Thursday, June 21, 2012

"ವೈದ್ಯೋ ನಾರಾಯಣೋ ಹರಿ!!!"ನಮಗೆ ದೇವರ ಪಟ್ಟ ಬೇಡಾರೀ !!!

ವೈದ್ಯನೂ ಎಲ್ಲರಂತೆ ಒಬ್ಬ ಮನುಷ್ಯ.ಎಲ್ಲಾ ಮನುಷ್ಯರಂತೆ ಅವನಿಗೂ ಮನುಷ್ಯರಿಗೆ ಸಹಜವಾದ ಆಸೆ,ರಾಗ ,ದ್ವೇಷ,ಸಿಟ್ಟು,ಅಸೂಯೆ ಮುಂತಾದ ಅವಗುಣಗಳು ಇದ್ದೇ ಇರುತ್ತವೆ.ವೈದ್ಯನಾಗಿ ಕರ್ತವ್ಯ ನಿರ್ವಹಿಸುವಾಗ ಅವನು ಎಲ್ಲಾ ಅವಗುಣಗಳನ್ನೂ ಆಚೆಗಿಟ್ಟು,ಸದ್ಗುಣಗಳ ಗಣಿಯೇ ಆಗಿರಬೇಕೆನ್ನುವುದು ಸಹಜವಾಗಿಯೇ ಎಲ್ಲರ ಆಶಯ.ಇದರಲ್ಲಿ ಖಂಡಿತ ತಪ್ಪಿಲ್ಲ.ಸಮಾಜದ ಬೇರೆಲ್ಲಾ ಕ್ಷೇತ್ರಗಳಲ್ಲೂ ಅರಾಜಕತೆ,ಭ್ರಷ್ಟಾಚಾರ,ಅವ್ಯವಸ್ಥೆ ತಾಂಡವವಾಡುತ್ತಿದೆ.ವೈದ್ಯಕೀಯ ವೃತ್ತಿಯೂ ಇದಕ್ಕೆ ಹೊರತಾಗಿಲ್ಲ. ವೈದ್ಯರೂ ಈ ಸಮಾಜದ ಒಂದು ಭಾಗ.ವೈದ್ಯರು ಕೆಟ್ಟಿದ್ದಾರೆಂದರೆ ಈ ಸಮಾಜವೂ ರೋಗಗ್ರಸ್ಥ ವಾಗಿದೆಯೆಂದೇ ಅರ್ಥವಲ್ಲವೇ? ಒಂದು ಸಮಾಜದ ಅಂಗವಾದ ಒಬ್ಬ ವ್ಯಕ್ತಿಯ ಮೂಲಭೂತ ವ್ಯಕ್ತಿತ್ವ ಬದಲಾಗದೇ ಅವನು ನಿರ್ವಹಿಸುವ ಕಾರ್ಯ ಕ್ಷೇತ್ರದಲ್ಲಿನ ವ್ಯಕ್ತಿತ್ವ ಕೂಡ ಬದಲಾಗುವುದಿಲ್ಲ. ಆದ್ದರಿಂದ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರ ಜವಾಬ್ದಾರಿ ಹೆಚ್ಚಿನದು.ಎಲ್ಲರಿಗಿಂತ ಹೆಚ್ಚಾಗಿ ಅವರು ತಮ್ಮ ಜೀವನದಲ್ಲಿ ಮಾನವೀಯಮೌಲ್ಯಗಳನ್ನು ಹೆಚ್ಚು ಅಳವಡಿಸಿಕೊಳ್ಳಬೇಕಾಗುತ್ತದೆ.ಅದಕ್ಕೆಆಧ್ಯಾತ್ಮದ ಅಧ್ಯಯನ ಹೆಚ್ಚು ಸಹಕಾರಿ.ಹಾಗೆಂದು ವೈದ್ಯರೆಲ್ಲರೂ ಎಲ್ಲವನ್ನೂ ಬಿಟ್ಟು ಸನ್ಯಾಸಿಗಳಾಗಲು ಸಾಧ್ಯವಿಲ್ಲ .ಸ್ವಲ್ಪ ಮಟ್ಟಿಗಾದರೂ ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಗುಣ,ಮಾನವೀಯ ಅನುಕಂಪ ಹೊಂದಿರುವುದು ಅವಶ್ಯ.ಎಲ್ಲರಲ್ಲೂ ತನ್ನಲ್ಲಿರುವ ಚೈತನ್ಯವೇ ಅಡಗಿದೆ,ಎಲ್ಲರೂ ತನ್ನಂತೆಯೇ ತಮ್ಮ ತಮ್ಮ ಕಷ್ಟಗಳ ಹೊರೆ ಹೊರಲು ಹೆಣಗುತ್ತಿದ್ದಾರೆ ಎನ್ನುವ ಅರಿವು ಅವಶ್ಯ."BE KIND,AS EVERY ONE YOU MEET IS FIGHTING HIS OWN HARD BATTLE!!" ಅನುಕಂಪ ತುಂಬಿದ ನಾಲಕ್ಕುಒಳ್ಳೆಯ ಸಾಂತ್ವನದ ಮಾತು,ತಾಳ್ಮೆಯಿಂದ ಅವರ ಕಷ್ಟಗಳನ್ನು ಆಲಿಸುವಿಕೆ,ಆಸ್ಥೆಯಿಂದ ಅವರನ್ನು ಪರೀಕ್ಷಿಸಿ,ಅವರಿಗೆ ನೀಡುವ ಸಲಹೆ ,ಎಷ್ಟೋ ರೋಗಗಳನ್ನು ಗುಣ ಪಡಿಸಬಲ್ಲದು.ತನ್ನ ರೋಗಿಗಳಿಗೆ ತನ್ನಿಂದ ಒಳಿತಾಗುತ್ತದೆಯೆಂಬ ವೈದ್ಯನ ಬಲವಾದ ನಂಬಿಕೆಯೇ ರೋಗಿಗಳಿಗೆ ಸಂಜೀವಿನಿ ಯಾಗಬಲ್ಲದು! ಆದರೆ ಕೆಲವೊಮ್ಮೆ ಸೇವಾ ಮನೋಭಾವದ ವೈದ್ಯನೊಬ್ಬ ನಿಷ್ಠೆಯಿಂದ ತನ್ನೆಲ್ಲಾ ಅನುಭವಗಳನ್ನೂ ಧಾರೆ ಎರೆದು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದಿರಬಹುದು. ಭಗವದ್ಗೀತೆ ಯಲ್ಲಿ ಹೇಳಿದಂತೆ ನಿಷ್ಟೆಯಿಂದ ಕರ್ಮ ಮಾಡುವುದು ಅವನ ಕೈಯಲ್ಲಿದೆ.ಆದರೆ ಆ ಕರ್ಮದ ಫಲ ಅವನ ಕೈ ಮೀರಿದ್ದಲ್ಲವೇ?ಜನ ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕು.ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ , ನ್ಯಾಯವಾಗಿ ,ನಿಷ್ಟೆಯಿಂದ ಕೆಲಸ ಮಾಡಿದ ವೈದ್ಯರೂ ರೋಗಿಯ ಕಡೆಯವರಿಂದ ಹಲ್ಲೆಗೊಳಗಾಗುವ ಘಟನೆಗಳು ದಿನ ನಿತ್ಯ ನಡೆಯುತ್ತಿವೆ.ಹಾಗಾಗಿ ವೈದ್ಯರಲ್ಲಿ ಆತಂಕ ಹೆಚ್ಚುತ್ತಿದೆ.ಕ್ಲಿಷ್ಟಕರವಾದ ಕೇಸ್ ಬಂದಾಗ ಸುಮ್ಮನೇ ಯಾಕೆ ಕಷ್ಟವನ್ನು ಮೈ ಮೇಲೆ ಎಳೆದುಕೊಳ್ಳಬೇಕು?ಎಂದು ರೋಗಿಯನ್ನು ಬೇರೊಂದು ಆಸ್ಪತ್ರೆಗೆ ರವಾನಿಸುವ ಧೋರಣೆ ವೈದ್ಯರಲ್ಲಿ ಹೆಚ್ಚಾಗುತ್ತಿದೆ.ಇದು ಖಂಡಿತ ಆರೋಗ್ಯಕರ ಬೆಳವಣಿಗೆಯಲ್ಲ.ಇದಕ್ಕೆ ಬರೀ ವೈದ್ಯರನ್ನು ದೂರಿ ಕೈ ತೊಳೆದುಕೊಂಡರೆ ಪ್ರಯೋಜನವಿಲ್ಲ.ಮೂವತ್ತೈದು ವರ್ಷಗಳ ಹಿಂದೆ ನಾನು ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟಾಗ ರೋಗಿಯ ಕಡೆಯವರಿಂದ 'ಸರ್ ನಿಮ್ಮ ಪ್ರಯತ್ನ ನೀವು ಮಾಡಿ.ನೀವು ಸರಿಯಾದ ಚಿಕಿತ್ಸೆಯನ್ನೇ ಕೊಡುತ್ತೀರಿ ಎನ್ನುವ ನಂಬಿಕೆ ನಮಗಿದೆ.ಇನ್ನು ಅವನು ಬದುಕುವುದು ಬಿಡುವುದು ದೈವೇಚ್ಛೆ 'ಎಂದು ಭರವಸೆ ಕೊಡುತ್ತಿದ್ದರು.ಅಂತಹ ಮಾತುಗಳು ಸಾವು ಬದುಕಿನೊಡನೆ ಹೋರಾಡುವ ವೈದ್ಯನಿಗೆ ನೂರಾನೆಯ ಬಲ ಕೊಡುತ್ತವೆ!!ಈಗೀಗ ಜನರ ವರ್ತನೆ ಬದಲಾಗುತ್ತಿದೆ .ಪ್ರತಿಯೊಂದಕ್ಕೂ ವೈದ್ಯನ ಮೇಲೆ ಗೂಬೆ ಕೂರಿಸುವುದು ಸಾಮಾನ್ಯವಾಗಿದೆ.ಎಲ್ಲಾ ವೈದ್ಯರೂ ಸಾಚಾಗಳೆಂದು ನಾನು ಹೇಳುತ್ತಿಲ್ಲ.ಆದರೆ ಮಾಧ್ಯಮಗಳಲ್ಲಿ ಬಿಂಬಿಸುವಂತೆ ಎಲ್ಲಾ ವೈದ್ಯರೂ ಖಂಡಿತಾ ಖಳ ನಾಯಕರಲ್ಲ.ವೈದ್ಯಕೀಯ ಕಾಲೆಜುಗಳನ್ನು ಸ್ಥಾಪಿಸುವ ಉದ್ಯಮಿಗಳು,ಭಾವೀ ವೈದ್ಯರಿಂದ ಕೋಟಿಗಟ್ಟಲೆ ಹಣ ಲೂಟಿ ಹೊಡೆಯುತ್ತಾರೆ.ಅಲ್ಲಿಂದ ಹೊರ ಬಂದ ವೈದ್ಯರು ಮಾತ್ರ ನಿಸ್ವಾರ್ಥ ಸೇವೆ ಸಲ್ಲಿಸಲಿ ಎಂದು ಬಯಸುವುದು ಎಷ್ಟು ಸರಿ?ಇದಕ್ಕೆ ಪರಿಹಾರವೆಂದರೆ ಸರ್ಕಾರ ಖಾಸಗಿ ಕಾಲೇಜು ಗಳನ್ನು ಕಡಿಮೆ ಮಾಡಿ,ಸರ್ಕಾರಿ ಕಾಲೇಜುಗಳಲ್ಲಿ ಪ್ರತಿಭಾನ್ವಿತ,ಸೇವಾ ಮನೋಭಾವವಿರುವ ವಿಧ್ಯಾರ್ಥಿಗಳಿಗೆ ಸೀಟು ಕೊಡಲಿ.ಅವರಿಗೆ ವೈದ್ಯರಾದ ನಂತರ ಉಚ್ಚ ಅಧಿಕಾರಿಗಳಿಗೆ ಕೊಡುವಷ್ಟು ವೇತನ ನೀಡಲಿ.ಆಗ ಮಾತ್ರ ಜನ ಸಾಮಾನ್ಯರಿಗೆ ಒಳ್ಳೆಯ ವೈದ್ಯಕೀಯ ಸೇವೆ ಲಭ್ಯವಾಗುತ್ತದೆ.ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಹದ ಕೆಡುತ್ತದೆ.ಜನ ವೈದ್ಯರನ್ನು ನಾರಾಯಣ,ಹರಿ ಎಂದು ಹಾಡಿ ಹೊಗಳುವುದು ಬೇಡ.ನಮ್ಮನ್ನೂ ನಿಮ್ಮಂತೆ ನಡೆಸಿಕೊಂಡರೆ ಅಷ್ಟೇ ಸಾಕು.ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

Tuesday, June 19, 2012

"ಜಿಂದಗೀ,ಕೈಸಿ ಹೈ ಪಹೇಲಿ !! ಹಾಯೆ !!"-ಹೀಗೊಂದು ಅನುಭವ!!!!

ಕೆಲವು ದಿನಗಳಿಂದ ಯಾವುದೇ ಏರುಪೇರಿಲ್ಲದೇ ಜೀವ ನದಿ ಶಾಂತವಾಗಿ ಹರಿಯುತ್ತಿತ್ತು. ಶಾಂತವಾದ ಕೊಳವೊಂದರಲ್ಲಿ ಕಲ್ಲು ಹಾಕಿದಂತೆ ಮೊನ್ನೆ ತಲೆಯೊಳಗೆ ಹುಳವೊಂದನ್ನು ಬಿಟ್ಟುಕೊಂಡು,ಯಾವುದೋ ವಿಷಯವೊಂದರ ಬಗ್ಗೆ ಚಿಂತಿಸಿ,ಸಂಜೆಯ ವೇಳೆಗೆ ನನ್ನ ತಲೆ 'ಚಿಂದಿ,ಚಿತ್ರಾನ್ನ'ವಾಗಿತ್ತು.ಆಗ ಹತ್ತಿರದ ಸಂಬಂಧಿಯೊಬ್ಬರ ಫೋನು ಬಂತು.ಗೃಹ ಪ್ರವೇಶಕ್ಕೆ ಬರಲೇ ಬೇಕು ಎಂದು ಒತ್ತಾಯಪೂರ್ವಕ ಆಮಂತ್ರಣ.ಹೋಗಲಾರದಂತಹ ಪರಿಸ್ಥಿತಿ.ಅನಾನುಕೂಲ.ಅರ್ಥಮಾಡಿಸಲು ಹೆಣಗುತ್ತಿದ್ದೆ.ಅಷ್ಟರಲ್ಲಿ ಮೊಬೈಲ್ ನಲ್ಲಿ 'ಬೀಪ್....ಬೀಪ್ 'ಎನ್ನುವ ಶಬ್ದ ಬಂದು ಇನ್ನೊಂದು ಕರೆ ಬರುತ್ತಿರುವ ಸೂಚನೆ ಕೊಟ್ಟಿತು. ಗೃಹ ಪ್ರವೇಶದ ಆಮಂತ್ರಣದ ಕರೆ ಮುಗಿಯುತ್ತಿದ್ದಂತೆ ಇನ್ನೊದು ಕರೆ ಬಂತು.ಅವರೂ ಬಹಳ ಪರಿಚಯದವರು,ಆತ್ಮೀಯರು.ಮೇಲಾಗಿ ಸಹೃದಯಿ.ಅತ್ತ ಕಡೆಯಿಂದ ಅವರ ಮಾತು"ಸಾರಿ ಡಾಕ್ಟರ್ ,ದೇರ್ ಈಸ್ ಎ ಬ್ಯಾಡ್ ನ್ಯೂಸ್. ಇವತ್ತು ಬೆಳಿಗ್ಗೆ ನನ್ನ ಹೆಂಡತಿ ತೀರಿಕೊಂಡರು"ಎಂದರು.ಈ ಅನಿರೀಕ್ಷಿತ ಆಘಾತಕರ ಸುದ್ದಿಯಿಂದ ಏನು ಹೇಳಬೇಕೋ ತೋಚದೆ ತಲೆ ತಿರುಗಿದಂತಾಗಿ ,ಪದಗಳಿಗಾಗಿ ತಡವರಿಸುತ್ತಿದ್ದೆ. ಅಷ್ಟರಲ್ಲೇ ಮೊಬೈಲ್ ನಲ್ಲಿ 'ಬೀಪ್ .....ಬೀಪ್'ಎನ್ನುವ ಶಬ್ದ ಇನ್ನೊಂದು ಕರೆಯ ಬರವನ್ನು ಸೂಚಿಸುತ್ತಿತ್ತು.ಈ ಕರೆ ಮುಗಿಯುತ್ತಿದ್ದಂತೆ ಅತ್ತ ಕಡೆಯಿಂದ ಫೋನು.ಕರೆ ಮಾಡಿದ ವ್ಯಕ್ತಿ ಸಂತೋಷದಿಂದ ಆಕಾಶದಲ್ಲಿ ತೆಲಾಡುತ್ತಿದ್ದರು.'ಹಲ್ಲೋ ಡಾಕ್ಟರ್.ಐ ಯಾಮ್ ಸೋ ಹ್ಯಾಪಿ ಟು ಟೆಲ್ ಯು!! ನಾನು ತಾತ ಆದೆ!!!ನನ್ನ ಮಗನಿಗೆ ಮಗ ಹುಟ್ಟಿದ!!! ಈ ಸಂತೋಷದ ಸುದ್ದಿಯನ್ನು ನಮ್ಮ ಸ್ನೇಹಿತರಿಗೆಲ್ಲಾ ಹೇಳಿಬಿಡಿ'ಎಂದು ಫೋನ್ ಇಟ್ಟರು.ಪ್ರಪಂಚವೆಂದರೆ ಹೀಗೇ ಅಲ್ಲವೇ?ಅವರವರು ,ಅವರವರ ಲೋಕದಲ್ಲಿ, ಕಷ್ಟವನ್ನೋ,ಸುಖವನ್ನೋ,ನೋವನ್ನೋ,ನಲಿವನ್ನೋ ಅನುಭವಿಸುತ್ತಿರುತ್ತಾರೆ.ಅವರ ಜೀವನದಲ್ಲಾಗುತ್ತಿರುವ ಘಟನೆಯ ಬಗ್ಗೆ ಇವರಿಗೆ ಅರಿವಿಲ್ಲ......!ಇವರ ಬಗ್ಗೆ ......,ಅವರಿಗೆ ತಿಳಿಯದು!! ಅವರವರ ಪ್ರಪಂಚ ಅವರಿಗೆ!! ನನ್ನ ಆಧ್ಯಾತ್ಮದ ಗುರುವೊಬ್ಬರಿಗೆ ಈ ವಿಷಯ ತಿಳಿಸಿದೆ. 'ಈ ಘಟನೆಯಲ್ಲಿ ನಿಮಗೆ ತ್ರಿಮೂರ್ತಿಗಳ ದರ್ಶನ ವಾಗಿದೆಯಲ್ಲಾ ಡಾಕ್ಟರ್' ಎಂದರು!'ಹೇಗೆ ಸರ್?' ಎಂದೆ.'ನೋಡಿ ,ಹುಟ್ಟಿನ ಸುದ್ಧಿ ಬಂದಾಗ ಬ್ರಹ್ಮನ ದರ್ಶನವಾಯಿತು ,ಗೃಹ ಪ್ರವೇಶದ ಸುದ್ಧಿ ವಿಷ್ಣು ವಿನ ದರ್ಶನ.ಸಾವಿನ ಸುದ್ಧಿ ಮಹೇಶ್ವರನ ಪ್ರತೀಕವಲ್ಲವೇ?'ಎಂದರು!ನನಗೂ ಹೌದಲ್ಲವೇ ಅನ್ನಿಸಿತು!!! ನೀವೇನೆನ್ನುತ್ತೀರಿ ಎಂದು ಕಾಮೆಂಟಿನಲ್ಲಿ ತಿಳಿಸಿ.ನಮಸ್ಕಾರ.

Saturday, June 16, 2012

"ಮೂಗಿನಲ್ಲಿ ಕಾದಿತ್ತು ವಿಸ್ಮಯ !!!"

ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯ.ಊಟಕ್ಕೆ ಅವರೇ ಕಾಳಿನ ಸಾಂಬಾರ್ ಬೇರೆ ತಿಂದಿದ್ದರಿಂದ ಜೋರು ನಿದ್ರೆ.ಸ್ವತಹ ವೈದ್ಯರಾಗಿದ್ದ ಕನ್ನಡದ ಹಾಸ್ಯ ಸಾಹಿತಿ ರಾ.ಶಿ.(ಡಾ.ಶಿವರಾಂ ) ಹೇಳುತ್ತಿದ್ದ ಹಾಗೆ ಅದು ಡಾಕ್ಟರ್ ಗಳು ಮತ್ತು ದೆವ್ವಗಳು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವ ಸಮಯ !ಆದರೆ ಆ ಸಮಯದಲ್ಲೂ ನಮ್ಮನ್ನು ಪರೀಕ್ಷೆ ಮಾಡುವ ಸಲುವಾಗಿಯೇ,ಹಪ್ಪಳ ಮಾರುವವರು,ಉಪ್ಪಿನ ಕಾಯಿ ಮಾರುವವರು,ಬಿ.ಬಿ.ಎಮ್.ವಿದ್ಯಾರ್ಥಿಗಳೆಂದು ಹೇಳಿಕೊಂಡು ಬಂದು, ನಮಗೆ ಬೇಡದ ವಸ್ತು ಗಳನ್ನು ಮಾರಲೇ ಬೇಕೆಂದು ಬೇತಾಳಗಳ ಹಾಗೆ ಬೆನ್ನು ಬೀಳುವವರು ,ನಮ್ಮ ನಿದ್ರೆಯ ಶತ್ರುಗಳಂತೆ ಕಾಡುತ್ತಾರೆ!'ಕಿರ್ರೋ'ಎಂದು ಅರಚಿ ಕೊಳ್ಳುತ್ತಿದ್ದ ಡೋರ್-ಬೆಲ್ ನಿಂದ ನಿದ್ರಾ ಭಂಗ ವಾಗಿ ,ಹೋಗಿ ಬಾಗಿಲು ತೆಗೆದೆ.ಮೂಗು ಸೋರುತ್ತಿದ್ದ ನಾಲಕ್ಕು ವರುಷದ ಮಗನನ್ನು ಕರೆದು ಕೊಂಡು ಬಂದಿದ್ದ ವ್ಯಕ್ತಿಯೊಬ್ಬ "ನೀವು ಮೂಗಿನ ಡಾಕ್ಟರ್ರಾ ?"ಎಂದ.ನಿದ್ರೆ ಹಾಳಾಗಿದ್ದಕ್ಕೆ ಮೂಗಿನ ತನಕ ಬಂದ ಕೋಪವನ್ನು ತಡೆದುಕೊಂಡು ಹೌದೆಂದೆ.ಮಗನನ್ನು ಒಂದು ತಿಂಗಳಿಂದ ಮಕ್ಕಳ ಡಾಕ್ಟರ್ ಒಬ್ಬರ ಹತ್ತಿರ ತೋರಿಸುತ್ತಿರಿರುವುದಾಗಿಯೂ ,ಮೂಗಿನಿಂದ ಸಿಂಬಳ ಸೋರುವುದು ,ಕೆಟ್ಟ ವಾಸನೆ ಬರುವುದು ನಿಂತಿಲ್ಲವೆಂದೂ ,ಯಾರದೋ ಸಲಹೆಯ ಮೇರೆಗೆ ನನ್ನಲ್ಲಿಗೆ ಕರೆದು ಕೊಂಡು ಬಂದುದಾಗಿಯೂ ಹೇಳಿದ.ಸಂಜೆ ನಾಲಕ್ಕೂವರೆಗೆ ಆಸ್ಪತ್ರೆಗೆ ಬರುವಂತೆ ಹೇಳಿ ಕಳಿಸಿಕೊಟ್ಟೆ .ಸಂಜೆ ಆಸ್ಪತ್ರೆಯಲ್ಲಿ ಆ ಹುಡುಗನ ಪರೀಕ್ಷೆ ಮಾಡಿದೆ.ಮಾರು ದೂರಕ್ಕೇ, ಮೂಗಿನಿಂದ ಗಪ್ಪೆಂದು ಸಹಿಸಲು ಅಸಾಧ್ಯವಾದ ಕೆಟ್ಟ ವಾಸನೆ ಬರುತ್ತಿತ್ತು.ಮೂಗಿನಿದ ರಕ್ತ ಮಿಶ್ರಿತ ಸಿಂಬಳ ಸೋರುತ್ತಿತ್ತು.ನೋಡಿದ ತಕ್ಷಣ ಹುಡುಗ ಮೂಗಿನಲ್ಲಿ ಏನೋ ವಸ್ತುವೊಂದನ್ನು ಹಾಕಿ ಕೊಂಡಿರುವುದು ಖಾತ್ರಿಯಾಯಿತು.ಸೂಕ್ತ ಸಲಕರಣೆ ಗಳ ಸಹಾಯದಿಂದ ಬೆಳ್ಳಗಿನ ಮೂಳೆಯಂತೆ ಕಾಣುತ್ತಿದ್ದ ವಸ್ತುವೊಂದನ್ನು ಮೂಗಿನಿಂದ ಕಷ್ಟಪಟ್ಟು ಹೊರತೆಗೆದೆ.ಮೂಗಿನಿಂದ ಸಾಕಷ್ಟು ರಕ್ತ ಸ್ರಾವವಾಗುತ್ತಿತ್ತು.'ಮೂಗಿನ ಕಾರ್ಟಿಲೇಜ್ ಏನಾದರೂ ಕಿತ್ತು ಬಂತಾ ಸಾರ್ !?' ಅಂತ ಅಲ್ಲೇ ಇದ್ದ ಸಹ ವೈದ್ಯರೊಬ್ಬರು ಗಾಭರಿಗೊಂಡು ಉದ್ಗಾರ ತೆಗೆದರು .ಮೂಗಿನ ರಕ್ತಸ್ರಾವ ನಿಲ್ಲುವಂತೆ ಮೂಗನ್ನು ಗಾಜ್ ನಿಂದ ಪ್ಯಾಕ್ ಮಾಡಿದ ಮೇಲೆ,"ಇಲ್ಲಿ ನೋಡಿ ನೀವು ಹೇಳಿದ ಮೂಗಿನ ಕಾರ್ಟಿಲೇಜ್ "ಎಂದು ಮೂಳೆಯಂತೆ ಕಾಣುತ್ತಿದ್ದ ತುಂಡನ್ನು ಎರಡು ಹೋಳು ಮಾಡಿ ತೋರಿಸಿದೆ .ಅದು ಮೇಲಿನ ಸಿಪ್ಪೆ ಹೋದ ಹುಣಿಸೇ ಬೀಜ ವಾಗಿತ್ತು!ಅದನ್ನು ಎರಡು ಹೋಳು ಮಾಡಿದಾಗ ಸುಮಾರು ಒಂದು ಇಂಚಿನ ಮೊಳಕೆ ಒಡೆದು ಹೊರ ಬರುತ್ತಿತ್ತು.ಇನ್ನೂ ಸ್ವಲ್ಪ ದಿನ ಬಿಟ್ಟಿದ್ದರೆ ಮೂಗಿನಿಂದ ಹುಣಿಸೇ ಸಸಿ ಬೆಳೆಯುತ್ತಿತ್ತೋ ಏನೋ !!!

Saturday, June 9, 2012

"ಹೀಗೊಂದು ಝೆನ್ ಕಥೆ"

ಒಬ್ಬ ಝೆನ್ ಗುರುವಿದ್ದ.ಅವನೆಂದೂ ಪ್ರಚಲಿತವಿದ್ದ ಸಿದ್ಧ ಸೂತ್ರಗಳನ್ನು ಹೇಳುತ್ತಿರಲಿಲ್ಲ.ಅವನ ಮಾತುಗಳೆಲ್ಲಾ ಧ್ಯಾನದಲ್ಲಿ ಹೃದಯದಿಂದ ಬಂದ ಮಾತುಗಳಾಗಿರುತ್ತಿದ್ದವು.ಒಂದು ಬಾರಿ ಅವನು ಪ್ರವಚನ ನೀಡುತ್ತಿದ್ದಾಗ ವ್ಯಕ್ತಿಯೊಬ್ಬ ಎದ್ದು ನಿಂತು "ಇಲ್ಲಿರುವ ಎಲ್ಲರೂನಿನ್ನ ಅನುಯಾಯಿಗಳೇ.ಎಲ್ಲರೂ ನಿನ್ನ ಮಾತು ಕೇಳುವವರೇ .ಆದರೆ ನಾನು ನಿನ್ನ ಅನುಯಾಯಿಯಲ್ಲ.ನಾನು ನಿನ್ನ ಯಾವುದೇ ಮಾತನ್ನು ಕೇಳಲು ತಯಾರಿಲ್ಲ.ನಾನು ನಿನಗೆ ವಿಧೇಯನಾಗುವಂತೆ ಮಾಡಲು ಸಾಧ್ಯವೇ?"ಎಂದ. ಅದಕ್ಕೆ ಗುರು "ಖಂಡಿತಾ ಸಾಧ್ಯ.ಹೇಗೆ ಎಂದು ಹೇಳುತ್ತೇನೆ.ನನ್ನ ಬಳಿ ಬಾ"ಎಂದ.ಅದರಂತೆ ಆ ವ್ಯಕ್ತಿ ಜನರ ಗುಂಪಿನಿಂದ ಎದ್ದು ಗುರುವಿನ ಬಳಿ ಬಂದ ."ಈಗ ನನ್ನ ಎಡಕ್ಕೆ ಬಾ"ಎಂದ ಗುರು.ವ್ಯಕ್ತಿ ಎಡಕ್ಕೆ ಬಂದ."ಎಡಕ್ಕಿಂತ ಬಲಗಡೆ ಸರಿಯಾಗಿ ಕೇಳಿಸುತ್ತದೆ .ನೀನು ಬಲಗಡೆ ಬರುವುದೇ ಉತ್ತಮ"ಎಂದ ಗುರು.ಅದರಂತೆ ವ್ಯಕ್ತಿ ಬಲಕ್ಕೆ ಬಂದ.ಅದಕ್ಕೆ ಗುರು "ನೋಡು,ಇಲ್ಲಿಯವರೆಗೆ ನೀನು ಹೇಳಿದಂತೆ ಕೇಳುತ್ತಿದ್ದೀ.ಈಗ ಎಲ್ಲರ ಮಧ್ಯೆ ಹೋಗಿ ಕುಳಿತು ನಾನು ಹೇಳುವುದನ್ನು ಆಲಿಸು"ಎಂದ.ವ್ಯಕ್ತಿ ಮರು ಮಾತಿಲ್ಲದೆ ಎಲ್ಲರ ಮಧ್ಯೆ ಹೋಗಿ ಕುಳಿತ. (ಇಂದಿನ ವಿಜಯ ಕರ್ನಾಟಕದ 'ಭೋದಿ ವೃಕ್ಷ' ವಿಭಾಗದಲ್ಲಿ ಪ್ರಕಟವಾದ ಝೆನ್ ಕತೆ )

Wednesday, June 6, 2012

"ಆಯ್ಕೆಗಳಿಲ್ಲದ ಅರಿವಿನ ಬದುಕು!!! "

ಆಧ್ಯಾತ್ಮಿಕ ಜಿಜ್ಞಾಸು ಒಬ್ಬ,'ಮನುಷ್ಯ ಸಂಪೂರ್ಣ ಸ್ವತಂತ್ರನೇ ಅಥವಾ ಅವನನ್ನು ಕರ್ಮ,ವಿಧಿ,ದೈವ,ಗ್ರಹಗತಿಗಳು,ಇವೆಲ್ಲಾ ಬಂಧಿಸಿವೆಯೇ' ಎಂದು ತಿಳಿದು ಕೊಳ್ಳಲು ಆಧ್ಯಾತ್ಮಿಕ ಅನುಭೂತಿ ಪಡೆದ ಜ್ಞಾನಿ ಗುರುವೊಬ್ಬರ ಬಳಿ ಬಂದು ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಉತ್ತರ ನೀಡಬೇಕೆಂದು ಬಿನ್ನವಿಸಿಕೊಂಡ. ಗುರು ಇದ್ದಕ್ಕಿದ್ದಂತೆ ಅವನನ್ನು ಎದ್ದು ನಿಲ್ಲುವಂತೆ ಹೇಳಿದ.ಜಿಜ್ಞಾಸುವಿಗೆ 'ಇವನೆಂತಹ ಗುರು!ತಾನೊಂದು ಸಾಮಾನ್ಯ ಪ್ರಶ್ನೆ ಕೇಳಿದರೆ ಉತ್ತರಿಸದೆ ,ಎದ್ದು ನಿಲ್ಲುವಂತೆ ಹೇಳುತ್ತಿದ್ದಾನಲ್ಲಾ !!'ಎಂದು ಕಸಿವಿಸಿಯಾಯಿತು.ಮುಂದೆನಾಗುತ್ತದೆಯೋ ನೋಡಿಯೇ ಬಿಡೋಣ ಎಂದು ಎದ್ದು ನಿಂತ. ಗುರು ಜಿಜ್ಞಾಸುವಿಗೆ ಒಂದು ಕಾಲನ್ನು ಮೇಲಕ್ಕೆ ಎತ್ತಿ ನಿಲ್ಲುವಂತೆ ಹೇಳಿದ.ಶಿಷ್ಯ ಅದರಂತೆಯೇ ತನ್ನ ಬಲಗಾಲನ್ನು ಮೇಲೆತ್ತಿ ಎಡಗಾಲಿನ ಮೇಲೆ ನಿಂತ.ಅದಕ್ಕೆ ಗುರು 'ಒಳ್ಳೆಯದು....,ಈಗ ನಿನ್ನ ಎಡಗಾಲನ್ನೂ ಮೇಲೆತ್ತು'ಎಂದ!ಶಿಷ್ಯನಿಗೆ 'ಇವನೆಂತಹ ವಿಚಿತ್ರ ಗುರು! 'ಎನಿಸಿತು.ಆದರೂ ಅದನ್ನು ತೋರ್ಪಡಿಸದೆ 'ಅದು ಹೇಗೆ ಸಾಧ್ಯ ಗುರುಗಳೇ?ನಾನು ಈಗ ನಿಂತಿರುವುದೇ ಎಡಗಾಲಿನ ಮೇಲಲ್ಲವೇ?'ಎಂದ.ಅದಕ್ಕೆ ಗುರು 'ನಿನ್ನ ಪ್ರಶ್ನೆಗೆ ಇಲ್ಲಿ ಉತ್ತರವಿದೆ.ಮೊದಲು ನೀನು ಸ್ವತಂತ್ರನಾಗಿದ್ದೆ.ನಾನು ನಿನ್ನನ್ನು ಯಾವುದಾದರೂ ಒಂದು ಕಾಲನ್ನು ಎತ್ತಲು ಹೇಳಿದಾಗ ನೀನು ಎಡಗಾಲನ್ನು ಎತ್ತಬಹುದಾಗಿತ್ತು.ಬಲಗಾಲನ್ನು ಎತ್ತಿದ್ದು ನಿನ್ನ ಆಯ್ಕೆಯಾಗಿತ್ತು.ಒಮ್ಮೆ ನೀನು ಆಯ್ಕೆ ಮಾಡಿದ ಮೇಲೆ,ಆ ಆಯ್ಕೆಗೆ ನೀನು ಬದ್ಧ.ಅದು ನಿನ್ನನ್ನು ಬಂಧಿಸುತ್ತದೆ.ಕರ್ಮ,ವಿಧಿ,ದೈವ,ಗ್ರಹಚಾರ,ಎಲ್ಲವನ್ನೂ ಬದಿಗಿಡು.ನಿನ್ನ ಆಯ್ಕೆಗಳೇ ನಿನ್ನನ್ನು ಬಂಧಿಸುತ್ತವೆ!"ಆಯ್ಕೆಗಳಿಲ್ಲದ ಅರಿವಿನ ಬದುಕು" ನಿನ್ನನ್ನು ಬಿಡುಗಡೆಯತ್ತ ಕರೆದೊಯ್ಯುತ್ತದೆ'ಎಂದ.ಜಿಜ್ಞಾಸುವಿಗೆ ಗುರುವಿನ ಜ್ಞಾನದ ಆಳ ಅರಿವಾಯಿತು.ವಿನಮ್ರತೆಯಿಂದ ಗುರುವಿಗೆ ನಮಿಸಿ ತನ್ನೂರಿನ ದಾರಿ ಹಿಡಿದ. (ಸಾಧಾರಿತ)

Monday, June 4, 2012

"ಗ್ಯಾಸ್ಟ್ರಿಕ್"ಪ್ರಾಬ್ಲಂ....!!!!

ಮೊದಲೆಲ್ಲಾ ಯಾರಾದರೂ "ಗ್ಯಾಸ್ಟ್ರಿಕ್"ಪ್ರಾಬ್ಲಂ ಇದೇ ಸಾರ್ ಎಂದರೆ,ಅವರಿಗೆಲ್ಲೋ ಅಸಿಡಿಟಿ ಯಾಗಿ ಹೊಟ್ಟೆ ಉರಿ ಆಗಿರಬೇಕು ಎಂದುಕೊಳ್ಳುತ್ತಿದ್ದೆ.ಸಣ್ಣ ಸಣ್ಣ ಹುಡುಗರನ್ನೂ ಕರೆದುಕೊಂಡು ಬಂದು "ಇವನಿಗೆ ಗ್ಯಾಸ್ಟ್ರಿಕ್ ಪ್ರಾಬ್ಲಂ ಇದೆ,ಏನಾದರೂ ಔಷಧಿ ಕೊಡಿ ಸಾರ್"ಎಂದುಕೇಳಿದಾಗ, 'ಇಷ್ಟು ಸಣ್ಣ ಹುಡುಗನಿಗೂ ಹೊಟ್ಟೆ ಉರಿ ಯಾಗುತ್ತದೆಯೇ ?'ಎನ್ನುತ್ತಿದ್ದೆ."ಅವನಿಗೆ ಹೊಟ್ಟೆ ಉರಿ ಏನೂ ಇಲ್ಲಾ ಸಾರ್!ಗ್ಯಾಸ್ ಬಿಟ್ಟರೆ ಕೆಟ್ಟ ವಾಸನೆ. ಇವನ ಕಾಟದಿಂದ ಮನೇಲಿ ಯಾರೂ ಇರೋ ಹಂಗಿಲ್ಲಾ "ಎಂದು ಅಲವತ್ತು ಕೊಳ್ಳುತ್ತಿದ್ದರು.'ಗ್ಯಾಸ್ ಸಮಸ್ಯೆಗೆ', "ಗ್ಯಾಸ್ಟ್ರಿಕ್"ಸಮಸ್ಯೆ ಎನ್ನುತ್ತಾರೆಂದು ಆಗ ಅರ್ಥವಾಯಿತು!ಸಾಮಾನ್ಯವಾಗಿ ಮಧ್ಯವಯಸ್ಸಿನ,ಅಥವಾ ವಯಸ್ಸಾದ ಗಂಡಸರಿಗೆ ಈ ಸಮಸ್ಯೆ ಹೆಚ್ಚು . ಅವರ "ಗ್ಯಾಸ್ಟ್ರಿಕ್ "ಸಮಸ್ಯೆ, ಸಶಬ್ಧವಾಗಿ ಡಂಗೂರ ಸಾರಿ ಎಲ್ಲರಿಗೂ ತಿಳಿಸುವಂತಹುದು.ಸಮಯ,ಸಂದರ್ಭ ಒಂದೂ ನೋಡದೆ ಹೊರ ಬಂದು, ಅವರನ್ನು ಪೇಚಿನಲ್ಲಿ ಸಿಗಿಸಿ ಬಿಡುತ್ತದೆ . ನಮ್ಮ ಪರಿಚಯದವರೊಬ್ಬರ ಮಗಳು ತನ್ನ ಕಾಲೇಜಿನ ಸಹಪಾಟಿಗಳನ್ನು ಮನೆಗೆ ಕರೆದುಕೊಂಡು ಬಂದು, "ಇವಳು ದೀಪ,ಇವಳು ಸ್ನೇಹ,ಇವಳು ರೂಪ......"ಅಂತ ತನ್ನ ತಂದೆಗೆ ಪರಿಚಯ ಮಾಡಿಕೊಡುತ್ತಿದ್ದಾಗ,ಅವರ ತಂದೆ ಸಶಬ್ಧವಾಗಿ ಗ್ಯಾಸ್ ಬಿಟ್ಟರು.ಆ ವಯಸ್ಸಿನ ಹುಡುಗಿಯರಿಗೆ ಮೊದಲೇ ನಗು ಜಾಸ್ತಿ!ಸಣ್ಣ ಪುಟ್ಟದ್ದಕ್ಕೆಲ್ಲಾ ಕಿಸ ಕಿಸನೇ ನಗುವ ವಯಸ್ಸು.ಆ ಶಬ್ಧಕ್ಕೆ ಬಂದ ಹುಡುಗಿಯರೆಲ್ಲಾ ಹೆದರಿಕೊಂಡು, "ಹೋ......."ಎಂದು ನಗುತ್ತಾ ,ಚೆಲ್ಲಾ ಪಿಲ್ಲಿಯಾಗಿ ಹೊರಗೋಡಿದರು!!! ಅವರ ಮಗಳು ತನ್ನ ಸ್ನೇಹಿತೆಯರ ಎದುರಿಗೆ ಆದ ಅವಮಾನಕ್ಕೆ ,ತಂದೆಯ ಮೇಲೆ ಮುನಿಸಿಕೊಂಡು ಎರಡು ದಿನ ಮಾತು ಬಿಟ್ಟಳು! ನನ್ನ ಸ್ನೇಹಿತರೊಬ್ಬರ ಇಬ್ಬರು ಮಕ್ಕಳು ರಜಾ ಕಳೆಯಲೆಂದು ಅಜ್ಜಿಯ ಮನೆಗೆ ಹೋಗಿದ್ದರು.ರಾತ್ರಿ ಅಜ್ಜಿಯ ಪಕ್ಕ ಮಲಗಿದ್ದರು. ಬೆಳಿಗ್ಗೆ ಹಜಾರದಲ್ಲಿ ಮನೆ ಮಂದಿ ಎಲ್ಲಾ ಸೇರಿ,ಕಾಫಿ ಕುಡಿಯುತ್ತಿದ್ದಾಗ ಆ ಹುಡುಗರಲ್ಲೊಬ್ಬಅವರಮ್ಮನ ಬಳಿ ಹೋಗಿ ಅವರ ಅಜ್ಜಿಯನ್ನೇ ನೋಡುತ್ತಾ ಆಶ್ಚರ್ಯದಿಂದ "ಅಮ್ಮಾ ...,ಹೆಂಗಸರೂ ಗ್ಯಾಸ್ ಬಿಡುತ್ತಾರಾ?"ಎಂದು ಪ್ರಶ್ನಿಸಿದ. ಪಾಪ ಅವನ ಅಜ್ಜಿಗೆ ಹೇಗಾಗಿರಬೇಡ! ಅವರು ನಾಚಿಕೆಯಿಂದ ಮುಖ ಕೆಂಪಗೆ ಮಾಡಿಕೊಂಡು ಅಡಿಗೆ ಮನೆ ಸೇರಿಕೊಂಡರೆ ,ಅಜ್ಜನೂ ಸೇರಿದಂತೆ ಮಿಕ್ಕವರೆಲ್ಲಾ ನಗು ತಡೆದು ಕೊಳ್ಳಲು ಒದ್ದಾಡುತ್ತಿದ್ದರಂತೆ!!! ಒಟ್ಟಿನಲ್ಲಿ "ಗ್ಯಾಸ್ಟ್ರಿಕ್ "ಪ್ರಾಬ್ಲಂನಿಂದ ಒದ್ದಾಡುವವರ ಕಥೆ , ಆಡುವಂತಿಲ್ಲ,ಅನುಭವಿಸುವಂತಿಲ್ಲ!!!

Saturday, June 2, 2012

"ಧ್ಯಾನಸ್ಥ .....ಸ್ವಸ್ಥ !!!"

ನಮ್ಮ ವರಾಂಡದ ಕಿಟಕಿಯ ಸರಳುಗಳ ಆಚೆ, ಬಿಡುಗಡೆಯ ಬಯಲಿನಲ್ಲಿ, ಕಾಣುತ್ತಿದೆ ಒಂದು ಧ್ಯಾನಸ್ಥ ತೆಂಗಿನ ಮರ .ಚಳಿ,ಬಿಸಿಲು,ಮಳೆ,ಗಾಳಿಗಳ ಲೆಕ್ಕಿಸದೆ ದಶಕಗಳಿಂದ ತಪೋ ನಿರತ .ಆಗೊಮ್ಮೆ ಈಗೊಮ್ಮೆ ಗಾಳಿ ಇಡುವ ಕಚಗುಳಿಗೆ ಮೆಲ್ಲನೆಯ ಸ್ಪಂದನ.ಗರಿಗಳು ನುಡಿಸುವ ಸರಿಗಮಕ್ಕೆ ಏರಿ ಇಳಿಯುವ ಹಾರ್ಮೊನಿಯಮ್ಮಿನ ಕೀ ಗಳಂತೆ ,ತನ್ನ ಸಂಗೀತಕ್ಕೆ ಮನಸೋತು ತಾನೇ ತಲೆದೂಗುತ್ತದೆ.ಪಕ್ಕದಲ್ಲೇ ಸಾಥ್ ನೀಡುತ್ತಿದೆ ಇನ್ನೊಂದು ಮರ.ಹಿಮಾಲಯದ ಸಾಧು ಒಬ್ಬನಂತೆ, ತನ್ನೆಲ್ಲಾ ಎಲೆಗಳನ್ನು ಉದುರಿಸಿ ಬೆತ್ತಲಾಗಿ, ಚಳಿಗೆ, ಏನ್ ಮಾಡ್ತೀಯೋ ಮಾಡ್ಕೋ ಹೋಗ್,ಎಂದು ಸವಾಲೆಸೆಯುತ್ತದೆ.ಎಲ್ಲಿಂದಲೋ ಬಂದ ಹಕ್ಕಿಗಳ ಹಿಂಡೊಂದು ತೆಂಗಿನ ಮರದ ತಪಸ್ಸು ಕೆಡಿಸಲು ಗರಿಗಳಲ್ಲಿ ಕೂತು, ಏನೂ ಪ್ರಯೋಜನವಿಲ್ಲೆಂದು ತಮ್ಮಲ್ಲೇ ಮಾತಾಡಿಕೊಂಡು ,ಬುರ್ರ್ ಎಂದು ಒಟ್ಟಿಗೇ ಹಾರಿಹೊಗುತ್ಹವೆ . ಇದ್ಯಾವುದನ್ನೂ ಲೆಕ್ಕಿಸದ ತೆಂಗಿನಮರ ಮೊದಲಿನಂತೆ ಧ್ಯಾನಸ್ಥ ! ಸ್ವಸ್ಥ!! ಕಿಟಕಿ ಬಾಗಿಲುಗಳಿಂದ ನಮ್ಮನು ನಾವೇ ಬಂಧಿಸಿ ಕೊಂಡು, ತಲೆಯಲ್ಲಿ ನಾನಾ ಚಿಂತೆಯ, ಗಿಳಿ,ಗೂಬೆ,ಕಾಗೆಗಳನ್ನು ಬಿಟ್ಟುಕೊಂಡು, ಅವುಗಳ ಕಿರುಚುವಿಕೆಯಿಂದ ತಲೆ ಚಿಟ್ಟು ಹಿಡಿಸಿಕೊಂಡು ಬದುಕುತ್ತಿರುವ ನಮ್ಮ ಬದುಕು --------------ಅಸ್ವಸ್ಥ.