Saturday, December 25, 2010

" ವಿಚಿತ್ರ ......ಆದರೂ .......ನಿಜ ...! "

ಜೀವನದಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ಘಟಿಸಿಬಿಡುತ್ತವೆ.ಹಲವಾರು ವರ್ಷಗಳ ನಂತರ ಅವನ್ನು ನೆನೆಪಿಸಿಕೊಂಡಾಗ 'ಹೀಗೊಂದು ಘಟನೆ ನಡೆಯಿತೇ!'ಎಂದು ನಮಗೇ ಅಚ್ಚರಿಯಾಗುತ್ತದೆ.ನೆನ್ನೆ ನನ್ನ ಕಾರಿನ ಸರ್ವಿಸಿಂಗ್ ಮಾಡಿಸಲು ಗ್ಯಾರೇಜ್ ಗೆ ಹೋಗಿದ್ದಾಗ, ಅಲ್ಲಿ ಅಪಘಾತವಾಗಿ  ನುಜ್ಜು ಗುಜ್ಜಾಗಿ ನಿಂತಿದ್ದ ಹೊಸಾ ಕಾರೊಂದರ ಮಾಲಿಕರ ಹತ್ತಿರ ಮಾತನಾಡಿದಾಗ,ನನಗೆ ಸುಮಾರು ಇಪ್ಪತ್ತು ವರುಷಗಳಷ್ಟು ಹಳೆಯ ಘಟನೆಯೊಂದು ನೆನಪಿಗೆ ಬಂತು. ಅಂದ ಹಾಗೆ,ಆ ಕಾರಿನ ಮಾಲೀಕರು ಹೇಳಿದ್ದೇನು ಎಂಬುದನ್ನು ಕಡೆಯಲ್ಲಿ ಹೇಳುತ್ತೇನೆ.ಈಗಲೇ ಹೇಳಿಬಿಟ್ಟರೆ ,ನಾನು ಹೇಳುವ ಘಟನೆಯಲ್ಲಿ ಸ್ವಾರಸ್ಯ ಉಳಿಯುವುದಿಲ್ಲ.
ಮಾಸ್ತಿ ಕಟ್ಟೆ ಯಿಂದ ಬೆಂಗಳೂರಿಗೆ ಹೋಗುವ ಕೆಂಪು ಮೂತಿಯ 'ಲೀಲ್ಯಾಂಡ್ ' ಬಸ್ಸಿನಲ್ಲಿ ರಾತ್ರಿ ಪ್ರಯಾಣ ಮಾಡುತ್ತಿದ್ದೆ. ರಾತ್ರಿ ಸುಮಾರು ಎರಡು ಗಂಟೆಯ ಸಮಯ.ಬಸ್ ಅರಸೀಕೆರೆಯನ್ನು ದಾಟಿ ತಿಪಟೂರಿನ ಹತ್ತಿರವಿತ್ತು.ನನ್ನನ್ನು ಹೊರತುಪಡಿಸಿ ,ಬಸ್ಸಿನಲ್ಲಿ ಇದ್ದವರಿಗೆಲ್ಲಾ ವಿಪರೀತ ನಿದ್ದೆ.ಕೆಲವರಂತೂ ಬಸ್ಸಿನ ಶಬ್ಧಕ್ಕಿಂತಲೂ ಜೋರಾಗಿ ಗೊರಕೆ ಹೊಡೆಯುತ್ತಿದ್ದರು.ನಾನು ಕಂಡಕ್ಟರ್ ಕುಳಿತುಕೊಳ್ಳುವ ಕೊನೆಯ ಸೀಟಿನ ಮುಂದಿನ ಸೀಟಿನಲ್ಲಿ ಕುಳಿತು ,ನಿದ್ದೆ ಬರದೆ ಚಡಪಡಿಸುತ್ತಿದ್ದೆ.ಬಸ್ ಹೆದ್ದಾರಿಯಲ್ಲಿ ವೇಗವಾಗಿ ಸಾಗಿತ್ತು.ಕಿಟಕಿಯ ಹೊರಗೆ  ಬೆಳದಿಂಗಳಿನಲ್ಲಿ ಮರಗಳು ವೇಗವಾಗಿ ಹಿಂದಕ್ಕೆ ಓಡುತ್ತಿರುವುದನ್ನು ನೋಡುತ್ತಾ ಕುಳಿತಿದ್ದೆ.ಅಚಾನಕ್ಕಾಗಿ ನನ್ನ ದೃಷ್ಟಿ ಡ್ರೈವರ್ ಸೀಟಿನತ್ತ  ಹೋಯಿತು.ಒಂದು ಕ್ಷಣ ,ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ!!! ಡ್ರೈವರ್ ಸೀಟಿನಲ್ಲಿ ಡ್ರೈವರ್ ನಾಪತ್ತೆ!!! ಯಾವುದೋ ಹಾರರ್ ಸಿನೆಮಾದಲ್ಲಿ ಹೋಗುವ ಹಾಗೆ ಬಸ್ ತನ್ನಷ್ಟಕ್ಕೆ ತಾನೇ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿತ್ತು!!! ಇದೇನು ಕನಸೋ ಎಂದು ಮೈ ಚಿವುಟಿ ನೋಡಿಕೊಂಡೆ.ಇಲ್ಲಾ ,ನಾನು ಸಂಪೂರ್ಣ ಎಚ್ಚರವಾಗಿದ್ದೆ !!! ' ಅರೆ ಇದು ಹೇಗೆ ಸಾಧ್ಯ !' ಎಂದುಕೊಂಡು ನೋಡುತ್ತಿದ್ದಂತೆ ಬಸ್ ರಸ್ತೆಯ  ಪಕ್ಕದಲ್ಲಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆಯಲು ಮುನ್ನುಗ್ಗುತ್ತಿತ್ತು !!! ನಮ್ಮೆಲ್ಲರ ಕಥೆ ಮುಗಿದೇ ಹೋಯಿತು ಎಂದುಕೊಳ್ಳುತ್ತಿದ್ದಾಗ , ಪವಾಡವೆಂಬಂತೆ  ಡ್ರೈವರ್ ತನ್ನ ಸೀಟಿನಲ್ಲಿ ಮತ್ತೆ  ಕಾಣಿಸಿಕೊಂಡು ಬಸ್ಸನ್ನು ಮರದಿಂದ ಕೂದಲಿನಷ್ಟು ಅಂತರದಿಂದ ತಪ್ಪಿಸಿ , ವಾಪಸ್ ಹೆದ್ದಾರಿಗೆ ತಂದು ,ಏನೂ ಆಗಿಯೇ ಇಲ್ಲವೆಂಬಂತೆ ಮತ್ತೆ  ಓಡಿಸ ತೊಡಗಿದ !!! ನಡೆದದ್ದೇನೆಂದು ಕ್ಷಣ ಮಾತ್ರದಲ್ಲಿ ಅರ್ಥವಾಗಿತ್ತು. ಬಸ್  ಓಡಿಸುವಾಗ,ಡ್ರೈವರ್ ಗೆ ನಿದ್ದೆ ಬಂದು ,ತನ್ನ ಸೀಟು ಮತ್ತು ಸ್ಟೀಯರಿಂಗ್ ವೀಲ್ ( steering wheel) ಮಧ್ಯೆ ಇದ್ದ ಜಾಗದಲ್ಲಿ  ಜಾರಿ ಹೋಗಿದ್ದ. ಕ್ಷಣಾರ್ಧ ದಲ್ಲಿ ನಡೆದು ಹೋದ ಘಟನೆಯಿಂದ ಆ  ಡಿಸೆಂಬರಿನ ಚಳಿಯಲ್ಲೂ  ನಖ ಶಿಖಾಂತ ಬೆವತು ಹೋಗಿದ್ದೆ!!!
ಮೊದಲು ಕಂಡಕ್ಟರ್ ನನ್ನು ಎಬ್ಬಿಸಿ,ನಡೆದ ಘಟನೆಯನ್ನು ವಿವರಿಸಿದೆ.ಅದಕ್ಕವನು ,ನಿದ್ದೆ ಕಣ್ಣಿನಲ್ಲೇ 'ಅಯ್ಯೋ,ನೀವೂ ಸುಮ್ಮನೆ ಮಲಗಿಕೊಳ್ಳಿ  ಸಾರ್.......,ಹಣೇಲಿ ಸಾವು ಬರೆದಿದ್ದರೆ ಯಾರೇನು ಮಾಡೋಕಾಯ್ತದೆ...?'ಎಂದು ವೇದಾಂತದ ಮಾತಾಡಿ, ಮತ್ತೆ ನಿದ್ದೆಗೆ ಜಾರಿದ! ' ಇನ್ನು ಇವನಿಗೆ  ಹೇಳಿ ಪ್ರಯೋಜನವಿಲ್ಲ' ಎನಿಸಿ ಬಸ್ಸಿನಲ್ಲಿದ್ದವರನ್ನೆಲ್ಲಾ ಎಬ್ಬಿಸಿ ,ನಡೆದ ಘಟನೆ ಹೇಳಿದೆ.ಎಲ್ಲರೂ ಸೇರಿ ಒತ್ತಾಯ ಮಾಡಿ ಡ್ರೈವರ್ ನನ್ನು ಬಸ್ ನಿಲ್ಲಿಸುವಂತೆ ಮಾಡಿದೆವು.ತನಗೆ ನಿದ್ದೆ ಬಂದುದಾಗಿಯೂ ,ಬಸ್ಸು ಇನ್ನೇನು ಮರಕ್ಕೆ ಡಿಕ್ಕಿ ಹೊಡಿಯುತ್ತೆ ಎನ್ನುವಾಗ ಎಚ್ಚರವಾಗಿ ಅಪಘಾತವನ್ನು ತಪ್ಪಿಸಿದ್ದಾಗಿಯೂ ಡ್ರೈವರ್ ಒಪ್ಪಿಕೊಂಡ.ಬಸ್ಸನ್ನು ಸೈಡಿನಲ್ಲಿ ನಿಲ್ಲಿಸಿ ,ಒಂದು ತಾಸು ನಿದ್ದೆ ಮಾಡಿ , ತಣ್ಣೀರಿನಲ್ಲಿ ಮುಖ ತೊಳೆದು ,ಅಲ್ಲೇ ಇದ್ದ ಹೋಟೆಲಿನಲ್ಲಿ ಬಿಸಿ,ಬಿಸಿ ಟೀ ಕುಡಿದ ನಂತರ ನಮ್ಮ ಡ್ರೈವರ್  ಪೂರ್ಣ ಎಚ್ಚರದಿಂದ ಗಾಡಿ ಓಡಿಸಿ ಬೆಳಿಗ್ಗೆ ಏಳು ಗಂಟೆಯ ವೇಳೆಗೆ ಬೆಂಗಳೂರನ್ನು ತಲುಪಿದ.  
ಅಂತೂ ....,ಈ ವಿಚಿತ್ರ ಘಟನೆ ಸುಖಾಂತ್ಯ ಕಂಡಿತ್ತು.ಡ್ರೈವರ್ ...,ಒಂದೇ ಒಂದು ಕ್ಷಣ  ಎಚ್ಚರ  ತಪ್ಪಿದರೂ ಏನು ಅನಾಹುತವಾಗುತ್ತಿತ್ತೋ!  ನೆನ್ನೆ ಬೆಳಿಗ್ಗೆ ನಾನು ಗ್ಯಾರೇಜ್ ನಲ್ಲಿ ಕಂಡ ನುಜ್ಜು ಗುಜ್ಜಾದ ಹೊಸ ಕಾರಿನ ಮಾಲಿಕರೂ ಕೂಡ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕಾರನ್ನು ಓಡಿಸುವಾಗ ಒಂದೇ ಒಂದು ಕ್ಷಣ ನಿದ್ದೆಗೆ ಜಾರಿ ,ರಸ್ತೆಯ ಬಲ ಭಾಗದಲ್ಲಿದ್ದ ಹೊಂಡದಲ್ಲಿ ಬಿದ್ದಿದ್ದರು.ಪುಣ್ಯಕ್ಕೆ ಕಾರಿನಲ್ಲಿದ್ದವರಿಗೆ ಯಾವುದೇ ಬಲವಾದ ಪೆಟ್ಟಾಗಿರಲಿಲ್ಲ! ' ಏನಾಯ್ತು  ಸಾರ್........?' ಎಂದು ಕೇಳಿದ್ದಕ್ಕೆ ಅವರು ಹೇಳಿದ್ದು 'ನಿದ್ದೆ.......ಬಿದ್ದೆ .....! ಅಷ್ಟೇ !! '.

45 comments:

  1. ಮತ್ತೊಂದು ವಿಶೇಷದ ಬರಹ!!! ಹೌದು ವಾಹನ ಚಾಲನೆಯಲಿ ಇಂತಹ ಘಟನೆಗಳು ಸಾಮಾನ್ಯ!!! ಬಹಳದೂರ ವಾಹನ ಚಲಾಯಿಸುವುದು ಒಂದು ಸಾಹಸವೇ ಸರಿ. ಡ್ರೈವರ್ ನಿದ್ದೆ ಯಿಂದ ವಾಸ್ತವಕ್ಕೆ ಮತ್ತೆ ಬಂದು ಬಸ್ಸನ್ನು ಅಪಘಾತದಿಂದ ಪಾರು ಮಾಡಿದ್ದು ಪವಾಡವೇ ಸರಿ , ಹಿಂದೊಮ್ಮೆ ಮೈಸೂರಿನಿಂದ ಮಂತ್ರಾಲಯಕ್ಕೆ ಹೋಗುವಾಗ ರಾಜ್ಯ ಸಾರಿಗೆ ಬಸ್ಸನ್ನು ಸುಮಾರು ಹನ್ನೆರಡು ಘಂಟೆಗಳಿಗೂ ಹೆಚ್ಚುಕಾಲ ಒಬ್ಬನೇ ಚಾಲಕ ಓಡಿಸಿದ್ದನ್ನು ನೋಡುತ್ತಾ ವಿಚಾರಿಸಲಾಗಿ ಏನ್ ಮಾಡೋದು ಸರ್ ಇದೆಲ್ಲಾ ಮಾಮೂಲು ಮನೆಯಲ್ಲಿ ಏನೇ ಕಷ್ಟ ಇದ್ರೂ ರಜಾ ಕೊಡದೆ ಡ್ಯೂಟಿಗೆ ಕಳಿಸ್ತಾರೆ !!! ಅಂದಿದ್ದು ಕೇಳಿ ಮರುಗಿದ್ದೆ.ಇಂತಹ ಘಟನೆಗಳು ಮನ ಕರಗುವಂತೆ ನಾದುತ್ತವೆ. ಬರಹ ಚೆನ್ನಾಗಿ ಮೂಡಿಬಂದಿದೆ.ಸರ್ ನಿಮಗೆ ಸಲಾಂ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  2. ಮೈನವಿರೇಳಿಸುವ ಲೇಖನ.

    ReplyDelete
  3. ಡಾಕ್ಟ್ರೆ...

    ಚಾಲಕ ಬಹಳ ಎಚ್ಚರಿಕೆಯಿಂದಿರಬೇಕು..
    ಸ್ವಲ್ಪವಾದರೂ ಎಚ್ಚರ ತಪ್ಪಿದ್ದಲ್ಲಿ ತಾನೊಬ್ಬನೇ ಅಲ್ಲ..
    ತನ್ನೊಂದಿಗೆ ವಾಹನದಲ್ಲಿರುವವರೆಲ್ಲರನ್ನೂ ಮೃತ್ಯುವಿನೆಡೆಗೆ ಸಾಗಿಸಿಬಿಡುತ್ತಾನೆ...

    ಮೈನವಿರೇಳುವ ಘಟನೆ... !

    ReplyDelete
  4. ಬಾಲೂ ಸರ್;ಕಾಡಿನ ಅನುಭವಗಳ ಲೇಖನಕ್ಕಾಗಿ ಕಾಯುತ್ತಿದ್ದೇನೆ.ಎಷ್ಟೊಂದು ಜನ ಡ್ರೈವರ್ ಗಳು ಪ್ರತಿದಿನ ರಾತ್ರಿಯೆಲ್ಲ ಗಾಡಿಗಳನ್ನು ಓಡಿಸಿ ಲಕ್ಷಾಂತರ ಪ್ರಯಾಣಿಕರನ್ನು ಸುರಕ್ಷಿತವಾಗಿ ಊರುಗಳಿಗೆ ತಲಪಿಸುತ್ತಾರೆಂದು ನೆನೆದರೆ ಅಚ್ಚರಿಯಾಗುತ್ತದೆ.ನನ್ನ ದೃಷ್ಟಿಯಲ್ಲಿ ಇವರೆಲ್ಲಾ ನಿಜ ಜೀವನದ unsung heroes!ಅಲ್ಲವೇ? ಧನ್ಯವಾದಗಳು.

    ReplyDelete
  5. ಸುನಾತ್ ಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  6. ಸುಬ್ರಮಣ್ಯ ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು:-)

    ReplyDelete
  7. ಪ್ರಕಾಶಣ್ಣ;ಹೆದ್ದಾರಿಯಲ್ಲಿ ರಾತ್ರಿಯಲ್ಲಿ ನಡೆಯುವ ಸುಮಾರು ಅಪಘಾತಗಳ ಕಾರಣ ಇದೇ ಆಗಿದೆ.ಮಾರನೆ ದಿನ ದುಡ್ಡಿನ ಆಸೆಗೋ,ಬಲವಂತಕ್ಕೋ ನಿದ್ದೆ ಕೆಟ್ಟು ,ಬೆಳಿಗ್ಗೆ ಬೇರೆ ಗಾಡಿಗಳನ್ನು ಓಡಿಸಿ ರಾತ್ರಿ ಮತ್ತೆ ಡ್ಯೂಟಿಗೆ ಹಾಜರಾಗುತ್ತಾರೆ.ರಾತ್ರಿ ಗಾಡಿ ಓಡಿಸಿದವರು ಬೆಳಗಿನ ಹೊತ್ತು ಸರಿಯಾಗಿ ನಿದ್ದೆ ಮಾಡಿದರೆ ಇಂತಹ ಬಹಳಷ್ಟು ಅಪಘಾತಗಳು ತಪ್ಪುತ್ತವೆ.ಧನ್ಯವಾದಗಳು.

    ReplyDelete
  8. ಲೇಖನ ತು೦ಬ ಚೆನ್ನಾಗಿದೆ

    ReplyDelete
  9. ವಸಂತ್;ಇದು ನಿಜಕ್ಕೂ ಮರೆಯಲಾಗದಂತಹ ಅನುಭವ.ಆ ಒಂದು ಕ್ಷಣದಲ್ಲಿ ಡ್ರೈವರಿಗೆ ಎಚ್ಚರವಾಗದಿದ್ದರೆ ಏನಾಗುತ್ತಿತ್ತೋ ದೇವರೇ ಬಲ್ಲ!ಧನ್ಯವಾದಗಳು.

    ReplyDelete
  10. ದಿಗ್ವಾಸ್ ಹೆಗ್ಡೆಯವರಿಗೆ ನಮಸ್ಕಾರ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  11. ಡಾಕ್ಟ್ರೆ,
    ಓದುತ್ತಿದ್ದರೆ ಒಂದು ಕ್ಷಣ ಮೈಜುಂ ಎಂತು...
    ಚಾಲಕನ ನಿಯಂತ್ರಣ ತಪ್ಪಿದರೆ ಗೋವಿಂದ....
    ....

    ReplyDelete
  12. ಮಹೇಶ್ ಸರ್;ಚಾಲಕನ ನಿಯಂತ್ರಣ ತಪ್ಪಿದ್ದಿದ್ದರೆ ಅಲ್ಲಿಗೇ ಈ ಕಥೆ ಮುಗಿಯುತ್ತಿತ್ತು.
    ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  13. ಒಂದು ಸಲ ನಾನು ರಾಯಚೂರಿನಿಂದ ನಮ್ಮ ಸಾರಿಗೆ ಸಂಸ್ಥೆಯ ಬಸ್'ನಲ್ಲಿ ದಾಂಡೇಲಿಗೆ ಸರಿ ರಾತ್ರೆಯ ಹೊತ್ತಿನಲ್ಲಿ ಬರುತ್ತಿದ್ದಾಗ ಒಂದು ಸಣ್ಣ ಸೇತುವೆಯನ್ನು ದಾಟುವ ಸಂಧರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಮಗ್ಗುಲಿನ ತಗ್ಗಿನ ಪ್ರದೇಶಕ್ಕೆ ಹೊರಳಿ ಮುಳ್ಳಿನ ಗಿಡಗಳ ಸಂದಿಯಲ್ಲಿ ಮಗ್ಗುಲಾಗಿ ಮಲಗಿಕೊಂಡಿತು. ಸುತ್ತಲೂ ಕತ್ತಲೆ... ಕೆಲವರಿಗೆ ಸಣ್ಣ ಪೆಟ್ಟಾಗಿದ್ದು ಬಿಟ್ಟರೆ ಇನ್ನೇನು ಹೆಚ್ಚಿಗೆ ಆದಂತಿರಲಿಲ್ಲ. ಅದು ಹೇಗೋ ಕಿಟಕಿಯ ಸಂದಿಯಿಂದ ಹೊರಗೆ ಬಂದು ಬಚಾವೆದೆವು. ಈಗಲೂ ನನ್ನ ಮನಸ್ಸು ಶರವೇಘದಲ್ಲಿ ಸಂಚರಿಸುವ ಬಸ್'ನಲ್ಲಿ ಪ್ರಯಾಣ ಮಾಡುವಾಗ ಆತಂಕದಿಂದಲೇ ಕೂಡಿರುತ್ತದೆ.

    ReplyDelete
  14. Conductorನ ವೇದಾಂತ ಕೇಳಿ ನಗು ತಡೆಯೋಕ್ಕೆ ಆಗ್ಲಿಲ್ಲ ನನಗೆ.
    ಅದು ಒಂದುರೀತಿ ನಿಜಾನೆ..ಒಳ್ಳೆ ಭಯಾನಕ ಪ್ರಸಂಗ....

    ReplyDelete
  15. nidde-bidde estu arthagarbhitavallave?

    ReplyDelete
  16. ಸ್ವಾಮೀ, ನಾವೂ ಒಮ್ಮೆ ೧೯೯೯ರಲ್ಲಿ ತಿರುಪತಿಗೆ ಕಾರಲ್ಲಿ ಹೊರಟಿದ್ದೆವು. ನಾಲ್ಕು ಯುವ ಮಿತ್ರರು ಕೇಳಬೇಕೆ? ಬೆಂಗಳೂರಿಂದ ಹೊರಟಿದ್ದೇ ಸಾಯಂಕಾಲ ೭ಕ್ಕೆ, ರಾತ್ರಿ ೯ಕ್ಕೆ ಅಲ್ಲೆಲ್ಲೋ ಗಡಿಯಾಚೆ ಊರಲ್ಲಿ ಊಟಮಾಡಿ ಮತ್ತೆ ಹೊರಟೆವು. ಸ್ವಲ್ಪ ಹೊತ್ತು ಹಾಡು-ಕೇಕೇ ಎಲ್ಲಾ ಇತ್ತು. ಆಮೇಲೆ ಒಂದೊಂದಾಗಿ ಬಂದಾಗಿತ್ತು. ಅದ್ಯಾವಮಾಯೆಯಲ್ಲೋ ಎಲ್ಲರಿಗೂ ನಿದ್ದೆಯ ಜೋಂಪು! ಮುಂದಿನ ಸೀಟಿನಲ್ಲಿರುವ ಇಬ್ಬರೂ ಚಾಲನೆ ಕಲಿತವರು,ನುರಿತವರು. ನಾವು ಸುಮ್ನೇ ಪಕ್ಕವಾದ್ಯ ಇದ್ದಹಾಗೇ. ಒಂದು ನಿಮಿಷ ತಡವಾಗಿದ್ದರೆ ನಾವಿರುವ ಸ್ಯಾಂಟ್ರೋ ಕಾರು ಆಳದ ಗದ್ದೆಯಲ್ಲಿ ಗಿರಕಿಹೊಡೆಯುತ್ತಿತ್ತು. ದೇವರಕೃಪೆ ಚಾಲಕಮಿತ್ರನ ಪಕ್ಕ ಕೂತಿದ್ದ ಮಿತ್ರನಿಗೆ ಹೇಗೋ ಎಚ್ಚರವಾಗಿ ಪವರ್ ಸ್ಟೇರಿಂಗ್ ನ್ನು ಟಳಕ್ಕನೆ ತಿರುಗಿಸಿದ್ದೇ ಗಾಡಿ ಸ್ವಲ್ಪ ಹಾರಿದಹಾಗಾಗಿ ಎಲ್ಲಾ ಬೆಚ್ಚಿ ಬಿದ್ದೆವು! ಮತ್ತೆಂದೂ ನಿದ್ದೆ ಬರಲಿಲ್ಲ. ಇನ್ನೊಮ್ಮೆ ಸೀಬರ್ಡ್ ಬಸ್ ನೆಮಮಂಗಲದ ಬಳಿ ಬೆಳಗಿನ ಜವ ಮರಕ್ಕೆ ಗುದ್ದಿ ಮುಂಭಾಗ V ಆಕಾರಕ್ಕೆ ಬಂದಿತ್ತು. ನಮ್ಮೆಲ್ಲರ ಮುಖಮೈಗಳು ಗಾಯವಾಗಿದ್ದವು. ಅಲ್ಲೂ ಸುದೈವವಶಾತ್ ಜಾಸ್ತಿ ಏನೂ ಆಗಲಿಲ್ಲ.ಮತ್ತೊಮ್ಮೆ ಜೋಗ್ಫಾಲ್ಸ್ ನಲ್ಲಿ KSRTC ಬಸ್ಸಿನ ಜಾಯಿಂಟ್ ಕಟ್ಟಾಗಿ ಎಳೆದುಕೊಂಡು ಅಂತೂ ನಿಂತಿತ್ತು, ರಿಪೇರಿಯೂ ಇಲ್ಲ, ಬದಲೀ ವ್ಯವಸ್ಥೆಯೂ ಇರಲಿಲ್ಲ!

    ರಾತ್ರಿ ಪ್ರಯಾಣಮಾಡುವಾಗ ಚಾಲಕನ ಕ್ಯಾಬಿನ್ನಿನ ಮೇಲೆ ನಿಗಾ ಇರಲೇಬೇಕು. ಮೈಮರೆತು ನಾವು ನಿದ್ದೆಮಾಡುವುದು ಒಳಿತಲ್ಲ! ಚಾಲನೆಮಾಡುವವ ಕಮ್ಮಿ ತಿನ್ನಬೇಕು, ಆಲ್ಕೋಹಾಲ್ ಸೇವಿಸಲೇಬಾರದು.ಖಾಸಗಿ ವಾಹನವಾದರೆ ಸರಿರಾತ್ರಿ ಮೂತ್ರವಿಸರ್ಜನೆಗೆ ಅಂತ ಗೊತ್ತಿರದ ಜಾಗದಲ್ಲಿ ನಿಲ್ಲಿಸಬಾರದು-ಡಕಾಯಿತಿ ಸಂಭವ ಇರುತ್ತದೆ. ಪ್ರಯಾಣಕಾಲದಲ್ಲಿ ಸಾಕಷ್ಟು ಕುಡಿಯುವ ನೀರು ಇಟ್ಟುಕೊಂಡಿರಬೇಕು. ಫಸ್ಟ್ ಏಡ್ ಬಾಕ್ಸ್ ನವೀಕರಿಸಿರಬೇಕು.ಚಾಲಕ ಹೊರಡುವ ಮುನ್ನ ಸಾಕಷ್ಟು ವಿಶ್ರಾಂತಿ ಪಡೆದಿರಬೇಕು-ಇನ್ನೂ ಹಲವು ನೆನಪಿಗೆ ಬರುತ್ತವೆ.

    ಲೇಖನ ಅನುಭವಪೂರ್ಣ, ಧನ್ಯವಾದಗಳು ನಮಸ್ಕಾರ.

    ReplyDelete
  17. ನಾರಾಯಣ್ ಭಟ್;ನಮಸ್ಕಾರ.ಕೆಳಗೆ ಬಿದ್ದ ಬಸ್ ನ ಕಿಟಕಿಯಿಂದ ಆಚೆ ಬಂದ ನಿಮ್ಮ ಅನುಭವ ರೋಚಕವಾಗಿದೆ.ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  18. ಬಾಶೆ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  19. ಭಾವನ ರಾವ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  20. ಹೇಮಚಂದ್ರ ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  21. ವಿ.ಆರ್.ಭಟ್ ;ನಮಸ್ಕಾರ ಸರ್.ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  22. ಗುರುಗಳೇ,
    ರೋಚಕ ಅನುಭವ............!
    ಚಾಲಕ ಎಚ್ಚರವಾಗದೇ ಇದ್ದಿದ್ದರೆ ಏನು ಆಗ್ತಿತ್ತೋ ಏನೋ? ನೆನೆದರೆ ಮೈ ನವಿರೇಳುತ್ತಿದೆ.

    ReplyDelete
  23. ಪ್ರವೀಣ್;ಬಹಳ ದಿನಗಳ ನಂತರ ನಿಮ್ಮ ಮನದಾಳದ ಮಾತು ಕೇಳಿ ತುಂಬಾ ಸಂತೋಷವಾಯಿತು.ಧನ್ಯವಾದಗಳು.

    ReplyDelete
  24. ಸರ್,

    ಓದಿ ಒಂದು ಕ್ಷಣ ಮೈ ಜುಮ್ ಎಂದಿತ್ತು. ಬಹುಶಃ ಬಸ್ಸಿನಲ್ಲಿದ್ದವರ ನಸೀಬು ಚೆನ್ನಾಗಿತ್ತೇನೋ ಅದಕ್ಕೆ ಎಲ್ಲರೂ ಉಳಿದುಕೊಂಡರು. ರಾತ್ರಿ ಪ್ರಯಾಣ ಮಾಡುವಾಗ ನನಗೂ ಸ್ವಲ್ಪ ಆಗಾಗ ಹೀಗೆ ದಿಗಿಲಾಗುತ್ತದೆ.

    ReplyDelete
  25. ಕೃಷ್ಣಮೂರ್ತಿ ಸರ್,
    ಎಂತಹ ವಿಚಿತ್ರ..ನಿಜವಾಗಲೂ ಜೀವ ಕೈಯಲ್ಲಿ ಇಟ್ಟುಕೊಂಡು ಓಡಾಡಬೇಕಾಗುತ್ತದೆ ಸಾರಿಗೆ ಸಂಚಾರದಲ್ಲಿ.

    ReplyDelete
  26. ನಿಮ್ಮ ಈ ಭಯಾನಕ ಅನುಭವ ಓದಿ ಮೈ ಜುಮ್ಮೆ೦ದಿತು. ನಿದ್ದೆಯ ಅಮಲಿನಲ್ಲಿರುವ ಚಾಲಕ, ವೇದಾ೦ತಿಯ೦ತೆ ಬಡಬಡಿಸುವ ನಿರ್ವಾಹಕ, ಬಸ್ಸಿನ ಸದ್ದಿನೊ೦ದಿಗೆ ಸ್ಪರ್ಧೆಗಿಳಿದ ಗೊರಕೆಶೂರರ ನಡುವೆ, ಓಡುತ್ತಿರುವ ಬಸ್ಸಿನ ಕಿಟಿಕಿಯಲ್ಲಿ ಹಿ೦ದೋಡುತ್ತಿರುವ ಮರಗಿಡಗಳನ್ನು ನೋಡುತ್ತಾ ಎಚ್ಚರದಿ೦ದಿದ್ದ ನಿಮ್ಮ ಅನುಭವ ಕಥನ ರೋಚಕವಾಗಿದೆ. ಇನ್ನಷ್ಟು ಇ೦ತಹ ಬರಹಗಳು ನಿಮ್ಮ ಬತ್ತಿಕೆಯಿ೦ದ ಹೊರಬರಲಿ ಸ್ವಾಮಿ. ಓದಲು ಕಾದಿದ್ದೇನೆ.

    ReplyDelete
  27. ತಿದ್ದುಪಡಿ : ನನ್ನ ಕಾಮೆ೦ಟಿನಲ್ಲಿ "ಬತ್ತಳಿಕೆ" ತಪ್ಪಾಗಿ ಮುದ್ರಿತವಾಗಿದೆ.

    ReplyDelete
  28. ಶಿವು;ಕ್ಷಣದಲ್ಲಿ ಅಪಘಾತ ತಪ್ಪಿದ್ದು ನಮ್ಮೆಲ್ಲರ ಪುಣ್ಯ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  29. ಅಪ್ಪ ಅಮ್ಮ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  30. ಪರಾಂಜಪೆ;ನೀವು ಹೇಳಿದ ಹಾಗೆ ನಿಜಕ್ಕೂ ಅದೊಂದು ಅಪರೂಪದ ರೋಚಕ ಅನುಭವ.ದಿನವೂ ರಾತ್ರಿ ಬಸ್ಸುಗಳಲ್ಲಿ ಲಕ್ಷಾಂತರ ಜನ ಪ್ರಯಾಣಿಕರು ಪ್ರಯಾಣಿಸಿ ಸುರಕ್ಷಿತವಾಗಿ ಮನೆ ಸೇರಿಕೊಳ್ಳುವುದು ಅಚ್ಚರಿ ಮೂಡಿಸುತ್ತದೆ.ನಿಜಕ್ಕೂ ರಾತ್ರಿ ಬಸ್ಸಿನ ಚಾಲಕರು ಅಭಿನಂದನಾರ್ಹರು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  31. ರೊಮಾಂಚನಕಾರಿ ಘಟನೆ .. ಅಬ್ಬಬ್ಬಾ ಅನ್ನಿಸಿಬಿಡ್ತು ...

    ReplyDelete
  32. ಶ್ರೀಧರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.ನಮಸ್ಕಾರ .

    ReplyDelete
  33. sir,
    ee baraha tumbaa kutuhaladinda kuDittu...

    mai jummennitu....

    ReplyDelete
  34. ಡಾಕ್ಟರ್ ಸರ್ ಬೆಂಗಳೂರಿನಲ್ಲಿ ಥಂಡಿ ಕಮ್ಮಿ ಆಗ್ತಿದೆಆದ್ರೆ ನಿಮ್ಮ ಲೇಖನ ಓದಿ ಬೆನ್ನುಹುರಿಯಲ್ಲಿ ನಡುಕಬಂತು.
    ಹೊಸವರ್ಷದ ಶುಭಾಶಯಗಳು

    ReplyDelete
  35. ವಸಂತ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  36. ದಿನಕರ್;ನನ್ನ ಬರವಣಿಗೆ ನೋಡಿ ಇಷ್ಟಪಟ್ಟು ಪ್ರತಿಕ್ರಿಯೆಗೆ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  37. ದೇಸಾಯಿ ಸರ್;ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮಗೆ ಮತ್ತು ನಿಮ್ಮ ಕುಟಂಬ ದವರಿಗೆಲ್ಲಾ ಹೊಸ ವರ್ಷದ ಶುಭಾಶಯಗಳು.

    ReplyDelete
  38. ಡಾಕ್ಟ್ರೇ...ಬಹಳ ಉತ್ಸುಕತೆ ತುಂಬಿದ ಲೇಖನ...ಹೌದು ಚಾಲಕನ ಚಾಕ ಚಕ್ಯತೆ ಜೊತೆಗೆ ಅವನ ಸಮಯ ಪ್ರಜ್ಜೆಯೂ ಮುಖ್ಯ..ಕೆಲವೊಮ್ಮೆ ಎಷ್ಟೇ ಹುಷಾರಾಗಿದ್ರೂ ಬೇರೆಯವರ ಅಜಾಗರೂಕತೆಯನ್ನು ತಪ್ಪಿಸಲು ಚಾಕ ಚಕ್ಯತೆ ಬೇಕಾಗುತ್ತೆ...
    ಅಭಿನಂದನೆಗಳು ಒಳ್ಳೆ ಲೇಖನಕ್ಕೆ....

    ReplyDelete
  39. ವಿಶಿಷ್ಟ ಬರಹ ಶೈಲಿ. ಅನುಭವ ಎಲ್ಲರಿಗು ಪಾಠವಾಗಿದೆ.

    ReplyDelete
  40. ಇಂತಹ ಘಟನೆಗಳಿಗೆ ನಾವೇ ಸಾಕ್ಷಿಯಾದಾಗ ಜೀವ ಬಾಯಿಗೆ ಬಂದು ಬಿಡುತ್ತೆ ಅಲ್ವಾ ಸಾರ್.

    ಡಿಪೋ ಮ್ಯಾನೇಜರುಗಳು ಚಾಲಕರಿಗೆ ಮತ್ತು ನಿರ್ವಾಹಕರಿಗೆ ಆ ಪಾಟಿ ಕೆಲಸ ಹೇರಿದರೆ ಹೀಗೆ ಆಗುತ್ತೆ ಅಲ್ವೇ!

    ReplyDelete
  41. ರಾತ್ರಿ ಪ್ರಯಾಣ ಎಂತಹ ತಾಪತ್ರಯ...?!
    ಒಳ್ಳೆಯ ಸಂದೇಶ ಇದೆ ಲೇಖನದಲ್ಲಿ....ಇಷ್ಟ ಆಯಿತು ಸರ್....

    ReplyDelete
  42. ರಾತ್ರಿಯ ಪ್ರಯಾಣದಿ೦ದ ಸಮಯ ಉಳಿತಾಯವಾಗಿ ಗುರಿ ಸೇರಬಹುದಾದರು ಇ೦ಥಾ ಅವಘಡಗಳ ಬಗ್ಗೆ ಎಚ್ಚರಿಕೆ ಅಗತ್ಯ. ಅನುಭವವನ್ನು ನಮ್ಮೊಡನೆ ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು.

    ReplyDelete

Note: Only a member of this blog may post a comment.