ಇಂದಿನ 'ಪ್ರಜಾವಾಣಿ'ಯಲ್ಲಿ ಭರತ್ ಮತ್ತು ಶಾಲನ್ ಸವೂರ್ ಅವರ "ಬುದ್ಧನಂತಾಗಿ"ಎನ್ನುವ ಬರಹ ತುಂಬಾ ಇಷ್ಟವಾಯ್ತು.ನಿಮ್ಮೊಂದಿಗೆ ಹಂಚಿಕೊಳ್ಳಬೇಕಿನಿಸುತ್ತಿದೆ.ನಿಮಗೂ ಇಷ್ಟವಾಗಬಹುದು.ಅದರ ಸಾರಾಂಶ ಹೀಗಿದೆ:
ಬೌದ್ಧ ಮಠವೊಂದರ ಹಿರಿಯ ಸನ್ಯಾಸಿಯೊಬ್ಬ ಚಿಂತೆಗೀಡಾದ.ಅವನಿಗೆ ಪದೇಪದೇ ಹೊಟ್ಟೆ ನೋವು ಕಾಡತೊಡಗಿತು.ಮಠದ ಧಾರ್ಮಿಕ ಚಟುವಟಿಕೆಗಳು ಕಮ್ಮಿಯಾದವು.ಮಠದಲ್ಲಿ ಸಣ್ಣಗೆ ರಾಜಕೀಯ ಶುರುವಾಗಿತ್ತು.ಹಲವಾರು ಗುಂಪುಗಳಾದವು.ಒಬ್ಬರನ್ನೊಬ್ಬರು ದೂರುವುದೂ ,ಸಣ್ಣ ಪುಟ್ಟ ಘರ್ಷಣೆ ಗಳೂ,ಶುರುವಾದವು.ಮಠದ ಯುವ ಸನ್ಯಾಸಿಗಳು ಆಲಸಿಗಳಾದರು.ಮಠದ ಕೀರ್ತಿ ಕ್ರಮೇಣ ಇಳಿಮುಖವಾಗುತ್ತಾ ಬಂದು,ಅನುಯಾಯಿಗಳು ಮಠಕ್ಕೆ ಬರುವುದನ್ನೇ ನಿಲ್ಲಿಸಿದರು. ಸನ್ಯಾಸಿ ಇದಕ್ಕೆ ಪರಿಹಾರ ತಿಳಿಯಲು ಬೆಟ್ಟದಲ್ಲಿ ಗುಹೆಯೊಂದರಲ್ಲಿ ತಪೋ ನಿರತನಾಗಿದ್ದ ತನ್ನ ಗುರುವನ್ನು ಹುಡುಕಿ ಹೊರಟ.ಧ್ಯಾನದಲ್ಲಿ ಮುಳುಗಿದ್ದ ಗುರು ನಿಧಾನವಾಗಿ ಕಣ್ಣು ತೆರೆದು ಶಿಷ್ಯನಿಗೆ ಹೇಳಿದ"ನೀನು ಬಂದ ಕಾರಣ ನನಗೆ ಗೊತ್ತು.ನಿನ್ನ ಮಠ ಏಕೆ ಮಂಕಾಗಿದೆ ಎಂದರೆ ,ನೀವು ಯಾರೂ ಮಠದಲ್ಲಿ ಇರುವ ಜೀವಂತ ಬುದ್ಧ ನನ್ನು ಗುರುತಿಸಲೇ ಇಲ್ಲವಲ್ಲಾ!"ಎಂದು ಹೇಳಿ ಮತ್ತೆ ಧ್ಯಾನಸ್ಥ ನಾದ.
ಹಿರಿಯ ಸನ್ಯಾಸಿ ಮಠಕ್ಕೆ ಮರಳಿ ತನ್ನ ಗುರು ಹೇಳಿದ ವಿಷಯವನ್ನು ಎಲ್ಲರಿಗೂ ತಿಳಿಸಿದ. ಎಲ್ಲರಲ್ಲೂ "ತಮ್ಮಲ್ಲಿ ಇರುವ ಬುದ್ಧ ಯಾರು ?"ಎನ್ನುವ ವಿಷಯದ ಬಗ್ಗೆ ಜಿಜ್ಞಾಸೆ ಶುರುವಾಯಿತು.ಮಠದ ಪ್ರತಿಯೊಬ್ಬರೂ ಮತ್ತೊಬ್ಬರನ್ನು ಬುದ್ಧನಿರಬಹುದೆಂದುಕೊಂಡು ಗೌರವದಿಂದ ,ಭಕ್ತಿಯಿಂದ ಕಾಣ ತೊಡಗಿದರು.ಪರಸ್ಪರ ಗೌರವ ಆದರಗಳು ಹೆಚ್ಚಾದವು. ಮಠದಲ್ಲಿ ಸ್ನೇಹ ,ಶಾಂತಿ,ಸೌಹಾರ್ದದ ಗಾಳಿ ಬೀಸ ತೊಡಗಿತು.ಹಿರಿಯ ಸನ್ಯಾಸಿಯ ಹೊಟ್ಟೆ ನೋವು ಪವಾಡದಂತೆ ಮಾಯವಾಯಿತು.ಮಠ ಮತ್ತೆ ಮಾನ್ಯತೆ ಪಡೆದು ಮೊದಲಿನ ಪ್ರಸಿದ್ಧಿ ಪಡೆಯಿತು.
ಪ್ರತಿಯೊಬ್ಬರ ಅಪರಿಪೂರ್ಣ ವ್ಯಕ್ತಿತ್ವದ ಹಿಂದೆಯೂ ಒಬ್ಬ ಬುದ್ಧ ಅಡಗಿದ್ದಾನೆ.ನಮ್ಮೊಳಗಿನ ಬುದ್ಧ್ಹನನ್ನು ನಾವು ಗುರುತಿಸಿ ಕೊಂಡಾಗ ,ಆರೋಗ್ಯ ,ಸಂತಸ ಮತ್ತು ಸೌಹಾರ್ದಯುತ ಬದುಕು ನಮ್ಮದಾಗುತ್ತದೆ.
ನಿಮಗೆ ಎದುರಾಗುವ ಸನ್ನಿವೇಶ ಅಥವಾ ನೀವು ವ್ಯವಹರಿಸುವ ಜನರಲ್ಲಿ ಸತತವಾಗಿ ನೀವು ತಪ್ಪುಕಂಡು ಹಿಡಿಯುತ್ತಿದ್ದಲ್ಲಿ ,ನಿಮ್ಮ ಮನಸ್ಸು ಕ್ರಮೇಣ ಬಳಲುತ್ತದೆ.ಜಡವಾಗುತ್ತದೆ.ದುಃಖಿತವಾಗುತ್ತದೆ.ತಪ್ಪು ಕಂಡು ಹಿಡಿಯುವ ನಿಮ್ಮ ಸ್ವಭಾವ ನಿಮ್ಮ ದೇಹದ ಪಿತ್ತ ಕೋಶ ,ಮೂತ್ರ ಪಿಂಡ ,ಕಣ್ಣು, ಮತ್ತು ಎಲ್ಲಾ ಪ್ರಮುಖ ಅಂಗಗಳ ಮೇಲೂ ಋಣಾತ್ಮಕ ಪರಿಣಾಮ ಬೀರುತ್ತದೆ.
ಎಚ್ಚೆತ್ತು ಕೊಳ್ಳಿ.....!! ಬೇರೆಯವರ ತಪ್ಪುಗಳ ಬಗ್ಗೆ ಮಾತನಾಡುವ ಮೊದಲು ಬಾಯಿ ಮುಚ್ಚಿಕೊಳ್ಳಿ.ಸಣ್ಣ ದೊಂದು ಕಿರಿ ಕಿರಿ ನಿಮ್ಮಲ್ಲಿ ಹುಟ್ಟಿದರೂ,ಅದರ ಕಾರಣ ಹುಡುಕಿ.ಅದನ್ನು ತಕ್ಷಣವೇ ಹೊರ ಹಾಕಿ.ನನ್ನೊಳಗಿರುವ ಶಾಂತಿಯ ಸ್ವರೂಪನಾದ 'ಬುದ್ಧ',ಈ ಕ್ಷುಲ್ಲಕ ವಿಷಯಗಳಿಗಿಂತ ದೊಡ್ಡದು ಎಂದು ಕೊಳ್ಳಿ.
ಬುದ್ಧನಂತೆ ಪ್ರೀತಿಯಿಂದ ಆಲೋಚಿಸಿ.ಬುದ್ಧನಂತೆ ಮೃದುವಾಗಿ ಮಾತನಾಡಿ.ನಿಮ್ಮೊಳಗೆ ಪ್ರೀತಿಯನ್ನು ತುಂಬಿಕೊಳ್ಳಿ.ನಿಮ್ಮ ಕುಟುಂಬದ ಸದಸ್ಯರನ್ನು,ಸ್ನೇಹಿತರನ್ನು,ನೆರೆಯವರನ್ನು,ಸಹೋದ್ಯೋಗಿಗಳನ್ನು ಮತ್ತೊಬ್ಬ ಬುದ್ಧನಂತೆ ಕಾಣಲು ಶುರುಮಾಡಿ.ಅವರೆಲ್ಲರ ಕುರಿತು ಒಳ್ಳೆಯ ಮಾತುಗಳನ್ನಾಡಿ.
ನಿಮ್ಮ ಮನೋಭಾವ ,ಆಲೋಚನೆಗಳನ್ನು ಹಂತ ,ಹಂತವಾಗಿ ಪ್ರತಿನಿತ್ಯ ಬದಲಿಸಿಕೊಳ್ಳಿ.ಪರಿಷ್ಕರಿಸಿಕೊಳ್ಳಿ.ಯಾರ ಕುರಿತೂ ಬಾಯಿಗೆ ಬಂದಂತೆ ಮಾತನಾಡ ಬೇಡಿ.ನಿಮ್ಮ ಮಾತಿಗೆ ಒಂದು ಮೌಲ್ಯವಿರಲಿ.ನಿಮ್ಮ ದೃಷ್ಟಿಕೋನವನ್ನು ವಿರೋಧಿಸುವವರ ಬಳಿ ವಾದ ಬೇಡ.ಪೂರ್ವ ಗ್ರಹ ಪೀಡಿತರಾಗದೆ ಮುಕ್ತ ಮನಸ್ಸಿನಿಂದ ಎಲ್ಲವನ್ನು ಕೇಳಿಸಿಕೊಳ್ಳಿ.
ಬೇರೆಯವರ ಬಗ್ಗೆ ವಿಶ್ವಾಸ ವಿರಲಿ.ಅದೇ ವಿಶ್ವಾಸ ನಿಮಗೆ ಮರಳಿ ಬರುತ್ತದೆ ಎನ್ನುವ ನಂಬಿಕೆ ಇರಲಿ.ಯಾರನ್ನೂ ಅವಹೇಳನ ಮಾಡ ಬೇಡಿ .ಅವಮಾನಿಸಬೇಡಿ.ಹಾಗೆ ಮಾಡಲು ನೀವೂ ಸಹ ಕೆಳ ಮಟ್ಟಕ್ಕೆ ಇಳಿಯಬೇಕಾಗುತ್ತದೆ.
'ಒಬ್ಬರ ಜೊತೆ ಇನ್ನೊಬ್ಬರು ಸಂತಸದಿಂದ ಇರೋಣ .ಈ ಸಾಂಗತ್ಯ ಇಬ್ಬರನ್ನೂ ಆತ್ಮದ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ'ಎನ್ನುವ ಮನೋಭಾವವನ್ನು ಸದಾ ಕಾಪಾಡಿ ಕೊಳ್ಳಿ.ನಿಮ್ಮೊಳಗಿನ ಬುದ್ಧನ ಹಾರೈಕೆ ನಿಮ್ಮ ಪ್ರತಿ ಆಲೋಚನೆ,ನೀವು ಮಾಡುವ ಪ್ರತಿಯೊಂದು ಕೆಲಸ,ಪ್ರತಿ ಸಂಬಂಧವನ್ನೂ ಬೆಳಗುತ್ತದೆ.
(ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ.ನಮಸ್ಕಾರ)