ಅದೊಂದು ಸಾಧಾರಣ ಬೀದಿ ನಾಯಿ.ಆದರೆ ಅದರಲ್ಲಿ ಎಂತಹ ಅಸಾಧಾರಣ ಪ್ರೀತಿ ಇದೆ ಮತ್ತು ಆ ಪ್ರೀತಿಯಲ್ಲಿ ಎಂತಹ ಮಾಂತ್ರಿಕತೆ ಇದೆ ಎನ್ನುವುದು ಅದನ್ನು ಅನುಭವಿಸಿದವರಿಗೇ ಗೊತ್ತು!ಸುಮಾರು ಹತ್ತು ವರ್ಷಗಳಿಂದ ಅದನ್ನು ನೋಡುತ್ತಿದ್ದೇವೆ.ತಿಂಗಳಿಗೋ,ಎರಡು ತಿಂಗಳಿಗೋ ಒಮ್ಮೆ ಬೆಂಗಳೂರಿಗೆ ಹೋದಾಗ ಸಾಮಾನ್ಯವಾಗಿ ನಾವು 'ಕಾವಲ್ ಬೈರ್ ಸಂದ್ರ' ದಲ್ಲಿರುವ ನೆಂಟರೊಬ್ಬರ ಮನೆಯಲ್ಲೇ ಉಳಿದುಕೊಳ್ಳುವುದು.ಆ ನಾಯಿ ಒಮ್ಮೊಮ್ಮೆ ಗೇಟಿನ ಒಳಗೆ ಬಂದು ಹಾಯಾಗಿ ಚಪ್ಪಲಿಗಳಿರುವ ಮೂಲೆಯೊಂದರಲ್ಲಿ ಹಾಗೆಯೇ ಮುದುರಿಕೊಂಡು ಮಲಗುತ್ತದೆ.ಮನೆಯೊಡತಿಯ ದನಿ ಕೇಳಿದರೆ ಸಾಕು, ಹೊರಕ್ಕೆ ಓಟ!ಆದರೆ ನಾವೆಲ್ಲಾ ಬಂದಾಗ ಅದಕ್ಕೇನೋ ಖುಷಿ.ಅದು ಹೇಗೋ ನಾವು ಬಂದಿದ್ದು ಪತ್ತೆ ಹಚ್ಚಿ ,ಬಾಲ ಅಲ್ಲಾಡಿಸುತ್ತಾ ಒಳಗೆ ಬಂದು ನಮ್ಮ ಮೇಲೆ ಎಗರುತ್ತದೆ.ಪ್ರೀತಿಯಿಂದ ತಲೆ ಸವರಿಸಿಕೊಳ್ಳುತ್ತದೆ!ನಿಲ್ಲಿಸಿದರೆ ,ಬಲಗಾಲನ್ನು ಮೇಲೆತ್ತಿ ,ಮತ್ತೆ ತಲೆ ಸವರುವಂತೆ ಸನ್ನೆ ಮಾಡುತ್ತದೆ!ಮನೆಯೊಡತಿ ಬಂದು ಎಷ್ಟು ಗದರಿದರೂ ಆಚೆ ಹೋಗುವುದಿಲ್ಲ!ನಾವೆಲ್ಲಾ ಇದ್ದೇವೆ ಅನ್ನೋ ಭಂಡ ಧೈರ್ಯವೋ ಏನೋ!ಮನೆಗೆ ಬಂದವರು ಅಂಗಡಿಗೆ ಹೋಗಿ ಅದಕ್ಕೆ ಒಂದು ಚೂರು ಬನ್ನನ್ನೋ ,ಬ್ರೆಡ್ಡನ್ನೋ ಹಾಕಿದರೆ ಸ್ವರ್ಗ ಸಿಕ್ಕವರಂತೆ ಆಡುತ್ತದೆ!ನಾನು ಹೋದಾಗ ಅದರ ಬಳಿ ಸ್ವಲ್ಪ ಹೊತ್ತು ಕುಳಿತು ಅದರ ಪ್ರೀತಿಯ ವಲಯದ ತರಂಗಗಳನ್ನು ಅನುಭವಕ್ಕೆ ತಂದು ಕೊಳ್ಳುತ್ತೇನೆ.ಅದೆಂಥದೋ ಅನಿರ್ವಚನೀಯ ಆನಂದ ಸಿಗುತ್ತದೆ.ಈ ಸಲ ಹೋದ ವಾರ ಹೋದಾಗ ಒಂದು ಅಪೂರ್ವ ಘಟನೆ ನಡೆಯಿತು.ಅದಕ್ಕೆ ಬಹಳ ಪ್ರೀತಿ ಪಾತ್ರರೊಬ್ಬರು ಬೆಳೆಗ್ಗೆ ಒಂಬತ್ತು ಗಂಟೆಗೆ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು..ಅದೆಲ್ಲಿತ್ತೋ ಮಹರಾಯ,ಸರಿಯಾದ ಸಮಯಕ್ಕೆ ಬಾಲ ಅಲ್ಲಾಡಿಸಿಕೊಂಡು ಬೀಳ್ಕೊಡಲು ಹಾಜರಾಯಿತು!ಅವರು ಕಾರನ್ನು ಹತ್ತಿದ ಮೇಲೆ,ಅದಕ್ಕೆ ಅವರ ಮುಖ ಸರಿಯಾಗಿ ಕಾಣಿಸುತ್ತಿರಲಿಲ್ಲ.ತಕ್ಷಣ ಎದುರು ಮನೆಯ ಕಾಂಪೌಂಡ್ ಹತ್ತಿ ಅವರು ಹೋಗುವುದನ್ನೇ ನೋಡುತ್ತಾ ಕುಳಿತಿತ್ತು!ಕಾರು ಮುಂದೆ ಹೋದ ಮೇಲೆ ,ಕೆಳಗಿಳಿದು ಗೇಟಿನ ಬಳಿ ನಿಂತಿದ್ದ ನಮ್ಮ ಬಳಿ ಬಾಲ ಅಲ್ಲಾಡಿಸುತ್ತಾ ಬಂತು.ಆ ಮೂಕ ಪ್ರಾಣಿಯ ಪ್ರೀತಿ ಕಂಡು ಮೂಕ ವಿಸ್ಮಿತ ನಾಗಿದ್ದೆ!! ಅಬ್ಬಾ!!.......ಎಂತಹಾ ಅದ್ಭುತ ಪ್ರೀತಿ ಅದು!!!
ಮನುಜರು ತಮ್ಮ ವಿಶ್ವಾಸವನ್ನು ಪದಗಳಲ್ಲಿ ವಿವರಿಸಿದರೆ ಈ ಸುಂದರ ಮೂಕ ಪ್ರಾಣಿಗಳು ತಮ್ಮ ಅಭಿಮಾನವನ್ನು ಮೂಕವಾಗಿ ವಿವರಿಸುತ್ತವೆ..ನಾಯಿಗಳಲ್ಲಿರುವ ನಿಯತ್ತು, ಪ್ರಾಮಾಣಿಕತೆ ಒಂದು ದಂತ ಕಥೆಯೇ ಸರಿ...ಸುಂದರ ಅನುಭವದ ಮಾಲಿಕೆ ಡಾಕ್ಟ್ರೆ...
ReplyDeleteನಾಯಿ ಮತ್ತು ಮನುಜನ ನಡುವೆ ಒಂದು ಪ್ರೀತಿಯ ಅನುಬಂಧವಿದೆ. ಮನೆ ಒಡೆಯ ತೀರಿಕೊಂಡ ಮೇಲೆ ಅವರ ಚಿಂತೆಯಲ್ಲೇ ಮಂಕಾಗಿ ಸತ್ತ ನಾಯಿಗಳ ಕತೆಗಳನ್ನೂ ಕೇಳಿದ್ದೇವೆ.
ReplyDeleteಪ್ರಾಣಿಗಳಿಂದ ಮನುಜ ಕಲಿಯ ಬೇಕಾದ ಒಲುಮೆ, ಆತ್ಮೀಯತೆ ಮತ್ತು ಕೃತಜ್ಞತಾ ಭಾವಗಳನ್ನು ಇಲ್ಲಿ ಚೆನ್ನಾಗಿ ನಿರೂಪಿಸಿದ್ದೀರ.
ಪ್ರೀತಿಗೆ, ನಂಬಿಕೆಗೆ ನಾಯಿಯೇ ಇನ್ನೊಂದು ಹೆಸರು. ಅದರ ಪ್ರೀತಿಯ ಬಗೆಗಿನ ನಾನಾ ಕಥೆಗಳನ್ನು ಕೇಳಿದ್ದೇವೆ. ನಿಮ್ಮ ಅನುಭವವೂ ವಿಶೇಷ ಅನುಭೂತಿ ಕೊಟ್ಟಿತು..
ReplyDeleteಚಿಕ್ಕದಾದ ಬರಹದಲ್ಲೇ ಅದೇಷ್ಟೋ ಮೌಲ್ಯಗಳನ್ನು ಅದುಹೇಗೆ ಹೇಳುತ್ತೀರಾ ಸಾರ್...
ReplyDeleteನಿಜವಾಗಿಯೂ ನಾಯಿಯಿಂದ ಕಲಿಯುವುದು ನಾವು ತುಂಬಾ ಇದೆ..
ಚೆನಾಗಿತ್ತು..
ಇಷ್ಟವಾಯ್ತು..
ಸಾಕು ನಾಯಿಗಳು ತಮ್ಮ ಮಾಲೀಕರು ಮತ್ತು ಅವರಿಗೆ ಹತ್ತಿರವಾಗಿರುವವರ ಪ್ರತಿ ತೋರಿಸುವ ಪ್ರೀತಿಯ ಬಗ್ಗೆ ಅನೇಕ ಕಥೆಗಳನ್ನು, ಬರಹ ಗಳನ್ನು ಓದುತ್ತಿರುತ್ತೇವೆ....ಅಂತಹುದೇ ಇನ್ನೊಂದು ಉದಾಹರಣೆಯನ್ನು ನೀವು ಕೊಟ್ಟಿದ್ದಿರಿ. ನಾಯಿಗಳಿಗೆ ಇರುವ ನಿಯತ್ತು, ಪ್ರಾಮಾಣಿಕತೆ ಮನುಷ್ಯನಿಗೆ ಇರುವುದಿಲ್ಲ ಎನ್ನುವುದು ಒಪ್ಪಲೇಬೇಕಾದ ವಿಷಯ.....ಸುಂದರ ಬರಹ ಸರ್....
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.ನಾನು ನಾಯಿಯನ್ನು ಸಾಕಿಲ್ಲವಾದ್ದರಿಂದ ಅದರ ನಡವಳಿಕೆಗಳ ಬಗ್ಗೆ ಅಷ್ಟೊಂದು ತಿಳಿಯದು.ಪ್ರೀತಿ ಮತ್ತು ಪ್ರಾಮಾಣಿಕತೆ ಅದರ ವಿಶಿಷ್ಟ ಗುಣಗಳು.ತನ್ನ ಪ್ರೀತಿ ಪಾತ್ರರು ಕಾರಿನಲ್ಲಿ ಹತ್ತಿ ಕಾಣದಾದಾಗ ಎದುರು ಮನೆಯ ಕಾಂಪೌಂಡ್ ಹತ್ತಿ ಅವರು ಹೋಗುವುದನ್ನೇ ನೋಡುತ್ತಾ ಕುಳಿತು ನಂತರ ಕೆಳಗೆ ಇಳಿದು ಬಂದಿದ್ದು ವಿಷಿತ ನಡವಳಿಕೆ ಎನಿಸಿತ್ತು.ಅದಕ್ಕೇ ತಮ್ಮೆಲ್ಲರೊಂದಿಗೆ ಹಂಚಿಕೊಂಡೆ.ನಮಸ್ಕಾರ.
ReplyDelete