ಡಿ.ವಿ.ಜಿ.ಯವರ 'ಮಂಕು ತಿಮ್ಮನ ಕಗ್ಗ 'ಕನ್ನಡ ಸಾಹಿತ್ಯಾಸಕ್ತರಿಗೆ ಚಿರ ಪರಿಚಿತ.ದಶಕಗಳಿಂದ ಹಲವಾರು ಜನರಿಗೆ ದಾರಿ ದೀಪವಾಗಿದೆ.ಇದರಲ್ಲಿ ಎರಡು ಮಾತಿಲ್ಲ.ಆದರೆ ಅಷ್ಟೇನೂ ಪರಿಚಿತವಲ್ಲದ ,1101 ಚೌಪದಿಗಳ ಸುಂದರ ಪುಸ್ತಕ ,ಕೆ.ಸಿ.ಶಿವಪ್ಪನವರು ಬರೆದ,'ಮುದ್ದು ರಾಮನ ಮನಸು'.ಇದನ್ನು 2003 ರಲ್ಲಿ ಭಾರತೀಯ ವಿದ್ಯಾ ಭವನ ,ಬೆಂಗಳೂರು ಹೊರತಂದಿದೆ.ಮತ್ತೂರು ಕೃಷ್ಣಮೂರ್ತಿ ಯವರ ಸುಂದರ ಮುನ್ನುಡಿ ಇದೆ.ಬಾಳಿಗೆ ಬೆಳಕನೀಯುವ ಸಾಲು ಸಾಲು ಸುಂದರ ಚೌಪದಿಗಳಿವೆ.ಇಗೋ ಕೆಲ ಚೌಪದಿಗಳನ್ನು ನಿಮ್ಮೊಡನೆ ಹಂಚಿ ಕೊಳ್ಳುತ್ತಿದ್ದೇನೆ.ನಿಮ್ಮ ಅನಿಸಿಕೆ ತಿಳಿಸಿ.ನಮಸ್ಕಾರ.
೧)ಅಂಬರದ ಎಲರಲ್ಲಿ ಪೋಷಣೆಯ ಗಂಧವಿದೆ;
ಹಾರುವುದು ಗಾಳಿಪಟ ತಂತು ಬಲದಿಂದ.
ಪಟ ಹಿಡಿದ ಕರದಲ್ಲಿ ಯಾವುದೋ ಯುಕ್ತಿಯಿದೆ;
ಸೂತ್ರದಲಿ ಶಕ್ತಿಯಿದೆ -ಮುದ್ದು ರಾಮ.
೨)ಕಲಿಸೆನಗೆ ಓ ಗುರುವೇ ಮರುಗುವುದ ಮಣಿಯುವುದ
ಪರ ಸುಖಗೆ ಹಿಗ್ಗುವುದ ,ನೋವನಳಿಸುವುದ.
ಬೀಗದಿಹ ಮನವೊಂದ ,ಸರಳತೆಯ ನೀಡೆನಗೆ ;
ಮನ್ನಿಸೈ ತಪ್ಪುಗಳ-ಮುದ್ದುರಾಮ.
೩) ದಾರಿ ತೋರಿತು ನನಗೆ ಮಂಕುತಿಮ್ಮನ ನೆನಪು
ಈ ಮನಸು ಮುಗ್ಗರಿಸಿ ಒಂಟಿ ನಿಂತಾಗ .
'ಮೌನದೊಳಮನೆ ಶಾಂತಿ'ಬೆಳಕ ತಂದಿತು ಆಗ
ತಿಮ್ಮ ಜೀವನ ಮಿತ್ರ -ಮುದ್ದು ರಾಮ.
೪)ನನ್ನದಿದು ನಾ ಬರೆದೆ ಎನುವ ಅಮಲೇರಿದರೆ
ಪಾತಾಳದೊಳಬಿದ್ದೆ ನೀ ಮೇರುವಿನಿಂದ
ನಿನದಲ್ಲ ಪದಪುಂಜ ಯಾರದೋ ಕರುಣೆ ಅದು
ಬರಿ ನಿಮಿತ್ತವೋ ನೀನು -ಮುದ್ದು ರಾಮ.
೫)ಜನಪದಗಳು ಉರುಳಿದವು ,ಮಹಲು ಬಾವಲಿ ಬೀಡು
ತೇಲಿ ಹೋದವು ಮುಕುಟ ಇನಿತು ಗುರುತಿರದೆ.
ಯಾವುದುಳಿದಿದೆ ಇಲ್ಲಿ ಕಾಲ ನದಿಯ ಓಟದಲಿ ?
ಸ್ಥಿರವಾವುದಿದೆ ಇಲ್ಲಿ?-ಮುದ್ದು ರಾಮ.
೬)ಲೋಕದಲಿ ನೀನೇನು ಮೊದಲಿಗನೆ,ಕೊನೆಯವನೆ?
ಎದ್ದೆದ್ದು ಒದ್ದಾಡಿ ಏಕೆ ತೊಳಲಾಟ?
ಇದೆ ವಿಶ್ವ ಮೊದಲಿಂದ ,ನೀ ಅಳಿದರೂ ಇಹುದು
ನೀ ಕ್ಷಣಿಕ ,ಜಗವಲ್ಲ-ಮುದ್ದು ರಾಮ
.
.
೭)ಚಿಂತಿಸದೆ ಇರದುದಕೆ,ನಲಿ ನೀನು ಇರುವುದಕೆ ;
ಸಂತಸದ ಈ ದಾರಿ ಬಲು ಸುಲಭ ,ಸರಳ.
ಗಗನ ಬೀಳುವುದೆಂದು ಏಕೆ ಸಲ್ಲದ ಚಿಂತೆ?
ಇರು ಇಂದು ನಲವಿಂದ -ಮುದ್ದು ರಾಮ.
೮) ಕಾಲ ಕಂಬದ ಮೇಲೆ ಬಾಳ ತಂತಿಯ ಕಟ್ಟಿ
ಭರವಸೆಯ ಕೋಲ್ ಪಿಡಿದು ಸಾಗುತಿದೆ ಆಟ.
ಮುಗ್ಗರಿಸೆ ಅದು ಸೋಲು,ನಡೆಯುತಿರೆ ಅದು ಗೆಲುವು
ಬದುಕು ದೊಂಬರ ಆಟ-ಮುದ್ದು ರಾಮ.
೯)ಕಿರಿದು ಹಿರಿದೆನ ಬೇಡ ಕೆಲಸ ಯಾವುದೆ ಇರಲಿ
ಸೇತುವೆಗೆ ತಳಹದಿಯೋ ಒಂದೊಂದು ಕಲ್ಲು .
ಸೇವೆಯಲಿ ಶಾಂತಿ ಇದೆ ,ಮಮಕಾರ ನಾಶವಿದೆ
ಅಳಿಲಾಗು ರಾಮನಿಗೆ -ಮುದ್ದು ರಾಮ.
೧೦)ಸುಳಿದಿಂದು ಕಾತರತೆ ಮರಳಿ ಮರೆಯಾಗುವುದು;
ನಿಲ್ಲುವುದೇ ಕಾರ್ಮೋಡ ರವಿ ಕಿರಣದೆದುರು ?
ಅಲೆ ಬಂದರೇನಂತೆ? ಬಂಡೆ ತಾನಲಗುವುದೇ?
ಅಣಿಯಾಗು ಜಿತ ಮನಕೆ- ಮುದ್ದುರಾಮ.
೧೧)ತೆರೆದೆದೆಯ ಬಾನಂತೆ ನಿಲ್ಲು ಎತ್ತರದಲ್ಲಿ ;
ಬಯಲಿನಲಿ ಬಯಲಾಗು ಕೊನೆಗಳಿಗೆಯಲ್ಲಿ .
ಸುಖ ಭಾವ ಹೊದ್ದವಗೆ ಚಳಿಯೇನು?ಬಿಸಿಲೇನು?
ಆಗು ಕಾಲಾತೀತ!-ಮುದ್ದುರಾಮ.
೧೨)ನೀ ದಣಿದು ನಿಂತಾಗ ಯಾರೋ ಕೊಡ ನೀಡುವರು
ಮೆದು ಮಾತನಾಡುವರು ಆಸರೆಯ ನೀಡಿ.
ಚೈತನ್ಯ ತುಂಬುವರು ಸೋತ ಮನಮಂದಿರಕೆ
ಬಿಡು ಚಿಂತೆ ಕಾತರವ-ಮುದ್ದು ರಾಮ.