Thursday, June 27, 2013

"ಚಾಕೊಲೇಟ್ ಕೋನ್ ಐಸ್ ಕ್ರೀಂ ಕಥೆ !!!!"

ಅವನೊಬ್ಬ ಸುಮಾರು ಹದಿನಾಲಕ್ಕು ವರ್ಷದ ಕೂಲಿ ಹುಡುಗ. ಅವನಿಗೆ ಬಹಳ ದಿನಗಳಿಂದ 'ಚಾಕೊಲೇಟ್ ಕೋನ್ ಐಸ್ ಕ್ರೀಂ' ತಿನ್ನ ಬೇಕೆಂಬ ಆಸೆ ಇತ್ತು. ಒಂದುದಿನ ತನ್ನ ಬಳಿ  ಕೂಡಿಟ್ಟಿದ್ದ ಚಿಲ್ಲರೆ ಹಣವನ್ನೆಲ್ಲಾ ಸೇರಿಸಿ, ತಾನು ದಿನವೂ ಹಾದು  ಹೋಗುತ್ತಿದ್ದ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ಹೋಗಿ ಕುಳಿತ. ಅವನು  ಅಂತಹ ಹೋಟೆಲ್ ಗೆ ಹೋಗಿದ್ದು ಅದೇ ಮೊದಲನೇ ಸಲವಾದ್ದರಿಂದ ಸ್ವಲ್ಪ ಗಾಭರಿ ಗೊಂಡಿದ್ದ. ಹಣೆಯಲ್ಲಿ ಬೆವರಿತ್ತು.ಅವನು ಹಾಕಿಕೊಂಡಿದ್ದ  ಕೊಳಕು ಬಟ್ಟೆಅಲ್ಲಲ್ಲಿ ಹರಿದಿತ್ತು.


ಸಮವಸ್ತ್ರ ಧರಿಸಿದ್ದ ವೇಯ್ಟರ್  ಬಂದು ಟೇಬಲ್ ಮೇಲೆ ಒಂದು ನೀರಿನ ಲೋಟ ಕುಕ್ಕಿ ,ಆ ಕೂಲಿ ಹುಡುಗನನ್ನು ಇವನು ಇಲ್ಲಿ ಯಾಕೆ ಬಂದ ಎನ್ನುವಂತೆ ಕೆಕ್ಕರಿಸಿ ನೋಡಿ,"ಏನೋ.... ,ಏನು ಬೇಕು ?"ಎಂದು ಒರಟು ದನಿಯಲ್ಲಿ ಕೇಳಿದ. ಅದಕ್ಕೆ ಆ ಹುಡುಗ "ಅಂಕಲ್ ನನಗೆ ಚಾಕೊಲೇಟ್ ಕೋನ್ ಐಸ್ ಕ್ರೀಂ  ತಿನ್ನ ಬೇಕು ಅಂತ ಆಸೆ. ಅದನ್ನು ಕೊಡಿ ಅಂಕಲ್"ಎಂದ. ವೇಯ್ಟರ್ "ಅದಕ್ಕೆ ಇಪ್ಪತ್ತೈದು ರೂಪಾಯಿ. ಅಷ್ಟು ಹಣ ನಿನ್ನ ಹತ್ತಿರ ಇದೆಯಾ?"ಎಂದ. ಹುಡುಗ ತಾನು ತಂದಿದ್ದ ಚಿಲ್ಲರೆ ಹಣವನ್ನು ಟೇಬಲ್ ಟೇಬಲ್ ಮೇಲೆ ಹಾಕಿ ಎಣಿಸ ತೊಡಗಿದ. "ವೇಯ್ಟರ್ ಸಿಟ್ಟಿನಿಂದ "ಹಣ ಇಲ್ಲದಿದ್ದರೆ ಇಲಿಗ್ಯಾಕೆ ಬರಬೇಕು"ಎಂದು ಗೊಣಗುತ್ತಾ ಇನ್ನೊಂದು ಟೇಬಲ್ ಗೆ ಹೊದ. ಸ್ವಲ್ಪ ಹೊತ್ತಿನ ನಂತರ ಹುಡುಗನ ಬಳಿ  ಬಂದು ಏನು ಎನ್ನುವಂತೆ ನೋಡಿದ. ಹುಡುಗ ವೇಯ್ಟರ್ ನನ್ನು ನೋಡುತ್ತಾ "ಅಂಕಲ್,ನನ್ನ ಹತ್ತಿರ ಇಪ್ಪತ್ತೈದು ರೂಪಾಯಿ ಇಲ್ಲ. ಇಪ್ಪತ್ತು ರೂಪಾಯಿಗೆ ಯಾವುದಾದರೂ ಐಸ್  ಕ್ರೀಂ ತಂದು ಕೊಡಿ" ಎಂದ. ವೇಯ್ಟರ್ ಮತ್ತೆ ಸಿಟ್ಟಿನಿಂದ ಏನೋ ಗೊಣಗಿಕೊಂಡು ಹೋಗಿ ಕಪ್ ಐಸ್ ಕ್ರೀಂ ಒಂದನ್ನು ತಂದಿಟ್ಟು ಹೊದ.

ಹುಡುಗ ಐಸ್ ಕ್ರೀಂ  ತಿಂದು ವೇಯ್ಟರ್  ತಂದಿಟ್ಟ ಬಿಲ್ಲಿನ ಜೊತೆ ಹಣ ಇಟ್ಟು  ಹೊರಗೆ  ಹೋದ . ವೇಯ್ಟರ್ ಬಿಲ್ಲಿನ ಹಣ ತೆಗೆದು ಕೊಳ್ಳಲು ಬಂದವನು ಅವಾಕ್ಕಾಗಿ ನಿಂತ. ಅಲ್ಲಿ ಬಿಲ್ಲಿನ ಹಣ ಇಪ್ಪತ್ತು ರೂಪಾಯಿಯ ಜೊತೆಗೆ,ವೇಯ್ಟರ್ ಗೆಂದು ಐದು ರೂಪಾಯಿ ಟಿಪ್ಸ್ ಅನ್ನೂ ಸೇರಿಸಿ ಇಪ್ಪತ್ತೈದು ರೂಪಾಯಿ ಇಟ್ಟಿದ್ದ ಹುಡುಗ !!! ವೇಯ್ಟರ್ ಗೆ ತಾನು  ಹುಡುಗ ನೊಡನೆ ಒರಟಾಗಿ  ನಡೆದು ಕೊಂಡ ರೀತಿಯ   ಬಗ್ಗೆ ತುಂಬಾ ಪಶ್ಚಾತ್ತಾಪ ವಾಗಿತ್ತು. ತನಗೆ ಅರಿವಿಲ್ಲದಂತೆ ಅವನ ಕಣ್ಣುಗಳಲ್ಲಿ ನೀರಿತ್ತು!!!!

ಇದರಲ್ಲಿ ನಮ್ಮೆಲ್ಲರಿಗೂ ಒಂದು ಪಾಠವಿದೆ ಅಲ್ಲವೇ? ನಾವು ಬಾಹ್ಯ ರೂಪಕ್ಕೆ ಬೆಲೆ ಕೊಡದೆ ಆಂತರಿಕ ಸೌಂದರ್ಯಕ್ಕೆ ಬೆಲೆ ಕೊಡ ಬೇಕಲ್ಲವೇ ? ಎಲ್ಲರಿಗೂ ನಮಸ್ಕಾರ.

4 comments:

 1. ನಮ್ಮ ಸಮಾಜ ಮುಖ ನೋಡಿ ಮಣೆ ಹಾಕುವ ಸಮಾಜವಾಗಿದೆ. ಈ ಸಾಮಾಜಿಕ ರೋಗವನ್ನು ನಿಮ್ಮ ಕತೆಯಲ್ಲಿ ಗುರುತಿಸಿದ್ದೀರಿ. ಜೊತೆಗೇ ಅದಕ್ಕೆ ಮದ್ದನ್ನೂ ಸೂಚಿಸಿದ್ದೀರಿ!

  ReplyDelete
 2. ಈವತ್ತು ಜಗತ್ತು ಉಟ್ಟ ಬಟ್ಟೆ, ಮಾತನಾಡುವ ಚಾಲೂಕುತನ ಮತ್ತು ತಳುಕಿಗೆ ಬೆಲೆ ಕೊಡುವಷ್ಟು ಮನುಜನ ಅಸಲೀಯತ್ತಿಗೆ ಬೆಲೆಕೊಡುವುದೇ ಇಲ್ಲ.

  ಈ ’ಚಾಕೊಲೇಟ್ ಕೋನ್ ಐಸ್ ಕ್ರೀಂ’ ಕಥೆಯು ಯಾಕೋ ಮನಸ್ಸಿಗೆ ತುಂಬಾ ಮುಟ್ಟಿತು. ಆ ಕೂಲಿ ಹುಡುಗ ತಾವು ಹೋಗುತ್ತಿರುವ ಹೋಟೆಲಿನ ಮಾಣಿಗೆ ಟಿಪ್ಸ್ ಕೊಡಬೇಕು ಎನ್ನುವ ಅರಿವು ಇದ್ದು ಅವನ ಔದಾರ್ಯ ಮೆರೆದರೆ ಆ ಮಾಣಿ ಅವನ ರೂಪಕ್ಕೆ ಬೆಲೆ ಕೊಟ್ಟು, ಅವನಿಂದಲೇ ಟಿಪ್ಸ್ ಪಡೆಯ ಬೇಕಾದ್ದು ವಿಪರ್ಯಾಸ.

  ಬಡತನ ಜೇಬಿಗಿರಬಹುದು ಹೃದಯಕ್ಕಲ್ಲ ಎಂದು ಮತ್ತೆ ಮತ್ತೆ ಈ ಕಥೆ ನಿರೂಪಿಸಿತು.

  ReplyDelete
 3. ತಳುಕು ಬಳುಕಿನ ಪ್ರಪಂಚದಲ್ಲಿ ಹೊಳೆಯುವುದೆಲ್ಲಾ ಚಿನ್ನ ಎಂದು ತಪ್ಪಾಗಿ ಅರ್ಥೈಸುಕೊಳ್ಳುವ ಸಂಭವವೇ ಹೆಚ್ಚು. ಹುಡುಗ ಅಂತ ಪರಿಸ್ಥಿತಿಯಲ್ಲೂ ತನ್ನ ಮನದ ಸ್ಥಿಮಿತ ಕಳೆದುಕೊಳ್ಳದೆ ತಣ್ಣಗೆ ಪ್ರತಿಕ್ರಿಯೆ ನಿಜಕ್ಕೂ ಮೆಚ್ಚಬೇಕಾದ್ದು. ಒಮ್ಮೆ ನನ್ನ ಗೆಳೆಯರ ಜೊತೆ ವಿಜಯನಗರದಲ್ಲಿರುವ ಒಂದು ಉತ್ತಮ ಹೋಟೆಲ್ ಗೆ (ಅದು ಓಪನ್ ಹೋಟೆಲ್ ಆದ್ದರಿಂದ.. ರಸ್ತೆಯಲ್ಲಿರುವವರು ಸೀದಾ ಒಳಗೆ ಯಾರು ತಿಂತಾ ಇದ್ದಾರೆ ಅಂದು ನೋಡಬಹುದಿತ್ತು.) ಆಗ ಅಲ್ಲಿಗೆ ಒಂದು ಹುಡುಗ ಬಂದು ಅಣ್ಣ ಒಂದು ರುಪಾಯಿ ಕೊಡಿ ಊಟ ಮಾಡಿಲ್ಲ ಅಂತ ಅಂದಾ.. ತಕ್ಷಣ ನನ್ನ ಗೆಳೆಯ ಒಂದು ರುಪಾಯಿ ಕೊಡೋಲ್ಲ.. ಹೊಟ್ಟೆ ಹಸಿತಾ ಇದ್ರೆ ನಿನಗೆ ಏನು ಬೇಕೋ ಕೇಳಿ ತಿನ್ನು ಅಂದಾ.. ಆ ಹುಡುಗ ಒಂದು ಟೇಬಲ್ ಗೆ ಹೋಗಿ ಕೂತ .. ವೈಟರ್ ಗೆ ಆ ಹುಡುಗ ಏನು ಕೇಳ್ತಾನೋ ಕೊಡಿ.. ಬಿಲ್ಲನ್ನು ನಾವು ಕೊಡ್ತೇವೆ ಅಂತ ಹೇಳಿದ್ರು.. ಆ ಹುಡುಗನ ಹತ್ತಿರ ಹೋಗಿ ಜಬರ್ದಸ್ತು ಮಾಡಿದ.. ನಾವೆಲ್ಲಾ ಆ ವೈಟರ್ ಗೆ ಬಯ್ದು ನಿಮಗೆ ಬೇಕಿರುವುದು ದುಡ್ಡು ನಮಗೆ ಬೇಕಿರುವುದು ತಿಂಡಿ.. ಯಾರು ತಿಂದರೆ ನಿಮಗೇನೂ ದುಡ್ಡು ಬಂದರೆ ಸಾಕಲ್ಲ ಅಂತ ಹೇಳಿದ ಮೇಲೆ ತಣ್ಣಗಾದ.. ಬೇಸರವಾಗುತ್ತೆ ಇಂತಹ ಮನುಜನ ಗುಣಗಳನ್ನು ಕಂಡಾಗ)

  ReplyDelete
 4. ಮನಸ್ಸು ತಾಕುವಂಥಹ ಕಥೆ...
  ಮೋಸ ಹೋಗುವ ಮತ್ತು ಮೋಸ ಮಾಡುವ
  ಜನರೇ ಹೆಚ್ಚು ಇಲ್ಲಿ....
  ಏಕೆಂದರೆ ಈಗಿನ ಎಲ್ಲರೂ ಬಣ್ಣದ ಸೋಗಿಗೆ
  ಮರುಳಾಗಿ ತಾವೂ ಹಾಗೇ ಬದುಕುತ್ತಿರುತ್ತಾರೆ...
  ಇದ್ದ ಪ್ರೀತಿಯೆಲ್ಲಾ ಒಳಗೇ ಹೆಪ್ಪುಗಟ್ಟಿ ನರಳಬೇಕು..
  ಹೊರತೆಗೆದು ಹಂಚುವವರಿಲ್ಲ...

  ಇಷ್ಟವಾಯಿತು.....

  ReplyDelete