Saturday, June 29, 2013

"ಸಾಮಾನ್ಯನೊಬ್ಬನ ಅಸಾಮಾನ್ಯ ಸಾಹಸ ಗಾಥೆ !!!! "

ಅವನ ಹೆಸರು ದಶರಥ್ ಮಾಂಜಿ.ಅವನೊಬ್ಬ ಸಾಧಾರಣ ಅನಕ್ಷರಸ್ಥ ,ಹಿಂದುಳಿದ ವರ್ಗದ ಕೂಲಿ ಕಾರ್ಮಿಕ.ಆದರೆ ಅವನು ಸಾಧಿಸಿದ ಕೆಲಸ ಅದ್ಭತ ಮತ್ತು ಅಸಾಧಾರಣ!!!! ನಮ್ಮ ದೇಶದಲ್ಲೇ ಏಕೆ ,ಪ್ರಪಂಚದಲ್ಲೇ ಅಂತಹ ದಾಖಲೆಯನ್ನು ಯಾರೂ ಸಾಧಿಸಿಲ್ಲ.ಅವನ ಸಾಧನೆಯನ್ನು ಶಹಜಾನ್  ತಾಜ್ ಮಹಲ್ ಕಟ್ಟಿದ ಸಾಧನೆಗಿಂತ ಹಿರಿದಾದ ಸಾಧನೆ ಎನ್ನುವವರಿದ್ದಾರೆ.

ದಶರಥ್ ಮಾಂಜಿಯ ಊರು ಬಿಹಾರದ ಗಯಾ ಜಿಲ್ಲೆಯ ಅತೀ ಹಿಂದುಳಿದ ಹಳ್ಳಿ ಘೆಲೋರ್ .ಹಳ್ಳಿಯಲ್ಲಿ ವೈದ್ಯಕೀಯ ಸೌಲಭ್ಯವಾಗಲೀ ಅಥವಾ ಇನ್ನಿತರ ಯಾವುದೇ ಸೌಲಭ್ಯವಾಗಲೀ ಇರಲಿಲ್ಲ.ಹಳ್ಳಿಯ ಮುಂದೆ ದೊಡ್ಡ ಕಲ್ಲಿನ ಬೆಟ್ಟವೊಂದು ಇವರ ಎಲ್ಲಾ ಸೌಕರ್ಯಗಳಿಗೂ ಅಡ್ಡಿಯಾಗಿತ್ತು.ಹತ್ತಿರದ ಊರು ವಜೀರ್ ಗಂಜ್ ಗೆ ಹೋಗಲು ಬೆಟ್ಟವನ್ನು ಬಳಸಿಕೊಂಡು ಎಪ್ಪತ್ತು ಕಿಲೋಮೀಟರ್ ದಾರಿ ಕ್ರಮಿಸ ಬೇಕಾಗಿತ್ತು.

ಒಂದು ಬಾರಿ ದಶರಥ್ ಮಾಂಜಿಯ ಹೆಂಡತಿಗೆ ತೀವ್ರ ಅನಾರೋಗ್ಯವಾಗಿ ,ಸಮಯಕ್ಕೆ ಸರಿಯಾಗಿ ಅವಳಿಗೆ ವೈದ್ಯಕೀಯ ಸೌಲಭ್ಯ ಕೊಡಿಸಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸಬೇಕಾಯಿತು.ಹೆಂಡತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ದಶರಥ್ ಮಾಂಜಿಯ ಮೇಲೆ ಈ ಘಟನೆ ಬಹಳ ಆಘಾತಕಾರಿ ಪರಿಣಾಮ ಬೀರಿತು.ಆ ರಾತ್ರಿಯೇ ದಶರಥ್ ಮಾಂಜಿ ಒಂದು ನಿರ್ಧಾರಕ್ಕೆ ಬಂದ.ತನ್ನ ಬಳಿ ಇದ್ದ ಆಡುಗಳನ್ನು ಮಾರಿ ,ಬೆಟ್ಟ ಕಡಿಯುವ ಸಲಕರಣೆಗಳಾದ ,ಸುತ್ತಿಗೆ,ಉಳಿ,ಪಿಕಾಸಿ,
ಹಾರೆ,ಸಲಿಕೆ ಮುಂತಾದುವುಗಳನ್ನು ಖರೀದಿ ಮಾಡಿದ.

ಮಾರನೇ ದಿನದಿಂದಲೇ ಬೆಟ್ಟ ಕಡಿದು ದಾರಿ ಮಾಡುವ ಕೆಲಸವನ್ನು ಒಬ್ಬನೇ ಶುರು ಮಾಡಿದ.ಇದು ಸುಮಾರು 1960 ರ  ಶುರು.ಇವನ ಕೆಲಸವನ್ನೂ,ಇವನ ಮಾತನ್ನೂ ಕೇಳಿ ಊರಿನ ಜನ ಇವನನ್ನು ಹುಚ್ಚನೆಂದರು."ಒಬ್ಬನೇ ಬೆಟ್ಟ ಕಡಿಯಲು ಸಾಧ್ಯವೇ?"ಎಂದು ನಕ್ಕರು,ಅಪಹಾಸ್ಯ ಮಾಡಿದರು.ಆದರೆ ಇದು ಯಾವುದರಿಂದಲೂ ದಶರಥ್ ವಿಚಲಿತ ನಾಗಲಿಲ್ಲ.ಅವನ ನಿರ್ಧಾರ ಅಚಲವಾಗಿತ್ತು. ಹಗಲು ರಾತ್ರಿ ಎನ್ನದೇ ಕಲ್ಲಿನ ಬೆಟ್ಟ ಕಡಿದು ರಸ್ತೆ ಮಾಡುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ.ಊರು ಬಿಟ್ಟು ಬೆಟ್ಟದ ಬಳಿಯೇ ಒಂದು ಗುಡಿಸಿಲು ಕಟ್ಟಿಕೊಂಡ.ಬರ ಬರುತ್ತಾ ಜನಕ್ಕೆ ಅವನ ಮಹಾನ್ ಕಾರ್ಯದ ಅರಿವಾಗಿ ಅವನಿಗೆ ನೀರು,ಆಹಾರ ತಂದು ಕೊಡುವ ಸಣ್ಣ ಪುಟ್ಟ ಸಹಾಯ ಮಾಡ ತೊಡಗಿದರು. ಸತತ ಇಪ್ಪತ್ತೆರಡು ವರ್ಷ ಏಕಾಂಗಿಯಾಗಿ ಕೆಲಸಮಾಡಿದ ದಶರಥ್ ಮಾಂಜಿ ,1982 ರಲ್ಲಿ ತನ್ನ ಮಹಾನ್ ಕಾರ್ಯದಲ್ಲಿ ಸಫಲನಾಗಿದ್ದ.ಆ ಕಲ್ಲಿನ ಬೆಟ್ಟದಲ್ಲಿ ಒಂದು ಕಿಲೋಮೀಟರ್ ಉದ್ದದ ,ಮೂವತ್ತು ಅಡಿ ಅಗಲದ ,ಇಪ್ಪತ್ತೈದು ಅಡಿ ಎತ್ತರದ ರಸ್ತೆ ನಿರ್ಮಾಣವಾಗಿತ್ತು.ಹತ್ತಿರದ ಊರು ವಜೀರ್ ಗಂಜಿನ ಎಪ್ಪತ್ತು ಕಿಲೋಮೀಟರ್ ದಾರಿ ಬರೀ ಏಳು ಕಿಲೋ ಮೀಟರ್ ಗೆ ಇಳಿದಿತ್ತು.ಆದರೆ ಅವನ ಈ ಮಹಾನ್ ಸಾಧನೆಯನ್ನು ಕಾಣಲು ಅವನ ಹೆಂಡತಿ ಫಾಗುಣೆ ದೇವಿ ಬದುಕಿರಲಿಲ್ಲ.

ನಂತರ ಬಿಹಾರ್ ಸರ್ಕಾರ ಅವನನ್ನು ಸನ್ಮಾನಿಸಿತು.ಇಂತಹ ,ಯಾರೂ  ಕಂಡು ,ಕೇಳಿರದ,ಸಾಹಸವನ್ನು ಏಕಾಂಗಿಯಾಗಿ ಮಾಡಿದ ದಶರಥ್ ಮಾಂಜಿ ಆಗಸ್ಟ್ 17,2007 ರಲ್ಲಿ ತೀರಿಕೊಂಡ.ಹೆಂಡತಿಯ ಮೇಲಿನ ಅಪ್ರತಿಮ ಪ್ರೀತಿ ಕಲ್ಲಿನ ಬೆಟ್ಟದಲ್ಲಿಯೇ ಒಂದು ದಾರಿ ನಿರ್ಮಿಸಿ ,ಜಗತ್ತೇ ವಿಸ್ಮಯ ಪಡುವಂತೆ ಮಾಡಿದೆ.ದಶರಥ್ ಮಾಂಜಿಯ ಕಥೆಯನ್ನು  ಹಲವಾರು ನಿರ್ಮಾಪಕರು ಸಿನಿಮಾ ತಯಾರಿಸಿದ್ದಾರೆ.ಅವನ ಹೆಸರಿನಲ್ಲಿ ಅವನ ಹಳ್ಳಿಯಲ್ಲೊಂದು ಆಸ್ಪತ್ರೆಯಾಗಿದೆ.ಈಗ ಆ ರಸ್ತೆಯಲ್ಲಿ ಹಲವಾರು ವಾಹನ ಗಳು ಓಡಾಡುತ್ತವೆ.ಈಗ ಆ ಹಳ್ಳಿಯ ಜನ 'ಬಾಬ'ದಶರಥ್ ಮಾಂಜಿಯನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಾರೆ. ನಿಜಕ್ಕೂ ದಶರಥ್ ಮಾಂಜಿಯದು ಒಂದು ಸಾರ್ಥಕ ಜೀವನವಲ್ಲವೇ!!!? ಸಣ್ಣ ಪುಟ್ಟ ಸವಾಲಿಗೂ ಎದೆ ಗುಂದುವ ನಮ್ಮಂತಹ ಸಾಮಾನ್ಯರಿಗೆ ದಶರಥ್ ಮಾಂಜಿ ಆದರ್ಶ ಪ್ರಾಯನಾಗಿದ್ದಾನೆ!!! ನಮಸ್ಕಾರ.

5 comments:

 1. ಬದುಕಿದ್ದಾಗ ಬದುಕಿ ಅಳಿದ ಮೇಲೂ ಬದುಕುವುದು ಅಂದರೆ ಇದೆ ಇರಬೇಕು. ಕಷ್ಟಗಳು ಬಂದಾಗ ತಲೆ ಮೇಲೆ ಕೈ ಇಟ್ಟು ಕೂರದೆ.. ತನ್ನ ಹಾಗೆ ಇತರರು ಕಷ್ಟ ಪಡಬಾರದು ಎನ್ನುವ ಸುಂದರ ಮನಸ್ಸಿನ ವ್ಯಕ್ತಿಯ ಸಾಧನೆ ನಿಜಕ್ಕೂ ಕುಂದಿದ ಮನಸ್ಸಿಗೆ ಹುಮ್ಮಸ್ಸು ತುಂಬಬಲ್ಲದು. ಸುಂದರ ಲೇಖನವನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಡಾಕ್ಟ್ರೆ.

  ReplyDelete
 2. ತನ್ನ ಮನೆ ಕೆಲಸವನ್ನೇ ಮಾಡಿಕೊಳ್ಳಲು ಕೆಲಸದವರಿಗೆ ಜೋತು ಬೀಳುವ ಇಂದಿನ ಜನ್ಮೇಪಿ ಸೋಮಾರಿಗಳಿಗೆ ದಿ. ದಶರಥ್ ಮಾಂಜಿ ಅವರು ಎಂದಿಗೂ ಆದರ್ಶವಾಗಿ ನಿಲ್ಲುವ ಮೇರು ವ್ಯಕ್ತಿ.

  ಪುಟ್ಟ ಬದಲಾವಣೆಗೂ ಸರ್ಕಾರದ ಕಡೆ ಮುಖ ತೋರುವ ನಾವು, ನಮ್ಮ ಮನೆ, ಮನೆಯ ಸುತ್ತಲಿಲನ ಪರಿಸರ ಮತ್ತು ಊರಿನ ಸ್ವಚ್ಛತೆಯನ್ನು ಹಾಳುಗೆಡವುತ್ತಲೇ ಇರುತ್ತೇವೆ. ಕಾಡನ್ನು ನಾಡನ್ನೂ ಆಪೋಷಣ ತೆಗೆದುಕೊಳ್ಳುತ್ತಲೇ ಇರುತ್ತೇವೆ.

  ನಡು ರಸ್ತೆಯಲ್ಲಿ ಯಾವುದೋ ವಾಹನ ತನ್ನ ರಿಪೇರಿಗಾಗಿ ತಂದಿಟ್ಟುಕೊಂಡ ಕಲ್ಲು ಹಾಗೆ ಬಿದ್ದಿದ್ದರೂ ಅದನ್ನು ಸುತ್ತಿಕೊಂಡೇ ಹೋಗುತ್ತೇವೆ. ಮನೆ ಮುಂದಿನ ಹೊಂಡಕ್ಕೆ ಒಂದಷ್ಟು ಕಲ್ಲು ಮತ್ತು ಮಣ್ಣು ತುಂಬಿ ಸಾಪಾಟು ಮಾಡಿಕೊಳ್ಳಲು ನಮಗೆ ತೋಚುವುದೇ ಇಲ್ಲ. ಆದರೆ ಬೆಟ್ಟವ್ನ್ನೇ ಕಡಿದು ಊರಿಗೆ ಹತ್ತಿರದ ಉತ್ತಮ ರಸ್ತೆ ಮಾಡಿಕೊಟ್ಟ ಅವರ ಸಾಧನೆ ಬಹುಶಃ ಯಾವ ಮುಖ್ಯ ಮಂತ್ರಿಯ ಸಾಧನೆಗಿಂತಲೂ ಹೀರಿದೇ.

  ಇಲ್ಲಿ ಮೊದಲು ನನಗೆ ಇಷ್ಟವಾದದ್ದು 'ಬಾಬ'ದಶರಥ್ ಮಾಂಜಿಯ ಹೆಂಡತಿ ಬಗೆಗೆಗಿನ ಪ್ರೀತಿ ಮತ್ತು ನಾಲ್ಕೂ ಜನಕ್ಕೆ ಉಪಕಾರವಾಗಲಿ ಎನ್ನುವ ನಿಸ್ವಾರ್ಥ ಸೇವೇ. ಪ್ರತಿಯೊಬ್ಬರೂ ತಮ್ಮ ಪರಿಧಿಯಲ್ಲಿ ಒಪ್ಪಗೊಳಿಸುತ್ತಾ ಹೋಗಬಹುದು ಎನ್ನುವುದು ಇವರಿಂದ ಕಲಿಯಬೇಕಾದ ಪಾಠ.

  ಶಾಲಾ ಮಕ್ಕಳಿಗೆ ಯಾವುದೋ ದೇಶದ ಪರಕೀಯನ ಸಾಧನೆಯ ಬಗ್ಗೆ ಪಾಠ ಹೇಳಿಕೊಡುವ ಬದಲು 'ಬಾಬ'ದಶರಥ್ ಮಾಂಜಿಯಂತಹ ಮಹಾನ್ ಸಾಧಕರ ಜೀವನಗಾಧೆ ಬೋಧನೆಯಾಗಲಿ.

  ಇಂತಹ ಶ್ರೇಷ್ಟರಲ್ಲಿ ಶ್ರೇಷ್ಟನನ್ನು ನಮಗೆ ಪರಿಚಯಿಸಿದ ನಿಮಗೆ ನಮ್ಮ ಧನ್ಯವಾದಗಳು.

  ReplyDelete
 3. ಒಬ್ಬ ಸಾಮಾನ್ಯ ಮಾಡಿದ ಅಸಮಾನ್ಯ ಸಾಧನ ಓದಿ ಅಚ್ಚರಿಯಾಯಿತು, ನಮ್ಮ ದೇಶಕಂಡ ಒಬ್ಬ ಅಪರೂಪದ ಸಾಹಸಿ ಇವರು, ತನ್ನ ಪತ್ನಿ ವೈಧ್ಯಕೀಯ ಸೌಲಭ್ಯ ವಂಚಿತಳಾಗಿ ಸಾವನ್ನಪ್ಪಲು ಕಾರಣವಾದ ಒಂದು ದೊಡ್ಡ ಬೆಟ್ಟವನ್ನು ಕಾಡಿತು, ತನ್ನ ಹಳ್ಳಿಯ ಬಹಳಷ್ಟು ಜನ ರಿಗೆ ಆಗುತ್ತಿದ್ದ ಕಷ್ಟವನ್ನು ನಿವಾರಿಸಿ ಅಮರತ್ವ ಪಡೆದ "'ಬಾಬ'ದಶರಥ್ ಮಾಂಜಿ" ಚಿರಸ್ಮರಣೀಯರು . ಈ ಲೇಖನ ಓದುತ್ತಿದ್ದರೆ ಕನ್ನಡ ಚಿತ್ರ" ನಾಗರಹೊಳೆ " ಯಲ್ಲಿನ ಹಾಡು ಇಲ್ಲೇ ಸ್ವರ್ಗ ಇಲ್ಲೇ ನರಕ ಹಾಡಿನ ' ಬೆಟ್ಟ ಕೊರೆದು ದಾರಿ ಮಾಡಿ ನೀರು ನುಗ್ಗೋ ಹಾಗೆ " ಎನ್ನುವ ಸಾಲುಗಳು ನೆನಪಿಗೆ ಬರುತ್ತವೆ. ಲೇಖನ ಬರೆದ ನಿಮಗೆ ಜೈ ಜೈ ಹೊ ಸಾರ್.

  ReplyDelete
 4. ಹೂಂ ದಶರಥ್ ಮಾಂಜಿ (ದಶರಥ್ ಮಾನ್ ಜೀ ) ಅವನ ಪ್ರೀತಿಯ ಕಥೆ ತುಂಬಾ ಚನ್ನಾಗಿದೆ... ಆದರೆ ಅದು ಕಥೆಯಲ್ಲ... ಅವನ ಜೀವನ... ಪ್ರೇಮಕ್ಕೆ ಮುಡಿಪಾಗಿಟ್ಟ ಒಂಟಿ ಜೀವನ...
  ಮೊನ್ನೆ ಒಂದು ಚಲನ ಚಿತ್ರ ನೋಡಿದೆ... ಸ್ವಲ್ಪ..(ಹೆಸರು ನೆನಪಿಲ್ಲ) ಅದರಲ್ಲೂ ಇದರ ಕಥೆಯನ್ನು ಮತ್ತೆ ಆ ಜಾಗವನ್ನು ತಿಳಿಸಿದ್ದಾರೆ.. ಹಾಗೆಯೇ "ಸಮುದ್ರ ತೀರ" ಬ್ಲ;ಾಗ್ ನಲ್ಲಿ ರಘುನಂದನ್ ಅವರು ಕೂಡಾ ಬರೆದಿದ್ರು....
  ಅವನ ಪ್ರೀತಿಗೊಂದು... ಸಮಾಜಕ್ಕೆ ಅವನು ನೀಡಿದ ಕೊಡುಗೆಗೊಂದು ನಮ್ಮ ನಮಸ್ಕಾರ.

  ಹಾಗೆಯೇ ನಿಮ್ಮದೂ ತುಂಬಾ ಚಂದನೆಯ ಬರಹ...ಇಷ್ಟವಾಯಿತು.

  ReplyDelete
 5. Wonderful achievement! He is a modern bhagiratha! thanks for posting about such a great person.

  ReplyDelete