Thursday, June 21, 2012
"ವೈದ್ಯೋ ನಾರಾಯಣೋ ಹರಿ!!!"ನಮಗೆ ದೇವರ ಪಟ್ಟ ಬೇಡಾರೀ !!!
ವೈದ್ಯನೂ ಎಲ್ಲರಂತೆ ಒಬ್ಬ ಮನುಷ್ಯ.ಎಲ್ಲಾ ಮನುಷ್ಯರಂತೆ ಅವನಿಗೂ ಮನುಷ್ಯರಿಗೆ ಸಹಜವಾದ ಆಸೆ,ರಾಗ ,ದ್ವೇಷ,ಸಿಟ್ಟು,ಅಸೂಯೆ ಮುಂತಾದ ಅವಗುಣಗಳು ಇದ್ದೇ ಇರುತ್ತವೆ.ವೈದ್ಯನಾಗಿ ಕರ್ತವ್ಯ ನಿರ್ವಹಿಸುವಾಗ ಅವನು ಎಲ್ಲಾ ಅವಗುಣಗಳನ್ನೂ ಆಚೆಗಿಟ್ಟು,ಸದ್ಗುಣಗಳ ಗಣಿಯೇ ಆಗಿರಬೇಕೆನ್ನುವುದು ಸಹಜವಾಗಿಯೇ ಎಲ್ಲರ ಆಶಯ.ಇದರಲ್ಲಿ ಖಂಡಿತ ತಪ್ಪಿಲ್ಲ.ಸಮಾಜದ ಬೇರೆಲ್ಲಾ ಕ್ಷೇತ್ರಗಳಲ್ಲೂ ಅರಾಜಕತೆ,ಭ್ರಷ್ಟಾಚಾರ,ಅವ್ಯವಸ್ಥೆ ತಾಂಡವವಾಡುತ್ತಿದೆ.ವೈದ್ಯಕೀಯ ವೃತ್ತಿಯೂ ಇದಕ್ಕೆ ಹೊರತಾಗಿಲ್ಲ. ವೈದ್ಯರೂ ಈ ಸಮಾಜದ ಒಂದು ಭಾಗ.ವೈದ್ಯರು ಕೆಟ್ಟಿದ್ದಾರೆಂದರೆ ಈ ಸಮಾಜವೂ ರೋಗಗ್ರಸ್ಥ ವಾಗಿದೆಯೆಂದೇ ಅರ್ಥವಲ್ಲವೇ? ಒಂದು ಸಮಾಜದ ಅಂಗವಾದ ಒಬ್ಬ ವ್ಯಕ್ತಿಯ ಮೂಲಭೂತ ವ್ಯಕ್ತಿತ್ವ ಬದಲಾಗದೇ ಅವನು ನಿರ್ವಹಿಸುವ ಕಾರ್ಯ ಕ್ಷೇತ್ರದಲ್ಲಿನ ವ್ಯಕ್ತಿತ್ವ ಕೂಡ ಬದಲಾಗುವುದಿಲ್ಲ. ಆದ್ದರಿಂದ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರ ಜವಾಬ್ದಾರಿ ಹೆಚ್ಚಿನದು.ಎಲ್ಲರಿಗಿಂತ ಹೆಚ್ಚಾಗಿ ಅವರು ತಮ್ಮ ಜೀವನದಲ್ಲಿ ಮಾನವೀಯಮೌಲ್ಯಗಳನ್ನು ಹೆಚ್ಚು ಅಳವಡಿಸಿಕೊಳ್ಳಬೇಕಾಗುತ್ತದೆ.ಅದಕ್ಕೆಆಧ್ಯಾತ್ಮದ ಅಧ್ಯಯನ ಹೆಚ್ಚು ಸಹಕಾರಿ.ಹಾಗೆಂದು ವೈದ್ಯರೆಲ್ಲರೂ ಎಲ್ಲವನ್ನೂ ಬಿಟ್ಟು ಸನ್ಯಾಸಿಗಳಾಗಲು ಸಾಧ್ಯವಿಲ್ಲ .ಸ್ವಲ್ಪ ಮಟ್ಟಿಗಾದರೂ ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಗುಣ,ಮಾನವೀಯ ಅನುಕಂಪ ಹೊಂದಿರುವುದು ಅವಶ್ಯ.ಎಲ್ಲರಲ್ಲೂ ತನ್ನಲ್ಲಿರುವ ಚೈತನ್ಯವೇ ಅಡಗಿದೆ,ಎಲ್ಲರೂ ತನ್ನಂತೆಯೇ ತಮ್ಮ ತಮ್ಮ ಕಷ್ಟಗಳ ಹೊರೆ ಹೊರಲು ಹೆಣಗುತ್ತಿದ್ದಾರೆ ಎನ್ನುವ ಅರಿವು ಅವಶ್ಯ."BE KIND,AS EVERY ONE YOU MEET IS FIGHTING HIS OWN HARD BATTLE!!" ಅನುಕಂಪ ತುಂಬಿದ ನಾಲಕ್ಕುಒಳ್ಳೆಯ ಸಾಂತ್ವನದ ಮಾತು,ತಾಳ್ಮೆಯಿಂದ ಅವರ ಕಷ್ಟಗಳನ್ನು ಆಲಿಸುವಿಕೆ,ಆಸ್ಥೆಯಿಂದ ಅವರನ್ನು ಪರೀಕ್ಷಿಸಿ,ಅವರಿಗೆ ನೀಡುವ ಸಲಹೆ ,ಎಷ್ಟೋ ರೋಗಗಳನ್ನು ಗುಣ ಪಡಿಸಬಲ್ಲದು.ತನ್ನ ರೋಗಿಗಳಿಗೆ ತನ್ನಿಂದ ಒಳಿತಾಗುತ್ತದೆಯೆಂಬ ವೈದ್ಯನ ಬಲವಾದ ನಂಬಿಕೆಯೇ ರೋಗಿಗಳಿಗೆ ಸಂಜೀವಿನಿ ಯಾಗಬಲ್ಲದು! ಆದರೆ ಕೆಲವೊಮ್ಮೆ ಸೇವಾ ಮನೋಭಾವದ ವೈದ್ಯನೊಬ್ಬ ನಿಷ್ಠೆಯಿಂದ ತನ್ನೆಲ್ಲಾ ಅನುಭವಗಳನ್ನೂ ಧಾರೆ ಎರೆದು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದಿರಬಹುದು. ಭಗವದ್ಗೀತೆ ಯಲ್ಲಿ ಹೇಳಿದಂತೆ ನಿಷ್ಟೆಯಿಂದ ಕರ್ಮ ಮಾಡುವುದು ಅವನ ಕೈಯಲ್ಲಿದೆ.ಆದರೆ ಆ ಕರ್ಮದ ಫಲ ಅವನ ಕೈ ಮೀರಿದ್ದಲ್ಲವೇ?ಜನ ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕು.ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ , ನ್ಯಾಯವಾಗಿ ,ನಿಷ್ಟೆಯಿಂದ ಕೆಲಸ ಮಾಡಿದ ವೈದ್ಯರೂ ರೋಗಿಯ ಕಡೆಯವರಿಂದ ಹಲ್ಲೆಗೊಳಗಾಗುವ ಘಟನೆಗಳು ದಿನ ನಿತ್ಯ ನಡೆಯುತ್ತಿವೆ.ಹಾಗಾಗಿ ವೈದ್ಯರಲ್ಲಿ ಆತಂಕ ಹೆಚ್ಚುತ್ತಿದೆ.ಕ್ಲಿಷ್ಟಕರವಾದ ಕೇಸ್ ಬಂದಾಗ ಸುಮ್ಮನೇ ಯಾಕೆ ಕಷ್ಟವನ್ನು ಮೈ ಮೇಲೆ ಎಳೆದುಕೊಳ್ಳಬೇಕು?ಎಂದು ರೋಗಿಯನ್ನು ಬೇರೊಂದು ಆಸ್ಪತ್ರೆಗೆ ರವಾನಿಸುವ ಧೋರಣೆ ವೈದ್ಯರಲ್ಲಿ ಹೆಚ್ಚಾಗುತ್ತಿದೆ.ಇದು ಖಂಡಿತ ಆರೋಗ್ಯಕರ ಬೆಳವಣಿಗೆಯಲ್ಲ.ಇದಕ್ಕೆ ಬರೀ ವೈದ್ಯರನ್ನು ದೂರಿ ಕೈ ತೊಳೆದುಕೊಂಡರೆ ಪ್ರಯೋಜನವಿಲ್ಲ.ಮೂವತ್ತೈದು ವರ್ಷಗಳ ಹಿಂದೆ ನಾನು ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟಾಗ ರೋಗಿಯ ಕಡೆಯವರಿಂದ 'ಸರ್ ನಿಮ್ಮ ಪ್ರಯತ್ನ ನೀವು ಮಾಡಿ.ನೀವು ಸರಿಯಾದ ಚಿಕಿತ್ಸೆಯನ್ನೇ ಕೊಡುತ್ತೀರಿ ಎನ್ನುವ ನಂಬಿಕೆ ನಮಗಿದೆ.ಇನ್ನು ಅವನು ಬದುಕುವುದು ಬಿಡುವುದು ದೈವೇಚ್ಛೆ 'ಎಂದು ಭರವಸೆ ಕೊಡುತ್ತಿದ್ದರು.ಅಂತಹ ಮಾತುಗಳು ಸಾವು ಬದುಕಿನೊಡನೆ ಹೋರಾಡುವ ವೈದ್ಯನಿಗೆ ನೂರಾನೆಯ ಬಲ ಕೊಡುತ್ತವೆ!!ಈಗೀಗ ಜನರ ವರ್ತನೆ ಬದಲಾಗುತ್ತಿದೆ .ಪ್ರತಿಯೊಂದಕ್ಕೂ ವೈದ್ಯನ ಮೇಲೆ ಗೂಬೆ ಕೂರಿಸುವುದು ಸಾಮಾನ್ಯವಾಗಿದೆ.ಎಲ್ಲಾ ವೈದ್ಯರೂ ಸಾಚಾಗಳೆಂದು ನಾನು ಹೇಳುತ್ತಿಲ್ಲ.ಆದರೆ ಮಾಧ್ಯಮಗಳಲ್ಲಿ ಬಿಂಬಿಸುವಂತೆ ಎಲ್ಲಾ ವೈದ್ಯರೂ ಖಂಡಿತಾ ಖಳ ನಾಯಕರಲ್ಲ.ವೈದ್ಯಕೀಯ ಕಾಲೆಜುಗಳನ್ನು ಸ್ಥಾಪಿಸುವ ಉದ್ಯಮಿಗಳು,ಭಾವೀ ವೈದ್ಯರಿಂದ ಕೋಟಿಗಟ್ಟಲೆ ಹಣ ಲೂಟಿ ಹೊಡೆಯುತ್ತಾರೆ.ಅಲ್ಲಿಂದ ಹೊರ ಬಂದ ವೈದ್ಯರು ಮಾತ್ರ ನಿಸ್ವಾರ್ಥ ಸೇವೆ ಸಲ್ಲಿಸಲಿ ಎಂದು ಬಯಸುವುದು ಎಷ್ಟು ಸರಿ?ಇದಕ್ಕೆ ಪರಿಹಾರವೆಂದರೆ ಸರ್ಕಾರ ಖಾಸಗಿ ಕಾಲೇಜು ಗಳನ್ನು ಕಡಿಮೆ ಮಾಡಿ,ಸರ್ಕಾರಿ ಕಾಲೇಜುಗಳಲ್ಲಿ ಪ್ರತಿಭಾನ್ವಿತ,ಸೇವಾ ಮನೋಭಾವವಿರುವ ವಿಧ್ಯಾರ್ಥಿಗಳಿಗೆ ಸೀಟು ಕೊಡಲಿ.ಅವರಿಗೆ ವೈದ್ಯರಾದ ನಂತರ ಉಚ್ಚ ಅಧಿಕಾರಿಗಳಿಗೆ ಕೊಡುವಷ್ಟು ವೇತನ ನೀಡಲಿ.ಆಗ ಮಾತ್ರ ಜನ ಸಾಮಾನ್ಯರಿಗೆ ಒಳ್ಳೆಯ ವೈದ್ಯಕೀಯ ಸೇವೆ ಲಭ್ಯವಾಗುತ್ತದೆ.ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಹದ ಕೆಡುತ್ತದೆ.ಜನ ವೈದ್ಯರನ್ನು ನಾರಾಯಣ,ಹರಿ ಎಂದು ಹಾಡಿ ಹೊಗಳುವುದು ಬೇಡ.ನಮ್ಮನ್ನೂ ನಿಮ್ಮಂತೆ ನಡೆಸಿಕೊಂಡರೆ ಅಷ್ಟೇ ಸಾಕು.ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.
Subscribe to:
Post Comments (Atom)
EVERY ONE YOU MEET IS FIGHTING THEIR OWN BATTLE!! emba line ishta ayitu tumba chennagide sir
ReplyDeleteಮನು;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
Deleteಮನದಾಳದ ಮಾತು.. ತಾರ್ಕಿಕವಾದ ಚಿಂತನೆಯಿದೆ ಲೇಖನದಲ್ಲಿ. ಎಲ್ಲ ಕ್ಷೇತ್ರಗಳಲ್ಲಿ ಅರಾಜಕತೆ ತಾಂಡವವಾಡುತ್ತಿರುವ ಈ ಪರಿಸ್ಥಿತಿಗೆ ಹೊಂದುವ ಲೇಖನ.ಹೌದು. ಈಗ ಜನರ ಮನಸ್ಥಿತಿ ಬದಲಾಗಿದೆ. ಅತಿ ಬುದ್ಧಿವಂತಿಕೆ ಇದಕ್ಕೆ ಮುಖ್ಯ ಕಾರಣ. ವೈದ್ಯನನ್ನು ದೇವರಿಗೆ ಹೋಲಿಸಿದರೂ, ವೈದ್ಯನೇ ದೇವರಲ್ಲ ಎಂಬುದನ್ನು ಮರೆತು ಪ್ರತಿಯೊಂದಕ್ಕೂ ಗೂಬೆ ಕೂರಿಸುವ ಮನೋಪ್ರವೃತ್ತಿ ಜಾಸ್ತಿಯಾಗಿದೆ.. ಮತ್ತೊಂದೆಡೆ ವೈದ್ಯಕೀಯ -ಸೇವೆಯಾಗದೆ, ಉದ್ಯಮವಾಗುತ್ತಿರುವುದೂ ಆತಂಕಕಾರಿ ವಿಷಯ. ಬಿಲ್ಲು ಜಾಸ್ತಿ ಮಾಡುವ ಸಲುವಾಗಿ ಹತ್ತು ಹಲವು ರೋಗಗಳ ಪಟ್ಟಿ ಕಟ್ಟುವ ಆಸ್ಪತ್ರೆಗಳನ್ನೂ ನೋಡಿದ್ದೇನೆ. ಒಬ್ಬ ವೈದ್ಯನ ಮಗನಾಗಿ ಈ ಎರಡೂ ಸನ್ನಿವೇಶಗಳನ್ನು ನೋಡಿದ್ದೇನೆ. ಬೆಂಗಳೂರಿನ ಕೆಲ ಆಸ್ಪತ್ರೆಗಳಿಗೆ ಕಾಲಿಡಲೂ ಹೆದರುತ್ತೇನೆ. ಆದರೆ ನೀವು ಹೇಳಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಒಳ್ಳೆಯವರು, ಕೆಟ್ಟವರು ಇರುತ್ತಾರೆ. ಒಳ್ಳೆಯ ವೈದ್ಯರು ಖಂಡಿತ ದೇವರೇ.
ReplyDeleteಪರೇಶ್ ಸರ್;ಅಣಬೆಗಳಂತೆ ಹುಟ್ಟಿಕೊಂಡಿರುವ ಖಾಸಗಿ ಮೆಡಿಕಲ್ ಕಾಲೇಜುಗಳು.ಕೋಟಿ ಕೋಟಿ ಲೂಟಿ ಹೊಡಿಯುತ್ತಿರುವ ಅವುಗಳ ಮಾಲೀಕರು,ವೈದ್ಯಕೀಯ ವೃತ್ತಿ ಹಣ ಮಾಡುವ ದಂಧೆಯಾಗಿರುವುದಕ್ಕೆ ಕಾರಣವಲ್ಲವೇ?ಅದರ ಕಡೆ ಗಮನ ಹರಿಸದೇ ಬರೀ ವೈದ್ಯರನ್ನು ಸಾರಾ ಸಗಟಾಗಿ ಹಳಿಯುವುದು ಎಲ್ಲಿಯ ನ್ಯಾಯ?ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
Deletewell said. Belief can turn small stone in to god.other way can also happen.Amirkhan (satyameeve jayathe) has destroyed patient faith in doctors at nation level.He has has done lot of damage to medical profession.Please write on that also sir
ReplyDeleteDayananda sir;Amir khan's episode about doctors was'Ardha satya'.This is other half of the story.Thanks for your kind comments.Regards.
Delete*ಅಪ್ಪಟ ಪ್ರಾಮಾಣಿಕ ಲೇಖನ.
ReplyDelete*ನಿಜವನ್ನು ಬಿಚ್ಚಿಟ್ಟ ಬರಹ.
*ವೃತ್ತಿಯ ಸತ್ಯಾಂಶಕ್ಕೆ ಹಿಡಿದ ಕನ್ನಡಿ.
ಒಂದು ವಾಹಿನಿಯು ಯಾರೋ ಸ್ಟಾರ್ ತಂದು ಡಬ್ಬಿಂಗ್ ಕಾರ್ಯಕ್ರಮ ಮಾಡಿ, ಅವರ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ವೈದ್ಯಕೀಯ ವೃತ್ತಿಯನ್ನೇ ಖಳನಟರಂತೆ ಚಿತ್ರಿಸಿರುವುದು ತೀವ್ರ ಖಂಡನೀಯ, ವಿಷಾದನೀಯ.
ಈ ಬರಹದಲ್ಲಿ ಸ್ವತಃ ವೈದ್ಯರೊಬ್ಬರು ವಾಸ್ತವ ಚಿತ್ರಣ ನಿರೂಪಿಸಿದ್ದಾರೆ. ವೃತ್ತಿ ಗೌರವಕ್ಕೆ ಚ್ಯುತಿ ಬಂದಾಗ, ನಿಸ್ವಾರ್ಥ ಸೇವೆಯಲ್ಲಿರುವ ಸಭ್ಯರು ಸಿಡಿದೇಳಬೇಕು. ಯಾರೋ ಬೆರಳೆಣಿಕೆ ಮಂದಿ ಪವಿತ್ರ ವೈದ್ಯಶಾಸ್ತ್ರವನ್ನು ಹಣ ಮಾಡುವ ದಂಧೆಯಾಗಿ ಮಾಡಿಕೊಂಡರು ಬಹು ಪಾಲು ನಿಜಾಯತಿ ವೈದ್ಯರನ್ನೆಲ್ಲ ದೂರುವುದು ಅಸಮ್ಮಂಜಸ.
"ಔಷಧೀ ಜಾಹ್ನವೀ ತೋಯಂ|
ವೈದ್ಯೊ ನಾರಾಯಣೋ ಹರಿಃ||"
ಎನ್ನುವಾಗ ಅವರ ಸೇವೆಯು ನಾಗರೀಕರಿಗೆ ಎಷ್ಟು ಮಟ್ಟಿಗೆ ಪ್ರಾಮುಖ್ಯ ಎನ್ನುವುದರ ಅರಿಯಬೇಕಾದ ಮಾಧ್ಯಮಗಳು ಮೊದಲು ಸತ್ಯವನ್ನಷ್ಟೇ ಜನರ ಮುಂದಿಡುವುದು ಕಲಿಯ ಬೇಕು.
ಐ.ಎಂ.ಎ (ಭಾರತೀಯ ವೈದ್ಯಕೀಯ ಮಂಡಳಿ) ಕೂಡಲೇ ಪ್ರತಿಭಟನೆ ಹಮ್ಮಿಕೊಳ್ಳಬೇಕು, ನ್ಯಾಯಾಲಯದಲ್ಲಿ ವೃತ್ತಿಯ ಮಾನ ನಷ್ಟ ಮೊಕದ್ಧಮೆ ದಾಖಲಾಗಲೇ ಬೇಕು.
ಬದರಿ ಸರ್;ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ನನ್ನ ಮನ ತುಂಬಿ ಮಾತು ಹೊರಡುತ್ತಿಲ್ಲ.ಪ್ರಾಮಾಣಿಕ ವೈದ್ಯರ ಕಷ್ಟವನ್ನೂ ಜನರಿಗೆ ಪರಿಚಯಿಸುವ ಒಂದು ಸಣ್ಣ ಪ್ರಾಮಾಣಿಕ ಪ್ರಯತ್ನ.ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ನಮಸ್ಕಾರ.
ReplyDeleteಇನ್ನೊಂದಿಷ್ಟು ಮಾಹಿತಿ-
ReplyDeleteವೈದ್ಯ ತಪ್ಪು ಮಾಡಿದರೂ ಕೆಟ್ಟ ಹೆಸರು ವೈದ್ಯನಿಗೆ. ರೋಗಿ ತಪ್ಪು ಮಾಡಿದರೂ (ಮೆಡಿಸಿನ್ ತೆಗೆದುಕೊಳ್ಳುವ ವಿಷಯದಲ್ಲಿ) ಕೆಟ್ಟ ಹೆಸರು ವೈದ್ಯನಿಗೆ.
ಇನ್ನೊಂದು ವಿಷಯ - "ವೈದ್ಯೋ ನಾರಾಯಣೋ ಹರಿಃ" - ಇದನ್ನು ಹೆಚ್ಚಿನ ಜನ ತಪ್ಪರ್ಥದಲ್ಲಿ ಉಪಯೋಗಿಸುತ್ತಾರೆ. ಇದರ ಬಗ್ಗೆ ಬ್ಲಾಗ್ ಲೇಖನ ಬರೆಯಬೇಕೆಂದಿದ್ದೇನೆ. ಅದರ ಲಿಂಕ್ (ಮುಂದೆಂದಾದರೂ ಬರೆದಮೇಲೆ) ನಿಮಗೆ ಕಳಿಸುತ್ತೇನೆ.
ಸುಬ್ರಮಣ್ಯ ಮಾಚಿಕೊಪ್ಪ;ನಮಸ್ಕಾರ.ವೈದ್ಯ ತಪ್ಪು ಮಾಡಿದರೂ ತಪ್ಪು ಅವನದೇ.ರೋಗಿ ತಪ್ಪು ಮಾಡಿದರೂ ತಪ್ಪು ಅವನದೇ.ವೈದ್ಯನಾಗಿದ್ದದ್ದೂ ತಪ್ಪು ಅವನದೇ!!!ಪ್ರತಿಕ್ರಿಯೆಗೆ ಧನ್ಯವಾದಗಳು.
Deleteಪ್ರಚಲಿತ ವಿದ್ಯಾಮಾನದ ನಿರೂಪಣೆ ಮನಮುಟ್ಟುತ್ತದೆ. ಹೌದು ನನ್ನ ಅನುಭವದಲ್ಲಿ ರೋಗಿಯಾಗಿ ಆ ಕ್ಷಣದಲ್ಲಿ ವೈಧ್ಯರಲ್ಲಿ ದೇವರನ್ನು ಕಂಡವ ನಾನು, ಬಳಲುತ್ತಿದ್ದ ಸಮಯದಲ್ಲಿ ಅಭಯದ ಮಾತಾಡಿ ಸಾಂತ್ವನ ಗೊಳಿಸಿ ರೋಗ ವಾಸಿಯಾಗಲು ಮಾನಸಿಕವಾಗಿ ರೋಗಿಯನ್ನು ಸಿದ್ದಗೊಲಿಸುವ ಕಲೆ ವೈಧ್ಯರಲ್ಲದೆ ಯಾರಿಗೂ ಸಿದ್ಧಿಸದು.ಆದಾಗ್ಯೂ ಈ ಎಲ್ಲಾ ಕ್ಷೇತ್ರಗಳಂತೆ ಇಲ್ಲಿಯೂ ಅಲ್ಲೊಂದು ಇಲ್ಲೊಂದು ವೈಧ್ಯರು ತಪ್ಪು ಮಾಡಬಹುದು,ಆದರೆ ಅದನ್ನು ವೈಭವೀಕರಿಸಿ ವೈಧ್ಯ ಸಂಕುಲವನ್ನು ಅವಹೇಳನ ಮಾಡುವುದು ಉತ್ತಮ ಸಮಾಜದ ಲಕ್ಷಣವಲ್ಲಾ, ಆದರೆ ಹಿಂದಿನ ಪೀಳಿಗೆಯ ವೈಧ್ಯರಲ್ಲಿನ ಶ್ರದ್ಧೆ ಹೊಸ ಪೀಳಿಗೆಯ ವೈಧ್ಯರಲ್ಲಿ ಕಂಡುಬರುತ್ತಿಲ್ಲವೆಂಬ ಮಾತೂ ನಿಜ , ಅದಕ್ಕೆ ಹಲವು ಕಾರಣ ಇದೆ.ಲಕ್ಷಾಂತರ ಹಣ ತೆತ್ತು , ದೊನೆಶನ್ ನೀಡಿ, ಡಾಕ್ಟರ್ ಆಗುವ ಒಬ್ಬ ಮನುಷ್ಯ ಏನು ತಾನೇ ಸೇವೆ ಮಾಡಿಯಾನು?? ಮೊದಲು ಅವನು ಬಂಡವಾಳ ಹಾಕಿರುವ ಹಣವನ್ನು ದುಡಿಯಲು ಶುರುಮಾಡುತ್ತಾನೆ.ಇಂತಹ ಪ್ರಕರಣಗಳು ಸಹ ಕೆಲವು ಇವೆ, ಇದೆಲ್ಲದರ ಹೊರತಾಗಿ ಸಮಾಜದಲ್ಲಿ ಸೇವೆಯ ಉದ್ದೇಶ ಹೊಂದಿ ಗ್ರಾಮೀಣ ಭಾಗದಲ್ಲಿ ಕೇವಲ ಐದು, ಹತ್ತು ರೂಪಾಯಿಗಳಿಗೆ ಜನರಿಗೆ ಚಿಕಿತ್ಸೆ ನೀಡುವ , ಇಂದಿಗೂ ನೀಡುತ್ತಿರುವ ಹಲವು ವೈಧ್ಯರು ಎಲೆಮರೆ ಕಾಯಿಯಂತೆ ಇದ್ದಾರೆ. ಡಾಕ್ಟರ್ ಸಾರ್ ಒಳ್ಳೆ ಲೇಖನ ನಿಮಗೆ ನಿಮ್ಮ ಕಾಳಜಿಗೆ ಜೈ ಹೋ ಸಾರ್.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಬಾಲು ಸರ್;ನಿಮ್ಮ ವಿಸ್ತೃತ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.ಅಮೀರ್ ಖಾನ್ ಅವರ,ವೈದ್ಯರ ಬಗ್ಗೆ ಬಂದ 'ಸತ್ಯಮೇವ ಜಯತೆ'ಯಲ್ಲಿ ಅರ್ಧಸತ್ಯವನ್ನು ತೋರಿಸಿ ವೈದ್ಯರೆಂದರೆ ಜನ ಹೆದರಿ ಹೌಹಾರುವಂತಾಗಿದೆ.ಒಂದು ಎಪಿಸೋಡಿನಲ್ಲಿ ಎರಡು ಹನಿ ಕಣ್ಣೇರುಸುರಿಸಿ ಮೂರು ಕೋಟಿ ಹಣ ಮಾಡುವರಿಗೆ,ಹಳ್ಳಿಗಳಲ್ಲಿ ಕನಿಷ್ಠ ಸೌಲಭ್ಯವೂ ಇಲ್ಲದೆ ಹತ್ತು ಇಪ್ಪತು ರುಪಾಯಿಗಳಿಗೆ ಸೇವೆ ಮಾಡುವ ವೈದ್ಯರೆಲ್ಲಿ ಕಾಣುತ್ತಾರೆ?ಹಲವಾರು ವರ್ಷ ನಿದ್ದೆಗೆಟ್ಟು ಕಷ್ಟ ಪಟ್ಟು ಓದಿ,ಎಲ್ಲರೂ ಸುಖ ನಿದ್ರೆಯಲ್ಲಿರುವಾಗ,ರೋಗಿಗಳನ್ನು ಉಳಿಸಲು ನಡು ರಾತ್ರಿಯಲ್ಲಿ ಏಕಾಂಗಿಯಾಗಿ ಹೊರಾಡುತ್ತಾರಲ್ಲಾ,ಅವರ ಖಾಸಗೀ ಬದುಕಿನ ಗೋಳನ್ನು ಯಾರು ಕೇಳಬೇಕು?ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeleteNIJAKKOO OLLEYA LEKHANA. ELLAROO MODALU MANAVARAGABEKU.ELLARA MITIGALANNU ARIYABEKU.ASAKTI IDDAVARIGE MAATRA MEDICAL ODUVA AVAKASHA SIGABEKU.......SHAIK CHILLI AGUTIDDENE.ARDHA SATYAVANNU POORNA SATYAVAGISUVA NIMMA BARAHAKKE HATS OFF-HEMCHANDRA
ReplyDeleteಹೇಮಚಂದ್ರ.ಪ್ರತಿಕ್ರಿಯೆಗೆ ಧನ್ಯವಾದಗಳು.ಸಮಾಜದಲ್ಲಿ ಸುತ್ತ ಮುತ್ತಲೂ ಎಲ್ಲರೂ ಹಣಮಾಡುವRAT RACEನಲ್ಲಿ ತೊಡಗಿರುವಾಗ,ವೈದ್ಯರು ಹಣ ಬೇಕು ಎಂದಾಗ ಎಲ್ಲರ ಕಣ್ಣುಗಳು ಕೆಂಪಾಗುತ್ತವೆ!!! 'THEY SHOULD LIVE A SIMPLE ,SAGELY LIFE' ಎನ್ನುತ್ತದೆ ಸಮಾಜ.ಏಕೆಂದು ಅರ್ಥವಾಗುತ್ತಿಲ್ಲ.ಅವರೇನು ಎಲ್ಲವನ್ನೂ ತೊರೆದ ಸನ್ಯಾಸಿಗಳೇ.ಇತ್ತೀಚಿಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸನ್ಯಾಸಿಗಳನ್ನು ನೋಡಿದರೆ ಆ ಪದವನ್ನೂ ಬಳಸಲೂ ಭಯವಾಗುತ್ತದೆ!.
Deleteಡಾಕ್ಟ್ರೆ...
ReplyDeleteನಿಜ ಹೆಚ್ಚಿನ ಸಂದರ್ಭಗಳಲ್ಲಿ ವೈದ್ಯರುಗಳ ಮೇಲೆ ಗೂಬೆ ಕೂರಿಸುವದು ಸಹಜವಾಗಿಬಿಟ್ಟಿದೆ..
ಇದು ತಪ್ಪು...
ಆದರೆ ಅಲ್ಲೋ ಇಲ್ಲೋ ಒಂದೆರಡು ವೈದ್ಯರುಗಳು ಗೂಬೆ ಹೊತ್ತುಕೊಂಡು ಕುಳಿತ್ತಿದ್ದವರನ್ನೂ ನಾವು ಕಾಣಬಹುದು...
ಅಂಥಹ ಒಂದಿಬ್ಬರಿಂದಾಗಿ ಇಡಿ ವೈದ್ಯ ಸಮುದಾಯವನ್ನು ಹೀಗಳೆಯುವದು ಖಂಡಿತಾ ತಪ್ಪು..
ಅಮೀರ ಖಾನನ ಕಾರ್ಯಕ್ರಮ ಅನೇಕ ವೈದ್ಯರುಗಳಿಗೇ ಬೇಸರತರಿಸಿದೆ...
ನಮ್ಮ ಮನೆ ಬಳಿಯೂ ಒಬ್ಬರು "ಮಧುಸೂದನ" ಅಂತ ವೈದ್ಯರಿದ್ದಾರೆ..
ತುಂಬಾ ಒಳ್ಳೆಯವರು.. ಬಡವರಿಗೆ ಫೀಸ್ ಸಹ ತೆಗೆದುಕೊಳ್ಳುವದಿಲ್ಲ..
ಅವರೂ ಸಹ ಬೇಸರಿಸಿಕೊಂಡಿದ್ದರು...
ಏನು ಮಾಡೋಣ....
"ಕುಛ್ ತೋ ಲೋಗ್ ಕಹೇಂಗೆ...
ಲೋಗೋಂಕಾ ಕಾಮ್ ಹೆ ಕೆಹೆನಾ...
ಛೋಡೊ ...
ಬೇಕಾರ್ ಕೀ ಬಾತೋಂಕೊ..
ಬೀತ್ ನ ಜಾಯೇ ರೈನಾ........
ಪ್ರಕಾಶಣ್ಣ;'ಕುಚ್ ತೋ ಲೋಗ್ ಕಹೆಂಗೆ.ಲೋಗೊಂಕಾ ಕಾಂ ಹೈ ಕಹೇನಾ!!!'ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲಾ ಬಿಡಿ.ಇದು ನಮಗೆ ಮಾಮೂಲು.WE ARE USED TO BOTH GARLANDS AND BRICK BATS.ಚೆಂದದ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeleteಸರ್..ಒಳ್ಳೆಯ ಅವಲೋಕನ...
ReplyDeleteಅಪಾರ ಖರ್ಚು ಮಾಡಿ ವ್ಯೆದ್ಯಕೀಯ ಆರಿಸಿಕೊಳ್ಳುವ ಕೆಲವು ಮಂದಿಗೆ, ಹಾಗು ರಾಜಕಾರಣಿಗಳಿಗೆ ಏನೂ ವ್ಯತ್ಯಾಸವಿಲ್ಲ..ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ..ಜನಸಾಮಾನ್ಯರಿಗೆ ಸರಿಯಾಗಿ ರೋಗಿಯ ಬಗ್ಗೆ ತಿಳಿಹೇಳುವ ವ್ಯೆದ್ಯರ ಸಂಖ್ಯೆ ಕಡಿಮೆ ಇರುವುದು...೬ ತಿಂಗಳ ಕೆಳಗೆ ಒಂದು ಅಸಾಧಾರಣ ವೈದ್ಯರ ತಂಡದ ಪರಿಶ್ರಮ ಗಮನಿಸಿದೆ..
೧೫ ದಿನ ಪ್ರತಿದಿನವು ಕೂಡ ರೋಗಿಯ ದೇಹಸ್ಥಿತಿ, ಗುಣಮಟ್ಟ, ಕೊಡುತ್ತಿರುವ ಚಿಕಿತ್ಸೆ, ಯಾತಕ್ಕಾಗಿ ಮಾತ್ರೆಗಳು, ಟಾನಿಕ್ ಗಳು, ಚುಚ್ಚು ಮದ್ದುಗಳು ಇದರ ಬಗ್ಗೆ ಸಾಮಾನ್ಯರಿಗೂ ಅರ್ಥವಾಗುವಂತೆ ನಿಖರ ಮಾಹಿತಿ ಕೊಟ್ಟು, ರೋಗಿಯ ಆರೋಗ್ಯವನ್ನು ತಮ್ಮ ಕೈಲಾದ ಶ್ರಮ ಪಟ್ಟು ಉಳಿಸಲು (ಜೀವಿತಾವದಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿಸಲು) ಪರಿಶ್ರಮ ಪಟ್ಟ ವಿಜಯನಗರದ ಬಿ.ಜಿ.ಎಸ್. ಆಸ್ಪತ್ರೆಯ Dr . ಮಂಜುನಾಥ್, Dr . ರಾಜಕುಮಾರ್ ಹಾಗು ನರ್ಸ್ ಸೌಮ್ಯ ನೆನಪಿಸಿಕೊಲ್ಲಬೇಕಾದ ಮಾನವೀಯ ಮುಖದ ಜೀವಿಗಳು. ಕಡೆಯಲ್ಲಿ ರೋಗಿಯನ್ನು ಉಳಿಸಲು ಪಟ್ಟ ಫಲಕಾರಿಯಾಗದೆ ಹೋದಾಗ ಆ ಸುದ್ದಿಯನ್ನು ಹೇಳುವಾಗ ಅವರ ಕಣ್ಣಲ್ಲಿ ಜಿನುಗುತಿದ್ದ ಮಾನವೀಯ ಗುಣಗಳು ಇನ್ನು ಕಣ್ಣಿಗೆ ಕಟ್ಟಿದಂತಿದೆ.. ಒಳ್ಳೆಯ ಹೃದಯವಂತಿಕೆಯ ಜನರು ಇದ್ದಾರೆ..ಆದ್ರೆ ಒಂದು ಸ್ವಲ್ಪ ಕೆಸರಂಟಿದ ಪದಾರ್ಥ ಇಡಿ ಪೊಟ್ಟಣವನ್ನೇ ಹೆಸರುಗೆಡಿಸುವಂತೆ ಕೆಲವರು ಮಾಡುವ ಕೃತ್ಯಗಳು ತಲೆತಗ್ಗಿಸುವಂತೆ ಮಾಡುತ್ತವೆ..
ಈ ಮೇಲ್ಕಂಡ ನಿದರ್ಶನದಲ್ಲಿ ನಾನು ಬಾಗಿಯಾಗಿದ್ದೆ ಕಾರಣ ಚಿಕಿತ್ಸೆ ಪಡೆಯುತಿದ್ದವರು ಬೇರೆಯಾರೋ ಆಗಿರದೆ ನಮ್ಮ ಅಪ್ಪ ಆಗಿದ್ದರು..ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಆದ್ರೆ ಅವರ ಕಡೆಯ ದಿನಗಳಲ್ಲಿ ಉತ್ತಮ ಅಂತಹಕರಣ ತುಂಬಿದ ಒಂದು ಸುಸಜ್ಜಿತ ವೈದ್ಯಕೀಯ ತಂಡದ ಜೊತೆ ಇದ್ದರು ಎನ್ನುವುದು ನಮಗೆ ಸಮಾಧಾನ ತರುವ ಸಂಗತಿ...ಎಲ್ಲ ಸಹೃದಯ ವೈದ್ಯರಿಗೆ ನನ್ನ ನಮಸ್ಕಾರಗಳು..ಹಾಗು ಅವರ ಈ ಸೇವೆ ಹೀಗೆ ಮುಂದುವರಿಯಲಿ ಎಂದು ಆಶಿಸುವೆ...
ಶ್ರೀಕಾಂತ್;ಪ್ರತಿಕ್ರಿಯೆಗೆ ಧನ್ಯವಾದಗಳು.ಕೆಸರೆರೆಚುವ ಜನರ ನಡುವೆ ವೈದ್ಯರ ನಿಸ್ವಾರ್ಥ ಸೇವೆಯನ್ನೂ ನೆನೆಸಿಕೊಳ್ಳುವವರು ಇನ್ನೂ ಇದ್ದಾರೆಂದು ತಿಳಿದು ಖುಷಿಯಾಗುತ್ತದೆ!ಎಷ್ಟೆಲ್ಲಾ ನಿಂದನೆಗಳ ನಡುವೆ ಒಂದು ಜೀವವನ್ನು ಉಳಿಸಿದಾಗ ಸಿಗುವ ಸಂತೋಷವನ್ನು ಬಣ್ಣಿಸಲಾಗದು.ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹೃದಯಾಘಾತದಿಂದ ಹೃದಯ ಸ್ಥಂಭನವಾಗಿ ಉಸಿರಾಟ ನಿಂತು ಹೋದ ವಯಸ್ಕರೊಬ್ಬರಿಗೆ,ಬಾಯಿಂದ ಉಸಿರುಕೊಟ್ಟು,cardiac resuscitation ಮಾಡಿ ಬದುಕಿಸಿದ ನಂತರ,ಅವರು ಎಲ್ಲರ ಹತ್ತಿರ 'ಈಗ ನಾನು ಉಸಿರಾದುತ್ತಿರುವುದು ನನ್ನ ಉಸಿರಲ್ಲ!ಡಾಕ್ಟರ್ ಸಾಹೇಬರ ಉಸಿರು!!'ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವಾಗ,ನಾನು ವೈದ್ಯನಾದದ್ದು ಸಾರ್ಥಕವಾಯಿತು ಅನಿಸುತ್ತಿತ್ತು!
ReplyDeleteಡಾಕ್ಟರ್ ಕೃಷ್ಣಮೂರ್ತಿಗಳೇ, ನಮಸ್ತೆ. ನಿಮ್ಮ ಮನದಾಳದ ಮಾತು ಹಲವರ ಮನಮುಟ್ಟಿದೆ. ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯವರು,ಕೆಟ್ಟವರು ,ಸ್ವಾರ್ಥಿಗಳು, ನಿಸ್ವಾರ್ಥಿಗಳು, ಕ್ರೂರಿಗಳು, ಮೃದು ಸ್ವಭಾವದವರು...ಎಲ್ಲಾ ಇದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯವರು ಇರುವುದರಿಂದಲೇ ಇನ್ನೂ ಪ್ರಪಂಚ ನಡೆಯುತ್ತಿದೆ. ವೈದ್ಯಕೀಯ ಕ್ಷೇತ್ರ ತುಂಬಾ ಹದಗೆಟ್ಟಿದ್ದರೆ ಪ್ರಪಂಚ ರೋಗಗ್ರಸ್ತ ವಾಗುತ್ತಿತ್ತು. ನಾನೂ ಕೂಡ ಸರ್ಕಾರಿ ಉದ್ಯೋಗದಲ್ಲಿ ಕರ್ತವ್ಯವನ್ನು ನಿರ್ವಹಿಸುವಾಗ ನನ್ನ ಕರ್ತವ್ಯವನ್ನು ತುಂಬುಹೃದಯದಿಂದ ಮೆಚ್ಚಿದವರೂ ಇದ್ದಾರೆ. ಈ ಮನುಷ್ಯ ಇದ್ದರೆ ನಮಗೆ ತೊಂದರೆ ಇದೆ ಎಂದು ಕಿರುಕುಳ ಕೊಟ್ಟವರೂ ಇದ್ದಾರೆ. ಆದರೂ ನನಗೆ ಲಭಿಸಿದ್ದ ಅವಕಾಶವನ್ನು ನನ್ನ ಮನಸ್ಸಿಗೆ ಸಮಾಧಾನಕೊಡುವಂತೆ ೩೨ ವರ್ಷ ಕರ್ತವ್ಯ ನಿರ್ವಹಿಸಿದ ತೃಪ್ತಿ ನನಗಿದೆ. ನಾನು ಸೇವೆಯಲ್ಲಿದ್ದಾಗ ಅವಕಾಶ ಸಿಕ್ಕಾಗಲೆಲ್ಲಾ ಸಿಕ್ಕಿರುವ ಅವಕಾಶವನ್ನು ಸದ್ವಿಯೋಗ ಮಾಡಿಕೊಳ್ಳಿ,ಎಂದು ನನ್ನ ಮಿತ್ರರಿಗೆ ಆಗಾಗ ಹೇಳುತ್ತಿದ್ದೆ. ಇರಲಿ. ಅದು ಗತಕಾಲ. ನೀವು ತಿಳಿಸಿದಂತೆ ಸಾರ್ವಜನಿಕ ಸೇವೆಯಲ್ಲಿರುವವರಿಗೆ ಸ್ವಲ್ಪ ಆಧ್ಯಾತದ ತರಬೇತಿ ದೊರೆತರೆ , ಅಧಿಕಾರದಲ್ಲಿದ್ದವರಿಗೆ "ನಿಜಸುಖದ" ಅರಿವು ಮೂಡಿದರೆ ತಾನೇ ತಾನಾಗಿ ಅವನು ನಿಸ್ವಾರ್ಥವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಬಲ್ಲ. ಜನರ ನಿರೀಕ್ಷೆಯಂತೂ ಸ್ವಲ್ಪ ಜಾಸ್ತಿಯೇ ಇರುತ್ತೆ. ತಮ್ಮ ಜವಾಬ್ದಾರಿ ನೆನಪಾಗದಿದ್ದರೂ ಸರ್ಕಾರಿ ಅಧಿಕಾರಿಗಳು,ಸಾರ್ವಜನಿಕ ಕ್ಷೇತ್ರದಲ್ಲಿರುವವರಿಂದ ಅತಿಯಾದ ನಿರೀಕ್ಷೆಯಂತೂ ಮಾಡಿಯೇ ಮಾಡುತ್ತಾರೆ. ಈಗಂತೂ ರಾಜಕೀಯ ಕ್ಷೇತ್ರದಲ್ಲಿ ಕಣ್ಣಿಗೆ ರಾಚುತ್ತಿರುವ ಬ್ರಷ್ಟಾಚಾರದಿಂದ ರಾಜಕಾರಣಿಗಳ ಮೇಲೆ ಭರವಸೆಯೇ ಇಲ್ಲವಾಗಿದೆ.ಎಲ್ಲಾ ಕ್ಷೇತ್ರಗಳಲ್ಲೂ ಕೆಲವರು ಮಾಡುವ ಅಪರಾಧಗಳಿಗೆ ಸಜ್ಜನರೂ ತಲೆ ತಗ್ಗಿಸುವಂತಾಗಿದೆ. ಆದರೆ ಸಚ್ಚಾರಿತ್ರವಂತರುತಮ್ಮ ಆತ್ಮಸಾಕ್ಷಿಗೆ ಹೆದರಬೇಕೇ ಹೊರತು ರಸ್ತೆಯಲ್ಲಿ ಮಾತನಾಡುವವರಿಗೆ ಹೆದರಬೇಕಿಲ್ಲ. ಸತ್ಯಕ್ಕೆ ಜಯ ತಪ್ಪಿದ್ದಲ್ಲ.
ReplyDeleteಸರ್;ನಿಮ್ಮ ವಿದ್ವತ್ ಪೂರ್ಣ ಪ್ರತಿಕ್ರಿಯೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDelete*ಅಪ್ಪಟ ಪ್ರಾಮಾಣಿಕ ಲೇಖನ.
ReplyDelete*ನಿಜವನ್ನು ಬಿಚ್ಚಿಟ್ಟ ಬರಹ.
*ವೃತ್ತಿಯ ಸತ್ಯಾಂಶಕ್ಕೆ ಹಿಡಿದ ಕನ್ನಡಿ.
ಸೀತಾರಾಂ ಸರ್;ನಿಮ್ಮ ಪ್ರೋತ್ಸಾಹಪೂರ್ವಕ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
Deleteಸರ್ ತುಂಬಾ ಪ್ರಾಮಾಣಿಕವಾಗಿ ಎಲ್ಲ ಹೇಳೀದ್ದಿರಿ. ಕೆಲವೊಮ್ಮೆ ಒಂದು ವರ್ಗದವರನ್ನು ಕೆಟ್ಟವರು ಅನ್ನುವಾಗ ಅದರಲ್ಲಿರುವ ಒಳ್ಳೆಯವರಿಗೆ ತುಂಬಾ ಬೇಸರವಾಗುತ್ತೆ. ಸಮಾಜ ದಲ್ಲಿ ಎಲ್ಲಾ ಕಡೆ ಕೊಳಕು ತುಂಬಿ ಕೊಂಡಿದೆ . ನಾನು ಮುಂಬೈನಲ್ಲಿ ಒಂದು ಡೇ ಕೇರ್ ಸೆಂಟರ್ ರಲ್ಲಿ ಇದ್ದೇನೆ. ನನಗೆ ಇದರ ವಾಸ್ತವತೆ ಗೊತ್ತಿದೆ. ಪ್ರತಿಷ್ಠಿತ ...ಕೋಟ್ಯಾಧಿಪತಿ ಡಾಕ್ಟರ ಗಳು ಕೂಡ "ಕಟ್ " ನ್ನು ಸ್ವೀಕರಿಸಿ ರೋಗಿಯನ್ನು ಸುಲಿಗೆ ಮಾಡುವುದು ನಾನು ಕಂಡಿದ್ದೇನೆ. ಅಂತಹ ಮುಂಬೈಯ ಡಾಕ್ಟರ ಒಬ್ಬರಿಗೆ "ಪದ್ಮಶ್ರೀ" ಕೂಡಾ ಬಂದಿದೆ!.
ReplyDeleteಅಕುವ ಅವರೆ;ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಅನಿಸಿಕೆಯಲ್ಲಿ ಸತ್ಯವಿದೆ.ಸಮಾಜದ ಎಲ್ಲಾ ವರ್ಗಗಳಂತೆ ನಮ್ಮಲ್ಲೂ 'ಹಸಿದತೋಳಗಳಿವೆ'.ಬಡ ರೋಗಿಗಳ ಸುಲಿಗೆ ನಡೆಯುತ್ತಿರುವುದು ಸತ್ಯ.ಆದರೆ ಈ ವೃತ್ತಿಯಲ್ಲಿ ಮಾನವೀಯತೆ ಮೆರೆಯುವ ವರ್ಗವೂ ಇದೆ ಎಂಬುದನ್ನು ಮರೆಯಬಾರದು.ಕೋಟಿಗಟ್ಟಲೆ ಹಣ ಸುರಿದು ವೈದ್ಯರಾದವರು ಸ್ವಾಭಾವಿಕವಾಗಿ ಹಣ ಮಾಡಲೆಂದೇ ವ್ರುತ್ತಿಗಿಳಿಯುತ್ತಾರೆ.ಇಂತಹ ವೈದ್ಯರ ಹಿಂದೆ ಔಷಧಿ ಕಂಪನಿಯವರ,ಲ್ಯಾಬ್ ಇಟ್ಟವರ ಮತ್ತು ಇದಕ್ಕೆ ಸಂಬಂಧ ಪಟ್ಟವರ ದೊಡ್ಡ ಜಾಲವೇಇದೆ.ತಿಪ್ಪೆ ಕೆದಕಿದಷ್ಟೂ ನಾರುತ್ತದೆ.ಪ್ರತಿಕ್ರಿಯೆಗೆಧನ್ಯವಾದಗಳು.
Deleteಕೃಷ್ಣಮೂರ್ತಿ ಸರ್ ಒಳ್ಳೆಯ ಲೇಖನ . ನಾವು ಯಾವಾಗಲೂ ಈ ವಿಷಯ ಹೀಗೆ ಮಾತನಾಡಿಕೊಳ್ಳುತ್ತಿದ್ದೆವು. ನಮ್ಮ ಪರಿಚಯದವರೊಬ್ಬರು ತಮ್ಮ ಮಗನನ್ನು ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಓದಿಸಲೆಂದು ಒಳ್ಳೆಯ ಏರಿಯಾದಲ್ಲಿದ್ದ ಕೋಟ್ಯಾಂತರ ಬೆಲೆ ಬಾಳುತ್ತಿದ್ದ ತಮ್ಮ ಮನೆಯನ್ನೇ ಮಾರಿದರು!! ಹೀಗೆ ಎಲ್ಲವನ್ನೂ ಕಳೆದುಕೊಂಡು ಓದಿ ಡಾಕ್ಟರ್ ಆದವರು ಸಹಜವಾಗೇ ಅದನ್ನು ವಾಪಾಸ್ ಪಡೆಯಲು ಜನರನ್ನು ಸುಲಿಯುವುದು ಅನಿವಾರ್ಯ ತಾನೇ . ಈ ವ್ಯವಸ್ಥೆಗೆ ಖಂಡಿತ ಕಾಯಕಲ್ಪದ ಅವಶ್ಯಕತೆ ಇದೆ. ಸರ್ಕಾರ ಆದಷ್ಟು ಕಡಿಮೆ ಬೆಲೆಯಲ್ಲಿ ವೈದ್ಯಕೀಯ ವಿಧ್ಯಾಭ್ಯಾಸ ಪೂರೈಸಲು ಅವಕಾಶ ಕಲ್ಪಿಸಬೇಕು.
ReplyDeleteಸುಮಾ ಮೇಡಂ;ತಮ್ಮಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.ಈ ಅವ್ಯವಸ್ಥೆಗೆ ಕಾಯಕಲ್ಪದ ಅವಶ್ಯಕತೆ ಇದೆ ನಿಜ.ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?ಬರುತ್ತಿರಿ.ನಮಸ್ಕಾರ.
Deleteಅತ್ಯುತ್ತಮವಾಗಿ ವೈದ್ಯರ ತೊಳಲಾಟವನ್ನು ವಿವರಿಸಿದ್ದೀರಿ.ಅನೇಕ ವೈದ್ಯರು ರೋಗಿಗೆ ರೋಗದ ಬಗ್ಗೆ ಸರಿಯಾಗಿ ಮಾಹಿತಿ ಕೊಡುವುದಿಲ್ಲ. ವೈದ್ಯರಿಗೆ ಈ ರೋಗದ ತೀವ್ರತೆ ಮತ್ತು ಅದರ ಪರಿಣಾಮ ಗೊತ್ತಿರುತ್ತದೆ. ಆದರೆ ರೋಗಿಗೆ ಅದು ಗೊತ್ತಿರುವುದಿಲ್ಲ. ಇ೦ತಹಾ ಸಮಯದಲ್ಲಿ ಸಮಾಧಾನದಿ೦ದ ರೋಗಿ ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ಕೊಡುವ ಜವಾಬ್ಧಾರಿ ವೈದ್ಯರದು. ನಾನು ಭೇಟಿ ಮಾಡಿದ ಕೆಲವು ವೈದ್ಯರಲ್ಲಿ ನಮ್ಮ ಹತ್ತಿರ ಸರಿಯಾಗಿ ಮಾತೇ ಆಡದವರೂ ಇದ್ದಾರೆ.ಅವರು ಎಷ್ಟೇ ಜಾಣರಿರಲಿ, ಆಗ ಅವರ ಬಗ್ಗೆ ರೋಗಿಗೆ ಸಮಾಧಾನ ಇರುವುದಿಲ್ಲ. ಇವರೆ೦ತಾ ಡಾಕ್ಟ್ರು... ಸರಿ ಹೇಳೋಲ್ಲ ಏನಿಲ್ಲ ಎ೦ದು ಮತ್ತೊಬ್ಬ ಡಾಕ್ಟ್ರ ಹತ್ತಿರ ಪ್ರಯಾಣಿಸುತ್ತಾರೆ..!
ReplyDeleteರೋಗಿಗೆ ಔಷಧಕ್ಕಿ೦ತಲೂ ಸಾ೦ತ್ವಾನವೇ ಪರಿಣಾಮಕಾರಿ.
ಉತ್ತಮವಾಗಿ ವಿವರಿಸಿದ್ದೀರಿ.
ವಿಜಯಶ್ರೀಯವರೇ;ತಾವು ಹೇಳುವುದು ಸರಿಯಾಗಿದೆ.ವೈದ್ಯನಾದವನು ರೋಗದ ಬಗ್ಗೆ,ಮತ್ತು ಚಿಕಿತ್ಸೆಯ ಬಗ್ಗೆ ರೋಗಿಗೆ ಮತ್ತು ಸಂಬಂಧಪಟ್ಟವರಿಗೆ ಸರಿಯಾದ ಮಾಹಿತಿಯನ್ನೂ ಕೊಡುವುದೂ ಚಿಕಿತ್ಸೆಯ ಒಂದು ಭಾಗವೇ ಆಗಿದೆ.ರೋಗಿಗೆ ತನ್ನ ರೋಗದ ಬಗ್ಗೆ ಸರಿಯಾದ ತಿಳಿವಳಿಕೆ ನೀಡಿದರೆ ಅವನು ಚಿಕಿತ್ಸೆಯಲ್ಲಿ ಸಕ್ರಿಯವಾಗಿ ಭಾಗವಹಿಸಬಲ್ಲ.ಬರೀ ಔಷದಿಗಳನ್ನು ಕೊಡುವುದಷ್ಟೇ ಚಿಕಿತ್ಸೆಯಲ್ಲ.ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.
Deleteಡಾಕ್ಟ್ರೇ: ನಮ್ಮ ಪತ್ರಿಕಾ ಮಾಧ್ಯಮ ಮತ್ತು ಟಿವಿ ವಾಹಿನಿಗಳಲ್ಲಿ ಬರುವ ಅನೇಕ ವಿಚಾರಗಳು ಸುಳ್ಳು ಆಗಿರುತ್ತವೆ ಎನ್ನುವುದಕ್ಕೆ ನಿಮ್ಮದೇ ವಾಸ್ತವ ವಿಚಾರಗಳನ್ನು ತಿಳಿಸುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಚೆನ್ನಾಗಿದೆ. ಇವತ್ತಿನ ವಿ.ಕ ಪತ್ರಿಕೆಯವರು ಕನ್ನಡದ ನಂ.೧ ಪತ್ರಿಕೆ ಎಂದು ಹೊಗಳಿಕೊಂಡು ಬರೆದಿದ್ದಾರೆ. ಅವರು ಇಂಗ್ಲೀಷ್ ಪತ್ರಿಕೆಗಿಂತ ಹೆಚ್ಚು ಪ್ರಸಾರವಾಗುವ ಪತ್ರಿಕೆ ಎಂದು ಬರೆದಿದ್ದಾರೆ. ಅದಕ್ಕೆ ಮೇಲು ನೋಟದ ಸರ್ವೆ ಕಾರಣ. ಬೆಂಗಳೂರು ವಿಚಾರಕ್ಕೆ ಬಂದರೆ ಆದ್ರೆ ಸತ್ಯವೇ ಬೇರೆ. ಉದಾಹರಣೆಗೆ ನಮ್ಮ ಬೆಂಗಳೂರಿನಲ್ಲಿ ನೂರಾರು ವಿತರಣೆ ಕೇಂದ್ರಗಳಿವೆ. ಅಲ್ಲಿ ಎಲ್ಲಿಯೂ ವಿಜಯ ಕರ್ನಾಟಕ ಆಂಗ್ಲ ಟೈಮ್ಸ್ ಅಪ್ ಇಂಡಿಯ ಪತ್ರಿಕೆಗಿಂತ ಹೆಚ್ಚು ಸರ್ಕುಲೇಟ್ ಆಗೋಲ್ಲ. ನಮ್ಮದೇ ಶೇಷಾದ್ರಿಪುರಂ ವಿತರಣೆ ಕೇಂದ್ರದಲ್ಲಿ ವಿಜಯ ಕರ್ನಾಟಕ 1200, ಆಂಗ್ಲ ಟೈಮ್ಸ್ ಅಪ್ ಇಂಡಿಯ 4500 ನಿತ್ಯ ವಿತರಣೆ ಯಾಗುತ್ತದೆ. ಅದೇ ರೀತಿ ಮಲ್ಲೇಶ್ವರಂ ವಿತರಣೆ ಕೇಂದ್ರದಲ್ಲಿ ಟೈಮ್ ಅಪ್ ಇಂಡಿಯ ಹತ್ತು ಸಾವಿರವಿದ್ದರೆ ವಿಜಯ ಕರ್ನಾಟಕ ಮೂರು ಸಾವಿರವಿದೆ. ಬೆಂಗಳೂರಿನ ಎಲ್ಲಾ ಕೇಂದ್ರಗಳಲ್ಲಿ ಇದೇ ಲೆಕ್ಕಚಾರ. ಈಗ ಹೇಳಿ ಹೇಗೆ ವಿಜಯ ಕರ್ನಾಟಕ ನಂಬರ್ ಒನ್. ನನ್ನ ಉದ್ದೇಶ ವಿಜಯ ಕರ್ನಾಟಕವನ್ನು ಹೀಯಾಳಿಸುವುದಲ್ಲ...ಆದ್ರೆ ಸತ್ಯವನ್ನು ಮರೆಮಾಚಿ ಇವತ್ತಿನ ಪತ್ರಿಕೆಯಲ್ಲಿ ವಿಜ್ರಂಬಿಸಿದ್ದಾರೆ ಎಂದು ಹೇಳುವ ಉದ್ದೇಶ ಮಾತ್ರ.
ReplyDeleteಶಿವು ಸರ್;ನೀವು ಹೇಳುವಂತೆ ಮಾಧ್ಯಮಗಲ್ಲಿ ಬರುವುದೆಲ್ಲಾ ನಿಜವಲ್ಲ.ಮಾಹಿತಿಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
Deleteನಿಜ ಸರ್ ನೀವು ಹೇಳಿರುವುದು... ಒಬ್ಬ ಡಾಕ್ಟರ್ ಆಗಬೇಕಾದ್ರೆ ಕೋಟಿಗಟ್ಟಲೆ ಸುರಿಯಬೇಕಾಗಿದೆ. ಈಗಿನ ಕಾಲದಲ್ಲಿ ಎಲ್ಲರೂ ಅಷ್ಟೇಲ್ಲಾ ದುಡ್ಡು ಎಲ್ಲಿ ತರುತ್ತಾರೆ. ವೈದ್ಯರಿಗೆ ಸರಿಯಾದ ಸವಲತ್ತುಗಳನ್ನು ಕೊಡಬೇಕು. ಸವಲತ್ತುಗಳು ಇಲ್ಲದೇ ಎಷ್ಟೋ ಜನ ಗೌರ್ಮೆಂಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದೇ ಇಲ್ಲ. ಎಲ್ಲರೂ ವ್ಯವಸ್ಥೆಗಳನ್ನು ಬಯಸಿ ದೂರದ ಊರಿಗೋ ಅಥವಾ ಪ್ರೈವೇಟ್ ಆಸ್ಪತ್ರೆಗಳಲ್ಲಿ ಕೆಲಸವನ್ನು ಹುಡುಕಿ ಹೊರಡುತ್ತಾರೆ. ನೆನ್ನೆ ಇದೇ ವಿಷಯವಾಗಿ ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಚರ್ಚೆ ಇತ್ತು ಬಹಳ ಚೆನ್ನಾಗಿತ್ತು...
ReplyDeleteಸುಗುಣ ಮೇಡಂ;ಸಮಸ್ಯೆಯನ್ನು ಕೆಲವರಾದರೂ ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ.
ReplyDeleteಅಷ್ಟೇ ಸಮಾಧಾನ.ಇತ್ತೀಚಿಗೆ ಮಾಧ್ಯಮವೊಂದರಲ್ಲಿ ಸ್ಟಾರ್ ಒಬ್ಬರು ವೈದ್ಯರೆಲ್ಲರನ್ನೂ ಖಳನಾಯಕರಂತೆ ಬಿಂಬಿಸಿದ್ದು ಜನ ವೈದ್ಯರೆಂದರೇ ಹೌಹಾರುವಂತಾಗಿದೆ.ಇದು ಹಲವಾರು ಸೇವಾ ಮನೋಭಾವಾದಿಂದ ಕೆಲಸ ಮಾಡುತ್ತಿರುವ ಒಳ್ಳೆಯ ವೈದ್ಯರಿಗೆ ನೋವು ಉಂಟುಮಾಡಿದೆ.ಈಗೀಗ ರೋಗಿಗಳೇ ಅವಶ್ಯಕತೆ ಇಲ್ಲದಿದ್ದರೂ ಸ್ಕ್ಯಾನಿಂಗ್ ಮಾಡಿಸಿ ಸರ್,ಎಲ್ಲಾ ಟೆಸ್ಟ್ ಮಾಡಿಸಿಬಿಡಿ ಸರ್ ಎಂದು ದುಂಬಾಲು ಬೀಳುತ್ತಾರೆ!ಅವಶ್ಯಕತೆ ಇಲ್ಲದಿದ್ದರೂ ಕೆಲ ವೈದ್ಯರೂ ಇಂತಹ ಕೆಲಸ ಮಾಡುತ್ತಿರುವುದನ್ನೂಅಲ್ಲಗೆಳೆಯುವಂತಿಲ್ಲ.ಇದರ ಮೂಲಕ್ಕೆ ಹೋಗಿ ಪರಿಹಾರ ಕಂಡು ಹಿಡಿಯುವಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರಲ್ಲಿ ಇಚ್ಚಾ ಶಕ್ತಿ ಬೇಕು.ಪ್ರತಿಕ್ರಯೆಗೆ ಧನ್ಯವಾದಗಳು.
really nice......
ReplyDeletePadmaBhat;welcome to my blog.thanks for your kind comments.
Deleteಕೃಷ್ಣಮೂರ್ತಿ ಸರ್,
ReplyDeleteನಿಮ್ಮ ವೃತ್ತಿ 'ಎರಡು ಅಲಗಿನ' ಸಾಕು ಇದ್ದಾಗೆ.
ನಿಮ್ಮ ಅಭಿಪ್ರಾಯಕ್ಕೆ ಸಹಮತವಿದೆ.