡು ಹುಡುಗನ ಮುಂದಿನ ಬದುಕು-ಆತ ಏನಾದನೋ ತಿಳಿಯದು, ಇನ್ನೊಂದೆಡೆ ಆ ನಿಮ್ಮ ಸ್ನೇಹಿತ ಮೇಸ್ಟ್ರು, ಎಷ್ಟೋ ಬಾರಿ ಮಾಸ್ತರರಾಗಿರುವವರು ತಮ್ಮ ಕೋಪವನ್ನು ತಮ್ಮ ಕೈಯ್ಯಲ್ಲಿ ಹಿಡಿದಿಡಬೇಕಾದ ಪ್ರಮೇಯ ಇದೆ, ತಮ್ಮ ಆ ಹಾಡು ಬಹಳ ಉತ್ತಮವಾಗಿ ಅಂದು ಹೊರಹೊಮ್ಮಿದ್ದಿರಬೇಕು, ನಿಮ್ಮ ಮುಂದಿರದ ಆ ಇಬ್ಬರಿಗೂ ಹಾಗೂ ನಿಮಗೂ ಅನಂತ ನಮನಗಳು, ಭಗವಂತ ಇರುವ ಆ ಹುಡುಗನಿಗೆ ಕೇಳುವ ಕಿವಿಯನ್ನೂ [ಕೊನೇಪಕ್ಷ ಒಂದು ಕಿವಿ], ಗತಿಸಿದ ಆ ವೃದ್ಧ ಮೇಸ್ಟ್ರಿಗೆ ಚಿರ ಶಾಂತಿಯನ್ನೂ ಅನಿಗ್ರಹಿಸಲಿ ಎಂದು ಪ್ರಾರ್ಥಿಸಿ ಮುಂದೆ ಮತ್ತೇನೂ ಬರೆಯಲಾಗದೆ ಬಿಡುತ್ತಿದ್ದೇನೆ, ನಮಸ್ಕಾರ.

  ReplyDelete
 6. ಪಿ.ಬಿ.ಶ್ರೀನಿವಾಸರ ಈ ಹಾಡು ತುಂಬ ಭಾವಪೂರ್ಣವಾಗಿದೆ. ಇದನ್ನು ಒಂದು ದುರ್ಧರ ಸನ್ನಿವೇಶದಲ್ಲಿ ಹಾಡುವ ಪರಿಸ್ಥಿತಿ ನಿಮಗೆ ಬಂದಿತಲ್ಲ. ಲೇಖನ ಮನ ಮಿಡಿಯುವಂತಿದೆ.

  ReplyDelete
 7. ಮೂರ್ತಿ ಸರ್ ..
  ಓದಿ ಮನಸ್ಸು ಭಾರವಾಯ್ತು .. ಆವತ್ತು ನಯನ ಸಭಾಂಗಣದಲ್ಲಿ ಬೇಗನೆ ಹೊರಟಿದ್ದರಿಂದ ನಿಮ್ಮ ಹಾಡನ್ನು ಸಹ ನಾನು miss ಮಾಡ್ಕೊಂಡೆ ..
  ಮನ ಮಿಡಿಯುವಂತಹ ಬರಹ ....

  ReplyDelete
 8. ನಮಸ್ಕಾರ ಮೂರ್ತಿ ಸರ್

  ನಿಮ್ಮ ಲೇಖನ ಓದಿ ಮನಸ್ಸು ತುಂಬಾ ಭಾರವಾಗಿದೆ.

  ReplyDelete
 9. ನಲ್ಮೆಯಿಂದ ಓದಿ ಪ್ರತಿಕ್ರಿಯೆ ನೀಡಿದ ಎಲ್ಲಾ ಬ್ಲಾಗ್ ಬಂಧುಗಳಿಗೆ ಅನಂತ ಧನ್ಯವಾದಗಳು.ನಮಸ್ಕಾರ.

  ReplyDelete
 10. ವಿಷಾದ ಮೂಡಿಸುವ ಹಾಡು ಹಾಗೂ ಬರಹ. ಅವರು ಉತ್ತಮ ವ್ಯಕ್ತಿ ಎನ್ನುವದನು ತಿಳಿಸಿದ್ದೀರಿ. ಆದರೆ ಅವರು ತಮ್ಮ ಅನಾರೋಗ್ಯ ಹಾಗೂ ಬಿ.ಪಿ.ಯ ಕಾರಣವೊಡ್ಡಿ ಓರ್ವ ಹುಡುಗನ ಕಿವಿಯನ್ನು ಘಾಸಿಗೊಳಿಸಿದ್ದು ಮಾತ್ರ ಏಕೋ ಮತ್ತೂ ಕೊರೆಯತೊಡಗಿತು. ಆ ಹುಡುಗನ ಆ ಕಿವಿ ಸರಿಯಾಯಿತೇ? ಆತ ಮತ್ತೆ ಆ ಕಿವಿಯಿಂದ ಕೇಳುವಂತಾಯಿತೇ? ದಯವಿಟ್ಟು ಇದನ್ನೂ ತಿಳಿಸಿ ಸರ್. ಕಾರಣ ಆ ಹುಡುಗನ ಭವಿಷ್ಯ ಆಗಷ್ಟೇ ಆರಂಭವಾಗುತಿತ್ತು. ಮೇಸ್ಟ್ರ ಭವಿಷ್ಯ ಮೊದಲೇ ನಿರ್ಧಾರವಾಗಿತ್ತು!

  ಅವರ ಮರಣದ ರೀತಿ, ಹಾಡು ಎಲ್ಲವುದರ ಬಗ್ಗೆ ಓದಿ ಬೇಸರವೂ ಆಯಿತು.

  ReplyDelete
 11. ಈ ಘಟನೆ ಓದಿದ ಮೇಲೇ ಸ್ವಲ್ಪ ಹೊತ್ತು ಹೇಗೆ ಪ್ರತಿಕ್ರಿಯಿಸಲಿ ಎ೦ದು ಚಿ೦ತೆಗೆ ಬಿದ್ದೆ. ಥಟ್ಟನೆ ನೆನಪಾಯಿತು, ನಾನು ಪ್ರೈಮರಿ ಸ್ಕೂಲ್ ನಲ್ಲಿ ಇದ್ದಾಗ ಹೂವಯ್ಯ ಅ೦ತ ಒಬ್ರು ಮೇಷ್ಟ್ರು ಇದ್ರೂ, ಬಿಳಿ ಪ೦ಚೆ, ಬಿಳಿ ಷರಟು ಉಟ್ಟು ಬರುತ್ತಿದ್ದ ಅವರ ಆಕೃತಿ ಕಣ್ಣಮು೦ದೆ ಹಾಗೆ ಹಾದು ಹೋಯಿತು. ಅವರು ಮಕ್ಕಳ ಕಿವಿ ಹಿ೦ಡುವುದರಲ್ಲಿ ನಿಸ್ಸೀಮ. ಅವರಿ೦ದ ಕಿವಿ ಹಿ೦ಡಿಸಿ ಕೊ೦ಡವರಿಗೆ 3 ದಿನ ನೋವು ಇರ್ತಿತ್ತು. ಯಾಕೋ ಗೊತ್ತಿಲ್ಲ ಮನಸ್ಸು ಅರ್ದ್ರವಾಯಿತು.

  ReplyDelete
 12. ತಮ್ಮ ಈ ಲೇಖನ ಓದುತ್ತಿದ್ದ೦ತೆ ಕಣ್ಣಿರು ತಡೆಯಲಾಗಲಿಲ್ಲ. ಭಾವನಾಪೂರ್ಣ ಲೇಖನ. ತಾವೆಷ್ಟು ಭಾವುಕರು ಎಂಬುದು ಈ ಲೇಖನದಿಂದ ತಿಳಿಯುತ್ತೆ. ಮಾನವನು ಸಂಧರ್ಭ ಶಿಶು. ಎಂತಾ ಒಳ್ಳೆಯವರಿಂದಲೂ ಒಮ್ಮೊಮ್ಮೆ ಪ್ರಮಾದಗಳಾಗುವವು. ಮೇಷ್ಟ್ರು ಇದ್ದಕ್ಕೆ ಉದಾಹರಣೆ. ಅವರ ನಿಮ್ಮ ಭಾ೦ಧವ್ಯಕ್ಕೆ ಮತ್ತು ಅದರ ಮೂಲದ ವಿಷಯ ಎಲ್ಲವೂ ಮಾನವನು ಸಂಧರ್ಭ ಶಿಶು ಎನ್ನುವದಕ್ಕೆ ಉದಾಹರಣೆ.
  ಒಲುಮೆಯ ಹೂವೆ ಹಾಡಿಗಾಗಿ ಕ್ಲಿಕ್ಕಿಸಿ:
  http://www.youtube.com/watch?v=aStkl-R5570&p=A24BE11D99C0D985&playnext=1&index=47

  ReplyDelete
 13. ವೈದ್ಯಕೀಯ ವೃತ್ತಿಯ ಹೊಸ ವಿಧದ ಮತ್ತು ಭಾವ್ನಾತ್ಮಕ ಸಂಭಂಧಗಳನ್ನು ಹುಟ್ಟಿಹಾಕುತ್ತಲ್ಲವೇ? ತಮ್ಮ ಒಂದೊಂದು ಅನುಭವವೂ ನಮ್ಮನ್ನು ಯಾವುದೋ ಒಂದು ಎಳೆಯಿಂದ ಬಂಧಿಸುತ್ತದೆ. ವೈದ್ಯರು ನಾರಾಯಣನಿಗೆ ಸಮ..

  ReplyDelete
 14. ಮನಮಿಡಿಯುವ೦ತಹ ಘಟನೆ.ಓದಿ ಮನಸ್ಸು ಭಾರವಾಯ್ತು.
  ಹುಡುಗನಿಗೆ ಒಳ್ಳೆಯ ಭವಿಷ್ಯ ಸಿಗಲಿ. ಮಾಸ್ತರರ ಆತ್ಮಕ್ಕೆ ಶಾ೦ತಿ ಸಿಗಲಿ.

  ReplyDelete
 15. ತೇಜಸ್ವಿನಿ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಹುಡುಗನ ಬಗ್ಗೆ ನಿಮ್ಮ ಕಳಕಳಿ ನನಗೆ ಅರ್ಥವಾಗುತ್ತದೆ.ಹುಡುಗರನ್ನು ಈ ರೀತಿ ಶಿಕ್ಷಿಸುವುದರ ಕಟ್ಟಾ ವಿರೋಧಿ ನಾನು.ಈ ಹುಡುಗನನ್ನು ಮೇಷ್ಟ್ರು ಹೊಡೆದರು ಎಂದು ಗೊತ್ತಾದಾಗ ನನಗೆ ಎಷ್ಟು ಸಿಟ್ಟು ಬಂದಿತ್ತೆಂದರೆ ಇದನ್ನು ಮೆಡಿಕೋ ಲೀಗಲ್ ಕೇಸ್ ಮಾಡಿಬಿಡಬೇಕು ಎನಿಸಿತ್ತು.ಆದರೆ ಅವನ ತಂದೆಇದಕ್ಕೆ ಬಿಲ್ಕುಲ್ ಒಪ್ಪಲಿಲ್ಲ.ನಾನು ಮೇಷ್ಟ್ರು ಮಾಡಿದ್ದು ಸರಿ ಎಂದು ಹೇಳುತ್ತಿಲ್ಲ.ಅವರು ಕೂಡ ತಾನು ಬಹು ದೊಡ್ಡ ತಪ್ಪು ಮಾಡಿದ್ದಾಗಿ ಬಹಳ ಸಲ ಪೇಚಾಡಿಕೊಳ್ಳುತ್ತಿದ್ದರು.ಆದರೆ ಆ ಹುಡುಗ ತನ್ನ ಸಹ ವಿದ್ಯಾಥಿನಿಯೊಂದಿಗೆ ಬಹಳ ಅಸಭ್ಯ ರೀತಿಯಲ್ಲಿ ವರ್ತಿಸಿದ್ದ ಎಂದು ನಂತರ ನನಗೆ ತಿಳಿಯಿತು.ಅದೃಷ್ಟವಶಾತ್ ಹೊಡೆತ ಬಿದ್ದ ಕಿವಿ ಒಂದೆರಡು ತಿಂಗಳಲ್ಲಿ ಪೂರ್ತಿ ಸರಿಹೋಯಿತು.ಮತ್ತೊಂದು ಕಿವಿ ಕೂಡ ಆಪರೇಶನ್ ಮಾಡಿದ ಮೇಲೆ ಸರಿ ಹೋಯಿತು.ಇಲ್ಲಿ ಮೇಷ್ಟ್ರು ಪರಿಚಯವಾದ ವಿಚಿತ್ರ ಸನ್ನಿವೇಶದ ಬಗ್ಗೆ ತಿಳಿಸಬೇಕಿತ್ತಾದರಿಂದ ಮಿಕ್ಕ ವಿಷಯಗಳ ಬಗ್ಗೆ ಅಷ್ಟು ವಿವರವಾಗಿ ಬರೆಯಲಿಲ್ಲ.ಧನ್ಯವಾದಗಳು.ನಮಸ್ಕಾರ.

  ReplyDelete
 16. ಆಸಕ್ತಿಯಿಂದ ಓದಿ ಬಹಳ ಆಸ್ಥೆಯಿಂದ ಪ್ರತಿಕ್ರಿಯಿಸಿದ ಪರಾಂಜಪೆ ಸರ್,ಸೀತಾರಾಂ ಸರ್,ಸಾಗರಿ ಮೇಡಂ ಮತ್ತು ಮನಮುಕ್ತಾ ಮೇಡಂ ರವರಿಗೆ ನನ್ನ ಅನಂತ ಧನ್ಯವಾದಗಳು.ಎಲ್ಲರಿಗೂ ನಮಸ್ಕಾರ.

  ReplyDelete
 17. ಕೃಷ್ಣಮೂರ್ತಿಯವರೆ...

  ಅಂದು ನೀವು ನಮ್ಮನೆಗೆ ಬಂದಾಗ..
  ನನಗೂ ಪ್ರವೀಣ ಗೌಡರಿಗೂ ಈ ಘಟನೆ ಹೇಳೀದ್ದೀರಿ..
  ಘಟನೆ ಕೇಳುತ್ತ ನಮ್ಮ ಕಣ್ಣಲ್ಲಿ ನೀರಾಡಿತ್ತು..

  ಅದೊಂಥರಾ ಸಂಕಟದ ಸಂದರ್ಭ..
  ಹಾಡಲೇ ಬೇಕಿತ್ತು...
  ಬೇಡವೆಂದರೂ ಕಣ್ಣೀರು ಬರುವ ಸಮಯ..

  ಇಂಥಹ ಘಟನೆ ಯಾರೂ ಅನುಭವಿಸುವದು ಬೇಡ..

  ಆದರೂ ನಿಮಗೆ ಅವರ ಆಸೆಯನ್ನು ಪೂರೈಸಿದ ಸಾರ್ಥಕತೆ..
  ಸಮಾಧಾನ..

  ಅಲ್ಲವಾ?

  ನಮ್ಮೊಂದಿಗೆ ಇವೆಲ್ಲ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..

  ReplyDelete
 18. ಭಾವನಾತ್ಮಕ ಲೇಖನ.ತಮ್ಮ ಈ ಲೇಖನ ಓದುತ್ತಿದ್ದ೦ತೆ ಕಣ್ಣಿರು ತಡೆಯಲಾಗಲಿಲ್ಲ.
  ಸರ್..ಈ ಲೇಖನ ಓದಿ ಎರಡು ವಿಷ್ಯ ಬರೆಯೋಣ ಅನ್ನಿಸ್ತು..ನನ್ನ ತಂದೆ ಟೀಚರ್ ಆಗಿದ್ದವರು..ತುಂಬಾ ಸ್ಟ್ರಿಕ್ಟ್ ಎಂದು ಶಾಲೆಯಲ್ಲಿ ಪ್ರಚರಿತರು..ಆದರೆ ಒಂದೇ ಒಂದು ದಿನ ಯಾರಿಗೂ ಹೊಡೆದಿಲ್ಲ ಎಂದು ಅವರ ಶಿಷ್ಯರು ಹೇಳುತ್ತಿದ್ದರು.. ಅವರು ನಮ್ಮೊಂದಿಗಿಲ್ಲದೆ ಇವತ್ತಿಗೆ ಒಂದು ವರುಷ.

  ಇನ್ನೊಂದು.., ನನ್ನ ಮೈದುನ, ಎಡಗೈಯಲ್ಲಿ ಬರೆಯುತ್ತಾನೆ ಎಂದು 2ನೆ ಕ್ಲಾಸಿನಲ್ಲಿ ಟೀಚರ್ ಹೊಡೆದರು, ಎಂದು ಎಷ್ಟೇ ಹೇಳಿದರೂ ಕೂಡ
  ಶಾಲೆಗೇ ಹೋಗಲಿಲ್ಲ..ಈಗ ತನ್ನ ೨೦ ನೆ ವಯಸ್ಸಿನ ನಂತರ ಕಲಿಯುವ ಆಸಕ್ತಿಯಿಂದ ಹಾಗು ನಮ್ಮೆಲರ ಸಹಕಾರದಿಂದ SSLC, open univrsityಯ BA ಹಾಗೂ animation course ಮಾಡಿ work ಮಾಡ್ತಿದ್ದಾನೆ..ಆ ಟೀಚರ್ ಅವತ್ತು ಹೊಡೆಯದಿರುತ್ತಿದ್ದರೆ ಎಂದು ಯಾವಾಗಲೂ ನೆನೆಸ್ಕೊತಾ ಇರ್ತೀವಿ..!

  ReplyDelete
 19. ನಮಸ್ಕಾರ ಪ್ರಕಾಶಣ್ಣ;ಆ ಜೀವಕ್ಕೆ ನೆಮ್ಮದಿಯ,ಸಂತೋಷದ ಕೆಲವು ಕ್ಷಣಗಳನ್ನು ಕೊಟ್ಟ ಸಮಾಧಾನ ನನಗಿದೆ.ಧನ್ಯವಾದಗಳು.

  ReplyDelete
 20. ವನಿತಾ ಮೇಡಂ;ಈಗೀಗ ಈ ಸಮಸ್ಯೆ ಕಮ್ಮಿಯಾಗಿದೆ ಅನಿಸುತ್ತದೆ.ನಾವೆಲ್ಲಾ ಶಾಲೆಯಲ್ಲಿ ಪೆಟ್ಟು ತಿಂದವರೇ.ಮನೆಯಲ್ಲಿ ಹೇಳಿದರೆ ಅಲ್ಲೂ ಪೆಟ್ಟು ಬೀಳುತ್ತದೆ ಎಂದು ಸುಮ್ಮನಿರುತ್ತಿದ್ದೆವು.ಈ ರೀತಿ ಕೊಡುವ ಪೆಟ್ಟು,ಅಥವಾ ಸಣ್ಣ ಮಕ್ಕಳನ್ನು ಸಹಪಾಟಿಗಳ ಮುಂದೆ ಬೈದು ಅವಮಾನಿಸುವುದು ಅವರ ಎಳೆಯ ಮನಸ್ಸಿನ ಮೇಲೆ ಆಘಾತಕಾರಿ ಪರಿಣಾಮ ಬೀರುತ್ತದೆ ಎನ್ನುವುದು ಸುಳ್ಳಲ್ಲ.

  ReplyDelete
 21. saar oduta nanage gottagade kaNNalli haniyondu jaaritu... :(

  ReplyDelete
 22. odutta odutta "anand" hindi cinimaada dialogue nenapatyu...
  Jindagi aur mauth upar walanka haatome hai......

  ReplyDelete
 23. No words to express...only person who gone through your situation can feel the pain...all others words will be just words.....

  ReplyDelete
 24. ಮೂರ್ತಿ ಸರ್ ,

  ಮನಮಿಡಿಯುವ ಲೇಖನ, ಓದಿ ಮನ ಮರುಗಿತು, ನಿಮ್ಮಂತ ಸ್ನೇಹಿತರನ್ನು ಪಡೆದ ಆ ಮೇಸ್ಟ್ರು ನಿಜಕ್ಕೂ ಭಾಗ್ಯವಂತರು. ಅಳುವ ಗಂಡಸರನ್ನು ನಂಬಬೇಡಿ ಅಂತ ಹೇಳ್ತಾರೆ, ಆದರೆ ನಂಗೆ ಇಂಥಹದ್ದೆಲ್ಲ ಓದುವಾಗ ತನ್ನಷ್ಟಕ್ಕೆ ಕಣ್ಣೀರು ಬಂದು ಬಿಡುತ್ತದೆ. ಮನ ಭಾರವಾಯಿತು..

  ReplyDelete
 25. ಕೃಷ್ಣಮೂರ್ತಿ ಸರ್,

  ತುಂಬಾ ಹೊತ್ತು ಕಾಡಿದ ಲೇಖನ.
  ಮನಕ್ಕೆ ತಾಟಿದ ಬರವಣಿಗೆಗೆ ಒಂದು ನಮನ

  ReplyDelete
 26. ಅಶೋಕ್ ಸರ್;ಧನ್ಯವಾದಗಳು.

  ReplyDelete
 27. 'appa-amma';thank you for your kind comments.welcome to my blog.

  ReplyDelete