Saturday, April 19, 2014

"ಅಬ್ಬಾ.....!!!!......ಆ ...ಕ್ಷಣಗಳು !!!! "

ಜೀವನದಲ್ಲಿ ಅಂತಹ ಕ್ಷಣಗಳು ನಮ್ಮ ಶತ್ರುವಿಗೂ ಬರಬಾರದು !!!ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನೆಸಿಕೊಂಡರೆ,ಈಗಲೂ ನನ್ನ ಕೈಕಾಲುಗಳು ತಣ್ಣಗಾಗುತ್ತವೆ!!!ಬೆಂಗಳೂರಿನಿಂದ ರಾಯಚೂರಿಗೆ ಸಂಸಾರ ಸಮೇತನಾಗಿ ಟ್ರೈನಿನಲ್ಲಿ ಹೊರಟಿದ್ದೆ.ಸಂಜೆ ಸುಮಾರು ಐದು ಗಂಟೆಯ ಸಮಯ.ನನ್ನ ಹೆಂಡತಿಯ ಕಂಕುಳಲ್ಲಿ ಒಂದು ವರ್ಷದ ಮಗಳು,ನನ್ನ ಕೈ ಹಿಡಿದ ಐದು ವರ್ಷದ ಮಗ,ಒಂದು ರಾಶಿ ಮನೆ ಸಾಮಾನು.ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್ನಿನ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಇಳಿದ ತಕ್ಷಣ ,ಸಕ್ಕರೆ ಪಾಕಕ್ಕೆ ನೊಣ ಮುತ್ತುವಂತೆ ಕೂಲಿಗಳ ಒಂದು ದೊಡ್ಡ ಹಿಂಡೇ ನಮ್ಮನ್ನು ಮುತ್ತಿಕೊಂಡರು.ಕೂಲಿ ಮಾತಾಡುವ ಮೊದಲೇ,ಮೂರು ನಾಲಕ್ಕು ಜನ ಸಾಮಾನುಗಳನ್ನು ಹೊತ್ತುಕೊಂಡು 'ಯಾವ ಬೋಗಿ ಸರ್'ಎನ್ನುತ್ತಾ ಹೊರಟೀ ಬಿಟ್ಟರು!!ನಂತರ ಅವರು ಮಾಡುವ ರಗಳೆಗೆ ಹೆದರಿ,ಹರ ಸಾಹಸ ಮಾಡಿ ಅವರಿಂದ ಬಿಡಿಸಿಕೊಂಡು ಒಬ್ಬ ಕೂಲಿಯನ್ನು ಗೊತ್ತು
ಮಾಡಿದೆ.ಹೆಂಡತಿಯನ್ನು ಮಗಳೊಂದಿಗೆ ಅರ್ಧ ಸಾಮಾನುಗಳ ಬಳಿ ಅಲ್ಲೇ ಬಿಟ್ಟು ,ಇನ್ನರ್ಧ ಸಾಮಾನುಗಳನ್ನು ತಲೆಯ ಮೇಲೆ ಹೊತ್ತ ಕೂಲಿಯವನ ಹಿಂದೆ,ಮಗನ ಕೈ ಹಿಡಿದು ಹೊರಟೆ.ಟ್ರೈನ್ ಆಗಲೇ ಪ್ಲ್ಯಾಟ್ ಫಾರಂನಲ್ಲಿ ಬಂದು ನಿಂತಿತ್ತು .ನಮಗೆ ರಿಸರ್ವ್ ಆಗಿದ್ದ ಬೋಗಿಯನ್ನು ಹುಡುಕಿ ,ಚಾರ್ಟ್ ನಲ್ಲಿ ನಮ್ಮಬರ್ತ್ ನಂಬರ್ ನೋಡಿ ,ಅಲ್ಲಿ ನಮ್ಮ ಸಾಮಾನುಗಳನ್ನು ಇಟ್ಟು,ಮಗನನ್ನು ಅಲ್ಲೇ ಕೂರಿಸಿ "ಅಮ್ಮನನ್ನೂ ,ಪಾಪುವನ್ನೂ ಕರೆದುಕೊಂಡು ಮಿಕ್ಕ ಸಾಮನುಗಳನ್ನು ತರುತ್ತೇನೆ ,ಇಲ್ಲೇ ಕೂತಿರು ಪುಟ್ಟಾ"ಎಂದೆ."ಹೂಂ"ಎಂದು ತಲೆಯಾಡಿಸಿದ ಮಗರಾಯ.ಪಕ್ಕದಲ್ಲಿದ್ದ ಪ್ರಯಾಣಿಕರಿಗೆ ಸ್ವಲ್ಪ ನೋಡಿಕೊಂಡಿರುವಂತೆ ಹೇಳಿ,ಮತ್ತೆ ಕೂಲಿಯವನೊಂದಿಗೆ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಹೋದೆ.ನನ್ನ ಹೆಂಡತಿ"ಮಗ ಎಲ್ಲಿ"ಎಂದಳು."ಟ್ರೈನಿನಲ್ಲಿ ಸಾಮಾನುಗಳ ಜೊತೆ ಕೂರಿಸಿ ಬಂದಿದ್ದೇನೆ,ಪಕ್ಕದವರಿಗೆ ಹೇಳಿದ್ದೇನೆ,ಕೂತಿರುತ್ತಾನೆ ಬಾ "ಎಂದೆ."ರೀ!ನಿಮಗೆ ಅಷ್ಟೂ ಗೊತ್ತಾಗೊದಿಲ್ಲವಾ !?ಅವನೋಬ್ಬನನ್ನೇ ಯಾಕೆ ಕೂರಿಸಿ ಬಂದಿರಿ?"ಎಂದು ತರಾಟೆಗೆ ತೆಗೆದುಕೊಂಡಳು.ನನಗೆ ಒಂದು ಕ್ಷಣ ಎದೆಯಲ್ಲಿ ಅವಲಕ್ಕಿ ಕುಟ್ಟಿ ದಂತಾಯಿತು.ಆದರೂ ಅದನ್ನು ತೋರಿಸಿಕೊಳ್ಳದೇ,ಧೈರ್ಯ ತಂದುಕೊಂಡು "ಏನೂ ಆಗೋಲ್ಲಾ.....,ನೀನು ಸುಮ್ನೆ ಇಲ್ಲದಿರೋದೆಲ್ಲಾ ಯೋಚನೆ ಮಾಡಬೇಡ"ಎಂದು ದಬಾಯಿಸಿ,ಇನ್ನುಳಿದ ಸಾಮಾನುಗಳೊಂದಿಗೆ ನನ್ನ ಬೋಗಿಗೆ ಬಂದೆ.ಸಾಮಾನುಗಳಿವೆ....,ಮಗ ಇಲ್ಲ!!!!ಪಕ್ಕದವರನ್ನು ಕೇಳಿದರೆ "ಇಲ್ಲೇ ಇದ್ದನಲ್ಲಾ!!,ಅರೇ ....!!"ಎಂದು ಆಚೀಚೆ ನೋಡ ತೊಡಗಿದರು!!ನನ್ನ ಎದೆ ಧಸಕ್ ಎಂದಿತು.ಮೈ ಬೆವರೊಡೆಯಿತು.ಕೈ ,ಕಾಲು ತಣ್ಣಗಾಗಿ,ಹೊಟ್ಟೆಯಲ್ಲಿ ವಿಚಿತ್ರ ತಳಮಳ!! ಹೆಂಡತಿ ದೊಡ್ಡ ದನಿಯಲ್ಲಿ ಗೊಳೋ ಎಂದು ಅಳತೊಡಗಿದಳು.ಕಂಕುಳಲ್ಲಿದ್ದ ಒಂದು ವರ್ಷದ ಮಗಳು ಏನೋ ಗಡಿಬಿಯಾಗಿದೆ ಎಂದು ತಿಳಿದು,ಗಾಭರಿಯಿಂದ ತಾನೂ ಜೋರಾಗಿ ಅಳಲು ಶುರು ಮಾಡಿದಳು.ಆಗ ಸಮಯ 5.30.ಇನ್ನು ಹದಿನೈದು ನಿಮಿಷದಲ್ಲಿ ಟ್ರೈನ್ ಹೊರಡುತ್ತೆ!!ನನ್ನ ಬಳಿ ಇರುವುದು ಹದಿನೈದೇ ನಿಮಿಷ!!ಅಷ್ಟರಲ್ಲಿ ,ಆ ದೊಂಬಿಯಲ್ಲಿ ,ಕಳೆದು ಹೋದ ಮಗನನ್ನು ಎಲ್ಲಿ ಹುಡುಕುವುದು!!?ಹೇಗೆ ಹುಡುಕುವುದು?ಮೊದಲು ಟ್ರೈನಿನ ಮುಂಭಾಗಕ್ಕೆ ಓಡಿ,ಎಂಜಿನ್ ಡ್ರೈವರ್ ಗೆ ನಡೆದ ವಿಷಯ ಹೇಳಿದೆ.ಅವನು "ಗಾರ್ಡ್ ಗೆ ವಿಷಯ ತಿಳಿಸಿ"ಎಂದ.ಮತ್ತೆ ಹುಚ್ಚನಂತೆ ಟ್ರೈನ್ ನ ಹಿಂಭಾಗಕ್ಕೆ ಓಡಿ,ಗಾರ್ಡ್ ಗೆ ವರದಿ ಒಪ್ಪಿಸಿದೆ.ನಾವು ಇದ್ದದ್ದು ಒಂಬತ್ತನೇ ಪ್ಲ್ಯಾಟ್ ಫಾರಂ.ಗಾರ್ಡ್ ಮೊದಲನೇ ಪ್ಲ್ಯಾಟ್ ಫಾರಮ್ಮಿಗೆ ಹೋಗಿ ಅನೌನ್ಸರ್ ಗೆ ಹೇಳುವಂತೆ ಹೇಳಿದ.ನನಗೆ ದಿಕ್ಕೇ ತೋಚಲಿಲ್ಲ!!ಏನಾದರೂ ಮಗ ಬಂದಿರ ಬಹುದೇ ಎಂದು ಆಸೆಯಿಂದ ಬೋಗಿಯ ಬಳಿ ಬಂದು ,ಕಿಟಕಿಯಿಂದ ಒಳಗೆ ಇಣುಕಿದೆ."ಇನ್ನೂ ಸಿಗಲಿಲ್ಲವೆನ್ರೀ !!!"ಎಂದು ಕೂಗಿದ ಹೆಂಡತಿಯ ಅಳು ತಾರಕಕ್ಕೇರಿತು !!ಸ್ಪರ್ಧೆಗಿಳಿದಂತೆ ಮಗು ಇನ್ನೂ ಜೋರಾಗಿ ಅಳ ತೊಡಗಿತು!! ಅಕ್ಕ ಪಕ್ಕದವರು ತಲೆಗೊಂದರಂತೆ ಸಲಹೆ ಕೊಡ ತೊಡಗಿದರು.ಕೆಲವರು "ಸಾಮಾನುಗಳನ್ನು ಇಳಿಸಿಕೊಂಡು ಇಳಿದು ಬಿಡಿ "ಎಂದರೆ ಮತ್ತೆ ಕೆಲವರು "ಬೇಡ,ಬೇಡ,ನಿಮ್ಮ ಮಗ ಮತ್ಯಾವುದಾದರೂ ಬೋಗಿಗೆ ಹತ್ತಿರಬಹುದು"ಎಂದರು.ಇನ್ನು ಕೆಲವರು"ಪಕ್ಕದ ಪ್ಲ್ಯಾಟ್ ಫಾರಮ್ಮಿ ನಲ್ಲಿ ನಿಂತಿರುವ ಟ್ರೈನ್ ನಲ್ಲೂ ಒಮ್ಮೆ ನೋಡಿ" ಎಂದರು.ಟ್ರೈನ್ ಹೊರಡಲು ಕೆಲವೇ ನಿಮಿಷಗಳು ಬಾಕಿ ಇವೆ!!!ನನಗೋ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗಿತ್ತು!!ಜೀವನದಲ್ಲಿ ಮೊದಲ ಬಾರಿಗೆ ಅಸಹಾಯಕನಾಗಿ,ಹೃತ್ಪೂರ್ವಕವಾಗಿ "ಅಪ್ಪಾ ಈಗ ನೀನೇ ಗತಿ"ಎಂದು ದೇವರನ್ನು ಪ್ರಾರ್ಥಿಸಿದೆ.ನನ್ನ ಪ್ರಾರ್ಥನೆ ಆ ದೇವನಿಗೆ ತಲುಪಿತು.ವಯಸ್ಸಾದ ,ಗಡ್ಡ ಧಾರಿ ಕೂಲಿಯೊಬ್ಬನ ರೂಪದಲ್ಲಿ ದೇವರು, ಅಳುತ್ತಿದ್ದ ನನ್ನ ಮಗನ ಕೈ ಹಿಡಿದು ಬರುತ್ತಿದ್ದ.ಹೃದಯ ಬಾಯಿಗೆ ಬಂದಂತಾಯಿತು.'ಗಳ ಗಳನೆ' ಮಗುವಿನಂತೆ ಅತ್ತು ಬಿಟ್ಟೆ .ನನ್ನ ಮಗ ನನಗೆ ಸಿಕ್ಕಿದ್ದ!!! ಯಾವ ನಿಧಿ ಸಿಕ್ಕಿದರೂ ನನಗೆ ಅಷ್ಟು ಸಂತೋಷವಾಗುತ್ತಿರಲಿಲ್ಲ!!!ಆ ಕೂಲಿಯವನ ಎರಡೂ ಕೈಗಳನ್ನೂ ಹಿಡಿದು ಕಣ್ಣಿಗೆ ಒತ್ತಿಕೊಂಡೆ.ಅವನಿಗೆ ಕೈ ಮುಗಿದು ,ಜೇಬಿನಲ್ಲಿದ್ದ ನೂರರ ಎರಡು ನೋಟುಗಳನ್ನು ಹೊರತೆಗೆದೆ.ಆ ಪುಣ್ಯಾತ್ಮ ಕೂಲಿಯವನು "ನಕ್ಕೋ ಸಾಬ್,ನಕ್ಕೋ ಸಾಬ್"ಎನ್ನುತ್ತಿದ್ದರೂ ಕೇಳದೇ,ಆ ನೋಟುಗಳನ್ನು ಅವನ ಜೇಬಿಗೆ ತುರುಕಿ,ಮಗನ ಕೈ ಹಿಡಿದು ಓಡುತ್ತಾ ಬೋಗಿಗೆ ಬಂದು ಕಿಟಿಕಿಯ ಪಕ್ಕದ ನನ್ನ ಸೀಟಿನಲ್ಲಿ ಕುಳಿತೆ.ಮಗ ಅಳುತ್ತಾ ಅಮ್ಮನ ಮಡಿಲು ಸೇರಿದ.ಅಮ್ಮ ,ಮಗಳು ಅಳು ನಿಲ್ಲಿಸಿದರು.ನನ್ನ ಹೆಂಡತಿ ಅಕ್ಕ ಪಕ್ಕದವರಿಗೆ ನನ್ನ ಬೇಜವಾಬ್ದಾರಿಯ ಬಗ್ಗೆ ಅರಿವು ಮಾಡಿಕೊಡುತ್ತಿದ್ದಳು.ನಾನು ಏನನ್ನೂ ಕೇಳುವ ಸ್ಥಿತಿ ಯಲ್ಲಿ ಇರಲಿಲ್ಲ.ದಿಗ್ಮೂಢನಾಗಿದ್ದೆ !! ಕಿಟಕಿಯಾಚೆ ಶೂನ್ಯ ದೃಷ್ಟಿ ನೆಟ್ಟಿದ್ದೆ.ಕಣ್ಣುಗಳಲ್ಲಿ ಧಾರಾಕಾರ ನೀರು!! I was very badly shaken for the first time in my life!!I was literally trembling!!ಇದ್ಯಾವುದರ ಪರಿವೆಯೇ ಇಲ್ಲದೆ ಟ್ರೈನು ಪ್ಲ್ಯಾಟ್ ಫಾರಂ ಬಿಟ್ಟು ಮೆಲ್ಲನೆ ಮುಂದೆ ಸರಿಯ ತೊಡಗಿತು.ಹೊರಗೆ ನಿಧಾನವಾಗಿ ಕತ್ತಲಾವರಿಸುತ್ತಿದ್ದರೆ,ವಿಚಿತ್ರವೆಂಬಂತೆ ನನ್ನ ಬಾಳಿನಲ್ಲಿ ಆವರಿಸಿದ್ದ ಕತ್ತಲು ದೂರವಾಗಿತ್ತು !!!

5 comments:

  1. ನಿಜ ಸಾರ್,
    ಇಂತಹ ಪರಿಸ್ಥಿತಿ ಶತ್ರುವಿಗೂ ಬರಬಾರದು. ತಪ್ಪಿಸಿಕೊಂಡ ಮಗು ನಿಮ್ಮಲ್ಲಿ ಉಂಟುಮಾಡಿದ ಹಿಂಸೆಯು ಹೇಳಲಾಗದ ಪರಿಸ್ಥಿತಿ.
    ಆ ಕೂಲಿಯ ಸ್ವರೂಪದಲ್ಲಿ ಸಾಕ್ಷಾತ್ ಭಗವಂತನೆರ ಮಗುವನ್ನು ಕರೆತಂದಂತಿದೆ.

    ReplyDelete
  2. ತುಂಬ ಸಂಕಟಮಯ ಪರಿಸ್ಥಿತಿಯನ್ನು ಅನುಭವಿಸಿದ್ದೀರಿ. ದೇವರು ಯಾವ ರೂಪದಲ್ಲಿ ಸಹಾಯ ಮಾಡುತ್ತಾನೊ ತಿಳಿಯಲಾಗದು!

    ReplyDelete
  3. these kind of incidents help us rediscover as to what is that we actually value in life...thanks for sharing
    Geete

    ReplyDelete
  4. ಅಬ್ಬ! ಉಸಿರು ಬಿಗಿಹಿಡಿದು ಓದುವ೦ತಾಯಿತು. ಸಧ್ಯ ಸುಖಾ೦ತವಾಯಿತಲ್ಲಾ. ಒಮ್ಮೆ ಓದಿದ್ದೆ. ಮತ್ತೊಮ್ಮೆ ಓದಿ ಬಹಳ ನಿಧಾನವಾಗಿ ಪ್ರತಿಕ್ರಿಯಿಸಿದ್ದೇನೆ ಸರ್. ನನ್ನ ಬ್ಲಾಗ್ ಗೆ ಸ್ವಾಗತ.

    ReplyDelete
  5. ಭೂಮಿಯೇ ಬಾಯಿ ಬಿಟ್ಟಿದೆ ಎನ್ನುವಂತೆ ಆಘಾತಕಾರಿ ಘಟನೆ. ಆ ಕ್ಷಣದಲ್ಲಿ ಏನೂ ಮಾಡಲು ತೋಚುವುದಿಲ್ಲ.. ಒಮ್ಮೆ ಜೀವ ಝಲ್ ಎನ್ನುತ್ತದೆ..

    ಪರಿಸ್ಥಿತಿ ನಿಭಾಯಿಸಿದ ನಿಮಗೆ ಮತ್ತು ಸಂಕಷ್ಟವನ್ನು ಮಂಜಿನ ಹನಿಯ ಹಾಗೆ ದೂರಮಾಡಿದ ಆ ದೇವನಿಗೆ ಮತ್ತು ಆ ಕಾರ್ಮಿಕನಿಗೆ ಸಲಾಂ..

    ReplyDelete

Note: Only a member of this blog may post a comment.