Saturday, December 17, 2011

"ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೇ?"

ಕೆಲವು ಹಾಡುಗಳು ಹೇಗೋ ಕೆಲವೊಂದು ನೆನಪು ಗಳಿಗೆ ತಳುಕು ಹಾಕಿ ಕೊಂಡು ಬಿಟ್ಟಿರುತ್ತವೆ.ಆ ಹಾಡನ್ನು ನೆನಸಿಕೊಂಡರೆ ಒಬ್ಬ ವ್ಯಕ್ತಿಯ ನೆನಪೋ ಅಥವಾ ,ಒಂದು ಪ್ರಸಂಗದ ನೆನಪೋ ಮರುಕಳಿಸಿಬಿಡುತ್ತದೆ.ನನ್ನ ನೆನಪಿನಲ್ಲಿ ಉಳಿದು ಹೋದಂತಹ ಇಂತಹುದೇ ಒಂದು ಹಾಡು ,ಕನ್ನಡದ ಮಹಾನ್ ಗಾಯಕ ಡಾ.ಪಿ.ಬಿ.ಶ್ರೀನಿವಾಸರು ಅರವತ್ತರ ದಶಕದ ಮೊದಲ ಭಾಗದಲ್ಲಿ 'ಪುನರ್ಜನ್ಮ 'ಎನ್ನುವ ಚಿತ್ರಕ್ಕೆ ಹಾಡಿದ 'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೆ' ಎನ್ನುವ ಹಾಡು.ಮೊದಲಿನಿಂದಲೂ ಈ ಹಾಡು ನನಗೆ ಅತ್ಯಂತ ಪ್ರಿಯವಾದ ಹಾಡು.ಅದೆಷ್ಟು ಸಲ ಈ ಹಾಡನ್ನು ಹಾಡಿದ್ದೇನೋ ತಿಳಿಯದು.ಈಹಾಡುನೆನಪಾದಾಗಲೆಲ್ಲಾ ನನ್ನ ಬಹಳ ಆತ್ಮೀಯ ಸ್ನೇಹಿತರೊಬ್ಬರು ನೆನಪಾಗಿ ಬಿಡುತ್ತಾರೆ.ಅವರ ಪರಿಚಯವಾದದ್ದೂ ಒಂದು ವಿಚಿತ್ರ ಸನ್ನಿವೇಶದ ಮೂಲಕ.
ಈಗ ಸುಮಾರು ಹನ್ನೆರಡು ವರ್ಷಗಳ ಹಿಂದೆ ನಡೆದ ಘಟನೆ.ನಾನು ಇ .ಎನ್.ಟಿ.ತಜ್ಞ ವೈದ್ಯಕೀಯ ಶಿಕ್ಷಣ ಮುಗಿಸಿದ ಹೊಸತು.ನನ್ನ ಬಳಿಗೆ ಕಿವಿಯ ಸೋರಿಕೆಯಿಂದ ಎಡ ಕಿವಿ ಕೇಳದ, ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಬರುತ್ತಿದ್ದ.ಒಂದು ದಿನ ಬೆಳಿಗ್ಗೆ ಆ ಹುಡುಗ  ತನ್ನ ಬಲಗಿವಿ ವಿಪರೀತ ನೋವೆಂದೂ,ಈಗ ಅದೂ ಕೆಳುತ್ತಿಲ್ಲವೆಂದೂ ,ಕೈಯಿಂದ ಬಲಗಿವಿ ಮುಚ್ಚಿಕೊಂಡು ಅಳುತ್ತಾ ಬಂದ.ಅವನ ತಂದೆಯೂ ಅವನ ಜೊತೆಗೇ ಬಂದಿದ್ದರು.ಅವನ ಬಲಗಿವಿ ಪರೀಕ್ಷೆ ಮಾಡಿದಾಗ ಕಿವಿಯ ಪರದೆಯ ಹರಿದ ಭಾಗದಿಂದ ರಕ್ತ ಬರುತ್ತಿತ್ತು.ಕಿವಿಗೆ ಬಲವಾದ ಪೆಟ್ಟು ಬಿದ್ದದ್ದು ಖಾತ್ರಿ ಯಾಯಿತು.ಯಾರೋ ಜೋರಾಗಿ ಕಪಾಳಕ್ಕೆ ಹೊಡೆದಿದ್ದರು.ಆ ಭಾಗವೆಲ್ಲಾ ಹೊಡೆತದಿಂದ ಕೆಂಪಾಗಿತ್ತು.ನನಗೆ ಅವನ ತಂದೆಯ ಮೇಲೆಯೇ ಅನುಮಾನವಿತ್ತು.
ಬಹಳ ಬಲವಂತ ಮಾಡಿದ ಮೇಲೆ ಅವನ ತಂದೆ ಆ ಹುಡುಗನ ಮಾಸ್ತರರೊಬ್ಬರು ಕಪಾಳಕ್ಕೆ ಹೊಡೆದರೆಂದೂ,ಅದಕ್ಕೇ
ಹೀಗಾಯಿತೆಂದೂ ಹೇಳಿದ.ಮೊದಲೇ ಹುಡುಗನಿಗೆ ಒಂದು ಕಿವಿ ಕೇಳುತ್ತಿರಲಿಲ್ಲ.ಈಗ ಕಪಾಳಕ್ಕೆ ಹೊಡೆದು ಇನ್ನೊಂದು ಕಿವಿಯೂ ಕೇಳದ ಹಾಗೆ ಮಾಡಿ ಬಿಟ್ಟರಲ್ಲಾ ಎಂದು ನನಗೆ ಆ ಮಾಸ್ತರರ ಮೇಲೆ ವಿಪರೀತ ಸಿಟ್ಟು ಬಂತು.ಆ ಮಾಸ್ತರರನ್ನು ನನ್ನ ಬಳಿಗೆ ಕಳಿಸುವಂತೆ ಹೇಳಿದೆ.ಅದಕ್ಕೆ ಅವನ ತಂದೆ 'ಬಿಡಿ ಸಾರ್.ಇದನ್ನ ದೊಡ್ಡ ವಿಷಯ ಮಾಡಬೇಡಿ.ಆ ಮಾಸ್ತರರು ತುಂಬಾ ಒಳ್ಳೆಯವರು.ಇವನೇ ಏನೋ ಮಾಡಬಾರದ ತೀಟೆ ಮಾಡಿರುತ್ತಾನೆ.ಅದಕ್ಕೇ ಅವರು ಏಟು ಕೊಟ್ಟಿದ್ದಾರೆ,ನೀವೇ ಏನಾರ ಔಷಧಿ ಕೊಟ್ಟು ಸರಿ ಮಾಡಿಬಿಡಿ 'ಎಂದ.ನಾನೂ ಸುಮ್ಮನಾದೆ.
ಈ ಘಟನೆ ನಡೆದ ಎರಡು ದಿನಕ್ಕೆ ಒಬ್ಬ ವ್ಯಕ್ತಿ ನನ್ನ ರೂಮಿನ ಹೊರಗೆ ನಿಂತು 'ಒಳಗೆ ಬರಬಹುದಾ ಸರ್'ಎಂದರು . 'ಬನ್ನಿ 'ಎಂದೆ.ಒಳಗೆ ಬಂದು ಕೂತರು.ಮುಖ ಆತಂಕದಿಂದ ಬೆವರುತ್ತಿತ್ತು.ದನಿ ನಡುಗುತ್ತಿತ್ತು.ತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಂಡು 'ಬಿ.ಪಿ.ಚೆಕ್ ಮಾಡಿಸ್ಕೋ ಬೇಕಾಗಿತ್ತು ಸರ್ 'ಎಂದರು.ಬಿ.ಪಿ.ಸುಮಾರಾಗಿಯೇ ಜಾಸ್ತಿ ಇತ್ತು.'ಸಾರ್ ನಾನು ಇಲ್ಲಿ ಮಿಡ್ಲ್ ಸ್ಕೂಲ್ ಮೇಷ್ಟ್ರು.ನನ್ನಿಂದ ಬಹಳ ದೊಡ್ಡ ತಪ್ಪಾಯಿತು.ಕ್ಷಮಿಸಿ ಬಿಡಿ ಸರ್ 'ಎಂದರು.ನಾನು 'ಯಾಕ್ರೀ ಮೇಷ್ಟ್ರೇ ಏನಾಯ್ತು ?'ಎಂದೆ.'ಆ ಹುಡುಗನಿಗೆ ಕಪಾಳಕ್ಕೆ ಹೊಡೆದದ್ದು ನಾನೇ ಸರ್ 'ಎಂದರು.ನಾನು ಸ್ವಲ್ಪ ಬಿಗುವಾದೆ.'ಅಲ್ಲಾ ಮೇಷ್ಟ್ರೇ  ಹುಡುಗರು ತಪ್ಪು ಮಾಡಿದರೆ ತಿದ್ದ ಬೇಕು ಸರಿ.ಆದರೆ ಈ ರೀತಿ ಕಿವಿಯ ತಮಟೆ ಹರಿದು ಹೋಗುವ ಹಾಗೆ ಹೊಡೆಯಬೇಕೆ?ಅದು ತಪ್ಪಲ್ಲವೇ ? ಅವನ ಜೀವಕ್ಕೆ ಅಪಾಯ ವಾಗಿದ್ದರೆ ಏನು ಗತಿ?ಅವನಿಗೆ ಕೇಳುತ್ತಿದ್ದ ಒಂದೇ ಕಿವಿ ಕೂಡ ನೀವು ಹೊಡೆದ ದ್ದರಿಂದ ಹಾಳಾಯಿತಲ್ಲ!'ಎಂದೆ.'ಆ ಹುಡುಗ ಯಾವುದೋ ಹುಡುಗಿಯ ಬಗ್ಗೆ ಬಹಳ ಕೆಟ್ಟ ಪದ ಉಪಯೋಗಿಸಿದ ಸಾರ್.ಮೊದಲೇ ಬಿ.ಪಿ. ಇದೆ.ಸಿಟ್ಟು ಬಂದು ಕಪಾಳಕ್ಕೆ ಒಂದೇಟು ಬಿಟ್ಟೆ .ಈ ರೀತಿಯೆಲ್ಲಾ ಆಗುತ್ತೆ ಅಂತ ಗೊತ್ತಿರಲಿಲ್ಲ .ಇನ್ನು ಮೇಲೆ ಹುಡುಗರ ಮೇಲೆ ಕೈ ಮಾಡೋಲ್ಲ  .ಜೀವನದಲ್ಲಿ ಒಂದು ದೊಡ್ಡ ಪಾಠ ಕಲಿತೆ 'ಎಂದು ಗಧ್ಗದ ಕಂಠದಲ್ಲಿ ಹೇಳಿ ಹೊರಟು ಹೋದರು.
ಅದಾದ ನಂತರ ನಾನು  ದಿನಾ ಬೆಳಗಿನ ಜಾವ ಸ್ಕೂಲಿನ ಗ್ರೌಂಡ್ ಗೆ ವ್ಯಾಯಾಮ ಮತ್ತು ಜಾಗಿಂಗ್ ಮಾಡುವುದಕ್ಕೆ ಹೋಗುತ್ತಿದ್ದಾಗ ಅವರೂ ಸಿಗುತ್ತಿದ್ದರು.ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ.ಸ್ವಲ್ಪ ಮುಂಗೊಪವಿತ್ತು.ಯಾರಿಗಾದರೂ ಸಹಾಯಮಾಡಬೇಕಾದರೆ 'ನಾ ಮುಂದೆ' ಎನ್ನುವಂತಹವರು.ಪರಿಚಯ ಸ್ನೇಹಕ್ಕೆ ತಿರುಗಿತು.ಕೆಲವೇ ದಿನಗಳಲ್ಲಿ 
ಬಹಳ ಆತ್ಮೀಯರಾದರು.ವ್ಯಾಯಾಮವೆಲ್ಲಾ ಮುಗಿಸಿ,ಬೆವರು ಹರಿಸುತ್ತಾ ,ತಂಗಾಳಿಗೆ ಮೈ ಒಡ್ಡಿ ಕುಳಿತಾಗ 
ನಾನು ನನಗೆ ಪ್ರಿಯವಾದ 'ಒಲುಮೆಯ ಹೂವೇ'ಹಾಡನ್ನು ಹೇಳುತ್ತಿದ್ದೆ.ಮೇಷ್ಟ್ರಿಗೆ ಕೂಡ ಈ ಹಾಡು
ಬಹಳ ಇಷ್ಟವಾಗಿತ್ತು .ನಾನು ಹಾಡುವಾಗ ಬಹಳ ಖುಷಿ ಪಡುತ್ತಿದ್ದರು.ಹಾಡು ಕೇಳುತ್ತಾ ಎಷ್ಟೋ ಸಲ ಅವರ ಕಣ್ಣಿನಲ್ಲಿ ನೀರು ಇರುತ್ತಿತ್ತು.2000 april ನಲ್ಲಿ ಅವರಿಗೆ ಎಲೆಕ್ಷನ್ ಡ್ಯೂಟಿಹಾಕಿದ್ದರು.'ಸಾರ್ ನನಗೆ ಎಲೆಕ್ಷನ್ ಡ್ಯೂಟಿ ಗೆ ಹೋಗೋಕೆ ಆಗೋಲ್ಲಾ ,ಒಂದು ಮೆಡಿಕಲ್  ಸರ್ಟಿಫಿಕೇಟ್ ಕೊಡಿ'ಎಂದರು.'ಯಾಕೇ ಮೇಷ್ಟ್ರೇ ?ಏನು ತೊಂದರೆ?'ಎಂದೆ.ಎಲೆಕ್ಷನ್ ಡ್ಯೂಟಿ ತಪ್ಪಿಸೋಕೆ ಎಲ್ಲರೂ ಮಾಡುವ ಸಾಮಾನ್ಯ ಉಪಾಯ ಇದು.'ನಡೆಯೋವಾಗ ಯಾಕೋ ಬ್ಯಾಲೆನ್ಸ್ ತಪ್ಪುತ್ತೆ ಸರ್' ಎಂದರು.ಎಲ್ಲಾ ಪರೀಕ್ಷೆ ಮಾಡಿದಾಗ ನಿಜಕ್ಕೂ ತೊಂದರೆ ಇದೆ ಎನಿಸಿ, C.T.SCAN ಮಾಡಿಸಿಕೊಂಡು ಬರಲು ಬೆಳಗಾವಿಯ ಕೆ.ಎಲ್.ಇ .ಆಸ್ಪತ್ರೆಗೆ ಕಳಿಸಿದೆ.ಅಲ್ಲಿ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು.ಅದು ಶ್ವಾಶಕೋಶಕ್ಕೂ,ಮೆದುಳಿಗೂ ಹರಡಿತ್ತು.ಅವರಿಗೆ ಸುಮಾರು ಹದಿನೆಂಟು ವರ್ಷಗಳಿಂದ ಥೈರಾಯ್ಡ್ ಗ್ರಂಥಿ ಯಲ್ಲಿ ಒಂದು ಸಣ್ಣ ಗಡ್ದೆ ಇತ್ತಂತೆ.ನನಗೂ ಕೂಡ ಮೊದಲೇ ತಿಳಿಸಿರಲಿಲ್ಲ .ಅವರನ್ನು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಸೇರಿಸಿದೆವು. ಸ್ನೇಹಿತರೆಲ್ಲಾ ಸೇರಿ ಅವರ ಚಿಕಿತ್ಸೆಯ ಖರ್ಚಿಗೆಂದು ಸುಮಾರು  ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಸ್ವಇಚ್ಛೆಯಿಂದ ಸೇರಿಸಿ ಕೊಟ್ಟೆವು.
ನನಗೆ ಅಷ್ಟರಲ್ಲಿ ರಾಯಚೂರಿನ ಶಕ್ತಿನಗರಕ್ಕೆ ವರ್ಗವಾಗಿತ್ತು.ಒಂದೆರಡು ತಿಂಗಳ ನಂತರ ಅವರನ್ನು ನೋಡಲು ರಾಯಚೂರಿನಿಂದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋದೆ.ಸ್ಪೆಷಲ್ ವಾರ್ಡಿನ ರೂಮೊಂದರಲ್ಲಿ ಒಬ್ಬರೇ ಇದ್ದರು.Brain surgery ಮಾಡಿ ತಲೆಗೆಲ್ಲಾ ಬ್ಯಾಂಡೇಜ್ ಸುತ್ತಿದ್ದರು.ನನ್ನನ್ನು ನೋಡಿ ಮೇಷ್ಟ್ರಿಗೆ ತುಂಬಾ ಖುಷಿಯಾಯಿತು.ಆನದದಿಂದ ತಬ್ಬಿಕೊಂಡರು.

 'ಸರ್ ಆಪರೇಶನ್ ಆಯ್ತು .ನೀವೂ ನೋಡೋಕೆ ಬಂದ್ರಿ.ಇನ್ನು ಎಲ್ಲಾ ಸರಿ ಹೋಗುತ್ತೆ ಸರ್.ನಿಮ್ಮನ್ನು ನೋಡೋಕೆ ಮುಂದಿನ ಸಲ ಶಕ್ತಿನಗರಕ್ಕೆ ನಾನೇ ಬರುತ್ತೇನೆ'ಎಂದರು. ಆ ಆಯಾಸದಲ್ಲೂ ಸುಮಾರು ಒಂದು ಗಂಟೆ ಹರಟಿದರು.'ಹೆಚ್ಚು ಮಾತನಾಡಬೇಡಿ ಮೇಷ್ಟ್ರೇ ,ಆಯಾಸ ಆಗುತ್ತೆ 'ಎಂದರೂ ಕೇಳಲಿಲ್ಲ.ಕೊನೆಗೆ ನಾನು ಹೊರಟು ನಿಂತೆ.'ಸಾರ್ ,ನಾನಿನ್ನು ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ ,ನನಗೋಸ್ಕರ ಒಂದುಸಲ ಆ ಹಾಡು ಹಾಡಿ ಬಿಡಿ ಸರ್' ಎಂದರು!ಕ್ಯಾನ್ಸರ್ ವಾರ್ಡಿನಲ್ಲಿ ಹಾಡೇ!!?ನಾನು ನನ್ನ ಕನಸು ಮನಸಿನಲ್ಲೂ ಇಂತಹ ಸಂದರ್ಭ
ಊಹಿಸಿಕೊಂಡಿರಲಿಲ್ಲ.'ಬಿಸಿ ತುಪ್ಪ ಉಗುಳುವಂತಿಲ್ಲ,ನುಂಗುವಂತಿಲ್ಲ' ಎನ್ನುವಂತಾಗಿತ್ತು ನನ್ನ ಪರಿಸ್ಥಿತಿ !ಅವರನ್ನು ಆ ಸ್ಥಿತಿ ಯಲ್ಲಿ ನೋಡಿ ಮನಸ್ಸು ಬಹಳ ನೊಂದಿತ್ತು.ಹಾಡುವ ಮೂಡ್ ಇರಲಿಲ್ಲ.ಅವರ ಮನಸ್ಸನ್ನು ನೋಯಿಸದಿರಲು ಅನಿವಾರ್ಯವಾಗಿ ಹಾಡಲೇ ಬೇಕಾಯಿತು.ನನ್ನೆಲ್ಲಾ ನೋವನ್ನೂ ಹೊರ ಹಾಕುವಂತೆ,ಜೀವನದಲ್ಲಿ ಅದೇ ನನ್ನ ಕಡೆಯ ಹಾಡು ಎಂಬಂತೆ ನನ್ನನ್ನೇ ಮರೆತು ಹಾಡಿದೆ!'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೇ!ಉಳಿಸಿ ಕಣ್ಣ ನೀರ,ಈ ನನ್ನ ಬಾಳಿಗೇ'.ಹಾಡು ಮುಗಿಯುವ ವೇಳೆಗೆ ಇಬ್ಬರ ಕಣ್ಣಲ್ಲೂ ಧಾರಾಕಾರ ನೀರು!ಭಾರ ಹೃದಯದಿಂದ ಅವರನ್ನು ಬೀಳ್ಕೊಟ್ಟೆ.ಇದಾದ ಕೆಲವೇ ತಿಂಗಳಲ್ಲಿ ಮೇಷ್ಟ್ರು ತನ್ನ ಇಹ ಲೋಕ ಯಾತ್ರೆ ಮುಗಿಸಿದ್ದರು.ಕಾಣದ ಲೋಕಕ್ಕೆ ಪಯಣ ಬೆಳೆಸಿದ ಆ ನನ್ನ ಆತ್ಮೀಯ ಸ್ನೇಹಿತನಿಗೆ ಈ ನನ್ನ ಮೆಚ್ಚಿನ ಗೀತೆಯ ಮೂಲಕನಮನಗಳನ್ನು ಸಲ್ಲಿಸುತ್ತಿದ್ದೇನೆ.'ಒಲುಮೆಯ ಹೂವೇ!ನೀ ಹೋದೆ ಎಲ್ಲಿಗೇ !ಉಳಿಸಿ ಕಣ್ಣ ನೀರ ಈ ನನ್ನ ಬಾಳಿಗೇ '.

(ಇದು ಹೋದ ವರ್ಷ ಆಗಸ್ಟ್ ನಲ್ಲಿ ಹಾಕಿದ್ದ ಲೇಖನ.ಹೊಸದೇನನ್ನೂ ಬರೆದಿಲ್ಲವಾದ್ದರಿಂದ ನನಗೆ ಇಷ್ಟವಾಗಿದ್ದ ಈ ಹಳೆಯ ಲೇಖನವನ್ನೇ ಹಾಕುತ್ತಿದ್ದೇನೆ.)

Sunday, December 11, 2011

"ಜಗವೆಲ್ಲ ಮಲಗಿರಲು....!!! "

ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು.ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ,ಮೇ ತಿಂಗಳ ಒಂದು ದಿನ.ತಾರೀಕು ಸರಿಯಾಗಿ ನೆನಪಿಲ್ಲ.ರಾತ್ರಿ ಸುಮಾರು ಹತ್ತು ಗಂಟೆ .ವಿಪರೀತ ಸೆಕೆ.ನಿಲ್ದಾಣದಲ್ಲಿ ಜನಗಳ ಜಾತ್ರೆ.ಬೆಳಗ್ಗೆಯೆಲ್ಲಾ ದೆಹಲಿಯ ಸುಡು ಬಿಸಿಲಿಗೆ ಸುಟ್ಟು ಕರಕಲಾಗಿದ್ದೆ.ಹೋದ ಕೆಲಸ ಕೈ ಗೂಡದೆ ಮನಸ್ಸಿಗೆ ನೋವಾಗಿತ್ತು. ಎಲ್ಲಾ ರೈಲುಗಳೂ ಭರ್ತಿಯಾಗಿದ್ದರಿಂದ,'ವಿಶೇಷ'ರೈಲೊಂದರಲ್ಲಿ ಬೆಂಗಳೂರಿಗೆ ಬರ್ತ್ ಒಂದನ್ನು ರಿಸರ್ವ್ ಮಾಡಿಸಿದ್ದೆ.ಆ 'ವಿಶೇಷ'ರೈಲು ಒಂದು ಗಂಟೆ ತಡವಾಗಿ ಬಂತು.ಟ್ರೈನು ಬಂದಾಗ ಬೋಗಿಯಲ್ಲಿ ದೀಪವಿರಲಿಲ್ಲ.ರಿಸರ್ವೇಶನ್ ಇಲ್ಲದವರೆಲ್ಲಾ ಎಲ್ಲಾ ಸೀಟುಗಳನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು.ರಿಸರ್ವೇಶನ್ ಇದ್ದವರು ತಗಾದೆ ತೆಗೆದಿದ್ದರು.ಟಿ.ಟಿ.ಯ ಪತ್ತೆಯೇ ಇರಲಿಲ್ಲ.ಹೇಳುವರು,ಕೇಳುವರು ಇಲ್ಲದೆ ಗದ್ದಲವೋ ಗದ್ದಲ.ಕೆಲವರು ಕೈ ಕೈ ಮಿಲಾಯಸಲು ಶುರು ಮಾಡಿದರು.ನಮ್ಮ ದೇಶದ ಅರಾಜಕತೆಯನ್ನು ಬಿಂಬಿಸುವ ಒಂದು ಮಿನಿ ಅಸೆಂಬ್ಲಿ ಯಂತಿತ್ತು ಆ ಬೋಗಿ.ಅಷ್ಟರಲ್ಲಿ ದೇವ ಧೂತನಂತೆ ಮೇಲೆ ಮಲಗಿದ್ದ ಗಡ್ಡಧಾರಿ ವಿದೇಶಿ ಯುವಕನೊಬ್ಬ ಮೆಲ್ಲಗೆ ಕೆಳಗಿಳಿದು ಬಂದ.ಎಲ್ಲರಿಗೂ ಕೈಮುಗಿದ.ತನ್ನ ಹರಕು ಮುರುಕು ಇಂಗ್ಲೀಷಿನಲ್ಲಿ ,'ದಯಮಾಡಿ ಜಗಳವಾಡಬೇಡಿ'ಎಂದು ಬೇಡಿಕೊಂಡ.ಜಗಳವಾಡುತ್ತಿದ್ದ ಪ್ರಯಾಣಿಕನೊಬ್ಬನಿಗೆ ತನ್ನ ಮೇಲಿನ ಬರ್ತ್ ಬಿಟ್ಟುಕೊಟ್ಟ.ಟ್ರೈನ್ ಹೊರಟು ಅಲ್ಲಿ ಶಾಂತಿ ನೆಲಸುವವರೆಗೂ ತನ್ನ ಬ್ಯಾಕ್ ಪ್ಯಾಕ್ ತಗುಲಿಸಿಕೊಂಡು ಅಲ್ಲೇ ನಿಂತಿದ್ದ.ಅವನ ಮುಖದಲ್ಲಿ ಅಪೂರ್ವ ಕಾಂತಿಯಿತ್ತು.ಕಂಡೂ ಕಾಣದಂತೆ ಮುಗುಳು ನಗೆ ಇತ್ತು.ನನ್ನ ಪಕ್ಕ ಸ್ವಲ್ಪ ಜಾಗ ಮಾಡಿ ಕೊಟ್ಟು, ಕುಳಿತುಕೊಳ್ಳುವಂತೆ ಹೇಳಿದೆ.ಬ್ಯಾಕ್ ಪ್ಯಾಕ್ ಕೆಳಗಿಟ್ಟು ನನ್ನ ಪಕ್ಕ ಕುಳಿತ.ಎಲ್ಲರಿಗೂ ಅವನ ಬಗ್ಗೆ ಕುತೂಹಲ.ನಿಧಾನವಾಗಿ ತನ್ನ ಬಗ್ಗೆ ಹೇಳ ತೊಡಗಿದ.ಅವನದು ಇರಾನ್ ನಲ್ಲಿ ಒಂದು ಸಣ್ಣ ಊರು.ಇವನ ತಂದೆ ಅಲ್ಲಿನ ಎಲೆಕ್ಟ್ರಿಸಿಟಿ ಬೋರ್ಡಿನ ನೌಕರನಾಗಿ ಆಗ ತಾನೆ ನಿವೃತ್ತಿ ಹೊಂದಿದ್ದ.ಇರಾನ್ ,ಇರಾಕ್ ನಡುವೆ ಯುದ್ದ ಶುರುವಾಗಿ ಕೆಲವು ವರ್ಷಗಳಾಗಿತ್ತು.ಇವನ ಊರಿನಿಂದ ಯುದ್ಧಕ್ಕೆ ಹೋದಇವನ ಹಲವಾರು ಸ್ನೇಹಿತರು ಯುದ್ಧದಲ್ಲಿ ಸತ್ತಿದ್ದರು.ಇವನಿಗೂ ಯುದ್ಧಕ್ಕೆ ಸೇರುವಂತೆ ಕರೆ ಬಂದಿತ್ತು .ಇವನ ತಂದೆ ತಾಯಿಗಳಿಗೆ ತಮ್ಮ ಒಬ್ಬನೇ ಮಗನನ್ನು ಯುದ್ಧಕ್ಕೆ ಕಳಿಸಲು ಇಷ್ಟವಿರಲಿಲ್ಲ.ಅವನ ತಂದೆ ರಿಟೈರ್ ಮೆಂಟಿನಿಂದ ಬಂದ ತನ್ನ ಎಲ್ಲಾ ಹಣವನ್ನೂ ಖರ್ಚು ಮಾಡಿ ,ಅವರಿವರನ್ನು ಹಿಡಿದು ಅವನಿಗೆ ಬೇರೆ ಯಾರದೋ ಹೆಸರಿನಲ್ಲಿ ಪಾಸ್ ಪೋರ್ಟ್ ಕೊಡಿಸಿ 'ನೀನು ಜೀವಂತವಾಗಿದ್ದರೆ ಸಾಕು ಮಗು.ಪ್ರಪಂಚ ವಿಶಾಲವಾಗಿದೆ. ಎಲ್ಲೋ ಒಂದು ಕಡೆ ನಿನಗೆ ಆಶ್ರಯ ಸಿಗುತ್ತದೆ.ಇಲ್ಲಿ ಯುದ್ಧದಲ್ಲಿ ಸಾಯಬೇಡ.ಎಲ್ಲೋ ಒಂದು ಕಡೆ ನೀನು ಬದುಕಿದ್ದರೆನಮಗೆ ಅಷ್ಟೇ ಸಾಕು'ಎಂದು ಅವನನ್ನು ಅಲ್ಲಿಂದ ಸಾಗ ಹಾಕಿದ್ದ.ಅವನು ಮೊದಲು ಯಾವುದೋ ಬೇರೆ ದೇಶದಲ್ಲಿ ಸ್ವಲ್ಪ ದಿನ ಇದ್ದು, ಒಂದು ತಿಂಗಳ ಕೆಳಗೆ ದೆಹಲಿಗೆ ಬಂದಿದ್ದ.ಅಲ್ಲಿ ಫುಟ್ ಪಾತಿನಲ್ಲಿ ಮಲಗುತ್ತಾ ,ಬ್ರೆಡ್ಡು ,ಮೊಟ್ಟೆ ತಿಂದು ಹಸಿವೆ ನೀಗಿಕೊಳ್ಳುತ್ತಾ ಆಶ್ರಯಕ್ಕಾಗಿ ಹಲವಾರು ಕನ್ಸಲೇಟ್ ಗಳಿಗೆ ಅಲೆಯುತ್ತಾ ಒಂದು ತಿಂಗಳು ಕಳೆದಿದ್ದ.ಇನ್ನು ಕೆಲವು ದಿನಗಳಲ್ಲಿ ನಮ್ಮ ದೇಶ ಬಿಟ್ಟು ಹೋಗಬೇಕಾಗಿತ್ತು.ಇಲ್ಲಿಂದ ಶ್ರೀಲಂಕಾಗೆ ಹೋಗಿ ಅಲ್ಲಿ ಆಶ್ರಯಕ್ಕಾಗಿ ಪ್ರಯತ್ನಿಸುವುದಾಗಿ ಹೇಳಿದ.ಯುದ್ಧ ನಿಂತ ಮೇಲೆ ಮನೆಗೆ ಹಿಂದಿರುಗುವುದಾಗಿಯೂ,ಯಾವು ದಾದರೂ ಕೆಲಸಕ್ಕೆ ಸೇರುವ ಮುನ್ನ ಸ್ವಲ್ಪ ದಿನ ಮನೆಯಲ್ಲಿದ್ದು ಕವಿತೆಗಳನ್ನು ಓದುತ್ತಾ, ವಯಸ್ಸಾದ ಅಮ್ಮನಿಗೆ ಅಡಿಗೆ ಮನೆಯಲ್ಲಿ ಪಾತ್ರೆ ತೊಳೆಯಲು ಸಹಾಯಮಾಡುವುದಾಗಿ ಹೇಳಿದ.ಜೀವಂತವಾಗಿರುವುದೇ ಒಂದು ಸಂತಸದ ವಿಷಯವಲ್ಲವೇ?ಅದನ್ನು ಹೀಗೆ ಪರಸ್ಪರ ಕಚ್ಚಾಡಿಕೊಂಡು ಹಾಳು ಮಾಡಿಕೊಳ್ಳುವುದುಸರಿಯೇ ?ಎಂದು ಕೇಳಿದ. ಹಾಗೆ ಹೇಳುವಾಗ ಅವನ ಕಣ್ಣುಗಳಲ್ಲಿ ನೀರಿತ್ತು.ರಾತ್ರಿ ಹನ್ನೆರಡಾಗುತ್ತಿತ್ತು.ಟ್ರೈನಿನ 'ಧಡ ಬಡ' ಸದ್ದಿನ ಜೋಗುಳಕೆ ಹಲವರು ಕುಳಿತಲ್ಲೇ ತೂಕಡಿಸುತ್ತಿದ್ದರು.ಅವನು ತನ್ನ ಬ್ಯಾಕ್ ಪ್ಯಾಕ್ ಎತ್ತಿಕೊಂಡು ಟಾಯ್ಲೆಟ್ ನ ಹತ್ತಿರದ ಪ್ಯಾಸೇಜ್ ನಲ್ಲಿ ,ಕೆಳಗೆ ನ್ಯೂಸ್ ಪೇಪರ್ ಹಾಸಿಕೊಂಡು ಅದರ ಮೇಲೆ ಕುಳಿತು ಚೀಲದಿಂದ ಕೊಳಲೊಂದನ್ನು ಹೊರತೆಗೆದು,ಜಗದ ಚಿಂತೆಗಳಿಗೆ ಇತಿಶ್ರೀ ಹಾಡುವಂತೆ ಇಂಪಾದ ರಾಗವೊಂದನ್ನು ನುಡಿಸ ತೊಡಗಿದ.ಟ್ರೈನಿನ ಕಿಟಕಿಯ ಹೊರಗೆ ನೋಡಿದೆ.ಓಡುವ ,ಮರ,ಗಿಡ,ಹೊಲ,ಗದ್ದೆಗಳ ಮೇಲೆ ತಣ್ಣಗೆ ಬೆಳದಿಂಗಳು ಹರಡಿತ್ತು. ಟ್ರೈನಿನ ಒಳಗೆ ಇಂಪಾದ ಕೊಳಲಿನ ನಾದ.'ಬುದ್ಧ,ಬುದ್ಧ ,ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ'ಎಂಬ ಕವಿತೆಯೊಂದರ ಸಾಲುಗಳು ನೆನಪಾದವು.

Wednesday, December 7, 2011

"ತಣ್ಣಗಿರಿಸಾತ್ಮವನು...."

ಕಡ್ಡಿಯನ್ನು ಗುಡ್ಡ ಮಾಡಿ
ಗುಡ್ಡವನ್ನು ವೃಥಾ
ಅಗೆದದ್ದೇ,ಅಗೆದದ್ದು!
ನೆಮ್ಮದಿಯ  ಸಿಹಿನೀರಾಗಲೀ 
ಅರಿವಿನ ಊಟೆಯಾಗಲೀ
ದಕ್ಕಿತೇ ದಣಿವು ನೀಗಲು?
ಬದಲಿಗೆ ಸಂಚಯ 
ರಾಶಿ ರಾಶಿ,ಗುಡ್ಡೆ ಗುಡ್ಡೆ 
ವ್ಯರ್ಥ ಚಿಂತೆಯ ಮಣ್ಣು!
ನಿದ್ದೆ ಬಾರದೆ ಅಳುವ 
ತೊಟ್ಟಿಲಿನ ಕೂಸನ್ನು 
ಗಂಟೆಗಟ್ಟಲೆ
ತೂಗಿದ್ದೇ ,ತೂಗಿದ್ದು !
ತೊಡೆಗೆ ಬಂದೊಡನೇ
ಮಗುವಿಗೆ ಸವಿ ನಿದ್ದೆ!
ಸಾಗರದಲೆಗಳಂತೆ ಭೋರ್ಗರೆದ
ತಿಂಗಳುಗಟ್ಟಲೆಯ  
ಚಿಂತೆಯ ಮೊರೆತ
ನೀರಿನ ಆವಿಯಂತೆ 
ಕ್ಷಣ ಒಂದರಲೇ ಮಾಯ!
ಕಾಯಬೇಕು ಆ ಸಮಯಕ್ಕೆ!
ಒಂಬತ್ತು  ತಿಂಗಳ ನರಳಿಕೆಯ 
ಸುಖಪ್ರಸವದ ಸುಮುಹೂರ್ತಕ್ಕೆ!
ಸಮಯ ಬಂದಾಗ..........,
ಎಲ್ಲವೂ ಸುಸೂತ್ರ!!

Sunday, December 4, 2011

"ಧ್ಯಾನದಲ್ಲಿ ಫ್ಲಶ್ ಮಾಡಿ!" ( Flush Meditatively ! )

ಎರಡು ವರ್ಷಗಳ ಹಿಂದೆ ಬೆಂಗಳೂರಿನ ಚಿತ್ರ ಕಲಾ ಪರಿಷತ್ ಗೆ ಹೋಗಿದ್ದೆ.ಅಲ್ಲೊಂದು ಚಿತ್ರಕಲಾ ಪ್ರದರ್ಶನ ನೋಡಿಕೊಂಡು ವಾಪಸ್ ಬರುತ್ತಿದ್ದಾಗ ಅಲ್ಲೇ 'ಓಶೋ ಮೆಡಿಟೇಶನ್ ಸೆಂಟರ್'ಎನ್ನುವ ಬೋರ್ಡ್ ಕಾಣಿಸಿತು.ಸರಿ,ಒಮ್ಮೆ ನೋಡಿಕೊಂಡು ಬರೋಣ ಎಂದು ಒಳ ಹೊಕ್ಕೆ.ಅದನ್ನು ನೋಡಿಕೊಳ್ಳುತ್ತಿದ್ದ ಸುಮಾರು ಎಂಬತ್ತು ವರ್ಷಗಳ ವಯೋ ವೃದ್ಧರ ಮುಖದಲ್ಲಿ ಅಪೂರ್ವ ಕಾಂತಿ ಇತ್ತು.ಅವರು ಆಚಾರ್ಯ ರಜನೀಶರಿಗೆ ಬಹಳ ಆಪ್ತರಾಗಿದ್ದವರು.ಹತ್ತಿರದಿಂದ ಬಲ್ಲವರು.ಬೆಂಗಳೂರಿನ ಸೆಂಟರ್ ಅನ್ನು ಸುಮಾರು ಮೂವತ್ತು ವರ್ಷಗಳಿಂದ ಅವರೇ ನೋಡಿಕೊಳ್ಳುತ್ತಿದ್ದಾರೆ .ಅವರ ನಡವಳಿಕೆಯಲ್ಲಿ ಒಂದು ವಿಶಿಷ್ಟ ರೀತಿಯ ಸೌಮ್ಯತೆ ಇತ್ತು .ಅಲ್ಲಿದ್ದ ಲೈಬ್ರರಿಯಲ್ಲಿ ಕೆಲ ಪುಸ್ತಕಗಳನ್ನು ಖರೀದಿಸಿದೆ.ಅಲ್ಲೇ ಇದ್ದ ಧ್ಯಾನ ಮಂದಿರದಲ್ಲಿ ಕುಳಿತು ಧ್ಯಾನ ಮಾಡಿದಾಗ ಮನಸ್ಸಿಗೆ  ಯಾವುದೋ ಅಲೌಕಿಕ ಆನಂದದ ಅನುಭೂತಿಯಾಯಿತು.ಅಲ್ಲಿದ್ದ ಪ್ರಶಾಂತ ವಾತಾವರಣ ವಿಶಿಷ್ಟವೆನಿಸಿತ್ತು.ಅಲ್ಲೇ ಹಿಂದೆ ಇದ್ದ ಟಾಯ್ಲೆಟ್ಟಿಗೆ ಹೋದೆ.ಅಲ್ಲಿ ಫ್ಲಷ್ ಮಾಡುವ ಜಾಗದಲ್ಲಿ 'FLUSH  MEDITATIVELY ' ಎನ್ನುವ ಬೋರ್ಡ್ ಇತ್ತು! 
ಕುತೂಹಲದಿಂದ ಅಲ್ಲಿಯ ಮೇಲ್ವಿಚಾರಕರಲ್ಲಿ  ಅದರ ಪ್ರಸ್ತಾಪ ಮಾಡಿದೆ.ಅದಕ್ಕೆ ಅವರು ನಗುತ್ತ ಕೊಟ್ಟ ಉತ್ತರ ಬಹಳ ಅರ್ಥ ಪೂರ್ಣವಾಗಿತ್ತು.'ನೀವು ಏನೋ ಯೋಚನೆ ಮಾಡುತ್ತಾ ಜೋರಾಗಿ flush ಮಾಡಿದರೆ ಅದರ ಹಿಡಿಯೇ ಕಿತ್ತು ಹೋಗಬಹುದು.ಧ್ಯಾನದಲ್ಲಿ ಇರುವುದು ಎಂದರೆ ಸಂಪೂರ್ಣ ಎಚ್ಚರದಲ್ಲಿ ಇರುವುದು ಎಂದರ್ಥ.ನೀವು ಯಾವುದೇ ಕೆಲಸ ಮಾಡುವಾಗ ಸಂಪೂರ್ಣ ಎಚ್ಚರದ ಸ್ಥಿತಿಯಲ್ಲಿ ಇರಿ ಎನ್ನುವುದನ್ನು ನೆನಪಿಸುವುದಕ್ಕೆ ಆ ರೀತಿ ಬೋರ್ಡ್ ಹಾಕಿದ್ದೇವೆ. ಧ್ಯಾನದ ಸ್ಥಿತಿಯಲ್ಲಿ ನಿಮ್ಮ ಮನಸ್ಸಿನಲ್ಲಿರುವ ಚಿಂತೆ ಮತ್ತು ಕೆಟ್ಟ ಆಲೋಚನೆಗಳನ್ನೂ flush ಮಾಡಿ 'ಎಂದು ಮಾರ್ಮಿಕವಾಗಿ ನಕ್ಕರು ! ಅವರ ಅರ್ಥ ಪೂರ್ಣ ಮಾತುಗಳ ಬಗ್ಗೆ ಯೋಚಿಸುತ್ತಾ ಮನೆಯ ದಾರಿ ಹಿಡಿದೆ.