Sunday, April 7, 2013

"ವಿಶ್ವ ಆರೋಗ್ಯ ದಿನದ ಹಾರೈಕೆ"

 ಇಂದು ವಿಶ್ವ ಆರೋಗ್ಯ ದಿನ.ಆರೋಗ್ಯವೆನ್ನುವುದು ಸಹಜವಾಗಿ ಇರತಕ್ಕಂತದ್ದು ಎನ್ನುವುದನ್ನು ನಾವೆಲ್ಲಾ ಮೊದಲು ಅರ್ಥ ಮಾಡಿಕೊಳ್ಳಬೇಕು.ಅನಾರೋಗ್ಯ ನಮ್ಮ ತಪ್ಪು ಜೀವನ ಶೈಲಿಯಿಂದ,ಸರಿ ಇಲ್ಲದ ಆಹಾರ ಪದ್ಧತಿಯಿಂದ ಹಾಗೂ ಸಾಕಷ್ಟು ದೈಹಿಕ ವ್ಯಾಯಾಮ ಇಲ್ಲದಿರುವುದರಿಂದ ಬರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬಳಸಬೇಕು.ಎಷ್ಟೇ ಕಷ್ಟವಾದರೂ ಕನಿಷ್ಠ ಅರ್ಧ ಗಂಟೆ ನಡೆಯುವುದೋ ಅಥವಾ ಇನ್ನಿತರ ದೈಹಿಕ ವ್ಯಾಯಾಮದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು.

ಹೋದ ವರ್ಷ ಜೂನ್ ತಿಂಗಳಲ್ಲಿ ,ಹೊಸದಾಗಿ ಡಯಾಬಿಟಿಸ್ ಬಂದವರೊಬ್ಬರಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವಂತೆ ಹೇಳಿದೆ.'ಅಯ್ಯೋ ಈ ಮಳೆಯಲ್ಲಿ ಎಲ್ಲಿ ವಾಕಿಂಗ್ ಹೋಗೋದು ಸರ್?'ಎಂದರು.'ಅದಕ್ಕೆಲ್ಲಾ ಟೈಮ್ ಇಲ್ಲಾ ಸರ್' ಎಂದೂ ಸೇರಿಸಿದರು!ಅವರ ಗುಡಾಣ ಹೊಟ್ಟೆಯನ್ನೇ ನೋಡುತ್ತಾ 'ತಿನ್ನುವುದನ್ನು ಕಮ್ಮಿ ಮಾಡಿ' ಎಂದೆ.'ಅಯ್ಯೋ ನಾನು ಏನೂ ತಿನ್ನೋದೇ ಇಲ್ಲಾ ಸರ್,ಟೆನ್ಶನ್ ಇಂದ ಏನೂ ಸೇರೋದೇ ಇಲ್ಲಾ 'ಎಂದರು.'ಹೋಗಲಿ ಟೆನ್ಶನ್ ಅನ್ನಾದರೂ ಕಮ್ಮಿ ಮಾಡಿಕೊಳ್ಳಿ'ಎಂದೆ.'ಟೆನ್ಶನ್ ಎಲ್ಲಾರಿಗೂ ಇರೋದೇ ಬಿಡಿ ಸರ್'ಎಂದರು.
ನಾನು ಹೇಳಿದ ಸಲಹೆಗಳನ್ನೆಲ್ಲಾ ಸಾರಾ ಸಗಟಾಗಿ ತಿರಸ್ಕರಿಸಿ 'ಅವೆಲ್ಲಾ ನನ್ನ ಕೈಲಿ ಆಗೋಲ್ಲಾ ಸರ್,ಚೆನ್ನಾಗಿ ಕಂಟ್ರೋಲ್ ಆಗೋ ಹಾಗೆ ಯಾವುದಾದರೂ ಒಳ್ಳೆ ಮಾತ್ರೆ ಬರೆದು ಕೊಡಿ'ಎಂದರು.
ಅವರ ಈ ಮಾತುಗಳು ನನ್ನನ್ನು ಯೋಚಿಸುವಂತೆ ಮಾಡಿತು.'ನಾವು ಯಾವ ಸ್ಥಿತಿಗೆ ಬಂದು ನಿಂತಿದ್ದೇವೆ!'ಎನಿಸಿತು.ಔಷದ ವಿಲ್ಲದೆ ಆರೋಗ್ಯವಾಗಿ ಬದುಕೊದಿಕ್ಕೆ ಸಾಧ್ಯವಿಲ್ಲವೇ?'ಎನಿಸಿತು.ಕೈ ಕಾಲುಗಳಿಗೆ ಅವುಗಳ ಕೆಲಸ ಕೊಡದಿದ್ದರೆ ಸಮಗ್ರ ಆರೋಗ್ಯ ಹೇಗೆ ಸಾಧ್ಯ?
'what is used less and less ultimately becomes useless' ಅನ್ನುವ ಮಾತೊಂದಿದೆ.ಮೊದಲಿಂದಲೂ ಕನಿಷ್ಟ ಅರ್ಧದಿಂದ ಒಂದು ಗಂಟೆ ನಡೆದರೆ ಈಗ ದಿನನಿತ್ಯ ಕಾಣುತ್ತಿರುವ ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳನ್ನು ದೂರವಿಡಬಹುದೆನಿಸುತ್ತದೆ.ಯಾವುದೇ ಕಾರಣಕ್ಕಾದರೂ ಮನೆಯಿಂದ ಹೊರಗೆ ಹೋಗಲು ಆಗದೆ ಇದ್ದ ಪಕ್ಷದಲ್ಲಿ,ಮನೆಯಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆ ನಡೆಯಬಹುದು.ಬೋನಿನಲ್ಲಿ ಇರುವ ಹುಲಿ,ಚಿರತೆಯಂತಹ ಪ್ರಾಣಿಗಳೇ ಆ ಸ್ವಲ್ಪ ಜಾಗದಲ್ಲೇ ಒಂದುಕಡೆಯಿಂದ ಇನ್ನೊದು ಕಡೆ ಓಡಾಡುವುದನ್ನು ನೋಡಿದ್ದೇವೆ. Exercising is a necessity ಎನ್ನುವುದನ್ನು ನಾವು ಇದರಿಂದಲಾದರೂ ಕಲಿಯಬಹುದಲ್ಲವೇ?ಅನುಕೂಲವಿದ್ದವರು ಮನೆಯಲ್ಲೇ ಒಂದು ಟ್ರೆಡ್ ಮಿಲ್ ಇಟ್ಟುಕೊಳ್ಳಬಹುದು.
ಬಿ.ಪಿ,ಶುಗರ್,ಮತ್ತು ಹಾರ್ಟ್ ಪ್ರಾಬ್ಲಂ ಇಲ್ಲದವರು ಮೆಟ್ಟಿಲು ಹತ್ತಿ ಇಳಿಯುವುದನ್ನೇ ಒಂದು ವ್ಯಾಯಾಮ ವಾಗಿ ಅಳವಡಿಸಿಕೊಳ್ಳ ಬಹುದು.ಹತ್ತು ನಿಮಿಷದಿಂದ ಶುರು ಮಾಡಿ, ಬರ ಬರುತ್ತಾ ಮೂವತ್ತು ನಿಮಿಷದವರೆಗೆ ಮೆಟ್ಟಿಲು ಹತ್ತಿ ಇಳಿದರೆ ಅದ್ಭುತ ವ್ಯಾಯಾಮವಾಗುತ್ತದೆ.ಇದರ ಜೊತೆ ಸ್ವಲ್ಪ ಯೋಗ ಮತ್ತು ಪ್ರಾಣಾಯಾಮವನ್ನು ಕಲಿತರೆ ಆರೋಗ್ಯಕ್ಕೆ ಇನ್ನೂ ಒಳಿತು.ಸರಿಯಾದ ಆಹಾರ,ಆರೋಗ್ಯಕರ ವಿಚಾರಗಳು  ಮತ್ತು ಸರಿಯಾದ ವ್ಯಾಯಾಮದದಿಂದ ಔಷಧವಿಲ್ಲದೆಯೂ ಆರೋಗ್ಯವಾಗಿರಬಹುದಲ್ಲವೇ ?

ಆರೋಗ್ಯವೆನ್ನುವುದು  ನಮ್ಮೆಲ್ಲರ ಸಹಜ ಸ್ಥಿತಿ.ಅದು ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಈ ವಿಶ್ವ ಆರೋಗ್ಯ ದಿನದಂದು ಎಲ್ಲರಿಗೂ ಸಮೃದ್ಧಿಯಾಗಿ ಆರೋಗ್ಯ ಭಾಗ್ಯ ಲಭ್ಯವಾಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ನಮಸ್ಕಾರ.

5 comments:

  1. ಮೊದಲಿಗೆ ತನ್ನ ಜೀವನ ಶೈಲಿಯನ್ನು ತಾನೇ ಅರ್ಥ ಮಾಡಿಕೊಳ್ಳದ ಇಂತಹ ಜನ ಬದಲಾಗಬೇಕು. ವೈಧ್ಯರ ಸಲಹೆಯನ್ನು ಒಪ್ಪದೇ, ಜಾಹಿರಾತು ಪ್ರಪಂಚದ ಪ್ರಭಾವಕ್ಕೆ ಒಳಗಾಗಿ ಬರಿ ಮಾತ್ರೆ, ಅಥವಾ ಚುಚ್ಚುಮದ್ದು ಗಳಿಂದ ಸರಿ ಹೋಗುತ್ತೆ ಎನ್ನುವ ಇಂತಹ ಜನರು ಕೊನೆಗೊಮ್ಮೆ ಪಶ್ಚಾತ್ತಾಪ ಪಡುತ್ತಾರೆ. ನಿಮ್ಮ ಈ ಲೇಖನ ಕಂತೆರೆಸುವಂತಿದೆ.

    ReplyDelete
  2. "ವಿಶ್ವ ಆರೋಗ್ಯ ದಿನದ ಹಾರೈಕೆ"ಯು ಎಲ್ಲರೂ ಪಾಲಿಸಲೇಬೇಕಾದ ಸರಳ ಆರೋಗ್ಯ ಸೂತ್ರಗಳು. ಎಲ್ಲವೂ ಮಾತ್ರೆಗಳಿಂದಲೇ ವಾಸಿಯಾಗದು ಮತ್ತು ದೈಹಿಕ ವ್ಯಾಯಾಮ, ಆಹಾರ ಪದ್ಧತಿಯ ಸುಧಾರಣೆ ಮತ್ತು ಮನೋ ಸಮತೋಲನದಿಂದ ಮುಕ್ಕಾಲುವಾಸೀ ಖಾಯಿಳಿಗಳು ವಾಸಿಯಾಗುವವು ಎನ್ನುವುದನ್ನು ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ.

    ReplyDelete
  3. ಆನಂದ್ ಚಿತ್ರದ ದಡೂತಿ ಗಂಡಸು ಡಾಕ್ಟರ ಹತ್ತಿರ ಹೇಳುವ ಪ್ರಸಂಗ ನೆನಪಿಗೆ ಬಂತು. ಏನಾದರು ಸರಿ ಮೊದಲು ಮಾತ್ರೆ ಕೊಡಿ ಡಾಕ್ಟರ ಅಂತ ಹೇಳುವ ಅಸಾಮಿ ತನ್ನ ಕೈಯಲ್ಲೇ ಇರುವ ಸಾಮಗ್ರಿಯನ್ನು ಮರೆಯುತ್ತಾನೆ, ಸುಂದರ ಲೇಖನ ಡಾಕ್ಟ್ರೆ.

    ReplyDelete
  4. ELLARIGOO ELLA DINAVOO AROGYAVIRALI EMBUDAAGALI

    ReplyDelete

Note: Only a member of this blog may post a comment.