ಇಂದಿನ ಪ್ರಜಾವಾಣಿಯ 'ಭೂಮಿಕಾ'ದಲ್ಲಿ ಭರತ್ ಮತ್ತು ಶಾಲನ್ ಸವೂರ್ ಬರೆದ 'ಸ್ವಸ್ಥ ಬದುಕು'ವಿನಲ್ಲಿ 'ಸುಂದರ ಯೋಚನೆಗಳಿರಲಿ' ಎಂಬ ಬರಹ ಗಮನ ಸೆಳೆಯಿತು.ನಿಮಗೆಲ್ಲಾ ಹಾರ್ದಿಕ ಸಂಕ್ರಮಣದ ಶುಭಾಶಯಗಳನ್ನು ಕೋರುತ್ತಾ ಈ ಸುಂದರ ಬರಹದ ಕೆಲ ಪ್ರಮುಖ ಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
'ನಾವೆಲ್ಲಾ ನಮ್ಮ ಯೋಚನೆ,ಚಿಂತನೆಗಳ ಕನ್ನಡಕ ಧರಿಸಿ ಜಗತ್ತನ್ನು ನೋಡುತ್ತೇವೆ.ನಮಗೆ ಜಗತ್ತು ಕೆಟ್ಟದ್ದಾಗಿ ಮತ್ತು ಅಪಾಯಕಾರಿಯಾಗಿ ಕಾಣುತ್ತಿದ್ದರೆ,ಅದಕ್ಕೆ ನಮ್ಮ ಯೋಚನೆ ಕಾರಣ.ನಿಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಿ,ಆಗ ಜಗತ್ತು ಹೇಗೆ ಬದಲಾಗುತ್ತದೆ ನೋಡಿ.ಜಗತ್ತು ಸುಂದರ ಮತ್ತು ಪ್ರೀತಿ ತುಂಬಿದೆ ಅಂದುಕೊಂಡರೆ ಅದನ್ನು ನಾವು ಸೌಂದರ್ಯ ಮತ್ತು ಪ್ರೀತಿ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದೇವೆ ಎಂದು ಅರ್ಥ.ನಮ್ಮ ಸುತ್ತಲಿನ ಜಗತ್ತನ್ನು ಸುಂದರ ಗೊಳಿಸುವಲ್ಲಿ ನಮ್ಮ ಕೊಡುಗೆ ಕಿಂಚಿತ್ ಆದರೂ ಇರುತ್ತದೆ.ಆಲೋಚನೆಗಳನ್ನು ಬದಲಿಸಿ ಪ್ರೀತಿಯ ಕಂಪನಗಳನ್ನು ಹೆಚ್ಚಿಸಿಕೊಳ್ಳಿ'ಎನ್ನುತ್ತಾರೆ ಲೇಖಕರು.
ಇದಕ್ಕೆ 'ಕ್ವಾಂಟಮ್ ಫಿಸಿಕ್ಸ್' ನಲ್ಲಿ 'observer effect' ಎನ್ನುತ್ತಾರೆ.'If you change the way you look at things ,the things you look at change' ಎನ್ನುವ ಒಂದು ಪ್ರಸಿದ್ಧ ಹೇಳಿಕೆ ಇದೆ.ಆದರೆ'ವರ್ಷಾನುಗಟ್ಟಲೆಯ ಅಭ್ಯಾಸಬಲ ದಿಂದ ಜಗತ್ತನ್ನು ಸಂಶಯದಿಂದ ,ಎಚ್ಚರಿಕೆಯಿಂದ ನೋಡುವ ನಮ್ಮ ದೃಷ್ಟಿಕೋನವನ್ನು ಸುಲಭದಲ್ಲಿ ಬದಲಾಯಿಸಲು ಸಾಧ್ಯವೇ?'ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ.ನಮಗೆ ಹಿಂದೆ ಮೋಸ ಹೋದ ಅನುಭವ ಯಾರನ್ನೂ ಸುಲಭವಾಗಿ ನಂಬದಂತೆ ಮಾಡುತ್ತದೆ.ದಿನ ನಿತ್ಯದ ಬದುಕಿನಲ್ಲಿ ಕಣ್ಣೆದುರಿಗೇ ಮೋಸ ,ವಂಚನೆ ,ಕ್ರೌರ್ಯ ಕಾಣುತ್ತಿರುವಾಗ ಜಗತ್ತು ಸುಂದರವಾಗಿದೆ ಎಂದುಕೊಳ್ಳುವುದು ಹೇಗೆ ಸಾಧ್ಯ?ಇದು ಸತ್ಯಕ್ಕೆ ದೂರವಲ್ಲವೇ?ಎನ್ನುವ ಪ್ರಶ್ನೆ ಕಾಡುತ್ತದೆ.
'ಯದ್ಭಾವಂ ತದ್ಭವತಿ'.'ದೃಷ್ಟಿಯಂತೆ ಶೃಷ್ಟಿ' ಎನ್ನುವುದನ್ನು ನಾವು ಮೊದಲು ನಂಬಬೇಕು.ನನಗೆ ಪರಿಚಯವಿರುವ ಇಬ್ಬರು ಮಹಿಳೆಯರ ಅನುಭವವೇ ಇದಕ್ಕೆ ಸಾಕ್ಷಿ.ಒಬ್ಬ ಮಹಿಳೆ 'ನೂರಕ್ಕೆ ತೊಂಬತ್ತರಷ್ಟು ಆಟೋದವರು ಒಳ್ಳೆಯವರು,ಸಾಮಾನ್ಯವಾಗಿ ಮೋಸ ಮಾಡುವುದಿಲ್ಲ 'ಎಂದು ಬಲವಾಗಿ ನಂಬಿರುವುದರಿಂದ ಅವರಿಗೆ ಎಂದೂ ತೊಂದರೆಯಾಗಿಲ್ಲ.ಒಳ್ಳೆಯ ಆಟೋದವರೇ ಸಿಗುತ್ತಾರೆ.ಆದರೆ ಅದೇ ಇನ್ನೊಬ್ಬರು ಬಹಳಷ್ಟು ಆಟೋದವರು ಮೋಸಮಾಡುತ್ತಾರೆ ಎಂದು ಬಲವಾಗಿ ನಂಬಿರುವುದರಿಂದ ಅವರಿಗೆ ಅದೇ ರೀತಿಯವರು ಸಿಗುತ್ತಾರೆ.ಇದು ಬರೀ ಕಾಕ ತಾಳೀಯವೆಂದು ಹಗುರವಾಗಿ ತಳ್ಳಿ ಹಾಕುವಂತಿಲ್ಲ.ಮೊದಲಿಗೆ ಕಷ್ಟ ಸಾಧ್ಯವೆನಿಸಿದರೂ ನಾವು ನೋಡುವ ದೃಷ್ಟಿಯನ್ನು ಕ್ರಮೇಣ, ಪ್ರಯತ್ನ ಪೂರಕವಾಗಿ,ಬದಲಾಯಿಸಿ ಕೊಳ್ಳೋಣ.ಜಗತ್ತನ್ನು ಸುಂದರವೆಂದು ಕಾಣುವ ದೃಷ್ಟಿಯೂ ನಮಗೆ ಅಭ್ಯಾಸವಾಗಲಿ.ಒಂದು ಸುಂದರ ಜಗತ್ತನ್ನು ಶೃಷ್ಟಿ ಸೋಣ.'ಸರ್ವೇ ಜನಾಹ ಸುಖಿನೋ ಭವಂತು'.ಎಲ್ಲೆಲ್ಲೂ ಸುಖ ಮತ್ತು ಸಂತೋಷದ ಸಾಮ್ರಾಜ್ಯವೇ ರಾರಾಜಿಸಲಿ ಎಂದು ಪ್ರಾರ್ಥಿಸುತ್ತಾ ನಿಮ್ಮೆಲ್ಲರಿಗೂ ಸಂಕ್ರಾಂತಿಯು ಶುಭದಾಯಕವಾಗಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ.