Monday, May 21, 2012

"ನೀ ...ನನ್ನ ನೋಡಿ ಎದಕ್ ನಕ್ಕೀ? "

ಇದು ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದದ್ದು.ನಮಗಾಗ ಮೊದಲ ಎಮ್.ಬಿ.ಬಿ.ಎಸ್.ಪರೀಕ್ಷೆಯ ದಿನಗಳು.ರಾತ್ರಿಯೆಲ್ಲಾ ಕೂತು ಓದುತ್ತಿದ್ದರಿಂದ ,ರಾತ್ರಿ ಸುಮಾರು ಹನ್ನೆರಡರ ವೇಳೆಗೆ "ಟೀ ಬ್ರೇಕ್ "ಗೆಂದು ನಮ್ಮ ಹಾಸ್ಟೆಲ್ ನ ಎದುರು 'ಹರಟೆ ಕಟ್ಟೆಯ' ಬಳಿ ಸೇರುತ್ತಿದ್ದೆವು .ಹೀಗೇ ಒಂದು ದಿನ ಟೀ ಕುಡಿದು ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಹರಟೆ ಹೊಡಿಯುತ್ತಿದ್ದೆವು. ಪಕ್ಕದ ಹಾಸ್ಟೆಲ್ ನಿಂದ ನಮ್ಮ ಸೀನಿಯರ್ ಹಡಪದ್ ಬರುತ್ತಿದ್ದರು.ಅವರನ್ನು ಒಬ್ಬ ವ್ಯಕ್ತಿ ಹಿಂಬಾಲಿಸುತ್ತಿದ್ದ.ಹಿಂಬಾಲಿಸುತ್ತಿದ್ದ ವ್ಯಕ್ತಿಯನ್ನು ಕುರಿತು ಹಡಪದ್ "ಲೇ...!!! ಸುಮ್ನಾ ಹೋಗೋ ಯಪ್ಪಾ...!!!ಯಾಕ್ ಹಿಂಗ ಕಾಡಾಕ ಹತ್ತೀ? ನಿನ್ನ ನೋಡಿ ನಾ ಯಾಕ ನಗಲೋ?ಮತ್ತ ನನ್ನ ಹಿಂದೆ ಬಂದರ ಒದೀತೀನಿ ನೋಡು ಮಗನಾ !!!" ಎಂದು ಜೋರಾಗಿ ಕೂಗುತ್ತಿದ್ದರು. ನಾವು ಹಡಪದ ರನ್ನು ಏನೆಂದು ವಿಚಾರಿಸಿದಾಗ ತಿಳಿದಿದ್ದು ಇಷ್ಟು. ರಾತ್ರಿ ಸುಮಾರು ಎಂಟು ಘಂಟೆಯ ವೇಳೆಗೆ ಹಡಪದ್,ಅವರ ಸ್ನೇಹಿತರೊಬ್ಬರ ಜೊತೆ ಮೆಸ್ಸಿನಲ್ಲಿ ಊಟ ಮಾಡುತ್ತಿದ್ದರು.ಅವರ ಸ್ನೇಹಿತ ಹೇಳಿದ ಯಾವುದೋ ಜೋಕಿಗೆ ಇವರು ಜೋರಾಗಿ ನಕ್ಕರು.ನಗುತ್ತಾ ಅವರಿಗೆ ಅರಿವಿಲ್ಲದಂತೆ ಸಹಜವಾಗಿ ಅವರ ದೃಷ್ಟಿ , ಎದುರು ಕೂತಿದ್ದ ಈ ವ್ಯಕ್ತಿಯ ಮೇಲೆ ಬಿತ್ತು. ಆ ವ್ಯಕ್ತಿ, ಅವರು ತನ್ನನ್ನೇ ನೋಡಿ ನಗುತ್ತಿದ್ದಾರೆ ಎಂದು ಅಪಾರ್ಥ ಮಾಡಿಕೊಂಡ.ಇವರು ಎಷ್ಟು ಹೇಳಿದರೂ ಕೇಳಲು ತಯಾರಿರಲಿಲ್ಲ.ರಾತ್ರಿ ಸುಮಾರು ಎಂಟು ಘಂಟೆಯಿಂದ ಅವರನ್ನು ಹಿಂಬಾಲಿಸುತ್ತಾ "ನನ್ನನ್ನು ನೋಡಿ ಎದಕ್ ನಕ್ಕೀ ?"ಎಂದು ಪ್ರಶ್ನೆ ಕೇಳುತ್ತಾ ಗಂಟು ಬಿದ್ದಿದ್ದ.ಹಡಪದ್"ನಾ ನಿನ್ನ ನೋಡಿ ನಕ್ಕಿಲ್ಲೋ ಯಪ್ಪಾ....!!"ಎಂದು ಒಂದು ಸಾವಿರ ಸಲ ಹೇಳಿದರೂ ,ಅವನು ಅವರನ್ನು ಹಿಂಬಾಲಿಸುವುದನ್ನು ಬಿಟ್ಟಿರಲಿಲ್ಲ.ಅವನದು ಒಂದೇ ಪ್ರಶ್ನೆ "ನನ್ನ ನೋಡಿ ಎದಕ್ ನಕ್ಕೀ?".ಕಾಲೇಜಿನ ಕ್ಯಾಂಪಸ್ಸಿನ ತುಂಬೆಲ್ಲಾ ಹೀಗೇ ರಾತ್ರಿ ಎಂಟರಿಂದ ಹನ್ನೆರಡರವರೆಗೂ,ಅವನು ಅದೇ ಪ್ರಶ್ನೆ ಕೇಳುತ್ತಾ ,ಅವರು ಅದೇ ಉತ್ತರ ಕೊಡುತ್ತಾ ಸುತ್ತುತ್ತಿದ್ದರು.ಹಡಪದ್ ಎಲ್ಲೇ ಹೋದರು ಆ ವ್ಯಕ್ತಿ ಹಿಂಬಾಲಿಸುತ್ತಿದ್ದ.ಟಾಯ್ಲೆಟ್ ಒಳಗೆ ಹೋಗಿ ಅರ್ಧ ಘಂಟೆ ಬಾಗಿಲು ಹಾಕಿಕೊಂಡರೂ ಅವನು ಬಾಗಿಲ ಹೊರಗೇ ಕಾಯುತ್ತಿದ್ದನಂತೆ!!ನಾವೆಲ್ಲಾ ಸೇರಿ ಆ ವ್ಯಕ್ತಿಗೆ ಸಮಾಧಾನ ಹೇಳುತ್ತಿದ್ದೆವು.ಅಷ್ಟರಲ್ಲಿ ಹಡಪದ್ ಅವನ ಕಣ್ಣು ತಪ್ಪಿಸಿ ಕತ್ತಲಲ್ಲಿ ಮರೆಯಾಗಿದ್ದರು. ಅವನು ನಮ್ಮಿಂದ ಬಿಡಿಸಿಕೊಂಡು ಮತ್ತೆ ಅವರನ್ನು ಹುಡುಕುತ್ತಾ ಹೊರಟ !!ನಾವೆಲ್ಲಾ ಹಡಪದ್ ರ ಫಜೀತಿ ಯನ್ನು ನೆನೆಸಿಕೊಂಡು ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾ ನಮ್ಮನಮ್ಮ ರೂಮುಗಳಿಗೆ ಓದಲು ಹೊರಟೆವು.ಮೊನ್ನೆ ನಾನು ನನ್ನ ಗೆಳೆಯ ಸೇರಿದಾಗ ಈ ಘಟನೆ ನೆನಪಾಗಿ ನಕ್ಕಿದ್ದೂ ನಕ್ಕಿದ್ದೆ.ಅದನ್ನು ನಿಮ್ಮಜೊತೆ ಹಂಚಿಕೊಳ್ಳುತ್ತಿದ್ದೇನೆ .ನೀವೂ ನಕ್ಕು ಹಗುರಾಗಿ.ನಮಸ್ಕಾರ.

15 comments:

 1. ಡಾಕ್ಟ್ರೆ...

  ನಿಮ್ಮ ಹಡಪದ್ ಅವರ ಗೋಳು ನೋಡಿ ನಗು ತಡೆಯಲಾಗಲಿಲ್ಲ...!

  ಹ್ಹಾ ಹ್ಹಾ !!

  ನಾವು ಕಾಲೇಜಿಗೆ ಹೋಗುವಾಗ ಒಬ್ಬರಿದ್ದರು..
  ಅವರ ತುಟಿ ಏನೋ ಒಂಥರಾ ಆಗಿತ್ತು...

  ಅವರೊಡನೆ ಮಾತನಾಡುವಾಗ ಚೆನ್ನಾಗಿಯೇ ಮಾತನಾಡುತ್ತಿದ್ದರು...

  ಅವರ ತುಟಿಯ ಬಗೆಗೆ ಕೇಳಿದರೆ ಕೆಂಡಾ ಮಂಡಲವಾಗಿ..
  ಕೂಗಾಡಿ ರೇಗಾಡಿ ನಮ್ಮ ಜನ್ಮ ಜಾಲಾಡಿಬಿಡುತ್ತಿದ್ದರು...!

  "ನೀವ್ಯಾರು ಅಂತ ನನಗೊತ್ತಿಲ್ವಾ?
  ನಿಮ್ಮ ಘನಂದಾರಿ ಕೆಲಸಗಳು ನನಗೊತ್ತಿಲ್ವಾ?

  ಮೊನ್ನೆ ಕಾಮರ್ಸ್ ಕಾಲೇಜಿನ ಶ್ರೀದೇವಿ ಹಿಂದೆ ಹೋದದ್ದು ನನಗೊತ್ತಿಲ್ವಾ?.........

  ........... !!


  ಯಾಕೆ ಅವರು ಹೀಗಾಡ್ತಾರೆ ಅನ್ನೋದು ಚಿದಂಬರ ರಹಸ್ಯವಾಗಿಯೇ ಉಳಿದು ಹೋಯ್ತು... !

  ಬೆಳ್ಳಂ ಬೆಳಿಗ್ಗೆ ನಗಿಸಿದ್ದಕ್ಕೆ ನಮಗೆ ಜೈ ಹೋ !!

  ReplyDelete
  Replies
  1. ಪ್ರಕಾಶಣ್ಣ;ತಕ್ಷಣದ ಪ್ರತಿಕ್ರಿಯೆಗೆ ಧನ್ಯವಾದಗಳು.ನಮ್ಮ ಸೀನಿಯರ ಹಡಪದ್ ತುಂಬಾ ಹಾಸ್ಯ ಪ್ರವೃತಿಯವರು.ಸದಾ ಎಲ್ಲರನ್ನೂ ನಗಿಸುತ್ತಿದ್ದರು.
   ಅವರೇ ಪೇಚಿಗೆ ಸಿಕ್ಕ ಪ್ರಸಂಗದಿಂದ ನಮಗೆ ಇನ್ನಷ್ಟು ನಗುವಿನ ಔತಣವಾಗಿತ್ತು!

   Delete
 2. ಯಾವುದೋ ಕನ್ನಡ ಸಿನೆಮಾದಲ್ಲಿ ಉಮೇಶ್ ಹೀಗೆ ಮಾಡಿದ್ದು ಜ್ಞಾಪಕವಾಯಿತು.

  ReplyDelete
 3. ಗುರುಗಳೇ,
  ಪಾಪ, ಆ ಸಮಯದಲ್ಲಿ ಹಡಪದ್ ಅವರ ಪರಿಸ್ಥಿತಿ ಹೇಗಾಗಿರಬೇಡ???
  ಅದು ಸರಿ,
  ಈಗ ನೀವ್ ಎದಕ್ ನಕ್ಕಿದ್ದು?????

  ReplyDelete
  Replies
  1. ಪ್ರವೀಣ್;ಬಹಳ ದಿನಗಳ ನಂತರ ನಿಮ್ಮನ್ನು ಬ್ಲಾಗಿನಲ್ಲಿ ನೋಡಿ ಸಂತೋಷವಾಯಿತು.ನಿಮ್ಮ ಪ್ರಶ್ನೆ ಚೆನ್ನಾಗಿದೆ.ಹ....ಹ..ಹಾ.

   Delete
 4. ಇನ್ನು ಮೇಲೆ ತುಂಬಾ ಹುಷಾರಾಗಿ ನಗಬೇಕು ನೋಡ್ರಿ, ನಮಗೂ ಇಂತವನು ಯಾರಾದರೂ ಗಂಟು ಬಿದ್ದರೆ ಹರೋ ಹರಾ!!!!

  ಪಾಪ ಅವನು ಹಡಪದರಿಗೆ ಎಷ್ಟು ದಿನ ಹೀಗೆ ಗಂಟು ಬಿದ್ದಿದ್ದನೋ? ಹಡಪದ್ ಅವರ ಪಾಡೇನೋ?

  ReplyDelete
 5. ಬದರಿ;ಇಂತಹವರು ಗಂಟು ಬಿದ್ದರೆ ತುಂಬಾ ಕಷ್ಟ.ಹೋದ ವಾರ ಬೆಂಗಳೂರಿನಲ್ಲಿ ಇಂತಹದೇ ಒಂದು ಪ್ರಸಂಗ ನಡೆಯಿತು.ಅದಕ್ಕೇ ಈ ಘಟನೆ ಮತ್ತೆ ನೆನಪಾಯಿತು.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 6. ನನಗಂತೂ ನಗುವಿಗೆ ತಡೆಯಿಲ್ಲದಂತಾಗಿದೆ ಸರ್ ಅಬ್ಬಾ ಎಷ್ಟೊಂದು ನಗೆ. ಇದೊಂದು ಹಾಸ್ಯ ಸನ್ನಿವೇಶ, ಕೆಲವರು ಇರುತ್ತಾರೆ ತಮ್ಮ ಬಗ್ಗೆ ಜನ ಏನು ಭಾವಿಸುತ್ತಾರೆ. ಅವರ್ಯಾಕೆ ನಕ್ಕರು. ಅವರ್ಯಾಕೆ ನನ್ನ ನೋಡುತ್ತಿದ್ದಾರೆ ಬಹುಶಃ ನನ್ನನ್ನೇ ಸನ್ನೆ ಮಾಡುತ್ತಿರಬಹುದೆ ಹೀಗೆ ಅವರ ಮನಸ್ಸಿನಲ್ಲಿ ಎಂಬ ಗುಮಾನಿಯೊಂದು ತುಂಬಿರುತ್ತದೆ. ಒಟ್ಟಿನಲ್ಲಿ ಹಡಪದ್ ರ ಪಜೀತಿ ನಕ್ಕವರ ಫಾಲಿಗೆ ಹಬ್ಬದೂಟವೇ ಸರಿ ಧನ್ಯವಾದಗಳು ಸರ್..ಹಹಹ.ಹಹಹ....

  ReplyDelete
 7. ವಸಂತ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಬಾಳಿನಲ್ಲಿ ಸದಾ ಹೀಗೇ ನಗು ತುಂಬಿರಲಿ.

  ReplyDelete
 8. ಮಸ್ತೈತಿ ಬಿಡ್ರಿ ಸಾರ್ :-) ನಾನೂ ನಗಾಡಿದೆ ಹಡಪದ್ ಪ್ರಸಂಗ ಓದಿ :-)

  ReplyDelete
  Replies
  1. ಪ್ರಶಸ್ತಿಯವರೇ:ಬ್ಲಾಗಿಗೆ ಸ್ವಾಗತ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

   Delete
 9. ಡಾಕ್ಟ್ರೇ:ಹಡಪದ್ ಹಿಂಭಾಲಕನ ಕತೆ ಕೇಳಿ ಸಕ್ಕತ್ ನಗು ಬಂತು. ಇಂಥವರು ಇರುತ್ತಾರ?

  ReplyDelete
 10. ಶಿವು;ಮೊನ್ನೆಮೊನ್ನೆ ಬೆಂಗಳೂರಿನಲ್ಲಿ ಇಂತಹುದೇ ಘಟನೆ ನಡೆಯಿತು.ಈ ಅನುಮಾನ ಅನ್ನುವಂತಹುದೇ ದೊಡ್ಡ ರೋಗವಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 11. atta itta nodi yaaru illavendu khatri padisikondu nagabeku innu!!!

  ReplyDelete