Thursday, December 6, 2012

"ಸರ್.......ಸೆಂಟ್ ಬರುತ್ತೆ!!! "

ನನ್ನ ವೈದ್ಯಕೀಯ ವೃತ್ತಿ ಜೀವನದ ಸುಮಾರು ಮೂವತ್ತಾರು ವರ್ಷಗಳಲ್ಲಿ ಇದೇ  ಮೊದಲ ಬಾರಿಗೆ ಇಂತಹ ತೊಂದರೆಯೊಂದನ್ನು ನಾನು ಕೇಳಿದ್ದು !!! ಮೊನ್ನೆ ಆಸ್ಪತ್ರೆಯ ಪರೀಕ್ಷಾ ಕೊಠಡಿಯಲ್ಲಿ ರೋಗಿಯೊಬ್ಬ ಬಂದು ಕುಳಿತ."ಏನಪ್ಪಾ....,ಏನು ತೊಂದರೆ?" ಎಂದೆ ."ಸಾರ್ ...,ಮೂತ್ರದಲ್ಲಿ ಸೆಂಟ್ ಬರುತ್ತೆ "ಎಂದ.ಈ ಹೊಸ ತರಹದ ಕಂಪ್ಲೈಂಟ್  ಕೇಳಿ ಒಂದು ಕ್ಷಣ ಅವಾಕ್ಕಾದೆ!!!ಅವನ ತೊಂದರೆ ಅರ್ಥವಾದರೂ,ಸ್ವಲ್ಪ ತಮಾಷೆ ಮಾಡೋಣ ಎನಿಸಿ,ನಗುತ್ತಾ "ಅಲ್ಲಪ್ಪಾ.......,ಎಲ್ಲರೂ ಸೆಂಟ್ ಹೊಡ್ಕೋತಾರೆ.ನಿನಗೆ ಮೂತ್ರದಲ್ಲೇ ಸೆಂಟ್ ಬರೋದಾದ್ರೆ ಒಳ್ಳೇದೇ ಆಯ್ತಲ್ಲಾ!!!"ಎಂದೆ .ರೋಗಿಗೆ ತನ್ನ ತಪ್ಪು ಅರಿವಾಗಿ,ಅವನೂ ನಗುತ್ತಾ "ಅಯ್ಯೋ ......ಆ ಸೆಂಟ್ ಅಲ್ಲಾ ಸಾರ್,ಒಂದು ರೀತಿ ಕೆಟ್ಟ ವಾಸನೆ ಬರುತ್ತೆ"ಎಂದ.ಪಾಪ 'ಸ್ಮೆಲ್ 'ಅನ್ನುವುದಕ್ಕೆ ಬದಲಾಗಿ ಸೆಂಟ್ ಅಂದಿದ್ದ. ಕನ್ನಡದಲ್ಲಿ 'ವಾಸನೆ ಬರುತ್ತೆ 'ಅಂದಿದ್ದರೆ ಆಗುತ್ತಿತ್ತಲ್ಲಪ್ಪಾ ...,ಇಷ್ಟೆಲ್ಲಾ ಕಸರತ್ತು ಯಾಕೆ ಎಂದು ಹೇಳಿ ಔಷಧಿ ಕೊಟ್ಟು ಕಳಿಸಿದೆ.ವೈದ್ಯ ಮಿತ್ರರೊಬ್ಬರಿಗೆ ಈ ಘಟನೆಯ ಬಗ್ಗೆ ಹೇಳಿದಾಗ,'ದಿನ ನಿತ್ಯ ಇಂತಹ ಅನುಭವಗಳು ಆಗುತ್ತಲೇ ಇರುತ್ತವೆ ಸಾರ್!! "ಮೋಶನ್ ಟೆಸ್ಟ್ "   ಮಾಡಿ ಅನ್ನೋಕೆ "ಮೋಹನ್ ಟೆಸ್ಟ್" ಮಾಡಿ ಅಂತಾರೆ!"ಸ್ಟೂಲ್ ಟೆಸ್ಟ್ ಮಾಡಿ" ಅನ್ನೋಕೆ "ಟೂಲ್ ಟೆಸ್ಟ್ ಮಾಡಿ "ಅಂತಾರೆ!!!' ಎಂದರು ನಗುತ್ತಾ.

7 comments:

 1. ನಿಜ ಡಾಕ್ಟ್ರೇ....ಒಂದೆರಡಾದರೂ ಇರ್ಲೇ ಬೇಕು...ಪೂರ್ತಿ ಕನ್ನಡ ಮಾತಾಡಿದರೂ ಒಮ್ಮೆಮ್ಮೆ ಅರ್ಥವಾಗುವುದು ಕಡಿಮೆ...
  ಹಾಂ ಚಿಕ್ಕಂದಿನಲ್ಲಿ ನಮ್ಮನೆ ತೋಟಕ್ಕೆ ಕೆಲಸಕ್ಕೆ ಬರುವ ಹೆಂಗಸೊಬ್ಬಳು ನಮ್ಮಮ್ಮನಿಗೆ ಹೇಳುತ್ತಿದ್ದುದು..."ಅಮ್ಮಾ ನನ್ ಮಗಾ ಡೈರಿ ಪ್ಯಾಟಿಗ್ ಹೋತಾನ"(ಹೋಗುತ್ತಾನೆ) ಅಂತಾ..ಅಮ್ಮ ಒಂದು ಕ್ಷಣ ಯೋಚಿಸಿ.."ಹಾಲಿನ ಡೈರಿಗಾ?"ಅಂದ್ರು.."ಉಹು ,ಡೈರಿ ಹೋತಾನ" ಎಂದಾಗ ಅಮ್ಮ ಮತ್ತೆ "ಎನು ಹಾಲಿನ ಡೈರಿಯೋ ಅಥವಾ ಎನು ಕೆಲಸಕ್ಕೆ??"ಎಂದು ಕೇಳುತ್ತಿದಾಗ "ಅಲ್ರಾ ದಿನಾ ಹೋತಾನ" ಎಂದು ಉತ್ತರ ಕೊಟ್ಟರು..."ಡೈಲಿ" ಎನ್ನುವುದು ಡೈರಿ ಆಗಿತ್ತಷ್ಟೇ....ಯಾಕೋ ನೆನಪಾಯ್ತು ಹೇಳ್ದೆ...ಚೆನಾಗಿದೆ...ಸರ್..ಬರ್ತಿನಿ..
  ನಮಸ್ತೆ..

  ReplyDelete
 2. ಚೆನ್ನಾಗಿದೆ ಸರ್...ಏನೋ ಹೇಳೋದಿಕ್ಕೆ ಹೋಗಿ ಇನ್ನೇನೋ ಅಪಾರ್ಥವಾಗೋಕ್ಕಿಂತ ನಮ್ಮ ಭಾಷೆಯಲ್ಲಿಯೇ ಮಾತನಾಡಿದರೆ ಒಳ್ಳೆಯದು..

  ReplyDelete
 3. ಭಾಷೆ ಸುಂದರ ಭಾಸ ನೀಡುತ್ತದೆ..ತಪ್ಪಿದರೆ ಅಭಾಸವಾಗುತ್ತದೆ..ಒಳ್ಳೆ ಸೆಂಟಿನ ಪ್ರಸಂಗ..ಸೊಗಸಾಗಿದೆ ಡಾಕ್ಟ್ರೆ..

  ReplyDelete
 4. ಹ್ಹ ಹ್ಹ..ಟೂಲ್ ಟೆಸ್ಟ್ ಮಾಡೊದು..... ನಿಮ್ಮ ಅನುಭವಗಳು ವಿಚಿತ್ರ, ವಿಶಿಷ್ಟ..... ಮಜವಾಗಿರತ್ತೆ......

  ReplyDelete
 5. ಹೌದೌದು. ಕೆಲವು ಮಜಾ ನಡೀತಿರುತ್ತೆ. ಕಾಫೀಸೀಮೆಗೆ ಬರುವ ಬಯಲುಸೀಮೆ ಮಂದಿಗೆ 'ಶರೀರ' ಅಂದ್ರೆ ಬೇರೇನೆ ಅರ್ಥ!!!

  ReplyDelete
 6. ಹಹ್ಹಹ್ಹಾ.. ಸೂಪರ್, ನಾನೂ ಕೇಳಿದ್ದೇನೆ ಗುರುಗಳೇ ಈ ಮಾತನ್ನು. ಇನ್ನೂ ಅದೊಂತರಾ ವಾಸನೆ ಸೆಂಟ್ ಅನ್ನೋರೂ ಇದಾರೆ.

  ReplyDelete