Monday, September 9, 2013

"ಸಾರ್ ಒಂದು ಡ್ರಿಪ್ ಹಾಕಿ !!!"

ಈ ತಿಂಗಳ ಕೊನೆಯಲ್ಲಿ ಮೂವತ್ತಾರು ವರ್ಷಗಳ ವೈದ್ಯಕೀಯ ವೃತ್ತಿಯಿಂದ ನಿವೃತ್ತಿ.ವೈದ್ಯರಿಗೆ ನಿವೃತ್ತಿ ಎಂಬುದಿಲ್ಲ 
ಎನ್ನುವ ಮಾತಿದೆ.ಆದರೂ ಸಧ್ಯದ ಸೇವೆಯಿಂದ ತಾತ್ಕಾಲಿಕ ವಿರಾಮ.ನನ್ನ ಸುಧೀರ್ಘ ವೈದ್ಯಕೀಯ ವೃತ್ತಿಯ 
ಅವಧಿಯಲ್ಲಿ ಸುಮಾರು ಔಷಧಿಗಳ ಅಡ್ಡ ಪರಿಣಾಮಗಳನ್ನು ನೋಡಿದ್ದೇನೆ.ಆದ್ದರಿಂದ ಔಷಧಿಗಳನ್ನು
 ಕೊಡುವಾಗ ಅಳೆದು,ತೂಗಿ,ಆದಷ್ಟೂ ಕಡಿಮೆ ಔಷಧಿಗಳನ್ನು ಕೊಡುವ ಪರಿಪಾಠ ನನ್ನದು.ಈಗೀಗ 
ಕೆಲವರು ಔಷಧವನ್ನೇ ಆಹಾರದಂತೆ ತಿನ್ನುವುದನ್ನು ನೋಡಿ ಗಾಭರಿಯಾಗುತ್ತದೆ.ಅವಶ್ಯಕತೆ ಇಲ್ಲದ 
ಔಷಧಿಗಳನ್ನು ತಾವೇ ಖರೀದಿಸಿ ತಿನ್ನುವ ಕೆಲವರನ್ನು ಕಂಡಿದ್ದೇನೆ. ಮಾತೆತ್ತಿದರೆ ಚುಚ್ಚುಮದ್ದಿಗಾಗಿಯೋ,
ಡ್ರಿಪ್ಸ್ ಗಾಗಿಯೋ ವೈದ್ಯರ ಮೇಲೇ ಒತ್ತಡ ಹೇರುವ ಜನರೂ ಉಂಟು.ಇದರ ಮೇಲೆ,ಇಂಟರ್ನೆಟ್
 ನೋಡಿ ಅರ್ಧಂಭರ್ಧ ಜ್ಞಾನ ಪಡೆದು ಎಲ್ಲವೂ ತಿಳಿದಿರುವಂತೆ ಸ್ವಯಂ ವೈದ್ಯಕೀಯ 
ಮಾಡಿಕೊಳ್ಳುವವರೂ ಕಮ್ಮಿ ಇಲ್ಲ.ಇದನ್ನೆಲ್ಲಾ ನೋಡಿದರೆ ನಮ್ಮ ವೈದ್ಯಕೀಯ ಕ್ಷೇತ್ರ ಎತ್ತ 
ಸಾಗುತ್ತಿದೆ ಎಂದು ನೆನೆದು ಆತಂಕವಾಗುತ್ತದೆ . ಮೊನ್ನೆ ಒಬ್ಬ ರೋಗಿ ದೊಡ್ಡದೊಂದು ಕೈಚೀಲ ಹಿಡಿದು 
ಬಂದರು.ಬಂದವರೇ "ಸಾರ್ ಬಿ.ಪಿ.ದು ಅರವತ್ತು ಮಾತ್ರೆ ,ಶುಗರ್ ದು ಅರವತ್ತು ಮಾತ್ರೆ,ಹಾಗೇ
 ಬಿ.ಕಾಂಪ್ಲೆಕ್ಸ್ ಮೂವತ್ತು ಮಾತ್ರೆ ಬರೆದು ಕೊಡಿ"ಎಂದರು."ಸರಿ"ಎಂದು ಅವರ ಕಾರ್ಡಿನಲ್ಲಿ ಅವರು 
ಕೇಳಿದ ಮಾತ್ರೆಗಳನ್ನು ಬರೆದು ಕೊಟ್ಟೆ."ಸಾರ್ ಗ್ಯಾಸಿಂದು ಮೂವತ್ತು ಮಾತ್ರೆ ಮತ್ತು ಗ್ಯಾಸಿನ ಒಂದು
 ಬಾಟಲಿ ಬರೆದು ಕೊಡಿ "ಎಂದರು.ಸರಿ ಅವರು ಕೇಳಿದ್ದನ್ನು ಬರೆದು ಕೊಟ್ಟು ಮತ್ತೇನು 
ಎನ್ನುವಂತೆ ಅವರ ಮುಖ ನೋಡಿದೆ."ಸಾರ್ ನೋವಿನ ಮಾತ್ರೆ ಮೂವತ್ತು,ನೋವಿನ ಟ್ಯೂಬ್ ಎರಡು"
ಎಂದರು.ಹಿಂದೊಮ್ಮೆ "ಇಷ್ಟೆಲ್ಲಾ ಔಷಧಿ ಒಳ್ಳೆಯದಲ್ಲಮ್ಮಾ" ಎಂದದ್ದಕ್ಕೆ ನನಗೆ ಕೇಳುವಂತೆಯೇ
"ಇವರೇನು ತಮ್ಮ ಮನೆಯಿಂದ ಕೊಡ್ತಾರಾ?"ಎಂದು ಸಿಟ್ಟಿನಿಂದ ಗೊಣಗುತ್ತಾ ಹೋಗಿದ್ದರು.
ಆ ಮಾತುಗಳು ನೆನಪಾಗಿ,ಮರು ಮಾತಿಲ್ಲದೇ ಅವರು ಹೇಳಿದ ಔಷಧಿಗಳನ್ನು ಬರೆಯುತ್ತಾ ಹೋದೆ.
ಇಷ್ಟೇನಾ,ಇನ್ನೇನಾದರೂ ಬಾಕಿ ಇದೆಯಾ ಎನ್ನುವಂತೆ ಅವರ ಮುಖ ನೋಡಿದೆ. 
 ಉಹ್ಞೂ ......ಅವರ ಲಿಸ್ಟ್ ಇನ್ನೂ ಮುಗಿದಿರಲಿಲ್ಲ."ಒಂದು ಪ್ರೋಟೀನ್ ಪುಡಿ ಡಬ್ಬ,ಮತ್ತು 
ಮೂವತ್ತು ಕ್ಯಾಲ್ಶಿಯಂ ಮಾತ್ರೆ ಬರೆದು ಕೊಡಿ "ಎಂದರು.ಸರಿ ಅವರು ಇಷ್ಟು ದೊಡ್ಡ ಕೈ ಚೀಲ
 ಏಕೆ ತಂದಿದ್ದಾರೆ ಎನ್ನುವುದು ಅರ್ಥವಾಯಿತು.ಸರಿ ಇನ್ನೇನು ಅವರ ಲಿಸ್ಟ್ ಮುಗಿಯಿತು 
ಎಂದು ಕೊಂಡು ಅವರ ಮೆಡಿಕಲ್ ಕಾರ್ಡ್ ಅನ್ನು ಅವರ ಕೈಗೆ ಕೊಟ್ಟೆ. ಅವರಿಗೆ ಇನ್ನೂ
 ತೃಪ್ತಿ ಯಾದಂತೆ ಕಾಣಲಿಲ್ಲ."ಸಾರ್ ನೆನ್ನೆಯಿಂದಾ ತುಂಬಾ ಸುಸ್ತು.ಒಂದು ಡ್ರಿಪ್ ಹಾಕ್ತೀರಾ?"
ಎಂದರು. ನನಗೇ ತಲೆ ತಿರುಗಿದಂತಾಗಿ ನಾನೇ ಡ್ರಿಪ್ ಹಾಕಿಸಿಕೊಳ್ಳುವ ಪರಿಸ್ಥಿತಿ
 ಬಂದಿದೆಯೇನೋ ಎನ್ನುವ ಅನುಮಾನ ಬಂತು !!!! ನಮ್ಮಂತಹ ಅಸಹಾಯಕ ವೈದ್ಯರನ್ನು 
ಆ ದೇವರೇ ಕಾಪಾಡಬೇಕು !!!! ಯಾರಿಗೆ ಹೇಳೋಣ ನಮ್ಮ..........ಪ್ರಾಬ್ಲಮ್ಮು !!!!

10 comments:

  1. ಡಾಕ್ಟ್ರೆ ಮೊದಲಿಗೆ ನಿಮ್ಮ ಸುಧೀರ್ಘ ವೃತ್ತಿಯಲ್ಲಿ ನಡೆದ ನಿಮ್ಮ ಅನುಭವಕ್ಕೆ ಬಂದ ಅನೇಕ ರಸವತ್ತಾದ ಘಳಿಗೆಗಳನ್ನು ಹಾಗೆಯೇ ಗಾಬರಿ ಆಗುವಂತ ವೈದ್ಯಕೀಯ ಸಂಕಟಗಳನ್ನು ಪವಾಡ ಸಾದೃಶ್ಯಗಳನ್ನು ಎಲ್ಲರಿಗೂ ಉಣಬಡಿಸಲು ನೆರವಾದ ನಿಮ್ಮ ವೃತ್ತಿಗೆ ಬ್ಲಾಗ್ ಲೋಕದ ಕಡೆಯಿಂದ ಧನ್ಯವಾದಗಳು ಹಾಗೆಯೇ ಅಭಿನಂದನೆಗಳು.

    "ಆನಂದ್" ಚಿತ್ರದಲ್ಲಿ ರಮೇಶ್ deo ಪಾತ್ರದ ಡಾಕ್ಟರ್ ಹೇಳುತ್ತಾರೆ ಜನರಿಗೆ ರೋಗವೇ ಇರೋಲ್ಲ ಬರಿ ರೋಗವಿದೆ ಎಂಬ ಅನುಮಾನದ ರೋಗಕ್ಕೆ ಮಾತ್ರೆ ಬೇಡುತ್ತಾರೆ ಅಥವಾ ತೆಗೆದುಕೊಳ್ಳುತ್ತಾರೆ ಎಂದು. ನಿಮ್ಮ ಈ ಲೇಖನ ನಿಜಕ್ಕೂ ಈ ಮಾತನ್ನು ಪುಷ್ಟಿಕರಿಸುತ್ತದೆ. ಗಾಬರಿಯಾಗುವಂತಹ ದೃಶ್ಯವೇ ಸರಿ. ನಗು ಬರುತ್ತದೆ ಹಾಗೆಯೇ ಆತಂಕದೆಡೆ ಕೊಂಡೊಯ್ಯುವ ಇವರ ಯೋಚನೆಗಳು ನಿಜಕ್ಕೂ ಜೀರ್ಣಿಸಿಕೊಳ್ಳಲು ಕಷ್ಟವೇ.

    ನಿಮ್ಮ ಅಧಿಕೃತ ನಿವೃತ್ತ ಜೀವನ ಸುಖಮಯ ಮಂಗಳಮಯವಾಗಿರಲಿ ಎಂದು ಆಶಿಸುವ ಶ್ರೀಕಾಂತ್ ಮಂಜುನಾಥ್

    ReplyDelete
  2. ಶ್ರೀಕಾಂತ್ ಮಂಜುನಾತ್ ;ಮೊದಲಿಗೆ ನಿಮ್ಮ ಹಾರೈಕೆಗೆ ಮತ್ತು ಉತ್ತಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ತಮ್ಮ ರೋಗಗಳಿಗೆ ಮೆಡಿಕಲ್ ಸ್ಟೋರ್ ಗಳಿಂದ ತೀವ್ರ ಅಡ್ಡ ಪರಿಣಾಮ ಗಳಿರುವ ಔಷಧಿಗಳನ್ನು ಪೆಪ್ಪರ್ಮಿಂಟ್ ಗಳಂತೆ ಖರೀದಿಸುವ ರೋಗಿಗಳು, ಮಾತು ಮಾತಿಗೆ ಸ್ಟೀರಾಯ್ಡ್ ಔಷಧಿಗಳನ್ನು ಚುಚ್ಚುವ ನಕಲೀ ವೈದ್ಯರು,ಏನೇನೋ ಔಷಧಿಗಳನ್ನು ಪ್ರಯೋಗ ಮಾಡಿ ಖಾಯಿಲೆ ಕೈಮೀರಿದ ಮೇಲೆ ಅಸಲಿ ವೈದ್ಯರ ಬಳಿ ಬಂದು ಎಲ್ಲದ್ದಕ್ಕೂ ಅವರನ್ನು ದೂರುವ ರೋಗಿಗಳ ಸಂಭಂದೀಕರು.........!!!ಇದು ನಮ್ಮ ಇಂದಿನ ವೈದ್ಯಕೀಯ ಕ್ಷೇತ್ರದ ವ್ಯಥೆಯ ಕಥೆ!!!! ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು !!!!?

    ReplyDelete
  3. ನಿಮ್ಮ ನಿವೃತ್ತಿಜೀವನ ಇನ್ನಷ್ಟು ಉಲ್ಲಾಸದಾಯಕವಾಗಲಿ ಎಂದು ಹಾರೈಸುತ್ತೇನೆ.

    ReplyDelete
  4. ಸುನಾತ್ ಸರ್ ;ನಿಮ್ಮ ಹಾರೈಕೆಗೆ ಧನ್ಯವಾದಗು.ನಮಸ್ಕಾರ.

    ReplyDelete
  5. ನನಗೆ ಆಕೆಯ ವರಾತ ನೋಡಿದರೆ ದಿನಸಿ ಅಂಗಡಿಗೆ ಹೋಗಿ, ಅಕ್ಕಿ ಬೇಳೆ ಕೊಂಡು ತರುವಂತೆ ಔಷಧಿಗಳನ್ನು ತರಲು ಬಂದಿದ್ದಾರ ಎನಿಸಿತು. ಈಗೀಗ ಔಷದಿ ಅಂಗಡಿಗಳೇ ರೋಗ ಕೇಳಿ ಮಾತ್ರೆ ಕೊಡುವ ಪದ್ದತಿ ರೂಡಿಸಿಕೊಂಡು ಇಂತಹ ಪರಿಸ್ಥಿತಿ. ಇನ್ನೂ ಡ್ರಿಪ್ಸ್ ವಿಚಾರ ಆಕೆಗೆ ಮಾನಸಿಕ ತಯಾರಿ! ಹೀಗಾದರೆ ನೀವೇ ಹೇಳಿದಂತೆ: "ನಾನೇ ಡ್ರಿಪ್ ಹಾಕಿಸಿಕೊಳ್ಳುವ ಪರಿಸ್ಥಿತಿ"

    30 ವರ್ಷಗಳ ಸುವಿಸ್ತಾರ ಸೇವೆಯ ನಂತರ ನೀವು ಬೆಂಗಳೂರಿಗೆ ಬರುತ್ತಿರುವುದುದೇ ನಮಗೆ ಖುಷಿ ವಿಚಾರ. ಬನ್ನೀ ಸಾರ್ ಬೈಟೂ ಡ್ರಿಪ್ಸ್ - ಅಯ್ಯೋ ಸಾರಿ ಕಾಫಿ ಕುಡಿಯುತ್ತಾ ಮಾತಾಡೋಣ! :-D

    ReplyDelete
  6. ಹ ...ಹ...ಬದರಿ........ಬೈ ಟೂ ಡ್ರಿಪ್ ......ಅಲ್ಲಾ ,ಎರಡು ಸಿಪ್..........ಕಾಫಿ ಕುಡಿಯುತ್ತಾ ಮಾತಾಡೋಣ :-)

    ReplyDelete
  7. "ನಮ್ಮಂತಹ ಅಸಹಾಯಕ ವೈದ್ಯರನ್ನು
    ಆ ದೇವರೇ ಕಾಪಾಡಬೇಕು !!!!" - ನನಗೂ ಒಮ್ಮೊಮ್ಮೆ ಹಾಗೆ ಅನ್ನಿಸುತ್ತದೆ. ಚೂರು ಮೈಬಿಸಿ, ಮೂಗಿಂದ ಸ್ವಲ್ಪವೇ ಸೀತ ಕಂಡಾಗ, ಕೂಡಲೇ ಮಕ್ಕಳನ್ನ ಕರೆದುಕೊಂಡು ಬರುವವರನ್ನು ನೋಡಿದಾಗ.

    ReplyDelete
    Replies
    1. ಸುಬ್ರಮಣ್ಯ :ಪ್ರತಿಕ್ರಿಯೆಗೆ ಧನ್ಯವಾದಗಳು :-)

      Delete
  8. ನಿವೃತ್ತಿ ಜೀವನ ಚೆನ್ನಾಗಿರಲೆಂದು ಹಾರೈಸುತ್ತೇನೆ

    ReplyDelete
  9. ಸರ್ ,

    ತಡವಾಗಿ ನಿಮ್ಮ ಈ ಲೇಖನ ಓದ್ತಾ ಇದೀನಿ

    ೩೦ ವರ್ಷದಲ್ಲಿ ನೀವು ಅರೈಸಿದ ಎಲ್ಲಾ ಜೀವಗಳ ಹಾರೈಕೆ ನಿಮ್ಮ ಮೇಲಿದೆ
    ನಮ್ಮ ಹಾರೈಕೆ ಸಹ

    ನಿಮ್ಮ ಮುಂದಿನ ಜೀವನ ನೆಮ್ಮದಿಯಾಗಿ ಆನಂದ ತುಂಬಿರಲಿ !

    ReplyDelete

Note: Only a member of this blog may post a comment.