Monday, March 30, 2015

"ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ"

ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ ಅದ್ಭುತವಾಗಿತ್ತು!!!ಇದು ನಾನು ಹೇಳಿದ್ದಲ್ಲ.ಬೀಚಿ ಯವರು ತಮ್ಮ ಆತ್ಮ ಕಥನ "ಭಯಾಗ್ರಫಿ"ಯಲ್ಲಿ ಅದರ ಬಗ್ಗೆಯೇ ಒಂದು ಅಧ್ಯಾಯ ವನ್ನು ಬರೆದಿದ್ದಾರೆ.ಹರಪನಹಳ್ಳಿಯಲ್ಲಿದ್ದ ಶೇಷ ಮುತ್ಯ ಮತ್ತು ಕಮಲ ಕಕ್ಕಿ ತೊಂಬತ್ತರ ಸನಿಹದ ವೃದ್ಧ ದಂಪತಿಗಳು.ಆ ವಯಸ್ಸಿನಲ್ಲೂ ಅವರದು ಬತ್ತದ ಉತ್ಸಾಹ ಮತ್ತು ಅದ್ಭುತ ಹಾಸ್ಯ ಪ್ರಜ್ಞೆ!!!ಒಂದು ರಾತ್ರಿ ಶೇಷ ಮುತ್ಯ ಮನೆಯಿಂದ ಹೊರಬಿದ್ದರು.ಒಂದು ಕೈಯಲ್ಲಿ ಬಡಿಗೆ ,ಇನ್ನೊಂದು ಕೈಯಲ್ಲಿ ಕಮಲ ಕಕ್ಕಿಯ ಕೈ.ಕಮಲ ಕಕ್ಕಿಯ ಇನ್ನೊಂದು ಕೈಯಲ್ಲಿ ಕೈ ದೀಪ.ಕಮಲ ಕಕ್ಕಿ ಗಟ್ಟಿ ದನಿಯಲ್ಲಿ ಪೇಚಾಡಿಕೊಂಡರು."ಕಣ್ಣಿಲ್ಲ,ಕಾಲಿಲ್ಲ.ಕುಂತಲ್ಲಿ ಕೂಡೋಲ್ಲಾ ,ನಿಂತಲ್ಲಿ ನಿಲ್ಲೋಲ್ಲಾ!ಮುದಕರಾದ ಮ್ಯಾಲೆ ಮನೆಯಾಗೆ ಸುಮ್ಮನೆ ಕೂಡ ಬಾರದೇನು?"ಇದಕ್ಕೆ ಶೇಷ ಮುತ್ಯನ ಉತ್ತರ "ಏ....,ಏನೇ !! ನೀನೇ ನನ್ನ ಮುದುಕ ಅಂದು ಬಿಟ್ಟರೆ ಮಂದಿ ಅನ್ನದೆ ಬಿಟ್ಟಾರೇ...?"ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು.ಕಮಲ ಕಕ್ಕಿಯೂ "ಮಾತಿಗೇನೂ ಕಮ್ಮಿ ಇಲ್ಲ "ಎಂದು ನಕ್ಕು ಸುಮ್ಮನಾದರು.ಶೇಷ ಮುತ್ಯ ಮತ್ತು ಕಮಲ ಕಕ್ಕಿ ಇಬ್ಬರೂ ಒಂದೇ ಬಾರಿಗೆ ಹಾಸಿಗೆ ಹಿಡಿದರು.ಸಾವು ಸಮೀಪಿಸಿದೆ ಅನ್ನಿಸಿತು ಮಕ್ಕಳಿಗೆ.ಎಲ್ಲಾ ಬಂಧುಗಳನ್ನೂ ಕರೆಸಿದರು.ಕಮಲ ಕಕ್ಕಿ ಮೊದಲು ಸತ್ತರು.ಶೇಷ ಮುತ್ಯ ಅರೆ ಬರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರಿಗೆ ಕಮಲ ಕಕ್ಕಿಯ ಸಾವಿನ ಸುದ್ಧಿ ಹೇಳಿದರೆ ಹೃದಯಾ ಘಾತ ವಾಗಬಹುದು ಎಂದು ಹೆದರುತ್ತಲೇ ಅವರ ಬಳಿ ಸಮೀಪಿಸಿ"ಶೇಷ ಮುತ್ಯಾ,ಶೇಷ ಮುತ್ಯಾ ...."ಎಂದು ಕೂಗಿದರು.ಸಾವಿನತ್ತ ಸಾಗುತ್ತಿದ್ದ ಶೇಷ ಮುತ್ಯಾ ಕಣ್ಣು ತೆರೆದರು.ಏನು ಎಂಬಂತೆ ನೋಡಿದರು."ಕಮಲ ಕಕ್ಕಿ ಹೋದಳು"ಎಂದರು."ಹೋದಳೇ......?".....ಮೌನ.ಸಣ್ಣದೊಂದು ಕಿರು ನಗೆಯೊಂದಿಗೆ ಕ್ಷೀಣ ದನಿಯಲ್ಲಿ "ನಂಗಿನ್ನೊಂದು ಕನ್ಯಾ ನೋಡ್ರಪಾ"ಎಂದರು.ಸಾಯುವ ಸಮಯದಲ್ಲೂ ಹಾಸ್ಯವೇ?!!! ಎಂತಹ ಅದ್ಭುತ,ಅಪರೂಪದ ಚೇತನ ಇವರದು!!ಸಾವಿನ ಮನೆಯಲ್ಲಿ ನಗೆಯೇ ನಗೆ.ಕೆಲ ಗಂಟೆಗಳ ನಂತರ ಶೇಷ ಮುತ್ಯ ಕೂಡ ದೇಹವನ್ನು ತ್ಯಜಿಸಿದರು.ನಗು ನಗುತ್ತಲೇ ಇಹಲೋಕ ಯಾತ್ರೆ ಮುಗಿಸಿ ಎಲ್ಲರ ಮನಸ್ಸಿನಲ್ಲೂ ತಂಬೆಳಕಿನಂತೆ ಉಳಿದು ಹೋದರು!!!

6 comments:

 1. ಹಾಸ್ಯಪ್ರಜ್ಞೆ ಬದುಕಿಗೆ ಟಾನಿಕ್ ಇದ್ದ೦ತೆ. ವಯಸ್ಸಾದರೂ ಅದನ್ನು ಉಳಿಸಿಕೊ೦ಡವರೇ ಧನ್ಯರು. ಬೀಚಿ ಯವರ ಹಾಸ್ಯ ಪ್ರಸ೦ಗ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್.

  ReplyDelete
 2. ಇದು ಅದ್ಭುತವಾದ ಹಾಸ್ಯಪ್ರಜ್ಞೆ!

  ReplyDelete
 3. ಭೇಷ್... ಭೇಷ್...
  ನಮಗೇನಾಗಿದೆ ಅಂತೀನಿ? ಮುಖ ಗಂಟು ಹಾಕಿಕೊಂಡೇ ಬದುಕಿ ಬಿಡುತ್ತೇವೆ! ಏನೋ ಕಳಕೊಂಡವರಂತೆ, ದೊಡ್ಡ ಖಾಯಿಲೆ ಬಂದಂತೆ ಕೊರಗುತ್ತಿರುತ್ತೇವೆ.
  ಇಂತಹ ಹಿರಿಯರ ಕಾಲ ಕೆಳಗೆ ದೂರಿದರೆ ತುಸು ಜೀವನೋತ್ಸಾಹ ಬರಬಹುದೇನೋ? ಅಲ್ಲವೇ!

  ಹಿಂದೆ ನಾವು ಗುಟ್ಟಹಳ್ಳಿ ಮನೆಯಲಿದ್ದಾಗ, ಮನೆ ಮಾಲಿಕರು ಬೀಡಿ ಶರ ಶೈಯಲಿದ್ದರು! ಅವರು ತೀರಿಕೊಳ್ಳುವ ತುಸು ಮುಂಚೆ ಮನೆಯವರು ಇನ್ನೂ ಯಾರನ್ನಾದರೂ ಕರೆಸಬೇಕೇ ಅಂತ ಕೇಳಿದರೆ, ಹೇಮಾಮಾಲಿನಿಗೇ ಕರೆ ಕಳಿಸಿ ಅಂತ ನಕ್ಕಿದ್ದರು!

  ReplyDelete
 4. ವಾವ್.. ನಿಜಕ್ಕೂ ಅವರ ಹಾಸ್ಯ ಪ್ರಜ್ನೆ, ಜೀವನಪ್ರೀತಿಯ ಪರಿ ಓದಿ ಖುಷಿಯಾಯ್ತು. ಎಂಥಾ ಜೀವನವಪ್ಪಾ ? ಅದಿಲ್ಲ, ಇದಿಲ್ಲ, ಇಂತಾ ಕಷ್ಟ ಕೊಡೋ ಬದ್ಲು ಮೇಲಾದ್ರೂ ಕರ್ಕೊಳ್ಳಬಾರದಿತ್ತೇ ಆ ದೇವ್ರು ಅಂತ ಶಾಪ ಹಾಕೋ ಇಂದಿನ ಜಮಾನಾದವ್ರು ಇಂತಾ ಪ್ರಸಂಗಗಳಿಂದ ಕಲಿಯಬೇಕಾದ್ದು ಸಾಕಷ್ಟಿದೆ ಅನಿಸ್ತು .ಒಂದೊಳ್ಳೇ ಓದನ್ನೊದಗಿಸಿದ್ದಕ್ಕೆ ಧನ್ಯವಾದಗಳು ಡಾಕ್ಟ್ರೆ :-)

  ReplyDelete
 5. ಡಾಕ್ಟರೇ... ನಮ್ಮ ಊರಿನ ಜಗಲಿ ತಾತನ ನೆನಪಾಯ್ತು...ಆತ ನಮ್ಮ ಅಂಗಡಿ ಬಳಿಯ ಜಗಲಿ ಮೇಲೆ ಕುಂತು ಹರಟೆಗೆ ಕೂತರೆ ಸಾಕು... ಹೈಕಳಾದ ನಮಗೆಲ್ಲ ಮನರಂಜನೆಗೆ ಯಾವುದೇ ಕೊರತೆ ಇರ್ತಿರ್ಲಿಲ್ಲ....ಚನ್ನಾಗಿದೆ. ಶೇಷ ಮುತ್ಯರ ಕಥೆ.

  ReplyDelete
 6. ನಕ್ಕರೆ ನಾಕ ಎನ್ನುವ ಅವರ ಮನಸ್ಥಿತಿಯೇ ಅವರ ಧೀರ್ಘ ಆಯಸ್ಸಿನ ಗುಟ್ಟು ಎನ್ನಿಸುತ್ತದೆ.
  ಸುಂದರ ಲೇಖನ ಆ ಹಿರಿಯ ಜೀವಗಳ ಮನಸ್ಥಿತಿ ನಮಗೆ ಮಾರ್ಗ

  ReplyDelete