Wednesday, January 8, 2014

"ಚಿತ್ರ ಸಂತೆಯ ...ಚಿತ್ರಗಳು !!!!!"

ಮಧ್ಯಾಹ್ನದ ಉರಿಬಿಸಿಲಿಗೆ ಮೈಒಡ್ಡಿಕೊಂಡು, ಫುಟ್ ಪಾತಿನ ಪಕ್ಕದ ಬೇಲಿಯ ಸರಳುಗಳಿಗೆ ಸಾಲಾಗಿ ಒರಗಿ ಕುಳಿತ ಪೈಂಟಿಂಗ್ ಗಳು ಇನ್ನೂ ತಾವು ಮಾರಾಟ ವಾಗದೆ ಉಳಿದಿರುವುದಕ್ಕೆ ,ಯಾರಿಗೂ ಕೇಳದಂತೆ ಮೆಲ್ಲನೆ ಬಿಕ್ಕಳಿಸುತ್ತವೆ.ಪಕ್ಕದಲ್ಲೇನಿಂತ ಅವುಗಳ ಜನಕ ಗಿರಾಕಿಗಳಿಗಾಗಿ ಕಾದು ಬೇಸತ್ತು,ಹಚ್ಚಿದ ಸಿಗರೇಟು ಒಂದರಿಂದ ಸುದೀರ್ಘವಾಗಿ ದಂಎಳೆದು ಬೇಸರದ ಹೊಗೆಕಾರುತ್ತಾನೆ. ಒಂದೊಂದು ಚಿತ್ರವೂ ಕೈಬೀಸಿ ಕರೆದು, ದಯಮಾಡಿ ನನ್ನ ಸೆರೆಬಿಡಿಸಿ,ನಿಮ್ಮ ಬೆಡ್ ರೂಮಿನಲ್ಲೋ,ಹಾಲಿನಲ್ಲೋ, ಕಡೆಗೆ ಬಾತ್ ರೂಮಿನಲ್ಲೋ ಹ್ಯಾಂಗ್ ಮಾಡಿ ಎಂದು ಆರ್ತರಾಗಿ ಬೇಡಿಕೊಳ್ಳುತ್ತವೆ.ತಮ್ಮ ಡ್ರೆಸ್ ಗಳ ಹಿಡಿತಕ್ಕೆ ಮೀರಿ,ಎಲ್ಲಾ ಕಡೆಯಿಂದಲೂ ಚಿಮ್ಮುತ್ತಿರುವ ಹುಡುಗಿಯರು ,ತಮ್ಮ ತಂಪು ಕನ್ನಡಕದ ಹಿಂದಿನಿಂದಲೇ ನಾಲ್ಕು ಪೈಂಟಿಂಗ್ ಗಳನ್ನು ಅವಲೋಕಿಸಿ ಸುಸ್ತಾಗಿ,ಎರಡೆರಡು ಕೋನ್ ಐಸ್ಕ್ರೀಂ ತಿಂದು ತಮ್ಮ ಧಡೂತಿ ದೇಹಗಳನ್ನು ಮತ್ತಷ್ಟು ಸೊಂಪಾಗಿಸಿಕೊಳ್ಳುತ್ತಾರೆ.ಐಸ್ಕ್ರೀಂ ಮಾರಾಟಗಾರರಿಗೋ ಸುಗ್ಗಿಯೋಸುಗ್ಗಿ .ಚಿತ್ರಗಳಿಗಿಂತ ಅವೇ ಹೆಚ್ಚು ಮಾರಾಟವಾಗುತ್ತಿವೆ .ಮೊಮ್ಮಗಳಪೈಂಟಿಂಗ್ ಅನ್ನು ಕಾಯುತ್ತ ಕುಳಿತ ರಸಗುಲ್ಲಾ ತಿಂದು ಕೆಂಪಾದ ಕಲ್ಕತ್ತಾದ ಅಜ್ಜಿ ಯೊಬ್ಬಳು ಉರಿಬಿಸಿಲಿನ ತಾಪಕ್ಕೆ ಮತ್ತಷ್ಟು ಕೆಂಪಾಗಿ ತಾನೇ ಒಂದು ಪೈಂಟಿಂಗ್ ನಂತೆ ಕಾಣುತ್ತಾಳೆ.ಕಲಾವಿದರ ಗುಂಪೊಂದು ಗಿರಾಕಿಗಳ ಚೌಕಾಸಿಯ ಬಗ್ಗೆ ಬೇಸರದಿಂದ ಮಾತಾಡಿಕೊಂಡು, ಚಿತ್ರಸಂತೆಯವರು ಕೊಟ್ಟ ರೈಸ್ ಬಾತ್ ತಿನ್ನುತ್ತಿದ್ದಾರೆ.ಕೆಲವರು ದೊಡ್ಡ ದೊಡ್ಡ ಕ್ಯಾಮೆರಾ ಗಳಲ್ಲೋ ಮೊಬೈಲ್ ಗಳಲ್ಲೋ ಚಿತ್ರಗಳ ಫೋಟೋ ಕ್ಲಿಕ್ಕಿಸುವುದನ್ನೇ ಒಂದುದೊಡ್ಡ ಕಾಯಕ ಮಾಡಿಕೊಂಡಿದ್ದಾರೆ. ಹುಲ್ಲುಗಾವಲಿನಲ್ಲಿ ಮೇಯಲು ಬಿಟ್ಟ ಕರುವೊಂದು ಏನನ್ನೂ ಮೇಯದೆ ಅತ್ತಿಂದಿತ್ತ ಓಡಾಡುವಂತೆ,ಕೆಲವರು ಯಾವ ಚಿತ್ರವನ್ನೂ ಖರೀದಿಸದೇ, ಬರಿದೇ ಅತ್ತಿಂದಿತ್ತ ತಿರುಗಾಡಿ ಕಾಲು ನೋಯಿಸಿ ಕೊಂಡಿದ್ದಾರೆ.ನೂರಾರು ಹೆಣ್ಣುಗಳನ್ನು ನೋಡಿ ಕಡೆಗೆ ಯಾವುದೋ ಒಂದನ್ನು ಗಂಟು ಹಾಕಿಕೊಳ್ಳುವ ಗಂಡಿನಂತೆ ಕೆಲವರು ಎಷ್ಟೋ ಚಿತ್ರಗಳನ್ನು ನೋಡಿ ಖರೀದಿಸದೇ ಬಿಟ್ಟು ಕಡೆಗೆ ಕಳಪೆಚಿತ್ರ ಒಂದನ್ನು ಖರೀದಿಸಿ, ಕೊಟ್ಟ ಬೆಲೆ ಜಾಸ್ತಿಯಾಯ್ತೇನೋ ಎಂದು ಒದ್ದಾಡುತ್ತಾರೆ.ಕತ್ತಲಾಗುತ್ತಿದ್ದಂತೆ ಮಾರಾಟವಾಗದ ಚಿತ್ರಗಳ ಮೌನ ರೋದನ ಮುಗಿಲು ಮುಟ್ಟುತ್ತದೆ.ಅವುಗಳಿಗೆ ಸಾಂತ್ವನ ಹೇಳುವಂತೆ ಎಲ್ಲಿಂದಲೋ ತಂಗಾಳಿ ಬೀಸಿ ,ಆಶಾಕಿರಣದ ಸಂಕೇತವಾಗಿ ಬೀದಿ ದೀಪಗಳು ಜಗ್ಗನೆ ಹತ್ತಿಕೊಳ್ಳುತ್ತವೆ .ನಾಳೆ ಮತ್ತೆ ಬೆಳಗಾಗುತ್ತದೆ ಎನ್ನುವ ಭರವಸೆಯಲ್ಲಿ ಚಿತ್ರಗಳು ಒಂದೊಂದಾಗಿ ಪೆಟ್ಟಿಗೆ ಸೇರುತ್ತವೆ ----- ಮತ್ತೆ ಯಾವುದೋ ಸಂತೆಗೆ ಪಯಣ ಬೆಳಸಲು.ಜೀವನವೆಂದರೆ ಅದೇ ಅಲ್ಲವೇ?..............ನಿಲ್ಲದ ಪಯಣ!!
(ಇದು ಸುಮಾರು ಮೂರು ವರುಷಗಳ ಹಿಂದೆ ನನ್ನ ಬ್ಲಾಗ್ ಶುರುಮಾಡಿದಾಗ ಬರೆದ ಲೇಖನ.ಮತ್ತೊಂದು ಚಿತ್ರಸಂತೆ ಬಂದು ಹೋಗಿದೆ.ಇಂದಿಗೂ ಇದು ಪ್ರಸ್ತುತ ಎನಿಸಿರುವುದರಿಂದ ಅದನ್ನು ಮತ್ತೊಮ್ಮೆ ಪ್ರಕಟಿಸುತ್ತಿದ್ದೇನೆ)

8 comments:

  1. ಮೂರು ವರುಷಗಳ ಹಿಂದೆ ನಿಮ್ಮ ಬ್ಲಾಗ್ ಶುರುಮಾಡಿದಾಗ ಬರೆದ ಲೇಖನವು ಎಂದಿಗೂ ಪ್ರಸ್ತುತವೇ. ನಿಮ್ಮ ಬ್ಲಾಗಿಗೆ 30 ತುಂಬಿದಾಗ ಚಿತ್ರ ಸಂತೆಯ ಆಗಿನ ಸ್ಥಿತಿಯನ್ನೂ ದಾಖಲಿಸಿರಿ.

    ಈ ವರ್ಷ ಹೋದ ವರ್ಷಕ್ಕಿಂತ ಹೆಚ್ಚಿಗೆ stallಗಳು ಮೈದಾಳಿದ್ದವು ಎನ್ನುವುದು ಸಂತೆಯ ಹಿರಿಮೆಗೆ ಧ್ಯೋತಕ.

    ಬೆಂಗಳೂರಿನ ಹೃದಯ ಭಾಗವಾಗಿರುವ ಶಿವಾನಂದ ವೃತ್ತದಿಂದ ಹಿಡಿದು ಚಿತ್ರ ಕಲಾ ಪರಿಷತ್, ಹೋಟೆಲ್ ಅಶೋಕಾ ಫುಟ್ ಬಾತ್ಗಳನ್ನು ಆಕ್ರಮಿಸಿಕೊಂಡು ಮುಖ್ಯ ಮಂತ್ರಿಗಳ ಗೃಹ ಕಛೇರಿಯವರೆಗೂ ಹಬ್ಬುವ ಹಲವಾರು ಕಲಾವಿದರ ಕಲಾಕೃತಿಗಳ ಮೇಳವನ್ನು ನೋಡುವ - ಕೊಳ್ಳುವ ಸದಾವಕಾಶವಿದು.

    ReplyDelete
  2. ಕೃಷ್ಣಮೂರ್ತಿಯವರೇ....
    ತುಂಬಾ ಪ್ರಸ್ತುತ ಮತ್ತು ಸರ್ವಕಾಲಕೂ fresh ಆಗಿ
    ಅನ್ನಿಸುವಂತಹ ಲೇಖನವೇ ಇದು...
    ಈಗಿನ generation ಜನ ಸಂತೋಷವನ್ನೂ ಕೂಡಾ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ.....
    ಹಣ್ಣು ಹಣ್ಣು ಮುದುಕಿ ಮಾರಿಕೊಂಡು ಕುಳಿತಿರುವ ಮೊಮ್ಮಗಳು ಮೂಡಿಸಿರುವ ಚಿತ್ರ... ಅದನ್ನು ಕೊಂಡುಕೊಂಡರೆ ಅಜ್ಜಿಗಾಗುವ ಖುಷಿ ಮತ್ತು ಅದರಿಂದ ನಮ್ಮ ಮನಸ್ಸಿಗೆ ಸಿಗುವ ಆನಂದಕ್ಕೆ ಕೋನ್ ice-cream ಎಲ್ಲಿ ಸಾಟಿಯಾದೀತು.....

    ಉತ್ತಮ ಬರಹ...

    ReplyDelete
  3. ಅಂದಿನ ಚಿತ್ರಸಂತೆಗೂ ಇಂದಿಗೂ ಪ್ರಸ್ತುತ.. ಚೆನ್ನಾಗಿ ಬರೆದಿದ್ದೀರಿ ಚಿತ್ರಗಳ ಮನದೊಳಗಿನ ಮೌನವನ್ನ ಬಿಂಬಿಸಿದ್ದೀರಿ

    ReplyDelete
  4. ಚಿತ್ರಸಂತೆಯ ವೀಕ್ಷಕರ ಒಳಹೊರಗನ್ನು ಚಂದವಾಗಿ ಚಿತ್ರಿಸಿದ್ದೀರಿ!

    ReplyDelete
  5. ನನಗೆ ಈ ಸಲದ್ದು ಮೊದಲ ಚಿತ್ರ ಸಂತೆ

    ReplyDelete
  6. ಚೆನ್ನಾಗಿ ಬರೆದಿದ್ದೀರಿ

    ReplyDelete
  7. ಪ್ರತಿ ಮಾತೂ ನಿಜ ಡಾಕ್ಟ್ರೆ. ಕಲೆ ಪ್ರದರ್ಶನಗೊಳ್ಳುವ ಬದಲು ಅಲ್ಲಿ ವಾಣಿಜ್ಯ ಬಂದು ಕೂತಾಗ ಸಿಗುವುದು ಒಂದು ವಿಚಿತ್ರ ಅನುಭವ.. ಚಿತ್ರದೊಳಗೆ ಹೊಕ್ಕು ಅವುಗಳ ಮಾತು ನೀವು ಹೇಳುತ್ತಿರುವಂತೆ ಭಾಸವಾಯಿತು..

    ಸೂಪರ್ ಲೇಖನ ಚಿರನೂತನ ಸಾರ್ವಕಾಲಿಕ

    ReplyDelete
  8. ಎಷ್ಟು ಚೆನ್ನಾಗಿ ಬರೆದಿದ್ದೀರಿ ಸರ್, ತುಂಬಾ ಸಂತೋಷವಾಯ್ತು

    ReplyDelete

Note: Only a member of this blog may post a comment.