Tuesday, April 2, 2013

"ವೈದ್ಯನೊಬ್ಬನ ಮರೆಯಲಾಗದ ವಿಶಿಷ್ಟ ಅನುಭವ!!!! "

ಇದನ್ನೆಲ್ಲಾ ಹೇಗೆ ಬರೆಯುವುದೋ ಗೊತ್ತಿಲ್ಲ .ಆದರೆ ಬರೆಯದೆ ಇರುವುದೂ ಸಾಧ್ಯವಾಗುತ್ತಿಲ್ಲ.ಇಂತಹ ಹಲವಾರು ಘಟನೆಗಳು ನೆನಪಿನ ಹಗೇವಿನಲ್ಲಿ ಆಳವಾಗಿ ಬೇರು ಬಿಟ್ಟಿವೆ.ಸುಮಾರು ಇಪ್ಪತೆಂಟು ವರ್ಷಗಳ ಹಿಂದಿನ ಘಟನೆ .ಆಗ ನಾನು ಸಿರುಗುಪ್ಪದಿಂದ ಎಂಟು ಕಿಲೋಮೀಟರ್ ದೂರದ ದೇಶನೂರು ಎಂಬ ಹಳ್ಳಿಯ ಸನಿಹವಿದ್ದ ಸಕ್ಕರೆ ಕಾರ್ಖಾನೆಯಲ್ಲಿ  ವೈದ್ಯನಾಗಿದ್ದೆ.ಆಗ ಆಸ್ಪತ್ರೆಯೆಂದರೆ ಕಾರ್ಖಾನೆಯಲ್ಲೇ ಸಣ್ಣದೊಂದು ಶೆಡ್ ಇತ್ತು.ಆಸ್ಪತ್ರೆಯ ಸಿಬ್ಬಂಧಿಗಳೆಂದರೆ ನಾನು ಮತ್ತು ಔಷಧಿ ಕೊಡುವ ಒಬ್ಬ ಕಾಂಪೌಂಡರ್ ಇಬ್ಬರೇ.ಸಣ್ಣ ,ಪುಟ್ಟ ಖಾಯಿಲೆಗಳಿಗೆ ಔಷಧಿ ಮತ್ತು ತುರ್ತು ಚಿಕಿತ್ಸೆ ಮಾತ್ರ ಅಲ್ಲಿ ಲಭ್ಯವಿತ್ತು.ಹೆಚ್ಚಿನ ಚಿಕಿತ್ಸೆಗೆ ಕಾರ್ಮಿಕರು ಅವರ ಸ್ವಂತ ಖರ್ಚಿನಲ್ಲಿ ಎಂಟು ಕಿಲೋಮೀಟರ್ ದೂರವಿದ್ದ ಸಿರುಗುಪ್ಪಕ್ಕೋ ,ಐವತ್ತು ಕಿಲೋಮೀಟರ್ ದೂರದ ಬಳ್ಳಾರಿಗೋ ಹೋಗಬೇಕಿತ್ತು.
ಅಸಾಧ್ಯ ಬಿಸಿಲಿನ ಪ್ರದೇಶ.ಶೀಟಿನ ಮನೆ.ಸಂಜೆಯ ವೇಳೆಗೆ ,ಕೆಂಡ ಕಾದಂತೆ ಕಾಯುತ್ತಿತ್ತು.ರಾತ್ರಿ ಸ್ವಲ್ಪ ತಂಪಾಗುತ್ತಿತ್ತು. ಆದರೂ ವಿಪರೀತ ಸೆಖೆಯಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ.ಚೊಚ್ಚಲ ಹೆರಿಗೆಗೆಂದು ತವರಿಗೆ ಹೋಗಿದ್ದ ಹೆಂಡತಿಯಿಂದ ಪತ್ರ ಬಂದು ವಾರವಾಗಿತ್ತು.ಆಗೆಲ್ಲಾ ,ಈಗಿನಂತೆ ಫೋನಿನ ಸೌಕರ್ಯವಿರಲಿಲ್ಲ.ಮೊದಲೇ ಸೆಖೆ.ಮೇಲೆ ಹೆಂಡತಿ ಹೇಗಿದ್ದಾಳೋ ಎನ್ನುವ ಆತಂಕ. ರಾತ್ರಿ ಎರಡಾದರೂ  ನಿದ್ರೆಯ ಸುಳಿವಿಲ್ಲ.ಆಗ ಜೋರಾಗಿ ಬಾಗಿಲು ಬಡಿಯುವ ಶಬ್ದ ,ಜೊತೆಗೇ ಯಾರೋ ಆತಂಕದ ದನಿಯಲ್ಲಿ 'ಸಾರ್,ಸಾರ್'ಎಂದು ಕೂಗುವ ಶಬ್ದ.ಹೋಗಿ ಬಾಗಿಲು ತೆರೆದೆ.ಕಾರ್ಖಾನೆಯ ರಸ್ತೆಯ ಪಕ್ಕದಲ್ಲೇ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ, ಸಕ್ಕರೆ ಮೂಟೆಗಳನ್ನು ಲಾರಿಗಳಿಗೆ ತುಂಬುವ ಹಮಾಲಿಗಳ ಸಣ್ಣ ತಂಡವೊಂದು ಲಾಟೀನುಗಳನ್ನು ಹಿಡಿದು ನಿಂತಿತ್ತು.'ಏನ್ರಪ್ಪಾ?.....ಏನಾಯಿತು...?'ಎಂದೆ. ಅವರಲ್ಲೊಬ್ಬ ಮುಖಂಡ ನಂತೆ ಇದ್ದವನು 'ಸಾರ್....,ಗಡಾನೆ ಬರ್ರಿ ಸಾರ್ ...,ಹುಲಿಗೆಪ್ಪನ ಹೆಂಡತಿಗೆ ಹೆರಿಗೆ ತ್ರಾಸಾಗಿದೆ'ಎಂದ. ಏನು ,ಎತ್ತ ಎಂದು ಅರ್ಥವಾಗದಿದ್ದರೂ 'ಸರಿ ನಡೀರಿ 'ಎಂದು ಮನೆಯ ಬಾಗಿಲಿಗೆ ಬೀಗ ಹಾಕಿ ಔಷಧಿಗಳಿದ್ದ ಸಣ್ಣ ಪೆಟ್ಟಿಗೆಯೊಂದನ್ನು ಹಿಡಿದು ಅವರ ಜೊತೆ ಸುಮಾರು ಅರ್ಧ ಕಿಲೋಮೀಟರ್ ದೂರವಿದ್ದ ಅವರ ಗುಡಿಸಿಲಿನ ಕಡೆ ನಡೆದೆ.ಸಿರಗುಪ್ಪದಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದ್ದರೂ ಹೆರಿಗೆಗೆ ಅಲ್ಲೇಕೆ ಕರೆದುಕೊಂಡು ಹೋಗಲಿಲ್ಲವೆಂದು ಕೇಳಿದೆ.'ಅಲ್ಲೂ ರೊಕ್ಕ ಇಲ್ಲದೆ ಏನೂ ಮಾಡಂಗಿಲ್ರೀ  ಸಾಹೇಬ್ರೇ.ನಾವು ಬಡವರು ರೊಕ್ಕ ಎಲ್ಲಿ ತರೋಣ್ ರೀ' ಎಂದ ಅವರಲ್ಲೊಬ್ಬ .ನಮ್ಮ ಅವ್ಯವಸ್ಥೆಯನ್ನು ಹಳಿಯುತ್ತಾ ,ಆ ನಡುರಾತ್ರಿಯ ಕತ್ತಲೆಯಲ್ಲಿ ,ಲಾಟೀನುಗಳ ಮಂದ ಬೆಳಕಿನಲ್ಲಿ ಅವರ ಗುಡಿಸಳುಗಳತ್ತ ಲಗುಬಗೆಯಿಂದ ಹೆಜ್ಜೆ ಹಾಕಿದೆ.  
ಅಲ್ಲಲ್ಲೇ ಹರಿಯುತ್ತಿದ್ದ ಕೊಚ್ಚೆಯ ನೀರನ್ನು ದಾಟಿಕೊಂಡು ,ತಮ್ಮ ಸರಹದ್ದಿಗೆ ಆಗಂತುಕನೊಬ್ಬನ ಆಗಮನ ವಾಗುತ್ತಿದ್ದಂತೆ ಜೋರಾಗಿ ಬೊಗಳುತ್ತಿದ್ದ ಹತ್ತಾರು ನಾಯಿಗಳನ್ನು ಲೆಕ್ಕಿಸದೆ ಅವರು ಕರೆದುಕೊಂಡು ಹೋದ ಗುಡಿಸಲೊಂದರೊಳಗೆ ಹೋದೆ.ಅಲ್ಲಿ ಕಂಡ ದೃಶ್ಯ   ಎಂತಹ ಗಂಡೆದೆ ಉಳ್ಳವರೂ ಹೌಹಾರುವಂತಿತ್ತು .ಸಗಣಿಯಿಂದ ಸಾರಿಸಿದ ನೆಲದ ಮೇಲೆ ಹಾಸಿದ್ದ ಕೌದಿಯೊಂದರ ಮೇಲೆ ಗರ್ಭಿಣಿ ಹೆಂಗಸೊಬ್ಬಳು 'ಯಪ್ಪಾ ,ನನ್ ಕೈಯಾಗೆ ಆಗಾಕಿಲ್ಲೋ ....ನಾನ್  ಸಾಯ್ತೀನ್ರೋ .....ಯಪ್ಪಾ'ಎಂದು ಜೋರಾಗಿ ನರಳುತ್ತಿದಳು.ಅವಳ ಪಕ್ಕದಲ್ಲಿದ್ದ ಮುದುಕಿಯೊಬ್ಬಳು 'ಎಲ್ಲಾ ಸರಿ ಹೋಕ್ಕತೆ ಸುಮ್ಕಿರು, ದಾಗ್ದಾರ್ ಸಾಬ್ ಬಂದಾನೆ 'ಎಂದು ಸಮಾಧಾನ ಮಾಡುತ್ತಿದ್ದಳು.ಅವರು ಕೊಟ್ಟ ಸೋಪು ,ಬಿಸಿನೀರಿನಿಂದ ಕೈ ತೊಳೆದೆ.ಅದೊಂದು 'breach delivery' ಆಗಿತ್ತು .ಮಾಮೂಲಾಗಿ ಮಗುವಿನ ತಲೆ ಮೊದಲು ಹೊರಗೆ ಬರುತ್ತದೆ. 'ಬ್ರೀಚ್ ' ಡೆಲಿವರಿಯಲ್ಲಿ ,ಮಗುವಿನ ಕಾಲುಗಳು ಹೊರಗೆ ಬರುತ್ತವೆ. ಈ ಹೆಂಗಸಿನಲ್ಲಿ ಮಗುವಿನ ಕಾಲುಗಳು ಹೊರಬಂದು ತಲೆಯ ಭಾಗ ಹೊರಬರದೆ ಸಿಕ್ಕಿಕೊಂಡಾಗ ಏನು ಮಾಡಲು ತೋಚದೆ, ನನ್ನನ್ನು ಕರೆಸಿದ್ದರು.ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯಗಳಿದ್ದೂ ,ಸಹಾಯಕ್ಕೆ ದಾದಿಯರಿದ್ದೂ, ನಡೆಸುವ ಹೆರಿಗೆಗಳಲ್ಲೇ ನೂರೆಂಟು ತೊಂದರೆಗಳು.ಅಂಥದ್ದರಲ್ಲಿ ಆ ಗುಡಿಸಲಿನಲ್ಲಿ ಸಗಣಿಸಾರಿಸಿದ ನೆಲದ ಮೇಲೆ ಕುಳಿತು  ,ಲಾಟೀನಿನ ಮಂದ ಬೆಳಕಿನಲ್ಲಿ,ಅದೂ 'ಬ್ರೀಚ್ ಡೆಲಿವರಿ'ಮಾಡಬೇಕಾದಾಗ , ಹೆರಿಗೆಗಳನ್ನು ಮಾಡಿ  ಅನುಭವವಿರದ ನನ್ನ ಸ್ಥಿತಿ ಹೇಗಿದ್ದಿರಬಹುದೋ ನೀವೇ ಊಹಿಸಿಕೊಳ್ಳಿ. ದೇವರ ದಯೆಯಿಂದ ಹೆರಿಗೆ ನಾನು ನೆನೆಸಿದಷ್ಟು ಕಷ್ಟವಾಗಲಿಲ್ಲ.ಹೆಣ್ಣು ಮಗುವಿನ ಜನನವಾಯಿತು.ಮಗುವಿನ ಅಳು ಕೇಳುತ್ತಿದ್ದಂತೆ ಅಲ್ಲಿದ್ದವರ ಮುಖಗಳಲ್ಲಿ ಸಂತಸದ ನಗು ಮೂಡಿತು.
ಇದಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ನಾನು ರಾಯಚೂರಿನ ಶಕ್ತಿನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ ,ಸಿರುಗುಪ್ಪದಿಂದ ನಾನು ಹೆರಿಗೆ ಮಾಡಿದ ಹೆಂಗಸು ತನ್ನ ಪತಿಮತ್ತು ಮಗಳೊಂದಿಗೆ ನನ್ನನ್ನು ಹುಡುಕಿಕೊಂಡು ಬಂದು,ನಾನೆಷ್ಟೇ ಬೇಡವೆಂದರೂ ಮಗಳಿಂದ ನನ್ನ ಕಾಲಿಗೆ ನಮಸ್ಕಾರ ಮಾಡಿಸಿ, ತನ್ನ ಮಗಳ ಲಗ್ನಪತ್ರಿಕೆ ಕೊಟ್ಟು ಹೋದಳು.ಎಷ್ಟೋ ಸಲ ಜನಗಳ ವರ್ತನೆಯಿಂದ ಬೇಸತ್ತ ಮನಸ್ಸಿಗೆ ,ಆ ಕ್ಷಣದಲ್ಲಿ ವೈದ್ಯನಾದದ್ದು  ಸಾರ್ಥಕವೆನಿಸಿತ್ತು.ಮನದಲ್ಲಿ ಒಂದು ಅಲೌಕಿಕ ಸಂತಸ ಮನೆ ಮಾಡಿತ್ತು.       

10 comments:

  1. ವೈದ್ಯರು ನಾರಾಯಣನ ಇನ್ನೊಂದು ರೂಪ ಎನ್ನುತ್ತಾರೆ. ಇಂತಹ ಪ್ರಸಂಗಗಳು ಮಾನವೀಯತೆಯನ್ನು ಮೆರೆಸಿ ಮನುಜನ ಬದುಕಿಗೆ ಒಂದು ಸಾರ್ಥಕತೆ ಕೊಡುತ್ತದೆ. ಕಡೆಯ ಸಾಲುಗಳು ಓದಿದಾಗ ನಿಜಕ್ಕೂ ನನ್ನ ಮನ ಆನಂದ ಭಾಷ್ಪ ಸುರಿಸಿತು. ಕೆಲ ಕ್ಷಣಗಳು ನೀವು ಅನುಭವಿಸಿರಬಹುದಾದ ಅನಿರ್ವಚನೀಯ ಆನಂದವನ್ನು ನಾನೂ ಅನುಭವಿಸಿದ ಹಾಗೆ ಭಾಸವಾಯಿತು. ನನಗೆ ಅನ್ನಿಸಿದ ಹಾಗೆ ನಿಮ್ಮ ವೃತ್ತಿ ಜೀವನದ ಅನೇಕ ಅಮೋಘ ಕ್ಷಣಗಳಲ್ಲಿ ಇದು ಒಂದು ಎನ್ನಬಹುದು. ಸೂಪರ್ ಅನುಭವ ಕಥಾನಕ ಡಾಕ್ಟ್ರೆ.

    ReplyDelete
  2. ನಿಮ್ಮಂತ ಡಾಕ್ಟರುಗಳಿರುವುದರಿಂದಲೇ ಸಾಮಾನ್ಯರಿಗೆ ವೈದ್ಯರಲ್ಲಿ ಇನ್ನೂ ಗೌರವ,ಪೂಜ್ಯ ಭಾವನೆಗಳಿವೆ.ವಂದನೆಗಳು

    ReplyDelete
  3. ಮೊದಲು ನನ್ನ ಮನಸ್ಸಿಗೆ ಹಿಡಿಸಿದ್ದು ಆ ಭಾಗದ ಆಡುಭಾಷೆಯನ್ನ ದಾಖಲಿಸಿದ್ದು. ಮತ್ತು ತಾವು ಬಳಸಿದ ”ಹಗೇವಿನಲ್ಲಿ"ಪದ.

    ಬ್ರೀಚ್ ಡಿಲವರಿಯ ಕಲ್ಪನೆಯೂ ಸಿಕ್ಕಿತು.

    ಒಬ್ಬ ನಿಸ್ಪ್ರುಹ ವೈದ್ಯರ ನಿಜವಾದ ಕಳಕಳಿಯ ಮನಸ್ಸಿಗೆ ಮತ್ತು ಸೇವಾ ಗುಣಕ್ಕೆ ಇಪ್ಪತ್ತು ವರ್ಷಗಳ ನಂತ ಸಿಕ್ಕ ಪ್ರಶಸ್ತಿಯೇ ಆ ತಾಯಿಯ ಗುರುತಿಸುವಿಕೆ ಮತ್ತು ಪಾದಾಭಿ ವಂದನೆ.

    ನಿಮ್ಮಂತಹ ಉತ್ತಮ ವೈದ್ಯರ ಒಡನಾಡಿ ನಾವು ಎನ್ನುವ ಹೆಮ್ಮೆ ನಮಗಿದೆ. ನಿಮ್ಮ ವೈದ್ಯಕೀಯ ಅನುಭವಗಳನ್ನು ಇನ್ನೂ ಹೆಚ್ಚು ದಾಖಲಿಸಿ ನಮಗಾಗಿ.

    ReplyDelete
  4. Sir,
    Nimagondu salaam, ondu kade nimmantha doctor iddare, mattondu kade innondu vargada janare iddaare.
    "ಅಲ್ಲೂ ರೊಕ್ಕ ಇಲ್ಲದೆ ಏನೂ ಮಾಡಂಗಿಲ್ರೀ ಸಾಹೇಬ್ರೇ.ನಾವು ಬಡವರು ರೊಕ್ಕ ಎಲ್ಲಿ ತರೋಣ್ ರೀ".... idyaako keLdaaga karaLige choori haakidanta anubhava Sir.
    Hrudayavantharu neevu.

    ReplyDelete
  5. ಎಂತಹ ಸಾರ್ಥಕತೆಯ ಭಾವ ತುಂಬಿಕೊಡುವ ಕ್ಷಣಗಳು ಸರ್.. :) ಓದಿ ಖುಷಿಯಾಯಿತು..

    ReplyDelete
  6. ಕಷ್ಟದ ಪರಿಸ್ಥಿತಿಯಲ್ಲಿ ಆ ಜನರಿಗೆ ನೀವು ಮಾಡಿದ ಸಹಾಯ ಖಂಡಿತಾ ಆ ಬಡ ಕುಟುಂಬಕ್ಕೆ ಸಂತಸ ತಂದಿದೆ

    ReplyDelete
  7. Replies
    1. nimma intaha anubhavagale nimma keertiyannu belagisirodu, hindomme ee lekhanakke comment haakidde. manamuttuva anubhava idu saar.

      Delete
  8. ಹೃದಯಸ್ಪಶಿ೯ ಪ್ರಸಂಗ ಮತ್ತು ಸುಂದರ ಬರೆಹ

    ReplyDelete

Note: Only a member of this blog may post a comment.