Sunday, December 11, 2011

"ಜಗವೆಲ್ಲ ಮಲಗಿರಲು....!!! "

ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು.ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ,ಮೇ ತಿಂಗಳ ಒಂದು ದಿನ.ತಾರೀಕು ಸರಿಯಾಗಿ ನೆನಪಿಲ್ಲ.ರಾತ್ರಿ ಸುಮಾರು ಹತ್ತು ಗಂಟೆ .ವಿಪರೀತ ಸೆಕೆ.ನಿಲ್ದಾಣದಲ್ಲಿ ಜನಗಳ ಜಾತ್ರೆ.ಬೆಳಗ್ಗೆಯೆಲ್ಲಾ ದೆಹಲಿಯ ಸುಡು ಬಿಸಿಲಿಗೆ ಸುಟ್ಟು ಕರಕಲಾಗಿದ್ದೆ.ಹೋದ ಕೆಲಸ ಕೈ ಗೂಡದೆ ಮನಸ್ಸಿಗೆ ನೋವಾಗಿತ್ತು. ಎಲ್ಲಾ ರೈಲುಗಳೂ ಭರ್ತಿಯಾಗಿದ್ದರಿಂದ,'ವಿಶೇಷ'ರೈಲೊಂದರಲ್ಲಿ ಬೆಂಗಳೂರಿಗೆ ಬರ್ತ್ ಒಂದನ್ನು ರಿಸರ್ವ್ ಮಾಡಿಸಿದ್ದೆ.ಆ 'ವಿಶೇಷ'ರೈಲು ಒಂದು ಗಂಟೆ ತಡವಾಗಿ ಬಂತು.ಟ್ರೈನು ಬಂದಾಗ ಬೋಗಿಯಲ್ಲಿ ದೀಪವಿರಲಿಲ್ಲ.ರಿಸರ್ವೇಶನ್ ಇಲ್ಲದವರೆಲ್ಲಾ ಎಲ್ಲಾ ಸೀಟುಗಳನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು.ರಿಸರ್ವೇಶನ್ ಇದ್ದವರು ತಗಾದೆ ತೆಗೆದಿದ್ದರು.ಟಿ.ಟಿ.ಯ ಪತ್ತೆಯೇ ಇರಲಿಲ್ಲ.ಹೇಳುವರು,ಕೇಳುವರು ಇಲ್ಲದೆ ಗದ್ದಲವೋ ಗದ್ದಲ.ಕೆಲವರು ಕೈ ಕೈ ಮಿಲಾಯಸಲು ಶುರು ಮಾಡಿದರು.ನಮ್ಮ ದೇಶದ ಅರಾಜಕತೆಯನ್ನು ಬಿಂಬಿಸುವ ಒಂದು ಮಿನಿ ಅಸೆಂಬ್ಲಿ ಯಂತಿತ್ತು ಆ ಬೋಗಿ.ಅಷ್ಟರಲ್ಲಿ ದೇವ ಧೂತನಂತೆ ಮೇಲೆ ಮಲಗಿದ್ದ ಗಡ್ಡಧಾರಿ ವಿದೇಶಿ ಯುವಕನೊಬ್ಬ ಮೆಲ್ಲಗೆ ಕೆಳಗಿಳಿದು ಬಂದ.ಎಲ್ಲರಿಗೂ ಕೈಮುಗಿದ.ತನ್ನ ಹರಕು ಮುರುಕು ಇಂಗ್ಲೀಷಿನಲ್ಲಿ ,'ದಯಮಾಡಿ ಜಗಳವಾಡಬೇಡಿ'ಎಂದು ಬೇಡಿಕೊಂಡ.ಜಗಳವಾಡುತ್ತಿದ್ದ ಪ್ರಯಾಣಿಕನೊಬ್ಬನಿಗೆ ತನ್ನ ಮೇಲಿನ ಬರ್ತ್ ಬಿಟ್ಟುಕೊಟ್ಟ.ಟ್ರೈನ್ ಹೊರಟು ಅಲ್ಲಿ ಶಾಂತಿ ನೆಲಸುವವರೆಗೂ ತನ್ನ ಬ್ಯಾಕ್ ಪ್ಯಾಕ್ ತಗುಲಿಸಿಕೊಂಡು ಅಲ್ಲೇ ನಿಂತಿದ್ದ.ಅವನ ಮುಖದಲ್ಲಿ ಅಪೂರ್ವ ಕಾಂತಿಯಿತ್ತು.ಕಂಡೂ ಕಾಣದಂತೆ ಮುಗುಳು ನಗೆ ಇತ್ತು.ನನ್ನ ಪಕ್ಕ ಸ್ವಲ್ಪ ಜಾಗ ಮಾಡಿ ಕೊಟ್ಟು, ಕುಳಿತುಕೊಳ್ಳುವಂತೆ ಹೇಳಿದೆ.ಬ್ಯಾಕ್ ಪ್ಯಾಕ್ ಕೆಳಗಿಟ್ಟು ನನ್ನ ಪಕ್ಕ ಕುಳಿತ.ಎಲ್ಲರಿಗೂ ಅವನ ಬಗ್ಗೆ ಕುತೂಹಲ.ನಿಧಾನವಾಗಿ ತನ್ನ ಬಗ್ಗೆ ಹೇಳ ತೊಡಗಿದ.ಅವನದು ಇರಾನ್ ನಲ್ಲಿ ಒಂದು ಸಣ್ಣ ಊರು.ಇವನ ತಂದೆ ಅಲ್ಲಿನ ಎಲೆಕ್ಟ್ರಿಸಿಟಿ ಬೋರ್ಡಿನ ನೌಕರನಾಗಿ ಆಗ ತಾನೆ ನಿವೃತ್ತಿ ಹೊಂದಿದ್ದ.ಇರಾನ್ ,ಇರಾಕ್ ನಡುವೆ ಯುದ್ದ ಶುರುವಾಗಿ ಕೆಲವು ವರ್ಷಗಳಾಗಿತ್ತು.ಇವನ ಊರಿನಿಂದ ಯುದ್ಧಕ್ಕೆ ಹೋದಇವನ ಹಲವಾರು ಸ್ನೇಹಿತರು ಯುದ್ಧದಲ್ಲಿ ಸತ್ತಿದ್ದರು.ಇವನಿಗೂ ಯುದ್ಧಕ್ಕೆ ಸೇರುವಂತೆ ಕರೆ ಬಂದಿತ್ತು .ಇವನ ತಂದೆ ತಾಯಿಗಳಿಗೆ ತಮ್ಮ ಒಬ್ಬನೇ ಮಗನನ್ನು ಯುದ್ಧಕ್ಕೆ ಕಳಿಸಲು ಇಷ್ಟವಿರಲಿಲ್ಲ.ಅವನ ತಂದೆ ರಿಟೈರ್ ಮೆಂಟಿನಿಂದ ಬಂದ ತನ್ನ ಎಲ್ಲಾ ಹಣವನ್ನೂ ಖರ್ಚು ಮಾಡಿ ,ಅವರಿವರನ್ನು ಹಿಡಿದು ಅವನಿಗೆ ಬೇರೆ ಯಾರದೋ ಹೆಸರಿನಲ್ಲಿ ಪಾಸ್ ಪೋರ್ಟ್ ಕೊಡಿಸಿ 'ನೀನು ಜೀವಂತವಾಗಿದ್ದರೆ ಸಾಕು ಮಗು.ಪ್ರಪಂಚ ವಿಶಾಲವಾಗಿದೆ. ಎಲ್ಲೋ ಒಂದು ಕಡೆ ನಿನಗೆ ಆಶ್ರಯ ಸಿಗುತ್ತದೆ.ಇಲ್ಲಿ ಯುದ್ಧದಲ್ಲಿ ಸಾಯಬೇಡ.ಎಲ್ಲೋ ಒಂದು ಕಡೆ ನೀನು ಬದುಕಿದ್ದರೆನಮಗೆ ಅಷ್ಟೇ ಸಾಕು'ಎಂದು ಅವನನ್ನು ಅಲ್ಲಿಂದ ಸಾಗ ಹಾಕಿದ್ದ.ಅವನು ಮೊದಲು ಯಾವುದೋ ಬೇರೆ ದೇಶದಲ್ಲಿ ಸ್ವಲ್ಪ ದಿನ ಇದ್ದು, ಒಂದು ತಿಂಗಳ ಕೆಳಗೆ ದೆಹಲಿಗೆ ಬಂದಿದ್ದ.ಅಲ್ಲಿ ಫುಟ್ ಪಾತಿನಲ್ಲಿ ಮಲಗುತ್ತಾ ,ಬ್ರೆಡ್ಡು ,ಮೊಟ್ಟೆ ತಿಂದು ಹಸಿವೆ ನೀಗಿಕೊಳ್ಳುತ್ತಾ ಆಶ್ರಯಕ್ಕಾಗಿ ಹಲವಾರು ಕನ್ಸಲೇಟ್ ಗಳಿಗೆ ಅಲೆಯುತ್ತಾ ಒಂದು ತಿಂಗಳು ಕಳೆದಿದ್ದ.ಇನ್ನು ಕೆಲವು ದಿನಗಳಲ್ಲಿ ನಮ್ಮ ದೇಶ ಬಿಟ್ಟು ಹೋಗಬೇಕಾಗಿತ್ತು.ಇಲ್ಲಿಂದ ಶ್ರೀಲಂಕಾಗೆ ಹೋಗಿ ಅಲ್ಲಿ ಆಶ್ರಯಕ್ಕಾಗಿ ಪ್ರಯತ್ನಿಸುವುದಾಗಿ ಹೇಳಿದ.ಯುದ್ಧ ನಿಂತ ಮೇಲೆ ಮನೆಗೆ ಹಿಂದಿರುಗುವುದಾಗಿಯೂ,ಯಾವು ದಾದರೂ ಕೆಲಸಕ್ಕೆ ಸೇರುವ ಮುನ್ನ ಸ್ವಲ್ಪ ದಿನ ಮನೆಯಲ್ಲಿದ್ದು ಕವಿತೆಗಳನ್ನು ಓದುತ್ತಾ, ವಯಸ್ಸಾದ ಅಮ್ಮನಿಗೆ ಅಡಿಗೆ ಮನೆಯಲ್ಲಿ ಪಾತ್ರೆ ತೊಳೆಯಲು ಸಹಾಯಮಾಡುವುದಾಗಿ ಹೇಳಿದ.ಜೀವಂತವಾಗಿರುವುದೇ ಒಂದು ಸಂತಸದ ವಿಷಯವಲ್ಲವೇ?ಅದನ್ನು ಹೀಗೆ ಪರಸ್ಪರ ಕಚ್ಚಾಡಿಕೊಂಡು ಹಾಳು ಮಾಡಿಕೊಳ್ಳುವುದುಸರಿಯೇ ?ಎಂದು ಕೇಳಿದ. ಹಾಗೆ ಹೇಳುವಾಗ ಅವನ ಕಣ್ಣುಗಳಲ್ಲಿ ನೀರಿತ್ತು.ರಾತ್ರಿ ಹನ್ನೆರಡಾಗುತ್ತಿತ್ತು.ಟ್ರೈನಿನ 'ಧಡ ಬಡ' ಸದ್ದಿನ ಜೋಗುಳಕೆ ಹಲವರು ಕುಳಿತಲ್ಲೇ ತೂಕಡಿಸುತ್ತಿದ್ದರು.ಅವನು ತನ್ನ ಬ್ಯಾಕ್ ಪ್ಯಾಕ್ ಎತ್ತಿಕೊಂಡು ಟಾಯ್ಲೆಟ್ ನ ಹತ್ತಿರದ ಪ್ಯಾಸೇಜ್ ನಲ್ಲಿ ,ಕೆಳಗೆ ನ್ಯೂಸ್ ಪೇಪರ್ ಹಾಸಿಕೊಂಡು ಅದರ ಮೇಲೆ ಕುಳಿತು ಚೀಲದಿಂದ ಕೊಳಲೊಂದನ್ನು ಹೊರತೆಗೆದು,ಜಗದ ಚಿಂತೆಗಳಿಗೆ ಇತಿಶ್ರೀ ಹಾಡುವಂತೆ ಇಂಪಾದ ರಾಗವೊಂದನ್ನು ನುಡಿಸ ತೊಡಗಿದ.ಟ್ರೈನಿನ ಕಿಟಕಿಯ ಹೊರಗೆ ನೋಡಿದೆ.ಓಡುವ ,ಮರ,ಗಿಡ,ಹೊಲ,ಗದ್ದೆಗಳ ಮೇಲೆ ತಣ್ಣಗೆ ಬೆಳದಿಂಗಳು ಹರಡಿತ್ತು. ಟ್ರೈನಿನ ಒಳಗೆ ಇಂಪಾದ ಕೊಳಲಿನ ನಾದ.'ಬುದ್ಧ,ಬುದ್ಧ ,ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ'ಎಂಬ ಕವಿತೆಯೊಂದರ ಸಾಲುಗಳು ನೆನಪಾದವು.

13 comments:

  1. ಬಹಳ ಒಳ್ಳೆಯ ಲೇಖನದ ನೆನಪು ಮತ್ತೊಮ್ಮೆ ಬಂದಿದ್ದು ಸುಳ್ಳಲ್ಲಾ . ಆ ವಿದೇಶಿಯನಿಗಿರುವ ತಿಳುವಳಿಗೆ ನಮಗಿಲ್ಲವಲ್ಲಾ ಎನ್ನುವ ಬೇಸರವಾಯಿತು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  2. LEKHANA THUMBAA ISTA AAYTU SIR.IDU NAMMA JANARA SANKUCHITA MANOBHAAVAVANNU,VIDESHIYANA VISHAALA MANOBHAAVAVANNU PRATIBIMBISUVA ADBHUTA LEKHANA.

    ReplyDelete
  3. ನಿಜಕ್ಕೂ ಕಣ್ಣು ತುಂಬಿ ಬಂತು.

    ನೋವಿನ ಹಿನ್ನಲೆಯಲ್ಲೇ ನಗುವಿನ ಬೆಲೆ ತಿಳಿದ ಮಾಗಿದ ಮುಗ್ದನೊಬ್ಬನ ಮನದಾಳದ ಮಾತು ನಿಜಕ್ಕೂ ಹಿಂದೆ, ಇಂದು, ಮುಂದೆಂದೂ ಪ್ರಸ್ತುತ.

    ಆ ವಿಶ್ವಮಾನವನ ಸಂಪರ್ಕ ನಿಮಗಿದ್ದಲ್ಲಿ ದಯವಿಟ್ಟು ನನ್ನ ಅಭಿನಂದನೆಗಳನ್ನು ತಿಳಿಸಿ....

    ReplyDelete
  4. ತುಂಬಾ ಚೆನ್ನಾಗಿದೆ ಸರ್.
    swarna

    ReplyDelete
  5. ಯುದ್ಧವು ಹೀಗೂ ಮಾನವನನ್ನು ಅತಂತ್ರವಾಗಿಸ ಬಲ್ಲದು ಎನ್ನುವುದನ್ನು ಮನ ಮುಟ್ಟುವಂತೆ ಬಿಂಬಿಸಿದ್ದೀರಾ.

    ಆತನ ಕಣ್ಣ ನೀರ ಮಡುವಿನಲ್ಲಿ ಮಿಂದೆದ್ದು ಶಾಂತಿ ಪಾಠವ ಕಲಿತೆ ಸಾರ್. ಆ ಕೊಳಲಿನ ನಾದದಲ್ಲಿ ಜೀವ ವೀಣೆಯ ವ್ಯಥೆ ಮನೋ ರೋಧಕವಾಗಿತ್ತು.

    ೩೦ ವರ್ಷಗಳ ನಂತರವೂ ರೈಲುಗಳ ಅಧ್ವಾನ ಹಾಗೆ ಮುಂದುವರೆದಿದೆ.

    ReplyDelete
  6. aagalu odidde...

    aaglE ondu varsha aaytaa..
    monne monne odida haagide sir.....

    kaNNige kaTTida haage barediddIri sir......

    ReplyDelete
  7. ಮನಮಿಡಿಯುವ ಘಟನೆ, ಮನಮುಟ್ಟುವ ನಿರೂಪಣೆ. ಅಭಿನ೦ದನೆಗಳು ಸರ್.

    ಅನ೦ತ್

    ReplyDelete
  8. ನಿಜ,
    ನಾವು ಯಾವುದೋ ಭ್ರಮೆಯಲ್ಲಿ ಜೀವನ ನಡೆಸ್ತಾ ಇರ್ತೀವಿ. ಲೋಕ ಸುತ್ತಬೇಕು.ಆಗ ಪ್ರಪಂಚದ ನಿಜದ ಅರಿವಾಗುತ್ತೆ. ಅಷ್ಟೇಕೆ? ಸಾಮಾನ್ಯವಾಗಿ ಅಂತರಜಾಲ ಜಾಲಾಡೋರೆಲ್ಲಾ ಮಧ್ಯಮ ವರ್ಗದ ಮೇಲಿರುತ್ತಾರೆ. ನಾವೆಲ್ಲಾ ಎಷ್ಟು ಮಂದಿ ನಮ್ಮೂರ ಕೊಳೆಗೇರಿ ನೋಡಿದ್ದೀವಿ? ಅಲ್ಲಿಯ ನರಕ ಸದೃಶ ಜೀವನ ನೋಡಿದಾಗ ನಮ್ಮ ಕೈಲಾದ ಅಲ್ಪ ನೆರವು ನೀಡೋಣ ಎಂದು ಎನಿಸಿದರೆ ಆಗ ನಾವು ಮನುಷ್ಯರು ,ಅಂದುಕೊಳ್ಳಬಹುದು. ಆದರೆ ಸಾಮಾನ್ಯವಾಗಿ ಹೇಳೋದೇನೂ ಗೊತ್ತಾ? ಸರ್ಕಾರ ಇವಕ್ಕೆಲ್ಲಾ ಎಷ್ಟುಮಾಡಿದರೂ ಇಷ್ಟೇ ಕಂಡ್ರೀ. ಹೌದು, ಅವರ ಜೀವನ ಸುಧಾರಿಸುವುದು ಕಷ್ಟ. ಆದರೆ ಯಾಕೆ, ಹೀಗೆ? ವಿದ್ಯಾಭ್ಯಾಸದ ಕೊರತೆ. ಅರಿವಿನ ಕೊರತೆ. ಅಜ್ಞಾನದ ಅಂಧಕಾರದಲ್ಲಿ ಮುಳುಗಿರುವವರಿಗೆಅರಿವು ಮೂಡಿಸುವ ನಮ್ಮ ಕೈಲಾದ ಕಿಂಚಿತ್ ಪ್ರಯತ್ನ ಮಾಡ ಬೇಡವೇ? ಅವರೂ ನಮ್ಮ ಬಂಧುಗಳಲ್ಲವೇ?
    ನಿಮ್ಮ ಚೆಂದ ಲೇಖನ ಓದಿದಾಗ ನನ್ನ ಮನದಲ್ಲಿ ಬಂದ ಭಾವನೆಯನ್ನು ಹಂಚಿಕೊಂಡೆ. ಕ್ಷಮಿಸಿ ವಿಷಯಾಂತರವಾಗಿದ್ದರೆ.

    ReplyDelete
  9. ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ಬರುತ್ತಿರಿ.ನಮಸ್ಕಾರ.

    ReplyDelete
  10. Murthy sir...

    Modalu odidde...mattomme odi kushi patte...Nice one sir...

    ReplyDelete
  11. `ಜೀವಂತವಾಗಿರುವುದೇ ಒಂದು ಸಂತಸದ ವಿಷಯವಲ್ಲವೇ?ಅದನ್ನು ಹೀಗೆ ಪರಸ್ಪರ ಕಚ್ಚಾಡಿಕೊಂಡು ಹಾಳು ಮಾಡಿಕೊಳ್ಳುವುದುಸರಿಯೇ ?' ಎ೦ಥಾ ಅರ್ಥಪೂರ್ಣ ಮಾತು! ಈ ಜೀವದ, ಈ ಜೀವನದ ಮೌಲ್ಯವನ್ನು ತಿಳಿದವರು ಯಾರೂ ಅಶಾ೦ತಿಯನ್ನು ಬಯಸುವುದಿಲ್ಲ. ಧನ್ಯವಾದಗಳು ಸರ್. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

    ReplyDelete
  12. Destiny's Child ಅಂದರೆ ಇದೇ ಇರಬೇಕು, ಕಳೆದಸಲ ಕೂಡ ನಾನಿದಕ್ಕೆ ಪ್ರತಿಕ್ರಿಯಿಸಿದ ನೆನಪು. ಜಗತ್ತಿನಲ್ಲಿ ಯುದ್ಧವೊಂದಿರದಿದ್ದರೆ ಎಷ್ಟು ಒಳ್ಳೆಯದಾಗುತ್ತಿತ್ತು ಅಲ್ಲವೇ? ದಿ| ವಿಷ್ಣುವರ್ಧನ್ ರ ’ಮುತ್ತಿನಹಾರ’ ವನ್ನು ನೋಡಿದ್ದೆ, ಅದರಲಾಗಾಯ್ತು ಯುದ್ಧದ ಆ ಭಯಾನಕ ಸನ್ನಿವೇಶ, ವಿಧವೆಯರಾದವರ ಗೋಳು, ಪಾಲಕರನ್ನು ಕಳೆದುಕೊಂಡ ಮಕ್ಕಳ ಆಕ್ರಂದನ ಗೋಳು ಒಂದೆರಡಲ್ಲ. ಹೃದಯವಿದ್ದವರು ಸಹಿಸಿಕೊಳ್ಳುವ ಸನ್ನಿವೇಶಗಳು ಅವಲ್ಲ. ಬದುಕಿಕೋ ಎಂದು ಕಳುಹಿಸಿದ ಆ ಹುಡುಗನ ಪಾಲಕರೋ ಮತ್ಯಾರೋ ಗತಿಸಿಹೋದರೋ ಬದುಕಿದರೋ ನಮಗೆ ತಿಳಿಯುವುದಿಲ್ಲ, ಸಹಪ್ರಯಾಣಿಕನಾಗಿ ಮತ್ತೆಲ್ಲಿಗೋ ನಡೆದುಹೋದ ಆ ಬಡಪಾಯಿ ಭಾರತದಲ್ಲೇ ಇರುವನೋ ಬೇರೆಡೆ ಹೋದನೋ ಗೊತ್ತಿಲ್ಲ, ಒಟ್ಟಿನಲ್ಲಿ ಹಾರ್ಟ್ ಟಚ್ಚಿಂಗ್ ಬರಹ, ಧನ್ಯವಾದಗಳು.

    ReplyDelete

Note: Only a member of this blog may post a comment.