Monday, February 24, 2014

"ನಲ್ಲಿ ಇದೆ ನೀರಿಲ್ಲ !!!! "

ಹೊಸ ಕವಿತೆಗನ್ನು ಬರೆಯಲಾಗುತ್ತಿಲ್ಲ.ಬ್ಲಾಗಿಗೆ ಏನು ಹಾಕಬೇಕು ಎಂದು ಯೋಚಿಸುತ್ತಿದ್ದಾಗ ಪುಸ್ತಕ ರಾಶಿಯಲ್ಲಿ ಇಪ್ಪತ್ತು ವರುಷಗಳ ಹಿಂದೆ ಬರೆದ ಕವಿತೆಗಳ ಡೈರಿಯೊಂದು ಸಿಕ್ಕಿತು.ಅದರಿಲ್ಲಿನ ಈ ಕವಿತೆ ಇಂದಿಗೂ ಪ್ರಸ್ತುತವೆನಿಸಿದ್ದರಿಂದ ಅದನ್ನು ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.ಈ ಕವಿತೆ ಬಳ್ಳಾರಿ ಜಿಲ್ಲಾ ಕಾವ್ಯ ಮಾಲಿಕೆ '97 ರಲ್ಲಿ ಪ್ರಕಟಗೊಂಡಿತ್ತು .
'ನಲ್ಲಿ ಇದೆ--,ನೀರಿಲ್ಲ!'
--------------------------------

ನಲ್ಲಿ ಇದೆ ನೀರಿಲ್ಲವೆಂದು 
ಗೊಣಗೋದೇಕೆ ಸ್ನೇಹಿತರೇ ?
ನಮ್ಮ ದೇಶದಲ್ಲಿ ಎಲ್ಲವೂ  ಹೀಗೇ
ಮಾರ್ಗವೇ ಇಲ್ಲಾ ಬೇರೆ!

ಕಾಲೆಜಿವೆ,ಸ್ಕೂಲುಗಳಿವೆ!
ನಿಮ್ಮ ಮಕ್ಕಳಿಗೆ ಮಾತ್ರ ಸೀಟಿಲ್ಲಾ!
ಪುಸ್ತಕಗಳು ಪ್ರಿಂಟ್ ಆಗಿದ್ರೂ 
ಮಾರ್ಕೆಟ್ಟಿಗೆ ಇನ್ನೂ ಬಂದಿಲ್ಲಾ !

ನಿಮಿಷಕ್ಕೊಂದು ಆಟೋ ಬಂದ್ರೂ
ನೀವು ಹೇಳಿದ ಕಡೆ ಬರೋಲ್ಲಾ !
ಅಕಸ್ಮಾತ್ತಾಗಿ ಬಂದ್ರೂನೂವೆ 
ಮೀಟರ್ ಸರಿಯಾಗಿರೋಲ್ಲಾ !  

ಕಛೇರಿಗಳೋ ಮಾರಿಗೊಂದು 
ಕೆಲಸ ಮಾತ್ರ ನಡೆಯೋಲ್ಲಾ 
ಅರ್ಜಿ ಮುಂದೆ ಸಾಗೋಲ್ಲಾ
ಯಾವುದೂ ಊರ್ಜಿತವಾಗೊಲ್ಲ!

ಧರ್ಮಗಳೋ ಲೆಕ್ಕ ಇಲ್ಲ 
ಅಧರ್ಮ ಅನ್ಯಾಯ ತಪ್ಪಿಲ್ಲ 
ಮನುಷ್ಯರೇನೋ ಸಾಕಷ್ಟಿದ್ದರೂ 
ಮನುಷ್ಯತ್ವವೇ ಕಾಣೋಲ್ಲಾ !

ನಲ್ಲಿ ಇದೆ ನೀರಿಲ್ಲವೆಂದು 
ಗೊಣಗೋದೇಕೆ ನೀವು ?
ಹೆಸರಿಗೆ ಮಾತ್ರಾ ಬದುಕ್ತಾ ಇಲ್ವಾ ?
ಅದರ ಹಾಗೇ ನಾವೂ !!! 

6 comments:

  1. ಕೃಷ್ಣಮೂರ್ತಿಯವರೆ,
    ಇಪ್ಪತ್ತು ವರ್ಷಗಳ ನಂತರವೂ ಈ ಕವನ ಸುಂದರ, ವಿಡಂಬಕ ಹಾಗು ಅಷ್ಟೇ ಪ್ರಸ್ತುತವಾಗಿದೆ.

    ReplyDelete
  2. ಸುನಾತ್ ಸರ್ ; ಧನ್ಯವಾದಗಳು :-)

    ReplyDelete
  3. ಬಳ್ಳಾರಿ ಜಿಲ್ಲಾ ಕಾವ್ಯ ಮಾಲಿಕೆ 1997 ರಲ್ಲಿ ಪ್ರಕಟವಾದ ಈ ಕವಿತೆ ಈವತ್ತಿಗೂ ಅಷ್ಟೇ ಪ್ರಸ್ತುತ. ನಲ್ಲಿ ಇದೆ - ನೀರಿಲ್ಲ, ನೀರು ಬಾರದಿದ್ರೂ - ಬಿಲ್ಲು ಯಾಮಾರಲ್ಲ!

    ವಿಡಂಬನೆ ಮತ್ತು ಅದರ ಹಿಂದಿನ ಸಾತ್ವಿಕ ಸಿಟ್ಟು ಅತ್ಯುತ್ತಮವಾಗಿ ಅಕ್ಷರಗಳಾಗಿ ಮಾರ್ಪಟ್ಟಿವೆ ಇಲ್ಲಿ. ನಿಮ್ಮ ಜೀವ ಮಾನದ ಸಮಗ್ರ ದೃಷ್ಟಿಯ ಸೂಕ್ಷಗ್ರಹಿಕೆಗೂ ಈ ಕವನವು ಕೈಗನ್ನಡಿಯಂತಿದೆ.

    ReplyDelete
  4. ಸಾರ್, ಕವನ ಇಷ್ಟವಾಯ್ತು.. ಕವನ ಪ್ರಸ್ತುತ ಬದುಕಿನ ಬವಣೆಗೆ ಹಿಡಿದ ಕನ್ನಡಿ..

    ReplyDelete
  5. ಎಲ್ಲವೂ ಇದೆ.. ಎಲ್ಲವೂ ಇಲ್ಲ.. ಏನಿಲ್ಲ ಏನಿಲ್ಲಾ.. ಭಾವವೊಂದು ಅಭಾವ ಹಲವು ಸೂಪರ್ ಡಾಕ್ಟ್ರೆ..

    ReplyDelete
  6. ಕೈಗುಂಟು ಬಾಯ್ಗಿಲ್ಲ...ರಸ್ತೆಯಲ್ಲಿ ನೇರ ನಡೆಯುವವರ ಮತ್ತೆ ಏನೂ ಇಲ್ಲದವರೆಲ್ಲರ ಪಾಡು ಇದುವೆ. ನಾವು ನಮ್ಮವರಾಗಿ ದೇಶವೆಷ್ಟು ಬದಲಾದರು ವಸ್ತುಸ್ಥಿತಿಯಲ್ಲಿ ಅಂತಹ ಯಾವ ಏರು ಕಂಡಿಲ್ಲ ಕಾಣುವಂತೆಯು ಇಲ್ಲ. ಮಹಾಭಾರತ ರಾಮಾಯಣಗಳಿಗೆ ಸಮಯ ಕಾಲದ ಸೀಮೆಯಿಲ್ಲ. ಅಂತೆಯೆ ಕವಿಯ ಒಕ್ಕಣೆಗೂ.

    ReplyDelete

Note: Only a member of this blog may post a comment.